ಚಿದಂಬರ ಜೋಶಿ,ಚಿಕಾಗೂ.
ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ. ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ.
ಗುಣಗಳಿಗೆ ತಕ್ಕಂತೆ ವ್ಶಕ್ತಿಯ ಶಿಕ್ಷಣ ಆಗಬೇಕು
೪ ನೇ ಕಂತು
ಹಿಂದಿನ ೩ ಕಂತುಗಳಿಸಂಪರ್ನಪರ್ಕ ಕೊಂಡಿಯನ್ನು ಬಳಸಿ…
ಮುಂದುವರೆಸೋಣ. ಮುಂದೆ ಹೋಗುತ್ತಾ ಈ ನಾಲ್ಕು ಕಾಲುಗಳು ಸಧೃಡವಾದಾಗ ಹೇಗೆ ತಾನೇ ತಾನಾಗಿ ಸಮೃದ್ಧ ರಾಷ್ಟ್ರನಿರ್ಮಾಣದತ್ತ ಇಡೀ ಜನ ಸಮುದಾಯ ಸಾಗುತ್ತದೆ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ.
ಮೊಟ್ಟ ಮೊದಲು, ನಮ್ಮೆಲ್ಲ ಶಿಕ್ಷಣ ಸಂಸ್ಥೆಗಳು ಕಲಿಸುತ್ತಿರುವ ರೀತಿ, ನೀತಿ, ಪಠ್ಯಕ್ರಮ, ಎಲ್ಲವೂ ಸಮೂಲಾಗ್ರವಾಗಿ ಬದಲಾಗಬೇಕು. ಹೊಸ ವಿಧಾನದ ಅಡಿಪಾಯ ರಾಷ್ಟ್ರಚಾರಿತ್ರ್ಯ ಆಗಿರಬೇಕು. ಈ ಭದ್ರವಾದ ಅಡಿಪಾಯದ ಮೇಲೆ, ಬುದ್ಧಿ ಶಕ್ತಿ, ಆರ್ಥಿಕ, ಸಂರಕ್ಷಣಾ ನಂತರ ಬಾಕಿ ಎಲ್ಲಾ ವಿಷಯಗಳ ಶಿಕ್ಷಣವಾಗಬೇಕು. ಶಿಕ್ಷಣದ ಅರ್ಥವೇ ವಸ್ತು ವಿಷಯದ ಪರಿಚಯ, ಅನುಭವ ಹಾಗೂ ಅಭ್ಯಾಸ ಪಡೆಯುವುದು.
ಇದು ಇಂದಿನ ವ್ಯವಸ್ಥೆಯಲ್ಲಿ ಆಗುತ್ತಿದೆಯೋ? ಎಲ್ಲಾ ಮಟ್ಟಗಳಲ್ಲಿ ಆಗುತ್ತಿದೆಯೋ? ಅಂದರೆ, ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಎಲ್ಲಾ ಹೆಚ್ಚಿನ, ಮುಂದುವರೆದ ಪ್ರತಿ ಮಟ್ಟಗಳಲ್ಲೂ ಆಗಬೇಕು. ಅಲ್ಲವೇ?
ಜೀವನ ವೈವಿಧ್ಯಮಯ. ಗಾಳಿ, ಬೆಳಕು, ನೀರು ಎಲ್ಲವೂ ಎಲ್ಲರಿಗೂ ಒಂದೇ ಆದರೂ, ಇವುಗಳ ಪ್ರಭಾವ ಎಲ್ಲಾ ಚರ ಹಾಗೂ ಅಚರ ವಸ್ತುಗಳ ಮೇಲೆ ಒಂದೇ ರೀತಿಯಾಗಿರುವದಿಲ್ಲ. ಹಾಗೆಯೇ ಪ್ರತಿ ಜೀವಕ್ಕೆ ಇವುಗಳ ಅವಶ್ಯಕತೆ ಒಂದೇ ರೀತಿ, ಒಂದೇ ಪ್ರಮಾಣ ಆಗಿರುವದಿಲ್ಲ. ಇದನ್ನು ನೀವು ಒಪ್ಪುತ್ತೀರಾ? ಇದೇ ಸಹಜ, ಪ್ರಾಕೃತಿಕ. ಸ್ವಲ್ಪ ನಮ್ಮ ಈ ಪ್ರಪಂಚವನ್ನು ತೆರೆದ ಕಣ್ಣುಗಳಿಂದ, ತೆರೆದ ಮನಸ್ಸಿನಿಂದ ಗಮನಿಸಿ. ಅಚರ ಜೀವಿಗಳಾದ ಸಸ್ಯಗಳು, ಚರಜೀವಿಗಳಲ್ಲಿ ನೀರು, ಗಾಳಿ ಹಾಗೂ ಬೆಂಕಿಗಳಿಂದ ಹಿಡಿದು, ವೈವಿಧ್ಯಮಯ ಪ್ರಾಣಿ ಸಂಕುಲಗಳನ್ನು ನೋಡಿ. ಎಲ್ಲವೂ, ಸೃಷ್ಟಿಗೆ ಅನುಗುಣವಾಗಿ, ಜೀವಿಸುತ್ತವೆ, ಕಾರ್ಯ ಮಾಡುತ್ತವೆ, ಕೊನೆಗೆ ಅಳಿಯುತ್ತವೆ. ಈ ಸೃಷ್ಟಿ ಹಾಗೂ ಅಳಿವಿನ ಮಧ್ಯೆ, ಒಂದು ಇನ್ನೊಂದನ್ನು ಅನುಕರಿಸುವದಿಲ್ಲ, ಕೇವಲ ಪೂರಕವಾಗಿ ಕೆಲಸ ಮಾಡುತ್ತವೆ.
ಉದಾಹರಣೆಗೆ, ಸಸ್ಯಗಳನ್ನೇ ತೆಗೆದುಕೊಳ್ಳಿ. ಎಲ್ಲಾ ಸಸ್ಯಗಳೂ ಒಂದೇನೆ? ಇಲ್ಲ ತಾನೇ. ಸಹಸ್ರಾರು ವಿಧಗಳು. ಪ್ರತಿ ವಿಧಗಳೂ, ತಮ್ಮದೇ ಆದ, ರೂಪ, ಗುಣಗಳನ್ನು ಹೊಂದಿರುತ್ತವೆ. ಅವು, ಕೊಡುವ, ಹೂವು, ಫಲ ಹಾಗೂ ಇತರೆ ಕೊಡುಗೆಗಳೂ ಬೇರೆ ಬೇರೆ. ಅಲ್ಲವೇ? ಗಮನಿಸುವ ಭರದಲ್ಲಿ, ಒಂದು ವಿಚಾರ, ಅತಿ ಮುಖ್ಯ ವಿಚಾರ ಮರೆತೇ ಹೋಗುತ್ತದೆ. ಯಾವುದು ಗೊತ್ತಾ? ಅವುಗಳಿರುವ ಪೂರಕ ಪರಿಸರ. ಅವು ಹುಟ್ಟಿ ಬೆಳೆಯುವ ಮಣ್ಣು. ಅವು ಗಾಳಿ ಬೆಳಕುಗಳನ್ನು ಬಳಸುವ ರೀತಿ, ಪ್ರಮಾಣ ಇತ್ಯಾದಿ. ಉದಾಹರಣೆಗೆ, ಕಬ್ಬು, ಭತ್ತ ಬಾಳೆ ಗಿಡಗಳಿಗೆ ಬೇಕಾದಷ್ಟು ನೀರು ಹತ್ತಿಯ ಗಿಡಕ್ಕೆ ಬೇಕೇ? ಹಾಗೆಯೇ, ಉಷ್ಣ ವಲಯದ ಸಸ್ಯಗಳನ್ನು ತಂದು ಹಿಮಾಲಯದ ತಪ್ಪಲಲ್ಲಿ ಬೆಳೆಸಲು ಹೊರಟರೆ ಆಗುತ್ತದೆಯೇ?
ಇದೇ ರೀತಿ, ನಾವೆಲ್ಲಾ ಅಷ್ಟಾಗಿ ಇಷ್ಟ ಪಡದ ಕ್ರಿಮಿ ಕೀಟಗಳ ಸಂಕುಲ. ಎಲ್ಲವೂ ಸೃಷ್ಟಿಯ ಸಮತೋಲನವನ್ನು ಕಾಯುವಲ್ಲಿ, ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ನೀಡುವ ಯೋಗದಾನ ಸರ್ವೇ ಸಾಮಾನ್ಯವಾಗಿ, ಹೆಚ್ಚಿನ ಮಟ್ಟಿಗೆ ಯಾರೂ ಗಮನಿಸದೆ ಇರೋದು ನಿಜವಾದ ದುರಂತ. ಆದರೆ ಇದು ಸತ್ಯ. ಒಂದು ಕಚ್ಚಾ ಅರಣ್ಯಕ್ಕೆ ಹೋಗಿ ನೋಡಿ. ಎಲ್ಲವೂ ಅತಿ ಸುಂದರ, ಅಷ್ಟೇ, ಭೀಕರ. ಸೂಕ್ಷ್ಮವಾಗಿ ಗಮನಿಸಿದರೆ, ಮನುಷ್ಯನನ್ನು ಬಿಟ್ಟು ಅಲ್ಲಿ ಸಿಗದೇ ಇರುವ ಜೀವ ಜಾತಿಗಳಿಲ್ಲ. ಅವೆಲ್ಲ ನಮ್ಮ ಕಣ್ಣಿಗೆ ಅನಾಗರೀಕತೆ ಅನ್ನಿಸಬಹುದು ಆದರೆ ಅದೇ ಸಹಜ, ಪ್ರಾಕೃತಿಕ.
ಇದೇ ರೀತಿ, ಮನುಷ್ಯನ ಗುಣ ಸ್ವಭಾವಗಳೂ ಕೂಡ. ನಾವೆಲ್ಲಾ ಮನುಷ್ಯ ಸಂಕುಲದವರೇ ಆದರೂ, ನಮ್ಮಂತೆ ಇನ್ನೊಬ್ಬರಿಲ್ಲ. ಇದೇ ಸೃಷ್ಟಿಯ ನಿಯಮ, ವಿಶಿಷ್ಟತೆ. ಆದರೆ, ಇದನ್ನು ಸಂಪೂರ್ಣವಾಗಿ ಮರೆತೇ ಹೋಗಿದ್ದೆವೇನೋ ಎನ್ನುವ ಹಾಗೆ ನಾವುಗಳು ಜೀವಿಸುತ್ತಿದ್ದೇವೆ. ನಮ್ಮಗಳ ಈ ಜೀವನದಲ್ಲಿ ಸಹಜತೆ ಅತೀ ಕಡಿಮೆ. ಅಸಹಜತೆ ಮಿತಿ ಮೀರಿ ಹೋಗಿದೆ. ಇದು ಹೇಗಿದೆ ಅಂದರೆ, ಕ್ರಿಕೆಟ್ ತಂಡದ ಪ್ರತಿಯೊಬ್ಬರೂ ಸಚಿನ್ ಆಗಬೇಕೆಂದು ಬಯಸಿದಂತೆ. ಇನ್ನೂ ಹೇಳಬೇಕೆಂದರೆ ಒಂದು ತಂಡದಲ್ಲಿ ೧೧ ಆಟಗಾರರೆಲ್ಲರೂ ಸಚಿನ್ ಆದರೆ ಆ ತಂಡ ಪರಿಣಾಮಕಾರಿಯಾಗಿ ಆಡೀತೇ? ಸ್ವಲ್ಪ ಯೋಚಿಸಿ. ಇದು ಸಹಜವೇ? ಯಾವ ಲೆಕ್ಕದಲ್ಲಿ, ಯಾವ ರೀತಿಯಲ್ಲಿ ಸಹಜ?
ಒಂದು ವಿಚಾರ ಹೇಳಲೇ? ನಮಗೆ ಈ ಸತ್ಯದ ಅರಿವು ಆದಲ್ಲಿ, ನಿರಂತರವಾಗಿ ಇದ್ದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಮೂದಲಿಕೆಗಳ ಸ್ವರೂಪ ಬದಲಾಗುತ್ತವೆ. ಉದಾಹರಣೆಗೆ, ಒಡಹುಟ್ಟಿದವರನ್ನು ಪರಸ್ಪರ ಹೋಲಿಸುತ್ತಾ, “ನೋಡು, ಅವಳಿಂದ ಕಲಿ, ಅವಳಂತೆಯೇ ಆಗ್ಬಾರ್ದೆ ನೀನೂ ಕೂಡ?” ಅಥವಾ, ಹೆಂಡತಿ ಗಂಡನನ್ನು “ನೋಡಿ ಪಕ್ಕದ ಮನೆಯವರು ಕಾರ್ ತೆಕ್ಕೊಂಡ್ರೂ. ನಾವೂ ಇದೀವಿ ದಂಡಕ್ಕೆ” ಅನ್ನುವ ಮೂದಲಿಕೆಗಳು ಬದಲಾಗುತ್ತವೆ. ಖಂಡಿತ. ಉದಾಹರಣೆಗಳು ಇವು. ನಕ್ಕುಬಿಡಿ.
ಗುಣಗಳು ಮೂರು. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಎಲ್ಲ ಜೀವಿಗಳಲ್ಲೂ ಈ ಮೂರೂ ಗುಣಗಳು ಇದ್ದೇ ಇರುತ್ತವೆ. ಆದರೆ ಇವುಗಳ ಪ್ರಮಾಣ ಬೇರೆ ಬೇರೆ. ಅದಕ್ಕೆಂದೇ, ನಾವೆಲ್ಲಾ ಒಂದೇ ಅಲ್ಲ. ಯಾವ ರೀತಿಯಲ್ಲೂ ಒಂದೇ ಅಲ್ಲ. ಇದೇ ಸತ್ಯ. ಇದನ್ನು ಅಲ್ಲಗಳೆದು ಬದುಕಿದರೆ, ಅದೇ ಅಸಹಜ ಜೀವನ. ಈ ಅಜ್ನ್ಯಾನಕ್ಕೆ ಈಗಾಗಲೇ ನಾವು ಸಾಕಷ್ಟು ಬೆಲೆ ತೆತ್ತಿದ್ದೀವಿ. ತೆರುತ್ತಲೇ ಇದ್ದೀವಿ. ಬದಲಾವಣೆ ಆಗದಿದ್ದಲ್ಲಿ, ತೆರುತ್ತಲೇ ಇರುತ್ತೀವಿ. ಈ ಬೆಲೆ, ಕೇವಲ ಐಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಲೂ ಕೂಡ. ಅಸಹಜತೆಯ ಜೀವನ, ನೀರಸ, ನಿರುತ್ಸಾಹಕರ. ಇಲ್ಲಿ ಪ್ರತಿ ಕ್ಷಣ ಏರು ಪೇರು. ಈ ಮೂರೂ ಗುಣಗಳ ಪ್ರಮಾಣದ ವ್ಯತ್ಯಾಸವೇ ನಮ್ಮೆಲ್ಲರ ಮೂಲಭೂತ ವಿಭಿನ್ನವಾದ ವಿಚಾರಗಳಿಗೆ, ನಡವಳಿಕೆಗಳಿಗೆ ಕಾರಣ. ಇದೇ ಕಾರಣಕ್ಕೆಂದೇ, ನಾವು ಇಷ್ಟ ಪಡುವ ವಿಚಾರಗಳು, ಕೆಲಸಗಳು, ಜೀವನ ಶೈಲಿಗಳು, ಬಯಸುವ ಸುಖಗಳೂ ಎಲ್ಲವೂ ಬೇರೆ ಬೇರೆ. ಉದಾಹರಣೆಗೆ, ಒಂದೇ ಚಲನಚಿತ್ರವನ್ನು ನೋಡಿರುವ ಸಾವಿರಾರು ಜನಗಳನ್ನ ಕೇಳಿ ನೋಡಿ, ಒಬ್ಬರಿಗೆ ಒಂದು ಹಾವ ಭಾವ ಇಷ್ಟವಾದಲ್ಲಿ, ಇನ್ನೊಬ್ಬರಿಗೆ ಹಾಡಿನತ್ತ ಒಲವು, ಇನ್ನೊಬ್ಬರಿಗೆ ಒಂದು ಸಂವಾದ ಇಷ್ಟವಾದರೆ, ಇನ್ನೊಬ್ಬರಿಗೆ ಇನ್ನೊಂದು. ಇದು ಸಹಜ.
ಸರಿ ಸರಿ ವಿಷಯಕ್ಕೆ ಬನ್ನಿ ಅಂತೀರಾ? ಇದೋ ಬಂದೆ.
ನಮ್ಮ ಶಿಕ್ಷಣಾ ಸಂಸ್ಥೆಗಳು ಮೊದಲು ವ್ಯಕ್ತಿ ಗುಣ ವಿಶೇಷಗಳನ್ನು ಗುರುತಿಸಬೇಕು. ಈ ಕೆಲಸ ವ್ಯಕ್ತಿಯ ಅತ್ಯಂತ ಸಣ್ಣ ವಯಸ್ಸಿನಲ್ಲೇ ಆಗಿಬಿಡಬೇಕು. ಹಿಂದಿನ ಕಾಲದಲ್ಲಿ, ಈ ಕೆಲಸ ಆ ಕುಟುಂಬದ ಗುರು, ಹಿರಿಯ, ಇಲ್ಲವೇ, ಆ ಸಮಾಜದ ಗುರು, ಹಿರಿಯರು ಮಾಡುತ್ತಿದ್ದರು. ಈಗ ಆ ಜ್ನ್ಯಾನ ನಮ್ಮಲ್ಲಿ ಇಲ್ಲ. ಇದ್ದ ಜ್ನ್ಯಾನ ತಲತಲಾಂತರಗಳಿಂದ ಬಳಸದೆ ನಷ್ಟವಾಗಿ ಹೋಗಿದೆ. ಇರಲಿ. ಹೇಗೆ ಗುಣಗಳನ್ನ ಗುರುತಿಸುವುದು ಎಂಬುವದನ್ನು ಮತ್ತೊಮ್ಮೆ ಕಲಿಯಬೇಕು. ಪಾಶ್ಚಾತ್ಯ ದೇಶಗಳಿಂದ ಇದನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ನಮ್ಮಲ್ಲೇ ಇದೆ. ಹುದುಗಿ ಹೋಗಿರೋ ಈ ಜ್ನ್ಯಾನವನ್ನ ಮತ್ತೊಮ್ಮೆ ಪ್ರಕಾಶಕ್ಕೆ ತರಬೇಕು. ಇದಕ್ಕೆ ಆಗಬೇಕಾದ ಕೆಲಸ ಬಹಳಷ್ಟಿದೆ.
ಗುರುತಿಸಿದ ಆ ಗುಣಗಳಿಗೆ ತಕ್ಕಂತೆ, ಆ ವ್ಯಕ್ತಿಯ ಶಿಕ್ಷಣ ವ್ಯವಸ್ಥೆ ಆಗಬೇಕು. ಇದೇ ಸರಿಯಾದ ದಿಕ್ಕಿನಲ್ಲಿ ಇಡಬಹುದಾದ ಸರಿಯಾದ ಮೊದಲನೇ ಹೆಜ್ಜೆ. ಈ ಹೆಜ್ಜೆಯ ಅವಶ್ಯಕತೆಯ ಅರಿವು ಎಲ್ಲರ ವಿಚಾರಗಳಲ್ಲಿ, ಕಾರ್ಯಗಳಲ್ಲಿ ಮೂಡಿಬರಬೇಕು. ಎಲ್ಲ ರಂಗಗಳಲ್ಲೂ ಎಲ್ಲಾ ಮಟ್ಟಗಳಲ್ಲೂ, ಪ್ರತಿಯೊಬ್ಬರಲ್ಲೂ ಈ ಅರಿವು ಮೂಡಬೇಕು. ಇದು ಅಗಾಧವಾದ, ಆದರೂ ಅತ್ಯವಶ್ಯಕವಾದ ಕೆಲಸ.
ಮುಂದಿನ ಹೆಜ್ಜೆ, ದಿಕ್ಕು, ಮುಂಬರುವ ಲೇಖನಗಳಲ್ಲಿ.
ನೀವೇನಂತೀರಿ?
ನಿಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ನನ್ನೊಡನೆ ಹಂಚಿಕೊಳ್ಳಲು ನನ್ನ ಈ email ನ್ನು ಬಳಸಿ – AnswerGuy001@gmail.com