ದಕ್ಷಿಣ ಕರ್ನಾಟಕದ ಅಪರೂಪದ ಪ್ರಾಚೀನ ಬೌದ್ಧ ಕೇಂದ್ರ ರಾಜಘಟ್ಟ
೨೦೦೭ನೆಯ ಇಸವಿ. ಕ್ಷೇತ್ರಕಾರ್ಯಕ್ಕೆಂದು ಹೊರಟ ಸಂದರ್ಭ. ಕರ್ನಾಟಕದ ಪ್ರಮುಖ ಪ್ರಾಚೀನ ಸಾಂಸ್ಕೃತಿಕ ನೆಲೆಗಳನ್ನು ನೋಡುವ ತವಕದಿಂದ ಮೈಸೂರು, ಸೋಮನಾಥಪುರ, ತಲಕಾಡು, ಶ್ರೀರಂಗಪಟ್ಟಣ ಮೊದಲಾದ ಚಾರಿತ್ರಿಕ ಸ್ಥಳಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡಿ ದಾಖಲಿಸಿಕೊಳ್ಳಲು ಪಯಣಿಸಿದ್ದೆನು. ಇವೆಲ್ಲವನ್ನೂ ನೋಡಿ ಬೆಂಗಳೂರಿಗೆ ಬಂದಾಗ ನನಗೆ ನೋಡಬೇಕೆಂಬ ಕುತೂಹಲ ಹುಟ್ಟಿಸಿದ ಪ್ರಾಚೀನ ನೆಲೆ ರಾಜಘಟ್ಟ. ಈ ಸ್ಥಳವು ಅಷ್ಟೊತ್ತಿಗಾಗಲೇ ಉತ್ಖನನದ ಮೂಲಕ ಜಗತ್ತಿಗೆ ಚಿರಪರಿಚಿತವಾಗಿತ್ತು. ಅದು ಸಾಕಾವಾದದ್ದು ೨೦೦೧ ಮತ್ತು ೨೦೦೪ ರಲ್ಲಿ ನಡೆಸಲಾದ ಉತ್ಖನನದಿಂದ ಎಂಬುದನ್ನು ಗಮನಿಸಬೇಕು. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಬೌದ್ಧ ಧರ್ಮದ ಪಾರಮ್ಯವನ್ನು ಸಾರಿದ ಏಕೈಕ ಬೌದ್ಧ ನೆಲೆಯಾಗಿ ಉದಯಿಸಲು ಕಾರಣವಾದದ್ದು ಪುರಾತತ್ವಜ್ಞರು ನಡೆಸಿದ್ದ ಉತ್ಖನನದಿಂದ ಎಂಬುದು ಗಮನಾರ್ಹ.
ರಾಜಘಟ್ಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಗ್ರಾಮ. ೧೯೭೫ರ ಹೊತ್ತಿಗೆ ಕೆಲವು ವಿದ್ವಾಂಸರು ಈ ಪ್ರದೇಶದಲ್ಲಿ ಬೃಹತ್ ಶಿಲಾಯುಗದ ಸಮಾಧಿ ಅವಶೇಷಗಳನ್ನು ಪತ್ತೆಹಚ್ಚಿ ಈ ಗ್ರಾಮದ ಪ್ರಾಚೀನತೆಯನ್ನು ಬೃಹತ್ ಶಿಲಾಯುಗದವರೆಗೆ ಕೊಂಡೊಯ್ಚಿದ್ದರು. ಮತ್ತೆ ಕೆಲವರು ಸ್ಥಳೀಯರ ನೆರವಿನಿಂದ ಬೌದ್ಧ ಕುರುಹುಗಳನ್ನೂ ಸಂಗ್ರಹಿಸಿದ್ದರು. ಈ ಬಗೆಯ ಅನ್ವೇಷಣೆಯ ಹಿನ್ನೆಲೆಯಲ್ಲಿ ರಾಜಘಟ್ಟದ ಮಹತ್ವವನ್ನು ಅರಿತ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ತಂಡವು ಈ ನೆಲೆಯ ವಿಶೇಷತೆಯನ್ನು ಗುರುತಿಸಿ ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳ ನೆರವಿನೊಂದಿಗೆ ಉತ್ಖನನ ಮಾಡುವ ಸಾಹಸಕ್ಕೆ ಕೈಹಾಕಿತು. ಪ್ರಾಧ್ಯಾಪಕರಾದ ಡಾ.ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಡಾ.ಪಿ.ಮಹದೇವಯ್ಯ, ಡಾ.ದಯಾನಂದ ಪಟೇಲ್ ಮೊದಲಾದವರು ಈ ಉತ್ಖನನ ಕಾರ್ಯ ಕೈಗೊಂಡವರಲ್ಲಿ ಪ್ರಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಬೌದ್ಧ ನೆಲೆಗಳೆಂದು ಶಾಸನ ಮತ್ತು ಉತ್ಖನನಗಳಿಂದ ಬ್ರಹ್ಮಗಿರಿ ಮತ್ತು ಸನ್ನತಿಗಳನ್ನು ಗುರುತಿಸಲಾಗಿತ್ತು. ಈ ಎರಡು ನೆಲೆಗಳಲ್ಲದೆ ಬಳ್ಳಾರಿ, ಕೊಪ್ಪಳ, ರಾಯಚೂರುಗಳಲ್ಲೂ ಅಶೋಕನ ಶಾಸನಗಳು ದೊರೆತು ಬೌದ್ಧ ಧರ್ಮದ ಅಸ್ತಿತ್ವವನ್ನು ಗಟ್ಟಿಗೊಳಿಸಿದ್ದವು. ಆದರೆ ದಕ್ಷಿಣ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ನೆಲೆಗಳು ಪತ್ತೆಯಾಗಿರಲಿಲ್ಲ. ಈ ಕೊರತೆಯನ್ನು ನೀಗಿಸಿದ ಕೀರ್ತಿ ರಾಜಘಟ್ಟದ್ದಾಗಿದೆ. ಅಲ್ಲದೆ ಬೌದ್ಧ ಧರ್ಮದ ಅಸ್ತಿತ್ವವು ಈ ಮೇಲಿನ ಸ್ಥಳಗಳಿಂದ ಕ್ರಿ.ಶ. ೨-೩ನೆಯ ಶತಮಾನದವರೆಗೆ ಇತ್ತೆಂಬುದು ಸಾಬೀತಾಗಿತ್ತು. ಆದರೆ ರಾಜಘಟ್ಟದ ನೆಲೆಯು ಕರ್ನಾಟಕದಲ್ಲಿ ಬೌದ್ಧ ಧರ್ಮದ ಚರಿತ್ರೆಯನ್ನು ಕ್ರಿ.ಶ. ಆರನೆಯ ಶತಮಾನದವರೆಗೂ ಅಸ್ತಿತ್ವದಲ್ಲಿತ್ತೆಂಬುದನ್ನು ದೃಢಪಡಿಸಿತು.
ರಾಜಘಟ್ಟವು ಶಿಲಾಯುಗ ಕಾಲದ ನೆಲೆಯೂ ಹೌದು. ಇದಕ್ಕೆ ಅಲ್ಲಿ ಕಂಡುಬಂದಿರುವ ಬೃಹತ್ಶಿಲಾಯುಗದ ಕಂಡಿಕೋಣೆ ಶಿಲಾಸಮಾಧಿ ಮತ್ತು ಪಾತ್ರಾವಶೇಷಗಳು ಗಮನಾರ್ಹವಾಗಿವೆ. ಆದರೆ ಅವು ನಿಧಿಗಳ್ಳರ ಹಾವಳಿಯಿಂದ ನಾಶವಾಗಿರುವುದು ದುರದೃಷ್ಟಕರ ಸಂಗತಿ. ಅದೇನೇ ಇರಲಿ ಈಗ ಹೇಳುವ ವಿಷಯ ಬೌದ್ಧ ಧರ್ಮವನ್ನು ಸಮೃದ್ಧವಾಗಿ ಬೆಳೆಸಿ ಪೋಷಿಸಿದ ನೆಲ, ಅದು ರಾಜಘಟ್ಟವಾಗಿರುವುದು. ಗ್ರಾಮದ ಆಗ್ನೇಯ ದಿಕ್ಕಿಗೆ ಒಂದು ಪರ್ಲಾಂಗು ದೂರದಲ್ಲಿರುವ ಪ್ರಾಚೀನ ಎಡೆಯನ್ನು ಸ್ಥಳೀಯರು ಬೂದಿಗುಂಡಿ ಎಂದು ಕರೆಯುತ್ತಾರೆ. ಈ ದಿಬ್ಬವು ಆದಿ ಇತಿಹಾಸ ಕಾಲದ ಬಹುದೊಡ್ಡ ಕುರುಹನ್ನೇ ಹುದುಗಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯವನ್ನು ಉಂಟುಮಾಡಿದೆ. ಈ ಬೂದಿಗುಂಡಿಯು ಸ್ಥಳೀಯರಿಗೆ ಕೃಷಿಯ ಫಲವತ್ತಾದ ಗೊಬ್ಬರವಾಗಿ, ಅಲ್ಲಿ ಸಿಕ್ಕುವ ಸುಟ್ಟ ಇಟ್ಟಿಗೆಗಳು ಗ್ರಾಮದ ಜನರ ಮನೆಗಳ ಸಾಮಗ್ರಿಗಳಾಗಿ ಬಳಕೆಯಾದದ್ದು ವಿಪರ್ಯಾಸ.
ಈ ಬಗೆಯ ಅಗೆತಗಳಿಂದ ಪ್ರಕಟವಾದ ಅವಶೇಷಗಳಿಂದ ರಾಜಘಟ್ಟವು ಸಂಶೋಧಕರ ಗಮನಕ್ಕೆ ಬಂತು. ೧೯೭೫ರಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ವಿದ್ವಾಂಸರು ಈ ನೆಲೆಯಲ್ಲಿ ಅನ್ವೇಷಣೆ ನಡೆಸಿ ಬೌದ್ಧ ಕುರುಹುಗಳನ್ನು ಸಂಗ್ರಹಿಸಿ ಇದರ ಮಹತ್ವವನ್ನು ಅರಿತಿದ್ದರು. ಆದರೆ ಈ ನೆಲೆಯನ್ನು ವ್ಯವಸ್ಥಿತವಾಗಿ ಸಂಶೋಧನೆಗೆ ಒಳಪಡಿಸಿದ್ದುದು ೨೦೦೧ರಲ್ಲಿ. ಅದೂ ಉತ್ಖನನ ಯೋಗ್ಯ ನೆಲೆಯಾಗಿ, ಕರ್ನಾಟಕದ ಪ್ರಾಚೀನ ಚರಿತ್ರೆಗೆ ಹೊಸ ಬೆಳಕೊಂದನ್ನು ನೀಡಿದ ಹಿರಿಮೆ ರಾಜಘಟ್ಟದ್ದಾಯಿತು.
ರಾಜಘಟ್ಟದ ನೆಲೆಯು ಹೊಂದಿರುವ ಬೌದ್ಧ ಅವಶೇಷಗಳು ಒಂದೇ ಎರಡೇ. ಅದುವರೆಗೆ ದೊರೆಯದೇ ಇದ್ದ ಹೊಸ ಬಗೆಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಉತ್ಖನನವು ಹೊರಗೆಡಹಿತು. ಅವುಗಳಲ್ಲಿ ಕರ್ನಾಟಕದಲ್ಲೇ ಅಪರೂಪದ ವಿಸ್ತಾರವಾದ ಬೌದ್ಧ ಚೈತ್ಯಾಲಯ ದೊರೆತದ್ದು ಗಮನಾರ್ಹವಾದುದು. ಬ್ರಹ್ಮಗಿರಿ ಮತ್ತು ಬನವಾಸಿಗಳಲ್ಲಿ ಕಂಡುಬಂದ ಕಟ್ಟಡಗಳಿಗಿಂತ ವಿಭಿನ್ನವಾದ ಈ ಕಟ್ಟಡವು ನಾಡಿನ ಬೌದ್ಧ ಚರಿತ್ರೆಗೆ ಹೊಸತನ್ನು ಒದಗಿಸಿತು. ಅಲ್ಲದೆ ಕರ್ನಾಟಕದಲ್ಲಿ ಬೌದ್ಧ ಧರ್ಮವು ಕ್ರಿ.ಶ. ಎರಡನೇ ಶತಮಾನಕ್ಕೇ ಕೊನೆಗೊಂಡಿತೆಂಬ ಹಿಂದಿನ ಅಭಿಪ್ರಾಯವನ್ನು ತಳ್ಳಿಹಾಕಿ, ಈ ಧರ್ಮವು ಕ್ರಿ.ಶ. ಆರನೇ ಶತಮಾನದಲ್ಲೂ ಸುಪುಷ್ಟವಾಗಿ ಬೆಳೆದುಬಂದಿತ್ತೆಂಬುದನ್ನು ಸಾಬೀತುಪಡಿಸಿದ ಶ್ರೇಯ ರಾಜಘಟ್ಟದ್ದಾಯಿತು.
ಬೌದ್ಧ ಚೈತ್ಯಾಲಯ ಮತ್ತು ವಿಹಾರ: ಉತ್ಖನನದಲ್ಲಿ ಬೆಳಕಿಗೆ ಬಂದ ಬೌದ್ಧರ ಧಾರ್ಮಿಕ ಕಟ್ಟಡಗಳಲ್ಲಿ ಚೈತ್ಯಾಲಯ ಮತ್ತು ವಿಹಾರಗಳು ಪ್ರಮುಖವಾಗಿವೆ. ಚೈತ್ಯಾಲಯವು ವಿಶಾಲವಾಗಿದ್ದು ಅರ್ಧ ವೃತ್ತಾಕಾರವಾಗಿದ್ದು, ಹೊರಗೋಡೆಯಲ್ಲಿ ಕೋಷ್ಟ ಮತ್ತು ಜಾಲಂದ್ರಗಳನ್ನು ಹೊಂದಿದೆ.
ಇದರ ಮುಖ್ಯ ದ್ವಾರದಲ್ಲಿ ಚಂದ್ರಶಿಲೆ ಮತ್ತು ಕಟಾಂಜನಗಳಿವೆ. ವಿಶಾಲವಾದ ಈ ಚೈತ್ಯಾಲಯವು ೧೧.೫ಮೀ. ಉದ್ದ ಮತ್ತು ೯.೫ಮೀ ಅಗಲವಾಗಿದ್ದು, ಕಟ್ಟಡದ ಗೋಡೆಗಳನ್ನು ಗಾರೆಯಿಂದ ಅಲಂಕರಿಸಿದ್ದಾರೆ. ಈ ಚೈತ್ಯಾಲಯವು ಕಾಲನ ದವಡೆಗೆ ಸಿಲುಕಿ ಶಿಥಿಲಗೊಂಡು ದೊಡ್ಡ ದಿಬ್ಬವಾಗಿ ಮಾರ್ಪಾಟು ಹೊಂದಿತ್ತು. ಆದರೆ ಸ್ಥಳೀಯರು ಈ ದಿಬ್ಬದಲ್ಲಿದ್ದ ಇಟ್ಟಿಗೆಗಳನ್ನು ಮನೆಯ ನಿರ್ಮಾಣಕ್ಕೆ ಬಳಸಿದ ಕಾರಣ ದಿಬ್ಬವು ನೆಲಸಮಗೊಂಡು ರಾಗಿ, ಹುರುಳಿ ಮೊದಲಾದ ಬೆಳೆಗಳನ್ನು ಬೆಳೆಯುವ ಹೊಲವಾಗಿದೆ. ಹಾಗಿದ್ದೂ ಚೈತ್ಯಾಲಯ ಕಟ್ಟಡದ ಪೂರ್ಣ ಸ್ವರೂಪವನ್ನು ಉತ್ಖನನದ ಮೂಲಕ ಬೆಳಕಿಗೆ ತರುವಲ್ಲಿ ಸಂಶೋಧನ ತಂಡವು ಯಶಸ್ವಿಯಾದುದನ್ನು ಶ್ಲಾಘಿಸಲೇಬೇಕು. ಇಲ್ಲಿ ದೊರೆತ ಇಟ್ಟಿಗೆಗಳ ಗಾತ್ರ ಮತ್ತು ಆಕಾರಗಳನ್ನು ಗಮನಿಸಿ, ಅವು ಗಂಗರ ಕಾಲದ ಇಟ್ಟಿಗೆಗಳನ್ನು ಹೋಲುತ್ತಿದ್ದುದನ್ನು ಪರಿಶೀಲಿಸಿ ಸಂಶೋಧಕರು ಕ್ರಿ.ಶ. ಐದರಿಂದ ಆರನೆಯ ಶತಮಾನಕ್ಕೆ ಸೇರಿದವೆಂದು ದೃಢಪಡಿಸಿದ್ದಾರೆ.
ಮಣ್ಣಿನ ಬಿಲ್ಲೆ ಮತ್ತು ಹರಕೆಯ ಸ್ತೂಪಗಳು: ರಾಜಘಟ್ಟದ ಈ ಉತ್ಖನನದಲ್ಲಿ ಬೌದ್ಧ ಧರ್ಮದ ಅನೇಕ ಮಣ್ಣಿನ ಮತ್ತು ಬ್ರಾಹ್ಮಿ ಲಿಪಿಯುಳ್ಳ ಬಿಲ್ಲೆಗಳು ದೊರೆತಿವೆ. ಅದರಲ್ಲೂ ವಿಶೇಷವಾಗಿ ಹರಕೆಯ ಚಿಕ್ಕ ಚಿಕ್ಕ ಸ್ತೂಪಗಳು ಕಂಡುಬಂದಿರುವುದು ಗಮನಿಸಬೇಕಾದದ್ದೇ. ಈ ಹರಕೆಯ ಸ್ತೂಪಗಳು ೪೦ ರಿಂದ ೫೦೦ ಗ್ರಾಂ ತೂಕವುಳ್ಳವಾಗಿವೆ. ಏಳು ವಿಧದ ಈ ಹರಕೆಯ ಸ್ತೂಪಗಳು ಕೆಳಭಾಗದಲ್ಲಿ ಚಚ್ಚೌಕ ಪೀಠವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಕೆಲವು ದುಂಡಾಗಿಯೂ, ಮತ್ತೆ ಕೆಲವು ಅಷ್ಟಮುಖದಲ್ಲಿಯೂ ಇವೆ. ಕೆಲವು ಮೇಧಿಂiiನ್ನು ಹೊಂದಿದ್ದು, ಅವುಗಳ ಅಂಡಭಾಗವು ಗುಮ್ಮಟಾಕಾರವಾಗಿವೆ. ಹರಕೆಯ ಸ್ತೂಪಗಳೆಂದು ಗುರುತಿಸಲಾದ ಇವು ಅಂದಿನ ಬೌದ್ಧ ಧರ್ಮದ ವಿಭಿನ್ನ ಪರಂಪರೆಯನ್ನು ಸಾರುತ್ತವೆ. ಇವುಗಳಲ್ಲದೆ ಈ ನೆಲೆಯ ಉತ್ಖನನದಲ್ಲಿ ಕಂಡುಬಂದ ಬೌದ್ಧ ಅವಶೇಷಗಳು ನೂರಾರು. ಅವುಗಳಲ್ಲಿ ಧರ್ಮಚಕ್ರವನ್ನು ಕಡೆದಿರುವ ಬಂಡೆಗಲ್ಲು, ಚೈತ್ಯಾಲಯದ ಬಳಿ ಕಂಡುಬಂದ ಎರಡು ಅಸ್ತಿ ಮಡಕೆಗಳು, ಬ್ರಾಹ್ಮಿ, ಸಂಸ್ಕೃತ ಲಕ್ಷಣಗಳುಳ್ಳ ಧ್ಯಾನಶ್ಲೋಕವುಳ ಬಿಲ್ಲೆಗಳು ಮುಖ್ಯವಾಗಿವೆ. ಈ ನೆಲೆಯಲ್ಲಿ ಕಂಡುಬಂದ ಎಲ್ಲ ಬಗೆಯ ಅವಶೇಷಗಳಿಂದ, ಇಲ್ಲಿನ ಬೆಳೆದುಬಂದ ಬೌದ್ಧ ಪಂಥವು ‘ಮಹಾಯಾನಕ್ಕೆ ಸಂಬಂಧಿಸಿದ್ದೆಂದು ಸಾಬೀತಾದದ್ದು ಗಮನಾರ್ಹ.
ಇವೆಲ್ಲವನ್ನು ಓದಿ, ತಿಳಿದು ರಾಜಘಟ್ಟದ ಉತ್ಖನನ ಸ್ಥಳವನ್ನು ನೋಡುವ ಹಂಬಲ ತಮಗೆ ಬರುವುದೇನೋ ಸಹಜ. ಆದರೆ ಉತ್ಖನನದ ಮೂಲಕ ಬೆಳಕಿಗೆ ಬಂದ ರಾಜಘಟ್ಟದ ಚೈತ್ಯಾಲಯ ಮತ್ತು ವಿಹಾರ ಕಟ್ಟಡಗಳನ್ನು ನೋಡಲೆಂದು ಹೋದರೆ ನಿರಾಸೆಯೇ ಗತಿ. ಕಾರಣವೆಂದರೆ ಉತ್ಖನನಗೊಂಡ ಭೂಭಾಗವು ಎಂದಿನಂತೆಯೇ ಉಳುವ ಹೊಲವಾಗಿ ಮಾತ್ರ ಇಂದು ಗೋಚರಿಸುತ್ತದೆ. ಉತ್ಖನನದ ಮಾಡಿದ ಸಂಶೋಧನ ತಂಡವು ನೆಲೆಯ ಎಲ್ಲ ಬಗೆಯ ಚಾರಿತ್ರಿಕ ಸಂಗತಿಗಳನ್ನು ವಿವಿಧ ಉಪಕರಣ ಮತ್ತು ದೃಷ್ಟಿಕೋನಗಳ ಮೂಲಕ ದಾಖಲಿಸಿಕೊಂಡ ಬಳಿಕ, ಪುನಃ ಅದನ್ನು ವ್ಯವಸ್ಥಿತವಾಗಿ ಹಿಂದೆ ಇದ್ದಂತೆಯೇ ಮುಚ್ಚಿಹಾಕಿದೆ. ಇದರಿಂದ ಪ್ರಾಚೀನ ಪರಂಪರೆಯ ಕುರುಹುಗಳನ್ನು ಹಾಗೆಯೇ ಉಳಿಸಿ ಕಾಪಿಡುವ ಮಹತ್ವದ ಉದ್ದೇಶವೂ ಆಗಿದೆ.
ಒಟ್ಟಿನಲ್ಲಿ ಕರ್ನಾಟಕದ ಮಟ್ಟಿಗೆ ಉತ್ಖನನದ ಮೂಲಕ ಹೊಸ ಬಗೆಯ ಸಂಚಲನವನ್ನು ಉಂಟುಮಾಡಿದ ಮತ್ತು ಬೌದ್ಧ ಧರ್ಮದ ಅಸ್ತಿತ್ವವನ್ನು ಕ್ರಿ.ಶ. ಆರನೆಯ ಶತಮಾನದವರೆಗೆ ಸಾರಿದ ಹಾಗೂ ಬೌದ್ಧ ಧರ್ಮವು ದಕ್ಷಿಣ ಕರ್ನಾಟಕಕ್ಕೂ ವಿಸ್ತರಿಸಿತ್ತೆಂಬ ನಿಜ ಸಂಗತಿಯನ್ನು ಜಗತ್ತಿಗೆ ಪ್ರಕಟಪಡಿಸಿದ ಕೀರ್ತಿ ರಾಜಘಟ್ಟ ಎಂಬ ಐತಿಹಾಸಿಕ ಗ್ರಾಮದ್ದಾಗಿದೆ.