ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ
ಹಂಪೆಯ ಬಜಾರುಗಳ ಅಧ್ಯಯನ ಸಂದರ್ಭದಲ್ಲಿ ವಿಜಯನಗರ ರಾಜಧಾನಿ ಪಟ್ಟಣವನ್ನು ಕುರಿತು ವಿದೇಶಿ ಪ್ರವಾಸಿಗರ ವರದಿ ಮತ್ತು ಶಾಸನಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳುವ ಸಂದರ್ಭ ಅನಿವಾರ್ಯವಾಗಿ ಪುರಪಟ್ಟಣದ ಅನೇಕ ವಿಷಯಗಳು, ಅವುಗಳ ಸ್ಥಳನಾಮಗಳು ಕಣ್ಮುಂದೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಗೋರಿಕೆಳಗಣ ಗ್ರಾಮ ಎಂಬ ಸ್ಥಳನಾಮವು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಇದರ ಜಾಡನ್ನು ಹಿಡಿದು ಹೊರಟಾಗ ವಿಜಯನಗರ ಸಾಮ್ರಾಜ್ಯದಲ್ಲಿ ಮುಸ್ಲಿಮರು ಸೇನಾಯೋಧರಾಗಿ, ಅಶ್ವಾಳು-ಬಿಲ್ಲಾಳುಗಳಾಗಿ, ದಂಡನಾಯಕರಾಗಿ, ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಗತಿ ಅತ್ಯಾಕರ್ಷಕವಾಗಿ ಗೋಚರಿಸಿತ್ತು. ಅದರ ಪ್ರತಿಫಲವೇ ಪ್ರಸ್ತುತ ಪ್ರಬಂಧ.
ವಿಜಯನಗರ ಪಟ್ಟಣವನ್ನು ಇಂದು ಹಾಳುಪಟ್ಟಣವೆಂದೇ ಕರೆಯಲಾಗುತ್ತದೆ. ಆದರೆ ಅಂದು ವಿಜಯನಗರವು ಬಹಳ ದೊಡ್ಡದಾದ ಜನವಸತಿಯಿರುವ ಮತ್ತು ಅನೇಕ ಉಪನಗರಗಳುಳ್ಳ ಬಹುದೊಡ್ಡ ನಗರವಾಗಿತ್ತು. ವಿಜಯನಗರದ ವಿಸ್ತಾರವನ್ನು ಕಂಡ ಅಬ್ದುಲ್ ರಜಾಕ್, ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲವೆಂದು ಹೇಳಿರುವುದು. ಈ ನಗರದಲ್ಲಿ ಎಲ್ಲ ವಿಧದ ವರ್ಗ ಮತ್ತು ಸಮುದಾಯಗಳ ಜನರಿದ್ದುದನ್ನು ಕಾಣುತ್ತೇವೆ. ಈ ಕುರಿತು ಬಾರ್ಬೊಸಾ, ಇಲ್ಲಿ “ನಾನಾ ದೇಶದ ಮತ್ತು ನಾನಾ ಜನಾಂಗದ ಜನರು ಈ ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ತುಂಬಿರುತ್ತಾರೆ. ಏಕೆಂದರೆ ಅನೇಕ ಮೂರ್ ವರ್ತಕರು ಮತ್ತು ಶ್ರೀಮಂತ ಜೆಂಟೈಲ್ ನಿವಾಸಿಗಳಲ್ಲದೆ ಬೇರೆ ಕಡೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಮುತ್ತಿಕೊಂಡಿರುವ ಜನರಿದ್ದಾರೆ. ಇಲ್ಲಿಗೆ ಬರಬಹುದಾದವರೆಲ್ಲ ಬಂದು ಇಲ್ಲಿದ್ದು ವ್ಯಾಪಾರ ಸಾಪಾರಗಳಲ್ಲಿ ತೊಡಗಿದ್ದಾರೆ. ಯಾರು ಬೇಕಾದರೂ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ಇಲ್ಲಿರಬಹುದು. ಯಾರಿಂದಲೂ ಅವರಿಗೆ ತೊಂದರೆ ಇಲ್ಲ. ಎಲ್ಲಿಂದ ಬಂದರೆಂದು ಯಾರೂ ಕೇಳುವುದಿಲ್ಲ. ಯಾವ ಜನಾಂಗದವರೆಂದು ಪ್ರಶ್ನೆ ಮಾಡುವುದಿಲ್ಲ. ಅವರು ಮೂರರಾಗಿರಬಹುದು ಅಥವಾ ಕ್ರೈಸ್ರರಾಗಿರಬಹುದು. ಎಲ್ಲರೂ ತಮ್ಮ ಮತಧರ್ಮದಂತೆ ಅಥವಾ ತಮ್ಮ ಇಷ್ಟದಂತೆ ಇರಬಹುದು ಎಂದಿದ್ದಾನೆ. ಇದರಿಂದ ವಿಜಯನಗರ ಪಟ್ಟಣದಲ್ಲಿ ವಾಸವಾಗಿದ್ದ, ವ್ಯಾಪಾರಕ್ಕೆಂದು ಬಂದ ವಿವಿಧ ಮತಧರ್ಮಗಳ ಜನರ ವಿವರ ಸ್ಪಷ್ಟವಾಗುತ್ತದೆ.
ಈ ಸಮುದಾಯಗಳಲ್ಲಿ ವಿಜಯನಗರದಲ್ಲಿದ್ದ ಮೂರರು ಅಥವಾ ಮುಸ್ಲಿಮರ ವಾಸ್ತವ್ಯವನ್ನು ಗಮನಿಸುತ್ತಾ ಹೋದಾಗ ನಗರದಲ್ಲಿ ಪ್ರತ್ಯೇಕ ವಾಸ್ತವ್ಯವೇ ಇವರದಾಗಿದ್ದುದು ದೃಢವಾಗುತ್ತದೆ. ಇದಕ್ಕೆ ಅಂದಿನ ಆಕರಗಳನ್ನು ಪರಿಶೀಲಿಸುತ್ತಾ ಹೋದಾಗ ವಿಜಯನಗರ ಕಾಲದಲ್ಲಿ ಮುಸ್ಲಿಮರ ಪಾತ್ರ ಬಹುಪ್ರಮುಖವಾದದ್ದು ತಿಳಿಯುತ್ತದೆ. ಅದರಲ್ಲೂ ಅಂದಿನ ಸೇನೆಯಲ್ಲಿ ಮುಸ್ಲಿಂ ಸೈನಿಕರ ದಕ್ಷತೆ, ಅದರಲ್ಲೂ ಅಶ್ವದಳದಲ್ಲಿ ಹೊಂದಿದ್ದ ಪರಿಣತಿ ವಿಶೇಷವಾಗಿತ್ತು. ಅವರಿಂದ ಸೈನ್ಯದ ದಕ್ಷತೆಯನ್ನು ಹೆಚ್ಚಿಸಲು ಪರಿಣತರಾದ ಮುಸ್ಲಿಂ ಸೈನಿಕರನ್ನು ವಿಜಯನಗರ ಅರಸರು ತಮ್ಮ ಸೇನೆಯಲ್ಲಿ ಸೇರಿಸಿಕೊಂಡದ್ದು ಗಮನಾರ್ಹ. ಒಂದನೆಯ ದೇವರಾಯ ಮತ್ತು ಪ್ರೌಢದೇವರಾಯರ ಕಾಲದ ಹೊತ್ತಿಗೆ ಮುಸ್ಲಿಮರು ಸೈನ್ಯದಲ್ಲಿದ್ದರು. ಒಂದು ದಾಖಲೆಯಂತೆ ಹತ್ತು ಸಾವಿರಕ್ಕೂ ಹೆಚ್ಚು ಮುಸ್ಲಿಂ ಯೋಧರು ವಿಜಯನಗರದಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಾ ಹೋದಾಗ ಶಾಸನ, ಪ್ರವಾಸಿ ಸಾಹಿತ್ಯ, ಪಟ್ಟಣ ಹಾಗೂ ಪಟ್ಟಣದ ಹೊರಗಿನ ಉಪನಗರಗಳಲ್ಲಿರುವ ಇಸ್ಲಾಂ ಸ್ಮಾರಕಗಳು ನೆರವಾದವು. ಅವು ಹೆಚ್ಚಾಗಿ ಕ್ರಿ.ಶ. ೧೪೨೦ ಮತ್ತು ನಂತರ ಕಾಲದವೇ ಆಗಿವೆ. ಅವುಗಳಲ್ಲಿ ಪಟ್ಟಣದ ಮುಖ್ಯ ಭಾಗ ಅಥವಾ ವಿಜಯನಗರ ಪಟ್ಟಣದ ಕೇಂದ್ರ ಭಾಗವಾದ ಹಜಾರ ರಾಮಚಂದ್ರ ದೇವಾಲಯದ ಮುಂಬದಿಯಲ್ಲಿ ಪ್ರಸಿದ್ಧವಾದ ಪಾನ್‌ಸುಪಾರಿ ಬಜಾರು ಇತ್ತು. ಇದು ನಾಲ್ಕೈದು ಬೀದಿಗಳನ್ನು ಹೊಂದಿದ ಬಹುದೊಡ್ಡ ಮಾರುಕಟ್ಟೆಯೇ ಆಗಿತ್ತು. ಇದನ್ನು ಶಾಸನಗಳಲ್ಲಿ ಕ್ರಮುಖಪರ್ಣಾಪಣ ಅಂಗಡಿವೀದಿ, ಪೆದ್ದಂಗಡಿ ಬೀದಿ, ಮಹಾಬೀದಿಯೆಂತಲೂ ಕರೆಯಲಾಗಿದೆ. ಈ ಬಜಾರು ಸುಮಾರು ಒಂದು ಕಿ.ಮೀ. ಉದ್ದವಾಗಿದ್ದು, ಶೃಂಗಾರದ ಹೆಬ್ಬಾಗಿಲವರೆಗೆ ವಿಸ್ತರಿಸಿತ್ತು. ಈ ಬೀದಿಯ ಆಸುಪಾಸಿನ ವಿಶಾಲ ಬೆಟ್ಟ, ಬಯಲುಗಳಲ್ಲೇ ರಾಜರು, ಅಧಿಕಾರಿಗಳು, ಮತ್ತು ಎಲ್ಲ ವರ್ಗ, ಸಮುದಾಯಗಳ ಜನವಸತಿಗಳು ನೆಲೆಗೊಂಡಿದ್ದವು.
ಅವುಗಳನ್ನು ಕನಕದಾಸರ ಮಾತಿನಲ್ಲಿ ಹೇಳುವುದಾದರೆ, ಅಂದಿನ ನಗರ ವಿನ್ಯಾಸಕರಾದ ಆಗಮಜ್ಞರು ಹಂಚಿಕೊಂಡಂತಿದ್ದವು. ಈ ಹೆಬ್ಬಾಗಿಲನ್ನು ದಾಟಿ ಮುನ್ನಡೆದರೆ ಅಲ್ಲಿ ಅನೇಕ ಮುಸ್ಲಿಮರ ಗೋರಿ, ಮಸೀದಿ, ಅರವಟಿಗೆ ಮತ್ತು ಬಾವಿಗಳು ಸಿಗುತ್ತವೆ. ಇವುಗಳ ಬಳಿಯಿರುವ ಶಾಸನ ಸಂಗತಿಗಳು ಗಮನಿಸಬೇಕಾದ ವಿವರಗಳನ್ನೇ ಹೊಂದಿವೆ. ಅವುಗಳಲ್ಲಿ ಕ್ರಿ.ಶ. ೧೪೨೦ರ ಶಾಸನದಲ್ಲಿ, “ಮೀಯಾರಾಹುತನ ಯಿಂಬುಗೋರಿ ಮಸೂಜಿಯನು ಬಸವ…ರಾ(ಮ)ನಾಯಕನು ಮೀಯ ರಾಹತಗೆ ಪುಣ್ಯವಾಗಬೇಕೆಂದು ಕಟಿಸಿ ಮಜಾರಾ ಮಸೂಜಿಯನೂ ….ಮನರಾದರು ಯಿ ಯಂಬನಲಾರೊಬರು ಸ್ತಾನ ಮಾಡಿದರೆ ಆವನ ಹೆಂಡತಿ ಅವನ ತಾಯಿನು ಮಕ್ಕಳು ಕತ್ತೆಯನುಂಡವರುಎಂದಿದೆ. ಇದರ ವಿಶೇಷತೆಯೆಂದರೆ ಅನ್ಯಧರ್ಮೀಯರಾದ ಬಸವ ಮತ್ತು ರಾಮಪ್ಪನಾಯಕ ಎಂಬುವರು ಮೀಯ ರಾಹುತನಿಗಾಗಿ ಪುಣ್ಯವಾಗಲೆಂದು ಗೋರಿ, ಮಸೀದಿ ಮತ್ತು ಗೋಡೆಗಳನ್ನು ಕಟ್ಟಿಸಿದ್ದುದು. ಇದು ವಿಜಯನಗರ ಪಟ್ಟಣದಲ್ಲಿ ಕಾಣಬರುವ ಅಪರೂಪದ ಮುಸ್ಲಿಂ ಯೋಧ ಮುಖಂಡನೊಬ್ಬನಿಗೆ ನೀಡಲಾದ ಗೌರವವೆಂದೇ ಹೇಳಬೇಕು. ಮೀಯ ಎಂಬುವನು ರಾಹುತನಾಗಿದ್ದು, ವಿಜಯನಗರ ಸೇನೆಯ ಪ್ರಮುಖ ಅಶ್ವಾರೋಹಿಯಾಗಿ, ಅಶ್ವದಳದ ಪ್ರಮುಖನೆಂಬುದೂ ಸ್ಪಷ್ಟವಾಗುತ್ತದೆ. ಹಾಗೆಯೇ “ದಾದನ ರಾಹುತನ ಮಗ ಸಖಲಾದಿ ರಾಹುತನು ಯಿ ಗುಂಮತನು ಕಟ್ಟಿಸ್ತ ಎಂಬ ಶಾಸನವನ್ನು ಇಲ್ಲಿನ ಗುಂಡಿನ ಮೇಲೆ ಕಾಣುತ್ತೇವೆ. ವಿಜಯನಗರ ಅರಸರು ಮುಸ್ಲಿಮ ಯೋಧರಿಗೆ ದಂಡನಾಯಕ ಪಟ್ಟವನ್ನೂ ನೀಡಿದ್ದರು. ಇದಕ್ಕೆ ಕಟಿಗೆ ಆಹಮದ್ ಖಾನ್ ಪ್ರಮುಖ ಉದಾಹರಣೆ. ಪ್ರೌಢದೇವರಾಯನ ಅನೇಕ ದಂಡನಾಯಕರಲ್ಲಿ ಇವನೂ ಒಬ್ಬನಾಗಿದ್ದಾನೆ. ಕಟಿಗೆ ಎಂಬುದು ದಂಡ, ದೊಣ್ಣೆ ಎಂಬುದೇ ಆಗಿದೆ. ಅಂದು ಕಟ್ಟಿಗೆ, ದಂಡ ಅಥವಾ ದೊಣ್ಣೆಯು ದಂಡನಾಯಕನ ಪ್ರಮುಖ ಸಂಕೇತವೂ ಹೌದು. ದಂಡನಾಯಕನನ್ನು ದೊಣ್ಣೆನಾಯಕ ಎಂದೂ ಕರೆಯಲಾಗುತ್ತಿತ್ತು. ಇಂದಿಗೂ ಹಳ್ಳಿಗಳಲ್ಲಿ ಎಲ್ಲೆ ಮೀರಿ ವರ್ತಿಸುವವನನ್ನು, ಇವನು ಯಾವೂರ ದೊಣ್ಣೆನಾಯಕನೋ? ಎಂದು ಉಚ್ಚರಿಸುವುದು ರೂಢಿಯಲ್ಲಿದೆ. ದಂಡನಾಯಕರಲ್ಲಿ ಕಟಿಗೆ ಆಹಮದ್‌ಖಾನ್ ಎಷ್ಟರಮಟ್ಟಿಗೆ ಅಧಿಕಾರ ಹೊಂದಿದ್ದನೆಂದರೆ ದಾನದತ್ತಿಗಳನ್ನು ಬಿಟ್ಟು ಶಾಸನವನ್ನು ಹಾಕಿಸುವಷ್ಟರ ಮಟ್ಟಿಗೆ ಪ್ರಸಿದ್ಧನಾಗಿದ್ದನು. ಶಾಸನದಲ್ಲಿ ಹೇಳಿರುವಂತೆ, “ಶ್ರೀ ಪ್ರತಾಪದೇವರಾಯ ಮಹಾರಾಯರ ಶ್ರೀ ಪಾದಸೇವೆಯ ಕಟಿಗೆಯ ಆಹಮುದಖಾನನು ರಾಯರಿಗೆ ಧರ್ಮವಾಗಬೇಕೆಂದು ಕಟಿಸಿದ ಧರ್ಮಸಾಲೆ ಬಾವಿಯನು ಆಚಂದ್ರಾರ್ಕಸ್ತಾಯಿಯಾಗಿ ಯೀ ಧರ್ಮವನು ಪಾಲಿಸುದು”. ಇದರಿಂದ ಪ್ರೌಢದೇವರಾಯನ ದಂಡನಾಯಕನಾದ ಆಹಮದಖಾನನು ಪ್ರೌಢದೇವರಾಯನ ನಿಷ್ಟ ದಂಡನಾಯಕನೆಂಬುದು ದೃಢವಾಗುತ್ತದೆ. ಅಲ್ಲದೆ ಕಟಿಗೆ ಆಹಮದ್‌ಖಾನನು ಕಟ್ಟಿಸಿದ ಧರ್ಮಶಾಲೆ ಮತ್ತು ಬಾವಿಗಳು ಇಂದಿಗೂ ಶೃಂಗಾರದ ಹೆಬ್ಬಾಗಿಲ ಬಳಿ ಇಂದಿಗೂ ರಕ್ಷಿಸಲ್ಪಟ್ಟಿವೆ. ಈ ಸ್ಥಳ ಅಥವಾ ಮುಸ್ಲಿಮರ ವಾಸದ ನೆಲೆಯ ಹೆಸರನ್ನು ಹುಡುಕುತ್ತಾ ಹೋದಾಗ ವಿಠಲ ದೇವಾಲಯದ ಕ್ರಿ.ಶ. ೧೫೬೪ರ ಶಾಸನವೊಂದರಲ್ಲಿ “ಗೋರಿಕೆಳಗಣ ಗ್ರಾಮದಲೂ ಕೇ ಭಟದೆ ನಾಗಯನ ಪಳೆ ತೋಟ, …ಗೋರಿಕೆಳಗಣ ಗ್ರಾಮದಲೂ ತೋಟ ಎಂಬ ಉಲ್ಲೇಖ ಕಂಡುಬಂತು. ಈ ತೋಟಗಳನ್ನು ಕುರಿತು ಪೆಯಾಸ್‌ನು, “ಮೂರರ ವಾಸಸ್ಥಾನದ ಕೆಳಗಡೆ ಒಂದು ಚಿಕ್ಕ ನದಿಯಿದೆ. ಅದರ ಈ ಬದಿಗೆ ಅನೇಕ ಹಣ್ಣಿನ ತೋಟಗಳು ಮತ್ತು ಅನೇಕ ಹಣ್ಣಿನ ಗಿಡಗಳುಳ್ಳ ತೋಟಗಳು ಇವೆ. ಈ ಸ್ಥಳವಿವರಗಳು ಮತ್ತು ಆಹಮದ್‌ಖಾನ್ ಮತ್ತಿತರರು ಕಟ್ಟಿಸಿದ್ದ ಗೋರಿ, ಮಸೀದಿಗಳ ಹಿನ್ನೆಲೆಯಲ್ಲಿ ಮುಸ್ಲಿಮರ ವಸತಿ ನೆಲೆಯೇ ಗೋರಿಕೆಳಗಣ ಗ್ರಾಮವಿರಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಇದಕ್ಕೆ ಪೂರಕವೆನ್ನುವಂತೆ ಡೊಮಿಂಗೊ ಪೆಯಾಸ್ ಪಾನ್‌ಸುಪಾರಿ ಬಜಾರನ್ನು ವರ್ಣಿಸುವಾಗ, “ಈ ಬೀದಿಯ ಕೊನೆಯಲ್ಲಿ ಮೂರರ ವಾಸಸ್ಥಾನವಿದೆ.
ಅದು ನಗರದ ತೀರ ಅಂಚಿಗೆ ಇದೆ. ಈ ನಾಡಿನ ನಿವಾಸಿಗಳಾಗಿರುವ ಈ ಮೂರರಿಗೆ ರಾಜ ಸಂಬಳ ಕೊಡುತ್ತಾನೆ ಮತ್ತು ಅವರು ಅವನ ಕಾವಲುಗಾರರಾಗಿದ್ದಾರೆ ಎಂದಿದ್ದಾನೆ. ಇದರಿಂದ ಮುಸ್ಲಿಂ ಸೈನಿಕರನ್ನು ಮತ್ತು ಅವರ ವಾಸದ ಪ್ರತ್ಯೇಕವಾದ ನೆಲೆಯನ್ನು ವಿಜಯನಗರ ಅರಸರು ಕಲ್ಪಿಸಿದ್ದು, ಅದನ್ನು ಗೋರಿಕೆಳಗಣ ಗ್ರಾಮವೆಂದೇ ಅಂದು ಕರೆಯುತ್ತಿದ್ದರೆಂಬುದಂತೂ ಸ್ಪಷ್ಟ. ಅಲ್ಲದೆ ಬಾರ್ಬೊಸಾ ಹೇಳುವಂತೆ, “ನಾನಾ ಕಡೆಗಳಿಂದ ಬಂದು ಇಲ್ಲಿ ಸೈನ್ಯಕ್ಕೆ ಸೇರಿದ ಸರದಾರರು ತಮ್ಮ ತಮ್ಮ ಮತಾನುಸಾರ ನಡೆದುಕೊಳ್ಳುವುದಕ್ಕೆ ಯಾವ ಅಡ್ಡಿಯೂ ಇಲ್ಲ ಎಂದಿರುವುದೂ ಎಲ್ಲ ಧರ್ಮೀಯರಂತೆ ಮುಸ್ಲಿಮರೂ ಇದ್ದುದನ್ನೂ ನೆನಪಿಸುತ್ತದೆ. ಜೊತೆಗೆ ಅಬ್ದುಲ್ ರಜಾಕ್, “ಬಿಜನಗರದಲ್ಲಿ ನೆಲಸಿದ್ದ ಖ್ವಾಜಾ ಮಸೂದ್ ಮತ್ತು ಖ್ವಾಜಾ ಮೊಹಮ್ಮದ್ ಎಂಬ ಖುರಾಸಾನ್ ದೇಶದವರನ್ನು ರಾಜನು ತನ್ನ ರಾಯಭಾರಿಗಳಾಗಿ ನೇಮಿಸಿ ಅನೇಕ ಬಹುಮಾನದ ವಸ್ತುಗಳನ್ನು ಅವರ ವಶಕ್ಕೆ ಒಪ್ಪಿಸಿದನು. ಖಾಖಾನ್ ದೇಶ ದೊರೆಗೆ ಪತ್ರವನ್ನು ಬರೆಸಿ ಅದನ್ನು ರಾಯಭಾರಿಗಳ ವಶಕ್ಕೆ ಕೊಟ್ಟನು ಎಂಬುದು ಮುಸ್ಲಿಮರಿಗೆ ಸೈನದಲ್ಲಿ ಸೈನಿಕರಾಗಿ, ಸೇನೆಯ ದಂಡನಾಯಕ ಹುದ್ದೆಗಳಲ್ಲದೆ, ರಾಯಭಾರಿಗಳನ್ನಾಗಿಯೂ ಪ್ರೌಢದೇವರಾಯ ನೇಮಿಸಿಕೊಂಡಿದ್ದನು. ಅಲ್ಲದೆ ರಾಯನು ತನ್ನ ಸಿಂಹಾಸನದ ಪಕ್ಕದಲ್ಲಿ ಕುರಾನಿನ ಪ್ರತಿಯನ್ನು ಇಟ್ಟುಕೊಂಡಿದ್ದನೆಂಬುದೂ ಅವನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಸ್ಲಿಮರ ವಸತಿ ನೆಲೆಗಳು ವಿಜಯನಗರವಲ್ಲದೆ ಅದರ ಉಪಪಟ್ಟಣಗಳಾದ ಕಡ್ಡಿರಾಮಪುರ ಮತ್ತು ಹೊಸಪೇಟೆಗಳಲ್ಲೂ ಇದ್ದವು.
ಇದಕ್ಕೆ ಕಡ್ಡಿರಾಮಪುರದ ಶಾಸನವೊಂದು, ಕಡೆರಾಮಪುರದಲ್ಲಿನ ಕನ್ನೆಕಟ್ಟೆ ಬಳಿ ಹರಳುತಿಪ್ಪೆ ಗುಡ್ಡದಲ್ಲಿ ಸೈಯದ್‌ಪೀರ್ ಆಲಿ ಎಂಬುವವನು ಗುಮ್ಮಟವನ್ನು ಕಟ್ಟಿಸಿ ಅಲ್ಲಿ ತೋಟ ಮತ್ತು ಬಾವಿಯನ್ನು ತೋಡಿಸಿದ ವಿವರವಿದೆ. ಅಲ್ಲಿನ ಇನ್ನೊಂದು ಶಾಸನದಲ್ಲಿ “ಸುಲಿತಾಣ ಷಯಿದು ಪೀರಿಗೆ ಬಾಬಯನ ಗುಡಿಗೆ ಬಿಟ ಎಲೆಯ ಕಲು ಯಿದಕೆ ತಪಿದರೆ ತಾಯಿಗೆ ತಪಿದವರು ಎಂದಿದೆ. ಇದು ಸುಲ್ತಾನ ಸೈಯದ್ ಪೀರ್‌ಗೆ ಬಾಬಯನ ಗುಡಿಗೆ ಬಿಟ್ಟ ಎಲ್ಲೆಯ ಕಲ್ಲು ಎಂಬುದಾಗಿದೆ. ಅಲ್ಲದೆ ಈ ಸ್ಥಳದಲ್ಲಿ ಅನೇಕ ಮುಸ್ಲಿಂ ಸ್ಮಾರಕಗಳನ್ನು ಇಂದಿಗೂ ಕಾಣುತ್ತೇವೆ. ಹೊಸಪೇಟೆಯ ಸಹಾಯಕ ಆಯುಕ್ತರ ಕಚೇರಿ ಬಳಿಯಲ್ಲೂ ಮುಸ್ಲಿಮರ ಗೋರಿ, ಮಸೀದಿಗಳು ಇಂದಿಗೂ ಉಳಿದುಬಂದಿರುವುದು ಗಮನಾರ್ಹ ಸಂಗತಿ. ಇದನ್ನು ಅಂದು ತಿರುಮಲಾದೇವಿ ಅಮ್ಮನವರ ಪಟ್ಟಣವೆಂದೇ ಕರೆಯಲಾಗಿದ್ದು, ಶ್ರೀಕೃಷ್ಣದೇವರಾಯ ತನ್ನ ರಾಣಿಯ ಹೆಸರಿನಲ್ಲಿ ನಿರ್ಮಿಸಿದ ಪಟ್ಟಣವಿದು. ಇದನ್ನು ಕುರಿತು, ಪೆಯಾಸ್‌ನು “ರಾಜ ನಿರ್ಮಿಸಿದ ಈ ನೂತನ ನಗರಕ್ಕೆ ಯಾವ ಪತ್ನಿಯ ಪ್ರೀತ್ಯರ್ಥವಾಗಿ ಅದನ್ನು ನಿರ್ಮಿಸಿದನೊ ಅವಳ ಹೆಸರು ಇಡಲಾಗಿದೆ.
ಒಟ್ಟಿನಲ್ಲಿ ವಿಜಯನಗರ ಅರಸರು ತಮ್ಮ ಸೇನೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿ ಅವರು ವಾಸಿಸಲು ತಮ್ಮ ರಾಜಧಾನಿ ಮತ್ತು ಉಪನಗರಗಳಲ್ಲೂ ಯೋಗ್ಯವಾದ ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದುದು ಗಮನಿಸಬೇಕಾದ ಅಂಶವಾಗಿದೆ.