ಗುಂಡಜ್ಜಿ ಎಂಬ ಅಬಲೆಯ ಜೀವಗಾಥೆಯ ಹೆಜ್ಜೆ ಗುರಿತು…
ಅದು ಎಪ್ಪತ್ತನೇ ದಶಕದ ಮಧ್ಯಭಾಗದ ಜುಲೈ ತಿಂಗಳ ಮಂಗಳವಾರದ ಒಂದು ದಿನ. ಎಂದಿನಂತೆ ಬೆಳಿಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟು ನಿಂತಿದ್ದವನು ವಿರುಪಣ್ಣ ತಾತನ ಬರುವನ್ನು ಎದುರು ನೋಡುತ್ತಾ ಮನೆ ಬಾಗಿಲಿನಲ್ಲಿ ನಿಂತಿದ್ದೆ. ಬೆಳಿಗ್ಗೆ ನಾನು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ತಾತ ಚಂದ್ರಮೌಳೇಶ್ವರ ದೇವಸ್ಥಾನದ ತಮ್ಮ ನಿತ್ಯಪೂಜೆಯ ಸಲುವಾಗಿ ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದ ಊರ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದದ್ದು ವರ್ಷಗಳಿಂದ ಚಾಲ್ತಿಯಲ್ಲಿದ್ದ ಪದ್ಧತಿ.
ಸ್ನಾನ, ಲಿಂಗಪೂಜೆಗಳನ್ನು ಯಥಾವತ್ತಾಗಿ ತಮ್ಮ ಮನೆಯಲ್ಲಿ ಮುಗಿಸಿಕೊಂಡು, ಹಣೆ, ಮೈ, ಕೈಗಳಿಗೆ ದೂರದಿಂದಲೇ ಎದ್ದು ಕಾಣುವಷ್ಟು ಢಾಳಾಗಿ ವಿಭೂತಿ ಪಟ್ಟೆಗಳನ್ನು ಬಳಿದುಕೊಂಡು, ಶುಭ್ರವಾದ ಮತ್ತು ಗರಿಗರಿ ಇಸ್ತ್ರಿಯಿಂದ ಕೂಡಿದ ಬಿಳಿಯ ಸಡಿಲ ಖಾದಿ ಜುಬ್ಬಾ ಮತ್ತು ಪಂಚೆಯನ್ನು ಧರಿಸಿ, ಎತ್ತರದ ನಿಲುವಿನ, ಕನ್ನಡಕಧಾರಿಯಾದ ನನ್ನ ತಾತ ವಿರುಪಣ್ಣಗೌಡರು ತಮ್ಮದೇ ಆದ ರಾಜಗಾಂಭೀರ್ಯದಿಂದ ಬಸ್ ಸ್ಟ್ಯಾಂಡ್ ಹಾಯ್ದು ನಮ್ಮ ಮನೆಯ ಮುಂದಿನ ಮುಖ್ಯರಸ್ತೆಯಲ್ಲಿ ನಡೆದು ಬರುತ್ತಿದ್ದರು ಎಂದರೆ ಅದನ್ನು ನೋಡುವುದೇ ಒಂದು ಸೊಗಸು. ಹತ್ತಾರು ವರ್ಷಗಳ ಕಾಲ ಊರಿನ ಪಟೇಲರಾಗಿ ಸಮರ್ಥವಾಗಿ ಕೆಲಸ ಮಾಡಿದ ನನ್ನ ತಾತ ಬದಲಾದ ಸರ್ಕಾರಿ ನಿಯಮಗಳ ಪ್ರಕಾರ “ಪಟೇಲಗಿರಿ” ಯನ್ನು ತ್ಯಜಿಸಬೇಕಾಗಿ ಬಂದು ಅಂದಿಗೆ ಒಂದೂವರೆ ದಶಕಗಳ ಮೇಲಾಗಿದ್ದರೂ ಅವರ ಗತ್ತುಗೈರತ್ತುಗಳು ರವಷ್ಟೂ ಮುಕ್ಕಾಗದೆ ಮೊದಲಿನ ಮೊಣಚನ್ನು ಹಾಗೆಯೇ ಕಾಯ್ದುಕೊಂಡಿದ್ದವು. ಪಟೇಲರಿಗೆ “ಗೌಡಗಿರಿ” ಯ ಪಟ್ಟ ಇದ್ದಾಗ ಸಿಕ್ಕಷ್ಟು ಮರ್ಯಾದೆ ಈಗ ಸಿಗುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಎದುರಿಗೆ ಬರುವ ಊರ ಜನ ಮಾಡುವ ನಮಸ್ಕಾರಗಳಿಗೆ ಪ್ರತಿ ನಮಸ್ಕಾರ ಹೇಳುತ್ತಿದ್ದ ವೇಳೆ ಪದೇಪದೇ ಊರ್ಧ್ವಮುಖಿಯಾಗುತ್ತಿದ್ದ ಅವರ ಬಲಗೈ ಮಾತ್ರ ದೇವಸ್ಥಾನದ ಪಯಣದ ಉದ್ದಕ್ಕೂ ಹೆಚ್ಚಿನ ಮಟ್ಟದ ವಿಶ್ರಾಂತಿಗೆ ಭಾಜನವಾಗದೇ ಇದ್ದದ್ದನ್ನು ನಾನು ಗಮನಿಸಿದ್ದೆ.
ನಾನು ಆದಾಗ ತಾನೇ ಊರಿನ ಸರ್ಕಾರಿ ಬಾಲಕರ ಶಾಲೆಯ ನಾಲ್ಕನೇ ಇಯತ್ತೆಯನ್ನು ಮುಗಿಸಿ ಸರ್ಕಾರಿ ಮಾಧ್ಯಮಿಕ ಶಾಲೆಯ ಐದನೇ ತರಗತಿಯಲ್ಲಿ ಮುಂದಿನ ವ್ಯಾಸಂಗವನ್ನು ಕೈಗೊಂಡಿದ್ದೆ. ನನ್ನ ಮಾಧ್ಯಮಿಕ ಶಾಲೆಯ ವ್ಯಾಸಂಗ ಶುರುವಾದ ಕಳೆದ ಒಂದು ತಿಂಗಳ ಅವಧಿಯಲ್ಲಿ ನನ್ನ ಮತ್ತು ತಾತನ ಸಂಬಂಧದಲ್ಲಿ ಒಂದು ಗಮನಾರ್ಹ ಬದಲಾವಣೆಯೊಂದು ಘಟಿಸಿತ್ತು. ನಾನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ಹೊತ್ತು, ಅಕಸ್ಮಾತ್ ತಾತ ದಾರಿಯಲ್ಲಿ ಅಡ್ಡ ಬಂದರೆ “ಏನೋ ಪ್ರಕಾಶ, ಹೇಗಿದ್ದೀಯಾ?” ಎಂದಷ್ಟೇ ವಿಚಾರಿಸಿ ಮುನ್ನಡೆಯುತ್ತಿದ್ದರು.
ಆದರೆ ಅದೇ ತಾತ ನಾನು ಐದನೇ ತರಗತಿಗೆ ಬಡ್ತಿಯಾದ ಬಳಿಕ ನಾನು ರಸ್ತೆಯಲ್ಲಿ ಅವರಿಗೆ ಸಿಕ್ಕ ವೇಳೆ ನನ್ನ ಕುಶಲೋಪರಿ ವಿಚಾರಿಸುವುದಕ್ಕಷ್ಟೇ ತಮ್ಮ ಸಂವಾದವನ್ನು ಮಿತಿಗೊಳಿಸದೆ, ನಿಲುವಂಗಿಯ ಎಡಗಡೆ ಬದಿಯ ಜೇಬಿನಿಂದ ಐದು ಪೈಸೆಯ ನಾಣ್ಯವೊಂದನ್ನು ಹೊರತೆಗೆದು ನನಗೆ ಅದನ್ನು ಕೊಡಮಾಡುವ ಬಹಳ ಸ್ವಾಗತಾರ್ಹ ಬೆಳವಣಿಗೆಯೊಂದಕ್ಕೆ ನಾಂದಿ ಹಾಡಿದ್ದರು. ಆ ಸಮಯದಲ್ಲಿ ಐದು ಪೈಸೆಯ ನಾಣ್ಯ ಹುಡುಗರಾದ ನಮ್ಮ ಪಾಲಿನ ಬಹುದೊಡ್ಡ ನಿಧಿಯಾಗಿತ್ತು. ಐದು ಪೈಸೆಗೆ ನಮಗೆ ಏನೆಲ್ಲಾ ತಂದುಕೊಡುವಷ್ಟು ತಾಕತ್ತಿತ್ತು ಎನ್ನುವುದನ್ನು ಉಲ್ಲೇಖಿಸಿದರೆ ನಿಮಗೆ ಸೋಜಿಗವಾದೀತು. ಭದ್ರಪ್ಪಶೆಟ್ಟರ ಅಂಗಡಿಯ ಚಟಾಕಿನಷ್ಟು ಅಳತೆಯ, ಜೇಬು ತುಂಬುವಷ್ಟು ಮಾತ್ರದ ಹುರಿದ ಬಟಾಣಿ ಐದು ಪೈಸೆಗೆ ದೊರಕಿದರೆ, ನಾಗಪ್ಪಶೆಟ್ಟರ ಅಂಗಡಿಯ, ಅವರ ಧರ್ಮಪತ್ನಿ ಸೀತಮ್ಮನ ಕೈರುಚಿಯ ಮುದ್ರೆಯಿದ್ದ, ಎರಡು ಅತಿಕಾಯಿಗಳು ಐದು ಪೈಸೆಯಲ್ಲಿಯೇ ನಮ್ಮ ಬಾಯಿ ಸೇರುತ್ತಿದ್ದವು. ರಾಮಪ್ಪಶೆಟ್ಟಿ ಅಂಗಡಿಯ ಎರಡು ದೊಡ್ಡ ಹೃದಯಾಕಾರದ ಜೇನುತುಪ್ಪ ಬಣ್ಣದ ಕೊಬ್ಬರಿ ಪೆಪ್ಪರಮೆಂಟ್ ಸಿಗುತ್ತಿದ್ದದ್ದೂ ಇದೇ ಐದು ಪೈಸೆಯಲ್ಲಿಯೇ. ದುರ್ಗದಿಂದ ವಾರದಲ್ಲಿ ಒಂದೋ ಎರಡೋ ದಿನಗಳು ಮಾತ್ರ ಬರುತ್ತಿದ್ದ, ತಳ್ಳುವ ಗಾಡಿಯಲ್ಲಿ ಐಸ್ ಕ್ರೀಮ್ ಗಳನ್ನು ಇಟ್ಟುಕೊಂಡು ಬೀದಿ ಬೀದಿ ಸುತ್ತಿ ಮಾರಾಟ ಮಾಡುತ್ತಿದ್ದ ನಭಿಸಾಬ್ ಕೂಡ ಒಂದು ಐಸ್ ಕ್ಯಾಂಡಿ ಬಾರನ್ನು ಐದು ಪೈಸೆಗೇ ದಯಪಾಲಿಸುತ್ತಿದ್ದ. ಕುಂಟಯ್ಯಣ್ಣನ ಅಂಗಡಿಯ ಒಂದು ಸಣ್ಣ ಗ್ಲೂಕೋಸ್ ಬಿಸ್ಕಟ್ ಪ್ಯಾಕಿನ ಬೆಲೆಯೂ ಐದು ಪೈಸೆಯೇ.
ಹೀಗೆ ಹತ್ತು ಹಲವು ಭಾಗ್ಯಗಳ ತಿಜೋರಿಯನ್ನೇ ನಮ್ಮ ಪಾಲಿಗೆ ತೆರೆದಿಡುತ್ತಿದ್ದ ಐದು ಪೈಸೆಯ ಆಸೆಗಾಗಿ ದಿನವೂ ತಾತನ ಬರುವನ್ನೇ ಎದುರು ನೋಡುತ್ತಿದ್ದ ನಾನು ತಾತ ಕೊಟ್ಟ ನಿಧಿಯಲ್ಲಿ ನನಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಂಡುಕೊಂಡು, ನಿಧಾನಗತಿಯಲ್ಲಿ ಅವುಗಳನ್ನು ಮೆಲ್ಲುತ್ತಾ, ಅವುಗಳ ಸ್ವಾದದ ಇಂಚಿಂಚನ್ನೂ ಆಸ್ವಾದಿಸುತ್ತಾ ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರವಿದ್ದ ಶಾಲೆಗೆ ನಡೆದೇ ಹೋಗುತ್ತಿದ್ದೆ.
ಐದು ಪೈಸೆ ದೊರೆತ ನಂತರ ತಾತನನ್ನೇ ಹಿಂಬಾಲಿಸಿ, ಅಂದಿನ ಅಂಚೆ ಕಚೇರಿಯ ಮಗ್ಗುಲಲ್ಲಿದ್ದ ಚಂದ್ರಮೌಳೇಶ್ವರ ಗುಡಿಯವರೆಗೂ ಹೋಗುತ್ತಿದ್ದ ನಾನು, ದೇವಸ್ಥಾನದ ಹೊರಗೆ, ಚರಂಡಿಯ ಮೇಲೆ ಹಾಸಿದ್ದ ಸುಟ್ಟುಕಲ್ಲಿನ ಹಾಸುಗಲ್ಲಿನ ಮೇಲೆ ತಮ್ಮ ಚಪ್ಪಲಿಗಳನ್ನು ಬಿಟ್ಟು, ಮುಂದಿದ್ದ ಎರಡು ಗುಡಿಯ ಮೆಟ್ಟಿಲುಗಳನ್ನೂ, ಬಾಗಿದ ಬೆನ್ನಿನವರಾಗಿ, ಬಲಗೈಯಿಂದ ಮುಟ್ಟಿ ಹಣೆಗೆ ಒತ್ತಿಕೊಳ್ಳುತ್ತಲೇ, ಗುಡಿಯ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದ ತಾತನನ್ನು ಒಂದೆರೆಡು ನಿಮಿಷಗಳ ಕಾಲ ಟಾರುರಸ್ತೆಯ ಮಧ್ಯವೇ ನಿಂತು ಗಮನಿಸುತ್ತಾ ಮುಂದೆ ಸಾಗುವುದು ನನ್ನ ದಿನಚರಿಯ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿತ್ತು. ದೇವಸ್ಥಾನವನ್ನು ಹೊಕ್ಕ ತಾತನಿಗೆ ಪೂಜೆಗೆಂದು ಬಿದಿರಿನ ಬುಟ್ಟಿಯಲ್ಲಿ ನಿತ್ಯವೂ ಹೂಗಳನ್ನು ತಂದುಕೊಡುತ್ತಿದ್ದ ಗುಂಡಮ್ಮನ ದರ್ಶನ ಮಾಡುವ ಕಿರು ಉದ್ದೇಶವೊಂದೂ ನನ್ನ ಈ ನಿಲುಗಡೆಯ ಹಿಂದಿನ ಪ್ರಮುಖ ಕಾರಣವಾಗಿತ್ತು ಎಂದು ಈಗ ನನಗನ್ನಿಸುತ್ತಿದೆ. ದೇವಸ್ಥಾನದ ಹಿಂಭಾಗದಲ್ಲಿದ್ದ, ದೇವಸ್ಥಾನದ ಒಂದು ಭಾಗವೇ ಆದ, ಒಂದು ಕೋಣೆಯ, ಸದಾ ಕತ್ತಲು ಕವಿದು, ಕಿರಿದಾದ ಗುಹೆಯೊಂದನ್ನು ಹೋಲುವಂತಿದ್ದ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದ ಗುಂಡಮ್ಮ ನನಗೆ ತೀರಾ ಅಪರಿಚಿತಳೇನಲ್ಲ. ನಾನು ಪ್ರಾಥಮಿಕ ಶಾಲೆಯ ಮೂರನೇ ತರಗತಿಯಿಂದಲೂ, ಮೊದಲ ಎರಡು ವರ್ಷಗಳು ಶಾಲೆಗೆ ಹೋಗುತ್ತಿದ್ದ ಕೋಟೆಯ ಹಿಂದಿನ ಹುಣಸೇಮರದ ರಸ್ತೆಯನ್ನು ಬದಲಾಯಿಸಿದಾರಾಭ್ಯ, ದೇವಸ್ಥಾನದ ಮುಂದಿನ ಈ ಮುಖ್ಯರಸ್ತೆಯಿಂದಲೇ ಶಾಲೆಗೆ ಹೋಗುತ್ತಿದ್ದ ಲಾಗಾಯ್ತು, ಗುಂಡಮ್ಮನನ್ನು ಗುಡಿಯ ಪರಿಸರದಲ್ಲಿ ಆಗಾಗ್ಗೆ ನೋಡುತ್ತಲೇ ಇದ್ದೆ. ಸುಮಾರು ಐವತ್ತು ವರ್ಷ ಮೀರಿದ, ಬೋಳುತಲೆಯ ಗುಂಡಮ್ಮ ನನ್ನಲ್ಲಿ ಅದಂತಹುದೋ ಕುತೂಹಲವನ್ನು ಸ್ಪಷ್ಟ ಕಾರಣಗಳಿಲ್ಲದೆಯೇ, ಆ ಹೊತ್ತಿನಲ್ಲಿಯೇ ಮೂಡಿಸಿದ್ದಳು. ಪ್ರತೀ ಸೋಮವಾರಗಳಂದು ರಾತ್ರಿ ವೇಳೆ ಮತ್ತು ಶ್ರಾವಣ, ಕಾರ್ತೀಕ ಮಾಸಗಳಲ್ಲಿ ಊರಿನ ಶೆಟ್ಟರು ಮತ್ತು ಜೋಯಿಸರ ಮನೆಯವರು ಪ್ರತಿನಿತ್ಯ ಮಾಡುತ್ತಿದ್ದ ರಾತ್ರಿಯ ಹೊತ್ತಿನ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದ ಹೊತ್ತು ವಿಶೇಷ ರೂಪದಲ್ಲಿ ಗುಂಡಮ್ಮ ನನಗೆ ಕಾಣಸಿಗುತ್ತಿದ್ದಳು. ಚಂದ್ರಮೌಳೇಶ್ವರ ದೇವಸ್ಥಾನದ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ಅವಿಭಾಜ್ಯ ಅಂಗ ಎನ್ನುವಂತೆ ತೋರಿ ಬರುತ್ತಿದ್ದ ಗುಂಡಮ್ಮ ತನ್ನ ವಿಶೇಷವಾದ ಉಡುಗೆ- ತೊಡುಗೆಗಳಿಂದಲೇ ನನ್ನ ಗಮನವನ್ನು ಸೆಳೆದಿದ್ದಳು ಎನ್ನುವ ಅಂಶ ನನ್ನಲ್ಲಿ ಸ್ಪಷ್ಟವಾಗಲಿಕ್ಕೆ ಸ್ವಲ್ಪ ಕಾಲವೇ ತಗುಲಿತು. ತುಂಬಾ ಹಳೆಯದಾದಂತೆ ತೋರುತ್ತಿದ್ದ, ಯಾರೋ ಶೆಟ್ಟರ ಮನೆಯ ಅಥವಾ ಊರಿನ ಒಂದೇ ಬ್ರಾಹ್ಮಣ ಕುಟುಂಬವಾದ ವೆಂಕಟಜೋಯಿಸರ ಮನೆಯ ಹೆಂಗಸರು ಬಳಸಿ, ಬಳಿಕ ಗುಂಡಮ್ಮನಿಗೆ ಕೊಡಮಾಡಿದಂತೆ ತೋರುತ್ತಿದ್ದ, ಮಾಸಿದ, ಸುಕ್ಕುಸುಕ್ಕಾದ, ಸಣ್ಣಸಣ್ಣ ರಂಧ್ರಗಳಿದ್ದ ಸೀರೆಯನ್ನು ದಟ್ಟಿಯ ರೂಪದಲ್ಲಿ ಮೈಗೆ ಸುತ್ತಿಕೊಳ್ಳುತ್ತಿದ್ದ ಆಕೆ ಸೀರೆಯ ಸೆರಗು ಮುಂಭಾಗದ ನಡುವನ್ನು ಬಳಸಿ ಎಡಭಾಗದ ಸೊಂಟದ ಮೇಲೆ ಬರುವಂತೆ ಉಟ್ಟು, ಸೆರಗಿನ ತುದಿಯನ್ನು ಗಟ್ಟಿಯಾಗಿ ಎಡಸೊಂಟಕ್ಕೆ ಸಿಗಿಸಿಕೊಳ್ಳುತ್ತಿದ್ದಳು.
ತಲೆಯನ್ನು ಸದಾ ನುಣುಪಾಗಿ, ಕೇಶರಹಿತವಾಗಿರುವ ಹಾಗೆ ಬೋಳಿಸಿಕೊಳ್ಳುತ್ತಿದ್ದ ಗುಂಡಮ್ಮನ ತಲೆಯ ಮೇಲಿನ ಒಂದು ಕೂದಲೆಳೆಯನ್ನೂ ಕಂಡ ನೆನಪು ಈಗ ನನಗಿಲ್ಲ. ತಲೆಯ ಒಳಗಿರುವ ಧಾರ್ಮಿಕ ವಿವೇಕದ ಬಗ್ಗೆ ಚರ್ಚೆಯಾಗದೆ ತಲೆಯ ಮೇಲೆ ಧರಿಸಿರುವ ವಸ್ತ್ರದ ಬಗ್ಗೆಯೇ ದೊಡ್ಡ ವಿವಾದ ಹೊತ್ತಿ ಉರಿಯುತ್ತಿರುವ ಈ ಹೊತ್ತು ಗುಂಡಮ್ಮ ತನ್ನ ತಲೆಯ ಮೇಲೆ ಸದಾ ಧರಿಸುತ್ತಿದ್ದ ವಸ್ತ್ರದ ಬಗ್ಗೆ ಹೇಳಲೇಬೇಕು. ತನ್ನ ಬೋಳುತಲೆಯನ್ನು ಬಿಳಿಯ ಅಥವಾ ನೀಲಿ ಬಣ್ಣದ ವಸ್ತ್ರದಿಂದ ಪೂರ್ಣರೂಪದಲ್ಲಿ ಮುಚ್ಚಿಕೊಳ್ಳುತ್ತಿದ್ದ ಗುಂಡಮ್ಮ ದೊಡ್ಡ ಕರ್ಚೀಫ್ ಅಳತೆಯ ಆಯತಾಕಾರದ ವಸ್ತ್ರವನ್ನು ತಲೆಯ ಮೇಲೆ ಬರುವ ಹಾಗೆ ಸುತ್ತಿಕೊಂಡು, ಅದರ ಎರಡೂ ತುದಿಗಳನ್ನು ತನ್ನ ಗಲ್ಲದ ಕೆಳಗೆ ಬರುವಂತೆ ಮಾಡಿ, ಅವುಗಳನ್ನು ಭದ್ರವಾದ ಗಂಟಿನಲ್ಲಿ ಬಂಧಿಸಿಡುತ್ತಿದ್ದಳು. ನೀವೂ ಇಂತಹ ತಲೆ ಉಡುಪನ್ನು ಧರಿಸಿದ ನೂರಾರು ಮಂದಿ ಮಕ್ಕಳನ್ನು, ಸ್ತ್ರೀರೋಗಿಗಳನ್ನು ಸರ್ಕಾರಿ ಆಸ್ಪತ್ರೆಯ ಆವರಣಗಳಲ್ಲಿ ನೋಡಿರುತ್ತೀರಿ. ನಾನು ನೋಡಿದ ಪ್ರತಿ ಬಾರಿಯೂ ತನ್ನ ಈ ತಲೆವಸ್ತ್ರವನ್ನು ಸಮೇತವಾಗಿಯೇ ದೇವಸ್ಥಾನದ ಸಮಸ್ತ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದ ಗುಂಡಮ್ಮನನ್ನು ಈ ಕಾರಣಕ್ಕಾಗಿ ಸಂಬಂಧಿಸಿದ ಯಾರೂ ಆಕ್ಷೇಪಿಸಿದ ನೆನಪು ನನಗಿಲ್ಲ. ಗುಂಡಮ್ಮನ ಈ “ಹಿಜಾಬ್” ಹಿಂದೆ ಒಂದು ಘನವಾದ ಉದ್ದೇಶ ಇತ್ತು, ತನ್ನ ಬೋಳಾದ ತಲೆಯನ್ನು ಯಾರೂ ನೋಡಬಾರದು ಮತ್ತು ಹೆಂಗಸಿನ ಬೋಳಾದ ತಲೆ, ಗುಡಿಯಲ್ಲಿ ನೆರೆದಿದ್ದ ಭಕ್ತರ ಗಮನವನ್ನು ಅನಾವಶ್ಯಕವಾಗಿ ಸೆಳೆದು, ತನ್ಮೂಲಕ ವಿಕೃತಿ ಮೂಡಿಸಿ ದೈವಿಕ ವಾತಾವರಣಕ್ಕೆ ಚ್ಯುತಿ ತರಬಾರದು ಎನ್ನುವ ಸಹಜ ಆತಂಕ ಗುಂಡಮ್ಮನ ತಲೆವಸ್ತ್ರಧಾರಣೆಯ ಹಿಂದಿನ ನಿಜ ಉದ್ದೇಶವಾದಲ್ಲಿ ಸಹಜವಾದ ಆರೋಗ್ಯಭರಿತ ಕೇಶರಾಶಿಯಿಂದ ತುಂಬಿ, ಸೊಂಪಾಗಿ ಕಂಗೊಳಿಸುವ ತಲೆಗೂದಲ ಭಾಗ್ಯ ಪಡೆದ ಹೆಂಗಳೆಯರು ತಮ್ಮ ತಲೆಗೂದಲನ್ನು ವಸ್ತ್ರಗಳಿಂದ ಮುಚ್ಚುವ ಹಿಂದಿನ ಉದ್ದೇಶ ನನಗೆ ಈ ಹೊತ್ತೂ ಅರ್ಥವಾಗುತ್ತಿಲ್ಲ. ಅಸಹಜತೆಯನ್ನು ಮುಚ್ಚಿಡಲು ಮನುಷ್ಯವರ್ಗ ಶ್ರಮವಹಿಸಬೇಕಾದಲ್ಲಿ ಸಹಜ ಸುಂದರತೆಯನ್ನು ಮೆರೆಯುವ ಕೇಶರಾಶಿಯನ್ನು ವಸ್ತ್ರದ ಅಡಿಯಾಳಾಗಿ ಮಾಡುವುದು ವೈಯಕ್ತಿಕ ನೆಲೆಯಲ್ಲಿ ನನಗೆ ಅಪ್ರಿಯವಾದದ್ದು. ಭೌಗೋಳಿಕ ಅಂಶಗಳೂ ಸೇರಿದಂತೆ ಇರಬಹುದಾದ ವಿಶಿಷ್ಠ ಚಾರಿತ್ರಿಕ ಕಾರಣಗಳಿಗಾಗಿ, ನಿರ್ದಿಷ್ಟ ಕಾಲಘಟ್ಟದಲ್ಲಿ ಬಳಕೆಗೆ ಬಂದ ವಸ್ತ್ರಗಳ ಉಪಯೋಗವನ್ನು ಪ್ರತೀ ಕಾಲಘಟ್ಟದ ಪ್ರಸ್ತುತ ಪರಿವೇಶದ ಹಿನ್ನೆಲೆಯಲ್ಲಿ ಪುನರ್ವಿಮರ್ಶೆಗೆ ಒಳಪಡಿಸುವುದು ಬದಲಾದ ಕಾಲಮಾನದ ಮನೋಧರ್ಮಕ್ಕೆ ನಾವು ಸಲ್ಲಿಸಬೇಕಾದ ನ್ಯಾಯವೆಂದೇ ನನಗೆ ತೋರುತ್ತಿದೆ. ಮುಂದುವರೆದು, ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಸಮಾಜವೊಂದರ ಹೆಗ್ಗುರುತು ಕೂಡ ಇಂತಹ ಆತ್ಮವಿಮರ್ಶೆಯ ನೆಲೆಯಲ್ಲಿಯೇ ದಕ್ಕಿಸಿಕೊಳ್ಳತಕ್ಕದ್ದು ಎಂದು ನಾನು ಭಾವಿಸುತ್ತೇನೆ. ಧರ್ಮವೊಂದರ ಮಹತ್ವ ಅದರ ಅನುಯಾಯಿಗಳು ಧರಿಸುವ ವೇಷ-ಭೂಷಣಗಳ ಬಾಹ್ಯ ತೋರಿಕೆಯಲ್ಲಿ ಅಡಕವಾಗಿರದೆ, ಧರ್ಮಾನುಯಾಯಿಗಳು ಧರ್ಮದ ಮುಖ್ಯ ತಿರುಳನ್ನು ಸಮ್ಯಕ್ ರೀತಿಯಲ್ಲಿ ಅರ್ಥೈಸಿಕೊಂಡು, ಅದರ ಬೆಳಕಿನಲ್ಲಿ ತಮ್ಮ ಜೀವನವನ್ನು ವ್ಯಥಿಸುವುದರ ಮೂಲಕವೇ ಸಿದ್ದಿಯಾಗುವಂತದ್ದು ಎನ್ನುವುದೂ ನನ್ನ ಗಟ್ಟಿ ನಂಬಿಕೆಗಳಲ್ಲೊಂದು.
ಐದು ಅಡಿಗೂ ಕಡಿಮೆ ಎತ್ತರ ಹೊಂದಿದ್ದ ಗುಂಡಮ್ಮ ಬಿಳುಪಾದ ಮೈ ಬಣ್ಣದಿಂದ ಕೂಡಿದಾಕೆ. ಕೃಶ ಶರೀರಧಾರಿಯಾದ ಗುಂಡಮ್ಮನ ಗುಂಡು ಮುಖ ಸಪೂರವಾಗಿಯೇ ಇದ್ದ ಆಕೆಯ ದೇಹದಾಕಾರಕ್ಕೆ ಹೋಲಿಸಿದಲ್ಲಿಯೂ ತುಸು ಚಿಕ್ಕದಾಗಿಯೇ ತೋರುತ್ತಿತ್ತು. ಮುಖದ ಗಾತ್ರಕ್ಕೆ ಹೋಲಿಸಿದಲ್ಲಿ ಚಿಕ್ಕದೆನಿಸುವಂತೆ ಇದ್ದ ಸಣ್ಣಗಾತ್ರದ ಮೂಗು, ಪಿಳಿಪಿಳಿ ಹೊಳೆಯುತ್ತಿದ್ದ ಕಪ್ಪು ಕಣ್ಣುಗುಡ್ಡೆಗಳ ಹಿಂದಿನ ಶುಭ್ರಶ್ವೇತ ಕಣ್ಣಾಲಿಗಳು ಗುಂಡಮ್ಮನ ನಿರ್ಲಿಪ್ತ ಮುಖಭಾವದ ಹಿಂದೆ ಅವಿತಿದ್ದ ಚಂಚಲತೆಯನ್ನು ಅಮೂರ್ತವಾಗಿ ಬಿಂಬಿಸುತ್ತಿದ್ದವು. ಗುಂಡಮ್ಮನ ಒಟ್ಟಂದದ ವ್ಯಕ್ತಿತ್ವ ಆಕೆಯನ್ನು ಮೊದಲ ಬಾರಿಗೆ ನೋಡಿದವರಿಗೆ ತಟ್ಟನೇ ಆಕೆಯನ್ನು ಕುರಿತು ಗೌರವ ಭಾವನೆಯನ್ನು ಉಂಟುಮಾಡುವ ಹಾಗಿದ್ದವು. ಗುಂಡಮ್ಮ ಯಾವುದೋ ಸುಸಂಸ್ಕೃತ ಮನೆತನದ ಕುಡಿ ಎನ್ನುವುದು ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ಸುಲಭದಲ್ಲಿ ಅರ್ಥವಾಗುತ್ತಿತ್ತು. ಗುಂಡಮ್ಮನ ಪೂರ್ವಾಪರಗಳ ಬಗ್ಗೆ ಅಂತಹಾ ಹೆಚ್ಚಿನ ಮಾಹಿತಿಗಳು ಉಪಲಬ್ಧವಾಗದ ಕಾರಣ ಆಕೆಯ ತವರುಮನೆ ಕರ್ನಾಟಕದ ಯಾವ ಭಾಗಕ್ಕೆ ಸೇರಿದ್ದು? ಎನ್ನುವ ನನ್ನ ಕುತೂಹಲ ಎಂದೂ ತಣಿಯದ ಕುತೂಹಲವಾಗಿಯೇ ಉಳಿದಿದೆ. ಗುಂಡಮ್ಮ ತನ್ನ ಪೂರ್ವಾಶ್ರಮದ ಜೀವನವನ್ನು ಎಂತಹ ಕಬ್ಬಿಣದ ಪರದೆ ಹಿಂದೆ ಅವಿತಿಸಿಟ್ಟಿದ್ದಳು ಎಂದರೆ ಅವಳ ನಿಜ ನಾಮಧೇಯ ಊರಿನ ಯಾರಿಗೂ ತಿಳಿಯದ ಗುಟ್ಟಾಗಿಯೇ ಉಳಿದಿತ್ತು. “ಗುಂಡಮ್ಮ” ಎನ್ನುವುದು ಅವಳ ಜನ್ಮದಾತ ನಾಮವಾಗದೆ “ಅನ್ವರ್ಥನಾಮ” ವಾಗಿಯೇ ಜನಗಳ ಬಾಯಲ್ಲಿ ರೂಢಿಗತವಾದದ್ದು ಎಂದು ಅರಿವಾಗಲು ನನಗೆ ಕೆಲವು ವರ್ಷಗಳೇ ಬೇಕಾದವು. ಗುಂಡಮ್ಮ ನನ್ನೊಡನೆ ಎಷ್ಟೇ ಸಲುಗೆಯಿಂದ ನಡೆದುಕೊಂಡರೂ ಅವಳನ್ನು ಇಂತಹ ವಿಷಯಗಳನ್ನು ಕುರಿತು ಪ್ರಶ್ನೆ ಮಾಡುವ ವಯ್ಯಸ್ಸು ಆಗಿನ್ನೂ ನನ್ನದಲ್ಲದ ಕಾರಣ ನನಗೆ ಅನೇಕ ಬಾರಿ ಗುಂಡಮ್ಮನನ್ನು ಈ ಬಗ್ಗೆ ಕೇಳಬೇಕೆಂದು ಅನ್ನಿಸಿದರೂ ಬಾಯಿಯ ತುದಿಗೆ ಬಂದ ಮಾತುಗಳು ಶಬ್ದಗಳ ರೂಪಧಾರಣೆ ಮಾಡಿ ಹೊರಗೆ ಬಿದ್ದಿರಲಿಲ್ಲ. ಗುಂಡಮ್ಮನ ಒಡನಾಟದ ಮೂಲಕ ನಾನು ಆಕೆ ಮಲೆನಾಡಿಗೆ ಸೇರಿದ ಹೆಣ್ಣುಮಗಳು ಎನ್ನುವ ಒಂದು ಸರಿಸುಮಾರು ಅಂದಾಜಿಗೆ ಬಂದಿದ್ದೇನೆ. ಹೀಗೆ ಅಂದಾಜಿಸುವ ಹೊತ್ತು ಆಕೆಯ ಭಾಷೆ, ಅಡುಗೆ ವಿಧಾನ, ಜೀವನಶೈಲಿ, ವಿಚಾರಸರಣಿ, ನಂಬಿಕೆ, ಪೂಜಾವಿಧಾನ, ಉಡುಗೆ- ತೊಡುಗೆ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ಈ ತೀರ್ಮಾನಕ್ಕೆ ಬಂದಿದ್ದೇನೆ. ಬಾಳು ಕೊಡಮಾಡಿದ ಬವಣೆಗಳಿಗೆ ಬಳಲಿ ಬೆಂಡಾದ ಗುಂಡಮ್ಮನ ಜೀವನದ ಪ್ರತಿಹಂತದ ಹೋರಾಟ ಆಕೆಯ ಮುಖದ, ವಯೋಮಾನವನ್ನು ಮೀರಿದಂತೆ ದಾಖಲಾಗಿದ್ದ ಸ್ಫುಟವಾದ, ಆಳವಾದ, ನೀಳವಾದ ಹಲವು ಸುಕ್ಕುಗಳಲ್ಲಿ ಪ್ರತಿಫಲಿತವಾಗುತ್ತಿತ್ತು. ಗಂಡನನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡು ವಿಧವೆ, ಅದರಲ್ಲೂ ಆ ಕಾಲದ ಬ್ರಾಹ್ಮಣ ವಿಧವೆಯಾಗಿ, ಶೇಷಜೀವನವನ್ನು ವ್ಯಥಿಸಬೇಕಾಗಿ ಬಂದ ಗುಂಡಮ್ಮನ ಬಾಳು ನಮ್ಮ ಸಮಾಜದ ಹೆಣ್ಣುಮಕ್ಕಳು ಭರಿಸುವ ಅನಂತ ಗೋಳಿನ ಕಥೆಯನ್ನು ಸಾರುವ ನಡೆದಾಡುವ ಪ್ರ್ಯಾಕ್ಷಿತೆಯ ರೂಪದಲ್ಲಿತ್ತು. ಅನಿಷ್ಟದ ಪರಮಾವಧಿಯಾದ ಬಾಲ್ಯ ವಿವಾಹಪದ್ಧತಿಯ ಜೀವಂತ ಉದಾಹರಣೆಯ ರೂಪದಲ್ಲಿ ಬುದ್ದಿಗೆಟ್ಟ, ಲಜ್ಜೆಗೆಟ್ಟ ಸಮಾಜಕ್ಕೆ ನಿತ್ಯಸಂದೇಶ ರವಾನಿಸುತ್ತಿದ್ದ ಗುಂಡಮ್ಮ ತನ್ನ ಬದುಕಿನ ವೈಯಕ್ತಿಕ ನೆಲೆಯಲ್ಲಿ ಕಷ್ಟಕಾರ್ಪಣ್ಯಗಳನ್ನೇ ಕಂಡು, ಉಂಡು, ಅರಳುತ್ತಾ, ಮಾಗುತ್ತಾ ಹಣ್ಣಾದವಳು. . ಹೇಗೆ ಬಳ್ಳಾರಿಯ ವರ್ಷವೊಂದರ ವಾತಾವರಣವನ್ನು ಬೇಸಿಗೆ ಮತ್ತು ಕಡುಬೇಸಿಗೆಗಳ ವರ್ಣನೆಯಲ್ಲಿ ಸಮಾವೇಶಗೊಳಿಸಬಹುದೋ ಅದೇ ರೀತಿಯಲ್ಲಿ ಗುಂಡಮ್ಮನ ಸಂಪೂರ್ಣ ಜೀವನವನ್ನು ಕಷ್ಟ ಮತ್ತು ಕಡುಕಷ್ಟಗಳ ನೆಲೆಯಲ್ಲಿಯೇ ಅರ್ಥೈಸಿಕೊಳ್ಳತಕ್ಕದ್ದು. ಸುಖದ ಕಲ್ಪನೆಯೂ ಐಶಾರಾಮ ಎನ್ನುವ ಮನಃಸ್ಥಿತಿಯ ಒಡೆಯಳಾದ ಗುಂಡಮ್ಮ ಕಷ್ಟಗಳೆಂಬ ಘಟಸರ್ಪದ ಎಡೆಯ ನೆರಳಿನಲ್ಲಿ ದಿನಗಳನ್ನು ದೂಡುತ್ತಾ ಬಂದವಳು.
ಆಸರೆಗೆ ಬೇರೆ ಯಾವ ಜೀವವೂ ಇಲ್ಲದೆ, ಮನದ ಭಾವನೆಗಳನ್ನು ವ್ಯಕ್ತ ಪಡಿಸಲು ಯಾವ ರೀತಿಯ ಅವಕಾಶದ ಕಿಂಡಿಗಳೂ ಇಲ್ಲದೆ ಸಮಾಜದಿಂದ ಗಾವುದ ದೂರವೇ ಉಳಿದು ಬಾಳು ಸವೆಸಿದ ಗುಂಡಮ್ಮನಂತಹವರು ಸಹಜವಾಗಿಯೇ ತಮ್ಮ ಸುತ್ತಮುತ್ತಲ ಸಮಾಜದ ಬಗ್ಗೆ ಒಂದು ತಿರಸ್ಕಾರದ, ದ್ವೇಷದ, ಅವಹೇಳನದ ಭಾವನೆಗಳನ್ನು ತಮ್ಮ ಮಡಿಲಲ್ಲಿ ಕಟ್ಟಿಕೊಂಡಿರುತ್ತಾರೆ. ಸಕಾರಣಗಳಿಲ್ಲದೆಯೂ, ತಮ್ಮ ಪ್ರಸ್ತುತ ಜೀವನದ ಸ್ಥಿತಿಗತಿಗಳಿಗೆ ಸಮಾಜವನ್ನು ದೂಷಿಸುತ್ತಲೇ ಜೀವನಪಯಣದ ಅಂತಿಮ ಚರಣವನ್ನು ಪ್ರವೇಶಿಸುವ ಇಂತಹ ಅಬಲೆಯರ ಸಮಾಜದೆಡೆಗಿನ ದೃಷ್ಟಿಕೋನ ಅನಾರೋಗ್ಯಕರ ಎಂದು ಸುಶಿಕ್ಷಿತರು ಭಾವಿಸುತ್ತಾರೆ. ಆದರೆ ಗುಂಡಮ್ಮನೊಡನೆ ಕಳೆದ ನನ್ನ ಹಲವಾರು ಸಂಭಾಷಣೆಗಳ ವೇಳೆ ಆಕೆಯ ಒಡಲಲ್ಲಿ ಇದ್ದಿರಬಹುದಾದ ಈ ತರಹದ ನಂಜು ನನ್ನ ಗಮನಕ್ಕೆ ಬಂದಿದ್ದೇ ಇಲ್ಲ. ಎಲ್ಲರನ್ನೂ ತನ್ನ ಅತ್ಯಂತ ಮಧುರ, ಮೃದುಮಾತುಗಳಿಂದ, ಸಂಭಾವಿತ ನಡವಳಿಕೆಯಿಂದ ಸಂಭಾಳಿಸುತ್ತಿದ್ದ ಗುಂಡಮ್ಮ ತನ್ನ ಬಾಳಿನ ಕಡಲು ಕಡೆದುಕೊಟ್ಟ ದುಃಖವನ್ನು ನೀಲಕಂಠನ ಹಾಗೆ ತಾನೇ ಆಪೋಷಣೆ ಮಾಡಿ ಕೇವಲ ಅಲ್ಲಿ ಉತ್ಪತ್ತಿಯಾದ ಅಮೃತದ ಧಾರೆಯನ್ನಷ್ಟೆ ಸಮಾಜಕ್ಕೆ ಸಮರ್ಪಿಸುತ್ತಿದ್ದಳು ಎಂದೆನಿಸುತ್ತದೆ. ಹಾಲಾಹಲವನ್ನು ಕುಡಿದು ನೀಲಿಬಣ್ಣಕ್ಕೆ ತಿರುಗಿದ ನೀಲಕಂಠನ ಗಂಟಲಿಗೆ ಸಂವಾದಿಯಾಗಿ, ಗುಂಡಮ್ಮನ ತಲೆವಸ್ತ್ರದ ದೊಡ್ಡ ಗಂಟಿನ ಕೆಳಗೆ ಬಹಳ ತೆಳುವಾದ ಬಣ್ಣದ ಹೆಬ್ಬೆರಳಗಲದ ನೀಲಿ ಮಚ್ಚೆಯೊಂದು ದಿಟ್ಟಿಸಿ ನೋಡಿದಲ್ಲಿ ಮಾತ್ರ ಗೋಚರವಾಗುತ್ತಿದ್ದದ್ದು ಕಾಕತಾಳೀಯ ಎಂದು ಅಂದು ಅನ್ನಿಸಿದ್ದರೆ ಇಂದೂ ಕೂಡಾ ಅದು ಕಾಕತಾಳೀಯ ಮಾತ್ರ ಅನ್ನಿಸುತ್ತಿರುವುದು ನನ್ನ ಅನಂತ ಅಚ್ಚರಿಗೆ ಕಾರಣವಾಗಿದೆ.
ದೇವಸ್ಥಾನಕ್ಕೆ ಬರುವ ಊರಿನ ಆಯ್ದ ಕೆಲವು ಹಿರಿಯ ಜೀವಗಳಿಗೆ ವಿವಿಧ ರೀತಿಯ ಹೂಗಳನ್ನು ಪೂಜೆಗೆಂದು ಕೊಡಮಾಡುತ್ತಿದ್ದ ಗುಂಡಮ್ಮ ಹೂಗಳ ಸಂಗ್ರಹಣೆಗಾಗಿ ಜೇನಿನ ಸಂಗ್ರಹಣೆಯಲ್ಲಿ ತೊಡಗಿದ ಭ್ರಮರದ ಹಾಗೆ ದಿನದ ಬಹುಪಾಲು ಸಮಯವನ್ನು ಗುಡಿಯ ಪ್ರಾಂಗಣದಲ್ಲಿದ್ದ ಹೂಗಿಡಗಳ ಪುಷ್ಪಸಂಗ್ರಹಣೆಗಷ್ಟೇ ಸೀಮಿತವಾಗಿಡದೆ ದೇವಸ್ಥಾನದ ಸುತ್ತಮುತ್ತಲ ಒಂದು ಫರ್ಲಾಂಗ್ ಫಾಸಲೆಯಲ್ಲಿದ್ದ ಎಲ್ಲಾ ಹೂವಿನ ಗಿಡಗಳ ಅರಳಿದ ಹೂಗಳನ್ನೂ ಕಿತ್ತುತರುವ ಮೂಲಕ ತನ್ನ ಈ ಸೇವೆಗೆ ಒಂದು ವ್ಯಾಪಕವಾದ ಪೃಷ್ಠಭೂಮಿಯನ್ನೂ ಸೃಜಿಸಿದ್ದಳು. ಇದನ್ನು ತನ್ನ ಆತ್ಮಸಂತೋಷದ ಕಾರಣಕ್ಕಾಗಿ ಮಾಡುತ್ತಿದ್ದ ಗುಂಡಮ್ಮ ಇದಕ್ಕೆ ಪ್ರತಿಯಾಗಿ ಭಕ್ತಾದಿಗಳಿಂದ ಎಂದೂ, ಏನನ್ನೂ ಅಪೇಕ್ಷಿಸಿದವಳಲ್ಲ.
ದೇವರದರ್ಶನಕ್ಕಾಗಿ ಬಂದವರು ಗುಂಡಮ್ಮನಿಗೆ ಕೊಡುವ ಚಿಕ್ಕಾಸುಗಳನ್ನೂ ದೇವರ ಹುಂಡಿಗೇ ಹಾಕಿ ಚಂದ್ರ ಮೌಳೇಶ್ವರನಿಗೆ ಕೈ ಮುಗಿಯುತ್ತಿದ್ದ ಗುಂಡಮ್ಮ ತನ್ನ ಮನದಲ್ಲಿದ್ದ ಆಸೆಯನ್ನು ಉಸಿರುಗಟ್ಟಿಸಿ ಕೊಲ್ಲುವ ಮೂಲಕ, ಹೊರಜಗತ್ತಿನ ಆಸೆಯ ಮೂಲಗಳನ್ನೇ ಇಲ್ಲವಾಗಿಸಿ, ಬಸವಾದಿ ಶರಣರು ಕಂಡುಕೊಂಡ “ಮನದ ಮುಂದಣ ಆಶೆಯೇ ಮಾಯೆ ಕಾಣಿರಾ” ಎನ್ನುವ ಪರಮಸತ್ಯವನ್ನು ಜೀವಿಸಿದ ನಿಜ ಶಿವಶರಣೆಯಾಗಿ ಕಂಗೊಳಿಸುತ್ತಿದ್ದಳು. ಯಾವ ಆದಾಯಮೂಲಗಳೂ ಇಲ್ಲದ ಗುಂಡಮ್ಮ ಜೀವನ ನಿರ್ವಹಣೆಯನ್ನು ಹೇಗೆ ಮಾಡುತ್ತಾಳೆ? ಎನ್ನುವ ಅನುಮಾನ ನನ್ನನ್ನು ಕಾಡಿದ್ದೂ ಉಂಟು. ದಿನನಿತ್ಯವೂ ಪೂಜೆಗೊಳ್ಳುತ್ತಿದ್ದ ಚಂದ್ರಮೌಳೇಶ್ವರನ ಎರಡು ಹೊತ್ತಿನ ಮಹಾಪ್ರಸಾದದ ತಯಾರಿಯ ಹೊಣೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಗುಂಡಮ್ಮನಿಗೆ ವಹಿಸಿತ್ತು. ಇದಕ್ಕಾಗಿ ಮಾಸಿಕ ಸಂಭಾವನೆಯ ರೂಪದಲ್ಲಿ ಗುಂಡಮ್ಮನಿಗೆ ಆಡಳಿತಮಂಡಳಿ ಪರ್ಯಾಪ್ತ ಹಣವನ್ನೂ ನೀಡುತ್ತಿತ್ತು. ಸೋಮವಾರಗಳ ಮತ್ತು ಪವಿತ್ರ ಮಾಸಗಳ ತಂತಮ್ಮ ಪೂಜಾ ಕೈಂಕರ್ಯವಿದ್ದ ಸಂದರ್ಭಗಳಲ್ಲಿ ಶೆಟ್ಟರು ಮತ್ತು ಜೋಯಿಸರ ಮನೆಯವರು ಗುಂಡಮ್ಮನಿಗೆ ಪ್ರಸಾದ ವಿನಿಯೋಗಕ್ಕೆ ಬೇಕಾದ ಭಕ್ಷ್ಯಗಳ ತಯಾರಿಕೆಯ ಸಂಪೂರ್ಣ ಹೊಣೆಯನ್ನು ವಹಿಸುತ್ತಿತ್ತು. ಇದಕ್ಕಾಗಿ ಧಾರಾಳ ರೂಪದಲ್ಲಿಯೇ ಗುಂಡಮ್ಮನಿಗೆ ಹಣ ಸಂದಾಯ ಮಾಡುತ್ತಿದ್ದ ಭಕ್ತರು ಅಗತ್ಯಕ್ಕಿಂತ ಹೆಚ್ಚಿನ ಭಕ್ಷ್ಯಗಳನ್ನು ಗುಂಡಮ್ಮನಿಂದ ಮಾಡಿಸಿ, ಮಿಕ್ಕ ಪ್ರಸಾದವನ್ನು ತಂತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಹಲವಾರು ದಿನಗಳ ಕಾಲ ಅದರ ಸವಿಯನ್ನು ಸವಿಯುತ್ತಿದ್ದರು. ಹೀಗಾದರೂ ಮಾಡಿ ಗುಂಡಮ್ಮನಿಗೆ ಆರ್ಥಿಕ ಸಹಾಯ ಕಲ್ಪಿಸಿದೆವಲ್ಲಾ ಎನ್ನುವ ಮನಃತೃಪ್ತಿಗೆ ಭಾಜನರಾಗುತ್ತಿದ್ದ ಭಕ್ತಗಣ ಗುಂಡಮ್ಮನನ್ನು ಬಹಳ ಗೌರವಾನ್ವಿತ ರೀತಿಯಲ್ಲಿಯೇ ನಡೆಸಿಕೊಳ್ಳುತ್ತಿತ್ತು. ದೇವಸ್ಥಾನದ ಆರ್ಥಿಕ ಸ್ಥಿತಿಗತಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮತ್ತು ಚಂದ್ರಮೌಳೇಶ್ವರನ ಪರಮ ಭಕ್ತಗಣ ಎಂದೇ ಗಣಿಸಲ್ಪಟ್ಟ ಊರ ಶೆಟ್ಟರು ಹಾಗೂ ಜೋಯಿಸರ ಮನೆಯವರಂತೂ ಗುಂಡಮ್ಮನನ್ನು ತಮ್ಮ ಮನೆಯ ಒಬ್ಬ ಸದಸ್ಯೆಯ ರೀತಿಯಲ್ಲಿಯೇ ನಡೆಸಿಕೊಳ್ಳುತ್ತಿದ್ದರು. ಗುಂಡಮ್ಮನ ಕೈರುಚಿ ಅಮೋಘವಾದುದಾಗಿತ್ತು. ಮುತ್ತುಗದ ಎಲೆಯ ದೊನ್ನೆಯ ಮೇಲೆ ನೀಡುತ್ತಿದ್ದ ಪ್ರಸಾದ ರೂಪದ ಪುಳಿಯೋಗರೆ, ಚಿತ್ರಾನ್ನ, ತೆಂಗಿನಕಾಯಿ ಅನ್ನ, ಕಡಲೆಕಾಳು ಉಸಲಿ,
ಕೋಸಂಬರಿ, ಸಿಹಿ ಅವಲಕ್ಕಿ, ಹೆಸರುಕಾಳು ಗುಗ್ಗರಿ ಮುಂತಾದವುಗಳು ಎಷ್ಟು ರುಚಿಕರವಾಗಿರುತ್ತಿದ್ದವು ಎಂದರೆ ಪ್ರಸಾದ ಮುಗಿದ ಮೇಲೂ ಕೈಲಿದ್ದ ದೊನ್ನೆಯನ್ನು ಬಿಟ್ಟೂ ಬಿಡದಂತೆ ನೆಕ್ಕುತ್ತಿದ್ದ, ಗುರುಮಲ್ಲಪ್ಪ ಮೇಷ್ಟ್ರ ಸಂಜೆಯ ಪಾಠದ ಮನೆಯ ಹತ್ತಾರು ಬಾಲಕರು, ನನ್ನ ಈ ಮಾತಿಗೆ, ಒಂದಲ್ಲ, ಹಲವು ಬಾರಿ ಸಾಕ್ಷಿಯಾದದ್ದುಂಟು. ಕೆಲವು ವಿಶೇಷಪೂಜೆಗಳ ಸಂದರ್ಭಗಳಲ್ಲಿ ಮಾತ್ರವೇ ಗುಂಡಮ್ಮ ಮಾಡುತ್ತಿದ್ದ ರವೆ ಉಂಡೆ ಮತ್ತು ಮೈಸೂರುಪಾಕಗಳ ರುಚಿಯಂತೂ ವರ್ಣನಾತೀತವಾದದ್ದು, ದೈವಿಕ ರುಚಿಯನ್ನು ತಮ್ಮೊಡಲಲ್ಲಿ ಸಾಕ್ಷಾತ್ಕರಿಸಿಕೊಂಡ ರೀತಿಯ ಈ ಭಕ್ಷ್ಯಗಳ ಸೇವನೆಯೂ ದೈವದ ವಿಶೇಷಕೃಪೆಯ ದಾಯಿರೆಯ ಒಳಗೇ ಬರುವಂತಹುದು. ಇಂತಹ ವಿಶೇಷಪೂಜೆಗಳ ದಿನಾಂಕವನ್ನು ಕಷ್ಟಪಟ್ಟು ಅಲ್ಲಿಂದ, ಇಲ್ಲಿಂದ ಸಂಪಾದಿಸಿ, ಪೂಜಾ ದಿನಗಳಂದು ಪೂಜೆ ಮುಗಿದು ಮಹಾಮಂಗಳಾರತಿ ಆಗುವುದನ್ನೇ ಕಾಯುತ್ತಾ ಕುಳಿತು ಗುಂಡಮ್ಮನ ರವೆ ಉಂಡೆ, ಮೈಸೂರುಪಾಕಗಳ ನಿರೀಕ್ಷೆಯಲ್ಲಿ ಕಷ್ಟಪಟ್ಟು ಕಾಲದೂಡುತ್ತಿದ್ದ ನಾವು ಗೆಳೆಯರ ತಲೆಯಲ್ಲಿ ಈ ಪ್ರತೀಕ್ಷೆಯ ಸಮಯದಲ್ಲಿ ಓಡುತ್ತಿದ್ದ ಆಲೋಚನೆ ಒಂದೇ ರೀತಿಯದಾಗಿತ್ತು. ಹೇಗಾದರೂ ಮಾಡಿ ಒಂದಕ್ಕಿಂತ ಹೆಚ್ಚು ಪ್ರಸಾದವನ್ನು ಪಡೆಯಬೇಕು ಎನ್ನುವುದು ನಮ್ಮ ಪಾಠದ ಮನೆಯ ಹತ್ತು ಹನ್ನೆರಡರ ಸಂಖ್ಯೆಯಲ್ಲಿದ್ದ ಮಕ್ಕಳ ಮನದ ತಣಿಯದ ಇಂಗಿತ. ಆದರೆ ಅನಂತಶೆಟ್ಟಿಯ ಮಗ ಭೋಜರಾಜಶೆಟ್ಟಿ ಪ್ರಸಾದ ವಿತರಣೆಯಲ್ಲಿ ಪಂಟ. ಎಷ್ಟು ತಿಪ್ಪರಲಾಗ ಹಾಕಿದರೂ, ಎಂತಹುದೇ ಪಟ್ಟು ಹಿಡಿದರೂ, ಒಬ್ಬರಿಗೆ ಒಂದು ಪ್ರಸಾದವನ್ನು ಮೀರಿದಂತೆ ವಿತರಣೆ ಮಾಡುತ್ತಿದ್ದ ಆತನ ಅಮೃತಹಸ್ತದಿಂದ ಮತ್ತೊಂದು ಪ್ರಸಾದದ ನಸೀಬು ನಮಗೆ ಎಂದೂ ಆಗುತ್ತಿರಲಿಲ್ಲ. ಇಂತಹ ದುರ್ಗಮ ಸನ್ನಿವೇಶಗಳಲ್ಲಿ ನನ್ನ ಮತ್ತು ಗೆಳೆಯರ ಸಹಾಯಕ್ಕೆ ಒದಗಿ ಬರುತ್ತಿದ್ದವಳೇ ನಮ್ಮ ಗುಂಡಮ್ಮ. ನಾನು ಮತ್ತು ನನ್ನ ನಲ್ವತ್ತು, ಅಲ್ಲಲ್ಲ, ಹತ್ತು ಕಳ್ಳರ ಪಡೆಗೆ ಅದ್ಯಾವ ಮಾಯೆಯಲ್ಲಿಯೋ ಮತ್ತೊಂದು ಪ್ರಸಾದವನ್ನು ಗುಂಡಮ್ಮ ಪವಾಡಸದೃಶ ರೂಪದಲ್ಲಿ ಕರುಣಿಸುತ್ತಿದ್ದಳು. ಕೃತಕೃತ್ಯತೆಯ ನಮ್ಮ ನೋಟಗಳಿಗೆ ಬದಲಾಗಿ ಬಹಳ ಅಪರೂಪವೆನಿಸುವಂತೆ ನೋಡಸಿಗುತ್ತಿದ್ದ ತನ್ನ ಮೊನಾಲಿಸಾ ನಗೆಯನ್ನು ಬೀರುವ ಮೂಲಕ ಆಕೆ ಇಡೀ ಪ್ರಹಸನಕ್ಕೆ ಸುಖಾಂತ್ಯದ ಮುಕ್ತಾಯ ಹಾಡುತ್ತಿದ್ದಳು.
ಗುಂಡಮ್ಮನ ಹೃದಯ ಅಂತಃಕರುಣೆಯ ಸಾಗರ. ಅಲ್ಲಿ ದೀನದಲಿತರ, ಅಸಹಾಯಕರ ಕುರಿತು ಹಿಮಾಲಯದಷ್ಟು ಕರುಣೆ ಮಡುಗಟ್ಟಿತ್ತು. ದಿನನಿತ್ಯದ ದೇವರಪ್ರಸಾದವನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾಡುತ್ತಿದ್ದ ಗುಂಡಮ್ಮ ಪ್ರಸಾದದ ಅರ್ಧಭಾಗವನ್ನು ತೆಗೆದಿರಿಸಿ ಉಳಿದರ್ಧ ಭಾಗವನ್ನಷ್ಟೇ ಚಂದ್ರಮೌಳೇಶ್ವರನ ಪ್ರಸಾದಕ್ಕೆಂದು ಅರ್ಚಕರಿಗೆ ನೀಡುತ್ತಿದ್ದಳು. ಇದೇ ಪದ್ಧತಿಯನ್ನು ಬೇರೆ ವಿಶೇಷ ದಿನಗಳ ಪೂಜೆಯ ಸಮಯದಲ್ಲಿಯೂ ಆಚರಿಸುತ್ತಿದ್ದ ಗುಂಡಮ್ಮ ಬೆಳಗಿನ ದೇವರ ಮಹಾಮಂಗಳಾರತಿಯಾಗಿ ಭಕ್ತಗಣ ಗುಡಿಯನ್ನು ತೊರೆದ ಅನಿತರಲ್ಲಿಯೇ, ಇಷ್ಟು ಹೊತ್ತಿಗಾಗಲೇ ಗುಡಿಯ ಹೊರ ಮೆಟ್ಟಲುಗಳ ಬಳಿ ಹತ್ತಾರರ ಸಂಖ್ಯೆಯಲ್ಲಿ ಜಮಾವಣೆ ಗೊಂಡಿರುತ್ತಿದ್ದ ಭಿಕ್ಷುಕರ, ಹಸಿದವರ, ರೋಗಿಗಳ, ಅಸಹಾಯಕರ, ಅಬಲರ, ಅಶಕ್ತರ, ವೃದ್ಧರ ಗುಂಪಿನ ಸದಸ್ಯರನ್ನು ಸಾಲಾಗಿ ಶಿಸ್ತಿನಿಂದ ನಿಲ್ಲುವಂತೆ ಮಾಡಿ ಪ್ರತಿಯೊಬ್ಬರಿಗೂ ಪರ್ಯಾಪ್ತ ಪ್ರಸಾದ ಪ್ರಾಪ್ತಿಯಾಗುವ ಹಾಗೆ ಹಂಚುತ್ತಿದ್ದಳು. ದೇವರಿಗೆ, ಉಳ್ಳವರಿಗೆ ಪ್ರಸಾದದ ರೂಪದಲ್ಲಿ ಲಭ್ಯವಾಗುತ್ತಿದ್ದ ಈ ಭಕ್ಷ್ಯಾನ್ನ ನಿರ್ಗತಿಕರ ಪಾಲಿಗೆ ಜೀವದಾಯಿನಿಯಂತೆ ಕೆಲಸ ಮಾಡುತ್ತಿತ್ತು. ಸಾಮಾನ್ಯವಾಗಿ ಪ್ರಸಾದ ಸೇವಿಸುವಾಗ ಹೆಚ್ಚು ಮುತುವರ್ಜಿ ವಹಿಸುವ ನಾವು ಪ್ರಸಾದ ನೆಲದ ಮೇಲೆ ಬೀಳಬಾರದು ಎನ್ನುವ ವಿಷಯದಲ್ಲಿ ಅತಿ ಜಾಗರೂಕತೆಯನ್ನು, ಸಂಯಮವನ್ನು ಪ್ರದರ್ಶಿಸುತ್ತೇವೆ. ನಾವು ವಹಿಸುವ ಜಾಗರೂಕತೆಗಿಂತ ನೂರು ಪಟ್ಟು ಹೆಚ್ಚು ಜಾಗರೂಕತೆಯನ್ನು ಗುಂಡಮ್ಮ ಬಡಿಸುತ್ತಿದ್ದ ಭಕ್ಷಾನ್ನವನ್ನು ಸ್ವೀಕರಿಸುತ್ತಿದ್ದ ನಿರ್ಗತಿಕರು ಪ್ರದರ್ಶಿಸುತ್ತಿದ್ದರು. ನಮ್ಮ ಜಾಗರೂಕತೆ ದೈವಿಕ ನೆಲೆಯಿಂದ ಪ್ರೇರೇಪಿತವಾದಲ್ಲಿ ನಿರ್ಗತಿಕರ ಜಾಗರೂಕತೆ ದೈಹಿಕ ನೆಲೆಯಲ್ಲಿ ಪ್ರೇರಿತವಾಗಿರುತ್ತಿತ್ತು. “ಅಯ್ಯೋ, ಪ್ರಸಾದವನ್ನು ಚೆಲ್ಲಿಬಿಟ್ಟೆವಲ್ಲಾ” ಎನ್ನುವ ಕೊರಗನ್ನು ನಾವು ಹೊಂದಿದರೆ, ಅಕಸ್ಮಾತ್ ನೆಲದ ಮೇಲೆ ಗುಂಡಮ್ಮ ನೀಡಿದ ಆಹಾರವನ್ನೇನಾದರೂ ಫಲಾನುಭವಿಗಳು ಚೆಲ್ಲಿಕೊಂಡಲ್ಲಿ, ಆಹಾರ ಕಳೆದುಕೊಂಡ ಆ ಭಿಕ್ಷುಕ ಪೂರಾ ದಿನ ಹಸಿವೆಯಿಂದ ದಿನದೂಡಬೇಕಾದ ಸಂಕಷ್ಟ ಎದುರಾಗುತ್ತಿತ್ತು. ಊರಲ್ಲಿ ಬೇರೆಲ್ಲೂ ಊಟ ದೊರಕಿಸಿಕೊಳ್ಳಲು ಶಕ್ಯವಿಲ್ಲದ ಮಂದಿಗೆ ಗುಂಡಮ್ಮ ದಶಕಗಳ ಕಾಲ ಮೊದಲ, ಕೊನೆಯ ಮತ್ತು ಏಕೈಕ ವಿಕಲ್ಪವಾಗಿದ್ದಳು. ಚಂದ್ರಮೌಳೇಶ್ವರ ಸ್ವಾಮಿಗೆ ಅರ್ಪಿಸಿದ ನೈವೇದ್ಯ ಎಷ್ಟು ಲೋಕಕಲ್ಯಾಣಕಾರಿಯಾದ ಕಾರ್ಯವನ್ನು ಮಾಡಿತೋ ನನ್ನಂತಹ ಅಲ್ಪಜ್ಞ ಅರಿಯಲಾರ, ಆದರೆ ಗುಂಡಮ್ಮ ಬಡಬಗ್ಗರಿಗೆ ಹಂಚಿದ ಉಳಿದರ್ಧ ಪ್ರಮಾಣದ ಪ್ರಸಾದ ಹತ್ತಾರು ದೇಹಗಳನ್ನು ಅವುಗಳ ಆತ್ಮಗಳ ಒಟ್ಟಿಗೆ ನಿರಂತರ ಸಂಪರ್ಕದಲ್ಲಿ ಇಟ್ಟಿದ್ದ ಮಹತ್ಕಾರ್ಯದಲ್ಲಿ ಪ್ರಮುಖವಾದ ಪಾತ್ರ ವಹಿಸಿದೆ ಎನ್ನುವುದು ನಿರ್ವಿವಾದವಾದದ್ದು.
ಹೀಗೆ ತನ್ನ ಇಪ್ಪತ್ತು ಇಪ್ಪತ್ತೈದರ ಹರೆಯದಲ್ಲಿಯೇ ಚಂದ್ರಮೌಳೇಶ್ವರನ ಆಶ್ರಯದಲ್ಲಿ ಬಂದು ತಂಗಿ, ಮುಂದಿನ ಜೀವನವನ್ನು ಮಂದಿರದ ಅಂಗಳದಲ್ಲಿಯೇ ಸವೆಸಿದ ಗುಂಡಮ್ಮ ತನ್ನದೇ ಆದ ರೀತಿಯಲ್ಲಿ ದೇವರ ಕಾರ್ಯಗಳನ್ನು ಕೊನೆಯ ಕ್ಷಣದವರೆಗೂ ನಡೆಸಿಕೊಂಡು ಬಂದವಳು. ಕಾಯಿಲೆ, ಕಸಾಲೆಗಳ ಕಾರಣದಿಂದಾಗಿ ಹಾಸಿಗೆ ಹಿಡಿದು ಮಲಗಿದ ಹೊತ್ತು ತನ್ನ ನಿತ್ಯದ ಹೂ ಸಂಗ್ರಹಣೆಯ ಕೆಲಸಕ್ಕೆ ವಿದಾಯ ಹೇಳುತ್ತಿದ್ದ ಗುಂಡಮ್ಮ ದೇವರ ಪ್ರಸಾದದ ತಯಾರಿಯ ಕೆಲಸವನ್ನು ಮಾತ್ರ ಎಂದೂ ನಿಲ್ಲಿಸಿದ್ದಿಲ್ಲ. ಪ್ರಸಾದದ ಅರ್ಧಭಾಗವನ್ನು ಬಡಬಗ್ಗರಿಗೆ ಹಂಚುವ ಕಾಯಕವಿಲ್ಲದ ಒಂದು ದಿನವೂ ಆಕೆಯ ಬಾಳ ಪುಟಗಳಲ್ಲಿ ದಾಖಲಾಗಿಲ್ಲ. ಗುಂಡಮ್ಮ ಅನಾರೋಗ್ಯದ ಕಾರಣ ಆಹಾರ ಸೇವಿಸದೇ ಉಳಿದ ದಿನಗಳು ಬೇಕಾದರೆ ಯಥೇಚ್ಚವಾಗಿ ಸಿಕ್ಕಾವು, ಆದರೆ ಇದರ ಕಾರಣವರ್ಷ ಚಂದ್ರಮೌಳೇಶ್ವರನ ದೇವಸ್ಥಾನದ ಮುಂಬಾಗಿಲಿಗೆ ಬಂದು ಹಸಿದ ಹೊಟ್ಟೆಯನ್ನು ಹೊತ್ತು ಮರಳಿದ ಒಬ್ಬ ನಿರ್ಗತಿಕನೂ ಇರಲಿಕ್ಕಿಲ್ಲ. ದೇವರ ಕಾರ್ಯಕ್ಕಿಂತಲೂ ಹೆಚ್ಚಿನ ಶ್ರದ್ದೆಯಿಂದ, ನಿಯತ್ತಿನಿಂದ, ಪ್ರಾಮಾಣಿಕತೆಯಿಂದ, ಸ್ನಿಗ್ದತೆಯಿಂದ, ಪ್ರಾಂಜಲ ಮನಸ್ಸಿನಿಂದ, ವರ್ಷಗಳ ಕಾಲ ಅಸಹಾಯಕರಿಗೆ ತನ್ನ ಕೈಲಾದ ಮಟ್ಟದಲ್ಲಿ ಮಿಡಿಯುವುದನ್ನು ಗುಂಡಮ್ಮ ಎಂತಹಾ ಸನ್ನಿವೇಶಗಳಲ್ಲಿಯೂ ಕೈ ಬಿಟ್ಟವಳೇ ಅಲ್ಲ. ವಿಧಿಯ ಕ್ರೂರ ಅಟ್ಟಹಾಸದ ಕಾಲ್ತುಳಿತಕ್ಕೆ ಸಿಕ್ಕು ನಲುಗಿ ನುಜ್ಜಾದ ಮಲೆನಾಡಿನ ಹೆಣ್ಣೊಬ್ಬಳು ಬಯಲುಸೀಮೆಯ ನನ್ನೂರಿನ ಪ್ರಸ್ಥಭೂಮಿಯ ಎದೆಯಲ್ಲಿ ದಶಕಗಳ ಕಾಲ, ತನ್ನದೇ ಆದ ಮಿತಿಗಳ ಒಳಗೂ, ಸತತವಾಗಿ ನಡೆಸಿಕೊಂಡು ಬಂದ ಬಡಬಗ್ಗರ ಅನ್ನಸಂತರ್ಪಣೆಯ ಮಹತ್ಕಾರ್ಯ ಯಾವ ದೃಷ್ಟಿಕೋನದಿಂದ ನೋಡಿದರೂ, ವಿಧಿಯಿಂದ ವಂಚಿತಳಾದ ಅಬಲೆಯೊಬ್ಬಳು ತನ್ನ ಕಾರ್ಯಸಿದ್ಧಿಯ ಬಲಮಾತ್ರದಿಂದ ವಿಧಿಗೇ ಸೆಡ್ಡು ಹೊಡೆದು ಎಸೆದ ನೇರಾನೇರ ಸವಾಲೆನಿಸುವ ಹೊತ್ತೂ, ಯಮನಿಗೇ ಸವಾಲೊಡ್ಡಿ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದ ಸತಿಸಾವಿತ್ರಿಯ ಲೋಕಪ್ರಿಯ ಗಾಥೆಯನ್ನು ಹೆಚ್ಚು ನೆನಪಿಸುವಂತಿದೆ.
ಹೇಗೆ ಎಲ್ಲಾ ಕೃಕೃತ್ಯಗಳೂ ಒಂದಲ್ಲ ಒಂದು ದಿನ ಅಂತ್ಯ ಕಾಣಬೇಕೋ ಹಾಗೆಯೇ ಜಗತ್ತಿನ ಸಕಲ ಸತ್ಕಾರ್ಯಗಳೂ ಒಂದಿಲ್ಲ ಒಂದು ದಿನ ಕೊನೆ ಕಾಣಲೇಬೇಕು. ಇದು ದೈವನಿಯಮದ ಒಂದು ಪ್ರಮುಖ ಅಂಶ. ಎಂದೂ ಮುಗಿಯದ ಸತ್ಕಾರ್ಯಗಳ ಧಣಿ ಭಾಸ್ಕರ ಮಾತ್ರ ಎನಿಸುತ್ತದೆ. ಆದಿ ಅಂತ್ಯಗಳಿಲ್ಲದ ತನ್ನ ಸೂರ್ಯಪಥದಲ್ಲಿ ಬ್ರಹ್ಮಾಂಡವನ್ನು ಪೋಷಿಸುತ್ತಲೇ ಸಾಗಿರುವ ಪ್ರತ್ಯಕ್ಷದೈವ ದಿನಕರನಿಗೆ ಸರಿಸಾಟಿಯಾಗಬಲ್ಲ ಮತ್ತೊಂದು ಉದಾಹರಣೆ ಈ ಕ್ಷಣ ಕೊಡುವುದು ಕಷ್ಟಸಾಧ್ಯವೇ. ಅದೊಂದು ಕಾರ್ತೀಕಮಾಸದ ಸುಂದರ ದಿನ. ಪಾಲಾ ಸುಬ್ಬಣ್ಣಶೆಟ್ಟಿ ತಮ್ಮ ಸಂಸಾರದ ಶ್ರೇಯೋಭಿವೃದ್ಧಿಗಾಗಿ ಅಂದು ಚಂದ್ರಮೌಳೇಶ್ವರನ ಮಂದಿರದಲ್ಲಿ ವಿಶೇಷಪೂಜೆಯನ್ನು ಏರ್ಪಡಿಸಿದ್ದರು. ದೇವರ ಪ್ರಸಾದಕ್ಕೆಂದು ಬಗೆಬಗೆಯ ಭಕ್ಷ್ಯಗಳ ತಯಾರಿಕೆಯಲ್ಲಿ ಗುಂಡಮ್ಮ ಬೆಳಗಿನಿಂದಲೇ ವ್ಯಸ್ತಳಾಗಿದ್ದಳು. ಹುಡುಗರಾದ ನಮಗೂ ಅಂದಿನ ವಿಶೇಷಪೂಜೆಯ ಬಗ್ಗೆ ಗುರುಮಲ್ಲಪ್ಪ ಮೇಷ್ಟ್ರ ಪಾಠದಮನೆಯ ಸಹಪಾಠಿಯಾದ ಶೆಟ್ಟರ ಮೂರನೇ ಮಗಳು ಜ್ಯೋತಿಪ್ರಭ ಒಂದು ವಾರದ ಮೊದಲೇ ಅರುಹಿದ್ದಳು. ಅಂದಿನ ವಿಶೇಷ ದಿನವನ್ನು ನಾವೂ ನೀರೂರುತ್ತಿದ್ದ ಬಾಯಿಗಳ ಮುಖಾಂತರ ಎದುರು ನೋಡುತ್ತಿದ್ದೆವು. ಗುಂಡಮ್ಮನ ಕೈಯಲ್ಲಿ ನಮ್ಮ ಮೆಚ್ಚಿನ ರವೆ ಉಂಡೆ, ಮೈಸೂರುಪಾಕದ ಸಿಹಿತಿಂಡಿಗಳ ಒಟ್ಟಿಗೇ ಅನ್ಯ ಭಕ್ಷಗಳನ್ನೂ ಮನಸಾರೆ ಮೆಲ್ಲಬೇಕು ಎನ್ನುವ ಆಸೆ ನಮ್ಮ ಮನದ ಅಂಗಳದಲ್ಲಿ ಮೂಡಿತ್ತು. ಅದು ಸಂಜೆಯ ಏಳು ಗಂಟೆಯ ವೇಳೆ ಅನ್ನಿಸುತ್ತದೆ, ಪಾಠದ ಮನೆಯಲ್ಲಿ “ಅಸತೋಮ ಸದ್ಗಮಯ, ತಮಸೋಮ ಜೋತಿರ್ಗಮಯ” ಪ್ರಾರಂಭಿಕ ಪ್ರಾರ್ಥನಾ ಸ್ತೋತ್ರದ ನಂತರ ನಾವು ಚಾಪೆ ಹಾಸಿದ ಪಡಸಾಲೆಯ ನೆಲದ ಮೇಲೆ ಆಸೀನರಾಗಿ ಇನ್ನೇನು ಪಾಟೀಚೀಲದಿಂದ ಪುಸ್ತಕಗಳನ್ನು ಹೊರತೆಗೆಯಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಕಲ್ಲಪ್ಪನವರ ವಿರುಪಣ್ಣನವರ ಮಗ ಮಹೇಶ ಏದುಸಿರು ಬಿಡುತ್ತಲೇ ಗುಂಡಮ್ಮ ಹೃದಯಾಘಾತದಿಂದ ತನ್ನ ಮನೆಯಲ್ಲಿ ಸ್ವಲ್ಪ ಹೊತ್ತಿನ ಮೊದಲಷ್ಟೇ ಸಾವನ್ನಪ್ಪಿದ ಹೃದಯವಿದ್ರಾಹಕ ಸುದ್ದಿಗೆ ದನಿಯಾದ. ಒಡನೆಯೇ ಎದ್ದೆವೋ, ಬಿದ್ದೆವೋ ಎನ್ನುವಂತೆ ಒಂದೇ ಉಸಿರಿನಲ್ಲಿ ಓಡುತ್ತಾ ಗುಡಿಯನ್ನು ಸೇರಿದ ನಾವು ಹತ್ತಾರು ಹುಡುಗರಿಗೆ ಅದಾಗಲೇ ಅಲ್ಲಿ ಮೂವತ್ತಕ್ಕೆ ಮೀರಿದ ಸಂಖ್ಯೆಯಲ್ಲಿ ಗುಂಪು ಕೂಡಿದ್ದ ಜನರ ದರ್ಶನವಾಗಿತ್ತು. ನೆರೆದ ಗುಂಪನ್ನು ಸೀಳುತ್ತಾ ಮುಂದೆ ನಡೆದ ಗೆಳೆಯರ ದೃಷ್ಟಿಗೆ ಅಲ್ಲಿಯೇ ನೆಲದ ಮೇಲೆ ಕುಸಿದು ಬಿದ್ದಿದ್ದ ಗುಂಡಮ್ಮ ಗೋಚರಿಸಿದಳು. ತನ್ನ ಎಡಗೈಯನ್ನು ಎದೆಯ ಮೇಲೆ ಇಟ್ಟುಕೊಂಡು ಮತ್ತೊಂದು ಕೈಯನ್ನು ನೆಲದ ಮೇಲೆ ಚೆಲ್ಲಿ ಈಗಷ್ಟೇ ಮಲಗಿದ್ದಾಳೇನೂ ಎನ್ನುವ ಭ್ರಮೆ ಮೂಡಿಸುವಂತಿದ್ದ ಗುಂಡಮ್ಮ ಮತ್ತೆಂದೂ ಮರಳದ ಲೋಕಕ್ಕೆ ಪಯಣಿಸಿರುವ ವಸ್ತುಸ್ಥಿತಿಯ ವಾಸ್ತವ ಅಂಶ ನಿಧಾನವಾಗಿ ನಮ್ಮ ತಲೆಗಳ ಒಳಗೆ ಇಳಿಯುತ್ತಾ ಹೋಯಿತು. ಗುಂಡಮ್ಮನ ಪಕ್ಕದಲ್ಲಿ ಇನ್ನೂ ಉರಿಯುತ್ತಲೇ ಇದ್ದ ಕಟ್ಟಿಗೆ ಒಲೆಯ ಮೇಲಿಟ್ಟಿದ್ದ ಮೈಸೂರುಪಾಕಿನ ದೊಡ್ಡ ಬಾಣಲೆಯೊಳಗೆ ಸಕ್ಕರೆ ಪಾಕ ಕೊತಕೊತ ಕುದಿಯುತ್ತಲೇ ಇತ್ತು. ಹಿಂದೆ ಗುಂಪಿನಲ್ಲಿ ನಿಂತಿದ್ದ ಯಾರೋ ಹಿರಿಯರು “ಮೊದಲು ಒಲೆ ಆರಿಸಿ” ಎಂದು ಕೂಗಿಕೊಳ್ಳಲಾಗಿ, ಅಲ್ಲಿಯೇ ಇದ್ದ ಸ್ಟೀಲಿನ ಚೆಂಬಿನಿಂದ ಪಕ್ಕದ ತಾಮ್ರದ ಹಂಡೆಯಲ್ಲಿದ್ದ ತಣ್ಣನೆಯ ನಾಲ್ಕಾರು ತಂಬಿಗೆಗಳಷ್ಟು ನೀರನ್ನು ಗೆಳೆಯ ಚಿದಾನಂದ ಉರಿಯುತ್ತಿದ್ದ ಒಲೆಗೆ ಎರಚಿ ಬೆಂಕಿಯನ್ನು ಕ್ಲುಪ್ತ ಸಮಯದಲ್ಲಿ ನಂದಿಸಿದ. ಅಲ್ಲಿಯವರೆಗೂ ಜೋರಾಗಿಯೇ ಕುದಿಯುತ್ತಿದ್ದ ಮೈಸೂರುಪಾಕಿನ ಸಕ್ಕರೆ ಪಾಕ ನಿಧಾನವಾಗಿ ತನ್ನ ಬಿಸಿಯನ್ನು ಕಳೆದುಕೊಳ್ಳುತ್ತಾ ಹೋದಲ್ಲಿ ಬಡಬಗ್ಗರ ಅಗ್ನಿಪುಷ್ಟಿಕೆಗಳಿಗೂ ತಣ್ಣೀರು ಎರಚಿದಂತಾಗಿ ಅವರ ಹೊಟ್ಟೆಗಳನ್ನು ತಕ್ಕಮಟ್ಟಿಗೆ ತುಂಬಿಸುವ ಕೆಲಸವನ್ನು ದೇವರ ಕಾರ್ಯಕ್ಕಿಂತಲೂ ಮಿಗಿಲಾದ ಸೇವೆಯ ರೂಪದ ವ್ರತವನ್ನಾಗಿಸಿ ಒಂದು ದಿನವೂ ತಪ್ಪದೇ ಪಾಲಿಸಿಕೊಂಡು ಬಂದ ಮುಗ್ದೆ, ಜಗತ್ತಿನ ಕ್ರೂರ, ಹೇಯ ಮುಖಕ್ಕಷ್ಟೆ ಪ್ರತಿಮುಖವಾದ ಪ್ರಾಣವೊಂದು ತನ್ನ ದೇಹದ ಬಿಸಿಯನ್ನೂ ಕ್ರಮೇಣ ಕಳೆದುಕೊಳ್ಳುತ್ತಾ ಸಾಗಿತ್ತು. ಗುಂಡಮ್ಮನ ಅಚಾನಕ್ ಸಾವು ಗುಡಿಯ ಆವರಣದಲ್ಲಿ ಆದ ಕಾರಣದಿಂದಾಗಿ ದೇವಸ್ಥಾನ ಮೈಲಿಗೆಯಾಯಿತೇ? ಪೂಜಾಸೇವೆಗಳನ್ನು ಎಷ್ಟು ದಿನಗಳ ಕಾಲ ನಿಲ್ಲಿಸಬೇಕಾಗಿ ಬರಬಹುದು? ಎನ್ನುವ ಗಹನವಾದ ಲೋಕಾರೂಢಿಯ ಚರ್ಚೆಯನ್ನು ಈಗಾಗಲೇ ಶುರು ಹಚ್ಚಿಕೊಂಡಿದ್ದ ಅರ್ಚಕವರ್ಗ ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಜೋಯಿಸರನ್ನು ಪಂಚಾಂಗ ಸಮೇತ ಮಂದಿರಕ್ಕೆ ಕರೆತರಲು ಮರಿ ಪೂಜಾರಿಯೊಬ್ಬನನ್ನು ಜೋಯಿಸರ ಮನೆಗೆ ಅಟ್ಟಿದರು. ಗುಂಡಮ್ಮನ ಮನೆಯಲ್ಲಿ ಕ್ಷಣಕ್ಷಣಕ್ಕೂ ಹಿಗ್ಗುತ್ತಲೇ ಸಾಗಿದ ಊರ ಜನರ ಗುಂಪಿನಲ್ಲಿ ಸಿಕ್ಕಿ ಹಾಕಿಕೊಂಡವನಿಗೆ ಉಸಿರು ಕಟ್ಟಿದಂತಾಗಲು, ದೇವಸ್ಥಾನದ ಹೊರಗೆ ನಡೆದು ಬಂದವನಿಗೆ ಅಲ್ಲಿದ್ದ ಭಿಕ್ಷುಕರ ಪಡೆ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು ಗೋಚರಿಸಿತು. ಗುಂಡಮ್ಮನ ಅಂತಿಮದರ್ಶನಕ್ಕಾಗಿ, ತಮ್ಮ ಎಂದಿನ ತಟ್ಟೆ, ಬಟ್ಟಲುಗಳ ಹೊರತಾಗಿ ನೆರೆದಿದ್ದ ಅವರಿಗೆ ಗುಂಡಮ್ಮನ ಅಕಾಲಿಕ ಸಾವಿನಿಂದ ಆದ ನಷ್ಟದ ಶೇಕಡಾ ಒಂದು ಭಾಗವೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ರೂಪದಲ್ಲಿ ಅಲ್ಲಿ ಸೇರಿದ್ದ ಯಾರೊಬ್ಬ ಪ್ರಭೂತಿಗೂ ಆದ ಹಾಗೆ ನನಗೆ ತೋರಿಬರಲಿಲ್ಲ. ನಿಜವಾದ ಅರ್ಥದಲ್ಲಿ ಏನನ್ನಾದರೂ ಕಳೆದುಕೊಂಡವನಿಗೆ ಮಾತ್ರ ತಾನು ಕಳೆದುಕೊಂಡ ಅಮೂಲ್ಯವಸ್ತು ಸೃಷ್ಟಿಸಿದ ಶೂನ್ಯ ಇನ್ನಿಲ್ಲದಂತೆ ಕಾಡುತ್ತದೆ. ಅನ್ಯರಿಗೆ ಇದು ಮತ್ತೊಂದು ಲೋಕಾರೂಢಿಯ ಅಂಶವಷ್ಟೇ ಆಗಿ ಮಹತ್ವದ ವಿಚಾರವಾಗಿ ಹೊಳೆಯುವುದೂ ಇಲ್ಲ, ಉಳಿಯುವುದೂ ಇಲ್ಲ. ಹೊಟ್ಟೆಯ ಹಸಿವು ಉಳ್ಳವರನ್ನು ಎಂದೂ ಬಾಧಿಸದೆ ತುತ್ತು ಅನ್ನಕ್ಕೂ ಗತಿ ಇಲ್ಲದ ನಿರ್ಗತಿಕರನ್ನು ಆಂತರ್ಯದ ಅಗ್ನಿಯಾಗಿ ಸಜೀವ ರೂಪದಲ್ಲಿ ಅವರನ್ನು ಬಾಳಿನುದ್ದಕ್ಕೂ ದಹಿಸುತ್ತಲೇ ಸಾಗುವ ಜಗದೊಡೆಯನ ದ್ವಂದ್ವಮಾನವಾದ ಈ ದೈವನಿಯಾಮಕ ತತ್ವ ಮಾತ್ರ ನನ್ನ ಬುದ್ದಿಮತ್ತೆಗೆ ಅನಂತ ಸವಾಲುಗಳನ್ನು ಎಸೆಯುತ್ತಲೇ ಇದೆ.