ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ

Share

ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ

ಜಟಂಗಿ ಅಥವಾ ಜಟಂಗಿರಾಮೇಶ್ವರ ಬೆಟ್ಟವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅತಿ ಎತ್ತರದ ಶಿಖರ. ಇಲ್ಲಿನ ಬೆಟ್ಟಗಳನ್ನು ಚಿಕ್ಕ ಮತ್ತು ದೊಡ್ಡ ಜಟಂಗಿ ಬೆಟ್ಟಗಳೆಂದು ಕರೆಯುತ್ತಾರೆ. ಚಿಕ್ಕ ಬೆಟ್ಟದ ಮೇಲೆ ಚಾರಿತ್ರಿಕ ಕುರುಹುಗಳಾದ ಅಶೋಕನ ಬಂಡೆಗಲ್ಲು ಶಾಸನ, ಶಿಲಾಶಾಸನ, ವೀರಗಲ್ಲು, ರಾಮೇಶ್ವರ ಮತ್ತಿತರ ಅನೇಕ ಪ್ರಾಚೀನ ದೇವಾಲಯಗಳಿದ್ದರೆ, ದೊಡ್ಡ ಬೆಟ್ಟದ ಮೇಲೆ ಕಾಶೀಪುರಾದಿsಶ್ವರ ದೇಗುಲ, ಜಟಾಯುವಿನ ಸಮಾಧಿ, ವರ್ಣಚಿತ್ರ ಮತ್ತು ಶಾಸನಗಳಿವೆ. ಜಟಂಗಿ ಬೆಟ್ಟಕ್ಕೆ ಅಲ್ಲಿನ ದೇವಾಲಯದ ಹಿನ್ನೆಲೆಯಲ್ಲಿ ಜಟಂಗಿ ರಾಮೇಶ್ವರ ಬೆಟ್ಟವೆಂದೇ ಚಿರಪರಿಚಿತ. ಈ ದೊಡ್ಡಬೆಟ್ಟವನ್ನು ಏರಿ ಈ ಪರಿಸರದ ಸೊಬಗನ್ನು ನೋಡುವುದೇ ಚಂದ, ಆನಂದ. ಈ ಬೆಟ್ಟದ ತುತ್ತ ತುದಿಯಿಂದ ಕೆಳಭಾಗದಲ್ಲಿ ಹರಿಯುವ ಜನಗಿಹಳ್ಳ ಅಥವಾ ಚಿನ್ನಹಗರಿ ನದಿ ಮತ್ತು ಅದು ಅಲ್ಲಿನ ಬೆಟ್ಟಗುಡ್ಡ ಕಣಿವೆಗಳನ್ನು ಬಳಸಿ ಹಾವಿನೋಪಾದಿಯಲ್ಲಿ ನಿರ್ಮಿಸಿಕೊಂಡಿರುವ ಹರಿವಿನ ಚಿತ್ರಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು.

ಜಟಂಗಿ ಬೆಟ್ಟದ ಮೇಲಿರುವ ಅಶೋಕನ ಶಿಲಾಶಾಸನವನ್ನು ಬಿ.ಎಲ್. ರೈಸ್ ಅವರು ೧೮೯೨ರಲ್ಲಿ ಪತ್ತೆಹಚ್ಚಿ ಪ್ರಕಟಿಸಿ ಈ ಭಾಗದಲ್ಲಿ ಮೌರ್ಯರ ಆಳ್ವಿಕೆಯನ್ನು ಮೊಟ್ಟಮೊದಲು ದೃಢೀಕರಿಸಿ, ಇಲ್ಲಿನ ಬ್ರಹ್ಮಗಿರಿ ಪರಿಸರವು ಪ್ರಾಚೀನ ಪಟ್ಟಣವಾಗಿತ್ತೆಂಬ ಖ್ಯಾತಿಯನ್ನೂ ದಾಖಲಿಸಿದ್ದರು. ಈ ಶಾಸನಗಳಲ್ಲಿ ಉಲ್ಲೇಖವಾಗುವ ಇಸಿಲಾ ಎಂಬುದು ಇಲ್ಲಿನ ಪಟ್ಟಣದ ಪ್ರಾಚೀನ ಹೆಸರೆಂದು ಅನೇಕ ವಿದ್ವಾಂಸರು ಚರ್ಚಿಸಿ, ಇದೊಂದು ಪ್ರಾಚೀನ ದ್ರಾವಿಡ ಪದವೆಂದೂ ತೀರ್ಮಾನಿಸಿದ್ದರು. ಆದರೆ ಇತ್ತೀಚೆಗೆ ಎಸ್. ಶೆಟ್ಟರ್ ಅವರು ಇಸಿಲಾ ಎಂಬ ಪದದ ಉಲ್ಲೇಖ ಮತ್ತು ಅದರ ಬಳಕೆ ಅಶೋಕನ ಉತ್ತರ ಭಾರತದ ಅನೇಕ ಶಾಸನಗಳಲ್ಲಿರುವುದನ್ನು ಸ್ಪಷ್ಟಪಡಿಸಿ, ಇಸಿಲ ಎಂಬುದು ಈ ಸ್ಥಳದ ಹೆಸರಲ್ಲವೆಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಪಣ(ಕೊಪ್ಪಳ) ಮತ್ತು ವನವಾಸಿಕ(ಬನವಾಸಿ) ಎಂಬವು ಕನ್ನಡದ ಪ್ರಾಚೀನ ಪದಗಳೆಂದು ಶಾಸನಗಳ ಸಮಗ್ರ ಅಧ್ಯಯನದ ಹಿನ್ನೆಲೆಯಲ್ಲಿ ಗುರುತಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾದ ಮತ್ತು ಅಧ್ಯಯನಾರ್ಹ ವಿಷಯ.


ಇರಲಿ, ಜಟಂಗಿ ಬೆಟ್ಟದ ಪ್ರಮುಖವಾದ ಮತ್ತು ಇಂದಿಗೂ ಅತ್ಯಂತ ಆಕರ್ಷಣೆಯ ಕೇಂದ್ರವೆಂದರೆ ರಾಮೇಶ್ವರ ದೇವಾಲಯ. ಇದನ್ನು ಜಟಂಗಿ ರಾಮೇಶ್ವರ ಎಂದೇ ಕರೆಯಲಾಗುತ್ತದೆ. ಇಲ್ಲಿನ ಶಾಸನಗಳು ಬಲ್ಗೊಡಿತೀರ್ಥದ ಶ್ರೀರಾಮೇಶ್ವರ, ಬಲ್ಗೊಡಿ ತೀರ್ಥಸ್ಥಾನದ ರಾಮೇಶ್ವರ, ಜಟಾಂಗಿ ರಾಮಯದೇವ, ಜಟಂಗೆ ರಾಮಯದೇವ, ಜೆಟೋಗಿ ರಾಮಯದೇವ ಎಂದು ಮುಂತಾಗಿ ಕರೆದಿವೆ. ಜಟಂಗಿ ಬೆಟ್ಟಕ್ಕೆ ಇರುವ ಪೌರಾಣಿಕತೆ ರಾಮೇಶ್ವರ ದೇವಾಲಯಕ್ಕೂ ಅನ್ವಯಿಸುತ್ತದೆ. ಈ ದೇಗುಲವನ್ನು ರಾಮಾಯಣದ ಸೀತಾಪಹರಣ ಪ್ರಸಂಗದ ಘಟನೆಯನ್ನು ಈ ಬೆಟ್ಟಕ್ಕೂ ಅನ್ವಯಿಸಿ ದೃಷ್ಟಾಂತಸಹಿತ ವಿವರಿಸುತ್ತಾರೆ. ರಾಮೇಶ್ವರ ದೇವಾಲಯದ ಹಿಂಬದಿಯ ಕ್ರಿ.ಶ. ೯೬೨ರ ಶಾಸನವು, ಸೀತೆಯಂ ರಾವಣನುಯೆ ಜಟಾಯು ಕಾದಿ ಸತ್ತಲ್ಲಿ ರಾಮ ಪ್ರತಿಷ್ಟೆಗೆಯ್ದಲ್ಲಿ ಉಣಂದೇಗುಲಮಂ ಮಾಡಿದಂದೆ ಯಿಟ್ಟಗೆಯ ದೇಗುಲಮ ಕಳೆದು ಕಳಶ ನಿರ್ಮಾಣಂ ಲಿಂಗಸಿವಜೀಯರ್ಬ್ಭಿPವೃತ್ತಿ ಯಿನ್ದಂ ಕಲ್ಲದೇಗುಲವುಂ ದೇಗುಲಂಗಳುಮಂ ಸಮಯಿಸಿ ಕೊಣ್ಡಗಳುಮಂ ಕಟ್ಟಿಸಿದರ್ ಎಂದು ಹೇಳುತ್ತದೆ. ಈ ಮುಂಚೆ ಇಟ್ಟಿಗೆಯ ರಾಮೇಶ್ವರ ದೇವಾಲಯ ಇಲ್ಲಿದ್ದು, ಅದು ಶಿಥಿಲಗೊಂಡ ಕಾರಣ ಅದನ್ನು ಕೆಡವಿ ಕಲ್ಲ ದೇಗುಲವಾಗಿ ನಿರ್ಮಿಸಲಾಯಿತೆಂಬುದು ಶಾಸನ ಸಂಗತಿ. ಇದೇ ಅವಧಿಯಲ್ಲಿ ಇತರ ದೇಗುಲಗಳು ನಿರ್ಮಾಣಗೊಂಡವೆಂಬುದು ಇದೇ ಶಾಸನದಿಂದ ತಿಳಿದುಬರುತ್ತದೆ. ಈ ಎಲ್ಲ ದೇವಾಲಯಗಳನ್ನು ಕಟ್ಟಿಸಿದ ವ್ಯಕ್ತಿ ಲಿಂಗಸಿವಜೀಯ ಎಂಬ ಬಿsPವೃತ್ತಿ ಯತಿಯೆಂಬುದು ಗಮನಾರ್ಹ.
ರಾಮೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗಗಳಿಂದ ಕೂಡಿದ ಹಾಗೂ ದೇಗುಲದ ಆವರಣದಲ್ಲಿ ವಿವಿಧ ಉಪದೇಗುಲಗಳು, ದೀಪಸ್ತಂಭ, ಮತ್ತು ಮಹಾದ್ವಾರಗಳನ್ನು ಒಳಗೊಂಡ ವಿಸ್ತಾರ ದೇಗುಲವಾಗಿದೆ.

ಶಾಸನ-ಸಾಹಿತ್ಯಗಳಲ್ಲಿ ದೇವಾಲಯ ಮತ್ತು ಪರಿಸರ
ಜಟಂಗಿ ರಾಮೇಶ್ವರ ದೇವಾಲಯ ಪ್ರಾಚೀನ ಕಾಲದಿಂದಲೂ ಈ ಪರಿಸರದ ಆರಾಧ್ಯ ದೈವ. ಈ ದೇವಾಲಯಕ್ಕೆ ಸಂಬಂದಿsಸಿದಂತೆ ಅನೇಕ ಶಾಸನ-ತಾಮ್ರಪಟಗಳಿವೆ. ಅವುಗಳಲ್ಲಿ ವಿವಿಧ ಅರಸ-ಸಾಮಂತರು ದಾನದತ್ತಿ ನೀಡಿದ ಹಾಗೂ ಜೀರ್ಣೋದ್ಧಾರಗೊಳಿಸಿದ ವಿವರಗಳಿವೆ. ಕ್ರಿ.ಶ.೧೦೪೧ರಲ್ಲಿ ಮಲ್ಲರಸನೆಂಬುವವನು ಈ ದೇವಾಲಯಕ್ಕೆ ದತ್ತಿಬಿಟ್ಟ, ಕ್ರಿ.ಶ.೧೦೬೪ರಲ್ಲಿ ಕಲ್ಯಾಣ ಚಾಲುಕ್ಯ ಅರಸ ವಿಜಯಾದಿತ್ಯನು ಬಲ್ಗೊಡಿತೀರ್ಥದ ಶ್ರೀರಾಮೇಶ್ವರದೇವರ ನೈವೇದ್ಯ, ಕಂಟಸ್ಪಟಿಕ ಕಂಪೆರಕ, ರಂಗಭೋಗದ ಸೂಳೆಯರಿಗೆ, ತಪೋಧನರಿಗೆ ವಿದ್ಯಾದಾನಕ್ಕೆಂದು ದೇವೇಂದ್ರ ಪಂಡಿತರಿಗೆ ಧಾರಾಪೂರ್ವಕವಾಗಿ ಕಣಿಯಕಲ್ಲು-೩೦೦ರ ಬದಂಡಾಕಿವಡುಳಿಕೆ-೨೦ರ ಕಿರಿಯಡಾಕಿ ಎಂಬಲ್ಲಿ ಮೂವತ್ತು ಮತ್ತರು ಭೂಮಿಯನ್ನು ದಾನ ನೀಡಿದ್ದನು. ಶಾಸನದಲ್ಲಿನ ಈ ವಿವರದಿಂದ ರಾಮೇಶ್ವರ ದೇವಾಲಯದಲ್ಲಿ ೧೦-೧೧ನೆಯ ಶತಮಾನಗಳಲ್ಲಿ ಆಚರಣೆಯಲ್ಲಿದ್ದ ಪೂಜೆ-ಉತ್ಸವಗಳು, ಅಂದು ಅಸ್ತಿತ್ವದಲ್ಲಿದ್ದ ರಂಗಭೋಗ ಮತ್ತು ಅದಕ್ಕೆಂದೇ ಸೂಳೆ(ದೇವದಾಸಿ)ಯರಿದ್ದುದನ್ನು ಅರಿಯಬಹುದು. ಅಲ್ಲದೆ ಜಟಂಗಿ ರಾಮೇಶ್ವರ ದೇವಾಲಯವು ಕೇವಲ ಧಾರ್ಮಿಕ ಎಡೆಯಾಗಿರದೆ ಪ್ರಾಚೀನ ವಿದ್ಯಾಕೇಂದ್ರವಾಗಿತ್ತೆಂಬುದು ಶಾಸನಸ್ಥ ಸಂಗತಿ. ಇದರಿಂದ ಜಟಂಗಿ ರಾಮೇಶ್ವರ ದೇವಾಲಯವು ೧೦-೧೧ನೆಯ ಶತಮಾನದಲ್ಲಿ ಈ ಪರಿಸರದ ಪ್ರಸಿದ್ಧ eನ ದೇಗುಲವೂ ಆಗಿದ್ದುದು ಗಮನಾರ್ಹ. ಇದೇ ರೀತಿ ಕ್ರಿ.ಶ.೧೦೭೧ರಲ್ಲಿ ನೊಳಂಬ ಪಲ್ಲವ ಪೆರ್ಮಾಡಿ ಜಯಸಿಂಗದೇವನು ಬಲ್ಗೊಡಿ ತೀರ್ಥಸ್ಥಾನದ ರಾಮೇಶ್ವರ ದೇವರಿಗೆ ಕಣಿಯಕಲ್ಲು-೩೦೦ರ ಬಳಿಯಿದ್ದ ಬಾಡಬಣ್ನಿಕಲ್ಲನ್ನು ದೇವಾಲಯದ ಅಮೃತರಾಸಿ ಜೀಯರಿಗೆ ಧಾರೆಯೆರೆದು ಬಿಟ್ಟುಕೊಟ್ಟಿದ್ದನು.


ಹೊಯ್ಸಳ ಅದಿsಕಾರಿ ಹುಲಿವಾನದ ಸಾವಂತ ಸಿವೋದಯನಾಯಕನ ತಾಯಿಯಾದ ಹೊನ್ನವ್ವೆ ನಾಯಕಿತಿಯ ಆರಾಧ್ಯ ದೈವವಾಗಿದ್ದಿತು. ಈಕೆ ಜಟಂಗಿ ಬೆಟ್ಟವನ್ನೇರಿ ಸೀತಾದೊಣೆಯಲ್ಲಿ ಪುಣ್ಯಸ್ನಾನ ಮಾಡಿ ರಾಮೇಶ್ವರನನ್ನು ಪೂಜಿಸಿ ದಾನ-ಧರ್ಮಗಳನ್ನು ಮಾಡಿ ಶಿವೈಕ್ಯಳಾದಳೆಂದೂ ಹೇಳಲಾಗುತ್ತದೆ. ಇವಳೊಂದಿಗೆ ಹೊನ್ನಿ ಎಂಬ ಈಕೆಯ ಸೇವಕಿ ಆತ್ಮಾಹುತಿ ಮಾಡಿಕೊಂಡದ್ದು ಬ್ರಹ್ಮಗಿರಿಯ ಸಿಡಿತಲೆಕಲ್ಲಿನಿಂದ ತಿಳಿಯುತ್ತದೆ. ಈ ರಾಮೇಶ್ವರ ದೈವವು ಕುಮ್ಮಟದುರ್ಗದ ನಾಯಕ ಕಂಪಿಲರಾಯನ ಮನೆದೇವರಾಗಿದ್ದು, ಕುಮಾರರಾಮನನ್ನು ಕೆಲಕಾಲ ಇಲ್ಲಿನ ನೆಲಮಾಳಿಗೆಯಲ್ಲಿ ಇಟ್ಟಿದ್ದ ವಿಷಯ ಕೈಪಿsಯತ್ತುಗಳಿಂದ ತಿಳಿದುಬರುತ್ತದೆ. ಅವುಗಳಲ್ಲಿ ಕುಮಾರರಾಮನು ಜಟಂಗಿ ರಾಮೇಶ್ವರನ ವರಪ್ರಸಾದದಿಂದ ಹುಟ್ಟಿದನೆಂದೂ, ಈ ಕಾರಣದಿಂದ ಅವನಿಗೆ ಕುಮಾರರಾಮನೆಂಬ ಹೆಸರಿನಿಂದ ಕರೆಯಲಾಯಿತೆಂದೂ ಹೇಳಿವೆ. ಸ್ವತಃ ಕುಮಾರರಾಮನು ನಾನು ಜಟಂಗಿ ರಾಮೇಶ್ವರನ ವರಪ್ರಸಾದದಿಂದ ಹುಟ್ಟಿದನೆಂದು ಹೇಳಿಕೊಂಡಿದ್ದಾನೆ. ಅಲ್ಲದೆ ಕುಮಾರರಾಮನು ಮುಸ್ಲಿಮರ ಸೈನ್ಯದ ವಿರುದ್ಧ ಹೋರಾಡಿ ಮಡಿದಾಗ, ಜಟಂಗಿ ರಾಮೇಶ್ವರ ದೇವರು ಪ್ರಸನ್ನರಾಗಿ, ದಿವ್ಯವಿಮಾನ ವನ್ನು ತಂದು, ಕೊಮಾರರಾಮನು ವೈಕುಂಟಕ್ಕೇರಿದನು ಎಂದು ವರ್ಣಿಸಲಾಗಿದೆ. ಕ್ರಿ.ಶ. ೧೪೩೦ರಲ್ಲಿ ಎರಡನೆಯ ದೇವರಾಯ(ಪ್ರೌಢದೇವರಾಯ)ನು ಇಲ್ಲಿಯ ಮಾಚನಹಳ್ಳಿ ಸೀಮೆಗೆ ಬೇಟೆಗೆಂದು ಬಂದಾಗ ರಾಮದೇವರ ದರ್ಶನ ಪಡೆದು ಆ ದೇವರಿಗೆ ರಾಯದುರ್ಗ ಚಾವಡಿಯಿಂದ ಸಲುವ ಅಮೃತಪಡಿಯ ಕಟ್ಟಲೆಯಾದ ೨೦ ವರಾಹ ಹುಟ್ಟುವಳಿಯ ಒಂದು ಗ್ರಾಮ ಮತ್ತು ಹಾನೆಯನಾಡಿನ ಸಂಗೇಬೋವನ ಕಾಲುವೆಯ ಕೋರು ಸುವರ್ಣಾದಾಯ, ಆ ಕಾಲುವೆಯ ಚತುಸೀಮೆಗೆ ಸಲುವ ನಿದಿsನಿಕ್ಷೇಪ ಮೊದಲಾದ ಸರ್ವೋತ್ಪತ್ತಿಗಳನ್ನು ಬಿಡಲು ತನ್ನ ಅದಿsಕಾರಿಗಳಿಗೆ ತಿಳಿಸಿದ್ದನು. ಹೀಗೆ ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾದ ಶೈವಕ್ಷೇತ್ರವಾಗಿ ಮುಂದುವರಿದು ಬಂದಿದೆ.


ಜಟಂಗಿ ರಾಮೇಶ್ವರ ಬೆಟ್ಟದ ಮೇಲೆ ಅನೇಕ ಸಣ್ಣಪುಟ್ಟ ದೇವಾಲಯಗಳಿವೆ. ಅವುಗಳಲ್ಲಿ ಕೇದಾರೇಶ್ವರ, ಸೋಮೇಶ್ವರ, ಗಣೇಶ, ಮಹಿಷಮರ್ದಿನಿ, ಸೂರ್ಯ, ವೀರಭದ್ರ, ಜನಾರ್ದನ, ಚಾಮುಂಡೇಶ್ವರಿ(ಮಹಿಷಮರ್ದಿನಿ), ಮಹಾಬಲೇಶ್ವರ, ಚಂದ್ರಮೌಳೀಶ್ವರ, ಅರ್ಕೇಶ್ವರ, ಚಂಡಿಕೇಶ್ವರ, ಜಂಬುಕೇಶ್ವರ, ವಿರೂಪಾಕ್ಷೇಶ್ವರ, ಕಾಲಭೈರವ ಮೊದಲಾದ ದೇವಾಲಯಗಳು, ಸೀತಾಕೊಂಡ ಮತ್ತು ಏಕಾಂತ ತೀರ್ಥವೆಂಬ ನೀರಿನ ಕೊಳಗಳು ಹಾಗೂ ಶಿಲ್ಪಾವಶೇಷಗಳನ್ನು ಜಟಂಗಿ ಬೆಟ್ಟದ ಮೇಲೆ ಕಾಣಬಹುದಾಗಿದೆ. ಇದರಿಂದ ಜಟಂಗಿ ಬೆಟ್ಟ ಪರಿಸರದಲ್ಲಿ ಪ್ರಾಚೀನಕಾಲದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಪರಂಪರೆಯ ಔನ್ನತ್ಯವನ್ನು ಗುರುತಿಸಬಹುದಾಗಿದೆ.

 

Girl in a jacket
error: Content is protected !!