ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ

Share

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ

ಹಿಂದಿನ ಸಂಚಿಕೆಯ ಮುಂದುವರೆದ ಭಾಗ

ಶಿವಣ್ಣ ಅವರ ಅದ್ಭುತ ಗಮಕಕಲೆಯನ್ನು ಕೇಳಿಯೇ ಅನುಭವಿಸಬೇಕು. ಅಷ್ಟೇನೂ ಹೆಚ್ಚು ಓದಿರದಿದ್ದ ಶಿವಣ್ಣ ಅವರ ಸ್ಪಷ್ಟ ಉಚ್ಚಾರದ ಪಾರಾಯಣ ಅವರ ಗಮಕಕಲೆಯ ಹೆಗ್ಗುರುತು ಎನ್ನಬಹುದು. ಇನ್ನು ಕುಂಬಾರ ಏಕಾಂತಪ್ಪನವರ ಅರ್ಥಗಾರಿಕೆಯಂತೂ ಪುರಾಣಕಥೆ ಆಲಿಸುವವರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತಿಶಾಲಿಯಾಗಿತ್ತು. ಇಡೀ ದಿನ ಹೊಲಗದ್ದೆಗಳಲ್ಲಿ ದುಡಿದು ಸಂಜೆಯ ವೇಳೆಯಲ್ಲಿ ಇಂತಹ ಧಾರ್ಮಿಕ ಪ್ರವಚನಗಳಿಗೆ ಕಿವಿಯಾಗುತ್ತಿದ್ದ ನನ್ನೂರವರು ಆ ಹೊತ್ತಿನಲ್ಲಿ ಅನಾಯಾಸವಾಗಿ ಸಂಪಾದಿಸುತ್ತಿದ್ದ ಕೋಟಿಪುಣ್ಯ ಇಂದೂ ನನ್ನ ಕಣ್ಣುಗಳನ್ನು ಕುಕ್ಕುತ್ತಿದೆ.

ಶನಿಮಹಾತ್ಮೆಯ ಪುರಾಣದ ಮಧ್ಯೆ ವಿಕ್ರಮರಾಜನ ಕೈಕಾಲುಗಳನ್ನ ಕಡಿದ ಹೊತ್ತು ಪಾರಾಯಣಕ್ಕೆ ಅಲ್ಪಅವಧಿಯ ವಿರಾಮವನ್ನು ನೀಡುವುದು ವಾಡಿಕೆ. ಅಂತೆಯೇ ಪಾರಾಯಣದ ಈ ಸಲವೂ ವಿರಾಮದ ವೇಳೆ ಮಂಡಕ್ಕಿ ಉಸಲಿ, ಕೋಸಂಬರಿ ಮುಂತಾದ ತಿಂಡಿತಿನಿಸುಗಳನ್ನು ಪುರಾಣ ಕೇಳುವ ಜನರಿಗೆ ಹಂಚುವ ಕಾರ್ಯದಲ್ಲಿ ಮನೆಯವರ ಒಟ್ಟಿಗೆ ನಾನೂ ಕೈ ಜೋಡಿಸಿದೆ. ಅಲ್ಲಿಯವರೆಗೂ ತನ್ನ ‘ಹೂಂ’ಗುಟ್ಟುವಿಕೆಯಲ್ಲಿಯೇ ತಲ್ಲೀನನಾಗಿದ್ದ ನೀಲಕಂಠಪ್ಪ ನಾನು ಕೊಡಮಾಡಿದ ಉಪಾಹಾರದ ತಿನಿಸುಗಳನ್ನು ತನ್ನ ಉಪವಾಸದ ಕಾರಣಕೊಟ್ಟು ನಯವಾಗಿ ತಿರಸ್ಕರಿಸಿದ. ಅವತ್ತು ಸೋಮವಾರ, ನೀಲಕಂಠಪ್ಪನ ವಾರದ ಉಪವಾಸದ ದಿನ. ನೀಲಕಂಠಪ್ಪ ಉಪಾಹಾರ ನಿರಾಕರಿಸಿದ್ದನ್ನು ಕಂಡ ನನ್ನ ಅವ್ವ ಪೂಜೆಗೆ ಇಟ್ಟು ಇನ್ನೂ ಮಿಕ್ಕಿದ್ದ ರಸಬಾಳೆ ಹಣ್ಣಿನ ಚಿಪ್ಪೊಂದನ್ನು ನೀಲಕಂಠಪ್ಪನಿಗೆ ನೀಡಿದಳು. ಆರೇಳು ಹಣ್ಣುಗಳಿದ್ದ ಚಿಪ್ಪನ್ನು ತಿಂದ ಮೇಲೆ ನಮ್ಮ ಮನೆಯ ಎಮ್ಮೆಯ ಒಂದು ಲೋಟ ಸಕ್ಕರೆ ಬೆರೆಸಿದ ಕಾಯಿಸಿದ ಹಾಲನ್ನು ನೀಲಕಂಠಪ್ಪ ಕುಡಿದ ನಂತರವೇ ನನ್ನ ಅವ್ವನ ಮುಖದಲ್ಲಿ ನಗು ಅರಳಿದ್ದು.

ಕಾಲಕಾಲಕ್ಕೆ ನಮ್ಮ ಮನೆಯ ಗಂಡಸರೆಲ್ಲರ ಕೂದಲು ಕತ್ತರಿಸುವ ಹೊಣೆಯೂ ನೀಲಕಂಠಪ್ಪನ ಹೆಗಲ ಮೇಲೆಯೇ ಇತ್ತು. ನಮ್ಮ ಮನೆಯಲ್ಲಿ ನನ್ನ ತಾತ, ಅಪ್ಪ, ನಾನು ಮತ್ತು ನನ್ನ ತಮ್ಮನ ಕೂದಲುಗಳನ್ನು ಕತ್ತರಿಸುವ ಸಲುವಾಗಿ ತಿಂಗಳಿಗೊಮ್ಮೆಯಾದರೂ ನೀಲಕಂಠಪ್ಪನಿಗೆ ಮನೆಯ ಯಾರೊಬ್ಬರಾದರೂ ಗಂಡಸರು ಮುಖಾಮುಖಿಯಾಗುತ್ತಿದ್ದೆವು. ನನ್ನ ತಾತ ಮತ್ತು ಅಪ್ಪನ ಕೇಶಮುಂಡನಕ್ಕಾಗಿ ನಮ್ಮ ಮನೆಗೇ ಬರುತ್ತಿದ್ದ ನೀಲಕಂಠಪ್ಪ. ಈ ಸಂದರ್ಭದಲ್ಲಿ ಕೂದಲು ಇನ್ನೂ ಬೆಳೆದಿಲ್ಲ, ನನಗೆ ಮೈ ಸರಿಯಿಲ್ಲ ಎನ್ನುವ ಯಾವುದಾದರೂ ಕಾರಣ ಒಡ್ಡಿ ನಾನು ಮತ್ತು ನನ್ನ ತಮ್ಮ ನಮ್ಮ ಕೂದಲುಗಳನ್ನು ಕತ್ತರಿಸಿಕೊಳ್ಳದೆ ಹೋದಲ್ಲಿ ನಾವು ಕೇಶಮುಂಡನದ ಸಲುವಾಗಿ ನೀಲಕಂಠಪ್ಪನ ಮನೆಗೇ ಎಡತಾಕಬೇಕಾಗಿತ್ತು. ನೀಲಕಂಠಪ್ಪ ನಮ್ಮ ಮನೆಗೆ ಬಂದರೆ ಒಂದರ್ಧ ಗಂಟೆಯಲ್ಲಿ ಮುಗಿದು ಹೋಗುವ ಪ್ರಕ್ರಿಯೆಗೆ ನೀಲಕಂಠಪ್ಪನ ಮನೆ ಮುಂದಿನ ಹಜಾರದಲ್ಲಿ ನಾವು ಗಂಟೆಗಟ್ಟಲೆ ಕಾಯಬೇಕಿತ್ತು. ನಮಗಿಂತ ಮುಂಚಿತವಾಗಿ ಬಂದ ಗ್ರಾಹಕರ ಕೇಶಮುಂಡನದ ಬಳಿಕವಷ್ಟೆ ನಮ್ಮ ಸರದಿ ಬರುತ್ತಿದ್ದದ್ದು.

ನಾನು ಬಾಲ್ಯದಿಂದಲೂ ಕೂದಲು ಕತ್ತರಿಸುವ ವಿಷಯದಲ್ಲಿ ಹಠಮಾರಿಯೇ ಹೌದು. ಕೂದಲು ಉದ್ದವಾಗಿ ಕಿವಿಗಳ ಎರಡೂ ಬದಿಯನ್ನ ಮುಚ್ಚುವಷ್ಟು ನೀಳವಾಗಿ ಬೆಳೆದರೂ ಕೂದಲು ತೆಗೆಸುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಆದರೆ ತಲೆಗೂದಲು ಒಂದು ಹಂತದ ಬೆಳವಣಿಗೆಯನ್ನು ದಾಟಿದರೆ ನನಗೆ ನೆಗಡಿ ವಕ್ಕರಿಸುತ್ತಿತ್ತು. ತಲೆಗೂದಲು ತೆಗೆಸುವವರೆಗೆ ಶೀತ ನನ್ನನ್ನು ಬಿಟ್ಟೂಬಿಡದಂತೆ ಬಾಧಿಸುತ್ತಿತ್ತು. ನಿರ್ವಾಹವಿಲ್ಲದೆ ನನ್ನ ಕೂದಲು ತೆಗೆಸುವಿಕೆಗೆ ಎಚ್ಚರಿಕೆಯ ಗಂಟೆಯಂತಿದ್ದ ಈ ನೆಗಡಿ ಕೆಮ್ಮಿನಿಂದ ಮುಕ್ತಿ ಪಡೆಯಲೋಸುಗ ಮುಂಡೆಯನ್ನು ನೀಲಕಂಠಪ್ಪನಿಗೆ ಒಪ್ಪಿಸಲೇಬೇಕಾಗಿತ್ತು.

ಕೇಶಮುಂಡನಕ್ಕೆ ನಾನು ಇಷ್ಟಪಡದ ಕೆಲ ಸಂಗತಿಗಳಲ್ಲಿ ಸುಮಾರು ಹೊತ್ತು ನೀಲಕಂಠಪ್ಪ ಹೇಳಿದ ಭಂಗಿಯಲ್ಲಿ ಮತ್ತು ಕೋನಗಳಲ್ಲಿ ತಲೆಯನ್ನು ಹಾಗೆಯೇ ಹಿಡಿದಿಟ್ಟುಕೊಂಡು ಶಿಲ್ಪದ ರೀತಿ ಕೂರಬೇಕಾಗಿ ಬರುತ್ತಿದ್ದದ್ದು ಒಂದು ಪ್ರಮುಖ ಅಂಶ. ಮತ್ತೊಂದು ಅಂಶ ಎಂದರೆ ಎಷ್ಟು ಬೇಡಿದರೂ ದಯಾಹೀನನಂತೆ ನೀಲಕಂಠಪ್ಪ ನನ್ನ ಕೂದಲುಗಳ ಮೇಲೆ ಚಲಾಯಿಸುತ್ತಿದ್ದ ಮೆಷಿನ್. ಇಂದಿನ ಮಿಲ್ಟ್ರಿಕಟ್ಟಿಂಗ್ ಹೋಲುವಂತಿದ್ದ ನೀಲಕಂಠಪ್ಪನ ಅಂದಿನ, ಮಕ್ಕಳಿಗಾಗಿಯೇ ಆತ ವಿಶೇಷವಾಗಿ ವಿಕಸಿಸಿದ್ದ, ಮೆಷಿನ್ ಚಲಾಯಿಸಿ ಕಿವಿಗಳ ಮೇಲೆ ಎರಡು ಬೆರಳುಗಳಷ್ಟು ಜಾಗಬಿಟ್ಟು ತಲೆಯ ಮುಂಭಾಗದಿಂದ ಹಿಂಭಾಗದವರೆಗೆ ಚಕ್ರಾಕಾರವಾಗಿ ತಲೆಗೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಿದ್ದ ಕಟಿಂಗ್ ನನಗೆ ಸ್ವಲ್ಪವೂ ಸೇರುತ್ತಿರಲಿಲ್ಲ. ತೀರಾ ಸಣ್ಣವನಿದ್ದಾಗ ಈ ಕಟಿಂಗ್ ಬಗ್ಗೆ ತಕರಾರು ಎತ್ತದವನು ಬೆಳೆದ ಹಾಗೆಲ್ಲಾ ನೀಲಕಂಠಪ್ಪನ ಈ ತೆರನಾದ ಕೇಶಮುಂಡನಕ್ಕೆ ನನ್ನ ಕೈಲಾದಷ್ಟು ಪ್ರತಿರೋಧವನ್ನು ಒಡ್ಡುತ್ತಲೇ ನಡೆದಿದ್ದೆ. ಆದರೆ ನಮ್ಮ ಮನೆಯಲ್ಲಿ ಕೇಶಮುಂಡನವಾದ ಹೊತ್ತು ತಂದೆಯ ಭಯದಿಂದ ನೀಲಕಂಠಪ್ಪನಲ್ಲಿ ಗೊಣಗಾಟದ ಮೂಲಕ ಸೀಸರ್ ಕಟ್ ಮಾಡುವಂತೆ ಪರಿಪರಿಯಾಗಿ ವಿನಂತಿ ಮಾಡಿಕೊಂಡದ್ದು ಯಾವ ಫಲವನ್ನೂ ನೀಡಿರಲಿಲ್ಲ. ಹಾಗಾಗಿ ಸಬೂಬುಗಳ ಮೊರೆ ಹೋಗಿ ಮನೆಯಲ್ಲಿನ ಮುಂಡನವನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ನೀಲಕಂಠಪ್ಪನ ಮನೆಗೆ ಹೋದ ಹೊತ್ತು ಗಟ್ಟಿಧ್ವನಿಯಲ್ಲಿ ಆಕ್ಷೇಪ ಎತ್ತುವ ಮೂಲಕ ಸೀಸರ್ ಕಟಿಂಗ್ ಮಾಡಿಸಿಕೊಂಡು ಹಿಮಾಲಯವನ್ನು ಎತ್ತಿದಂತಹ ದೊಡ್ಡ ಸಾಧನೆಯನ್ನು ಮಾಡಿದ ಹೆಮ್ಮೆಯಲ್ಲಿ ಮನೆಗೆ ಮರಳುತ್ತಿದ್ದವನಿಗೆ ತಲೆಯ ಮೇಲೆ ಅಪ್ಪ ಕುಕ್ಕುತ್ತಿದ್ದ ಎರಡು ಏಟುಗಳು ನನ್ನನ್ನು ಮತ್ತೆ ಹಿಮಾಲಯದ ಬುಡವಾಸಿಯನ್ನಾಗಿ ಮಾಡುತ್ತಿದ್ದವು. ಮೆಷಿನ್ ಕಟಿಂಗ್ ನ ನನ್ನ ವಿರೋಧಕ್ಕೆ ಸಹಪಾಠಿಗಳು ಮಾಡುತ್ತಿದ್ದ ಗೇಲಿಯೂ ಒಂದು ಪ್ರಮುಖಕಾರಣ ಎನ್ನಿಸುತ್ತದೆ. ಬೋಳಾದ ನನ್ನ ತಲೆಯ ಭಾಗದಲ್ಲಿ ತಮ್ಮ ಕೈಯಾಡಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ಗೆಳೆಯರ ಜೊತೆ ಅನೇಕ ಬಾರಿ ಜಗಳವೂ ಮಾಡಿದ್ದಿದೆ. ಈ ವಿಷಯದಲ್ಲಿ ನಮ್ಮೂರಿನ ಲಿಂಗಾಯತ ಮಕ್ಕಳಿಗೆ ಇಲ್ಲದ ಒಂದು ಸ್ವಾತಂತ್ರ್ಯ ಬೇರೆ ಜಾತಿಯ ಮಕ್ಕಳಿಗೆ ಆ ಕಾಲದಲ್ಲಿ ಇತ್ತು ಎನಿಸುತ್ತದೆ. ಹೆಚ್ಚೂ ಕಡಿಮೆ ಎಲ್ಲಾ ಲಿಂಗಾಯತ ಮಕ್ಕಳಿಗೆ ನೀಲಕಂಠಪ್ಪ ಕ್ಷೌರಿಕನಾದಲ್ಲಿ ಬೇರೆ ಜಾತಿಯ ಮಕ್ಕಳು ಊರಿನ ಮತ್ತೊಬ್ಬ ಕ್ಷೌರಿಕ ಸಹೋದರರಾದ ಹಜಾಮರ ರಾಮಪ್ಪ ಮತ್ತು ಶಂಕರಪ್ಪ ಅವರ ಬಳಿ ಹೋಗಿ ಕೂದಲು ತೆಗೆಸುತ್ತಿದ್ದರು. ಈ ಕೆಲಸದವರು ನೀಲಕಂಠಪ್ಪನ ಹಾಗೆ ಮಕ್ಕಳ ಬೇಡಿಕೆಗಳಿಗೆ ನಿರ್ದಯಿಯಾಗಿರದೆ ಮಕ್ಕಳು ಹೇಳಿದ ರೀತಿಯಲ್ಲಿ ಕೇಶಮುಂಡನವನ್ನ ಮಾಡುತ್ತಿದ್ದುದರಿಂದ ಗೆಳೆಯ ಚಿದಾನಂದ ತನ್ನ ಮನೆಯವರೆಲ್ಲರೂ ನೀಲಕಂಠಪ್ಪನ ಖಾಯಂ ಗಿರಾಕಿಗಳಾದ ಹೊತ್ತೂ ಕೆಲಸದ ರಾಮಪ್ಪನ ಬಳಿಗೇ ಹೋಗುತ್ತಿದರ ಗುಟ್ಟನ್ನು ಹೈಸ್ಕೂಲಿಗೆ ಕಾಲಿಟ್ಟ ನಂತರದಲ್ಲಿಯೇ ರಟ್ಟು ಮಾಡಿದ್ದು. ಅಂದು ನನಗೆ ನೀಲಕಂಠಪ್ಪನ ಮೇಲೆ ವಿಪರೀತ ಸಿಟ್ಟು ಬಂದಿತ್ತು.

ನೀಲಕಂಠಪ್ಪನ ಕೆಲಸದ ಕಸುಬಿಗೆ ಆ ದಿನಗಳಲ್ಲಿ ಯಾರೂ ಹಣ ಸಂದಾಯ ಮಾಡುತ್ತಿರಲಿಲ್ಲ. ಅವರ ಕಾಯಕಕ್ಕೆ ಕಾಳುಕಡ್ಡಿ ರೂಪದಲ್ಲಿ ಹಣ ಸಂದಾಯ ಮಾಡುವ ‘ವರ್ತನೆ’ಯ ಪದ್ಧತಿ ಜಾರಿಯಲ್ಲಿತ್ತು. ಮನೆಯಲ್ಲಿನ ಗಂಡಸರ ಸಂಖ್ಯೆಯ ಮೇಲೆ ಇಂತಿಷ್ಟು ಸೇರು ಎಂದು ನಿರ್ಧಾರವಾಗುತ್ತಿದ್ದ ಜೋಳ, ನವಣೆ, ಗೋಧಿ ಮತ್ತಿತರ ದವಸಧಾನ್ಯಗಳನ್ನ ವರ್ಷಕ್ಕೆ ಒಮ್ಮೆ ಕೊಡುವ ಪದ್ಧತಿ ಚಾಲ್ತಿಯಲ್ಲಿತ್ತು. ನೀಲಕಂಠಪ್ಪ ಅವರ ಗ್ರಾಹಕರೆಲ್ಲರೂ ರೈತಾಪಿವರ್ಗದವರೇ. ಸುಗ್ಗಿಹೊತ್ತಿನಲ್ಲಿ ತಮ್ಮ ಹೊಲಗಳಲ್ಲಿಯೇ ಕಣಗಳನ್ನ ಮಾಡಿಕೊಂಡು ಬೆಳೆದ ಪೈರುಗಳಿಂದ ಕಾಳುಕಡ್ಡಿಗಳನ್ನು ಬೇರ್ಪಡಿಸುತ್ತಿದ್ದರು. ಇಂತಹ ಮನೆಯವರು ಕಣ ಮಾಡಿದ್ದಾರೆ ಎಂದು ನೀಲಕಂಠಪ್ಪನಿಗೆ ಅದು ಹೇಗೆ ಮುನ್ಸೂಚನೆ ದೊರೆಯುತ್ತಿತ್ತೋ ಕಾಣೆ, ಆದರೆ ಕಾಳಿನರಾಶಿ ಕಣದಲ್ಲಿ ತಯಾರಾಗುವ ಹೊತ್ತು ತನ್ನ ಚೀಲದೊಂದಿಗೆ ನೀಲಕಂಠಪ್ಪ ಅಥವಾ ಆತನ ಮಗ ಪ್ರತ್ಯಕ್ಷವಾಗುವ ಪ್ರಕ್ರಿಯೆ ಮಾತ್ರ ಇಂದೂ ನನ್ನ ಬೆರಗಿಗೆ ಕಾರಣವಾಗಿದೆ. ಕಾಳನ್ನು ಚೀಲಗಳಿಗೆ ತುಂಬುವ ಹೊತ್ತು ರಾಶಿಗೆ ಪೂಜೆ ಸಲ್ಲಿಸಿ ನಂತರ ಕೆಲಸದವರಿಗೆ, ಅಗಸರಿಗೆ, ಪೂಜಾರಿಗಳು ಮುಂತಾದವರಿಗೆ ವರ್ಷವೊಂದಕ್ಕೆ ಕೊಡಬೇಕಾದ ವರ್ತನೆಯ ಕಾಳುಗಳನ್ನು ಹಂಚಿದ ನಂತರವೇ ರೈತರು ಉಳಿದ ಕಾಳುಕಡ್ಡಿಗಳನ್ನು ತಮ್ಮ ಮನೆಗೆ ಸಾಗಿಸುತ್ತಿದ್ದರು. ಅಕಸ್ಮಾತ್ ನೀಲಕಂಠಪ್ಪ ಅಥವಾ ಆತನ ಪ್ರತಿನಿಧಿಗಳು ಕಣಕ್ಕೆ ಯಾವುದೋ ಕಾರಣವರ್ಷ ಹಾಜರಾಗದೆ ಇದ್ದಲ್ಲಿ ಆತನ ವರ್ತನೆಯ ಪಾಲಿನ ಕಾಳನ್ನು ಒಂದು ಪ್ರತ್ಯೇಕ ಚೀಲದಲ್ಲಿ ಸುರಿದು ಮನೆಗೆ ಸಾಗಿಸುತ್ತಿದ್ದ ರೈತರು ಮುಂದಿನ ದಿನಗಳ ಕೇಶಮಂಡನದ ವೇಳೆ ಮನೆಗೆ ಬರುತ್ತಿದ್ದ ನೀಲಕಂಠಪ್ಪನಿಗೆ ಆ ಕಾಳನ್ನು ತಲುಪಿಸುತ್ತಿದ್ದದ್ದೂ ಉಂಟು. ಪುರಾಣ ಪ್ರವಚನೆಯ ಹೊತ್ತು ಗಂಭೀರವದನನಾಗಿ ಹೂಂಗುಟ್ಟುತ್ತಿದ್ದ ನೀಲಕಂಠಪ್ಪನಿಗೂ, ಕೇಶ ಮಂಡನದ ವೇಳೆ ಸರ್ವಾಧಿಕಾರಿಯಂತೆ ನಮ್ಮ ತಲೆಗಳನ್ನು ಆಕ್ರಮಿಸುತ್ತಿದ್ದ ನೀಲಕಂಠಪ್ಪನಿಗೂ, ಬಗಲಲ್ಲಿ ಒಂದು ಗೋಣಿಚೀಲ ಸಿಗಿಸಿಕೊಂಡು ಕಣದ ಹೊರಗಡೆಯೇ ನಿಂತು ರೈತರು ತಮ್ಮ ವಿಧಿವಿಧಾನಗಳ ನಂತರದಲ್ಲಿ ಕೊಡಮಾಡುತ್ತಿದ್ದ ಕಾಳಿನ ನಿರೀಕ್ಷೆಯಲ್ಲಿಯೇ ನಿಲ್ಲುತ್ತಿದ್ದ ನೀಲಕಂಠಪ್ಪನಿಗೂ ಇದ್ದ ಅಗಾಧ ವ್ಯತ್ಯಾಸಗಳು ಆ ಹೊತ್ತಿಗೇ ನನ್ನ ಕಣ್ಣುಗಳಿಗೆ ರಾಚುತ್ತಿದ್ದವು. ದೇಹವನ್ನು ಇಡಿಯಾಗಿ ಮಾಡಿಕೊಂಡು ಒಂದು ರೀತಿಯ ದೈನೇಸಿಭಾವದಲ್ಲಿ ಕೈಕಟ್ಟಿ ಕಣದ ಹೊರಗೇ ನಿಲ್ಲುತ್ತಿದ್ದ ನೀಲಕಂಠಪ್ಪನ ನೆನಪು ನಾನು ಮರೆಯಲು ಪ್ರಯತ್ನಿಸುತ್ತಿರುವ ಬಾಲ್ಯದ ನೆನಪುಗಳಲ್ಲಿಯೇ ಪ್ರಖರವಾದದ್ದು. ವೈಯಕ್ತಿಕ ಮಟ್ಟದಲ್ಲಿ ನನ್ನ ಕಟಿಂಗ್ ಕುರಿತಾಗಿ ನೀಲಕಂಠಪ್ಪನ ಒಟ್ಟಿಗೆ ಅದೆಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಇದ್ದ ಹೊತ್ತೂ ನಾನು ಬಾಲ್ಯದಲ್ಲಿ ಅತಿಯಾಗಿ ಇಷ್ಟಪಡುವ ವ್ಯಕ್ತಿ ಈ ರೀತಿಯ ಅವಮಾನಗಳಿಗೆ ತುತ್ತಾಗುವುದು ನನ್ನ ಎಳೆಯ ಮನಸ್ಸಿನ ಮೇಲೆ ವಜ್ರಾಘಾತವನ್ನು ಉಂಟುಮಾಡುತ್ತಿತ್ತು.

ಬಾಲಕನಾದ ನಾನು ನೀಲಕಂಠಪ್ಪನ ಮನೆಗೇ ಹೋಗಿ ಕೇಶಮುಂಡನ ಮಾಡಿಸಿಕೊಂಡು ಬರುವುದಕ್ಕೆ ಹಾತೊರೆಯಲು ಇದ್ದ ಮತ್ತೊಂದು ಪ್ರಬಲಕಾರಣ ಎಂದರೆ ಅಲ್ಲಿ ನಮ್ಮ ಸರತಿಯ ನಿರೀಕ್ಷೆಯಲ್ಲಿ ಇದ್ದಷ್ಟು ಹೊತ್ತೂ ಧಾರಾಳವಾಗಿ ಕೇಳಿಬರುತ್ತಿದ್ದ ಊರಿನ ವಾರ್ತೆಗಳು. ನಮ್ಮ ಮನೆಗೆ ಬಂದರೆ ಮೌನವಾಗಿಯೇ ತನ್ನ ಕೆಲಸಕಾರ್ಯಗಳನ್ನು ಮುಗಿಸಿ ಹೆಚ್ಚೆಂದರೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ, ಒಂದು ಕಾಲದಲ್ಲಿ ತನ್ನ ನೆಚ್ಚಿನ ಗ್ರಾಹಕಮಿತ್ರನೆ ಆದ, ನನ್ನ ಚಿಕ್ಕಪ್ಪನ ಬಗ್ಗೆ ವಿಚಾರಿಸಿ ಹೊರಡುತ್ತಿದ್ದ ನೀಲಕಂಠಪ್ಪ ಆತನ ಮನೆಯ ಹಜಾರದಲ್ಲಿ ಒಂದು ನಿಮಿಷವೂ ಸುಮ್ಮನೆ ಇರುತ್ತಿರಲಿಲ್ಲ. ಗ್ರಾಹಕರೊಂದಿಗೆ, ಕೇಶಮುಂಡನ ಮಾಡಿಸಿಕೊಳ್ಳುವವರು ಹಾಗೂ ತಮ್ಮ ಸರತಿಗಾಗಿ ಕಾಯಿತ್ತಿದ್ದವರನ್ನೂ ಸೇರಿದಂತೆ, ಎಗ್ಗಿಲ್ಲದೆ ನೀಲಕಂಠಪ್ಪ ಮಾತುಕತೆ ಸಾಗುತ್ತಿತ್ತು. ಅದಕ್ಕೆ ಇಂತಹುದೇ ವಿಶೇಷ ವಿಷಯ ಇರಬೇಕು ಎನ್ನುವ ನಿಯಮ ಇರಲಿಲ್ಲ. ಯಾವ ವಿಷಯವನ್ನಾದರೂ ರಸವತ್ತಾಗಿ ವಿವರಿಸುವ ಕಲೆ ನೀಲಕಂಠಪ್ಪನ ಬಹುಮುಖೀ ವ್ಯಕ್ತಿತ್ವದ ಮತ್ತೊಂದು ಆಯಾಮ ಎನ್ನಬಹುದು. ಆತ ಎಂತಹ ಅದ್ಭುತ ಮಾತುಗಾರ ಎಂದರೆ ಪುರಾಣ ಪಾರಾಯಣದ ವೇಳೆ ಅರ್ಥಗಾರಿಕೆಯನ್ನೂ ತನ್ನ ಹೂಂಗುಟ್ಟುವಿಕೆಯ ಒಟ್ಟಿಗೇ ನಿಭಾಯಿಸಬಲ್ಲ ಅತಿ ವಿರಳ ಸಾಮರ್ಥ್ಯ ನೀಲಕಂಠಪ್ಪನಲ್ಲಿ ರಕ್ತಗತವಾಗಿತ್ತು ಎಂದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ. ಮಕ್ಕಳಿಗೆ ಯುಗಾದಿಯ ವೇಳೆಗೆ ಬಟ್ಟೆಗಳನ್ನು ಸಮಯಕ್ಕೆ ಸರಿಯಾಗಿ ಹೊಲೆದುಕೊಡದೆ ಸತಾಯಿಸಿದ ಕುಂಬಾರ ಕುರುಗೋಡಪ್ಪನ ವಿಷಯದ ಬಗ್ಗೆ ಮಾತನಾಡುತ್ತಿದ್ದ ರಾಯನಹಳ್ಳಿ ಮಲ್ಲಜ್ಜನ ಮಾತುಗಳಿಗೆ ಅತ್ಯಂತ ಮಾರ್ಮಿಕ ರೀತಿಯಲ್ಲಿ ಸ್ಪಂದಿಸುತ್ತಿದ್ದ ನೀಲಕಂಠಪ್ಪ ಅದಕ್ಕೆ ತನ್ನದೇ ಆದ ಅನುಭವದ ಎರಕ ಹೊಯ್ಯುತ್ತಿದ್ದ. ಗಿಡ್ಡನಾಗಣ್ಣನವರ ಗಿಡ್ಡತಿಪ್ಪಣ್ಣನಿಗೆ ಬೆನ್ನುನೋವಾಗಿ ಹಾಸಿಗೆ ಹಿಡಿದಾಗ ಆತನ ಕೇಶಮುಂಡನಕ್ಕಾಗಿ ಪಟ್ಟ ಪರದಾಟ ನೀಲಕಂಠಪ್ಪನ ಮತ್ತೊಬ್ಬ ಗ್ರಾಹಕನೊಂದಿಗಿನ ಸಂಭಾಷಣೆಯಲ್ಲಿ ಇಣುಕುತ್ತಿತ್ತು. ಗೌಡ್ರ ನೀಲಕಂಠಪ್ಪ, ಮನೆಯಲ್ಲಿ ಇರುವ ಒಬ್ಬನೇ ಒಬ್ಬ ಗಂಡಸು ಎನ್ನುವ ಅಂಶದ ಹೊರತಾಗಿಯೂ, ವರ್ತನೆಯ ಕಾಳನ್ನು ಕೊಡಲು ಹೋದ ವರ್ಷ ಮಾಡಿದ ವಿಳಂಬ ಮಗದೊಂದು ಸಂಭಾಷಣೆಯ ವಿಷಯವಾದಲ್ಲಿ ಭರಮಸಾಗರದ ಬಳಿಯ ‘ಕೈದಾಳು’ವಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಾ ಅಲ್ಲಿಯೇ ನೆಲೆಸಿದ್ದ ಕುಂಬಾರ ವಿರೂಪಣ್ಣ ಬಹಳ ವರ್ಷಗಳ ನಂತರ ಹೋದ ವಾರವಷ್ಟೇ ಊರಿಗೆ ಬಂದಿದ್ದಾಗ ತನ್ನಿಂದ ಆಯುಷ್ಕರ್ಮವನ್ನ ಮಾಡಿಸಿಕೊಂಡು “ಇಡೀ ದಾವಣಗೆರೆ ಸೀಮೆಯಲ್ಲಿಯೇ ನಿಮ್ಮಂತಹ ಕುಶಲ ಕೆಲಸದವರನ್ನು ಕಾಣೆ” ಎಂದು ಹೊಗಳಿದ ಮಾತುಗಳ ಉದ್ಗಾರ ನೀಲಕಂಠಪ್ಪನ ಬೇರೊಂದು ಮಾತುಕತೆಗೆ ಗ್ರಾಸವಾಗುತ್ತಿತ್ತು. ಮೂರ್ನಾಲ್ಕು ಸಲ ಅಲೆದರೂ ಆಯುಷ್ಕರ್ಮಕ್ಕೆ ಸಿಗದ ದೊಡ್ಡಮನೆ ಬಸಣ್ಣನ ವಿಷಯದ ಪ್ರಸ್ತಾಪನೆ ಮಾಡಿದ ಹೊತ್ತು ರುದ್ರಣ್ಣಗೌಡರ ಇಂದ್ರಣ್ಣನದೂ ಇದೇ ಕಥೆ ಎಂದು ತನ್ನ ಮಾತಿಗೆ ಮುಕ್ತಾಯ ಹೇಳುತ್ತಿದ್ದ ನೀಲಕಂಠಪ್ಪ. ಒಗ್ಗಾಣೆ ಬಸಣ್ಣನ ಮಗ ನಾಗರಾಜನ ಕೂದಲು ಎಷ್ಟು ಒರಟಾಗಿದ್ದವು ಎಂದರೆ ನೀಲಕಂಠಪ್ಪ ಹಲವು ಬಾರಿ ತನ್ನ ಕತ್ತರಿಯನ್ನು ತಾನು ಜೊತೆಯಲ್ಲಿಯೇ ಕೊಂಡೊಯ್ಯುತ್ತಿದ್ದ ಕಪ್ಪು ಸಾಣೆಕಲ್ಲಿನ ಮೇಲೆ ಹಲವು ಬಾರಿ ಹರಿತಗೊಳಿಸಿ ಪ್ರಯತ್ನಿಸಿದರೂ ಸಾಧ್ಯವಾಗದೇ ಹೋದದ್ದು ಬೇರೊಂದು ಆಯಾಮದಲ್ಲಿ ಸಾಗುತ್ತಿದ್ದ ಮಾತುಕತೆಗೆ ಗ್ರಾಸವಾಗುತಿತ್ತು. ಮಾರನೇ ದಿನ ನನ್ನ ಸಹಪಾಠಿಯೇ ಆದ ನಾಗರಾಜನನ್ನು ಬೇರೊಂದು ಗ್ರಹದಿಂದ ಬಂದ ಜೀವಿ ಎನ್ನುವ ರೀತಿ ನೋಡುವುದಕ್ಕೆ ಕಾರಣವೂ ಆಗುತ್ತಿತ್ತು. ಹೀಗೆ ಬಹುವಿಧದ ಎಂದೂ ಮುಗಿಯದ ಅಕ್ಷಯಪಾತ್ರೆಯೋಪಾದಿಯ ಮಾತುಕತೆಗಳ ಮೂಕಪ್ರೇಕ್ಷಕನಾಗಲಿಕ್ಕೇ ನಾನು ನನ್ನ ಹಿಂದೆ ಬಂದ ಕೆಲವು ಗ್ರಾಹಕರನ್ನ ನನಗಿಂತ ಮೊದಲು ನೀಲಕಂಠಪ್ಪನ ಬಳಿಗೆ ಕಳುಹಿಸಿ ಆತನಾಡುವ ಮನೋರಂಜಕ ಮಾತುಕತೆಗಳನ್ನು ಕೆಲ ಗಂಟೆಗಳ ಕಾಲ ಮೆದ್ದಿದ್ದಿದೆ. ಇದಕ್ಕಾಗಿಯೇ ರಜಾ ದಿನಗಳಲ್ಲಿ ಅಷ್ಟೇ ನಾನು ಮುಂಡನಕ್ಕೆ ನೀಲಕಂಠಪ್ಪನ ಬಳಿ ಸಾರುತ್ತಿದ್ದದ್ದು. ಹಜಾಮ, ದರ್ಜಿ ಹಾಗೂ ಇಂತಹುದೇ ಹಳ್ಳಿಗಳ ಕುಶಲಕರ್ಮಿಗಳ ಸಾನ್ನಿಧ್ಯದಲ್ಲಿ ಸಿಗುವ ಲೋಕಾನುಭವ ಬೇರೆಲ್ಲೂ ಸಿಗುವುದಕ್ಕೆ ದುರ್ಲಭ ಎನ್ನುವುದು ನನ್ನ ಅನುಭವಜನ್ಯ ಸಂಗತಿಯಾಗಿದೆ.

ಸ್ಥಿತ್ಯಂತರ ತರುವಷ್ಟು ಖುಷಿಯನ್ನೂ ಬೇರಾವುದೂ ಉಂಟುಮಾಡಲಿಕ್ಕೆ ಶಕ್ಯವಿಲ್ಲ. ಆ ಹೊತ್ತಿನ ನನ್ನ ಬಾಲ್ಯದ ಎರಡು ಗುರಿಗಳು ಎಂದರೆ ನೀಲಕಂಠಪ್ಪನ ಆಯುಷ್ಕರ್ಮ ಮತ್ತು ಕುಂಬಾರ ಕುರುಗೋಡಪ್ಪ ಹೊಲೆಯುವ ಬಟ್ಟೆಗಳಿಂದ ಮುಕ್ತವಾಗುವುದು. ಮುಕ್ತನಾಗುವುದು ಎಂದರೆ ಇವರೀರ್ವರ ಗ್ರಾಹಕಸೀಮೆಯ ಪ್ರಭಾವಲಯದಿಂದ ದೂರಸರಿಯುವುದು ಎಂದರ್ಥ. ಇವು ಬಹುಶಃ ಆ ಹೊತ್ತಿನ ನನ್ನ ಊರಿನ ಎಲ್ಲಾ ಬಾಲಕರ ಕನಸುಗಳೂ ಆಗಿದ್ದವು ಎಂದು ನನಗನಿಸುತ್ತದೆ. ಬಾಲ್ಯದಿಂದ ಯೌವನಕ್ಕೆ, ಗ್ರಾಮೀಣ ಜೀವನದಿಂದ ನಗರ ಜೀವನಕ್ಕೆ, ಹಳ್ಳಿಯ ಅನಾಗರೀಕ ಎನ್ನಬಹುದಾದ ಜೀವನಶೈಲಿಯಿಂದ ನಗರದ ನಾಗರೀಕ ಜೀವನಶೈಲಿಗೆ ಬದಲಾಗುವ ಕಾಲಘಟ್ಟದಲ್ಲಿ ನಮ್ಮೂರಿನ ಕ್ಷೌರಿಕ ಹಾಗೂ ದರ್ಜಿಯವರ ಕೈಯಿಂದ ಮುಕ್ತಿಪಡೆಯುವುದೇ ಒಂದು ಪಾಸ್ ಪೋರ್ಟ್ ಎನ್ನುವಂತಹ ಒಂದು ತಪ್ಪುಕಲ್ಪನೆಯ ದಾಸಜನರಲ್ಲಿ ನಾನೂ ಒಬ್ಬನಾಗಿದ್ದೆ ಎನ್ನುವುದನ್ನು ನಾಚಿಕೆಯ ಮನಃಸ್ಥಿತಿಯಿಂದ ನಾನಿಲ್ಲಿ ಅರುಹಲೇಬೇಕು. ಇವರಿಬ್ಬರ ಕೈಕಸಬುಗಳಿಂದ ದೊರೆಯುವ ಸ್ವಾತಂತ್ರ್ಯ ನಮ್ಮ ಭೌತಿಕ ಬೆಳವಣಿಗೆಯಿಂದ ಮಾತ್ರ ಸಿದ್ದಿಸುವಂತದ್ದು ಎನ್ನುವುದೂ ಬಾಲಕಾವಸ್ಥೆಯಲ್ಲಿಯೇ ನಮಗೆ ವೇದ್ಯವಾದ ವಿಷಯ. ನಾವು ಬೆಳೆದು ದೊಡ್ಡವರಾಗಿ ಊರಿನ ಆ ಹೊತ್ತಿನ ಉನ್ನತ ವ್ಯಾಸಂಗವಾದ ಎಸ್ಸೆಸ್ಸಲ್ಸಿ ಮುಗಿಸಿದರೆ ಒಂದು ರೀತಿಯಲ್ಲಿ ನಾವು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸ್ವಾತಂತ್ರ್ಯ ಲಭಿಸುವ ದಿಕ್ಕಿನಲ್ಲಿ ಬಹಳ ದೊಡ್ಡದಾದ ಹೆಜ್ಜೆಯನ್ನು ಇಟ್ಟೆವೆಂದೇ ಅರ್ಥ. ಹತ್ತನೇ ತರಗತಿಯ ನಂತರ ಚಿತ್ರದುರ್ಗಕ್ಕೆ ಹೋಗಿ ಕಾಲೇಜು ವ್ಯಾಸಂಗ ಮಾಡುವ ಅವಧಿಯಲ್ಲಿ ನೀಲಕಂಠಪ್ಪ ಮತ್ತು ಕುರುಗೋಡಪ್ಪ ಅವರ ಕಪಿಮುಷ್ಟಿಯಿಂದ ನಾವು ಬಚಾವ್ ಆದ ಹಾಗೆಯೇ ಅನ್ನಿಸುತ್ತಿತ್ತು. ಕಾಲೇಜು ಹುಡುಗರಿಗೆ ಸರ್ವೇಸಾಮಾನ್ಯವಾಗಿ ನೀಲಕಂಠಪ್ಪನ ಕ್ಷೌರಕ್ಕೋ ಅಥವಾ ಕುರುಗೋಡಪ್ಪನ ಬಳಿ ಬಟ್ಟೆ ಹೊಲಿಯಲು ಹಾಕಲು ಹೇಳುವ ಧೈರ್ಯವನ್ನ ಯಾವ ತಂದೆತಾಯಿಗಳೂ ಮಾಡುತ್ತಿರಲಿಲ್ಲ. ಹಾಗಿದ್ದರೂ ನಮ್ಮ ಮನೆಯ ಮಟ್ಟಿಗೆ ನನ್ನ ಆತಂಕಕ್ಕೆ ಕಾರಣವಾದ ಒಂದು ವಿಷಯ ಇದ್ದೇ ಇತ್ತು. ಕಾಲೇಜಿನ ಬೇಸಗೆಯ ರಜಾದ ಎರಡು ತಿಂಗಳನ್ನು ಮೀರಿದ ಅವಧಿಯಲ್ಲಿ ನೀಲಕಂಠಪ್ಪನ ಕೇಶಮುಂಡನಕ್ಕೆ ಬಲಿಯಾಗಬೇಕಾದ ಅಪಾಯ ತೂಗುಕತ್ತಿಯಂತೆ ನನ್ನ ನೆತ್ತಿಯ ಮೇಲೆ ಮಂಡರಾಯಿಸುತ್ತಲೇ ಇತ್ತು. ಆದರೆ ಪರೀಕ್ಷೆಗಳು ಮುಗಿದ ಮಾರನೆಯ ದಿನವೇ ದುರ್ಗದಲ್ಲಿ ಸಾಕಷ್ಟು ಸಣ್ಣಕೂದಲಿನ ಕಟಿಂಗ್ ಗೆ ತಲೆಯೊಡ್ಡಿ ಊರಿಗೆ ಮುಖಮಾಡುವ ಮೂಲಕ ಈ ಅಪಾಯಕ್ಕೂ ನಾನು ತಕ್ಕಮದ್ದನ್ನು ಹುಡುಕಿಕೊಂಡಿದ್ದೆ.

ಅದು ನಾನು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಪಿಯುಸಿ ತರಗತಿಗಳಿಗೆ ಸೇರುವ ಹದಿನೈದು ಇಪ್ಪತ್ತು ದಿನಗಳ ಮೊದಲ ಮಾತು. ನಮ್ಮ ಮನೆಗೆ ಅಪ್ಪನ ಆಯುಷ್ಕರ್ಮಕ್ಕೆ ಬಂದಿದ್ದ ನೀಲಕಂಠಪ್ಪನನ್ನು ನನ್ನ ಕೇಶಮುಂಡನವನ್ನೂ ಮಾಡಲಿಕ್ಕೆ ನನ್ನ ತೀವ್ರವಿರೋಧದ ಮಧ್ಯೆಯೂ ನನ್ನ ತಂದೆ ಒಪ್ಪಿಸಿದರು. ಚಿತ್ರದುರ್ಗಕ್ಕೆ ಹೋಗಿ ಕಟಿಂಗ್ ಮಾಡಿಸಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತಬೇಕೆಂಬ ನನ್ನ ಕನಸಿಗೆ ಬಲವಾದ ಕೊಡಲಿಪೆಟ್ಟು ಬಿದ್ದಿತ್ತು. ಆವತ್ತು ಮಾತ್ರ ಬಹಳ ಹಠ ಮಾಡಿ ಮನೆಯಲ್ಲಿಯೇ ಸೀಸರ್ ಕಟ್ ಮಾಡಿಸಿಕೊಳ್ಳುವ ಮೂಲಕ ಅನುಭವಿಸಿದ ನನ್ನ ಮೊಟ್ಟ ಮೊದಲ ಗೆಲುವಿನ ಸವಿ ಬರಲಿರುವ ನನ್ನ ಆಚ್ಚೇ ದಿನ್ ಗಳ ಸುಳಿವನ್ನು ನೀಲಕಂಠಪ್ಪನಿಗೂ ಬಿಟ್ಟುಕೊಟ್ಟಿತ್ತು ಅನ್ನಿಸುತ್ತದೆ. “ಸಾರ್, ಪ್ರಕಾಶನದ್ದು ನನ್ನ ಬಳಿ ಇದೇ ಕೊನೇ ಕಟಿಂಗ್ ಎನ್ನಿಸುತ್ತದೆ” ಎಂದವನನ್ನು “ಅದೇಕೆ ಹಾಗೆ ಹೇಳುತ್ತೀಯ? ರಜಾ ದಿನಗಳಲ್ಲಿ ಊರಿನಲ್ಲಿ ಇದ್ದ ವೇಳೆ ನೀನೇ ತಾನೇ ಅವನಿಗೆ ಕಟಿಂಗ್ ಮಾಡಬೇಕು?” ಎನ್ನುವ ನನ್ನ ಅಪ್ಪನ ಮಾತಿನಲ್ಲಿ ಎಂದಿನ ವಿಶ್ವಾಸದ ಕೊರತೆಯನ್ನು ಕಂಡೆ. ಈ ಮಾತುಗಳನ್ನು ಆಲಿಸಿದ ನೀಲಕಂಠಪ್ಪನ ಮುಖದ ಮೇಲೆ ಒಂದು ಕ್ಷಣ ಮಿಂಚಿಮಾಯವಾದ ತುಂಟು ನಗುವೊಂದು ನನ್ನ ಗಮನವನ್ನ ಸೆಳೆಯದೆ ಇರಲಿಲ್ಲ. ಕಾಲೇಜು ವ್ಯಾಸಂಗಕ್ಕಾಗಿ ಚಿತ್ರದುರ್ಗಕ್ಕೆ ಕಾಲಿಟ್ಟ ಯಾರೊಬ್ಬರ ತಲೆಯನ್ನೂ ಮತ್ತೆ ಮುಟ್ಟುವ ಅವಕಾಶ ಇದುವರೆಗೆ ಸಿಗದೇ ಇರುವುದನ್ನು ನೀಲಕಂಠಪ್ಪ ಬಲ್ಲವನೇ. ಹಾಗಾಗಿ ಪ್ರಕಾಶನ ತಲೆಯನ್ನು ಕೊನೆಯ ಬಾರಿಗೆ ಮುಟ್ಟುತ್ತಿದ್ದೇನೆ ಎನ್ನುವ ಅರಿವು ಆತನ ಅಂತರಾಳದಿಂದ ಮುಖದ ಮೇಲೆ ಹೊಮ್ಮಿ ತುಂಟ ನಗೆಯೊಂದರಲ್ಲಿ ಪರ್ಯಾವಸನಗೊಂಡಂತಿತ್ತು

ಅದ್ಯಾವುದೋ ಕಾರಣಗಳಿಂದಾಗಿ ನೀಲಕಂಠಪ್ಪನ ಸೋದರ ಸಂಬಂಧಿ ಈಶ್ವರಪ್ಪ ಕೆಲಸದ ಕಾಯಕವನ್ನು ಮುಂದುವರೆಸಿದನಾಗಲಿ, ನೀಲಕಂಠಪ್ಪನ ಮಗ ಈ ಕೆಲಸದಲ್ಲಿ ಯಾವ ಆಸಕ್ತಿ ಮತ್ತು ಶ್ರದ್ಧೆಯನ್ನ ಮೈಗೂಡಿಸಿಕೊಳ್ಳಲೇ ಇಲ್ಲ. ಬದಲಾಗಿ ದರ್ಜಿಕೆಲಸಕ್ಕೆ ಮನಸೋತ ನೀಲಕಂಠಪ್ಪನ ಮಗ ಅದೇ ಕೆಲಸವನ್ನು ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ. ಕ್ಷೌರಿಕ ಕೆಲಸಕ್ಕಿಂತ ದರ್ಜಿ ಕೆಲಸ ಉತ್ತಮವಾದದ್ದು ಎನ್ನುವ ನೀಲಕಂಠಪ್ಪನ ಮಗನ ಮನೋವಾಂಛೆಯ ನಿಜ ಪರಿಚಯ ನನಗಾಗಲೇ ಇಲ್ಲ. ಕೆಲಸಕಾಯಕದ ವೃತ್ತಿ ಮತ್ತು ಪಾರಾಯಣದ ಹೂಂಗುಟ್ಟುವಿಕೆಯ ಪ್ರವೃತ್ತಿ ಇವೆರಡರಲ್ಲಿ ಪರಾಕಾಷ್ಠೆಯ ಮಟ್ಟವನ್ನು ಮುಟ್ಟಿದ್ದ ನೀಲಕಂಠಪ್ಪ ಇಷ್ಟು ವರ್ಷಗಳ ಬಳಿಕವೂ ನನ್ನ ಮನಸ್ಸನ್ನು ಆಗೀಗ ಕಲಕುತ್ತಿದ್ದಾನೆ ಎಂದರೆ ಆತನಲ್ಲಿ ಅಂತಹ ಏನೋ ವಿಶೇಷಶಕ್ತಿ ಇತ್ತು ಎಂದೇ ನಾನು ಭಾವಿಸಿದ್ದೇನೆ. ನಮ್ಮ ಗ್ರಾಮ್ಯ ಜೀವನದ ಸೊಗಡು ಹಾಗೂ ಜೀವಾಳವೇ ಆದ ನೀಲಕಂಠಪ್ಪನಂತಹ ನೆಲದ ಕುಶಲಕರ್ಮಿಗಳನ್ನ ಕಳೆದುಕೊಂಡ ಗ್ರಾಮೀಣ ಬದುಕು ಎಲ್ಲೋ ಒಂದು ಕಡೆ ತನ್ನ ಆತ್ಮಾಭಿಮಾನದ ಜೊತೆ ಸಣ್ಣದಾದರೂ ಗಹನವೆನ್ನಬಹುದಾದ ಮಟ್ಟದ ರಾಜಿಯನ್ನು ಮಾಡಿಕೊಂಡಿದೆ ಎಂದು ನನಗೀಗ ಅನ್ನಿಸುತ್ತಿದೆ.

 

Girl in a jacket
error: Content is protected !!