ಜೀವನದ ನಿಜಸ್ವರೂಪ ತಿಳಿದವನು ಬದುಕಿಗೆ ಅಂಜಲಾರ!

Share

ಒಮ್ಮೆ ಸಿದ್ಧಬಾಲಕ ಹುಡುಗರೊಂದಿಗೆ ಕೆರೆಗೆ ಸ್ನಾನಕ್ಕೆ ಹೋದನು. ಈಜು ಬಾರದ ಹುಡುಗನನ್ನು ಎಳೆದೊಯ್ದು ಕೆರೆಯಲ್ಲಿ ಮುಳುಗಿಸಿದನು.ತಾಯಿ ರೋಧಿಸಿದಾಗ ,’ಕೂಗಿ ಕರೆ’ ಎಂದನು.ದೇವದತ್ತಾ ಬಾ! ಎಂದೊಡನೆ ಹುಡುಗ ಮೇಲೆದ್ದು ಈಜಿ ಬಂದ! ಇದರ ತಾತ್ತ್ವಿಕತೆಯನ್ನು ಸಿದ್ಧ ಹೀಗೆ ವಿವರಿಸಿದನು;
ಬದುಕೆಂಬುದು ಒಂದು ಕೆರೆ.ಬದುಕುವ ಜೀವಿಗಳೆಲ್ಲರೂ ಕೆರೆಯಲ್ಲಿ ಈಜುವ ಹುಡುಗರು! ಕೆರೆಯಲ್ಲಿಳಿಯಲು, ಕೆರೆಯಲ್ಲಾಡಲು, ಕೆರೆದಾಟಲು ಈಜು ತಿಳಿದಿರಬೇಕು. ನೀರು ಆಳವಾಗಿದ್ದರೆ, ಈಜು ಬರದಿದ್ದರೆ, ಕೆರೆಗೆ ಇಳಿಯಲಾಗದು.ಇಳಿದರೆ,ಬಿದ್ದರೆ ಮುಗಿಯುತ ಕಥೆ! ಆದ್ದರಿಂದ ಈಜು ಬಾರದವ ನೀರಿಗಿಳಿಯಲು ಭಯಪಡುವನು. ನೀರಿನಲ್ಲಿ ಈಜುವವರನ್ನು ಕಂಡು ತಾನೂ ಈಜಬೇಕು,ಖುಷಿಪಡಬೇಕೆಂಬಾಸೆ.ಆದರೆ ಭಯ! ಭಯಪಟ್ಟು ದಂಡೆಯಲ್ಲಿ ಕುಳಿತರೆ ಈಜುಬರದು! ಧೈರ್ಯ ತುಂಬಬೇಕು, ನೀರಿಗಿಳಿಯಬೇಕು, ಈಜು ಕಲಿಯಬೇಕು, ಈಜಾಡಬೇಕು! ಈಜು ಬಲ್ಲವನು ಈಜು ಬಾರದವನಿಗೆ ಈಜು ಕಲಿಸಬೇಕು. ಈಜು ಕಲಿತಮೇಲೆ ಕೆರೆಗಿಳಿಯಲು, ಈಜಾಡಲು ಭಯವಿಲ್ಲ! ಈಜು ಪರಿಣಿತನು ಸಮುದ್ರದ ಆಳಕ್ಕೆ ನುಗ್ಗಬಲ್ಲ! ಅಲ್ಲಿನ ಮುತ್ತು ರತ್ನಗಳನ್ನು ಹೊತ್ತು ಮೇಲೇರಬಲ್ಲ! ಹಲವು ನಿಮಿಷಗಳ ಕಾಲ ನೀರೂಳಗೆ ಮುಳುಗಿಯೇ ಈಜಾಡಬಲ್ಲ! ಜಲಸ್ಥಂಭನ ವಿದ್ಯೆಯೊಂದಿಗೆ! ಬಲು ಹೊತ್ತು ನೀರಿನೊಳಗೆ ಮುಳುಗಿದ್ದು ಬಿಡಬಹುದು!ಅಲ್ಲಿಯೇ ಧ್ಯಾನಗೈಯ್ಯಬಹುದು! ಮಹಾಭಾರತದ ದುರ್ಯೋಧನನು ಯುದ್ಧದಿಂದ ಪಲಾಯನ ಮಾಡಿ ಸರೋವರದಲ್ಲಿ ಮುಳುಗಿ ಅಡಗಿ ಕುಳಿತ ಪ್ರಕರಣವನ್ನು ಕಾಣುತ್ತೇವೆ.ಹಾಗೆಂದು ಯಾರೆಂದರವರು ನೀರಿನಲಿ ಮುಳುಗಿದರೆ ಜೀವಂತ ಉಳಿಯುವಂತಿಲ್ಲ!
ಬದುಕೆಂಬ ಕೆರೆಯ ಜೀವನವೂ ಹೀಗೆಯೇ.ಜನನ-ಮರಣಗಳ ನಡುವಿನ ಈ ಬದುಕು ಬಲು ವಿಸ್ಮಯ! ತುತ್ತು ಅನ್ನಕ್ಕಾಗಿ, ಗೇಣು ಬಟ್ಟೆಗಾಗಿ, ಒಂದು ಸೂರಿಗಾಗಿ, ಆಶೆ -ಆಕಾಂಕ್ಷೆಗಳಿಗಾಗಿ, ಮಾನ-ಮರ್ಯಾದೆಗಾಗಿ, ಏನೆಲ್ಲ ಕಷ್ಟ ಅನುಭವಿಸಬೇಕು! ತಂತ್ರಕ್ಕೆ ಪ್ರತಿತಂತ್ರ, ದಾಳಕ್ಕೆ ಪ್ರತಿದಾಳ ಉದುರಿಸಬೇಕು! ನಾಲಿಗೆ ಮೆದುಳಿಗೆ ಅದೆಷ್ಟು ತರಬೇತಿ ನೀಡಬೇಕು! ಸ್ವಲ್ಪ ಹದ- ಎಚ್ಚರ ತಪ್ಪಿದರಾಯಿತು, ಜೀವಕ್ಕೆ ಕುತ್ತು! ವಿಷ-ಉರುಳು-ಬೆಂಕಿ-ನೀರಿಗಾಹುತಿ! ಶಸ್ತ್ರಾಸ್ತ್ರಗಳಿಗೆ ಬಲಿ! ಅದೆಂಥ ಭಯಾನಕ! ಅದೆಷ್ಟೋ ಜನ ಇದನ್ನು ನೆನೆ ನೆನೆದು ನರಳುವರು! ಅನೇಕರಿಗೆ ಬದುಕೆಂಬುದೇ ಭಯ! ಇಂಥವರು ಬದುಕಿಗೆ ಎದೆಕೊಟ್ಟು ಎದುರಾಗಿ ಮುನ್ನುಗ್ಗಲಾರರು! ಹಾಗೆಂದು ಸುಮ್ಮನೆ ಕುಳಿತಿರಲೂ ಆಗದು! ಕಣ್ಣಿಗೆ ಬೀಳುವ,ಬಣ್ಣದ ಬದುಕಿನ ವಯ್ಯಾರ ಜೀವನ ನಡೆಸಿ ಸುಖಪಡುವ ಚಪಲ! ಆಶೆಪಟ್ಟರಷ್ಟೇ ಸಾಲದು! ಬದುಕುವ ಕಲೆ-ವಿಧಾನ-ಜ್ಞಾನ ತಿಳಿದಿರಬೇಕು! ಮಳೆ-ಬಿಸಿಲು- ಚಳಿ ಎನ್ನದೇ ಮೈಕೊಡವಿ ಎದ್ದು ಮುನ್ನುಗ್ಗುವ ಧೈರ್ಯ-ಉತ್ಸಾಹ-ಎದೆಗಾರಿಕೆ ಇರಬೇಕು! ಗುರು-ಹಿರಿಯರು, ಬಲ್ಲವರ,ಮಾರ್ಗದರ್ಶನ ತರಬೇತಿ ಪಡೆದವನು,ಧರ್ಮ ವೇದಾಂತತತ್ತ್ವವನು ಅರಿತವನು ಬದುಕನ್ನು ಯಶಸ್ವಿಯಾಗಿ ಮುನ್ನೆಡೆಸಬಲ್ಲ! ಅಂಥವನು ಬದುಕಿಗೆ ಭಯಪಡಲಾರ! ಈಜು ಬಲ್ಲವನು ನೀರಿನಲ್ಲಿ ಲೀಲಾಜಾಲವಾಗಿ ಈಜಾಡುವವನಂತೆ, ಸಂಸಾರ-ಬದುಕು-ಪ್ರಪಂಚ ಜೀವನದ ನಿಜಸ್ವರೂಪ ತಿಳಿದವನು ಬದುಕಿಗೆ ಅಂಜಲಾರ! ಕಾಣುವ ಪ್ರಪಂಚವೇ ಸತ್ಯ,ದೇಹವೇ ತಾನು, ಎಂದು ತಿಳಿದ ಪಾಮರ-ಅಜ್ಞಾನಿ ಜೀವನು ಪ್ರಾಪಂಚಿಕ ಹಿಗ್ಗು-ಕುಗ್ಗುಗಳ ಸೆಳೆತಕ್ಕೆ ಸಿಲುಕಿ ಒದ್ದಾಡುವನು! ಹೆತ್ತ ತಂದೆ ತಾಯಿ, ಕಟ್ಟಿಕೊಂಡ ಗಂಡ-ಹೆಂಡತಿ,ಕರುಳಕುಡಿ ಮಕ್ಕಳು, ನೆಚ್ಚಿನ ಸ್ನೇಹಿತರು, ಇದ್ದಕ್ಕಿದ್ದಂತೆ ಕಣ್ಮರೆಯಾಗುವರು! ಹೇರಳವಾದ ಸುಖದ ಸುಪ್ಪತ್ತಿಗೆ ಬಿದ್ದಿದ್ದರೂ ಉಪಯೋಗಿಸಲಾರದಂಥ ದಯನೀಯ ಪರಿಸ್ಥಿತಿ! ಶ್ರಮಸುರಿಸಿ ಸಂಪಾದಿಸಿದ ಆಸ್ತಿ-ಪಾಸ್ತಿಗಳು ಕೈಬಿಟ್ಟು ಪರರ ಪಾಲಾಗುವವು! ಬಂಧು-ಬಾಂಧವರು,ನಂಬಿದವರು,ಮಕ್ಕಳು ಮಡದಿ ಗಂಡ ಮಿತ್ತರು, ತಿರುಗಿಬಿದ್ದು ಹೆಜ್ಜೆ ಹೆಜ್ಜೆಗೂ ಹಿಂಸಿಸುವರು! ಒಂದೇ? ಎರಡೇ? ಲೆಕ್ಕವಿಲ್ಲದ ನರಕಯಾತನೆಗಳು! ಇಂಥ ಬದುಕು ಯಾರಿಗೆ ಇಷ್ಟ! ಬದುಕೆಂದರೇ ಭಯ! ಸಾವು ನೆನೆದರೆ ಮತ್ತೂ ಭಯ! ಭಯ!!
ಈ ಜಗದ ರಹಸ್ಯವರಿತ ಮಹಾತ್ಮರು,ಆತ್ಮಜ್ಞಾನಿಗಳು, ಈ ಪ್ರಪಂಚಸಾಗರವನ್ನು ಲೀಲಾಜಾಲವಾಗಿ ದಾಟುವರು:

ಶಾಂತಾಮಹಂತೋ ನಿವಸಂತಿ ಸಂತಃ
ವಸಂತವಲ್ಲೋಕಹಿತಂ ಚರಂತಃ!
ಸ್ವಯಂ ತೀರ್ಣಾಃ ಭೀಮಭವಾರ್ಣವಂ ಜನಾನ್
ಅಹೇತುನಾನ್ಯಾನಪಿ ತಾರಯಂತಃ||

ಮಹಾತ್ಮರಾದ ಸಂತರು, ಸುಖ-ದುಃಖ ದ್ವಂದ್ವಗಳ ಯಾವುದೇ ಏರಿಳಿತಗಳಿಲ್ಲದೇ ಶಾಂತವಾಗಿರುತ್ತಾರೆ. ವಸಂತಕಾಲವು ಜನರೆಲ್ಲರಿಗೂ ಮುದನೀಡುವಂತೆ ಮಹಾತ್ಮರು ಜನರೆಲ್ಲರಿಗೆ ಒಳಿತನ್ನು ಮಾಡುತ್ತಾರೆ. ಭಯಾನಕ ಸಂಸಾರ ಸಾಗರವನ್ನು ತಾವು ಸ್ವಯಂ ದಾಟಿ, ಯಾವುದೇ ಪ್ರತಿಫಲದ ಬಯಕೆ ಇಲ್ಲದೆಯೇ, ಸಂಸಾರ ಸಾಗರದಲ್ಲಿ ಬಿದ್ದು ಒದ್ದಾಡುವವರನ್ನು ದಾಟಿಸುತ್ತಿರುತ್ತಾರೆ,
ಎಂದು ಆದಿ ಶಂಕರರು ಹೇಳುವಂತೆ ,ಬಲ್ಲಮಹಾತ್ಮರು ಜಗದುದ್ಧಾರಕ್ಕಾಗಿ, ಜಗದ ನಿಜಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ:

ವಾಚಾರಂಭಣಂ ವಿಕಾರೋ ನಾಮಧೇಯಂ
ಮೃತ್ತಿಕೇತ್ಯೇವ ಸತ್ಯಮ್|| [ ಛಾಂದೋಗ್ಯ-೬-೧-೧]

ಗಡಿಗೆ ಬಿಂದಿಗೆ ಮಗಿ ಪರ್ಯಾಣ ತತ್ರಾಣಿ- ಹೀಗೆ ಮಣ್ಣಿನ ಬಗೆ ಬಗೆಯ ವಸ್ತುಗಳು ವಿವಿಧ -ಹೆಸರುಗಳಿಂದ, ನಾನಾ ರೂಪಗಳಿಂದ ಭಿನ್ನ ಭಿನ್ನವಾಗಿ ಕಂಡರೂ, ಅವುಗಳಲ್ಲೆಲ್ಲ ಇರುವುದು ಮಣ್ಣು ಮಾತ್ರ. ಅವು ತೋರುವ ಮೊದಲು ಮಣ್ಣು, ತೋರಿದಾಗಲೂ ಮಣ್ಣು ,ಒಡೆದ ಬಳಿಕ ಉಳಿಯುವುದೂ ಮಣ್ಣು. ಆದ್ದರಿಂದ ಈ ನಾಮ ರೂಪಗಳು ತೋರಿಕೆ ಮಾತ್ರ. ಅವು ಶಾಶ್ವತ ಅಲ್ಲ. ಮಣ್ಣು ಮಾತ್ರ ತ್ರಿಕಾಲದಲ್ಲಿಯೂ ಇರುವುದರಿಂದ ಅದುವೇ ಸತ್ಯ. ಬಗೆ ಬಗೆಯ ಚಿನ್ನದ ಆಭರಣಗಳು ತೋರಿದರೂ ಬಂಗಾರ ಮಾತ್ರ ಸತ್ಯ. ಗಡಿಗೆ ಗಡಿಗೆಗಳಲ್ಲಾಗಲೀ, ಆಭರಣ-ಆಭರಗಳಲ್ಲಾಗಲೀ, ಸುಖ-ದುಃಖ ಮೇಲು-ಕೀಳುಗಳ ಕಚ್ಚಾಟವಿಲ್ಲ. ಅದರಂತೆ ಸಕಲ ಚರಾಚರ ಪ್ರಪಂಚವನ್ನು ವ್ಯಾಪಿಸಿದ ಪರಮಾತ್ಮ ತತ್ತ್ವ ಒಂದೇ. ಆಕಾಶ-ವಾಯು- ಅಗ್ನಿ,ಜಲ ಪೃಥ್ವಿ ಎಂಬ ಪಂಚಭೂತಗಳು, ಇವುಗಳಿಂದ ಉದಿಸಿದ ಸಕಲ ಚರಾಚರ ಜೀವರಾಶಿಗಳು, ಸಕಲ ವಸ್ತು ಪಡಿ ಪದಾರ್ಥಗಳೆಲ್ಲ ಒಬ್ಬ ಪರಮಾತ್ಮನ ವಿಶಿಷ್ಟ ಭಾವ ಭಂಗಿ! ದೇಹಾಂತರ್ಗತ ಚೈತನ್ಯ ಸ್ವರೂಪ ತಾನಾಗಿರುವುದರಿಂದ ಆ ಚೈತನ್ಯವೇ ಎಲ್ಲಾ ಜೀವ- ವಸ್ತ್ವಂತರ್ಗತವಾಗಿರುವುದರಿಂದ ಎಲ್ಲವೂ ತಾನೇ ಆಗಿರುತ್ತಾನೆ.

ದ್ವಿತೀಯಾದ್ವೈ ಭಯಂ ಭವತಿ [ಬೃಹದಾರಣ್ಯಕ ೧-೪-೨]

ಎರಡನೇಯದರಿಂದಲ್ಲವೇ ಭಯ ಆಗುತ್ತದೆ! ತನಗಿಂತ ಬೇರೆಯಾದ ಯಾವುದಾದರೊಂದು ವಸ್ತು, ವ್ಯಕ್ತಿ ಇದ್ದರೆ, ಅದರಿಂದ ತನಗೆ ಭಯವಾಗಲೀ, ಸಂತೋಷ-ದುಃಖ-ಧೈರ್ಯವಾಗಲೀ ಆಗಲು ಸಾಧ್ಯ.ತನಗಿಂತ ಭಿನ್ನವಾದ ವಸ್ತು ವ್ಯಕ್ತಿ ಯಾವುದೂ ಇಲ್ಲವೆಂದ ಬಳಿಕ ಭಯ ಯಾವುದರಿಂದ? ಆದ್ದರಿಂದ ಆತ್ಮಸ್ವರೂಪ ತಿಳಿದವನು ಯಾವುದಕ್ಕೂ ಭಯಪಡುವುದಿಲ್ಲ!

ತೋರುವ ಪ್ರಪಂಚ ವ್ಯವಹಾರ ಕಾಲದಲ್ಲಿ ಮಾತ್ರ ಸತ್ಯವಾಗಿರುವುದರಿಂದ, ಪಾರಮಾರ್ಥಿಕವಾಗಿ ಇದು ವಾಸ್ತವಿಕವಲ್ಲ. ಆದ್ದರಿಂದ ಹುಟ್ಟು -ಸಾವು,ಸುಖ-ದುಃಖಾದಿಗಳು ವ್ಯಾವಹಾರಿಕಗಳೇ ಹೊರತು, ಪಾರಮಾರ್ಥಿಕವಾಗಿ ಅಲ್ಲ.

ನ ಜಾಯತೇ ಮ್ರಿಯತೇ ವಾ ಕದಾಚಿತ್।
ನಾಯಂ ಭೂತ್ವಾ ಭವಿತಾ ವಾ ನ ಭೂಯಃ।।
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ।
ನ ಹನ್ಯತೇ ಹನ್ಯಮಾನೇ ಶರೀರೇ|| [ಭಗವದ್ಗೀತೆ೨-೨೦]

ಪಾರಮಾರ್ಥಿಕವಾಗಿ ಆತ್ಮವು ಹುಟ್ಟುವುದಿಲ್ಲ, ಎಂದಿಗೂ ಸಾಯುವುದೂ ಇಲ್ಲ. ಹಿಂದೆ ಇದ್ದು,ಮುಂದೆ ಇಲ್ಲದವನಲ್ಲ! ಹುಟ್ಟಿಲ್ಲದ ಆತ್ಮವು ನಿತ್ಯ,ಶಾಶ್ವತ,ಎಂದೆಂದಿಗೂ ನಿತ್ಯ ನವೀನ. ನಾಮ ರೂಪಾತ್ಮಕ ಶರೀರಗಳು ಬಿದ್ದು ಹೋದರೂ, ನಾಶವಾದರೂ, ನಾಮ ರೂಪರಹಿತನಾದ ಆತ್ಮನು ಬಿದ್ದು ಹೋಗಲಾರ, ಸಾಯಲಾರ!

ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ।। [ ಭಗವದ್ಗೀತೆ ೨-೨೩]

ಈ ಆತ್ಮನನ್ನು ಶಸ್ತ್ರಾಸ್ತ್ರಗಳು ಕತ್ತರಿಸಲಾರವು! ಬೆಂಕಿಯು ಸುಡಲಾರದು! ನೀರು ತೋಯಿಸದು, ಮುಳುಗಿಸದು! ಗಾಳಿಯು ಒಣಗಿಸದು!

ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ|
ತಸ್ಮಾದಪರಿಹಾರ್ಯೇರ್ಥೇ
ನ ತ್ವಂ ಶೋಚಿತುಮರ್ಹಸಿ ||[ ಭಗವದ್ಗೀತೆ೨-೨೭]

ವ್ಯವಹಾರ ಕಾಲದಲ್ಲಿ ನಾಮರೂಪಾತ್ಮಕವಾಗಿ ತೋರುವ ವಸ್ತು ವ್ಯಕ್ತಿಯ ಹುಟ್ಟು ಅಡಗಲೇ ಬೇಕು! ಅದೇ ಮರಣ. ಸತ್ತಿದ್ದು ಹುಟ್ಟಲೇಬೇಕು, ಹುಟ್ಟುತ್ತದೆ! ಹುಟ್ಟು ಸಾವು ಎಂಬುದು ವಸ್ತು ವ್ಯಕ್ತಿಯ ರೂಪಾಂತರವೇ ಹೊರತು, ಮತ್ತೇನೂ ಅಲ್ಲ! ಇದನ್ನು ಯಾರೂ ತಡೆಯಲಾಗದು. ಇಂಥ ಅನಿವಾರ್ಯ ವಿಚಾರಕವಾಗಿ ಶೋಕಿಸುವ ಅಗತ್ಯವಿಲ್ಲ!

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ।
ನವಾನಿ ಗೃಹ್ಣಾತಿ ನರೋಪರಾಣಿ।।
ತಥಾ ಶರೀರಾಣಿ ವಿಹಾಯ ಜೀರ್ಣಾ। ನ್ಯನ್ಯಾನಿ ಸಂಯಾತಿ ನವಾನಿ ದೇಹೀ।।

ಹುಟ್ಟು ಸಾವೆಂಬುದು ಮತ್ತೇನಲ್ಲ! ಹಳೆಯ ಬಟ್ಟೆಗಳನ್ನು ಬದಲಿಸಿ, ಹೊಸ ಬಟ್ಟೆ ಧರಿಸಿದಂತೆ! ಅದರಲ್ಲಿ ಅಂಥ ಭಯಪಡುವ ಆಶ್ಚರ್ಯಸಂಗತಿ ಏನಿಲ್ಲ! ಶರೀರರೂಪದಿಂದ ವಿಶೇಷ ಚೈತನ್ಯನಾದ ಆತ್ಮನು, ಜೀರ್ಣಶರೀರದಲ್ಲಿ ಮತ್ತೆ ಸಾಮಾನ್ಯ ಚೇತನದಿಂದಿದ್ದು, ಮತ್ತೆ ನೂತನ ಶರೀರಾಂತರರೂಪದಲ್ಲಿ ವಿಶೇಷ ಚೈತನ್ಯವೆನಿಸುವನು! ಇದನ್ನೇ ನಾವು ಹುಟ್ಟು ಸಾವು ಎನ್ನುತ್ತೇವೆ! ಇದಕ್ಕೇಕೆ ಭಯಪಡಬೇಕು?

ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ|
ಆಗಮಾಪಾಯಿನೋನಿತ್ಯಾಃ ತಾಂಸ್ತಿತಿಕ್ಷಸ್ವ ಭಾರತ||[ಭಗವದ್ಗೀತೆ ೨-೧೪]
ವ್ಯಾವಹಾರಿಕ ಪ್ರಪಂಚದಲ್ಲಿ ಇದ್ದ ಬಳಿಕ,ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಲ್ಲಿ ಹರಿದಾಡುತ್ತವೆ. ಇದರಿಂದಾಗಿ ಶೀತ,ಉಷ್ಣ ಸುಖ ದುಃಖ ದ್ವಂದ್ವಗಳು ಉಂಟಾಗುತ್ತವೆ.ಇವುಗಳೇನೂ ಶಾಶ್ವತವಾಗಿ ಇರುವಂಥವುಗಳಲ್ಲ. ಇತ್ತ ಬಂದು, ಅತ್ತ ಹೋಗುವಂಥವುಗಳು. ಕ್ಷಣಕಾಲ ಅವುಗಳನ್ನು ಸಹಿಸಿಕೊಂಡರಾಯಿತು!

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ| [ಭಗವದ್ಗೀತೆ ೨-೩೮]

ಸುಖ-ದುಃಖ-ಲಾಭ-ನಷ್ಟ,ಜಯ-ಸೋಲು-ಎಲ್ಲವುಗಳನ್ನೂ ಸಮಾನತೆಯಿಂದ ಸ್ವೀಕರಿಸಿ-ಎದುರಿಸಿ, ಮುನ್ನುಗ್ಗುವ ಜ್ಞಾನ-ಧೀರರು ಬದುಕಿಗೆ ಭಯಪಡುವುದಿಲ್ಲ!
‘ಪದ್ಮಪತ್ರಮಿವಾಂಭಸಿ- ನೀರಿನಲ್ಲಿನ ಕಮಲದಂತೆ, ನೀರಿನಲ್ಲಿದ್ದರೂ ಕಮಲದ ಎಲೆಯು ನೀರಿಗೆ ಅಂಟದೇ ನಿರ್ಲಿಪ್ತವಾಗಿರುತ್ತದೆ. ಹಾಗೆಯೇ ಪ್ರಾಪಂಚಿಕ ಬದುಕಿನಲ್ಲಿರುವ ಜ್ಞಾನಿಯು ಪ್ರಪಂಚವ್ಯವಹಾರಗಳಿಗೆ ಅಂಟಿಕೊಂಡಿರುವುದಿಲ್ಲ. ಅನಿವಾರ್ಯದ ಪ್ರಾಪಂಚಿಕ ವ್ಯವಹಾರಗಳನ್ನು ಮಾಡುತ್ತಿದ್ದರೂ ಅಂತರಂಗ ಆತ್ಮಾನಂದ ಸಾಗರದಲ್ಲಿ ಮುಳುಗಿರುತ್ತದೆ. ಇಂಥವರು ವ್ಯವಹಾರಗಳನ್ನು ಹೆಚ್ಚು ಇಷ್ಟಪಡುವುದಿಲ್ಲ! ಬದಲಾಗಿ ಧ್ಯಾನ,ಜಪ,ತಪಸ್ಸು,ಅಧ್ಯಯನ-ಪ್ರವಚನದಂಥ ಅಂತರ್ಮುಖ ಪ್ರಪಂಚದಲ್ಲಿ ವಿಹರಿಸುತ್ತಾರೆ! ನಸುಗತ್ತಲೆಯಲ್ಲಿ ಅಡ್ಡ ಅಡ್ಡವಾಗಿ ಬಿದ್ದ ಹಗ್ಗವನ್ನು ಹಾವು ಎಂದು ತಿಳಿದ ಅಜ್ಞಾನಿ ಜನ ಭಯಪಡುವಂತೆ, ಈಜು ಬಾರದ ಬಾಲಕನಂತೆ, ಪ್ರಪಂಚವೇ ಸತ್ಯವೆಂದು ತಿಳಿದ ಜನ ಬದುಕಿನಲ್ಲಿ ಒದ್ದಾಡುತ್ತಿರುತ್ತಾರೆ. ಪ್ರಪಂಚ ನಶ್ವರತೆ ಅರಿತ ಜ್ಞಾನಿ ಜನರು, ಬೆಳಕ ತಂದು ಹಗ್ಗವನ್ನು ಹಗ್ಗವೆಂದೇ ತಿಳಿದು ನಿರ್ಭಯವಾಗಿರುವಂತೆ, ಈಜು ಬಲ್ಲವರು ನೀರಿನಲ್ಲಿ ಲೀಲಾಜಾಲವಾಗಿ ಈಜಾಡುವಂತೆ, ಪ್ರಪಂಚದ ವ್ಯಾಮೋಹಕ್ಕೆ ಬಲಿಯಾಗದೇ ಭಯಪಡದೇ,ಪ್ರಪಂಚ ವಿಮುಖರಾಗಿ ಆತ್ಮಾನಂದ ಸಾಗರದಲ್ಲಿ ಲೀಲಾಜಾಲವಾಗಿ ವಿಹರಿಸುತ್ತಾರೆ-ಎಂದು. ಸದ್ಗುರು ಶ್ರೀ ಸಿದ್ದಾರೂಢರ ಅನುಗ್ರಹದಿಂದ ನಾವೆಲ್ಲಾ ಬ್ರಹ್ಮಾನಂದ ಸಾಗರದಲ್ಲಿ ಮುಳುಗುವಂಥವರಾಗೋಣ!

Girl in a jacket
error: Content is protected !!