ಗೌಡ್ರ ಕುಡಿ ವಿಧಾನ ಪರಿಷತ್ ಎಂಟ್ರಿ

Share

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುಡಿ, ಎಚ್.ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಗೌಡರ ಮನೆ ಮಗನೊಬ್ಬ ಎಂಎಲ್‌ಸಿ ಆಗುತ್ತಿರುವುದು ಇದೇ ಮೊದಲು. ದೇವೇಗೌಡರು ರಾಜ್ಯಸಭೆ ಸದಸ್ಯರು. ಅವರ ಇಬ್ಬರು ಮಕ್ಕಳಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ವಿಧಾನ ಸಭೆ ಸದಸ್ಯರು. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯತ್ ಸದಸ್ಯರು. ರೇವಣ್ಣ ಮತ್ತು ಭವಾನಿ ಅವರ ಮೊದಲ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ. ಇನ್ನೊಬ್ಬ ಮಗ ವೈದ್ಯಕೀಯ ಪದವೀಧರ ಸೂರಜ್ ರೇವಣ್ಣ ವಿಧಾನ ಪರಿಷತ್ ಮೂಲಕ ಸಾಮಾಜಿಕ ಸಮಸ್ಯೆಗೆ ಏನೆಲ್ಲ ಮದ್ದು ತರುತ್ತಾರೋ…? ನೋಡೋಣ.

ಗೌಡ್ರ ಕುಡಿ ವಿಧಾನ ಪರಿಷತ್ ಎಂಟ್ರಿ

ಜಾತ್ಯತೀತ ಜನತಾ ದಳದ ಸರ್ವೋಚ್ಚ ನಾಯಕ ಎಚ್.ಡಿ. ದೇವೇಗೌಡರು ಇದೀಗ ಮೊಮ್ಮಗ ಸೂರಜ್ ರೇವಣ್ಣ ರೂಪದಲ್ಲಿ ಇದೇ ಮೊದಲಬಾರಿಗೆ ವಿಧಾನ ಪರಿಷತ್ತನ್ನು ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ ದ್ವಿಸದನ ವ್ಯವಸ್ಥೆಯುಳ್ಳ ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಒಂದು. ವಿಧಾನ ಸಭೆಗಿಂತ ಹೆಚ್ಚಿನ ಸೇವಾವಧಿಯ ಇತಿಹಾಸ ನಮ್ಮ ವಿಧಾನ ಪರಿಷತ್ತಿಗೆ ಇದೆ. ಈ ಸಭೆಗೆ ದೇವೇಗೌಡರ ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು ಆಯ್ಕೆಯಾದ ಉದಾಹರಣೆ ಹೇರಳವಾಗಿದೆ. ಆದರೆ ಗೌಡರ ಕುಟುಂಬದ ಕುಡಿಯೊಂದು ಪರಿಷತ್‌ನ ಒಳಗೆ ಬಂದು ಅಧಿಕೃತ ಕಲಾಪದಲ್ಲಿ ಪಾಲ್ಗೊಂಡ ನಿದರ್ಶನ ಇರಲಿಲ್ಲ. ಈಗ ಸೂರಜ್ ರೇವಣ್ಣ, ಅಜ್ಜನ ಮತ್ತೊಂದು ಎನ್ನಬಹುದಾದ ಆ ಕನಸನ್ನು ನನಸಾಗಿಸಿದ್ದಾರೆ.
ಪ್ರಸ್ತುತ ಗೌಡರು ರಾಜ್ಯಸಭೆಯಲ್ಲಿ ಸದಸ್ಯರು. ಮಕ್ಕಳಾದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ವಿಧಾನ ಸಭೆ ಸದಸ್ಯರು. ರೇವಣ್ಣ ಅವರ ಹಿರಿಯ ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಸದಸ್ಯರು. ಇದೀಗ ಇನ್ನೊಬ್ಬ ಮಗ ಡಾ. ಸೂರಜ್ ರೇವಣ್ಣ ಎಂಎಲ್‌ಸಿ ಆಗಿದ್ದಾರೆ. ಭವಾನಿ ರೇವಣ್ಣ ಹಾಸನ ಜಿಲ್ಲಾ ಪರಿಷತ್ ಸದಸ್ಯೆ. ಪಕ್ಷದ ಒಳ ಹೊರಗನ್ನು ಬಲ್ಲವರ ಪ್ರಕಾರ ಹಾಸನ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮಗ ಸೂರಜ್ ಪ್ರಚಂಡ ಬಹುಮತದಿಂದ ಗೆಲ್ಲುವುದಕ್ಕೆ ಅಗತ್ಯವಿದ್ದ ಕಾರ್ಯತಂತ್ರವನ್ನು ಯೋಜಿಸಿ, ಕಾರ್ಯರೂಪಕ್ಕೆ ತಂದವರು ಸ್ವತಃ ತಾಯಿ ಭವಾನಿ ರೇವಣ್ಣನವರೇ!


ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರ ಬಹುನಿರೀಕ್ಷಿತ ಜಯ ಅಂಬರೀಷ್ ಅಲೆಯಲ್ಲಿ ಕೊಚ್ಚಿಹೋಯಿತು. ಹಾಗೇನಾದರೂ ಆಗದೆ ನಿಖಿಲ್ ಗೆದ್ದಿದ್ದರೆ ಅದು ಗೌಡರನ್ನು ಖುಷಿಯ ಉತ್ತುಂಗಕ್ಕೆ ಒಯ್ಯುತ್ತಿತ್ತು ಎನ್ನುವುದು ಸುಳ್ಳಲ್ಲ. ಆದರೆ ಆಕಸ್ಮಿಕದಲ್ಲಿ ಎಲ್ಲೋ ಏನೋ ಎಡವಟ್ಟಾಗಿ ಹೋಗುತ್ತದೆ. ನಿರೀಕ್ಷೆ ತಲೆ ಕೆಳಗಾಗುತ್ತದೆ. ಹಾಗಾಗಿ ಸದ್ಯಕ್ಕೆ ನಿಖಿಲ್ ಸಾಂವೈಧಾನಿಕ ವೇದಿಕೆಗಳಿಂದ ಹೊರಗೇ ಇರುವಂತಾಗಿದೆ. ಮರಳಿ ಯತ್ನವ ಮಾಡು ಎನ್ನುವುದು ಲೋಕಾರೂಡಿಯ ಮಾತು. ಇನ್ನೂ ಚಿಕ್ಕ ವಯಸ್ಸಿನಲ್ಲಿರುವ ನಿಖಿಲ್ ಅವರ ಮುಂದೆ ರಾಜಕೀಯ ಅವಕಾಶಗಳ ಮಹಾಪೂರವೇ ಇದೆ. ಮೊಮ್ಮಗ ನಿಖಿಲ್ ಎಲ್ಲಿ ಕೂರಬೇಕೆಂದು ಗೌಡರು ಬಯಸಿದ್ದಾರೋ ಆ ಬಯಕೆ ಈಡೇರುತ್ತದೆ. ಕಾಲವೂ ಕಾಯುತ್ತದೆ, ಗೌಡರು ಕಾದು ಅದನ್ನು ನೋಡುತ್ತಾರೆ. ಅನುಮಾನ ಬೇಡ.
ನಾಳೆಯ ಗರ್ಭದಲ್ಲಿ ಏನೂ ಇರಬಹುದು. ಆದರೆ ೨೦೧೯ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ಗಾದ ಸೋಲಿನ ಗಾಯ ಮಾತ್ರ ಗೌಡರ ಕುಟುಂಬದಲ್ಲಿ ಇನ್ನೂ ಮಾಸಿಲ್ಲ. ಕುಮಾರಸ್ವಾಮಿ ದಂಪತಿಯ ಪಾಲಿಗೆ ಆ ಸೋಲು ನಿತ್ಯ ಸಂಕಟಕ್ಕೆ ಕಾರಣ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಗೌಡರೇ ಸೋತಿದ್ದು ಆ ಕುಟುಂಬಕ್ಕೆ ಇನ್ನೂ ದೊಡ್ಡ ಅಘಾತ. ಮಂಡ್ಯದಲ್ಲಿ ಇಂದಲ್ಲ ನಾಳೆ ಮೊಮ್ಮಗ ಗೆಲ್ಲಬೇಕೆನ್ನುವುದು ಗೌಡರ ಆಸೆ. ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಪ್ರತಿ ಬಾರಿಯೂ ಚುನಾವಣೆಯಲ್ಲಿ ಗೆದ್ದಾಗಲೂ ಸೈ ಸೋತಾಗಲೂ ಸೈ ಗೌಡರು ಹೇಳಿಕೊಂಡು ಬರುತ್ತಿರುವುದಕ್ಕೆ ದಶಕಗಳ ಇತಿಹಾಸವೆ ಇದೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಗೌಡರು ಹೇಳುವಾಗಲೆಲ್ಲ ಅದನ್ನು ಯಾರೂ ನಂಬುವುದಿಲ್ಲ. ಯಾರೆಲ್ಲರ ಮಾತ್ಯಾಕೆ…? ಸ್ವತಃ ಗೌಡರಿಗೇ ತಮ್ಮ ಮಾತಿನಲ್ಲಿ ವಿಶ್ವಾಸ ಇರುವುದಿಲ್ಲ. ಇದೀಗ ಫಲಿತಾಂಶ ಪ್ರಕಟವಾಗಿರುವ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆಂದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತಾವು ಪುನಃ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಅಂದರೆ ಇದೇ ಕೊನೆಯ ಚುನಾವಣೆ ಎಂದು ಆಗ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮತದಾರರಿಗೆ ಹೇಳಿ ಓಟು ಗಳಿಸುವ ಯತ್ನ ಅವರು ಮಾಡಲಿದ್ದಾರೆ.


ತುಮಕೂರು ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಏನೇನು ಕಾರಣ, ಯಾರೆಲ್ಲ ಕಾರಣ ಎನ್ನುವುದನ್ನು ಗೌಡರು ತಿಳಿದುಕೊಂಡಿದ್ದಾರೆ. ಆಗ ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿತ್ತು. ಆ ಮೈತ್ರಿಯ ಭಾಗವಾಗಿ ತುಮಕೂರು ಕ್ಷೇತ್ರವನ್ನು ಗೌಡರಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಇದಕ್ಕೂ ಪೂರ್ವದ ಚುನಾವಣೆಯಲ್ಲಿ ಕಾಂಗ್ರೆಸ್ಸು ಅಲ್ಲಿ ಗೆದ್ದಿತ್ತು. ಕಾಂಗ್ರೆಸ್‌ನ ಮುದ್ದುಹನುಮೇಗೌಡರು ಗೆದ್ದ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ಆ ಪಕ್ಷದೊಳಗೆ ತೀವ್ರ ವಿರೋಧವಿದ್ದರೂ ಹೈಕಮಾಂಡ್ ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಕ್ಷೇತ್ರದಲ್ಲಿ ಕ್ರಿಯಾಶೀಲರಾಗಬೇಕಿದ್ದ ಕಾಂಗ್ರೆಸ್‌ನ ಅನೇಕ ಮುಖಂಡರು ಅಸಂಖ್ಯ ಕಾರ್ಯಕರ್ತರು ಗೌಡರ ಗೆಲುವಿಗೆ ಕೆಲಸ ಮಾಡಬೇಕಾದ ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಂಡು ಮನೆಯಲ್ಲಿ ಮೂಲೆಹಿಡಿದು ಕೂತರು. ಗೌಡರ ಪಾಳಯದಲ್ಲಿ ಗೆಲುವು ನಮ್ಮದೇ ಎಂಬ ಅತಿಯಾದ ಆತ್ಮವಿಶ್ವಾಸ ಮೂಡಿ ಅಂತಿಮವಾಗಿ ಬಿಜೆಪಿ ಅಲ್ಲಿ ಜಯ ಗಳಿಸಿತು. ಕಳೆದು ಕೊಂಡಲ್ಲಿಯೇ ಕಳೆದುಕೋಂಡಿದ್ದನ್ನು ಹುಡುಕಬೇಕು ಎನ್ನುವುದು ನೀತಿ ವಾಕ್ಯ. ತುಮಕೂರು ಕ್ಷೇತ್ರದಲ್ಲಿ ತಾವು ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲಿಯೇ ಹುಡುಕುವ ಗೌಡರ ಯತ್ನವೇ ಮುಂದಿನ ಚುನಾವಣೆಯಲ್ಲಿ ಮತ್ತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವ ಪ್ರಕಟಣೆ!
ದೇವೇಗೌಡರು ಪ್ರಧಾನಿಯಾಗುವ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಅಂದಿದ್ದ ತೃತೀಯ ರಂಗದ ಪಿಎಂ ಅಭ್ಯರ್ಥಿಯಾಗಿ ದೇವೇಗೌಡರ ಹೆಸರು ಹೊರ ಬಿದ್ದ ಮರು ಕ್ಷಣದಲ್ಲಿಯೆ ಗೌಡರು ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗೌಡರು ಸಂಸತ್‌ನ ಸದಸ್ಯರಾಗಿ ಬರುವುದಕ್ಕೆ ಆರು ತಿಂಗಳ ಗಡುವು ಇತ್ತು. ಲೋಕಸಭೆಯ ಹಾಲಿ ಸದಸ್ಯರೊಬ್ಬರ ರಾಜೀನಾಮೆ ಕೊಡಿಸಿ ಅಲ್ಲಿ ಉಪ ಚುನಾವಣೆ ನಡೆಯುವಂತೆ ಮಾಡಿ ಗೌಡರು ಅಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗಿತ್ತು. ಆ ಸಮಯದಲ್ಲಿ ಕರ್ನಾಟಕದಿಂದ ಹದಿನಾರು ಜನ ಜನತಾ ದಳದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಒಂದು ಸೀಟನ್ನು ನಮ್ಮ ರಾಜ್ಯದವರೇ ಆದ ಪ್ರಧಾನಿಗಾಗಿ ತ್ಯಾಗ ಮಾಡಲು ಕೆಲವರು ಸಿದ್ಧರಿದ್ದರು. ಆದರೆ ಚುನಾವಣಾ ಗೆಲುವು ಸುಲಭದ ಮಾರ್ಗವಲ್ಲ ರಿಸ್ಕ್ ಜಾಸ್ತಿ ಎನ್ನುವ ಲೆಕ್ಕಾಚಾರದಲ್ಲಿ ಮೈಕೈ ನೋವಿಲ್ಲದ ರೀತಿಯಲ್ಲಿ ರಾಜ್ಯಸಭೆಗೆ ಹೋಗುವುದು ಗೌಡರ ಒಳಮನಸ್ಸಾಗಿತ್ತು. ಪಕ್ಷದಲ್ಲಿ ಅದು ಬಹಿರಂಗವಾಗಿ ಚರ್ಚೆಯೂ ಆಗಿತ್ತು. ಗೌಡರು ಪ್ರಧಾನಿಯಾದರು. ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಸಿಪಿಐ ನಾಯಕ ಚತುರಾನನ ಮಿಶ್ರಾ ಬೆಂಗಳೂರಿಗೆ ಬಂದಿದ್ದರು. ಮಾಧ್ಯಮ ಗೋಷ್ಟಿಯಲ್ಲಿ ಗೌಡರ ರಾಜ್ಯಸಭೆ ಪ್ರವೇಶ ಕುರಿತ ಪ್ರಸ್ತಾಪ ಬಂದಾಗ ಮಿಶ್ರಾ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಗೌಡರು ರಾಜ್ಯಸಭೆಗೆ ಬರುವುದೆಂದರೆ ಸಂಸತ್ತನ್ನು ಹಿಂಬಾಗಿಲಿನಿಂದ ಪ್ರವೇಶಿಸಿದಂತಾಗುತ್ತದೆ ಎಂದು ಟೀಕಿಸಿದ್ದ ಮಿಶ್ರಾ, ಗೌಡರು ಜನರಿಂದ ಆಯ್ಕೆಯಾಗಿ ಬಂದಾಗ ಮಾತ್ರವೇ ಆ ಸ್ಥಾನಕ್ಕೆ ಗೌರವ ಎಂದು ಸಲಹೆ ಮಾಡಿದ್ದರು. ಗೌಡರು ರಾಜ್ಯಸಭೆಗೆ ಹೋಗುವ ಯೋಚನೆ ಕೈಬಿಟ್ಟು ಲೋಕಸಭೆಗೆ ಆಯ್ಕೆಯಾಗಿ ಹೋದರು. ಆದರೆ ಅವರು ಹೊಂದಿದ್ದ ಪ್ರಧಾನಿ ಪಟ್ಟ ವರ್ಷದಲ್ಲೆ ಕೈತಪ್ಪಿಹೋಯಿತು. ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿಯೂ ಬಹಳ ಕಾಲ ಅವರು ಬಾಳಲಿಲ್ಲ. ತಮಗೆ ತಪ್ಪಿ ಹೋದ ಪೂರ್ಣಾವಧಿ ಸಿಎಂ ಪಟ್ಟ ತಮ್ಮ ಮಕ್ಕಳಿಗಾದರೂ ಒಲಿಯಲಿ ಎಂಬ ಪಿತೃಸಹಜ ಬಯಕೆ ಅವರಲ್ಲಿದೆ. ಒಮ್ಮೆ ಬಿಜೆಪಿ ಸಂಗದಲ್ಲಿ, ಮಗದೊಮ್ಮೆ ಕಾಂಗ್ರೆಸ್ ಸಂಗದಲ್ಲಿ ಕುಮಾರಸ್ವಾಮಿಯವರು ಸಿಎಂ ಆದರೇನೋ ನಿಜ ಆದರೆ ಅವರು ಗಳಿಸಿದ ಸಿಎಂ ಪಟ್ಟ ಎರಡು ಸಂದರ್ಭಗಳಲ್ಲಿಯೂ ಅಲ್ಪಾಯುಷಿ ಆಯಿತು.


ಕಳೆದ ಎರಡು ಎರಡೂವರೆ ವರ್ಷಾವಧಿಯಲ್ಲಿ ವಿಧಾನ ಸಭೆಯ ಕೆಲವು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ; ಮೊನ್ನೆಮೊನ್ನೆಯಷ್ಟೇ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ್ದು ಕಳಪೆ ಸಾಧನೆ. ಈ ಸಣ್ಣಪುಟ್ಟ ಚುನಾವಣೆಗಳು ನಮಗೆ ಮುಖ್ಯವಲ್ಲ. ನಮ್ಮ ಗುರಿ ಇರುವುದು ವಿಧಾನ ಸಭೆಗೆ ನಡೆಯಲಿರುವ ಚುನಾವಣೆ. ೧೨೩ ಸೀಟು ಗೆಲ್ಲುವುದಕ್ಕೆ ಏನೆಲ್ಲ ಅಗತ್ಯವೋ ಆ ಎಲ್ಲ ಕಾರ್ಯತಂತ್ರಗಳನ್ನೂ ಪಕ್ಷ ಮಾಡುತ್ತಿದೆ ಎಂಬುದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಕುಮಾರಸ್ವಾಮಿ ಹೇಳಿಕೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವಾಗಿದೆ ಎಂಬ ಮಾತು ಆಗಾಗ ಓಡಾಡುತ್ತಿರುತ್ತದೆ. ಇದೀಗ ಮುಕ್ತಾಯಗೊಂಡಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಆ ಬಲವನ್ನು ದೃಢೀಕರಿಸುವ ಬೆಂಬಲ ವ್ಯಕ್ತವಾಗಿಲ್ಲ. ಈ ಚುನಾವಣೆಯನ್ನು ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಮಿನಿ ಸಮರ ಎಂದೇ ವ್ಯಾಖ್ಯಾನಿಸಲಾಗಿತ್ತು. ಬಂದಿರುವ ಫಲಿತಾಂಶವನ್ನು ಅವಲೋಕಿಸಿದರೆ ಫೈಟ್ ಇರೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಎನಿಸುತ್ತದೆ.
ರಾಜ್ಯಕ್ಕೆ ತೃತೀಯ ರಾಜಕೀಯ ಶಕ್ತಿಯೊಂದರ ಅಗತ್ಯ ಇದೆಯೆಂದು ತಥಾಕಥಿತ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಬೇಸತ್ತು ಹೋಗಿರುವವರೆಲ್ಲರೂ ಪ್ರತಿಪಾದಿಸುತ್ತಾರೆ. ಅಂಥ ಶಕ್ತಿಯಾಗಿ ಬೆಳೆಯುವ ತಾಕತ್ತು ಜೆಡಿಎಸ್‌ನಲ್ಲಿ ಇರಬೇಕಾದಷ್ಟು ಪ್ರಮಾಣದಲ್ಲಿ ಇಲ್ಲವಾಗಿದೆ. ಇದೊಂದು ರೀತಿಯಲ್ಲಿ ನಿರ್ವಾತದ ಸೃಷ್ಟಿಗೆ ಕಾರಣವಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಪೈಪೋಟಿ ನೀಡುವ ಮೂಲಕ ತನ್ನ ಅಸ್ತಿತ್ವನ್ನು ಜಾತ್ಯತೀತ ಜನತಾ ದಳ ಸಾಬೀತು ಮಾಡಬೇಕಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಪಕ್ಷದ ಒಳಗೇ ಬೃಹದಾಕಾರವಾಗಿ ಬೆಳೆಯುತ್ತಿದೆ. ರೇವಣ್ಣ-ಭವಾನಿ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅವರ ರಾಜಕೀಯ ಭದ್ರ ನೆಲೆಯನ್ನು ಕಂಡುಕೊಂಡಿದೆ. ಸೂರಜ್ ಇದೀಗ ಎಂಎಲ್‌ಸಿ ಆಗಿರುವುದರಿಂದ ಮುಂದಿನ ಆರು ವರ್ಷ ಅವರ ರಾಜಕೀಯ ಸುಭದ್ರವಾಗಿರುತ್ತದೆ ಎನ್ನಬಹುದು. ಪ್ರಜ್ವಲ್ ರೇವಣ್ಣ, ೨೦೨೪ರ ಲೋಕಸಭೆಗೆ ಮತ್ತೆ ಸ್ಪರ್ಧಿಸುವುದಕ್ಕೆ ತೊಂದರೆ ಇಲ್ಲ ಎನ್ನುವುದು ದೇವೇಗೌಡರ ತುಮಕೂರಿನಿಂದಲೇ ಸ್ಪರ್ಧೆ ಎನ್ನುವ ಹೇಳಿಕೆ ಕಾರಣ ಸ್ಪಷ್ಟವಾಗಿದೆ. ಕುಮಾರಸ್ವಾಮಿ ಮತ್ತು ಅನಿತಾ ಕುಟುಂಬ ಇನ್ನೂ ಗಟ್ಟಿಯಾಗಿ ಕಾಲೂರಬೇಕಾಗಿದೆ. ನಿಖಿಲ್ ಕುಮಾರಸ್ವಾಮಿಯವರಿಗೆ ರಾಜಕೀಯ ನೆಲೆ ಕಲ್ಪಿಸುವರೆಗೂ ಈ ದಂಪತಿ ನಿರಾಳ ಭಾವದಲ್ಲಿರುವುದು ಕಷ್ಟ.

 

Girl in a jacket
error: Content is protected !!