ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

Share

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ


ದುರ್ಗಾ- ಮಹಿಷ ಕದನ ಮತ್ತು ಮಹಿಷಾಸುರ ಮರ್ದನದ ಪರಿಣಾಮ ಇದ್ದೀತು. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿಯಿದು. ಪರಮ ಕ್ರೌರ್ಯಕ್ಕೆ ಗುರಿಯಾಗುವ ಜೀವಿ. ಮನಸೇಚ್ಛೆ ಬಡಿತ ತಿನ್ನುತ್ತದೆ, ದೇವಿಯ ಮುಂದೆ ಕತ್ತು ಕಡಿಸಿಕೊಂಡು ಬಲಿಯಾಗುತ್ತದೆ. ಮೇವು ನೀರಿಲ್ಲದೆ ನೂರಾರು ಕಿ.ಮೀ. ದೂರ ಹಿಂಸೆಯ ಸಾಗಣೆಗೆ ತುತ್ತಾಗಿ ಕಸಾಯಿ ಖಾನೆಗಳಲ್ಲಿ ಅತ್ಯಂತ ಯಾತನೆಯ ಮರಣಕ್ಕೆ ಗುರಿಯಾಗುತ್ತದೆ.

ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ ಬದುಕಿನಲ್ಲಿ ಕಂಡೂ ಕಾಣದಂತೆ ಭೇದ ಭಾವ ಬಗೆಯುತ್ತ ಬಂದಿರುವ ವ್ಯವಸ್ಥೆ ಆಷಾಢಭೂತಿ.

1890ರ ಆಪ್ಟೆ ಸಂಸ್ಕೃತ ನಿಘಂಟಿನ ಪ್ರಕಾರ ಕೃಷ್ಣ ಎಂಬ ಶಬ್ದಕ್ಕೆ ಕಪ್ಪು, ಕತ್ತಲೆ, ಕಡು ನೀಲಿ, ದುಷ್ಟ, ಅನಿಷ್ಟ, ಕೃಷ್ಣಮೃಗ, ಕೋಗಿಲೆ, ಕೃಷ್ಣಪಕ್ಷ, ವಿಷ್ಣುವಿನ ಎಂಟನೆಯ ಅವತಾರ ಕೃಷ್ಣ, ಕೃಷ್ಣನ ಮಗ ಪ್ರದ್ಯುಮ್ನ, ಮಹಾಭಾರತದ ಅರ್ಜುನ ಎಂಬ ಅರ್ಥಗಳಿವೆ. ಕೃಷ್ಣ ಎಂಬುದು ದೇಶದ ಅತಿ ಜನಪ್ರಿಯ ಹೆಸರುಗಳಲ್ಲೊಂದು.
ವಿಷ್ಣುವಿನ ಮೂರು ಅವತಾರಗಳಾದ ರಾಮ, ಕೃಷ್ಣ ಹಾಗೂ ಮೋಹಿನಿಯ ಮೈಬಣ್ಣ ಕಪ್ಪುಇಲ್ಲವೇ ಕಡುನೀಲಿ. ಮೂವರ ಸೌಂದರ್ಯವನ್ನು ಪುರಾಣಗಳು, ಭಾಗವತಗಳು ಕೊಂಡಾಡಿವೆ.
ಭಾರತದ ಅರ್ಥವ್ಯವಸ್ಥೆ ಹೊಳೆಯಲು ಬಡಪಾಯಿ ಎಮ್ಮೆ ಕೋಣಗಳು ಕೂಡ ಶ್ರಮಿಸಿವೆ. ಬೈಸಿಕೊಳ್ಳುವುದಷ್ಟೇ ಅಲ್ಲ ಬೈಗುಳವೇ ಆಗಿ ಹೋಗಿರುವ ಈ ಪಶುವಿನ ಹಿರಿಮೆ ಗರಿಮೆಯ ನೆನೆವುದು ಮಾನವೀಯ ನಡವಳಿಕೆ.

ಕಪ್ಪೆಂದು ಜರೆಯುವ ಬೈಗುಳವೇ ಆಗಿ ಹೋಗಿರುವ ಎಮ್ಮೆಗಳು- ಕೋಣಗಳು ಗದ್ದೆ ಉಳುತ್ತವೆ, ಹೇರು ಎಳೆಯುತ್ತವೆ, ಕನಿಷ್ಠ ತಿಂದು ಗರಿಷ್ಠ ಹಾಲು ಕರೆಯುತ್ತವೆ. ಎಮ್ಮೆ ಹಾಲಿನಲ್ಲಿ ಹೃದಯಕ್ಕೆ ಮಾರಕವಾದ ಕೊಲೆಸ್ಟ್ರಾಲ್ ಪ್ರಮಾಣ ಶೇ.45ರಷ್ಟು ಕಡಿಮೆ, ಒಮೇಗ-3 ಮೇದಸ್ಸು ಹೆಚ್ಚಿನ ಪ್ರಮಾಣದಲ್ಲಿದೆ, ಪ್ರೊಟೀನು, ಕಬ್ಬಿಣಾಂಶ ಹೇರಳ. ಜಾನುವಾರು ತಜ್ಞರು ಎಮ್ಮೆಯನ್ನು ಭಾರತದ ಹೆಮ್ಮೆ ಎಂದು ಬಣ್ಣಿಸುವುದುಂಟು.
ನಮ್ಮ ದೇಶದಲ್ಲಿರುವ ಎಮ್ಮೆಗಳ ಸಂಖ್ಯೆ ಸುಮಾರು 12 ಕೋಟಿ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಎಮ್ಮೆಗಳಿಗೆ ಭಾರತವೇ ತವರು. ವರ್ಷಕ್ಕೆ ಉತ್ಪತ್ತಿಯಾಗುತ್ತಿರುವ ಎಮ್ಮೆ ಮಾಂಸದ ಪ್ರಮಾಣ ಹನ್ನೊಂದು ಲಕ್ಷ ಟನ್ನುಗಳಷ್ಟು. ಎಮ್ಮೆ ಮಾಂಸದ ರಫ್ತಿನಿಂದ ಬೊಕ್ಕಸಕ್ಕೆ ಭರ್ತಿಯಾಗುತ್ತಿರುವ ವಾರ್ಷಿಕ ವರಮಾನ 30 ಸಾವಿರ ಕೋಟಿ ರೂಪಾಯಿ ಮೀರಿದ್ದು. ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಹಾಲನ್ನು ಉತ್ಪಾದಿಸುತ್ತಿರುವುದು ಎಮ್ಮೆಗಳೇ.

ಗೋಹತ್ಯೆ ವಿರುದ್ಧ ಸಿಡಿದೇಳುವವರನ್ನು ಮಹಿಷ ಹತ್ಯೆ ಯಾಕೆ ಬಾಧಿಸುವುದಿಲ್ಲ ಎಂದು ಕೇಳುತ್ತಾರೆ ಚಿಂತಕ ಕಂಚಾ ಐಲಯ್ಯ. ಗೋವುಗಳು, ದಲಿತರು- ಬಹುಜನರು ಈ ಎರಡೂ ಜಾನುವಾರುಗಳ ಕುರಿತು ತೋರುವ ಪ್ರೀತಿ ಮಮತೆಯನ್ನು ನೋಡಿದರೆ ಎರಡಕ್ಕೂ ಒಂದೇ ಬಗೆಯ ಸಮ್ಮಾನ ಸಿಗಬೇಕು ಎಂದು ವಾದಿಸುತ್ತಾರೆ. ಎಮ್ಮೆಯ ಹಾಲನ್ನು ಮೇಲ್ಜಾತಿಗಳೆಂದು ಹೇಳಿಕೊಳ್ಳುವವರೂ ಬಗೆ ಬಗೆಯಾಗಿ ಸೇವಿಸುವುದು ಸುಳ್ಳೇನೂ ಅಲ್ಲ. ಆದರೆ ಎಮ್ಮೆಗೆ ಬ್ರಾಹ್ಮಣ್ಯದಲ್ಲಿ ಯಾವುದೇ ಸ್ಥಾನಮಾನ ಇಲ್ಲ. ಆರ್ಥಿಕ ಸಮೀಕ್ಷೆಯೊಂದನ್ನು ನಡೆಸಿದ್ದೇ ಆದರೆ ಭಾರತದಲ್ಲಿ ಕೋಟ್ಯಂತರ ಜನರ ಜೀವನೋಪಾಯ ಮೂಲವಾಗಿ ಹೊಮ್ಮುವುದು ಎಮ್ಮೆಯೇ ವಿನಾ ಆಕಳು ಅಲ್ಲ. ಒಂದೇ ಹುಲ್ಲನ್ನು ತಿನ್ನುವ ಎರಡು ಪ್ರಾಣಿಗಳಲ್ಲಿ ಒಂದು ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಅಸ್ಪೃಶ್ಯ ಎನಿಸಿಕೊಳ್ಳುವುದು ಯಾಕಾಗಿ ಎಂದು ಅವರು ಕೇಳುತ್ತಾರೆ. ಎರಡರ ಪೈಕಿ ಯಾವುದು ಶ್ರೇಷ್ಠ ಮತ್ತು ಯಾವುದು ಕನಿಷ್ಠ ಎಂದು ತೀರ್ಮಾನ ಮಾಡಲೇಬೇಕಿದ್ದಲ್ಲಿ, ಅಂತಹ ಹಕ್ಕು- ಅಧಿಕಾರ ಇರಬೇಕಾದದ್ದು ಈ ಎರಡೂ ಪ್ರಾಣಿಗಳನ್ನು ತಲೆ ತಲಾಂತರಗಳಿಂದ ಸಾಕಿ ಸಲಹುತ್ತ ಬಂದಿರುವ ದಲಿತರು- ಬಹುಜನರಿಗೆ. ಕಪ್ಪು ಮೈ ಬಣ್ಣದ ಜನ ಸಮುದಾಯಗಳನ್ನು ವಿಕಾರವಾಗಿ ಚಿತ್ರಿಸಿ, ರಾಕ್ಷಸರೆಂದು ಕರೆದ ಬಿಳಿ ಮೈ ಬಣ್ಣದವರ ವರ್ಣಭೇದ ನೀತಿ ಜನಜನಿತ. ಇದೇ ನೀತಿ ಪ್ರಾಣಿ ಪ್ರಪಂಚಕ್ಕೂ ವಿಸ್ತ ರಿಸಿತು.

ಈ ಅಹಮಿಕೆಗೆ ತಿರಸ್ಕಾರಕ್ಕೆ ತುತ್ತಾದ ಜಾನುವಾರು ಎಮ್ಮೆ. ಬೆಳ್ಳಗಿದ್ದುದು ಸುಂದರವಷ್ಟೇ ಅಲ್ಲ ಗೌರವಾನ್ವಿತ ಕೂಡ ಎನಿಸಿಕೊಂಡಿತು ಎನ್ನುತ್ತಾರೆ ಐಲಯ್ಯ.
ಆದರೂ ಮಹಿಷ ಪರಂಪರೆ ನಮ್ಮ ಅನೇಕ ಗಿರಿಜನರ ಆಚರಣೆಗಳಲ್ಲಿ ಇನ್ನೂ ಜೀವಂತವಿದೆ. ಮಧ್ಯಭಾರತದ ಗೊಂಡರು ಮತ್ತು ಮರಿಯಾ ಗೊಂಡರು, ಪಶ್ಚಿಮ ಭಾರತದ ಕಾಟಕಾರಿಗಳು ಹಾಗೂ ದಕ್ಷಿಣ ಭಾರತದ ತೋಡರು ಈ ಮಾತಿಗೆ ಉದಾಹರಣೆಯಾಗುತ್ತಾರೆ.
ನೀಲಗಿರಿಯ ಗಿರಿಜನರಾದ ತೋಡರ ಪಾಲಿಗೆ ಎಮ್ಮೆಗಳು ಪವಿತ್ರ ಪ್ರಾಣಿಗಳಾಗಿದ್ದವೇ ವಿನಾ ಆಕಳುಗಳಲ್ಲ. ಪವಿತ್ರ ಎಮ್ಮೆಯನ್ನು ಕಟ್ಟುತ್ತಿದ್ದ ಸ್ಥಳಗಳು ಅವರ ಪಾಲಿಗೆ ಆರಾಧಿಸುವ ಗುಡಿಗಳು. ಹೈನು ಮಂದಿರಗಳೆಂದೇ ಅವುಗಳನ್ನು ಕರೆಯಲಾಗುತ್ತಿತ್ತು.
ಸತ್ತ ತೋಡನ ಅಂತ್ಯ ಸಂಸ್ಕಾರದಲ್ಲಿ ಎಮ್ಮೆಯನ್ನು ಬಲಿ ಕೊಡುತ್ತಿದ್ದರು ತೋಡರು. ಈ ಎಮ್ಮೆ ಪರಲೋಕ ಸೇರಿದ ಮೃತನನ್ನು ಸೇರಿಕೊಳ್ಳಬೇಕು ಎಂಬುದು ಈ ಬಲಿಯ ಉದ್ದೇಶವಾಗಿತ್ತೇ ವಿನಾ ಅದನ್ನು ತಿನ್ನುವುದಲ್ಲ.
ಛತ್ತೀಸಗಢದ ಬಸ್ತರ್ ಜಿಲ್ಲೆಯ ಇಂದ್ರಾವತೀ ನದೀ ದಂಡೆಗುಂಟ ವಾಸಿಸುತ್ತಿದ್ದ ಮರಿಯಾ ಮತ್ತು ಮರಿಯಾ ಗೊಂಡ ಆದಿವಾಸಿಗಳು ತಮಗೆ ಮಹಿಷದೊಂದಿಗೆ ಆಧ್ಯಾತ್ಮಿಕ ಸಂಬಂಧವಿದೆ ಎಂದು ನಂಬಿದ್ದವರು. ಹೀಗಾಗಿ ಅವರ ಪಾಲಿನ ಆಧ್ಯಾತ್ಮಿಕ ಸಂಬಂಧದ ಚಿಹ್ನೆ ಮಹಿಷ. ಹಬ್ಬಗಳಲ್ಲಿ ಮಹಿಷದ ಕೊಂಬುಗಳನ್ನು ತಲೆಯ ಮೇಲೆ ಧರಿಸಿ, ಡೋಲಿನ ತಾಳಕ್ಕೆ ಹೆಜ್ಜೆ ಹಾಕಿ ಹುಸಿ ಕಾಳಗವನ್ನು ನಟಿಸುತ್ತಾರೆ. ತಮ್ಮ ಪ್ರಾಚೀನ ಮಹಿಷ ದೈವವನ್ನು ದಾಂತೇಶ್ವರಿ ಎಂದೇ ಪೂಜಿಸುತ್ತಾರೆ. ಮಹಿಷನನ್ನು ಮಹಸೋಬಾ (ಮಹಿಷಬಾಬಾ ಇಲ್ಲವೇ ತಂದೆ) ಎಂದು ಮಧ್ಯ ಭಾರತ ಮತ್ತು ಪಶ್ಚಿಮ ಭಾರತದ ಗಿರಿಜನರು ಪೂಜಿಸುತ್ತಿದ್ದರು. ಮಹಾರಾಷ್ಟ್ರದ ಕಾಟ್ಕರೀ ಗಿರಿಜನರು ಮತ್ತು ಶಿವಾಜಿಯ ವಂಶಜರೆನ್ನಲಾಗುವ ಭೋಸ್ಲೆಗಳು ಮಹಸೋಬನನ್ನು ಪೂಜಿಸುತ್ತಾರೆ. ನಂದಿತಾ ಕೃಷ್ಣ ಅವರ ಭಾರತದ ಪವಿತ್ರ ಪ್ರಾಣಿಗಳು ಎಂಬ ಕೃತಿಯಲ್ಲಿ ಈ ವಿವರಗಳು ಓದಲು ಸಿಗುತ್ತವೆ.


ದುರ್ಗೆಯ ಕೈಯಲ್ಲಿ ಅಸುರ ಮಹಿಷ ಹತನಾಗುವ ಕತೆಯಲ್ಲಿ ಯಾವ ನೈತಿಕ ಅಂಶವೂ ಇಲ್ಲ. ಭೂಮಿಯ ಫಲವತ್ತತೆಯ ಆವರ್ತ ಆಯಾ ಸುಗ್ಗಿಯೊಂದಿಗೆ ಕೊನೆಯಾಗುತ್ತದೆ. ಭೂಮಿ ಸಸ್ಯಶ್ಯಾಮಲೆಯಾಗಿ ಮತ್ತೆ ಮೈ ತುಂಬಿಕೊಂಡರೆ ಮತ್ತೊಂದು ಸುಗ್ಗಿ. ಮತ್ತೆ ದುರ್ಗೆಯ ಕೈಯಲ್ಲಿ ಹತನಾಗಲು ಅಸುರ ಪುನಃ ಸಿದ್ಧನಾಗುತ್ತಾನೆ. ಮಾನವನ ಅನ್ನದ ತಟ್ಟೆ ಹೀಗೆ ಬರಿದಾಗದೆ ಮತ್ತೆ ಮತ್ತೆ ತುಂಬುತ್ತ ಹೋಗುವುದೇ ಈ ಕತೆಯ ಆಶಯ ಎಂದು ವ್ಯಾಖ್ಯಾನಿಸುತ್ತಾರೆ ಪಟ್ನಾಯಕ್.


ರೂಪಕ ಇಲ್ಲವೇ ಪ್ರತಿಮೆಯ ಮಾತಿನಲ್ಲಿ ಭೂಮಿಯನ್ನು ಆಕಳು ಎಂದಿದ್ದಾರೆ ಪುರಾಣಶಾಸ್ತ್ರಜ್ಞ ದೇವದತ್ ಪಟ್ನಾಯಕ್. ಭೂಮಿಯೇ ದನಿಯೆತ್ತಿ ಪ್ರತಿಭಟಿಸುವ ಮಟ್ಟಿಗೆ ಭೂಮಿಯನ್ನು ಕೊಳ್ಳೆ ಹೊಡೆವ ದುಷ್ಟಶಕ್ತಿಗಳನ್ನು ನಿವಾರಿಸಲಾಗುತ್ತದೆ. ಭೂಮಿಯೆಂಬ ಆಕಳ ಕಣ್ಣೀರನ್ನು ಒರೆಸುವ ವಿಷ್ಣು, ಭೂದಾಹಿ ರಾಜ ಮಹಾರಾಜರ ಒಜ್ಜೆಯನ್ನು ಇಳಿಸುವ ವಚನ ನೀಡುತ್ತಾನೆಂದು ಪುರಾಣಗಳು ಹೇಳುತ್ತವೆ. ಆದರೆ ಇಂದು ಧನದಾಹೀ ಉದ್ಯಮಗಳು ಭೂಮಿಯ ಕೊಳ್ಳೆ ಹೊಡೆಯತೊಡಗಿವೆ. ಸರಕಾರಗಳು ಈ ಸಮತೋಲನವನ್ನು ನಿರ್ಲಕ್ಷಿಸಿವೆ. ಕೊಳ್ಳೆಯ ಕೈಗಳಿಗೆ ಹತಾರುಗಳನ್ನು ಇಡತೊಡಗಿವೆ. ಭೂಮಿಯೆಂಬ ಆಕಳಿನ ರಕ್ಷಣೆಗೆ ಮುಂದಾಗುವ ಸ್ವಯಂಸೇವಾ ಸಂಸ್ಥೆಗಳನ್ನು ಶಿಕ್ಷಿಸತೊಡಗಿವೆ.
ಹೀಗಾಗಿ ಸೊಂಟ ಕಟ್ಟುವುದೇ ಆದರೆ ಅದು ಭೂಮಿಯೆಂಬ ಆಕಳಿನ ರಕ್ಷಣೆಗೆ ಕಟ್ಟಬೇಕು. ಭೂಮಿಯೇ ಇಲ್ಲದೆ ಆಕಳು ಹೇಗೆ ಉಳಿದೀತು

Girl in a jacket
error: Content is protected !!