ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು
ಇತರ ಪ್ರಕಾರಗಳಲ್ಲಿ ಹೊಸ ಬೆಳೆಗಳು ಕಾಣಿಸಿಕೊಂಡಂತೆ ಆತ್ಮಕಥೆಗಳ ವಿಚಾರಕ್ಕೆ ಬಂದರೂ ಹೊಸತುಗಳ ಪರ್ವ ಶುರುವಾಗಿದ್ದು( ಘಟನೆ,ಭಾಷೆ ಹಾಗೂ ತಾಂತ್ರಿಕ ವಿಧಾನಗಳು) ದಲಿತ ಆತ್ಮಕಥನಗಳಲ್ಲಿ ಎನ್ನಬಹುದು. ಬೆಳಕಿನ ಲೋಕ ಕಾಣದ ಅನುಭವವನ್ನು ದಲಿತರ ಕತ್ತಲ ಲೋಕ ಕನ್ನಡಕ್ಕೆ ತಂದು ಕೊಟ್ಟಿದೆ.ಆದರೆ ಉಳಿದ ಪ್ರಕಾರಗಳಿಗೆ ಸಿಕ್ಕಂತೆ ದಲಿತ ಆತ್ಮಕಥನಗಳಿಗೆ ಸಿಕ್ಕ ಮಾನ್ಯತೆಗಳು ಕಡಿಮೆಯೇ ಎನ್ನಬೇಕು.
“ ಕನ್ನಡದ ದಲಿತ ಆತ್ಮಕಥನಗಳು ಮರಾಠಿಯಷ್ಟು ದಟ್ಟ ಅನುಭವಗಳನ್ನು ಹೊಂದಿಲ್ಲ” ಎಂಬ ವಿಮರ್ಶಕರ ಮೂಗು ಮುರಿಯುವಿಕೆಯನ್ನ ಮೀರಿ ದಲಿತ ಲೋಕವು ತನ್ನದೇ ಧೋರಣೆಗಳಿಂದ ಇವುಗಳನ್ನು ಅಳೆಯಬೇಕಿದೆ ವಿಶ್ಲೇಷಿಸಬೇಕಿದೆ.ಕನ್ನಡದ ಮೊದಲ ಮೂರು ಆತ್ಮಕಥನಗಳು ಗೌರ್ಮೆಂಟ್ ಬ್ರಾಹ್ಮಣ,ಊರು ಕೇರಿ ಮತ್ತು ಮಣೆಗಾರ ತಮ್ಮ ಭಾಷೆ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಭಿನ್ನತೆಯ ನಿರೂಪಣೆಗಳನ್ನು ಪಡೆದಿವೆ.ಇವುಗಳ ಹಸಿವು ಹಾಗೂ ದಾರುಣ ನೋವುಗಳನ್ನ ಭಿನ್ನ ಭಿನ್ನ ತಂತ್ರಗಳಿಂದ(ನೆನಪಿನ ಮಾದರಿಯಲ್ಲಿ,ಪ್ಲಾಶ್ ಬ್ಯಾಕ್ ಮಾದರಿಯಲ್ಲಿ ) ಕಟ್ಟಿಕೊಟ್ಟಿವೆ. ಈ ನೆಲೆಯಲ್ಲಿ
ನೋಡಿದಾಗ ನಮ್ಮ ಕನ್ನಡದ ಆತ್ಮಕಥನಗಳನ್ನು ಯಾಕಾಗಿ ನಾವು ಮರಾಠಿಯ ದಾರುಣ ಅನುಭವ ಮತ್ತು ಅವಮಾನಗಳಿಂದಲೇ ಅಳೆಯಬೇಕು ಎಂಬ ಪ್ರಶ್ನೆಯು ಮೂಡದಿರದು. ಈ ನೆಲದ ಸಮುದಾಯಗಳು ಮತ್ತು ಸಮಾಜಗಳು ಅಲ್ಲಿಯದಕ್ಕಿಂತ ಭಿನ್ನ. ಅಲ್ಲಿಯ ಯಜಮಾನಿಕೆಯ ಕೌರ್ಯ ಇಲ್ಲಿಲ್ಲ. ಆದರೂ ನಮ್ಮ ವಿಮರ್ಶಕರು “ ದಾರುಣ ಅನುಭವ ಅವಮಾನಗಳು ಅಷ್ಟು ತೀವ್ರವಾಗಿಲ್ಲ ” ಎಂದೇಕೆ ಅಲಕ್ಷಿಸುತ್ತಾರೆ?
ಈ ನೋಟದ ಕ್ರಮವೇ ತಪ್ಪಲ್ಲವೇ? ದಾರುಣತೆ ತೀವ್ರವಾಗಿರಬೇಕು ಎಂಬ ಮನಸ್ಥಿತಿಯಾದರೂ ಯಾಕೆ ಬೇಕು? ಈ ಅಳೆವ ಕ್ರಮವನ್ನು ನೋಡಿದಾಗ ದಲಿತ ಲೋಕವನ್ನು ಅಳೆವ ವಿಮರ್ಶಾ ಮಾನದಂಡ ಹುಸಿ ಎನ್ನಿಸದಿರದು. ನೋವಿನ ವಿಶಿಷ್ಟ ಪ್ರಕಾರ ಹುಟ್ಟಿಲ್ಲ ಎಂಬ ಪ್ರಶ್ನೆ ಇಲ್ಲಿ ಗಮನೀಯ. ಕನ್ನಡದ ದಲಿತ
ಸಾಹಿತ್ಯವನ್ನು ನೋಡುವಾಗ ನಮ್ಮ ವಿಮರ್ಶಕರಲ್ಲಿ ಗೊಂದಲವಿದ್ದಂತೆ ಕಾಣುತ್ತದೆ. ಡಾ. ಡಿ.ಆರ್. ಅವರು ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಸಿಟ್ಟಿದೆ ಆದರೆ ದಟ್ಟ ನೋವುಗಳ ಅಭಿವ್ಯಕ್ತಿ ಇಲ್ಲ ಎನ್ನುತ್ತಾರೆ. ಇವರ ಊರು ಕೇರಿ ಆತ್ಮಕಥೆಯನ್ನು ಬಡವರ ನಗುವಿನ ಶಕ್ತಿ ಎನ್ನುತ್ತಾರೆ. ತೀವ್ರತೆಯನ್ನು ಬಯಸುವ ವಿಮರ್ಶಕ ಮನಸ್ಸಿಗೆ ಡಿ.ಆರ್. ನಾಗರಾಜರ ನೋಟವು ಉತ್ತರದಂತೆ ಕಾಣುತ್ತದೆ.
ಮಣೆಗಾರವನ್ನು ಕುರಿತು ಮಾತಾಡುತ್ತಾ ಮತ್ತೊಬ್ಬ ಲೇಖಕರು ಕುವೆಂಪು,ಟಾಲ್ ಸ್ಟಾಯ್
ಆತ್ಮಕಥೆಗಳನ್ನು ಉದಾಹರಿಸುತ್ತಾ ತುಂಬಾಡಿಯವರು ನೋವಿನ ನಿರೂಪಣೆಯಲ್ಲಿ ವಾಸ್ತವಿಕತೆಯಿಂದ ದೂರವಾಗಿ ಕಾಲ್ಪನಿಕ ಜಗತ್ತಿನತ್ತ ಹೊರಡುತ್ತಾರೆ ಎನ್ನುತ್ತಾರೆ.ಈ ಹೋಲಿಕೆಯ ಕ್ರಮವೇ ತಪ್ಪಲ್ಲವೇ? ಇನ್ನು ಈ ಮಣೆಗಾರ ಆತ್ಮಕಥೆಯ ರೀತಿಯನ್ನು ಒಪ್ಪಿಕೊಳ್ಳುವ ಈ ಕುರಿತ ಪ್ರೀತಿ ಪ್ರಕಟಿಸುವ ಕಾಳೇಗೌಡ ನಾಗಾವಾರ ಅವರು ಇಲ್ಲಿ ಕಾಣುವ ಅವಮಾನಗಳಿಗೆ ತೆಳುವಾದ ಮಸುಕು ಎಳೆವಂತೆ “ಜಾತಿ ಸಾಮರಸ್ಯದ ತಿಳಿಯ ಜಗತ್ತು” ಇಲ್ಲಿನದು ಎನ್ನುತ್ತಾರೆ.ಆದರೆ ಮಣೆಗಾರವು ಸಾಮರಸ್ಯವನ್ನು
ಹರವುತ್ತಲೇ ಆಳದಲ್ಲಿನ ಭಿನ್ನತೆಯನ್ನು ಸಾರುವ ಜಾಣ ಕ್ರಮದಂತೆ ನಿರೂಪಿತವಾಗಿರುವುದನ್ನುಮರೆಯುವಂತಿಲ್ಲ.
ಆತ್ಮಕಥನಗಳು ವ್ಯಕ್ತಿಯ ಜೊತೆಗಿನ ಪ್ರಾದೇಶಿಕ ಕವಲುಗಳ ಕಥನಗಳ ಜೊತೆ ಜೊತೆಗೇ ಸಮುದಾಯಗಳ ಸಮಾಜಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಹರೆಗಳನ್ನು ಗಾಢವಾಗಿ ಬಿಡಿಸಿ ಹೇಳುತ್ತವೆ. ಈ ನೆಲೆಯಲ್ಲಿ ಕನ್ನಡದ ತಳವರ್ಗಗಳ ಆತ್ಮಕಥನಗಳೆನ್ನುವ ಜೀವ ಚರಿತ್ರೆಗಳು ಆಯಾ ಸಮುದಾಯಗಳ ಆರ್ಥಿಕ ಹಾಗೂ ಧಾರ್ಮಿಕ ಶೋಷಣೆಯ ಸಂಕಟಗಳನ್ನು ಬಿಡಿಸುವುದರ ಜೊತೆಗೆ ಪ್ರಾಣಿಗೂ ಕಡೆಯಾದ ಕುಟುಂಬ
ಕಥನಗಳನ್ನು,ಅಮಾನವೀಯ ಘಟನೆಗಳನ್ನು ಎತ್ತಿ ಮುಂದಿಡುತ್ತವೆ. ಪರಂಪರೆಯ ಶ್ರೇಷ್ಟ ಮತ್ತು ಕನಿಷ್ಟ ಎಂಬ ತಾರತಮ್ಯದ ಆಹಾರ ಮತ್ತು ಬಣ್ಣಗಳನ್ನು ಲಕ್ಷ ಮತ್ತು ಅಲಕ್ಷ ಆಚರಣೆಗಳನ್ನೂ ಹಿಡಿದಿಟ್ಟ ಹೊಸಬಗೆಯ ಇತಿಹಾಸಗಳಂತೆ ಕಾಣುತ್ತವೆ.
ಬದುಕಿನೊಳಗೆ ಕೇವಲ ಅನ್ನಕ್ಕಾಗಿ ಅವಮಾನಗಳನ್ನುಉಣ್ಣುವ ಹಿಂದಿನ ಎರಡು ಆತ್ಮಕಥನಗಳಂತೆಯೇ ಮಾನ ಮತ್ತು ಅವಮಾನದ ಘಟನೆಗಳನ್ನ ಮಣೆಗಾರವೂ ಕಾಣಿಸುತ್ತದೆ. ಹಸಿವು ಮತ್ತು ಅವಮಾನಗಳು ಭಾಷಿಕ ಹಾಗೂ ತಾಂತ್ರಿಕತೆಗಳಿಂದ ಭಿನ್ನವಾದಂತೆ ಕಂಡರೂ ಆಳದಲ್ಲಿ ತಗಲುವ ನೋವು ಮತ್ತು ಸಂಕಟದ
ಸೆಲೆಗಳು ಒಂದೇ ಎಂಬಂತೆ ಕಾಣುವುದನ್ನು ಮರೆಯುವಂತಿಲ್ಲ. ಹಾಗೆ ನೋಡಿದರೆ ಮಣೆಗಾರ ಆತ್ಮಕಥನವು ಮೇಲು ನೋಟಕ್ಕೆ ಜಾತಿ ಸಾಮರಸ್ಯದ ಕಥನದಂತೆಯೇ ಆರಂಭಗೊಳ್ಳುತ್ತದೆ.”
೧. ನಮ್ಮ ಹಳ್ಳಿಯಲ್ಲಿದ್ದ ಜೈನರ ಪಾರ್ಶ್ವನಾಥಪ್ಪ ಮತ್ತು ಜ್ಯೋತಮ್ಮನವರ ಮನೆಗಳಲ್ಲಿದ್ದ
ಅಂಗಡಿಗಳಿಗೆ ನಾವು ಸಾಮಾನು ಕೊಳ್ಳಲು ಹೋದರೆ ಅವರು ತೊಣಚ ಹತ್ತಿದ ಹಸು ಎಗರಾಡುವಂತೆ ನಮ್ಮನ್ನು ನೋಡಿದ ಕೂಡಲೇ ಎಗರಾಡುತಿದ್ದರು. ಎದ್ದು ಓಡಾಡಲಾರದಷ್ಟು ಸ್ಥೂಲದೇಹಿಯಾಗಿದ್ದ ಜ್ಯೋತಮ್ಮನವರ ತಾಯಿ ಸಿರಿದೇವಮ್ಮನವರು ಒಂದು ಉದ್ದನೆಯ ಬಿದಿರು ಕೋಲಿಗೆ ತಟ್ಟೆಯನ್ನು ಸಿಕ್ಕಿಸಿ ಕುಂತಲ್ಲಿಂದಲೇ ಕಿಟಕಿಯಲ್ಲಿ ನಿಂತಿರುತ್ತಿದ್ದ ನಮಗೆ ಕೊಡುತಿದ್ದರು
೨. ಮಾರ್ನೋಮಿ ಹಬ್ಬವನ್ನು ಜಬರ್ದಸ್ತಾಗಿ ಮಾಡುತಿದ್ದ ಸುಣ್ಣಕಲ್ಲರ ಪಾಳ್ಯದ ಚಿಕ್ಕ
ನರಸೀಯಪ್ಪನವರ ಮನೆಗೆ ಹೈಸ್ಕೂಲಿಗೆ ಸೇರುವ ಮುಂಚೆ ಪ್ರತಿ ವರ್ಷವೂ ಹೋಗುತಿದ್ದೆ. ಇವರ ಮನೆಯಲ್ಲಿ ಹಬ್ಬದ ದಿನದಂದು ಎಲ್ಲಾ ಜಾತಿಯವರ ಊಟವಾದ ಮೇಲೆ ನಮ್ಮವರಿಗೆ ಊಟ ಹಾಕುತಿದ್ದರು. ಇದಕ್ಕಾಗಿಯೇ ಕೆಲವು ಸಾರಿ ಅರ್ಧರಾತ್ರಿಯವರೆಗೂ ಕಾಯಬೇಕಾಗುತಿತ್ತು.
೩) ಎಲ್ಲರಿಗೂ ಹಬ್ಬದ ಸೆರಗಿನ ಪ್ರಸಾದ ಹಂಚಿದ ಮೇಲೆ ಕೊನೆಯಲ್ಲಿ ಹೊಲೆ ಮಾದಿಗರಿಗೆ
ಪೂಜಾರಪ್ಪನವರು ತಮ್ಮೆರಡೂ ಕೈಗಳನ್ನು ಕತ್ತರಿಯಾಕಾರದಲ್ಲಿ ಹಿಡಿದು ಎಡಗೈ ಬಲಗೈ
ಎನ್ನುತ್ತಿದ್ದರು. ಪ್ರಸಾದ ಪಡೆಯಲು ಹೊಲೆಯರು ಬಲಗಡೆಯಿಂದ ಮಾದಿಗರು ಎಡಗಡೆಯಿಂದ
ಬರಬೇಕಾಗುತಿತ್ತು.
೪) ನಮ್ಮ ಜಾತಿಯವರನ್ನು ಬಿಟ್ಟು ಉಳಿದ ಎಲ್ಲಾ ಜಾತಿಗಳ ಹುಡುಗರೂ ಸೀದಾ ದೇವಸ್ಥಾನದ
ಗರ್ಭಗುಡಿಯವರೆಗೂ ಹೋಗಿ ಕೈ ಮುಗಿದು ಹಣೆಗೆ ಕುಂಕುಮ ಇಟ್ಟುಕೊಂಡು ಬರುತಿದ್ದರು.
ಪೌಳಿಯವರೆಗೂ ಎಲ್ಲರ ಜೊತೆಯಲ್ಲಿಯೇ ಬರುತಿದ್ದ ನಾವು ಅಲ್ಲಿಯೇ ನಿಂತು ಬೇರೆ ಹುಡುಗರು ಕುಂಕುಮ ತಂದು ಕೊಡುವವರೆಗೂ ಕೈ ಮುಗಿಯುತ್ತಾ ನಿಂತಿರುತ್ತಿದ್ದೆವು.
ಮಣೆಗಾರವು ಹೀಗೆ ದೊಡ್ಡ ಕುಲಗಳ ಅಮಾನವೀಯ ನಡೆಗಳನ್ನು ಮಾತ್ರ ಹೇಳದೆ ತಳವರ್ಗಗಳ ನಡುವಿನ ತಾರತಮ್ಯದ ನಡೆಯನ್ನೂ ಅಷ್ಟೇ ಗಂಭೀರವೆಂಬಂತೆ ಕಾಣಿಸಿದೆ. “ ನಮ್ಮೊಂದಿಗಿನ ಹೊಲೆಯರ ನಡವಳಿಕೆ ಇನ್ನೂ ವಿಚಿತ್ರವಾಗಿತ್ತು. ನಮ್ಮ ಹಳ್ಳಿಯಲ್ಲಿ ಮಣೆಗಾರರಿಗೆ ಒಂದು ಬಾವಿ, ಹೊಲೆಯರಿಗೆ ಒಂದು ಬಾವಿ ಇತ್ತು. ಅವರ ಬಾವಿಯಲ್ಲಿ ನಾವಾಗಲೀ ಅಥವಾ ನಮ್ಮ ಬಾವಿಯಲ್ಲಿ ಹೊಲೆಯರಾಗಲೀ ಎಂದೂ ನೀರು ಸೇದುವಂತಿರಲಿಲ್ಲ! ಹೊಲೆಯರ ಹೆಂಗಸರು ನಮ್ಮ ಹಟ್ಟಿಗೆ ಕೂಲಿಯಾಳುಗಳನ್ನು ಕರೆಯಲು ಬಂದಾಗ ಕೆಂಡದ ಮೇಲೆ ನಡೆದು ಬರುವಂತೆ ಬಂದು ಹೋಗುತ್ತಿದ್ದರು. ತಮ್ಮ ಹಟ್ಟಿಗೆ ಹೋದಕೂಡಲೇ ಸಗಣಿ ಗಂಜಲ ತುಳಿದು ತಮ್ಮ ಕಾಲುಗಳನ್ನು ಪಾವನವಾಗಿಸಿಕೊಳ್ಳುತಿದ್ದರು.
ಈ ಅಂಶಗಳು ಶ್ರೀ ಕುವೆಂಪು ಅವರು ಹೇಳುವ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಭಾವವನ್ನು ನೀಡಲಾರದೆ ನಮ್ಮೊಳಗೆ ಸರ್ವ ಜನಾಂಗದ ಜಾತಿಯ ತೋಟವನ್ನು ತೋರಿದಂತೆ ಕಾಣಬಲ್ಲವು. ಜಾತಿ ತಾರತಮ್ಯದ ಗುಣ ಅನಕ್ಷರಸ್ಥರಿಗೆ ಪಾರಂಪರಿಕ ನಂಬಿಕೆಯಾದರೆ ಅಕ್ಷರಸ್ಥರಿಗೆ ಕುರಡು ನಂಬಿಕೆಯಾಗಿದೆ. ಈ ಕಥನವು ಅಕ್ಷರಸ್ಥರು ಹೋರಾಟಗಾರರೂ ಆದ ದಲಿತ ಜನರೊಳಗಿನ ಜಾತೀಯ
ವಾಸನೆಯ ವಿಶ್ವಾಸದ ಒಳಗಿನ ಕುರುಡು ಮನಸ್ಥಿತಿಯನ್ನು ಬಯಲುಗೊಳಿಸಿದೆ. ತಳವರ್ಗದ ಮೇಲಿನ ಪ್ರೀತಿಯಿಂದ ಮೇಲ್ವರ್ಗದವರು ಎಷ್ಟು ಹತ್ತಿರವಾದರೂ ಕೆಲ ಕುರುಡು ಜನರು ಅವರನ್ನು ಹೇಗೆ ತರತಮ ಭಾವದಿಂದ ನೋಡುತಿದ್ದರು ಎಂಬ ಘಟನೆಯು ದಲಿತೇತರ ಬಂಧು ಶ್ರೀನಿವಾಸ್ ಕುಮಾರ್, ಜಿ.ಎನ್.
ರಾಮಚಂದ್ರಪ್ಪ, ನಟರಾಜಪ್ಪ ಅವರನ್ನು ಕುರಿತದ್ದು. “ ಆಗ ನಮ್ಮ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯು ನಡೆಸುತಿದ್ದ ಎಲ್ಲಾ ಸಭೆಗಳಿಗೂ ಇವರು ಖಾಯಂ ಪ್ರೇಕ್ಷಕರಾಗಿರುತಿದ್ದರು. ಮೆರವಣಿಗೆ ಮೊದಲ ಸಾಲಿನಲ್ಲಿಯೇ ಯಾವಾಗಲೂ ಕಾಣಿಸಿಕೊಳ್ಳುತಿದ್ದರು. ಇಷ್ಟಾದರೂ ನಮ್ಮಲ್ಲಿಯ ಕೆಲವು ದಲಿತ ಸಂದ ಹುರಿಯಾಳುಗಳಿಗೆ ಇವರ ಮೇಲೆ ಗುಮಾನಿ. ಈ ಮೂವರೂ ದಲಿತೇತರರಾಗಿರುವ
ಕಾರಣಕ್ಕಾಗಿಯೇ ದಲಿತರ ಸಭೆಗಳಲ್ಲಿ ಇವರಿಗೇನು ಕೆಲಸಾ? ಎಂಬುದಾಗಿ ಕೆಲವರು ವಾದ ಮಾಡುತಿದ್ದರು. ಇವರು ನಮ್ಮೊಂದಿಗೆ ಎಷ್ಟೇ ಗಾಢವಾಗಿ ಬೆರೆತು ಕೆಲಸ ಮಾಡಲು ಬಂದರೂ ಸಂಘರ್ಷ ಸಮಿತಿಯ ಕೆಲವರು ಇವರನ್ನು ದೂರದಲ್ಲೇ ಇಟ್ಟು ಮಾತನಾಡಿಸುತಿದ್ದರು.
ಒಕ್ಕಲುಗಳಲ್ಲಿ ನಡೆದ ಯುದ್ಧವನ್ನು ಆನಂತರವೂ ಆ ಒಕ್ಕಲುಗಳು ಅನುಸರಿಸುತ್ತಿರುವ ಕೂಡು ಸಂಪ್ರದಾಯವನ್ನು ಹೇಳುತ್ತವೆ.ವ್ಯಕ್ತಿ ನೆಲೆಯಿಂದ ಹೊರಟ ಈ ಆತ್ಮಕಥನ ಸಮೂಹ ಸ್ವರೂಪವಾಗಿ ಬೆಳೆದು, ಆ ಮೂಲಕ ಕೇರಿಗಳ ಜನ ಚರಿತ್ರೆಯಂತೆ ಅಕ್ಷರ ಲೋಕವು ಇದುವರೆಗೆ ಬರೆಯದ ಚಿತ್ರಗಳನ್ನು,ಬಹು ಸಂಸ್ಕೃತಿಯ ರೂಪಗಳನ್ನು
ತಾರತಮ್ಯಗಳ,ಅವಮಾನಗಳ, ಹಸಿವಿನ ಆವರಣಗಳಲ್ಲಿ ಅಳೆದು ನೋಡುವ ಅಭಿವ್ಯಕ್ತಿಗಳಂತೆಕಾಣಬಲ್ಲದು.
ಈ ಆತ್ಮಕಥನವು ಸಾಮರಸ್ಯದ ಚಿತ್ರದಂತೆ ಕಾಣುವುದಾದರೂ ಆಳದಲ್ಲಿ ಆ ಹೆಣಿಗೆಯ ಮೂಲಕವೇ ತಳವರ್ಗಗಳ ತಲ್ಲಣಗಳನ್ನ ಶೋಧಿಸುವ ಶುದ್ಧ ಜಾಲರದಂತೆ ಕಾಣುತ್ತದೆ. ತನ್ನ ಹಿಂದಿನ ಆತ್ಮಕಥೆಗಳು ಬಹುಸಂಖ್ಯಾತರಾದ ಊರ ಹಿರಿಜಾತಿಗಳ ಶೋಷಣೆಯನ್ನು ಬಿಡಿಸುವುದರ ಜಾಡು ಹಡಿವಾಗಲೂ ಈ ಕಥನವು ಭಿನ್ನವಾಗಿ ನಿಂತು ತಳಲೋಕದ ಒಳಗೂ ಕಾಣುವ ತಾರತಮ್ಯದ ಜಗತ್ತನ್ನು ಢಾಳಾಗಿ ಬಿಚ್ಚಿತೋರಿದೆ. ತಣ್ಣನೆಯ ಕ್ರೌರ್ಯಗಳು ಜಾತಿಯ ಹಂಗು ಮೀರಿದ ಜನರ ಮನದೊಳಗಿನ ಶೋಷಣೆಯ
ರೂಪಗಳು ಎಂಬಂತೆ ಬಿಡಿಸಿ ತೋರಿದೆ.