ಬಿಟ್ ಕಾಯಿನ್ ಹಗರಣ ರಾಜ್ಯ ಸಕಾರವನ್ನು ಆತಂಕದ ಮಡುವಿಗೆ ದೂಡಿದೆ. ತಪ್ಪು ತಮ್ಮದಲ್ಲ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ಸು ಮನಸ್ಸು ಕದಡಿ ಹೋಗಿರುವ ಜನಕ್ಕೆ ಸಮಾಧಾನ ತರುವಲ್ಲಿ ಸೋಲುತ್ತಿವೆ. ದಿನದಿನವೂ ಹೊಸ ಹೊಸ ಬಗೆಯ ತಿರುವನ್ನು ಪಡೆಯುತ್ತಿರುವ ಪ್ರಕರಣದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆ ಆಗುತ್ತದೆಯೇ ಅಥವಾ ಬಹುತೇಕ ಹಗರಣಗಳಂತೆ ಇದೂ ಕೂಡಾ ಗೋರಿಯಲ್ಲಿ ಹೂತು ಹೋಗುತ್ತದೆಯೆ?
ಪಿಎಮ್ಮೊ ಸಿಎಮ್ಮೊ? ಯಾರು ಸತ್ಯ ಯಾರು ಮಿಥ್ಯ?
ಈ ಪ್ರಶ್ನೆ ಈ ಹೊತ್ತು ಭಾರತದಲ್ಲಿ ಬಹುದೊಡ್ಡ ಸಂಚಲನವನ್ನೇ ಮಾಡುತ್ತಿದೆ. ಕರ್ನಾಟಕದಲ್ಲಿ ಹೊರಬಿದ್ದ ಬಿಟ್ ಕಾಯಿನ್ ದಂಧೆಯಲ್ಲಿ ಭಾರತೀಯ ಜನತಾ ಪಕ್ಷ ಬಹುದೊಡ್ಡ ಇಕ್ಕಟ್ಟಿಗೆ ಸಿಲುಕಿರುವುದು ಸ್ಪಷ್ಟ. ವಿವಾದಿತ ಹಗರಣಕ್ಕೂ ತನಗೂ ಸಂಬಂಧವಿಲ್ಲವೆಂದು ಹೇಳುತ್ತಿರುವ ಆ ಪಕ್ಷದ ವಾದಕ್ಕೆ ಪುಷ್ಟಿ ನೀಡುವ ಅಂಶಗಳು ದಿನದಿಂದ ದಿನಕ್ಕೆ ಕರಗುತ್ತಿರುವುದು ಇಕ್ಕಟ್ಟಿನ ಅಗಾಧತೆಯನ್ನು ಹೇಳುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಅವರ ಸಚಿವ ಸಂಪುಟದ ಅನೇಕ ಸದಸ್ಯರು ಹಗರಣವನ್ನು ಕಾಂಗ್ರೆಸ್ ತಲೆಗೆ ಕಟ್ಟುವ ಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಬೊಮ್ಮಾಯಿ ಸರ್ಕಾರದ ತಲೆದಂಡಕ್ಕೆ ಹಸಿದು ನಿಂತಿದ್ದಾರೆ. ಹಗ್ಗ ಜಗ್ಗಾಟ ಮುಂದುವರಿದಿದೆ.
ಶ್ರೀಕಿ ಎಂದು ಕರೆಯಲಾಗುತ್ತಿರುವ ಶ್ರೀಕೃಷ್ಣ ಎಂಬ ಯುವಕ ಕೇಂದ್ರಿತವಾದ ಈ ಹಗರಣದಲ್ಲಿ ಯಾರ್ಯಾರು ಬಲಿಯಾಗಲಿದ್ದಾರೆಯೊ ಹೇಳಲಾಗದು. ಹಗರಣಗಳನ್ನು ಮುಚ್ಚಿ ಹಾಕುವುದಕ್ಕೆ ಹೆಸರಾಗಿರುವ ಭಾರತ ರಾಜಕಾರಣದಲ್ಲಿ ಈ ಹಗರಣವೂ ಭೂಗತವಾಗಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಬೊಮ್ಮಾಯಿಯವರು ಗೃಹ ಸಚಿವರಾಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರವಿದ್ದಾಗಲೆ ಈ ಹಗರಣದ ವಾಸನೆ ಬಡಿದಿತ್ತೆಂದೂ ಆದರೆ ಗೃಹ ಇಲಾಖೆ ಕಣ್ಮುಚ್ಚಿ ಕುಳಿತ ಕಾರಣ ಹಗರಣ ಬೃಹತ್ತಾಗಿ ಬೆಳೆಯಿತೆನ್ನುವುದು ಕಾಂಗ್ರೆಸ್ ವಾದ. ಗೃಹ ಇಲಾಖೆ ಕಣ್ಮುಚ್ಚಿ ಕೂರಲು ಯಾರು ಕಾರಣ, ಏನು ಕಾರಣ ಎನ್ನುವುದು ಕಾಂಗ್ರೆಸ್‌ನ ಸಂದೇಹ. ಹಾಗೇನೂ ಅಲ್ಲ, ೨೦೧೬ರಲ್ಲಿಯೇ ಇದು ಹಗರಣದ ಸ್ವರೂಪ ಪಡೆದಿತ್ತು ಆಗ ಇದ್ದುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಅಂದು ಆ ಸರ್ಕಾರ ತಾಳಿದ ನಿರ್ಲಕ್ಷ್ಯಕ್ಕೆ ಈಗ ಬೆಲೆ ತೆರಬೇಕಾಗಿ ಬಂದಿದೆ ಎನ್ನುವುದು ಬಿಜೆಪಿ ಪ್ರತಿವಾದ.
ಕಾಂಗ್ರೆಸ್ ಸರ್ಕಾರ ಯಾಕಾಗಿ ಆ ಸಮಯದಲ್ಲಿ ಮೌನಕ್ಕೆ ಶರಣಾಯಿತು ಎನ್ನುವುದು ಬಯಲಿಗೆ ಬರಬೇಕು. ಅದೇ ರೀತಿ ಇಷ್ಟು ದೊಡ್ಡ ಹಗರಣದಲ್ಲಿ ಪ್ರಸ್ತುತದ ಬೊಮ್ಮಾಯಿ ಸರ್ಕಾರ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದಾದರೂ ಏಕೆ ಎಂಬ ವಿಚಾರದಲ್ಲಿಯೂ ಸತ್ಯ ಏನೆನ್ನುವುದು ಸಾರ್ವಜನಿಕವಾಗಬೇಕು. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಆರೋಪ ಪ್ರತ್ಯಾರೋಪ ಮಾಡುತ್ತ ಅಸಲಿ ಸಂಗತಿ ಬಯಲಿಗೆ ಬಾರದಂತೆ ತಡೆಯುವ ಹುನ್ನಾರ ನಡೆಸಿದ್ದಾರೆಯೇ ಎನ್ನುವುದು ಜನಮಾನಸದಲ್ಲಿ ಎದ್ದಿರುವ ದೊಡ್ಡಪ್ರಶ್ನೆ.
ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಕಂಡು ಮಾತಾಡಿಸಿ ಬಂದರು. ದೆಹಲಿಗೆ ಸಿಎಂ ಹೋಗುವ ಸಂದರ್ಭದಲ್ಲಿ ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಮಾಹಿತಿಯನ್ನು ದೆಹಲಿ ವರಿಷ್ಟರು ಪಡೆಯಲಿದ್ದಾರೆಂದೂ ಅದಕ್ಕೆಂದೇ ಮುಖ್ಯಮಂತ್ರಿಗೆ ತುರ್ತು ಬುಲಾವ್ ಬಂದಿದೆ ಎಂಬ ಸುದ್ದಿ ಓಡಾಡಿತ್ತು. ಭೇಟಿ ಬಳಿಕ ಮಾಧ್ಯಮ ಗೋಷ್ಟಿಯಲ್ಲಿ ಮಾತಾಡಿದ ಸಿಎಂ ಅವರಿಗೆ ಈ ಪ್ರಶ್ನೆ ಸಹಜವಾಗಿಯೇ ಎದುರಾಯಿತು. ಅದಕ್ಕೆ ಬೊಮ್ಮಾಯಿ ಕೊಟ್ಟ ಉತ್ತರ ಆಶ್ಚರ್ಯವನ್ನು ಉಂಟುಮಾಡಿತು. “ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ವರಿಷ್ಟರ ಜೊತೆ ಚರ್ಚೆಯೆ ಆಗಲಿಲ್ಲ. ಬಿಟ್ ಕಾಯಿನ್ (ಕ್ರಿಪ್ಟೋಕರೆನ್ಸಿ) ಹಗರಣವನ್ನು ನಿರ್ಲಕ್ಷಿಸಿ, ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನ ಹರಿಸಿ” ಎಂದು ಪ್ರಧಾನಿ ತಮಗೆ ಸೂಚಿಸಿದರೆಂದು ಬೊಮ್ಮಾಯಿ ವಿವರಣೆ ನೀಡಿದರು. ಈ ಮಾತು ಹೌದಾಗಿರಬಹುದೆ…? ಪ್ರಧಾನ ಮಂತ್ರಿ ಹಗರಣವನ್ನು ನಿರ್ಲಕ್ಷಿಸುವಂತೆ ಹೇಳಿದರೆ…? ಹೇಳುವುದು ಸಾಧ್ಯವೇ…? ನಾನೂ ತಿನ್ನುವುದಿಲ್ಲ ಇತರರಿಗೆ ತಿನ್ನಲೂ ಬಿಡುವುದಿಲ್ಲ ಎನ್ನುವ ಮೋದಿ ಈ ಮಾತನ್ನಾಡಿದ್ದು ಹೌದೆ…? ಭಾರತದ ಸ್ವಾತಂತ್ರ್ಯ ಮತ್ತು ಸಮಗ್ರತೆಯ ಚೌಕಿದಾರ ತಾನೆಂದು ಕರೆದುಕೊಳ್ಳುವ ಮೋದಿ, ಸಮಾನಾಂತರ ಆರ್ಥಿಕ ವ್ಯವಸ್ಥೆ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಬಿಟ್ ಕಾಯಿನ್ ಹಗರಣದಲ್ಲಿ ನಿರ್ಲಕ್ಷ್ಯ ತಾಳುವಂತೆ ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ಸೂಚಿಸಿದರೆ…? ಬೊಮ್ಮಾಯಿ ಹೇಳಿರುವ ಮಾತುಗಳು ನಿಜವೇ ಆಗಿದ್ದಲ್ಲಿ ಹೌದು ಎನ್ನದೆ ಬೇರೆ ಮಾರ್ಗವಿಲ್ಲ.
ಆದರೆ ನಂತರದ ಬೆಳವಣಿಗೆ ಬೇರೆಯದೇ ಆದ ಕಥೆಯನ್ನು ಹೇಳುತ್ತದೆ. ಮಾಧ್ಯಮದ ದಾರಿಯನ್ನು ತಪ್ಪಿಸುವ ಯತ್ನವನ್ನು ಬೊಮ್ಮಾಯಿ ಮಾಡಿದರೇ ಎಂಬ ಸಂದೇಹ ನಂತರದ ಬೆಳವಣಿಗೆಗಳ ಕಾರಣವಾಗಿ ಮೂಡುತ್ತದೆ. ಹಗರಣವನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಹೇಳಿದ್ದೇ ಹೌದಾಗಿದ್ದರೆ ಬೊಮ್ಮಾಯಿ-ಮೋದಿ ಭೇಟಿ ನಂತರದ ೪೮ ತಾಸಿನಲ್ಲೇ ಉನ್ನತಾಧಿಕಾರ ಸಭೆಯನ್ನು ಪ್ರಧಾನಿ ಕರೆದರೇಕೆ…? ಕ್ರಿಪ್ಟೋ ಕರೆನ್ಸಿಯ ಹಗರಣಕ್ಕೆ ಸಂಬಂಧಿಸಿ ಆಮೂಲಾಗ್ರ ವಿವರವನ್ನು ಅವರು ಪಡೆದರೇಕೆ…? ಹಗರಣವನ್ನು ನಿರ್ಲಕ್ಷಿಸಿ ಎಂದು ಸಿಎಮ್‌ಗೆ ಸೂಚಿಸಿ ಪಿಎಂ ಸ್ವತಃ ತಾವೇ ಏಕೆ ಇಂಥದೊಂದು ಮಹತ್ವದ ಸಭೆ ನಡೆಸಿದರು…? ಅವರು ಸಂಗ್ರಹಿಸಿದ ವಿವರವಾದರೂ ಏನು…? ಎಂಬ ವಿಚಾರದಲ್ಲಿ ತಲೆ ಕೆಡಿಸಿಕೊಂಡರೆ ಪರಿಸ್ಥಿತಿ ಅಯೋಮಯ ಎನಿಸುತ್ತದೆ. ಪ್ರಕರಣ ಈಗ ಸಾಗಿರುವ ರೀತಿಯನ್ನು ನೋಡಿದರೆ ಪಿಎಂ ಮತ್ತು ಸಿಎಂ ನಡುವೆ ಯಾರು ಸತ್ಯ ಯಾರು ಸುಳ್ಳು ಎಂಬ ಗೊಂದಲ ಕಾಡುತ್ತದೆ.
ಹಗರಣವನ್ನು ನಿರ್ಲಕ್ಷಿಸಿ ಎಂಬ ಆದೇಶವನ್ನೋ ಸೂಚನೆಯನ್ನೋ ಸಲಹೆಯನ್ನೋ ಪಡೆದು ದೆಹಲಿಯಿಂದ ಮರಳಿರುವ ಬೊಮ್ಮಾಯಿ ಅವರಿಗೆ ಪ್ರಕರಣವನ್ನು ನಿರ್ಲಕ್ಷಿಸುವುದು ಸಾಧ್ಯವೇ ಆಗುತ್ತಿಲ್ಲ. ಕಾಂಗ್ರೆಸ್ ಕಡೆಯಿಂದ ಬಾಣಗಳ ಸುರಿಮಳೆ ಆಗುತ್ತಿದೆ. ಏಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕದ ಉಸ್ತುವಾರಿ ರಂದೀಪ್ ಸೂರಜಿವಾಲಾ, ಅಕ್ಷರಶಃ ಬೊಮ್ಮಾಯಿ ಸರ್ಕಾರದ ಬೆನ್ನು ಹತ್ತಿದ್ದಾರೆ. ಅವರು ಹಾಕುತ್ತಿರುವ ಪ್ರಶ್ನೆಗಳಿಗೆ, ಮಂಡಿಸುತ್ತಿರುವ ಸಂದೇಹಗಳಿಗೆ ಬಿಜೆಪಿ ಕಡೆಯಿಂದ ಉತ್ತರವೇನೋ ಬರುತ್ತಿದೆ. ಪ್ರಶ್ನೆಗಳಿಗೆ ಉತ್ತರಗಳು ಇರುತ್ತವೆ. ಆದರೆ ಅವು ಅನುಮಾನ ಬಗೆಹರಿಸುವ ಪರಿಹಾರವಾಗಿಲ್ಲ ಎನ್ನುವುದು ಪರಿಸ್ಥಿತಿಯ ಆಳ ಅಗಲವನ್ನು ವಿವರಿಸುತ್ತದೆ. ಬೊಮ್ಮಾಯಿ ಸಂಪುಟದ ಸಚಿವರು ಒಬ್ಬೊಬ್ಬರಾಗಿ, ಗುಂಪುಗುಂಪಾಗಿ ಹಗರಣ ನಡೆದೇ ಇಲ್ಲವೆಂದೂ ಅದು ನಡೆದಿದ್ದರೆ ಕಾಂಗ್ರೆಸ್ ಆಳ್ವಿಕೆ ಕಾಲದಲ್ಲೇ ಅದು ಆಗಿದ್ದೆಂದು ಹೇಳುವ ಮೂಲಕ ಜನರನ್ನು ನಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಗರಣವನ್ನು ನಿರ್ಲಕ್ಷಿಸಿ, ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿ ಎಂದು ಪ್ರಧಾನಿ ಹೇಳಿದ್ದು ನಿಜವೇ ಆಗಿದ್ದರೆ ಸಿಎಂ ಹಾಗೂ ಸಚಿವ ಸಂಪುಟದ ಪಟಾಲಮ್ ಮಾಡುತ್ತಿರುವ ಸದ್ದುಗದ್ದಲಕ್ಕೆ ಕಾರಣವಾದರೂ ಏನು…? ಮುಖದಲ್ಲಿ ಧೈರ್ಯ ಮನಸ್ಸಿನಲ್ಲಿ ಅಳುಕು ಎನ್ನುವುದು ಇಂಥ ಸಂದರ್ಭಗಳಲ್ಲಿಯೇ ಅಲ್ಲವೆ…?
ಸಿದ್ದರಾಮಯ್ಯ ಮತ್ತು ಅವರ ಶಾಸಕ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಕ್ರಿಪ್ಟೊಕರೆನ್ಸಿ (ಬಿಟ್ ಕಾಯಿನ್) ಹಗರಣದಲ್ಲಿ ರಾಜ್ಯ ಸರ್ಕಾರವನ್ನು ಸಿಕ್ಕಿಹಾಕಿಸುವ ಕೆಲಸವನ್ನು ಅಹರ್ನಿಶಿ ಎಂಬಂತೆ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಗಣ್ಯರನೇಕರು ಈ ಹಗರಣದಲ್ಲಿ ಶಾಮೀಲಾಗಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯಾಧಾರಗಳೂ ಅಗತ್ಯ ದಾಖಲೆಗಳೂ ಇವೆ ಎನ್ನುತ್ತಿದ್ದಾರೆ. ದಾಖಲೆಗಳನ್ನಿಟ್ಟುಕೊಂಡೆ ತಾವು ಆರೋಪ ಮಾಡುತ್ತಿರುವುದಾಗಿಯೂ ಅವರು ಹೇಳುತ್ತಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಈಗಾಗಲೆ ತನಿಖೆಯನ್ನು ಕೈಗೆತ್ತಿಕೊಂಡಿರುವ ಇಡಿ (ಜಾರಿ ನಿರ್ದೇಶನಾಲಯ) ಮತ್ತು ರಾಜ್ಯ ಪೊಲೀಸರ ತನಿಖೆಗೆ ಅದನ್ನು ಒಪ್ಪಿಸಿ ಸತ್ಯ ಹೊರಬರುವುದಕ್ಕೆ ನೆರವಾಗುವುದರ ಬದಲಿಗೆ ವೃಥಾ ಸುಳ್ಳಾರೋಪ ಮಾಡುತ್ತ ರಾಜಕೀಯ ದುರ್ಲಾಭ ಪಡೆಯುವ ಕುತ್ಸಿತ ಮನಃಸ್ಥಿತಿಯನ್ನು ಬಿಡಿ ಎಂದು ಆಡಳಿತ ಪಕ್ಷದ ಮುಖಂಡರು ಸವಾಲು ಹಾಕುತ್ತಿದ್ದಾರೆ. ದಾಖಲೆಗಳು ಇದ್ದರಲ್ಲವೆ ತನಿಖೆಗೆ ಕೊಡುವುದು ಎಂಬರ್ಥದಲ್ಲಿ ಮುಖ್ಯ ವಿರೋಧ ಪಕ್ಷದ ಕಾಲನ್ನೆಳೆಯುವ ತಂತ್ರವನ್ನು ಆಡಳಿತ ಪಕ್ಷ ಮಾಡುತ್ತಿದೆ. ಅರ್ಥಹೀನ ಎನಿಸುತ್ತಿರುವ ಸವಾಲು ಪ್ರತಿಸವಾಲು; ವಾದ ಪ್ರತಿವಾದ; ವಿರೋಧ ಪ್ರತಿರೋಧ …ಹೀಗೆ ಜನರನ್ನು ದಿಕ್ಕು ತಪ್ಪಿಸುವ ಯತ್ನ ಅತ್ಯಂತ ವ್ಯವಸ್ಥಿತವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಡೆಯಿಂದ ನಡೆದಿರುವುದು ಸ್ಪಷ್ಟ.
ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೂರು ದಿವಸದ ಸಂಭ್ರಮಾಚರಣೆ ನಡೆಯಲಿಲ್ಲ.ವಾಸ್ತವದಲ್ಲಿ ಇಂಥ ಆಚರಣೆಗಳು ಜನಕ್ಕೆ ಬೇಕಾಗಿಲ್ಲ. ಆದರೇನು ಮಾಡೋಣ. ಪಲ್ಲಕ್ಕಿಯಲ್ಲಿ ಕುಳಿತಿರುವವರಿಗೆ ಮೆರವಣಿಗೆ ಪ್ರಿಯವಾಗುತ್ತದೆ. ಕೊರೋನಾದಂಥ ಕಂಡುಕೇಳರಿಯದ ಕ್ರೂರ ಸಾಂಕ್ರಾಮಿಕ ಒಡ್ಡಿರುವ ಸಂಕಷ್ಟದಲ್ಲಿ ಜನ ತತ್ತರಿಸಿರುವಾಗ ಸಿಹಿ ಹಂಚಿ ಸಂಭ್ರಮಾಚರಿಸುವುದು ತರವಲ್ಲ ಎಂಬ ಸರ್ಕಾರ ನಡೆಸುವವರ ಸೂಕ್ಷ್ಮ ಮನಸ್ಸು ಯಾರೂ ಮೆಚ್ಚುವ ನಡವಳಿಕೆ. ಆದರೆ ಅದೇ ನೂರು ದಿನವಾಗುವಷ್ಟರಲ್ಲಿ ಬಿಟ್ ಕಾಯಿನ್ ಹಗರಣ ಸರ್ಕಾರದ ಕೊರಳಿಗೆ ಸುತ್ತಿಕೊಂಡಿರುವುದು ಜನರಲ್ಲಿ ವ್ಯಾಪಕ ಬೇಸರಕ್ಕೆ ಕಾರಣವಾಗಿದೆ. “ಸೀಸರ್‌ನ ಹೆಂಡತಿ ಪತಿವ್ರತೆ ಆಗಿದ್ದರಷ್ಟೇ ಸಾಲದು; ಪತಿವ್ರತೆ ತಾನೆನ್ನುವುದನ್ನು ತೋರಿಸಿಕೊಳ್ಳಬೇಕು” ಎಂಬ ಗಾದೆ ಮಾತಿದೆ. ಸರ್ಕಾರ ತಾನು ತಪ್ಪು ಮಾಡಿಲ್ಲ ಎಂದು ಸಾರ್ವತ್ರಿಕವಾಗಿ ಹೇಳಿಕೊಳ್ಳುವುದಷ್ಟೇ ಅಲ್ಲ ಅದು ಪ್ರಶ್ನಾತೀತವಾಗಿ ಜನಕ್ಕೆ ಮನವರಿಕೆಯಾಗಬೇಕು. ಜನರ ಮನಸ್ಸಿನಲ್ಲಿ ಸಂಶಯದ ಹುಳು ಹೊಕ್ಕಾಗಿದೆ. ಕಾಂಗ್ರೆಸ್ ಮಾಡುತ್ತಿರುವ ಆರೋಪವನ್ನು ಗಮನಿಸಿದಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಂಗಳೂರು ಸಂಸದ ನಳೀನ್‌ಕುಮಾರ್ ಕಟೀಲರ ಹೆಸರು ಅಲ್ಲಿ ಎದ್ದು ಕಾಣಿಸುತ್ತಿದೆ. ಚುನಾವಣೆ ನಡೆದುದೇ ಹೌದಾದರೆ ತಾನೇ ಅಧಿಕಾರಕ್ಕೆ ಬರುವುದು ಎಂಬ ನಂಬಿಕೆಯಲ್ಲಿರುವ ಪ್ರಮುಖ ವಿರೋಧ ಪಕ್ಷದ ಕಡೆಯಿಂದ ಅನುಮಾನದ ಬಾಣ ಬಂದಾಗ ಅದನ್ನು ತುಂಡರಿಸುವ ಕೆಲಸವನ್ನು ಸರ್ಕಾರ ಮಾಡದಿದ್ದರೆ ಆಡಳಿತದ ಸುತ್ತ ಅನುಮಾನದ ಹುತ್ತ ಬೆಳೆಯುತ್ತದೆ. ಈಗ ಅದೇ ಆಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಲ್ಲವೂ ಗೊತ್ತಿದೆ. ಅವರು ಮೌನ ಮುರಿಯಬೇಕೆಂದು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಪದೇ ಪದೇ ಒತ್ತಾಯ ಮಾಡುತ್ತಿದ್ದಾರೆ. ಹಾಗಂತ ಕಟೀಲರ ವಿರುದ್ಧ ಖರ್ಗೆ ಯಾವುದೇ ಆಕ್ಷೇಪಾರ್ಹ ಆರೋಪ ಮಾಡಿಲ್ಲ. ಆದರೆ ಜನರ ಮನಸ್ಸಿನಲ್ಲಿ ಸಂಶಯದ ಬೀಜವನ್ನು ಬಿತ್ತುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ. ಆಡಳಿತ ಪಕ್ಷ ಮೌನವಾಗಿ ಕೂರುವ ಸಮಯ ಇದಲ್ಲ. ಆಡಳಿತ ಪಕ್ಷದ ಅಧ್ಯಕ್ಷರತ್ತ ಯಾರೇ ಸಂಶಯದ ಬೆರಳನ್ನು ತೋರಿಸಿದರೂ ಅದನ್ನು ನಿವಾರಿಸಿಕೊಂಡು ಚಿತ್ರವನ್ನು ಮಸಿಮುಕ್ತವಾಗಿಟ್ಟುಕೊಳ್ಳುವ ಹೊಣೆಗಾರಿಕೆ ಸರ್ಕಾರದ ಆಡಳಿತ ಸೂತ್ರ ಹಿಡಿದವರ ಮೇಲಿರುತ್ತದೆ. ಬಿಟ್ ಕಾಯಿನ್ ವ್ಯವಹಾರ ಅಥವಾ ಹಗರಣ ಖಂಡಿತವಾಗಿಯೂ ಆರ್ಥಿಕ ಅಪರಾಧದ ಸಾಲಿಗೆ ಸೇರುತ್ತದೆ. ಹಾಗಾಗಿ ಇಡಿ ಅದನ್ನು ತನಿಖೆಗೆ ಎತ್ತಿಕೊಂಡಿರುವುದು ಸೂಕ್ತವೇ ಆಗಿದೆ. ಆದರೆ ಕೇಳಿಬರುತ್ತಿರುವ ಆರೋಪದಲ್ಲಿ ರಾಜಕಾರಣದ ಆಯಾಮವೂ ಇದೆಯಾಗಿರುವುದರಿಂದ ತನಿಖೆ ನಡೆಸುವುದಷ್ಟೇ ಅಲ್ಲ ತನಿಖೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.
ಯಾವುದೇ ಪಕ್ಷದ ಸರ್ಕಾರವಿದ್ದರೂ ತನ್ನ ವಿರುದ್ಧ ಕೇಳಿಬರುವ ಆರೋಪಗಳನ್ನು ಅದು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಏಳೂವರೆ ದಶಕದ ಸ್ವತಂತ್ರ ಭಾರತದಲ್ಲಿ ಈ ಮಾತಿಗೆ ನೂರಾರು ನಿದರ್ಶನಗಳು ಸಿಗುತ್ತವೆ. ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಕಾಂಗ್ರೆಸ್ ಮಾಡಿದೆ, ಹಾಗಾಗಿ ಅದನ್ನು ಬಿಜೆಪಿ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಒಂದು ಮಾತು. ಆದರೆ ಕರ್ನಾಟಕದ ಸಂದರ್ಭದಲ್ಲಿ ಆಡಳಿತ ಪಕ್ಷದ ಕೆಲವು ನಾಯಕರೇ ಈ ಹಗರಣದ ವಿಚಾರದಲ್ಲಿ ಗುಪ್ತ್ ಗುಪ್ತ್ ಮಾತುಕತೆ ಮಾಡುತ್ತಿರುವುದನ್ನು ನೋಡಿದರೆ ಇಲ್ಲಿ ಹೊಗೆ ಮಾತ್ರವೇ ಇಲ್ಲ, ಅದರ ಬುಡದಲ್ಲಿ ಬೆಂಕಿಯೂ ಇರಬಹುದೆಂಬ ಅನುಮಾನ ಗಟ್ಟಿಯಾಗುತ್ತದೆ. ವಿರೋಧ ಪಕ್ಷ ಹೇಳಿದ ಮಾತ್ರಕ್ಕೆ ತನಿಖೆ ನಡೆಸುವ ಅಗತ್ಯ ಬೊಮ್ಮಾಯಿ ಸರ್ಕಾರಕ್ಕೆ ಇಲ್ಲವಾಗಿರಬಹುದು. ಆದರೆ ಆಡಳಿತ ಪಕ್ಷದ ಕೆಲವು ನಾಯಕರ ಪ್ರಕಾರ ಕಾಂಗ್ರೆಸ್ ನಾಯಕರ ಪಾತ್ರವೂ ಈ ಹಗರಣದಲ್ಲಿದೆ. ಈ ಮಾತು ನಿಜವೇ ಆಗಿದ್ದಲ್ಲಿ ತನಿಖೆ ನಡೆಸಿ ಆರೋಪದಲ್ಲಿ ಭಾಗಿಯಾದವರನ್ನು ಬಲಿ ಹಾಕುವ ಕೆಲಸವನ್ನು ಸರ್ಕಾರ ಮಾಡಬಾರದೇಕೆ…? ಗಾಜಿನ ಮನೆಯೊಳಗಿರುವವರು ಹೊರಕ್ಕೆ ಇರುವವರತ್ತ ಕಲ್ಲು ತೂರಬಾರದು ಎನ್ನುತ್ತಾರೆ. ಬಿಜೆಪಿ ನಾಯಕರು ಗಾಜಿನ ಮನೆಯೊಳಗೆ ಕುಳಿತಿದ್ದಾರೆಯೇ, ಜನಕ್ಕೆ ಗೊತ್ತಾಗಬೇಕು.
ಸಿದ್ದರಾಮಯ್ಯ ಸರ್ಕಾರವಿದ್ದ ಸಮಯದಲ್ಲಿ ಬೆಂಗಳೂರಿನ ವೈಭವೋಪೇತ ಹೋಟೆಲೊಂದರಲ್ಲಿ ಹೊಡೆದಾಟ ಬಡಿದಾಟ ನಡೆದಿತ್ತು. ಕಾಂಗ್ರೆಸ್ ಶಾಸಕ ಹ್ಯಾರಿಸ್‌ರ ಮಗ ಮಹಮದ್ ನಲಪಡ್ ಆಗ ನಡೆದಿದ್ದ ಕೊಲೆ ಯತ್ನದಲ್ಲಿ ಮುಖ್ಯ ಆರೋಪಿಯಾಗಿದ್ದರು. ಅದೇ ಘಟನೆಯಲ್ಲಿ ಇನ್ನೊಬ್ಬ ಆರೋಪಿ ಆಗಿದ್ದವರು ಶ್ರೀಕಿ ಎನ್ನುವುದು ಈಗ ಬಿಜೆಪಿ ಮಾಡುತ್ತಿರುವ ಆರೋಪ. ಆವಾಗ ಶ್ರೀಕಿಯನ್ನು ಬಂಧಿಸಲಿಲ್ಲವೇಕೆ…? ೨೦೧೬ರಷ್ಟು ಹಿಂದೆಯೇ ಚಾಲಾಕಿ ಯುವಕ ಹ್ಯಾಕಿಂಗ್ ಮುಂತಾದ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದರೂ ಕಾನೂನು ವ್ಯವಸ್ಥೆ ಕೈಕಟ್ಟಿ ಕುಳಿತಿತೇಕೆ…? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಬರಬೇಕಿದ್ದರೆ ಅದಕ್ಕೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯ ಅಗತ್ಯವಿದೆ. ಆರೋಪಿಗಳು ತಮ್ಮ ಪಕ್ಷದವರೇ ಆಗಿದ್ದರೂ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಆರೋಪ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿರುವುದು ಸರ್ಕಾರವನ್ನು ಖಂಡಿತವಾಗಿಯೂ ಅಡಕೊತ್ತಿಯಲ್ಲಿ ಸಿಲುಕಿಸಿದೆ. ಸರ್ಕಾರದ ಪಾಲಿಗೆ ಇದು ಬಿಸಿ ತುಪ್ಪ. ನುಂಗಿದರೆ ನಾಲಗೆ ಗಂಟಲು ಸುಡುತ್ತದೆ. ಉಗುಳಿದರೆ ಅಮೂಲ್ಯ ತುಪ್ಪ ನಷ್ಟವಾಗುತ್ತದೆ.
ಮೊನ್ನೆ ಮೊನ್ನೆ ಶ್ರೀಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದರು. ಆಗ ಅವರು ಮಾಧ್ಯಮಕ್ಕೆ ಕೊಟ್ಟ ಸುದ್ದಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಶ್ರೀಕಿ ಮಾಡಿದ ಅಪರಾತಪರಾ ಲಕ್ಷ ಲಕ್ಷ ಕೋಟಿಯದು ಎಂಬ ಸುದ್ದಿ ಸ್ಫೋಟದ ಬೆನ್ನಲ್ಲೇ ತಥಾಕಥಿತ ಆರೋಪಿ ಬಂಧಮುಕ್ತವಾದ ರೀತಿ ಯಾವುದೇ ಸರ್ಕಾರ ಸಮರ್ಥಿಸಿಕೊಳ್ಳವಂತಿಲ್ಲ. ಆತನ ವಿರುದ್ಧ ಬಲವಾದ ಸಾಕ್ಷ್ಯಾಧಾರ ಇಲ್ಲ ಎಂದು ಸ್ವತಃ ಪೊಲೀಸ್ ಕಮೀಷನರ್ ಕಮಲ್‌ಪಂತ್ ಹೇಳಿದ್ದಾರೆ.
ಪೂರ್ವಾಪರ ವಿಮರ್ಶೆ ಮಾಡದೆ ಪೊಲೀಸರು ದುಡುಕಿದರೆ ಅಥವಾ ಯಾರದೋ ಹಿತವನ್ನು ಕಾಪಾಡುವುದಕ್ಕಾಗಿ ಈ ಮಾತನ್ನು ಹೇಳಿದರೆ ಎನ್ನುವುದು ಸ್ಪಷ್ಟವಾಗಬೇಕಿದೆ. ಜಾಮೀನಿನ ಮೇಲೆ ಬಂಧನದಿಂದ ಹೊರಕ್ಕೆ ಬಂದ ಶ್ರೀಕಿ, ತನಗೆ ಯಾರು ಜಾಮೀನು ಕೊಟ್ಟರೋ ಗೊತ್ತಿಲ್ಲ. ಬಿಡುಗಡೆ ಮಾಡಿದರು ಮನೆಗೆ ಹೋಗುತ್ತಿದ್ದೇನೆಂದು ಮಾಧ್ಯಮದವರಿಗೆ ಹೇಳಿ ಹೋದ. ಜಾಮೀನು ಕೊಟ್ಟಿದ್ದು ಯಾರೆಂದು ಶ್ರೀಕಿಗೆ ಗೊತ್ತಿಲ್ಲವಾಗಿರಬಹುದು. ಆದರೆ ಪೊಲೀಸರಿಗೆ, ಆ ಮೂಲಕ ಸರ್ಕಾರ ನಡೆಸುವವರಿಗೆ ಇದಕ್ಕಿಂತ ಹೆಚ್ಚಾಗಿ ಜಾಮೀನು ನೀಡಿದ ಕೋರ್ಟ್‌ಗೆ ಜಾಮೀನು ಅರ್ಜಿ ಹಾಕಿದವರ ಪೂರ್ಣವಿಳಾಸವಿರುತ್ತದೆ. ಅದು ಜನಕ್ಕೆ ಗೊತ್ತಾಗಬೇಡವೇ…? ಬೊಮ್ಮಾಯಿ ಸರ್ಕಾರ ಒಂದೇ ಪ್ರಕರಣದಲ್ಲಿ ಪದೇ ಪದೇ ಎಡವುತ್ತ ಹೋಗುವುದು ಶೋಭೆ ತರುವ ಬೆಳವಣಿಗೆ ಅಲ್ಲವೇ ಅಲ್ಲ.