ವಿಶಾಲಾ ಆರಾಧ್ಯ ರಾಜಾಪುರ
ಈ ತಿಂಗಳ ಮಾರ್ಚ್ ಎರಡನೇ ಭಾನುವಾರದಂದು ವಿಶ್ವ ಅಮ್ಮಂದಿರ ದಿನವನ್ನು ಆಚರಿಸಿದೆವು. ತಮ್ಮ ತಮ್ಮ ಅಮ್ಮಂದಿರನ್ನು ಮಾತನಾಡಿಸಿಯೋ ಫೋಟೋ ಕ್ಲಿಕ್ಕಿಸಿಯೋ ಎಲ್ಲರೂ ಅಮ್ಮನ ಫೋಟೋವನ್ನು ನಮ್ಮ ನಮ್ಮ ಸ್ಟೇಟಸ್ ಗಳಲ್ಲಿ ವಿಜೃಂಭಿಸಿದೆವು. ನಂತರ ಅಮ್ಮನ ಬಗ್ಗೆ ಯೋಚಿಸಿ ಅವಳೊಡನಿದ್ದು ಅವರ ಭಾವನೆಗಳು, ವಿಚಾರಗಳ ಆಗುಹೋಗುಗಳನ್ನು ನಾವು ಸರಿಯಾಗಿ ವಿಚಾರಿಸುತ್ತೇವೆಯೇ? ಎಂಬ ಸ್ವ ವಿಮರ್ಶೆ ಮಾಡಿಕೊಳ್ಳೋಣ.
ನಮ್ಮ ಹುಟ್ಟಿಗೂಮುನ್ನವೇ ಜೀವಾಂಕುರವಾದಾಗಿನಿಂದ ನಮ್ಮನ್ನು ತನ್ನ ಹೊಟ್ಟೆಯಲ್ಲಿ ಪೊರೆದವಳನ್ನು ಅಲ್ಲಿಂದಲೇ ಕಾಲುಗಳನ್ನು ಚಾಚಿ ಒದೆಯಲು ಶುರುಮಾಡುತ್ತೇವೆ. ಅದು ನೋವಾದರೂ ಸಹ ಸಹಿಸಿಕೊಂಡ ಅದನ್ನು ಅನಿರ್ವಚನೀಯ ಸುಖ ಎಂದು ತಾನು ಅನುಭವಿಸುತ್ತಾಳೆ. ಅದೂ ಒಂದಲ್ಲ ಎರಡಲ್ಲ ಒಂಬತ್ತು ತಿಂಗಳು ನಮ್ಮನ್ನು ಹೊತ್ತುಕೊಂಡು ತನ್ನೆಲ್ಲಾ ಜವಾಬ್ಧಾರಿ ಕೆಲಸಗಳನ್ನು ನಿರಾಯಾಸವಾಗಿ ಮಾಡಿರುತ್ತಾಳೆ. ಅವಳು ಹೆತ್ತ ನಂತರವೂ ಹಾಲೂಡುವಾಗ ಅವಳ ಮೊಲೆಕಚ್ಚುತ್ತೇವೆ, ಒದೆಯುತ್ತೇವೆ. ಅದನ್ನು ತುಂಟಾಟಗಳನ್ನಾಗಿ ಸ್ವೀಕರಿಸುತ್ತಾಳೆ. ನಂತರ ಬೆಳೆಯುತ್ತಾ ನಮ್ಮನ್ನು ಮೂರುವರ್ಷಗಳು ಕಂಕುಳಲ್ಲಿಟ್ಟು ಹೊತ್ತಿಗೆ ಅನ್ನ ನೀರು ಪೌಷ್ಟಿಕಾಂಸಗಳನ್ನು ಕೊಟ್ಟು ಕಣ್ಣಪಾಪೆಯಲ್ಲೇ ಕಾಪಾಡುತ್ತಾಳೆ. ತನಗೆ ತಿಳಿದ ಕಥೆ, ಹಾಡು, ವಿಷಯಗಳನ್ನು ಮುದ್ದಾಗ ನಮ್ಮ ಭಾಷೆಯಲ್ಲೆ ಹೇಳುತ್ತಾಳೆ.
ಹೀಗೆ ಬೆಳೆದ ನಾವು ಶಾಲೆಗೆ ಸೇರಿದ ನಂತರ ಅಲ್ಲಿನ ವಿದ್ಯೆಯನ್ನು ಕಲಿಯುತ್ತಾ ಹೋದಂತೆ ದೊಡ್ಡವರಾಗಿ ಪ್ರೈಮರಿ ಹಂತಕ್ಕೆ ಬಂದಾಗ ನಾವು ನಮ್ಮದೇ ಆದ ಚಿಂತನೆಗಳನ್ನು ಬೆಳೆಸಿಕೊಂಡು ಮುಂದುವರೆಯುತ್ತೇವೆ. ಶಾಲೆಯ ಮಕ್ಕಳೊಡನೆ ಅಮ್ಮ ಮಾತನಾಡಿದಾಗ ಹಾಗೆ ಮಾತನಾಡಬೇಡ ಹೀಗೆ ಮಾತನಾಡಬೇಡ ಎಂದು ಅಮ್ಮನಿಗೆ ಹೇಳಲು ಶುರುವಿಟ್ಟುಕೊಳ್ಳುತ್ತೇವೆ. ಬೆಳೆದಂತೆಲ್ಲಾ ಹೊರಗಡೆ ನೋಡುವ ವೈವಿಧ್ಯಮಯ ವಸ್ತುಗಳನ್ನು ತಾನೂ ಪಡೆಯಬೇಕೆಂದು ಹಠ ಮಾಡುತ್ತೇವೆ. ಕೊಡಿಸದಿದ್ದರೆ ಊಟ ಬಿಡುವುದು, ಮುನಿಸಿಕೊಳ್ಳುವುದು ಮಾಡಿರುತ್ತೇವೆ. ಹಿರಿಯರಾದ ಮೇಲೆ ಹೊರಗಡೆ ಓಡಾಡುವಂತಾದ ಮೇಲೆ ಅನೇಕ ವಿಷಯಗಳು ತಿಳಿದುಕೊಂಡು ಮನೆಗೆ ಬಂದು ಅಮ್ಮನ ಬಳಿ ಹೇಳಿದಾಗ ಅವಳು ಅದು ಹಾಗಲ್ಲ ಹೀಗೆ ಎಂದರೆ ಅವಳನ್ನು ಪೆದ್ದಿಯೆಂದು ತೀರ್ಮಾನಿಸುತ್ತೇವೆ. ಕಡೆಗೆ ಅವಳ ಮಾತು, ಉಡುಗೆ, ಭಾವನೆಗಳು ನಮಗೆ ಕೆಲವು ಸಾರಿ ಅಸಮಧಾನಪಡಿಸಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಏನೇ ಅಂದರೂ ಆ ಸಮಯಕ್ಕೆ ಬೇಸರಾದರೂ ಅವಳು ನಮಗೆ ನೋವಾಗಲಿ ಅಮ್ಮಾ ಎನ್ನಲು ಓಡಿಬರುತ್ತಾಳೆ. ಇದೇ ಮಣ್ಣಿನ ಗುಣದವಳೆನ್ನುವ ಕಾರಣ. ಆದರೆ ಅವಳ ಸಹನೆಗೂ ಒಂದು ಎಲ್ಲೆ ಇದೆ ಎಂದು ಮರೆಯಬಾರದು.
ಯಾರಾದರೂ ಪೆದ್ದರನ್ನುಗದರಿಸುವಾಗ ಉಪಮೆಯಾಗಿ ‘ನಿನ್ನ ತಲೆಯಲ್ಲಿ ಬುದ್ದಿಯಿಲ್ಲ ಬರೀ ಮಣ್ಣಿದೆ ’ ಎಂದು ಮೂದಲಿಸುವುದು ಸರ್ವೇಸಾಮಾನ್ಯ ವಾಕ್ಯವಾಗಿದೆ. ಆಗ ಕೇಳಿದವರಿಗೂ ಕೋಪವೋ , ನೋವೋ, ಅಸಮಾಧಾನವೋ ಆಗುವುದುಂಟು. ಅದರ ಗ್ಗೆ ಸ್ವಲ್ಪ ಯೋಚಿಸೋಣ ಬನ್ನಿ. ಮಣ್ಣು ಎಂದರೆ ನೆಲ, ಭೂಮಿ. ಈ ಭೂಮಿ ನಮಗೆ ಏನೇನು ಕೊಟ್ಟಿಲ್ಲ? ಯೋಚಿಸಿ. ನಾವು ಹುಟ್ಟುವಾಗಲೇ ಒಂದು ಹಿಡಿಮಣ್ಣಿನಿಂದ ಸೃಷ್ಠಿಯಾದ ನಾವು ಭೂಮಿಗಿಳಿದಾಗ ಹಿಡಿದ ಮುಷ್ಟಿಯಲ್ಲಿ ಸ್ವಲ್ಪ ಮಣ್ಣಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಅಲ್ಲಿಂದ ಪ್ರಾರಂಭವಾಗುವ ನಮ್ಮ ಬದುಕಲ್ಲಿ ನಡೆಯಲು ಕಲಿತಾಗ ಭೂಮಿಯನ್ನು ತುಳಿದು, ಅದರ ಒಡಲಲ್ಲಿ ಉಗುಳಿ, ಹೊಲಸು ಮಾಡುತ್ತೇವೆ. ಅದೆಂದೂ ಕೋಪಗೊಳ್ಳದು. ನಾವು ತಿನ್ನುವ ಆಹಾರ ತನ್ನೊಡಲಲ್ಲಿ ಬೆಳೆಸಿ ನಮಗಾಗಿ ಜೀವನಪೂರ್ತಿ ಕೊಡುತ್ತದೆ. ಒಡಲೊಳಗಿರುವ ಅಂತರ್ಜಲವನ್ನು ಅಮೃತವನ್ನಾಗಿ ಜೀವನಪೂರ್ತಿ ಕೊಡುತ್ತದೆ. ನಮಗೆ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ತನ್ನೊಡಲಲ್ಲಿ ಬೆಳೆದ ಮರಗಳಿಂದ ಇಡೀ ವಾತಾವರಣದಲ್ಲೆಲ್ಲಾ ಹರಡುತ್ತದೆ.
ತನ್ನ ಭೂಮಿಯಿಂದ ಮರಗಳಿಗೆ ಸತ್ವವಿತ್ತು ನಮಗೆ ಬೇಕಾದ ಫಲಗಳನ್ನು, ನೆರಳನ್ನು, ಕೊಡುತ್ತದೆ. ಭೂಮಿಯಲ್ಲಿ ಖನಿಜಗಳಾದ ಚಿನ್ನ , ಬೆಳ್ಳಿ, ತಾಮ್ರ, ಮ್ಯಾಂಗನೀಸ್, ಪೆಟ್ರೋಲಿಯಂ ಮುಂತಾದವನ್ನು ನೀಡಿ ಮನುಕುಲಕ್ಕೆ ಸಹಾಯಕವಾಗುತ್ತದೆ. ಆದರೆ ಮನುಷ್ಯ ಮಾತ್ರ ಈ ಭೂಮಿಯನ್ನು ವ್ಯಾಪಾರಕ್ಕೆ ತನ್ನ ಸ್ವಾರ್ಥಕ್ಕೆ ಹಂಚಿಕೆಮಾಡಿಕೊಂಡು ಇದು ನನ್ನದು, ನನ್ನದು ಎಂದು ಬೀಗುತ್ತಾನೆ. ಅದೇ ರೀತಿ ಭೂಮಿಯೇನಾದರೂ ಇದೆಲ್ಲಾ ನನ್ನದು ಎಂದು ತನ್ನೆಲ್ಲಾ ಸಂಪನ್ಮೂಲಗಳನ್ನು ತಡೆಹಿಡಿದು ಮಾನವನಿಗೆ ನೆರವಾಗದಿದ್ದರೆ ಮನುಷ್ಯ ಮನುಷ್ಯನಾಗಿ ಇರುತ್ತಿದ್ದನೇ? ಯೋಚಿಸಿ. ಈ ಭೂಮಿ ನಾವು ಕೊಟ್ಟ ನೋವುಗಳನ್ನು, ಅತ್ಯಾಚಾರಗಳನ್ನು ಸಹಿಸಿಕೊಂಡದ್ದಾಗಿದೆ. ಅವಳೊಡಲ ಗಿರಿಮೊಲೆಗಳಲ್ಲಿ ಹರಿವ ನದಿಹಾಲನ್ನು ಕುಡಿದ ಮನುಜನೇ ಅವಳ ಎದೆಯನ್ನು ಕಚ್ಚಿಗಾಯಮಾಡಿ, ತೊಡೆ ಕೊರೆದು ಪ್ಲೈಓವರ್ ಗಳಿಗಾಗಿ, ನೆಲ ಮಾರ್ಗಗಳಿಗಾಗಿ ಭೂಮಿ ಕೊರೆದರೆ ಅದು ಎಷ್ಟು ಸಹಿಸೀತು. ಅದರ ಫಲವೇ ಭೂಕಂಪ, ಜಲಪ್ರಳಯ ಮತ್ತು ಕೊರೋನಾದಂತಹ ಭೀಕರತೆಯೂ ಇರಬಹುದು. ಏನಂತೀರಿ?