ಬೆರಗು ಗೊಳಿಸಿದ ಡಕಾಯಿತನ ನಡೆ..!

Share

ಬೆರಗು ಗೊಳಿಸಿದ ಡಕಾಯಿತನ ನಡೆ…!

ನಾನು ಪ್ರಯಾಣಿಸುತ್ತಿದ್ದ ಲಕ್ಷುರಿ ಬಸ್ ಇಂದೋರ್ ನ ಹೊರವಲಯವನ್ನು ಪ್ರವೇಶಿಸಿದ ಸುಳಿವನ್ನು ಮುಚ್ಚಿದ ಕಿಟಿಕಿಯ ಪರದೆಗಳನ್ನೂ ಸೀಳಿ ಒಳತೂರುತ್ತಿದ್ದ ಹೆದ್ದಾರಿಯ ದಾರಿ ದೀಪಗಳ ಬೆಳಕಿನಿಂದ ಊಹಿಸಿದೆ. ಉರಿಯುವ ಕಣ್ಣುಗಳನ್ನು ಕಷ್ಟಪಟ್ಟು ತೆರೆದು ಕೈ ಗಡಿಯಾರವನ್ನು ನೋಡಿಕೊಂಡವನಿಗೆ ಸಮಯ ಮುಂಜಾನೆಯ ನಾಲ್ಕೂವರೆ ಎಂದು ಗೊತ್ತಾಯಿತು. ರಾತ್ರಿ ಹತ್ತರ ಸುಮಾರಿಗೆ ಅಹಮದಾಬಾದ್ ನ ಪಾಲಡಿಯ ಪವನ್ ಟ್ರಾವೆಲ್ಸ್ ಬಸ್ ನಲ್ಲಿ ಆಫೀಸ್ ನ ಕೆಲಸದ ನಿಮಿತ್ತ ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಹೊರಟಿದ್ದ ನನಗೆ ರಾತ್ರಿಯಿಡೀ ನಿದ್ದೆ ಹತ್ತಿರಲಿಲ್ಲ. ಪುಷ್ ಬ್ಯಾಕ್ ಸೀಟನ್ನು ಹೇಗೆಲ್ಲಾ ಸರಿಹೊಂದಿಸಿ ಮಲಗಲಿಕ್ಕೆ ಯತ್ನಿಸಿದರೂ ಪೂರ್ತಿದಿನ ಆಫೀಸ್ ನಲ್ಲಿ ಕೆಲಸ ಮಾಡಿ ದಣಿದ ದೇಹಕ್ಕೆ ನಿದ್ರೆ ಮಾತ್ರ ಮರೀಚಿಕೆಯಾಗಿಯೇ ಉಳಿದಿತ್ತು.

ನಾನು ಕೆಲಸದ ಮೇಲೆ ಹೊರಟಿದ್ದು ಗ್ವಾಲಿಯರ್ ಸಮೀಪವಿದ್ದ ಶಿವಪುರಿ ಎನ್ನುವ ಪಟ್ಟಣಕ್ಕೆ. ಶಿವಪುರಿಯಲ್ಲಿದ್ದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ನಲ್ಲಿರುವ ಐವತ್ತು ಲೈನ್ಸ್ ಗಳ ಟೆಲಿಫೋನ್ ಎಕ್ಸ್ಚೇಂಜ್ ನ ದುರಸ್ತಿ ಕೆಲಸಕ್ಕಾಗಿ ಆತುರಾತುರವಾಗಿ ಹೊರಟಿದ್ದೆ. ನಿನ್ನೆ ಮಧ್ಯಾಹ್ನದ ವೇಳೆಗೆ ನಮ್ಮ ರೀಜನಲ್ ಮ್ಯಾನೇಜರ್ ಚಟರ್ಜಿಯವರಿಗೆ ದೆಹಲಿಯ ಐಟಿಬಿಪಿ ಮುಖ್ಯ ಕಾರ್ಯಾಲಯದಿಂದ ದುರಸ್ತಿ ಕೋರಿ ಬಂದ ತುರ್ತುಕರೆಯ ನಿಮಿತ್ತ ರಾತ್ರಿಯೇ ಇಂದೋರ್ ಬಸ್ಸನ್ನು ಏರಿದ್ದೆ.

ಇನ್ನೇನು ಇಂದೋರ್ ಹತ್ತು ಹದಿನೈದು ನಿಮಿಷಗಳ ದೂರ ಇರಬೇಕು ಎನ್ನುವಷ್ಟರಲ್ಲಿ ಬಸ್ ಢಬ್ ಎನ್ನುವ ಭಾರೀ ಸದ್ದಿನೊಂದಿಗೆ ಮುಖ್ಯ ರಸ್ತೆಯನ್ನು ಬಿಟ್ಟು ಬದಿಗೆ ಸೇರಿದ ಅನುಭವವಾಗಿ ಕಣ್ಣು ಬಿಟ್ಟು ನೋಡುವುದರ ಒಳಗೆ ಮತ್ತೊಮ್ಮೆ ಮೊದಲ ಶಬ್ದಕ್ಕಿಂತ ತೀವ್ರವಾದ ಶಬ್ದದೊಟ್ಟಿಗೆ ರಸ್ತೆ ಬದಿಯ ಯಾವುದೋ ಒಂದು ವಸ್ತುವಿಗೆ ರಭಸದಿಂದ ಡಿಕ್ಕಿಕೊಟ್ಟು ಭಾರೀ ಕಂಪನದೊಂದಿಗೆ ನಿಂತುಬಿಟ್ಟಿತು. ವೇಗವಾಗಿ ಚಲಿಸುತ್ತಿದ್ದ ಬಸ್ ಒಮ್ಮೆಲೇ ನಿಂತಿದ್ದರಿಂದ ನನ್ನ ಬಲಗಾಲಿನ ಮಂಡಿಚಿಪ್ಪು ಮುಂದಿನ ಸೀಟಿಗೆ ಬಲವಾಗಿ ಅಪ್ಪಳಿಸಿತು. ಇದರ ಫಲಸ್ವರೂಪವಾಗಿ ನಾನು ಒಂದು ತೀವ್ರ ತರವಾದ ನೋವಿಗೆ ಗುರಿಯಾದೆ. ಬಸ್ಸಿನಲ್ಲಿ ಇದ್ದ ಸುಮಾರು ಮೂವತ್ತು ಪ್ರಯಾಣಿಕರಲ್ಲಿ ಬಹಳಷ್ಟು ಜನ ಬೆಳಗಿನ ಜಾವದ ಗಾಢನಿದ್ದೆಯಲ್ಲಿದ್ದ ಕಾರಣ ಅಪಘಾತದ ನಂತರ ಒಂದೆರೆಡು ಕ್ಷಣಗಳ ಕಾಲ ಇದ್ದ ಅಸಹ್ಯ ಮೌನ ಮುರಿಯುತ್ತಲೇ ಬಸ್ಸು ಕಲ್ಲುಬಿದ್ದ ಜೇನು ಗೂಡಾಗಿತ್ತು. ಸುತ್ತಮುತ್ತ ಏನಾಗುತ್ತಿದೆ ಎನ್ನುವುದನ್ನು ಅರಿಯಲು ಕೆಲ ಪ್ರಯಾಣಿಕರು ಕಿಟಕಿಗಳ ಗಾಜುಗಳನ್ನು ಸರಿಸಿ ಹೊರಗೆ ಗೋಣು ಹಾಕಿ ನೋಡುವ ಪ್ರಯತ್ನದಲ್ಲಿದ್ದರೆ ಮತ್ತೆ ಹಲವರು ಅಪಘಾತದಿಂದಾಗಿ ಆದ ಮೈ-ಕೈನ ಗಾಯಗಳ ಕಾರಣದಿಂದಾಗಿ ಸಣ್ಣದಾಗಿ ನರಳುತ್ತಿದ್ದರು. ಬಸ್ಸಿನ ಮುಂದಿನ ಸೀಟಿನ ಪ್ರಯಾಣಿಕರಿಗೆ ಹೆಚ್ಚು ಗಾಯಗಳು ಆಗಿದ್ದಂತೆ ತೋರಿ ಬಂದಿತು. ನಾನು ಬಸ್ಸಿನ ಮಧ್ಯಭಾಗದಲ್ಲಿ ಇದ್ದ ಪರಿಣಾಮ ಹೆಚ್ಚು ಅಪಾಯಗಳಿಲ್ಲದೇ ಪಾರಾಗಿದ್ದೆ. ನನ್ನ ಮುಂದಿನ ಸೀಟಿನಲ್ಲಿ ಇದ್ದ ಸಣ್ಣ ಮಗುವೊಂದು ಮಾಡುತ್ತಿದ್ದ ಚೀತ್ಕಾರ ಕರುಳನ್ನು ಚೀರುವಂತಿತ್ತು.

ನನ್ನ ಬದಿಯ ಪ್ರಯಾಣಿಕ ರಾಮ್ ವಾಗ್ಲೆ ಇಂದೋರ್ ನವರೆ. ಬಸ್ಸಿನಲ್ಲಿ ನನಗೆ ಪರಿಚಯವಾಗಿದ್ದರು. ವಾಗ್ಲೆ ಏನೂ ಗಾಯಗಳಿಲ್ಲದೆ ಪಾರಾಗಿದ್ದರು. ನನ್ನ ನೋವುಮಿಶ್ರಿತ ಮುಖವನ್ನು ಗಮನಿಸಿ ಏನಾದರೂ ಪೆಟ್ಟಾಗಿದೆಯಾ? ಎಂದು ವಿಚಾರಿಸತೊಡಗಿದರು. ಮೇಲೆ ಇಟ್ಟಿದ್ದ ನನ್ನ ಸೂಟ್ ಕೇಸನ್ನು ತಾವೇ ಇಳಿಸಿಕೊಂಡು ನಿಧಾನವಾಗಿ ನನ್ನನ್ನು ಸೀಟಿನಿಂದ ಎಬ್ಬಿಸಿದರು. ವಾಗ್ಲೆ ಸಹಾಯದಿಂದ ನಿಧಾನವಾಗಿ ನಿಂತವನು ಮೊಣಕಾಲನ್ನು ಮುಟ್ಟಿ ನೋಡಿಕೊಂಡೆ, ಅಂತಹ ಊತ ಇದ್ದ ಹಾಗೇನೂ ಅನ್ನಿಸಲಿಲ್ಲ. ಆದರೆ ನೋವು ಮಾತ್ರ ಹೆಚ್ಚಾಗಿಯೇ ಇತ್ತು.

ನಿಧಾನವಾಗಿ ಕುಂಟುತ್ತಾ, ಈಗಾಗಲೇ ಒಬ್ಬರೊಬ್ಬರಾಗಿ ಬಸ್ಸಿನಿಂದ ಇಳಿಯುತ್ತಿದ್ದ ಪ್ರಯಾಣಿಕರ ಒಟ್ಟಿಗೆ ಬಸ್ ಇಳಿದವನು ಬಸ್ ಗೆ ಏನಾಯ್ತು? ಎನ್ನುವ ವಿಷಯ ಸಂಗ್ರಹಣೆಯಲ್ಲಿ ತೊಡಗಿದೆ. ಆಗಿದ್ದಿಷ್ಟೆ, ವೇಗವಾಗಿ ಚಲಿಸುತ್ತಿದ್ದ ನಮ್ಮ ಬಸ್ ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದು ರಸ್ತೆಯ ಪಕ್ಕಕ್ಕೆ ಸರಿದು ಬದಿಯಲ್ಲಿದ್ದ ಬೃಹದಾಕಾರದ ಮರವೊಂದಕ್ಕೆ ಡಿಕ್ಕಿ ಕೊಟ್ಟಿತ್ತು. ಇನ್ನೇನು ಟ್ಯಾಂಕರ್ ಗೆ ಡಿಕ್ಕಿ ಹೊಡೆದೇ ಬಿಡುತ್ತದೆ ಎನ್ನುವುದನ್ನು ಅರಿತ ಡ್ರೈವರ್ ಚಾಣಾಕ್ಷತನದಿಂದ ಕೊನೇ ಘಳಿಗೆಯಲ್ಲಿ ಬಸ್ಸನ್ನು ರಸ್ತೆ ಬದಿಗೆ ಸರಿಸುವ ಮೂಲಕ ನಡೆಯಲಿರುವ ದೊಡ್ಡದೊಂದು ಅಪಘಾತವನ್ನು ತಪ್ಪಿಸಿದ್ದ. ಆದರೂ ಟ್ಯಾಂಕರ್ ನ ಬಲಮೂಲೆಗೆ ಬಸ್ ತಾಕಿದ್ದರಿಂದ ನಿಯಂತ್ರಣವನ್ನು ಕಳೆದುಕೊಂಡ ಕಾರಣದಿಂದಾಗಿ ಮರಕ್ಕೆ ಡಿಕ್ಕಿ ಕೊಟ್ಟಿದ್ದ.

ಇನ್ನು ಅಪಘಾತದ ಸ್ಥಳದಲ್ಲಿ ಇದ್ದು ಪ್ರಯೋಜನ ವಿಲ್ಲ ಎಂದು ಅರಿತ ವಾಗ್ಲೆ ನನ್ನನ್ನು ಹಿಡಿದುಕೊಂಡು ನಿಧಾನವಾಗಿ ಹೆದ್ದಾರಿಗೆ ಬಂದವನು ಇಂದೋರ್ ಕಡೆ ಹೋಗುತ್ತಿದ್ದ ವಾಹನಗಳ ಕಡೆ ಕೈ ಬೀಸಹತ್ತಿದ. ನಿಮ್ಮನ್ನು ನನ್ನ ಮನೆಗೆ ಕರೆದೊಯ್ಯುತ್ತಿದ್ದೇನೆ, ನಿಮ್ಮ ಕಾಲಿಗೆ ಪ್ರಥಮ ಚಿಕಿತ್ಸೆ ನಂತರ ಸ್ವಲ್ಪ ಆರಾಮ ಮಾಡಿ ನಿಮ್ಮ ಮುಂದಿನ ಪ್ರಯಾಣವನ್ನು ಮುಂದುವರೆಸಬಹುದು ಎಂದವನು ನನ್ನ ಪ್ರತಿಕ್ರಿಯೆಗೆ ಕಾಯದೇ ನಮ್ಮನ್ನು ಕಂಡು ನಿಲ್ಲಿಸಿದ ಒಂದು ಜೀಪ್ ನಲ್ಲಿ ಕುಳ್ಳರಸಿಕೊಂಡು ಖಜ್ರಾನ ಏರಿಯಾದಲ್ಲಿದ್ದ ತನ್ನ ಒಂದು ಕೋಣೆಯ ಶೀಟು ಹೊದಿಸಿದ ಮನೆಗೆ ಕರೆದೊಯ್ದೆ ಬಿಟ್ಟ. ಇನ್ನೂ ಅವಿವಾಹಿತನಾಗಿದ್ದ ವಾಗ್ಲೆ ತನ್ನ ತಾಯಿ ಒಟ್ಟಿಗೆ ವಾಸವಾಗಿದ್ದ. ವಾಗ್ಲೆ ತಾಯಿ ಒದಗಿಸಿದ ಬಿಸಿನೀರಿನಿಂದ ಮೊಣಕಾಲನ್ನು ಸ್ವಚ್ಚ ಗೊಳಿಸಿಕೊಂಡವನಿಗೆ ತುಸು ಆರಾಮ ಎನಿಸಿತು. ಮೊಣಕಾಲಿನಲ್ಲಿ ನೋವು ಇದ್ದರೂ ಬಾಹ್ಯದಲ್ಲಿ ಅಂತಹ ಹೇಳಿಕೊಳ್ಳುವಂತಹ ಗಾಯವೇನಾಗಿರಲಿಲ್ಲ. ವಾಗ್ಲೆ ಕೊಟ್ಟ ಯಾವುದೋ ಮುಲಾಮನ್ನು ಮೊಣಕಾಲಿಗೆ ಸವರಿಕೊಂಡವನು ವಾಗ್ಲೆ ತಾಯಿ ಮಾಡಿಕೊಟ್ಟ ಕಾಫಿಯನ್ನ ಕುಡಿದು ಒಂದೆರೆಡು ಗಂಟೆ ವಿರಮಿಸಿ ಹೋಗಿ ಎನ್ನುವ ವಾಗ್ಲೆಯ ಮನವಿಯನ್ನು ನಯವಾಗಿಯೇ ತಿರಸ್ಕರಿಸಿ ಇಂದೋರ್ ಮುಖ್ಯ ನಿಲ್ದಾಣಕ್ಕೆ ಆಟೋದಲ್ಲಿ ಬಂದಿಳಿದೆ.

ಆಗ ಬೆಳಗಿನ ಏಳು ಗಂಟೆಯಾಗಿತ್ತು. ಶಿವಪುರಿಗೆ ಹೋಗುವ ಬಸ್ಸು ಎಂಟು ಗಂಟೆಗೆ ಡಿಪೋದಿಂದ ಬರಲಿದೆ ಎನ್ನುವ ಮಾಹಿತಿ ಪಡೆದವನು ಅಲ್ಲಿಯೇ ಇದ್ದ ಸಿಮೆಂಟ್ ಬೆಂಚಿನ ಮೇಲೆ ಬಸ್ ನಿರೀಕ್ಷಣೆಯಲ್ಲಿ ಕುಳಿತೆ. ನಿನ್ನೆ ರಾತ್ರಿ ಏನನ್ನೂ ಸೇವಿಸದಿದ್ದ ಕಾರಣ ಹಸಿದ ಹೊಟ್ಟೆಗೆ ಬಸ್ ನಿಲ್ದಾಣದಲ್ಲಿ ಮಾರಲು ಬಂದ ಹುಡುಗನೊಬ್ಬನಿಂದ ಪ್ರಖ್ಯಾತ ಇಂದೋರಿ ಅಲೂಪೋಹ, ಜಿಲೇಬಿ ಮತ್ತು ಪಕೋಡಾ ತಿಂದು ಟೀ ಕುಡಿದೆ.

ಸಮಯಕ್ಕೆ ಸರಿಯಾಗಿ ಬಸ್ ಸ್ಟ್ಯಾಂಡ್ ಗೆ ಬಂದ ಮಧ್ಯಪ್ರದೇಶ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಸುಮಾರು ನಾಲ್ಕು ನೂರು ಕೀ. ಮೀ. ಗಳ ದೂರವನ್ನು ಕ್ರಮಿಸಿ ಶಿವಪುರಿಯನ್ನು ಸಂಜೆ ಆರರ ಸುಮಾರಿಗೆ ತಲುಪಿದೆ. ಮಾರ್ಗ ಮಧ್ಯ ಸಿಕ್ಕ ದೇವಾಸ್ ಎನ್ನುವ ಪಟ್ಟಣವೊಂದು ಭೀಮಸೇನ ಜೋಷಿಯವರ ಕಾರಣಕ್ಕಾಗಿ ನನ್ನ ನೆನಪಿನ ಪಟಲದಲ್ಲಿರುವುದನ್ನು ಬಿಟ್ಟರೆ ಈ ಹೊತ್ತು ನಾನು ಕ್ರಮಿಸಿದ ಮಾರ್ಗಮಧ್ಯದ ಯಾವ ಸ್ಥಳಗಳೂ ನೆನಪಿಲ್ಲ.

ರಾತ್ರಿಯಿಡೀ ನಿದ್ದೆಯಿಲ್ಲದ ಮತ್ತು ಬೆಳಿಗ್ಗೆ ಆದ ಬಸ್ ಅಪಘಾತದ ಕಾರಣಗಳಿಂದಾಗಿ ಬಹಳ ಸುಸ್ತಾಗಿದ್ದೆ. ಮಧ್ಯಾಹ್ನ ಯಾವುದೋ ಒಂದು ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಎರಡು ಚಪಾತಿ ಮತ್ತು ದಾಲ್ ತಿಂದವನು ರಾತ್ರಿ ಉಳಿಯಲಿಕ್ಕಾಗಿ ಹೋಟೆಲ್ ಒಂದನ್ನು ಹುಡುಕಬೇಕಾಗಿತ್ತು. ಆದರೆ ದೇಹ ಇದಕ್ಕೆ ಹೆಚ್ಚು ಸಾಥ್ ಕೊಡದೇ ಇದ್ದುದರಿಂದ ಬಸ್ ಸ್ಟಾಂಡ್ ಸಮೀಪದ ಯಾವುದೋ ಒಂದು ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದವನು ರೂಮ್ ಗೇ ಎರಡು ರೋಟಿ ಮತ್ತು ಮಲೈಕೋಫ್ತಾ ತರಿಸಿಕೊಂಡು ತಿಂದು ಹಾಸಿಗೆ ಮೇಲೆ ಬಿದ್ದವನು ಬೆಳಿಗ್ಗೆ ಕಣ್ಣು ತೆರೆದು ನೋಡಿದಾಗ ಸಮಯ ಬೆಳಿಗ್ಗೆ ಎಂಟನ್ನು ದಾಟಿಯಾಗಿತ್ತು.

ಗಡಬಡಿಸಿ ಎದ್ದವನು ಆತುರಾತುರವಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಐಟಿಬಿಪಿ ಕಡೆ ಹೊರಟೆ. ರಾತ್ರಿಯ ಕತ್ತಲಲ್ಲಿ ಶಿವಪುರಿಯನ್ನ ಸರಿಯಾಗಿ ನೋಡಲಾಗಿರಲಿಲ್ಲ. ನಾನು ಇದ್ದ ಹೋಟೆಲ್ ಕೆಳಗೇ ಇದ್ದ ಒಂದು ದೊಡ್ಡ ಬಂದೂಕುಗಳನ್ನು ಮಾರಾಟ ಮಾಡುವ ಅಂಗಡಿ ಬೆಳಗಿನ ಆ ವೇಳೆಗಾಗಲೇ ಬಾಗಿಲನ್ನು ತೆರೆದು ಸೌಂಡ್ ಸಿಸ್ಟಂ ಮೂಲಕ ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನು ಜೋರಾಗಿ ಕೇಳಿಸುತ್ತಿತ್ತು. ನನಗೆ ಇದನ್ನು ಕಂಡು ಆಶ್ಚರ್ಯವೆನಿಸಿದರೂ ಅದರ ಬಗ್ಗೆ ಯೋಚಿಸಲು ಹೆಚ್ಚು ಸಮಯ ಇರಲಿಲ್ಲ. ITBPಗೆ ಹೋಗಲು ವಾಹನವೊಂದನ್ನು ಹುಡುಕುತ್ತಿದ್ದವನಿಗೆ ಶಿವಪುರಿಯಲ್ಲಿ ಆಟೋಗಳು ಇಲ್ಲದಿರುವುದು ಗಮನಕ್ಕೆ ಬಂದಿತು. ಆಟೋದಂತಹ ಫಟಾಫಟಿಗಳು ಪಟ್ಟಣದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದರೆ ಒಬ್ಬಂಟಿ ಪ್ರಯಾಣಿಕರು ಸೈಕಲ್ ರಿಕ್ಷಾಗಳನ್ನೋ ಅಥವಾ ಕುದುರೆಗಾಡಿಗಳನ್ನೋ ಅವಲಂಬಿಸಬೇಕಾಗಿತ್ತು. ITBP ಪಟ್ಟಣದಿಂದ ಸುಮಾರು ಎರಡು ಕೀ. ಮೀ. ದೂರದಲ್ಲಿತ್ತು. ITBP ಗೆ ಬರಲಿಕ್ಕೆ ಯಾಕೋ ನಾನು ವಿಚಾರಿಸಿದ ಮೂರ್ನಾಲ್ಕು ಸೈಕಲ್ ರಿಕ್ಷಾದವರಲ್ಲಿ ಯಾರೂ ತಯಾರಿಲ್ಲದ ಕಾರಣಕ್ಕಾಗಿ ಸ್ವಲ್ಪ ದೂರ ನಡೆದು ಬೇರೆ ಚಾಲಕರನ್ನು ವಿಚಾರಿಸಿದರಾಯಿತು ಎಂದುಕೊಂಡು ನಿಧಾನವಾಗಿ ಮುಂದೆ ಹೆಜ್ಜೆ ಹಾಕತೊಡಗಿದೆ. ನಿನ್ನೆ ಆದ ಮಂಡಿ ನೋವು ಸಾಕಷ್ಟು ಕಡಿಮೆಯಾದಂತಿದ್ದರೂ ನಾನು ನನ್ನ ಸಾಮಾನ್ಯ ಲಯದಲ್ಲಿ ನಡೆಯಲು ಇನ್ನೂ ಸಾಧ್ಯವಾಗಿರಲಿಲ್ಲ. ಸ್ವಲ್ಪ ಕುಂಟಿಕೊಂಡೆ ನಡೆಯತೊಡಗಿದೆ.

ಹಾಗೆಯೇ ನಡೆಯುತ್ತಾ ಹೋದವನಿಗೆ ರಸ್ತೆ ಬದಿಯಲ್ಲಿ ಮತ್ತೆ ನಾಲ್ಕಾರು ಬಂದೂಕ ಮಾರಾಟದ ಅಂಗಡಿಗಳು ಗೋಚರಿಸಿದವು. ಆಶ್ಚರ್ಯ ಎಂದರೆ ಇನ್ನೂ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವ ಹೊತ್ತು ಈ ಬಂದೂಕದ ಅಂಗಡಿಗಳು ಬೆಳ್ಳಂಬೆಳಿಗ್ಗೆಯೇ ತಮ್ಮ ವ್ಯಾಪಾರ ವಹಿವಾಟನ್ನು ಪ್ರಾರಂಭಿಸಿರುವುದು ಯಾಕೋ ಮನಸ್ಸಿನಲ್ಲಿ ಅವ್ಯಕ್ತ ಭಯವೊಂದನ್ನು ಹುಟ್ಟುಹಾಕಿತು. ಹೇಳಿ ಕೇಳಿ ಶಿವಪುರಿ ಚಂಬಲ್ ಡಕಾಯಿತರ ಪ್ರಮುಖ ಕೇಂದ್ರ ಎಂದೇ ಕುಖ್ಯಾತಿ ಹೊಂದಿತ್ತು. ನಾನು ಶಿವಪುರಿ ಭೇಟಿ ಕೊಟ್ಟ ಹೊತ್ತಿಗಾಗಲೇ ಚಂಬಲ್ ಡಕಾಯಿತ ರಾಣಿ ಫೂಲನ್ ದೇವಿಯ ಕ್ರೂರ ಇತಿಹಾಸ ಕೊನೆಗೊಂಡಿತ್ತು. ಮಧ್ಯಪ್ರದೇಶ ಸರ್ಕಾರಕ್ಕೆ ಶರಣಾಗಿ ಚಂಬಲ್ ಕಣಿವೆಯ ರಕ್ತಸಿಕ್ತ ಇತಿಹಾಸವೊಂದಕ್ಕೆ ತೆರೆ ಎಳೆದಾಗಿತ್ತು. ಆದರೂ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಶಿವಪುರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಡಕಾಯಿತರು ಇದ್ದಾರೆ ಎಂದು ಓದಿ ತಿಳಿದಿದ್ದೆ. ಇಂದೋರ್ ನವನೇ ಆದ ನನ್ನ ಸಹೋದ್ಯೋಗಿ ಉಪಾಧ್ಯಾಯ ಈ ಬಗ್ಗೆ ಮೊನ್ನೆ ಆಫೀಸ್ ನಲ್ಲಿ ಉದ್ದವಾದ ಉಪದೇಶ ಮಾಡಿ ಶಿವಪುರಿಯಲ್ಲಿ ಏನು ಮಾಡಬೇಕು ಏನು ಮಾಡಬಾರದು ಎನ್ನುವುದರ ಬಗ್ಗೆ ಹೇಳಿದ್ದು ಈ ಹೊತ್ತಿನಲ್ಲಿ ನೆನಪಿಗೆ ಬಂದು ನನ್ನ ಎದೆ ಬಡಿತವನ್ನ ತುಸು ಹೆಚ್ಚಿಸಿತು.

ಈಗ ಮತ್ತೆ ಹೊಟ್ಟೆ ತಾಳ ಹಾಕತೊಡಗಿತು. ತಿನ್ನಲು ಏನಾದರೂ ಸಿಕ್ಕೀತೇ? ಎಂದು ರಸ್ತೆಯ ಎರಡೂ ಬದಿಗಳಲ್ಲಿ ಕಣ್ಣಾಡಿಸುತ್ತಾ ಹೊರಟವನಿಗೆ ರಸ್ತೆ ಬದಿಯ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ತಿಂಡಿ ಅಂಗಡಿಗಳು ನೋಡಸಿಕ್ಕವು. ಆದರೆ ಉಪಾಧ್ಯಾಯನ ಸಲಹೆಗಳ ನೆನಪಾಗಿ ಸ್ವಲ್ಪ ದೊಡ್ಡದಾಗಿ ರೆಸ್ಟೋರೆಂಟ್ ಎಂದು ಹೇಳಬಹುದಾದ ಹೋಟೆಲ್ ತಲಾಷ್ ನಲ್ಲಿ ಎರಡು ಮೂರು ಫರ್ಲಾಂಗ್ ನಡೆದಿದ್ದೆ. ಕಡೆಗೂ ಕಣ್ಣಿಗೆ ಸಾಕಷ್ಟು ದೊಡ್ಡದಾಗಿ ಇದ್ದಂತೆ ಕಂಡ ಹಲ್ವಾಯಿ ಹೋಟೆಲ್ ಒಂದು ಕಣ್ಣಿಗೆ ಬೀಳಲಾಗಿ ತಡಮಾಡದೆ ಒಳಗೆ ನುಗ್ಗಿದೆ. ಇಲ್ಲಿಯೂ ಅದೇ ಪೋಹ, ಜಿಲೇಬಿ ಮತ್ತು ಪಕೋಡಾಗಳು ನನ್ನ ಕಣ್ಣಿಗೆ ಬಿದ್ದವು. ಯಾಕೋ ಇವನ್ನು ತಿನ್ನಲು ಮನಸ್ಸಾಗದೆ ನನ್ನ ಮುಂದಿನ ಮೇಜಿನಲ್ಲಿ ಕುಳಿತ ಗ್ರಾಹಕರೊಬ್ಬರು ತರಿಸಿಕೊಂಡ ಚೋಲೆ ಬಟೊರಾವನ್ನು ಆರ್ಡರ್ ಮಾಡಿದೆ.

ಇದೇ ಸಮಯದಲ್ಲಿ ನನ್ನ ಮೇಜಿಗೆ ಮತ್ತೊಬ್ಬ ಗ್ರಾಹಕನ ಆಗಮನವಾಯಿತು. ಬೇರೆ ಮೇಜುಗಳು ಖಾಲಿ ಇದ್ದಾಗಲೂ ನನ್ನ ಮೇಜಿಗೇ ಒಕ್ಕರಿಸಿದ ಆಸಾಮಿಯನ್ನ ನೋಡಿದವನು ಒಂದು ಕ್ಷಣ ಮರಗಟ್ಟಿ ಹೋದೆ. ನನ್ನ ಎದುರು ಒಬ್ಬ ಡಕಾಯಿತನಂತೆ ತೋರುತ್ತಿದ್ದ ವ್ಯಕ್ತಿಯೊಬ್ಬ ಬಂದು ಆಸೀನನಾಗಿದ್ದ. ದಪ್ಪ ಮೀಸೆ, ಕೆಂಪಾದ ಉರಿ ಕಣ್ಣುಗಳು, ಐವತ್ತಕ್ಕೂ ಮೀರಿದಂತಹ ವಯ್ಯಸ್ಸಾದರೂ ಸದೃಢವಾಗಿದ್ದ ಮೈಕಟ್ಟು ಎದೆಯನ್ನು ಮುಟ್ಟುಟ್ಟಿದ್ದ ಕಪ್ಪುಮಿಶ್ರಿತ ಬಿಳಿಗಡ್ಡ, ತಲೆಗೆ ಸುತ್ತಿದ್ದ ಮಾರುದ್ದದ ಹಸಿರು ರುಮಾಲು, ಚೂಪಾದ ಹದ್ದಿನ ಕೊಕ್ಕಿನಂತಹ ಮೂಗು, ಉದ್ದವೇ ಎಂದು ಹೇಳಬಹುದಾದ ಕಣ್ಣುಗಳ ಮೇಲೆ ಬೀಳುವಂತಿದ್ದ ದಟ್ಟ ಕಪ್ಪು ಹುಬ್ಬುಗಳು, ಗೋಧಿ ಮೈಬಣ್ಣ ಇಷ್ಟನ್ನು ಮಾತ್ರ ಹೆದರಿಕೆಯಿಂದಲೆ ನೋಡಿದ ನಾನು ಹೃದಯದ ಬಡಿತವನ್ನು ಒಂದೆರೆಡು ಕಾಲ ನಿಲ್ಲಿಸಿಬಿಟ್ಟೆ, ಕಾರಣ ನನ್ನ ಎದುರಿಗಿದ್ದ ವ್ಯಕ್ತಿಯ ಹೆಗಲ ಮೇಲೆ ಜೋತು ಬಿದ್ದಿದ್ದ ಡಬಲ್ ಬ್ಯಾರೆಲ್ ಬಂದೂಕು. ನನ್ನ ಕಲ್ಪನೆಯ ಚಂಬಲ್ ಡಕಾಯಿತ ಪುಸ್ತಕಗಳ ವರ್ಣಚಿತ್ರದಿಂದ ಜೀವತಳೆದು ನನ್ನ ಎದುರಿಗೇ ಕುಳಿತ ಅನುಭವವಾಗಿ ಜಲ್ಲನೆ ಬೆವೆತೆ. ಎತ್ತಬೇಕೋ ಬೇಡವೋ ಎನ್ನುವ ಹೆದರಿಕೆಯಲ್ಲಿಯೇ ಸ್ವಲ್ಪ ತಲೆ ಎತ್ತಿದವನಿಗೆ ಮುಂದೆ ಕುಳಿತಿರುವ ವ್ಯಕ್ತಿ ತನ್ನ ಹೆಗಲಿಂದ ಇಳಿಸಿದ ಬಂದೂಕವನ್ನ ಪಕ್ಕದಲ್ಲಿದ್ದ ಗೋಡೆಗೆ ಒರಗಿಸಿ ಇಟ್ಟದ್ದು ಕಾಣಿಸಿತು. ಒಂದು ವಿಚಿತ್ರವಾದ ಮಂದಹಾಸವನ್ನ ಆ ವ್ಯಕ್ತಿಯ ಮುಖದಲ್ಲಿ ಕಂಡೆ.

ಈ ಹೊತ್ತಿಗೆ ನನ್ನ ಉಪಹಾರವನ್ನು ಸರ್ವರ್ ಹುಡುಗ ತಂದಿಟ್ಟ. ನನ್ನ ಪ್ಲೇಟಿನತ್ತ ನೋಡಲೂ ನನಗೆ ಧೈರ್ಯ ಸಾಲಲಿಲ್ಲ. ಆಶ್ಚರ್ಯವೆನ್ನುವಂತೆ ಹುಡುಗ ಡಕಾಯಿತನನ್ನು ಏನು ಕೊಡಬೇಕು ಎಂದು ಕೇಳಲಿಲ್ಲ, ಡಕಾಯಿತನೂ ತನಗೆ ಏನುಬೇಕು ಎಂದು ಹೇಳಲಿಲ್ಲ. ಡಕಾಯಿತನನ್ನು ಕಂಡ ಹುಡುಗನ ಚಲನ ವಲನಗಳಲ್ಲಿ ಏನೂ ವ್ಯತ್ಯಾಸ ಗೋಚರಿಸಿದ ಕಾರಣ ಸ್ವಲ್ಪ ಧೈರ್ಯ ಹೊಂದಿದವನಾಗಿ ನಾನು ಬಟೊರವನ್ನ ಮುರಿಯಲು ಮುಂದಾದೆ. ಸಾಕಷ್ಟು ರುಚಿಯಾಗಿಯೆ ತೋರಿದ ತಿಂಡಿಯನ್ನು ಸವೆಯುವ ಮನಃಸ್ಥಿತಿಯಲ್ಲಿ ನಾನಿರಲಿಲ್ಲ. ಗಬಗಬನೆ ಉಪಾಹಾರವನ್ನು ಮುಗಿಸಲು ಯತ್ನಿಸತೊಡಗಿದೆ.

ಅದೇ ವೇಳೆಗೆ ಒಂದು ಗೇಣು ಉದ್ದದ ಸ್ಟೀಲ್ ಲೋಟದಲ್ಲಿ ಕಾದು ಕಾದು ಕಂದಾಗಿದ್ದ ಹಾಲನ್ನು ಹುಡುಗ ಡಕಾಯಿತನಿಗಾಗಿ ತಂದುಕೊಟ್ಟ. ತನ್ನ ಮೀಸೆಯನ್ನು ತೀಡಿ, ತಿದ್ದಿ ಒಪ್ಪವಾಗಿಸಿದ ಡಕಾಯಿತ ಸೊರಸೊರ ಶಬ್ದದೊಂದಿಗೆ ಹಾಲಿನ ಸೇವನೆಗೆ ಮೊದಲಿಟ್ಟ. ಇನ್ನೂ ಒಂದು ಅರ್ಧ ಬಟೋರ ತಟ್ಟೆಯಲ್ಲಿ ಉಳಿದಿರುವಾಗಲೇ ನಾನು ಎದ್ದು ಪಕ್ಕದಲ್ಲಿದ್ದ ವಾಷ್ ಬೇಸಿನ್ನಿನಲ್ಲಿ ಕೈತೊಳೆದು ಮತ್ತೇನು ತರಲಿ? ಎನ್ನುವ ಸರ್ವರ್ ನ ಪ್ರಶ್ನೆಗೂ ಉತ್ತರಿಸದೆ ಇಪ್ಪತ್ತರ ನೋಟೊಂದನ್ನು ಅವನ ಕೈಗೆ ತುರುಕಿ ಆತುರಾತುರವಾಗಿ ಹೋಟೆಲ್ ನಿಂದ ಹೊರಬಿದ್ದವನು ದೀರ್ಘ ಉಸಿರನ್ನು ಎಳೆದುಕೊಂಡೆ.

ಈಗಾಗಲೇ ITBPಯನ್ನ ತಲುಪಲು ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯವಾಗಿದ್ದರಿಂದ ಸಾಧ್ಯವಾದಷ್ಟು ವೇಗವಾಗಿ ರಸ್ತೆಯಲ್ಲಿ ನಡೆಯತೊಡಗಿದೆ. ರಸ್ತೆಯಲ್ಲಿ ಬರುತ್ತಿದ್ದ ಹೋಗುತ್ತಿದ್ದ ಎಲ್ಲಾ ಸಣ್ಣಪುಟ್ಟ ವಾಹನಗಳಿಗೆ ಕೈ ತೋರಿಸುತ್ತಾ ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಸುಮಾರು ಹದಿನೈದು ನಿಮಿಷಗಳಷ್ಟು ಸಮಯ ಈಗಾಗಲೇ ವ್ಯಯವಾದ ಕಾರಣದಿಂದಾಗಿ ITBPಯವರೆಗೂ ನಡೆದೇ ಹೋಗಬೇಕೇನೋ ಎನ್ನುವ ಆತಂಕದಲ್ಲಿ ಇದ್ದವನು ತಿರುಗಿ ನೋಡಿದರೆ ನನ್ನ ಟೇಬಲ್ ಹಂಚಿಕೊಂಡಿದ್ದ ಡಕಾಯಿತ ನನ್ನ ಹಿಂದೆ ಬಿರಬಿರನೆ ಹೆಜ್ಜೆ ಹಾಕಿ ಬರುತ್ತಿರುವುದು ಕಾಣಿಸಿತು. ಡಕಾಯಿತ ಕೈಯಲ್ಲಿ ಏನನ್ನೋ ಹಿಡಿದಂತೆ ಕಂಡು ಬಂದ ಮತ್ತು ನಾನು ತಿರುಗಿ ನೋಡಿದ್ದು ಕಂಡು ನಿಲ್ಲು ಎನ್ನುವಂತೆ ಕೈಯನ್ನು ಎತ್ತಿ ಸಂಕೇತಿಸಿದ. ನನ್ನಿಂದ ಸುಮಾರು ನೂರು ಮೀಟರ್ ಗಳ ಫಾಸಲೆಯಲ್ಲಿ ಇದ್ದ ಡಕಾಯಿತನ ಈ ನಡೆ ನನ್ನ ಪ್ಯಾಂಟನ್ನು ಒದ್ದೆ ಮಾಡಿತು. ಇವತ್ತು ನನ್ನ ಗ್ರಹಚಾರ ಸರಿಯಿಲ್ಲ, ನನ್ನ ಕಥೆ ಮುಗಿಯಿತು ಎಂದುಕೊಂಡವನು ಇದ್ದ ಬದ್ದ ಶಕ್ತಿಯನ್ನು ಒಗ್ಗೂಡಿಸಿ ಓಡುವುದಕ್ಕೆ ಶುರುವಿಟ್ಟೆ.

ಸ್ವಲ್ಪ ದೂರ ಓಡಿದವನು ಒಮ್ಮೆ ಹಿಂತಿರುಗಿ ನೋಡುತ್ತೇನೆ, ಡಕಾಯಿತ ವ್ಯಕ್ತಿಯೂ ಏನನ್ನೋ ಕೂಗುತ್ತಾ ನನ್ನ ಹಿಂದೆ ಓಡಿ ಬರುತ್ತಿರುವುದು ಗೋಚರಿಸಿತು. ನನ್ನ ಬಳಿ ವಾಚು, ಉಂಗುರ, ಕೊರಳಲ್ಲಿದ್ದ ಒಂದೆಳೆ ಚೈನು ಬಿಟ್ಟರೆ ಬೇಜಿನಲ್ಲಿ ಪ್ರವಾಸದ ಮುಂಗಡವಾಗಿ ಪಡೆದ ಸಾವಿರದ ಐನೂರು ರೂಪಾಯಿಗಳಿದ್ದವು. ಮೊಣಕಾಲು ನೋವಿನಿಂದಾಗಿ ಹೆಚ್ಚು ವೇಗವಾಗಿ ಓಡಲಾಗುತ್ತಿರಲಿಲ್ಲ. ನಾನು ಕಷ್ಟಸಾಧ್ಯವೆಂದು ತೋರುತ್ತಿದ್ದ ಓಟವನ್ನ ಬಿಟ್ಟು ನನ್ನ ಬಳಿ ಬರುವ ಡಕಾಯಿತನಿಗೆ ನನ್ನ ಎಲ್ಲಾ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಡಲೇ ಎಂದು ಯೋಚಿಸತೊಡಗಿದೆ. ಆದರೆ ಮರುಕ್ಷಣವೇ ಇದು ಅಂತಹ ಒಳ್ಳೆಯ ಉಪಾಯವಲ್ಲ, ನನ್ನಲ್ಲಿರುವ ಎಲ್ಲಾ ವಸ್ತುಗಳನ್ನೂ, ಹಣವನ್ನೂ ಪಡೆದ ನಂತರವೂ ಡಕಾಯಿತ ನನಗೆ ತೊಂದರೆ ಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಸಾಧ್ಯವಾದಷ್ಟು ಓಟದ ಗತಿಯನ್ನು ಕುಂಟು ಕಾಲಿನಲ್ಲಿಯೇ ಮುಂದುವರೆದಿದೆ.

ಓಡುವಾಗ ಪ್ರತೀ ಹತ್ತು ಸೆಕೆಂಡ್ ಗೆ ಒಮ್ಮೆಯಂತೆ ಹಿಂದೆ ತಿರುಗಿ ನೋಡುತ್ತಲೇ ಓಡುತ್ತಿದ್ದೆ. ಡಕಾಯಿತ ವ್ಯಕ್ತಿ ನನಗೆ ಹೆಚ್ಚು ಹೆಚ್ಚು ಹತ್ತಿರವಾಗುವುದನ್ನು ಗಮನಿಸತೊಡಗಿದೆ. ನಮ್ಮಿಬ್ಬರ ಮಧ್ಯದ ಅಂತರ ಪ್ರತೀ ಕ್ಷಣ ಕಡಿಮೆಯಾದಂತೆ ತೋರುತ್ತಿತ್ತು. ನನಗೆ ಈಗ ಡಕಾಯಿತನ ಧ್ವನಿಯೂ ಸಹಾ ಅಸ್ಪಷ್ಟವಾಗಿ ಕೇಳಿಸಹತ್ತಿತು. ನನ್ನನ್ನು ನಿಲ್ಲಲಿಕ್ಕೆ ಡಕಾಯಿತ ಕೂಗಿ ಹೇಳುತ್ತಿದ್ದ ಎಂದು ನನಗೆ ಅನ್ನಿಸಿತು. ಓಟದಲ್ಲಿ ಚಂಬಲ್ ಡಕಾಯಿತನಿಗೆ ನಾನು ಯಾವ ರೀತಿಯಲ್ಲೂ ಸಾಟಿಯಾಗದ ಕಾರಣದಿಂದಾಗಿ ಮುಂದಿನ ಕೆಲವೇ ನಿಮಿಷಗಳಲ್ಲಿ ಡಕಾಯಿತನ ಭಾರೀ ಹಸ್ತ ನನ್ನ ಕೊರಳ ಪಟ್ಟಿಯನ್ನು ಹಿಡಿದು ಜಗ್ಗಿತ್ತು. ಆಯತಪ್ಪಿ ಬೀಳುತ್ತಿದ್ದ ನನ್ನನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಡಕಾಯಿತ ಕರ್ಕರ ಸ್ವರದಲ್ಲಿ ನನ್ನನ್ನು ಹೀಗೆ ಯಾಕೆ ಓಡುತ್ತಿರುವೆ ಎಂದು ಗದರಿಸಿದ. ನನಗೆ ಬರುತ್ತಿದ್ದ ಹರಕುಮುರುಕು ಹಿಂದಿಯೂ ಮರೆತಂತಾಗಿ ಗಂಟಲು ಒಣಗಿ ಬಂದಿತ್ತು. ನನ್ನನ್ನು ನೇರವಾಗಿ ನಿಲ್ಲಿಸಿದ ಡಕಾಯಿತ ನಿನ್ನ ಸೂಟ್ ಕೇಸ್ ಎಲ್ಲಿ ಎಂದು ಗದರಿಸಿ ಕೇಳಿದ. ಆಗಲೇ ನನಗೆ ನನ್ನ ಸೂಟ್ ಕೇಸ್ ಬಗ್ಗೆ ಗಮನಹರಿಸಿದ್ದು. ಗಡಬಡಿಸಿ ಹೋಟೆಲ್ ನಿಂದ ಬರುವ ಹೊತ್ತು ಸೂಟ್ ಕೇಸ್ ಅಲ್ಲಿಯೇ ಮರೆತುಬಂದಿದ್ದೆ. ಸೂಟ್ ಕೇಸ್ ನಲ್ಲಿ ದುರಸ್ತಿಗೆ ಬೇಕಾದ ತಾಂತ್ರಿಕ ಸಲಕರಣೆಗಳು, ಬಿಡಿಭಾಗಗಳು ಮತ್ತು ತಾಂತ್ರಿಕ ವಿವರಗಳು ಇದ್ದವು. ಏನನ್ನೋ ತೊದಲಲು ಹೊರಟ ನನಗೆ ತನ್ನ ಕೈಲಿದ್ದ ಸೂಟ್ ಕೇಸ್ ಕೊಟ್ಟ ಡಕಾಯಿತ ಬೆವರು ಸುರಿಯುತ್ತಿದ್ದ ನನ್ನ ಮುಖವನ್ನು ಒರೆಸಿಕೊಳ್ಳಲು ತನ್ನ ಹೆಗಲ ಮೇಲಿನ, ಬಂದೂಕು ಭುಜಕ್ಕೆ ಒತ್ತಬಾರದು ಎನ್ನುವ ಕಾರಣಕ್ಕೆ ಇಟ್ಟುಕೊಂಡ ವಸ್ತ್ರವನ್ನು ಕೊಟ್ಟ. ಹೆದರಿಕೊಂಡೆ ವಸ್ತ್ರದಲ್ಲಿ ಮುಖವನ್ನು ಒರಸಿಕೊಂಡವನನ್ನು ನೀನು ಎಲ್ಲಿಯವನು, ಎಲ್ಲಿಗೆ ಹೋಗಬೇಕು ಎನ್ನುವ ನನ್ನ ಪೂರ್ವಾಪರಗಳನ್ನೆಲ್ಲಾ ವಿಚಾರಿಸತೊಡಗಿದ. ಅಳುಕಿನಿಂದಲೆ ಉತ್ತರಿಸಿದ ನನ್ನನ್ನು ಕಂಡು ಡಕಾಯಿತನಿಗೆ ಏನನಿಸಿತೋ ಏನೋ. ಯಾಕೆ ITBP ಗೆ ನಡೆದು ಹೋಗುತ್ತಿದ್ದೀಯ ಎಂದು ಪ್ರಶ್ನಿಸಿದ. ಯಾವ ವಾಹನವೂ ಸಿಗದ ಕಾರಣ ನಡೆದುಕೊಂಡೆ ಹೋಗುತ್ತಿರುವುದಾಗಿ ಹೇಳಿದೆ. ರಸ್ತೆಯ ಎರಡೂ ಬದಿಗೆ ಕಣ್ಣು ಹಾಯಿಸಿದ ಆ ವ್ಯಕ್ತಿ ITBP ಕಡೆಯಿಂದ ಬರುತ್ತಿದ್ದ ಒಂದು ಸೈಕಲ್ ವಾಲನನ್ನು ನಿಲ್ಲಿಸಲು ಹೇಳಿದ.

ನಾನು ಹತ್ತಾರು ಸೈಕಲ್ ವಾಲಾಗಳಿಗೆ ಕೈ ಬೀಸಿ ಬೀಸಿ ಸುಸ್ತಾಗಿದ್ದೆ. ನನ್ನ ಕೈಸನ್ನೆಗಳಿಗೆ ಯಾವ ಸೈಕಲ್ ವಾಲನೂ ನಿಂತಿರಲಿಲ್ಲ. ಆದರೆ ಮೊದಲ ಕರೆಯಲ್ಲಿಯೆ ಸೈಕಲ್ ವಾಲಾ ಡಕಾಯಿತನ ಮಾತಿಗೆ ಗೌರವ ಕೊಟ್ಟಿದ್ದು ನನ್ನ ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಯಿತು. ಇವರನ್ನು ITBP ಮುಖ್ಯ ಗೇಟಿಗೆ ಕರೆದುಕೊಂಡು ಹೋಗಿಬಿಡು ಎಂದು ಹೇಳಿ ಸೈಕಲ್ ರಿಕ್ಷಾವಾಲನ ಜೇಬಿಗೆ ಹತ್ತರ ನೋಟನ್ನು ತುರುಕಲು ಹೋದ. ಗಾಬರಿಗೊಂಡಂತಹ ಸೈಕಲ್ ನವನು ಎಷ್ಟೇ ಬೇಡ ಬೇಡ ಎಂದರೂ ಬಿಡದೆ ಹಣವನ್ನು ಕೊಟ್ಟು ನನ್ನಿಂದ ಯಾವ ಬಾಡಿಗೆಯನ್ನೂ ತೆಗೆದುಕೊಳ್ಳದಿರುವಂತೆ ತಾಕೀತು ಮಾಡಿದ.

ಹೋದ ಜೀವ ಮರಳಿ ಬಂದಂತಾಗಿದ್ದ ನಾನು ಬದುಕಿದೆಯಾ ಬಡಜೀವವೇ ಎಂದು ಆತುರದಲ್ಲಿ ಸೈಕಲ್ ಏರಿದೆ. ಆದರೆ ಉಪಕಾರ ಮಾಡಿದ ಡಕಾಯಿತನಿಗೆ ಧನ್ಯವಾದ ಅರ್ಪಿಸದೆ ಹೋಗಲು ಮನಸ್ಸಾಗಲಿಲ್ಲ. ಸೈಕಲ್ ಇಂದ ಇಳಿದು ಡಕಾಯಿತನ ಬಳಿ ಸಾರಿ ಅವನ ಎರಡೂ ಕೈಗಳನ್ನೂ ಎತ್ತಿ ಕಣ್ಣಿಗೆ ಒತ್ತಿಕೊಂಡೆ. ಇಂತಹ ದೈರ್ಯ ಹೇಗೆ ಬಂತು ಎಂದು ಈಗಲೂ ಯೋಚಿಸುವುದಿದೆ. ನನ್ನ ಬಳಿ ಇರುವ ಯಾವುದಾದರೂ ಒಂದು ಅಮೂಲ್ಯವಾದ ವಸ್ತುವೊಂದನ್ನು ಡಕಾಯಿತ ವ್ಯಕ್ತಿಗೆ ನೆನಪಿನ ಕಾಣಿಕೆಯಾಗಿ ಕೊಡಬೇಕೆಂದು ನಿರ್ಧರಿಸಿ ನನ್ನ ಸೂಟ್ ಕೇಸ್ ತೆಗೆದು ನನ್ನ ಬಳಿ ಇದ್ದ ಅಣ್ಣನವರ ಕಳಬೇಡ, ಕೊಲಬೇಡ ವಚನದ ಇಂಗ್ಲೀಷ್ ಭಾಷಾಂತರದ ಮುದ್ರಿತ ಪ್ರತಿಯೊಂದನ್ನು ಡಕಾಯಿತನ ಕೈಗಿಟ್ಟೆ. ಈಗ ಬೆರಗುಗೊಳ್ಳುವ ಸರದಿ ಡಕಾಯಿತನದು. ಇದೇನಿದು ಎಂದು ಹುಬ್ಬು ಏರಿಸಿದವನಿಗೆ ಇಂಗ್ಲೀಷ್ ಬಲ್ಲ ಯಾರಿಂದಲಾದರೂ ಇದರ ಅರ್ಥವನ್ನು ಓದಿಸಿ ಅರ್ಥವನ್ನು ಕೇಳಿ ಎಂದು ಹೇಳಿ ಸೈಕಲ್ ಏರಹೊರಟ ನನ್ನ ಕೈಯನ್ನು ಡಕಾಯಿತ ವ್ಯಕ್ತಿ ಹಿಡಿದು ಎಳೆದ. ಏಕೆಂದು ಹಿಂದಿರುಗಿ ನೋಡಿದವನಿಗೆ ನಿನಗೆ ಇಂಗ್ಲೀಷ್ ಬರುತ್ತದಲ್ಲವೆ, ನೀನೇ ಓದಿ ಹೇಳಬಾರದೇಕೆ? ಎಂದು ಆದೇಶವೇ ಎನ್ನಬಹುದಾದ ಧ್ವನಿಯಲ್ಲಿ ಕೇಳಿದ. ನನ್ನ ಹಿಂದಿ ಈ ವಚನವನ್ನು ಭಾಷಾಂತರಿಸಿ ಹೇಳುವಷ್ಟು ಚೆನ್ನಾಗಿಲ್ಲ ಎಂದು ಹೇಳಬೇಕೆಂದವನು ಡಕಾಯಿತ ಏನೆಂದುಕೊಳ್ಳುತ್ತಾನೆಯೋ ಎನ್ನುವ ಹೆದರಿಕೆಯಿಂದ ನನಗೆ ತಿಳಿದಷ್ಟು ಹಿಂದಿಯಲ್ಲಿ ಅವನಿಗೆ ವಚನದ ಭಾಷಾಂತರ ಮಾಡಿದೆ.

ಇದು ಅವನಿಗೆ ಎಷ್ಟು ಅರ್ಥವಾಯಿತೋ ಇಲ್ಲವೋ ತಿಳಿಯಲಿಲ್ಲ. ಅವನ ಕಣ್ಣುಗಳು ಸ್ವಲ್ಪ ತೇವಗೊಂಡ೦ತೆ ಕಂಡು ಬಂದದ್ದಂತೂ ನಿಜ. ನನ್ನ ಬಳಿ ಈ ವಚನದ ಇನ್ನೂ ಕೆಲವು ಪ್ರತಿಗಳು ದೊರೆಯಬಹುದೇ ಎನ್ನುವ ಡಕಾಯಿತನ ಪ್ರಶ್ನೆ ನನಗೆ ಆನಂದವನ್ನು ಉಂಟು ಮಾಡಿತು. ನನ್ನ ಬಳಿ ಇದ್ದ ಎಲ್ಲಾ ಪ್ರತಿಗಳನ್ನೂ ತೆಗೆದು ಡಕಾಯಿತನಿಗೆ ಕೊಡಲು ಹೊರಟೆ. ಅಲ್ಲಿಯವರೆಗೂ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸೈಕಲ್ ವಾಲಾ ಸೈಕಲ್ ನಿಂದ ಇಳಿದು ನನ್ನ ಬಳಿ ಬಂದವನು ತನಗೂ ಒಂದು ಪ್ರತಿ ನೀಡಿ ಎಂದು ಕೇಳಿದ. ನಾನು ಅವನ ಮಾತಿಗೆ ಪ್ರತಿಕ್ರಿಯಿಸುವ ಮೊದಲೇ ತನ್ನ ಕೈಯಲ್ಲಿದ್ದ ಪ್ರತಿಯನ್ನು ಸೈಕಲ್ ವಾಲಾನಿಗೆ ಕೊಟ್ಟ ಡಕಾಯಿತ ಉಳಿದ ಎಲ್ಲಾ ಪ್ರತಿಗಳನ್ನೂ ನನ್ನಿಂದ ಪಡೆದು ಕೈಬೀಸಿ ನನಗೆ ಅಭಿಮುಖವಾಗಿ ಸರಸರನೆ ಹೊರಟೇ ಬಿಟ್ಟ.

 

Girl in a jacket
error: Content is protected !!