ಬೃಹತ್ ಶಿಲಾಯುಗದ ಪ್ರಸಿದ್ಧ ತಾಣ ಹಿರೇಬೆನಕಲ್ಲು
ಹಿರೇಬೆನಕಲ್ಲು ಪ್ರಾಗಿತಿಹಾಸ ಕಾಲದ ಅದರಲ್ಲೂ ಬೃಹತ್ ಶಿಲಾಯುಗದ ಪ್ರಸಿದ್ಧ ನೆಲೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆನಕಲ್ಲು ಗ್ರಾಮದ ದಕ್ಷಿಣಕ್ಕೆ ನಾಲ್ಕು ಕಿ.ಮೀ ದೂರದ ಬೆಟ್ಟಗಳ ಸಾಲಿನಲ್ಲಿದೆ. ಕರ್ನಾಟಕದ ಮಟ್ಟಿಗೆ ಇದು ಪ್ರಾಚೀನ ಮಾನವನ ಅತ್ಯಂತ ಅಪರೂಪದ ವಸತಿಯ ತಾಣ. ತುಂಗಭದ್ರಾ ನದಿಯ ಎಡದಂಡೆಯಲ್ಲಿ ಕಣಶಿಲೆಯ ಬೃಹತ್ ಬಂಡೆಗಲ್ಲುಗಳ ಬೆಟ್ಟಶ್ರೇಣಿಗಳಿದ್ದು, ಈ ಬೆಟ್ಟಸಾಲುಗಳಲ್ಲಿರುವ ಅನೇಕ ಗುಡ್ಡಗಳು ಪ್ರಾಗಿತಿಹಾಸ ಕಾಲದ ಮಾನವ ವಾಸದ ನೆಲೆಗಳಾಗಿವೆ. ಅವುಗಳಲ್ಲಿ ಹಿರೇಬೆನಕಲ್ಲು ಬಳಿಯಿರುವ, ಸ್ಥಳೀಯವಾಗಿ ದುರ್ಗದ ದಡಿ ಎಂದೇ ಹೆಸರಾಗಿರುವ ಗುಡ್ಡವು ಪ್ರಾಚೀನ ಮಾನವನ ಪ್ರಸಿದ್ಧ ತಾಣವಾಗಿದೆ. ಇದು ನವಶಿಲಾಯುಗ, ಶಿಲಾತಾಮ್ರಯುಗ, ಅದರಲ್ಲೂ ಬೃಹತ್ ಶಿಲಾಯುಗ ಮಾನವನ ಚಟುವಟಿಕೆಗಳ ಪ್ರಮುಖ ಕಾರ್ಯಾಗಾರವೇ ಆಗಿದೆ.
ಇದು ಪುರಾತತ್ವಜ್ಞರು ಮತ್ತು ಅಧ್ಯಯನಕಾರರ ಮಟ್ಟಿಗೆ ಹೇಳುವುದಾದರೆ ಪ್ರಾಚ್ಯಶಾಸ್ತ್ರದ ಸ್ವರ್ಗವೂ, ಪ್ರಾಯೋಗಿಕ ಪಾಠಶಾಲೆಯೂ ಹೌದು. ಇದಕ್ಕೆ ಅಲ್ಲಿ ಕಂಡುಬರುವ ಬೂದಿದಿಬ್ಬ, ಕೊಡಲಿ, ಮಡಕೆ ಕುಡಿಕೆ, ಗೀರುಚಿತ್ರ, ರೇಖಾಚಿತ್ರ, ವೈವಿಧ್ಯಮಯ ವರ್ಣಚಿತ್ರಗಳು ಪ್ರಮುಖವಾಗಿವೆ. ಇವುಗಳ ಜೊತೆಗೆ ಬೃಹತ್ ಶಿಲಾಯುಗದ ಪ್ರಮುಖ ಕುರುಹುಗಳಾದ ಬೃಹತ್‌ಶಿಲಾ ನಿರ್ಮಿತಿಗಳು ಕರ್ನಾಟಕದ ಮಟ್ಟಿಗೆ ಬಹಳ ಅಪರೂಪ ಹಾಗೂ ವಿಶಿಷ್ಟವೆಂದೇ ಹೇಳಬಹುದು. ಈ ನೆಲೆಯು ಎಷ್ಟರಮಟ್ಟಿಗೆ ಆಕರ್ಷಿಸುತ್ತದೆಂದರೆ ಒಮ್ಮೆ ಭೇಟಿಕೊಟ್ಟರೆ ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆಂಬ ಕುತೂಹಲ ಹುಟ್ಟಿಸುವ ಅತ್ಯಂತ ಪ್ರಶಸ್ತ ಪ್ರಾಚೀನ ನೆಚ್ಚಿನ ತಾಣ. ಈ ನೆಲೆಯನ್ನು ಮೊದಲು ಪರಿಚಯಿಸಿದವರು ಕೀಸ್, ಅದೂ ೧೮೩೫ರಲ್ಲಿ, ನಂತರ ಲಿಯೋನಾರ್ಡ್ ಮನ್, ಮೆಡೋಸ್ ಟೇಲರ್, ಅ. ಸುಂದರ ಮೊದಲಾದ ಅನೇಕ ವಿದ್ವಾಂಸರು ತಮ್ಮ ಅಧ್ಯಯನದ ಮೂಲಕ ಹಿರೇಬೆನಕಲ್ಲಿನ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.
ಇಂತಹ ಸುಪ್ರಸಿದ್ಧ ಪುರಾತತ್ವ ನೆಲೆಗೆ ಭೇಟಿ ನೀಡಲು ನನಗೆ ಅವಕಾಶ ದೊರೆತದ್ದು ೨೦೦೦ನೇ ಇಸವಿಯಲ್ಲಿ. ಅದೂ ಡಾ.ಕೆ.ಎಂ. ಸುರೇಶ್ ಅವರ ನೇತೃತ್ವದಲ್ಲಿ. ಅವರೊಂದಿಗೆ ಜೊತೆಗಿದ್ದವರು ವಾಸುದೇವ ಬಡಿಗೇರ್ ಮತ್ತು ಎಂ. ಕೊಟ್ರೇಶ್. ಆಗತಾನೆ ಸಂಶೋಧನೆಯಲ್ಲಿ ತೊಡಗಿದ್ದ ನಮಗೆ ಪುರಾತತ್ವದಲ್ಲಿ ಓದಿ, ಕೇಳಿ, ತಿಳಿದ ಸಂಗತಿಗಳನ್ನು ಪ್ರಾಯೋಗಿಕವಾಗಿ ನೋಡುವ ಸೌಭಾಗ್ಯವನ್ನು ಹಿರೇಬೆನಕಲ್ಲು ನೆಲೆಯು ಕಲ್ಪಿಸಿತೆಂದೇ ಹೇಳಬೇಕು. ಅಂದಿನವರೆಗೆ ಬೃಹತ್ ಶಿಲಾಯುಗವೆಂದರೆ ಸಮಾಧಿಗಳ ಯುಗ; ಅಲ್ಲದೆ ಮಾನವ ಮೊಟ್ಟಮೊದಲು ಕಬ್ಬಿಣದ ಬಳಕೆಯನ್ನು ಕಂಡುಕೊಂಡ ಕಾಲ; ಈ ಹಿನ್ನೆಲೆಯಲ್ಲಿ ಈ ಅವಧಿಯನ್ನು ಕಬ್ಬಿಣ ಯುಗವೆಂದೇ ಕರೆಯಲಾಗಿದೆ ಎಂಬೆಲ್ಲಾ ಸಂಗತಿಗಳನ್ನು ತಿಳಿದಿದ್ದೆವು. ಅಲ್ಲದೆ ಈ ಸಮಾಧಿ ಯುಗದಲ್ಲಿ ಸುಮಾರು ೧೪ಕ್ಕೂ ಹೆಚ್ಚು ವಿವಿಧ ಮಾದರಿಯ ಸಮಾಧಿಗಳನ್ನು ಈ ಕಾಲದ ಜನರು ನಿರ್ಮಿಸಿದ್ದರು. ಅವುಗಳಲ್ಲಿ ಡೊಲ್ಮನಾಯ್ಡ್, ಸಿಸ್ಟ್, ಕೇರ‍್ನ್, ಟ್ವಿನ್ ಬರಿಯಲ್, ಟೋಪಿಕಲ್, ಕೊಡೈಕಲ್, ಸಾರ್ಕೋಪಾಗಸ್, ಪಿಟ್ ಬರಿಯಲ್, ಮೆನ್ಹಿರ್, ಆಂಥ್ರೋಪೊಮಾರ್ಪಿಕ್-ಹೀಗೆ ಅನೇಕ ಬಗೆಯ ಸಮಾಧಿಗಳನ್ನು ಕುರಿತು ಓದಿದ್ದೆವು. ಆದರೆ ಅವುಗಳನ್ನು ಕಣ್ಣಾರೆ ನೋಡುವ ಭಾಗ್ಯ ಮೊದಲಿಗೆ ನನಗೆ ದೊರೆತದ್ದು ಹಿರೇಬೆನಕಲ್ಲು ನೆಲೆಯಲ್ಲಿ. ಹಾಗೆಯೇ ನಂತರ ವಿದ್ಯಾರ್ಥಿಗಳೊಂದಿಗೆ ಅನೇಕ ಬಾರಿ ಭೇಟಿ ನೀಡಿದ್ದಿದೆ. ವಿದ್ಯಾರ್ಥಿಗಳು ಅದರಲ್ಲೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ನೀಡಿದ ಭೇಟಿ ಅತ್ಯಂತ ವಿಶಿಷ್ಟವಾಗಿತ್ತು. ಕಾರಣವೆಂದರೆ ಅವರು ಕುತೂಹಲದಿಂದ ಕೇಳುವ ಮಾರ್ಮಿಕ ಮತ್ತು ಅದುವರೆಗೆ ಯೋಚಿಸಿರದ ಪ್ರಶ್ನೆಗಳು, ಗುಹೆ-ಗಹ್ವರಗಳಲ್ಲಿ ತಡಕಾಡಿ ಹೊಸತನ್ನು ಶೋಧಿಸಿ ಗಮನಸೆಳೆಯುವ ಪರಿ ಗಮನಾರ್ಹ.
ಹಿರೇಬೆನಕಲ್ಲಿನಿಂದ ಬೆಟ್ಟವೇರಲು ಕಾಲ್ನಡಿಗೆಗೆ ಇದ್ದ ಕಾಲುದಾರಿ, ಅದರಲ್ಲೂ ಕಳ್ಳಿಮರದ ಸಾಲನ್ನು ಅನುಸರಿಸಿದೆವು. ಹೀಗೆ ದಾರಿ ಸವೆಸುತ್ತಿರುವಾಗ ಕಳ್ಳಿಯ ಮರದಲ್ಲಿ ಮಾರುದ್ದದ ನಾಗರಹಾವು ನಮ್ಮ ತಲೆಯ ಮೇಲೆಯೇ ಕಳ್ಳಿಮರದಲ್ಲಿ ಸರಕ್ಕೆಂದು ಸರಿಯಿತು. ಹಾವು ತನ್ನ ಜೀವವನ್ನು ಉಳಿಸಿಕೊಳ್ಳುವ ಬರದಲ್ಲಿ ಹಿಂದೆ ಸರಿದಿದ್ದರೆ, ನಾವೋ ಬೆದರಿ, ಭಯದ ಕಾರ್ಮೋಡವೇ ಕಣ್ಮುಂದೆ ಬಂದು ಜೀವ ಬಾಯಿಗೆ ಬಂದಂತಿತ್ತು. ಹಾಗೆಯೇ ಮುಂದುವರಿದು ಬೆಟ್ಟವೇರುತ್ತಾ ಅಲ್ಲಿ ಕಂಡುಬಂದ ಪ್ರಾಚೀನ ಅವಶೇಷಗಳನ್ನು ಕಲೆಹಾಕುತ್ತಾ, ಗೀರುಚಿತ್ರ, ವರ್ಣಚಿತ್ರಗಳನ್ನು ನೋಡುತ್ತಾ ಮೇಲೇರಿದೆವು. ಬೆಟ್ಟವನ್ನೇರಿ ನೋಡಿದರೆ ನಮಗೆ ಕಂಡದ್ದು ಕತ್ತರಿಸಿ, ತುಂಡರಿಸಿದ ಕಲ್ಲು ಬಂಡೆಗಳ ರಾಶಿಯೋ ರಾಶಿ. ಎಲ್ಲಿ ನೋಡಿದಡಲ್ಲಿ ಒಡೆದು ಹಾಕಿದ ಬಂಡೆಗಳ ತುಂಡುಗಳೇ. ಕಲ್ಲುಗಳ ರಾಶಿಯನ್ನು ನೋಡಿದರೆ ಈ ಜನರು ಬಂಡೆಗಳನ್ನು ತುಂಡರಿಸುವ ಸಲುವಾಗಿ ಹುಟ್ಟಿದ್ದರೇ ತಮ್ಮ ಇಡೀ ಬದುಕನ್ನು ಇದಕ್ಕಾಗಿ ಮೀಸಲಿಟ್ಟಿದ್ದರೇ ಎಂದೆನಿಸುತ್ತದೆ. ಅದು ಕಲ್ಮನೆಗಳಾಗಿ, ಶವಕುಣಿಗಳಾಗಿ, ಪೇರಿಸಿಟ್ಟ ಮನೆಗಳಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ನಿರ್ಮಿತಿಗಳು. ಸ್ವಸ್ತಿಕಾಕಾರದಲ್ಲಿ ಒಪ್ಪವಾಗಿಸಿಟ್ಟ, ಯಾವುದೇ ಕಾರಣಕ್ಕೂ ಬೃಹತ್ತಾದ, ಅತ್ಯಂತ ಅಗಲವಾದ ಚಪ್ಪಡಿ ಬಂಡೆಗಲ್ಲುಗಳು ಒಳಭಾಗಕ್ಕೆ ಬೀಳದಂತೆ ೨೫೦೦ ವರ್ಷಗಳಷ್ಟು ಹಿಂದೆ ಜೋಡಿಸಿಟ್ಟ ಅವರ ವೈಜ್ಞಾನಿಕ ತಂತ್ರಜ್ಞಾನವನ್ನು ಹೇಗೆ ಬಣ್ಣಿಸುವುದು ? ಇವು ಸಮಾಧಿಗಳೇ, ಮನೆಗಳೇ ಎಂಬ ಜಿಜ್ಞಾಸೆಗೆ ಒಳಗಾದದ್ದೂ ಇದೆ.
ಇವುಗಳನ್ನು ಸ್ಥಳೀಯರು ಇಂದು ಮೋರೇರ ಮನೆಗಳೆಂದೇ ಕರೆಯುವುದು ರೂಢಿ. ಮೋರೇರ ಎಂಬ ಪದದ ಹಿನ್ನೆಲೆಯಲ್ಲಿ ಇವು ಮೌರ್ಯರ ಸಮಕಾಲೀನ ನಿರ್ಮಿತಿಗಳೆಂದೂ ವಿದ್ವಾಂಸರು ತರ್ಕಿಸಿದ್ದಿದೆ. ಅಲ್ಲದೆ ಈ ನಿರ್ಮಿತಿಗಳನ್ನು ನೋಡಿದರೆ ಈ ಕಲ್ಮನೆಗಳು ಎಷ್ಟು ವಿಶಾಲವಾಗಿವೆಯೆಂದರೆ ಒಂದು ಕುಟುಂಬ ವಾಸಿಸಲು ಅನುವಾಗುವಷ್ಟು ವಿಸ್ತಾರವಾಗಿವೆ. ಅಂದರೆ ಆರೇಳು ಅಡಿ ಎತ್ತರದ ನಾಲ್ಕು ಬಂಡೆಗಳನ್ನು ಆಯತ ಮತ್ತು ಚಚ್ಚೌಕವಾಗಿಟ್ಟು ಅವುಗಳ ಮೇಲೆ ೧೦-೧೫ ಮೀಟರ್ ವ್ಯಾಸದ ವೃತ್ತಾಕಾರದ ಚಪ್ಪಡಿಯನ್ನು ಮೇಲೆ ಮುಚ್ಚಿದ್ದಾರೆ. ಇವು ಒಂದು ದೊಡ್ಡ ಕೋಣೆಯಂತಿರುವ ಕಲ್ಮನೆಗಳೇ ಆಗಿವೆ. ಅವುಗಳಲ್ಲಿ ಒಂದು ಮಾನವಾಕೃತಿಯ ಶಿಲ್ಪವೂ ಇರುವುದು ಗಮನಾರ್ಹ. ಇವುಗಳಲ್ಲಿ ಕೆಲವು ನೆಲಮಟ್ಟದಲ್ಲಿದ್ದರೆ ಮತ್ತೆ ಕೆಲವು ಸೀಳಿದ ಬಂಡೆಗಲ್ಲುಗಳ ಮೇಲೆಯೇ ನಿಂತಿವೆ. ಇದರಿಂದ ನೆಲಮಟ್ಟ ಮತ್ತು ನೆಲಮಟ್ಟದ ಕೆಳಗಿರುವ ನಿರ್ಮಿತಿಗಳನ್ನು ಸಮಾಧಿಗಳೆಂದು ಅಲ್ಲಿದ್ದ ಸತ್ತ ಶವವನ್ನು ಸಂಸ್ಕಾರ ಮಾಡುವಾಗ ಇಟ್ಟ ಮಡಕೆ ಮತ್ತಿತರ ಅವಶೇಷಗಳಿಂದ ತಿಳಿಯಬಹುದು. ಆದರೆ ಬಂಡೆಗಲ್ಲಿನ ಮೇಲೆ ನಿಂತ ಮನೆಯಂತಿರುವ ಹಾಗೂ ಆ ಬಂಡೆಗಲ್ಲಿನಲ್ಲಿ ಒಳಗೆ ಹೋಗಿಬರಲು ಅನುವಾಗುವ ಕಂಡಿ ಮತ್ತು ಹಾದಿಗಳಿವೆ. ಆ ಕಂಡಿಗಳನ್ನು ಮುಚ್ಚಲು ಮುಚ್ಚಿಗೆಗಳೂ ಅಲ್ಲಿಯೇ ಬಿದ್ದಿವೆ. ಇವುಗಳನ್ನು ನೋಡಿದರೆ ಅವು ಸಮಾಧಿಗಳಾಗಿರಲು ಸಾಧ್ಯವೇ, ಇಲ್ಲ ಅವು ಮನೆಗಳೇ ಆಗಿದ್ದವೆಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.
ಈ ಸಂದರ್ಭದಲ್ಲಿ ಬಂಡೆಗಳನ್ನು ಸೀಳಿದ ಪರಿಯನ್ನು ಗಮನಿಸಲೇಬೇಕು. ಇಡೀ ಮಾನವನ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಮಾಧಿ ಮತ್ತಿತರ ಕಾರ್ಯಗಳಿಗೆ ಬಂಡೆಗಳನ್ನು ಬಳಸಿದ ಕಾಲ ಅದು ಬೃಹತ್ ಶಿಲಾಯುವೇ ಎಂಬುದಂತೂ ಸತ್ಯ. ಅದೂ ಸಮಾಧಿ ನಿರ್ಮಾಣಕ್ಕೆ ಹೆಚ್ಚಾಗಿ ಬಳಸಿದ್ದಾರೆ. ಅದೂ ಸ್ಥಳೀಯವಾಗಿ ದೊರೆಯುವ ಕಲ್ಲುಗಳನ್ನೇ ಬಳಸಿ ನಿರ್ಮಿಸಿದ ಸಮಾಧಿಗಳು ಕರ್ನಾಟಕದಾದ್ಯಂತ ಇವೆ. ಈಜಿಫ್ಟಿನ ಪಿರಮಿಡ್ಡುಗಳನ್ನೂ ಕೇಳಿದ್ದೇವೆ. ಅಲ್ಲಿನ ಪಿರಮಿಡ್ಡುಗಳು ಸತ್ತ ಅರಸರ ಸಮಾಧಿಗಳಾಗಿಯೇ ನಿರ್ಮಿಸಿದ್ದುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ನೋಡಿದರೆ, ಈ ಶಿಲಾ ಸಮಾಧಿಗಳು ಭಾರತ ಮತ್ತು ಕರ್ನಾಟಕದ ಪ್ರಾಚೀನ ಪಿರಮಿಡ್ಡುಗಳೆನ್ನಬಹುದು. ಈ ಅವಧಿಯಲ್ಲಿ ಸ್ವಾಭಾವಿಕ ಕಲ್ಲುಗುಂಡುಗಳ ಜೊತೆಗೆ ಬಂಡೆ ಸೀಳುವ ಕಲೆಯನ್ನು ಅಂದಿನ ಜನರು ಕರಗತಮಾಡಿಕೊಂಡಿದ್ದರು. ಇದಕ್ಕೆ ಅವರು ಆಗತಾನೆ ಕಂಡುಕೊಂಡ ಕಬ್ಬಿಣದ ಬಳಕೆಯೂ ಮುಖ್ಯವಾಗಿದೆ.
ಬಂಡೆಗಳನ್ನು ಸೀಳುವಲ್ಲಿ, ಬೃಹತ್ತಾದ ಬಂಡೆಗಳನ್ನು ಸಾಗಿಸುವಲ್ಲಿ, ಮೇಲೆತ್ತುವಲ್ಲಿ ಕಬ್ಬಿಣದ ಉಪಕರಣಗಳು ಮಹತ್ವದ ಪಾತ್ರವನ್ನು ವಹಿಸಿರುವುದರಲ್ಲಿ ಸಂಶಯವಿಲ್ಲ. ಈ ಬಂಡೆಗಳನ್ನು ಕತ್ತರಿಸಿ ಮೇಲೇರಿಸಲು ಅನುಸರಿಸಿದ್ದ ಸನ್ನೆಯ ವಿಧಾನಗಳನ್ನು ಇಂದಿಗೂ ಹಿರೇಬೆನಕಲ್ಲಿನಲ್ಲಿ ಕಾಣಬಹುದು. ಹಾಗೆಯೇ ಅಷ್ಟೊಂದು ಶ್ರಮ, ಸಮಯ, ವ್ಯವದಾನಗಳಿಗೆ ಕಾರಣವೇನು ? ಅಂತಹ ಶ್ರಮಭರಿತ ಜನರಿಗೆ ಬೆಟ್ಟದ ಮೇಲೆ ಆಶ್ರಯ ಪಡೆಯಲು ಇದ್ದ ಅವಕಾಶಗಳೇನು ? ಅವರ ಆಹಾರ, ನೀರು ಹೇಗೆ, ಎಲ್ಲಿ ಎಂಬಂತಹ ಪ್ರಶ್ನೆಗಳು ಸಹಜವಾಗಿಯೇ ಎಲ್ಲರನ್ನೂ ಕಾಡುತ್ತವೆ. ಇದರಲ್ಲಿ ನೀರಿನ ಕಡೆ ಗಮನಹರಿಸಿ ಪರಿಶೀಲಿಸುತ್ತಾ ಹೊರಟಾಗ ಮುಂದೆ ನಮಗೆ ಕಂಡದ್ದು ಶುದ್ಧ ಜೀವಜಲವುಳ್ಳ ಬೃಹತ್ ಸಂಗ್ರಹಾಗಾರವೇ ಅಲ್ಲಿತ್ತು. ಅಷ್ಟೊಂದು ಎತ್ತರದ ಬೆಟ್ಟದ ಮೇಲೆ ವರ್ಷದಲ್ಲಿ ಬಿದ್ದ ಮಳೆಯಿಂದ ಸಂಗ್ರಹವಾಗುತ್ತಿದ್ದ ಸ್ವಾಭಾವಿಕ ಹೊಂಡವದು. ಅದಕ್ಕೆ ಅಲ್ಪಮಟ್ಟಿನ ತಡೆಯನ್ನು ಹಾಕಿ ವರ್ಷದುದ್ದಕ್ಕೂ ಬಳಸುವ ನೀರನ್ನು ಶೇಖರಿಸುವಂತೆ ಮಾಡಿಕೊಂಡಿದ್ದಾರೆ. ಯಾವುದೇ ನಾಗರೀಕತೆಯ ನಿರ್ಮಾಣದ ಹಿಂದೆ ನೀರುಳ್ಳ ನದಿ, ಹಳ್ಳಕೊಳ್ಳಗಳಿವೆ. ಅಂತೆಯೇ ಹಿರೇಬೆನಕಲ್ಲಿನ ನೆಲೆಯ ಇಡೀ ಬೆಳವಣಿಗೆಗೆ ಈ ಹೊಂಡವೇ ಕಾರಣವಾಗಿದೆ. ಒಟ್ಟಿನಲ್ಲಿ ಹಿರೇಬೆನಕಲ್ಲು ಎಂಬ ಪುರಾತತ್ವ ಸ್ವರ್ಗವು ನಮ್ಮೆಲ್ಲರಿಗೆ ನೋಡುವ, ವಿಚಾರ ವಿನಿಮಯ ಮಾಡಿಕೊಳ್ಳುವ, ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಾಯೋಗಿಕ ಪಾಠಶಾಲೆಯಾಯಿತೆಂದರೆ ಅತಿಶಯೋಕ್ತಿಯೇನಲ್ಲ. ಇಂತಹ ಅದ್ಭುತ ಲೋಕವು ವಿಶ್ವಪರಂಪರೆಯ ತಾಣವಾಗಬೇಕು. ಈ ತಾಣಕ್ಕೆ ಎಲ್ಲ ಲಕ್ಷಣಗಳೂ ಇವೆ. ಇದಕ್ಕೆ ಮಧ್ಯಪ್ರದೇಶದ ಪ್ರಾಚೀನ ವರ್ಣಚಿತ್ರಗಳ ಪ್ರಸಿದ್ಧ ನೆಲೆ ಭೀಂಬೆಟ್ಕಾ ಸಾಕ್ಷಿಯಾಗಿದೆ. ಅದರಂತೆಯೇ ಹಿರೇಬೆನಕಲ್ಲು ವರ್ಣಚಿತ್ರ, ಗೀರುಚಿತ್ರಗಳ ಆಗರವೂ ಹೌದು. ಜೊತೆಗೆ ಬೃಹತ್ ಶಿಲಾಯುಗದ ಕಲ್ಮನೆಗಳ ಕರ್ನಾಟಕವಷ್ಟೇ ಏಕೆ ಭಾರತದ ಅತಿದೊಡ್ಡ ಆಗರವೇ ಆಗಿದೆ. ಇಂತಹ ಅಪರೂಪದ ನೆಲೆಯನ್ನು ರಕ್ಷಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಇದನ್ನು ಪೋಷಿಸಿ ದಾಟಿಸುವ ಹೊಣೆ ನಮ್ಮೆಲ್ಲರದ್ದಾಗಿದೆ.