ಭಾಷೆ ತಂದ ಗೊಂದಲ
ನಮ್ಮೂರು ಸರ್ವ ಜಾತಿ ಮತ್ತು ಧರ್ಮಗಳ ಸಂಗಮವಾಗಿತ್ತು. ಊರಿನಿಂದ ಬಲಕ್ಕೆ ಸಾಗಿದರೆ ಮುತ್ತಗನಹಳ್ಳಿ ಸಿಗುತ್ತಿತ್ತು. ಆ ಊರಿನ ದಾರಿ ಮೊದಲಾಗುತ್ತಿದ್ದಂತೆ ದೊಡ್ಡ ದೊಡ್ಡ ಆಲದ ಮರ, ರಾಗಿ ಮರಗಳಿದ್ದವು. ಆ ಮರಗಳ ನೆರಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇದ್ದವು. ಆ ಕಲ್ಲುಗಳು ಅಲ್ಲೇ ಇದ್ದವುಗಳಲ್ಲ. ಅವನ್ನು ಹೊರಗಡೆಯಿಂದ ಶಿಲ್ಪಿಗಳು ತರಿಸಿಕೊಂಡು ಅದರಿಂದ ದೇವರ ಮೂರ್ತಿಗಳನ್ನು ಮಾಡುತ್ತಿದ್ದರು. ಶಿಲ್ಪಿಗಳು ಆ ಕಲ್ಲುಗಳ ಮೇಲೆ ಕೂತು ಉಳಿ ಮತ್ತು ಸುತ್ತಿಗೆಯಿಂದ ‘mಣ್ ಟಣ್’ ಶಬ್ದ ಮಾಡುತ್ತಾ ಶಿಲೆಯನ್ನು ಕೆತ್ತುತ್ತಿದ್ದರು.
ಶಾಲೆಗೆ ರಜೆಯಿದ್ದಾಗ ನಾವು ಮಕ್ಕಳು ಆ ಕಲ್ಲುಗಳ ಮೇಲೆ ಹತ್ತಿ ಜಿಗಿದು ಆಡುತ್ತಿದ್ದೆವು. ಮತ್ತು ಕೆಲವರು ಶಿಲ್ಪಿಗಳು ತಮ್ಮ ಪಾಡಿಗೆ ತಾವು ಕೆತ್ತನೆಯಲ್ಲಿ ಮಗ್ನರಾಗಿರುತ್ತಿದ್ದರು. ನಮಗೆ ಅವರು ಕೆತ್ತುವ ಕಲ್ಲಿನ ಮುಂದೆ ನಿಂತು ನೋಡುವುದೇ ಒಂದು ವಿಸ್ಮಯವಾಗಿತ್ತು. ನಾವು ಸ್ವಲ್ಪ ಹೊತ್ತು ನಿಂತು ನೋಡುತ್ತಾ ನಮ್ಮಲ್ಲೇ ನಾವು ಮಾತನಾಡುತ್ತಿದ್ದರೆ.. “ಹೋಗಿ ಆ ಕಡೆ ಕಲ್ಲು ಚೂರು ಕಣ್ಣಿಗೆ ಗಿಣ್ಣಿಗೆ ಬಿದ್ದಾತು” ಎಂದು ಗದರುತ್ತಿದ್ದರು. ನಾವು ಸ್ವಲ್ಪ ಹಿಂದೆ ಸರಿದು ಮತ್ತೆ ಅಲ್ಲೇ ನಿಂತು ನೋಡುತ್ತಿದ್ದೆವು. ಎಡಗೈಯ್ಯಲ್ಲಿ ಉಳಿ ಹಿಡಿದು ಬಲಗೈಯ್ಯಲ್ಲಿನ ಸುತ್ತಿಗೆಯಲ್ಲಿ ‘ಟಣ್ ಟಣ್ ಟಣ್ ಟಣ್ ’ ಎಂದು ಶಬ್ದ ಹೊಮ್ಮಿಸುತ್ತಾ ಒಂದೇ ರಿದಂನಲ್ಲಿ ಆಯ ತಪ್ಪದೆ ಪರ್ಪೆಕ್ಟ್ ಆಗಿ ಉಳಿಯ ಮೇಲೆಯೇ ಏಟು ಬೀಳುತ್ತಿತ್ತು. ನಿಜಕ್ಕೂ ‘ಎಷ್ಟು ನುರಿತವರಿದ್ದರು ಅವರು’ ಎಂದು ಈಗ ಅನ್ನಿಸುತ್ತದೆ. ಯಾವುದೇ ಕೆಲಸವಾಗಲಿ ಮಾಡ್ತಾ ಮಾಡ್ತಾ ಅಭ್ಯಾಸವಾಗಿ ಪರಿಣತಿ ಪಡೆದುಕೊಳ್ಳುತ್ತದೆ. ‘ಹಾಡ್ತಾ ಹಾಡ್ತಾ ರಾಗ.. ನರಳ್ತಾ ನರಳ್ತಾ ರೋಗ’ ಎಂಬಂತೆ.
ಹಿಂದೆ ನಾನು ನಿಮಗೆ ಹೇಳಿದಂತೆ ಊರಿನ ದನಗಳನ್ನು ಕಾಯುವ ಕಾಯಕವನ್ನು ಒಬ್ಬರು ವಹಿಸಿಕೊಂಡಿದ್ದರು. ಅದಕ್ಕಾಗಿ ಅವರು ತಿಂಗಳಿಗೆ ಇಷ್ಟು ಎಂದು ಒಂದೊಂದು ಮನೆಯಲ್ಲೂ ಹಣ ಪಡೆಯುತ್ತಿದ್ದರು. ನಮ್ಮ ಮನೆಯಲ್ಲಿ ಸಹ ಒಂದು ಎಮ್ಮೆ ಇತ್ತು. ಅದರ ಕರುವೂ ಇತ್ತು. ಕರುವನ್ನು ಮಂದೆಯಲ್ಲಿ ಕಳಿಸುತ್ತಿರಲಿಲ್ಲ. ದೊಡ್ಡ ಎಮ್ಮೆಯನ್ನು ಮಾತ್ರ ಮಂದೆಗೆ ಕಳಿಸುತ್ತಿದ್ದರು. ಇಬ್ಬರು ಆ ಮಂದೆಯನ್ನು ಊರಿನ ಹೊರಗಡೆಯ ಸುತ್ತಮುತ್ತಲಿನ ಬಯಲಿನಲ್ಲಿ ಅಥವಾ ಕಾಡಿನೆಡೆಗೆ ಹೊಡೆದುಕೊಂಡು ಹೋಗುತ್ತಿದ್ದರು. ಆ ಮಂದೆಯನ್ನು ಕಾಯುವವರು ತೆಲುಗು ಮಾತನಾಡುತ್ತಿದ್ದರು. ನಾನು ಅವರಿವರು ಅಲ್ಲಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡು ಗ್ರಹಿಸುತ್ತಿದ್ದೆನು. ನನ್ನ ಸಹ ಪಾಠಿ ನಾಗು ಅಂದರೆ ನಾಗರತ್ನ ಅವರ ಮನೆಯಲ್ಲಿ ತೆಲುಗು ಮಾತನಾಡುತ್ತಿದ್ದರು. ಮಾತನಾಡಲು ಬರದಿದ್ದರೂ.. ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು. ಯಾಕೆಂದರೆ ತೆಲುಗು ಮತ್ತು ಕನ್ನಡದ ಕೆಲವು ಪದಗಳು ಸ್ವಲ್ಪ ವ್ಯತ್ಯಾಸವಷ್ಟೇ ಇತ್ತು ಅದರಿಂದ.
ಒಮ್ಮೆ ನಾವು ಸೀನೀರ ಬಾವಿಯ ಕಡೆ ಇರುವ ವೆಟರಿನರಿ ಆಸ್ಪತ್ರೆಯ ಕಾಂಪೌಂಡ್ ಒಳಗಿನ ಸುಂಕತ್ತಿ ಮರದ ಕೆಳಗೆ ಆಟವಾಡುತ್ತಿದ್ದೆವು. ಪಕ್ಕದಲ್ಲೇ ಒಂದು ಕಟ್ಟೆಯಿದ್ದ ಬಾವಿ ಇತ್ತು. ಅದರಲ್ಲಿ ನಾಲ್ಕೈದು ಆಮೆಗಳು ಇದ್ದವು ಅವನ್ನು ನೋಡುವುದೇ ಒಂದು ಖುಷಿಯ ಮತ್ತು ಸಾಹಸದ ವಿಷಯವಾಗಿತ್ತು. ಹೀಗೆ ನೋಡುತ್ತಿದ್ದ ಒಂದು ದಿನ ದನಗಳ ಮಂದೆ ಹೊಡೆದುಕೊಂಡು ಹೋಗುತ್ತಿದ್ದರು. ಆ ಕಾಂಪೌಂಡ್ ಗೆ ಆಚೆಯ ದಾರಿಯಲ್ಲಿ ಹೋಗುತ್ತಿದ್ದ ಮಂದೆ ಧೂಳೆಬ್ಬಿಸಿತ್ತು. ಅಂದು ಹೆಂಗಸು ಸಹ ಮಂದೆಯ ಜೊತೆಗೆ ಇದ್ದರು. ಮಂದೆ ಸಾಗುತ್ತಾ ಹೋಗುತ್ತಿತ್ತು. ಆಕೆ ಮುಂದೆ ಹೋದರು.. ಸ್ವಲ್ಪ ಹೊತ್ತಿನ ನಂತರ ಅವರ ಮಗ ಹಿಂದೆ ಅಳುತ್ತಾ ಅಮ್ಮನ ಜೊತೆಗೆ ಹೋಗಲು ಬರುತ್ತಿದ್ದ. ಇದನ್ನು ನೋಡುತ್ತಾ ನಿಂತ ನಾನು ಆ ತಾಯಿಗೆ ಮಗು ಅಳುತ್ತಾ ಬರುತ್ತಿರುವ ತಿಳಿದಿರಲಿಲ್ಲ.. ಅದನ್ನು ತಿಳಿಸಬೇಕೆಂದು ‘ಅಮ್ಮಾ.. ಮೋವ್.. ಚೂಡು ನೀ ಮಗಡು ವಸ್ತುನ್ನಾಡು’ ಎಂದು ಕೂಗಿ ಹೇಳಿದೆ. ಆಕೆಗೆ ಕೇಳಿಸಲಿಲ್ಲ. ಜೋರಾಗಿ ಮತ್ತೊಮ್ಮೆ ಕೂಗಿ ಹೇಳಿದೆ. ಆಕೆ ನಿಂತಳು. ಆ ಕಡೆ ಈಕಡೆ ಕಣ್ಣಾಡಿಸಿ ‘ಎಕ್ಕಡಾ’ ಎಂದಳು. ನಾನು ಅವಳಿಗೆ ‘ಮಗುವನ್ನು ತಲುಪಿಸಿ ‘ಚೂಡು ನೀ ಮಗಡು’ ಎಂದೆ. ಆಕೆ ತೆಲುಗಿನಲ್ಲೇ ಗದರಿಸುತ್ತಾ.. ‘ಈಡು ನಾ ಮೊಗಡಾ? ಕೋತಿ.. ನಾ ಕೊಡಕು’ ಅಂತ ಮಗುವನ್ನು ಕರೆದುಕೊಂಡು ಹೋದಳು.
ಇದನ್ನು ನೋಡುತ್ತಿದ್ದ ನಾಗು ನಗುತ್ತಿದ್ದಳು. ನಾನು ಕಕ್ಕಾಬಿಕ್ಕಿಯಾಗಿ ‘ಯಾಕೇಲೇ’? ಎಂದೆ. ಅವಳು ಮಗನಿಗೆ ‘ಕೊಡುಕು’ ಅನ್ನೋದು ‘ಮಗಡು’ ಅಲ್ಲಾ.. ‘ಮೊಗಡು’ ಅಂದರೆ ‘ಗಂಡಾ ’ ನೇ..! ಅಂದಳು. ನಾನು ‘ಅಪ್ಪ, ಅಮ್ಮ, ತಮ್ಮಡು, ಅನ್ನಯ್ಯ, ಅಕ್ಕ, ಸೇಮ್ ಇದೆ ‘ಮಗನಿಗೆ ಮಗಡು’ ಯಾಕೆ ಅಂv ಯಾಕಿಲ್ಲ? ಅಂತ ಯೋಚಿಸಿ ಏನೂ ತಿಳಿಯದೆ ಸುಮ್ಮನಾಗಿದ್ದೆ. ಅಂದಿನಿಂದ ತೆಲುಗು ಅರ್ಥವಾದರೂ ಮಾತನಾಡಲು ಮಾತ್ರ ಹೋಗಲಿಲ್ಲ.