ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

Share

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನಧರ್ಮವು ಭಾರತದ ಪ್ರಾಚೀನ ಧರ್ಮಗಳಲ್ಲೊಂದು. ಇದು ಕರ್ನಾಟಕಕ್ಕೆ ಸಂಪ್ರತಿ ಚಂದ್ರಗುಪ್ತ ಹಾಗೂ ಭದ್ರಬಾಹುವಿನಿಂದ ಬಂತೆಂಬುದು ವಿದ್ವಾಂಸರ ಅಭಿಮತ. ಅಂದಿನಿಂದ ಜೈನ ಧರ್ಮವು ವಿಕಸನಗೊಳ್ಳುತ್ತಾ ರಾಷ್ಟ್ರಕೂಟ, ಗಂಗ, ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಮನೆತನಗಳು ಹಾಗೂ ಆಳರಸರ ಅವಧಿಯಲ್ಲಿ ಕರ್ನಾಟಕದಾದ್ಯಂತ ಉಜ್ವಲವಾಗಿ ಬೆಳೆದುದನ್ನು ಕಾಣುತ್ತೇವೆ. ಈ ನಡುವೆ ಸಾಕಷ್ಟು ಏರಿಳಿತಗಳನ್ನೂ ಈ ಧರ್ಮವು ಕಂಡಿದೆ. ಆದರೆ ಕುಮ್ಮಟದ ಅರಸರು, ವಿಜಯನಗರ ಹಾಗೂ ನಂತರದ ಅವಧಿಯಲ್ಲಿ ಈ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯದೆ ಅವನತಿಯತ್ತ ಸಾಗಿರುವುದು ಶಾಸನದೇಗುಲಗಳಿಂದ ಸ್ಪಷ್ಟವಾಗುತ್ತದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಮಟ್ಟಿಗೆ ಹೇಳುವುದಾದರೆ ಕ್ರಿ.ಶ. ೯ ರಿಂದ ೧೨ನೆಯ ಶತಮಾನಗಳಲ್ಲಿ ಈ ಪರಿಸರವು ಜೈನಧರ್ಮದ ನೆಲೆವೀಡಾಗಿದ್ದಿತು. ಶಾತವಾಹನ ಕಾಲಕ್ಕೆ ಕೂಪಣ ಎಂಬ ಹೆಸರಿನ ಉಲ್ಲೇಖ ಸನ್ನತಿಯ ಶಾಸನಗಳಲ್ಲಿ ದೊರೆಯುತ್ತದೆ. ಕೊಪ್ಪಳವು ಜೈನಧರ್ಮದ ಪವಿತ್ರ ನೆಲೆಯಾಗಿತ್ತು. ದಾನಚಿಂತಾಮಣಿ ಅತ್ತಿಮಬ್ಬೆಯ ವ್ಯಕ್ತಿತ್ವ ಕುರಿತು, “ಬಿಳಿಯರಳೆಯಂತೆ, ಗಂಗಾಜಳದಂತೆ, ನೆಗಳ್ದ ಕೊಪಣಾಚಲದಂತೆ” ಎಂಬುದಾಗಿ ಬಣ್ಣಿಸಲಾಗಿದೆ.


ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಹೇಳುವುದಾದರೆ ಇಲ್ಲಿನ ಅನೇಕ ಗ್ರಾಮಗಳು ಜೈನರ ಪ್ರಸಿದ್ಧ ಕೇಂದ್ರಗಳಾಗಿದ್ದವು. ಇದಕ್ಕೆ ಅಲ್ಲಿ ಕಂಡುಬರುವ ಶಾಸನ, ಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ನಿಸಿಧಿಕಲ್ಲುಗಳು, ಕೈಫಿಯತ್ತು ಹಾಗೂ ಹೊಸ ಕುಮಾರರಾಮನ ಸಾಂಗತ್ಯದಂತಹ ಸಾಹಿತ್ಯ ಕೃತಿಗಳ ಉಲ್ಲೇಖಗಳು ಪ್ರಮುಖ ಸಾಕ್ಷ್ಯಗಳಾಗಿವೆ. ಆದರೆ ಜೈನಧರ್ಮವು ಕಾಲಾನಂತರದಲ್ಲಿ ಸಾಮಾಜಿಕ ಅವಕೃಪೆ, ರಾಜಕೀಯ ಒತ್ತಡ, ಧಾರ್ಮಿಕ ಬಿಕ್ಕಟ್ಟು ಹಾಗೂ ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕ್ಷೀಣವಾದುದನ್ನು ಕಾಣಬಹುದು. ಹಾಗೆಯೇ ಆಯಾ ಕಾಲದ ಪ್ರಭಾವ ಮತ್ತು ಪರಿಣಾಮಗಳಿಂದ ಅನೇಕ ಜಿನಾಲಯಗಳು ದೇವಾಲಯ ಮತ್ತು ಮಠಗಳಾಗಿ ಪರಿವರ್ತನೆ ಹೊಂದಿವೆ. ಅಲ್ಲದೆ ಜೈನಧರ್ಮದ ಅಸ್ತಿತ್ವ ಮತ್ತು ಪ್ರಾಚೀನತೆಯನ್ನು ಸಾರುವ ಅನೇಕ ಕುರುಹುಗಳು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅನೇಕ ಗ್ರಾಮಗಳಲ್ಲಿವೆ. ಬಳ್ಳಾರಿ ಜಿಲ್ಲೆಯ ಸಿರಿಗೇರಿ, ಬಲಕುಂದಿ, ಕೊಳಗಲ್ಲು, ವಿಜಯನಗರ ಜಿಲ್ಲೆಯ ಹಂಪಿ, ಹೊಸಪೇಟೆ, ಕೋಗಳಿ, ಉತ್ತಂಗಿ, ಹೊಳಗುಂದಿ, ಹೂವಿನಹಡಗಲಿ, ಹಿರೇಹಡಗಲಿ, ಮಾನ್ಯರ ಮಸಲವಾಡ, ಕತ್ತೆಬೆನ್ನೂರು, ಇಟ್ಟಿಗಿ, ಬಾಗಳಿಗಳು; ಕೊಪ್ಪಳ ಜಿಲ್ಲೆಯ ಕೊಪ್ಪಳ, ಅಂಟರಠಾಣ, ಮುಧೋಳ, ಯಲಬುರ್ಗಾ, ಮಂಡಲಗಿರಿ, ರಾಜೂರ, ಹುಲಿಗಿ, ಕುಮ್ಮಟದುರ್ಗ, ಆನೆಗೊಂದಿ, ಮಾದಿನೂರು, ಹಿರೇಮನ್ನಾಪುರ, ಚಳಗೇರಾ, ತಾವರಗೆರೆ, ವೆಂಕಟಗಿರಿ, ಹಂಪಸದುರ್ಗ ಮೊದಲಾದವು ಜೈನರ ಮುಖ್ಯ ನೆಲೆಗಳಾಗಿವೆ.


ಇವುಗಳಲ್ಲಿ ಇಂದಿಗೂ ಜೈನಧರ್ಮದ ಅಸ್ತಿತ್ವವಿರುವ ಜಿನಾಲಯಗಳೆಂದರೆ ಕೊಪ್ಪಳದ ಪಾರ್ಶ್ವನಾಥ, ಹುಲಿಗಿಯ ಪಾರ್ಶ್ವನಾಥ ಮತ್ತು ಮಾದಿನೂರಿನ ಪದ್ಮಾವತಿಯೇ ಆಗಿವೆ.. ಆದರೆ ಇತರೆ ಗ್ರಾಮಗಳಲ್ಲಿರುವ ಜಿನಾಲಯ ಮತ್ತಿತರ ಜೈನ ಕುರುಹುಗಳು ಭಗ್ನಗೊಂಡು ಅವಶೇಷಗಳಾಗಿ, ಕೆಲವು ಜಿನಾಲಯಗಳು ದೇವಾಲಯ ಅಥವಾ ಮಠಗಳಾಗಿ ಇಂದು ಪರಿವರ್ತನೆ ಹೊಂದಿರುವುದು ಗಮನಾರ್ಹ.
ಅವುಗಳಲ್ಲಿ ಪ್ರಮುಖವಾಗಿ ಪರಿವರ್ತನೆಗೊಂಡ ಜಿನಾಲಯಗಳು ಇಂತಿವೆ: ಬಳ್ಳಾರಿ ಜಿಲ್ಲೆಯಲ್ಲಿ ಸಿರಿಗೇರಿಯ ವೀರಭದ್ರ, ಕುರುಗೋಡಿನ ಸಿದ್ದೇಶ್ವರ, ಕುಡುತಿನಿಯ ರಾಮಲಿಂಗೇಶ್ವರ ದೇವಾಲಯಗಳು, ವಿಜಯನಗರ ಜಿಲ್ಲೆಯಲ್ಲಿ ಹೊಳಗುಂದಿಯ ಸೋಮೇಶ್ವರ, ಹಿರೇಹಡಗಲಿಯ ಗಣೇಶ ದೇವಾಲಯಗಳು; ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳದ ವೆಂಕಟರಮಣ ಅಥವಾ ಚನ್ನಕೇಶವ, ಕಾಳಿಂಗಮರ್ದನ ಕೃಷ್ಣ, ಅಮೃತೇಶ್ವರ ಹಾಗೂ ಗವಿಮಠಗಳು ಮತ್ತು ಯಲಬುರ್ಗಾದ ಸಂಗಮೇಶ್ವರ ದೇವಾಲಯಗಳು ಮುಖ್ಯವಾಗಿವೆ. ಈ ದೇವಾಲಯಗಳು ಮೂಲತಃ ಜಿನಾಲಯಗಳಾಗಿದ್ದು, ವಿಜಯನಗರ ಹಾಗೂ ನಂತರ ಕಾಲದಲ್ಲಿ ದೇವಾಲಯ ಅಥವಾ ಮಠಗಳಾಗಿ ಪರಿವರ್ತನೆ ಹೊಂದಿರುವುದು ಅಲ್ಲಿನ ವಾಸ್ತು ಮತ್ತು ಮೂರ್ತಿಶಿಲ್ಪಗಳಿಂದ ಸ್ಪಷ್ಟವಾಗುತ್ತದೆ.

ಬಳ್ಳಾರಿ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು
೧. ಸಿರಿಗೇರಿಯ ವೀರಭದ್ರ ದೇವಾಲಯ: ಕ್ರಿ.ಶ. ೧೧-೧೨ನೆಯ ಶತಮಾನಕ್ಕೆ ಸೇರಿದ ಈ ದೇವಾಲಯವು ಕಲ್ಯಾಣ ಚಾಲುಕ್ಯ ಶೈಲಿಯನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ವಿಜಯನಗರೋತ್ತರ ಅವಧಿಯಲ್ಲಿ ವೀರಭದ್ರನ ಸುಂದರವಾದ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಾರೆ. ಆದರೆ ಈ ದೇವಾಲಯದ ಅಂತರಾಳದ ಬಾಗಿಲುವಾಡದ ಲಲಾಟದಲ್ಲಿ ಜಿನಬಿಂಬವಿದೆ. ಅಲ್ಲದೆ ದೇವಾಲಯದ ಗರ್ಭಗೃಹದ ಹೊರಬದಿ ಗೋಡೆಯ ಮೂರು ಬದಿಗಳಲ್ಲಿ ತೀರ್ಥಂಕರರ ಉಬ್ಬುಶಿಲ್ಪಗಳಿವೆ. ಇವುಗಳಿಂದ ಮೂಲತಃ ಜಿನಾಲಯವಾಗಿದ್ದ ಇದು ವಿಜಯನಗರೋತ್ತರ ಕಾಲದಲ್ಲಿ ವೀರಭದ್ರ ದೇವಾಲಯವಾಗಿ ಮಾರ್ಪಾಟಾಗಿರುವುದನ್ನು ಕಾಣಬಹುದು. ಇದೇ ಗ್ರಾಮದ ಇನ್ನೊಂದು ವೀರಭದ್ರ ದೇವಾಲಯವೂ ಇದರಂತೆಯೇ ಪರಿವರ್ತನೆ ಹೊಂದಿದೆ. ಇದು ಮೂಲತಃ ವೈಷ್ಣವ ದೇವಾಲಯವಾಗಿತ್ತೆಂಬುದು ದೇವಾಲಯದ ಬಾಗಿಲುವಾಡದಲ್ಲಿರುವ ವೈಷ್ಣವ ದ್ವಾರಪಾಲಕರು, ಹೊರಬದಿಯ ವಿಷ್ಣು ಶಿಲ್ಪಗಳಿಂದ ಸ್ಪಷ್ಟವಾಗುತ್ತದೆ. ಹಾಗೆಯೇ ಇಲ್ಲಿನ ದುರ್ಗಮ್ಮ ದೇವಾಲಯದ ಗರ್ಭಗೃಹದಲ್ಲಿರುವ ದುರ್ಗಮ್ಮನ ಮೂರ್ತಿಶಿಲ್ಪವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದು ತೀರ್ಥಂಕರನ ಶಿರಭಾಗವಾಗಿರುವುದನ್ನು ಕಾಣಬಹುದು ಇವುಗಳಿಂದ ಈ ಗ್ರ್ರಾಮದಲ್ಲಿ ಜೈನ ಮತ್ತು ವೈಷ್ಣವರ ಪ್ರಭಾವ ಕಡಿಮೆಯಾಗಿ ಅವುಗಳ ಜಾಗದಲ್ಲಿ ವೀರಶೈವ ಧರ್ಮೀಯರ ಪ್ರಾಬಲ್ಯ ಹೆಚ್ಚಾಗಿದ್ದುದನ್ನು ಗುರುತಿಸಬಹುದಾಗಿದೆ.
೨. ಕುರುಗೋಡಿನ ಸಿದ್ಧೇಶ್ವರ ದೇವಾಲಯ: ಕುರುಗೋಡು ಮಾನವನ ಆದಿಮ ಸ್ಥಳ. ಶಿಲಾಯುಗ ಕಲದಿಂದಲೂ ಮಾನವ ಬಾಳಿಬದುಕಿದ ಕುರುಹುಗಳು ಇಲ್ಲಿ ಇಂದಿಗೂ ಉಳಿದುಬಂದಿವೆ. ಅದರಲ್ಲೂ ಮಧ್ಯಕಾಲೀನ ಅವಧಿಯಲ್ಲಿ ಪ್ರಮುಖ ಧಾರ್ಮಿಕ, ಆಡಳಿತ ಹಾಗೂ ವ್ಯಾಪಾರ ಕೇಂದ್ರವಾಗಿತ್ತು ಎಂಬುದನ್ನು ಶಿಲಾಶಾಸನಗಳು ಸಾರುತ್ತವೆ. ಇಲ್ಲಿ ಅನೇಕ ಪ್ರಾಚೀನ ದೇವಾಲಯಗಳಿದ್ದು, ಅವುಗಳಲ್ಲಿ ಸಿದ್ಧೇಶ್ವರ ದೇವಾಲಯವೂ ಒಂದು. ಕ್ರಿ.ಶ. ೧೧-೧೨ನೆಯ ಶತಮಾನಕ್ಕೆ ಸೇರಿದ ಈ ದೇವಾಲಯವು ಕಲ್ಯಾಣ ಚಾಲುಕ್ಯ ಶೈಲಿಯನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಜಿನಪೀಠವಾದ ಸಿಂಹಪೀಠದ ಮೇಲೆ ಮೂರು ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಹಾಗೆಯೇ ಗರ್ಭಗೃಹದ ಬಾಗಿಲುವಾಡದ ಲಲಾಟದಲ್ಲಿ ಶಿವಲಿಂಗವಿದೆ. ಇದು ಜಿನಬಿಂಬದ ರೂಪಾಂತರವಾಗಿದೆ. ಇವುಗಳಿಂದ ಈ ದೇವಾಲಯವು ಹಿಂದೆ ಜಿನಾಲಯವಾಗಿದ್ದುದು ಸ್ಪಷ್ಟವಾಗುತ್ತದೆ. ಅಲ್ಲದೆ ಈ ದೇವಾಲಯದ ಕ್ರಿ.ಶ. ೧೫೪೫ರ ಶಾಸನದಲ್ಲಿ ರಾಮರಾಜಯ್ಯ ಎಂಬುವನು ತನ್ನ ತಂದೆ ಮಲ್ಲರಾಜ ಒಡೆಯರಿಗೆ ಪುಣ್ಯವಾಗಲೆಂದು ಈ ಜಿನಾಲಯಕ್ಕೆ ಭೂಮಿಯನ್ನು ದಾನ ನೀಡಿದ ವಿವರವಿದೆ. ಹಾಗೆಯೇ ಕ್ರಿ.ಶ.೧೫೪೬ರ ಶಾಸನದಲ್ಲಿ ಈ ಜಿನಾಲಯವನ್ನು ಸೂರಿಯಪ್ಪ ಸೆಟ್ಟಿಯರ ಮಗನಾದ ಗೋಮಿಸೆಟ್ಟಿಯು ಜೀರ್ಣೋದ್ಧಾರ ಮಾಡಿಸಿದನೆಂದಿದೆ.೧ ಇದರಿಂದ ಜಿನಾಲಯವು ೧೬ನೆಯ ಶತಮಾನದವರೆಗೆ ಜೈನರ ಧಾರ್ಮಿಕ ಎಡೆಯಾಗಿದ್ದ ಜಿನಾಲಯವು ನಂತರ ಕಾಲದಲ್ಲಿ ಶಿವಲಿಂಗವನ್ನು ಸ್ಥಾಪಿಸುವ ಮೂಲಕ ಶೈವ ದೇವಾಲಯವಾಗಿ ಪರಿವರ್ತನೆಗೊಂಡಿರುವುದು ದೃಢವಾಗುತ್ತದೆ.
೩. ಕುಡುತಿನಿಯ ರಾಮಲಿಂಗೇಶ್ವರ ದೇವಾಲಯ(ಮಠ): ರಾಷ್ಟ್ರಕೂಟ ಶೈಲಿಯಲ್ಲಿರುವ ಈ ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳನ್ನು ಹೊಂದಿದ್ದು, ಉಳಿದ ಭಾಗಗಳು ಭಗ್ನವಾಗಿವೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿರುವರು. ಆದರೆ ದೇವಾಲಯದ ಗೋಡೆಯ ಮೇಲೆ ಸಮಭಂಗಿಯಲ್ಲಿ ನಿಂತಿರುವ ತೀರ್ಥಂಕರರ ಉಬ್ಬುಶಿಲ್ಪಗಳಿವೆ. ಹಾಗೆಯೇ ಹೊರಬದಿಯಲ್ಲಿ ಯಕ್ಷಿ, ಸಿಂಹಪೀಠ, ತೀರ್ಥಂಕರರ ಶಿಲ್ಪಗಳಿವೆ. ಈ ತೀರ್ಥಂಕರ ಶಿಲ್ಪಗಳು ಇಂದು ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದಲ್ಲಿವೆ. ಇವೆಲ್ಲ ಕುರುಹುಗಳಿಂದ ರಾಮಲಿಂಗೇಶ್ವರ ದೇವಾಲಯ ಅಥವಾ ಮಠವು ಹಿಂದೆ ಜಿನಾಲಯವಾಗಿದ್ದು, ವಿಜಯನಗರೋತ್ತರ ಅವಧಿಯಲ್ಲಿ ಶೈವ ದೇವಾಲಯವಾಗಿದೆ.


ವಿಜಯನಗರ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು
೧. ಹೊಳಗುಂದಿಯ ಸೋಮೇಶ್ವರ ದೇವಾಲಯ: ಕಲ್ಯಾಣ ಚಾಲುಕ್ಯ ಶೈಲಿಯ ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಶಿವಲಿಂಗ ಹಾಗೂ ಅಂತರಾಳದಲ್ಲಿ ನಂದಿ ಶಿಲ್ಪಗಳನ್ನು ಪ್ರತಿಷ್ಟಾಪಿಸಲಾಗಿದೆ. ಆದರೆ ಸಭಾಮಂಟಪದ ಲಲಾಟದಲ್ಲಿ ಜೈನ ಕುರುಹಾದ ಜಿನಬಿಂಬವಿದೆ. ಅಲ್ಲದೆ ಕ್ರಿ.ಶ. ೧೧೬೯ಕ್ಕೆ ಸೇರಿದ ೯೮ ಸಾಲುಗಳುಳ್ಳ ಜೈನ ಶಿಲಾಶಾಸನವೂ ಈ ದೇವಾಲಯದಲ್ಲಿದೆ. ಈ ಶಾಸನದಲ್ಲಿ ಮಲ್ಲಿನಾಥ ಬಸದಿಯ ಉಲ್ಲೇಖವಿದ್ದು, ಹೊಳಗುಂದೆಯಲ್ಲಿ ಆಳುತ್ತಿದ್ದ ಮಲ್ಲಿನಾಥ ಎಂಬುವವನು ಮಲ್ಲಿನಾಥ ಬಸದಿಯನ್ನು ನಿರ್ಮಿಸಿ ನಾಗಚಂದ್ರ ಭಟ್ಟಾರಕನ ಸಮ್ಮುಖದಲ್ಲಿ ಜಿನಾಲಯದ ಸೇವೆಗಳಿಗೆ ಭೂಮಿಯನ್ನು ದಾನ ನೀಡಿದುದಾಗಿಯೂ ಶಾಸನದಲ್ಲಿ ಹೇಳಿದೆ.೨ ಇವುಗಳಿಂದ ಸೋಮೇಶ್ವರ ದೇವಾಲಯವು ಮೂಲತಃ ಜಿನಾಲಯವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ನಂತರ ಕಾಲದಲ್ಲಿ ಇದು ಶೈವ ದೇವಾಲಯವಾಗಿ ಪರಿವರ್ತನೆಗೊಂಡಿದೆ.
೫. ಹಿರೇಹಡಗಲಿಯ ಗಣೇಶ ದೇವಾಲಯ: ಕ್ರಿ.ಶ. ೧೧-೧೨ನೆಯ ಶತಮಾನಕ್ಕೆ ಸೇರಿದ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಈ ದೇವಾಲಯವು ಮೂಲತಃ ಜಿನಾಲಯವಾಗಿದ್ದಿತು. ಇದಕ್ಕೆ ದೇಗುಲದ ಬಾಗಿಲುವಾಡಗಳಲ್ಲಿರುವ ಜಿನಬಿಂಬಗಳು ಪ್ರಮುಖ ಸಾಕ್ಷ್ಯಗಳಾಗಿವೆ.

ಮುಂದುವರೆಯುವುದು..

 

Girl in a jacket
error: Content is protected !!