ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ
ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮಳೆ ನೀರು ಹಿಡಿಯಿರಿ(ಕ್ಯಾಚ್ ದ ರೈನ್)” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿಶ್ವ ಜಲದಿನವನ್ನು ಆಚರಿಸಿದ್ದರು. ಅಲ್ಲದೆ ಜಲ ಪ್ರಮಾಣ ವಚನವನ್ನೂ ಘೋಷಿಸಿದ್ದರು. ಈ ಅಭಿಯಾನವು ನೀರಿನ ಅಗತ್ಯವನ್ನು ಸಾರಿಹೇಳುವ ಮಳೆಕೊಯ್ಲು ಕಾರ್ಯಕ್ರಮವೇ ಆಗಿದ್ದಿತು. ಮಳೆಕೊಯ್ಲು ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅನುಸರಿಸಿ ಅಳವಡಿಸಿಕೊಂಡ ಆಧುನಿಕ ಪರಿಭಾಷೆ. ಪರಿಸರ ಮತ್ತು ಹವಾಮಾನದಲ್ಲಾದ ವ್ಯತಿರಿಕ್ತ ಬದಲಾವಣೆಯಿಂದ ಪ್ರಚಲಿತಗೊಂಡ ಪದ್ಧತಿಯೂ ಹೌದು, ಇಡೀ ಭೂಮಂಡಲವು ಮಾನವ ನಿರ್ಮಿತ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಲುಷಿತಗೊಳ್ಳುತ್ತಿದೆ.
ಪರಿಸರದ ಸಂಪನ್ಮೂಲಗಳಾದ ಸಸ್ಯ ಮತ್ತು ಪ್ರಾಣಿಸಂಪತ್ತು ನಾಶವಾಗುವ ಮೂಲಕ ಜೀವಜಲ ಮತ್ತು ಗಾಳಿ ಮಲಿನಗೊಳ್ಳುತ್ತಿವೆ. ಆಧುನಿಕ ಕೈಗಾರಿಕಾ ವ್ಯವಸ್ಥೆ, ವಾಹನದಟ್ಟಣೆ, ನಗರನಿರ್ಮಾಣ ಕ್ರಿಮಿನಾಶಕಗಳ ಬಳಕೆಗಳಿಂದ ಗಾಳಿ ಮತ್ತು ನೀರು ತನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರಾಚೀನರು ಪರಿಸರದ ಉಳಿವಿಗೆ ಅನುಸರಿಸಿ, ಅಳವಡಿಸಿಕೊಂಡಿದ್ದ ಸರಳ ಮತ್ತು ನಿಸರ್ಗದತ್ತ ಮಾರ್ಗೋಪಾಯಗಳನ್ನು ಅನುಸರಿಸುವ ಅಗತ್ಯವಿದೆ ಅಂತವುಗಳಲ್ಲಿ ಮಳೆಕೊಯ್ದು ಪದ್ಧತಿ ಬಹುಮುಖ್ಯವಾಗಿದೆ. ಮಳೆಕೊಯ್ಲು ಎಂಬುದು ಇತ್ತೀಚಿನವಾದರೂ ಅದರ ಆಶಯ ಮತ್ತು ಅನುಸರಣೆಗಳು ಅತ್ಯಂತ ಪ್ರಾಚೀನವೇ. ಇದಕ್ಕೆ ಉತ್ತಮ ಉದಾಹರಣೆ ಚಿತ್ರದುರ್ಗ. ಅಲ್ಲಿನ ಬೆಟ್ಟ, ಬೆಟ್ಟವನ್ನು ಆವರಿಸಿದ ಕೋಟೆ ಪರಿಸರವನ್ನು ಗಮನಿಸಿದ ಎಲ್ಲರ ಅನುಭವಕ್ಕೂ ಬರುತ್ತದೆ.
ಚಿತ್ರದುರ್ಗ ಶಿಲಾಯುಗ ಕಾಲದಿಂದಲೂ ಪ್ರಸಿದ್ಧ. ಅಲ್ಲದೆ,ಆದಿ ಇತಿಹಾಸ ಕಾಲಕ್ಕೆ ಸಂಬಂಧಿಸಿದಂತೆ ಚಂದ್ರವಳ್ಳಿ ಹೆಸರಾಗಿದ್ದು, ಪ್ರಾಚೀನ ಪಟ್ಟಣವೆಂಬ ಖ್ಯಾತಿಯನ್ನೂ ಪಡೆದಿತ್ತು. ಅಂತೆಯೇ ಕದಂಬ ಮಯೂರವರ್ಮನ ಶಾಸನ ಚಂದ್ರವಳ್ಳಿ ಕೆರೆಯ ಪ್ರಾಚೀನತೆಯನ್ನು ಸಾಕ್ಷೀಕರಿಸಿದೆ. ಶಾತವಾಹನ ಕಾಲದ ಹೊತ್ತಿಗೆ ಈ ಕೆರೆ ನಿರ್ಮಾಣವಾಗಿತ್ತೆಂದು ಇದರಿಂದ ಸ್ಪಷ್ಟವಾಗಿದೆ. ಇದು ಪ್ರಾಚೀನ ನಗರದ ಪ್ರಮುಖ ಜಲಮೂಲವೂ ಆಗಿತ್ತು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಶಾಸನೋಲ್ಲೇಖಿತ ಪ್ರಾಚೀನ ಕರೆ ಅದು ಚಂದ್ರವಳ್ಳಿಯದೇ ಆಗಿದೆ. ಈ ಕೆರೆಯು ಪ್ರಾಚೀನರ ಮಳೆಕೊಯ್ಲು ಪದ್ಧತಿಯ ಜಲಾಗಾರವೇ ಆಗಿದೆ. ಪ್ರಾಚೀನ ಕಾಲದಿಂದಲೂ ಚಿತ್ರದುರ್ಗ ಪರಿಸರದ ಬೆಟ್ಟ ಮತ್ತು ಕೆಳಭಾಗಗಳು ಜನವಸತಿಯ ಅತ್ಯಂತ ಯೋಗ್ಯ ತಾಣಗಳೇ ಆಗಿದ್ದವು. ಶಾತವಾಹನ, ಕದಂಬರಿಂದ ಹಿಡಿದು, ಕಲ್ಯಾಣ ಚಾಲುಕ್ಯ, ಹೊಯ್ಸಳ ಕಾಲಕ್ಕೆ ನಿರ್ಮಾಣವಾದ ಅನೇಕ ಗುಹಾಲಯಗಳು ಈ ಬೆಟ್ಟಪರಿಸರದಲ್ಲಿವೆ. ಹೊಯ್ಸಳ ಅಧಿಕಾರಿ ಪೆರುಮಾಳೆ ದಣ್ಣಾಯಕನು ಬೆಟ್ಟದ ಮೇಲಿನ ಬ್ರಹ್ಮಪುರಿಗೇರಿಯನ್ನು ಪೆರುಮಾಳೆಪುರವಾಗಿ ಮಾಡಿದ್ದುದು ಇತಿಹಾಸ. ಮುಂದೆ ವಿಜಯನಗರ ಮತ್ತು ಪಾಳೆಯಗಾರರ ಅವಧಿಯಲ್ಲಿ ರಾಜ್ಯಾಡಳಿತದ ಪ್ರಮುಖ ತಾಣವೂ ಆಯಿತು. ಈ ಅವಧಿಯಲ್ಲಿ ಕೋಟೆಕೊತ್ತಲಗಳು ನಿರ್ಮಾಣವಾಗಿ ಜನನಿಬಿಡ ಪ್ರದೇಶವಾಯಿತು. ಬೇಸಿಗೆಯಲ್ಲೂ ನೀರು ಮತ್ತು ನೀರಿನ ಮೂಲಗಳನ್ನು ಕಾಪಾಡಿಕೊಳ್ಳುವ ಪರಿಪಾಠ ಸಹಜವಾಗಿಯೇ ಅನಿವಾರ್ಯವೂ ಆಯಿತು. ಇದು ಎಷ್ಟರಮಟ್ಟಿಗೆ ಎಂದರೆ ಬೆಟ್ಟದ ತುತ್ತತುದಿಯ ಬಂಡೆಯ ಮೇಲೆ ಬಿದ್ದ ಮಳೆಯ ಹನಿಯನ್ನು ಅಲ್ಲಿನ ಲಭ್ಯ ಸಾಮಗ್ರಿಗಳನ್ನು ಬಳಸಿ, ಸ್ವಾಭಾವಿಕ ವಿಧಾನಗಳನ್ನು ಅನುಸರಿಸಿ ನಿಲ್ಲಿಸುವ, ಅಲ್ಲಿಯೇ ಇಂಗಿಸುವ ಪ್ರಾಚೀನರ ಕಲ್ಪನೆ ಅತ್ಯದ್ಭುತ. ಇದಕ್ಕೆ ಚಿತ್ರದುರ್ಗ ಬೆಟ್ಟ ಪರಿಸರ ಪ್ರಮುಖ ಸಾಕ್ಷ್ಯವಾಗಿದೆ. ಸಹಜ ಸೌಂದರ್ಯವನ್ನು ಹೊಂದಿದ ಚಿತ್ರದುರ್ಗವು ಅಲ್ಲಿನ ಕಣಶಿಲೆಯ ಬೃಹತ್ ಬಂಡೆಗಲ್ಲುಗಳಿಂದ ಕೂಡಿದ ಬೆಟ್ಟಗುಡ್ಡಗಳ ತಾಣ.
ಜೊತೆಗೆ ಕಣಿವೆ, ಬಯಲುಗಳು, ನಿಸರ್ಗದತ್ತ ದೊಣೆ, ಕೊಳ, ಹೊಂಡಗಳುಳ್ಳ ಪರಿಸರವೂ ಆಗಿದೆ. ಈ ಹಿನ್ನೆಲೆಯಲ್ಲಿಯೇ ಈ ಪರಿಸರವು ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾನವ ಸಂಸ್ಕೃತಿಯ ಬಹುದೊಡ್ಡ ನೆಲೆಯಾಗಿ ಹೊರಹೊಮ್ಮಿರುವುದು. ನಿಸರ್ಗದತ್ತ ಜಲಸಂಗ್ರಹಗಳಿಗೆ ಸಣ್ಣಪುಟ್ಟ ಅಡೆ, ತಡೆಗಳನ್ನು ನಿರ್ಮಿಸುವ ಮೂಲಕ ವರ್ಷದುದ್ದಕ್ಕೂ ನೀರನ್ನು ಬೆಟ್ಟದ ಮೇಲೆ ಸಂಗ್ರಹಿಸಿಡುವ ಪ್ರಯತ್ನಕ್ಕೆ ಕೈಹಾಕಿದ್ದುದು ಇಂದಿಗೂ ಜ್ವಲಂತವಾಗಿದೆ. ಇದನ್ನು ಅಲ್ಲಿಗೆ ನೂರಾರು ದೊಣೆಗಳು, ಹೊಂಡಗಳು, ಕೊಳ, ಬಾವಿಗಳಿಂದ ಕಾಣಬಹುದು. ಅವುಗಳಲ್ಲಿ ಗೋಪಾಲಸ್ವಾಮಿ ಹೊಂಡ, ಅಕ್ಕ-ತಂಗಿಯರ ಹೊಂಡ, ಸಿಹಿನೀರು ಹೊಂಡ, ಸಂತೆಹೊಂಡ, ಕೆಳಗೋಟೆಯ ಚನ್ನಕೇಶವಸ್ವಾಮಿ ಹೊಂಡ, ವೆಂಕಟರಮಣಸ್ವಾಮಿ ಹೊಂಡಗಳು, ತಣ್ಣೀರು ದೋಣಿ, ಕಾಮನಬಾವಿ, ಕೋಟೆಯ ಸುತ್ತಲಿನ ಕಂದಕ, ಕರವರ್ತಿಕೆರೆ, ರಾಮದೇವರ ಒಡ್ಡು, ತಿಮ್ಮಣ್ಣನಾಯಕನ ಕೆರೆ, ಮಠದ ಕೆರೆಗಳು, ಮಲ್ಲಾಪುರ, ಗೋನೂರು ಮೊದಲಾದ ಕೆರೆಕಟ್ಟೆಗಳು ಪ್ರಾಚೀನರ ಮಳೆಕೊಯ್ಲು ಪದ್ಧತಿಯ ಜೀವಾಳಗಳೇ ಆಗಿದೆ. ಇಂತಹ ವ್ಯವಸ್ಥೆಯನ್ನು ನಿರ್ಮಿಸಲು ಅವರು ವೆಚ್ಚದಾಯಕ ಕಾರ್ಯಕ್ಕೆ ಕೈಹಾಕದೆ ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನೇ ಬಳಸಿ ಪರಿಸರಕ್ಕೆ ಪೂರಕವಾದ ಸರಳ ವಿಧಾನಗಳನ್ನು ಅಳವಡಿಸಿಕೊಂಡಿದ್ದು ಶ್ಲಾಘನಾರ್ಹ, ಆ ಮೂಲಕ ಬೆಟ್ಟ ಪರಿಸರದ ಜನರಿಗೆ ವರ್ಷದುದ್ದಕ್ಕೂ ನೀರನ್ನು ಕಾಪಿಟ್ಟುಕೊಳ್ಳುವ ಪ್ರಯತ್ನವನ್ನು ಅತ್ಯಂತ ವ್ಯವಸ್ಥಿತವಾಗಿ ಕಂಡುಕೊಂಡಿದ್ದರು. ಇದಕ್ಕೆ ಇಂದಿಗೂ ಕಾಣಬರುವ ಎಲ್ಲ ಜಲಸಂಗ್ರಹಾಗಾರಗಳು ಉತ್ತಮ ನಿದರ್ಶನಗಳಾಗಿದೆ. ಬೆಟ್ಟದ ಮೇಲೆ ಹೊಯ್ಸಳರ ಕಾಲದ ಹೊತ್ತಿಗೆ ವಸತಿಯಿತ್ತು. ಅದನ್ನು ಪೆರುಮಾಳೆ ದಣ್ಣಾಯಕನು ಪೆರುಮಾಳೆಪುರವೆಂದು ಕರೆದು ದಾನದತ್ತಿಗಳನ್ನು ನೀಡಿದ್ದುದು ಶಾಸನಗಳಿಂದ ಸ್ಪಷ್ಟವಾಗುತ್ತದೆ.
ವಿಜಯನಗರ ಕಾಲಕ್ಕೆ ಇಲ್ಲಿನ ಕೋಟೆಯ ನಿರ್ಮಾಣದ ಸಂಗತಿಗಳು ವ್ಯಕ್ತವಾಗುತ್ತವೆ. ಚಿತ್ರದುರ್ಗದ ನಾಯಕ ಅರಸರ ಕಾಲಕ್ಕೆ ಚಿತ್ರದುರ್ಗ ಮತ್ತು ಬೆಟ್ಟವು ಆಡಳಿತದ ರಾಜಧಾನಿಯಾಗಿ ತನ್ನ ಛಾಪನ್ನು ನಾಡಿನಾದ್ಯಂತ ಪ್ರಕಟಪಡಿಸಿದ್ದುದು ಇತಿಹಾಸ. ಈ ಅವಧಿಯಲ್ಲಿ ಜನಸಂಖ್ಯೆ ಯಥೇಚ್ಛವಾಗಿದ್ದು, ಬೆಟ್ಟದ ಮೇಲಿನ ವಸತಿ ನೆಲೆಗಳಿಗೆ ನೀರನ್ನು ಪೂರೈಸುವುದು ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ನಿರ್ಮಿಸಲಾದ ಕಹಳೆ ಬತೇರಿ, ತುಪ್ಪದಕೊಳ ಬತೇರಿ, ರಣಮಂಡಲ, ಬತೇರಿ, ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟಗಳಲ್ಲಿ ಜನರಿಗೆ ನೀರಿನ ಅನುಕೂಲಕ್ಕೆಂದು ಅನೇಕ ದೊಣೆಗಳನ್ನು ನಿರ್ಮಿಸಿದ್ದಾರೆ. ಗೋಪಾಲಸ್ವಾಮಿ ಹೊಂಡದ ಮೂಲವನ್ನು ಗಮನಿಸಿದರೆ ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದ ಮೇಲೆ ಬಿದ್ದ ಮಳೆಯ ನೀರನ್ನು ಅಲ್ಲಲ್ಲಿ ಒಡ್ಡುಗಳನ್ನು ಹಾಕುವ ಮೂಲಕ ತಡೆದಿದ್ದಾರೆ. ಅಲ್ಲಿನ ಸಿದ್ದಪ್ಪನ ಗುಡಿಯ ಮುಂದಿನ ದೊಣೆಯೇ ಅಂದಿನ ಮಳೆಕೊಯ್ಲಿಗೆ ಪ್ರಮುಖ ಸಾಕ್ಷ್ಯವಾಗಿದೆ. ಸಿದ್ದಪ್ಪನ ದೊಣೆಯಿಂದ ಹೆಚ್ಚಾದ ನೀರು ಮುಂದೆ ಹರಿದು ಅಲ್ಲಿಯೇ ಕೆಳಗೆ ಇನ್ನೊಂದು ಒಡ್ಡಿಗೆ ಸೇರುವುದನ್ನು ಕಾಣಬಹುದು. ಈ ಒಡ್ಡಿಗೆ ಸಣ್ಣಪುಟ್ಟ ಕಲ್ಲುಗಳನ್ನು ಬಳಸಿ ನೀರನ್ನು ನಿಲ್ಲಿಸುವ ಪ್ರಯತ್ನಕ್ಕೆ ಅಂದಿನವರು ಕೈಹಾಕಿದ್ದಾರೆ. ಹಾಗೆಯೇ ಮುಂದೆ ಹೆಚ್ಚಾಗಿ ಹರಿಯುವ ನೀರಿಗೆ ಅಲ್ಲಲ್ಲಿ ಅಡ್ಡಕಟ್ಟೆಗಳನ್ನು ಕಟ್ಟೆ, ಅವುಗಳಿಗೆ ಸಣ್ಣ ಕಾಲುವೆಗಳನ್ನು ಮಾಡುವ ಮೂಲಕ ಮಳೆಯ ನೀರನ್ನು ಒಂದೆಡೆ ಹರಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಮುಂದೆ ಕೆಳಗೆ ವಸತಿ ಪ್ರದೇಶಕ್ಕೆ ಬರುತ್ತಲೇ ನೀರನ್ನು ಕಾಲುವೆಗಳ ಮೂಲಕ, ಕೆಲವೆಡೆ ಒಳಚರಂಡಿಯ ಮೂಲಕ ಗೋಪಾಲಸ್ವಾಮಿ ಹೊಂಡಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಗೋಪಾಲಸ್ವಾಮಿ ಹೊಂಡದ್ದು ಬೆಟ್ಟದ ಮೇಲಿನ ಎಲ್ಲ ನೀರಿನ ಹೊಂಡಗಳಿಗಿಂತ ಬೃಹತ್ತಾದ ಜಲಸಂಗ್ರಹಾಗಾರ. ಇದು ಬೆಟ್ಟದ ಕೆಳಗಿನ ಅನೇಕ ದೊಣೆ, ಒಡ್ಡು, ವರ್ತಿಗಳಿಗೆ ಮೂಲ ಜೀವಂತ ಸೆಲೆಯಾಗಿದೆ.
ಸಿಹಿನೀರಿನ ಹೊಂಡ, ನಗರದ ಸಂತೆಹೊಂಡಗಳಿಗೆ ಈ ಹೊಂಡವೇ ನೀರಿನ ಮೂಲ ಸೆಲೆಯಾಗಿದೆ, ಪೂರ್ವಕ್ಕೆ ಬೆಟ್ಟದ ಮೇಲಿನಿಂದ ಹರಿದ ಅಲ್ಲಿನ ದೊಣೆ, ಒಡ್ಡುಗಳು ತುಂಬಿ ಕೋಟೆಯ ಕಂದಕ ಮತ್ತು ತಿಮ್ಮಣ್ಣನಾಯಕನ ಕೆರೆಗೆ ಸೇರುವಂತೆ ಮಾಡಿದ್ದಾರೆ. ಇದು ಒಂದು ಬಗೆಯ ಸರಪಳಿಯ ವಿಧಾನ. ಒಂದಾದ ಮೇಲೆ ಒಂದರಂತೆ ತುಂಬುತ್ತಾ ಸಾಗುವ ಮಳೆನೀರು ಅತ್ಯಂತ ವ್ಯವಸ್ಥಿತವಾಗಿ ಉಪಯೋಗವಾಗುತ್ತಿರುವುದು ಗಮನಾರ್ಹ. ಈ ಪ್ರಾಚೀನ ವಿಧಾನದ ಮರ್ಮವೆಂದರೆ ಬಿದ್ದ ಜಾಗದಲ್ಲಿ ಬಿದ್ದ ಸಮಯದಲ್ಲೇ, ಮಳೆ ನೀರನ್ನು ಹಿಡಿದು ಸಂಗ್ರಹಿಸಬೇಕು ಎಂಬ ಮೂಲತತ್ವ ಅಡಗಿದೆ.
ಒಟ್ಟಿನಲ್ಲಿ ಮಳೆಯ ಪ್ರತಿಯೊಂದು ಹನಿಯನ್ನೂ ಬೆಟ್ಟದ ತುತ್ತತುದಿಯಿಂದ ಹಿಡಿದು ವಿವಿಧ ಸ್ವಾಭಾವಿಕ ವಿಧಾನಗಳ ಮೂಲಕ ತಡೆದು ನಿಲ್ಲಿಸಿ ಅಲ್ಲಿನ ಜನರ ಬಳಕೆಗೆ ಅನುವು ಮಾಡಿಕೊಟ್ಟ ಕ್ರಮ ಅನುಕರಣೀಯ. ಹಾಗೆಯೇ ಮಳೆಕೊಯ್ಲಿನ ಮೂಲಕ “ಓಡುವ ನೀರನ್ನು ನಡೆಯುವಂತೆ ಮಾಡು, ನಡೆಯುವ ನೀರನ್ನು ತೆವಳುವಂತೆ ಮಾಡು, ತೆವಳುವ ನೀರಿಗೆ ತಡೆಯೊಡ್ಡು” ಎಂಬ ಹಿರಿಯರು ಪಾಲಿಸಿದ ಜೀವಜಲದ ಪಾಠವನ್ನು ಪರಿಪಾಲಿಸುವ ಅನಿವಾರ್ಯತೆ ಇಂದು ಅತ್ಯಂತ ಜರೂರಾಗಿದೆ.