ಪ್ರಾಮಾಣಿಕತೆ ಮತ್ತು ಬದುಕಿನ ಹಾದಿ…
ಅದು 1996ರ ಏಪ್ರಿಲ್ ಮಾಸ. ಜೆ. ಸಿ. ರಸ್ತೆಯಲ್ಲಿರುವ ಕೆನರಾಬ್ಯಾಂಕ್ ಪ್ರಧಾನಕಚೇರಿಯವರು ಗ್ರಾಮೀಣ ಭಾಗಗಳಲ್ಲಿ ತಾಂತ್ರಿಕ ಅಭಿವೃದ್ದಿಯನ್ನ ಹೇಗೆ ಕಾರ್ಯಗತಗೊಳಿಸಬಹುದು ಎನ್ನುವುದರ ಕುರಿತು ಮೂರು ದಿನಗಳ ಒಂದು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಬೆಂಗಳೂರು ಮೂಲದ ಎಲ್ಲಾ ದೊಡ್ಡ ಕಂಪನಿಗಳ ಪ್ರತಿನಿಧಿಗಳನ್ನೂ ಕಾರ್ಯಾಗಾರಕ್ಕೆ ಆಹ್ವಾನಿಸಿದ್ದರು. ನಾನು ಮತ್ತು ನನ್ನ ಹಿರಿಯ ಸಹೋದ್ಯೋಗಿ ಜೈನ್ ಈ ಕಾರ್ಯಾಗಾರದಲ್ಲಿ ನಮ್ಮ ಕಂಪನಿಯ ಪ್ರತಿನಿಧಿಗಳು ಎಂದು ನಾಮಕರಣ ಮಾಡಲ್ಪಟ್ಟಿದ್ದೆವು. ಕಂಪನಿಯವತಿಯಿಂದ ಕಾರ್ಯಾಗಾರಕ್ಕೆ ಬಂದ ಎಲ್ಲಾ ಪ್ರತಿನಿಧಿಗಳಿಗೆ ಸಣ್ಣ ಪುಟ್ಟ ಉಡುಗೊರೆಗಳನ್ನ ಕೊಡಬೇಕು ಎಂದು ಆಡಳಿತವರ್ಗ ನಿರ್ಧರಿಸಿದ್ದರ ಪರಿಣಾಮವಾಗಿ ಈ ಸಂಬಂಧದ ಮುಂಗಡ ಹಣವನ್ನು ಪಡೆಯುವ ಸಲುವಾಗಿ ನಾನು ಫೈನಾನ್ಸ್ ವಿಭಾಗದ ಅಧಿಕಾರಿಯಾಗಿದ್ದ ಶ್ರೀ ಅಶ್ವತ್ಥ ನಾರಾಯಣರಾವ್ (ANR) ಅವರನ್ನು ಸಂಪರ್ಕಿಸಿದೆ.
ANR ನನಗೆ ಅಪರಿಚಿತರೇನಲ್ಲ. ನಾನು ಹನುಮಂತ ನಗರಕ್ಕೆ ಪ್ರಯಾಣಿಸುತ್ತಿದ್ದ ಕಂಪನಿ ಬಸ್ನಲ್ಲಿಯೇ ಅವರೂ ದಿನಂಪ್ರತಿ ಪ್ರಯಾಣಿಸುತ್ತಿದ್ದರು. ವಯಸ್ಸಿನಲ್ಲಿ ನನಗಿಂತ ಮೂವತ್ತು ವರ್ಷಗಳಿಗೂ ಹಿರಿಯರಾಗಿದ್ದರಿಂದ ನಮ್ಮಿಬ್ಬರ ಮಧ್ಯೆ ಸುಮಾರು ಎರಡು ವರ್ಷಗಳಿಂದಲೂ ಯಾವ ರೀತಿಯ ಮಾತುಕಥೆಯೂ ಇರಲಿಲ್ಲ. ಆದರೆ ನಾಲ್ಕೈದು ಬಾರಿ ಕೆಲಸದ ನಿಮಿತ್ತ ಅವರೊಡನೆ ಮಾತನಾಡಿದ್ದ ನೆನಪು. ಆ ಎಲ್ಲಾ ಸಂದರ್ಭಗಳಲ್ಲೂ ನನಗೆ ANR ಕಡೆಯಿಂದ ಒಳ್ಳೆಯ ಸ್ಪಂದನೆಯೇ ಸಿಕ್ಕ ನೆನಪು.
ANR ನೆನಪಾದ ಹೊತ್ತು ಅವರ ಗಿಣಿಮೂಗು ನೆನಪಾಗುತ್ತದೆ. ಆ ಹೊತ್ತಿಗೆ ಅವರ ವಯಸ್ಸು 55ರ ಆಸುಪಾಸಿನಲ್ಲಿದ್ದೀತು. ಬೋಡಾದ ತಲೆಯ ಹಿಂಭಾಗದ ಕೂದಲುಗಳು ತುಸು ಉದ್ದವೇ ಎನ್ನುವಂತೆ ಶರ್ಟಿನ ಕಾಲರ್ ಮೇಲೂ ಹರಡಿದ್ದವು. ANR ಹಸನ್ಮುಖಿ ಮತ್ತು ಮಿತಭಾಷಿ. ತಮ್ಮ ಕೆಲಸದಲ್ಲಿ ತುಂಬಾ ಹುಷಾರು. ಒಂದರಘಳಿಗೆಯೂ ಸಮಯವನ್ನು ವ್ಯಯಿಸದೆ ತಲೆಬಗ್ಗಿಸಿ ಕೆಲಸ ಮಾಡುವ ANR ನೆನಪೇ ನನ್ನ ತಲೆಯಲ್ಲಿ ಈಗ ಮೂಡುತ್ತಿರುವುದು. ANRಗೆ ತಮ್ಮ ವಿಭಾಗದ ನಾಗಭೂಷಣ್ ಬಿಟ್ಟರೆ ಬೇರೆ ಯಾವ ಹೇಳಿಕೊಳ್ಳುವಂತಹ ಸ್ನೇಹಿತರೂ ಇದ್ದದ್ದನ್ನು ನಾನು ಕಾಣೆ. ANR ಅವರ ಸಹೋದ್ಯೋಗಿ ನಾರಾಯಣ್ ಅವರೂ ನಮ್ಮ ಬಸ್ ನಲ್ಲಿಯೇ ಸಂಚರಿಸುತ್ತಿದ್ದರೂ ANR ಮತ್ತು ನಾರಾಯಣ್ ಮಧ್ಯೆ ಯಾವತ್ತೂ ಸಂಭಾಷಣೆ ನಡೆದಿದ್ದುದ್ದನ್ನೇ ನಾನು ಕಂಡಿರಲಿಲ್ಲ. ಬಸ್ ನ ಮಧ್ಯ ಭಾಗದ ಚಕ್ರದ ಮೇಲಿನ ಸೀಟನ್ನು ಒಂಟಿಯಾಗಿ ANR ಆಕ್ರಮಿಸುವ ಪರಿಪಾಠವಿದ್ದಲ್ಲಿ ತಮ್ಮ ಗೆಳೆಯರೊಂದಿಗೆ ನಾರಾಯಣ್ ಹಿಂದಿನ ಸೀಟ್ನಲ್ಲಿ ವಿರಾಜಮಾನರಾಗಿರುತ್ತಿದ್ದರು.
ಕಂಪನಿ ಬಸ್ ಗಳಲ್ಲಿ ಹಿಂದಿನ ಸೀಟುಗಳ ಬೇಡಿಕೆ ಅಗಾಧವಾಗಿರುತ್ತದೆ, ಸುಮಾರು ಇಪ್ಪತ್ತೈದು ವರ್ಷಗಳಿಗೆ ಮೀರದ ಸೇವಾವಧಿಯನ್ನ ಮುಗಿಸಿದ ಸಿಬ್ಬಂದಿಗಷ್ಟೇ ಈ ಸೀಟುಗಳು ಮೀಸಲು ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿರುತ್ತದೆ. ಇದರ ಪ್ರತ್ಯಕ್ಷ ಅನುಭವ ನನಗೂ ಆಗಿದೆ, ನನ್ನಂತಹ ಹೊಸಬನಿಗೆ ಹಿಂದಿನ ಸೀಟುಗಳನ್ನ ತಪ್ಪಿಸುವ ಅನೇಕ ಹುನ್ನಾರಗಳು ಕಂಪನಿಯ ಹಿರಿಯರಲ್ಲಿ ಅಡಕವಾಗಿರುತ್ತದೆ.
ANR ತಮ್ಮ ಟೇಬಲ್ ಮುಂದೆ ನಿಂತ ನನ್ನನ್ನು ತಲೆ ಎತ್ತಿ ನೋಡಿದವರು ಕಣ್ಣುಗಳಲ್ಲಿಯೇ ಏನು? ಎನ್ನುವಂತೆ ಪ್ರಶ್ನಾರ್ಥಕ ನೋಟ ಬೀರಿದರು. ನಾನು ನಮ್ಮ ವಿಭಾಗದ ಮುಖ್ಯಸ್ಥ ಸ್ವಾಮಿಯವರು ಸಹಿ ಮಾಡಿದ್ದ ಪೇಮೆಂಟ್ ವೋಚರ್ ನ್ನು ANRಗೆ ಕೊಟ್ಟೆ. ಸುಮಾರು ಮುನ್ನೂರು ರೂಪಾಯಿಗಳ ವೋಚರ್ ಅದು. ಒಂದು ಕ್ಷಣ ವೋಚರ್ ವೀಕ್ಷಿಸಿದ ANR ಸಹಜವಾಗಿಯೇ ಎಲ್ಲಿ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದರು. ವಿಷಯವನ್ನು ನಾನು ವಿವರಿಸಲಾಗಿ ಮೂರೂ ದಿನವೂ ಕೆನರಾ ಬ್ಯಾಂಕ್ ಹೆಡ್ ಆಫೀಸ್ ನಲ್ಲಿಯೇ ಇರುತ್ತೀರಾ? ಎಂದು ಪ್ರಶ್ನಿಸಿದರು. ನಾನು ಇಲ್ಲ ಸರ್, ಮೊದಲ ದಿನ ಮಾತ್ರ ಕೆನರಾ ಬ್ಯಾಂಕ್ನಲ್ಲಿರುತ್ತೇವೆ, ಉಳಿದ ಎರಡು ದಿನಗಳು ಕನಕಪುರದ ಹಳ್ಳಿಗಳಿಗೆ ಭೇಟಿ ಕೊಡುತ್ತೇವೆ ಎಂದೆ. ANR ಕಣ್ಣುಗಳಲ್ಲಿ ಒಂದು ಕ್ಷಣ ವಿಚಿತ್ರವಾದ ಮಿಂಚನ್ನು ಕಂಡೆ. ಮರು ಮಾತನಾಡದೆ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಅವರ ವಿಭಾಗದಿಂದ ಹೊರಬಂದೆ.
ಕೆನರಾ ಬ್ಯಾಂಕ್ ನ ಕಾರ್ಯಗಾರವನ್ನ ಮುಗಿಸಿ ಮತ್ತೆ ಕಚೇರಿಯ ಕೆಲಸಕ್ಕೆ ಹಾಜರಾಗಿ ಸಂಜೆಯ ಬಸ್ನಲ್ಲಿ ಏರಿದವನಿಗೆ ಒಂದು ಸಖೇದಾಶ್ಚರ್ಯ ಕಾಡಿತ್ತು. ಮುಂದಿನ ಸೀಟೊಂದರಲ್ಲಿ ಅಸೀನನಾಗಲು ಹೊರಟವನಿಗೆ ANR ಅವರು ಅವರೊಟ್ಟಿಗೆ ಕುಳಿತುಕೊಳ್ಳಲು ಆಹ್ವಾನಿಸಿದರು. ಬಸ್ ನಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಿಬ್ಬಂದಿ ಬಂದಿರಲಿಲ್ಲ. ಫೈನಾನ್ಸ್ ವಿಭಾಗದ ವಸಂತಾ ಅವರ ಮುಖದ ಮೇಲೆ ಮೂಡಿದ ಆಶ್ಚರ್ಯ ನನ್ನ ಕಣ್ಣಗಳನ್ನ ತಪ್ಪಿಸಲಾಗಳಿಲ್ಲ. ನಾನೂ ಕೂಡಾ ಒಂದು ರೀತಿಯ ಆಶ್ಚರ್ಯದೊಂದಿಗೆ ANR ಪಕ್ಕದ ಸೀಟಿನಲ್ಲಿ ಅಸೀನನಾದೆ. ಬಸ್ಸಿನಲ್ಲಿ ಇಲ್ಲಿಯವರೆಗೆ ದೊರೆಯದ ಸ್ಥಾನವೊಂದು ನನಗೆ ದೊರೆತ ವಿಚಿತ್ರವಾದ ಖುಷಿಯೊಂದು ನನ್ನದಾಗಿತ್ತು.
ಬಸ್ ಸಂಚರಿಸುವುದಕ್ಕೆ ಮೊದಲಾದ ಹಾಗೆ ನಿಧಾನವಾಗಿ ANR ಮಾತನಾಡಲಿಕ್ಕೆ ಶುರುಮಾಡಿದರು. ನನ್ನ ಕಾರ್ಯಾಗಾರದ ಬಗ್ಗೆ ವಿಚಾರಿಸಿದವರು ಕನಕಪುರದ ಯಾವ ಯಾವ ಹಳ್ಳಿಗಳನ್ನು ಭೇಟಿ ಮಾಡಿದಿರಿ? ಎಂದು ಕೇಳಿದರು. ನಾನು ನಾವು ಭೇಟಿ ಮಾಡಿದ ಹಳ್ಳಿಗಳ ಹೆಸರನ್ನು ಹೇಳತೊಡಗಿದೆ. ಹಾರೋಹಳ್ಳಿ, ದಾಸರಪಾದರಹಳ್ಳಿ ಮತ್ತು ಹಂಚಿಗುಳಿ ಎನ್ನುವ ಹಳ್ಳಿಗಳನ್ನು ಸಂದರ್ಶಿಸಿದ್ದಾಗಿ ಹೇಳಿದೆ. ತಟ್ಟನೆ ANR ಹಲನಾಥಕ್ಕೇನಾದರೂ ಹೋಗಿದ್ದೀರಾ? ಎಂದರು. ನಾನು ಇಲ್ಲವೆನ್ನುವ ಉತ್ತರಕೊಡಲು ನಿರಾಶೆಯ ಭಾವವೊಂದು ಅವರ ಮುಖದ ಮೇಲೆ ಹಾಯ್ದು ಹೋಗಿದ್ದನ್ನು ಗಮನಿಸಿದೆ.
ಬಸ್ ಮೊದಲು ತ್ಯಾಗರಾಜನಗರನ್ನು ಹಾಯ್ದು ಹನುಮಂತನಗರಕ್ಕೆ ಹೋಗುತ್ತಿತ್ತು. ತ್ಯಾಗರಾಜನಗರದ ಕಟ್ಟೆಬಳಗದ ಬಳಿ ಇಳಿದುಕೊಂಡ ANR ನಾಳೆ ಮತ್ತೆ ಸಿಗುವಾ ಎಂದು ಬಸ್ಸನಿಂದ ಇಳಿದರು. ಅಂದಿನಿಂದ ಬೆಳಗು ಮತ್ತು ಬೈಗಿನಲ್ಲಿ ANR ಪಕ್ಕದಲ್ಲಿಯೇ ಕುಳಿತು ಕಚೇರಿಗೆ ಪ್ರವಾಸ ಮಾಡಬೇಕಾದ ಅನಿವಾರ್ಯತೆ ನನ್ನ ಪಾಲಿನದಾಯಿತು. ಬೆಳಿಗ್ಗೆ ನಾನು ಮೊದಲು ಬಸ್ ಹತ್ತಿದರೆ ನನ್ನ ಮಗ್ಗುಲಿನ ಸೀಟಿನಲ್ಲಿ ANR ಕುಳಿತುಕೊಳ್ಳುವುದು ರೂಢಿಯಾದರೆ ಸಂಜೆ ಮೊದಲೇ ಬಸ್ ಏರುತ್ತಿದ್ದ ಅವರ ಮಗ್ಗುಲಿನ ಸೀಟು ನನ್ನ ಪಾಲಿನದು. ಇದು ಸಹಪ್ರಯಾಣಿಕರಿಗೆ ವಿಚಿತ್ರ ಎನ್ನಿಸಿರಬೇಕು ಎನ್ನುವ ಅನುಮಾನದಲ್ಲಿ ನಾನು ಹಲವಾರು ಸಲ ANR ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳದೇ ಹೋದ ಸಂದರ್ಭಗಳಲ್ಲಿ ANR ನನ್ನನ್ನು ಬಲವಂತವಾಗಿ ಕರೆದು ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಿದೆ. ಯಾರನ್ನೂ ವಿಶೇಷವಾಗಿ ಹಚ್ಚಿಕೊಳ್ಳದ,. ತಮ್ಮ ಪಾಡಿಗೆ ತಾವಿರುವ ANR ನನ್ನನ್ನ ಈ ಪರಿ ಹಚ್ಚಿಕೊಂಡಿರುವುದು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು.
ನನ್ನ ಮತ್ತು ANR ಅವರ ಸಾಂಗತ್ಯದ ಸುಮಾರು ಆರು ತಿಂಗಳ ಅವಧಿಯಲ್ಲಿ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನ ಸಂಗ್ರಹಿಸಿದೆ. ತ್ಯಾಗರಾಜ ನಗರದ ಕಟ್ಟೆಬಳಗದ ಸಮೀಪ ಇರುವ 120×80 ಅಡಿಯ ವಿಶಾಲವಾದ ಬಾಡಿಗೆ ಮನೆಯಲ್ಲಿ ANR ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಇವರ ಪತ್ನಿ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾದ ಕಾಷ್ಠಶಿಲ್ಪಿ. ಹಾಗಾಗಿ ತಾವು ಮದುವೆಯಾದ ಹೊತ್ತೇ ಪತ್ನಿಯ ಹವ್ಯಾಸಕ್ಕೆ ತೊಂದರೆಯಾಗದಿರಲಿ ಎಂದು ವಿಶಾಲವಾದ ಕಾಂಪೌಂಡ್ ಹೊಂದಿದ ಮನೆಯನ್ನು ಬಾಡಿಗೆಗಾಗಿ ಆಯ್ಕೆಮಾಡಿದ್ದರು. ANR ದಂಪತಿಗಳಿಗೆ ಮಕ್ಕಳಿರಲಿಲ್ಲ. ದೊಡ್ಡದಾದ ಸೈಟಿಗೆ ಚಿಕ್ಕದು ಎಂದೇ ಹೇಳಬಹುದಾದ ಮನೆಯಲ್ಲಿ ಸುಮಾರು ಇಪ್ಪತೈದು ವರ್ಷಗಳಿಂದ ವಾಸವಿದ್ದರು. ಪತ್ನಿಯ ಕಾಷ್ಠಶಿಲ್ಪ ಹವ್ಯಾಸ ನಿರಾತಂಕವಾಗಿ ನಡೆಯುತ್ತಿದ್ದುದರಿಂದ ಸ್ವಂತ ಮನೆ ಮಾಡಿಕೊಳ್ಳುವ ಗೋಜಿಗೇ ANR ಹೋಗಿರಲಿಲ್ಲ.
ಹೀಗೆಯೇ ನಮ್ಮ
ಗೆಳೆತನ ಹುರಿಗಟ್ಟುತ್ತಿದ್ದ ಹಾಗೆ ANR ನನ್ನನ್ನು ಒಂದು ಭಾನುವಾರ ಅವರ ಮನೆಗೆ ಆಹ್ವಾನಿಸಿದರು. ನಾಗಭೂಷಣನೂ ಬರುತ್ತಿರುವುದಾಗಿ ತಿಳಿಸಿದರು. ANR ಆಹ್ವಾನಿಸಿದ ಭಾನುವಾರದಂದು ನಾನು ಸುಮಾರು ಹನ್ನೆರೆಡು ಘಂಟೆಯ ವೇಳೆಗೆ ಅವರ ಮನೆಗೆ ಹೊರಟೆ. ಊಟವನ್ನ ತಮ್ಮ ಮನೆಯಲ್ಲಿಯೇ ಮಾಡಬೇಕು ಎಂದು ANR ಮೊದಲೇ ಆಗ್ರಹಿಸಿದ್ದುದರಿಂದ ಇವತ್ತು ಒಂದಾದರೂ ಭಾನುವಾರ ನಿರ್ಮಲದರ್ಶಿನಿ ಊಟ ತಪ್ಪಿದ ಖುಷಿಯಲ್ಲಿ ANR ಮನೆ ತಲುಪಿದೆ. ನಾನು ಹೋಗುವ ಹೊತ್ತಿಗಾಗಲೇ ನಾಗಭೂಷಣ್ ANR ಮನೆಯಲ್ಲಿದ್ದ.
ಅದೂ ಇದೂ ಮಾತನಾಡುತ್ತಾ ಸ್ವಲ್ಪ ಸಮಯ ಕಳೆದ ನಂತರ ಹೆಂಡತಿ ತನ್ನ ಕೆಲಸದಲ್ಲಿ ನಿರತವಾಗಿದ್ದನ್ನು ಖಾತ್ರಿ ಪಡಿಸಿಕೊಂಡವರು ನಮ್ಮನ್ನು ಕುರಿತು ಮೆಲುಮಾತುಗಳಲ್ಲಿ ಸಂಬೋಧಿಸತೊಡಗಿದರು.
ಸುಮಾರು ಅರ್ಧಗಂಟೆ ನಡೆದ ಮಾತುಕತೆಗಳಲ್ಲಿ ANR ತಮ್ಮ ಬಗ್ಗೆ ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ಬಿಚ್ಚಿಟ್ಟರು. ANR ವಾಸವಾಗಿರುವ ಬಾಡಿಗೆ ಮನೆ ಮಾಲೀಕ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ತನ್ನ ಮನೆಯ ಕಡೆಯೇ ಬಂದಿಲ್ಲವಂತೆ. ಪ್ರಾರಂಭದ ನಾಲ್ಕೈದು ವರ್ಷ ನಿಯಮಿತವಾಗಿ ತಿಂಗಳಿಗೊಮ್ಮೆ ಬಾಡಿಗೆ ಹಣವನ್ನು ಪಡೆಯಲು ಬರುತ್ತಿದ್ದ ಮನೆ ಮಾಲೀಕ ಚಿಕ್ಕತಾಯಣ್ಣ ನಂತರದ ವರ್ಷಗಳಲ್ಲಿ ಮನೆಯ ಕಡೆಯೇ ಬಂದಿಲ್ಲವಂತೆ. ಚಿಕ್ಕತಾಯಣ್ಣ ತನ್ನ ಊರು ಕೇರಿಯ ಬಗ್ಗೆ ಸರಿಯಾದ ಮಾಹಿತಿಯನ್ನೂ ಕೊಟ್ಟಿಲ್ಲವಂತೆ. ಅನೇಕ ಬಾರಿ ANR ಮಾಲೀಕರ ಹಳ್ಳಿ, ವಿಳಾಸದ ಬಗ್ಗೆ ಕೇಳಿದರೂ ಚಿಕ್ಕತಾಯಣ್ಣ ಸರಿಯಾದ ವಿಳಾಸವನ್ನು ಕೊಟ್ಟಿರಲಿಲ್ಲವಂತೆ. ತನ್ನ ಊರು ಹಲನಾಥ ಎಂದು ಒಮ್ಮೆ ಪ್ರಾಸಂಗಿಕವಾಗಿ ಹೇಳಿದ್ದನೇ ಹೊರತು ಸರಿಯಾದ ವಿಳಾಸವನ್ನಾಗಲಿ ಅಥವಾ ತನ್ನ ವಾರಸುದಾರರ ಬಗೆಗಿನ ಮಾಹಿತಿಯನ್ನಾಗಲೀ ಕೊಟ್ಟೇ ಇರಲಿಲ್ಲವಂತೆ. ANR ಬಾಡಿಗೆಗಿದ್ದ ಮನೆ ಆ ಕಾಲಕ್ಕೇ ಏನಿಲ್ಲವೆಂದರೂ ಇಪ್ಪತ್ತು ಲಕ್ಷ ರೂಪಾಯಿ ಬಾಳುತ್ತಿತ್ತು. ಇಂದು ಅದರ ಬೆಲೆ ಹತ್ತು ಹನ್ನೆರಡು ಕೋಟಿ ದಾಟೀತು. ಇಂತಹ ಬೆಲೆ ಬಾಳುವ ಮನೆಯನ್ನು ನೋಡಲು ಈ ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ಮನೆ ಮಾಲೀಕನಾಗಲೀ ಅವನ ವಾರಸುದಾರರಾಗಲೀ ತಿರುಗಿ ನೋಡಿಲ್ಲವೆಂದು ANR ಅತೀವ ಚಿಂತೆಗೊಳಗಾದವರಂತೆ ಕಂಡರು. ಬೇರೆಯವರ ಹಣವನ್ನು ಕಂಡರೆ ಚೇಳು ಕಂದವರಂತೆ ಆಡುತ್ತಿದ್ದ ANR ಪ್ರತೀ ತಿಂಗಳ ಬಾಡಿಗೆ ಹಣವನ್ನು ಬ್ಯಾಂಕಿನಲ್ಲಿ ಒಂದು ಬೇರೆಯದೇ ಆದ ಅಕೌಂಟ್ ಗೆ ಜಮಾ ಮಾಡುತ್ತಿರುವುದಾಗಿ ತಿಳಿಸಿದರು. ANR ಸ್ವಂತ ಮನೆಯನ್ನು ಮಾಡಿಕೊಳ್ಳದೇ ಇರುವುದಕ್ಕೆ ಇದು ಒಂದು ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದು ನಾನು ಭಾವಿಸಿದೆ.
ಈ ಇಪ್ಪತ್ತು ವರ್ಷಗಳಲ್ಲಿ ಚಿಕ್ಕತಾಯಣ್ಣನ ಗುರುತು ಪತ್ತೆ ಹಚ್ಚುವ ಯಾವ ಪ್ರಯತ್ನಗಳನ್ನೂ ANR ಬಿಟ್ಟವರಲ್ಲ. ವಾರಾಂತ್ಯದಲ್ಲಿ ಹಲನಾಥಕ್ಕೆ ಹಲವಾರು ಬಾರಿ ಹೋಗಿ ಬಂದಿದ್ದಾರೆ. ಕೆಲವು ಬಾರಿ ಶನಿವಾರ ರಾತ್ರಿ ಕನಕಪುರದಲ್ಲಿಯೇ ಉಳಿದು ಭಾನುವಾರ ಅಲ್ಲೆಲ್ಲಾ ಅಡ್ಡಾಡಿ ಚಿಕ್ಕತಾಯಣ್ಣನನ್ನು ಹುಡುಕಿ ನಿರಾಶೆಯಿಂದ ಮನೆಗೆ ಮರಳಿದ್ದೂ ಇದೆ. ANR ಮನೆ ಬಿಟ್ಟು ಹೋಗುವ ಶನಿವಾರದ ಮುಂಜಾನೆಯಲ್ಲಿ ಹೊಸ ಶಿಲ್ಪವೊಂದರ ಕೆತ್ತನೆಗೆ ತೊಡಗುತ್ತಿದ್ದ ಅವರ ಹೆಂಡತಿಯ ಕಾಷ್ಠ ಶಿಲ್ಪ ಭಾನುವಾರದ ರಾತ್ರಿಯ ವೇಳೆಗೆ ಒಂದು ಹಂತದ ಪರಿಪೂರ್ಣತೆಯನ್ನು ಸಾಧಿಸಿದರೆ ಶನಿವಾರದ ಮುಂಜಾನೆಯ ಎಲ್ಲಾ ಆಶಾಕಿರಣಗಳನ್ನ ಭಾನುವಾರ ರಾತ್ರಿ ಮನೆಗೆ ಬರುವ ವೇಳೆಗೆ ANR ಕಳೆದುಕೊಳ್ಳುತ್ತಿದ್ದರು. ಮತ್ತೆ ಮುಂಬರುವ ವಾರಾಂತ್ಯದ ನಿರೀಕ್ಷೆಯಲ್ಲಿ ಕಳೆಯುತ್ತಿದ್ದರು. ಇದು ವರ್ಷಗಳಲ್ಲಿ ANR ಅವರ ಒಂದು ಅಭ್ಯಾಸವೇ ಆಗಿ ಹೋಯ್ತು.
ಇತ್ತೀಚೆಗೆ ANR ಆರೋಗ್ಯ ಮೊದಲಿನ ಹಾಗಿರಲಿಲ್ಲ. ಮನೆಯನ್ನು ಮಾಲೀಕನಿಗೆ ಹಿಂದಿರುಗಿಸುವಲ್ಲಿ ಅವರಿಗೆ ಆದ ಹಿನ್ನೆಡೆ ANR ನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಇನ್ನಿಲ್ಲದಂತೆ ಘಾಸಿಗೊಳಿಸಿತ್ತು. ತಮ್ಮದಲ್ಲದ ಮನೆಯನ್ನು ಅದರ ನಿಜವಾದ ವಾರಸುದಾರರಿಗೆ ಮರಳಿಕೊಡುವ ತಮ್ಮ ಸಾಮರ್ಥ್ಯದ ಬಗ್ಗೆಯೇ ಅವರಿಗೆ ಅನುಮಾನಗಳು ಕಾಡತೊಡಗಿದ್ದವು.
ಇದೇ ವಿಷಯದಲ್ಲಿ ANR ನನ್ನ ಮತ್ತು ನಾಗಭೂಷಣ್ ನೆರವನ್ನು ಯಾಚಿಸಿದ್ದು. ಇನ್ನೂ ಬಿಸಿರಕ್ತದ ತರುಣರಾಗಿಯೇ ಇದ್ದ ನಾವು ಅವರಿಗೆ ಮಾಲೀಕರನ್ನು ಹುಡುಕುವ ಕಾರ್ಯದಲ್ಲಿ ನೇರವಾದೇವು ಎನ್ನುವುದು ANR ನಂಬಿಕೆ. ಮೇಲಾಗಿ ಆ ಹೊತ್ತಿಗೆ ನಾವಿಬ್ಬರೂ ಅವಿವಾಹಿತರು. ನಾಗಭೂಷಣ್ ವಿಷಯದಲ್ಲಿ ಇನ್ನೂ ಒಂದು ಧನಾತ್ಮಕ ಅಂಶ ANR ಗಮನ ಸೆಳೆದಿರಬೇಕು ಎನ್ನಿಸುತ್ತದೆ, ನಾಗಭೂಷಣ್ ಭಾವ ಒಂದು ಬಾಡಿಗೆ ಕಾರ್ ಓಡಿಸುವ ಸಂಸ್ಥೆ ನಡೆಸುತ್ತಿದ್ದರು ಮತ್ತು ನಾಗಭೂಷಣ್ ಕೂಡ ಬಹಳ ಒಳ್ಳೆಯ ಡ್ರೈವರ್. ಇಲ್ಲಿಯವರೆಗೆ ವಾರಾಂತ್ಯಗಳಲ್ಲಿ ಬಸ್ ಗಳ ಮುಖಾಂತರವೇ ಓಡಾಡಿ ಚಿಕ್ಕತಾಯಣ್ಣನನ್ನು ಹುಡುಕಿ ಅಲೆದಿದ್ದ ANR ಗೆ ನಾಗಭೂಷಣ್ ತನ್ನ ಕಾರಿನ ಮುಖೇನ ಹೆಚ್ಚು ಅನುಕೂಲ ಕರವಾದಾನು ಎನಿಸಿರಬೇಕು.
ANR ಪತ್ನಿ ಅಂಬುಜಾಕ್ಷಿಯು ಮನೆ ಒಳಗೆ ಬಂದಿದ್ದುದರಿಂದ ನಮ್ಮ ಮಾತುಕತೆಗೆ ಅಚಾನಕ್ ಬ್ರೇಕ್ ಬಿದ್ದಿತು. ANR ಮಾಲೀಕರನ್ನು ಹುಡುಕಿ ಅಳೆಯುವುದು ಅಂಬುಜಾಕ್ಷಿಗೆ ಸುತಾರಾಂ ಇಷ್ಟವಿರಲಿಲ್ಲ ಎನ್ನುವುದು ನನಗೆ ಆ ನಂತರವಷ್ಟೇ ತಿಳಿದಿದ್ದು. ANR ಮನೆಯ ಗಡದ್ದಾದ ಬ್ರಾಹ್ಮಣ ಭೋಜನವನ್ನು ಹೊಟ್ಟೆ ತುಂಬಾ ಉಂಡ ನಾನು ನನ್ನ ಕೋಣೆ ಸೇರಿಕೊಂಡಾಗ ಸಮಯ ಮೂರರ ಮುಳ್ಳನ್ನು ದಾಟಿಯಾಗಿತ್ತು.
ಮಾರನೇ ದಿನ ಅಂದರೆ ಸೋಮವಾರ ಮಧ್ಯಾಹ್ನ ನಾವು ಮೂರೂ ಜನ ಅಂದರೆ ANR, ನಾಗಭೂಷಣ್ ಮತ್ತು ನಾನು ಕಚೇರಿಯ ಕ್ಯಾಂಟೀನ್ ನಲ್ಲಿ ಕುಳಿತು ಬರುವ ವಾರಾಂತ್ಯದಲ್ಲಿ ಚಿಕ್ಕ ತಾಯಣ್ಣನನ್ನು ಹುಡುಕಬೇಕಾದ ತಯಾರಿಗಳ ಬಗ್ಗೆ ಮಾತನಾಡತೊಡಗಿದೆವು. ತಾನು ಪುಕ್ಕಟೆಯಾಗಿ ಕಾರನ್ನು ತರುತ್ತೇನೆ ಎಂದು ಹೇಳಿದ ನಾಗಭೂಷಣ್ ಮಾತಿಗೆ ANR ಬಿಲ್ ಕುಲ್ ಒಪ್ಪಲಿಲ್ಲ. ಇದು ನನಗೋಸ್ಕರ ಮಾಡುತ್ತಿರುವ ಕೆಲಸ, ವಾರಾಂತ್ಯದ ಎರಡು ದಿನಗಳ ರಜೆಯನ್ನು ನೀವು ನನಗಾಗಿ ಕೊಡುತ್ತಿರುವುದೇ ಸಾಕು, ನನ್ನ ಹಣದಲ್ಲಿ ನೀವುಗಳು ಬರುವುದಾದರೆ ಬನ್ನಿ, ಇಲ್ಲ ಎಂದರೆ ಇಷ್ಟು ವರ್ಷಗಳು ಮಾಡಿದ ರೀತಿಯಲ್ಲಿಯೇ ನಾನು ನನ್ನ ದಾರಿಯನ್ನು ನೋಡಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ನುಡಿದ ANR ಮಾತಿಗೆ ಮರು ನುಡಿಯಲು ನಮ್ಮಿಬ್ಬರಿಗೆ ಸಾಧ್ಯವಾಗಲಿಲ್ಲ.
ū
ವಾರಾಂತ್ಯದ ಶನಿವಾರ ಬೆಳಿಗ್ಗೆ ನಾವು ಮೂವರೂ ನಾಗಭೂಷಣ್ ತಂದ ಕಾರಿನಲ್ಲಿ ಕನಕಪುರದ ಕಡೆ ಹೊರಟೆವು. ನಮ್ಮ ಉತ್ಸಾಹ ನೋಡಿ ANR ಕೂಡ ಉತ್ಸಾಹಿತರಾದಂತೆ ತೋರಿತು. ಹೆಚ್ಚೂ ಕಡಿಮೆ ಚಿಕ್ಕತಾಯಣ್ಣ ಅಥವಾ ಅವರ ವಾರಾಸುದಾರರನ್ನ ಹುಡುಕುತ್ತೇನೆ ಎನ್ನುವ ಭರವಸೆಯನ್ನು ಎಂದೋ ಕಳೆದುಕೊಂಡಿದ್ದ ANR ಮನಕ್ಕೆ ಈ ಕಾರ್ಯದಲ್ಲಿ ನಮ್ಮಿಬ್ಬರ ಜೋಡಣೆ ಹೊಸ ಹುಮ್ಮಸ್ಸನ್ನು ತಂದುಕೊಟ್ಟಿರಬೇಕು. ಸಾಕಷ್ಟು ಬಾರಿ ANR ವಿಫಲ ಪ್ರಯತ್ನ ನಡೆಸಿದ ಹಲನಾಥವನ್ನ ಬಿಟ್ಟು ನಾವು ಕನಕಪುರದ ಉಳಿದ ಹಳ್ಳಿಗಳ ಕಡೆ ನಮ್ಮ ಹುಡುಕಾಟವನ್ನ ಕೇಂದ್ರೀಕರಿಸಬೇಕು ಅಂದುಕೊಂಡಿದ್ದರ ಪರಿಣಾಮವಾಗಿ ನಾವು ‘ಹೆಚ್’ ನಿಂದ ಶುರುವಾಗುವ ಕನಕಪುರ ಹಳ್ಳಿಗಳ ಭೇಟಿಗೆ ನಿರ್ಧರಿಸಿದೆವು. ಈ ಹೊತ್ತಿಗಾಗಲೇ ಕನಕಪುರ ಹಳ್ಳಿಗಳ ನಾಮಗಳ ನಡೆದಾಡುವ ಕೋಶವೇ ಆದ ANR ನಮಗೆ ಹಲಸಿನಮರದಹಳ್ಳಿ, ಹಲಸೂರು, ಹನಕದಾಬೂರು, ಹನುಮನಹಳ್ಳಿ, ಹಂಚಿಗುಲಿ, ಹರಾವತಿಪಾಳ್ಯ, ಹರಿಹರ, ಹೆಬ್ಬಿದರಮೆಟ್ಲು, ಹೆಗ್ಗನೂರು, ಹೆಲಿಗೇಹಳ್ಳಿ, ಹೂಲ್ಯ, ಹೊರಳಗಲ್ಲು ಮುಂತಾದವೇ ಹತ್ತಾರು ಹಳ್ಳಿಗಳ ಹೆಸರನ್ನು ಹೇಳಿದರು. ಈ ಎಲ್ಲಾ ಹಳ್ಳಿಗಳನ್ನೂ ಭೇಟಿ ಮಾಡುವುದು ಒಂದು ವಾರಾಂತ್ಯದಲ್ಲಿ ಅಸಾಧ್ಯವಾದ ಕಾರಣದಿಂದಾಗಿ, ಪ್ರತೀವಾರ ಮೂರ್ನಾಲ್ಕು ಹಳ್ಳಿಗಳನ್ನು ಮಾತ್ರ ಸಂದರ್ಶಿಸುವ ನಿರ್ಣಯಕ್ಕೆ ಬಂದೆವು. ನಮ್ಮ ಈ ಪ್ರಯತ್ನದಲ್ಲಿ ಒಂದೇ ಹೆಸರಿನಂತೆ ತೋರುವ ಹಾರೋಹಳ್ಳಿ, ಹಾರೋಶಿವನಹಳ್ಳಿ ಮತ್ತು ಹೊನ್ನಹಳ್ಳಿ, ಹೊನ್ನಿಗನಹಳ್ಳಿ ದೊಡ್ಡ ಸಮಸ್ಯೆಯಂತೆ ಕಂಡರೆ ನಿಜವಾದ ಪ್ರತಿರೋಧವನ್ನು ಒಡ್ಡಿದ ಹಳ್ಳಿಗಳು ಹೊಸದೊಡ್ಡಿ, ಹೊಸದುರ್ಗ, ಹೊಸಗಬ್ಬಸಿ, ಹೊಸಹಳ್ಳಿ ಮತ್ತು ಹೊಸಕೋಟೆ. ನಮ್ಮಸಮಸ್ಯೆ ಸಾಕಷ್ಟು ಹಳೆಯದಾದರೂ ‘ಹೊಸ’ ಎನ್ನುವ ನಾಮವನ್ನು ಹೊತ್ತ ಈ ಹಳ್ಳಿಗಳು ಭಾರತದ ಸಂಕ್ಲಿಷ್ಟ ಗ್ರಾಮೀಣ ಪರಿಸರದ ನಿಜವಾದ ಪ್ರತಿನಿಧಿಗಳಂತೆ ತೋರಿಬಂದವು.
ಹಲವಾರು ವಾರಗಳನ್ನು ಕಳೆದ ಮೇಲೆ ANR ಗೆ ಈ ವರ್ಷಗಳಲ್ಲಿ ಎಂದೂ ಕಾಡದ ಮತ್ತೊಂದು ಸಂಶಯ ಕಾಡಿತು. ಚಿಕ್ಕತಾಯಣ್ಣ ಹೇಳಿದ ಊರ ಹೆಸರು ‘ಹೆಚ್’ ನಿಂದ ಶುರುವಾಗುತ್ತದೆಯೋ ಅಥವಾ ‘ಅ’ ಯಿಂದ ಶುರುವಾಗುತ್ತದೆಯೊ ಅನ್ನುವ ಪೀಕಲಾಟ ಶುರುವಾಯಿತು. ಸಂಶಯ ಒಂದು ಪಿಶಾಚಿಯ ಹಾಗೆ, ಅದಕ್ಕೂ ಪಿಂಡದಾನ ಮಾಡಬೇಕಲ್ಲವೇ, ಸರಿ, ಮತ್ತೆ ಕನಕಪುರದ ‘ಅ’ ಅಕ್ಷರದಿಂದ ಶುರುವಾಗುವ ಎಲ್ಲಾ ಹಳ್ಳಿಗಳ ಪಟ್ಟಿಯನ್ನು ಮಾಡಿ ಬೇಟೆಗೆ ಶುರು ಹಚ್ಚಿಕೊಂಡೆವು.
ಆಚಲು, ಅಗರ, ಅಗ್ರಹಾರ, ಅಜ್ಜಬಸವನಹಳ್ಳಿ, ಅಜ್ಜೆಗೌಡನವಲಸೆ, ಆಲಹಳ್ಳಿ, ಅಲ್ಲಿಮಾರನಹಳ್ಳಿ, ಆಲೂರು ಮುಂತಾದ ಹಳ್ಳಿಗಳನ್ನು ಹುಡುಕಿ ಅಲೆದವರಿಗೆ ಅಂಜನವಾಡಿ, ಅಂಜನಾಪೂರ, ಅರಕೆರೆ, ಅರಲಾಳು ಮತ್ತು ಅತ್ತಿಹಳ್ಳಿ, ಆತ್ತಿಕುಪ್ಪೆಗಳು ವಿಶೇಷವಾದ ತ್ರಾಸನ್ನೇ ಉಂಟುಮಾಡಿದವು.
ಅಲ್ಲಿಗೆ ನಾವು ಅಂದರೆ ನಾನು ಮತ್ತು ನಾಗಭೂಷಣ್ ANR ಕೈಜೋಡಿಸಿ ಹತ್ತಿರ ಹತ್ತಿರ ಆರು ತಿಂಗಳುಗಳೇ ಕಳೆದಿದ್ದವು.
ಚಿಕ್ಕತಾಯಣ್ಣನ ಹುಡುಕಾಟದ ವಿಷಯದಲ್ಲಿ ಆರು ತಿಂಗಳುಗಳ ಹಿಂದೆ ಇದ್ದ ಜಾಗದಲ್ಲಿಯೇ ನಾವಿದ್ದೆವು.
ಅಲ್ಲಿಂದ ಒಂದು ಇಂಚಿನ ಪ್ರಗತಿಯನ್ನೂ ಸಾಧಿಸಲಾಗಿರಲಿಲ್ಲ. ಹದಿನೈದು ದಿನಕ್ಕೊಮ್ಮೆ ದಾವಣಗೆರೆಗೆ ಹೋಗುತ್ತಿದ್ದ ನಾನು ಕಳೆದ ಆರು ತಿಂಗಳು ಊರ ಕಡೆ ಮುಖವೇ ಹಾಕದಿದ್ದು ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಇನ್ನು ನಾಗಭೂಷಣ್ ಭಾವ ಕೂಡ ನಮ್ಮ ಈ ಅಲೆದಾಟದ ಬಗ್ಗೆ ಆಕ್ಷೇಪಣೆ ಎತ್ತಲು ಮೊದಲು ಮಾಡಿದರು. ANR ಏನೋ ತಪ್ಪದೇ ಪ್ರತೀ ವಾರದ ಟ್ರಿಪ್ ಹಣವನ್ನು ಕೊಡುತ್ತಿದ್ದರೂ ಆ ದಿನಗಳಲ್ಲಿ ನಾಗಭೂಷಣ್ ಗೆ ಅವರ ಅಕ್ಕ ಮತ್ತು ಭಾವ ಹೆಣ್ಣು ಹುಡುಕುತ್ತಿದ್ದರು. ತಂದೆ ತಾಯಿ ಇಲ್ಲದ ನಾಗಭೂಷಣ್ಗೆ ಮದುವೆ ಮಾಡಿ ತಮ್ಮ ಮೇಲಿನ ಜವಾಬ್ದಾರಿ ಕಳೆದುಕೊಳ್ಳಲು ಅವರೂ ತುದಿ ಗಾಲಿನಲ್ಲಿ ನಿಂತಿದ್ದರು. ಹೀಗಾಗಿ ಒಂದು ದಿನ ಆಫೀಸ್ ವೇಳೆಯೇ ನಾನು ಮತ್ತು ನಾಗಭೂಷಣ್ ANR ಮುಂದೆ ಇನ್ನು ನಾವು ನಿಮ್ಮ ಜೊತೆಗೆ ಕನಕಪುರದ ಹಳ್ಳಿಗಳಿಗೆ ಬರಲಾಗುವುದಿಲ್ಲ ಎನ್ನುವುದನ್ನು ದೇಹಗಳನ್ನು ಹಿಡಿಮಾಡಿಕೊಂಡು ಹೇಳಿದೆವು. ANR ಇದನ್ನು ಮೊದಲೇ ಊಹಿಸಿದ್ದರು ಅನ್ನಿಸುತ್ತದೆ, ಕನಕಪುರದ ಕೋಟೆ ಇಡ್ಲಿಗಳು ನಿಮಗೆ ರುಚಿಕೊಡುತ್ತಿಲ್ಲ ಎನ್ನುವಂತೆ ತೋರುತ್ತದೆ ಎಂದು ಹಾಸ್ಯಭರಿತವಾಗಿಯೇ ನುಡಿದವರು ಈ ಆರು ತಿಂಗಳ ಕಾಲ ತಮ್ಮ ಜೊತೆಯಲ್ಲಿ ವಾರಾಂತ್ಯವನ್ನು ಚಿಕ್ಕತಾಯಣ್ಣನ ಅನ್ವೇಷಣೆಯಲ್ಲಿ ಕಳೆದುದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಅಲ್ಲಿಂದ ಮುಂದೆಯೂ ನನ್ನ ಮತ್ತು ANR ಅವರ ಬಸ್ಸಿನ ಸಹ ಪ್ರಯಾಣ ಮುಂದುವರೆಯಿತು. ತಮ್ಮ ಎಂದಿನ ವಾರಾಂತ್ಯಗಳ ಹುಡುಕಾಟದ ವಿವರಗಳನ್ನು ಪ್ರತೀ ಸೋಮವಾರ ನನಗೆ ತಪ್ಪದೇ ಒಪ್ಪಿಸುತ್ತಿದ್ದರು.
ಕಾಲಾಂತರದಲ್ಲಿ ANR ಕಂಪನಿ ಸೇವೆಯಿಂದ ನಿವೃತ್ತಿ ಹೊಂದಿದರು ಮತ್ತು ನನ್ನ ಮತ್ತು ಅವರ ನಡುವಿನ ಸಂಪರ್ಕ ಕಡಿದೇಹೋಯಿತು. ಅಲ್ಲಿಂದ ಮುಂದೆ ಸುಮಾರು ಎರಡು ವರ್ಷಗಳ ನಂತರ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಒಮ್ಮೆ ಸಿಕ್ಕಿದ್ದರು, ಇನ್ನೂ ಕೂಡಾ ಮನೆ ಮಾಲೀಕರ ಸುಳಿವಿಗಾಗಿ ಹುಡುಕಾಟ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಾದ ಕೆಲವೇ ತಿಂಗಳುಗಳಲ್ಲಿ ದೇಶ ಬಿಟ್ಟು ಒಮಾನ್ ಗೆ ಬಂದ ನಾನು ನಂತರದ ವರ್ಷಗಳಲ್ಲಿ ವಾರ್ಷಿಕ ರಜಾದಿನಗಳಲ್ಲಿ ANR ಮನೆಯ ಮುಂದೆ ಹಾಯ್ದು ಹೋದರೂ ಅವರ ಮನೆಯ ಕಡೆ ತಿರುಗಿ ನೋಡುವ ಧೈರ್ಯವನ್ನ ತೋರಿಸಲಿಲ್ಲ. ANR ಪತ್ನಿಯ ಮರದ ಉಳಿ ಏಟುಗಳ ಧ್ವನಿ ಮಾತ್ರ ಇನ್ನೂ ದಂಪತಿಗಳು ಅಲ್ಲಿಯೇ ವಾಸವಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುತ್ತಿತ್ತು.
ಅದು 2010ನೆ ಇಸವಿಯ ಬೇಸಗೆ ಕಾಲ. ANR ಮನೆಯ ಮುಂದೆ ಹಾದು ಹೋದವನಿಗೆ ದೊಡ್ಡ ಆಶ್ಚರ್ಯ ಕಾದಿತ್ತು. ಎಂಟು ಅಂತಸ್ತುಗಳ ಮಹಡಿ ಮನೆ ಮತ್ತೆ ಕೆಳಗೆ ಹತ್ತಾರು ವಾಣಿಜ್ಯ ಮಳಿಗೆಗಳು ಸಜ್ಜಾಗಿ ಪ್ರಾರಂಭೋತ್ಸವವನ್ನ ಎದುರು ನೋಡುತ್ತಿದ್ದವು. ಮನೆಯ ಮಾಲೀಕನನ್ನು ಅಲೆದೂ, ಆಲೆದೂ ಧೃತಿಗೆಟ್ಟ ANR ದೈನೇತಿ ಮುಖ ಕಣ್ಣ ಮುಂದೆ ತೇಲಿ ಬಂದು ಚಿಕ್ಕತಾಯಣ್ಣ ಇನ್ನೂ ನನಗೆ ಸಿಗಲೇ ಇಲ್ಲ ಶಿವಪ್ರಕಾಶ್ ಅವರೇ ಎಂದ ಹಾಗಾಯ್ತು.