ಜೆಡಿಎಸ್: ಸೋತ ಪ್ರಯೋಗ

Share

ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷ ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿರುವ ಮುಸ್ಲಿಂ ಸಮುದಾಯ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ನಿಂತೀತೆಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಲೆಕ್ಕಾಚಾರ ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗರನ್ನೂ, ಕಮ್ಯೂನಿಸ್ಟರನ್ನೂ ಅಪ್ರಸ್ತುತರನ್ನಾಗಿಸಿರುವ ಮಮತಾ ಬ್ಯಾನರ್ಜಿ, ಬಂಡೆಗಲ್ಲಿನಂತೆ ನಿಶ್ಚಲರಾಗಿದ್ದಾರೆ. ಇಲ್ಲಿ ಆ ಪ್ರಯೋಗ ಅಷ್ಟೆಲ್ಲ ಸುಲಭದ ಕಾರ್ಯವಲ್ಲ.

ಜೆಡಿಎಸ್: ಸೋತ ಪ್ರಯೋಗ

ಕಲಿಯುವ ಮನಸ್ಸುಳ್ಳವರಿಗೆ ಕಲಿಯಬಹುದಾದ ಪಾಠ, ಸಿಂದಗಿ ಮತ್ತು ಹಾನಗಲ್ ಉಪಚುನಾವಣಾ ಫಲಿತಾಂಶದಲ್ಲಿದೆ. ಈ ಎರಡು ಕ್ಷೇತ್ರದ ಜಯವಾಗಲೀ ಅಪಜಯವಾಗಲೀ ರಾಜ್ಯ ರಾಜಕೀಯದಲ್ಲಿ ಬಹಳ ದೊಡ್ಡ ಪರಿಣಾಮ ಬೀರುವುದಾಗಿರಲಿಲ್ಲ, ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ಗೊತ್ತಿರುವ ಸತ್ಯ ಇದಾಗಿತ್ತು. ಹಾಗಂತ ಉದಾಸೀನ ಮಾಡುವಂತೆಯೂ ಇರಲಿಲ್ಲ. ಉದಾಸೀನ ಮಾಡಬಾರದೆಂಬ ಕಾರಣಕ್ಕೇ ಜಿದ್ದಾಜಿದ್ದಿನ ಕುಸ್ತಿಗೆ ಸಿಂದಗಿ, ಹಾನಗಲ್ ರಣಕಣವಾದವು.
ಹಾನಗಲ್‌ನಲ್ಲಿ ಆಡಳಿತ ಪಕ್ಷದ ಶಾಸಕ ಸಿ.ಎಂ.ಉದಾಸಿ, ಸಿಂದಗಿಯಲ್ಲಿ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ ಉಪ ಚುನಾವಣೆ ನಡೆಯುವುದಕ್ಕೆ ಕಾರಣ. ತನ್ನದಾಗಿರದಿದ್ದ ಕ್ಷೇತ್ರ ಸಿಂದಗಿಯನ್ನು ಆಡಳಿತಾರೂಢ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ತನ್ನ ಕೈಯಲ್ಲಿದ್ದ ಹಾನಗಲ್ ಕ್ಷೇತ್ರವನ್ನು ಹೀನಾಯ ಎನ್ನಬಹುದಾದ ರೀತಿಯಲ್ಲಿ ಅದು ಸೋತಿದೆ. ಕಾಂಗ್ರೆಸ್ ಹಾನಗಲ್‌ನಲ್ಲಿ ಗೆಲುವಿನ ನಗೆಯನ್ನು ಚೆಲ್ಲಿದೆ. ಕೈಲಿದ್ದ ಸಿಂದಗಿಯನ್ನೂ, ಆಸೆಗಣ್ಣಿನಿಂದ ಕಣಕ್ಕೆ ಇಳಿದಿದ್ದ ಹಾನಗಲ್ ಕ್ಷೇತ್ರವನ್ನೂ ಜಾತ್ಯತೀತ ಜನತಾ ದಳ ಸೋತಿದೆ. ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ಹೋಗಿರುವ ಆ ಪಕ್ಷವನ್ನು ಹಾನಗಲ್ ಮತದಾರರು ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದಾರೆ.


ಹಾನಗಲ್ ಬಿಜೆಪಿ ಪಾಲಿಗೆ ಹೇಗೆ ಹೀನಾಯ ಸೋಲಿಗೆ ಕ್ಷೇತ್ರವಾಯಿತು ಎನ್ನುವುದನ್ನು ಮೊದಲಿಗೆ ನೋಡಬೇಕು. ಅಲ್ಲಿ ಶಾಸಕರಾಗಿದ್ದ ಸಿ.ಎಂ. ಉದಾಸಿ, ಎಂಭತ್ತರ ದಶಕದಿಂದಲೂ ಪ್ರಭಾವಿ ರಾಜಕಾರಣಿ. ಸೋಲು ಗೆಲುವುಗಳನ್ನು ಕಾಲಕಾಲಕ್ಕೆ ಕಂಡಿದ್ದರೂ ಕ್ಷೇತ್ರದಲ್ಲಿ ಗೌರವಾನ್ವಿತ ಹೆಸರಾಗಿ ಬಾಳಿದವರು ಉದಾಸಿ. ಅವರ ಮಗ ಶಿವಕುಮಾರ ಉದಾಸಿ, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಅವಧಿಗೆ ಸದಸ್ಯ. ಕೇಂದ್ರ ಸಚಿವ ಸಂಪುಟವನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪುನರ್ರಚಿಸಿದಾಗ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಇವರ ಹೆಸರೂ ಇತ್ತು. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಯತ್ನ ನಡೆಸಿದ್ದ ಸಂದರ್ಭದಲ್ಲಿ ಆ ಸ್ಥಾನಕ್ಕೆ ಕೇಳಿಬಂದ ಕೆಲವು ಹೆಸರುಗಳಲ್ಲಿ ಶಿವಕುಮಾರ ಉದಾಸಿ ಅವರದೂ ಒಂದಾಗಿತ್ತು. ಹಾವೇರಿ ಕ್ಷೇತ್ರದ ಭಾಗವಾಗಿರುವ ಹಾನಗಲ್ ವಿಧಾನ ಸಭಾ ಕ್ಷೇತ್ರ, ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮತ್ತು ಆ ಕುಟುಂಬದ ರಾಜಕೀಯವನ್ನು ರಾಜ್ಯದಲ್ಲಿ ಸಕ್ರಿಯವಾಗಿ ಮುಂದುವರಿಸುವುದಕ್ಕೆ ಬಿಜೆಪಿ ಅಭ್ಯರ್ಥಿಯ ಗೆಲುವು ಅವರಿಗೆ ಬೇಕಾಗಿತ್ತು. ಆ ಯೋಚನೆಯ ಭಾಗವಾಗಿ ತಮ್ಮ ಪತ್ನಿಗೆ ಪಕ್ಷದ ಟಿಕೆಟ್ ಕೊಡಿಸುವುದಕ್ಕೆ ಹರಸಾಹಸವನ್ನೇನೋ ಅವರು ಮಾಡಿದರು. ಬಯಸಿದ ವರ ಸಿಗಲಿಲ್ಲ. ಕಣಕ್ಕೆ ಪಕ್ಷ ಇಳಿಸಿದ ಅಭ್ಯರ್ಥಿ ಶಿವಾಜಿ ಸಜ್ಜನರ್ ಗೆಲುವನ್ನು ತರಲಿಲ್ಲ.


ಇದು ಸೋಲಿನ ಒಂದು ಪಾರ್ಶ್ವದ ನೋಟವಾಯಿತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬಹಳ ಅಂತರದಿಂದೇನೂ ಗೆಲ್ಲಲಿಲ್ಲ. ಅವರ ಮತ್ತು ಶಿವಾಜಿ ಸಜ್ಜನರ್ ನಡುವಣ ಗೆಲುವಿನ ಅಂತರ ಕೇವಲ ೭೪೨೬ ಮತಗಳು ಮಾತ್ರ. ಸಾಮಾನ್ಯವಾಗಿ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವಿನ ಅಂತರ ವಿಶೇಷ ಪ್ರಕರಣ ಹೊರತುಪಡಿಸಿದರೆ ಈ ಸಂಖ್ಯೆಯ ಆಜೂಬಾಜಿನಲ್ಲೇ ಇರುತ್ತದೆ. ಆ ದೃಷ್ಟಿಯಿಂದ ನೋಡಿದರೆ ಗೆದ್ದ ಪಕ್ಷಕ್ಕೆ ಭಾರೀ ಜಯವಲ್ಲ, ಸೋತ ಪಕ್ಷಕ್ಕೆ ಭಾರೀ ಸೋಲಲ್ಲ. ಆದರೂ ಆಡಳಿತ ಪಕ್ಷಕ್ಕೆ ಇದೊಂದು ಹೀನಾಯ ಹಿನ್ನಡೆ ಎನ್ನುವುದಕ್ಕೆ ಕಾರಣ ಹಾನಗಲ್ ಮತ ಕ್ಷೇತ್ರ ಇರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ. ಬೊಮ್ಮಾಯಿ ಅವರ ಮತ ಕ್ಷೇತ್ರ ಶಿಗ್ಗಾಂವಿ. ಹಾನಗಲ್ ಮತ್ತು ಶಿಗ್ಗಾಂವಿಯನ್ನು ಭೌಗೋಳಿಕವಾಗಿ ರಸ್ತೆಯೊಂದು ಗೆರೆಯಂತೆ ಕೊರೆಯುತ್ತದೆ.ಮಾತ್ರವಲ್ಲ, ಮುಖ್ಯಮಂತ್ರಿಯಾದ ನಂತರದಲ್ಲಿ ಮೊದಲಿಗೆ ಅವರು ಎದುರಿಸಿದ ಅಗ್ನಿ ಪರೀಕ್ಷೆ ಅವರ ತೌರು ಜಿಲ್ಲೆಯಲ್ಲಿ ನಡೆದ ಈ ಚುನಾವಣೆ.
ಸ್ವತಃ ಮುಖ್ಯಮಂತ್ರಿ ಸೇರಿದಂತೆ ಅವರ ಸಂಪುಟದ ಡಜನ್‌ಗೂ ಹೆಚ್ಚು ಸಚಿವರು ವಾರಗಟ್ಟಳೆ ಹಾನಗಲ್ ಮತ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಹಗಲೂ ರಾತ್ರಿ ಪ್ರಚಾರ ನಡೆಸಿದರು. ಸಿಂದಗಿ ಕ್ಷೇತ್ರದಲ್ಲೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಾರಥ್ಯದಲ್ಲಿ ಒಂದು ಡಜನ್ ಸಚಿವರು ಪ್ರಚಾರ ಸತ್ರವನ್ನೇ ನಡೆಸಿದರು. ಒಂದೊಂದೂ ಬೂತ್‌ಗೆ ಮೂವತ್ತರಂತೆ ಕಾರ್ಯಕರ್ತರನ್ನು ಬಿಟ್ಟು ತಳಮಟ್ಟದಲ್ಲೇ ಪಕ್ಷದ ಅಭ್ಯರ್ಥಿಯ ಗೆಲುವನ್ನು ಖಚಿತ ಪಡಿಸಿಕೊಳ್ಳುವ ಬಿಜೆಪಿ ನಾಯಕತ್ವ ರೂಪಿತ ಕಾರ್ಯತಂತ್ರ ಸಿಂದಗಿಯಲ್ಲಿ ಕೈ ಹಿಡಿಯಿತು; ಹಾನಗಲ್‌ನಲ್ಲಿ ಕೈ ಕೊಟ್ಟಿತು. ಇಷ್ಟೆಲ್ಲ ಮಾಡಿದರೂ ಹೇಗೆ ಸೋತಿದ್ದು…? ಯಡವಟ್ಟಾಯಿತೆಲ್ಲಿ…? ಸೋಲಿನಲ್ಲಿ ಯಾರ್ಯಾರ ಪಾತ್ರ ಎಷ್ಟೆಷ್ಟು ಎನ್ನುವುದನ್ನು ತಿಳಿಯುವುದಕ್ಕೆ ಸತ್ಯಶೋಧಕ ಸಮಿತಿ ರಚನೆಯಾಗುತ್ತದೆ. ಕಾಂಗ್ರೆಸ್‌ನಲ್ಲೂ ಇಂಥ ಸಮಿತಿ ಸಿಂದಗಿ ಸೋಲಿನ ಸಂಬಂಧದಲ್ಲಿ ರಚನೆಯಾಗಲಿದೆ. ಏನೇ ಮಾಡಿದರೂ, ಎಷ್ಟೇ ತಿಪ್ಪರಲಾಗ ಹೊಡೆದರೂ ಸೋಲು ಸೋಲೇ. ಇಂಥ ಸಮಿತಿಗಳ ಫಲಶ್ರುತಿ ತೌಡನ್ನು ಕುಟ್ಟಿದಂತೆ.


ಹಾನಗಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೋರಿಕೆಗಾದರೂ ಒಟ್ಟಿಗೆ ಕೆಲಸ ಮಾಡಿದ್ದು ಗೆಲುವಿನ ಕಾರಣವೆಂದು ಆ ಪಕ್ಷ ಹೇಳಿಕೊಳ್ಳುತ್ತಿದೆ. ವಾಸ್ತವ ಅದಲ್ಲ. ಗೆಲುವಿನ ರೂವಾರಿ ಸ್ವತಃ ಶ್ರೀನಿವಾಸ ಮಾನೆ. ೨೦೧೮ರ ಚುನಾವಣೆಯಲ್ಲಿ ಉದಾಸಿ ವಿರುದ್ಧ ಅವರು ಸೋತಿದ್ದರು. ಅವರ ಆಗಿನ ಸೋಲಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಇನ್ನು ಕೆಲವು ಕಾಂಗ್ರೆಸ್ಸಿಗರ ಪಾತ್ರವೂ ಇತ್ತೆಂಬ ಆರೋಪವಿದೆ. ಮಾನೆ, ಸೋಲಿನ ದುಃಖದಲ್ಲಿ ಕೂರಗುತ್ತ ಕೂರಲಿಲ್ಲ. ಉಳಿದವರಿಗೆ ಹೇಗೋ ಏನೋ ಮಾನೆ ಪಾಲಿಗೆ ಕೊರೋನಾ ವರರೂಪದಲ್ಲಿ ವಕ್ಕರಿಸಿತು. ನಾನು ಸೋತಿದ್ದೇನೆ, ಗೆದ್ದವರು ನೋಡಿಕೊಳ್ಳಲಿ ಎಂದು ಕೈಚೆಲ್ಲಿ ಮೂಲೆ ಹಿಡಿಯಲಿಲ್ಲ. ಬದಲಿಗೆ ಹಾನಗಲ್ ಕ್ಷೇತ್ರ ವ್ಯಾಪ್ತಿಯ ಹಳ್ಳಿಹಳ್ಳಿಗಳಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟವನ್ನೂ ಜನ ಜಾಗೃತಿ ಅಭಿಯಾನವನ್ನೂ, ವ್ಯಾಕ್ಸಿನೇಷನ್ ಆಂದೋಲನವನ್ನೂ ಕೈಗೆತ್ತಿಕೊಂಡರು. ಕಷ್ಟದಲ್ಲಿ ಇದ್ದವರಿಗೆ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ನೆರವಾದರು. ಆ ಸಮಯದಲ್ಲಿ ಉಪ ಚುನಾವಣೆ ಬರುತ್ತದೆಂಬುದರ ಸಣ್ಣ ಕಲ್ಪನೆಯೂ ಅವರಲ್ಲಿರಲಿಲ್ಲ. ಐದು ವರ್ಷದ ನಂತರ ಬರಬೇಕಿದ್ದ ಚುನಾವಣೆಗೆ ಅವರು ಪೂರ್ವ ತಯಾರಿ ನಡೆಸಿದ್ದು ಸುಳ್ಳಾಗಿರಲಿಲ್ಲ.
ಕೊರೋನಾ ತೀವ್ರ ಸ್ವರೂಪದಲ್ಲಿ ಅಟ್ಟಾಡಿಸುತ್ತಿದ್ದ ಸಮಯದಲ್ಲಿ ಶಾಸಕ ಉದಾಸಿ ಅಸ್ವಸ್ಥರಾಗಿ ಹಾಸಿಗೆ ಹಿಡಿದರು. ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಆ ಅವಧಿಯಲ್ಲಿ ಅಧಿಕೃತ ಶಾಸಕರಿಲ್ಲದ ಕೊರತೆಯನ್ನು ಮಾನೆ ತುಂಬಿದರು. ಅವರ ಸೇವಾವ್ರತ ಎಷ್ಟು ಒಳ್ಳೆಯ ಮರಿಣಾಮ ಬೀರಿತೆಂದರೆ “ಮನೆಮನೆಗೆ ಮಾನೆ” ಎಂಬ ಸ್ಲೋಗನ್ ಹುಟ್ಟಿಕೊಂಡಿತು. ಉದಾಸಿ ನಿಧನರಾದಾಗ ಉಪ ಚುನಾವಣೆ ನಡೆಯುವುದು ಪಕ್ಕಾ ಆಯಿತಲ್ಲ. ಜನಮೆಚ್ಚಿದ ಮಗನನ್ನೇ ಕಾಂಗ್ರೆಸ್ಸು ಶಾಸಕ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತು. ಅದು ಲಾಟರಿ ಹೊಡೆಯಿತು.


ಹಾನಗಲ್‌ನಲ್ಲಿ ಕಾಂಗ್ರೆಸ್ ಮಾಡಿದ ತಂತ್ರ ಸಿಂದಗಿಯಲ್ಲಿ ಗೆಲುವಿನ ಹಾದಿಯನ್ನು ತೋರಿಸಿತೇ ವಿನಾ ಗೆಲುವನ್ನು ತಂದುಕೊಡಲಿಲ್ಲ. ಜೆಡಿಎಸ್‌ನ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಮಗ ಅಶೋಕ ಮನಗೂಳಿ ಅವರನ್ನು ಪಕ್ಷಕ್ಕೆ ಎಳೆದುಕೊಂಡ ಅದು ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇರಲಿಲ್ಲ ಹಾಗಾಗಿ ಜೆಡಿಎಸ್ ಮುಖಂಡರೊಬ್ಬರನ್ನು ಹೈಜಾಕ್ ಮಾಡಿತೆಂಬ ಅಪಪ್ರಚಾರಕ್ಕೆ ತಾನೇ ಕಾರಣವಾಯಿತು. ಸಿದ್ದರಾಮಯ್ಯ ಒಪ್ಪಿಕೊಂಡಿರುವಂತೆ ಅಲ್ಲಿ ಮನಗೂಳಿ ಜೊತೆ ಕಾಂಗ್ರೆಸ್‌ಗೆ ಬಂದ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗಲೇ ಇಲ್ಲ. ಆದರೆ ೨೦೧೮ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗಿದ್ದ ಆ ಪಕ್ಷ ಈ ಸಲ ಎರಡನೇ ಸ್ಥಾನಕ್ಕೆ ಬಂತೆನ್ನುವುದು ಅದರ ಪಾಲಿಗೆ ಸಿಕ್ಕ ಸಮಾಧಾನಕರ ಬಹುಮಾನ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಮಾನ್ಯವಾದುದಲ್ಲ. ಅದರ ಅಭ್ಯರ್ಥಿ ರಮೇಶ ಸಜ್ಜನರ್ ಅವರ ಗೆಲುವಿನ ಅಂತರ ೩೧,೧೮೫ ಮತಗಳು ಎನ್ನುವುದು ಯಾರೂ ಹೆಮ್ಮೆ ಪಡಬಹುದಾದ ಗೆಲುವು. ಹಾನಗಲ್‌ನಲ್ಲಿ ಮಾತ್ರ ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿ ತನ್ನ ಕಾಲ ಕೆಳಗಿನ ನೆಲ ಅದುರುತ್ತಿರುವುದನ್ನು ಅರ್ಥ ಮಾಡಿಕೊಳ್ಳದೆ ಹೋಯಿತು. ಸಿಎಂ ತೌರು ಜಿಲ್ಲೆಯ ಕ್ಷೇತ್ರದ ಜನ ಸಿಎಂ ಮುಖ ನೋಡಿ ಓಟು ಹಾಕಿಬಿಡುತ್ತಾರೆಂಬ ಅದರ ಧೋರಣೆ ತಂದ ಉಡುಗೊರೆ ಸೋಲು.
ಇನ್ನು ಎರಡೂ ಕ್ಷೇತ್ರಗಳ ಮೂಲಕ ಉತ್ತರ ಕರ್ನಾಟಕದಲ್ಲಿ ತನ್ನ ಕಾಲನ್ನು ಸುಭದ್ರ ಮಾಡಿಕೊಳ್ಳುವ ಆಸೆಯಲ್ಲಿ ಚುನಾವಣಾ ಕಣಕ್ಕೆ ಧುಮುಕಿದ ಜಾತ್ಯತೀತ ಜನತಾ ದಳದ ಸಮಾಚಾರ. ಸಿಂದಗಿ ಅವರದೇ ಕ್ಷೇತ್ರ. ಎಂ.ಸಿ. ಮನಗೂಳಿಯವರು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಅವರ ನಿಧನ ಉಪ ಚುನಾವಣೆಗೆ ಕಾರಣ. ಅವರು ನಿಧನರಾದಾಗ ಅವರ ಮಗ ಅಶೋಕ ಮನಗೂಳಿ ಅವರೇ ಜೆಡಿಎಸ್ ಅಭ್ಯರ್ಥಿ ಎಂಬ ಮಾತು ಹರಡಿತ್ತು. ಆದರೆ ಅಶೋಕರನ್ನು “ಈ ಬಾರಿ ಗೆಲ್ಲುವುದು ನಾವೇ” ಎಂದ ಕಾಂಗ್ರೆಸ್ಸು ಹೈಜಾಕ್ ಮಾಡಿತು. ಮಾತಿನಂತೆ ಟಿಕೆಟ್ ಕೊಟ್ಟು ದೊಡ್ಡ ಹೋರಾಟವನ್ನೇ ನಡೆಸಿತಾದರೂ ಸೋಲಿನಿಂದ ಪಾರಾಗುವುದು ಸಾಧ್ಯವಾಗಲಿಲ್ಲ. ತನ್ನ ಸಂಭಾವ್ಯ ಅಭ್ಯರ್ಥಿಯನ್ನು ಕಳೆದುಕೊಂಡ ಜೆಡಿಎಸ್ ಕಾಂಗ್ರೆಸ್‌ಗೆ ಪಾಠ ಕಲಿಸುವ ತೀರ್ಮಾನಕ್ಕೆ ಬಂದು ಹಾನಗಲ್ ಮತ್ತು ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಯುವಂತೆ ಮಾಡಿತು.ಮುಸ್ಲಿಂ ಸಮುದಾಯ ಬಿಜೆಪಿಗೆ ಎಂದೂ ಓಟು ಹಾಕುವುದಿಲ್ಲ. ಒಂದಿಷ್ಟು ಓಟು ಕಾಂಗ್ರೆಸ್‌ಗೆ ಮತ್ತೊಂದಿಷ್ಟು ಜೆಡಿಎಸ್‌ಗೆ ಹೋಗುವುದು ನಡೆದುಕೊಂಡು ಬಂದಿರುವ ರೀತಿ. ಮುಸ್ಲಿಂರನ್ನೇ ಕಣಕ್ಕೆ ಇಳಿಸಿದರೆ ಹೋಲ್‌ಸೇಲಾಗಿ ಆ ಸಮುದಾಯದ ಮತ ತನಗೆ ದಕ್ಕೀತೆಂಬ ಜೆಡಿಎಸ್ ನಿರೀಕ್ಷೆಯೂ ಮಣ್ಣುಗೂಡಿತು. ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ಹಾನಗಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಹೋಗಿರುವ ಪಕ್ಷ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಎರಡೂ ಕಡೆ ಜೆಡಿಎಸ್ ಗೆಲ್ಲಲಿಕ್ಕಿಲ್ಲ ಎಂಬ ಭಾವನೆ ರಾಜಕೀಯ ವಲಯದಲ್ಲಿ ವ್ಯಾಪಕವಾಗಿತ್ತಾದರೂ ಠೇವಣಿ ಕಳೆದುಕೊಳ್ಳುವಷ್ಟು ಘನಘೋರ ಸೋಲಿಗೆ ಈಡಾಗುತ್ತದೆಂದು ಯಾರೂ ಭಾವಿಸಿರಲಿಲ್ಲ.
ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ ಕೆಲವೇ ದಿನಗಳಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ೨೦೧೩ರ ವಿಧಾನ ಸಭಾ ಚುನಾವಣೆಯಲ್ಲಿ ೧೨೩ ಸೀಟನ್ನು ಗೆಲ್ಲುವ ಠರಾವನ್ನು ಅಂಗೀಕರಿಸಲಾಯಿತು. ಪರಸ್ಪರ ಮುನಿಸಿಕೊಂಡಿದ್ದ ಪಕ್ಷದ ಯುವ ನಾಯಕ ಮುಖಗಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣನವರನ್ನು ಉತ್ತರ ಕರ್ನಾಟಕದ ದಿಗ್ವಿಜಯಕ್ಕೆ ಅಶ್ವಮೇಧದ ಕುದುರೆ ರೀತಿ ಕಳಿಸುವ ನಿರ್ಧಾರವನ್ನೂ ಪ್ರಕಟಿಸಲಾಯಿತು. ಅವರಿಬ್ಬರ ನಡುವಿನ ವೈಮನಸ್ಸು ತಿಳಿಯಾಗಿದ್ದು ಅವರ ಯಾತ್ರೆ ಕಾರಣವಾಗಿ ಪಕ್ಷದ ಪುನಃಶ್ಚೇತನ ಸುಲಭದಲ್ಲಿ ಆಗಲಿದೆ ಎಂದು ಕಾರ್ಯಕರ್ತರನ್ನು ನಂಬಿಸುವ ಯತ್ನ ಮಾಡಲಾಯಿತು. ಸಿಂದಗಿಯಲ್ಲಿ ಸ್ವತಃ ಎಚ್.ಡಿ. ದೇವೇಗೌಡರೇ ಮೊಕ್ಕಾಂ ಹೂಡಿ ಚುನಾವಣಾ ಕಾರ್ಯತಂತ್ರವನ್ನು ತಮ್ಮ ಸುಧೀರ್ಘ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ಹೆಣೆದರು. ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಪಕ್ಷದ ನೇತಾರರೆಲ್ಲರೂ ತಂಡೋಪತಂಡವಾಗಿ ಸಿಂದಗಿ, ಹಾನಗಲ್ ಮತ ಕ್ಷೇತ್ರಗಳ ಉದ್ದಗಲಕ್ಕೆ ಪ್ರಚಾರ ಪ್ರವಾಸ ಮಾಡಿದರು. ತಮ್ಮ ಶಿಷ್ಯನ ಮಗನನ್ನು ಹೈಜಾಕ್ ಮಾಡಿದ ಕಾಂಗ್ರೆಸ್‌ಗೆ ಪಾಠ ಕಲಿಸುವ ಶಪಥದಂಥ ಮಾತನ್ನು ಸ್ವತಃ ಮಾಜಿ ಪ್ರಧಾನಿ ಆಡಿದರು.


ಗೆಲುವಿಗೆ ಇಷ್ಟೇ ಸಾಕಾಗದೆಂದು ತಿಳಿದ ಕುಮಾರಸ್ವಾಮಿಯವರು ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಬಹಳ ದೊಡ್ಡ ಗಂಡಾಂತರವಿದೆಯೆಂದು ಸತ್ಯವನ್ನು ಹೊಸದಾಗಿ ಕಂಡವರಂತೆ ಘೋಶಿಸಿ ಅದರ ವಿರುದ್ಧ ಸಂಘಟಿತ ಹೋರಾಟಕ್ಕೆ ಮನವಿಯನ್ನು ಮಾಡಿದರು. ಚುನಾವಣಾ ಪ್ರಚಾರ ಸಭೆಗಳಲ್ಲಿ, ಹೋದಲ್ಲಿ ಬಂದಲ್ಲಿ ನಡೆಸಿದ ಮಾಧ್ಯಮ ಗೋಷ್ಟಿಗಳಲ್ಲಿ ಅವರ ಪ್ರಹಾರ ಸತತ ಎಂಬಂತೆ ಆರ್‌ಎಸ್‌ಎಸ್ ವಿರುದ್ಧ ನಡೆಯಿತು. ಇತ್ತ ಬಿಜೆಪಿ ನಾಯಕರು ಸುಮ್ಮನೆ ಕೂರಲಿಲ್ಲ. ಆರ್‌ಎಸ್‌ಎಸ್‌ನ ಸಮರ್ಥನೆಗೆ ಅವರೆಲ್ಲರೂ ಟೊಂಕಕಟ್ಟಿ ನಿಂತರು. ಇದೇ ಆರ್‌ಎಸ್‌ಎಸ್‌ನ ರಾಜಕೀಯ ಟಿಸಿಲಾಗಿರುವ ಬಿಜೆಪಿ ಸಖ್ಯದಲ್ಲಿ ತಾವು ಮೊದಲಬಾರಿಗೆ ಸಿಎಂ ಆಗಿದ್ದನ್ನು ಅವರು ಜಾಣ ಮರೆವಿನ ಖಜಾನೆಗೆ ತಳ್ಳಿದರು. ಆರ್‌ಎಸ್‌ಎಸ್ ಅನ್ನು ಬೈದರೆ ಮುಸ್ಲಿಂ ಮತಗಳು ಬರಬಹುದೆಂಬ ಅವರ ಲೆಕ್ಕಾಚಾರ ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಹುಸಿಯಾಗಿ ಹೋಗಿದೆ.
ಈ ಸೋಲನ್ನು ಕುಮಾರಸ್ವಾಮಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಯತ್ನ ನಡೆಸಿದ್ದಾರೆ. ತಮ ಗುರಿ ಏನಿದ್ದರೂ ೨೦೨೩ರಲ್ಲಿ ನಡೆಯಬೇಕಿರುವ ವಿಧಾನ ಸಭಾ ಚುನಾವಣೆಯೇ ಹೊರತೂ ಈ ಎರಡು ಕ್ಷೇತ್ರಗಳ ಉಪ ಚುನಾವಣೆ ಆಗಿರಲಿಲ್ಲ ಎಂದಿದ್ದಾರೆ. ಮುಖಡಿಯಾಗಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವುದು ಸುಳ್ಳು ಗಾದೆ ಅಲ್ಲ.

Girl in a jacket
error: Content is protected !!