ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ..
ಅದೊಂದು ಭಾನುವಾರದ ದಿನ. ಭದ್ರಪ್ಪಶೆಟ್ಟಿ ಅಂಗಡಿಯಿಂದ ಖರೀದಿಸಿದ ಹತ್ತು ಸೇರುಗಳ ಮಂಡಕ್ಕಿ ಮೂಟೆಯನ್ನು ಹೆಗಲ ಮೇಲೆ ಹೇರಿಕೊಂಡು ಮನೆಯತ್ತ ಓಟಕಿತ್ತವನಿಗೆ ಒಂದು ಆತಂಕ ಬೆನ್ನುಬಿಡದೆ ಕಾಡುತ್ತಿತ್ತು. ಶೆಟ್ಟಿಯ ಅಂಗಡಿಯ ಗೋಡೆಯ ಮೇಲೆ ನೇತುಹಾಕಿದ್ದ ಗಡಿಯಾರ ಬೆಳಿಗ್ಗೆಯ ಒಂಬತ್ತನ್ನು ಮೀರಿದ ಸಮಯವನ್ನು ತೋರಿಸಿದ್ದು ನನ್ನ ಎದೆಬಡಿತವನ್ನು ಮತ್ತಷ್ಟು ಹೆಚ್ಚುಮಾಡಿತ್ತು. ಅವ್ವ ಮಾಡಲಿರುವ ಒಗ್ಗರಣೆಗೆ ಬೇಕಾದ ಮಂಡಕ್ಕಿ ತರಲು ಸುಮಾರು ಎಂಟೂವರೆಯ ವೇಳೆಗೇ ಆತುರಾತುರವಾಗಿ ಮನೆಯನ್ನು ತೊರೆದು ಮಂದಿನ ಹತ್ತೇ ನಿಮಿಷದಲ್ಲಿ ಅಂಗಡಿ ಸೇರಿದ್ದರೂ, ಆ ಹೊತ್ತಿಗಾಗಲೇ ಅತಿಯಾದ ಗಿರಾಕಿಗಳಿಂದ ಕಿಕ್ಕಿರಿದು ತುಂಬಿದ್ದ ಭದ್ರಪ್ಪಶೆಟ್ಟಿ ಅಂಗಡಿಯಲ್ಲಿ ಸುಮಾರು ಅರ್ಧಗಂಟೆಯ ಕಾಲ ಅನಿವಾರ್ಯವಾಗಿ ನಿಂತು ಕಾಯಲೇಬೇಕಾದ ಪರಿಸ್ಥಿತಿ ಒದಗಿಬಂದಿತ್ತು.
ಹಾಗೆಯೇ ನಿಂತಿದ್ದರೆ, ನನ್ನ ಸರದಿ ಬರುವ ವೇಳೆಗೆ ಇನ್ನೊಂದು ಅರ್ಧ ಗಂಟೆ ಕಳೆದುಹೋಗುತ್ತಿತ್ತೇನೋ, ಆದರೆ ನನ್ನ ಒಡಲ ಆತಂಕ ಅಂಗಡಿಯ ಗಲ್ಲಾಪೆಟ್ಟಿಗೆ ಮೇಲೆ ಕುಳಿತ, ಕಳೆದ ಮೂರು ವರ್ಷಗಳಿಂದ ನಮ್ಮ ತಂದೆಯ ಪಾಠದಮನೆಯ ಖಾಯಂ ಶಿಷ್ಯನಾದ ಗುಂಡೂರು ಶಿವಾನಂದನನ್ನು ಕಾಡಿಬೇಡುವಂತೆ ಮಾಡಿ, ಆದಷ್ಟು ತ್ವರಿತಗತಿಯ ಮಂಡಕ್ಕಿಯ ಉಪಲಬ್ಧತೆಯಲ್ಲಿ ಪರ್ಯಾವಸನ ಹೊಂದಿತ್ತು. ಇಂಟೂರ ವಾಸುದೇವರೆಡ್ಡಿಯವರ ಮನೆ ಮುಂದಿನಿಂದ ಮೊದಲುಗೊಳ್ಳುವ ರಸ್ತೆಯ ಇಳಿಜಾರಿನಲ್ಲಿ ಜೋರಾಗಿ ಓಡುತ್ತಾ, ಏದುಸಿರು ಬಿಡುತ್ತಾ ಬಂದವನು ರಾಮಪ್ಪಶೆಟ್ಟರ ಅಂಗಡಿಯ ಮುಂದಿನ ರಸ್ತೆ ತಲುಪಿರಬೇಕು ಅಷ್ಟೆ ಅನ್ನಿಸುತ್ತದೆ, ಅದೇ ಸಮಯಕ್ಕೆ ಸರಿಯಾಗಿ ಯಾವ ಕಾರಣಕ್ಕೆ ನಾನು ಆತಂಕಗೊಂಡಿದ್ದೇನೋ ಆ ಕಾರಣದ ಅನಾವರಣ ನನ್ನ ಕಣ್ಣ ಮುಂದೆ ತನ್ನೆಲ್ಲಾ ವೈಭೋಗದೊಂದಿಗೆ ಅರಳಲು ಮೊದಲಿಟ್ಟಿತ್ತು. ಹಾಳುಭಾವಿ ಕಡೆಯ ಕಚ್ಚಾರಸ್ತೆಯಿಂದ, ಕಲ್ಲಪ್ಪನ ತೇರನ್ನು ಇಟ್ಟ ಶೆಡ್ಡಿನ ಮುಂದಿನ ಟಾರುರಸ್ತೆಗೆ ಸೇರಿದ ಪಾಲಕ್ಕನ ಪಶುಸಂಪತ್ತಿನ ಮೆರವಣಿಗೆ ತನ್ನ ಎಂದಿನ ಗತ್ತುಗೈರತ್ತುಗಳೊಂದಿಗೆ ಬಸ್ ಸ್ಟ್ಯಾಂಡ್ ಕಡೆಗಿನ ಶೋಭಾಯಾತ್ರೆಯನ್ನು ಮುಂದುವರೆಸಲು ಮೊದಲಾಗಿತ್ತು. ಇದರಿಂದ ತೀರಾ ನಿರಾಶನಾದ ನಾನು ನನ್ನ ವೇಗವನ್ನು ಕಡಿಮೆಮಾಡಿ ಆದಷ್ಟು ನಿಧಾನಗತಿಯಿಂದ, ಕಾಲುಗಳನ್ನು ಎಳೆಯುತ್ತಾ ನಾಗಪ್ಪಶೆಟ್ಟಿ ಅಂಗಡಿಯ ಮುಂದಿನ ಚಪ್ಪರದ ಕೆಳಗೆ ಬಂದು ನಿಂತು, ಗತ್ಯಂತರವಿಲ್ಲದೆ ಪಾಲಕ್ಕನ ನಿತ್ಯದ ದನಗಳ ಮೆರವಣಿಗೆಗೆ ಸಾಕ್ಷಿಯಾದೆ.
ಅದು ಸುಮಾರು ಇನ್ನೂರಕ್ಕೂ ಮೀರಿದ ಊರದನಗಳ ಹಿಂಡಿನ ಶೋಭಾಯಾತ್ರೆ. ಎಮ್ಮೆ, ಆಕುಳ, ಚಿಕ್ಕಪುಟ್ಟ ಕರುಗಳು ಹೀಗೆಯೇ ಊರ ಸುಮಾರು ರೈತಾಪಿವರ್ಗದ ಮನೆಗಳ ಪಶುಸಂಪತ್ತನ್ನು ತನ್ನ ದಿನನಿತ್ಯದ ಕಾಯಕದಂತೆ ಮೇಯಿಸುವ ಸಲುವಾಗಿ ಪಾಲಕ್ಕ ಹೊಡೆದುಕೊಂಡು ಹೋಗುತ್ತಿರುವ ದೃಶ್ಯ ರಜಾದಿನಗಳಲ್ಲಿ ನನಗೆ ಬೆಳಗ್ಗಿನ ಸುಮಾರು ಒಂಬತ್ತು ಗಂಟೆಗೆ ತಪ್ಪದೇ ನೋಡಸಿಗುತ್ತಿದ್ದ ನೋಟವೈಭವ. ಬೆಳಿಗ್ಗೆ ಸುಮಾರು ಏಳು ಗಂಟೆಗೇ ಊರ ಮನೆಗಳಿಂದ ತನ್ನ ಪಶುಸಂಗ್ರಹಣೆಯ ಕಾರ್ಯವನ್ನು ಆರಂಭಿಸುತ್ತಿದ್ದ ಪಾಲಕ್ಕ ಸುಮಾರು ಒಂಬತ್ತು ಗಂಟೆಯ ವೇಳೆಗೆ ಅಷ್ಟೂ ದನಗಳನ್ನ ಒಂದೆಡೆ ಕೂಡಿಸಿ, ಒಂದು ದೊಡ್ಡಹಿಂಡಿನ ರೂಪದಲ್ಲಿ ಅವುಗಳನ್ನು ನಮ್ಮ ಮನೆಯ ಮುಂದಿನ ಮುಖ್ಯರಸ್ತೆಯಲ್ಲಿ ಹಾಯಿಸುತ್ತಾ ಬಸ್ ಸ್ಟ್ಯಾಂಡ್ ಮೂಲಕ ದುರ್ಗದ ರಸ್ತೆ ಕಡೆಗೋ, ಬಂಗಾರಕ್ಕನಹಳ್ಳಿ ರಸ್ತೆ ಕಡೆಗೋ, ಜಗಳೂರು ರಸ್ತೆಯ ಕಡೆಗೋ ಅಥವಾ ಕಡೇಬನಕಟ್ಟೆಯ ರಸ್ತೆಯ ಕಡೆಗೋ ಹೊಡೆದುಕೊಂಡು ಹೋಗುವುದು ಆ ಹೊತ್ತಿಗಾಗಲೇ ಜಂಗಮದಂತೆ ಗೊಂದಲಗಳ ಗೂಡಾಗಿರುತ್ತಿದ್ದ ಬಸ್ ಸ್ಟ್ಯಾಂಡ್ ನ ಸ್ಥಾವರದಂತಹ ಒಂದು ದಿನನಿತ್ಯದ ವಿದ್ಯಮಾನ. ಈ ದನಗಳ ಹಿಂಡು ಗುಳಪ್ಪನವರ ಮನೆಯ ಮುಂದಿನ ಮುಖ್ಯರಸ್ತೆಯ ತಿರುವನ್ನು ದಾಟಿ, ಅಲ್ಲಿಂದ ಕೇವಲ ಐವತ್ತು ಮೀಟರುಗಳಷ್ಟಿರಬಹುದಾದ ನಮ್ಮ ಮನೆಯ ಮುಂದಿನ ರಸ್ತೆಯನ್ನು ಹಾದು ಹೋಗಲು ಏನಿಲ್ಲವೆಂದರೂ ಸುಮಾರು ಹದಿನೈದು ನಿಮಿಷಗಳಷ್ಟು ಕಾಲವನ್ನು ತೆಗೆದುಕೊಳ್ಳುತ್ತಿತ್ತು. ಹೀಗಾಗಿ, ಈ ಹಿಂಡು ಮುಖ್ಯರಸ್ತೆಯನ್ನು ಸೇರುವ ಮೊದಲೇ ಮನೆ ತಲುಪಬೇಕೆಂದು ನಾನು ಮಾಡಿದ ಎಲ್ಲಾ ಸರ್ಕಸ್ ನೀರಿನಲ್ಲಿ ಹೋಮಮಾಡಿದ ರೀತಿಯಲ್ಲಿ ವ್ಯರ್ಥವೆನಿಸಲು ಮೂಲಕಾರಣವಾದ ಪಾಲಕ್ಕನ ದನಗಳ ಹಿಂಡು, ಹಿಂದಿನ ಬಹಳ ಸಲದಂತೆ ಇಂದೂ ನನ್ನನ್ನು ಹಿಂದಿಕ್ಕಿತ್ತು. ಇನ್ನೂ ಮುಂದಿನ ಸುಮಾರು ಹದಿನೈದು ನಿಮಿಷಗಳನ್ನು ನಾಗಪ್ಪಶೆಟ್ಟರ ಅಂಗಡಿಯ ಅಂಗಳದಲ್ಲಿ ಕಳೆಯಬೇಕಾಗಿ ಬಂದ ನಾನು ಅವ್ವ ಸಿಟ್ಟಾಗಿ ಬೈಯುತ್ತಾಳೆ ಎನ್ನುವ ಕಾರಣದಿಂದ ಆತಂಕಗೊಂಡಿದ್ದೆ. ತಡವಾಗಿ ಮನೆಗೆ ಬಂದ ನಾನು ಕೊಡುವ ಯಾವ ಸಬೂಬುಗಳನ್ನೂ ಒಪ್ಪದೆ “ಮುಖೇಡಿ, ಎಲ್ಲರನ್ನೂ ಮುಂದೆ ಬಿಟ್ಟು ಹಿಂದೆ ನಿಂತಿರುತ್ತೀಯಾ, ಗ್ರಾಹಕರ ಗುಂಪನ್ನು ಸೀಳಿ, ಮುನ್ನುಗ್ಗಿ ಜಲ್ದಿ ಮಂಡಕ್ಕಿ ತರಲು ನಿನಗೇನು ದಾಡಿ?” ಎಂದು ನನ್ನ ಮುಖಕ್ಕೆ ಮಂಗಳಾರತಿ ಎತ್ತುವ ಅವ್ವನಿಂದ ಬೆಳ್ಳಂಬೆಳಿಗ್ಗೆ ವಿನಾಃಕಾರಣ ಬೈಸಿಕೊಳ್ಳುವ ಮನಃಸ್ಥಿತಿಯಲ್ಲಿ ನಾನಿರಲಿಲ್ಲ. ಆದರೂ ಪಾಲಕ್ಕನ ದನಗಳ ಹಿಂಡು ನನಗೆ ಕೊಟ್ಟ ಬೆಳಗಿನ ಬೈಗುಳಗಳ ಈ ಉಡುಗೊರೆಯನ್ನು ನಾನು ನಮ್ರಮನಸ್ಕನಾಗಿ ಸ್ವೀಕರಿಸಲೇಬೇಕಿತ್ತು.
ದನಗಳ ಹಿಂಡಿನ ಕಡೆ ಮುಖ ಮಾಡಿ ನಿಂತವನು, ಪಾಲಕ್ಕನಿಗಾಗಿ ಹುಡುಕತೊಡಗಿದೆ. ಹಿಂಡಿನಲ್ಲಿ ಎಲ್ಲಿಯೂ ತೋರಿಬರದ ಅವಳಿಗಾಗಿ ಹಿಂಡಿನ ನಾಲ್ಕೂ ದಿಕ್ಕಿಗೆ ಕಣ್ಣಾಯಿಸಿದವನಿಗೆ ಅವಳು ರಾಯ್ನಲ್ಲಿಯವರ ಥಳಾಸದಿಂದ ತಿಪ್ಪಜ್ಜಿಯವರ ದನಗಳನ್ನು ಹೊಡೆದುಕೊಂಡು ನಿಧಾನವಾಗಿ ಮುಖ್ಯರಸ್ತೆಯನ್ನು ಸೇರುತ್ತಾ, ಅವುಗಳನ್ನು ಹಿಂಡಿನ ಭಾಗವಾಗಿಸುವ ಪ್ರಯತ್ನದಲ್ಲಿ ತೊಡಗಿದ್ದದ್ದು ಕಂಡುಬಂತು. ಕೋಲಿಗೆ ಸೀರೆ ಉಡಿಸಿದರೆ ಹೇಗೆ ಕಂಡುಬರುವುದೋ ಥೇಟ್ ಹಾಗೆಯೇ ದೂರಕ್ಕೆ ಕಂಡು ಬಂದ ಪಾಲಕ್ಕನ ಮೈಯಲ್ಲಿ ಮಾಂಸಖಂಡಗಳೇ ಇದ್ದಂತೆ ತೋರಲಿಲ್ಲ. ಅಷ್ಟೊಂದು ಸಪೂರದೇಹದ ಆಕೆ ನನ್ನಂತಹ ಬಾಲಕನ ಎದೆಯಲ್ಲಿ ಭೀತಿ ಮೂಡಿಸುವಷ್ಟು ಮಟ್ಟಿಗೆ ಸಣ್ಣಗೆ, ಹಂಚಿನಕಡ್ಡಿಯಂತಿದ್ದು, ಗೆಳೆಯ ಸತ್ಯಾನಂದನ ಒಟ್ಟಿಗೆ, ಹೈಸ್ಕೂಲು ಮೇಷ್ಟ್ರಾಗಿದ್ದ ಅವನ ತಂದೆ ವೃಷಭೇಂದ್ರಪ್ಪಸ್ವಾಮಿಗಳ, ಸ್ಕೂಲಿನ ಜೀವಶಾಸ್ತ್ರದ ಪ್ರಯೋಗಶಾಲೆಯ ಗಾಜಿನ ಕಪಾಟೊಂದರಲ್ಲಿ ತೂಗಿಬಿಟ್ಟಿದ್ದ, ಮನುಷ್ಯನ ಅಸ್ಥಿಪಂಜರದ ನೆನಪನ್ನು ಬೇಡಬೇಡವೆಂದರೂ ನನ್ನ ಕಣ್ಣ ಮುಂದೆ ಸುಳಿಯುವ ಹಾಗೆ ಮಾಡಿತ್ತು. ಹೆಣ್ಣುಮಕ್ಕಳಿಗೆ ಸ್ವಲ್ಪ ಎತ್ತರ ಎಂದೇ ಹೇಳಬೇಕಾದ ನಿಲುವಿನಿಂದ ಕೂಡಿದ ಪಾಲಕ್ಕ ಅಚ್ಚಕಪ್ಪು ಮೈಬಣ್ಣದಿಂದ ಕೂಡಿ, ಕಪ್ಪುಬಣ್ಣದ ಪರ್ಯಾಯ ಪದದ ರೂಪದಲ್ಲಿ ಕಂಗೊಳಿಸುತ್ತಿದ್ದಳು. ತನ್ನ ಉದ್ದನೆಯ, ಬಿಳಿಬಣ್ಣದ ಬಾಚುಹಲ್ಲುಗಳು ಮತ್ತು ಚೂಪಾದ ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತಾ ಜೋರಾಗಿಯೇ ನಗುತ್ತಿದ್ದ ಪಾಲಕ್ಕ ತನ್ನ ಈ ಅವತಾರದಲ್ಲಿ ನಿನ್ನೆ ತಾನೇ ನಾನು ಓದಿದ ರಾಮಕೃಷ್ಣಪರಮಹಂಸರನ್ನು ಕುರಿತಾದ ಪುಸ್ತಕದ ಮೊದಲನೇ ಪುಟದಲ್ಲಿ ಅಚ್ಚಾಗಿದ್ದ ದಕ್ಷಿಣೇಶ್ವರದ ಮಹಾಕಾಳಿಯ ವರ್ಣಚಿತ್ರದ ನೆನಪನ್ನು ನನ್ನಲ್ಲಿ ಉಜಾಗರಗೊಳಿಸಿದಳು. ಪಾಲಕ್ಕನ ಬಳಿಸಾರಲೂ ಹೆದರುತ್ತಿದ್ದ ನಾನು ನಿಜವಾಗಿ ಆತಂಕಿತನಾಗಿದ್ದು ಪಾಲಕ್ಕನ ದನದ ಹಿಂಡಿನಿಂದಲೋ ಅಥವಾ ಪಾಲಕ್ಕನಿಂದಲೋ ಎನ್ನುವುದರ ಜಿಜ್ಞಾಸೆಯಲ್ಲಿಯೇ ಮುಂದಿನ ಹತ್ತು ನಿಮಿಷಗಳ ಕಾಲವನ್ನು ಕಳೆದೆ. ದನಗಳ ಹಿಂಡಿನ ಸಮೇತ ಪಾಲಕ್ಕ ನಮ್ಮ ಮನೆಯನ್ನು ದಾಟಿದ ನಂತರವೇ ನನ್ನ ಕಾಲುಗಳಿಗೆ ಜೀವತುಂಬಿ ಮನೆ ಸೇರಿದವನು, ತಡವಾಗಿ ಮನೆ ಸೇರಿದ ಸಂಬಂಧ ಅವ್ವನಿಗೆ ಎಷ್ಟೇ ಸಮಜಾಯಿಷಿಕೊಟ್ಟರೂ, ಅದು ಗೋರ್ಕಲ್ಲ ಮೇಲೆ ಸುರಿವ ಮಳೆಯಂತೆ ಭಾಸವಾಗಿ, ಅವಳ ಬೈಗುಳಗಳ ಬಾಣಗಳಿಂದ ತಪ್ಪಿಸಿಕೊಳ್ಳುವ ಯಾವೊಂದು ಮಾರ್ಗೋಪಾಯಗಳನ್ನೂ ಒದಗಿಸಿಕೊಡಲಿಲ್ಲ.
ಮಂಡಕ್ಕಿ ಒಗ್ಗರಣೆ ನನಗೆ ಅತ್ಯಂತ ಪ್ರೀತಿಪಾತ್ರವಾದ ತಿಂಡಿ. ಮೂರು ಸಲ ಅವ್ವ ಮಾಡಿದ ಒಗ್ಗರಣೆಯನ್ನು ಕೇಳಿಕೇಳಿ ಬಡಿಸಿಕೊಂಡು ಸವಿದವನು ನನ್ನ ರಜಾದಿನಗಳ ಹೆಚ್ಚುವರಿ ಸೇವೆಗೆ ಹಾಜರಾಗುವ ನಿಟ್ಟಿನಲ್ಲಿ ಕೊಟ್ಟಿಗೆಯಲ್ಲಿದ್ದ ಒಂದು ಎಮ್ಮೆ ಮತ್ತು ಅದರ ಕರುವನ್ನು ಮೇಯಿಸಲೆಂದು ದುರ್ಗದ ರಸ್ತೆಯ ನಮ್ಮ ಹೊಲದ ಕಡೆಗೆ ಹೊಡೆದುಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಭಾರವಾದ ಹೆಜ್ಜೆಗಳನ್ನು ಇಡುತ್ತಾ ಹೊರಟೆ. ನನಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಹುಚ್ಚು ತುಸು ಹೆಚ್ಚಾಗಿಯೇ ಇದ್ದು ನನ್ನ ತಲೆಯ ಮೇಲೆ ಸವಾರಿ ಮಾಡುತ್ತಿತ್ತು. ಅವತ್ತು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಸರಣಿಯ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯವೊಂದು ಶುರುವಾಗಲಿಕ್ಕೆ ಕೇವಲ ಹತ್ತೇ ನಿಮಿಷಗಳು ಬಾಕಿ ಇದ್ದದ್ದು. ಪಂದ್ಯದ ರೇಡಿಯೋ ಕಾಮೆಂಟರಿ ಕೇಳುತ್ತಾ ದಿನವನ್ನು ಕಳೆಯಬೇಕು ಎಂದು ತಿಂಗಳ ಮೊದಲೇ ಅಂದುಕೊಂಡವನು ಅದು ಭಾನುವಾರದ ದಿನ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿರಲಿಲ್ಲ. ಭಾನುವಾರ ಹಾಗೂ ಉಳಿದ ರಜಾದಿನಗಳಂದು ಅವ್ವ ಎಮ್ಮೆ ಕಾಯುವ ಕೆಲಸವನ್ನು ನನ್ನ ಬೆನ್ನಿಗೇ ಅಂಟುಹಾಕಿದ್ದಳು. ವಾರದ ಉಳಿದ ದಿನಗಳಲ್ಲಿ, ಊರ ಉಳಿದವರಂತೆ ಪಾಲಕ್ಕನ ಸುಪದ್ರಿಗೆ ತನ್ನ ಎಮ್ಮೆ, ಕರುವನ್ನು ಒಪ್ಪಿಸುತ್ತಿದ್ದ ಅವ್ವ ನನ್ನ ಶಾಲೆ ಇಲ್ಲದ ದಿನಗಳಂದು ನಾನೇ ದನಗಳನ್ನು ಕಾಯಬೇಕು ಎನ್ನುವ ಅಲಿಖಿತ ನಿಯಮವನ್ನು ಜಾರಿಗೊಳಿಸಿದ್ದಳು. ಅವ್ವನ, ತಾನು ಹಿಡಿದ ಹಠವನ್ನು ಶತಾಯಗತಾಯ ನಡೆಸಿಯೇ ತೀರುತ್ತಿದ್ದ ಸ್ವಭಾವದ ಪರಿಚಯ ಆ ವಯ್ಯಸ್ಸಿಗಾಗಲೇ ನನ್ನ ಮನದಲ್ಲಿ ಅಚ್ಚೊತ್ತಿತ್ತು. ಹಾಗಾಗಿ ವ್ಯರ್ಥವಾಗಿ ಅವಳೊಂದಿಗೆ ವಾಗ್ವಾದಕ್ಕೆ ಇಳಿದು ಸಮಯವನ್ನು ಹಾಳುಮಾಡಿಕೊಳ್ಳಲು ಒಪ್ಪದ ನಾನು ಮೌನವಾಗಿ ಸೋಲಪ್ಪಿಕೊಂಡು ದನಕಾಯುವುದಕ್ಕೆ ಹೋಗುವ ಸಲುವಾಗಿ ತಯಾರಾಗಿ ನಿಂತಿದ್ದೆ. ನಮ್ಮ ಮನೆಯ ದನಗಳನ್ನು ಹೊಡೆದುಕೊಂಡು ಇನ್ನೂ ಹೈಸ್ಕೂಲು ದಾಟಿದ್ದೆನೋ ಇಲ್ಲವೋ ನನ್ನ ಮುಂದೆ ಒಂದು ಫರ್ಲಾಂಗು ದೂರದಲ್ಲಿ ಸಾಗುತ್ತಿದ್ದ ಪಾಲಕ್ಕನ ದನಗಳ ಹಿಂಡು ನನ್ನ ಕಣ್ಣಿಗೆ ಬಿದ್ದಿತು. ಅರೆ, ಇದೇನಿದು? ಪಾಲಕ್ಕ ಇಂದು ತನ್ನ ಹಿಂಡನ್ನು ಈ ರಸ್ತೆಯಲ್ಲಿಯೇ ಮೇಯಿಸುತ್ತಿದ್ದಾಳಲ್ಲ? ಇವಳ ಹಿಂಡನ್ನು ದಾಟಿ ನಮ್ಮ ಹೊಲವನ್ನು ಹೇಗೆ ಸೇರಿಕೊಳ್ಳುವುದು? ಎನ್ನುವ ಸಂಕಟ ನನ್ನಲ್ಲಿ ಉಂಟಾಗಲು, ಹೈಸ್ಕೂಲು ಎದುರಿಗೆ, ರಸ್ತೆಯ ಮತ್ತೊಂದು ಬದಿಗಿದ್ದ ಥಳಾಸದ ಗೌಡರ ಎರಡೂವರೆ ಎಕರೆಯ ಜಮೀನಿನಲ್ಲಿಯೇ ಇಂದು ನನ್ನ ದನಗಳನ್ನು ಮೇಯಿಸುತ್ತೇನೆ ಎನ್ನುವ ನಿಶ್ಚಯಮಾಡಿದೆ.
ಪಾಲಕ್ಕ, ಊರದನಗಳನ್ನು ಮೇಯಿಸುವ ಕೆಲಸ ಪ್ರಾರಂಭಿಸಿ ದಶಕಗಳೇ ಉರುಳಿದ್ದವು ಎನಿಸುತ್ತದೆ. ಅವಳ ಹೊಟ್ಟೆ ಹೊರೆಯುವ ಏಕೈಕ ಸಾಧನವಾದ ಈ ಕಾಯಕ ಊರಜನರ ಮನಸ್ಸಿನಲ್ಲಿ ಎಷ್ಟರಮಟ್ಟಿಗೆ ನೆಲೆಯೂರಿತ್ತು ಎಂದರೆ ಮನೆಯಲ್ಲಿ ದನಕಾಯುವ ವ್ಯಕ್ತಿ ಅಥವಾ ಇದೇ ಕೆಲಸಕ್ಕಾಗಿ ನಿಯೋಜಿತನಾಗಿದ್ದ ಸಂಬಳದ ಹುಡುಗನ ಅನುಪಸ್ಥಿತಿ ಎದುರಾದ ಪಕ್ಷದಲ್ಲಿ ಪಾಲಕ್ಕನಿಗೆ ತಾತ್ಕಾಲಿಕ ರೂಪದಲ್ಲಿ ದನಗಳನ್ನು ವಹಿಸಬೇಕು ಎನ್ನುವ ಚಿಂತನೆ ಯಾಂತ್ರಿಕವಾಗಿ ಅವರ ಮನಗಳಲ್ಲಿ ಮೂಡುತ್ತಿತ್ತು. ಇದೇ ಕಾರಣಕ್ಕಾಗಿ, ಸಾಧಾರಣವಾಗಿ ಇನ್ನೂರರ ಆಜುಬಾಜಿನಲ್ಲಿರುತ್ತಿದ್ದ ಪಾಲಕ್ಕನ ದನಗಣತಿ ಆಗಾಗ ಮುನ್ನೂರರ ಗಡಿಯನ್ನೂ ದಾಟಿ ಮುಂದುವರೆಯುತ್ತಿತ್ತು. ಒಂದು ದನಕ್ಕೆ ತಿಂಗಳಿಗೆ ಇಷ್ಟು ಹಣ ಎಂದು ನಿಗದಿ ಮಾಡಿದ್ದ ಪಾಲಕ್ಕ ಕರುಗಳಿಗೆ ಪ್ರತ್ಯೇಕವಾದ ಹಣವನ್ನು ವಸೂಲಿ ಮಾಡುತ್ತಿದ್ದಳು. ಮೂರು ದೊಡ್ಡ ದನಗಳನ್ನು ಬಿಟ್ಟರೆ ಒಂದು ಕರುವನ್ನು ಹಣ ತೆಗೆದುಕೊಳ್ಳದೇ ತಿಂಗಳ ಪೂರ್ತಿ ಕಾಯುತ್ತಿದ್ದ ಪಾಲಕ್ಕ ತನ್ನ ಕೆಲಸವನ್ನು ಅತೀ ಶ್ರದ್ದಾಪೂರ್ವಕವಾಗಿ ನೆರವೇರಿಸುತ್ತಿದ್ದಳು ಎನ್ನುವುದು ವರ್ಷದ ಯಾವ ಕಾಲದಲ್ಲೂ ಇನ್ನೂರರ ನಿಮ್ನಗಡಿಯ ಉಲ್ಲಂಘನೆ ಮಾಡದ ಪಾಲಕ್ಕ ಕಾಯುವ ದನಗಳ ಗಣತಿಯೇ ಸಾರಿ ಹೇಳುತ್ತಿತ್ತು.
ದನಗಳನ್ನು ಮೇಯಿಸಲು ಹೊರಟಾಗ ಸದಾ ತನ್ನ ಸೀರೆಯ ಮಡಿಲಲ್ಲಿ ಒಂದು ದೊಡ್ಡಗಂಟನ್ನು ಇಟ್ಟುಕೊಂಡೇ ಹೊರಡುತ್ತಿದ್ದ ಪಾಲಕ್ಕನ ಗಂಟಿನ ರಹಸ್ಯ ನನ್ನಲ್ಲಿ ಬಹಳ ದೊಡ್ಡರೂಪದ ಆಶ್ಚರ್ಯವನ್ನು ಹುಟ್ಟು ಹಾಕಿ ವರುಷಗಳೇ ಉರುಳಿದ್ದವು. ಅನೇಕ ದಿನಗಳ ಕಾಲ ಪಾಲಕ್ಕ ಈ ಗಂಟಿನಲ್ಲಿ ಏನನ್ನು ಮಡುಗಿಕೊಂಡಿದ್ದಾಳು? ಎನ್ನುವ ನನ್ನ ಎಡಬಿಡದ ಜಿಜ್ಞಾಸೆಗೆ ಉತ್ತರವೇ ಸಿಕ್ಕಿರಲಿಲ್ಲ. ಅಷ್ಟೊಂದು ಜತನವಾಗಿ, ಜೋಪಾನದಿಂದ, ಮಗುವನ್ನು ಮಡಿಲಲ್ಲಿ ಹೊತ್ತ ತಾಯಿಯಂತೆ ತನ್ನ ಒಡಲಿನ ಗಂಟನ್ನು ಗುಟ್ಟಾಗಿ ಕಾಪಾಡುತ್ತಿದ್ದ ಪಾಲಕ್ಕನ ಸಿರಿಗಂಟು ನನ್ನ ಪಾಲಿನ ಚಿದಂಬರರಹಸ್ಯವಾಗಿಯೇ ಉಳಿದಿತ್ತು. ಪಾಲಕ್ಕನ ಪೂರ್ವಾಪರಗಳು ನನಗೆ ಅಂತಹಾ ಪರಿಚಿತವಾದವುಗಳೇನಲ್ಲ. ನಾಯಕರ ಪೈಕಿಯ ಹೆಣ್ಣುಮಗಳಾದ ಪಾಲಕ್ಕ ನಲ್ವತ್ತರ ವಯಸ್ಸನ್ನು ದಾಟಿದರೂ ಅವಿವಾಹಿತೆಯಾಗಿಯೆ ಉಳಿದಿದ್ದಾಕೆ. ಊರ ನಾಯಕರ ಓಣಿಯ ಸಂದಿಯೊಂದರಲ್ಲಿ ಸಣ್ಣ, ಈಚಲು ಗರಿಗಳ ಗುಡಿಸಿಲಿನ ತಾವೊಂದರಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ಪಾಲಕ್ಕ “ಕಡುಬಡವಿ” ಎಂದೇ ಗುರುತಿಸಲ್ಪಟ್ಟವಳು. ವರ್ಷದ ಎಲ್ಲಾ ಕಾಲಗಳಲ್ಲಿಯೂ ತನ್ನ ದನಕಾಯುವ ಕೆಲಸವನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದ ಪಾಲಕ್ಕ ತನ್ನ ಕೆಲಸಕ್ಕೆ ಗೈರುಹಾಜರಾದ ದಿನಗಳೇ ಇರಲಿಲ್ಲ ಎನ್ನಬಹುದು. ಮೈ ಹುಷಾರಿಲ್ಲದೆ ರೋಗರುಜಿನಗಳು ಕಾಡಿ ಹಾಸಿಗೆ ಹಿಡಿಯುವಂತಹ ಮಟ್ಟದ ಜಡ್ಡು ಬೆನ್ನುಬಿದ್ದ ಹೊತ್ತೂ ತನ್ನ ದೈನಂದಿನ, ಮನೆಮನೆಗಳಿಗೆ ತೆರಳಿ ದನಗಳನ್ನು ಸಂಗ್ರಹಿಸಿ, ಅವುಗಳನ್ನು ಊರ ನಾಲ್ಕೂ ದಿಕ್ಕಿನ ಹೊಲಗಳ ಬದುಗಳಲ್ಲಿ ಮೇಯಿಸಿಕೊಂಡು, ಸಂಜೆಯ ಹೊತ್ತಿಗೆ, ಊರ ರಸ್ತೆಗಳ ಗೋಧೂಳಿಗೆ ಕಾರಣೀಕರ್ತಳಾಗುತ್ತಿದ್ದ ಪಾಲಕ್ಕ ತನ್ನ ಕಾಯಕಕ್ಕೆ ಎಂದೂ ವಿದಾಯ ಹೇಳದೆ ಇರುತ್ತಿದ್ದಕ್ಕೆ ಕಾರಣವಾದದ್ದು ಆಕೆಯ ಕೆಲಸದಲ್ಲಿನ ಶ್ರದ್ಧೆಯೋ, ಊರ ರಾಸುಗಳು ಹಸಿವಿನಿಂದ ಬಳಲಿ ಬೆಂಡಾದಾವು ಎನ್ನುವ ಅನುಕಂಪವೋ, ಇಂದು ದನಗಳ ಹಿಂಡನ್ನು ಹೊಡೆದುಕೊಂಡು ಹೋಗದೇ ಇದ್ದಲ್ಲಿ ತಿಂಗಳ ವರ್ತನೆಯ ಹಣದಲ್ಲಿ ಜಾನುವಾರುಗಳ ಮಾಲೀಕರು ಕಡಿತ ಮಾಡಿಯಾರು ಎನ್ನುವ ಬೇಗುದಿಯ ದೆಸೆಯೋ ಅಥವಾ ಈ ಎಲ್ಲಾ ಕಾರಣಗಳನ್ನೂ ಹೊರತಾಗಿಸಿ ನನ್ನ ಮನಸ್ಸಿಗೆ ಅಮೂರ್ತವಾಗಿಯೇ ಉಳಿದ ಮತ್ಯಾವುದೋ ಕಾರಣದಿಂದಲೋ ಎಂದು ನಿಖರವಾಗಿ ಗುರುತಿಸುವಷ್ಟು ಪ್ರಬುದ್ಧ ಮನಸ್ಸಿನ ಒಡೆಯ ನಾನಾಗಿರಲಿಲ್ಲ.
ಪಾಲಕ್ಕನ ಸಿರಿಒಡಲ ರಹಸ್ಯವನ್ನು ಬೇಧಿಸಲು ಇವತ್ತು ನನಗೆ ಸುವರ್ಣಾವಕಾಶವೊಂದು ಬೇಡದೇ ಒದಗಿ ಬಂದಿತ್ತು. ದನಗಳನ್ನು ಮೇಯಲು ಬಿಟ್ಟು, ಅನಿತ ದೂರದಲ್ಲಿದ್ದ ಜೂಗಣ್ಣನವರ ತಿಪ್ಪಣ್ಣಮೇಷ್ಟ್ರ ಹೊಲ ಹೊಕ್ಕು ಅಲ್ಲಿ ಬಗ್ಗಿ ಏಳುತ್ತಾ, ಏನೋ ಗಹನ ಕೆಲಸವನ್ನು ಸಾಧಿಸುತ್ತಿದ್ದಂತೆ ತೋರುತ್ತಿದ್ದ ಪಾಲಕ್ಕ ನನ್ನ ಕಣ್ಣಿಗೆ ಬಿದ್ದಳು. ಪಾಲಕ್ಕನ ಬಗ್ಗೆ ಒಂದು ಭಯಮಿಶ್ರಿತ ಕುತೂಹಲವನ್ನು ತಳೆದಿದ್ದ ನನಗೆ ಆಕೆಯ ಅತಿಸಮೀಪ ಸುಳಿದು ಏನು ಮಾಡುತ್ತಿದ್ದಾಳೆ ಎನ್ನುವುದನ್ನು ಅರಿಯುವ ಧೈರ್ಯವಂತೂ ಮೊದಲೇ ಇರಲಿಲ್ಲ. ಹೀಗಾಗಿ ಅಲ್ಲಿಯೇ ಇದ್ದ ಒಂದು ಬೇವಿನಮರದ ಬಡ್ಡೆಯ ಹಿಂದೆ ಅವಿತು ನಿಂತು ಪಾಲಕ್ಕ ತನ್ನ ದನಗಳನ್ನು ಮೇಯಲು ಬಿಟ್ಟು, ನಿರಾತಂಕವಾಗಿ ಹೊಲದ ಬದಿಯಲ್ಲಿ ಎಂತಹ ಘನಕಾರ್ಯ ಮಾಡುತ್ತಿರಬಹುದು? ಎನ್ನುವ ನನ್ನ ಕುತೂಹಲದ ತೃಷೆಯನ್ನು ಇಂಗಿಸುವ ಕೆಲಸಕ್ಕೆ ಮುಂದಾದೆ. ತನ್ನ ಮಡಿಲ ಗಂಟನ್ನು ಸ್ವಲ್ಪವೇ ತೆರೆದು ಅಲ್ಲಿ ಇದ್ದ ಎಂತಹುದೋ ವಸ್ತುವನ್ನು ತೆಗೆದು ಮಣ್ಣಿನಲ್ಲಿ ಹುದುಗಿಸಿಡುವ ಪಾಲಕ್ಕನ ಕೆಲಸ ನನ್ನ ಕುತೂಹಲವನ್ನು ಇಮ್ಮಡಿಸಿತು. ಕಡೆಗೂ ನನ್ನ ಎಲ್ಲಾ ದೈರ್ಯವನ್ನು ಒಗ್ಗೂಡಿಸಿ ಪಾಲಕ್ಕನ ಬಳಿ ಸಾರಿದವನಿಗೆ ಅವಳು ತನ್ನ ಒಡಲಿನ ಗಂಟಿನಿಂದ, ಒಂದೊಂದರಂತೆ ಬೀಜಗಳನ್ನು ಹೊರತೆಗೆದು, ತನ್ನ ಸೊಂಟಕ್ಕೆ ಸಿಕ್ಕಿಸಿದ್ದ ಕುಡುಗೋಲಿನ ಸಹಾಯದಿಂದ ಸಣ್ಣಸಣ್ಣ ಕುಣಿಗಳನ್ನು ಮಾಡಿ, ಅದರಲ್ಲಿ ಬೀಜವನ್ನು ಇಟ್ಟು ಮಣ್ಣನ್ನು ಮುಚ್ಚುತ್ತಿದ್ದ ತದೇಕಚಿತ್ತದ ಕಾಯಕಕ್ಕೆ ಸಾಕ್ಷಿಯಾದೆ. ಹೀಗೆ ಗಂಟೆಗಳ ಕಾಲ ಹೊಲದ ಬದಿಯ ಸುತ್ತಲೂ ಬೀಜಗಳನ್ನು ನೆಡುತ್ತಾ ಸಾಗಿದ್ದ ಪಾಲಕ್ಕ ಆಗೊಮ್ಮೆ ಈಗೊಮ್ಮೆ ತನ್ನ ದನಗಳ ಹಿಂಡಿನೆಡೆಗೆ ದೃಷ್ಟಿಹರಿಸುತ್ತಲೇ ತನ್ನ ಕಾರ್ಯವನ್ನು ಮುಂದುವರೆಸಿದ್ದಳು
. ಮಧ್ಯಾಹ್ನ ಮೂರರ ವೇಳೆಗೆ ದುರ್ಗದ ಕಡೆಯಿಂದ ಬಂದ ಗೀತಾಂಜನೇಯ ಬಸ್ಸು ಊರ ಕಡೆಗೆ ಸಾಗಲು ತನ್ನ ಕೆಲಸಕ್ಕೆ ತಾತ್ಕಾಲಿಕ ವಿರಾಮವನ್ನು ನೀಡಿ, ಬೇವಿನಮರದ ಕೊಂಬೆಗೆ ನೇತು ಹಾಕಿದ್ದ ತನ್ನ ಬುತ್ತಿಯ ಗಂಟನ್ನು ಕೆಳಗಿಳಿಸಿ ಮರದ ನೆರಳಿನಲ್ಲಿ ಬುಡಕ್ಕೆ ಒರಗಿ ಕುಳಿತು ತನ್ನ ಭೋಜನವನ್ನು ಸವಿಯುವುದಕ್ಕೆ ಮುಂದಾದಳು. ಅಲ್ಲಿಯೇ ಇದ್ದ ನನ್ನನ್ನು ನೋಡಿ “ನೀನು ಗೇಟಿನ ಗೌರಮ್ಮನ ಮೊಮ್ಮಗ ಅಲ್ಲವೇನೋ? ಭಾನುವಾರ ನಿನ್ನ ಅಜ್ಜಿ ನನಗೆ ಎಮ್ಮೆ ಮೇಯಿಸುವುದಕ್ಕೇ ಬಿಡುವುದಿಲ್ಲ. ತಿಂಗಳ ನಾಲ್ಕು ದಿನಗಳ ಹಣವನ್ನು ಉಳಿಸುವ ನಿನ್ನ ಅಜ್ಜಿಯ ಬುದ್ದಿ ನನಗೆ ಗೊತ್ತಿದೆ. ಬಾ, ರೊಟ್ಟಿ ತಿನ್ನು” ಎಂದು ನಗುತ್ತಲೇ ನುಡಿದರೂ ಅವಳ ಉದ್ದನೆಯ ಚೂಪಾದ ಕೋರೆಹಲ್ಲುಗಳು ಹೋದ ವರ್ಷದ ಬೇಸಗೆಯ ಬಯಲಾಟದಲ್ಲಿ ಕುಂಬಾರ ರುದ್ರಣ್ಣನ ಶೂರ್ಪನಖಿ ಪಾತ್ರದ ಕೋರೆಹಲ್ಲುಗಳ ನೆನಪನ್ನು ನನ್ನಲ್ಲಿ ಮೂಡಿಸಿದಂತಾಗಿ ಕೊಂಚ ಗಲಿಬಿಲಿಗೊಂಡ ನಾನು “ಬೇಡ ಪಾಲಕ್ಕ, ನಾನು ಈಗ ಮನೆಗೆ ಹೋಗಿ ಊಟ ಮಾಡುತ್ತೇನೆ” ಎಂದು ತೊದಲುತ್ತಾ ನುಡಿದೆ. “ನಾನೇನು ನಿನ್ನ ಅಜ್ಜಿಗೆ ಹೇಳುವುದಿಲ್ಲ, ಬಾ, ಸ್ವಲ್ಪ ರೊಟ್ಟಿಯ ತುಂಡನ್ನು ಕೊಡುತ್ತೇನೆ, ಈಗಾಗಲೇ ಸಮಯ ಮೂರು ಗಂಟೆ ದಾಟಿದೆ, ನಿನ್ನ ಹೊಟ್ಟೆಯೂ ಹಸಿದಿರಬೇಕಲ್ಲಾ” ಎನ್ನುವ ಮಾತೃಭರಿತ ವಾತ್ಸಲ್ಯದಿಂದ ಪಾಲಕ್ಕ ಆಮಂತ್ರಿಸಲು, ಆಕೆಯ ಧ್ವನಿಯಲ್ಲಿದ್ದ ಆರ್ದತೆಯನ್ನು ನಾನು ತಿರಸ್ಕರಿಸದಾದೆ. ಅರ್ಧರೊಟ್ಟಿಗೆ ಧಾರಾಳವಾಗಿ ಕೆಂಪುಚಟ್ನಿಯನ್ನು ಹಚ್ಚಿ ನನಗೆ ಕೊಟ್ಟ ಪಾಲಕ್ಕ ತನ್ನ ಒಡಲಿನ ಗಂಟನ್ನು ಜೋಪಾನವಾಗಿ ಬಿಚ್ಚಿ ಅಲ್ಲಿನ ಐದಾರು ಸಿವುಡಗಳಷ್ಟಿದ್ದ ಸಸಿಗಳನ್ನು ಹೊರತೆಗೆದು ತನ್ನ ಒಂದು ಬದಿಗೆ ಇಟ್ಟು ಆ ಸಸಿಗಳ ಮೇಲೆ ತಾನು ಹೊತ್ತು ತಂದಿದ್ದ ಮಡಿಕೆಯ ನೀರನ್ನು ಚಿಮುಕಿಸಿದಳು. ನಂತರದಲ್ಲಿ ತಾನೂ ಕೆಂಪುಚಟ್ನಿ ಹಚ್ಚಿದ ರೊಟ್ಟಿಯನ್ನು ಒಂದು ಉಳಾಗಡ್ಡೆ ತುಂಡಿನೊಂದಿಗೆ ಸವಿಯಲು ಶುರುಮಾಡಿದಳು. ಪಾಲಕ್ಕ ಕೊಟ್ಟ ಜೋಳದರೊಟ್ಟಿ, ಕೆಂಪುಚಟ್ನಿ ನನಗೆ ಅಮೃತಸಮಾನವಾಗಿ ರುಚಿಸಲು ” ಪಾಲಕ್ಕ, ಇನ್ನೊಂದು ಅರ್ಧರೊಟ್ಟಿ ಕೊಡುತ್ತೀಯಾ?” ಎಂದು ನನಗರಿವಿಲ್ಲದಂತೆಯೇ ಬಿನ್ನವಿಸಿಕೊಂಡೆ. ನಗುನಗುತ್ತಲೇ ನನ್ನ ಕೈಗೆ ಮತ್ತೊಂದು ಅರ್ಧರೊಟ್ಟಿಯನ್ನು ಕೊಟ್ಟು ಅದರ ಮೇಲೆ ಸ್ವಲ್ಪ ಕುರಸಾನಿಪುಡಿಯನ್ನು ಇಟ್ಟ ಪಾಲಕ್ಕನ ಈ ಬಾರಿಯ ಕೈತುತ್ತು ಕಳೆದ ಬಾರಿಯ ರೊಟ್ಟಿಯ ರುಚಿಗಿಂತಲೂ ದಿವ್ಯ ಎನ್ನುವ ಹಾಗಿತ್ತು. ಇನ್ನೂ ಒಂದರ್ಧ ರೊಟ್ಟಿಯನ್ನು ಸವಿಯಬೇಕು ಎಂದವನಿಗೆ ಮರ್ಯಾದೆ ಅಡ್ಡ ಬಂದಿತ್ತು. ಕೇಳಿದ್ದರೆ ಪಾಲಕ್ಕ ತನ್ನ ಪಾಲಿನ ರೊಟ್ಟಿಯನ್ನೂ ನನಗೇ ನೀಡುತ್ತಿದ್ದಳೋ ಏನೋ. ಆದರೆ “ಕಂಡವರ ಕೂಳಿಗಾಗಿ ಜೊಲ್ಲು ಸುರಿಸಬಾರದು” ಎನ್ನುವ ಅವ್ವನ ಬುದ್ದಿ ಮಾತು ಕಿವಿಯಲ್ಲಿ ರಿಂಗಣಿಸಿದಂತಾಗಲು “ಪಾಲಕ್ಕ, ನಾನು ಹೊರಡುತ್ತೇನೆ, ಹೊತ್ತಾಯ್ತು” ಎನ್ನುತ್ತಾ ಕುಳಿತಲ್ಲಿಂದ ಎದ್ದೇಬಿಟ್ಟೆ. “ಸ್ವಲ್ಪ ನೀರು ಕುಡಿದು ಹೋಗಪ್ಪಾ” ಎಂದು ಮತ್ತದೇ ಕಾಳಜಿ ತೋರಿ ಉಸುರಿದ ಪಾಲಕ್ಕನ ಮಾತನ್ನು ತಳ್ಳಿಹಾಕಲು ಮನಸಾಗದ ಕಾರಣ ಅವಳು ಮಡಿಕೆಯಿಂದ ಹೊಯ್ದ ನೀರನ್ನು ಬೊಗಸೆಯೊಡ್ಡಿ ಸೇವಿಸಿ ನನ್ನ ಎಮ್ಮೆ ಮತ್ತು ಕರುವಿನ ಸಮೇತ ಮನೆಗೆ ವಾಪಸ್ಸಾದೆ.
ಪಾಲಕ್ಕನ ಒಡಲ ಗಂಟಿನ ರಹಸ್ಯದ ಶೋಧ ಒಂದು ಹಂತಕ್ಕೆ ಮುಗಿದ ಹಾಗೆ ಎಂದು ತೋರಿಬಂದರೂ ತಟ್ಟನೆ ಮತ್ತೊಂದು ಕುತೂಹಲ ನನ್ನ ಮನದಲ್ಲಿ ಹೆಡೆಯೆತ್ತಿ ಆಡಲಾರಂಭಿಸಿತು. ದನಗಳನ್ನು ಮೇಯಲು ಬಿಟ್ಟು, ಪ್ರತಿನಿತ್ಯ ಸಿಕ್ಕಸಿಕ್ಕವರ ಹೊಲದ ಬದಿಯಲ್ಲಿ ಬೀಜ, ಸಸಿಗಳನ್ನು ನೆಡುವ ಕಾರ್ಯಮಾಡುವ ಪಾಲಕ್ಕನ ಈ ಕಾರ್ಯದ ಹಿಂದಿರುವ ನಿಜವಾದ ಉದ್ದೇಶವಾದರೂ ಏನಿರಬಹುದು? ಎನ್ನುವ ಸಂಶಯದ ಕೀಟವೊಂದು ನನ್ನ ತಲೆಯನ್ನು ಕೊರೆಯಲಾರಂಭಿಸಿತು. ಪಾಲಕ್ಕನ ಹೃದಯಕ್ಕೆ ಹತ್ತಿರವಾದ ಈ ಕಾರ್ಯದ ಅಸಲಿಗುಟ್ಟನ್ನು ಅರಿಯುವ ಮನಸ್ಸು ಮಾಡಿದವನಾಗಿ ಅಲ್ಲಿಂದ ಮುಂದೆ ಪ್ರತೀ ರವಿವಾರ ಮತ್ತು ರಜಾದಿನಗಳಂದು ಪಾಲಕ್ಕನ ದನದ ಹಿಂಡಿನ ಹಿಂದೆಯೇ ನಮ್ಮ ಎಮ್ಮೆ ಮತ್ತು ಕರುಗಳನ್ನು ಮೇಯಿಸಲು ಹೊರಡುತ್ತಿದ್ದೆ. ಪಾಲಕ್ಕ ಹಾಳುಭಾವಿ ರಸ್ತೆಯಿಂದ ಮುಖ್ಯರಸ್ತೆಗೆ ತನ್ನ ದನಗಳನ್ನು ತಂದಳು ಎಂದರೆ, ಮನೆಯ ಬಾಗಿಲಿನಲ್ಲಿ ನಿಂತು ಇದನ್ನೇ ಕಾಯುತ್ತಿದ್ದ ನಾನು ಶೀಘ್ರವಾಗಿ ದನದ ಕೊಟ್ಟಿಗೆಗೆ ಹೋಗಿ ಮನೆಯ ಹಿಂದಿನ ಬಾಗಿಲ ಮೂಲಕ ನಮ್ಮ ದನಗಳನ್ನು ಹೊರಕ್ಕೆ ಹೊಡೆದುಕೊಂಡು, ಪಾಲಕ್ಕನ ದನದ ಹಿಂಡನ್ನೇ ಹಿಂಬಾಲಿಸುತ್ತಾ, ಅವಳು ದನಗಳನ್ನು ಮೇಯಿಸಲು ಸಾಗಿದ ರಸ್ತೆಯಲ್ಲಿಯೇ ನಾನೂ ನಡೆಯುತ್ತಿದ್ದೆ.
ಹೀಗೆ, ಪ್ರತಿ ವಾರಾಂತ್ಯದಲ್ಲಿಯೂ ಪಾಲಕ್ಕನ ಜೊತೆ ಹಲವು ಗಂಟೆಗಳನ್ನು ಪ್ರಕೃತಿಯ ಮಡಿಲಿನಲ್ಲಿ ಕಳೆಯುವ ಸೌಭಾಗ್ಯ ಎಳವೆಯಲ್ಲಿಯೇ ನನಗೆ ಪ್ರಾಪ್ತವಾದ ದೊಡ್ಡ ನಿಧಿಯಾಗಿತ್ತು. ನಮ್ಮನಮ್ಮ ದನಗಳನ್ನು ಮೇಯಲು ಬಿಟ್ಟು, ನಾವು ಹೊಲಗಳ ಬದುವಿನ ಮೇಲೆ ಬೀಜಗಳನ್ನು, ಸಸಿಗಳನ್ನು ನೆಡುವ ಕಾರ್ಯವನ್ನು ದಿನದ ಹಲವು ಗಂಟೆಗಳ ಕಾಲ ಮಾಡುತ್ತಿದ್ದೆವು. ಮೊದಲು ಮಧ್ಯಾಹ್ನದ ಮೂರು ಗಂಟೆಗೇ ದನಗಳ ಸಮೇತ ಮನೆ ಸೇರುತ್ತಿದ್ದ ನಾನು ಈಗ ಸಂಜೆ ಆರರ ನಂತರವೇ ಮನೆಯ ಹೊಸ್ತಿಲು ಮೆಟ್ಟುತ್ತಿದ್ದದ್ದು. ಮಧ್ಯಾಹ್ನದ ಊಟಕ್ಕೆಂದು ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದ ನಾನು ನನ್ನ ಊಟವನ್ನು ಪಾಲಕ್ಕನಿಗೆ ನೀಡಿ ಅವಳು ತಂದ ಬುತ್ತಿಯನ್ನು ಮನಸಾರೆ ಸವಿಯುತ್ತಿದ್ದೆ. ಒಂದು ರೀತಿಯಲ್ಲಿ ಇದು ನನ್ನ ವೀಕೆಂಡ್ ಪಾರ್ಟಿಯ ರೂಪಧಾರಣೆ ಮಾಡಿದ್ದು ಸುಳ್ಳಲ್ಲ. ನಾನು ನನ್ನ ಕೈಲಾದ ಮಟ್ಟಿಗಿನ ಸಹಾಯವನ್ನು ಪಾಲಕ್ಕನ ಅವಿರತ, ದಣಿವರಿಯದ ಕಾರ್ಯದಲ್ಲಿ ಮಾಡುತ್ತಾ ತನ್ಮೂಲಕ ಧನ್ಯತೆಯ ಭಾವವನ್ನು ಹೊಂದುತ್ತಿದ್ದೆ. ಹುಣಸೆ, ಬೇವು, ಹೊಂಗೆ, ಮಾವು, ನೇರಳೆ, ಬೇಲ, ಪೇರಳ, ಕರಿಬೇವು, ಸಂಕೇಸರಿ, ಆಲ ಹೀಗೆಯೇ ವಿವಿಧ ಮರದ ಬೀಜಗಳು ಮತ್ತು ಸಸಿಗಳನ್ನು ನೂರಾರರ ಸಂಖ್ಯೆಯಲ್ಲಿ ನೆಟ್ಟು ನಾವು ರವಿವಾರವನ್ನು ಸಂಭ್ರಮಿಸುತ್ತಿದ್ದೆವು. ಪಾಲಕ್ಕ ತನ್ನ ಗುಡಿಸಿಲಿನ ಮುಂಭಾಗದ ನಾಲ್ಕುxನಾಲ್ಕು ಅಡಿಯ ಸಣ್ಣ ಜಾಗದಲ್ಲಿ ಕೆಲವು ಜಾತಿಯ ಸಸಿಗಳನ್ನು ಬೆಳೆಸಿ, ಅವುಗಳನ್ನು ದಿನಂಪ್ರತಿ ತಾನು ದನಗಳನ್ನು ಕಾಯಲು ಹೋಗುತ್ತಿದ್ದ ಹೊಲಗಳ ಬದುಗಳಲ್ಲಿ ನೆಡುತ್ತಿದ್ದಳು. ನಾಲ್ಕಾರು ವಾರಗಳ ಪಾಲಕ್ಕನ ಸಾಂಗತ್ಯದಿಂದ ಅವಳ ಸಾಕಷ್ಟು ಸಲುಗೆಯನ್ನು ಗಳಿಸಿಕೊಂಡ ನಾನು ಪಾಲಕ್ಕನ ಈ ಗಿಡ ನೆಡುವ ಅವಿರತಪ್ರಯತ್ನದ ಹಿಂದಿನ ಧೇಯೋದ್ದೇಶಗಳನ್ನು ಅರಿಯುವ ಪ್ರಯತ್ನಕ್ಕೆ ಮುಂದಾದೆ. “ಪಾಲಕ್ಕ, ನೀನು ಈ ರೀತಿ ಪ್ರತೀದಿನ ಕಂಡಕಂಡವರ ಹೊಲಗಳಲ್ಲಿ ಬೀಜ ಮತ್ತು ಸಸಿಗಳನ್ನು ಯಾಕಾಗಿ ಹೂಳುತ್ತಿದ್ದೀಯ?” ಎನ್ನುವ ನನ್ನ ಬಾಲಿಶ ಪ್ರಶ್ನೆಗೆ ಪಾಲಕ್ಕ ಹೊಟ್ಟೆ ಉಣ್ಣಾಗುವಂತೆ ಬಿದ್ದುಬಿದ್ದು ನಕ್ಕಿದ್ದಳು. ತನ್ನ ನಗುವಿನ ಮಹಾಪೂರದ ನಂತರ ಸ್ವಲ್ಪ ಸುಧಾರಿಸಿಕೊಂಡವಳು, ಒಂದು ಲೋಟ ಮಡಿಕೆಯ ನೀರನ್ನು ಕುಡಿದು ನನ್ನೆಡೆಗೆ ಒಂದು ರೀತಿಯ ಗುರುದೃಷ್ಟಿಯನ್ನು ಹರಿಸುತ್ತಾ, ಗಂಭೀರವದನದವಳಾಗಿ “ನೋಡಪ್ಪಾ ಪ್ರಕಾಶ, ನಾನು ಕಳೆದ ಸುಮಾರು ಮೂವತ್ತು ವರ್ಷಗಳಿಂದ ದಿನವೂ ನೂರಾರು ದನಗಳನ್ನು ಮೇಯಿಸಲು ಊರ ಹೊಲಗಳ ಪಕ್ಕದಲ್ಲಿರುವ ಹಸಿರು ಬಯಲುಗಳನ್ನು ಆಶ್ರಯಿಸಿದ್ದೇನೆ. ಅನೇಕ ಬಾರಿ, ನನ್ನ ಎಚ್ಚರಿಕೆಯ ನಿಗರಾಣಿಯ ಹೊರತಾಗಿಯೂ ಕೆಲವು ತುಂಟದನಗಳು ಜನರ ಹೊಲಗಳನ್ನು ಹೊಕ್ಕು, ಅಲ್ಲಿನ ಬೆಳೆಗಳಿಗೆ ಬಾಯಿ ಹಾಕಿದ್ದಿದೆ, ಅಲ್ಲಿನ ಬದುವುಗಳ ಮೇಲೆ ಬೆಳೆದ ಗಿಡಗಂಟಿಗಳನ್ನು ತಿಂದು ಹಾಳುಗೆಡವಿದ್ದಿದೆ. ನನ್ನ ಪುಣ್ಯವಶಾತ್, ಇಲ್ಲಿಯವರೆಗೆ ನನ್ನನ್ನು ಈ ಸಂಬಂಧ ಊರಿನ ಯಾವ ರೈತನೂ ತರಾಟೆಗೆ ತೆಗೆದುಕೊಂಡಿಲ್ಲ. ಸುಮಾರು ಹತ್ತು ವರ್ಷದ ಬಾಲಕಿಯಿದ್ದಾಗಲೇ ದನಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಮೊದಲಿನ ಕೆಲವು ವರ್ಷಗಳಲ್ಲಿ, ದನಗಳು ಬೆಳೆಯನ್ನೋ, ಗಿಡಗಂಟೆಗಳನ್ನೋ ನಾಶಮಾಡಿದಲ್ಲಿ ನನ್ನ ಮನಸ್ಸಿಗೆ ಅತೀವವಾದ ವೇದನೆ ಉಂಟಾಗುತ್ತಿತ್ತು. ನನ್ನ ಹೊಟ್ಟೆಪಾಡಿಗಾಗಿ ಮಾಡುವ ಈ ಕೆಲಸ ಅನ್ಯರ ಪಾಲಿನ ಮುಳ್ಳಾಗಬಾರದೆಂಬ ನನ್ನ ಕಳಕಳಿ, ಅರಿತೋ, ಅರಿಯದೆಯೋ ನನ್ನಿಂದ ರೈತರಿಗಾದ ನಷ್ಟವನ್ನು ಯಾವ ರೀತಿಯಲ್ಲಿ ಭರಿಸಿದರೆ ಚೆನ್ನ? ಎನ್ನುವ ಯೋಚನೆಯ ದಿಶೆಯಲ್ಲಿ ನನ್ನನ್ನು ಉಪಕ್ರಮಿಸುವಂತೆ ಮಾಡಿದ ಪರಿಣಾಮದಿಂದ ನಾನು ಅನೇಕ ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದೇನೆ.
ನಂತರದಲ್ಲಿ ನನಗೆ ತೋಚಿದ ಒಂದೇ ಒಂದು ಅಂಶ ಎಂದರೆ, ನನ್ನ ಸಾಕುದನಗಳಿಂದ ಆದ ಪ್ರಾಕೃತಿಕನಷ್ಟವನ್ನು ನಾನು ಹೊಸದಾಗಿ ಮರಗಿಡಗಳನ್ನ ನೆಡುವ ಮೂಲಕ ಸರಿದೂಗಿಸಬೇಕು ಎನ್ನುವುದು. ಹೀಗೆ ನನ್ನ ದಾರಿಯ ಸ್ಪಷ್ಟದರ್ಶನದ ಬಳಿಕ, ದಿನದ ನನ್ನ ಕೆಲಸದ ವೇಳೆಯ ವಿರಾಮದ ನಾಲ್ಕಾರು ಗಂಟೆಗಳನ್ನು ಗಿಡನೆಡುವ ಕಾರ್ಯಕ್ಕೆ ಮೀಸಲಾಗಿಟ್ಟಿದ್ದೇನೆ. ನನಗೆ ಯಾರ ಹೊಲದಲ್ಲಿ ಬೀಜ, ಸಸಿ ನೆಡಬೇಕು ಎನ್ನುವ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ. ನಾನು ದನಗಳನ್ನು ತರುಬಿದ ಕಡೆ ಇರುವ ಹೊಲಗಳ ಬದುವಿನಲ್ಲಿ ಬೀಜ, ಸಸಿಗಳನ್ನು ನೆಡುತ್ತೇನೆ. ಈ ಹೊಲ ಲಿಂಗಾಯತರಿಗೆ ಸೇರಿದ್ದು, ಈ ಜಮೀನು ರೆಡ್ಡಿಜನಾಂಗದ್ದು, ಈ ನೆಲ ಕುರುಬರದ್ದು, ಈ ಭೂಮಿ ನಾಯಕರದ್ದು, ಈ ಪಟ್ಟಿ ಹೊಲೆಯರಿಗೆ ಸೇರಿದ್ದು ಎಂದು ನಾನು ಎಂದೂ ನೋಡಿದವಳಲ್ಲ. ಜಮೀನು ಯಾರದೇ ಆಗಿರಲಿ, ಅಲ್ಲಿನ ಮಣ್ಣು ಒಂದೇ ರೀತಿ ಇರುವುದನ್ನು ನಾನು ಗಮನಿಸಿದ್ದೇನೆ, ತನ್ನ ಒಡಲಲ್ಲಿ ಬಿದ್ದ ಬೀಜ, ಸಸಿಗಳನ್ನು ಈ ಹೊಲಗಳ ಮಣ್ಣು ಒಂದೇ ರೀತಿಯಲ್ಲಿ ಸ್ವೀಕರಿಸಿದ್ದನ್ನೂ ನಾನು ಕಂಡಿದ್ದೇನೆ. ಐನೋರ ವೀರಭದ್ರಯ್ಯ ಸ್ವಾಮಿಗಳ ಹೊಲದಲ್ಲಿ ನೆಟ್ಟ ಗಿಡ, ಕುರುಬರ ಮಟ್ಟಲಿಂಗಪ್ಪನ ಹೊಲದಲ್ಲಿ ನೆಟ್ಟ ಗಿಡದಷ್ಟೆ ಹುಲುಸಾಗಿ ಬೆಳೆದಿದ್ದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಭೂತಾಯಿಗೆ ಇಲ್ಲದ ಜಾತಿಗಳ ಲೆಕ್ಕ ಪಾಲಕ್ಕನ ಪಾಲಿಗೇಕೆ? ನನ್ನ ದನಗಳಾದರೂ ಅಷ್ಟೇ, ಮೇಯುವ ಹೊತ್ತು, ಬದಿಯ ಹುಲ್ಲು ಯಾರ ಹೊಲಕ್ಕೆ ಸೇರಿದ್ದು ಎಂದು ನೋಡುವುದಿಲ್ಲ. ಹೊಲಗಳನ್ನು ವಿಭಜಿಸುವ ಕಟ್ಟೆಗಳಿಂದ ಅವಕ್ಕೆ ಏನೂ ಆಗಬೇಕಾಗಿಲ್ಲ. ಪುರೋಹಿತರ ಹೊಲದ ಹುಲ್ಲಿನ ರುಚಿ ರೆಡ್ಡಿಜನಾಂಗದ ಗೋವಿಂದರೆಡ್ಡಿಯವರ ಹುಲ್ಲಿನಷ್ಟೆ ಸವಿಯಾಗಿರುವುದು ನನ್ನ ದನಗಳಿಗೆ ತಿಳಿದ ವಿಷಯ. ಹೊಲೆಯರ ಮಾದಪ್ಪನ ಹೊಲದ ಹುಲ್ಲಿಗೂ, ಲಿಂಗಾಯತರ ಜೂಗಣ್ಣನವರ ಏಕಾಂತಪ್ಪನವರ ಹೊಲದ ಹುಲ್ಲಿಗೂ ಇರುವ ಅಂತರವನ್ನು ನನ್ನ ದನಗಳು ಗುರುತಿಸಲು ವಿಫಲವಾಗಿವೆ ಎಂದಾಗ ಇಂತಹ ಕೃತಿಮ ಎಲ್ಲೆಗಳ ಉಸಾಬರಿ ಪಾಲಕ್ಕನಿಗೇಕೆ? ಇವುಗಳನ್ನು ಕಟ್ಟಿಕೊಂಡು ನನಗೇನಾಗಬೇಕಿದೆ? ನನ್ನ ದನಗಳಿಗೇ ಇಲ್ಲದ ಬೇಧಭಾವಗಳ ಕಲ್ಪನೆ ದನಗಾಹಿಯಾದ ನನಗೇಕೆ? ನೋಡು ಪ್ರಕಾಶ, ಇಲ್ಲಿ ಊರಜನರ ನೂರಾರು ದನಗಳು ಮೇಯುತ್ತಿವೆ. ಇವುಗಳು ಯಾರ್ಯಾರ ಮನೆಗೆ ಸೇರಿದ ದನಗಳು ಎಂದು ಹೇಳಬಲ್ಲೆಯಾ? ಇಲ್ಲಿ ಎಲ್ಲರ ಮನೆಯ ದನಗಳೂ ಒಟ್ಟಾಗಿ, ಒಂದಾಗಿ ಮೇಯುತ್ತಿವೆ. ತಮ್ಮ ಮಾಲೀಕರ ಮನೆಗಳ, ಮನದ ಅಂತರವನ್ನು ತಮ್ಮತಮ್ಮ ದಂದಕ್ಕಿಗಳ ಒಳಗೇ ಬಿಟ್ಟುಬಂದಿರುವ ಈ ದನಗಳನ್ನು ನೋಡಿ ಗುರುತಿಸಲಾಗದ ಜಾತಿಗಳನ್ನು ಇವರ ಮಾಲೀಕರನ್ನು ನೋಡಿ ಯಾಕೆ ಗುರುತಿಸಬೇಕು? ನಾನು ವರ್ಷಗಳ ಕಾಲ ದನಕಾಯುತ್ತಲೇ ಜೀವನವನ್ನು ಹೆಚ್ಚು ಹತ್ತಿರದಿಂದ ನೋಡುವ, ಅರ್ಥೈಸಿಕೊಳ್ಳುವ, ಅದರ ಆಳಕ್ಕಿಳಿಯುವ, ಪ್ರಯತ್ನ ಮಾಡುತ್ತಿದ್ದೇನೆ. ನಾವು ಪಡುವ ಶ್ರಮ ನಮಗಷ್ಟೇ ಲಾಭ ಕೊಡಬೇಕು ಎನ್ನುವ ಕಲ್ಪನೆಯೇ ಪ್ರಕೃತಿಗೆ ವಿರುದ್ಧವಾದದ್ದು, ಅಭಾಸಪೂರ್ಣವಾದದ್ದು. ಇಲ್ಲಿ ಯಾರೋ ಮಾಡಿದ ಒಳ್ಳೆಯ ಕಾರ್ಯಗಳು ಮತ್ತೆ ಯಾರ ಬದುಕನ್ನೋ ಶ್ರೀಮಂತಗೊಳಿಸುತ್ತವೆ, ಸಮೃದ್ಧಗೊಳಿಸುತ್ತವೆ. ನಾನು ದಿನವೂ ನೆಡುವ ಗಿಡಗಳಿಂದ ನನಗೆ ಏನೂ ಅಪೇಕ್ಷೆಗಳಿಲ್ಲ. ನಾನು ನೆಡುವ ಪ್ರತಿಯೊಂದು ಸಸಿ, ಹೂಳುವ ಪ್ರತಿಯೊಂದು ಬೀಜ ಬೆಳೆದು ಹೆಮ್ಮರವಾದೀತು ಎನ್ನುವ ಬಯಕೆಯೂ ನನ್ನಲ್ಲಿ ಇಲ್ಲ. ಹೆತ್ತತಾಯಿಯ ಮಡಿಲಿಗೆ ಮಗುವನ್ನು ಹಾಕುವ ಸೂಲಗಿತ್ತಿಯ ಕೆಲಸವನ್ನಷ್ಟೇ ನಾನು ಮಾಡುತ್ತಿರುವುದು. ನಾನು ನೆಡುವ ಪ್ರತಿಯೊಂದು ಸಸಿ, ಹೂಳುವ ಪ್ರತಿಯೊಂದು ಬೀಜದ ಹಿಂದೆಯೂ ಒಂದೇ ತೆರನಾದ ಬದ್ಧತೆ ಇರುತ್ತದೆ. ಈ ಬದ್ಧತೆ ಆ ಸಸಿ ಮತ್ತು ಬೀಜದಲ್ಲಿ ಪ್ರತಿಫಲನಗೊಂಡ ಹೊತ್ತು ಮಾತ್ರ ನನ್ನ ಮನದ ಬದ್ಧತೆ ಮೂರ್ತರೂಪ ತಳೆಯುತ್ತದೆ. ನಾನು ಜನ್ಮ ನೀಡಲು ನಿಮಿತ್ತಮಾತ್ರವಾದ ಸಸ್ಯಜಗತ್ತಿನ ಮುಂದಿನ ಬೆಳವಣಿಗೆ ಪ್ರಕೃತಿಮಾತೆಗೆ ಬಿಟ್ಟಿದ್ದು.
ತನ್ನ ಮಡಿಲಿಗೆ ಹಾಕಿದ ಮಗುವನ್ನು ಬೆಳೆಸುವ, ಕೊಲ್ಲುವ ಅಧಿಕಾರ ಎಲ್ಲರ ತಾಯಿಯಾದ ಪ್ರಕೃತಿಗೇ ಸೇರಿದ ಪರಮಾಧಿಕಾರ. ನಾನು ನೆಟ್ಟ ಬೀಜ, ಸಸಿಗೆ ಅನುಕೂಲಕರ ವಾತಾವರಣ ಸಿಕ್ಕಾಗ ಮಾತ್ರ ಅವು ಬೆಳೆದು ಹೆಮ್ಮರಗಳಾಗಬಲ್ಲವು. ಅನೇಕ ಬಾರಿ ಸಸಿಯಾಗಿದ್ದಾಗಲೇ, ನಾನು ಕಾಯುತ್ತಿರುವ ತುಂಟದನಗಳಂತಹ ಜಾನುವಾರುಗಳ ಬಾಯಿಗೆ ಆಹಾರವಾಗುವುದೂ ಉಂಟು. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವುದರ ವಿವೇಚನೆ ಸಲ್ಲ. ಅದನ್ನೆಲ್ಲಾ ನಾವು ಪ್ರಕೃತಿಗೇ ಬಿಟ್ಟು ಬಿಡಬೇಕು. ಅದರ ವಿಶ್ಲೇಷಣೆ ಮಾತ್ರದಿಂದ ಏನೂ ಉಪಯೋಗವಿಲ್ಲ. ಹೇಗೆ ತಿನ್ನುವ ಅನ್ನದ ಪ್ರತಿಯೊಂದು ಆಗುಳಿನ ಮೇಲೂ ತಿನ್ನುವವನ ಹೆಸರು ನಮೂದಾಗಿರುತ್ತದೆಯೋ ಹಾಗೆಯೇ ನಾನು ನೆಡುವ ಪ್ರತೀ ಗಿಡ, ಸಸಿಯ ಮೇಲೂ ಅದು ಲೋಕದ ಕಾಲ್ತುಳಿತಕ್ಕೆ ಸಿಕ್ಕು ನಲುಗುತ್ತದೆಯೋ ಯಾ ಎಲ್ಲಾ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಿ ನಿಂತು ಸಾವಿರಾರು ಪಕ್ಷಿ, ಜನಗಳಿಗೆ ತಾಣಕೊಡುವ ಮಹಾವೃಕ್ಷವಾಗುತ್ತದೆಯೋ ಎನ್ನುವುದನ್ನು ವಿಧಿ ಅದಾಗಲೇ ದಾಖಲಿಸಿ ಆಗಿರುತ್ತದೆ. ಇಲ್ಲಿ ಯಾವ ಕಾರ್ಯವೂ ನಾನು ಮಾಡಿದ್ದು, ನನ್ನಿಂದ ಘಟಿಸಿದ್ದು ಎನ್ನುವುದಕ್ಕೆ ಅರ್ಥವೇ ಇಲ್ಲ. ಎಲ್ಲಾ ಪೂರ್ವನಿರ್ಧಾರವಾಗಿರುವ ಪರಾಶಕ್ತಿಯ ಈ ಲೋಕನಾಟಕದಲ್ಲಿ ನಾವು ಪಾತ್ರಧಾರಿಗಳು ಮಾತ್ರ. ನಾನು ಇಲ್ಲಿಯವರೆಗೆ ಸಾವಿರಸಾವಿರಗಳ ಲೆಕ್ಕದಲ್ಲಿ ಬೀಜಗಳನ್ನು, ಸಸಿಗಳನ್ನ ನೆಟ್ಟಿದ್ದೇನೆ. ಅದರಲ್ಲಿ ಎಷ್ಟೋ ಸಾವಿರ ಸಸಿಗಳು ಸೊರಗಿ, ಕಮರಿಹೋಗಿದ್ದರೆ ಮತ್ತೆ ಹಲವು ಸಾವಿರ ಸಸಿಗಳು ಬೆಳೆದು ದೊಡ್ಡಮರಗಳಾಗಿವೆ.
ಇದೇ ಮಾತು ನಾನು ಹೂಳಿದ ಬೀಜಗಳಿಗೂ ಅನ್ವಯಿಸುತ್ತದೆ. ನಾನು ನನ್ನ ದನ ಕಾಯುವ ಕೆಲಸದ ವೇಳೆಯಲ್ಲಿ ಇದನ್ನೆಲ್ಲಾ ಮಾಡದೆಯೂ ಯಾವುದೋ ಮರದ ನೆರಳಿನ ಕೆಳಗೆ ಕುಳಿತು ವರ್ಷಗಳನ್ನು ವಿಶ್ರಾಂತಿಯ ಮೊರೆಹೋಗುವ ಮುಖೇನ ದೂಡಬಹುದಿತ್ತು. ಆದರೆ ನನಗೆ ಸಿಕ್ಕ ಸಮಯವನ್ನು ನಾನು ನನಗೆ ತೋಚಿದ ಮಟ್ಟದ ಲೋಕಕಲ್ಯಾಣ ನಿಮಿತ್ತ ಕಾರಣವೊಂದಕ್ಕೆ ವ್ಯಯಿಸಿದ ತೃಪ್ತಿಯೊಂದೇ ಈಗ ಮತ್ತು ಯಾವತ್ತೂ ನನ್ನ ಪಾಲಿಗೆ ಉಳಿದಿರುವುದು ಮತ್ತು ಉಳಿಯುವಂತಹುದು. ನಾನೆಂದೂ ಗುಡಿಗುಂಡಾರಗಳನ್ನು ಸುತ್ತಿದವಳಲ್ಲ. ಊರ ಹನುಮಂತದೇವರನ್ನು ಕಣ್ಣು ತುಂಬಿಕೊಂಡು ವರ್ಷಗಳೇ ಉರುಳಿವೆ. ದೇವರ ಉಪಾಸನೆಯನ್ನು ಹೆಚ್ಚು ಮಾಡಲಾಗದ ದುಃಖ ಈಗಲೂ ನನ್ನಲ್ಲಿ ಮಡುಗಟ್ಟಿದೆ. ನಾನು ಈಗ ನಿತ್ಯ ಮಾಡುತ್ತಿರುವ ಪ್ರಕೃತಿಸೇವೆಯಲ್ಲಿಯೇ ಭಗವಂತನ ಉಪಾಸನೆಯನ್ನು ಕಾಣುತ್ತಿದ್ದೇನೆ. ಬಹಳ ತ್ವರಿತಗತಿಯಲ್ಲಿ ನಶಿಸಿಹೋಗುತ್ತಿರುವ ಹಸಿರಿನ ರಕ್ಷಣೆ ಕೂಡ ದೇವರ ಉಪಾಸನೆಯ ಒಂದು ಭಾಗ ಎಂದೇ ನಾನು ನಂಬಿದ್ದೇನೆ. ನಾನು ಕಲಿತವಳಲ್ಲ. ಎಂದೂ ಶಾಲೆಯ ಮುಖವನ್ನೂ ನೋಡದ ನನ್ನ ಎದೆಯಲ್ಲಿ ಕನ್ನಡದ ಮೂರು ಅಕ್ಷರಗಳೂ ಮೂಡಿಲ್ಲ. ಆದರೂ ಪ್ರಕೃತಿಯ ಮಡಿಲಲ್ಲಿ ನಾನು ನನ್ನ ಕೈಲಾದ ಮಟ್ಟಿಗಿನ ಲೋಕಜ್ಞಾನವನ್ನು ಪಡೆಯುವ ನಿರಂತರ ಪ್ರಯತ್ನ ನಡೆಸಿದ್ದೇನೆ. ದೇವರ ಸಾನ್ನಿಧ್ಯ ಮನಸ್ಸಿಗೆ ನೆಮ್ಮದಿ ತರುತ್ತದೆ ಎಂದಾದರೆ ಅಂತಹ ನೆಮ್ಮದಿಯನ್ನು ನಾನೂ ನನ್ನ ಕೆಲಸದಲ್ಲಿ ಕಂಡುಕೊಂಡಿದ್ದೇನೆ. ನಾನು ನೆಟ್ಟ ಗಿಡಗಳ ಬೆಳವಣಿಗೆಯನ್ನು ನೋಡಿ, ತಮ್ಮ ಮಕ್ಕಳ ಬೆಳವಣಿಗೆಯನ್ನು ಕಂಡು ಹಿರಿಹಿರಿ ಹಿಗ್ಗುವ ತಂದೆತಾಯಿಗಳಷ್ಟೇ ಆನಂದದ ಅನುಭೂತಿ ನನ್ನ ಪಾಲಿನ ಅನುಭವದ ವ್ಯಾಪ್ತಿಗೂ ಬಂದಿದೆ. ಊರ ಯಾರ ಹೊಲದಲ್ಲಿಯೇ ಆಗಲಿ ನಾನು ನೆಟ್ಟು ಈಗ ಮರಗಳಾಗಿ ನಿಂತ ವನ್ಯಸಂಪತ್ತಿನ ಮೇಲೂ ನನ್ನ ಹಕ್ಕನ್ನು ಜಮಾಯಿಸುವ ಮಾತು ಒತ್ತಟ್ಟಿಗಿರಲಿ, ಅದರ ಕಲ್ಪನೆ ಮಾತ್ರವೂ ನನ್ನ ಮನಸ್ಸಿನಲ್ಲಿ ಒಮ್ಮೆಯೂ ಮೂಡಿಲ್ಲ. ಒಂದು ಗಿಡದ ಬೆಳವಣಿಗೆಯಲ್ಲಿ ಯಾವುದೋ ರೀತಿಯ ಒಂದು ಚಿಕ್ಕಸಹಾಯವನ್ನು ಮಾಡಿದ ತಕ್ಷಣ ಅದರ ಮೇಲೆ ನಮ್ಮ ಹಕ್ಕನ್ನು ಪ್ರತಿಪಾದಿಸುವ ಯೋಚನೆಯೇ ವಿನಾಶಕಾರಿಯಾಗಿದ್ದು. ಪ್ರಕೃತಿದತ್ತ ನಿಯಮಗಳಿಗೆ ವಿರೋಧವಾದದ್ದು. ಗಿಡಮರಗಳಿಗೆ ಅನ್ವಯಿಸುವ ರೀತಿಯಲ್ಲಿಯೇ ಇದು ಮನುಷ್ಯಜನಾಂಗಕ್ಕೂ ಅನ್ವಯಿಸುತ್ತದೆ. ಇನ್ನೂ ನನ್ನ ಯೋಚನೆಯ ಆಳಕ್ಕೆ ಇಳಿಯದ ಅಂಶ ಎಂದರೆ ಹಣವನ್ನು ವ್ಯಯಿಸಿ ಖರೀದಿಸಿದ ಭೂಮಿ ನನ್ನದು ಎನ್ನುವ ವ್ಯಕ್ತಿಯ ಬಡಬಡಿಕೆಯೇ ನನಗೆ ಹಾಸ್ಯಾಸ್ಪದವಾಗಿ ತೋರುತ್ತದೆ. ಇಲ್ಲಿನ ಎಲ್ಲವೂ ಎಲ್ಲರಿಗೂ ಸೇರಿದ್ದು. ಇದರಲ್ಲಿ ಅಗಣಿತ ಜೀವರಾಶಿಗಳ ಭಾಗವೂ ಸೇರಿದೆ. ನನ್ನ ಜೀವಿತದ ಒಂದೇ ಒಂದು ಆಸೆಯೆಂದರೆ ನನ್ನ ಕೈಲಾದಷ್ಟು ದಿನ ನಾನು ಈಗ ಮಾಡುತ್ತಿರುವ ಗಿಡಗಳನ್ನ ನೆಡುವ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ಭಗವಂತನ ಇಚ್ಛೆ ಇದೆ ಎಂದಾದರೆ ಇದೇ ಕಾರ್ಯಮಾಡುತ್ತಲೇ ನನ್ನ ಕೊನೆಯುಸಿರು ಎಳೆಯುವುದು” ಎಂದು ಪಾಲಕ್ಕ ತನ್ನ ಸುಧೀರ್ಘ ವಿವರಣೆಯನ್ನು ಕೊಡುತ್ತಲೇ ಸಾಗುತ್ತಿದ್ದ ಹೊತ್ತು ನಾನು ಮೈಯೆಲ್ಲಾ ಕಣ್ಣಾಗಿ, ತೆರೆದ ಬಾಯಿಯಿಂದ ಆ ವಿವರಣೆಯ ಅಷ್ಟನ್ನೂ ನನ್ನ ಬಾಲಮನಸ್ಸಿನ ಆಳಕ್ಕೆ ಇಳಿಸುವ ಬಹಳ ದೊಡ್ಡ ಸಾಹಸಕ್ಕೆ ಕೈಹಾಕಿದ್ದೆ. ಕುರುಕ್ಷೇತ್ರದಲ್ಲಿ ಕೃಷ್ಣನಿಂದ ನಡೆದ ಗೀತೋಪದೇಶದ ಎಷ್ಟು ಭಾಗ ಮಾತ್ರ ಅರ್ಜುನನ ತಲೆಯಲ್ಲಿ ಇಳಿಯಿತೋ ಗೊತ್ತಿಲ್ಲ, ಆದರೆ ಜೂಗಣ್ಣನವರ ತಿಪ್ಪಣ್ಣಮೇಷ್ಟ್ರ ಕೆಂಪುಮಿಶ್ರಿತ ಕಪ್ಪನೆಲದ ಹೊಲದ ಎದೆಯಲ್ಲಿ, ಬದುವೊಂದರ ಬದಿಯಲ್ಲಿ ನನಗಾದ ಪಾಲಕ್ಕನ ಜೀವನದರ್ಶನದ ವಿವೇಕವಾಣಿಗಳಲ್ಲಿ ಅಡಕವಾದ ಬಹುತೇಕ ಅಂಶಗಳು ನನ್ನ ವಿವೇಕಕ್ಕೆ ನಿಲುಕಲೇ ಇಲ್ಲ. ಪಾಲಕ್ಕ ದಶಕಗಳ ಹಿಂದೆ ನೀಡಿದ ಗುರುಬೋಧನೆಯ ಅನೇಕ ಅಂಶಗಳ ಮಂಥನ ಇಂದೂ ನನ್ನ ಮಸ್ತಕದಲ್ಲಿ “ಸಂಭವಾನಿ ಯುಗೇ ಯುಗೇ” ಎನ್ನುವ ರೀತಿಯಲ್ಲಿ ಆಗಾಗ ಸಂಭವಿಸುತ್ತಲೇ ಇರುವ ಪವಾಡಸದೃಶ ಘಟನೆಗೆ ನಾನು ಜೀವಂತ ಸಾಕ್ಷಿಯಾಗಿದ್ದೇನೆ.
ನಾನು ಹೈಸ್ಕೂಲು ಮುಗಿಸುವವರೆಗೆ ಪಾಲಕ್ಕನ ಜೊತೆ ವಾರಾಂತ್ಯದಲ್ಲಿ ಹೊಂದಿದ ಅವಿನಾಭಾವ ಸಂಬಂಧ ಅಭಾದಿತವಾಗಿ ಮುಂದುವರೆದೇ ಇತ್ತು. ನಾವಿಬ್ಬರೂ ಸೇರಿ ಪ್ರತೀ ವಾರಾಂತ್ಯದಲ್ಲಿ ಊರಹೊಲಗಳ ಹಸಿರುಸಿರಿಯನ್ನು ಹೆಚ್ಚಿಸುವ ಕೆಲಸ ಮಾಡಿದೆವು. ನಾನು ಊರನ್ನು ಬಿಟ್ಟ ನಂತರ ಪಾಲಕ್ಕನ ಜೊತೆಗಿನ ಸಂಪರ್ಕವೂ ಕ್ರಮೇಣ ಕಡಿಮೆಯಾಗುತ್ತಾ ಬಂದು ಮುಂದಿನ ಸ್ವಲ್ಪ ಕಾಲಾವಧಿಯಲ್ಲಿಯೇ ಪೂರ್ಣಸ್ವರೂಪದಲ್ಲಿ ಇಲ್ಲವಾಯಿತು. ಇಂದು ನನ್ನೂರಿಗೆ ಹೋಗುವ ನಾಲ್ಕೂ ಮಾರ್ಗಗಳಲ್ಲಿ, ಸೊಂಪಾಗಿ ಬೆಳೆದು ನಿಂತಿರುವ ದಟ್ಟವೃಕ್ಷರಾಶಿಯ ಕಾನನದಂತಹ ಹೊಲದ ಬದುಗಳ ಸಾಲುಗಳನ್ನು ನೋಡುವಾಗ ಅಪ್ರಯತ್ನಪೂರ್ವಕವಾಗಿ ಪಾಲಕ್ಕನ ದಶಕಗಳ ಕಾಲದ ಶ್ರೀಮಂತಕಾರ್ಯ ಕಣ್ಣುಕಟ್ಟುತ್ತದೆ. ಪಾಲಕ್ಕನ ಒತ್ತರಿಸಿ ಬರುವ ನೆನಪು ಗಂಟಲನ್ನು ಉಬ್ಬಿಸಿ, ಕಣ್ಣುಗಳು ಆನಂದಬಾಷ್ಪ ಸುರಿಸಲು ಮುಂದಾಗುತ್ತವೆ. ಈ ವನ್ಯರಾಶಿಯ ಸಿರಿಯೊಡಲಿನಿಂದ ದಿನನಿತ್ಯ ಬೆಳಗು ಬೈಗುಗಳಲ್ಲಿ ತೂರಿಬರುವ ಹಕ್ಕಿಪಿಕ್ಕಿಗಳ ಚಿಲಿಪಿಲಿ ಗಾನ ಪಾಲಕ್ಕನನ್ನು ಕುರಿತು ಮೂಕಜೀವಿಗಳು ಪ್ರಸ್ತುತಪಡಿಸುತ್ತಿರುವ ಎಂದೂ ಮುಗಿಯದ ಪ್ರಾರ್ಥನೆಯಾಗಿ ಹೃದಯ ತಟ್ಟುತ್ತದೆ, ಮನವನ್ನು ಇನ್ನಿಲ್ಲದಂತೆ ಕಲಕುತ್ತದೆ. ವೈಯಕ್ತಿಕ ಲಾಭವನ್ನು ಕಡೆಗಣಿಸಿ, ಸಮಷ್ಟಿಯ ಕಲ್ಯಾಣಕ್ಕೆ ಹಗಲಿರುಳೂ ದುಡಿದ ಹಿರಿಯಚೇತನ ದಶಕಗಳ ಹಿಂದೆ ಆಡಿದ ಪ್ರವಾದಿಯಂತಹ ಸ್ಪಷ್ಟನುಡಿಗಳು ಕಿವಿಗಳಲ್ಲಿ ಗುಂಗುಟ್ಟಲು ಮೊದಲಾಗುತ್ತವೆ. ತನ್ನ ಜೀವಿತದ ಕೊನೆಯವರೆಗೂ ತಾನು ಹಿಡಿದ ಕಾರ್ಯವನ್ನು ಮುಂದುವರೆಸುತ್ತಲೇ ತಾನು ಅತಿಯಾಗಿ ನಂಬಿದ, ತನಗೆ ಅಲಭ್ಯ ಜೀವನ ದರ್ಶನವೊಂದನ್ನು ಕರುಣಿಸಿದ ಭೂಮಿತಾಯಿಯ ಗರ್ಭದಲ್ಲಿ ತಾನೂ ಒಂದು ಬೀಜದ ರೂಪದಲ್ಲಿ ಐಕ್ಯವಾದ ಪಾಲಕ್ಕ ತನ್ನ ಎಲ್ಲಾ ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದ ಬಗೆ ಮಾತ್ರ ನಿತ್ಯಬೆರಗನ್ನು ಹುಟ್ಟಿಹಾಕುವಂತಹುದು. ಇಂಗಾಲದ ಹೆಜ್ಜೆಗುರುತುಗಳನ್ನು ಹೆಚ್ಚಿಸುತ್ತಲೇ ತನ್ನ ವಿನಾಶದ ಹಾದಿಯನ್ನು ರಭಸದಿಂದ ತುಳಿಯುತ್ತಾ ಸಾಗಿರುವ ಆಧುನಿಕ ಮಾನವನಿಗೆ ಪಾಲಕ್ಕನ ಸಾಧಾರಣ, ಯಾವ ವಿಚಾರ ಸಂಕಿರಣಗಳಲ್ಲಿಯೂ ಉಲ್ಲೇಖಿಸಲು ಅರ್ಹವೆನಿಸದ ಬಾಳಬಟ್ಟೆಯಲ್ಲಿ ಅಸಂಖ್ಯಾತ, ಅನುಕರಿಸಲು ಯೋಗ್ಯವಾದ, ಬೆಲೆಕಟ್ಟಲಾಗದ ಅಮೂಲ್ಯಮುತ್ತುಗಳ ರಾಶಿಯೇ ಹುದುಗಿದೆ ಎಂದು ಪಾಲಕ್ಕನನ್ನು ಅತಿ ಹತ್ತಿರದಿಂದ ಕಂಡ, ಅವಳ ಸರಿಜೋಡಿಲ್ಲದ ಪ್ರಕೃತಿಯ ಕಾಳಜಿಗೆ ಕಣ್ಣಾದ, ಕಿವಿಯಾದ, ಕೈಜೋಡಿಸಿದ ನಾನು ಇಂದು ಇದನ್ನು ಓದುತ್ತಿರುವ ಪ್ರತಿಯೊಬ್ಬರ ಕಿವಿಗಳನ್ನು ತಟ್ಟುವ ತೀವ್ರಮಟ್ಟದ ಎದೆಬಡಿತದ ಮುಖಾಂತರ ಸಾರಿಸಾರಿ ಹೇಳಬಲ್ಲೆ.