ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ

Share

ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ

“ನೋಡು ಲೋಕಪ್ಪ, ಮುಂದಿನ ತಿಂಗಳು ಸರಿಯಾದ ಸಮಯಕ್ಕೆ ಬಡ್ಡಿ ಕೊಡಬೇಕು. ಇಲ್ಲಾ ಅಂದ್ರೆ ಮುಂದಿನ ತಿಂಗಳು ಅಸಲು ಸೇರಿದಂತೆ ನನ್ನ ದುಡ್ಡು ವಾಪಾಸು ಮಾಡಿಬಿಡು” ಎನ್ನುವ ಅವ್ವನ ಏರಿದ ಧ್ವನಿಯ ಮಾತುಗಳು ಮನೆಯ ಪಡಸಾಲೆಯಿಂದ ಕೇಳಿ ಬಂದದ್ದು ನನಗೆ ಅಂತಹಾ ಹೊಸ ವಿಷಯವೇನಾಗಿರಲಿಲ್ಲ. ಸಾಕಷ್ಟು ವ್ಯಾಪಕವಾಗಿ ನಮ್ಮೂರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಕೂನಬೇವು, ಕಡಬನಕಟ್ಟೆ, ಹುಣಸೇಕಟ್ಟೆ, ಬಾಗೇನಾಳ್ , ಬೆಣ್ಣೆಹಳ್ಳಿ, ದೊಣ್ಣೆಹಳ್ಳಿ, ಕಟ್ಟಿಗೆಹಳ್ಳಿ, ದೊಡಘಟ್ಟ, ಬಂಗಾರಕ್ಕನಹಳ್ಳಿ, ನಾಯಕನಹಟ್ಟಿ, ಆಯಕಲ್ಲು, ರಾಯ್ನಳ್ಳಿ ಹೀಗೆಯೇ ಹಲವು ಹತ್ತು ಹಳ್ಳಿಗಳಲ್ಲಿ, ಕೇವಲ ಕೆಲವೇ ಕೆಲವು ಆಯ್ದ ಸ್ತ್ರೀಪುರುಷರ ಜೊತೆಗೆ ಸಣ್ಣಮಟ್ಟದ ಬಡ್ಡಿವ್ಯವಹಾರವನ್ನು ಮಾಡಿಕೊಂಡು ಬಂದಿದ್ದ ಅವ್ವ ವಾರ, ಹದಿನೈದು ದಿನಗಳಿಗೊಮ್ಮೆ ನಿಯಮಿತವಾಗಿ ಸಾಲಗಾರರಿಗೆ ಹಾಕುತ್ತಿದ್ದ ಈ ತರಹದ ಧಮ್ಕಿಗಳು ನನಗೆ ಚಿರಪರಿಚಿತವಾದದ್ದೆ. ಆದರೆ ಅವ್ವನ ಇವತ್ತಿನ ಧಮ್ಕಿಯಲ್ಲಿ ಬಳಸಿದ “ಲೋಕಪ್ಪ” ಎನ್ನುವ ಹೆಸರು ಹಲವಾರು ಕಾರಣಗಳಿಂದಾಗಿ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಅಡುಗೆ ಮನೆಯಲ್ಲಿ, ನೆಲದ ಮೇಲೆ ಅಡ್ಡಣಿಕೆ ಇಟ್ಟುಕೊಂಡು, ಮರದ ಪೀಠಣಿಕೆ ಮೇಲೆ ಕುಳಿತು, ಅಡ್ಡಣಿಕೆ ಮೇಲಿದ್ದ ಸಿಲ್ವರ್ ತಟ್ಟೆಯೊಳಗಿಂದ ಜೋಳದ ಮುದ್ದೆ ಮುರಿದುಕೊಂಡು ಅದಕ್ಕೆ ಉದಕ, ಕಾಳು ನಂಜಿಕೊಂಡು, ಅಷ್ಟೂ ಸಾಲದೆಂಬಂತೆ ಮುದ್ದೆಯ ಮೇಲೆ ಮಾಡಿದ್ದ ಕುಣಿಕೆಯಲ್ಲಿ ಅಮ್ಮ ಹಾಕಿದ ತುಪ್ಪದಲ್ಲಿ ಮುದ್ದೆ ತುಂಡನ್ನು ಅದ್ದಿಕೊಂಡು ಬಾಯಲ್ಲಿ ಇಡಲು ಹೊರಟವನಿಗೆ “ಆಯ್ತಮ್ಮಾ, ಮುಂದಿನ ತಿಂಗಳು ಸಂಬಳ ಕೈಸೇರಿದ ಕೂಡಲೇ ಬಡ್ಡಿಯನ್ನು ತಪ್ಪದೇ ತಂದುಕೊಡುತ್ತೇನೆ, ಆಸಲನ್ನು ತೀರಿಸಲು ಇನ್ನೂ ಐದಾರು ತಿಂಗಳಾದರೂ ಬೇಕಾಗಬಹುದು” ಎನ್ನುವ ನನಗೆ ತುಂಬಾ ಪರಿಚಿತವೇ ಆದ ಗಂಡಸಿನ ಧ್ವನಿಯೊಂದು ಕೇಳಿಬರಲು ಇನ್ನು ಕುತೂಹಲವನ್ನು ತಾಳಲಾರದೆ ಮುರಿದ ಮುದ್ದೆ ತುಂಡನ್ನು ಮತ್ತೆ ತಟ್ಟೆಯಲ್ಲಿ ಇಟ್ಟು ಅಡುಗೆಮನೆಯ ಬಾಗಿಲಿಗೆ ಬಂದು ಪಡಸಾಲೆಯತ್ತ ಇಣುಕಿದೆ. ನನ್ನ ತರಗತಿಯ ಗುರುಗಳಾದ ನೆವ್ವಾರ ಲೋಕಪ್ಪ ಮೇಷ್ಟ್ರು ಪಡಸಾಲೆಯ ಚಾಪೆ ಹಾಸಿದ ಕಟ್ಟೆಯ ಮೇಲೆ ಕುಳಿತಿದ್ದವರು “ಬರ್ತೀನಿ ಗೌರಮ್ಮ, ಶಾಲೆಗೆ ತಡವಾಗುತ್ತದೆ” ಎಂದು ಸಾವಕಾಶವಾಗಿ ತಾವು ಕಟ್ಟಿದ್ದ ಪಂಚೆಯ ತುದಿಯನ್ನು ಎತ್ತಿಹಿಡಿಯುತ್ತಾ ಏಳುವುದಕ್ಕೆ ಮೊದಲಾದ ದೃಶ್ಯ ನನ್ನ ಕಣ್ಣಿಗೆ ಬಿತ್ತು. ನಾನು ಆಗಿನ್ನೂ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯ ಮೊದಲನೇ ಇಯತ್ತೆಯ ವಿದ್ಯಾರ್ಥಿ. ಗುರುಗಳು ಶಾಲೆಗೆ ತಡವಾಗುತ್ತದೆ ಎಂದು ಹೊರಟ ಬೆನ್ನಲ್ಲೇ ನನಗೂ ಶಾಲೆಯ ನೆನಪಾಗಿ ತಿರುಗಿ ಓಡಿಹೋಗಿ ನನ್ನ ಸ್ವಸ್ಥಾನವನ್ನು ಸೇರಿ, ತಟ್ಟೆಯಲ್ಲಿದ್ದ ಮುದ್ದೆಯನ್ನು ಏಳೆಂಟು ಗುಟುಕುಗಳಲ್ಲಿಯೇ ಸ್ವಾಹಾ ಮಾಡಿ ಪಡಸಾಲೆಯ ಒಂದು ಮೂಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ಅನಾಥವಾಗಿ ಬಿದ್ದಿದ್ದ ಪಾಟೀಚೀಲವನ್ನು ಹೆಗಲಿಗೆ ಏರಿಸಿಕೊಂಡು ನನ್ನನ್ನು ಯಾವ ಕಾರಣಕ್ಕೋ ಕೂಗುತ್ತಿದ್ದ ಅವ್ವನ ಮಾತುಗಳನ್ನೂ ಕಿವಿಗೆ ಹಾಕಿಕೊಳ್ಳದೆ ಒಂದೇ ನೆಗೆತಕ್ಕೆ ಕಾಂಪೌಂಡ್ ಗೇಟ್ ಮುಂದೆ ಹಾಸಿದ್ದ ಬೆಣಚುಕಲ್ಲಿನ ಚರಂಡಿಬಂಡೆಯನ್ನು ಹಾರಿ ಮನೆಯ ಮುಂದಿನ ಟಾರ್ ರಸ್ತೆಗೆ ಇಳಿದಿದ್ದೆ.

ದಾರಿಯಲ್ಲಿ ಶಿವಕುಮಾರನನ್ನು ಅವನ ಮನೆಯಿಂದ ಕರೆದುಕೊಂಡು ಅದೆಷ್ಟೇ ವೇಗದಲ್ಲಿ ಸ್ಕೂಲು ತಲುಪಿದರೂ ಜನಗಣಮನಕ್ಕಾಗಿ ಶಾಲಾಮಕ್ಕಳು ಅದಾಗಲೇ ಸರತಿಯಲ್ಲಿ ನಿಂತಾಗಿತ್ತು. ಹೆದರಿಕೊಂಡೇ ಒಂದನೇ ತರಗತಿಯ “ಬಿ” ವಿಭಾಗದ ಸಾಲನ್ನು ತರಾತುರಿಯಲ್ಲಿ ಸೇರಿ ಗೊಲ್ಲರ ಓಬಲೇಶನ ಹಿಂದೆ ನಿಂತ ನನ್ನ ಹಿಂದೆ ಶಿವಕುಮಾರ್ ನಿಂತ. ರಾಷ್ಟ್ರಗೀತೆ ಮುಗಿದ ಕೂಡಲೇ ಓಡಿಕೊಂಡೇ ತರಗತಿ ತಲುಪಿದ ನಾವು ಎಡಭಾಗದ, ನೆಲದಲ್ಲಿ ಹಾಸಿದ್ದ ಮೊದಲನೇ ಪಂಕ್ತಿಯ ಮರದ ಹಲಗೆಯ ಮಣೆಯ ಮೇಲೆ ಆಸೀನರಾದೆವು. ಐದು ಹುಡುಗರು ಕೂಡಬಹುದಾಗಿದ್ದ ಮಣೆಯ ಮೇಲೆ, ತರಗತಿಯಲ್ಲಿ ಇರಬೇಕಾದ ಗರಿಷ್ಠ ಸಂಖ್ಯೆಯ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕರು ಪ್ರಸ್ತುತ ವರ್ಷ ಶಾಲಾಪ್ರವೇಶ ಪಡೆದ ಕಾರಣ, ಆರು ಹುಡುಗರು ಮಣೆಯನ್ನು ಹಂಚಿಕೊಳ್ಳಬೇಕಾಗಿ ಬಂದಿತ್ತು. ಕಿಟಕಿಯ ಮಗ್ಗುಲಲ್ಲಿ ಮೊದಲನೆಯವನಾಗಿ ಕುಳಿತ ನನ್ನ ಬಲಬದಿಗೆ ಶಿವಕುಮಾರ್ ಕುಳಿತಿದ್ದರೆ ಅವನ ಮಗ್ಗುಲಲ್ಲಿ ಕೃಷ್ಣಾರೆಡ್ಡಿ, ಜಕಣಾಚಾರಿ, ಏಕಾಂತಾಚಾರಿ ಮತ್ತು ಸಾಲಿನಲ್ಲಿ ಕೊನೆಯವನಾಗಿ ಧನಂಜಯರೆಡ್ಡಿ ಯಥಾಪ್ರಕಾರ ನಮ್ಮ ಸ್ಥಾನಗ್ರಹಣ ಮಾಡಿದೆವು. ನಾವು ಪಾಟೀಚೀಲದ ಹೊರೆಗಳನ್ನು ಬೆನ್ನಿಂದ ಇಳಿಸಿ ಮಣೆಯ ಮೇಲೆ ಆಸೀನರಾಗುವ ಹೊತ್ತಿಗೂ ಲೋಕಪ್ಪ ಮೇಷ್ಟ್ರು ತರಗತಿಯನ್ನು ಪ್ರವೇಶಿಸುವುದಕ್ಕೂ ತಾಳೆಯಾಯಿತು. ಅರ್ಧಂಬರ್ಧ ಕೂತ ಭಂಗಿಯಲ್ಲಿದ್ದ ನಾನು ಮತ್ತೆ ಹಾಗೆಯೇ ಎದ್ದು ನಿಂತು ತರಗತಿಯ ಎಲ್ಲಾ ಬಾಲಕರೂ ಒಂದೇ ಧ್ವನಿಯಾಗಿ ಉಸರಿಸಿದ “ಬೆಳಗಿನ ವಂದನೆಗಳು ಗುರುಗಳೇ” ಎನ್ನುವ ಸ್ವಾಗತವಾಕ್ಯದಲ್ಲಿ ಪಾಲುದಾರನಾದೆ.

ಐದು ಅಡಿಯನ್ನು ಒಂದೆರೆಡು ಅಂಗುಲಗಳಿಂದಷ್ಟೇ ಮೀರಿದಂತೆ ಇದ್ದ ದೇಹದ ಎತ್ತರ, ಶುಭ್ರವಾದ ಬಿಳೀಬಣ್ಣದ ಶರ್ಟ್ ಮತ್ತು ಪಂಚೆ, ಅಲ್ಲಲ್ಲಿ ಸ್ವಲ್ಪ ಬಿಳಿದಾಗಿ ತೋರುತ್ತಿದ್ದ ಸೊಂಪಾದ ತಲೆಗೂದಲಿನ ಮೇಷ್ಟ್ರ ವಯ್ಯಸ್ಸು ನಲ್ವತ್ತೈದು ದಾಟಿದ ಹಾಗೆ ಕಾಣುತ್ತಿರಲಿಲ್ಲ. ದಷ್ಟಪುಷ್ಟವಾದ ದೇಹದಿಂದ ಕೂಡಿದ ಮೇಷ್ಟ್ರ ಮುಖ ವೃತ್ತಾಕಾರದಲ್ಲಿದ್ದು ನಾವು ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಕಾಲ್ಚೆಂಡನ್ನು ನೆನಪಿಸುತ್ತಿತ್ತು. ಕಲ್ಲಿನಲ್ಲಿ ಕಟೆದ ಮುಖಚರ್ಯೆಯ ಮೇಷ್ಟ್ರು ಎಂದೂ ಮೀಸೆಯನ್ನು ಬಿಟ್ಟವರೆ ಅಲ್ಲ. ಸದಾಕಾಲ ಗಾಂಭೀರ್ಯದ ಮುಖಮುದ್ರೆಯಿಂದ ಕಂಗೊಳಿಸುತ್ತಿದ್ದ, ಬಿಳುಪು ಎಂದು ಹೇಳಲಾಗದಿದ್ದರೂ ಕಪ್ಪೂ ಎಂದೂ ವರ್ಣಿಸಲಾಗದ, ದೇಹವರ್ಣದ ಲೋಕಪ್ಪ ಮೇಷ್ಟ್ರು ತರಗತಿಯಲ್ಲಿ ನಕ್ಕಿದ್ದು ನನಗೆ ನೆನಪೇ ಇಲ್ಲ. ಸಣ್ಣಪುಟ್ಟ ತಪ್ಪುಗಳಿಗೂ ಮಕ್ಕಳನ್ನು ಕುಕ್ಕರಗಾಲಿನಲ್ಲಿ ಕೂರಿಸಿ, ಮೊಣಕಾಲುಗಳ ಸಂದಿಯಿಂದ ಮೇಲೆ ಬರುವ ಹಾಗೆ ಕೈಗಳನ್ನು ತೂರಿಸಿ, ಎಡಗೈಯಿಂದ ಬಲಕಿವಿಯನ್ನು ಮತ್ತು ಬಲಗೈನಿಂದ ಎಡಕಿವಿಯನ್ನು ಹಿಡಿಯುವಂತೆ ಮಾಡಿ ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಕೂರಿಸಿ ಮೇಷ್ಟ್ರು ದಯಪಾಲಿಸುತ್ತಿದ್ದ ಶಿಕ್ಷೆ ದಿನದಲ್ಲಿ ಕನಿಷ್ಠ ಇಬ್ಬರು ಮೂವರು ಹುಡುಗರ ಪಾಲಿಗಾದರೂ ಕಡ್ಡಾಯವೆನ್ನುವಂತೆ ಪ್ರಾಪ್ತವಾಗುತ್ತಿತ್ತು. ಚಾಚಿದ ಎರಡೂ ಕೈಗಳ ಕೊನೆಗಳನ್ನು ಮುಷ್ಟಿಯಾಗಿಸಿ, ಬೆರಳುಗಳ ಗಂಟಿನ ಮೇಲೆ ಹುಣಸೇಮರದ ತೆಳ್ಳನೆಯ ಹಸಿಕೋಲಿನಿಂದ ಪಟಪಟನೆ ಬಾರಿಸುವುದು ಲೋಕಪ್ಪ ಮೇಷ್ಟ್ರ ಶಿಕ್ಷೆಯ ಇನ್ನೊಂದು ಪರಿ ಎನ್ನಿಸಿದರೆ, ಕೈಗಳನ್ನು ಅಂಗಾತವಾಗಿ ಚಾಚುವಂತೆ ಮಾಡಿ ಅಂಗೈಗಳು ಕೆಂಪಾಗುವವರೆಗೂ ದುಂಡನೆಯ, ಒಣಗಿದ ರೂಲ್ ಕೋಲಿನಿಂದ ಬಾರಿಸುವುದು ಅವರದೇ ಶಿಕ್ಷೆಯ ಮತ್ತೊಂದು ವಿಧಾನವಾಗಿತ್ತು. ಎಲ್ ಕೆಜಿ, ಯುಕೆಜಿ , ಶಿಶುವಿಹಾರ ಇಂತಹ ಯಾವ ಶಾಲಾಪೂರ್ವ ತರಗತಿಗಳಿಗೂ ಅಲಭ್ಯತೆಯ ಕಾರಣದಿಂದಾಗಿ ಹಾಜರಾಗದೆ ನೇರವಾಗಿ ಒಂದನೇ ತರಗತಿಗೆ ಬಂದು ಸೇರಿದ ನನ್ನಂತಹ ಹಳ್ಳಿಗಾಡಿನ ಮಕ್ಕಳಿಗೆ ಶಾಲೆ, ಶಾಲೆಗೆ ಬರುವ ಹಾದಿಯಲ್ಲಿ ಸಿಗುವ ಪೊಲೀಸ್ ಠಾಣೆಗಿಂತ ವಿಭಿನ್ನವಾಗಿ ಕಂಡುಬರುತ್ತಿರಲಿಲ್ಲ. ಮಕ್ಕಳನ್ನು ಶಿಕ್ಷಿಸಿಯೇ ಶಿಕ್ಷಾವಂತರನ್ನಾಗಿ ಮಾಡಬೇಕು ಎನ್ನುವುದನ್ನು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮೇಷ್ಟ್ರುಗಳ ತಲೆಗೆ ತುಂಬಿದವರಾರೋ ಅರಿಯೆ. ಆರು ವರ್ಷಗಳವರೆಗೆ ತಮ್ಮ ತಮ್ಮ ಮನೆಗಳಲ್ಲಿ ಮುದ್ದಾಗಿ ಬೆಳೆದ ಪೋರರು ಶಾಲೆಯನ್ನು ಸೇರಿದ ನಂತರದಲ್ಲಿ ದೊರೆಯುತ್ತಿದ್ದ ಕಠಿಣಾತಿಕಠಿಣ ಶಿಕ್ಷೆಗಳ ಪರಿಣಾಮವಾಗಿ ತಮ್ಮ ಮನದಲ್ಲಿ ಇಡೀ ಶಿಕ್ಷಣವ್ಯವಸ್ಥೆಯ ಬಗ್ಗೆಯೇ ಒಂದು ತೆರನಾದ ಭಯಭೀತ ಮನೋಭಾವವನ್ನು ಸೃಷ್ಟಿಸಿಕೊಂಡು ಭವಿಷತ್ ನ ವಿದ್ಯಾಭ್ಯಾಸಕ್ಕೆ ಎಳವೆಯಲ್ಲಿಯೇ ತಿಲಾಂಜಲಿ ನೀಡಿದ ಉದಾಹರಣೆಗಳಿಗೂ ಗ್ರಾಮೀಣಭಾಗದಲ್ಲಿ ಬರವಿಲ್ಲ ಎನಿಸುತ್ತದೆ.

ಲೋಕಪ್ಪ ಮೇಷ್ಟ್ರು “ಅಜ್ಜನ ಕೋಲಿದು, ನನ್ನಯ ಕೋಲು” ಎನ್ನುವ ಪದ್ಯವನ್ನು ಪಾಠ ಮಾಡುತ್ತಿರುವ ಹೊತ್ತು ನನ್ನ ಮನಸ್ಸು ಬೆಳಿಗ್ಗೆ ಅವ್ವ ಮೇಷ್ಟ್ರ ಒಟ್ಟಿಗೆ ನಡೆಸಿದ ಸಂಭಾಷಣೆಯನ್ನೇ ಕುರಿತು ಯೋಚಿಸುತ್ತಿತ್ತು. ಅವ್ವನ ಋಣಭಾರದಿಂದ ಕುಗ್ಗಿ ಹೋದಂತಿದ್ದ ಮೇಷ್ಟ್ರನ್ನು ನನ್ನ ಅವ್ವ ಜೋರಾದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಹೊತ್ತು ಅವರು ತಮ್ಮ ಧ್ವನಿಯನ್ನು ಸಾಕಷ್ಟು ಕುಗ್ಗಿಸಿ ಮೂರನೆಯವರಿಗೆ ಕೇಳಿಸಬಾರದು ಎನ್ನುವ ಉದ್ದೇಶದಿಂದ ಮೆಲುವಾದ ಧ್ವನಿಯಲ್ಲಿ ನನ್ನ ಅವ್ವನೊಟ್ಟಿಗೆ ಸಂಭಾಷಿಸುತಿದ್ದದ್ದು ನೆನಪಿಗೆ ಬಂದಿತು. ನನ್ನ ಶಿಕ್ಷಣ ಜಗತ್ತಿನ ಮೊದಲನೇ ದೇವರಾದ ಲೋಕಪ್ಪ ಮೇಷ್ಟ್ರು ಹೀಗೆ ವಿಹ್ವಲರಾಗಿ, ದಿಕ್ಕುತೋಚದವರಂತೆ ದೈನ್ಯತೆಯಿಂದ ನನ್ನ ಅವ್ವನನ್ನು ಅಸಲು ಮತ್ತು ಬಡ್ಡಿ ವಾಪಾಸು ಮಾಡುವುದಕ್ಕೆ ಸ್ವಲ್ಪ ಹೆಚ್ಚಿನ ಸಮಯದ ವಾಯಿದೆ ಕೇಳುತ್ತಿದ್ದದ್ದು ನನ್ನ ಬಾಲಮನಸ್ಸಿಗೆ ಸ್ವಲ್ಪವೂ ಒಪ್ಪದ ವಿಷಯವಾಗಿತ್ತು. ನನ್ನಂತಹ ಅನೇಕ ಬಾಲಕರನ್ನು ಕೈಹಿಡಿದು ವಿದ್ಯಾಮಂದಿರದ ಒಳಗೆ ಕರೆದೊಯ್ಯುತ್ತಾ, ತನ್ಮೂಲಕ ಭವಿಷ್ಯದ ಭವ್ಯವಾದ ಶಿಕ್ಷಣಮಂದಿರಕ್ಕೆ ಸಲೀಸಾದ ಪ್ರವೇಶವನ್ನು ದೊರಕಿಸಿಕೊಟ್ಟ ಗುರುವರ್ಯರು ಕೇವಲ ಹಣದ ಕಾರಣಕ್ಕಾಗಿ ಶಾಲೆಯ ಮೆಟ್ಟಿಲನ್ನೂ ನೋಡದ ನನ್ನ ಅವ್ವನ ಮುಂದೆ ಯುದ್ಧದಲ್ಲಿ ಸೋತು ಪೂರ್ಣ ಶರಣಾಗತಿಯನ್ನು ಒಪ್ಪಿಕೊಂಡ ವೀರಯೋಧನಂತೆ ನತಮಸ್ತಕರಾಗಿ ನಿಲ್ಲುವುದು ನನ್ನ ಎಳೆಯ ಮನಸ್ಸು ಒಂದಿನಿತೂ ಮೆಚ್ಚದ ವಿಷಯವಾಗಿತ್ತು. ಮೇಷ್ಟ್ರು ಮಾಡುತ್ತಿದ್ದ ಪಾಠ ಮುಗಿಯುವ ಹಂತಕ್ಕೆ ಬರುತ್ತಿದ್ದ ಹಾಗೆ ಮೇಷ್ಟ್ರನ್ನು ನನ್ನ ಅವ್ವನ ಸಾಲದ ಕಪಿಮುಷ್ಟಿಯಿಂದ ಹೇಗಾದರೂ ಮಾಡಿ ಬಿಡಿಸಬೇಕೆಂಬ ಬಯಕೆ ನನ್ನಲ್ಲಿ ಮೊಳೆತು ಹೆಮ್ಮರವಾಗಲಾರಂಭಿಸಿತು. ಸಾಲದ ಹೊರೆ ಹೊತ್ತೇ ಇಷ್ಟೊಂದು ಸೊಗಸಾಗಿ ಪಾಠ ಮಾಡುವ ಮೇಷ್ಟ್ರು ಸಾಲದ ಹೊರೆಯಿಂದ ಮುಕ್ತರಾದರೆ ಇನ್ನೆಷ್ಟು ಅದ್ಭುತವಾಗಿ ಪಾಠ ಮಾಡಬಲ್ಲರು? ಎಂದು ಮನದಲ್ಲಿಯೇ ಎಣಿಸಿ ಹಿಗ್ಗಿದವನಾದ ನಾನು ಇಂದು ರಾತ್ರಿ ಮಲಗುವ ವೇಳೆಯ ಒಳಗೆ ಅವ್ವನನ್ನು ಏನಾದರೂ ಮಾಡಿ ಒಪ್ಪಿಸುವ ಮೂಲಕ ಲೋಕಪ್ಪ ಮೇಷ್ಟ್ರನ್ನು ಅವ್ವನ ಸಾಲದಿಂದ ಋಣಮುಕ್ತರನ್ನಾಗಿಸಬೇಕು ಎನ್ನುವ ಹಂಬಲವನ್ನು ಎದೆಯಲ್ಲಿ ಹೊತ್ತು ಸಂಜೆ ಶಾಲೆ ಮುಗಿದ ನಂತರ ಮನೆ ಸೇರುವವರೆಗೂ ಇದರ ಸಂಬಂಧದ ರೂಪುರೇಷೆಗಳನ್ನು ಮನದಲ್ಲಿಯೇ ಹೆಣೆಯುತ್ತಾಹಾದಿ ಸಾಗಿಸಿ

ಮನೆಗೆ ಬಂದವನು ಪಡಸಾಲೆಯ ಒಂದು ಮೂಲೆಗೆ ಪಾಟೀಚೀಲವನ್ನು ಎಸೆದು ಸೀದಾ ಅವ್ವ ಎಮ್ಮೆಯ ಹಾಲು ಕರೆಯುತ್ತಿದ್ದ ದನದ ಕೊಟ್ಟಿಗೆಗೆ ಪ್ರವೇಶಕೊಟ್ಟೆ. ನಾನು ಕೊಟ್ಟಿಗೆಗೆ ಬಂದದ್ದದ್ದನ್ನು ಗಮನಿಸಿದ ಅವ್ವ, “ಆಟ ಆಡಲು ಹೋಗುವುದಿಲ್ಲವೇನೋ?” ಎನ್ನುವ ಪ್ರಶ್ನೆ ಮಾಡಿದರೂ ಉತ್ತರಿಸದೆ ಅವ್ವ ಹಾಲು ಹಿಂಡುತ್ತಿದ್ದ ಎಮ್ಮೆಯ ಮುಂದೇ ಪ್ರತ್ಯಕ್ಷನಾದೆ. “ಈ ಕಡೆ ಬಾರೋ, ಎಮ್ಮೆ ಬೆದರೀತು” ಎಂದು ಅವ್ವ ಗದರಲು ಅವ್ವನ ಹಿಂದೆ ಬಂದು ನಿಂತವನು “ಅವ್ವಾ, ಅವ್ವಾ” ಎಂದು ಕಾಲು ಕೆರೆಯಲು ಮೊದಲು ಮಾಡಿದೆ. ನನ್ನ ಯಾವುದೇ ಬೇಡಿಕೆಯನ್ನು ಅವ್ವನ ಮುಂದೆ ಪ್ರಸ್ತಾಪಿಸುವ ಸಮಯದಲ್ಲಿ ನಾನು ಮಾಡುತ್ತಿದ್ದ ಈ ಅಭ್ಯಾಸದ ಬಗ್ಗೆ ಚೆನ್ನಾಗಿಯೇ ತಿಳಿದಿದ್ದ ಅವ್ವ “ಏನು ಬೇಕಪ್ಪಾ?” ಎಂದು ಅತ್ಯಂತ ವಾತ್ಸಲ್ಯಪೂರಿತ ಧ್ವನಿಯಲ್ಲಿ ಆಗ್ರಹಿಸಿದಳು. “ಅವ್ವಾ, ನಾನು ಒಂದು ಕೇಳುತ್ತೇನೆ, ನೀನು ಇಲ್ಲ ಎನ್ನಬಾರದು” ಎಂದು ಪೀಠಿಕೆ ಹಾಕತೊಡಗಿದ ನನಗೆ “ಬೇಗ ಹೇಳೋ, ನನ್ನ ಕೈಯಿಂದ ಆಗುವುದಾದರೆ ನಾನೇ ಮಾಡುತ್ತೇನೆ, ನಿನ್ನ ಅಪ್ಪನೇ ಮಾಡಬೇಕು ಎಂದಾದರೆ ಚಂದ್ರಣ್ಣನಿಗೆ ಹೇಳಿ ಮಾಡಿಸುತ್ತೇನೆ, ಅದೇನು ನೀನು ಮೊದಲು ಹೇಳು” ಎಂದು ಹಾಲು ತುಂಬಿ ನೊರೆ ಉಕ್ಕುತ್ತಿದ್ದ ತಾಮ್ರದ ಚೆಂಬಿನ ಒಟ್ಟಿಗೆ ಅಡುಗೆ ಕೋಣೆ ಪ್ರವೇಶಿಸಲು ಅವಳನ್ನೇ ಹಿಂಬಾಲಿಸಿ ಅಡುಗೆಮನೆ ಹೊಕ್ಕ ನಾನು “ಅವ್ವಾ, ಅವ್ವಾ, ಲೋಕಪ್ಪ ಮೇಷ್ಟ್ರು ನಿನಗೆ ಎಷ್ಟು ದುಡ್ಡು ಕೊಡಬೇಕು?” ಎಂದು ಪ್ರಶ್ನಿಸಿದೆ. ನನ್ನಿಂದ ಈ ಮಾತುಗಳನ್ನು ನಿರೀಕ್ಷಿಸದ ಅವ್ವ “ಅದೆಲ್ಲಾ ನಿನಗ್ಯಾಕೆ? ದೊಡ್ಡವರ ವಿಷಯದಲ್ಲಿ ಹೀಗೆಲ್ಲಾ ಮೂಗು ತೋರಿಸಬಾರದು” ಎಂದು ತುಸು ಸಿಟ್ಟಾಗಿಯೇ ನುಡಿದು ಪಡಸಾಲೆಗೆ ನಡೆದಳು. ಇಷ್ಟಕ್ಕೇ ನನ್ನ ಪಟ್ಟು ಬಿಡದ ನಾನು “ಇಲ್ಲ ಅವ್ವ, ನೀನು ಹೇಳಲೇಬೇಕು” ಎಂದು ದುಂಬಾಲು ಬಿದ್ದೆ. “ಎಂಟು ನೂರು ರೂಪಾಯಿ ಅಸಲು, ಮುನ್ನೂರು ರೂಪಾಯಿ ಬಡ್ಡಿ ಸೇರಿ ಸಾವಿರದ ನೂರು ರೂಪಾಯಿ ಕೊಡಬೇಕು” ಎಂದು ಒಲ್ಲದ ಮನಸ್ಸಿನಿಂದ ನನ್ನ ಹಠಕ್ಕೆ ಒಲಿದು ಅವ್ವ ನುಡಿಯಲು “ಮೇಷ್ಟ್ರಿಗೆ ಇಷ್ಟು ಹಣ ತೀರಿಸಲಿಕ್ಕೆ ಎಷ್ಟು ಸಮಯ ಬೇಕಾಗಬಹುದು?” ಎನ್ನುವ ನನ್ನ ಮುಗ್ದ ಪ್ರಶ್ನೆಗೆ ಅವ್ವ “ಕಳೆದ ನಾಲ್ಕು ವರ್ಷಗಳಿಂದ ಲೋಕಪ್ಪ ನಿಯಮಿತವಾಗಿ ಬಡ್ಡಿ ಕಟ್ಟುತ್ತಿರುವುದನ್ನು ಬಿಟ್ಟರೆ ಅಸಲಿನ ಒಂದು ಪೈಸೆಯನ್ನೂ ಹಿಂದಿರುಗಿಸಿಯೇ ಇಲ್ಲ” ಎಂದು ನುಡಿದು ದನದ ಕೊಟ್ಟಿಗೆಯ ಪಕ್ಕದಲ್ಲಿಯೇ ಇದ್ದ ಅಂಗಡಿಕಟ್ಟೆಯನ್ನು ಏರಿ ಅಲ್ಲಿದ್ದ ವಿದ್ಯುದ್ದೀಪವನ್ನು ಬೆಳಗಿಸಿ ಅಂಗಡಿಯ ಗಲ್ಲಾಪೆಟ್ಟಿಗೆಯ ಹಿಂದಿದ್ದ ವೆಂಕಟರಮಣಸ್ವಾಮಿಯ ಫೋಟೋಗೆ ಸಂಜೆಯ ಎಣ್ಣೆಯ ದೀಪ ಹಚ್ಚತೊಡಗಿದಳು. “ಅವ್ವ, ಮೇಷ್ಟ್ರು ಹಣ ಕೊಡದೇ ಇದ್ದರೆ ಏನು ಮಾಡುತ್ತೀಯಾ?” ಎನ್ನುವ ನನ್ನ ಮತ್ತೊಂದು ಬಾಲಿಶ ಪ್ರಶ್ನೆಗೆ ನಸುನಕ್ಕ ಅವ್ವ ಏನೂ ಉತ್ತರ ಕೊಡದೆ ಮತ್ತೆ ಪಡಸಾಲೆಗೆ ನಡೆದಳು. ಇದರಿಂದ ಸ್ವಲ್ಪ ಕಲವಳಗೊಂಡ ನಾನು ಅವ್ವನನ್ನೇ ಹಿಂಬಾಲಿಸಿ ಪಡಸಾಲೆಗೆ ನಡೆದವನು “ಅವ್ವಾ, ಲೋಕಪ್ಪ ಮೇಷ್ಟ್ರಿಂದ ಹಣವನ್ನು ವಾಪಾಸ್ ಕೇಳಕೂಡದು” ಎಂದು ಸ್ವಲ್ಪ ಖಡಕ್ಕಾಗಿ ನುಡಿಯಲು “ಅದು ಹೇಗೆ ಸಾಧ್ಯ? ನಾನು ಆತನಿಗೆ ಸಾಲ ಕೊಟ್ಟಿದ್ದೇನೆ, ವಾಪಾಸ್ ಕೇಳಬಾರದು ಎಂದರೆ ಹೇಗೆ?” ಎನ್ನುವ ಅವ್ವನ ಪ್ರಶ್ನೆಗೆ ಮರುತ್ತರ ಕೊಡಲು ನನಗೆ ತಕ್ಷಣದಲ್ಲಿ ಏನೂ ತೋಚದ ಕಾರಣ “ನನಗೆ ಅದೆಲ್ಲಾ ಗೊತ್ತಿಲ್ಲ ಅವ್ವ. ನಮ್ಮ ಮೇಷ್ಟ್ರ ಹತ್ರ ನೀನು ದುಡ್ಡು ಮಾತ್ರ ಕೇಳಬಾರದು ಅಷ್ಟೆ” ಎಂದು ಸಿಟ್ಟಿನಿಂದ ನುಡಿದು ಅತ್ತೆ ಸರ್ವಕ್ಕನೊಟ್ಟಿಗೆ ಪಡಸಾಲೆಯ ಕಟ್ಟೆಯ ಮೇಲೆ ಚೌಲ ಆಡಲು ತೆರಳಿದೆ. ನಾನು ಸಿಟ್ಟಾದ್ದನ್ನು ಗಮನಿಸಿದ ಅವ್ವ ಏನೂ ಮಾತನಾಡದೆ ಅಡುಗೆ ಕೋಣೆಗೆ ತೆರಳಿದಳು.

ರಾತ್ರಿ ಊಟಕ್ಕೆ ಕೂತ ಹೊತ್ತಿಗೆ ಮತ್ತೆ ನನಗೆ ಅಂದು ಶಾಲೆಯಲ್ಲಿ ತಳೆದ ನಿರ್ಧಾರ ನೆನಪಾಗಲು “ಅವ್ವ, ಲೋಕಪ್ಪ ಮೇಷ್ಟ್ರ ಹಣದ ಬಗ್ಗೆ ನೀನು ಏನೂ ಹೇಳಲೇ ಇಲ್ಲ. ದುಡ್ಡು ಮಾಫ್ ಮಾಡುತ್ತೀಯೋ ಇಲ್ಲವೋ?” ಎಂದು ಗಟ್ಟಿಯಾದ ಸ್ವರದಲ್ಲಿ ಕೇಳಿದೆ. “ಹುಚ್ಚಾ, ಯಾಕೆ ಒಂದೇ ಸಮನೆ ನಿನಗೆ ಸಂಬಂಧವಿಲ್ಲದ ವಿಷಯದ ಹಿಂದೆ ಬಿದ್ದಿದ್ದೀಯ?” ಎಂದು ಅವ್ವ ನನ್ನನ್ನು ಗದರಿಸಿದಳು. ಇದರಿಂದ ಕೋಪಗೊಂಡ ನಾನು ಊಟವನ್ನು ಅರ್ಧಕ್ಕೇ ನಿಲ್ಲಿಸಿ, ಬಿರಬಿರನೆ ನಡೆಯುತ್ತಾ ಹೋಗಿ ಪಡಸಾಲೆಯಲ್ಲಿ ಹಾಸಿದ್ದ ಜಮಖಾನದ ಮೇಲೆ ಧಪ್ಪೆಂದು ಬಿದ್ದುಕೊಂಡು ದಿಂಬಿನ ಕೆಳಗೆ, ಮರಳಿನಲ್ಲಿ ತಲೆಯನ್ನು ಹೂತು ಇಡುವ ಉಷ್ಟ್ರಪಕ್ಷಿಯಂತೆ, ನನ್ನ ತಲೆಯನ್ನು ಅವಿತಿಟ್ಟೆನು. ನನ್ನ ಈ ಅವಾಂತರವನ್ನು ಕಂಡ ಅವ್ವ ನನ್ನ ಹಿಂದೆಯೇ ಧಾವಿಸಿಬಂದು ನನ್ನನ್ನು ಬಲವಂತವಾಗಿ ಎದ್ದೇಳಿಸುತ್ತಾ “ಎದ್ದೇಳೋ, ಊಟ ಮುಗಿಸು. ಲೋಕಪ್ಪನ ಹಣದ ಬಗ್ಗೆ ನೀನೇನೂ ಚಿಂತಿಸಬೇಡ, ನಾನು ನೋಡಿಕೊಳ್ಳುತ್ತೇನೆ” ಎಂದಳು. ತಟ್ಟನೆ ದಿಂಬಿನ ಕೆಳಗಿನಿಂದ ಮುಖವನ್ನು ಹೊರಗೆ ಚಾಚುತ್ತ ಗಡಬಡಿಸಿ ಎದ್ದ ನಾನು “ಹಾಗಾದರೆ ನೀನು ಮೇಷ್ಟ್ರ ಸಾಲ ಮಾಫ್ ಮಾಡುತ್ತೀಯಾ ತಾನೇ?” ಎಂದು ದೊಡ್ಡ ಯುದ್ಧವೊಂದನ್ನು ಗೆದ್ದ ಉತ್ಸಾಹದಲ್ಲಿ ನುಡಿಯಲು “ಆಯ್ತು ಮಾರಾಯ. ಇನ್ನು ಮುಂದೆ ನಿನ್ನ ಮೇಷ್ಟ್ರನ್ನು ಹಣಕ್ಕಾಗಿ ಸತಾಯಿಸುವುದಿಲ್ಲ, ಆಯ್ತಾ?” ಎಂದ ಅವ್ವನ ಮಾತಿಗೆ ಅತ್ಯಂತ ಖುಷಿಹೊಂದಿದವನಾಗಿ ಅರ್ಧಕ್ಕೇ ಬಿಟ್ಟ ಊಟವನ್ನು ಮುಗಿಸಿ ನಿದ್ರೆಗೆ ಜಾರಿದೆ. ಮೇಷ್ಟ್ರನ್ನು ಅವ್ವನ ಸಾಲದಿಂದ ಋಣಮುಕ್ತರನ್ನಾಗಿಸಿದ ತೃಪ್ತಿಯಲ್ಲಿ ನಿದ್ರಾದೇವಿ ಯಾವಾಗ ನನ್ನ ಬಳಿ ಸುಳಿದಳೋ ನನ್ನ ಅರಿವಿಗೆ ಬರಲಿಲ್ಲ.

ಬೆಳಿಗ್ಗೆ ಶಾಲೆಗೆ ಹೊರಟವನನ್ನು ತನ್ನ ಬಳಿಗೆ ಕರೆದು ಕೈಗೆ ಐದು ಪೈಸದ ನಾಣ್ಯವನ್ನು ಇಟ್ಟ ಅವ್ವ, “ಲೋಕಪ್ಪನನ್ನು ಸಂಜೆಗೆ ಮನೆಗೆ ಬರಲು ಹೇಳು” ಎಂದು ಕೇಳಿಕೊಳ್ಳಲು “ಆಗಲಿ ಅವ್ವ” ಎಂದು ಸಂತೋಷದಿಂದ ಶಾಲೆಯ ಹಾದಿ ಹಿಡಿದೆ. “ನೀನು ಸಾಲದ ಹಣವನ್ನು ಹಿಂದಿರುಗಿಸಬೇಕಾಗಿಲ್ಲ, ನನ್ನ ಮೊಮ್ಮಗನ ಬೇಡಿಕೆಯಂತೆ ನಿನ್ನ ಸಾಲವನ್ನು ಬಡ್ಡಿ ಸಮೇತವಾಗಿ ಮನ್ನಾ ಮಾಡಿದ್ದೇನೆ” ಎನ್ನುವ ಸಂಗತಿಯನ್ನು ಹೇಳಲು ಅವ್ವ ಮೇಷ್ಟ್ರನ್ನು ಮನೆಗೆ ಕರೆದಿದ್ದಾಳೆ ಎನ್ನುವ ಆಲೋಚನೆಯಲ್ಲಿ ಶಾಲೆಯ ಮೊದಲ ಅವಧಿಯಲ್ಲಿಯೇ ಸಂಜೆ ಅವ್ವ ಮನೆಗೆ ಬರಲು ಹೇಳಿರುವ ವಿಷಯವನ್ನು ಮೇಷ್ಟ್ರಿಗೆ ಅರುಹಿದೆ. ಸಂಜೆ ಬೇಗನೇ ಶಾಲೆಯಿಂದ ಹಿಂದಿರುಗಿದವನು ಸಾಮೀಲಿನ ಮರದದಿಮ್ಮಿಗಳ ಅಡ್ಡಾದೆಡೆಗೆ ಆಟವಾಡಲೂ ಹೋಗದೆ ಅಂಗಳದಲ್ಲಿ ಕುಳಿತೇ ಮೇಷ್ಟ್ರ ದಾರಿ ಕಾಯುತ್ತಾ ಸಮಯ ನೂಕಿದೆ.

ಸಂಜೆ ಸುಮಾರು ಏಳರ ಹೊತ್ತಿಗೆ ಮೇಷ್ಟ್ರು ನಮ್ಮ ಮನೆ ಕಡೆ ಬರುವುದನ್ನ ತುಸು ದೂರದಿಂದಲೆ ನೋಡಿದ ನಾನು ಅಂಗಳದಿಂದಲೆ “ಅವ್ವಾ, ಮೇಷ್ಟ್ರು ಬಂದ್ರು” ಎಂದು
ಕೂಗಿದೆ. “ಆಯ್ತು, ಆದರೆ ನೀನ್ಯಾಕೆ ಇವತ್ತು ಆಟ ಅಡಲಿಕ್ಕೆ ಹೋಗಿಲ್ಲ? ನಾನು ಲೋಕಪ್ಪನ ಜೊತೆಗೆ ಮಾತನಾಡುತ್ತೇನೆ. ನೀನು ಇಲ್ಲಿರಬೇಡ, ಬೇಗ ಆಟವಾಡಲಿಕ್ಕೆ ಹೊರಡು” ಎಂದು ನನ್ನನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದಳು. ಅವ್ವನನ್ನು ಶಪಿಸುತ್ತಲೆ ಒಲ್ಲದ ಮನಸ್ಸಿನಿಂದ ಮನೆಯಿಂದ ಹೊರಬಿದ್ದವನು “ಛೇ, ಮನೆಯಲ್ಲಿದ್ದು ಅವ್ವ ಮೇಷ್ಟ್ರ ಸಾಲ ಮನ್ನಾಮಾಡುವ ಖುಷಿಯ ಪ್ರಸಂಗವನ್ನು ಪ್ರತ್ಯಕ್ಷದರ್ಶಿಯ ರೂಪದಲ್ಲಿ ಸವಿಯಬೇಕಿತ್ತು” ಎಂದುಕೊಳ್ಳುತ್ತಲೇ ಸ್ನೇಹಿತರನ್ನು ಕೂಡಿದವನು ಆಟ ಆಡುವ ಹುಮ್ಮಸ್ಸಿನಲ್ಲಿ ಎಲ್ಲವನ್ನೂ ಮರೆತುಬಿಟ್ಟೆ.

ಬೆಳಿಗ್ಗೆ ಶಾಲೆಯಲ್ಲಿ ಮೇಷ್ಟ್ರ ಮುಖವನ್ನು ಕಂಡವನಿಗೆ ಹಿಂದಿನ ಸಂಜೆಯ ಘಟನೆಯ ನೆನಪಾಯಿತು. ಬೆಳಗಿನ ಶಾಲೆ ಮುಗಿದು ಮಧ್ಯಾಹ್ನದ ಊಟದ ಸಮಯ ಬರಲು ಮನೆಗೆ ಹೊರಟು ನಿಂತ ನನ್ನನ್ನು ತರಗತಿಯಲ್ಲಿ ಸ್ವಲ್ಪ ಕಾಲ ಉಳಿಯುವಂತೆ ಕೇಳಿಕೊಂಡ ಮೇಷ್ಟ್ರು ಎಲ್ಲಾ ಬಾಲಕರು ಹೋದ ತರುವಾಯ ನನ್ನ ಬಳಿಗೆ ಬಂದವರು “ಪ್ರಕಾಶ, ನಿನ್ನೆ ನಿಮ್ಮ ಅಜ್ಜಿಯ ಜೊತೆ ಮಾತನಾಡಿದ್ದೇನೆ. ನನ್ನ ಸಾಲದ ವ್ಯವಹಾರದ ಬಗ್ಗೆ ನೀನು ಅಜ್ಜಿಯನ್ನು ಏನನ್ನೂ ಕೇಳಕೂಡದು. ನಾವಿಬ್ಬರೂ ನಮ್ಮ ಹಣಕಾಸಿನ ವ್ಯವಹಾರವನ್ನು ಸೂಕ್ತವಾಗಿ ಬಗೆಹರಿಸಿಕೊಂಡಿದ್ದೇವೆ. ಈ ವಿಷಯದಲ್ಲಿ ನೀನು ಹೆಚ್ಚು ಹರಟೆ ಮಾಡಲು ಹೋದರೆ ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ನೋಡು” ಎಂದು ಖಡಕ್ಕಾಗಿಯೇ ಎಚ್ಚರಿಸಿ ನನ್ನನ್ನು ಮನೆಗೆ ಹೋಗುವಂತೆ ಹೇಳಿದರು. ಮೇಷ್ಟ್ರ ಎಚ್ಚರಿಕೆ ನನ್ನ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟುಮಾಡಲಿಲ್ಲ. ಅವ್ವ ಮೇಷ್ಟ್ರನ್ನು ಸಾಲದ ಹೊರೆಯಿಂದ ಋಣಮುಕ್ತರನ್ನಾಗಿ ಮಾಡಿದ್ದಾಳೆ ಎಂದೇ ಯೋಚಿಸಿದ ನಾನು ನನ್ನ ಮಾತಿಗೆ ಈ ಮಟ್ಟಿಗಿನ ಬೆಲೆ ನನ್ನ ಅವ್ವನಿಂದ ಸಿಕ್ಕಿತಲ್ಲ ಎಂದು ಅತ್ಯಂತ ಖುಷಿಯಿಂದ ಕೂಡಿದವನಾಗಿ, ಮುಗ್ಗರಿಸುವುದನ್ನೂ ಲೆಕ್ಕಿಸದೆ ಓಡುತ್ತಾ ಈಗಾಗಲೆ ರಸ್ತೆಯಲ್ಲಿ ಬಹಳ ದೂರಸಾಗಿದ್ದ ನನ್ನ ಮನೆಸಮೀಪದ ಸಹಪಾಠಿ ಬಡಗಿ ನಾಗರಾಜನನ್ನು ಸೇರಿಕೊಂಡೆ. ಮನೆ ಹೊಸ್ತಿಲನ್ನು ತಲುಪಿದವನಿಗೆ “ಲೋಕಪ್ಪ” ಎನ್ನುವ ಹೆಸರು ಕಿವಿ ಮೇಲೆ ಬೀಳಲು ಹಾಗೆಯೇ ನಿಂತು ತಾತನ ಒಟ್ಟಿಗೆ ಮಾತನಾಡುತ್ತಿದ್ದ ಅವ್ವನ ಮಾತುಗಳಿಗೆ ಕಿವಿಯಾದೆ. “ರೀ, ನೆವ್ವಾರ ಲೋಕಪ್ಪ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ? ಪ್ರಕಾಶನ ತಲೆಕೆಡಿಸಿ ತನ್ನ ಸಾಲ,ಬಡ್ಡಿ ಎಲ್ಲಾ ಮನ್ನಾ ಮಾಡಿಸಿಕೊಳ್ಳಲಿಕ್ಕೆ ಪ್ರಯತ್ನಪಟ್ಟಿದ್ದ. ನಿನ್ನೆ ಸಂಜೆ ಮನೆಗೆ ಕರೆದು ಉಗಿದು ಉಪ್ಪಿನಕಾಯಿ ಹಾಕಿದ್ದೇನೆ. ನಾನು ಪ್ರಕಾಶನಿಗೆ ಈ ಬಗ್ಗೆ ಏನೂ ಹೇಳಿಲ್ಲ ಎಂದು ಆ ದೇವರ ಮೇಲೆ ಪ್ರಮಾಣ, ಈ ದೇವರ ಮೇಲೆ ಆಣೆ ಎಂದು ಸುಳ್ಳು ಬೇರೆ ಹೇಳುತ್ತಲೇ ಇದ್ದ. ಈ ವಿಷಯದಲ್ಲಿ ಪ್ರಕಾಶನ ಕಡೆಯಿಂದ ಮತ್ತೊಮ್ಮೆ ಪ್ರಸ್ತಾಪ ಬಂದರೆ ನಾನು ನಿನಗೆ ಮುಂದೆ ಒಂದು ಬಿಡಿಗಾಸನ್ನೂ ಸಾಲವಾಗಿ ಕೊಡುವುದಿಲ್ಲ. ಚಕ್ರಬಡ್ಡಿ ಕೊಟ್ಟು ನಿಂಗಪ್ಪನ ಬ್ಯಾಂಕಿಗೆ ಹೋಗಿ ದುಡ್ಡು ಕೇಳಬೇಕಾಗುತ್ತದೆ ಎಂದು ಗದರಿಸಿ ಕಳುಹಿಸಿದ್ದೇನೆ” ಎಂದು ತಾತನ ಬಳಿ ಅವ್ವ ಉಲಿಯುತ್ತಿದ್ದರೆ ನನಗೆ ನಿಂತಿದ್ದ ನೆಲ ಕುಸಿಯುತ್ತಿರುವ ಅನುಭವವಾಯಿತು. ಇಲ್ಲಿಯವರೆಗೂ ಹೊಟ್ಟೆಯಲ್ಲಿ ಇಲಿಗಳು ಓಡಾಡುತ್ತಿದ್ದ ರೀತಿಯ ಹಸಿವನ್ನು ಕಟ್ಟಿಕೊಂಡಿದ್ದವನಿಗೆ ಒಮ್ಮೆಲೇ ಹೊಟ್ಟೆ ತೊಳಸಿ ಬಂದಂತಾಗಲು ಮನೆಯೊಳಗೆ ಕಾಲಿಡಲು ಮನಸ್ಸಾಗದೆ, ಊಟದ ಗೋಜನ್ನೂ ತೊರೆದು ಮಧ್ಯಾಹ್ನದ ತರಗತಿಗಳಿಗಾಗಿ ಮತ್ತೆ ಶಾಲೆಯನ್ನು ಸೇರಿದೆ. ತರಗತಿಗಳು ಆರಂಭವಾದಾಗ ನಮಗೆ ಲೆಕ್ಕದ ಪಾಠವನ್ನು ಮಾಡತೊಡಗಿದ ಲೋಕಪ್ಪ ಮೇಷ್ಟ್ರು ಹೇಳಿಕೊಟ್ಟ ಕೂಡುವ ಲೆಕ್ಕಗಳೆಲ್ಲವೂ ನನಗೆ ಕಳೆಯುವ ಲೆಕ್ಕಗಳಂತೆ ಪರಿಭಾಸವಾಗಿದ್ದು ಆ ಹೊತ್ತಿನ ನನ್ನ ಮನಃಸ್ಥಿತಿಯ ಕಾರಣದಿಂದಲೇ ಎನ್ನುವುದು ತದನಂತರದಲ್ಲಿ ಸ್ಪಷ್ಟವಾಯಿತು. ಮುಂದಿನ ಹದಿನೈದು ದಿನಗಳ ಕಾಲ ಲೋಕಪ್ಪ ಮೇಷ್ಟ್ರ ಮುಖವನ್ನು ನೋಡುವ ಧೈರ್ಯ ಮಾತ್ರ ನನಗೆ ಬರಲೇ ಇಲ್ಲ.

 

Girl in a jacket
error: Content is protected !!