ಗುರು ದೇವೋ ಮಹೇಶ್ವರಃ

Share

ಗುರು ದೇವೋ ಮಹೇಶ್ವರಃ

ಗುರು ಸೃಷ್ಟಿ , ಸ್ಥಿತಿ, ಲಯಕಾರನು. ಶಿಕ್ಷಕ ಅಥವ ಗುರು ಭೌತಿಕವಾಗಿ ಏನೂ ತಯಾರಿಸಲಾರದಿರಬಹುದು. ಆದರೆ ಹೀಗಿತ್ತು. ಹೀಗಿದೆ, ಹೀಗಿರಬೇಕು ಎಂದು ಕಲಿಸುತ್ತಾ ವಿದ್ಯಾರ್ಥಿಗಳನ್ನು ಗುರುಯತ್ತ ಕೊಂಡೊಯ್ಯುವ ಮಾರ್ಗವನ್ನು, ಧ್ಯೇಯವನ್ನು ವಿದ್ಯಾರ್ಥಿಗಳ ಮನದಲ್ಲಿ ಆಸಕ್ತಿಯನ್ನು ಮೂಡುವಂತೆ ಮಾಡುತ್ತಾನೆ. ಮಕ್ಕಳ , ವಿದ್ಯಾರ್ಥಿಗಳ ಮನದಲ್ಲಿನ ತಪ್ಪು ಕಲ್ಪನೆಗಳನ್ನು, ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಒಳಿತಿನೆಡೆಗೆ ಸಾಗಿಸುತ್ತಾನೆ. ಏನೂ ಕಾಣದ , ಅರಿಯದ ಅಂಧಕಾರದ ಮನಸ್ಸಿನಲ್ಲಿ ಬೆಳಕನ್ನು ಚೆಲ್ಲಿ ಒಂದು ಅಭೂತಪೂರ್ವವಾದ ಸಂಚಲನವನ್ನು ಉಂಟುಮಾಡುತ್ತಾನೆ. ಗುರುವಿಗೆ ರೂಪವಿಲ್ಲ, ಅವನು ಹೇಗಿದ್ದರೂ ನಡೆಯುತ್ತದೆ. ಗುರುವಿಗೆ ಜಾತಿಯಿಲ್ಲ. ಅವನು ಯಾವನಾದರೂ ನಡೆಯುತ್ತದೆ. ಗುರುವಿಗೆ ಧರ್ಮವಿಲ್ಲ ಅವನು ಸಾರ್ವಜನಿಕ ಬುದ್ದಿ. ಗುರುವಿಗೆ ಗುರುವೇ ಸಾಟಿ.
ಪ್ರಾಣಿಗಳಲ್ಲಿ ಹೆಚ್ಚು ಬುದ್ದಿ ಮತ್ತು ಅಕ್ಷರ ಜ್ಞಾನವನ್ನು ಮನುಷ್ಯ ಮಾತ್ರ ಹೊಂದಿದ್ದಾನೆ. ಉಳಿದ ಪ್ರಾಣಿಗಳು ಬರೀ ಆಹಾರಕ್ಕಾಗಿ ಬದುಕುತ್ತವೆ. ಪ್ರಾಣಿಗಳನ್ನು ಎಲ್ಲೇ ಇಟ್ಟು ಸಾಕಿದರೂ ಅವು ಅವುಗಳ ಮೂಲ ಗುಣವನ್ನು ಬಿಡುವುದಿಲ್ಲ. ಆದರೆ ಮನುಷ್ಯನಿಗೆ ಆಹಾರ ಮತ್ತು ಗುಣಗಳ ಬಗ್ಗೆ ಕಲಿಯಲು ಗುರು ಬೇಕೇಬೇಕು. ಆತ ಗುರುವಿನ ಸಹಾಯವಿಲ್ಲದೆ ಮನುಷ್ಯನಾಗಲು ಸಾಧ್ಯವೇ ಇಲ್ಲ. ಹುಟ್ಟಿದಂದಿನಿಂದ ತನಗೆ ತಾಯಿ ಗುರುವಾಗುವಳು, ಚಟುವಟಿಕೆಗಳನ್ನು ಕಲಿಯಲು ತಂದೆ ಗುರುವಾಗುವನು. ಅಕ್ಷರ ಕಲಿತು ಜ್ಞಾನ ಪಡೆಯಲು ಗುರುವೆಂಬ ಬೆಳಕು ಬೇಕಾಗುತ್ತದೆ. ಆ ಬೆಳಕು ಸೂರ್ಯನೂ ಹೌದು, ದೀಪವೂ ಹೌದು, ಮೇಣದ ಬತ್ತಿಯೂ ಹೌದು, ಹಣತೆಯೂ ಹೌದು. ಬೆಳಕು ಯಾವ ಮೂಲದಿಂದ ಬಂದರೂ ಬೆಳಕೇ. ಅಂತೆಯೇ ಉತ್ತಮ ಗುರುವೂ ಸಹ ಯಾವ ಜಾತಿಯಾದರೂ, ಧರ್ಮವಾದರೂ, ಯಾವ ಬಣ್ಣವಾದರೂ ಗುರುವೇ.
ನದಿ ಋಷಿಗಳ ಮೂಲಗಳನ್ನು ಹುಡುಕಿಕೊಂಡು ಅವನಾರು, ಯಾವ ಊರು, ಯಾವ ಜಾತಿ, ಯಾರ ಮಗ, ಎಂಬ ಜಿಜ್ಞಾಸೆಗಳನ್ನು ಹೊತ್ತು ಕಲಿಯುವವನು ನಿಜವಾದ ಶಿಷ್ಯನೇ ಅಲ್ಲ. ಕಲಿಯಬಯಸುವ ಶಿಷ್ಯನು ಕಣ್ಣು ಕಿವಿ ಮೂಗು ಚರ್ಮ ನಾಲಿಗೆಗಳೆಂಬ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡ ವಿದ್ಯಾರ್ಥಿಯಾಗಿರಬೇಕು. ಕಲಿಕೆಯ ಹೊರತು ಬೇರಾವುದೇ ವಿಷಯಗಳು ಅವನಿಗೆ ಗೌಣವಾಗಬೇಕು.
ಹೀಗೆ ಕಲಿತ ವಿದ್ಯಾರ್ಥಿಯು ಮಾತ್ರ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಲು ಸಾಧ್ಯ. ಈಗ ಸಾಮಾಜದಲ್ಲಿ ಗುರುವು ಗುರುವಿನಂತೆ ಇಲ್ಲ. ಶಿಷ್ಯ ಶಿಷ್ಯನಂತಿಲ್ಲ. ಯಾಕೇ? ಯಾಕೆಂದರೆ ಬದುಕನ್ನು ಬದಲಿಸುವ ಬಂಡಾಯದ ಮನದಲ್ಲಿ ಗುರುಗಳು ತನ್ನ ಪರಂಪರೆಯನ್ನು ಮರೆತು ಶಿಷ್ಯರೊಂದಿಗೆ ಹಿಂದಿನವರನ್ನು ವಿನಾ ಕಾರಣ ದೂಷಿಸುವುದು, ದೂರುವುದು ನಡೆಯುತ್ತಿದೆ. ಹಿರಿಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಿರಿಯರಿಗೆ ತಿಳಿಸದ ಗುರುವು ತಾನೂ ಸಹ ಅಗೌರವಕ್ಕೆ ಪಾತ್ರನಾಗುತ್ತಿದ್ದಾನೆ.
ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಟನ್ ಅವರ ಜನುಮ ದಿನ. ಪ್ರತಿಯೊಬ್ಬರ ಮನಸ್ಸಿನಲ್ಲಿ ಸರ್ವಕಾಲಕ್ಕೂ ತನಗೆ ವಿದ್ಯೆ ಕಲಿಸಿದ ಗುರು ಒಂದಿಲ್ಲೊಂದು ವ್ಯವಹಾರಿಕ ವಿಷಯದ ಸಮಯದಲ್ಲಿ ಸದಾ ನೆನಪಿನಲ್ಲಿರುತ್ತಾನೆ. ರಾಧಾಕೃಷ್ಣನ್ ರವರ ೧೩೩ ನೇ ಹುಟ್ಟಿದ ದಿನ. ಇಂದೇ ನಿರ್ಧರಿಸೋಣ. ಈ ಸಮಾಜವನ್ನು ತಿದ್ದುವ ಹೊಣೆ ಎಲ್ಲರದೂ ಆಗಿದೆ. ಆದರೆ ಹೆಚ್ಚು ಶಿಕ್ಷಕರದೇ ಪಾತ್ರ ಇರುತ್ತದೆ. ಶಿಕ್ಷಕರು ಶಿಷ್ಯರಿಗೆ ಉತ್ತಮ ಭೋದನೆಯನ್ನು ಭೋದಿಸಿ ಸಮಾಜದ ಉತ್ತಮ ವಿದ್ಯಾರ್ಥಿಗಳಾಗಲು ಕಲಿಸೋಣ ಬೆಳೆಸೋಣ.

Girl in a jacket
error: Content is protected !!