ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..!

Share

ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..!

ಹೈಸ್ಕೂಲು ಮೈದಾನದಲ್ಲಿ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಟ ಆಡುತ್ತಿದ್ದವನು ಸಹಪಾಠಿ ಪುರುಷೋತ್ತಮರೆಡ್ಡಿ ಬೌಂಡರಿ ಗೆರೆ ದಾಟಿಸಿ ಹೊಡೆದ ಚೆಂಡನ್ನು ಬೆನ್ನತ್ತಿ, ಕರೆಂಟ್ ಆಫೀಸಿನ ಮುಳ್ಳಿನ ತಂತಿಬೇಲಿಯನ್ನು ದಾಟಿ, ಅಲ್ಲಿದ್ದ ಮೊಣಕಾಲು ಎತ್ತರದ, ಒಣಗಿ ನಿಂತ ಹುಲ್ಲಿನ ಮಧ್ಯೆ ಹೆಚ್ಚು ಕಡಿಮೆ ಅದೇ ಬಣ್ಣದ ಟೆನಿಸ್ ಬಾಲ್ ಹುಡುಕುತ್ತಾ ಸುಮಾರು ಹೊತ್ತು ನಿಂತೆ. ಹತ್ತು ನಿಮಿಷಗಳ ತೀವ್ರ ಹುಡುಕಾಟದ ನಂತರ ಕೈಗೆ ಸಿಕ್ಕ ಚೆಂಡನ್ನು ಪಿಚ್ ಕಡೆಗೆ ಎಸೆಯುವ ರಭಸದಲ್ಲಿ ಆಯತಪ್ಪಿದವನ ಕೈಯಿಂದ ಚೆಂಡು ಮೈದಾನದ ಮತ್ತೊಂದು ಮೂಲೆಯಲ್ಲಿದ್ದ ನೀರಿನ ಟಂಕಿಯ ಕಡೆಗೆ ಎಸೆಯಲ್ಪಟ್ಟಿತು.

ಮತ್ತೆ ಚೆಂಡನ್ನು ಹಿಂಬಾಲಿಸಿ ಓಡಿದವನಿಗೆ ನೀರಿನ ಟಂಕಿಯ ಪಕ್ಕದಲ್ಲಿಯೇ ವೃತ್ತಾಕಾರದಲ್ಲಿ ಕುಳಿತ ಒಂದು ಸಣ್ಣ ಹುಡುಗರ ಗುಂಪು ಗೋಚರಿಸಿತು. ವೃತ್ತದ ಕೇಂದ್ರದಲ್ಲಿ ಕುಳಿತ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ಕಂಡುಬರಲಾಗಿ ಇವರೆಲ್ಲಾ ಇಲ್ಲೇನು ಮಾಡುತ್ತಿದ್ದಾರೆ? ಎನ್ನುವ ಸಹಜ ಕುತೂಹಲವೊಂದು ನನ್ನಲ್ಲಿ ಮೂಡಿತು. ಅದಾಗಲೇ ಸಂಜೆ ಸಮಯ ಆರೂವರೆ ಗಂಟೆಯನ್ನು ಮೀರಿತ್ತು. ನಸುಗತ್ತಲು ನಿಧಾನವಾಗಿ ತನ್ನ ಕಬಂಧಬಾಹುಗಳನ್ನು ಬೆಳಕಿನ ಸಾಮ್ರಾಜ್ಯದ ಮೇಲೆ ಬಿಗಿಗೊಳಿಸುತ್ತಾ ಸಾಗುತ್ತಿದ್ದ ಕಾರಣದಿಂದಾಗಿ ಆ ಗುಂಪಿನಲ್ಲಿದ್ದ ವ್ಯಕ್ತಿಗಳು ಯಾರ್ಯಾರು ಎನ್ನುವುದನ್ನು ಗುರುತು ಹಿಡಿಯಲು ಕಷ್ಟಸಾಧ್ಯವಾಗಿತ್ತು. ಕುತೂಹಲಪೀಡಿತನಾದ ನಾನು ನಿಧಾನಗತಿಯಲ್ಲಿ ಗುಂಪಿನ ಕಡೆಗೆ ಕಳ್ಳಹೆಜ್ಜೆಗಳನ್ನು ಹಾಕುತ್ತಾ ಸಾಗತೊಡಗಿದೆ. ಗುಂಪು ಸ್ವಲ್ಪ ಹತ್ತಿರವಾದ ಹಾಗೆಲ್ಲಾ ಅಲ್ಲಿದ್ದ ಹುಡುಗರ ಪರಿಚಿತ ಮುಖಗಳು ನನ್ನ ಕಣ್ಣೋಟದಲ್ಲಿ ಸೆರೆಯಾಗತೊಡಗಿದವು. ಗುಂಪಿನಲ್ಲಿದ್ದ ಕುಂಬಾರರ ವಸಂತಕುಮಾರ್, ದೊಡ್ಡಮನೆ ಸುಧಾಕರ, ನಾಗಪ್ಪಮೇಷ್ಟ್ರ ಶೇಖರಿ, ನನ್ನ ಸೋದರಸಂಬಂಧಿ ಮಹಾಂತೇಶ್ , ಬುದ್ದಿಗೌಡರ ಚಂದ್ರಮೌಳಿ, ತಿಪ್ಪೇಸ್ವಾಮಿಗೌಡರ ತೇಜಿ, ಶ್ರೀಕಾಂತರೆಡ್ಡಿ ಇವರ ಒಟ್ಟಿಗೇ ನನ್ನ ಸಹಪಾಠಿಗಳಾದ ಯತಿರಾಜ್, ಓಬಳೇಶ್, ವಿಶ್ವನಾಥ, ಜಕಣಾಚಾರಿ, ಕೃಷ್ಣಾರೆಡ್ಡಿ, ಗಾಬರಿ ತಿಪ್ಪೇಸ್ವಾಮಿ, ಕುರುಬರ ಹನುಮಂತಪ್ಪ ಮುಂತಾದವರೂ ಸೇರಿದಂತೆ ಹತ್ತುಹನ್ನೆರಡು ಜನರಷ್ಟಿದ್ದ ಗುಂಪಿನ ಮಧ್ಯದಲ್ಲಿ ಇಂಟೂರ ವಾಸುದೇವರೆಡ್ಡಿ ಕುಳಿತಿದ್ದರು. ರೆಡ್ಡಿ ಯಾವುದೋ ಗಹನವಾದ ವಿಚಾರದ ಬಗ್ಗೆ ವಿವರಿಸುತ್ತಿದ್ದರೆ, ಕಣ್ಣುಮಿಟುಕಿಸದೆ ಅವರ ಮಾತುಗಳಿಗೆ ಕಿವಿಯಾಗಿದ್ದ ಗುಂಪಿನ ಯಾವ ಸದಸ್ಯರಿಗೂ ನಾನು ಅವರ ಬಳಿ ಸಾರಿದ್ದು ಗೊತ್ತಾಗಲೇ ಇಲ್ಲ. ಅಷ್ಟೊಂದು ತನ್ಮಯತೆಯಿಂದ, ಪದ್ಮಾಸನದ ಭಂಗಿಯಲ್ಲಿ ಕುಳಿತ ಬಾಲಕರು, ತದೇಕಚಿತ್ತದಿಂದ ರೆಡ್ಡಿಯವರ ಮಾತುಗಳನ್ನು ಆಲಿಸುತ್ತಿದ್ದರು. ತಾವೂ ಪದ್ಮಾಸನದ ಭಂಗಿಯಲ್ಲಿ ಕುಳಿತು, ಗಂಭೀರವದನರಾಗಿ ಬಾಲಕರನ್ನು ಉದ್ದೇಶಿಸಿ, ಪ್ರತಿಯೊಬ್ಬರನ್ನೂ ಪದೇ ಪದೇ ತಿರುಗಿ ನೋಡುತ್ತಾ, ಅವರ ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಮಾತನ್ನು ಮುಂದುವರೆಸುತ್ತಿದ್ದ ರೆಡ್ಡಿ ಆ ಕ್ಷಣ ನಾನು ಎಲ್ಲೋ ಓದಿದ್ದ ಪುಸ್ತಕವೊಂದರ ಮುಖಪುಟದಲ್ಲಿ ನೋಡಿದ್ದ, ತಮ್ಮ ಶಿಷ್ಯಗಣವನ್ನು ಉದ್ದೇಶಿಸಿ ಉಪದೇಶ ಮಾಡುವಲ್ಲಿ ತಲ್ಲೀನರಾಗಿದ್ದ, ಗೌತಮಬುದ್ಧನ ತದ್ರೂಪದಂತೆ ಕಂಡುಬಂದರು.

ಕಳೆದ ಸುಮಾರು ಒಂದು ತಿಂಗಳಿನಿಂದ ಹೈಸ್ಕೂಲು ಮೈದಾನದಲ್ಲಿ ಆಡುವುದಕ್ಕೆ ಬಂದ ಪ್ರತಿ ಸಂಜೆಯೂ ಇಂತಹ ಒಂದು ಗುಂಪಿನ ಚಟುವಟಿಕೆಗಳನ್ನು ದೂರದಿಂದ ನೋಡಿದ್ದೆನಾದರೂ ಗುಂಪಿನ ಬಳಿ ಹೋಗಿ ಅವರೇನು ಮಾಡುತ್ತಿದ್ದಾರೆ ಎನ್ನುವುದನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಇದೇ ಮೊದಲ ಬಾರಿಗೆ ಮಾಡಲು ಮುಂದಾಗಿದ್ದೆ. ಇಷ್ಟು ದಿನಗಳೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವು ಆಡುತ್ತಾ ಕಾಲ ಕಳೆಯುತ್ತಿದ್ದೆವು. ಗುಂಪಿನ ಹುಡುಗರು ವಿವಿಧ ಬಗೆಯ ಆಟಗಳು ಮತ್ತು ವ್ಯಾಯಾಮವನ್ನು ನಿತ್ಯ ಮಾಡುತ್ತಿದ್ದದ್ದನ್ನು ನೋಡಿಯೂ ಅದರ ಬಗ್ಗೆ ಅಂತಹ ಅಸ್ಥೆ ತಳೆಯದ ನಾವು ಗೆಳೆಯರು ಕ್ರಿಕೆಟ್ ಆಡುವುದರಲ್ಲಿಯೆ ಮಗ್ನರಾಗಿದ್ದೆವು. ಇಂಚಿಂಚೇ ಗುಂಪಿಗೆ ಹತ್ತಿರವಾಗುತ್ತಾ ಹೋದವನಿಗೆ ವಾಸುದೇವರೆಡ್ಡಿಯವರ ಮಾತುಗಳು ಸ್ಪಷ್ಟವಾಗಿ ಕೇಳತೊಡಗಿದವು. ಭಾರತದ ಹಿರಿಮೆ ಗರಿಮೆಗಳನ್ನು ಕುರಿತಂತೆ ತಮ್ಮ ಮಾತುಗಳನ್ನು ಮುಂದುವರೆಸಿದ್ದ ರೆಡ್ಡಿ ಅಲ್ಲಿಯವರೆಗೂ ನನ್ನ ಕಿವಿಗೆ ಬೀಳದೇ ಇದ್ದ ಕೆಲವು ಕ್ಲಿಷ್ಟ ಪದಪುಂಜಗಳ ಮೂಲಕ ತಾಯಿ ಭಾರತಿಯ ಗುಣಗಾನವನ್ನು ಹೃದಯತುಂಬಿ ಬಂದವರಂತೆ ಮಾಡುತ್ತಿದ್ದರು. “ಅಸೇತು ಹಿಮಾಚಲ ಪರ್ಯಂತ …..” ಎನ್ನುತ್ತಾ ಭೋರ್ಗರೆವ ಜಲಪಾತದಂತೆ ಸಾಗಿದ್ದ ರೆಡ್ಡಿಯವರ ಮಾತುಗಳನ್ನು ರವಷ್ಟೂ ಮಿಸುಗಾಡದೆ ಕೇಳಿಸಿಕೊಳ್ಳುತ್ತಿದ್ದ ಹುಡುಗರ ಗುಂಪು ನನ್ನಲ್ಲಿ ಆಶ್ಚರ್ಯವನ್ನು ಹುಟ್ಟಿಸಿತು. ತರಗತಿಯಲ್ಲಿ ಪ್ರತೀ ಪಿರಿಯಡ್ ನಲ್ಲಿಯೂ ಮೇಷ್ಟ್ರುಗಳಿಂದ ತನ್ನ ಕಪಿಚೇಷ್ಟೆಗಳಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಲೇ ಬಂದಿದ್ದ ಸುಧಾಕರ, ಒಂದು ಕ್ಷಣವೂ ಕುಳಿತಲ್ಲಿ ಕೂರದಿದ್ದ ತನ್ನ ಚಂಚಲ ಸ್ವಭಾವದಿಂದಾಗಿ ತಾನು ಕಲಿತ ಊರಿನ ಎಲ್ಲಾ ಶಾಲೆಗಳಲ್ಲಿಯೂ ದೊಡ್ಡಮಟ್ಟದ ಕುಖ್ಯಾತಿಗೆ ಒಳಗಾಗಿದ್ದ. ಆದರೆ ಅದೇ ಸುಧಾಕರ ಇಲ್ಲಿ ರೆಡ್ಡಿಯವರ ಗುಂಪಿನಲ್ಲಿ ಕಡೆದ ಶಿಲೆಯಂತೆ ಒಂದೆಡೆ ನಿಶ್ಚಲವಾಗಿ ಕುಳಿತಿರುವುದು ನನ್ನ ಇನ್ನಿಲ್ಲದ ಸೋಜಿಗಕ್ಕೆ ಕಾರಣವಾಯಿತು. ಚೆಂಡನ್ನು ಹುಡುಕಲು ಬಂದವನು ಅಷ್ಟೂ ಹೊತ್ತಿನಿಂದ ವಾಸುದೇವರೆಡ್ಡಿಯವರ ಮಾತುಗಳನ್ನು ಆಲಿಸುತ್ತಾ ನಿಂತ ಕಾರಣ ಆ ಕಡೆಯಲ್ಲಿ ನಿಂತೇ ಹೋದ ಕ್ರಿಕೆಟ್ ಆಟವನ್ನು ಮುಂದುವರೆಸಲು ನನ್ನನ್ನು ಹುಡುಕಿಕೊಂಡು ಬಂದ, ಕರೆಂಟು ಆಫೀಸಿನ ಲೈನ್ ಮ್ಯಾನ್ ತಮ್ಮಣ್ಣನ ಕ್ವಾರ್ಟರ್ಸ್ ನಲ್ಲಿದ್ದು ಹೈಸ್ಕೂಲು ಓದುತ್ತಿದ್ದ, ಪಿಂಟೋ ಜೊತೆಗೂಡಿ ಮತ್ತೆ ಕ್ರಿಕೆಟ್ ಅಂಗಳವನ್ನು ಸೇರಿದೆ.

ಬೆಳಿಗ್ಗೆ ಶಾಲೆಯ ಮೊದಲನೇ ಪಿರಿಯಡ್ ನಲ್ಲಿಯೇ ಗೆಳೆಯ ಯತಿರಾಜನನ್ನು ನಿನ್ನೆ ಸಂಜೆ ವಾಸುದೇವರೆಡ್ಡಿಯವರು ನಡೆಸುತ್ತಿದ್ದ ಗುಂಪು ಸಂಭಾಷಣೆಯ ಬಗ್ಗೆ ಕೇಳಲಾಗಿ, ಈಗ ಸುಮಾರು ಒಂದು ತಿಂಗಳಿನಿಂದ ರೆಡ್ಡಿಯವರು ಹೈಸ್ಕೂಲು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಶಾಖೆಯೊಂದನ್ನು ಯಥಾವತ್ತಾಗಿ ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿದ. ಈಗಾಗಲೇ ಹದಿನೈದರ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಶಾಲಾಮಕ್ಕಳ ಈ ಶಾಖೆಯ ಮಾದರಿಯಲ್ಲಿಯೇ ಕಳೆದ ವಾರವಷ್ಟೇ ಹೊಸ ಬಸ್ ಸ್ಟ್ಯಾಂಡ್ ಸಮೀಪದ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯ ಮೈದಾನದಲ್ಲಿಯೂ ಮತ್ತೊಂದು ಶಾಖೆಯನ್ನು ರೆಡ್ಡಿಯವರು ಆರಂಭಿಸಿದ ಬಗ್ಗೆಯೂ ವಿವರಿಸಿದ. “ನಿನಗೆ ಆಸಕ್ತಿಯಿದ್ದರೆ ನೀನೂ ಬರಬಹುದು, ಯಾವುದೇ ಹಣಕಾಸು ಸಂದಾಯ ಮಾಡದೆ ಉಚಿತವಾಗಿ ತರಬೇತಿ ಕೊಡುವ ಸಂಸ್ಥೆ ಇದು” ಎಂದು ಆರೆಸ್ಸೆಸ್ ಹೊಗಳಿಕೆಗೆ ಮುಂದಾದ.

 

ಪ್ರತೀದಿನ ಸಂಜೆ ಐದೂವರೆಯಿಂದ ಏಳರವರೆಗೆ ನಡೆಯುವ ಶಾಖೆಯ ಅಂತರ್ಗತ ಪ್ರಾರಂಭದ ಪ್ರಾರ್ಥನೆಯ ನಂತರ ಸುಮಾರು ಒಂದು ಗಂಟೆಯ ಕಾಲ ಮಕ್ಕಳಿಂದ ವಿವಿಧ ರೀತಿಯ ಆಟೋಟಗಳನ್ನೂ, ವ್ಯಾಯಾಮಗಳನ್ನೂ ಮಾಡಿಸುವ ರೆಡ್ಡಿಯವರು ತರುವಾಯ ವೃತ್ತಾಕಾರದಲ್ಲಿ ಅವರನ್ನು ಕೂರಿಸಿಕೊಂಡು ಭಾರತದೇಶದ ಇತಿಹಾಸ, ರಾಷ್ಟ್ರದ ಹಿರಿಮೆ, ಗರಿಮೆ, ರಾಷ್ಟ್ರಸೇವೆಗೆ ಜೀವನವನ್ನು ಮುಡುಪಾಗಿಟ್ಟ ಮಹನೀಯರ ಸ್ಫೂರ್ತಿದಾಯಕ, ಅಪೂರ್ವ, ಮೈನವಿರೇಳಿಸುವ ಜೀವನಗಾಥೆಗಳ ಬಗ್ಗೆ ಸುಮಾರು ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಮಾತನಾಡುತ್ತಾರೆ. ಇದಾದ ನಂತರ ಏಕಾತ್ಮತಾ ಮಂತ್ರದ ಪಠಣೆಯೊಂದಿಗೆ ಮುಕ್ತಾಯವಾಗುವ ಶಾಖೆಯ ದೈನಂದಿನ ಕಾರ್ಯಕ್ರಮಗಳು ಮಕ್ಕಳಲ್ಲಿ ಶಿಸ್ತನ್ನು, ಏಕಾಗ್ರತೆಯನ್ನು, ದೇಶಭಕ್ತಿಯನ್ನು, ಸಂಘಜೀವನವನ್ನು, ನಾಯಕತ್ವದ ಗುಣಗಳನ್ನು, ಸಮಾಜಸೇವೆಯನ್ನು ಉದ್ದೀಪನಗೊಳಿಸುವ ಉದ್ದೇಶಗಳನ್ನ ಹೊಂದಿದೆ ಎಂದು ಶಾಖಾ ಪ್ರಚಾರಕರಾದ ವಾಸುದೇವರೆಡ್ಡಿಯವರು ಸದಾ ಹೇಳುತ್ತಿರುತ್ತಾರೆ ಎಂದ ಯತಿರಾಜನ ಮಾತುಗಳನ್ನು ಕೇಳಿದ ಬಳಿಕ ನಾನೂ ಕ್ರಿಕೆಟ್ ಆಟವನ್ನು ಬಿಟ್ಟು ಯಾಕೆ ಹೈಸ್ಕೂಲು ಮೈದಾನದ ಆರೆಸ್ಸೆಸ್ ಶಾಖೆಯ ಸದಸ್ಯನಾಗಬಾರದು ಎನ್ನುವ ಆಲೋಚನೆ ನನ್ನಲ್ಲಿ ಮೂಡಿತು.

ಅಂದು ಸಂಜೆಯೇ ಶಾಖೆಯ ಹೊಸ ಸದಸ್ಯನಾಗಿ ಬಡ್ತಿಯಾದ ನಾನು ಮುಂದಿನ ಸುಮಾರು ಆರು ವರ್ಷಗಳ ಕಾಲ ನಿಯಮಿತರೂಪದಲ್ಲಿ ಪ್ರತಿದಿನವೂ ಶಾಖೆಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎನ್ನುವ ಪ್ರಾರ್ಥನೆಯೊಂದಿಗೆ ಶುರುವಾಗುತ್ತಿದ್ದ ಶಾಖೆಯ ಚಟುವಟಿಕೆಗಳು “ಯಮ್ ವೈದಿಕಾಮಂತ್ರ ದ್ರಿಷಃ ಪುರಾಣ” ಎನ್ನುವ ಏಕಾತ್ಮಕ ಮಂತ್ರದ ಉದ್ಘೋಷಣೆಯೊಂದಿಗೆ ಸಂಪನ್ನವಾಗುತ್ತಿತ್ತು. ಸುಮಾರು ಒಂದು ಗಂಟೆಯ ಕಾಲ ದೇಹಕ್ಕೆ, ಮನಸ್ಸಿಗೆ ಉಲ್ಲಾಸ ನೀಡುವ ಅನೇಕ ಬಗೆಯ ಆಟಗಳನ್ನು ಮತ್ತು ವ್ಯಾಯಾಮಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದ ಶಾಖಾಪ್ರಚಾರಕ ರೆಡ್ಡಿಯವರು ಶಾಖೆಯ ಅವಧಿ ಮುಕ್ತಾಯವಾಗುವ ಕೊನೆಯ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ನಡೆಸುತ್ತಿದ್ದ ತಮ್ಮ ವಿಚಾರಮಂಥನದ ಹೊತ್ತು ಕಟ್ಟಿಕೊಡುತ್ತಿದ್ದ ಭಾರತದೇಶದ ಇತಿಹಾಸ ನಾವು ಆ ವೇಳೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಇತಿಹಾಸಕ್ಕಿಂತ ವಿಸ್ತಾರ ಹಾಗೂ ವಸ್ತುವಿಷಯದ ದೃಷ್ಟಿಯಿಂದ ಬಹಳವೇ ಭಿನ್ನವಾಗಿರುತ್ತಿತ್ತು. ಭಾರತದ ಇತಿಹಾಸವನ್ನು ದೆಹಲಿಯನ್ನು ಆಳಿದ ಸುಲ್ತಾನೇಟ್ ನ ರಾಜವಂಶಗಳಾದ ಮಾಮ್ಲುಕ್, ಖಿಲ್ಜಿ, ತುಘಲಕ್, ಸಯ್ಯಿದ್ ಲೋಧಿ ಹಾಗೂ ಮೊಗಲರ ಆಳ್ವಿಕೆಯ ಕಾಲದ ಇತಿಹಾಸವನ್ನಾಗಿ ಪರಿವರ್ತಿಸಿದ ಶಾಲಾಪಠ್ಯಗಳು ಈ ಮುಸ್ಲಿಂ ರಾಜವಂಶಗಳ ಮೊದಲು, ಸಮಕಾಲೀನ ಮತ್ತು ನಂತರದ ಕಾಲಖಂಡದ ಶತಮಾನಗಳ ಕಾಲ ಆರ್ಯಾವರ್ತವನ್ನು ಆಳಿದ ರಾಜವಂಶಗಳಾದ ಹೆಯೇಯ, ಮಗಧ, ಕಳಿಂಗ, ಗೋನಂದ, ಗಾಂಧಾರ, ಕುರು, ಪಾಂಡ್ಯನ್, ಚೇರ, ಚೋಳ, ತಂಬಾಪನ್ನಿ, ಶಾತವಾಹನ, ಮಹಾಮೇಘವಾಹನ, ಕಂಗ್ಲೈಪಾಕ್, ಕುನಿಂದ, ಛೂತು, ನಾಗವಂಶಿ, ಭರ್ಶೀವ, ಚಂದ್ರ, ಅಭೀರ, ಗುಪ್ತ, ವಕಟಕ, ಪಲ್ಲವ, ಕದಂಬ, ವರ್ಮನ್, ಪಶ್ಚಿಮಿ ಗಂಗ, ತ್ರೈಕೂಟಕ, ವಿಷ್ಣುಕುಂಡಿನ, ಮೈತ್ರಕ, ರೈ, ಗುಪ್ತ, ಚಾಲುಕ್ಯ, ಶಾಹಿ, ಪುಷ್ಯಭೂತಿ, ಈಶಾನ್ಯ ಗಂಗ, ಜೈಂತಿಯ, ಗುರ್ಜರ- ಪ್ರತಿಹಾರ, ಮೇವಾರ್, ಗಾವುಡ, ಚಾಚ, ಕರ್ಕೋಟ, ಚೌಹಾಣ್, ಮ್ಲೇಚ್ಚ, ಕಾಲಚೂರಿ, ಗರ್ವಾಲ್, ಬಿಷ್ನುಪುರ್, ಚಾಂದ್, ಕತ್ಯೂರ್, ವರ್ಮನ್ , ರಾಷ್ಟ್ರಕೂಟ, ತೋಮರ್, ಪಾಲ, ಶೈಲಹಾರ, ಅಯುಧ, ಚಾಂಡೆಲ, ಯಾದವ, ಪರಮಾರ, ಲಡಾಕ್, ಸೋಲಂಕಿ, ಕಚ್ಚಪಘಟ, ಕಚ್ವಹ, ರತ್ನಾಪುರ ಕಾಳಚುರಿ, ಹೊಯ್ಸಳ, ಲೋಹರ, ಕಾಸ ಮಲ್ಲ, ಸೇನಾ, ಕಾಕತೀಯ, ಗಹಡವಲ, ಕರ್ಣಾಟ, ಝಾಮೋರಿನ್, ಕಲ್ಯಾಣಿ ಕಾಳಚುರಿ, ಜಡೇಜ, ಭಾತಿ, ಚೆರೋ, ಚುತಿಯ, ಬನಾ, ಮಾರ್ವಾರ್ , ಆಹೋಮ್, ವಾಘೇಲ, ಜಾಫ್ನ, ತ್ರಿಪುರ, ನಾಯಕ, ರೆಡ್ಡಿ, ಸುಗೌನ, ವಿಜಯನಗರ, ಬಹಮನಿ, ಪಾಟ್ನಾ, ಬರೋ-ಭೂಯನ್, ತೋಮರ, ಯದುವಂಶ, ಗಜಪತಿ, ರಾಥೋರ್ , ಶಾಹಿ, ಗಟ್ಟಿ ಮುದಳಿಸ್ , ವರ್ಮ, ಕೋಚ್ , ರಾಜ್ ಧರ್ಬಂಗ, ಸುರ್ , ಭೋಯ್ , ಚೋಗ್ಯಾಲ್ , ಮರಾಠ, ತಂಜಾವೂರು ಮರಾಠ, ಟ್ರಾವಂಕೂರ್ , ಸಿಖ್ , ಡೋಗ್ರ ಮುಂತಾದವರ ಪ್ರಸ್ತಾವವನ್ನು ಮಾಡದೆ ಮೊಗಲರ ಇತಿಹಾಸದ ಬಗ್ಗೆಯೇ ಪುಟಗಟ್ಟಲೆ ಬರೆದಿದ್ದನ್ನು ಓದಿದ್ದ ನನಗೆ ರೆಡ್ಡಿಯವರು ಶಾಖೆಯಲ್ಲಿ ಹೇಳುತ್ತಿದ್ದ ಭಾರತದ ಇತಿಹಾಸ ಹೊಸದೇ ಆದ ರೂಪದಲ್ಲಿ ನನ್ನ ಇದಿರು ಮೈತಳೆದು ನಿಂತಂತೆ ಭಾಸವಾಗುತ್ತಿತ್ತು. ಇದು ನಮ್ಮ ನೆಲದ ಇತಿಹಾಸವೇ ಎನ್ನುವ ಅನುಮಾನವನ್ನು ಆಗಾಗ್ಗೆ ಹುಟ್ಟು ಹಾಕುತ್ತಲೇ ಸಾಗುತ್ತಿದ್ದ ರೆಡ್ಡಿಯವರ ಕಥನಶೈಲಿ ಮಕ್ಕಳಾದ ನಮ್ಮಲ್ಲಿ ಹೊಸ ಇತಿಹಾಸಪ್ರಜ್ಞೆಯನ್ನು ಮೂಡಿಸುವ ಹೊತ್ತಿನಲ್ಲಿಯೇ ದೇಶಭಕ್ತಿ, ನಾಯಕತ್ವ ಮತ್ತು ಶಿಸ್ತಿನಂತಹ ಉದಾತ್ತ ಜೀವನಮೌಲ್ಯಗಳನ್ನು ತುಂಬುತ್ತಾ ಹೋದವು. ಕೇವಲ ಬೆರಳೆಣಿಕೆಯ ಮಕ್ಕಳಿಂದ ಪ್ರಾರಂಭವಾದ ನಮ್ಮ ಹೈಸ್ಕೂಲು ಮೈದಾನದ ಶಾಖೆ ನಾನು ಹೈಸ್ಕೂಲು ತೊರೆಯುವ ವೇಳೆಗೆ ಎಂಬತ್ತನ್ನೂ ಮೀರಿದ ಸಂಖ್ಯೆಯ ಬಾಲಕರನ್ನು ಒಳಗೊಂಡಿದ್ದ ಬೃಹತ್ ಶಾಖೆಯಾಗಿ ಬೆಳೆದಿತ್ತು. ಶಾಲೆಯಲ್ಲಿ ತಲೆನೋವಾಗಿದ್ದ ಹಲವು ವಿದ್ಯಾರ್ಥಿಗಳು ಶಾಖೆಯ ಸದಸ್ಯರಾದ ಬಳಿಕ ಅವರು ತಮ್ಮ ಗುರುವರ್ಗ ಮತ್ತು ಸಹಪಾಠಿಗಳೊಂದಿಗೆ ನಡೆಸುತ್ತಿದ್ದ ವ್ಯವಹಾರದಲ್ಲಿ ಗಣನೀಯ ಪ್ರಗತಿ ಕಂಡುಬಂದಿತ್ತು. ಶಾಲೆಯ ಶಿಕ್ಷಕವರ್ಗ ಅದರಲ್ಲೂ ಮುಖ್ಯವಾಗಿ ಸರ್ಕಾರಿ ಮಾಧ್ಯಮಿಕ ಶಾಲೆಯ ಆ ಹೊತ್ತಿನ ಮುಖ್ಯೋಪಾಧ್ಯಾಯಿನಿ ಸಾನಿಕಂ ವಿನುತ ಮೇಡಂ ಶಾಖೆಯ ಕಾರಣದಿಂದಾದ ಈ ಬದಲಾವಣೆಯಿಂದ ಯಾವ ಮಟ್ಟಕ್ಕೆ ಪ್ರಭಾವಿತವಾದರು ಎಂದರೆ ಶಾಲೆಯಲ್ಲಿ ತಲೆಹರಟೆ ಮಾಡುವ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಖೆಗೆ ಕಳುಹಿಸಿ ಎನ್ನುವ ಉಚಿತ ಸಲಹೆಯನ್ನೂ ನೀಡಲಾರಂಭಿಸಿದರು. ಶಿಸ್ತು, ಸಂಯಮಗಳ ಒಟ್ಟಿಗೆ ಶೈಕ್ಷಣಿಕವಾಗಿಯೂ ತೃಪ್ತಿದಾಯಕ ಪ್ರಗತಿಯನ್ನು ತೋರಲು ತೊಡಗಿದ ಶಾಖೆಯ ಸದಸ್ಯರು ಊರಿನ ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ಇಮ್ಮಡಿ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ವಾಸುದೇವರೆಡ್ಡಿಯವರ ಎಡಬಿಡದ ನಿರಂತರ ಶ್ರಮಕ್ಕೆ ತಕ್ಕುದಾದ ಪ್ರತಿಫಲವನ್ನು ಕೆಲವೇ ತಿಂಗಳುಗಳ ಶಾಖಾ ಅಭ್ಯಾಸದ ನಂತರ ನೀಡುವಲ್ಲಿ ಸಾಫಲ್ಯ ಸಾಧಿಸಿದರು.

ದಿನಂಪ್ರತಿ ಊರಿನಲ್ಲಿ ನಡೆಯುತ್ತಿದ್ದ ಶಾಖೆಗಳ ನಿರ್ವಹಣೆಯನ್ನೇ ಅಲ್ಲದೆ ರೆಡ್ಡಿಯವರು ತಿಂಗಳಿಗೊಮ್ಮೆ ಎಲ್ಲಾ ಶಾಖೆಗಳ ಮಕ್ಕಳನ್ನು ಬೆಳದಿಂಗಳ ಊಟಕ್ಕಾಗಿ ಹೈಸ್ಕೂಲು ಮೈದಾನಕ್ಕೆ ಕರೆದೊಯ್ಯುತ್ತಿದ್ದರು. ರಾತ್ರಿ ಎಂಟರ ಹೊತ್ತಿಗೆ ಪ್ರಾರಂಭವಾಗುತ್ತಿದ್ದ ಈ ಬೆಳದಿಂಗಳ ಭೋಜನಕೂಟದ ಆರಂಭ ಮತ್ತು ಅಂತ್ಯ ಕೂಡ ಪ್ರತಿದಿನದ ಶಾಖೆಯ ಚಟುವಟಿಕೆಗಳ ಮಾದರಿಯಲ್ಲಿಯೇ ನಡೆಯುತ್ತಿತ್ತು. ನಮ್ಮ ಶಾಖೆಯಲ್ಲಿ ಆಡಿಸದೇ ಇದ್ದ ಹೊಸ ಬಗೆಯ ಆಟೋಟಗಳು ಮತ್ತು ವ್ಯಾಯಾಮಗಳ ನಂತರ ಮಕ್ಕಳಿಗಾಗಿ ಬಗೆಬಗೆಯ ಸ್ಪರ್ಧೆಗಳನ್ನ ಆಯೋಜಿಸಲಾಗುತ್ತಿತ್ತು. ಭಾಷಣ, ಗಾಯನ, ಏಕಪಾತ್ರಾಭಿನಯ, ವಿಡಂಬನೆ, ವೇಷಭೂಷಣ ಸ್ಪರ್ದೆ ಮುಂತಾದವುಗಳನ್ನು ಏರ್ಪಡಿಸುತ್ತಿದ್ದ ಪ್ರಚಾರಕರು ಪೋಷಕರನ್ನೂ, ಊರಿನ ಗಣ್ಯವ್ಯಕ್ತಿಗಳನ್ನೂ, ಸ್ಪರ್ಧೆಯ ತೀರ್ಪುಗಾರರಾಗಿ ಆಯಾಯ ಕ್ಷೇತ್ರಗಳ ವಿಷಯತಜ್ಞರನ್ನೂ ಈ ಕೂಟಗಳಿಗೆ ಆಹ್ವಾನಿಸುತ್ತಿದ್ದರು. ಎಲ್ಲಾ ಚಟುವಟಿಕೆಗಳ ತರುವಾಯ, ಕಾರ್ಯಕ್ರಮದ ಕೊನೆಯಲ್ಲಿ ಜರೂರಾಗಿ ಇರುತ್ತಿದ್ದ ಪ್ರಮುಖಘಟ್ಟವೆಂದರೆ ಬೆಳದಿಂಗಳ ಭೋಜನದ ಸರದಿ. ಊಟಕ್ಕೆ ಮಕ್ಕಳನ್ನು ಸಾಲಾಗಿ ಕೂರಿಸಿ ತಮ್ಮ ಮನೆಯಿಂದಲೇ ತಯಾರಿಸಿ ತಂದ ಉಪ್ಪಿಟ್ಟು, ಕೇಸರಿಬಾತ್, ಚಿತ್ರಾನ್ನ, ಮೊಸರನ್ನ, ವಾಂಗಿಬಾತ್, ಪುಳಿಯೋಗರೆ, ಅವಲಕ್ಕಿ ಒಗ್ಗರಣೆ, ಇಡ್ಲಿ ಇಂತಹುದೇ ಯಾವುದಾದರೂ ಎರಡು ಬಗೆಯ ತಿಂಡಿಗಳನ್ನು ಮಕ್ಕಳಿಗೆ ತಮ್ಮ ಸಂಸಾರಸಮೇತರಾಗಿ ಉಣಬಡಿಸುತ್ತಿದ್ದ ರೆಡ್ಡಿಯವರು

ಈ ಹೊತ್ತಿನಲ್ಲಿ ಪಡುತ್ತಿದ್ದ ಸಂಭ್ರಮ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ವರ್ಷಕ್ಕೆ ಒಮ್ಮೆ ಒಂದು ವಾರದ ಅವಧಿಯ ಶಿಬಿರವನ್ನೂ ಬೇಸಿಗೆಕಾಲದಲ್ಲಿ ಹಮ್ಮಿಕೊಳ್ಳುತ್ತಿದ್ದ ರೆಡ್ಡಿಯವರು ಸುತ್ತಮುತ್ತಲ ಹಳ್ಳಿಗಳ ಯಾವುದಾದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಾದ ನಮ್ಮನ್ನು ಕರೆದುಕೊಂಡು ಹೋಗಿ ಒಂದು ವಾರದ ಮಟ್ಟಿಗೆ ಅಲ್ಲಿಯೇ ತಂಗುವಂತೆ ಮಾಡಿ ಮಕ್ಕಳ ಶಿಬಿರವನ್ನು ಆಯೋಜಿಸುತ್ತಿದ್ದರು. ನಾವು ಶಾಖೆಯಲ್ಲಿ ಮಾಡುತ್ತಿದ್ದ ಚಟುವಟಿಕೆಗಳ ವಿಸ್ತೃತರೂಪದಲ್ಲಿರುತ್ತಿದ್ದ ಈ ಶಿಬಿರಗಳ ಎಲ್ಲಾ ಖರ್ಚುವೆಚ್ಚವನ್ನೂ ವಾಸುದೇವರೆಡ್ಡಿಯವರೇ ಸ್ವತಃ ಭರಿಸುತ್ತಿದ್ದರು. ಆ ಹೊತ್ತಿಗಾಗಲೇ ದೊಡ್ಡ ಸಂಖ್ಯೆಯಲ್ಲಿಯೆ ಇದ್ದ ಆರೆಸ್ಸೆಸ್ ಬಗ್ಗೆ ಅನುಕಂಪ ಹೊಂದಿದ್ದ ನಮ್ಮ ಊರಿನ ಮಂದಿಯೇ ಆಗಲಿ ಅಥವಾ ನಾವು ವಾಸ್ತವ್ಯ ಹೂಡಿದ ಹಳ್ಳಿಗಳ ವ್ಯಕ್ತಿಗಳೇ ಆಗಲಿ, ಶಿಬಿರದ ಖರ್ಚುವೆಚ್ಚಗಳನ್ನು ಭರಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದರೂ ಇಂತಹ ಕೋರಿಕೆಗಳನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದ ವಾಸುದೇವರೆಡ್ಡಿ ಸುಮಾರು ಮೂರು ದಶಕಗಳ ಕಾಲ ಆರೆಸ್ಸೆಸ್ ತೇರನ್ನು ನಮ್ಮೂರಿನಲ್ಲಿ ತಾವೊಬ್ಬರೇ ಎಳೆದ ಸಂಗತಿ ಮತ್ತೊಬ್ಬರಿಂದ ಸಾಧ್ಯವಾದೀತು ಎನ್ನುವುದು ಊಹಿಸಲೂ ಕಷ್ಟವಾದ ವಿಷಯ ಎಂದೇ ನನ್ನ ಅನಿಸಿಕೆ. ನನ್ನ ಆರು ವರ್ಷಗಳ ಶಾಖಾ ಜೀವನದಲ್ಲಿ ಒಮ್ಮೆಯೂ ಒಂದು ಬಿಡಿಗಾಸಕ್ಕೂ ರೆಡ್ಡಿಯವರು ನನ್ನಿಂದ ಕೇಳಿ ಪಡೆಯಲಿಲ್ಲ. ಇದೇ ಅನುಭವ ಶಾಖಾರ್ಥಿಗಳಾದ ನನ್ನ ಎಲ್ಲಾ ಮಿತ್ರರದ್ದೂ ಆಗಿತ್ತು ಎನ್ನುವ ಸ್ಪಷ್ಟನೆನಪು ಈಗಲೂ ನನ್ನಲ್ಲಿದೆ.

ಹೀಗೆ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸದ್ದಿಲ್ಲದೆ ತುರುವನೂರಿನಲ್ಲಿ ಆರೆಸ್ಸೆಸ್ ಶಾಖೆಯನ್ನು ನಡೆಸಿಕೊಂಡು ಬಂದ ಇಂಟೂರ ವಾಸುದೇವರೆಡ್ಡಿಯವರ ಕಾರ್ಯವನ್ನು ಎಲೆಯ ಮರೆಯ ಕಾಯಿಯಂತೆ ಇದ್ದು ಸಮಾಜಕ್ಕೆ ಸಲ್ಲಿಸಿದ ಅಭೂತಪೂರ್ವ ಸೇವೆಯೆಂದೇ ಪರಿಗಣಿಸಬೇಕು. ಯಾವ ದೃಷ್ಟಿಕೋನದಿಂದ ನೋಡಿದರೂ ಇದು ಸಮಾಜಕ್ಕೆ ರೆಡ್ಡಿಯವರು ನೀಡಿದ ಅನರ್ಘ್ಯ, ಅಮೋಘರೂಪದ ಸೇವೆಯಾಗಿಯೇ ಗೋಚರಿಸುವ ಹೊತ್ತು ಇಂತಹ ನಿಸ್ಪೃಹ, ನಿಷ್ಕಳಂಕ, ಪ್ರಾಮಾಣಿಕ, ಸ್ವಾರ್ಥರಹಿತ ಜನಸೇವೆಯನ್ನು ಮೆಚ್ಚದೇ ಇರುವುದು ಲೋಹದ ಎರಕ ಹೊಯ್ದು ಮಾಡಿದ ಹೃದಯಗಳಿಗೂ ಕಷ್ಟಸಾಧ್ಯವೇ ಸರಿ. ಎರಡು ತಲೆಮಾರಿನ ಊರ ಮಕ್ಕಳಿಗೆ ಮುಂಬರುವ ಅವರ ಬಾಳಬಟ್ಟೆಯಲ್ಲಿ ಅನುಕರಿಸಿಬೇಕಾದ ಶಿಸ್ತು, ಸಂಯಮ, ಏಕಾಗ್ರಚಿತ್ತತೆ, ಸಮಾಜಸೇವೆ, ಸರ್ವರೂ ಸಮಾನರೆನ್ನುವ ಉದಾತ್ತ ಧ್ಯೇಯಗಳ ಪಾಠ ಮಾಡುತ್ತಲೇ ಅವರಲ್ಲಿ ದೇಶಭಕ್ತಿಯ ಕಿಡಿಯನ್ನು ಢಾಳಾಗಿ ಹೊತ್ತಿಸಿದ ರೆಡ್ಡಿಯವರ ಸಮಾಜದೆಡೆಗಿನ ತುಡಿತ ಅತ್ಯಂತ ತೀವ್ರವಾಗಿದ್ದು, ನಿರ್ಮಲವಾಗಿದ್ದದ್ದು, ಕಲಂಕರಹಿತವಾದದ್ದು, ಸಮಾಜಸೇವೆಯ ಪರಿಪೂರ್ಣತೆಗೆ ಒಂದು ಪೂರ್ಣರೂಪದ ಉದಾಹರಣೆಯಾಗಿ ನಿಲ್ಲುವಂತಹುದು. ಹೊಸ ಆಲೋಚನೆಗಳು, ಪ್ರೇಮಭರಿತ ಮಧುರ ಭಾವನೆಗಳು, ನವನವೀನ ದೃಷ್ಟಿಕೋನಗಳಿಂದ ಪ್ರೇರಿತರಾದ ಯುವಸಮಾಜವೊಂದರ ಸೃಷ್ಟಿಯೆಡೆಗಿನ ರೆಡ್ಡಿಯವರ ಅಸಾಮಾನ್ಯ ಕಾರ್ಯ ಹೊಗಳಿಕೆಯನ್ನು ಮೀರಿದಂತಹುದು, ಮುಖಸ್ತುತಿಯ ಪರಧಿಯಾಚೆಗಿನದು. ಸಾಮಾನ್ಯ ಕೃಷಿಕ ಕುಟುಂಬದ ಕುಡಿಯಾಗಿ, ದೈಹಿಕ ಶಿಕ್ಷಣಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಊರಿಗೆ ಮರಳಿ, ನನ್ನೂರಿನ ರಾಷ್ಟ್ರಸೇವೆಯ ಹಣತೆಯ ಬತ್ತಿ, ತೈಲ, ಜ್ವಾಲೆ ಎಲ್ಲವೂ ಆಗಿ ತನ್ನ ಜೀವನವನ್ನೇ ಆರೆಸ್ಸೆಸ್ ಯಜ್ಞದ ಹವಿಸ್ಸಿಗೆಂದು ಸಮರ್ಪಿಸಿದ ವಾಸುದೇವರೆಡ್ಡಿಯವರಿಗೆ ಸರಿಸಮನಾದ ದೇಶಭಕ್ತ ಹಗಲು ಹೊತ್ತಿನಲ್ಲಿ ದೀಪ ಹಿಡಿದು ಹುಡುಕಿದರೂ ನನ್ನೂರಿನ ಸುತ್ತಮುತ್ತಲ ಹನ್ನೆರೆಡು ಗಾವುದ ಫಾಸಲೆಯಲ್ಲಿ ಸಿಗುವುದು ದುರ್ಲಭ.

ಶಾಖೆಗೆ ಸದಾ ಮೊಣಕಾಲು ಮಟ್ಟಕ್ಕೆ ಇರುತ್ತಿದ್ದ ಖಾಕಿ ಬಣ್ಣದ ದೊಗಳೆ ಹತ್ತಿಬಟ್ಟೆಯ ಚೆಡ್ಡಿ ಮತ್ತು ಮೊಣಕೈ ಮೇಲಕ್ಕೆ ಬರುವಂತೆ ಮಡಿಚಿ ಕಟ್ಟಿದಂತಹ ಶುಭ್ರ ಬಿಳಿ ಬಣ್ಣದ ಶರ್ಟನ್ನು ಇನ್ ಶರ್ಟ್ ಮಾಡಿ ಬರುತ್ತಿದ್ದ ರೆಡ್ಡಿಯವರು ಚಡ್ಡಿಯನ್ನು ಸೊಂಟದ ಮೇಲೆ ಭದ್ರವಾಗಿ ಸ್ಥಿರಗೊಳಿಸುವ ಸಲುವಾಗಿ ನಾಲ್ಕು ಬೆರಳು ಅಗಲದ ಕಪ್ಪುಬಣ್ಣದ, ಹೊಳಪಿನ ದೊಡ್ಡಗಾತ್ರದ ಸ್ಟೀಲ್ ಬಕಲ್ ಹೊಂದಿದ ಚರ್ಮದ ಬೆಲ್ಟ್ ಧರಿಸಿರುತ್ತಿದ್ದರು. ರೆಡ್ಡಿ ನಿಸ್ಸಂದೇಹವಾಗಿ ಅತ್ಯಂತ ಸ್ಫುರದ್ರೂಪಿ ಎಂದೇ ಹೇಳಬಹುದಾದ ವ್ಯಕ್ತಿತ್ವದ ಧಣಿ. ದುಂಡುದುಂಡಾಗಿ ಮೈತುಂಬಿಕೊಂಡು, ಚಿಗುಟಿದರೆ ಎಲ್ಲಿ ರಕ್ತ ಜಿನುಗೀತೋ ಎನ್ನುವಂತಹ, ನಮ್ಮ ಸೀಮೆಗೇ ಅಪರೂಪವಾದ, ಕೆಂಪುವರ್ಣದ ಮೈಬಣ್ಣ ಉಳ್ಳ ರೆಡ್ಡಿ ಅಗಲವಾದ, ಮೀಸೆರಹಿತ, ತೋಜೋಮಯವಾದ, ಚಂದ್ರಾಕಾರದ ಮುಖಮಂಡಲದ ಒಡೆಯ. ತಲೆಯ ಮಧ್ಯಕ್ಕೆ ತೆಗೆದ ಬೈತಲೆ, ಬೈತಲೆಯ ಎರಡೂ ಇಕ್ಕೆಲಗಳಲ್ಲಿ ಒಪ್ಪವಾಗಿ, ತುಸು ಹಿಂದಕ್ಕೆ ಬರುವಂತೆ ಎತ್ತಿ ಬಾಚಿದ ದಟ್ಟ, ಕಪ್ಪು ಗುಂಗುರುಕೂದಲುಗಳ ರೆಡ್ಡಿಯವರ ತಲೆ ನನ್ನಲ್ಲಿ ಯಾವಾಗಲೂ ರಾಷ್ಟ್ರಕವಿ ಕುವೆಂಪು ಅವರ ತಲೆಯ ನೆನಪನ್ನು ಅನಾಯಾಸವಾಗಿ ಮೂಡಿಸುತ್ತದೆ. ಸ್ವಲ್ಪ ಹೊರಕ್ಕೆ ಉಬ್ಬಿದಂತೆ ತೋರುತ್ತಿದ್ದ ರೆಡ್ಡಿಯವರ ಹೊಟ್ಟೆ, ಸಾಧಾರಣ ಎತ್ತರಕ್ಕಿಂತಹ ಎರಡು ಮೂರು ಅಂಗುಲ ಹೆಚ್ಚೇ ಎನ್ನಬಹುದಾದ ಅವರ ಭವ್ಯವ್ಯಕ್ತಿತ್ವದ ದೇಗುಲಕ್ಕೆ ಕಲಶಪ್ರಾಯವಾಗಿತ್ತು. ಯಥಾವತ್ತಾಗಿ ತಾಯಿ ಜಾನಕಮ್ಮನನ್ನು ಹೋಲುತ್ತಿದ್ದ ರೆಡ್ಡಿಯವರ ಉದ್ದವಾದ, ಮಾಟವಾದ ಮೂಗು ಅವರ ಇಡೀ ವ್ಯಕ್ತಿತ್ವಕ್ಕೆ ಒಂದು ಚುಂಬಕ ಶಕ್ತಿಯನ್ನು ಪ್ರಧಾನ ಮಾಡಿತ್ತು. ತುಂಬು ಮಧ್ಯಮವರ್ಗದ, ರೆಡ್ಡಿ ಮನೆತನವೊಂದರಿಂದ ಬಂದ ವಾಸುದೇವರೆಡ್ಡಿಯವರು ಮಾತಿನಲ್ಲಿ ತುಂಬಾ ಮೃದು, ವ್ಯವಹಾರದಲ್ಲಿ ತುಂಬಾ ನಾಜೂಕು. ಸೌಜನ್ಯದ ಸೆಲೆಯನ್ನೇ ತಮ್ಮ ಮಾತುಗಳಲ್ಲಿ ಹರಿಸುತ್ತಿದ್ದ ರೆಡ್ಡಿಯವರ ಮಾತುಗಳಲ್ಲಿ ಜೇನಿನ ಮಾಧುರ್ಯ ಕಂಡೂ ಕಾಣದಂತೆ ಇಣುಕಿ ಹಾಕುತ್ತಿತ್ತು. ತಮ್ಮ ನಡೆಯಲ್ಲಿ ಗಜಗಾಂಭೀರ್ಯವನ್ನು ತುಂಬಿಕೊಂಡಂತಿದ್ದ ರೆಡ್ಡಿಯವರ ಒಡನಾಟದಲ್ಲಿ ಇದ್ದಷ್ಟೂ ದಿವಸ ಅವರು ಯಾವುದೇ ವಿಷಯಕ್ಕಾಗಲೀ ಉದ್ರೇಕಗೊಂಡಿದ್ದನ್ನು, ತಮ್ಮ ಶಾಂತಚಿತ್ತವನ್ನು ಬಲಿಗೊಟ್ಟಿದ್ದನ್ನು, ಕೋಪಾವಿಷ್ಟರಾಗಿದ್ದನ್ನು ನಾನು ಕಾಣೆ. ಎಂತಹುದೇ ಸನ್ನಿವೇಶವಿರಲಿ, ಅದಕ್ಕೆ ತನಗೆ ಸಾಧ್ಯವಾದ ಎಲ್ಲಾ ತಾಳ್ಮೆಯಿಂದಲೇ ಪ್ರತಿಕ್ರಿಯಿಸುತ್ತಿದ್ದ ರೆಡ್ಡಿ ತಮ್ಮ ಬಗ್ಗೆ ಊರ ಜನರಾಡುವ ಮಾತುಗಳನ್ನು ಕಿವಿಗೆ ಹಾಕಿಕೊಂಡವರೇ ಅಲ್ಲ. ತಮ್ಮ ವಿರಾಮದ ವೇಳೆಯಲ್ಲಿ, ಆರೆಸ್ಸೆಸ್ ಉಡುಗೆ ತೊಡುಗೆಯಲ್ಲಿಯೇ ಮನೆಯ ಮೂರ್ನಾಲ್ಕು ದನಕರುಗಳನ್ನು ಮೇಯಿಸಲು ಊರಾಚೆ ಮೂರು ಕಿಲೋಮೀಟರ್ ದೂರವಿದ್ದ ತಮ್ಮ ಹೊಲಕ್ಕೆ ಹೊಡೆದುಕೊಂಡು ಹೋಗುತ್ತಿದ್ದ ರೆಡ್ಡಿಯವರ “ಪ್ರಭಾತ್ ಫೇರಿ” ಊರವರ ಪ್ರಹಸನದ ಕೇಂದ್ರ ಬಿಂದುವಾಗಿದ್ದ ಹೊತ್ತೂ ಅದನ್ನು ದಿವ್ಯ ನಿರ್ಲಕ್ಷ ದ ಮೂಲಕವೇ ಎದುರಿಸುತ್ತಿದ್ದರು ರೆಡ್ಡಿಗಾರು. ಪೂರ್ವಾರ್ಜಿತವಾಗಿ ತಮ್ಮ ಪಾಲಿಗೆ ಬಂದ ಸುಮಾರು ಇಪ್ಪತ್ತು ಎಕರೆ ಎರೆಹೊಲದಲ್ಲಿ ಕೃಷಿ ಮಾಡಿ ಜೀವನವನ್ನು ಪೋಷಿಸುತ್ತಿದ್ದ ರೆಡ್ಡಿ, ತಮ್ಮ ಆದಾಯದ ಬಲದಿಂದಲೇ ತಾವು ಊರಲ್ಲಿ ನಡೆಸುತ್ತಿದ್ದ ನಾಲ್ಕೂ ಶಾಖೆಗಳ ವಾರ್ಷಿಕ ಖರ್ಚುವೆಚ್ಚಗಳನ್ನ ಭರಿಸುತ್ತಿದ್ದರು. ವಿವಾಹಿತರಾಗಿ ತಮ್ಮ ಸುಖೀ ಸಂಸಾರದ ಮುಖೇನ ಒಂದು ಹೆಣ್ಣು ಮತ್ತು ಗಂಡು ಮಗುವಿನ ತಂದೆಯವರಾಗಿದ್ದ ರೆಡ್ಡಿಯವರು ಒತ್ತಡರಹಿತ ಜೀವನಶೈಲಿಯನ್ನು ಹೆಚ್ಚು ಬೋಧಿಸದೆಯೂ ಜೀವಿಸಿ ತೋರಿಸಿದ್ದವರಾಗಿದ್ದರು. ಐನೋರ ತಿಪ್ಪಯ್ಯ ಮೇಷ್ಟ್ರ ಮನೆ ಎದುರಿಗೆ ವಾಸವಿದ್ದ ವಾಸುದೇವರೆಡ್ಡಿ, ಆಗಾಗ್ಗೆ ತಮ್ಮ ಮನೆಯ ಮುಂದಿನ ಕಲ್ಲುಚಪ್ಪಡಿ ಹಾಕಿದ ಕಟ್ಟೆಯ ಮೇಲೆ ಹಾಸಿದ ಕಡ್ಡಿ ಚಾಪೆಯ ಮೇಲೆ ಒಂದು ಒರಗು ದಿಂಬನ್ನು ಇಟ್ಟುಕೊಂಡು, ಗಣೇಶನ ಮೂರ್ತಿಯ ಸುಖಾಸನ ಭಂಗಿಯಲ್ಲಿ ಆಸೀನರಾಗಿ, ಪುಸ್ತಕವೊಂದರಲ್ಲಿ ಮುಳುಗಿ ಹೋಗುತ್ತಿದ್ದ ದೃಶ್ಯ ನಾನು ನನ್ನ ಜೀವಮಾನದಲ್ಲಿಯೇ ಮರೆಯಲಾಗದ್ದು.

ನಾನು ಊರಿನಲ್ಲಿ ಕಂಡ ವಾಗ್ಪಟುಗಳಲ್ಲಿಯೇ ಶ್ರೇಷ್ಠ ಮಾತುಗಾರರಾಗಿದ್ದ ವಾಸುದೇವರೆಡ್ಡಿಯವರು ಭಾರತದ ಇತಿಹಾಸದ ಬಗ್ಗೆ ಗಂಟೆಗಟ್ಟಲೆ ಓತಪ್ರೋತವಾಗಿ ಮಾತನಾಡಬಲ್ಲವರಾಗಿದ್ದರು. ಭಾರತದ ಇತಿಹಾಸದ ಪುಟಪುಟಗಳಿಗೂ ಚಿರಪರಿಚಿತರಾದಂತಿದ್ದ ರೆಡ್ಡಿಯವರು ಭಾರತಮಾತೆಯ ಹಿರಿಮೆಗರಿಮೆಗಳ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಭಾರತದ ಬೆಟ್ಟ, ಪರ್ವತ, ನದಿ, ಹಿಮ, ವನ, ತರು, ತಳಿರು, ಮಂದಾನಿಲ, ಕೊಳ, ಕೋಟೆ, ಕೊತ್ತಲ, ಗವಿ, ಸುರಂಗ, ವನ್ಯಜೀವಿಗಳೇ ಮೊದಲಾದ ವೈವಿಧ್ಯಮಯ ಪ್ರಾಕೃತಿಕ, ಭೌಗೋಳಿಕ ಸಂಪತ್ತುಗಳೆಡೆ ಅತ್ಯಂತ ಜಾಗರೂಕ ಮನಃಸ್ಥಿತಿ ಹೊಂದಿದ್ದ ರೆಡ್ಡಿಯವರು ರಾಷ್ಟ್ರದ ಹಾಗುಹೋಗುಗಳಿಗೆ ಸ್ಪಂದಿಸುತ್ತಿದ್ದ ಪರಿ ಅನನ್ಯವಾದದ್ದು. ಸಂಘಪರಿವಾರದ ಮೂಲದಿಂದ ಬಂದ ಕಾರಣ ಸಹಜವಾಗಿಯೇ ಆ ಹೊತ್ತಿನ ಜನಸಂಘದ ರಾಜಕೀಯ ಪರಿಕಲ್ಪನೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ರೆಡ್ಡಿಯವರು, ಸಕ್ರಿಯ ರಾಜಕಾರಣದಲ್ಲಿ ಇಳಿಯದೇ ಹೋದರೂ, ಆ ಹೊತ್ತಿನ ರಾಜ್ಯಮಟ್ಟದ ಎಲ್ಲಾ ಧುರೀಣ ರಾಜಕೀಯಪಟುಗಳನ್ನೂ, ಪಕ್ಷಾತೀತ ನೆಲೆಯಲ್ಲಿ ಬಲ್ಲವರಾಗಿದ್ದರು. ಸದಾ ಧನಾತ್ಮಕ ಯೋಚನೆಗಳಿಂದ, ಯೋಜನೆಗಳಿಂದ ಸಮಾಜದ ಓರೆಕೋರೆಗಳಿಗೆ ಮಿಡಿಯುತ್ತಿದ್ದ, ಪರಿಹಾರಗಳನ್ನು ಅನ್ವೇಷಿಸುತ್ತಿದ್ದ ಶ್ರೀಯುತರ ಹೃದಯ ಅನುಕಂಪದ ಅಗಾಧ ಸೆಲೆಯಾಗಿತ್ತು.

೧೯೮೩ರ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಊರನ್ನು ಪ್ರತಿನಿಧಿಸುತ್ತಿದ್ದ ಜಗಳೂರು ಶಾಸಕ ಕ್ಷೇತ್ರಕ್ಕೆ ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ರಚಿತವಾದ ಭಾರತೀಯ ಜನತಾಪಕ್ಷದ ವತಿಯಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕು ಎನ್ನುವುದರ ಬಗ್ಗೆ ಕಮಲಪಕ್ಷದ ರಾಜ್ಯಮಟ್ಟದ ನಾಯಕರಲ್ಲಿ ತೀವ್ರತರನಾದ ಚಿಂತನ-ಮಂಥನ ಪ್ರಾರಂಭವಾಗಿತ್ತು. ಬಿಜೆಪಿಗೆ ಅಂದು ದೊಡ್ಡಮಟ್ಟದ ಸಂಕಟ ಎದುರಾಗಿದ್ದಕ್ಕೆ ಕಾರಣ ಜಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಬಹಳ ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು ಎಂದಲ್ಲ, ವ್ಯತಿರಿಕ್ತವಾಗಿ ರಾಜ್ಯದ ಮತದಾರನ ಮಟ್ಟಿಗೆ ಅನಾಮಧೇಯವಾಗಿಯೇ ಉಳಿದಿದ್ದ ಈ “ಉತ್ತರ”ದ ಪಕ್ಷವನ್ನು ಪ್ರತಿನಿಧಿಸಿ ಜಗಳೂರು ಕ್ಷೇತ್ರದಿಂದ ಪಕ್ಷದ ಹುರಿಯಾಳಾಗಲು ಅಂದು ಯಾರೂ ಮುಂದೆ ಬಾರದೇ ಇದ್ದದ್ದು ಬೆರಳೆಣಿಕೆಯಲ್ಲಿದ್ದ ರಾಜ್ಯ ನಾಯಕರಿಗೆ ತೀವ್ರ ಸಂಕಷ್ಟ ಮತ್ತು ಮುಜುಗರವನ್ನು ತಂದಿತ್ತು. ಈ ಹೊತ್ತಿನಲ್ಲಿ ಅವಿಭಕ್ತ ಚಿತ್ರದುರ್ಗ ಜಿಲ್ಲೆಯ ಭಾರತೀಯ ಜನತಾಪಕ್ಷದ ಪದಾಧಿಕಾರಿಗಳಾದ, ಸಂಘಪರಿವಾರ ಮೂಲದ ಅಯ್ಯಂಗಾರ್ ಎನ್ನುವವರು, ತಮಗೆ ತೀರಾ ಆತ್ಮೀಯರಾದ ವಾಸುದೇವರೆಡ್ಡಿಯವರನ್ನು ಒತ್ತಾಯಿಸಿ, ಪುಸಲಾಯಿಸಿ, ಮನಃಪರಿವರ್ತಿಸಿ ಅವರ ಕೈಯಿಂದ ಜಗಳೂರು ಕ್ಷೇತ್ರದ ಪಕ್ಷದ ಅಭ್ಯರ್ಥಿಯ ರೂಪದಲ್ಲಿ ನಾಮಪತ್ರವನ್ನು ಸಲ್ಲಿಸಿಯೇ ಬಿಡುವಲ್ಲಿ ಯಶಸ್ವಿಯಾದರು. ರಾಜಕೀಯ ಕ್ಷೇತ್ರಕ್ಕೆ ಹೊಸಬರಾಗಿದ್ದ ರೆಡ್ಡಿಯವರು ಯಾವ ಸಂಪನ್ಮೂಲಗಳ ನೆರವೂ ಇಲ್ಲದೆ, ಪಕ್ಷ ಸಂಘಟನೆಯ ಬೆಂಬಲದ ಮಾತು ದೂರವಿರಲಿ, ಯಾವ ಒಂದು ಗಟ್ಟಿನೆಲೆಯೂ ಇಲ್ಲದ ಅಪರಿಚಿತ ಪಕ್ಷದ ಅಭ್ಯರ್ಥಿಯಾಗಿ, ಏಕಾಂಗಿಯಾದ ರಾಜಕೀಯ ಜಿದ್ದಾಜಿದ್ದಿಯ ಹೋರಾಟವನ್ನು ನಡೆಸಿ, ಠೇವಣಿಯನ್ನೂ ಕಳೆದುಕೊಂಡು ಹೀನಾಯವಾದ ಸೋಲನ್ನು ಕಂಡರು

. ಹಗಲು ರಾತ್ರಿಗಳೆನ್ನದೆ ತಮ್ಮ ಆತಿಪ್ರಿಯ ಶಾಖಾಪ್ರಚಾರಕರ ಪರವಾಗಿ ಚುನಾವಣಾ ಪ್ರಚಾರವನ್ನು ಮಾಡಿದ ಊರಿನ ನಾಲ್ಕೂ ಶಾಖೆಗಳ, ಇನ್ನೂರಕ್ಕೂ ಮೀರಿದ ಮಕ್ಕಳ ಮುಖದಲ್ಲಿ ದುಃಖದ ಕಟ್ಟೆಯೊಡೆದಿತ್ತು. ಚುನಾವಣಾ ಫಲಿತಾಂಶದ ನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿಯವರು “ಈಗ ತಾನೇ ಉದಯವಾದ ಭಾರತೀಯ ಜನತಾಪಕ್ಷಕ್ಕೆ ಉಜ್ವಲ ಭವಿಷ್ಯ ಕಾದಿದೆ; ದೇಶಭಕ್ತಿಯ ಬುನಾದಿಯ ಮೇಲೆ, ಸಚ್ಚಾರಿತ್ರ್ಯ ಹೊಂದಿದ ನಾಯಕರ ಶಕ್ತಿಶಾಲಿ ಭುಜಗಳ ಮೇಲೆ ಮೆರೆದಾಡುತ್ತಿರುವ ಪಕ್ಷ ಕೆಲವೇ ದಶಕಗಳಲ್ಲಿ ರಾಷ್ಟ್ರದ ಏಕಮೇವಾದ್ವಿತೀಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ” ಎನ್ನುವ ಪ್ರವಾದಿಯ ಮಾದರಿಯ ಮಾತುಗಳನ್ನು ಆಡಿದ್ದು ಈಗಲೂ ನನ್ನ ಕಿವಿಗಳಲ್ಲಿ ಗುಂಗುಟ್ಟುತ್ತಲಿದೆ. ಪ್ರಧಾನಿ ಮೋದಿಯವರು ಹಿಮಾಲಯದ ತಪ್ಪಲಿನ ಯಾವುದೋ ಪರ್ವತಶ್ರೇಣಿಯಲ್ಲಿ ಬೈರಾಗಿಯಾಗಿ ಸಂಚರಿಸುತ್ತಿದ್ದ ಆ ದಿನಗಳಲ್ಲಿ, ತುರುವನೂರಿನಂತಹ ಬರಡುಸೀಮೆಯ ಎದೆಯಲ್ಲಿ ನಿಂತು ಬರಲಿರುವ ಭವ್ಯಭಾರತದ ಕಲ್ಪನೆಯನ್ನು ತಾಯಿ ಭಾರತಿಯ ಒಡಲಿಗೆ ಸಮರ್ಪಿಸಿದ್ದ ವಾಸುದೇವರೆಡ್ಡಿಯವರ ಮನದಾಳದ ಹರಕೆ ಇಂದು ಸಿದ್ಧಿಸಿದೆ. ಸುಮಾರು ಎರಡು ದಶಕಗಳ ನಂತರ ರೆಡ್ಡಿಯವರ ಅಮೃತವಾಣಿಯನ್ನು ಆಲಿಸಿದರೋ ಎನ್ನುವಂತೆ ಸಂಭವಿಸಿದ ಮೋದಿಯವರ ರಾಜಕೀಯ ಪ್ರವೇಶದ ಕಾರಣದಿಂದಾಗಿ ನಮ್ಮ ಪ್ರಿಯ ಪ್ರಚಾರಕರ ಕನಸುಗಳು ನನಸಾಗುವ ದಿಕ್ಕಿನಲ್ಲಿ ದೃಢಹೆಜ್ಜೆ ಇಟ್ಟಿವೆ. ರೆಡ್ಡಿಯವರೇ ಹೀಗೆ, ತನ್ನ ಜೀವಿತಕಾಲದಲ್ಲಿ ವರ್ತಮಾನದ ಒಟ್ಟಿಗೆ ಭೂತವನ್ನೂ, ಭವಿಷ್ಯತ್ತನ್ನೂ ಹೊದ್ದು ಜೀವಿಸಿದವರು; ತ್ರಿಕಾಲ ಜ್ಞಾನಿಗಳಂತೆ ಏಕಕಾಲದಲ್ಲಿ ಮೂರೂ ಕಾಲಗಳ ಪರಿಪ್ರಜ್ಞೆಯೊಂದಿಗೆ ಬದುಕನ್ನು ಸಾಕ್ಷೀಕರಿಸಿಕೊಂಡವರು. ಭೂತದ ಬಗ್ಗೆ ಆಳವಾದ ಜ್ಞಾನ, ವರ್ತಮಾನದ ಎಡೆಗೆ ಸಂವೇದನಾಶೀಲ ತುಡಿತ ಮತ್ತು ಭವಿಷ್ಯತ್ತಿನೆಡೆಗೆ ಆಶಾಭರಿತ ಕಣ್ಣುಗಳನ್ನು ಕೀಲಿಸಿದ್ದ ವಾಸುದೇವರೆಡ್ಡಿ ಬಹಳ ಎತ್ತರದ ಜನನಾಯಕರಾಗಿ ಬೆಳೆಯುವ ಎಲ್ಲಾ ಸಂಭಾವ್ಯತೆಗಳನ್ನು ತಮ್ಮಲ್ಲಿ ಅವಿರ್ಭವಿಸಿಕೊಂಡಿದ್ದವರು. ಸೂಕ್ತ ಅವಕಾಶಗಳು ದೊರೆತಿದ್ದಲ್ಲಿ ಸಮಾಜಕ್ಕೆ ಇವರಿಂದ ಸ್ವಾರ್ಥರಹಿತವಾದ ಮಹತ್ಕಾರ್ಯಗಳು ಅಗಣಿತ ಸಂಖ್ಯೆಯಲ್ಲಿ ಘಟಿಸುತ್ತಿದ್ದವು ಎನ್ನುವುದರಲ್ಲಿ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲ.

ಇಂದು ಸಂಘಪರಿವಾರ ವಿಶ್ವದ ಸಂಘಟನೆಗಳಲ್ಲಿಯೇ ಅತ್ಯಂತ ಹಿರಿದು ಎನ್ನುವ ಅಭಿದಾನಕ್ಕೆ ಪಾತ್ರವಾಗಿದ್ದರೆ ಅದರಲ್ಲಿ ಸಂಘಕ್ಕಾಗಿ ಜೀವನವನ್ನು ತೇದ ವಾಸುದೇವರೆಡ್ಡಿಯಂತಹ ಸಹಸ್ರಾರು ಸಂಖ್ಯೆಯ ಸ್ವಯಂಸೇವಕರೂ ಶಾಮೀಲಾಗಿದ್ದಾರೆ. ಜಗತ್ತಿನ ಯಾವ ಸಂಸ್ಥೆಯೂ ತನ್ನಷ್ಟಕ್ಕೆ ತಾನೇ ಮಹತ್ತನ್ನು ಪಡೆದುಕೊಳ್ಳುವುದಿಲ್ಲ. ತನ್ನಲ್ಲಿರುವ ಜನಶಕ್ತಿಯ ಮಹತ್ವದ ಒಟ್ಟು ಮೊತ್ತವನ್ನಷ್ಟೇ ಸಂಘಟನೆಯೊಂದು ಸಾಂಕೇತಿಸುತ್ತದೆ, ಪ್ರತಿಫಲಿಸುತ್ತದೆ. ಇಂದು ಸಂಘಪರಿವಾರ ವಿಶ್ವದ ಅಗ್ರಗಣ್ಯ ಸಂಘಟನೆ ಎಂದು ರುಜುವಾತಾದಲ್ಲಿ ಅದರ ಶ್ರೇಯದ ಪ್ರತಿಯೊಂದು ಅಂಶ ಸಂಘವನ್ನು ಕಟ್ಟಿ ಬೆಳೆಸಿದ ಪ್ರಚಾರಕರ, ಶಾಖಾಪ್ರಮುಖರ ಪಾಲಿನದಾಗಿರುತ್ತದೆ. ತುರುವನೂರಿನಂತ ಬೆಂಗಾಡು ಪ್ರದೇಶದಲ್ಲಿ ಸಂಘಪರಿವಾರದ ಆದರ್ಶಗಳನ್ನು ತಲೆಯ ಮೇಲೆ ಹೊತ್ತು, ದಶಕಗಳ ಕಾಲ ಸಂಘದ ಪರಮೋದ್ದೇಶಗಳನ್ನ ಸಾಧ್ಯವಾದಷ್ಟೂ ಮಕ್ಕಳ ತಲೆಯಲ್ಲಿ ತುಂಬಲು ಚಳಿ, ಮಳೆ, ಬಿಸಿಲು, ಗಾಳಿಗಳೆನ್ನದೆ ಅಹೋರಾತ್ರಿ ಶ್ರಮಿಸಿದ ರೆಡ್ಡಿಯವರ ಸರಿಸಾಟಿಯಿಲ್ಲದ ಬಲಿದಾನ ಕಣ್ಣು ಕುಕ್ಕುತ್ತದೆ. ತಮ್ಮ ಅಚಲ ನಂಬಿಕೆ, ಶ್ರದ್ಧೆಗಳ ಕಾರಣದಿಂದಾಗಿ ನನ್ನೂರಿನಂತಹ ಶಾಶ್ವತ ಬರಗಾಲದ ಪ್ರದೇಶದಲ್ಲಿ ವಿಚಾರಕ್ರಾಂತಿ, ದೇಶಭಕ್ತಿಯಂತಹ ಹಸಿರನ್ನು ಮೆರೆದ ವಾಸುದೇವರೆಡ್ಡಿ ಪ್ರಾತಃಸ್ಮರಣೀಯರು.

ಈ ಎಲ್ಲಾ ನೆನಪುಗಳ ಮಧ್ಯೆ ನನ್ನನ್ನು, ಲೇಖನವನ್ನು ಒಕ್ಕಣಿಸುವ ಈ ಹೊತ್ತು ಕುಕ್ಕಿಕುಕ್ಕಿ ಹೈರಾಣಾಗಿಸುತ್ತಿರುವುದು ರೆಡ್ಡಿಯವರಂತಹ ಅಸಂಖ್ಯ, ಅನಾಮಧೇಯ ಸ್ವಯಂಸೇವಕರು ಕಟ್ಟಿದ ಸಂಘಪರಿವಾರವೆನ್ನುವ ಬೃಹತ್ ಹುತ್ತದಲ್ಲಿ ಸದ್ದಿಲ್ಲದೇ ಬಂದು ಸೇರಿಕೊಂಡಿರುವ ಸಾವಿರಾರು ಸಂಖ್ಯೆಯ ಕಾರ್ಕೋಟಕ ವಿಷಯುಕ್ತ ಘಟಸರ್ಪಗಳು. ಒಂದು ಸುರಕ್ಷಿತ ರಾಜಕೀಯ ತಾಣವನ್ನಷ್ಟೆ ಬಯಸಿ, ಹುತ್ತದಿಂದ ಹುತ್ತಕ್ಕೆ ಸ್ಥಳಾಂತರ, ವಾಸಾಂತರ ಮಾಡುವ ಈ ವಿಷಜಂತುಗಳು ತಾವು ಹೊಕ್ಕ ಹುತ್ತದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸ ಹೊರಡುವ ಭರಾಟೆಯ ಪ್ರಕ್ರಿಯೆಯಲ್ಲಿ ಉಂಟು ಮಾಡುತ್ತಿರುವ ರಾಜಕೀಯ ಗಂಟೆಗದ್ದಲ, ಗೊಂದಲಗಳು, ಕೈಯಲ್ಲಿ ಒಂದು ಕಾಸೂ ಇಲ್ಲದೆ, ಅಭ್ಯರ್ಥಿಗಳೇ ದಿಕ್ಕಿರದಿದ್ದ ಪಕ್ಷಕ್ಕೆ, ನಾಮಪತ್ರ ದಾಖಲಿಸುವ ಅಂತಿಮಚರಣದಲ್ಲಿ ತಮ್ಮ ಉಮೇದುವಾರಿಕೆಯನ್ನು ಒಲ್ಲದ ಮನಸ್ಸಿನಿಂದಲೇ ಸಲ್ಲಿಸಿದ ವಾಸುದೇವರೆಡ್ಡಿಯವರ ತ್ಯಾಗಗಾಥೆಯನ್ನು ಕೊಂಡಾಡುವ ಮೆಲ್ಲನೆಯ ಸವಿಧ್ವನಿಗಳನ್ನು ಹೇಳಹೆಸರಿಲ್ಲದಂತೆ ಹೊಸಕಿ ಹಾಕುವಷ್ಟು ತಾಕತ್ತು ಹೊಂದಿವೆ. “ನಾನು ಠೇವಣಿಯನ್ನೂ ಉಳಿಸಿಕೊಳ್ಳಲಾರೆ” ಎನ್ನುವ ಪರಮಸತ್ಯದ ಅರಿವಿದ್ದರೂ, ತಮ್ಮ ಜಾತಿಯವರೇ ಆದ, ಆ ಹೊತ್ತಿನ ಹಾಲಿ ಮಂತ್ರಿಗಳೂ ಆದ, ಜಿ.ಎಚ್. ಅಶ್ವತ್ಥರೆಡ್ಡಿಯವರ ಎದುರು ಏಕಾಂಗಿಯಾದ ಚುನಾವಣಾ ಹೋರಾಟವನ್ನು ವೀರಾವೇಶಭರಿತರಾಗಿಯೇ ನಡೆಸಿದ ವಾಸುದೇವರೆಡ್ಡಿಯವರಿಗೆ ಇದ್ದ ತಾವು ನಂಬಿದ ತತ್ವಗಳಲ್ಲಿನ ಅಳಿಸಲಾಗದ ಶ್ರದ್ಧೆ, ಇಂದು ಗೆಲ್ಲುವ ಸಂಭವನೀಯ ಕ್ಷೇತ್ರಗಳ ಟಿಕೆಟ್ ಗಳಿಗಾಗಿ ಹಿಂಡುಹಿಂಡಾಗಿ ನಾಯಕರ ಬೆನ್ನಿಗೆ ದುಂಬಾಲು ಬಿದ್ದಿರುವ ಕೇಸರಿಪಕ್ಷದ ಯಾವ ರಾಜಕೀಯ ಪಟುವಿಗೆ ಇದೆ? “ರಾಜಕೀಯ ತಮ್ಮ ಸ್ವಾರ್ಥಸಾಧನೆಯ ಮಾರ್ಗ ಮಾತ್ರ” ಎನ್ನುವ ಇಂದಿನ ಕಮಲಪುತ್ರರು ದಶಕಗಳ ಕಾಲ ತಮ್ಮ ಬೆವರು ರಕ್ತವನ್ನು ಹರಿಸಿ, ರೆಡ್ಡಿಯವರಂತಹ ಸಾವಿರಾರು ಸ್ವಯಂಸೇವಕರು ಕಟ್ಟಿದ ಸಂಘಟನೆಯ ಭದ್ರ ಬುನಾದಿಗೆ ಹತ್ತಿದ ಗೆದ್ದಲು ಹುಳುಗಳೇ ಅಲ್ಲವೇ? ಮಂತ್ರಿಸಂತ್ರಿಗಳಾಗುವ ಮಂತ್ರವನ್ನೇ ತಮ್ಮ ಅಹೋರಾತ್ರಿಯ ಜಪವನ್ನಾಗಿಸಿರುವ ಇಂದಿನ ಕುತಂತ್ರಿ ರಾಜಕಾರಣಿಗಳನ್ನು ಹಗಲೂರಾತ್ರಿ ತಾಯಿ ಭಾರತಿಯ ಮಂತ್ರಗಳ ಕೇವಲ ಜಪತಪದಲ್ಲಿ ಜೀವನವನ್ನು ವ್ಯಥಿಸಿದ ರೆಡ್ಡಿಯವರಿಗೆ ಹೋಲಿಸುವುದಾರೂ ಸಾಧ್ಯವೇ? ಸಾಧುವೇ? ತಮ್ಮ ಸ್ವಂತ ಖರ್ಚಿನಿಂದ ಹಳ್ಳಿಗಾಡಿನಲ್ಲಿ ಸಂಘಪರಿವಾರದ ಜ್ಯೋತಿಯನ್ನು ಬೆಳಗಿಸಿ, ಅನಂತಕಾಲದವರೆಗೆ ಅದು ನಂದದ ಹಾಗೆ, ಅದರ ಪ್ರಭೆ ಕುಂದದ ಹಾಗೆ ರೆಪ್ಪೆ ಮಿಟುಕಿಸದ ಕಾವಲು ಕಾದ ರೆಡ್ಡಿಯವರ ವ್ಯಕ್ತಿತ್ವದ ಯಾವ ಭಾಗಕ್ಕೆ ಇಂದು ಸಾರ್ವಜನಿಕರ ಎಂಜಲನ್ನು ಸವಿಯಲು ಸಿದ್ಧವಾಗಿ ನಿಂತ ಈ ಕಮಲಪಡೆಯ ಸವ್ಯಸಾಚಿಗಳನ್ನು ಹೋಲಿಸಲಾದೀತು? ರೆಡ್ಡಿಯವರು ಸದಾ ಧರಿಸುತ್ತಿದ್ದ ಕಪ್ಪನೆಯ ಬಾಟಾ ಚಪ್ಪಲಿಯ ಎಡಪಾದದ ಹೆಬ್ಬೆರಳಿನ ಉಗುರಿನ ತುತ್ತ ತುದಿಗಾದರೂ ಈ ಲೋಕಕಂಟಕರು ಸಮನಾದಾರೇ? ಭವ್ಯಭಾರತದ ಸುಂದರ ಸ್ವಪ್ನಗಳನ್ನು ಎದೆಯಲ್ಲಿ ಅವಿತಿಟ್ಟುಕೊಂಡಿದ್ದ ವಾಸುದೇವರೆಡ್ಡಿಯವರ ಅಸಂಖ್ಯ ಕನಸುಗಳ ಪೈಕಿ ಒಂದು ಕನಸಿಗಾದರೂ ಸಂವಾದಿಯಾಗಬಲ್ಲ ರಾಷ್ಟ್ರಹಿತ ಕುರಿತ ಹೊಂಗನಸು ಈ ಕುಹಕಿಗಳ ಮಸ್ತಕಗಳಲ್ಲಿ ಎಂದಾದರೂ ಮೂಡೀತೆ? ಕೆಸರಿನಲ್ಲಿ ಅರಳಿದ ಕಮಲದಳಗಳ ಮೇಲೆ ಅದರ ಬುಡದಲ್ಲಿನ ಕೆಸರನ್ನು ಇಂದು ಮತ್ತೆ ಎರಚಲು ಪ್ರಯತ್ನಿಸುತ್ತಿರುವ ಇಂದಿನ ನೀಚ, ಕೀಚ ರಾಜಕಾರಣಿಗಳನ್ನು ನೋಡಿ ನಾನು ನನ್ನ ಆರು ವರ್ಷಗಳ ದೀರ್ಘಕಾಲದ, ಬಾಲ್ಯದ ಸುಂದರ ಸಂಜೆಗಳನ್ನು ಇಂತಹ ಮಾನಹೀನ ವ್ಯಕ್ತಿಗಳ ವೈಯಕ್ತಿಕ ಉದ್ದಾರದ ಸಲುವಾಗಿ ವ್ಯಥಿಸಿದೆನಲ್ಲಾ ಎನ್ನುವ ನೋವು ಬಹುವಾಗಿ ಕಾಡುತ್ತಿದೆ. ಅದೇ ಹೊತ್ತು ಇಂತಹ ಮಾನಮರ್ಯಾದೆ ಬಿಟ್ಟ ರಾಜಕಾರಣಿಗಳನ್ನು ಊರಲ್ಲಿ ರೆಡ್ಡಿಯವರು ನಡೆಸುತ್ತಿದ್ದ ಆರೆಸ್ಸೆಸ್ ಶಾಖೆಗೆ ಎಳೆದೊಯ್ದು ರಾಷ್ಟ್ರಸೇವೆಯ ಬಗ್ಗೆ ಅವರಿಗೆ ಅ ಆ ಇ ಈ ಪಾಠ ಮಾಡಬೇಕು, ಅವರ ಮನದಲ್ಲಿ ಕಿಂಚಿತ್ತಾದರೂ ರಾಷ್ಟ್ರಪ್ರಜ್ಞೆಯನ್ನು ಬಲವಂತವಾಗಿ ಹಿಡಿದು ತುರುಕಬೇಕು ಅನ್ನಿಸುತ್ತದೆ. ಇಂತಹ ಯೋಚನೆಗಳು ಕಾರ್ಯಸಾಧುವಲ್ಲ ಎನ್ನುವುದರ ಭಲೇಬಾತಿ ಅರಿವು ನನಗೂ ಇದೆ; ನೀವು ಏನನ್ನಾದರೂ ಮಾಡಿ, ಆದರೆ ವಾಸುದೇವರೆಡ್ಡಿಯಂತಹ ಪ್ರಭೃತಿಗಳು ಕಟ್ಟಿ ಬೆಳೆಸಿದ ಸಂಘಪರಿವಾರದ ಮಾನವನ್ನು ಹರಾಜು ಹಾಕುವಂತಹ ಕನಿಷ್ಠ, ನಿಸ್ಕೃಷ್ಠ ಕೆಲಸಕ್ಕೆ ಮಾತ್ರ ಕೈ ಹಾಕಬೇಡಿ ಎಂದು ಚೀರುತ್ತಾ, ಎರಡೂ ಕೈಗಳನ್ನು ಜೋಡಿಸಿ ನವಯುಗದ ಈ ರಾಕ್ಷಸ ಸಂತತಿಯನ್ನು ಬೇಡಿಕೊಳ್ಳಬೇಕು ಅನ್ನಿಸುತ್ತಿದೆ. ಅವರ ಪಾಷಾಣ ಮನಸ್ಸುಗಳು ನನ್ನ ಈ ಪ್ರಾಂಜಲವಾದ ಪ್ರಾರ್ಥನೆಗೆ ಕರಗದೇ ಹೋದಲ್ಲಿ ಅವರ ಕಾಲುಗಳಲ್ಲಿ ಬಿದ್ದು ಹೊರಳಾಡುತ್ತಾ, ದೈವಸನ್ನಿಧಿಯಲ್ಲಿ ನಡೆಸುವ ಉರುಳುಸೇವೆಯ ಮಾದರಿಯಲ್ಲಿ ಬಿನ್ನವಿಸಬೇಕು ಅನ್ನಿಸುತ್ತದೆ; ಅದೇಕೋ, ನಮ್ಮನ್ನು ಸದಾ ಉದ್ವಿಗ್ನತೆಗೆ ಒಳಗಾಗದಂತೆ ತಡೆಯುತ್ತಿದ್ದ ನನ್ನ ಪ್ರೀತಿಯ ಶಾಖಾಪ್ರಚಾರಕರು ಇಂದು ನನ್ನ ಈ ಭಾವನೆಗಳಿಗೆ ಬೆಂಬಲವಾಗಿ ನಿಂತು, ತಮ್ಮ ಮೌನದ ಮೂಲಕ ಸಮ್ಮತಿ ನೀಡುತ್ತಿದ್ದಾರೆ ಎಂದೆನಿಸುತ್ತಿದೆ.

Girl in a jacket
error: Content is protected !!