ಮೋದಿ: ಹಸಿವು ಮುಕ್ತ ಭಾರತ ಮಾಡಿ

Share

ಮೋದಿ: ಹಸಿವು ಮುಕ್ತ ಭಾರತ ಮಾಡಿ

ಮೂವತ್ತು ವರ್ಷ ಸತತ ಎಂಬಂತೆ ಸಮ್ಮಿಶ್ರ ಕಿರಿಕಿರಿ ಇದ್ದ ಕೇಂದ್ರ ಸರ್ಕಾರಕ್ಕೆ ಗ್ರಹಣ ಮೋಕ್ಷ ದಯಪಾಲಿಸಿದ ಹಿರಿಮೆ ನರೇಂದ್ರ ಮೋದಿಗೆ ಸಲ್ಲಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತಾರು ಹಗರಣಗಳ ಭಾರದಿಂದ ನಲುಗಿ ಹೋಗಿದ್ದ ಜನತೆಗೆ ಒಂದು ಪರ್ಯಾಯವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದುದು ಏಳು ವರ್ಷದ ಹಿಂದೆ. ಮೋದಿ ಮುಖ ನೋಡಿ, ಅವರು ಹೇಳಿದಂತೆ ಮತ ನೀಡಿ ಊಹಾತೀತ ಬಹುಮತ ನೀಡಿದ ನಾಡಿಗೆ, ಜನರಿಟ್ಟ ವಿಶ್ವಾಸಕ್ಕೆ ಸಿಕ್ಕ ಪ್ರತಿಫಲ ಏನೆನ್ನುವುದನ್ನು ಪರಾಮರ್ಶಿಸುವುದಕ್ಕೆ ಇದು ಸಕಾಲ.
೨೦೧೪ರಿಂದ ದೆಹಲಿ ಸಿಂಹಾಸನದಲ್ಲಿ ಕುಳಿತಿರುವ ಮೋದಿ ಆಡಳಿತದ ಪರಿಣಾಮಗಳನ್ನು ತಕ್ಕಡಿಗೆ ಹಾಕಿದರೆ ನಿರಾಶೆ ಹೆಚ್ಚು ಭಾರವಾಗಿ ರಾಚುತ್ತದೆ. ಸಾವಿರಾರು ವರ್ಷದ ಭವ್ಯ ಪರಂಪರೆಯ ಜೊತೆಜೊತೆಗೇ ಶತಶತಮಾನಗಳ ಹಸಿವನ್ನು ಒಟ್ಟಿಗೇ ಕರೆದುಕೊಂಡು ಬಂದಿದೆ ಭಾರತ. ಯಾವ ದೇಶ ಹಸಿವು ಮುಕ್ತವಲ್ಲವೋ ಆ ದೇಶದಲ್ಲಿ ಮರ್ಯಾದೆಯುತನಾಗರಿಕತೆ ತಲೆ ಎತ್ತಿ ಮೆರೆಯುವುದಿಲ್ಲ. ಭಾರತದಲ್ಲಿ ಹಸಿವು ಮತ್ತು ನಿರುದ್ಯೋಗ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ನಿವಾರಿಸುವ ಮಾತು ಒತ್ತಟ್ಟಿಗಿರಲಿ ನಿಯಂತ್ರಿಸುವ ಪ್ರಯತ್ನವೂ ಕಾಣುತ್ತಿಲ್ಲ. ೨೦೧೪ರಲ್ಲಿ ಜನರ ಮುಂದಿಟ್ಟ ಪ್ರಣಾಳಿಕೆಯಲ್ಲಿ ಬಿಜೆಪಿ/ ಎನ್‌ಡಿಎ ಹೇಳಿದ್ದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನು. ೨೦೧೯ರ ಚುನಾವಣೆ ಹೊತ್ತಿಗೆ ಹತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು.


ಆ ನಂತರದ ಎರಡು ವರ್ಷದಲ್ಲಿ ನಾಲ್ಕು ಕೋಟಿ ಹೀಗೆ ಈ ಹೊತ್ತಿಗೆ ಒಂಭತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ ಆಗಲಿಲ್ಲ. ಉದ್ಯೋಗ ಸೃಷ್ಟಿಯ ಮಾತನ್ನು ೨೦೧೯ರ ಪ್ರಣಾಳಿಕೆಯಲ್ಲಿ ಮತ್ತೆ ನೆನಪು ಕೂಡಾ ಆಡಳಿತ ಪಕ್ಷ ಮಾಡಲಿಲ್ಲ. ಅಧಿಕಾರದಲ್ಲಿರುವವರು ಸಾಮಾನ್ಯವಾಗಿ ಕೊಟ್ಟ ಮಾತನ್ನು ಮರೆಯುತ್ತಾರೆ. ಅವರು ಶಾಶ್ವತ ವಚನ ಭ್ರಷ್ಟರು. ಆದರೆ ಪ್ರತಿಪಕ್ಷಗಳೂ ಮರೆತವೆನ್ನುವುದು ವ್ಯಂಗ್ಯ. ಈ ಏಳು ವರ್ಷದಲ್ಲಿ ಹಸಿವು ನಿರುದ್ಯೋಗ ಮುಕ್ತ ಭಾರತದ ಮಾತನ್ನು ಮೋದಿ ಎಂದೂ ಆಡಲಿಲ್ಲ ಎನ್ನುವುದನ್ನು ಗಮನಿಸಬೇಕು. ಪ್ರತಿಶತ ಎಪ್ಪತ್ತು ಎಂಭತ್ತರಷ್ಟು ದೇಶವಾಸಿಗಳು ಸಂಕಟದಲ್ಲಿಯೇ ಉಸಿರಾಡಬೇಕಾಗಿರುವ ಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ಯುದ್ಧ ಸಾರುವ ಮನಸ್ಸಿದ್ದರೆ ಅದು ಕೊರೋನಾ ವಿರುದ್ಧ ಸಾರಬೇಕು. ಆದರೆ ಇಲ್ಲಿ ಕೆಸರನ್ನೆರಚುವ ಕೆಲಸ ಮಾತ್ರವೇ ಸಾಗಿದೆ.


ನನಸಾಗದ ಬಂಜೆ ಕನಸುಗಳು
ಹೊಸ ಸರ್ಕಾರವೊಂದನ್ನು ತರುವಾಗ ಜನಮಾನಸದಲ್ಲಿ ನೂರಾರು ಕನಸುಗಳು ಹುಟ್ಟಿ ಆಸೆ ಕೊನರುವಂತೆ ಮಾಡುತ್ತವೆ. ಯಾವ ಸರ್ಕಾರಕ್ಕೂ ಎಲ್ಲ ಕನಸುಗಳನ್ನೂ ನನಸು ಮಾಡುವುದು ಸಾಧ್ಯವಿಲ್ಲ; ಒಪ್ಪೋಣ. ಆದರೆ ಆ ದಿಕ್ಕಿನಲ್ಲಿ ಹೆಜ್ಜೆ ಹಾಕಿರುವುದು ಜನರಿಗೆ ಮನದಟ್ಟಾಗಬೇಕು. ಅಂಥ ಒಂದು ಪಾರದರ್ಶಕ ವ್ಯವಸ್ಥೆ “ಹೌದು ಸರ್ಕಾರ ನಮಗಾಗಿ ಇದೆ” ಎಂಬ ಭಾವನೆಯನ್ನು ಮೂಡಿಸಬೇಕು. ಏಳು ವರ್ಷದ ಮೋದಿ ಆಡಳಿತ ಶೈಲಿಯನ್ನು ನೋಡಿದರೆ ಅಂಥ ಭರವಸೆಯ ಎಳೆಯೂ ಕಾಣಿಸುವುದಿಲ್ಲ. ಅದು ನಿರಾಶೆಯ ಮಟ್ಟವನ್ನು ಹೆಚ್ಚಿಸುತ್ತಿದೆ. ಚುನಾವಣೆ ಗೆಲ್ಲುವುದೊಂದೇ ಪ್ರಜಾಪ್ರಭುತ್ವವಲ್ಲ, ಜನ ಕಲ್ಯಾಣ ಮುಖ್ಯ. ಮೋದಿ ಸರ್ಕಾರ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಂತಿಲ್ಲ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದುದು ಹತ್ತು ವರ್ಷ. ನರಸಿಂಹರಾವ್ ಸರ್ಕಾರದಲ್ಲಿ ಅರ್ಥ ಸಚಿವರಾಗಿದ್ದ ಸಿಂಗ್, ಹೊಸ ಆರ್ಥಿಕ ನೀತಿಯ ಹರಿಕಾರ ಎಂಬ ಗೌರವಕ್ಕೆ ಪಾತ್ರ ಆಗಿದ್ದರು. ಹೊಸ ಆರ್ಥಿಕ ನೀತಿಯ ಫಲಶ್ರುತಿ ಏನು…? ಒಂದು ಸ್ವಾತಂತ್ರ್ಯ ದಿನಾಚರಣೆಯ ದಿವಸ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದ ಸಿಂಗ್ ಆಡಿದ ಮಾತುಗಳನ್ನು ಇಲ್ಲಿ ಮೆಲುಕು ಹಾಕುವುದು ಸೂಕ್ತ. “ಹನ್ನೊಂದು ಪಂಚವಾರ್ಷಿಕ ಯೋಜನೆಗಳನ್ನು (ಸತತ ಒಟ್ಟು ೫೫ ವರ್ಷ) ಅನುಷ್ಟಾನಕ್ಕೆ ತಂದ ದೇಶ ನಮ್ಮದು. ತೊಂಭತ್ತರ ದಶಕದವರೆಗೂ ಇದ್ದ ಆರ್ಥಿಕ ನೀತಿಯ ಬದಲಿಗೆ ಹೊಸ ಆರ್ಥಿಕ ನೀತಿಗೆ ವಾಲಿದವರು ನಾವು. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಮುಂತಾದವನ್ನು ಒಪ್ಪಿಕೊಂಡೆವು. ಈ ಎಲ್ಲ ಯೋಜನೆಗಳ ಉದ್ದೇಶ ಬಡವರ ಉದ್ಧಾರ. ಆದರೆ ಆಗಿದ್ದಾದರೂ ಏನು…? ಪ್ರಸ್ತುತ ದೇಶದಲ್ಲಿ ೨೫ ಕೋಟಿಗೂ ಅಧಿಕ ಜನ ಇನ್ನೂ ಬಡತನ ರೇಖೆಗಿಂತ ಕೆಳಗೇ ಇದದ್ದಾರೆ…?” ಗಮನಿಸಿ ಇದು ವಿರೋಧ ಪಕ್ಷದವರು ಮಾಡಿದ ಟೀಕೆಯಲ್ಲ, ಬದಲಿಗೆ ಪ್ರಧಾನಿ ಬಿಚ್ಚಿಟ್ಟ ಮನೋ ವೇದನೆ.

ಹಸಿದವರ ಸಾಲು ಸಾಲು
ಅಸಹಾಯಕತೆಯನ್ನು ಹೇಳಿಕೊಂಡ ಮನಮೋಹನ ಸಿಂಗ್ ಅದಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಲಿಲ್ಲ ಹೇಳುವ ಧೈರ್ಯವನ್ನೂ ತೋರಿಸಲಿಲ್ಲ. ಅವರ ಮೌನಕ್ಕೆ ಇರುವ ಅರ್ಥ ಎಷ್ಟೆನ್ನುವುದು ಯಾರಿಗೂ ಗೊತ್ತಿಲ್ಲ. ಕಣ್ಣು ಕೋರೈಸುವ ನಗರ ಪೇಟೆ ಸಾಲುಗಳು, ಸಾಲು ಸಾಲು ರಸ್ತೆಗಳು, ಫ್ಲೈಓವರುಗಳು, ಕಪೋಲಕಲ್ಪಿತ ಇಂದ್ರ ಲೋಕಕ್ಕೇ ಸೆಡ್ಡು ಹೊಡೆಯುವಂತಿರುವ ಮಾಲ್‌ಗಳು, ಸರಬರ ಓಡಾಡುವ ಥಳಥಳ ಮೆಟ್ರೋ ರೈಲುಗಳು, ಗಗನ ಚುಂಬಿ ಮಹಲುಗಳು, ಬಸ್ ಸಂಚಾರವನ್ನು ನೀವಾಳಿಸಿ ಹಾಕುವಷ್ಟು ವಿಮಾನ ಸಂಚಾರ, ಖಾಸಗಿ ಒಡೆತನದ ವಿಮಾನ, ಹೆಲಿಕಾಪ್ಟರುಗಳು ಒಡ್ಡುವ ಪೈಪೋಟಿ ಇವೇ ಮುಂತಾದವು ಅಭಿವೃದ್ಧಿ ಎನ್ನುವ ಹುಸಿ ನಂಬಿಕೆ ಭಾರತಕ್ಕೆ ಬಹುತುಟ್ಟಿಯದಾಯಿತು. ಹೊಸ ಆರ್ಥಿಕ ನೀತಿ ಯಾವ ರೀತಿಯಿಂದಲೂ ಬಡವರ ಉದ್ಧಾರಕ್ಕೆ ಪೂರಕವಾಗಲಿಲ್ಲ. ಆದರೆ ಶ್ರೀಮಂತ ವಲಯಕ್ಕೆ ಇನ್ನಷ್ಟು ಹುರುಪು ಕೊಟ್ಟಿತು. ಮನಮೋಹನ್ ಸಿಂಗ್ ಪ್ರಣೀತ ನೀತಿಯನ್ನು ವಾಜಪೇಯಿ ಸೇರಿದಂತೆ ನರಸಿಂಹ ರಾವ್ ನಂತರದ ಎಲ್ಲ ಸರ್ಕಾರಗಳೂ ಪಾಲಿಸಿದವು. ಈಗಿರುವ ಮೋದಿ ಸರ್ಕಾರವೂ ಅದೇ ಜಾಡಿನಲ್ಲಿ ಸಾಗಿದೆ. ಹೊಸ ಆರ್ಥಿಕ ನೀತಿ ಜಾರಿಗೆ ಬಂದ ನಂತರದಲ್ಲಿ ಜನರ ಜೀವನ ಶೈಲಿ ಬದಲಾಗಿದೆ; ಅನೇಕರ ಕೈಯಲ್ಲಿ ಕಾಸೂ ಓಡಾಡುತ್ತಿದೆ. ಇದೇ ಕಾಲಕ್ಕೆ ಹಸವಿನಿಂದ ನರಳುವವರ ಸಾಲೂ ಹನುಮನ ಬಾಲದಂತೆ ಬೆಳೆಯುತ್ತಿದೆ.


ಭಾರತದಂಥ ಜನತಂತ್ರದಲ್ಲಿ ಸರ್ಕಾರಗಳೇಕೆ ಬಡವರ ವಿರೋಧಿ ನೀತಿಗೇ ವಾಲುತ್ತವೆ ಎನ್ನುವುದು ಅಧ್ಯಯನ ಯೋಗ್ಯ ಸಂಗತಿ. ೧೯೭೭. ತುರ್ತು ಪರಿಸ್ಥಿತಿ ನಂತರದ ಚುನಾವಣೆ ಜನರ ಸಿಟ್ಟಿನ ಪ್ರಕಟಕ್ಕೆ ಒಂದು ವೇದಿಕೆಯಾಯಿತು. ಕಾಂಗ್ರೆಸ್ ಸರ್ಕಾರವನ್ನೂ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನೂ ಸೋಲಿಸಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದರು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಆಡಳಿತ ಪಕ್ಷಕ್ಕೆ ಬಹಳ ದೊಡ್ಡ ಬಹುಮತವೇನೂ ಇರಲಿಲ್ಲ. ಇಂದಿರಾ ಗಾಂಧಿ ಟೀಕಿಸುತ್ತಿದ್ದಂತೆ ನಾಲ್ಕಾರು ಪಕ್ಷಗಳ ಕಿಚಡಿ ಸರ್ಕಾರ ಅದಾಗಿತ್ತು. ಎತ್ತು ಏರಿಗೆ ಕೋಣ ನೀರಿಗೆ ಎಂಬಂಥ ಸ್ಥಿತಿ. ಮೊದಲ ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನಗಳಲ್ಲಿ ಸಕ್ಕರೆ ಮಾರಾಟ ದರವನ್ನು ಇಳಿಸುವುದು ಒಂದು. ಆ ಕಾಲದಲ್ಲಿ ಸಾಮಾಜಿಕ ಜಾಲತಾಣವಿರಲಿಲ್ಲ; ೨೪ ತಾಸೂ ಬ್ರೇಕಿಂಗ್ ನ್ಯೂಸ್ ಕೊಡುವ ಟಿವಿಗಳೂ ಇರಲಿಲ್ಲ. ಆದರೂ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಸುದ್ದಿ ಏನಪಾ ಅಂದರೆ ಕೆಜಿಗೆ ೨೦ ರೂಪಾಯಿ ಇದ್ದ ಸಕ್ಕರೆ ದರವನ್ನು ಕೇವಲ ೨ ರೂಪಾಯಿಗೆ ಇಳಿಸಿದ್ದು. ಕೆಜಿ ಸಕ್ಕರೆ ತರಲು ಅಂಗಡಿಗೆ ಹೋದವರಿಗೆ ೧೮ ರೂಪಾಯಿ ಉಳಿತಾಯದ ಸಿಹಿ ಸುದ್ದಿ ಸಿಕ್ಕಿತ್ತು. ಸರ್ಕಾರವೊಂದು ಹೇಗೆ ಕೆಲಸ ಮಾಡಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ. ಮುರರಜಿ ಸರ್ಕಾರ ಬಾಳಲಿಲ್ಲ ತನ್ನದೇ ವೈರುಧ್ಯದ ಭಾರದಲ್ಲಿ ಅದು ಕುಸಿದುಹೋಯಿತು.

ಹಂಗಿಲ್ಲದ ಏಕ ಚಕ್ರಾಧಿಪತ್ಯ
ಮೋದಿ ಪ್ರಧಾನಿಯಾದಾಗ ಅವರಿಗೆ ತಮ್ಮದೇ ಮಿತ್ರ ಪಕ್ಷಗಳ ಹಂಗು ಕೂಡಾ ಇರಲಿಲ್ಲ. ಕ್ಯಾತೆ ತೆಗೆದರೆ ಅವುಗಳನ್ನೆಲ್ಲ ಸಾರಾಸಗಟಾಗಿ ದೂರದಲ್ಲಿಟ್ಟೂ ಸರ್ಕಾರ ನಡೆಸಲು ಬೇಕಾದಷ್ಟು ಭರ್ಜರಿ ಬಹುಮತ ಅವರ ಪಕ್ಷ ಬಿಜೆಪಿಗೆ ಇತ್ತು. ಐದು ವರ್ಷದ ಆಳ್ವಿಕೆ ಕೊನೆಯಲ್ಲಿ (೨೦೧೯) ಚುನಾವಣೆ ನಡೆದಾಗ ಆ ಬಹುಮತ ಹೆಚ್ಚಿತೇ ಹೊರತೂ ತಗ್ಗಲಿಲ್ಲ. ಪ್ರಸ್ತುತ ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತೂ ಎನ್‌ಡಿಎ ಸರ್ಕಾರ ಅಲ್ಲ ಎಂದು ಹೇಳಬಹುದಾದಷ್ಟು ಬಲ ಮೋದಿಗಿದೆ. ಆ ಬಲ ಬಡವರ ಕಷ್ಟ ನೋವು ನಿವಾರಕ ಮಂತ್ರ ದಂಡವಾಗಲಿಲ್ಲ ಎನ್ನುವುದು ಖೇದದ ಸಂಗತಿ.


ಅಕ್ಕಿ, ಗೋಧಿ, ರಾಗಿ, ಜೋಳ, ಬೇಳೆ ಕಾಳುಗಳು, ಖಾದ್ಯ ತೈಲವೇ ಸೇರಿದಂತೆ ನಿತ್ಯಾಗತ್ಯ ವಸ್ತುಗಳ ಬೆಲೆ ಏಳು ವರ್ಷದಿಂದ ಏರುಗತಿಯಲ್ಲೇ ಇವೆ. ಪೆಟ್ರೋಲ್, ಡೀಸೆಲ್, ಅಡುಗೆ ಇಂಧನದ ದರವಂತೂ ಎಷ್ಟು ಹೇಳಿದರೂ ಮುಗಿಯದ ಗೋಳು. ಸಿಮೆಂಟು, ಕಬ್ಬಿಣ ಒಳಗೊಂಡ ನಿರ್ಮಾಣ ಸಾಮಗ್ರಿ ಬೆಲೆ ಎಷ್ಟು ಪಟ್ಟು ಏರಿಕೆಯಾಗಿದೆ ಎನ್ನುವುದೇ ಗೊತ್ತಿಲ್ಲ. ಜನರ ನಿತ್ಯಾಗತ್ಯವಾಗಿರುವ ಜೀವರಕ್ಷಕ ಔಷಧದ ದರ ಔಷಧ ನಿಯಂತ್ರಣ ಕಾಯ್ದೆಯನ್ನು ರದ್ದು ಪಡಿಸಿದ ದಿನದಿಂದಲೂ ಸತತ ಎಂಬಂತೆ ಏರುತ್ತಲೇ ಇದೆ. ಮನ ಮೋಹನ್ ಸಿಂಗ್ ಸರ್ಕಾರ ಅದ್ಯಾವ ಒತ್ತಡಕ್ಕೆ ಮಣಿದು ನಿಯಂತ್ರಣವನ್ನು ತೆಗೆದುಹಾಕಿತೋ ಅವರೇ ಹೇಳಬೇಕು. ಆ ನಿರ್ಧಾರವನ್ನು ಮೋದಿ ಸರ್ಕಾರ ಬದಲಿಸಬಹುದಾಗಿತ್ತು. ಅದರಿಂದ ಬಡವರಿಗೆ ಅನುಕೂಲ ಆಗುತ್ತದೆ ಎಂದೋ ಏನೋ ಆ ಉಸಾಬರಿಗೇ ಮೋದಿ ಸರ್ಕಾರ ಹೋಗಿಲ್ಲ.
ಬೆಳೆಗಾರ ರೈತ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳು ಕಟ್ಟಿರುವ ಗೋಡೆಯನ್ನು ಒಡೆಯುವುದು ಸ್ವಾತಂತ್ರ್ಯಾನಂತರದ ಯಾವ ಸರ್ಕಾರಕ್ಕೂ ಸಾಧ್ಯವಾಗಲಿಲ್ಲ. ಮೋದಿ ಸರ್ಕಾರ ಹೊಸ ಅನುಭವವನ್ನು ಜನರಿಗೆ ದಕ್ಕಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಾಗ ಪಟ್ಟಭದ್ರರು ನಿರ್ಮಿಸಿರುವ ಗೋಡೆಯನ್ನು ಒಡೆದಾರೆಂಬ ಭ್ರಮೆ ಇತ್ತು. ಏಳು ವರ್ಷದ ಬಳಿಕ ಹಿಂತಿರುಗಿ ನೋಡಿದರೆ ಅತ್ತ ರೈತರೂ ಇತ್ತ ಗ್ರಾಹಕರೂ ಮಗ್ಗಲು ಮುರಿದವರಂತೆ ಅಡ್ಡಡ್ಡ ಬಿದ್ದಿದ್ದಾರೆ. ಮೋದಿ ಸರ್ಕಾರ ಏನನ್ನೂ ಮಾಡಿಲ್ಲ ಎನ್ನುವ ದೂರು ಇದಲ್ಲ. ಅದೇನೇನನ್ನೋ ಮಾಡಿರಬಹುದು, ಆದರೆ ಹಸಿದ ಜನರ ಕೈಗೆ ತುತ್ತು ಕೊಡುವ ಕೆಲಸಕ್ಕೆ ಆದ್ಯತೆ ಕೊಟ್ಟಿಲ್ಲ. ಕೆಲಸ ಬೇಡುವ ಕೈಗಳಿಗೆ ಉದ್ಯೋಗ ಖಾತ್ರಿಯನ್ನು ಕೊಟ್ಟಿಲ್ಲ. ನಾವು ಒಪ್ಪಿ ಆಯ್ಕೆ ಮಾಡಿಕೊಂಡಿರುವ ಜನತಂತ್ರವನ್ನು ಅಣಕಿಸುವ ರೀತಿ ಇದು.

Girl in a jacket
error: Content is protected !!