ನಶ್ವರ ಬದುಕಿಗೆ ಅತಿ ಚಿಂತೆ ಬೇಡ

Share

ನಶ್ವರ ಬದುಕಿಗೆ ಅತಿ ಚಿಂತೆ ಬೇಡ.

ಗುರುವಿಗೆ ಶರಣಾಗಿ ಆತ್ಮತತ್ತ್ವವನ್ನು ತಿಳಿಯುವುದು ಬಾಲ್ಯದಲ್ಲಿಯೇ ಸೂಕ್ತ ಎಂಬ ಸಿದ್ಧನ ಮಾತನ್ನು ಮಿತ್ರರಾದ ಸೋಮ ಭೀಮರು ಒಪ್ಪಿದರು.ಸಿದ್ಧನೊಂದಿಗೆ ಅವರೂ ಗುರು ಶೋಧನೆಗೆ ಹೆಜ್ಜೆ ಹಾಕಿದರು. ಮೂವರೂ ಚಳಕಾಪುರದಿಂದ ನಡೆಯುತ್ತಾ ಅಂದಾಜು ಒಂದು ಹರದಾರಿ (೫ ಕಿ. ಮೀ) ದೂರದ ಗ್ರಾಮ(ಸದಾಶಿವ ಪೇಟೆ) ವನ್ನು ತಲುಪಿದರು.ಸೋಮ ಭೀವರು ಹಸಿದು ಬಳಲಿದ್ದರು.ಊಟಕ್ಕಾಗಿ ಅಂಗಲಾಚಿದರು.ಆಗ ಸಿದ್ಧನು ಅವರಿಗೆ ಹೀಗೆ ಹೇಳಿದನು: ದೇಹದ ಚಿಂತೆಯನ್ನು ಮಾಡಬೇಡಿರಿ. ಹೃದಯದಲ್ಲಿ ಅಖಂಡವಾಗಿ ಪರಮಾತ್ಮನ ಧ್ಯಾನವನ್ನು ಮಾಡಿರಿ. ಆ ಸುಖಾಮೃತದ ಪಾನವನ್ನು ಮಾಡಿದ್ದಾದರೆ ಜೀವಕ್ಕೆ ಸಮಾಧಾನವಾಗುವುದು. ಇಂಥಾ ತೃಪ್ತಿಯು ಅನ್ನದಿಂದಾಗದು. ಇದನ್ನು ತಿಳಿಯದವರು ಅನ್ನ ಬೇಡುವರು. ದೇಹವನ್ನು ಪರಮಾತ್ಮನು ಕೊಟ್ಟಿರುವನಾದ್ದರಿಂದ ಆತನೇ ಅದನ್ನು ರಕ್ಷಿಸಬೇಕು” – ಎಂದು.

ಸಿದ್ಧನ ಈ ಮಾತು ವಯಸ್ಸಿಗೆ ಮೀರಿದ್ದು. ಅತ್ಯಂತ ಪ್ರೌಢವಾದದ್ದು. ಜನಸಾಮಾನ್ಯರು ಈ ಮಾತನ್ನು ಅರ್ಥಮಾಡಿಕೊಳ್ಳಲಾಗದು, ಒಪ್ಪಲಾಗದು. ಹೊಟ್ಟೆಯನ್ನು ತುಂಬಿಸಿಕೊಳ್ಳುವ ,ಬದುಕಿ ಬೆಳೆಯುವ ಚಿಂತೆಯನ್ನು ಮಾಡಿಯೇ ಮಾಡುತ್ತಾರೆ. ಚಿಂತೆಮಾಡಿದರೆನೇ ಅದಕ್ಕೆ ಅಲ್ಲೊಂದು ಪರಿಹಾರ ಸಿಗುವುದುಂಟು! ಸಮಸ್ಯೆಯ ಪರಿಹಾರದ ತಿಳುವಳಿಕೆ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ತೀವ್ರ ಇಚ್ಛೆ, ಅದಕ್ಕೆ ಪೂರಕವಾದ ಕಾರ್ಯಪ್ರವೃತ್ತಿ=ಕರ್ತ್ಯವ್ಯ ನಿರ್ವಹಣೆ, ಇವು ಇರಲೇಬೇಕು. ಹೀಗಿರುವಾಗ ದೇಹದ ಚಿಂತೆಯನ್ನು ಮಾಡಬೇಡಿರಿ?- ಎಂದು ಹೇಳುವುದು ಸರಿ ಕಾಣಿಸದು. ಆದರೆ ಈ ಮಾತಿಗೆ ಇಷ್ಟೇ ಅರ್ಥಮಾಡಿಕೊಂಡರೆ ಸಾಲದು! ಸಿದ್ಧನ ಸಂಪೂರ್ಣ ಮಾತನ್ನು ಸರಿಯಾಗಿ ಅಳೆದು ತೂಗಿ ಅರ್ಥೈಸಿಕೊಳ್ಳಬೇಕು! ಅದು ಹೇಗೆಂದರೆ: ಮನುಷ್ಯನು ಬಹುತೇಕವಾಗಿ ಅನಗತ್ಯ ಚಿಂತನೆಗಳಿಗೆ ಒಳಗಾಗುತ್ತಾನೆ. ಸಸ್ಯಗಳು ಪ್ರಾಣಿ ಪಕ್ಷಿಗಳು ತಮ್ಮ ಬದುಕಿಗಾಗಿ ಬಹುತೇಕವಾಗಿ ಗೋಗರೆಯುವುದಿಲ್ಲ. ದೊರಕಿದ್ದನ್ನು ಬಳಸಿಕೊಂಡು ತೃಪ್ತಿಯಿಂದ ಬಾಳುತ್ತವೆ. ನಾಳೆಗಾಗಿ ಸಂಗ್ರಹಿಸಿಟ್ಟುಕೊಳ್ಳುವ ದೂರ ದುರಾಲೋಚನೆ ಅವುಗಳಿಗಿಲ್ಲ. ನೂರಾರು ಎಕರೆ ಭೂಮಿಯ ಮೇಲೆ,ಸಾವಿರಾರು ಕೋಟಿ ಹಣ-ಆಭರಣ ಆಸ್ತಿಗಳಮೇಲೆ ಆಧಿಪತ್ಯವನ್ನು ಸ್ಥಾಪಿಸುವುದಿಲ್ಲ. ಆಕಾಶದೆತ್ತರದ ಬಂಗಲೆಗಳನ್ನು ಕಟ್ಟುವುದಿಲ್ಲ! ಆದರೂ ಅವೆಲ್ಲವೂ ನೆಮ್ಮದಿಯಿಂದ ಬದುಕಿವೆ. ಹಾಗೆಂದು ಅವು ಸೋಮಾರಿಯಾಗಿಯೂ ಕುಳಿತಿಲ್ಲ. ತಮ್ಮ ತಮ್ಮ ಆಹಾರಕ್ಕಾಗಿ, ಬದುಕಿಗಾಗಿ ಹಾತೊರೆಯುತ್ತಿವೆ. ಕ್ರಿಯಾಶೀಲವಾಗಿವೆ. ಸಿಕ್ಕರೆ ಉಣ್ಣುತ್ತವೆ, ಸಿಗದಿದ್ದರೆ ಸುಮ್ಮನಿದ್ದು ಬಿಡುತ್ತವೆ! ಹೆಚ್ಚೆಂದರೆ ಸೊರಗುತ್ತವೆ, ಬತ್ತುತ್ತವೆ, ಸಾಯುತ್ತವೆ, ಒಣಗುತ್ತವೆ! ಇದು ಎಲ್ಲರಿಗೂ ಅನಿವಾರ್ಯ! ಯಾರು ತಪ್ಪಿಸಿಕೊಳ್ಳಲಾದೀತು? ಸಾವಿರ ಕೋಟಿಯ ಧನಿಕರು, ನೂರಾರು ಜನರನ್ನು ಬಗ್ಗುಬಡಿಯುವ ಅತಿಬಲದ ದೇಹಶಕ್ತಿಯ ಜಗಜಟ್ಟಿಗಳು, ರಾಜ-ಮಹಾರಾಜರು,ಮಂತ್ರಿ ಮಹಾಮಂತ್ರಿಗಳು ಸಾಯದೇ ಬದುಕುವರೇ? ಒಂದಲ್ಲ ಒಂದು ದಿನ ಎಲ್ಲ ಎಲ್ಲರೂ ಸಾಯಲೇಬೇಕು! ಅದಕ್ಕೇಕೆ ಬದುಕಿಗೆ ಎಲ್ಲಿಲ್ಲದ ಇಷ್ಟೊಂದು ವ್ಯಾಮೋಹ? ಶಿಸ್ತು-ಛಲ-ಹಠ-ಗುರಿ-ಯೋಜನೆಗಳಿರಬೇಕು, ಆದರೆ ಒಳಗೆ ಸತ್ಯದ,ಜಗದ-ಜೀವನದ ಇತಿಮಿತಿಯ ಅರಿವಿರಬೇಕು! ಆಗ ಮಾತ್ರ ನಿರ್ಲಿಪ್ತ ಬದುಕನ್ನು ನಡೆಸಲು ಸಾಧ್ಯವಾಗುವುದು. ಶೀತೋಷ್ಣ ಸುಖ ದುಃಖಗಳು, ಮಾನಾಪಮಾನಗಳು ಯಾರಿಗೂ ಎಲ್ಲಿಯೂ ತಪ್ಪಿದ್ದಲ್ಲ. ಯಾವುದೇ ಸಾಧನೆ -ಸಿದ್ಧಿಗಳು ಪರಿಶ್ರಮವಿಲ್ಲದೇ ಈಡೇರುವುದಿಲ್ಲ! ಉತ್ತಿ-ಬಿತ್ತಿ-ಕಳೆತೆಗೆದು,ಗೊಬ್ಬರ-ನೀರು ಕೊಟ್ಟು ಪಾಲನೆ ಪೋಷಣೆ ಮಾಡಿದ ಬಳಿಕವಲ್ಲವೇ ಬೆಳೆ ಬರುವುದು! ಅದಕ್ಕಿಂತ ಮೊದಲೇ ಇಂತಿಷ್ಟು ಇಂಥದ್ದೇ ಗುಣಮಟ್ಟದ ಫಲ ಸಿಗಬೇಕೆಂದು ಬಯಸಿದರಾದೀತೇ? ತೆಂಗಿನ ಮರವು ಉತ್ತಮ ಫಲವನ್ನು, ಸಮೃದ್ಧ ಇಳುವರಿಯನ್ನು ನೀಡಬೇಕೆಂದರೆ, ಅದಕ್ಕೆ ಮೊದಲು, ಅದಕ್ಕನುಗುಣವಾದ ಉತ್ತಮ ಕೃಷಿ ನಮ್ಮದಾಗಿರಬೇಕಲ್ಲವೇ? ಒಂದನ್ನು ಪಡೆಯಬೇಕೆಂದರೆ ಒಂದನ್ನು ತ್ಯಾಗಮಾಡಬೇಕಾಗುವುದು! ಹಣವನ್ನು ಕೊಟ್ಟು ವಸ್ತುವನ್ನು ಪಡೆಯುವಂತೆ! ಯಾವುದೂ ಉಚಿತವಾಗಿ ಸಿಗಲಾರದು! ನಮ್ಮ ಹುಟ್ಟುಹಬ್ಬ, ಮದುವೆ, ಗೃಹಪ್ರವೇಶ ಮೊದಲಾದ ಸಂದರ್ಭಗಳಲ್ಲಿ ನಮ್ಮ ಬಂಧು-ಬಾಂಧವರು,ಮಿತ್ರರು ,ಹಿತೈಷಿಗಳು, ಗುರು ಹಿರಿಯರು ನಮಗೆ ಉಡುಗೊರೆಗಳನ್ನು ನೀಡುವರು. ಅವು ನಮಗೆ ಉಚಿತವಾಗಿ ಬಂದವುಗಳು ಎಂದು ಭಾವಿಸುತ್ತೇವೆ. ನಮಗೆ ಉಚಿತವಾಗಿರಬಹುದು, ಅದರೆ ಅವುಗಳನ್ನು ನಮಗೆ ಕೊಡಲು ಕೊಂಡವರಿಗೆ ಉಚಿತವಾಗಿರುವುದಿಲ್ಲ! ಅಷ್ಟೇ ಅಲ್ಲ! ಅವು ನಿಜಾರ್ಥದಲ್ಲಿ ನಮಗೂ ಉಚಿತವಾಗಿರುವುದಿಲ್ಲ! ಏಕೆಂದರೆ, ನಾವು ಈ ಹಿಂದೆ ಅವರಿಗೆ, ಅವರ ಸಂಬಂಧಿಕರಿಗೆ ಅನೇಕ ರೀತಿಯಾಗಿ ನೆರವಾಗಿರುತ್ತೇವೆ, ಅಥವಾ ಇನ್ನು ಮುಂದೆ ಅವರಿಗೆ ಅವರ ಸಂಬಂಧಿಕರಿಗೆ ಅನೇಕರೀತಿಯಿಂದ ನೆರವಾಗಿರಬೇಕಾಗಿರುತ್ತದೆ. ಆದ್ದರಿಂದ ಯಾವುದನ್ನೂ ಉಚಿತವಾಗಿ ಪಡೆಯುವ ಬಯಕೆಯೂ ಬೇಡ, ಉಚಿತವಾಗಿ ಸಿಕ್ಕಿತೆಂಬ ಹಿಗ್ಗೂ ಬೇಡ!

ಪ್ರಸ್ತುತ ಇಲ್ಲಿ ಸೋಮ ಭೀಮರು ಸಿದ್ಧನೊಂದಿಗೆ ಗುರು ಶೋದನೆಗೆ ಹೆಜ್ಜೆ ಹಾಕಿದ್ದಾರೆ. ಅವರು ಬರಬೇಕೆಂದು ಸಿದ್ಧನು ಅವರನ್ನು ಒತ್ತಾಯಿಸಿರಲೂ ಇಲ್ಲ. ಅವರಾಗಿಯೇ ಸ್ವಸಂತೋಷದಿಂದ ಒಪ್ಪಿ ಬಂದಿದ್ದಾರೆ. ಗುರು ಶೋಧನೆಯ ಮಾರ್ಗ ಅಷ್ಟು ಸುಲಭದ್ದೇನೂ ಅಲ್ಲ. ಇದು ಸಿದ್ಧನಿಗೆ ಚೆನ್ನಾಗಿ ತಿಳಿದಿದೆ. ಅನ್ನ ನೀರು ವಸತಿಯ ಸಂಕಷ್ಟ ಇಲ್ಲಿದೆ. ಎಲ್ಲರಿಗೂ ಎಳೆಯ ವಯಸ್ಸು! ಆದರೂ ಸಿದ್ಧನಿಗೆ ಗುರು ಶೋಧನೆ ಸ್ವಯಂ ಇಷ್ಟವಾಗಿದ್ದರಿಂದ ಕಷ್ಟವು ಕಷ್ಟವೆನಿಸಲಿಲ್ಲ! ಸೋಮ ಭೀಮರು ಸಿದ್ಧನಿಂದ ಪ್ರಭಾವಿತರಾಗಿ ಬಂದಿದ್ದರಿಂದ, ಗುರುಶೋಧನೆಯ ಸಂಕಷ್ಟದ ಪರಿಜ್ಞಾನ ಅವರಿಗಿಲ್ಲ. ಆದ್ದರಿಂದ ಅವರಿಗೆ ಇದು ಅತಿ ಕಷ್ಟವೆನಿಸಿದೆ. ಇಲ್ಲಿಯೇ ನಾವು ಎಡವುವದು . ಯಾವುದೇ ಕೆಲಸವನ್ನು ನಾವು ಮಾಡುವ ಮುನ್ನ ಅದರ ಸಾಧಕ-ಬಾಧಕಗಳ ಸರಿಯಾದ ಸಮಾಲೋಚನೆ- ಅರಿವಿರಬೇಕು. ಆ ಕೆಲಸದ ಬಗ್ಗೆ ಸಂಪೂರ್ಣ ನೈಪುಣ್ಯವಿದ್ದರೆ ಒಳಿತು. ಅದಿಲ್ಲದಿದ್ದರೂ, ಮಾಡುತ್ತಾ ಕಲಿಯುವೆನು, ಮಾಡಿ ಮುಗಿಸುವೆನು ಎಂಬ ಛಲ ತಾಳ್ಮೆಗಳಿರಬೇಕು. ಬಯಲಿಗೆ ಬಿದ್ದಬಳಿಕ ಚಳಿ ಎಂದರಾದೀತೆ? ಯುದ್ಧ ಭೂಮಿಗಿಳಿದ ಬಳಿಕ ಹೋರಾಡದಿದ್ದರಾದೀತೇ? ನೀರಿಗಿಳಿದ ಬಳಿಕ ತಂಪು ಎಂದರೆ ಹೇಗೆ? ಈಜಾಡಲೇ ಬೇಕು! ಮದುವೆಯಾದ ಬಳಿಕ ಸಾಂಸಾರಿಕ ಜೀವನವನ್ನು ನಡೆಸಲೇಬೇಕು “ ಬ್ರಹ್ಮಚರ್ಯ ಅಳಿಯುವುದು, ದುಡಿಮೆ ಕಷ್ಟವಾಗುವುದು, ಗಂಡ-ಹೆಂಡತಿ-ಮಕ್ಕಳನ್ನು ಸಾಕಲಾಗದು” ಎಂದರೆ ಹೇಗೆ? ಸಾಧಕ ಸಂನ್ಯಾಸಿಯಾದ ಬಳಿಕ, ಅದಕ್ಕಂಟಿಕೊಂಡಿರಬೇಕು, ರಾಜಕಾರಣಿಯಾದರೆ ಟೀಕೆಗಳಿಗೆ ಕುಗ್ಗದೇ ನಿಸ್ಸ್ವಾರ್ಥ ಸಮಾಜಸೇವೆಯಲ್ಲಿ ಮುಳುಗಲೇ ಬೇಕು. ಇಲ್ಲದಿದ್ದರೆ, ಕೆಲಸಕ್ಕೆ ಕೈ ಇಡಬಾರದು, ಬಯಲಿಗೆ ಬರಬಾರದು, ಯುದ್ಧಕ್ಕಿಳಿಯಬಾರದು, ನೀರಿಗಿಳಿಯಬಾರದು,ಮದುವೆಯಾಗಬಾರದು, ಸಾಧಕ-ಸಂನ್ಯಾಸಿಯಾಗಬಾರದು, ರಾಜಕಾರಣಕ್ಕಿಳಿಯಬಾರದು! ಇಳಿದ ಬಳಿಕ ಎದುರಾಗುವ ಅಡ್ಡಿ ಆತಂಕಗಳನ್ನು ಎದುರಿಸಲೇಬೇಕು, ಕಷ್ಟ ಸಹಿಸಿ ಅವುಗಳನ್ನು ದಾಟಲೇಬೇಕು. ಅಡ್ಡಿ ಆತಂಕ ಕಷ್ಟಗಳು ಎದುರಾಗುವ ಮುನ್ನವೇ, ಎದುರಾದ ಕೂಡಲೇ ಎದುರಿಸಲಾಗದೇ ಅಯ್ಯೋ ಎಂದು ಒದ್ದಾಡಿದರೆ ಹಿಮ್ಮೆಟ್ಟಿದರೆ ಕಾರ್ಯಸಿದ್ಧಿಯಾಗದು.

ಇಲ್ಲಿ ಸೋಮ ಭೀಮರು ಗುರುಶೋಧನೆಗಾಗಿ ಮನೆಯನ್ನು ತೊರೆದು ಒಂದು ರಾತ್ರಿಯನ್ನೂ ಕಳೆದಿಲ್ಲ. ಆಗಲೇ ಹಸಿವು ಹಸಿವು ಎಂದು ಜಪಿಸುತ್ತಿದ್ದಾರೆ. ಇನ್ನೂ ಮುಂದೆ ಎದುರಿಸಲೇಬೇಕಾದ ಕಷ್ಟ ಕಾರ್ಪಣ್ಯಗಳು ಬೆಟ್ಟದಷ್ಟಿವೆ. ಇವೆಲ್ಲವನ್ನೂ ಮನಸ್ಸಿಗೆ ತಂದುಕೊಂಡ ಸಿದ್ಧಬಾಲಕನು ಸೋಮ ಭೀಮರಿಗೆ ಸರಿಯಾಗಿಯೇ ಉಪದೇಶಮಾಡಿದ. ಈ ಸಮಯದಲ್ಲಿ ಸಿದ್ಧನ ನೆರವಿಗೆ ಬಂದ ಪರಿಹಾರೋಪಾಯಗಳೆಂದರೆ ಸಹನೆ-ತಾಳ್ಮೆ-ಧೈರ್ಯಗಳು ಮಾತ್ರ. ಅದಕ್ಕಾಗಿಯೇ ಸಿದ್ಧ ಹೇಳಿದ: “ದೇಹದ ಚಿಂತೆಯನ್ನು ಮಾಡಬೇಡಿರಿ” ಎಂದು. ಕಷ್ಟದ ಮಾರ್ಗವನ್ನು ಹಿಡಿದವನಿಗೆ, ಕಷ್ಟ ಅನಿವಾರ್ಯ. ಮನೆ ಬಿಟ್ಟು ಹೊರಬಂದವನಿಗೆ ಅನ್ನ ನೀರಿನ ಸಮಸ್ಯೆ ಸಹಜ. ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಲೇಬೇಕು. ಹಸಿವು ಹಸಿವೆಂದು ಹಸಿವನ್ನೇ ನೆನೆಯುತ್ತಿದ್ದರೆ ಹೆಚ್ಚು ತಾಪವೆನಿಸುತ್ತದೆ. ಆದ್ದರಿಂದ ಮನಸ್ಸನ್ನು ಬೇರೆಯ ಕಡೆಗೆ ತೊಡಗಿಸಬೇಕು. ಕೆಲವು ದುಃಖಗಳನ್ನು ಮರೆಯಲು ನಾವು ಸ್ಥಳವನ್ನು ಬದಲಾಯಿಸುವುದಿಲ್ಲವೇ? ವೈದ್ಯರು ರೋಗಿಗೆ ಚುಚ್ಚು ಮದ್ದನ್ನು ನೀಡುವಾಗ ರೋಗಿಗೆ ನೋವಿನ ಅರಿವಾಗದಿರಲೆಂದು ಏನನ್ನೋ ಮಾತನಾಡುತ್ತಾ ಗಮನವನ್ನು ಬೇರೆಡೆಗೆ ಸೆಳೆಯವುದಿಲ್ಲವೇ? ಹಾಗೆ ಮನಸ್ಸನ್ನು ಪರಮಾತ್ಮನ ಕಡೆಗೆ ತಿರುಗಿಸಿ ಆಂತರ್ಯದಲ್ಲಿ ನಿರಂತರ ಧ್ಯಾನವನ್ನು ಮಾಡಿದರೆ ಹಸಿವು ಮತ್ತೊಂದರ ಕಷ್ಟ ಮರೆಯಾಗುವುದು, ಅರಿವಿಗೆ ಬಾರದು. ಅಷ್ಟು ಮಾತ್ರವಲ್ಲ, ಧ್ಯಾನದಿಂದ ವಿಶಿಷ್ಟವಾದ ಅಲೌಕಿಕ ಆತ್ಮಾನಂದವು ಹೊರಹೊಮ್ಮುತ್ತದೆ. ಆ ಆನಂದವನ್ನು ಸವಿದರೆ ವಿಲಕ್ಷಣವಾದ ತೃಪ್ತಿ-ಸಮಾಧಾನಗಳು ದೊರೆಯುತ್ತವೆ. ಈ ಆನಂದದ ಮುಂದೆ ಉಳಿದೆಲ್ಲ ಆನಂದಗಳು ಕುಬ್ಜವೆನಿಸುತ್ತವೆ.
(ಮುಂದುವರೆಯುವುದು)

Girl in a jacket
error: Content is protected !!