ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ!

Share

 

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ!

ಹಾಡುವ ಪರಂಪರೆಯ ಮೂಲಕ ಆಧುನಿಕ ಕಾವ್ಯಕ್ಕೆ ಮತ್ತೊಂದು ಬಗೆಯ ಪ್ರೇರಣೆ ಕೊಟ್ಟವರು ತತ್ವಪದಕಾರರು. ಹಾಗೆ ನೋಡಿದರೆ ಶರೀಫರ ರಿವಾಯತ್ ಪದಗಳು ಲಾವಣಿ ಸಂಪ್ರದಾಯಕ್ಕೇ ಸೇರಿದವು.ಆಧುನಿಕ ಕಾವ್ಯಕ್ಕೇ ಭಾಷೆಯ ಬಳಕೆ ಕುರಿತು ಸೂಚನೆ ನೀಡಬಲ್ಲ ತತ್ವಪದಕಾರರು, ಪ್ರಾದೇಶಿಕ ವೈವಿಧ್ಯತೆಯನ್ನು ತಂದವರು.
“ಬಯಲು ಆಲವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ” ಎನ್ನುವಾಗ
ಇಲ್ಲಿ ಕುಣಿಯುವ ನವಿಲು ಹೊಸ ರೀತಿಯದು ಹೀಗೆ ಹೇಳುವ ಭಾಷೆಯೂ ಕೂಡ ಹೊಸ ಬಗೆಯದು. ಹೊಸ ಕಾಲದ ಅನೇಕ ಮುನ್ಸೂಚನೆಗಳನ್ನು ನೀಡಬಲ್ಲ ಅರಿವು ತತ್ವಪದಕಾರಲ್ಲಿವೆ. ಹಾಗಾಗಿ ತಾವು ನಡೆದಾಡುವ ನೆಲದೊಳಗೇ ಅವರು ಕಿರಸ್ತಾನ ಬಾದಶಹನ್ನು, ವಿಕ್ಟೋರಿಯಾ ರಾಣಿಯನ್ನು, ಇನ್‍ಸ್ಪೆಕ್ಟರ್, ಡಾಕ್ಟರ್, ಸರ್ಕಾರಿ ಮಾಸ್ತರನನ್ನು ಗಮನಿಸುತ್ತಾರೆ; ಗಿರಣಿ ಕುರಿತು ಬಜಾರ್ ಕುರಿತು, ಪ್ರತಿಕ್ರಿಯಿಸುತ್ತಾರೆ.
ಪಲ್ಲಕ್ಕಿ ದಂಡಿಗೆ ಯಾದೆ
ಪತ್ರಿಗೆ ಬುಟ್ಟಿಯಾದೆ
ಎಲ್ಲಮ್ಮನ ಗುಡ್ಡದೊಳಗೆ ಅಡ್ಲಿಗಿನಾ£ದೆ ||
ತಿಪ್ಪಿಯ ಕೆಳಗಿದ್ದೆ
ಅದರುದ್ದ ಬೆಳೆದಿದ್ದೆ
ಸಿದ್ದರಾಮೇಶ್ವರನಿಗೆ ನಂದಿ ಕೋಲಾದೆ ||1

 


ತಟ್ಟನೆ ಓದಿದರೂ ಈ ಪದ್ಯದೊಳಗೆ ಎರಡು ಸಮುದಾಯಗಳ ಸಂಕೇತಿಕ ರೂಪಗಳನ್ನ ಕೂಡಿಸುವ, ಜೋಡಿಸುವ ಕೆಲಸ ಕಾಣುತ್ತದೆ. ಇಲ್ಲಿ ಪಲ್ಲಕ್ಕಿಯನ್ನು ಅಡ್ಲಿಗಿಯನ್ನು, ತಿಪ್ಪಿಯನ್ನು, ನಂದಿಕೋಲನ್ನು ಜೋಡಿಸುವ ಪ್ರಕ್ರಿಯೆ ನಮ್ಮಲ್ಲಿ ಅಂದುಕೊಂಡು ಬರುತ್ತಿರುವ ‘ಮೇಲು’ ‘ಕೀಳು’ ಸಾಂಕೇತಿಕ ಪರಿಭಾಷೆಯನ್ನು ಒಟ್ಟಾಗಿಸುವ ಪ್ರಯತ್ನದಂತೆ ಕಾಣುತ್ತದೆ.ತತ್ವ ಪದಕಾರರು ಈ ರೀತಿಯಲ್ಲಿ ಎರಡು ಭಿನ್ನ ಸಮುದಾಯಗಳನ್ನೂ ಒಂದು ಗೂಡಿಸುತ್ತಾರೆ.ಅಲ್ಲಾ ಅಲ್ಲಮನನ್ನ ಒಂದೇ ಎಂದು ಬೆಸೆಯುತ್ತಾರೆ.ಏಕ ದೇವ ಏಕ ಧರ್ಮಗಳ ವಿಜೃಂಭಣೆಯ ಪರಂಪರೆಯೊಳಗೆ ಶಾಸನಗಳು ಬಹುದೈವ ಬಹು ಪರಂಪರೆಗಳನ್ನ ಹೊತ್ತು ನಿಂತಂತೆ ತತ್ವಪದಕಾರರು ಎರಡು ಭಿನ್ನ ಧರ್ಮಗಳನ್ನ ಏಕಗೊಳಿಸುತ್ತಾರೆ.ಈ ನೆಲೆಯಿಂದ ನೋಡಿದಾಗ ಇವರು ಜನ ಸಂಸ್ಕøತಿಯ ವಕ್ತಾರರು ಎಂಬುದೇ ವಿಶೇಷ.ಅಕ್ಷರ ಸಂಸ್ಕøತಿ ಏಕತ್ವಗಳನ್ನ ವಿಜೃಂಭಿಸುವಾಗಲೇ ಜನ ಸಂಸ್ಕøತಿಯ ನೆಲೆಗಳು ಬಹುತ್ವಗಳ ಆಚರಣೆಯನ್ನ ತನ್ನೊಳಗೆ ಸೇರಿಸಿಕೊಂಡೇ ಮುನ್ನೆಡೆಯುತ್ತಿದ್ದವು.ಈ ನೆಲೆಯಲ್ಲಿ ನಮ್ಮ ಶ್ರಮಿಕರ ಜಾತ್ರೆ ಹಬ್ಬಗಳನ್ನೂ ಸೂಕ್ಷ್ಮವಾಗಿ ಅರಿಯಬೇಕಿದೆ.
ಕನ್ನಡ ಕಾವ್ಯ ಸಂದರ್ಭದೊಳಗೆ ‘ಕಡೆಗಣಿತ’ ಮತ್ತು ‘ನಿರ್ಲಕ್ಷಿತ’ ಸಂಸ್ಕøತಿಯನ್ನು, ಪ್ರತಿಮೆಗಳನ್ನು ಎತ್ತಿ ಲಕ್ಷಿತವಾದ ಅಂದರೆ ಹಾಲೀ ಚಲಾವಣೆಯೊಳಗಿರುವ ಒಮ್ಮತಕ್ಕೆ ಎಲ್ಲಮ್ಮನನ್ನು, ಸಿದ್ದರಾಮೇಶ್ವರನನ್ನು ತರುವಂತಿದೆಯೋ ಗೊತ್ತಿಲ್ಲ. ಏಕೆಂದರೆ ಇದನ್ನೆ ಸರಿ ಎಂದ ಪಕ್ಷದಲ್ಲಿ ಶರೀಫರು (1819-1891) ಎಲ್ಲಮ್ಮನನ್ನು ಒಪ್ಪಿಕೊಂಡು ದೇವದಾಸಿ ಪದ್ಧತಿಯನ್ನು ಒಪ್ಪಿ ಬಿಡುತ್ತಾರೋ ಎಂಬ ಭಾವ ಮೂಡಿಬಿಡುತ್ತದೆ.
ತತ್ವಪದಗಳು ಗತಕಾಲದ ಪರಂಪರೆಯೊಂದಿಗೆ ಹರಿದುಬಂದ ತೋಂಡಿಯ ಪ್ರವಾಹ ಮಾತ್ರವಲ್ಲ, ಅವು ಗತಕಾಲದ ಆಯಾ ಸಂಸ್ಕøತಿಯೊಳಗೇ ವಿಭಿನ್ನತೆಗಾಗಿ, ವೈವಿಧ್ಯತೆಗಾಗಿ ಹೆಣಗುತ್ತಲೇ ಸಂಕೀರ್ಣ ಅರ್ಥವನ್ನು ಹೊಮ್ಮಿಸುವಂತವು. “ಮಠದ ಪ್ರವಚನಗಳಲ್ಲಿರುವಂತೆ ಇಲ್ಲಿ ಶ್ರೋತೃಗಳಿಲ್ಲ. ಈ ಬಯಲೊಳಗೆ ಎಲ್ಲರೂ ಭಾಗಿಗಳು,ನಿರ್ದಿಷ್ಟ ಕೋಣೆಯೊಳಗೆ ಪವಿತ್ರಗ್ರಂಥಗಳನ್ನು ಓದಿ ಹೇಳುವ ಸಂಸ್ಕøತಿ ಇದಲ್ಲ. ದೇಗುಲ, ಶಾಸ್ತ್ರ, ಪುರಾಣ, ಪುರೋಹಿತ, ಜಗದ್ಗುರು ಈ ಮುಂತಾದ ವರ್ತುಲಗಳಿಂದ ದೂರ ಉಳಿದ ಮನೆ ಮನೆಯ ಅಂಗಳಕ್ಕೆ ಸಾಗುವ ಬಯಲ ಪರಂಪರೆ ಇವರದು.

 


ಬೇರೆ ಬೇರೆ ವೃತ್ತಿಗಳ ಸ್ತ್ರೀಪುರುಷರು ಅಬಾಲವೃದ್ಧರಾಗಿ ಪಾಲುಗೊಳ್ಳುವ ಈ ಆಚರಣೆಗೆ ಬೇರೊಂದು ಬೆಳಕನ್ನು ಕಾಣುವ, ಬೇರೊಂದು ಬೆಳಕಿನ ಮೂಲಕ ತಮ್ಮ ದೈನಿಕ ವಿವರಗಳನ್ನು ನೋಡುವ ಇಹಪರದ ದ್ವಂದ್ವಗಳು ದಾಟುವ ಅವಕಾಶವವಿದೆ.
ಇಲ್ಲಿ ದುಡಿಮೆಯ ನಂತರದ ಪುರುಸೊತ್ತನ್ನು ರಂಜಕಗೊಳಿಸುವ ಮನರಂಜನೆ, ದಣಿವನ್ನು ಹಗುರವಾಗಿಸುವ ಹಾಸ್ಯ, ಮುದುಡಿದ ಮನಸ್ಸನ್ನು ತೆರೆಸುವ ಅರಿವುಗಾಣುವಿಕೆ ಎಲ್ಲವೂ ಮೇಳೈಸಿವೆ, ತತ್ವಪದದ ಸಂಸ್ಕøತಿ ಹಲವು ಸಾಮಾಜಿಕ ನಿಯೋಗಗಳನ್ನು ನೆರೆವೇರಿಸುವ ಬಗೆಯದು ಈ ತತ್ವಪದಗಳು ಎಚ್.ಎಸ್.ಶಿವಪ್ರಕಾಶ್ ಕಾಣುವಂತೆಯೇ “ಜಗತ್ತು ಧರ್ಮದ್ವೇಷದ ಕೊಂಡ ಹಾಯುತ್ತಿರುವ ಇವತ್ತಿನ ಸಮಸ್ಯೆಗಳಿಗೆ ತತ್ವಪದಕಾರರ ನಾನತ್ವವು ಒಂದು ಒಳದಾರಿಯನ್ನು ತೋರಬಲ್ಲದೇ” ಎಂಬ ಪ್ರಶ್ನೆಯೂ ಗಮನಾರ್ಹ.
ಪರಂಪರೆಯ ಲಿಖಿತ ಬರಹಗಳಲ್ಲಿ ನಿರ್ಧಾರಿತ ಚೌಕಟ್ಟಿನೊಳಗೇ ಹೊಸತನ ರಾಚನಿಕವಾಗಿ ಮುಂದುವರೆದಿದೆ.ಆಡಳಿತ ಜಗತ್ತುಗಳು ಏನೆಲ್ಲಾ ಬದಲಾವಣೆಗಳನ್ನ ಹೊರಡಿಸುವಾಗಲೂ ಜನಪರಂಪರೆಯ ಈ ಕೇಂದ್ರಗಳಲ್ಲೆಲ್ಲಾ ಅನೇಕ ಒಪ್ಪಿತಗಳೇ ಮತ್ತೆ ಮತ್ತೆ ಮುನ್ನಡೆಯುತ್ತದೆ.ಏಕತ್ವವನ್ನ ಒಡೆಯುವ, ಕೂಡಿಸುವ ಅವುಗಳಿಗಿರಬಹುದಾದ ಒಳದಾರಿಗಳ ಒಳಪ್ರಜ್ಞೆಗಳನ್ನು ಕುರಿತ ಯೋಚನೆಗಳೂ ಅಲ್ಲಿವೆ.
18 ಮತ್ತು 19ನೆಯ ಶತಮಾನದ ಬಹಳಷ್ಟು ತತ್ವಪದಕಾರರು ಬ್ರಿಟೀಷ್ ವಸಾಹತು ನೀತಿಗೆ ತೀವ್ರವಾಗಿ ಮುಖಾಮುಖಿಯಾಗಿಲ್ಲ. ಇದ್ದುದರಲ್ಲೇ ಶಿಶುನಾಳ ಶರೀಫ, ನಾಗಲಿಂಗಯ್ಯ, ಕೈವಾರ ನಾರಾಯಣ ತಾತ ಇವರು ಮಾತ್ರ ಹೆಚ್ಚು ಪ್ರತಿಕ್ರಿಯಿಸಿದ್ದಾರೆ. ಕೂಡಲೂರು ಬಸವಲಿಂಗ ಶರಣ ಮತ್ತು ಕಡಕೋಳ ಮಡಿವಾಳಪ್ಪನವರು ಹಲವು ಮುಂಬರುವ ಅಂತಹ ಸೂಚನೆಯನ್ನು ಕಾಲಜ್ಞಾನದ ರೀತಿ ನೀಡಬಲ್ಲರೇ ಹೊರತು ಅಷ್ಟು ಸೂಕ್ಷ್ಮತೆ ಅವರ ಪದಗಳಿಗಿಲ್ಲ. ಬಹುಶಃ ಹೀಗಾಗಲು ಕಾರಣ ತತ್ವಪದಕಾರರ ದೃಷ್ಟಿ “ನಾನಿತ್ತಲೆಳೆದರೆ ತಾನತ್ತಲೆಳೆವುದು, ಇನ್ನೇ ನಿನ್ನೆನೊ” ಎನ್ನುವಂತಿರಬೇಕು.ಏಕತ್ವದ ವ್ಯವಸ್ಥೆಯೊಂದಿಗೆ ಒಟ್ಟಾಗುವುದಕ್ಕಿಂತ ಅದರಿಂದ ಬಿಡಿಸಿಕೊಂಡು ಜನಮುಖಿಯಾಗುವುದರತ್ತ ಅವರು ಹೆಚ್ಚು ಕಾಳಜಿ ವಹಿಸಿದರು.


ಇಲ್ಲೂ ಕೂಡ ವಸಾಹತುಶಾಹಿ ‘ಪರ-ವಿರೋಧ’ ಎಂಬ ಮಾತುಗಳು ತೀರಾ ಸರಳೀಕರಿಸಿದಂತಾಗಬಹುದು. ಇಲ್ಲಿ ಯಾಕೆ ಬರಿ ಪರಿಭಾಷೆಗಳನ್ನು ಸ್ವೀಕರಿಸಿದ್ದಾರೆ? ಈ ಪದಗಳು ಒಮ್ಮೊಮ್ಮೆ ದಿಗ್ಭ್ರಮೆ, ರೋಮಾಂಚನಗಳಾಗಷ್ಟೇ ಆಗ ಯಾಕೆ ಉಳಿಯುತ್ತವೆ ? ಎಂಬ ಹಲವು ಪ್ರಶ್ನೆಗಳೇ ಅನೇಕ ಉತ್ತರಗಳಿಗೆ ಮುಖ ಮಾಡುತ್ತವೆ.
ಮೇಲು ನೋಟಕ್ಕೆ ನಾವು ಶರೀಫರನ್ನು ‘ಪರ-ವಿರೋಧ’ಗಳ ಚರ್ಚೆಗೆ ಹಾಕಿ ನಿಂತುಬಿಟ್ಟರೆ ಅವರನ್ನು ಸಂಪೂರ್ಣ ಬದುಕಿನ ಪರ ಎಂಬ ವಾದದಿಂದ ನೋಡಿದಂತಾಗುತ್ತದೆ. ಏಕೆಂದರೆ ಅಂತಿಮವಾಗಿ ಅವರ ನಿಲುವೇ ಇದಲ್ಲ ಬದಲಿಗೆ ಲೌಕಿಕ ಶಬ್ದಲೋಕದಿಂದ ಆಧ್ಯಾತ್ಮಿಕ ಅರ್ಥ ಲೋಕದತ್ತ ನಡೆಯುವವರಾಗಿಯೇ ಅವರು ನಮಗೆ ಕಾಣುತ್ತಾರೆ.
ನಾಡ ಮಾತುಗಳ ನೀನಾಡವಲ್ಲೆ
ಬಾಯಿಲ್ಹೇಳವಲ್ಲಿ
ನೀ ನಾಡು ಮಾತಿನೊಳಗೆ ನಾದ್ದೇಳವಲ್ಲೆ
ಮಾತು ಕೇಳವಲ್ಲಿ ||3
ಈ ಮೂಲಕ ತತ್ವಪದಕಾರರನ್ನು ಎರಡೂ ಬಗೆಯ ದೃಷ್ಟಿಕೋನದಿಂದ ಸಾಧ್ಯವಿದೆ.
1) ದೇಶೀಯ ವಸಾಹತು ಶಾಹಿಯ ನೆಲೆಯಿಂದ
2) ವಿದೇಶಿಯ ವಸಾಹತು ಶಾಹಿಯ ನೆಲೆಯಿಂದ
ಇವನ್ನು ಹೀಗೆ ವಿವರಿಸಬಹುದು :

 


1) ಪಾರಂಪರಿಕ ಗತಿಯಲ್ಲಿ ಒಂದು ಸಂಸ್ಕøತಿ ಹಲವು ಸಂಸ್ಕøತಿಗಳನ್ನು ತನ್ನಿಂತಾನೇ ಅರಳಿಕೊಳ್ಳಲು ಅವಕಾಶವಾಗದಂತೆ ಮಾಡಲು ತನ್ನ ರಾಚನಿಕ ಹಾಗೂ ತಾತ್ವಿಕ ಚೌಕಟ್ಟನ್ನು ವಿಸ್ತರಿಸಿಕೊಂಡದ್ದು.
2) ವಿದೇಶಿಯ ಅಥವಾ ಪರಕೀಯ ಸಂಸ್ಕøತಿಯೊಂದು ಆರ್ಥಿಕವಾಗಿ ಆವರಿಸುತ್ತ ಇಲ್ಲಿನ ಸಂಸ್ಕøತಿಯನ್ನು ಅನುಕರಣ ಶೀಲ ಮತ್ತು ದೈನ್ಯ ಸ್ಥಿತಿಗಿಳಿಸುವುದರ ವಿರುದ್ಧ ಜನರೂಪಕಗಳನ್ನ ಸಿಡಿಸುವುದು.
ಕನ್ನಡ ಭಾಷಿಕ ರಚನೆಯ ನೆಲೆಗಳಲ್ಲಿ ಈ ನೆಲದ ಸಂದರ್ಭದಲ್ಲಿ ‘ವೈದಿಕ’ವಾದದ್ದು ಸ್ವದೇಶಿಯ ವಸಾಹತುಶಾಹಿಯಾದರೆ ಬ್ರಿಟೀಷರದು ವಿದೇಶಿಯ ವಸಾಹತುಶಾಹಿ.ಸ್ವದೇಶೀಯ ವಸಹಾತುವನ್ನ ವಚನ ಸಾಹಿತ್ಯ ಮೊದಲು ಅಕ್ಷರ ಯುಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ‘ಮೇಲು’ ಎಂಬ ಸ್ವದೇಶಿಯ ಭ್ರಮೆಯನ್ನು ಸೀಳಿ ಸನಾತನ ವ್ಯವಸ್ಥೆಯನ್ನು ಬದಲಾಯಿಸುವ ಪ್ರಕ್ರಿಯೆಗೆ ಬುನಾದಿ ಹಾಕಿತು.ಈ ಬೇರ ಬಿಳಿಲಿಡಿದು ಹಲವು ಬಗೆಯಲ್ಲಿ ಬೆಳೆದವರು ತತ್ವಪದಕಾರರು.ರಚನೆಯ ದೃಷ್ಟಿಯಿಂದ ಆನಂತರದ ತತ್ವಪದಕಾರರು ವಚನಕಾರರ ಸಾಮಾಜಿಕ ಪ್ರಜ್ಞೆಯನ್ನೂ ಮೀರಿ ಒಂದು ಹೆಜ್ಜೆ ಮುನ್ನಡೆದಿದ್ದಾರೆ.
ದಿಳ್ಳಿಖಾನರ ಅಳಿವಾದಿನ ಬಂತು ಸುವ್ವಿ
ಬಜಾರ ಬಂದೀತು ವ್ಯಾಜ್ಯ ಉಂಟಾದೀತು |
ಸೂಜಿ ಹೊನ್ನಿಗೊಂದು ಮಾರೀತು ಸುವ್ವಿ
ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ !
ತತ್ವಪದಕಾರರು ಸಾಂಪ್ರದಾಯಿಕ ಜಿಗುಟಿನ ಅಳಿವನ್ನ ಸೂಚಿಸುತ್ತಲೇ ‘ಬಜಾರನ್ನ’, ‘ವ್ಯಾಜ್ಯವನ್ನು’, ಒಂದೆಡೆಗೇ ತಂದು ವಿದೇಶಿಯ ಆರ್ಥಿಕ ಆವರಿಕೆಯ ಭೀಕರ ಚಿತ್ರವನ್ನು ಕೊಡುತ್ತಾರೆ. ಅಂತಲೇ ಸೂಜಿ, ಇಲ್ಲಿಯ ಅತ್ಯಂತ ಬೆಲೆಯುಳ್ಳ ಹೊನ್ನಿಗೆ ಸಮವಾಗಿದೆ. ‘ಬಜಾರ’ದ ಜೊತೆಗೇ ಕಣ್ಣು ಕಟ್ಟುವ ಪಟ್ಟಣದ ಬೀದಿಗಳು, ಇಡೀ “ದಿಳ್ಳಿಖಾನರ’ ಸನಾತನತೆಯನ್ನು ಕಡೆಗಣಿಸುವಷ್ಟು ಸೋಜಿಗ ಒಡ್ಡುತ್ತಿವೆ. ಬ್ರಿಟೀಷ್ ಆಗಮನವನ್ನು ಕುರಿತು ತತ್ವಪದಕಾರರು
1) ಆರ್ಥಿಕ ಶೋಷಣೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
2) ‘ಗಿರಣಿ ವಿಸ್ತಾರ’ವನ್ನು ಸಂಭ್ರಮವೆಂದು ಕಂಡಿದ್ದಾರೆ.
3) ಯಂತ್ರಗಾರಿಕೆಯಿಂದ ನಾಶವಾಗಲಿರುವ ಇಲ್ಲಿನ ಕುಶಲ ಗುಡಿ ಕೈಗಾರಿಕೆಗಳ ಕುರಿತು ಮಿಡಿದಿದ್ದಾರೆ
4) ಬ್ರಿಟೀಷ್ ಆಡಳಿತದ ಎದುರು ಇಲ್ಲಿನ ಜನರ ರಾಜಕೀಯ ಮತ್ತು ಸಾಮಾಜಿಕ ಅಸಹಾಯಕತೆಯನ್ನು ವಿವರಿಸಿದ್ದಾರೆ.
5) ನಗರೀಕರಣದ ಆರಂಭಿಕ ಬೆರಗಿನ ಜೊತೆಗೇ ಅದು ಆನಂತರ ತರಲಿರುವ ವಿಷಮ ಪರಿಣಾಮವನ್ನು ಕುರಿತು ಕೊರಗಿದ್ದಾರೆ.

ಈ ರೀತಿಯ ಅಭಿಪ್ರಾಯಗಳನ್ನು ಗ್ರಹಿಸುತ್ತಲೇ ನೋಡಿದಾಗ ಆ ಕಾಲದಲ್ಲಾಗಲೇ ದುಡಿಯದ ಜನ ಬಿಂಕದ ಬಂಟರಾಗುತ್ತಿರುವ ಸೂಚನೆಯನ್ನು ಕೊಡಲೂರು ಬಸವಲಿಂಗ ಶರಣರು ಸೂಚಿಸಿದ್ದಾರೆ. ಇಲ್ಲಿ ಗೋಮಾಳದಿಂದ ಮೊದಲ್ಗೊಂಡು ಬಂಜರು ಭೂಮಿಗಳವರೆಗೂ ಗುತ್ತಿಗೆ ನೀಡಲಾಗುತ್ತದೆ ಎಂಬುದನ್ನು ಕೈವಾರ ನಾರಾಯಣ ತಾತಯ್ಯ ಹೇಳುತ್ತಾರೆ. ‘ದೊರೆಗಳೆಲ್ಲಾ ಮುರಿದು ಬೀಳುತ್ತಾರೆ, ಶ್ರೇಷ್ಠ ಕ್ರಿಸ್ತಬಾದಶಹ ಪಟ್ಟಕ್ಕೆ ಬರುತ್ತಾನೆ’ ಎಂಬುದನ್ನು ಷರೀಫರು ತಿಳಿಸುತ್ತಾರೆ. ಹೀಗಾಗಿ ಇಡೀ ತತ್ವಪದಕಾರರಿಗೆ ಸ್ವೀಕರಣೆ ಮತ್ತು ನಿರಾಕರಣೆಯ ನಡುವೆ ತೀವ್ರ ಎಚ್ಚರವೊಂದು ಇದೆ. ಅವರಿಗೆ ವೈಜ್ಞಾನಿಕತೆ ಕುರಿತು, ಅವರ ಶಿಕ್ಷಣ ಕುರಿತು, ಸೋಜಿಗ-ದಿಗ್ಭ್ರಮೆ-ಒಮ್ಮತಗಳಿರುವುದೇ ವಿನಾ ಬ್ರಿಟೀಷರ ನೆಲೆಗಟ್ಟಿಗೊಳ್ಳುವುದರ ಬಗ್ಗೆ ಅವರಿಗೆ ಸಂಪೂರ್ಣ ಅಸಮ್ಮತಿ ಇದೆ.

ತತ್ವಪದ ಕಾರರು ಗ್ರಹಿಸುವ ಶಿಕ್ಷಣ:

ಕೆಲ ಸಮುದಾಯಗಳಿಗೆ ಅದರಲ್ಲೂ ಪುರುಷರಿಗೆ ಮೀಸಲಾದ ಶಿಕ್ಷಣ ವಚನಕಾಲದಲ್ಲಿ ಸ್ತ್ರೀಯರಿಗೂ ದೊರಕತೊಡಗಿತು.ಶರಣರೆನ್ನು ಚೌಕಟ್ಟನ್ನ ಹೊಂದಿದ ಈ ಪರಂಪರೆಯ ನಂತರವೂ ಗುರುದೀಕ್ಷೆ ಗುರು ಪರಂಪರೆಗಳು ಇಲ್ಲೂ ಮುಂದುವರೆದವು.ಆದರೆ ಇಲ್ಲಿ ಜಾತಿ ಮತ್ತು ಧರ್ಮ ತಾರತಮ್ಯಗಳಿರಲ್ಲಿಲ್ಲ ಎಂಬುದು ಹೆಮ್ಮೆಯ ವಿಷಯ.ಜ್ಞಾನವನ್ನ ಸಮುದಾಯ ಮೂಲದಿಂದಲೇ ನೋಡುತಿದ್ದ ತತ್ವಪದಕಾರರಿಗೆ ಆಡಳಿತ ವ್ಯವಸ್ಥೆಯೂ ಅಂತಹ ಸಾರ್ವಜನಿಕ ತಾಣಗಳನ್ನ ತೆರೆದಿದ್ದು ಕಂಡು ಅವರು ಸಂಭ್ರಮ ಪಟ್ಟಿದ್ದಾರೆ.
ಸಾಲಿಯ ನೋಡಿದಿಯಾ ಸರಕಾರದ
ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲು ಕಾಣಿಸುತಿದೆ ಭೂಲೋಕದೊಳು
ತತ್ವಪದಕಾರರು ಅಕ್ಷರದ ಆಗಮನವನ್ನು ಅಯ್ಯನ ಶಾಲೆಗಳಿಗಿಂತಲೂ ಭಿನ್ನವಾಗಿ, ಎಲ್ಲರನ್ನು ‘ಏಕ’ರೂಪವಾಗಿ ಕಾಣುವ ಸರಕಾರದ ಶಾಲೆಯನ್ನು ‘ಮೇಲಾಗಿ’ ನೋಡುತ್ತಾರೆ; ‘ಸದ್ಗುರುವಿನ ಮಂಟಪ’ ವೆಂದು ಬೆರಗು ಮಾಡುತ್ತಾರೆ. ಹಾಗಾಗಿ ಈ ಬಗೆಯ ಆಧುನಿಕ ಮಾಸ್ತರ ಸಹಜವಾಗಿ ಶಿಕ್ಷಣ ವಿಸ್ತಾರ ಮಾಡುವಂತಾದ ಬಗೆ ಅವರಿಗೆ ಒಂದು ಬಗೆಯ ಆತ್ಮೀಯ ಮೋಜೆನಿಸಿದೆ, ಅಕ್ಕರೆಯ ಸೋಜಿಗವಾಗಿದೆ. ಮಸ್ತಕದ ಓದಿಗಿಂತಲೂ ಪುಸ್ತಕದ ಓದು ದೊಡ್ಡದೇ ಎಂದು ಭಾವಿಸುತ್ತಿದ್ದ ಜನಪರಂಪರೆಯ ನಿಲುವಿನಂತೆಯೇ ಮುಂದೆ ಕೂಡಲೂರು ಬಸವಲಿಂಗ ಶರಣರು “ಹಲವು ದೇಶಗಳ ತಿರುಗಿ ನಾನಾ ಭಾಷೆಯ ಕಲಿತು, ಬಲು ಶಾಣ್ಯಾರಾದವರು ಪಂಡಿತರೇ ?” ಎಂದು ಪ್ರಶ್ನಿಸುತ್ತಾರೆ.


ಕಡಕೋಳು ಮಡಿವಾಳಪ್ಪನವರು,ಶರೀಫರೂ ಇಂತಹ ಹಲವು ನೋಟಗಳನ್ನ ನೀಡಿದ್ದಾರೆ.
1. ಬಲ್ಲಂತ ಜ್ಞಾನಿಗಳು ಬಲ್ಲಷ್ಟು ಹೇಳಿದರೆ
ಅಲ್ಲಂತ ಅನಬಾರದು ಎಲೆ ಮನವೇ
ಸೇರಿದವರ ಮುಂದೆ ಜಾರಿ ಬೀಳದಂತೆ
ಪಾರಾಗಿ ಹೋಗಬೇಕು ಎಲೆ ಮನವೆ
2. ನನ್ನ ಒಳಗೆ ನಾ ತಿಳಕೊಂಡೆ | ನನಗೆ
ನನಗೆ ಬೇಕಾದ ಗಂಡನ ಮಾಡಿಕೊಂಡೆ!

Girl in a jacket
error: Content is protected !!