ಬಸ್ ಸ್ಟ್ಯಾಂಡ್ ಎಂಬ ಹಾವು ಏಣಿ ಆಟದ ಸುತ್ತಾ ..
ಬಸ್ ಸ್ಟ್ಯಾಂಡ್ ಎಂಬದು ಮಾಯಾಲೋಕ..
ಅಲ್ಲಿ ಸುಮ್ಮನೆ ಕುಳಿತರೂ ಹತ್ತಾರು ಬಗೆಯ ಕಥೆಗಳು ಕೈ ಬೀಸಿ ಕರೆಯುತ್ತವೆ.
ಇನ್ನೂ ಯಾವ ಜವಾಬ್ದಾರಿಯೂ ಇಲ್ಲದ ಹುಡುಗ ಹುಡುಗಿಯರ ಮೊಬೈಲ್ ತುಂಬಾ ಪ್ರೇಮಲೋಕ…!
ಪಕ್ಕದಲ್ಲೇ ಸಂಜೆಗೆ ಮುಖಮಾಡಿ ಕುಳಿತವರು.
ಬದುಕಿನ ಆಸೆಯನ್ನೇ ಕಳಕೊಂಡು ಆಸ್ಪತ್ರೆಗಳ ರಿಪೋರ್ಟ ಹಿಡಿದು ಶೂನ್ಯ ನೋಡುತ್ತಾ ಮೌನ ಮತ್ತು ನಿರಾಸಕ್ತಿ ಹೊತ್ತವರು.
ಹಕ್ಕಿಗಳ ಹಿಂಡಂತೆ ಸಂಸಾರಗಳನ್ನೇ ಮೂಟೆಗಳಲ್ಲಿ ಕಟ್ಟಿಕೊಂಡು ಮತ್ತೆಲ್ಲಿಗೋ ಪಯಣ ಹೊರಟವರು.
ಬಸ್ ಬಂದು ಜಕ್ ಎಂದು ನಿಂತೊಡನೆ ಸರ ಸರನೇ ಇಳಿದು ವಾಷ್ ರೂಮ್ ಕಡೆಗೆ ಓಡುವವರು.
ಆಚೆ ದೂರದಲ್ಲಿ ಕೂಲಿಂಗ್ ಗ್ಲಾಸ್ ಕಾರ್ ನಿಂದ ಇಳಿದು ಬರುವ ಹೀರೋ ನಡಿಗೆ.ಅಲ್ಲೆಲ್ಲೋ ತೆವಳುತ್ತಾ ಬರುವ ಶತಮಾನದ ಕೊಳೆಹೊತ್ತ ಮುದುಕ.ಅಷ್ಟೇ ದೂರದಲ್ಲಿ ಕಣ್ಣೀರು ಹಾಕುತ್ತಿರುವ ಮಗಳು.! ಅಪ್ಪ ಎದ್ದು ನಿಂತು ” ಏನೂ ಅಗಲ್ಲೇ ತಾಯಿ ಸುಧಾರಿಸಿಗ್ಯಾ.ಅವನಿಗೆ ಎಲ್ಲಾ ಹೇಳೀನಿ.ಇನ್ನೊಂದು ಸಲ ಹಿಂಗಾಗಲ್ಲ ಮಾವೋ ಕಾವಜಿ ಬಿಡು” ಅಂದಾನೆ.ಕೊರಳಾಗಿನ ತಾಳಿ ದೊಡ್ಡದವ್ವಾ ಹರದು ಬಿಡೋದು ದೊಡ್ಡದಲ್ಲ.
ನಾಕು ಜನರ ಬಾಯಿಗೆ ಅಡಿಕಿ ಎಲಿ ಆಗಬ್ಯಾಡವ್ವಾ. ಯೋಚಿಣಿ ಮಾಡು? ನೋಡು ನಾವು ಏಸುದಿನಬೇ… ನಿಮ್ಮವ್ವ ನೆಲ ಹಿಡದು ಮೂಲಿಗೆ ಕುಂತಾಳ.ಇವತ್ತಲ್ಲಾ ನಾಳೆ ನಂದೂ ಹೆಂಗೋ ಏನೋ..ಆಕಿ ಕಣ್ ಮುಚ್ಚಿದರ ನಂದೂ ಬಸ್ ಸ್ಟ್ಯಾಂಡ್ ಬಾಳಾ ತಂಗೀ..ಸಿಟ್ಟಿಲೆ ಮೂಗು ಕೊಯ್ಯಕಾ ಬ್ಯಾಡ.ನಡಿಯವ್ವಾ ದೇವರದನಾ,ಆ ಪರುಮಾತ್ಮಗ ಗೊತ್ತಿಲ್ಲೇನು? ಎಲ್ಲಾ ಆತನ ಮೇಲಾಕು ಹೊಂಡವ್ವ…” ಅಂತ ಮಗಳನ್ನ ಕಳಿಸುತ್ತಿರುವ ತಂದೆ.
***
“ಬಾರೋ ಮಾರಾಯ ಮನಿಗೆ..”
“ಹೆಂಗ ಬರ್ಲೆಲೇ..”
“ಇರ್ಲಿ ಬಾರಲೇಪ್ಪಾ ಜೀವನದಾಗ ಇವೆಲ್ಲಾ ಮಾಮೂಲಿನೇ…”
ಇವತ್ತಲ್ಲಾ ನಾಳೆ ದೊಡ್ಡ ಕೆಲಸ ಸಿಗತೈತೆ ಬಿಡು.
“ಹೆಂಗ ಅಂತಿರಲ್ಲಲೇ!?” ಒಂದು ಅವಕಾಶ ತಪ್ಪಿದ್ರ ಹತ್ತು ವರ್ಷ ಹೋದಂಗಾ ಲೆಕ್ಕ.
ಅವರು ಕೆಲಸ ಕೊಡದಿದ್ರ ಹೋತು.ಸೆಲೆಕ್ಷನ್ ಲೀಸ್ಟನ್ಯಾಗ ಹಾಕಿ ವೆರಿಫಿಕೇಷನ್ ಗೆ ಯಾಕೆ ಕರಿಬೇಕಿತ್ತು.ಕೆಲಸ ಸಿಕ್ಕ ಖುಷಿಯಲ್ಲಿ ಪಾರ್ಟಿನೂ ಕೊಟ್ಟ ಬಿಟ್ಟೆ.ಊರೋರೆಲ್ಲಾ ಕರದು ಕಾಲೇಜ್ ಮೇಷ್ಟ್ರಾದ ಅಂತ ಮಾತಾಡಿಸಿದ್ರು.ಯಾರೋ ಮಾಡೋ ಮಿಸ್ಟೇಕಿಗೆ ನಮ್ಮಂತವರು ಬಲಿಯಾಗ ಬೇಕೇನು?
“ಇರ್ಲಿ ಬಾರಲೇ ಎಂಥೆಂತಾ ವಿಕೋಪಗಳೋ ಬಂದು ಬದುಕು ಕುಸಿದು ಬೀಳತಾವಂತ ಅಂತದ್ರಾಗ ನಿನ್ನಂತವನಿಗೆ ಇದಾವ ಲೆಕ್ಕ ಒಂದು ಹ್ವಾದ್ರ ಇನ್ನೊಂದು” ಬಾ ಬಾರಲೇ ಅಂತಾ ನಿರಾಸೆ ಕವಿದವನ ಬದುಕಲ್ಲಿ ಆಸೆ ಬೆಳಗಿಸುವ ಜೀವದ ಗೆಳೆಯರು.
***
ಅಲ್ಲಿ ಕುಳಿತವನ ಕಥೆ ಇನ್ನೂ ಜೀವತಳೆಯಲು ಕುಳಿತಂತಿತ್ತು. ಅಕ್ಕ ಮಾವನ ಮನೆಯಲ್ಲಿ ಓದುತಿದ್ದ ಹುಡುಗನನ್ನ ರಾತ್ರೋ ರಾತ್ರಿ ಹೊರ ಹಾಕಿದ್ದರು.ಎಲ್ಲಿ ಹೋಗಲಿ? ಏನು ಮಾಡಲಿ? ಅಂತ ಮನೆಯನ್ನೇ ಕಳಕೊಂಡ ನೆರೆ ಸಂತ್ರಸ್ತನಂತೆ ಕುಳಿತಿದ್ದ.
***
ಆ ಅಂಗಡಿಯ ಎದುರಲ್ಲೊಬ್ಬ ವಯ್ಯಾರಿ!
ಹಾರಾಡುವ ಕೂದಲುಗಳ ಮತ್ತೆ ಮತ್ತೆ ತೀಡಿಕೊಳ್ಳುತ್ತ ಮಿಂಚಿನಂತೆ ಸೆರಗು ಎಳೆದಾಡುತ್ತ ನಗೆಯನ್ನೇ ಉಂಡು ಬೆಳೆದವಳಂತೆ ಹಾಲು ಬೆಳದಿಂಗಳ ಚೆಲ್ಲುತಿದ್ದಳು.ಅದು ಅಂಗಡಿಯವ ಭೂಕಂಪಕ್ಕೋ ಸುನಾಮಿಗೋ ಬಿದ್ದು ಮಟಾಷ್ ಆಗುವ.” ಮುತ್ತಿನ ಮಾಲಿ ತುಂಡಾದವಲೇ ಫರಾಕ್” ಎಂಬ ಮೈಲಾರ ಲಿಂಗನ ಕಾರಣೀಕದಂತೆಯೇ ಕಾಣುತಿತ್ತು.
***
ಇಲ್ಲಿ ಹಾಸು ಬೆಂಚಿನ ಮೇಲೆ ರಚ್ಚೆ ಹಿಡಿದ ಮಗುವನ್ನ ನಿಯಂತ್ರಿಸಲಾಗದ ತಾಯಿ.ರಪ್ ರಪ್ ಎಂದು ನಾಲ್ಕು ತೀಡಿದಳು. ಮಗು ಇನ್ನೂ ವಿಶ್ವರೂಪಿಯಾಗಿ ಬಾಯಿ ತೆರೆಯಿತು. ” ಚುಪ್ ರೇ ಚುಪ್!..ಮಾರ್ ತು ದೇಖ್! ಅಬ್ಬಾಕು ಬುಲಾತು ದೇಖ್.”
ಊ ಹು .. ಮಗು ಡೋಂಟ್ ಕೇರ್!!!
ಅಮ್ಮ ಗತಿ ಇಲ್ಲದೇ ಚೀಲದೊಳಗಿನ ಲೈಸ್ ಪಾಕೀಟ್ ತೆರೆದು ನೀಡಿದಳು.
ಮಗು ಏಕ್ ದಮ್ ಶ್ರೀ ಕೃಷ್ಣನಂತೆಯೇ ಅಹ್ಹಹ್ಹಾ ಎಂದು ಅಮ್ಮನ ಪಕ್ಕ ಇನ್ನೂ ಸರಿಯಿತು.
ಆ ಪಾಕೀಟ್ ನೋಡಿದ ದೂರದ ಕೂಲಿ ಕೂಸು ತಿನ್ನುವ ಬಾಳೆ ಹಣ್ಣನ್ನ ಅರ್ಧಕ್ಕೆ ಕೈ ಬಿಟ್ಟು ” ಯವ್ವಾ..” ಅಂತ ಕೈ ತೋರಿಸಿತು.
ಆ ತಾಯಿಯೂ ಮಹಾಕಾಳಿಯಂತಾಗಿ ರಪ್ಪನೆ ಬೆನ್ನಿಗೆ ಬಿಟ್ಟು ಸಂಸ್ಕøತ ಶ್ಲೋಕ ಸಾಗರವನ್ನೇ ಪರಿಚಯಿಸಲು ಮಗು ದಿಕ್ಕು ಕಾಣದೆ ಸರಿಗಮಪ ಜಡ್ಜಗಳ ಎದುರು ‘ನೀನು ಜೀತೇಂದ್ರ ನಾನು ಸಿರಿದೇವಿ ದಿಲ್ ಡ್ಯಾನ್ಸು ಆಡೋಣ ಬಾ’ ಎಂದು ನಿಂತ ಗಾಯಕರಂತಾಗಿತ್ತು.
ತಾಯಿ ಮಗು ನೆಲಕ್ಕೆ ಕೆಡವಿದ ಬಾಳೇ ಹಣ್ಣನ್ನೇ ಸೆರಗಿನಿಂದ ವರೆಸಿ ಮತ್ತೆ ಕೈಗೆ ನೀಡಲು..
ಬಸ್ ಸ್ಟ್ಯಾಂಡಿನೊಳಗೆ ಸ್ಯಾನಿಟೈಸ್ ಅಡ್ವಟೈಸ್ ಗಳು ದಿಕ್ಕಾಪಾಲದಂತಿತ್ತು.
ತಿನ್ನದಿದ್ದರೆ ಉಳಿಗಾಲವೇ ಇಲ್ಲ ಎಂದರಿತ ಮಗು ಬಟ್ಟೆ ಗಂಟಿಗೆ ಆತು ಕೊಂಡು ನಮಲತೊಡಗಿತು!!!
***
ಇತ್ತ-
ಕಟ್ ಕಟ್ ಎಂದು ನೆ¯ಕ್ಕೆ ಲಾಟಿ ಕುಟ್ಟುತ್ತಾ ಬಂದ ಪೋಲೀಸಪ್ಪನ ಕಂಡು ಯಾವ ಮಾಯದೊಳಗೋ ಪೋಲಿಗಳು, ಪಿಕ್ ಪಾಕೀಟ್ ಕದೀಮರೋ ಓಟ ಕಿತ್ತರು.
ಲಾಟಿ ಸದ್ದು ಅವರಿಗೆ ನಾ ಬರುತ್ತಿರುವೆ ನೀವು ಸ್ವಲ್ಪತ್ತು ನಡಿರೀ ಎಂಬ ಸಿಗ್ನಲ್ ಅನಿಸಿತ್ತೇನೋ…?
ಆದರೆ ಸೆರೆ ಕುಡಿದು ಹೆಚ್ಚಾದವ ಮಾತ್ರ… ಪೋಲೀಸಪ್ಪನ ಬಳಿಗೇ ನುಗ್ಗಿ ಸಾರ್ ” ಲಿಂಗಸೂರ್ ಗಾಡಿ ಎಲ್ಲಿ ಬರುತ್ರೀ…” ಎಂದು ನಕ್ಕ.
ಖಾಕಿಗೇ ಸವಾಲ್!! ಎಂದು ಭಾವಿಸಿದ ಪೋಲೀಸಪ್ಪ ” ಲೇ, ಅದು ಇಲ್ಲಿ ಬರಲ್ಲಲೇ ಅಲ್ಲಿ ಬರತೈತಿ ಬಾ ಎಂದು ಕಜ್ಜಾಯ ನೀಡುತ್ತಲೇ ಕಾಲರ್ ಹಿಡಿದು ಎಳೆಯಲು.ಕುಡುಕಪ್ಪ ಮುಂದಾಗುವ ಅನಾಹುತವನ್ನ ನಿಂತ ನಿಂತಲ್ಲಿಯೇ ಅರಿತು, ನಾನು ತುಳಿದದ್ದೇ ರಾಂಗ್ ರೂಟ್ ಎಂದು ಪ್ಲೇಟ್ ಚೇಂಜ ಮಾಡಿದ್ದೇ.. ದಪ್ಪನೇ ಕಾಲಿಗೆ ಎರಗಿ ದೇವರೇ ನಾನ್ ಮಗ ಹೋಗಿ ಬಿಟ್ಟಾನ್ರೀ..ಬಲಗೈನಾ ಕತ್ತರಿಸಿ ನೆಲಕ್ಕ ಬಿದ್ದಂಗಾಗೈತ್ರೀ..ಬೆಳಿಗ್ಗೆ ಮಣ್ಣಂತೋ ತಂದೀ… ಎಂದು ರಾಗ ಸುರು ಮಾಡಿಬಿಟ್ಟ.ಪಾಪ ಹಣೆ ತುಂಬಾ ವಿಭೂತಿ ಬಳಕೊಂಡ ಪೋಲೀಸಪ್ಪನ ಕರುಳೇ ಚುರುಕ್ ಅಂತು.
ಅವನ ಕಾಲರ್ ಬಿಟ್ಟು ಐದನೇ ನಂಬರ್‍ದಾಗ ದೀಡ್ ತಾಸ್’ಗೆ ಬರುತ್ತ ಎಂದು ನಾನೂ ನಿನ್ನ ಲೋಕಲ್ಲೇ ಎಂದು ಭಾಷೆಯಿಂದಲೇ ಸಂಬಂಧ ಪೋಣಿಸಿ ಹೋದ.
ಪೋಲೀಸ್ ಹೋದೊಡನೆ ಹೆಂಡತಿ ಬಳಿ ನೆಗೆದು ” ಟೇಸಣ್ಣಿಗೆ ಹಾಕತಾನಂತ ಟೇಸಣ್ಣಿಗೆ,ನಮ್ಮಂದಿನೇ ಇಷ್ಟು ರಾಗ ತಗದರ ಸಾಕು ಜರ್ರಂತ ಜಾರಿ ಬೀಳತಾರ.ನನಗ ಗೊತ್ತಿಲ್ಲೇನು ನಾ ಕಲಾವಿದ ಅಂತ ನಕ್ಕ.
ಆಕೆ “ಅಯ್ಯಾ ಏನ್ ಖಡದು ಕಟ್ಟಿ ಹಾಕಿ ಮುಚ್ಚಾ..ನಿನ್ನ..”ಎಂದು ರಾಂಗಾಗಿ ಮುಖ ತಿರುವಲು.
ಜಯಮಾಲಾ ಅಂತ ಮಗಳಿಗೊಂದು ಮುತ್ತಿಟ್ಟ.ಆತನ ಆಟ ನೋಡಿ ಸುತ್ತಲೂ ಇದ್ದವರು ನಕ್ಕರು.
ಕಿಲಾಡಿ ಪಯಣಿಗ ” ಏ ರೀಲು” ಅವ ರಿಯಲ್ ಪೋಲೀಸು ಮತ್ತ ಬರ್ತಾನ ಲಿಂಗಸೂರ್ ಬಸ್ ಹೊಂಡಾದ್ರಾಗ ದಾರಿ ಬಿಡು ಇಲ್ಲಾಂದ್ರ ಡೆಲ್ಲಿ ತೋರಿಸ್ತಾನ.ನಾನ ಕರದು ಟಿಕೀಟ್ ಹರಿಸಲೇನು ಎನ್ನಲು ಕುಡುಕಪ್ಪ ಕೈ ಮುಗಿದು ಆಟ ನಿಲ್ಲಿಸಿದ.
***
ಮತ್ತೊಬ್ಬ ಮುಖ ಹುಳ್ಳಗೆ ಮಾಡಿಕೊಂಡು…” ಇವ್ನೌನ್ ಬಸ್ ಸ್ಟ್ಯಾಂಡ್ ದಾಗ ಹೋಟೇಲ್ ಯಾಕ್ ಹಾಕತಾರೋ ಏನೋ..ಯಂಗೂ ಜನಾ ಬರತಾರಂತ ಇವ್ರು ಚಾ ಕೇಳಿದ್ರ ಡಿಕಾಸನ್ನು ಬಿಸಿನೀರು ಕುಡಿಸ್ತಾರ.ಇಡ್ಲಿ ಕೇಳಿದ್ರ ಹುಳಿ ಚೆಟ್ನಿ ಫ್ರೀ..ಇವರ ದ್ವಾಸಿ ದೇವರಿಗೇ ಪ್ರೀತಿ!,ಪೂರಿ ಮೇಲ ನೊಣ ಕುಂತೂ ಕುಂತೂ ಸಾಕಾಗಿ ಎದ್ದೊಕ್ಕವು.ಸಾಹೇಬ್ರ ನಿಜ ಹೇಳ್ರೀ ತಾಲೂಕ ಬಸ್ ಸ್ಟ್ಯಾಂಡ್ ಗಳಲ್ಲಿ ಹೋಟೇಲ್ ಇರ್ಲೇ ಬಾರದು ನೊಡ್ರಿ.ಹೊರಗಿನ ಹೋಟೆಲ್ ಎಷ್ಟ್ ಚೆಂದ ಅದವೂ!
***
ಕುಳಿತವರ ನೋಡಿದ ಜೋಗತಿ ” ಯಪ್ಪಾ ರೊಕ್ಕಾ…!”
ಹಂಗಾ ಕೊಡ್ತರೇನು “ಹಾಡಬೇ ಯಕ್ಕಾ..” ಎಂದ ಮತ್ತೊಬ್ಬ
“ಐ ಕೊಡ ಮಾರಾಯ ಕೊಡ್ತಾನ ಮುಚ್ಚೆಂಡ್ ಕುಂತ್ಗಾಳೋ ಬೆಳಿಗ್ಗಿನಿಂದ ವದರಿ ವದರಿ ನಮ್ಮ ಗಂಟಲು ಬಿದ್ದಾವು ಅದರ ಮೇಲೂ ಮಾಸ್ಕ ತೆಗದು ಹಾಡಂಗಿಲ್ಲ ”
ಕೀಪ್ ಡಿಸ್ಟೆನ್ಸ್…
ಕೊರೊನಾ…” ಗೊತೈತಿಲ್ಲಾ ಎನ್ನಲು ಅವ ಗಪ್ಪಾದ,ಆಕೆ ನಕ್ಕು ಮುಂದೆ ನಡೆದಳು.
ಬಸ್ ಸ್ಟ್ಯಾಂಡ್ ಭಾನುವಾರ ವಿಶೇಷವೆನಿಸುತಿತ್ತು.ಕೂಡ್ಲಿಗಿಯಿಂದ ದುರ್ಗಕ್ಕೆ ಭಾಷ ಮೀಯಾ ಡ್ರೈವರ್ ಬರುತಿದ್ದ.
” ಹಾ ಏನ್ರಪ್ಪಾ ಎಲ್ಲಾ ಅರಾಮಾ,ಆ ತೊಗರಿ ಮಾವ ಕಳಿಸಿದ ನೂರು ರುಪಾ..” ಅಂತಾ ನೀಡುತಿದ್ದ.
ಆತನಿಗೊಂದು ಅಕ್ಕರೆಯ ನಮಸ್ಕಾರ ಹೇಳಿ ಮಾವನವರನ್ನ ಕೇಳಿದೆವು ಅಂತ ಹೇಳಿ ಎಂದು ಹೇಳಿದ್ದೇ… ರೂಪವಾಣಿ,ಶಂಕರ್,ಯೂನಿಯನ್ ಅಂತ ಟಾಕೀಸ್ಗಳಲ್ಲಿನ ಸಿನಿಮಾಗಳತ್ತ ಓಟ…. ಬಸ್ ಸ್ಟ್ಯಾಂಡ್ ಡ್ರೈವರ್ಗಳು ಎಷ್ಟೋ ಜನರಿಗೆ ಪೋಸ್ಟ ಮ್ಯಾನ್ ಗಳ ತರಹವೂ ಹೌದು.ಮಾತ್ರೆಗಳನ್ನ,ಪುಸ್ತಕಗಳನ್ನ ಅನೇಕ ಬಗೆಯ ಪಾರ್ಸಲ್ ಗಳನ್ನ ಕೆಲವೇ ಗಂಟೆಗಳಲ್ಲಿ ತಲುಪಿಸುವವರು ಹಾಗಾಗಿ ಬಸ್‍ಸ್ಟ್ಯಾಂಡ್ ಗೂ ಮನೆಯ ಚಿತ್ರವೇ ಅಂಟಿ ಕೊಂಡಂತೆಯೇ ಬೀದಿಯ ವಾಸನೆಯೂ ಹೆಚ್ಚಿದೆ.
ಇಸ್ಪೇಟ್ ,ಜೂಜು,ಬೆಟ್ಟಿಂಗ್,ರೇಸ್,ಹೀಗೆ ಸರ್ವನ್ನಂದೂ ಚಟದವರಿಗೂ ಜಾಗ ನೀಡಿದ ಕಾಮಧೇನುವದು.ಅಲ್ಲಿ ವೇಶ್ಯೆಯ ಬೆನ್ನಟ್ಟಿ ಸುಟ್ಟು ಕೊಂಡವರೂ ಸಿಗುತ್ತಾರೆ.ಪ್ರೀತಿಯ ಕನಸೊತ್ತು ಬೆಳಗಗುವವರೂ ಸಿಗುತ್ತಾರೆ.ಅಲ್ಲಿ ನರಕವನ್ನೇ ಹಾಸಿ ಹೊದ್ದು ಮಲಗುವವರೂ ಇದ್ದಾರೆ.ಅಲ್ಲಿಂದಲೇ ಆನಂದದ ಮೆಟ್ಟಿಲೇರಿದವರೂ ಇದ್ದಾರೆ.ಅಲ್ಲಿ ಅಬ್ದುಲ್ ಕಲಾಂ ಇರುವಂತೆಯೇ ಬಿನ್ ಲ್ಯಾಡನ್ ಗಳೂ ಕಾಣುತ್ತಾರೆ.ಅಲ್ಲಿ ಗಾಂಧಿ ಕಂಡಂತೆಯೇ ಗೋಡ್ಸೆಗಳೂ ಇಣುಕುತ್ತಾರೆ.ಅಲ್ಲಿ ಅರಿವಿದೆ.ಆಘಾತಗಳಿವೆ.ಅಲ್ಲಿ ಸಾಂತ್ವಾಗಳಿವೆ ಅಲ್ಲೇ ಕೆಟ್ಟ ಕವಲು ದಾರಿಗಳಿವೆ.ಅಲ್ಲಿ ವಿಯೋಗದ ಕಣ್ಣೀರಿವೆ,ಅಲ್ಲೇ ಹೆಗಲಿಗೆ ಹೆಗಲು ಕೊಡುವ ಗೆಳೆಯರ ಚಲುವಿದೆ.ಅಲ್ಲಿ ಮಾತೇ ಮರೆತವರಿದ್ದಾರೆ.ಅಲ್ಲೇ ಮಾತು ಮಾತು ಮಾತು ಅಂತ ನಿಂತೇ ಬಿಟ್ಟವರಿದ್ದಾರೆ.ಅಲ್ಲಿ ಕತ್ತರಿಸುವ ಪ್ಲಾನ್ ಮಾಡುವವರೂ ಇದ್ದಾರೆ ಅಲ್ಲೇ ಕುಣಿದಾಡಿಸುವ ತುಂಟರೂ ಇದ್ದಾರೆ.ಅದಕ್ಕೆ ಜನರ ಫರಕಿಲ್ಲ.ಎಲ್ಲಿಂದಲೋ ಬಂದವರು ಎಲ್ಲಿಗೋ ಹೊರಟವರ ನಡುವೆ ಬಸ್ ಸ್ಟ್ಯಾಂಡ್ ಎಂಬುದೊಂದು ಹಾವು ಏಣಿ ಆಟದ ರೂಪಕ.
ಕೊನೆ ಮಾತು: ಪ್ರಯಾಣಿಕರ ಕಥನಗಳಿಗಿರುವಂತೆಯೇ ಬಸ್ ಸ್ಟ್ಯಾಂಡ್‍ಗೂ ಮತ್ತು ಬಸ್’ಗೂ ಅನೇಕ ರೂಪಾಂತರಗಳ ಕಥನಗಳಿವೆ.’ ಧೂಮ್ರ ಶಕಟ’ ಎಂದು ಕರೆಸಿಕೊಳ್ಳುವ ಬಸ್ ಎಂಬ ಪದವು ಲ್ಯಾಟಿನ್ ಮೂಲದ ಪದವಾಗಿದೆ.ಸಾರ್ವಜನಿಕ ಪ್ರವೇಶವಾದ ಈ ಬಸ್ ಎಂಬ ಪ್ರಕಾರವು ಮೊದಲಿಗೆ ಕೇವಲ ಶ್ರೀಮಂತರಿಗೆ ಮೀಸಲಾಗಿತ್ತು.ಪ್ಯಾರಿಸ್ ಮತ್ತು ಇಂಗ್ಲೆಂಡ್ ಗಳಲ್ಲಿ 18ನೇ ಶತಮಾನದಲ್ಲಿ ಪ್ರಾರಂಭಗೊಂಡ ಇವು ಮೂಲದಲ್ಲಿ ಕುದುರೆಗಳು ಎಳೆವ ಕಂಪಾರ್ಟಮೆಂಟ್ಗಳಾಗಿದ್ದವು.ನಂತರ ರೈಲು ಹಳಿಗಳ ಮೇಲೆ ನಡೆವ ಟ್ರಾಲಿ ಬಸ್ ಗಳು ಬಂದವು.ಮುಂದೆ ಹಳಿಗಳ ಮೇಲಿನ ವಿದ್ಯುತ್ ಚಾಲಿತ ಬಸ್,ಓಮ್ನಿ ಬಸ್ ಎಂದು ರೂಪಾಂತರ ಗೊಳ್ಳುತ್ತಾ ಬಂದವು.ಬಸ್ ಗಳು ರಸ್ತೆ ಮೇಲೆ 1840 ರಲ್ಲಿ ಕಾಣಿಸಿಕೊಂಡವು.42 ಜನ ಪ್ರಯಾಣಿಕರನ್ನ ಹೊತ್ತೊಯ್ಯುತಿದ್ದ ಇವು 3 ಕುದುರೆಗಳಿಂದ ಎಳೆಯಲ್ಪಡುತಿದ್ದವು.1830 ರ ಉಗಿ ಚಾಲಿತ ಬಸ್ ಗಳು,ಟ್ರಾಲಿ ಬಸ್ ಗಳು, 1927 ರ ವೋಲ್ವೋ ಎಂಬ ಸ್ವೀಡನ್ ಮೂಲದ ಬಸ್‍ಗಳ ನಂತರ 1945 ರ ಡಿಸೆಲ್ ಇಂಜಿನ್ ಬಸ್ ಗಳು ಈ ಹೊತ್ತಿನ ಬಸ್ ಮೂಲಕ್ಕೆ ಹತ್ತಿರವಾಗಿವೆ.ಅಂದ ಹಾಗೆ ಮೊದಲ ಕುದುರೆ ಎಳೆವ ಕೆಲವೇ ಜನರ ಬಸ್ ಗಳು ಕಶ್ಮೀರದಲ್ಲಿ ಓಡಿದರೆ ಕೊನೆಯ ಮೋಟರ್ ಚಾಲಿತ ಬಸ್ ಗಳು ಮುಂಬೈ ರಸ್ತೆ ಮೇಲೆ ಓಡಿದವು 1926 .ಶ್ರೀಮಂತರಿಗಾಗಿ ಶುರುವಾದ ಬಸ್ ಗಳು ಸಾರ್ವಜನಿಕರಿಗಾಗಿ ತೆರೆದು ಕೊಳ್ಳುವ ಇತಿಹಾಸವನ್ನ ಬಗೆದಾಗ ಇವುಗಳಿಗೂ ನೂರಾರು ವರ್ಷಗಳ ಚರಿತ್ರೆ ಇರುವುದು ವಿಶೇಷವೇ ಅಲ್ಲವೇ!?