ಮೈಸೂರು ಜಗಳ: ದೇವರೂ ಅಸಹಾಯಕ
ದೇವರು ಇದ್ದಾನೋ ಇಲ್ಲವೋ ಎನ್ನುವುದು ನಾಗರಿಕ ಸಮಾಜ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಇದೆ. ಒಂದು ಧರ್ಮ, ದೇವನೊಬ್ಬ ನಾಮ ಹಲವು ಎಂದರೆ ಇನ್ನೊಂದು ಧರ್ಮ, ಇರುವುದೊಂದೇ ದೇವರು ಎನ್ನುತ್ತದೆ. ಮತ್ತೊಂದು ಧರ್ಮ ಇನ್ನೇನನ್ನೋ ಹೇಳುತ್ತದೆ. ದೇವರು ಇದ್ದಾನೆ ಎನ್ನುವ ವರ್ಗದ ಜೊತೆಗೇ ದೇವರು ಇಲ್ಲ ಎನ್ನುವ ವರ್ಗ ಕೂಡಾ ಇದೆ. ಜಗತ್ತಿನ ಉದ್ದಗಲಕ್ಕೆ ಎಷ್ಟೆಲ್ಲ ಧರ್ಮ, ಎಷ್ಟೆಲ್ಲ ದೇವರು. ಕೊರೋನಾ ಮಾರಕ ದಾಳಿಯನ್ನು ನಾಶಮಾಡುವ ದೇವರು ಮಾತ್ರ ಯಾವ ಧರ್ಮದಲ್ಲೂ ಇಲ್ಲ; ಅವತರಿಸುವ ಸಂಭವವೂ ಇಲ್ಲ. ಜನರ ಪಾಡಿಗೆ ಜನ ದೇವರ ಪಾಡಿಗೆ ದೇವರು ಎನ್ನುಂತಾಗಿದೆ ಈ ಹೊತ್ತಿನ ಸ್ಥಿತಿ.
ದೇವರು ಇದ್ದಾನೆ ಎನ್ನುವುದು ಹೇಗೆ ನಂಬಿಕೆಯೋ ಇಲ್ಲ ಎನ್ನುವುದು ಕೂಡಾ ಒಂದು ನಂಬಿಕೆ ಎನ್ನುವುದು ದೇವರು ಕುರಿತಾಗಿ ಕೇಳಿಬರುವ ನೂರಾರು ತರ್ಕಗಳಲ್ಲಿ ಒಂದು. ದೇವರು ಇದ್ದಾನೆ ಎಂದರೆ ಬದುಕು ಸುಲಭ. ಹಾಗೆ ವಾದಿಸುವವರನ್ನು ಹುಡುಕಿ ಹಿಡಿದು ತದುಕುವವರು ಅಪರೂಪ. ಆದರೆ ದೇವರು ಇಲ್ಲ ಎಂದವರು ಸುಲಭದಲ್ಲಿ ಆಯಾ ದೇವರ ಭಕ್ತರ ಕೈಯಿಂದ ಪಾರಾಗುವುದು ಕಷ್ಟ. ಇದು ಎಲ್ಲ ಧರ್ಮಕ್ಕೂ ಸಮಾನವಾಗಿ ಅನ್ವಯಿಸುವ ಮಾತು. ಯಾವುದೇ ಧರ್ಮದಲ್ಲಿ ಎದ್ದು ಕಾಣಿಸುವ ಮೊದಲ ಲಕ್ಷಣವೇ ಅಸಹ್ಯ ಎನ್ನಬಹುದಾದ ಅಸಹನೆ.
ದೇವರು ಮೊದಲು. ನಂತರ ಅವನಿಂದಲೇ ಉಳಿದುದೆಲ್ಲವೂ ಸೃಷ್ಟಿಯಾಯಿತು ಎನ್ನುವುದು ಕೂಡಾ ನಂಬಿಕೆಯೇ. ಅಣುರೇಣು ತೃಣಕಾಷ್ಟದಲ್ಲಿಯೂ ದೇವರನ್ನು ಕಾಣಬಹುದು ಎನ್ನುತ್ತಾರೆ. ಎಲ್ಲಾ ಕಡೆಯೂ ದೇವರಿದ್ದಾನೆ; ಅವನ ಆಣತಿ ಇಲ್ಲದೆ ಹುಲ್ಲುಕಡ್ಡಿ ಕೂಡಾ ಈಚೆಆಚೆ ಆಗದು ಎನ್ನುವುದಾದರೆ ಸರ್ವಾಂತರ್ಯಾಮಿ ದೇವರಿಗೆ ನಿರ್ದಿಷ್ಟ ಸ್ಥಳ, ದಿಕ್ಕು ಯಾಕೆ ಬೇಕೆನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ ಆದರೆ ಬಾಯಿ ಮುಚ್ಚಿಸಲು ಸಾಕಷ್ಟು ಮಾರ್ಗ ಉಂಟು. ಅದೇನೇ ಇರಲಿ, ಈಗೀಗ ಎಲ್ಲದಕ್ಕೂ ದೇವರನ್ನು ಹೊಣೆ ಮಾಡುವ ದೇವರನ್ನೇ ಉತ್ತರದಾಯಿಯನ್ನಾಗಿಸುವ ಚಟ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಮೈಸೂರಿನಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ನಡೆದ ಜಟಾಪಟಿ.
ಇಬ್ಬರು ಮಹಿಳೆಯರ ಕಾಟ
ಕಳೆದ ವಾರಾಂತ್ಯದವರೆಗೂ ಮೈಸೂರಿನ ಜಿಲ್ಲಾಧಿಕಾರಿ ಆಗಿದ್ದವರು ರೋಹಿಣಿ ಸಿಂಧೂರಿ. ಅದೇ ಮೈಸೂರು ನಗರ ಪಾಲಿಕೆಯ ಕಮೀಷನರ್ ಆಗಿದ್ದವರು ಶಿಲ್ಪಾ ನಾಗ್. ಈ ಇಬ್ಬರನ್ನೂ ಈಗ ಬೇರೆಡೆಗೆ ವರ್ಗಾಯಿಸಿ ಎಲ್ಲ ಇತ್ಯರ್ಥವಾಯಿತೆಂದು ಸರ್ಕಾರ ಕೈತೊಳೆದುಕೊಂಡಿದೆ. ರೋಹಿಣಿ ಸಿಂಧೂರಿ ಅವರದು ಇಂಥ ವಿವಾದಗಳಿಗೆ ಹೊಸ ಹೆಸರೇನೂ ಅಲ್ಲ. ಮಂಡ್ಯದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದಾಗ, ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ವಿವಾದಗಳನ್ನು ನಿಭಾಯಿಸಿದವರು ಅವರು. ಕೆಲ ಸಂದರ್ಭಗಳಲ್ಲಿ ಮೈಮೇಲೆ ವಿವಾದವನ್ನು ತಾವಾಗೇ ಎಳೆದುಕೊಂಡವರು. ಅವರ ಹೆಸರು ಮೊದಲಿಗೆ ರಾಜ್ಯದ ಉದ್ದಗಲಕ್ಕೆ ಕೇಳಿ ಬಂದುದು ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ. ರವಿ, ನೇಣು ಹಾಕಿಕೊಂಡು ಸತ್ತ ಸಂದರ್ಭದಲ್ಲಿ. ಆಗ ತೇಲಿ ಬಂದ ಸುದ್ದಿ ಪ್ರಕಾರ ರವಿ ಮತ್ತು ರೋಹಿಣಿ ತಮ್ಮಿಬ್ಬರ ಐಎಎಸ್ ತರಬೇತಿ ದಿನಗಳಿಂದ ಗೆಳೆಯರಾಗಿದ್ದವರು. ಎಲ್ಲವೂ ರವಿ ಅಂದುಕೊಂಡಂತೆಯೇ ನಡೆದಿದ್ದರೆ ಅವರಿಬ್ಬರು ಮದುವೆ ಆಗಬೇಕಿತ್ತು. ನಂಬಲೂ ಆಗದ ನಂಬದಿರಲೂ ಆಗದ ಆ ಸುದ್ದಿ ಹೇಳುವಂತೆ ಆ ಮದುವೆ ನಡೆಯಲಿಲ್ಲ, ರವಿ ರೋಹಿಣಿಯರಿಬ್ಬರಿಗೂ ಬೇರೆ ಬೇರೆಯವರೊಂದಿಗೆ ಮದುವೆಯಾಯಿತು. ರವಿ ಸಾವಿನ ನಂತರದಲ್ಲಿ ತಿಂಗಳುಗಳ ಕಾಲ ಇವರದೇ ಅಂತೆಕಂತೆ ಕಥೆ ಧಾರಾವಾಹಿಯಂತೆ ನಡೆದುಹೋಯಿತು.
ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ, ಕರ್ತವ್ಯ ನಿರ್ವಹಣೆ ಕಾರಣವಾಗಿ ಜಿಲ್ಲೆಯ ಅತ್ಯಂತ ಪ್ರಭಾವಿ ರಾಜಕಾರಣಿ, ಶಾಸಕ ಎಚ್.ಡಿ. ರೇವಣ್ಣನವರ ಮನ ಗೆದ್ದರು. ರೋಹಿಣಿ ಅವರನ್ನು ವರ್ಗ ಮಾಡಿದ ಹಂತದಲ್ಲಿ ಅದನ್ನು ತೀವ್ರವಾಗಿ ವಿರೋಧಿಸಿದವರು ರೇವಣ್ಣ. ಮಂಡ್ಯ ಸಿಇಒ ಹುದ್ದೆಯಲ್ಲಿ ರೋಹಿಣಿ, ಕಿರಿಕಿರಿ ಮಾಡಿಕೊಂಡಾಗ ತಮ್ಮ ಜಿಲ್ಲೆಗೆ “ಆ ಹೆಣ್ಣು ಮಗಳನ್ನು” ವರ್ಗಾಯಿಸುವಂತೆ ರೇವಣ್ಣ ಬೇಡಿಕೆ ಇಟ್ಟಿದ್ದರು. ಆದರೆ ಅದೇ ಜಿಲ್ಲೆಯ ಇನ್ನೊಬ್ಬ ಶಾಸಕರಾಗಿದ್ದ ಬಿಜೆಪಿಯ ಎ. ಮಂಜು ಪ್ರಕಾರ ರೋಹಿಣಿ ಒಬ್ಬ ದುರಹಂಕಾರಿ ಅಧಿಕಾರಿ. ಜನ ಪ್ರತಿನಿಧಿಗಳಿಗೆ ಕಿಂಚಿತ್ ಗೌರವವನ್ನೂ ಕೊಡದ ಸರ್ವಾಧಿಕಾರಿ ಧಿಮಾಕಿನವರು ಇತ್ಯಾದಿ ಇತ್ಯಾದಿ. ಅಂಥವರು ಹಾಸನ ಜಿಲ್ಲೆಗೆ ಬೇಡ ಎನ್ನುವುದು ಮಂಜು ವಾದವಾಗಿತ್ತು. ಇತ್ತೀಚಿನ ವಿವಾದವೆಂದರೆ ಚಾಮರಾಜನಗರ ಜಿಲ್ಲೆಗೆ ಅಗತ್ಯವಿದ್ದ ಆಕ್ಸಿಜೆನ್ ಪೂರೈಕೆಗೆ ರೋಹಿಣಿ ಅಡ್ಡಗಾಲು ಹಾಕಿದರು ಎನ್ನುವುದು.ಈ ವಿಚಾರದಲ್ಲಿಯೂ ಸಾಕಷ್ಟು ಭರ್ತ್ಸನೆ, ಸಮರ್ಥನೆಗಳನ್ನು ಅವರು ಕೇಳಬೇಕಾಗಿ ಬಂತು.
ರಾಜಕಾರಣದ ಸುತ್ತ ಗಿರಕಿ
ಅಧಗಳು ಅದರಲ್ಲೂ ಮುಖ್ಯವಾಗಿ ಐಎಎಸ್, ಐಪಿಎಸ್ ದರ್ಜೆ ಅಧಿಕಾರಿಗಳು ಸಾಮಾನ್ಯವಾಗಿ ಒಬ್ಬರಲ್ಲ ಒಬ್ಬರು ಪ್ರಭಾವಿ ರಾಜಕಾರಣಿಗಳ ಸ್ನೇಹ ವಲಕಯದಲ್ಲಿರುತ್ತಾರೆ. ಅಧಿಕಾರದಲ್ಲಿರುವ, ಇಂದಲ್ಲವಾದರೆ ನಾಳೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವ ರಾಜಕಾರಣಿಗಳೊಂದಿಗೆ ಅವರು ಸ್ನೇಹ ವಿಶ್ವಾಸ ಬೆಳೆಸುತ್ತಾರೆ. ಯಾವುದೇ ರಾಜಕಾರಣಿಗೆ ತಮ್ಮ ಬೇಕು ಬೇಡಗಳನ್ನು ಹೇಳಿಕೇಳದೆಯೇ ನೋಡಿಕೊಳ್ಳುವ; ಅದನ್ನು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸುವ ಅಧಿಕಾರಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಇದೊಂದು ರೀತಿಯಲ್ಲಿ ಕೊಡುಪಡೆ ವ್ಯವಹಾರ. ಈ ಮಾತಿಗೆ ಅಪವಾದ ಇಲ್ಲ ಎಂದಲ್ಲ. ಆದರೆ ಅಂಥವರು ದೇಶದಲ್ಲೇ ವಿರಳಾತಿವಿರಳ.
ರೇವಣ್ಣ ಕಾರಣವಾಗಿ ಹಾಸನ ಜಿಲ್ಲೆ ಜೆಡಿಎಸ್‌ಗೆ ಪ್ರಿಯವಾಗುವ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲೆ ಜೆಡಿಎಸ್‌ಗೆ ಶಾಸಕ ಸಾರಾ. ಮಹೇಶ್ ಕಾರಣವಾಗಿ ಅಪ್ರಿಯರಾಗಿದ್ದಾರೆ. ರೋಹಿಣಿ ವಿರುದ್ಧ ಕೆಂಡದ ಮಳೆಯನ್ನು ಮಹೇಶ್ ತಿಂಗಳುಗಳಿಂದ ಕಾರುತ್ತಿದ್ದಾರೆ. ಮೈಸೂರಿನಿಂದ ಹೊರಕ್ಕೆ ರೋಹಿಣಿಯವರನ್ನು ವರ್ಗ ಮಾಡಿದ್ದು ಮಹೇಶ್‌ರ ಸಿಟ್ಟನ್ನು ಶಮನ ಮಾಡಿಲ್ಲ. ಆ ಅಧಿಕಾರಿಯನ್ನು ಸೇವೆಯಿಂದಲೇ ವಜಾ ಮಾಡಬೇಕೆನ್ನುವುದು ಅವರ ಒತ್ತಾಯ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಡಿಸ್‌ಮಿಸ್ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎನ್ನುವುದು ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಕೆಲವು ಕಾಲ ಸಚಿವರೂ ಆಗಿದ್ದ ಮಹೇಶರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅವರ ಒತ್ತಾಯವಂತೂ ಮುಂದುವರಿದಿದೆ.
೧೨ ಕೋಟಿಯ ಕಥೆ ಏನು?
ಇನ್ನು ಶಿಲ್ಪಾ ನಾಗ್ ವಿಚಾರ. ಮೈಸೂರು ಮಹಾ ನಗರ ಪಾಲಿಕೆ, ಕೋವಿಡ್ ನಿಯಂತ್ರಣಕ್ಕೆ ಮಾಡಿರುವ ವೆಚ್ಚದಲ್ಲಿ ೧೨ ಕೋಟಿ ರೂಪಾಯಿ ಎಲ್ಲಿ ಏನಾಗಿದೆ ಎಂಬುದನ್ನು ಪಾಲಿಕೆ ಕಮೀಷನರ್ ಶಿಲ್ಪಾ ಕೊಟ್ಟಿಲ್ಲ ಎನ್ನುವುದು ರೋಹಿಣಿ ಆರೋಪ. ಅವರ ಪ್ರಕಾರ ಈ ವಿವರ ಕೇಳುವ ಹಕ್ಕು ಅಧಿಕಾರ ಡಿಸಿಗೆ ಇದೆ. ಆದರೆ ಶಿಲ್ಪಾ ಹೇಳುವುದೇ ಬೇರೆ. ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನ ರೋಹಿಣಿಯವರದು. ರೋಹಿಣಿ ಡಿಕ್ಷನರಿಯಲ್ಲಿ ಫ್ಯಾಕ್ಟ್ ಫೈಂಡಿಂಗ್ ಎನ್ನುವುದಿಲ್ಲ, ಇರುವುದೆಲ್ಲವೂ ಫಾಲ್ಟ್ ಫೈಂಡಿಂಗ್ ಎನ್ನುವುದು ಶಿಲ್ಪಾ ದೂರು. ಈ ಮಧ್ಯೆ ೧೨ ಕೋಟಿ ವಿಚಾರ ಈಗ ವರ್ಗಾವಣೆಯ ಬಳಿಕ ಪ್ರಸ್ತಾಪದಲ್ಲಿಲ್ಲ. ಹೊಸ ಡಿಸಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ. ಅದೇ ರೀತಿ ರೋಹಿಣಿ ಮಾಡಿದ್ದ ತಥಾಕಥಿತ ರಿಯಲ್ ಎಸ್ಟೇಟ್ ಅವ್ಯವಹಾರವೂ ನೇಪಥ್ಯಕ್ಕೆ ಸರಿಯುವ ಲಕ್ಷಣ ಕಾಣಿಸುತ್ತಿದೆ. ಇಂಥ ಆರೋಪಗಳು ಬಂದಾಗ ರಾಜಕಾರಣದ ಪಾತ್ರ ಢಾಳಾಗಿ ಕಾಣಿಸುತ್ತದೆ. ವರ್ಗ, ಸಸ್ಪೆಂಡ್‌ಗಳಿಂಥ ಸರ್ಕಾರದ ತೋರಿಕೆ ಕ್ರಮಗಳಿಂದ ಅದೇ ರಾಜಕಾರಣದ ಒಳ ಹಿತವನ್ನು ಕಾಯುವ ಕೆಲಸ ನಡೆಯುತ್ತದೆ. ಮೈಸೂರಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾದ ಆರೋಪ, ದೂರುಗಳು ಇನ್ನೇನಿದ್ದರೂ ದೇವರಿಗೆ ಬಿಟ್ಟ ವಿಚಾರ.
ಎಸ್.ಟಿ. ಸೋಮಶೇಖರ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು. ಈ ಇಬ್ಬರ ಜಗಳವನ್ನು ಕಂಡೂ ಕಾಣದಂತೆ ಅಸಹಾಯಕರಾಗಿ ಕುಳಿತವರು. ಮೈಸೂರಿನ ಮಠವೊಂದರಲ್ಲಿ ಅದರ ಸ್ವಾಮಿಗಳ ಸಮ್ಮುಖದಲ್ಲಿ ರಾಜಿ ಮಾಡಿಸುವ ಯತ್ನ ನಡೆಯಿತೆಂಬ ಸುದ್ದಿ ಆರೋಗ್ಯಕರ ಜನತಂತ್ರಕ್ಕೆ ಶೋಭೆ ತರುವ ಬೆಳವಣಿಗೆಯಲ್ಲ. ಮಂತ್ರಿ, ಮುಖ್ಯ ಕಾರ್ಯದರ್ಶಿ ಒಳಗೊಂಡ ವ್ಯವಸ್ಥೆಯನ್ನು ಅವಹೇಳನ ಮಾಡುವ ಬೆಳವಣಿಗೆ ಇದು. ಈ ವಿಚಾರದಲ್ಲಿ ವಿರೋಧ ಪಕ್ಷಗಳೂ ಬಾಯಿ ಮುಚ್ಚಿಕೊಂಡಿರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಇದೇನೇ ಇರಲಿ, ಸಚಿವ ಸೋಮಶೇಖರ್ ಪ್ರಕಾರ ಬೆಟ್ಟದ ಮೇಲೆ ಕುಳಿತಿರುವ ದೇವಿ ಚಾಮುಂಡೇಶ್ವರಿ ಎಲ್ಲ ಬೆಳವಣಿಗೆಗಳನ್ನೂ ನೋಡುತ್ತಿದ್ದಾಳೆ, ಅವಳೇ ಕಾಪಾಡುತ್ತಾಳೆ! ನಮ್ಮಲ್ಲಿ ದೇವರಿಗೆ ಇರುವಷ್ಟು ಕೆಲಸ ಇನ್ಯಾರಿಗೂ ಇದ್ದಂತಿಲ್ಲ. ಇಬ್ಬರು ಮಹಿಳಾ ಅಧಿಕಾರಿಗಳ ತಾನುಂಟೋ ಮೂರು ಲೋಕವುಂಟೋ ಎಂಬ ಸ್ಥಿತಿಯ ಜಗಳವನ್ನು ಇತ್ಯರ್ಥ ಮಾಡುವುದು ಆ ದೇವಿಗೂ ಸಾಧ್ಯವಿರಲಿಕ್ಕಿಲ್ಲ. ಮಹಿಷಾಸುರನನ್ನು ಕೊಂದಷ್ಟು ಸುಲಭ ಅಲ್ಲ ಇದು!
ಈಜುಕೊಳದಲ್ಲಿ ಕದಡಿದ ನೀರು
ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಿಸಿರುವ ರೋಹಿಣಿ ಸಿಂಧೂರಿ ಕ್ರಮವೂ ತೀವ್ರ ಟೀಕೆಗೆ ಒಳಗಾಗಿದೆ. ಡಿಸಿ ಮನೆ ಆವರಣದಲ್ಲಿ ಈಜುಕೊಳವೆಂದರೆ ಅದು ವೈಯಕ್ತಿಕ ಬಳಕೆಗೆ ಮಾತ್ರ. ಸಾರ್ವಜನಿಕ ಹಣವನ್ನು ಇದಕ್ಕೆ ಬಳಸುವುದು ಎಂದರೆ ಪೋಲು ಎಂದೇ ಅರ್ಥ. ಅವರಿಗೆ ಅದರಲ್ಲೂ ಮಹಿಳಾ ಡಿಸಿಗಳಾದವರಿಗೆ ಸಾರ್ವಜನಿಕ ಈಜು ಕೊಳದಲ್ಲಿ ಈಜಾಡುವುದು ತುಸು ಕಷ್ಟದ ಮಾತೇ ಹೌದು. ಆದರೆ ವ್ಯಾಯಾಮಕ್ಕೆ ಈಜುವುದೊಂದೇ ಮಾರ್ಗವಲ್ಲ. ಬೇರೆ ಬೇರೆ ಕಸರತ್ತುಗಳಿಗೆ ಅವಕಾಶ ಇದ್ದೇ ಇದೆ. ಘಟನೆ ನೋಡಿದರೆ ಡಿಸಿ ಆದವರಿಗೆ ಇಂಥ ಅನಗತ್ಯ ತೆವಲು ಸಾಮಾನ್ಯ ಎನಿಸುತ್ತದೆ.
ತೊಂಭತ್ತರ ದಶಕದಲ್ಲಿ ಕೆ. ರತ್ನಪ್ರಭಾ ರಾಯಚೂರಿನಲ್ಲಿ ಡಿಸಿ. ಮುಂದೆ ಅವರು ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯೂ ಆದರು. ಅದಾದ ಬಳಿಕ ರಾಜಕೀಯ ಪ್ರವೇಶಿಸಿ ತಿರುಪತಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ಅದನ್ನು ಪಕ್ಕಕ್ಕೆ ಇಡೋಣ. ರಾಯಚೂರಿನಲ್ಲಿ ಕುಡಿಯುವ ನೀರಿನದೇ ಬಹಳ ದೊಡ್ಡ ಸಮಸ್ಯೆ. ಅಂಥ ಊರಿನಲ್ಲಿ ಈಜುಕೊಳವೆಂದರೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ.
ಡಿಸಿ ತೀರ್ಮಾನಕ್ಕೆ ಯಾರು ಎದುರಾಡಬೇಕು. ಸ್ಟೇಷನ್ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನದ ಜಾಗದಲ್ಲಿ ಒಂದು ಬೆಳಗ್ಗೆ ದೌಹಾಳ ಯಂತ್ರಗಳು ಬಂದವು. ಅಕಿಇಕ ಎನ್ನುವುದರ ಒಳಗಾಗಿ ನೂರು ಅಡಿ ಉದ್ದ ಐವತ್ತು ಅಡಿ ಅಗಲದ ಗುಂಡಿ ತೋಡಿದವು. ತಮ್ಮ ಬಯಕೆಯ ಈಜುಕೊಳ ನಿರ್ಮಾಣಕ್ಕೆ ಅಡಿಗಲ್ಲನ್ನಿಟ್ಟ ಡಿಸಿ ಫೋಟೋಕ್ಕೆ ಪೋಸು ಕೊಟ್ಟರು. ಕುಡಿಯಲು ಹನಿಹನಿ ನೀರಿಗೆ ಪರದಾಡಬೇಕಿದ್ದ ಊರಿಗೆ ಈಜುಕೊಳ ಬೇಕೇ ಎಂಬ ಚರ್ಚೆ ಒಣ ವಿವಾದವೆನಿಸಿದ್ದೊಂದು ದುರಂತ. ಡಿಸಿ ತೀರ್ಮಾನವೆಂದರೆ ಪ್ರಶ್ನಾತೀತ ಎಂಬ ಕೆಲವರ ವಕಾಲತ್ತೂ ಇದಕ್ಕೆ ಕಾರಣವಾಯಿತು. ಮುಂದೇನಾಯಿತು…? ಈಜುಕೊಳದಲ್ಲಿ ಜನ ಮಿಂದು ನಲಿದಾಡಿದರೆ…? ಊಹೂಂ ಏನೂ ಆಗಲಿಲ್ಲ. ಈಜುಕೊಳದ ಕಾಮಗಾರಿ ಆ ಡಿಸಿಯ ನಿರ್ಗಮನದೊಂದಿಗೆ ನೆನಗುದಿಗೆ ಬಿತ್ತು. ತೆವಲಿನ ಕಥೆಗಳ ಮತ್ತೊಂದು ಅಧ್ಯಾಯವಾಗಿ ಅದು ಉಳಿಯಿತು.
ಡಿಸಿ ಆಯಾ ಜಿಲ್ಲೆಯ ದಂಡಾಧಿಕಾರಿಯೂ ಆಗಿರುತ್ತಾರೆ. ಸಾಮಾನ್ಯ ಜನರ ದೃಷ್ಟಿಯಲ್ಲಿ ಡಿಸಿ ಎಂದರೆ ಪ್ರತ್ಯಕ್ಷ ಸರ್ಕಾರ. ಇಡೀ ಜಿಲ್ಲೆಯನ್ನು ನಿಯಂತ್ರಿಸುವ ಅಧಿಕಾರವಿರುವ ಡಿಸಿ, ಜನರ ಬೇಕು ಬೇಡಗಳನ್ನು ಮೊದಲಿಗೆ ನೋಡಬೇಕು. ಸಮಾಜದಲ್ಲಿ ಧ್ವನಿ ಇಲ್ಲದವರ; ತುಳಿತಕ್ಕೆ ಒಳಗಾದವರ ಪರವಾಗಿ ಆಡಳಿತ ನಿಲ್ಲುವಂತೆ ನೋಡಿಕೊಳ್ಳಬೇಕು. ಇಡೀ ಜಿಲ್ಲಾ ಆಡಳಿತ ಈ ನೀತಿ ಅನುಷ್ಟಾನದ ನಿಟ್ಟಿನಲ್ಲಿ ಸಾಗುವಂತೆ ಮಾಡಬೇಕು. ಚಿಲ್ಲರೆ ವಿಷಯಕ್ಕೆ ಚಿಲ್ಲರೆ ಜಗಳವಾಡುತ್ತ ಚಿಲ್ಲರೆ ಮನರಂಜನೆ ಕೊಡುವ ಕೆಲಸವನ್ನು ಐಎಎಸ್ ಐಪಿಎಸ್‌ಗಳು ಮಾಡಬಾರದು.