ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದ ಪರಿಸ್ಥಿತಿ
ಬೆಳ್ಳಂಬೆಳಿಗ್ಗೆ ಮನೆಯಲ್ಲಿ ಯಾರದೋ ಜೋರುದನಿಯ ಮಾತುಗಳನ್ನು ಕೇಳಿ ನನಗೆ ಎಚ್ಚರವಾಯಿತು. ರಾತ್ರಿ ಜಯವಾಣಿ ಟೂರಿಂಗ್ ಟಾಕೀಸ್ ನಲ್ಲಿ ಮಯೂರ ಚಲನಚಿತ್ರವನ್ನು ನೋಡಿ ಮನೆಗೆ ಬಂದು ಮಲಗಿದಾಗ ಸಮಯ ರಾತ್ರಿ ಹನ್ನೆರಡನ್ನು ದಾಟಿತ್ತು. ಮಯೂರವರ್ಮನ ಗುಂಗಿನಲ್ಲಿಯೆ ದಿಂಬಿಗೆ ತಲೆಯಿಟ್ಟವನಿಗೆ ಯಾವಾಗ ನಿದ್ದೆ ಬಂತೋ ಗೊತ್ತಿರಲಿಲ್ಲ. ರಾತ್ರಿ ಆದ ಕಡಿಮೆ ನಿದ್ದೆಯ ಪರಿಣಾಮವೋ ಏನೋ ಕಣ್ಣುಗಳು ಉರಿಯುತ್ತಿದ್ದವು. ಬಹಳ ಕಷ್ಟಪಟ್ಟು ಕಣ್ಣುಗಳನ್ನು ತೆರೆದವನಿಗೆ ಗೋಡೆ ಮೇಲಿದ್ದ ಗಡಿಯಾರದ ಮುಳ್ಳು ಏಳರ ಆಸುಪಾಸಿನಲ್ಲಿ ಇದ್ದದ್ದು ಗೋಚರಿಸಿತು.
ಹಾಸಿಗೆಯಿಂದ ಎದ್ದು ತಡಬಡಿಸುತ್ತಾ ಕಟ್ಟೆಯ ಮೆಟ್ಟಲುಗಳನ್ನು ಇಳಿಯುತ್ತಾ ದನದ ಕೊಟ್ಟಿಗೆಯನ್ನು ದಾಟಿ ಮುಂಬಾಗಲಿಗೆ ಬಂದವನಿಗೆ ಜೋರುಮಾತುಗಳ ಮೂಲ ಯಾವುದು ಎನ್ನುವುದರ ಅರಿವು ಮೂಡಿತು. ಗೌಡರ ನೀಲಜ್ಜಿ ಹಾಗೂ ನನ್ನ ಅಜ್ಜಿ ಏರುದನಿಯಲ್ಲಿ ಪರಸ್ಪರ ಮಾತಾಡಿಕೊಳ್ಳುತ್ತಿದ್ದರು.
“ಏ ಗೌರಕ್ಕ, ಏನೇ ಆಗ್ಲಿ, ಈ ಹೊತ್ತು ನಿನ್ನ ಮೊಮ್ಮಗನನ್ನು ಮಠಕ್ಕೆ ಕಲಿಸಬೇಡ” ಎಂದು ನೀಲಜ್ಜಿ ನನ್ನ ಅವ್ವನಿಗೆ ತಾಕೀತು ಮಾಡುತ್ತಿದ್ದಳು. “ಇಲ್ಲ, ನನ್ನ ಮೊಮ್ಮಗ ಈ ಹೊತ್ತು ಮಠಕ್ಕೆ ಹೋಗೋದಿಲ್ಲ ಬಿಡು, ನೀ ಯದಾರ ಪಡಬೇಡ” ಎಂದು ನನ್ನ ಅವ್ವ ನೀಲಜ್ಜಿಗೆ ಸ್ವಾಂತನದ ದನಿಯಲ್ಲಿ ಅಭಯ ನೀಡಿದಳು. ನಾನು ಬಾಗಿಲಿಗೆ ಬಂದು ನಿಂತಿದ್ದನ್ನು ನೋಡಿದ ಅವ್ವ “ಹೋಗೋ, ಇಷ್ಟು ಬೇಗ ಏಕೆ ಎದ್ದಿದ್ದೀಯ, ರಾತ್ರಿ ಬೇರೆ ಲೇಟಾಗಿ ಮಲಗಿದ್ದೀಯ, ಹೋಗು, ಇನ್ನೂ ಸ್ವಲ್ಪ ಹೊತ್ತು ಮಲಗು” ಎಂದಳು.
ನನಗೆ ಆಶ್ಚರ್ಯವಾಯಿತು. ಶಾಲೆ ಇರುವ ದಿನಗಳಲ್ಲಿ ಏಳುತ್ತಿದ್ದ ಸಮಯದಲ್ಲಿಯೇ ಈ ಹೊತ್ತು ಎದ್ದಿದ್ದೀನೆ, ಅವ್ವ ಯಾಕೆ ಹೀಗೆ ಹೇಳುತ್ತಿದ್ದಾಳೆ? ಎಂದು ಅರಿವಾಗದೆ “ಅವ್ವಾ, ಈ ಹೊತ್ತು ಬುಧವಾರ, ಭಾನುವಾರ ಅಲ್ಲ, ಸ್ಕೂಲ್ ಇದೆ” ಎಂದೆ. “ನನಗೆ ಗೊತ್ತು ಕಣೋ, ನೀನು ಇವತ್ತು ಮಠಕ್ಕೆ ಹೋಗುವುದು ಬೇಡ, ಹೋಗಿ ಮಲಗಿಕೊ, ಆಮೇಲೆ ನಾನೇ ಎದ್ದೇಳಿಸುತ್ತೀನೆ” ಎಂದಳು. “ಗೌರಕ್ಕಾ, ನಾನು ಬರ್ತೀನಿ ಕಣವ್ವಾ, ಹುಷಾರು” ಎಂದು ಮನೆಯ ಹೊರಗಿನ ಚರಂಡಿ ಮೇಲೆ ಹಾಸಿದ ಚಪ್ಪಡಿ ಕಲ್ಲುಗಳ ಮೇಲೇ ನಿಂತು ಮಾತನಾಡುತ್ತಿದ್ದ ನೀಲಜ್ಜಿ ಹೊರಡಲನುವಾದರು. “ಇದೇನೆ, ಕಾಫಿ ಕುಡಿಯದೆ ಹೋಗ್ತಿದ್ದೀಯ, ಒಳಗೆ ಬಾ, ಒಂದು ನಿಮಿಷ, ಕಾಫಿ ಕುಡಿದು ಹೋಗುವಿಯಂತೆ” ಎಂದ ನನ್ನ ಅವ್ವನ ಮಾತನ್ನು ಕಿವಿಮೇಲೆ ಹಾಕಿಕೊಳ್ಳದೆ “ಇಲ್ಲ ಕಣವ್ವಾ, ನನಗೆ ಬಹಳ ಕೆಲ್ಸ ಇದೆ, ಇನ್ನೂ ಹತ್ತಾರು ಮನೆಗಳಿಗೆ ಹೋಗಬೇಕು. ಗೌಡ್ರ ಈಶಮ್ಮ, ಥಳಾಸ, ಕೋಟೆ, ದಿನ್ನೆ ಮೇಲಿನ ಮನೆಗಳು ಹೀಗೇ ಹೋಗಿ ಅವರಿವರನ್ನೂ ಎಚ್ಚರಿಸುವುದಿದೆ” ಎಂದು ಹೇಳುತ್ತಾ ಕೈಬೀಸಿ ಹೊರಟೇಬಿಟ್ಟರು. ಮನೆಗೆ ಬಂದು ಕಾಫಿ ಕುಡಿಯದೆ ಎಂದೂ ಹಾಗೆಯೇ ಹೋಗದಿದ್ದ ನೀಲಜ್ಜಿಯ ಇಂದಿನ ಆತುರ ನನ್ನ ಕುತೂಹಲವನ್ನು ಕೆಣಕಿತು.
“ಅವ್ವ, ನಾನು ಈ ಹೊತ್ತು ಸ್ಕೂಲ್ ಗೆ ಹೋಗಲೇಬೇಕು. ಇಲ್ಲದಿದ್ದರೆ ಮೇಷ್ಟ್ರು ಬೈತಾರೆ” ಎಂದೆ. “ಯಾರೋ ನಿಮ್ಮ ಮೇಷ್ಟ್ರು?” ಎಂದದಕ್ಕೆ “ಭಕ್ತಪ್ಪ ಮೇಷ್ಟ್ರು” ಎಂದು ಉತ್ತರ ಕೊಟ್ಟೆ. “ಕುರುಬರ ಭಕ್ತಪ್ಪನಾ, ಪರವಾಗಿಲ್ಲ ಬಿಡು, ನಾನು ಆತನಿಗೆ ಹೇಳುತ್ತೇನೆ” ಎಂದು ಅಜ್ಜಿ ನುಡಿದರು. ಭಕ್ತಪ್ಪ ಮೇಷ್ಟ್ರು ದಿನಕ್ಕೊಮ್ಮೆಯಾದರೂ ಬಸ್ ಸ್ಟ್ಯಾಂಡ್ ನಲ್ಲಿದ್ದ ಕುಂಬಾರ ಜಯಣ್ಣನ ಹೊಟೇಲಿನಲ್ಲಿ ಚಹಾಸೇವನೆಗೆಂದು ಬರುತ್ತಿದ್ದರು. ಅಜ್ಜಿಗೂ ಅವರು ಪರಿಚಿತರೇ. “ಹಾಗಲ್ಲ ಅವ್ವ, ನಾನು ಇವತ್ತು ಸ್ಕೂಲ್ ಗೆ ಹೋಗಲೇಬೇಕು, ಪ್ರಾಕ್ಟಿಕಲ್ಸ್ ಇದೆ” ಎಂದೆ. “ಏನೋ ಹಾಗಂದರೆ?” ಎಂದ ಅಜ್ಜಿಯ ಮಾತಿಗೆ ಇಷ್ಟವಿಲ್ಲದಿದ್ದರೂ ಉತ್ತರವನ್ನು ನೀಡಲೇಬೇಕಿತ್ತು. “ಅವ್ವ, ಇವತ್ತು ಸ್ಕೂಲ್ ನಲ್ಲಿ ನಾವು ಕಪ್ಪೆಯನ್ನು ಕೊಯ್ಯುತ್ತೇವೆ, ನಿನ್ನೆ ಕುಣಕಟ್ಟೆಯಲ್ಲಿ ಎರಡು ಕಪ್ಪೆಗಳನ್ನು ಹಿಡಿದು ಬಾಟಲಿನಲ್ಲಿ ತಂದು ಇಟ್ಟಿದ್ದೇನೆ, ನಾನು ಇದನ್ನು ಸ್ಕೂಲ್ ಗೆ ತೆಗೆದುಕೊಂಡು ಹೋಗದೇ ಇದ್ದರೆ ಮೇಷ್ಟ್ರು ಬಹಳ ಸಿಟ್ಟಾಗುತ್ತಾರೆ” ಎಂದೆ. “ಪರವಾಗಿಲ್ಲ, ಹೋಗೋ, ಆಗ್ಲೇ ಹೇಳಲಿಲ್ಲವಾ, ನಾನು ನಿಮ್ಮ ಮಠಕ್ಕೆ ಬೇಕಾದರೆ ಹೋಗಿ ಹೇಳಿಬರುತ್ತೇನೆ, ನೀನು ಇವತ್ತು ಮಠಕ್ಕೆ ಹೋಗಕೂಡದು ಎಂದರೆ ಹೋಗಕೂಡದು” ಎಂದು ಕಡ್ಡಿ ಮುರಿದಂತೆ ಹೇಳಿ ಮನೆ ಒಳಗಡೆ ನಡೆದರು. ಏನೊಂದೂ ಅರ್ಥವಾಗದ ನಾನು ಬಾಯಲ್ಲಿ ಬೆರಳು ಇಟ್ಟುಕೊಂಡು ಅಜ್ಜಿಯ ಮಾತಿಗೆ ಹೆಚ್ಚು ಗಮನಕೊಡದೆ ಬಾಟಲಿನಲ್ಲಿದ್ದ ಕಪ್ಪೆಗಳ ವೀಕ್ಷಣೆಯನ್ನು ಒಮ್ಮೆ ಮಾಡಿದವನಾಗಿ ಶಾಲೆಗೆ ಹೋಗುವ ಪೂರ್ವತಯಾರಿಗಳಲ್ಲಿ ತೊಡಗಿದೆ.
ಹಾಲು ಕುಡಿಯಲು ಅಡುಗೆ ಮನೆಗೆ ಬಂದವನಿಗೆ ಅಮ್ಮನ ಒಟ್ಟಿಗೆ ಮಾತಾಡುತ್ತಿದ್ದ ಅಜ್ಜಿಯ ದನಿ ಕೇಳಿಸಿತು. “ಇವತ್ತು ಪ್ರಕಾಶನನ್ನು ಮಠಕ್ಕೆ ಕಳುಹಿಸಬಾರದು, ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಾನೆ, ಆದರೆ ನಾವು ಅವನನ್ನು ಮಠಕ್ಕೆ ಹೋಗಲಿಕ್ಕೆ ಬಿಡಬಾರದು” ಎನ್ನುತ್ತಿದ್ದರು. ಇವತ್ತು ಮಾತ್ರವೋ ಅಥವಾ ನಾಳೆಯೂ ಕೂಡ ಸ್ಕೂಲ್ ಗೆ ಕಲಿಸದೇ ಇರಬೇಕೆ?” ಎನ್ನುವ ನನ್ನ ಅಮ್ಮನ ಪ್ರಶ್ನೆಗೆ ಅಜ್ಜಿಯಿಂದ ಬಂದ ಉತ್ತರ ನನಗೆ ದೊಡ್ಡ ಶಾಕ್ ನೀಡಿತ್ತು. “ನೋಡೋಣ, ಇವತ್ತು ಗೊತ್ತಾಗುತ್ತೆ, ಈ ಹೊತ್ತು ಹಾಸ್ಪಿಟಲ್ ನವರು ಮಠಕ್ಕೆ ಹೋಗದೇ ಇದ್ದರೆ ಇನ್ನೂ ಎರಡು ಮೂರು ದಿನ ಅವನು ಮಠಕ್ಕೆ ಹೋಗುವುದು ಬೇಡ. ಹಾಸ್ಪಿಟಲ್ ನವರು ಮಠಕ್ಕೆ ಬಂದು ಹೋದ ಮೇಲಷ್ಟೇ ಪ್ರಕಾಶ ಮಠಕ್ಕೆ ಹೋಗಲಿ” ಎಂದು ಹೇಳಿ ದನದ ಕೊಟ್ಟಿಗೆಯನ್ನು ಸ್ವಚ್ಚಮಾಡಲಿಕ್ಕೆ ತೆರಳಿದರು. ಇವರೇಕೆ ನನ್ನನ್ನು ಶಾಲೆಗೆ ಹೋಗುವುದರಿಂದ ತಡೆಯುತ್ತಿದ್ದಾರೆ ಎನ್ನುವುದರ ತಲೆಬುಡ ಅರ್ಥವಾಗದೆ ನಾನು ಪಿಳಿಪಿಳಿ ಕಣ್ಣು ಬಿಡುತ್ತಾ ಅಡುಗೆ ಮನೆ ಬಾಗಿಲ ತೋಳಿನುದ್ದಕ್ಕೂ ಕೈಚಾಚಿ ನಿಂತಿದ್ದೆ.
ಇನ್ನು ಇವತ್ತು ನಾನು ಸ್ಕೂಲ್ ಗೆ ಹೋಗುವುದು ಕಷ್ಟ ಎಂದು ಅರಿವಾದವನು ತಾತನ ಬಳಿಗೆ ಓಡಿದೆ. ನನ್ನ ಎಲ್ಲಾ ಸಮಸ್ಯೆಗಳಿಗೂ ಕೊನೆಯ ಉಪಾಯ ಎನ್ನುವಂತೆ ಮನೆಯಲ್ಲಿ ಇದ್ದವರು ಅವರೊಬ್ಬರೇ. “ತಾತ, ತಾತ ನಾನು ಇವತ್ತು ಸ್ಕೂಲ್ ಗೆ ಹೋಗಬಾರದಂತೆ, ಅವ್ವ ಹೇಳುತ್ತಿದ್ದಾಳೆ, ಇವತ್ತು ನನಗೆ ಬಹಳ ಮುಖ್ಯವಾದ ಪ್ರಾಕ್ಟಿಕಲ್ಸ್ ಇದೆ, ಹೋಗಲೇಬೇಕು” ಎಂದು ದುಂಬಾಲುಬಿದ್ದೆ. ತಾತನವರು ಅಜ್ಜಿಯನ್ನು ಕುರಿತು “ಏನಮ್ಮಾ, ಯಾಕೆ ಪ್ರಕಾಶ ಇವತ್ತು ಸ್ಕೂಲ್ ಗೆ ಹೋಗಬಾರದು? ಮನೆಯಲ್ಲಿದ್ದು ಅವನು ಮಾಡಬೇಕಾದ ಘನಂದಾರಿ ಕೆಲಸ ಏನಿದೆ?” ಎಂದು ಪ್ರಶ್ನಿಸಿದರು. ಆ ವೇಳೆಗಾಗಲೇ ದನದ ಕೊಠಡಿಯ ಕೆಲಸ ಮುಗಿಸಿ ಸೀರೆ ಸೆರಗಿಗೆ ಕೈಯನ್ನು ಒರೆಸುತ್ತಾ ಪಡಸಾಲೆಗೆ ಬಂದ ಅವ್ವ ನಾನು ತಾತನ ಬಳಿ ನಿಂತದ್ದನ್ನು ನೋಡಿಯೇ ನಡೆದಿರಬಹುದಾದ ಸಂಗತಿಯನ್ನು ಗ್ರಹಿಸಿದಳು. “ಅಡುಗೆ ಮನೆಗೆ ನಡೆಯೋ ನೀನು, ಹಾಲು ಕುಡಿ” ಎಂದು ಗದರಿಸುವಂತೆ ನುಡಿದು ತಾತನನ್ನು ಕುರಿತು “ಏನಂದಿರಿ?” ಎಂದು ಪ್ರಶ್ನಿಸಿದಳು. ಇನ್ನು ಇಲ್ಲಿ ನಾನು ನಿಲ್ಲುವುದು ಉಚಿತವಲ್ಲ ಎಂದು ಅರಿತವನು ಒಲ್ಲದ ಮನಸ್ಸಿನಲ್ಲಿಯೇ ಅಡುಗೆ ಮನೆ ಕಡೆಗೆ ಹೆಜ್ಜೆ ಹಾಕಿದೆ. ನಾನು ತಾತನ ಬಳಿಯೇ ಇದ್ದು ನಾನು ಇವತ್ತು ಶಾಲೆಗೆ ಹೋಗದೇ ಇರುವುದಕ್ಕೆ ಕಾರಣವೇನು? ಎಂದು ಅವ್ವ ತಾತನಿಗೆ ಹೇಳುವಾಗ ತಿಳಿದುಕೊಳ್ಳುವ ನನ್ನ ಕಾತುರ ಹಾಗೆಯೇ ಉಳಿಯಿತು.
ಇನ್ನೂ ಅರ್ಧ ಗ್ಲಾಸ್ ಹಾಲನ್ನು ಕುಡಿದಿದ್ದೆನೇನೋ, ತಾತ ಸೀದಾ ಅಡುಗೆ ಮನೆಗೆ ಬಂದವರು “ಪ್ರಕಾಶ, ಇವತ್ತು ನೀನು ಮಠಕ್ಕೆ ಹೋಗಬೇಡ” ಎಂದು ಹೇಳಿ ಸ್ನಾನಕ್ಕಾಗಿ ಬಚ್ಚಲಮನೆಗೆ ನಡೆದೇಬಿಟ್ಟರು. ನನ್ನ ತಾತ ಬಹಳ ಮೃದುಹೃದಯಿ. ಅವರೆಂದೂ ಕಠಿಣವಾಗಿ ಮಾತನಾಡಿದ್ದನ್ನು, ವರ್ತಿಸಿದ್ದನ್ನು ನಾನು ಕಂಡವನಲ್ಲ. ನನ್ನ ಮೇಲೆ ಪ್ರೀತಿ, ವಾತ್ಸಲ್ಯದ ಹೊಳೆಯನ್ನೇ ಹರಿಸುತ್ತಿದ್ದರು. ಆದರೂ ಇಂದು ನನ್ನನ್ನು ಕುರಿತು ಶಾಲೆಗೆ ಹೋಗಬೇಡ ಎಂದು ನುಡಿದ ಅವರ ಮಾತುಗಳಲ್ಲಿ ಹಿಂದೆಂದೂ ಕಾಣದ ಒಂದು ಆದೇಶ ತರಹದ ದನಿ ನನಗೆ ಮತ್ತಷ್ಟು ಆಶ್ಚರ್ಯವನ್ನು ತಂದಿತು. ಇದೇನಿದು? ಬೆಳಗಿನಿಂದ ನೋಡುತ್ತಿದ್ದೇನೆ, ಮನೆಮಂದಿಯ ವರ್ತನೆ ವಿಚಿತ್ರವಾಗಿಯೇ ಇದೆ. ಇವತ್ತು ಶಾಲೆಗೆ ಹೋಗಬೇಡ ಅಂತ ಎಲ್ಲರೂ ಹೇಳುತ್ತಿರುವರಲ್ಲದೆ ಕಾರಣವನ್ನ ಯಾರೂ ಹೇಳುತ್ತಿಲ್ಲವಲ್ಲ ಎಂದು ಅವಲತ್ತು ಪಟ್ಟುಕೊಂಡೆ.
ಅಂತೂ ಇಂತೂ ಆ ದಿನ ನಾನು ಶಾಲೆಗೆ ಹೋಗಲು ಮನೆಮಂದಿ ಬಿಡಲೇ ಇಲ್ಲ. ಇಡೀ ದಿನ ಮನೆಯಲ್ಲಿಯೇ ಕಾಲ ಕಳೆಯಬೇಕಾಗಿ ಬಂದದ್ದು ಬಹಳ ಬೇಸರ ತರಿಸಿತ್ತು. ಈ ಹೊತ್ತು ಕಪ್ಪೆ ಕೊಯ್ಯುತ್ತೇನೆ ಎಂದು ಹಾತೊರೆಯುತ್ತಿದ್ದವನು ಮನೆಯಲ್ಲಿಯೇ ಉಳಿದೆ. ಬಾಟಲಿಯಲ್ಲಿ ಹಾಕಿದ ಕಪ್ಪೆಗಳು ಏನಾಗಿದ್ದಾವೋ? ಎನ್ನುವ ಆತಂಕದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಕಪ್ಪೆಗಳನ್ನು ಇಟ್ಟಿದ್ದ ಬಾಟಲನ್ನು ಕಣ್ಣೆತ್ತರಕ್ಕೆ ತಂದು ನೋಡಿದ್ದೇ ನೋಡಿದ್ದು. ಆಹಾರವಿಲ್ಲದೆ ಕಪ್ಪೆಗಳು ಎಲ್ಲಿ ಸತ್ತು ಹೋಗುತ್ತವೋ ಎನ್ನುವ ಗಾಬರಿ ಬೇರೆ. ಕಪ್ಪೆಗಳಿಗೆ ಏನು ಆಹಾರ ಹಾಕಬೇಕು ಎನ್ನುವುದು ಗೊತ್ತಿಲ್ಲದ ಕಾರಣ ಕಾಲು ಸುಟ್ಟ ಬೆಕ್ಕಿನ ಹಾಗೆ ಅಡುಗೆ ಮನೆಯಿಂದ ಪಡಸಾಲೆಗೆ, ಪಡಸಾಲೆಯಿಂದ ಅಂಗಡಿ ಕಟ್ಟೆಗೆ ತಿರುಗುತ್ತಲೇ ಇದ್ದೆ. ಅವ್ವನನ್ನು ಕೇಳಿದ್ದರೆ ಕಪ್ಪೆಗಳ ಆಹಾರದ ಬಗ್ಗೆ ಏನಾದರೂ ಹೇಳಿರುತ್ತಿದ್ದಳೇನೋ. ಆದರೆ ಇವತ್ತಿನ ಎಲ್ಲಾ ಅನಿಷ್ಟಗಳಿಗೆ ಅವಳೇ ಕಾರಣ ಎಂದು ಮನಸ್ಸಿನಲ್ಲಿ ಮೂಡಿದ್ದರಿಂದ ಅಜ್ಜಿಯನ್ನು ಮಾತಾಡಿಸದೆ ಮುಗುಂ ಆಗಿಯೇ ಇದ್ದೆ.
ಮಧ್ಯಾಹ್ನ ಮೂರರ ವೇಳೆ ಅನ್ನಿಸುತ್ತೆ, ಬಡಗಿ ನಾಗರಾಜ ನನ್ನ ಮನೆಯ ಹತ್ತಿರ ಬಂದು “ಆಟ ಆಡುವುದಕ್ಕಾಗಿ ಸಾಮೀಲಿನ ಕಡೆಗೆ ಹೋಗೋಣವೆ?” ಎಂದು ಕರೆದ. ಮತ್ತೊಮ್ಮೆ ಆಶ್ಚರ್ಯಗೊಂಡ ನಾನು “ಯಾಕೆ ನಾಗರಾಜ, ಸ್ಕೂಲ್ ಗೆ ಹೋಗಲಿಲ್ಲವೆ?” ಎನ್ನುವ ನನ್ನ ಪ್ರಶ್ನೆಗೆ “ಇಲ್ಲ” ಎನ್ನುವಂತೆ ತಲೆಯಾಡಿಸಿದ. ಬೆಳಿಗ್ಗೆ ನಾನು ಶಾಲೆಗೆ ಹೊರಟವನನ್ನು ನಾಗರಾಜನ ತಾಯಿ ಈ ಹೊತ್ತು ನೀನು ಮಠಕ್ಕೆ ಹೋಗುವುದು ಬೇಡ ಎಂದು ತಡೆದಿದ್ದಳಂತೆ. ನನಗೆ ಈಗ ಸ್ವಲ್ಪ ಸಮಾಧಾನವಾಯಿತು. ಇವತ್ತು ಶಾಲೆಗೆ ಹೋಗದವನು ನಾನೊಬ್ಬನೇ ಅಲ್ಲ, ನಾಗರಾಜನೂ ಕೂಡ ಇವತ್ತು ಸ್ಕೂಲ್ ಗೆ ಹೋಗಿಲ್ಲ ಎನ್ನುವ ಸಂಗತಿ ವಿಚಿತ್ರ ನೆಮ್ಮದಿಗೆ ಕಾರಣವಾಯಿತು.
ನಮ್ಮ ಮನೆಯಿಂದ ಮಹಂತಾಚಾರಿಯ ಸಾಮೀಲಿಗೆ ಒಂದೆರೆಡು ಫರ್ಲಾಂಗ್ ಗಳ ಫಾಸಲೆ ಇದ್ದಿರಬಹುದು, ನಾಗರಾಜನೊಟ್ಟಿಗೆ ಹೆಚ್ಚೂ ಕಡಿಮೆ ಕುಣಿಯುತ್ತಲೇ ಸಾಮೀಲಿನ ಹಿಂಭಾಗದಲ್ಲಿ ಮರಗಳ ಬಡ್ಡೆಗಳನ್ನು ಹಾಕಿದ ನಮ್ಮ ಅಡ್ಡೆಗೆ ಬಂದೆವು. ಈ ಸ್ಥಳ ಸಾಯಂಕಾಲ ನಾವೆಲ್ಲಾ ಸ್ನೇಹಿತರೂ ಸೇರುವ ಸ್ಥಳ. ಗಂಟೆಗಟ್ಟಲೆಯ ಆಟ, ಹರಟೆ ಎಲ್ಲವೂ ಇಲ್ಲಿಯೇ ಆಗುತ್ತಿದ್ದದ್ದು. ನಾವು ಬರುವ ವೇಳೆಗಾಗಲೇ ಅಲ್ಲಿ ಸೇರಿದ್ದ ನನ್ನ ಎಂದಿನ ಸ್ನೇಹಿತರ ಸಮೂಹ ಕಂಡು ಮತ್ತೆ ಆಶ್ಚರ್ಯದ ಕೂಪಕ್ಕೆ ಬೀಳುವ ಸರದಿ ನನ್ನದಾಯಿತು. ಚಿದಾನಂದ, ಜಕಣಾಚಾರಿ, ರುದ್ರಮುನಿ, ಧನಂಜಯ, ಸತ್ಯಾನಂದ, ಹನುಮಂತ, ಯತಿರಾಜ, ತಿಪ್ಪೇಸ್ವಾಮಿ ಮುಂತಾದ ನನ್ನ ಸ್ನೇಹಿತರಬಳಗ ಈಗಾಗಲೇ ಅಲ್ಲಿ ಜಮಾವಣೆಗೊಂಡಿರುವುದನ್ನು ನೋಡಿ ಇವರ್ಯಾರೂ ಈ ಹೊತ್ತು ಶಾಲೆಗೆ ಹೋಗಿಲ್ಲ ಎನ್ನುವ ನಿರ್ಧಾರಕ್ಕೆ ಬಂದೆ. “ನೀವಿಬ್ಬರೂ ಸ್ಕೂಲ್ ಗೆ ಹೋಗಿದ್ದೀರೇನೋ ಎಂದು ನಾವೆಲ್ಲಾ ತಿಳಿದಿದ್ದೆವು” ಎನ್ನುವ ಚಿದಾನಂದನ ಮಾತಿಗೆ ನಾನು ಬೆಳಗಿನಿಂದ ನನ್ನ ಮನೆಯಲ್ಲಿ ಆದ ವಿಚಿತ್ರ ವರ್ತಮಾನಗಳನ್ನೆಲ್ಲಾ ಅರುಹಿದೆ. ನನ್ನ ಮಾತನ್ನು ಕೇಳಿದ ಚಿದಾನಂದ ಸ್ವಲ್ಪ ಸಮಾಧಾನಗೊಂಡವನಂತೆ ಕಂಡ. “ಚಿದಾನಂದ, ಅದು ಸರಿ, ಆದರೆ ಯಾಕೆ ನಮ್ಮ ಮನೆಯವರು ಇವತ್ತು ನಮ್ಮನ್ಯಾರನ್ನೂ ಶಾಲೆಗೆ ಕಳುಹಿಸಲಿಲ್ಲ” ಎಂದು ಪ್ರಶ್ನೆ ಮಾಡಿದೆ. ನನ್ನ ಈ ಪ್ರಶ್ನೆಯಿಂದ ಗಂಭೀರಮುಖ ಮಾಡಿದ ಚಿದಾನಂದ “ಅದು ಒಂದು ತುಂಬಾ ಗುಟ್ಟಾದ ವಿಷಯ. ನೀವು ಯಾರಲ್ಲಿಯೂ ಈ ಮಾತನ್ನು ಹೇಳುವುದಿಲ್ಲ ಎನ್ನುವ ಭಾಷೆಯನ್ನ ಕೊಟ್ಟರೆ ಮಾತ್ರ ನಿಮಗೆ ಈ ಗುಟ್ಟು ಹೇಳುತ್ತೇನೆ” ಎಂದು ಬಲಗೈ ಮುಂದೆ ಚಾಚಿದ. ಹಿಂದು-ಮುಂದೆ ನೋಡದೆ ಚಿದಾನಂದನ ತೆರೆದ ಹಸ್ತದ ಮೇಲೆ ನನ್ನ ಬಲಗೈಯನ್ನ ಹಾಕಿದ್ದೇ ತಡ, ಅಲ್ಲಿದ್ದ ಎಲ್ಲಾ ಮಿತ್ರರ ಕೈಗಳೂ ಕ್ಷಣಾರ್ಧದಲ್ಲಿ ನನ್ನ ಕೈಮೇಲೆ ಕೈಗೋಪುರವನ್ನು ನಿರ್ಮಿಸಿದ್ದವು. ಮುಂದೆ ಚಿದಾನಂದ ಹೇಳಿದ ವಿಷಯ ಕೇಳಿದ ನನಗೆ ಸಣ್ಣದಾಗಿ ಬೀಳುತ್ತಿದ್ದ ಮಳೆಗಾಲದ ತುಂತುರು ಮಳೆಹನಿಗಳ ಮಧ್ಯೆಯೂ ದೇಹದಲ್ಲಿ ಬೆವರು ಕಿತ್ತುಬರುವ ಹಾಗೆ ಆಗಿತ್ತು.
ವಿಷಯವೇನೆಂದರೆ, ಇವತ್ತಿನಿಂದ ಶಾಲೆಯಲ್ಲಿ ಲಸಿಕೆ ಹಾಕಲಿಕ್ಕೆ ಊರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಿಬ್ಬಂದಿ ಬರುವವರಿದ್ದರು. ಶಾಲಾ ಮಕ್ಕಳಾದ ನಮಗೆ ಇದೇನೂ ಹೊಸದಲ್ಲ. ಪ್ರತೀ ವರ್ಷ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಡಿಟಿಪಿ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಶಾಲೆಗೆ ಬರುತ್ತಿದ್ದರು. ಆದರೆ ಈ ಸಲ ಆರೋಗ್ಯ ಇಲಾಖೆ ಕೊಡುವ ಲಸಿಕೆ ಒಂದು ವಿಚಿತ್ರವಾದ ಭಯವನ್ನ ಪೋಷಕವರ್ಗದಲ್ಲಿ ಸೃಷ್ಟಿಸಿತ್ತು. ಹೇಳಿಕೇಳಿ ಅದು 1976ರ ಇಸವಿ,ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಲಾದ ಕರಾಳ ದಿನಗಳು ಅವು. ವಾಕ್ ಸ್ವಾತಂತ್ರ್ಯದ ಹರಣ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿತ್ತು. ನನ್ನೂರಿನ ಸುಮಾರು ಮೂವತ್ತಕ್ಕೂ ಮೀರಿದ ಸಂಖ್ಯೆಯ ಯುವಕರನ್ನು ತುರ್ತುಪರಿಸ್ಥಿತಿಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎನ್ನುವ ಕಾರಣಕ್ಕಾಗಿಯೆ ಚಿತ್ರದುರ್ಗದ ಸೆಂಟ್ರಲ್ ಜೈಲ್ ನಲ್ಲಿ ಕೈದು ಮಾಡಿದ್ದ ದಿನಗಳವು. ದಿನವೂ ಚಿತ್ರವಿಚಿತ್ರ ಸುದ್ದಿಗಳು ಮಿಂಚಿನಂತೆ ಜನಮಾನಸದಲ್ಲಿ ಹರಿದಾಡುತ್ತಿದ್ದ ಕಾಲಮಾನ ಅದು. ಇಂತಹ ಪರಿಸ್ಥಿತಿಯಲ್ಲಿ ಶಾಲಾಮಕ್ಕಳಿಗಾಗಿ ನಡೆಯಲಿರುವ ಲಸಿಕಾ ಕಾರ್ಯಕ್ರಮವೂ ಒಂದು ದೊಡ್ಡದಾದ ಗಾಳಿ ಸುದ್ದಿಗೆ ಗ್ರಾಸವಾಗಿತ್ತು. ಮಕ್ಕಳಿಗೆ ಡಿಟಿಪಿ ಲಸಿಕೆ ಬದಲಾಗಿ ಸಂತಾನಹರಣ ಚುಚ್ಚು ಮದ್ದನ್ನು ನೀಡುತ್ತಾರೆ ಎನ್ನುವ ಒಂದು ವ್ಯಾಪಕ ಅಪಪ್ರಚಾರ ಮೊದಲಾಗಿತ್ತು. ಇದು ನಮ್ಮ ಜಿಲ್ಲೆಯಾದ್ಯಂತ ಎಷ್ಟು ತೀವ್ರವಾಗಿ ಮತ್ತು ಗಾಢವಾಗಿ ಹರಡಿತ್ತು ಎಂದರೆ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸುವುದಕ್ಕೇ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೇಲಿನ ಭಯದ ವಾತಾವರಣ ತೀರಾ ಕಾರಣಗಳಿಲ್ಲದೆ ಹುಟ್ಟಿದ್ದೂ ಅಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ ಅತಿರೇಕ ಎನ್ನುವ ಮಟ್ಟದಲ್ಲಿ ಸಂತಾನನಿಯಂತ್ರಣ ಕ್ರಮಗಳನ್ನು ದೇಶದಲ್ಲಿ ತೆಗೆದುಕೊಳ್ಳಲಾಯಿತು. ದೆಹಲಿಯ ‘ತುರ್ಕುಮನ್ ಗೇಟ್ ‘ ಪ್ರಕರಣದ ನೆನಪು ಈ ಲೇಖನ ಓದುವ ವ ಕೆಲವರಲ್ಲಾದರೂ ತಾಜಾವಾದರೆ ಆಶ್ಚರ್ಯವಿಲ್ಲ. ವಿಶೇಷವಾಗಿ ಸಂತಾನನಿಯಂತ್ರಣದ ಹತ್ತು ಹಲವಾರು ಕಥಾನಕಗಳನ್ನು ಕೇಳಿದ್ದ ಗ್ರಾಮಾಂತರ ಪ್ರದೇಶದ ಮಂದಿ ಸಹಜವಾಗಿಯೇ ಚಿಂತಿತರಾಗಿದ್ದರು. ನಮ್ಮ ಜಿಲ್ಲೆಯಲ್ಲಿ ಈ ವಾರ ಶಾಲಾಮಕ್ಕಳಿಗೆ ಕೊಡಲಿರುವ ಲಸಿಕೆ ಸಂತಾನಹರಣದ ಲಸಿಕೆ ಎಂದೇ ಅವರಲ್ಲಿ ಬಹುತೇಕರು ನಂಬಿದ್ದರು. ಕೇಂದ್ರ ಸರ್ಕಾರ ಜನಸಂಖ್ಯಾ ಸ್ಫೋಟವನ್ನು ತಡೆಯುವುದಕ್ಕಾಗಿ ಚಿಕ್ಕಚಿಕ್ಕ ಮಕ್ಕಳಿಗೆ ಶಾಲೆಗೇ ಬಂದು ಸಂತಾನಹರಣ ಚುಚ್ಚು ಮದ್ದನ್ನು ನೀಡುತ್ತಾರೆ ಎನ್ನುವ ಕಾರಣಕ್ಕೋಸ್ಕರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಮನೆಯಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಇದು ಒಂದು ಸೂಕ್ಷ್ಮ ವಾದ ವಿಷಯವಾದ ಕಾರಣ ಆದಷ್ಟೂ ಮಕ್ಕಳ ಕಿವಿಗೆ ಬೀಳದಂತೆ ಎಚ್ಚರ ಕೂಡಾ ವಹಿಸಿದ್ದರು. ಆದರೆ ಚಿದಾನಂದ ಅದ್ಹೇಗೋ ತನ್ನ ಮನೆಯಲ್ಲಿ ನಡೆದ ಈ ಕುರಿತಾದ ಮಾತುಕತೆಗಳನ್ನು ಕೇಳಿಸಿಕೊಂಡು ಬಿಟ್ಟಿದ್ದ.
ಈ ವಿಷಯ ಅರಿತ ನಾವು ಎಳೆಯರು ಅಕ್ಷರಶಃ ಬೆದರಿದ್ದೆವು. ಸಂತಾನಹರಣದ ಬಗ್ಗೆ ಹೆಚ್ಚು ಏನನ್ನೂ ತಿಳಿಯದ ನಾವು ಪೋರರು ಸರ್ಕಾರ ಮಾತ್ರ ನಮಗೆ ಏನೋ ದೊಡ್ಡ ಆತಂಕವನ್ನು ತಂದು ಒಡ್ಡಲಿದೆ ಎಂದು ಮಾತ್ರ ಪರಿಭಾವಿಸಿದೆವು. ಆ ವಾರದಲ್ಲಿ ಮುಂದಿನ ಮೂರೂ ದಿನ ಶಾಲೆಗೆ ಚಕ್ಕರ್ ಹಾಕಿ ಮನೆಯಲ್ಲಿಯೇ ಉಳಿದೆವು. ಕಳೆದ ಎರಡು ದಿನಗಳ ಕಾಲ ಶಾಲೆಯ ಹಾಜರಾತಿ ಬಹಳ ಕಡಿಮೆ ಇದ್ದುದರಿಂದ ಶಾಲೆಗೆ ಈ ವಾರಪೂರ್ತಿ ಒಟ್ಟು ನಾಲ್ಕು ದಿನಗಳ ರಜಾ ಘೋಷಿಸಿದ ವಿಷಯವನ್ನು ಮರುದಿನ ಸಂಜೆ ನಾಯಕರ ಓಣಿಯಲ್ಲಿದ್ದ ಜವಾನ ತಮ್ಮಯ್ಯನ ಮನೆಗೆ ಹೋಗಿ ಕೇಳಿ ತಿಳಿದಿದ್ದೆವು. ಕಪ್ಪೆಗಳು ಇನ್ನೇನು ಸತ್ತೇ ಹೋಗುತ್ತವೆ ಎಂದು ಅರಿತ ನಾನು ಗುರುವಾರ ಸಾಯಂಕಾಲದ ವೇಳೆಗೆ ಕಪ್ಪೆಗಳಿಗೆ ಮನೆ ಮುಂದಿನ ಚರಂಡಿಯಲ್ಲಿ ಮುಕ್ತಿ ನೀಡಿದೆ.
ಮುಂದಿನ ಸೋಮವಾರ ಯಥಾಪ್ರಕಾರ ಸ್ಕೂಲ್ ಆರಂಭವಾಗಿ ತರಗತಿಗಳು ನಡೆದ ಕಾರಣದಿಂದಾಗಿ ಬಹಳ ಶೀಘ್ರದಲ್ಲಿಯೇ ಲಸಿಕಾ ಪ್ರಸಂಗವನ್ನ ಪೋಷಕರೂ ಸೇರಿದಂತೆ ಮಕ್ಕಳೆಲ್ಲಾ ಮರೆತೆವು.
ಮೇಲಿನ ಸಂಗತಿ ಘಟಿಸಿ ಹೆಚ್ಚೂ ಕಡಿಮೆ ಮೂರು ವಾರಗಳೇ ಆಗಿರಬೇಕು. ನಮಗೆ ವರ್ಕ್ ಎಕ್ಸ್ಪೀರಿಯೆನ್ಸ್ ಎನ್ನುವ ತರಗತಿ ನಡೆಯುತ್ತಾ ಇತ್ತು. ವಿದ್ಯಾರ್ಥಿಗಳಾದ ನಾವೆಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ನಿರತವಾಗಿರುವ ವೇಳೆಗೆ ಸರಿಯಾಗಿ ಶಾಲೆಯ ಮುಂದೆ ಒಂದು ದೊಡ್ಡ ಬಿಳಿ ಆಂಬುಲೆನ್ಸ್ ಗಾಡಿ ಮತ್ತು ಅದರ ಹಿಂದೆ ಒಂದು ನೀಲಿ ಪೊಲೀಸ್ ವ್ಯಾನ್ ಬಂದು ನಿಂತವು. ಆಂಬುಲೆನ್ಸ್ ನಿಂದ ಇಳಿದ ಮೂರು ನಾಲ್ಕು ನರ್ಸ್ ಗಳು ಗಡಿಬಿಡಿಯಲ್ಲಿ ಮುಖ್ಯೋಪಾಧ್ಯಾಯರ ಕೋಣೆಗೆ ಹೋದರು ಮತ್ತು ಎಂಟು ಮಂದಿಯಷ್ಟಿದ್ದ ಪೊಲೀಸರು ಅವರನ್ನು ಹಿಂಬಾಲಿಸಿದರು. ತಮ್ಮಯ್ಯ ಒಂದೊಂದಾಗಿ ಎಲ್ಲಾ ತರಗತಿಯ ಬಾಗಿಲನ್ನು ಮುಂದೆ ಮಾಡಿ ಚಿಲಕ ಹಾಕಿ ಭದ್ರಮಾಡಿದ. ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಎಂದು ಕಣ್ ಕಣ್ ಬಿಡುತ್ತಿದ್ದ ನಮ್ಮನ್ನು ಒಂದು ತರಗತಿಯ ಹಿಂದೆ ಮತ್ತೊಂದು ತರಗತಿಯಂತೆ ಸಾಲಾಗಿ ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಹೋದವರಿಗೆ ಡಾ. ಮೀಠಾನಾಯ್ಕ್ ಎನ್ನುವ ನಮ್ಮೂರಿನ ಡಾಕ್ಟರ್ ಲಸಿಕೆಯನ್ನ ಕೊಡುವ ಕಾರಣಗಳನ್ನು ಮತ್ತು ಅದರಿಂದಾಗುವ ಪರಿಣಾಮಗಳನ್ನು ವಿವರವಾಗಿ ಕೊಡುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾವಧಾನವಾಗಿ ಲಸಿಕೆ ಕೊಡುವ ಕಾರ್ಯಕ್ರಮ ಸಾಂಗವಾಗಿ ನೆರವೇರಿಸಲ್ಪಟ್ಟಿತು. ಲಸಿಕೆ ಕೊಟ್ಟವರಿಗೆ ಒಂದು ಬಿಸ್ಕಟ್ ಪೊಟ್ಟಣ ಮತ್ತು ಒಂದು ಉದ್ದದ ಚಾಕೊಲೇಟ್ ಬಾರ್ ನೀಡಿ ಕಳುಹಿಸಲಾಗುತ್ತಿತ್ತು.
ತರಗತಿಗೆ ಮರಳಿ ಬಂದವರು ತಮ್ಮ ಸ್ಕೂಲ್ ಬ್ಯಾಗ್ ಗಳನ್ನ ತೆಗೆದುಕೊಂಡು ಸೀದಾ ಮನೆಗೆ ಹೋಗುವಂತೆ ನಿರ್ದೇಶಿಸಲಾಯಿತು. ಅಲ್ಲದೆ ನಾಳೆ ಸ್ಕೂಲ್ ಗೆ ರಜಾ ಇರುವ ಘೋಷಣೆಯನ್ನೂ ಮಾಡಲಾಯಿತು. ಸ್ಕೂಲ್ ಬ್ಯಾಗ್ ನ್ನು ಹೆಗಲಿಗೆ ಏರಿಸಿಕೊಂಡವನು “ನಾಳೆ ರಜಾ, ಕೋಳಿ ಮಜಾ” ಎಂದು ಕೂಗುತ್ತಾ ಮನೆಗೆ ದೌಡಾಯಿಸಿದೆ. ಮನೆಯ ಮೂಲೆಯೊಂದಕ್ಕೆ ಬ್ಯಾಗ್ ಎಸೆದವನು ಬ್ಯಾಗ್ ಒಳಗಿನ ಬಿಸ್ಕತ್ ಪೊಟ್ಟಣ ಮತ್ತು ಚಾಕಲೇಟ್ ಬಾರ್ ಗಳನ್ನ ಹೊರತೆಗೆದು ಜತನವಾಗಿ ಹಿಡಿದು ನನ್ನ ನಿತ್ಯ ಅಡ್ಡಾಕ್ಕೆ ಹೋಗಲಿಕ್ಕೆ ಪಡಸಾಲೆಯಿಂದ ಮೂಂಬಾಗಲಿಗೆ ಒಂದೇ ನೆಗೆತದಲ್ಲಿ ಹಾರಿದ್ದೆನು.
ಅಂದು ಹೊಲದಿಂದ ತುಸು ಬೇಗನೇ ಬಂದಂತಿದ್ದ ಅವ್ವ “ಏನೋ, ಏನಾಯ್ತು? ಇವತ್ತು ಶಾಲೆಯಲ್ಲಿ ಲಸಿಕೆ ಕೊಟ್ಟರಂತೆ, ಹೌದಾ” ಎನ್ನುವ ಆತಂಕಭರಿತ ಮುಖದಲ್ಲಿ ಪ್ರಶ್ನಿಸಿದಳು. ಕೈಯಲ್ಲಿದ್ದ ಬಿಸ್ಕತ್ ಪೊಟ್ಟಣವನ್ನು ಅವರ ಮುಖದ ಬಳಿಗೆ ಕೊಂಡೋಯ್ದವನು “ಹೌದು” ಎನ್ನುವ ಉತ್ತರ ನೀಡಿದ್ದೆ. ಅವ್ವನಿಗೆ ಅದೇನೆನಿಸಿತೋ, ತನ್ನ ತಲೆಯ ಮೇಲಿನ ಹುಲ್ಲಿನ ಹೊರೆಯನ್ನು ಕೆಳಕ್ಕೆ ಎಸೆದು ನನ್ನನ್ನು ಬರಸೆಳೆದು ಗಟ್ಟಿಯಾಗಿ ತಬ್ಬಿಕೊಂಡು ಗೋಳೋ ಎಂದು ಅಳಲಿಕ್ಕೆ ಮೊದಲಿಟ್ಟಳು. “ನಮ್ಮ ವಂಶವನ್ನು ನಿರ್ವಂಶ ಮಾಡಿದರಲ್ಲೋ, ನಿಮ್ಮ ವಂಶ ನಿರ್ವಂಶವಾಗ, ನಿಮ್ಮ ಕೈಯನ್ನು ಕರಿನಾಗ ಕಚ್ಚಾ” ಎನ್ನುವ ಅಜ್ಜಿಯ ಆಕ್ರಂದನಕ್ಕೆ ಹಲವು ದಾರಿಹೋಕರು ಬಂದು ಮನೆಯ ಮುಂದೆ ಗುಂಪುಗೂಡಿದರು. ಸಾಮೀಲಿನ ಗೆಳೆಯರ ಗುಂಪನ್ನು ಸೇರಿಕೊಳ್ಳಲು ತಡವಾಗುತ್ತಿದೆ ಎನ್ನುವ ಆತಂಕದಲ್ಲಿದ್ದ ನಾನು ಹೇಗಾದರೂ ಮಾಡಿ ಅಜ್ಜಿಯ ಸೆರೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಚಡಪಡಿಸುತ್ತಿದ್ದೆ. ನೀರಿನಲ್ಲಿ ಮುಳುಗುವವನಿಗೆ ಒಂದು ಹುಲ್ಲುಕಡ್ಡಿ ದೊರೆತಂತಾಯಿತು. ನೀಲಜ್ಜಿ ನಮ್ಮ ಮನೆಯ ಗೇಟನ್ನು ದಾಟಿ ಒಳಬಂದವರೇ “ಗೌರಾ” ಎನ್ನುತ್ತಾ ದೊಡ್ಡದನಿಯಲ್ಲಿ ಆಕ್ರಂದನವನ್ನು ಹೊರತೆಗೆದರು. ನೀಲಜ್ಜಿಯ ದನಿ ಕೇಳಿದ ಅವ್ವ ನನ್ನ ಮೈಮೇಲಿನ ಹಿಡಿತವನ್ನು ಸಡಿಲಗೊಳಿಸಿ ನೀಲಜ್ಜಿ ಕಡೆಗೆ ಹೊರಳಿದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಾನು “ಬದುಕಿದೆಯಾ ಬಡ ಜೀವವೇ” ಎಂದು ಚಂಗನೆ ರಸ್ತೆಗೆ ನೆಗೆದು ಸಾಮೀಲಿನ ಕಡೆಗೆ ದೌಡಾಯಿಸಿದೆ. ಎರಡೂ ಮುದಿ ಜೀವಗಳು ಸೇರಿ ಮಾಡುತ್ತಿದ್ದ ಕರುಳು ಕೀಳುವಂತಹ ಆಕ್ರಂದನ ಸಾಮೀಲು ಮುಟ್ಟುವ ತುಸು ಮೊದಲವರೆಗೂ ನನಗೆ ಕೇಳಿಬರುತ್ತಿತ್ತು.