ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ
ನಾಣ್ಯವೆಂಬುದು ಯಾವುದೇ ಪಡಿ, ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವವರ ನಡುವಿನ ಕೊಂಡಿಯಾಗಿ ಬಳಕೆಗೊಳ್ಳುವ ಚಲಾವಣೆ ಸಾಧನ. ಅದು ನಿರ್ದಿಷ್ಟ ಅಳತೆ, ತೂಕ ಮತ್ತು ಆಕಾರದ ಮೂಲಕ ಮೌಲ್ಯವನ್ನು ಹೊಂದಿರುವ ಕ್ರಮಬದ್ಧವಾಗಿ ತಯಾರಾದ ಮಾಧ್ಯಮ. ಅದು ಲೋಹ ಅಥವಾ ಕಾಗದವಾಗಿರಬಹುದು. ಮಹಮದ್ ಬಿನ್ ತೊಗಲಕ್ ಕಾಲಕ್ಕೆ ಚರ್ಮವೇ ನಾಣ್ಯವಾಗಿ ಬಳಕೆಗೊಂಡದ್ದೂ ಇತಿಹಾಸವೇ. ನಾಣ್ಯ ಅಂದಂದಿನ ಅರ್ಥವ್ಯವಸ್ಥೆಯ ಪ್ರತೀಕವೇ ಆಗಿದೆ. ಜಗತ್ತಿನಲ್ಲಿ ಇಂದು ಕಾಗದವೇ ಮೌಲ್ಯದ ನಿರ್ಧಾರಕ ಸಾಧನವಾಗಿದೆ. ಇತ್ತೀಚೆಗೆ ಹಣವೆನ್ನುವುದು ಕೈಯಿಂದ ಕೈಗೆ ವರ್ಗಾವಣೆಗೊಳ್ಳುವ ಸಾಧನವಾಗಿ ಉಳಿದಿಲ್ಲ. ಅದು ಡಿಜಿಟಲ್ ರೂಪ ಪಡೆದಿದೆ. ಇದರಿಂದ ಇಂದು ಹಣವನ್ನು ಕಣ್ಣಾರೆ ಕಾಣುವ ಮತ್ತು ಕೈಯಿಂದ ಮುಟ್ಟಿ ನೋಡದಂತಹ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಆಶ್ಚರ್ಯವನ್ನು ಉಂಟುಮಾಡಿದೆ. ಕರೋನಾದ ಈ ಹೊತ್ತಿನಲ್ಲಿ ತಳ್ಳುಗಾಡಿಯಲ್ಲಿ ಮಾರುವ ತರಕಾರಿ ವ್ಯಾಪಾರಿಯೂ ತನ್ನ ಸಾಮಗ್ರಿಗಳ ಬೆಲೆಯ ಹಣವನ್ನು ಪೇಟಿಯಂ, ಗೂಗಲ್ ಪೇಗಳ ವರ್ಗಾವಣೆ ಮಾಡಿಸಿಕೊಳ್ಳುವ ಮಟ್ಟಕ್ಕೆ ತಲುಪಿರುವುದು ಗಮನಾರ್ಹ.
ನಾಣ್ಯ ಅಥವಾ ಹಣವು ಯಾವುದೇ ಕಾಲದ ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು ನೆರವಾಗುವ ಪ್ರಮುಖ ಸಾಧನ. ಅಷ್ಟೇ ಅಲ್ಲ ಯಾವುದೇ ಕಾಲದ ಚರಿತ್ರೆಯನ್ನು ಅರಿಯಲು ನೆರವಾಗುವ ಮಹತ್ವದ ಆಕರವೆಂದರೆ ಅದು ನಾಣ್ಯವೇ.
ಯಾವುದೇ ಕಾಲದ ಆಡಳಿತ, ಅಲ್ಲಿನ ಅರಸ, ಮಾಂಡಲಿಕ, ಸಾಮಂತರ ವಿವರ, ಕಾಲ, ದೇಶ, ವ್ಯಾಪಾರ, ವ್ಯವಹಾರ, ಧರ್ಮ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗೆ ನಾಣ್ಯಗಳು ಬಹುಮುಖ್ಯ ಆಧಾರಗಳಾಗಿವೆ. ಅಂದಂದಿನ ಕಲೆ, ಸಂಸ್ಕತಿಗಳಲ್ಲದೆ ಲೋಹ ತಂತ್ರಜ್ಞಾನದಂತಹ ಪ್ರಮುಖ ಚಾರಿತ್ರಿಕ ಮಹತ್ವಗಳನ್ನು ಅರಿಯಲು ನಾಣ್ಯಗಳೇ ನಿರ್ಧಾರಕ ಸಂವಹನ ಮಾಧ್ಯಮಗಳಾಗಿವೆ. ನಾಣ್ಯಗಳ ಮೇಲಿನ ಚಿಹ್ನೆಗಳೇ ಅಂದಿನ ಚರಿತ್ರೆ ರಚನೆಗೆ ಪ್ರಮುಖ ದಾಖಲೆಗಳಾಗಿ ಹೊರಹೊಮ್ಮಿವೆ. ಅವುಗಳಲ್ಲಿರುವ ಆಡಳಿತಾತ್ಮಕ ಮತ್ತು ಧಾರ್ಮಿಕ ಚಿಹ್ನೆಗಳು ಅಂದಿನ ಅರಸರು, ಅವರ ಕಾಲ ಮತ್ತು ದೇಶಗಳನ್ನು ಅರಿಯುವ ಪರಿಕರಗಳೂ ಆಗಿವೆ.
ಅದರಲ್ಲೂ ಭಾರತದ ಪ್ರಾಚೀನ ಇತಿಹಾಸದ ರಚನೆಗೆ ನಾಣ್ಯಗಳೇ ಏಕೈಕ ಆಕರಗಳೂ ಆಗಿವೆ. ಅದುವರೆಗೆ ದೊರೆತ ಆಧಾರಗಳಿಗೆ ಪೂರಕವಲ್ಲದೆ ಅವುಗಳ ಸಮರ್ಥನೆಗೂ ನಾಣ್ಯಗಳೇ ಕಾರಣವಾಗಿವೆ. ಭಾರತದಲ್ಲಿ ನಾಣ್ಯಗಳ ಮೂಲಕವೇ ರಚಿಸಿದ ಅನೇಕ ಇತಿಹಾಸಗಳಿವೆ. ಅವುಗಳಲ್ಲಿ ಇಂಡೋ ಗ್ರೀಕರು, ಕುಶಾನರು, ಬ್ಯಾಕ್ಟ್ರಿಯನ್ನರು, ಸಿಥಿಯನ್ನರ ಇತಿಹಾಸ ರಚನೆಗೆ ಅಂದು ಹೊರಡಿಸಿದ ನಾಣ್ಯಗಳೇ ಏಕೈಕ ಆಕರಗಳಾಗಿವೆ. ಹಾಗೆಯೇ ಅನೇಕ ಅಪರೂಪದ ಮತ್ತು ವೈವಿಧ್ಯಮಯ ಇತಿಹಾಸದ ರಚನೆಗೆ ಪ್ರಮುಖ ಸಾಕ್ಷ್ಯಗಳು ನಾಣ್ಯಗಳೇ ಆಗಿವೆ. ಪ್ರಾಚೀನ ಭಾರತದ ಪಸಿದ್ಧ ಅರಸ ಸಮುದ್ರಗುಪ್ತನ ವೀಣಾವಾದಕ ಚಿತ್ರವುಳ್ಳ ನಾಣ್ಯವು ಅವನನ್ನು ಸಂಗೀತ ವಿದ್ವಾಂಸ ಎಂದು ದೃಢಪಡಿಸಿತು. ಚಂದ್ರವಳ್ಳಿಯ ಉತ್ಖನನದಲ್ಲಿ ದೊರೆತ ರೋಮನ್ ನಾಣ್ಯಗಳು ಕರ್ನಾಟಕವು ವಿದೇಶಗಳೊಂದಿಗೆ ಇಟ್ಟುಕೊಂಡಿದ್ದ ಪ್ರಾಚೀನ ಕಾಲದ ವ್ಯಾಪಾರ ಸಂಪರ್ಕವನ್ನು ಸ್ಪಷ್ಟಪಡಿಸಿದವು. ಭಾರತದೊಂದಿಗಿನ ರೋಮ್ ವ್ಯಾಪಾರ ಎಷ್ಟಿತ್ತೆಂಬುದನ್ನು ಪ್ಲೀನಿಯ ಮಾತಿನಲ್ಲಿ ಹೇಳುವುದಾದರೆ “ಭಾರತದ ಸರಕು-ಸಾಮಗ್ರಿಗಳಿಗಾಗಿ ರೋಮನ್ನರ ಚಿನ್ನ ಹರಿದು ಹೋಗುತ್ತಿತ್ತು. ಇದರಿಂದ ಪ್ರಾಚೀನ ಕಾಲದಲ್ಲಿ ಭಾರತದ ಸರಕು-ಸಾಮಗ್ರಿಗಳ ಬೇಡಿಕೆ ಎಷ್ಟೆಂಬುದು ಅರ್ಥವಾಗುತ್ತದೆ.
ನಾಣ್ಯವೆಂಬುದು ಭಾರತೀಯ ಭಾಷೆಗಳಲ್ಲಿ ವಿಭಿನ್ನವಾಗಿ ಕರೆಯಲಾಗುತ್ತದೆ. ತಮಿಳಿನಲ್ಲಿ ನಾಣೆಯ, ತೆಲುಗಿನಲ್ಲಿ ನಾಣೆ, ತುಳುವಿನಲ್ಲಿ ನಾಣ್ಯೋ, ಮಲಯಾಳಂನಲ್ಲಿ ನಾಣಿಯ್ಯ, ಮರಾಠಿಯಲ್ಲಿ ನಾಣೇ, ಗುಜರಾತಿನಲ್ಲಿ ನಾಣುಂ ಎಂದೇ ಕರೆಯುವರು. ಈ ನಾಣ್ಯ ನಾಣೆಯ, ನಾಣೆ ಎಂಬುದು ಅರ್ಥ, ಬೆಲೆ, ಮೌಲ್ಯ, ಶ್ರೇಷ್ಠತೆ, ಗೌರವ, ಘನತೆಗಳ ಸಂಕೇತ. ನಾಣ್ಯವು ವಸ್ತವಿನಿಮಯಕ್ಕೆ ಪರ್ಯಾಯವಾಗಿ ಚಲಾವಣೆಗೆಂದು ಆಯಾ ಆಡಳಿತವು ತನ್ನ ಮುದ್ರೆಯೊತ್ತಿದ ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಲೋಹದ ತುಂಡು. ಇದನ್ನು ರೂಪಾಯಿ, ಹಣ, ದುಡ್ಡು, ಕಾಸು, ಬಿಲ್ಲೆ, ಪಿಕ್ಕ ಮೊದಲಾಗಿ ಕರೆಯಲಾಗುತ್ತದೆ. ನಾಣ್ಯ ಎಂಬುದು ವಸ್ತುವಿನಿಮಯದ ಬಳಿಕ ಕಂಡುಕೊಂಡ ಬೆಲೆಬಾಳುವ ಮತ್ತು ಮೌಲ್ಯವುಳ್ಳ ಲೋಹದ ಬಿಲ್ಲೆ. ವಸ್ತುವಿನಿಮಯದ ನ್ಯೂನತೆಗಳನ್ನು ಸರಿದೂಗಿಸಲು ನಾಣ್ಯಗಳ ಬಳಕೆ ಪ್ರಾರಂಭವಾಯಿತು. ನಾಣ್ಯದ ಬಳಕೆ ಪ್ರಾರಂಭವಾಗುವವರೆಗೆ ವಸ್ತು ವಿನಿಮಯ ಪದ್ಧತಿಯೇ ಮಾನವನ ಬದುಕಿನ ಭಾಗವಾಗಿದ್ದಿತು. ನಾಣ್ಯವೆಂಬುದು ಆಯಾ ಕಾಲದ ವ್ಯಾಪಾರ, ವಾಣಿಜ್ಯಗಳ ನಿರ್ಧಾರಕ ವಿನಿಮಯ ಸಾಧನ. ಅದೊಂದು ವ್ಯವಹಾರದ ಬಹುಮುಖ್ಯ ಪರಿಕರ ಮತ್ತು ಸಾಧನ.
ನಾಣ್ಯಗಳ ಚಾರಿತ್ರಿಕ ಪರಂಪರೆ ಅಸಾಧಾರಣವಾದದ್ದು, ಅದು ವಸ್ತುವಿನಿಮಯದ ಕಷ್ಟಕೋಟಲೆಗೆ ಪರಿಹಾರವಾಗಿ ಬಳಕೆಗೊಂಡ ಬೆಲೆಬಾಳುವ ಒಂದು ನಿರ್ದಿಷ್ಟ ವಸ್ತು. ಇದರ ಪ್ರಾಚೀನತೆಯನ್ನು ಸಿಂಧೂ ನಾಗರೀಕತೆ ಕಾಲಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ದೊರೆತ ವಿವಿಧ ಆಕಾರಗಳ ಬೆಳ್ಳಿಯ ಚೂರುಗಳು ನಾಣ್ಯಗಳೇ ಆಗಿದ್ದವೆಂಬುದನ್ನು ಡಿ.ಡಿ. ಕೊಶಾಂಬಿ ದೃಢಪಡಿಸುತ್ತಾರೆ. ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿ ದ್ವಿನಿಷ್ಕ, ತ್ರಿನಿಷ್ಕ, ಕಾರ್ಷಾಪಣ ಮೊದಲಾದ ಚಿನ್ನದ ನಾಣ್ಯಗಳ ಪ್ರಕಾರಗಳನ್ನು ಉಲ್ಲೇಖಿಸಿದ್ದಾನೆ. ಕೌಟಲ್ಯನ ಅರ್ಥಶಾಸ್ತ್ರದಲ್ಲಿ ನಾಣ್ಯದ ಉಲ್ಲೇಖಗಳಿವೆ. ಅಲ್ಲದೆ ಅಂದು ಟಂಕಶಾಲೆಯ ಅಧಿಕಾರಿಯನ್ನು ಲಕ್ಷಣಾಧ್ಯಕ್ಷನೆಂದೂ ಕರೆದಿದ್ದಾನೆ.
ಕರ್ನಾಟಕದ ಮಟ್ಟಿಗೂ ಮುದ್ರಾಂಕಿತ ನಾಣ್ಯಗಳೇ ಅತ್ಯಂತ ಪ್ರಾಚೀನ ನಾಣ್ಯಗಳಾಗಿವೆ. ಮೌರ್ಯ ಆಳ್ವಿಕೆಯ ಅವಧಿಯ ನಾಣ್ಯಗಳಿವು. ಇವುಗಳನ್ನು ಕಾರ್ಷಾಪಣಗಳೆಂದು ಗುರುತಿಸಲಾಗಿದೆ. ಕರ್ನಾಟಕದ ಅನೇಕ ಸ್ಥಳಗಳಲ್ಲಿ ಇವು ಕಂಡುಬಂದಿವೆ. ಧಾರವಾಡ-೧೧, ಕಲಬುರ್ಗಿ ತಾಲೂಕಿನ ಹೆಬ್ಬಾಳ-೨೨೫, ರಾಯಚೂರು-೬೩, ವಿಜಯನಗರ ಜಿಲ್ಲೆಯ ಹಲವಾಗಿಲು-೧೪೪ ನಾಣ್ಯಗಳು ದೊರೆತಿವೆ. ಆದರೆ ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಮುದ್ರಾಂಕಿತ ನಾಣ್ಯಗಳು ದೊರೆತದ್ದು ಕೊಪ್ಪಳ ಬಳಿಯ ಚಿಕ್ಕಸಿಂದೋಗಿಯಲ್ಲಿ ಎಂಬುದು ಗಮನಾರ್ಹ. ಅದೂ ರೈತನೋರ್ವ ಉಳುಮೆ ಮಾಡುವಾಗ ದೊರೆತದ್ದು. ಅದೂ ೫೫೩೪ ನಾಣ್ಯಗಳ ಬೃಹತ್ ರಾಶಿಯು ದೊರೆತದ್ದು ಮಡಕೆಯಲ್ಲಿ. ಆ ಮಡಕೆ ಇದ್ದದ್ದು ತಾಮ್ರದ ಪಾತ್ರೆಯಲ್ಲಿ ಎಂಬುದು ಗಮನಾರ್ಹ. ನಾಣ್ಯಗಳಲ್ಲದೆ ಈ ತಾಮ್ರದ ಪಾತ್ರೆಯ ಮೇಲೆ ಚಂತಸ ಎಂಬ ಬ್ರಾಹ್ಮಿ ಬರವಣಿಗೆ, ಶ್ರೀವತ್ಸ ಮತ್ತು ನಂದಿಪಾದದ ಚಿಹ್ನೆಗಳಿದ್ದುದು ಗಮನಿಸಬೇಕಾದ್ದೇ. ಇದರಿಂದ ಪ್ರಾಚೀನ ಕರ್ನಾಟಕದ ಅರ್ಥವ್ಯವಸ್ಥೆಯ ಅರಿವಾಯಿತು.
ಮುದ್ರಾಂಕಿತ ನಾಣ್ಯಗಳನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಸಿಗುವ ಪ್ರಾಚೀನ ನಾಣ್ಯಗಳೆಂದರೆ ಸೀಸದ ನಾಣ್ಯಗಳು. ಅದೂ ಮೌರ್ಯ ಮತ್ತು ಶಾತವಾಹನರ ಆಡಳಿತದ ಮಧ್ಯದ ಅವಧಿಯಲ್ಲಿ ಸ್ವತಂತ್ರವಾಗಿ ಆಳ್ವಿಕೆ ಮಾಡಿದ ಮಹಾರಥಿ, ಚುಟು ಮತ್ತು ಆನಂದ ಎಂಬ ಹೆಸರಿನ ಅರಸರವು. ಇವರು ಮೌರ್ಯರ ನಂತರ ಆಳಿದ ಸ್ವತಂತ್ರ ಅರಸರೆಂದೂ, ಮುಂದೆ ಶಾತವಾಹನ ಮಾಂಡಲಿಕರಾಗಿ ಆಳಿದರೆಂದೂ ಹೇಳಲಾಗುತ್ತದೆ. ಆದರೆ ಇವರು ತಮ್ಮದೇ ಆದ ಬ್ರಾಹ್ಮಿ ಲಿಪಿಯ ಹೆಸರು, ಬೋದಿವೃಕ್ಷ, ಸ್ತೂಪ ಮೊದಲಾದ ಚಿಹ್ನೆಗಳುಳ್ಳ ನಾಣ್ಯವನ್ನು ಹಾಕಿಸಿದ್ದರು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವರು ಸ್ವತಂತ್ರ ಅರಸರೇ ಆಗಿದ್ದರೆಂದೇ ಹೇಳಬೇಕಾಗುತ್ತದೆ. ಮೌರ್ಯ ನಂತರದ ಮತ್ತು ಶಾತವಾಹನಪೂರ್ವ ಇತಿಹಾಸದ ಮಸುಕಾದ ಚರಿತ್ರೆಯ ಪರದೆ
ಯನ್ನು ಸರಿಸುವಲ್ಲಿ ಇವುಗಳ ಸಮಗ್ರ ಅಧ್ಯಯನವು ಅತ್ಯಗತ್ಯವೆಂದೆ ನನ್ನ ಅಭಿಮತ.
ಮಹಾರಥಿಗಳ ನಂತರದ ನಾಣ್ಯ ಇತಿಹಾಸ ಶಾತವಾಹನರದು. ಅವರ ಕಾಲದ ಲೋಹದ ಅನೇಕ ನಾಣ್ಯಗಳು ಅರಸರ ಹೆಸರನ್ನು ಒಳಗೊಂಡಂತೆ ದೊರೆತಿವೆ. ಕದಂಬರ ಕಾಲದಲ್ಲಿ ಪದ್ಮಟಂಕ, ರಾಷ್ಟಕೂಟರ ದ್ರಮ್ಮ, ಸುವರ್ಣ, ಗದ್ಯಾಣ, ಕಳಂಜು, ಕಾಸು, ಕಲ್ಯಾಣ ಚಾಲುಕ್ಯರ ಕಾಲಲ್ಲಿ ಗದ್ಯಾಣ, ವೀಸ, ಹಣ, ಬೇಳೆ, ಲೊಕ್ಕಿಗದ್ಯಾಣ, ನವಿಲಪೊನ್, ಲೊಕ್ಕಿಪನ್ ಎಂಬ ನಾಣ್ಯಗಳು ಹೊಯ್ಸಳರ ಗದ್ಯಾಣ, ವರಾಹ, ಪೊನ್ ನಾಣ್ಯಗಳ ಜೊತೆಗೆ ತಾರ ಎಂಬ ನಾಣ್ಯಗಳನ್ನು ಅಚ್ಚು ಹಾಕಲಾಗಿತ್ತು. ಆದರೆ ವೈವಿಧ್ಯಮಯ ನಾಣ್ಯಗಳನ್ನು ಹೊರತಂದವರಲ್ಲಿ ವಿಜಯನಗರ ಅರಸರು ಪ್ರಮುಖರು. ಅವರ ಕಾಲದ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳು ಯಥೇಚ್ಚವಾಗಿ ಲಭಿಸಿವೆ. ಅವುಗಳಲ್ಲಿ ಗದ್ಯಾಣ, ಪಣ, ಹಾಗ, ವರಾಹ, ಪಗೋಡ, ತಾರ, ಕಾಸು, ಹಿತಲ್, ಕಾಣಿ ಮುಖ್ಯವಾಗಿವೆ.
ಒಟ್ಟಿನಲ್ಲಿ ನಾಣ್ಯಗಳು ಅಂದಂದಿನ ಇತಿಹಾಸದ ಭಾಗವಾಗಿ, ಅದರ ಸಮಗ್ರತೆಗೆ ಅಧಿಕೃತ ಮತ್ತು ಪ್ರಮುಖ ಆಕರಗಳಾಗಿರುವುದರಲ್ಲಿ ಸಂಶಯವಿಲ್ಲ.