ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . .
ಮುಂದುವರಿದ ಭಾಗ. . .
ವಿಜಯನಗರ ಅರಸರು ಕೃಷಿ ನೀರಾವರಿಗೆ ಆದ್ಯತೆ ನೀಡಿದ್ದುದು ತಿಳಿದ ಸಂಗತಿ. ಅದು ಮಳೆಯ ನೀರನ್ನು ಕೆರೆ, ಕಾಲುವೆಗಳ ಮೂಲಕ ತಡೆದು ಕೃಷಿ ಬೆಳೆ ಮತ್ತು ಗ್ರಾಮ-ನಗರಗಳ ಬಳಕೆಗೆ ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿದ್ದರು. ಅದರಲ್ಲೂ ರಾಜಧಾನಿಯ ಪಕ್ಕದಲ್ಲೇ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು, ಅದರ ನೀರನ್ನು ವಿನಿಯೋಗಿಸಿಕೊಂಡ ಕ್ರಮ ಅನನ್ಯವಾದದ್ದು. ಅವರ ಪ್ರಯತ್ನದಿಂದ ಅನೇಕ ಅಣೆಕಟ್ಟೆಗಳು ಐದುನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಅಲ್ಲದೆ ಅವರು ಬಳಸಿದ ಪರಿಸರಸ್ನೇಹಿ ತಂತ್ರಜ್ಞಾನಗಳಿಂದ ಇಂದಿಗೂ ಜೀವಂತವಿದ್ದು ಈ ಭೂಭಾಗವನ್ನು ಹಸಿರಾಗಿಸಿವೆ. ಅಂತಹ ಅಣೆಕಟ್ಟೆಗಳಲ್ಲಿ ವಲ್ಲಭಾಪುರ, ರಾಮಣ್ಣ, ಕುರುದಗಡ್ಡ್ಡೆ, ಹೊಸೂರು, ತುರ್ತು, ರಾಮಸಾಗರ, ಸಣಾಪುರ, ಹಿರೇಜಂತಕಲ್ಲು, ಕಂಪಲಿ, ಚಿಕ್ಕಜಂತಕಲ್ಲು, ಕೆಂಚನಗುಡ್ಡ, ದೇಶನೂರು ಅಣೆಕಟ್ಟೆಗಳು ಪ್ರಮುಖವಾಗಿವೆ.
ಇವುಗಳ ಉದ್ದ ಐದರಿಂದ ಮೂವತ್ತು ಕಿ.ಮೀ ದೂರದವರೆಗೆ ವಿಸ್ತರಿಸಿತ್ತೆಂದರೆ ಅಂದಿನವರ ತಾಂತ್ರಿಕ ಕೌಶಲ ಎಂತಹುದೆಂಬುದು ತಿಳಿಯುತ್ತದೆ. ಈ ಅಣೆಕಟ್ಟೆಗಳಲ್ಲಿ ಹೆಚ್ಚು ಕೃಷಿಗೆ ಬಳಕೆಗೊಂಡರೆ ವಲ್ಲಭಾಪುರ ಮತ್ತು ತುರ್ತು ಅಣೆಕಟ್ಟುಗಳು ಕೃಷಿಯ ಜೊತೆಗೆ ವಿಜಯನಗರ ರಾಜಧಾನಿ ಪಟ್ಟಣದ ಜೀವನಾಡಿಯಾಗಿ ಬಳಕೆಗೊಂಡಿವೆ.
ವಿಜಯನಗರ ಪಟ್ಟಣ ಮಧ್ಯಯುಗೀನ ಅತ್ಯಂತ ದೊಡ್ಡ ನಗರ. ಇದರ ವಿಸ್ತಾರ ಸರಿಸುಮಾರು 24 ಚ.ಕಿ.ಮೀ. ಇದು ಹಂಪಿ, ಕಮಲಾಪುರ, ಮಲಪನಗುಡಿ, ಅನಂತಶಯನಗುಡಿ ಮತ್ತು ಹೊಸಪೇಟೆಗಳನ್ನೂ ಒಳಗೊಂಡಂತೆ ವಿಸ್ತಾರವಾಗಿ ಹರಡಿತ್ತು. ಈ ನಗರವು ಹೇಗಿತ್ತೆಂಬುದನ್ನು ಅಬ್ದುಲ್ ರಜಾಕ್ ಹೇಳುತ್ತಾ, ವಿಜಯನಗರವು ಬಹಳ ದೊಡ್ಡದಾದ ಜನವಸತಿಯುಳ್ಳ ಊರು. ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ, ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. …ಏಳನೆಯ ಕೋಟೆ ಆಕ್ರಮಿಸಿಕೊಂಡಿರುವ ಜಾಗ ಹೆರಾತ್ ನಗರದ ಮಾರ್ಕೆಟ್ ಜಾಗದ ಹತ್ತರಷ್ಟು ವಿಶಾಲವಾಗಿದೆ. …ಅಸಂಖ್ಯಾತ ಜನಗಳನ್ನೂ, ಅನೇಕ ಅಂಗಡಿಗಳನ್ನೂ, ಅಂಗಡಿ ಬೀದಿಯನ್ನೂ ನೋಡಬಹುದು. . ರತ್ನಪಡಿ ವ್ಯಾಪಾರಿಗಳು ಅಂಗಡಿ ಬೀದಿಗಳಲ್ಲಿ ಬಹಿರಂಗವಾಗಿ ವಜ್ರವೈಢೂರ್ಯಗಳನ್ನೂ, ಮುತ್ತುಗಳನ್ನೂ ಮಾರುತ್ತಾರೆ’’ ಎಂದು ಬಣ್ಣಿಸಿದ್ದಾನೆ. ಡೊಮಿಂಗೋ ಪೆಯಾಸ್, “ವಿಜಯನಗರವು, ಹಲವಾರು ಬೆಟ್ಟ ಸಾಲುಗಳ ಮಧ್ಯೆ ಇದೆ. ಅಲ್ಲಿಂದ ನಾನು ನೋಡಿದುದು ರೋಮ್‍ನಷ್ಟು ವಿಶಾಲವಾಗಿಯೂ ಮತ್ತು ಬಹಳ ಸುಂದರವಾಗಿಯೂ ಕಂಡಿತು.
ಅದರೊಳಗೆ ಮತ್ತು ಮನೆಗಳ ತೋಟಗಳಲ್ಲಿ ಅನೇಕ ಗಿಡಗಳಿವೆ ಮತ್ತು ಅದರ ಮಧ್ಯೆ ಹರಿಯುವ ನೀರಿನ ಅನೇಕ ನಾಲೆಗಳಿವೆ. ಅಲ್ಲಲ್ಲಿ ಸರೋವರಗಳಿವೆ.’’ ಎಂದಿದ್ದಾನೆ. ಬಾರ್ಬೊಸಾ, “ಒಳನಾಡಿಗೆ ಹೋದರೆ ಬಿಜನಗರ್ ಎಂಬ ಬಹು ದೊಡ್ಡ ನಗರ ಸಿಕ್ಕುತ್ತದೆ. ಈ ನಗರಗಳಲ್ಲಿ ಅಸಂಖ್ಯಾತ ಜನ ವಾಸಮಾಡುತ್ತಾರೆ. ಒಂದು ಕಡೆ ಬಹಳ ಒಳ್ಳೆಯ ಕೋಟೆಯೂ, ಇನ್ನೊಂದು ಕಡೆ ನದಿಯೂ, ಮತ್ತೊಂದು ಕಡೆ ಪರ್ವತವೂ ಇವೆ. ನರಸಿಂಗುವ ರಾಜ್ಯದ ರಾಜನು ಯಾವಾಗಲೂ ಇಲ್ಲಿ ವಾಸಮಾಡುತ್ತಾನೆ.’’ ಇವು ವಿಜಯನಗರ ಪಟ್ಟಣದ ವಿಸ್ತಾರ ಮತ್ತು ನಗರ ಚಿತ್ರಣವನ್ನು ಕಣ್ಮುಂದೆ ತರುತ್ತವೆ. ಆದರೆ ನ್ಯೂನಿಜ್, ತುಂಗಭದ್ರಾ ನದಿಯ ನೀರನ್ನು ರಾಜಧಾನಿಗೆ ತಂದ ಬಗೆಯನ್ನು ವರ್ಣಿಸುತ್ತಾ, “ಈ ನಗರವನ್ನು ಬೆಳೆಸುವ ಮತ್ತು ರಾಜ್ಯದಲ್ಲಿಯೆ ಅತ್ಯುತ್ತಮವಾಗಿಸುವ ಇಚ್ಚೆಯುಳ್ಳ ರಾಜ. ಈ ನಗರಕ್ಕೆ ನೀರನ್ನು ತಂದರೆ ಬಹಳ ಲಾಭವಾಗುವುದೆಂದು ನಂಬಿ ಐದು ಹರದಾರಿ ದೂರವಿದ್ದ ದೊಡ್ಡ ನದಿಯನ್ನು ನಗರಕ್ಕೆ ತರಲು ನಿರ್ಧರಿಸಿದ ಮತ್ತು ನದಿಗೆ ದೊಡ್ಡ ಬಂಡೆಗಳಿಂದ ಒಡ್ಡುಕಟ್ಟಿ ಅವನು ಹಾಗೆಯೆ ಮಾಡಿದ. ಒಂದು ಕತೆಯಂತೆ ಅವನು ಅದರೊಳಗೆ ಎಂಥ ದೊಡ್ಡ ಕಲ್ಲು ಎಸೆದನೆಂದರೆ ರಾಜನ ಇಷ್ಟದಂತೆ ನದಿ ಹರಿಯುವಂತೆ ಮಾಡಲು ಅದೊಂದೆ ಸಾಕಾಯಿತು. ರಾಜ್ಯದಲ್ಲಿದ್ದ ಅನೇಕ ಆನೆಗಳಿಂದ ಕಲ್ಲನ್ನು ಅಲ್ಲಿಗೆ ಎಳೆದು ತರಲಾಗಿತ್ತು. ಹೀಗೆ ತರಲಾದ ನೀರನ್ನು ಅವನು ತನಗೆ ಮನಸ್ಸಿಗೆ ಬಂದ ನಗರದ ಭಾಗಗಳಿಗೆ ಒಯ್ದ. ಈ ನೀರು ನಗರಕ್ಕೆ ಎಷ್ಟೊಂದು ಉಪಯುಕ್ತವಾಯಿತೆಂದರೆ ಅದು ಅವನ ಆದಾಯವನ್ನು ಮೂನೂರೈವತ್ತು ಸಾವಿರ ಪರ್ದಾಒಗಳಿಗಿಂತಲೂ ಹೆಚ್ಚಿಸಿತು.
ಈ ನೀರಿನ ಸಹಾಯದಿಂದ ನಗರದ ಸುತ್ತ ಬಹಳ ತೋಟಗಳು, ಹಣ್ಣಿನ ತೋಟಗಳು, ಗಿಡಗಳ ತೋಪುಗಳು ಮತ್ತು ದ್ರಾಕ್ಷಿಯ ತೋಟಗಳನ್ನು ಬೆಳೆಯಲಾಯಿತು. ನದಿಯನ್ನು ಹೀಗೆ ತಿರುಗಿಸಲು ರಾಜ ತನ್ನ ತಂದೆಯಿಂದ ಬಂದ ದೊಡ್ಡ ಮೊತ್ತದಲ್ಲಿದ್ದ ಎಲ್ಲ ಸಂಪತ್ತನ್ನು ವ್ಯಯ ಮಾಡಿದನೆಂದು ಹೇಳಲಾಗುತ್ತದೆ.’’ ಇದು ತುಂಗಭದ್ರೆಗೆ ಅಣೆಕಟ್ಟೆ ಕಟ್ಟಿ, ಕಾಲುವೆ ತೋಡಿಸಿ ಅದರ ಮೂಲಕ ನೀರನ್ನು ಹರಿಸಿ, ನಗರವನ್ನು ಬೆಳೆಸಿ, ವಿಸ್ತರಿಸಿದ ಮಹತ್ತರ ಸಂಗತಿ. ಅಲ್ಲದೆ ತುಂಗಭದ್ರಾ ಅಣೆಕಟ್ಟೆಯಲ್ಲಿ ಮುಳುಗಿಹೋದ ವಲ್ಲಭಾಪುರ ಬಳಿಯ ಅಂದಿನ ಅಣೆಕಟ್ಟೆ, ಬಸವಣ್ಣ ಮತ್ತು ರಾಯರ ಕಾಲುವೆ ನಿರ್ಮಾಣದ ನಿಜಚಿತ್ರಣ. ಈ ಅಣೆಕಟ್ಟೆ ಮತ್ತು ಕಾಲುವೆಗಳಿಂದ ನೀರನ್ನು ಕಮಲಾಪುರ ಕೆರೆ ಹರಿಸಲಾಗುತ್ತಿತ್ತು. ಪೆಯಾಸ್, “ನಗರದಲ್ಲಿರುವ ನೀರೆಲ್ಲ ಪ್ರಥಮ ಸುತ್ತಿನ ಗೋಡೆಯ ಹೊರಗೆ ಇರುವ ನಾನು ಹೇಳಿದ ಎರಡು ಕೆರೆಗಳಿಂದ ಬರುತ್ತದೆ’’ ಎಂದಿರುವುದು ಒಂದು ಕಮಲಾಪುರ ಕೆರೆ, ಇನ್ನೊಂದು ತುರ್ತು ಕಾಲುವೆಯನ್ನು ನೆನಪಿಸುತ್ತದೆ. ಕಮಲಾಪುರವು ಎರಡನೆಯ ದೇವರಾಯನ ರಾಣಿ ಕಾಮಲಾದೇವಿಯ ಹೆಸರಿನಲ್ಲಿ ಕಟ್ಟಿದ ಉಪಪಟ್ಟಣ. ಈ ಅವಧಿಯಲ್ಲಿ ನಗರವು ವಿಸ್ತಾರಗೊಂಡು ನೀರಿನ ಅವಶ್ಯಕತೆ ಹೆಚ್ಚಾಗಿ ಕಮಲಾಪುರ ಕೆರೆಯನ್ನು ನಿರ್ಮಿಸಬೇಕಾದ ಅನಿವಾರ್ಯತೆ ಒದಗಿತು. ಕೃಷ್ಣದೇವರಾಯನ ಕಾಲದ ಹೊತ್ತಿಗೆ ಈ ಕೆರೆಯ ನೀರೂ ಸಾಕಾಗದೆ ತುಂಗಭದ್ರಾ ನದಿಯ ಜೋಡಣಾ ಕಾರ್ಯವನ್ನು ಕೈಗೆತ್ತಿಕೊಂಡದ್ದು ವಿಜಯನಗರ ಪಟ್ಟಣದ ನೀರು ಸರಬರಾಜು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಮಲಾಪುರ ಕೆರೆಯು ಕಮಲಾಪುರ, ಮುಖ್ಯ ಪಟ್ಟಣ, ವರದರಾಜಮ್ಮನ ಪಟ್ಟಣ, ಮಾಲ್ಯವಂತ ಬಜಾರುಗಳಿಗೆ ನೀರನ್ನು ಒದಗಿಸಿದರೆ, ತುರ್ತು ಕಾಲುವೆಯು ನಗರದ ಇತರ ಉಪನಗರಗಳಾದ ವಿರೂಪಾಕ್ಷಪುರ, ಕೃಷ್ಣಾಪುರ, ಅಚ್ಯುತಾಪುರ, ವಿಠಲಾಪುರ ಮತ್ತು ನಿಂಬಾಪುರಗಳಿಗೆ ನೀರನ್ನು ಸರಬರಾಜು ಮಾಡುತ್ತಿದ್ದಿತು. ಆ ಮೂಲಕ ವರ್ಷದುದ್ದಕ್ಕೂ ರಾಜಧಾನಿ ನಗರ ಮತ್ತು ಅಲ್ಲಿದ್ದ ಅಸಂಖ್ಯಾತ ಜನರಿಗೆ ನೀರನ್ನು ಒದಗಿಸುವ ಮಹತ್ವದ ಬೃಹತ್ ಯೋಜನೆಯೇ ಆಗಿದ್ದುದು ಗಮನಾರ್ಹ. ಈ ನೀರನ್ನು ಬಳಸಿಕೊಂಡ ಕ್ರಮವನ್ನೂ ಕುರಿತು ಪ್ರವಾಸಿ ಬಾರ್ಬೊಸಾ, “ರಾಜನು ಸುಂದರವಾದ ಹಾಗೂ ದೊಡ್ಡದಾದ ಅರಮನೆಗಳನ್ನು ಕಟ್ಟಿಸಿದ್ದಾನೆ. ಅಲ್ಲಲ್ಲಿ ಅನೇಕಾನೇಕ ಅಂಗಳಗಳಿವೆ. ಈ ಅಂಗಳಗಳಲ್ಲಿ ಅನೇಕ ದಿಬ್ಬಗಳೂ, ಕೊಳಗಳೂ, ಹೂಗಿಡಗಳೂ ಇವೆ. ಕೊಳಗಳಲ್ಲಿ ಹೇರಳವಾಗಿ ಮೀನು ಸಾಕುತ್ತಾರೆ. ಮರಗಳಿಂದಲೂ, ಹೂಗಿಡಗಳಿಂದಲೂ ತುಂಬಿದ ತೋಟಗಳಿವೆ. ಕೊಳಗಳಲ್ಲಿ ಸ್ತ್ರೀಯರೂ ನಿತ್ಯವೂ ಸ್ನಾನ ಮಾಡಿ, ವಾದ್ಯ ಭಾರಿಸಿ, ಹಾಡಿ ನಲಿಯುತ್ತಾರೆ’’ ಎಂದಿದ್ದಾನೆ. ಡೊಮಿಂಗೋ ಪೆಯಾಸ್, “ರಾಜ ತನ್ನ ಅರಮನೆಯ ಹತ್ತಿರವೇ ತೆಂಗಿನ ತೋಪು ಮತ್ತು ಇತರ ಸಂಪದ್ಭರಿತ ಹಣ್ಣಿನ ಗಿಡಗಳುಳ್ಳ ತೋಟಗಳು ಇವೆ. ಅವುಗಳಲ್ಲಿ ಬಹುಮಟ್ಟಿಗೆ ಇರುವುದು ಮಾವು, ಅಡಿಕೆ, ಹಲಸು ಮತ್ತು ಅನೇಕ ನಿಂಬೆ, ಕಿತ್ತಳೆ ಗಿಡಗಳು’’ ಎಂದಿದ್ದಾನೆ. ಇದು ಅಂದಿನವರು ಹಮ್ಮಿಕೊಂಡ ನೀರಿನ ವ್ಯವಸ್ಥಿತ ಬಳಕೆಯ ಕ್ರಮವಾಗಿದೆ.
ಮುದುವರಿಯುವುದು…