ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ

Share

ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ

ತುಂಗಭದ್ರಾ ನದಿಯ ಬಲದಂಡೆಯು ಹಂಪೆಗೆ ಆಶ್ರಯ ನೀಡಿದ್ದರೆ, ಎಡದಂಡೆಯು ಪ್ರಾಚೀನ ಆನೆಗೊಂದಿಗೆ ನೆಲೆಯಾಗಿದೆ. ಈ ಎರಡೂ ಚಾರಿತ್ರಿಕ ಸ್ಥಳಗಳು ಆದಿಮ ಕಾಲದಿಂದಲೂ ಮಾನವನ ಪ್ರಮುಖ ಪ್ರಸಿದ್ಧ ವಸತಿತಾಣಗಳು. ಭೌಗೋಳಿಕವಾಗಿಯೂ ಈ ಪ್ರದೇಶವು ಕಣಶಿಲೆಯ ಬೆಟ್ಟಗುಡ್ಡ, ಗುಹೆಗಹ್ವರ, ನದಿ, ಕಣಿವೆಗಳಿಂದ ಕೂಡಿದ ಅತ್ಯಂತ ಸುಂದರ ತಾಣ. ಆನೆಗೊಂದಿ ಪರಿಸರವು ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದಕ್ಕೆ ಕಾರಣ ಇಲ್ಲಿನ ಹತ್ತಾರು ಪ್ರವಾಸಿ ಸ್ಥಳಗಳು. ಇಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ, ಚಾರಿತ್ರಿಕ ಮತ್ತು ಪೌರಾಣಿಕ ಎಡೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಆನೆಗೊಂದಿ ಕರ್ನಾಟಕದ ಪ್ರಸಿದ್ಧ ಪ್ರಾಗೈತಿಹಾಸಿಕ ತಾಣವೆಂದರೆ ಅತಿಶಯೋಕ್ತಿಯಾಗಲಾರದು. ನದಿಯ ಎಡದಂಡೆಯುದ್ದಕ್ಕೂ ಹುಲಿಗಿಯಿಂದ ಕಂಪ್ಲಿಯವರೆಗೆ ಹರಡಿರುವ ಕಣಶಿಲೆಯ ಬೆಟ್ಟಶ್ರೇಣಿಗಳು ಶಿಲಾಯುಗದ ನೆಚ್ಚಿನ ತಾಣಗಳೇ ಆಗಿವೆ. ಇದಕ್ಕೆ ವರ್ಣಚಿತ್ರ, ಗೀರುಚಿತ್ರಗಳಿರುವ ಮಲ್ಲಾಪುರ, ಇಂದುರ್ಗಿ, ಅಂಜನಹಳ್ಳಿ, ಬಂಡಿಹರ್ಲಾಪುರಗಳು ಗಮನಿಸಬೇಕಾದ ಸ್ಥಳಗಳಾಗಿವೆ. ನವಶಿಲಾಯುಗದ ಬೂದಿದಿಬ್ಬವಾದ ವಾಲಿಭಂಡಾರ, ಶಿಲಾಗೋರಿಗಳಿರುವ ಹಿರೇಬೆಣಕಲ್‌ಗಳು ಈ ಪರಿಸರದ ಪ್ರಸಿದ್ಧ ಆದಿಮ ನೆಲೆಗಳು.

ಪೌರಾಣಿಕವಾಗಿಯೂ ಕಿಷ್ಕಿಂಧೆ, ಅಯೋಧ್ಯೆ, ಅಂಜನಾದ್ರಿ, ಶಬರಿಗುಹೆ, ಸೀತಾಸೆರಗು, ಸುಗ್ರೀವ ಗುಹೆ, ಪಂಪಾಸರಸ್ಸುಗಳಿದ್ದು, ಇವು ರಾಮಾಯಣ ಕಾಲದ ಘಟನಾವಳಿಗಳನ್ನು ನೆನಪಿಸುತ್ತವೆ. ಚಾರಿತ್ರಿಕತೆಯನ್ನು ಸಾರುವ ಈ ಪರಿಸರದ ಕುಮ್ಮಟದುರ್ಗ, ಹೇಮಗುಡ್ಡ, ಅಂಜನಾದ್ರಿ, ಪಂಪಾಸರೋವರ, ದೇವಿಘಾಟ, ಹಿರೇಜಂತಕಲ್ಲು, ಕಂಪ್ಲಿ ಮತ್ತು ಆನೆಗೊಂದಿಗಳು ಹೆಸರಾಗಿವೆ.
ಆನೆಗೊಂದಿಯು ವಿಜಯನಗರ ಅರಸರ ಮೊಟ್ಟಮೊದಲ ರಾಜಧಾನಿಯಾಗಿ ಮೆರೆದ ಸ್ಥಳ. ಇದನ್ನು ಶಾಸನಗಳಲ್ಲಿ ಕುಂಜರಕೋಣವೆಂದೇ ಕರೆಯಲಾಗಿದೆ. ಆನೆ ಅಥವಾ ಕುಂಜರಗಳನ್ನು ಪಳಗಿಸುತ್ತಿದ್ದ ಸ್ಥಳವೆಂತಲೂ ಕರೆಯುವರು. ಇಲ್ಲಿನ ಅಂಜನಾದ್ರಿ ಇಂದು ಎಲ್ಲಕ್ಕಿಂತಲೂ ಒಂದು ಕೈ ಮೇಲೆಂಬಂತೆ ಪ್ರಸಿದ್ಧಿಗೊಳ್ಳುತ್ತಿದೆ. ಇದು ಉತ್ತರ ಭಾರತೀಯರನ್ನೂ ಆಕರ್ಷಿಸುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಸಮೀಪದಲ್ಲಿರುವ ಪಂಪಾ ಸರೋವರವು ನೈಸರ್ಗಿಕವಾಗಿಯೂ ಸೊಗಸಾದ ಸ್ಥಳ. ಇದು ಪಂಪಾದೇವಿಯ ಮೂಲನೆಲೆ, ತಪಸ್ಸುಗೈದ ಸ್ಥಳವೆಂತಲೂ ಕರೆಯುವರು. ಪಂಪಾ ದೇಗುಲ ಕ್ರಿ.ಶ. ೧೨ನೆಯ ಶತಮಾನಕ್ಕೂ ಪೂರ್ವದ್ದಾಗಿದೆ.

ಇಲ್ಲಿನ ವಿಶೇಷತೆಯೆಂದರೆ ಈಶ್ವರ ದೇವಾಲಯ ಪಂಪಾದೇವಿಯ ಎಡಕ್ಕಿರುವುದು. ಇದು ವಿವಾಹಪೂರ್ವದ ಆಚರಣೆಗಳನ್ನು ನೆನಪಿಸುವಂತಿದೆ. ಇಲ್ಲಿನ ವಿಶಾಲವಾದ ಪಂಪಾ ಸರೋವರವು ಬೆಟ್ಟದ ತಪ್ಪಲಿನಲ್ಲಿ ಕಂಗೊಳಿಸುತ್ತಿದ್ದು, ಇಂದು ಜೀರ್ಣೋದ್ಧಾರಗೊಳ್ಳುತ್ತಿದೆ. ಅಂಜನಾದ್ರಿಯಿಂದ ಆನೆಗೊಂದಿಗೆ ಹೋಗುವ ರಸ್ತೆಯ ಬಲಬದಿಯ ಗುಡ್ಡದಲ್ಲಿ ವಿಜಯನಗರ ಶೈಲಿಯಲ್ಲಿರುವ ಗವಿರಂಗನಾಥ ದೇವಾಲಯವಿದೆ. ಇಂದು ನಿರ್ಲಕ್ಷ್ಯಕ್ಕೆ ಒಳಗಾದ ಸ್ಮಾರಕವಿದು. ಆನೆಗೊಂದಿಯಲ್ಲಿ ಅನೇಕ ಸ್ಮಾರಕದೇಗುಲಗಳಿವೆ. ಆನೆಗೊಂದಿ ಅರಸರ ಆರಾದ್ಯ ದೈವ ರಂಗನಾಥ, ಅವರ ಅರಮನೆಯಾದ ಗಗನಮಹಲ್, ಸುಂದರವಾದ ಒಳಕೋಟೆ, ದುರ್ಗಾ ದೇಗುಲದ ಬೆಟ್ಟದ ಮೇಲಿನ ಗಿರಿದುರ್ಗಗಳು ಇಂದಿಗೂ ನೋಡುಗರ ಕಣ್ಮನವನ್ನು ಸೆಳೆಯುತ್ತಿವೆ. ಹಾಗೆಯೇ ಕೃಷ್ಣದೇವರಾಯನ ಸಮಾಧಿ ಸ್ಥಳವೆಂದು ಕರೆಯುವ ವಿಶಾಲ ಮಂಟಪವು ನದಿಯ ಮಧ್ಯದಲ್ಲಿದೆ. ಇದಕ್ಕೆ ಹತ್ತಿರವೆನ್ನುವಂತೆ ನವವೃಂದಾವನವು ಪ್ರಮುಖ ಧಾರ್ಮಿಕ ಎಡೆಯಾಗಿದೆ.

ಆನೆಗೊಂದಿ ಪರಿಸರವು ತುಂಗಭದ್ರಾ ನದಿಯ ದಂಡೆಯುದ್ದಕ್ಕೂ ಹರಡಿದ್ದು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಪ್ರದೇಶವಾಗಿದೆ. ಸ್ಮಾರಕ ದೇಗುಲಗಳಲ್ಲದೆ ಕಣಶಿಲೆಯ ಬೆಟ್ಟಗಳ ಕಣಿವೆಗಳ ಮಧ್ಯೆ ಆಳವಾಗಿ, ಕೆಲವೆಡೆ ಕಿರಿದಾಗಿ, ಮತ್ತೆ ಅಲ್ಲಲ್ಲಿ ವಿಸ್ತಾರವಾಗಿ ವಿಭಿನ್ನ ಆಯಾಮಗಳಲ್ಲಿ ಹರಿಯುವ ತುಂಗಭದ್ರೆಯ ಹರಹನ್ನು ನೋಡುವುದೇ ಒಂದು ಸೊಗಸು. ನದಿಯ ಈ ಭಾಗವು ವಿಶೇಷವಾಗಿ ನೀರುನಾಯಿಗಳ ಆವಾಸಸ್ಥಾನವೂ ಹೌದು. ವಿಜಯನಗರ ಕಾಲದಲ್ಲಿ ಹರಿಹರನ ದಂಡನಾಯಕನಾದ ಬೈಚಪ್ಪ ದಂಡನಾಯಕನ ಮಗನಾದ ಇರುಗಪ್ಪ ದಂಡನಾಯಕನು ಕ್ರಿ.ಶ.೧೩೪೨ರಲ್ಲಿ  ಶಿಲಾ ಚಾರು ಚೈತ್ಯಾಲಯವನ್ನು ಇಲ್ಲಿ ನಿರ್ಮಿಸಿದ್ದು, ಅದು ಇಂದಿನ ತ್ರಿಕೂಟ ಜಿನಾಲಯವೇ ಆಗಿದೆ. ಇಲ್ಲಿನ ಶಾಸನದಲ್ಲಿ ಕರ್ಣ್ನಾಟ ಮತ್ತು ಕುಂತಲ ನಾಡಿನ ಉಲ್ಲೇಖಗಳಿವೆ.  ಇಲ್ಲಿನ ಹುಚ್ಚಪ್ಪಯ್ಯ ಮಠ ವಿಜಯನಗರ ಕಾಲದ ಬಹುದೊಡ್ಡ ಮಠವೇ ಆಗಿದ್ದಿತು. ಇದರ ಕಂಬಗಳನ್ನು ನೋಡಿದರೆ ಅವು ಹೊಯ್ಸಳ ಕಾಲವನ್ನು ನೆನಪಿಸುತ್ತವೆ. ಅಲ್ಲಿಯೇ ಇದ್ದ ಪ್ರಾಚೀನ ದೇವಾಲಯವೊಂದರ ಕಂಬಗಳನ್ನು ಬಳಸಿ ಮಠವನ್ನು ವಿಸ್ತರಿಸಿದಂತೆ ಗೋಚರಿಸುತ್ತದೆ.

ಆನೆಗೊಂದಿಯ ಶ್ರೀರಂಗನಾಥ ದೇವಾಲಯವು ಅಲ್ಲಿನ ಆಕರ್ಷಣೆಗಳಲ್ಲೊಂದು. ಇಂದು ಜೀಣೋದ್ಧಾರಗೊಂಡು ಹೊಳಪನ್ನು ಪಡೆದುಕೊಂಡಿದೆ. ಇಲ್ಲಿ ಅನೇಕ ಸ್ಮಾರಕಗಳಿದ್ದು ಅವುಗಳಲ್ಲಿ ಕೋಟೆ, ಮಂಟಪಗಳು, ಮಹಾದ್ವಾರಗಳು, ನದಿ ದಂಡೆಯಲ್ಲಿರುವ ತಳವಾರಘಟ್ಟದ ಬಳಿಯ ಕೋಟೆಗೋಡೆಗೆ ಹೊಂದಿಕೊಂಡಿರುವ ಎರಡು ವೀರಗಲ್ಲುಗಳು ಅಪರೂಪದವು. ಇವುಗಳ ಶಿಲ್ಪಲಕ್ಷಣದ ಹಿನ್ನೆಲೆಯಲ್ಲಿ ವಿಜಯನಗರ ಕಾಲಕ್ಕೆ ಸೇರುತ್ತವೆ. ಇವುಗಳ ವಿಶೇಷತೆಯೆಂದರೆ ನದಿಯನ್ನು ದಾಟಿಸುವ ಅಂಬಿಗರಿಗಾಗಿ ಹಾಕಿದ ವಿಶಿಷ್ಟ ಸ್ಮಾರಕ ಶಿಲ್ಪಗಳಿವು. ತುಂಗಭದ್ರಾ ನದಿಯನ್ನು ದಾಟಲು ಇಲ್ಲಿ ಸೇತುವೆಯಿಲ್ಲ. ವಿಜಯನಗರವಲ್ಲದೆ ಇಂದಿಗೂ ಹಂಪೆ ಆನೆಗೊಂದಿಯ ಪ್ರಮುಖ ಕೊಂಡಿ ಹರಿಗೋಲಿನ ತಳವಾರಘಟ್ಟವೇ ಆಗಿದೆ. ಹರಿಗೋಲಿನ ಮೂಲಕವಾದರೆ ಆನೆಗೊಂದಿಯು ಕೇವಲ ಎರಡೇ ಕಿ.ಮೀ. ಅಂತರ. ಆದರೆ ಇತ್ತೀಚೆಗೆ ನಿರ್ಮಿಸಲಾದ ಬುಕ್ಕಸಾಗರ ಮಾರ್ಗದ ಸೇತುವೆಯ ಮೂಲಕವಾದರೆ ಇಪ್ಪತ್ತು ಕಿ.ಮೀ. ಕ್ರಮಿಸಬೇಕಾಗುತ್ತದೆ.
ವಿಜಯನಗರ ಕಾಲಕ್ಕೆ ಆನೆಗೊಂದಿಯಲ್ಲಿದ್ದ ಸೆರೆಮನೆಯಿತ್ತೆಂದೂ, ಈ ಸೆರೆಮನೆಯಲ್ಲಿಯೇ ಕೃಷ್ಣದೇವರಾಯನ ಮಂತ್ರಿ ಸಾಳ್ವತಿಮ್ಮ ಮತ್ತು ಅವನ ಮಕ್ಕಳನ್ನು ಕೂಡಿಹಾಕಲಾಗಿತ್ತೆಂದೂ, ಬೆಂಗಳೂರಿನ ಕೆಂಪೇಗೌಡನನ್ನೂ ಕೆಲಕಾಲ ಇಲ್ಲಿ ಬಂಧಿಸಿ ಇಡಲಾಗಿತ್ತೆಂದೂ ಹೇಳಲಾಗುತ್ತದೆ.

ಆನೆಗೊಂದಿ ವಿಶ್ವಕರ್ಮ ಸಮುದಾಯದ ಮೂಲಪೀಠವಾದ ಸರಸ್ವತಿ ಮಠವಿರುವ ಸ್ಥಳವಿದು. ಇಲ್ಲಿ ವಿಶ್ವಕರ್ಮರ ವ್ಯಾಜ್ಯವನ್ನು ನೆನಪಿಸುವ ತಾಮ್ರಪಟವೊಂದು ಕಂಡುಬಂದಿದ್ದು, ಸಮುದಾಯದ ಮೂ ಕುರಿತಂತೆ ಸ್ಪಷ್ಟಪಡಿಸುತ್ತದೆ. ಗಂಗಾವತಿಗೆ ಅಂಟಿಕೊಂಡಂತಿರುವ ಹಿರೇಜಂತಕಲ್ಲಿನಲ್ಲಿ ಪಂಪಾವಿರೂಪಾಕ್ಷ ದೇವಾಲಯವಿದೆ. ಇದು ವಿಜಯನಗರ ಶೈಲಿಯಲ್ಲಿರುವ ವಿಶಾಲವಾದ ದೇವಾಲಯವಾಗಿದೆ.  ಇಲ್ಲಿನ ಕುಮ್ಮಟದುರ್ಗವು ಕಂಪಿಲರಾಯ ಮತ್ತು ಕುಮಾರರಾಮರ ನೆಲೆವೀಡು. ಅಲ್ಲಿರುವ ಕೋಟೆಕೊತ್ತಲ, ಕುದುರೆಕಲ್ಲು ಪ್ರಾಚೀನರ ರಕ್ಷಣಾ ತಂತ್ರಗಳೇ ಆಗಿವೆ. ಅಲ್ಲಿರುವ ವೀರಗಲ್ಲುಗಳು ಅಂದಿನವರ ಹೋರಾಟದ ಪ್ರತೀಕಗಳಾದರೆ, ದೇಗುಲ, ಜಿನಾಲಯಗಳು ಅಂದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕುರುಹುಗಳಾಗಿವೆ. ಇಲ್ಲಿಗೆ ಹತ್ತಿರವಿರುವ ಹೇಮಗುಡ್ಡ ವಿಜಯನಗರ ಕಾಲದ ಪ್ರಮುಖ ದೇವಾಲಯಗಳನ್ನು ಹೊಂದಿದ ಮಹತ್ವದ ಸ್ಥಳವಾಗಿದೆ.

ಇದನ್ನು ಎಮ್ಮಿಗುಡ್ಡವೆಂದೇ ಕರೆಯುತ್ತಾರೆ. ಇದು ಎರಡು ಬೆಟ್ಟಗಳ ತಪ್ಪಲಿನ ಸುಂದರ ತಾಣ. ಇಲ್ಲಿನ ಕನಕರಾಯ ಮತ್ತು ಈಶ್ವರ ದೇವಾಲಯಗಳು ವಿಜಯನಗರ ಶೈಲಿಯಲ್ಲಿ ಮೈದಳೆದಿವೆ. ಕನಕರಾಯನ ದೇವಾಲಯವೋ ನಿಧಿಗಳ್ಳರ ಧಾಳಿಗೆ ಸಿಕ್ಕು

ನಲುಗಿದೆ. ಗರ್ಭಗೃಹವಿರಲಿ, ಇಡೀ ದೇವಾಲಯದ ಆವರಣವನ್ನೂ ಬಿಡದೆ ಅಗೆದು ಹಾಕಿರುವುದು ವಿಷಾದನೀಯ. ಇಲ್ಲಿನ ದುರ್ಗಾ ದೇವಾಲಯದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಂಪೆ ಪರಿಸರಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ರಕ್ಷಣೆಯಿದ್ದರೆ, ಎಡದಂಡೆಯ ಮೇಲಿನ ಚಾರಿತ್ರಿಕ ಸ್ಮಾರಕಗಳಿಗೆ ಯಾವುದೇ ರಕ್ಷಣೆಯಿಲ್ಲ.

ಇದರಿಂದ ದೇವಿಘಾಟದಲ್ಲಿರುವ ದೇವಾಲಯಗಳ ಸ್ಥಿತಿ ಹೇಮಗುಡ್ಡಕ್ಕಿಂತ ಭಿನ್ನವೇನೂ ಆಗಿಲ್ಲ. ಒಟ್ಟಿನಲ್ಲಿ ಆನೆಗೊಂದಿ ಪರಿಸರವು ಆದಿಮ ಕಾಲದಿಂದ ಹಿಡಿದು ಇಂದಿನವರೆಗೂ ಸಾಂಸ್ಕೃತಿಕ ಸಂಗತಿಗಳನ್ನು ಮೈದಳೆದುಕೊಂಡ ಪ್ರಸಿದ್ಧ ತಾಣವೆಂದರೆ ಅತಿಶಯೋಕ್ತಿಯಾಗಲಾರದು.

Girl in a jacket
error: Content is protected !!