ದರ್ಮಮೀರಿದ ಮಾನವೀಯತೆ
ಅದು ೨೦೦೪ರ ಏಪ್ರಿಲ್ ತಿಂಗಳ ೨೩ನೇ ತಾರೀಖಿನ ರಾತ್ರಿ ಒಂಬತ್ತರ ಸಮಯ. ಮೊದಲನೇ ಬಾರಿಗೆ ಮಸ್ಕತ್ ನ ಸೀಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನನಗೆ ಹೊರಗಿನ ವಾತಾವರಣದ ಹಬೆಯಂತಹ ಬಿಸಿಗಾಳಿ ಸ್ವಾಗತ ಕೋರಿತ್ತು. ಅಪರಿಚಿತ ನೆಲದಲ್ಲಿ ಕಾಲಿಟ್ಟ ಹೊತ್ತು ಸಹಜವಾಗಿಯೇ ನನ್ನಲ್ಲಿ ಅರಿಯದ ಒಂದು ಆತಂಕ ಮನೆಮಾಡಿತ್ತು. ನನ್ನ ಉದ್ಯೋಗ, ವಾಸಮಾಡಲಿರುವ ಮನೆ ಇಂತಹ ಹಲವು ಹತ್ತು ವಿಷಯಗಳು ಪೂರ್ವನಿರ್ಧಾರವಾಗಿದ್ದಾರೂ ನಮ್ಮದಲ್ಲದ ನೆಲದಲ್ಲಿ ಬದುಕನ್ನು ಮತ್ತೆ ಕಟ್ಟಬೇಕಾದ ಅನಿವಾರ್ಯತೆಯೊಂದು ನನ್ನೆದುರು ಧುತ್ತೆಂದು ನಿಂತಿತ್ತು.
ವಿಮಾನ ನಿಲ್ದಾಣದಲ್ಲಿ ಆಗಬೇಕಾದ ಎಲ್ಲಾ ಜರೂರಿ ಕಾರ್ಯಗಳೂ ನಾನು ಅಂದುಕೊಂಡಿದ್ದಕ್ಕಿಂತ ವೇಗವಾಗಿ ನಡೆದಿದ್ದು ನನ್ನ ಆತಂಕವನ್ನು ಕೊಂಚ ಕಡಿಮೆ ಮಾಡಿತ್ತು. ಲಗೇಜನ್ನು ಟ್ರಾಲಿಯಲ್ಲಿ ಇಟ್ಟುಕೊಂಡು ತಳ್ಳುತ್ತಾ ಹೊರಬಂದವನು ನನಗಾಗಿ ಕಾಯುತ್ತಿದ್ದ ಕಂಪನಿಯ ಪ್ರತಿನಿಧಿಗಾಗಿ ಆಚೀಚೆ ನೋಡತೊಡಗಿದೆ. ಪ್ರವೇಶದ್ವಾರದ ಸನಿಹದಲ್ಲಿಯೇ ಪ್ಲೇಕಾರ್ಡುಗಳನ್ನು ಹಿಡಿದು ನಿಂತ ಹದಿನೈದು ಇಪ್ಪತ್ತು ಮಂದಿಯ ಗುಂಪಿನಲ್ಲಿ ನನ್ನ ಹೆಸರಿನ ಪ್ಲೇಕಾರ್ಡ್ ಹುಡುಕತೊಡಗಿದೆ. ಒಂದೆರೆಡು ನಿಮಿಷಗಳಲ್ಲಿಯೇ ನನ್ನ ಹೆಸರಿನ ಪ್ಲೇಕಾರ್ಡ್ ಹಿಡಿದು ನಿಂತ ವ್ಯಕ್ತಿಯೊಬ್ಬ ನನಗೆ ಗೋಚರಿಸಿದ. ನಿಧಾನಗತಿಯಿಂದ ಅವನ ಕಡೆ ಚಲಿಸಿದ ನಾನು ಹಸ್ತವನ್ನು ಅವನತ್ತ ಚಾಚುವ ಮೂಲಕ ಪ್ಲೇಕಾರ್ಡಿನಲ್ಲಿ ಇರುವ ಹೆಸರಿನ ವ್ಯಕ್ತಿ ನಾನೇ ಎನ್ನುವ ಸೂಚನೆಕೊಟ್ಟೆ. ಮುಖದ ಮೇಲೆ ನಗುವನ್ನು ತಂದುಕೊಂಡ ಆ ವ್ಯಕ್ತಿ “ವೆಲ್ ಕಮ್ ಟು ಒಮಾನ್” ಎನ್ನುವ ಶುಭಾಶಯಗಳೊಂದಿಗೆ ನನಗೆ ಆತ್ಮೀಯ ಹಸ್ತಲಾಘವವನ್ನ ನೀಡಿದ ಮತ್ತು ಲಗೇಜು ತುಂಬಿದ ಟ್ರಾಲಿಯನ್ನು ನನ್ನ ಕೈಯಿಂದ ತೆಗೆದುಕೊಳ್ಳಲು ಮುಂದಾದ. ಆದರೆ ಆತನನ್ನು ನಾನು ಈ ಕೆಲಸಕ್ಕೆ ಮುಂದಾಗದಂತೆ ನಯವಾಗಿ ತಿರಸ್ಕರಿಸಿ, ಆ ವ್ಯಕ್ತಿಯನ್ನ ಹಿಂಬಾಲಿಸುತ್ತಾ ಆತ ಕಾರು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳಕ್ಕೆ ಬಂದೆ.
ಕಾರಿನ ಡಿಕ್ಕಿಯಲ್ಲಿ ಲಗೇಜು ಮಡುಗಿ ಕಾರಿನ ಮುಂಭಾಗದ ಸೀಟಿನಲ್ಲಿ ಅಸೀನನಾದ ನನಗೆ ಸೀಟ್ ಬೆಲ್ಟ್ ಹಾಕುವಂತೆ ಆತ ಕೇಳಿಕೊಂಡ. ಬೆಲ್ಟ್ ಹಾಕಿಕೊಂಡವನು, “ವಾಟ್ ಈಸ್ ಯುವರ್ ನೇಮ್” ಎಂದು ಚಾಲಕನ ಸ್ಥಾನದಲ್ಲಿ ಕುಳಿತು ಕಾರು ಚಲಾಯಿಸಲು ಮೊದಲಾದ ಆ ವ್ಯಕ್ತಿಯನ್ನು ಕೇಳಿದೆ. ಆತ ತನ್ನ ಹೆಸರು ಸಾಲಂ ಅಬ್ದುಲ್ಲಾ ಅಲ್ ಬತಾಷಿ (SAB) ಎಂತಲೂ ಮತ್ತು ತಾನು ನಾನು ಸೇರಲಿರುವ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದೇನೆ ಎಂದೂ ತಿಳಿಸಿದ. ಹರುಕುಮುರುಕು ಇಂಗ್ಲೀಷಿನಲ್ಲಿ ಮಾತ್ರ ಸಂಭಾಷಿಸಬಲ್ಲ SAB ಗೆ ಹಿಂದಿಯ ಒಂದು ಶಬ್ದವೂ ಗೊತ್ತಿಲ್ಲದ ಹಾಗೆ ನನಗೆ ತೋಚಿತು. ಸುಮಾರು ಮೂವತ್ತರ ಆಸುಪಾಸಿನ ಪ್ರಾಯದವನಾದ SAB ಎಲ್ಲಾ ಒಮಾನಿಗಳಂತೆಯೆ ಬಿಳಿಯ ಉದ್ದದ ನಿಲುವಂಗಿ (ಇಲ್ಲಿನವರು ಈ ದಿರಿಸಿಗೆ ಡಿಶ್ ಡಾಶಾ ‘ ಎಂದು ಕರೆಯುತ್ತಾರೆ) ಮತ್ತು ತಲೆಯ ಮೇಲೆ ಕಸೂತಿ ಕೆಲಸದಿಂದ ತುಂಬಿದ ಚಿತ್ತಾರದ ಒಮನಿ ಟೋಪಿ ಧರಿಸಿದ್ದ. ಸಪೂರ ದೇಹ, ಸ್ವಲ್ಪ ಕಪ್ಪು ಎಂದೇ ಹೇಳಬಹುದಾದ ದೇಹಬಣ್ಣ ಮತ್ತು ಎಂದೂ ಮಾಸದ ತುಟಿಗಳ ಮೇಲೆ ಲಾಸ್ಯವಾಡುತ್ತಿದ್ದ ಕಂಡೂ ಕಾಣದಂತಹ ಮಂದಹಾಸ SAB ವ್ಯಕ್ತಿತ್ವದ ಹೆಗ್ಗುರುತು. ಭಾಷೆಯ ಕಾರಣದಿಂದಾಗಿ ಆತನೊಟ್ಟಿಗೆ ಹೆಚ್ಚಿನ ಸಂಭಾಷಣೆ ಆ ರಾತ್ರಿ ಸಾಧ್ಯವಾಗಲಿಲ್ಲ. ನಾಳೆ ಬೆಳಿಗ್ಗೆ ಎಂಟಕ್ಕೆ ನನ್ನ ಮನೆಗೆ ಬರುವುದಾಗಿ ಮತ್ತು ನನ್ನನ್ನು ತಾನೇ ಆಫೀಸಿಗೆ ಕರೆದುಕೊಂಡು ಹೋಗುವುದಾಗಿಯೂ SAB ಹೇಳಿದ್ದು ನನಗೆ ಅರ್ಥವಾಗಿತ್ತು.
ಬೆಳಿಗ್ಗೆಯ ಎಂಟು ಬಾರಿಸುವ ಮೊದಲೇ ನನ್ನ ಫ್ಲಾಟಿನ ಮುಂಬಾಗಿಲಿನ ಬೆಲ್ಲು ಬಾರಿಸಿತು. ಕರಾರುವಕ್ಕಾದ ಸಮಯಕ್ಕೆ ಹಾಜರಾಗಿದ್ದ SAB ಒಂದಿಗೆ ಆಫೀಸಿಗೆ ಹೋದವನು ಕೆಲವು ತುರ್ತುಕೆಲಸಗಳಲ್ಲಿ ವ್ಯಸ್ತನಾಗಿದ್ದ ಕಾರಣ ಮಧ್ಯಾಹ್ನದ ಭೋಜನದ ಸಮಯವಾದದ್ದನ್ನು ಗಮನಿಸಿಯೇ ಇರಲಿಲ್ಲ. ನನ್ನ ಸಹೋದ್ಯೋಗಿ ಮೆನನ್ ತಾನು ಊಟಕ್ಕೆ ಹೋಗುತ್ತಿರುವುದಾಗಿ ಮತ್ತು SAB ನನ್ನನ್ನು ಊಟಕ್ಕೆ ಹತ್ತಿರದ ಹೋಟಲೊಂದಕ್ಕೆ ಕರೆದೊಯ್ಯುತ್ತಾನೆ ಎಂದಾಗಲೇ ನನಗೆ ಸಮಯದ ಅರಿವಾಗಿದ್ದು.
ಅನಿತರಲ್ಲಿಯೆ SAB “ಮುದೀರ್ ” ಎಂದು ಹೇಳುತ್ತಾ ನನ್ನ ಬಳಿ ಸಾರಿದ. ರಾತ್ರಿಯೇ ನನ್ನ ಹೆಸರನ್ನು ತಿಳಿಸಿ ಹೇಳಿದ್ದರೂ ಈತನೇನೋ ಬೇರೆ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದಾನಲ್ಲ? ಎಂದುಕೊಂಡವನು ಒಮ್ಮೆ ಆತ ಹೇಳಿದ ಶಬ್ದವನ್ನು ಕನ್ನಡೀಕರಿಸಿ ನನ್ನ ಶರೀರದ ಕಡೆಗೆ ದೃಷ್ಟಿ ಹಾಯಿಸಿದೆನು. ನನ್ನ ಮುಂದೆ ಕುಳಿತಿದ್ದ ಅನಿಲಕುಮಾರ್ ನಾಯರಿಗೆ ನನ್ನ ಪೇಚಾಟ ಅರ್ಥವಾಗಿರಬೇಕು. ಮುದೀರ್ ಎಂದರೆ ಅರೇಬಿಕ್ ನಲ್ಲಿ ಮ್ಯಾನೇಜರ್ ಎನ್ನುವ ಅರ್ಥ ಎಂದು ತಿಳಿಸಿದ. ಸಮಾಧಾನದ ನಿಟ್ಟುಸಿರು ಬಿಟ್ಟವನು ನನ್ನ ಆಸನದಿಂದ ಎದ್ದೆ.
SAB ನನ್ನನ್ನು ಊಟಕ್ಕಾಗಿ ಆಫೀಸಿನ ಹತ್ತಿರವೇ ಇದ್ದ ಹೋಟೆಲ್ ಒಂದಕ್ಕೆ ಕರೆದೊಯ್ದ. ನಾನು ಶುದ್ಧಶಾಖಾಹಾರಿ ಎಂದು ಪದೇ ಪದೇ ಹೇಳಿದರೂ ಅದು ಅಷ್ಟಾಗಿ ಆತನ ಗಮನಕ್ಕೆ ಬಂದ ಹಾಗೆ ತೋರಲಿಲ್ಲ. ಆತ ನನ್ನನ್ನು ಕರೆದೊಯ್ದಿದ್ದು ಒಂದು ಮಾಂಸಾಹಾರಿ ಹೋಟೆಲಿಗೆ. ಮತ್ತೊಮ್ಮೆ ನಾನು ಶುದ್ಧಶಾಖಾಹಾರಿ ಎಂದು SABಗೆ ಹೇಳುವ ಪ್ರಯತ್ನ ಮಾಡಿದರೂ “ಚಿಕನ್ ಆದ್ರೆ ಪರವಾ ಇಲ್ಲವಾ? ಫಿಶ್ ಆದರೆ ತಿನ್ನುತ್ತೀರಾ” ಎಂದು ಪ್ರಶ್ನೆ ಮಾಡುತ್ತಿದ್ದ ಆತನ ಮಾತುಗಳಿಂದ ಸಸ್ಯಾಹಾರದ ಬಗ್ಗೆ SAB ಗೆ ಹೆಚ್ಚಿನ ಅರಿವಿಲ್ಲ ಎಂದು ಅರಿವಾಗಿ ಕಂಪನಿಯ ಅಕೌಂಟೆಂಟ್ ಮುರಳಿಗೆ ಫೋನು ಮಾಡಿ ಆತ ಸೂಚಿಸಿದಂತೆ ಸಿಬಿಡಿಯ ಅನ್ನಪೂರ್ಣ ಹೋಟೆಲಿನಲ್ಲಿ ನನ್ನ ಭೋಜನವನ್ನು ಮುಗಿಸಿದೆ. ನಾನು ಎಷ್ಟು ಒತ್ತಾಯಿಸಿದರೂ SAB ನನ್ನ ಜೊತೆಗೆ ಊಟ ಮಾಡಲು ಒಪ್ಪದೇ ಇದ್ದದ್ದು ನನಗೆ ತುಸು ವಿಚಿತ್ರವಾಗಿಯೇ ಗೋಚರಿಸಿತು. ಆ ಹೊತ್ತಿನಲ್ಲಿ ಕೊಯಂಬತ್ತೂರು ಮೂಲದ ಹೆಂಗಸೊಬ್ಬರು ನಡೆಸುತ್ತಿದ್ದ ಈ ಹೊಟೇಲಿನ ತಮಿಳರ ರುಚಿಯ ಊಟ ನನಗೆ ಇಷ್ಟವಾಗದೆ ಇದ್ದರೂ ಶಾಖಾಹಾರ ಸಿಕ್ಕಿತಲ್ಲ ಎಂದು ಖುಷಿಯಾಯಿತು.
ದಿನಕಳೆದಂತೆ SAB ನನಗೆ ಹೆಚ್ಚು ಹತ್ತಿರದವನಾದ. ಆತನ ಇಂಗ್ಲೀಷನ್ನು ತಕ್ಕಮಟ್ಟಿಗೆ ಅರ್ಥ ಮಾಡಿಕೊಳ್ಳುವ ಹಂತಕ್ಕೆ ನಾನು ಬಂದಿದ್ದೆ. ಹೀಗಾಗಿ ನಮ್ಮಿಬ್ಬರ ಮಧ್ಯೆ ಸಾಕಷ್ಟು ಸಂಭಾಷಣೆ ನಡೆಯುತ್ತಾ ಇತ್ತು. ಮಸ್ಕತ್ ಸಮೀಪದ ಕುರಿಯತ್ ಎನ್ನುವ ಪಟ್ಟಣದ ಮೂಲದವನಾದ SABನ ಸಂಸಾರ ಕುರಿಯತ್ತಿನಲ್ಲಿಯೇ ವಾಸಿಸುತ್ತಿತ್ತು. ವಾರದ ದಿನಗಳಲ್ಲಿ ತನ್ನ ಸ್ನೇಹಿತನೊಂದಿಗೆ ವಾದಿಅದೈ ಏರಿಯಾದ ಕೋಣೆಯೊಂದರಲ್ಲಿ ಉಳಿಯುತ್ತಿದ್ದ SAB ವಾರಾಂತ್ಯದಲ್ಲಿ ಕುರಿಯತ್ತಿಗೆ ಹೋಗುತ್ತಿದ್ದ. ನನ್ನ ಬಳಿ ಡ್ರೈವಿಂಗ್ ಲೈಸೆನ್ಸ್ ಇರದಿದ್ದ ಕಾರಣದಿಂದಾಗಿ ನನಗೆ ಕೊಡಲ್ಪಟ್ಟಿದ್ದ ಕಂಪನಿಯ ಕಾರು SAB ಬಳಿಯೇ ಇರುತ್ತಿತ್ತು. ನನ್ನ ಕೆಲವು ಸಹದ್ಯೋಗಿಗಳು ವಾರಾಂತ್ಯದಲ್ಲಿ ನಿಮ್ಮ ಕಾರನ್ನು SAB ಕುರಿಯತ್ತಿಗೆ ತೆಗೆದುಕೊಂಡು ಹೋಗಿ ಅಲ್ಲಿ ಕಾರುಗಳ ರೇಸಿನಲ್ಲಿ ಬಳಸುತ್ತಾನೆ ಎನ್ನುವ ಚಾಡಿ ಮಾತುಗಳನ್ನು ಕಿವಿಯ ಮೇಲೆ ಹಾಕುವ ಪ್ರಯತ್ನಗಳನ್ನು ಮಾಡಿದರೂ ನಾನು ಈ ಎಲ್ಲಾ ದೂರುಗಳಿಗೆ ಜಾಣಕಿವುಡುತನವನ್ನು ಪ್ರದರ್ಶಿಸುತ್ತಿದ್ದೆ.
ನನ್ನನ್ನು ಮನೆಯಿಂದ ಆಫೀಸಿಗೆ ಮತ್ತು ಆಫೀಸಿನಿಂದ ಮನೆಗೆ, ಕಚೇರಿಯ ಕಾರ್ಯಾವಧಿಯಲ್ಲಿ ನನ್ನನ್ನು ಬೇರೆಬೇರೆ ಕಡೆಗಳಿಗೆ ಮತ್ತು ಆಫೀಸಿನ ಅವಧಿಯ ನಂತರ ಬೇಕೆಂದಾಗ ಶಾಪಿಂಗಿಗೆ ಕರೆದೊಯ್ಯುತ್ತಿದ್ದ SAB ನನ್ನನ್ನು ಎಂದೂ ಕಾಯಿಸಿದವನಲ್ಲ. ಹೇಳಿದ ಸಮಯಕ್ಕಿಂತ ಸ್ವಲ್ಪ ಬೇಗನೇ ಹಾಜರಾಗುತ್ತಿದ್ದ ಆತ ಸಮಯ ಪಾಲನೆಯಲ್ಲಿ ಎಂದೂ ಯಾರಿಂದಲೂ ಬೆಟ್ಟುಮಾಡಿಸಿಕೊಂಡವನಲ್ಲ. SABನ ಸಮಯಪ್ರಜ್ಞೆ ನನ್ನ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು.
ನನ್ನನ್ನು ವಿಶೇಷವಾಗಿ ಸೆಳೆದ SABನ ಮತ್ತೊಂದು ಗುಣವಿಶೇಷ ಎಂದರೆ ಆತನ ತಾಳ್ಮೆ. ಮಧ್ಯಪ್ರಾಚ್ಯದ ಎಲ್ಲಾ ಮರಳನ್ನು ಒಂದು ಕಡೆ ಕೂಡಿಸಿ ಅದನ್ನು SABನ ತಾಳ್ಮೆಯೊಂದಿಗೆ ತೂಕಹಾಕಿದರೂ SABನ ತಾಳ್ಮೆಯ ತೂಕವೇ ಒಂದು ಕೈ ಮೇಲಾಗಿರುತ್ತಿತ್ತು ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ. ಎಂತಹ ಸನ್ನಿವೇಶದಲ್ಲಿಯೂ, ನಾನು ಗಂಟೆಗಳ ಕಾಲ ಆತನನ್ನು ಆಫೀಸಿನ ಕೆಲಸದ ಸಲುವಾಗಿ ಕಾಯಿಸಿದ ಹೊತ್ತೂ ಅಥವಾ ರಾತ್ರಿ ಹನ್ನೊಂದು ಗಂಟೆಗಳನ್ನು ಮೀರಿ ನಡೆದ ನನ್ನ ಶಾಪಿಂಗಿನ ಅವಧಿಯಲ್ಲಿಯೂ SAB ಒಂದು ಗುಲಗಂಜಿ ತೂಕದ ಅಸಮಾಧಾನವನ್ನೂ ಹೊರಹಾಕಿದವನಲ್ಲ. ಇಂತಹ ಅನೇಕ ಸಂದರ್ಭಗಳಲ್ಲಿ ಆತನ ಮುಖವನ್ನು ನಾನು ತದೇಕಚಿತ್ತನಾಗಿ ಅಲ್ಲಿರಬಹುದಾದ ಅಸಮಾಧಾನದ ಸಣ್ಣ ಗೆರೆಗಳನ್ನು ಓದಲಿಕ್ಕೆ ಪ್ರಯತ್ನಿಸಿದ್ದೂ ಇದೆ. ಆದರೆ ಯಾವತ್ತೂ ತನ್ನ ಮನದಲ್ಲಿ ನಡೆಯುತ್ತಿದ್ದ ತುಮುಲವನ್ನು ತನ್ನ ಮುಖದ ಮೇಲೆ SAB ತಂದವನೇ ಆಲ್ಲ.
ಕುರಿಯತ್ತಿನಲ್ಲಿ ಸ್ವಲ್ಪ ಭೂಮಿಯನ್ನು ಹೊಂದಿದ್ದ SAB ಎರಡು ಬೆಂಗಾಳಿ ಕೆಲಸಗಾರರ ನೆರವಿನಿಂದ ತಕ್ಕಮಟ್ಟಿನ ವ್ಯವಸಾಯವನ್ನ ನಡೆಸಿಕೊಂಡು ಬಂದಿದ್ದ. ಆದರೂ ನಾಲ್ಕು ಮಕ್ಕಳ ಸಂಸಾರವನ್ನು ಸಾಕುವುದು SABಗೆ ಒಂದು ದೊಡ್ಡ ಸವಾಲೇ ಆಗಿತ್ತು. ತಿಂಗಳಿಗೆ ಒಮ್ಮೆ ಬರುತ್ತಿದ್ದ ಸಂಬಳ ಆತನ ಸಂಸಾರದ ಖರ್ಚನ್ನು ತೂಗಿಸಲು ಸಾಲುತ್ತಿರಲಿಲ್ಲ. ಹೀಗಾಗಿ ಯಾವಾಗಲೂ ಹಣಕಾಸಿನ ಮುಗ್ಗಟ್ಟಿನಲ್ಲಿಯೆ ಇದ್ದಂತೆ ತೋರುತ್ತಿದ್ದ SAB ಆಗಾಗ ನನ್ನ ಬಳಿ ಸಣ್ಣಪುಟ್ಟ ಹಣವನ್ನು ಕೇಳಿ ಪಡೆಯುತ್ತಿದ್ದ. SABನ ಪರಿಸ್ಥಿತಿಯ ಅರಿವಿದ್ದ ನಾನು ಆತ ಕೇಳಿದಾಗಲೆಲ್ಲಾ ಹಣವನ್ನು ಕೊಡುತ್ತಿದ್ದೆನಲ್ಲದೆ ಕೊಟ್ಟ ಹಣವನ್ನು ವಾಪಾಸು ಮಾಡಲಿಕ್ಕೆ ಎಂದೂ ಕೇಳಿರಲಿಲ್ಲ. ಎಷ್ಟು ಹಣವನ್ನು SABಗೆ ಕೊಟ್ಟಿದ್ದೇನೆ ಎನ್ನುವ ಲೆಕ್ಕಾಚಾರವನ್ನೂ ನಾನು ಇಟ್ಟವನಲ್ಲ.
ಒಂದು ದಿನ ಮಧ್ಯಾಹ್ನದ ಸಮಯ, ಆಫೀಸಿಗೆ ಬಂದವನು ನನ್ನ ಟೇಬಲ್ ಮೇಲೆ ಇಟ್ಟ ಒಂದು ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ನೋಡಿದವನು ಸೆಕ್ರೆಟರಿ ರೂಪಾಲಿ ಸಾವಂತಳನ್ನು “ಇದೇನೆಂದು?” ಪ್ರಶ್ನಿಸಿದೆ. ಮುಖದ ಮೇಲೆ ತುಂಟನಗುವನ್ನು ತಂದುಕೊಂಡ ಸಾವಂತ್ “ಅದು ನಿಮಗಾಗಿ SAB ಇಟ್ಟು ಹೋಗಿರುವ ಮೀನು”ಎಂದಳು. ಮುಂದುವರೆದವಳು “ನೀವು ಮೀನು ತಿನ್ನುವುದಿಲ್ಲ ಎಂದು ರಾಮ್ ಮತ್ತು ಮೆನನ್ ಎಷ್ಟು ಹೇಳಿದರೂ ಕೇಳದೆ ಮುದೀರಿಗಾಗಿ ನಾನು ಬರ್ಕಾದಿಂದ ಈ ಮೀನು ತಂದಿದ್ದೇನೆ. ನೀವು ಸುಳ್ಳು ಹೇಳಿ ನನ್ನಿಂದ ಮೀನನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರಾ ಎಂದು ಹೇಳುತ್ತಾ ನಿಮ್ಮ ಟೇಬಲ್ ಮೇಲೆ ಮೀನನ್ನು ಇಟ್ಟು ಅದನ್ನು ನಿಮಗೆ ಕೊಡುವಂತೆ ನನಗೆ ತಾಕೀತು ಮಾಡಿ ಹೋಗಿದ್ದಾನೆ” ಎಂದು ನುಡಿದಳು. ಇದಕ್ಕಾಗಿಯೇ ಕಾಯುತ್ತಿದ್ದನೇನೋ ಎನ್ನುವಂತೆ ನನ್ನ ಕೋಣೆಯ ಹೊರಗೇ ಹೊಂಚು ಹಾಕಿ ಕುಳಿತಿದ್ದ ರಾಮನನ್ನು ಕರೆದು ಆತನಿಗೆ ಮೀನನ್ನು ಕೊಟ್ಟೆ. ಬಹಳ ದೊಡ್ಡದಾದ ಮೀನು ಎಂದು ಭಾಸವಾದ ಪರಿಣಾಮ ಮೆನನ್ ಒಟ್ಟಿಗೆ ಹಂಚಿಕೊಳ್ಳಲು ಹೇಳಿದೆ.
ಮಕ್ಕಳನ್ನು ಕಂಡರೆ SABಗೆ ಬಹಳ ಪ್ರೀತಿ. ನನ್ನ ಮಕ್ಕಳು SAB ಒಟ್ಟಿಗೆ ಶಾಪಿಂಗಿಗೆ ಹೋದಾಗಲೆಲ್ಲಾ ಅವರಿಗೆ ಏನಾದರೂ ತಿಂಡಿ ತಿನಿಸುಗಳನ್ನು ತನ್ನ ದುಡ್ಡಿನಿಂದ ಕೊಡಿಸದೆ ಇರುತ್ತಿರಲಿಲ್ಲ. ಇದರ ಬಗ್ಗೆ ನಾನು ಹಲವು ಬಾರಿ ಆತನ ಬಳಿ ಆಕ್ಷೇಪ ಎತ್ತಿದ್ದರೂ “ಚೀಕು, ಚೀಕು” ಎಂದಷ್ಟೇ ಹೇಳಿ ನಸುನಕ್ಕು ಸುಮ್ಮನಾಗುತ್ತಿದ್ದ.
ಅದು ೨೦೦೭ ವರ್ಷ. ಮಾಮೂಲಿನಂತೆ ನನ್ನ ವಾರ್ಷಿಕ ರಜಾ ಅವಧಿಗಾಗಿ ಜುಲೈ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ನಾನು ಮೂರು ವಾರಗಳ ನಂತರ ಮಸ್ಕತ್ತಿಗೆ ವಾಪಸಾಗಿದ್ದೆ. ನಾನು ಭಾರತಕ್ಕೆ ಬರುವಾಗ ಪ್ರತಿಸಲದ ವಾಡಿಕೆಯಂತೆ ಒಂದು ಬ್ಯಾಗಿನ ತುಂಬಾ ತನ್ನ ಜಮೀನಿನಲ್ಲಿ ಬೆಳೆದ ಖರ್ಜೂರದ ಹಣ್ಣಿನ ಗೊಂಚಲುಗಳನ್ನು ಕೊಟ್ಟು ಏರ್ ಪೋರ್ಟ್ ನವರೆಗೆ ಬಂದು ಬೀಳ್ಕೊಟ್ಟಿದ್ದ SAB ನಾನು ಮರಳಿ ಬಂದಾಗ ನನ್ನನ್ನು ಮನೆಗೆ ಕರೆದೊಯ್ಯಲು ಬಂದಿರಲಿಲ್ಲ. ಇದೇಕೆ ಹೀಗೆ? ಎಂದು ಚಕಿತನಾದವನ ಎದುರು ಪ್ರತ್ಯಕ್ಷವಾದ ಮತ್ತೊಬ್ಬ ಸಹೋದ್ಯೋಗಿ ಸರೀಶ್ ಸಸಿಯೊಂದಿಗೆ ಮನೆ ಸೇರಿದ ನಾನು SAB ಬಗ್ಗೆ ಕೇಳಿದಾಗ ಅವನಿಂದ ಬಂದ ಉತ್ತರ ಆಶ್ಚರ್ಯಜನಕವಾಗಿತ್ತು. SABಗೆ ಸ್ಥಳೀಯ ಸಚಿವಾಲಯ (ಮಿನಿಸ್ಟ್ರಿ)ವೊಂದರಲ್ಲಿ ಉದ್ಯೋಗ ದೊರೆತ ಪರಿಣಾಮ ನಮ್ಮ ಕಂಪನಿಯ ಕೆಲಸವನ್ನು ತೊರೆದು ಹೊಸ ಕೆಲಸಕ್ಕೆ ಸೇರಿರುವುದಾಗಿ ತಿಳಿಯಿತು. ಇದಾಗಿ ಹದಿನೈದು ದಿನಗಳೇ ಆಗಿತ್ತು. SAB ನನ್ನೊಟ್ಟಿಗಿನ ಸಂಭಾಷಣೆಗಳಲ್ಲಿ ತಾನು ಸಚಿವಾಲಯದ ಕೆಲಸವನ್ನು ಪಡೆಯಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಒಂದೆರೆಡು ಬಾರಿ ಪ್ರಸ್ತಾಪ ಮಾಡಿದ್ದು ನೆನಪಾಯಿತು.
ಮಾರನೇ ದಿನ SAB ನನಗೆ ಫೋನು ಮಾಡಿ ಊರಿನಲ್ಲಿ ನನ್ನ ತಂದೆತಾಯಿಗಳ, ಮತ್ತಿತರ ಸಂಬಂಧಿಕರ ಆರೋಗ್ಯದ ಬಗ್ಗೆ ವಿಚಾರಿಸಿದ. ನನಗೆ ತಿಳಿಸದೆ ಕೆಲಸವನ್ನು ಬಿಟ್ಟಿದ್ದಕ್ಕಾಗಿ ವಿಷಾದವನ್ನೂ ವ್ಯಕ್ತಪಡಿಸಿದ. ಸಚಿವಾಲಯದ ಕೆಲಸಕ್ಕೆ ಜುಲೈ ೩೧ರ ಒಳಗೆ ಸೇರಲೇಬೇಕಾದ ಅನಿವಾರ್ಯತೆ ಇದ್ದುದರಿಂದ ಹಾಗೆ ಮಾಡಬೇಕಾಯಿತು ಎನ್ನುವ ಸಮಜಾಯಿಷಿಯನ್ನೂ ಕೊಟ್ಟ. “ನೀನು ಬಯಸಿದ್ದು ಸಿಕ್ಕಿರುವ ಬಗ್ಗೆ ನನಗೆ ಸಂತೋಷವಿದೆ, ನನ್ನನ್ನು ಆದಷ್ಟು ಶೀಘ್ರ ಬೇಟಿಮಾಡು” ಎಂದು ಹೇಳಿದೆ.
ಇದಾದ ಎರಡು ಮೂರು ದಿನಗಳಲ್ಲಿ ಆಫೀಸಿಗೆ ಬಂದ SAB ತನ್ನ ಜೊತೆಗೆ ಒಮಾನಿ ಹಲ್ವಾವನ್ನೂ ತಂದಿದ್ದ. ತನ್ನ ಹೊಸ ಕೆಲಸದ ಬಗ್ಗೆ ಉತ್ಸಾಹದಿಂದ ವಿವರಿಸಿದ ಆತ ತನ್ನ ಆಫೀಸು ಮಧ್ಯಾಹ್ನವೇ ಮುಗಿಯುವುದರಿಂದ ದಿನದ ಬಿಡುವಿನ ವೇಳೆಯಲ್ಲಿ ಟ್ಯಾಕ್ಸಿ ಓಡಿಸಬೇಕೆಂಬ ಯೋಚನೆಯಲ್ಲಿ ಇರುವುದಾಗಿಯೂ ಹೇಳಿದ್ದ.
ತದನಂತರದ ಮೂರ್ನಾಲ್ಕು ವರ್ಷಗಳ ಕಾಲ SABನ ಸುಳಿವಿರಲಿಲ್ಲ. ಈ ಮಧ್ಯೆ ಕಂಪನಿ ಕೆಲಸ ಬಿಟ್ಟು ಸ್ವಂತದ ಉದ್ಯೋಗ ಶುರುಮಾಡಿದ್ದ ಮೆನನ್ ಜೊತೆ ಸಂಪರ್ಕದಲ್ಲಿದ್ದ SAB ಪ್ರತೀ ಬಾರಿ ಮೆನನ್ ಗೆ ಸಿಕ್ಕಾಗಳೂ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಕೇಳುತ್ತಿದ್ದುದರ ಬಗ್ಗೆ ಮೆನನ್ ನನಗೆ ಹೇಳುತ್ತಿದ್ದ. ಒಂದೆರೆಡು ಬಾರಿ SAB ನನಗೆ ಫೋನ್ ಮಾಡಿ ಮಾತನಾಡಿದ್ದೂ ನನಗೆ ನೆನಪಿದೆ.
ಅದು ೨೦೧೬ರ ಜನವರಿ ತಿಂಗಳು. ಬೆಳಗಿನ ಸುಮಾರು ಹತ್ತು ಗಂಟೆಯ ಸಮಯ ಇದ್ದಿರಬಹುದು. ಧಿಡೀರನೆ ನನ್ನ ಆಫೀಸಿಗೆ ಭೇಟಿಕೊಟ್ಟ SAB ನನ್ನ ಕೋಣೆಗೆ ಬಂದು ಕುಶಲೋಪರಿ ವಿಚಾರಿಸಿದ. ಇಲ್ಲಿನ ಸಂಪ್ರದಾಯದಂತೆ ಕಾವ (ಒಮಾನಿ ಕಾಫಿ) ಮತ್ತು ಖರ್ಜೂರ ಕೊಟ್ಟು ಆತನ ಅತಿಥಿ ಸತ್ಕಾರ ನೆರವೇರಿಸಿದೆ. ಉಭಯ ಕುಶಲೋಪರಿ ನಂತರ ಹೊರಟು ನಿಂತ SAB ನನ್ನ ಕೈಯಲ್ಲಿ ಒಂದು ಲಕೋಟೆಯನ್ನು ಇಟ್ಟ. ಲಕೋಟೆಯನ್ನು ತಾನು ಹೋದಮೇಲೆ ತೆಗೆಯಿರಿ ಎನ್ನುವ ಪ್ರಾರ್ಥನೆಯನ್ನೂ ಮಾಡಿದ. ಬಳಿಕ ಒಂದರ್ಧ ಗಂಟೆಯ ಕಾಲ ತನ್ನ ಹಳೆಯ ಇಬ್ಬರು ಸಹೋದ್ಯೋಗಿಗಳ ಒಡನೆ ಹರಟಿ ಮತ್ತೊಮ್ಮೆ ನನ್ನ ಕೋಣೆಗೆ ಬಂದು ಬರುವುದಾಗಿ ಹೇಳಿ ಹೊರಟುಹೋದ.
SAB ಹೋದ ನಂತರ ಅಲ್ಲಿಯವರೆಗೂ ಅದುಮಿಟ್ಟಿದ್ದ ನನ್ನ ಕೆಟ್ಟ ಕುತೂಹಲ ಹೆಡೆಬಿಚ್ಚಿತು. ಆತ ಕೊಟ್ಟು ಹೋದ ಲಕೋಟೆಯನ್ನು ಆತುರಾತುರವಾಗಿ ತೆಗೆದವನಿಗೆ ಅಲ್ಲಿ ಕೆಲವು ಒಮಾನಿ ರಿಯಾಲುಗಳ ನೋಟುಗಳು ಕಾಣಿಸಿದವು. ನೋಟುಗಳನ್ನು ಎಣಿಸಿದೆ, ಬರೋಬ್ಬರಿ ೧೫೬ ಮುಖಬೆಲೆಯ ವಿವಿಧ ಮೌಲ್ಯಗಳ ನೋಟುಗಳಿದ್ದವು. ಒಂದು ಒಮಾನಿ ರಿಯಾಲ್ ಸರಿಸುಮಾರು ನಮ್ಮ ೧೯೦ ರೂಪಾಯಿಗಳಿಗೆ ಸಮ. ಅದರೊಟ್ಟಿಗೆ ಒಂದು ಸಣ್ಣ, ಬಹಳ ಹಳೆಯದಂತೆ ತೋರುತ್ತಿದ್ದ, ಸುಕ್ಕುಸುಕ್ಕಾಗಿದ್ದ ಒಂದು ಚೀಟಿಯನ್ನೂ ಲಗತ್ತಿಸಿದ್ದ SAB. ಚೀಟಿ ಬಿಡಿಸಿ ನೋಡಿದವನಿಗೆ ಅರೇಬಿಕ್ ಭಾಷೆ ಮತ್ತು ಸಂಖ್ಯೆಯಲ್ಲಿ ಬರೆದಿದ್ದ ಅದು ಅರ್ಥವಾಗಲಿಲ್ಲ. ಆಫೀಸಿನ ಅಡ್ಮಿನ್ ವಿಭಾಗದ ತುರಯ್ಯಳನ್ನು ಕರೆದು ಚೀಟಿಯನ್ನ ಓದಲು ಕೇಳಿಕೊಂಡೆ. ಚೀಟಿಯಲ್ಲಿ SAB ನನ್ನಿಂದ ಕಾಲಕಾಲಕ್ಕೆ ಪಡೆದಿದ್ದ ಸಣ್ಣಸಣ್ಣ ಮೊತ್ತದ ಹಣದ ಸಂಪೂರ್ಣ ವಿವರಗಳಿದ್ದವು. ಇಲ್ಲಿಯವರೆಗೆ ತಾನು ಪಡೆದ ಹಣವನ್ನು ಹಿಂತಿರುಗಿಸಲಾಗದಕ್ಕೆ ನನ್ನ ಕ್ಷಮೆಕೇಳಿದ್ದ SAB ಇಂದು ಬೆಳಿಗ್ಗೆ ಸಚಿವಾಲಯದಿಂದ ಬಹಳ ದಿನಗಳಿಂದ ಬಾಕಿ ಇದ್ದ ತನ್ನ ವೇತನದ ಹಣ ನನ್ನ ಅಕೌಂಟಿಗೆ ಜಮಾ ಆಗಿದೆ. ಈ ಮೊದಲು ನಿಮಗೆ ಹಣ ವಾಪಾಸು ಮಾಡಲು ಹಲವು ಬಾರಿ ಪ್ರಯತ್ನಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ. ಈ ಬಾರಿ ನಿಮ್ಮ ಹಣವನ್ನು ವಾಪಾಸು ಮಾಡಲೇಬೇಕೆಂಬ ಹಠಕ್ಕೆ ಬಿದ್ದಿದ್ದೆ. ಇನ್ನೂ ಹಲವು ದಿನಗಳು ಕಳೆದರೆ ಬ್ಯಾಂಕಿನಲ್ಲಿರುವ ಹಣ ಕರಗುತ್ತದೆ ಎನ್ನುವ ಭಯದಿಂದ ನಿಮ್ಮ ಹಣವನ್ನು ಎಲ್ಲಕ್ಕಿಂತ ಮೊದಲು ಹಿಂದಿರುಗಿಸಿದ್ದೇನೆ ಎಂದು ಅವಲತ್ತು ಪಟ್ಟಿದ್ದ.
ಚೀಟಿಯಲ್ಲಿದ್ದ ಬರಹವನ್ನು ಕೇಳಿದ ನಾನು ಹಲವು ನಿಮಿಷಗಳ ಕಾಲ ಸ್ತಂಭೀಭೂತನಾಗಿ ಕುಳಿತಲ್ಲೇ ಕುಳಿತಿದ್ದೆ. ಸಮಯನಿಷ್ಠೆ, ತಾಳ್ಮೆ, ನಿಷ್ಕಲ್ಮಶ ಹೃದಯ, ಪ್ರಾಮಾಣಿಕತೆ, ಪರರ ಹಂಗಿನಲ್ಲಿ ಬದುಕಬಾರದು ಎನ್ನುವ ಛಲ ಯಾವ ಧರ್ಮದ ಸೊತ್ತು? ಯಾವ ಜನಾಂಗದ ಸೊತ್ತು? ಯಾವ ವ್ಯಕ್ತಿವಿಶೇಷದ ಸೊತ್ತು? ದೇಶ, ಕಾಲ, ಧರ್ಮಗಳನ್ನೂ ಮೀರಿದ ಮಾನವೀಯತೆಯ ಸೆಲೆಯೊಂದು ನಮ್ಮೆಲ್ಲರ ಒಳಗೆ ಅಡಗಿ ಕುಳಿತು ಸಮಯ ಬಂದಾಗ ಭೋರ್ಗರೆದು ಹೊರಚಿಮ್ಮುವ ಚಕಿತ ಒಂದಕ್ಕೆ ನಾನು ಮೂಕಸಾಕ್ಷಿಯಾಗಿದ್ದೆ.
ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್