ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ
ಐದು ದಿನಗಳ ಕಾಲ ವಿಜೃಂಭಿಸಿದ ಪ್ರಥಮ ಸಾರ್ವಜನಿಕ ಗಣೇಶೋತ್ಸವದ ಯಶಸ್ವಿ ಮುಕ್ತಾಯದ ನಂತರ ಗುರುತ್ರ್ಯಯರೂ ಸೇರಿ ಗಣೇಶೋತ್ಸವ ಮಂಡಳಿಯ ಸಕಲ ಪದಾಧಿಕಾರಿಗಳಲ್ಲಿ ಹೊಸ ಚೈತನ್ಯವೊಂದು ಗರಿಗೆದರಿತ್ತು. ಅಂದುಕೊಂಡಕ್ಕಿಂತಲೂ ಹೆಚ್ಚಿನಮಟ್ಟದಲ್ಲಿ ಸಿಕ್ಕ ಯಶಸ್ಸು ಮುಂಬರುವ ವರ್ಷಗಳಲ್ಲಿ ನಡೆಯುವ ಉತ್ಸವಗಳ ಸಾಂಸ್ಕೃತಿಕ ಸಾಧ್ಯತೆಗಳನ್ನು ಬಹಳ ದೊಡ್ಡ ರೀತಿಯಲ್ಲಿ ವಿಸ್ತರಿಸಿತ್ತು. ಬರುವ ವರ್ಷದ ಉತ್ಸವದ ತಯಾರಿಯನ್ನು ಸರಿಸುಮಾರು ಎರಡು ತಿಂಗಳುಗಳ ಮೊದಲೇ ಶುರುಮಾಡಿಕೊಂಡಿದ್ದ ಸಮಿತಿ ಆ ವರ್ಷದ ಉತ್ಸವದ ಯಶಸ್ಸಿಗಾಗಿ ಬಹಳಷ್ಟು ಶ್ರಮಪಟ್ಟಿತ್ತು. ಇದರ ಅಂಗವಾಗಿಯೇ ಊರಿನ ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಉತ್ಸವದ ಅಂಗವಾಗಿ ಶಾಲಾಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಡಬೇಕೆಂಬ ಕೋರಿಕೆಯನ್ನೂ ಮುಂದಿಟ್ಟಿತ್ತು.
ಸರ್ಕಾರಿ ಮಾಧ್ಯಮಿಕ ಶಾಲಾವತಿಯಿಂದ ಗಣೇಶೋತ್ಸವದ ಅಂಗವಾಗಿ ಏಳನೇ ಇಯತ್ತಿನ ಬಾಲಕರಿಂದ ಒಂದು ನಾಟಕದ ಆಯೋಜನೆಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು. ಇದಕ್ಕಾಗಿ ಸೂಕ್ತ ನಾಟಕವೊಂದರ ಹುಡುಕಾಟ ಮತ್ತು ತಯಾರಿಕೆಯ ಜವಾಬ್ದಾರಿಯನ್ನು ಶಿಕ್ಷಕ ರಾಮರೆಡ್ಡಿಯವರ ಸಶಕ್ತ ಹೆಗಲಿಗೆ ಹೊರಿಸಲಾಯಿತು. ರಾಮರೆಡ್ಡಿ ಮೇಷ್ಟ್ರು “ಅಜ್ಜಿ ಆಸ್ತಿ” ಎನ್ನುವ ನಾಟಕವನ್ನು ಮಕ್ಕಳಿಂದ ಮಾಡಿಸಬೇಕು ಎಂದು ನಿರ್ಧರಿಸಿದರು. ನಾಟಕದಲ್ಲಿ ಭಾಗವಹಿಸಲು ನಾನು, ಸಿದ್ದಲಿಂಗಾಚಾರಿ, ಚಿದಾನಂದ, ಕಾಂತರಾಜು ಮತ್ತು ಶಿವಕುಮಾರ್ ಆಯ್ಕೆಯಾದೆವು. ಸಿದ್ದಲಿಂಗನಿಗೆ ಅಜ್ಜಿಯ ಪಾತ್ರವನ್ನು, ಚಿದಾನಂದನಿಗೆ ಊರಲ್ಲಿ ಬೇಸಾಯ ಮಾಡಿಕೊಂಡಿದ್ದ ಅಜ್ಜಿಯ ಹಿರಿಯ ಮಗನ ಪಾತ್ರವನ್ನು ಕೊಟ್ಟಲ್ಲಿ ಶಿವಕುಮಾರನಿಗೆ ಹಿರಿಯ ಮಗನ ಹೆಂಡತಿಯ ಪಾತ್ರವನ್ನು ಕೊಡಲಾಯಿತು. ಪಟ್ಟಣದಲ್ಲಿ ಕೆಲಸಮಾಡುವ ಅಜ್ಜಿಯ ಕಿರಿಯ ಮಗನ ಭೂಮಿಕೆ ನನ್ನ ಪಾಲಿಗೆ ಬಂದಿತು. ನನ್ನ ಗೆಳೆಯನ ಪಾತ್ರದಲ್ಲಿ ಕಾಂತರಾಜು ಅಭಿನಯಿಸಬೇಕು ಎನ್ನುವುದು ನಿಶ್ಚಿತವಾಯಿತು. ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಗೆ ನಾಟಕದ ಕಠಿಣ ಅಭ್ಯಾಸವನ್ನು ಬಿಡುವಿದ್ದ ತರಗತಿಗಳ ವೇಳೆಯಲ್ಲಿಯೇ ಮಾಡಿದೆವು. ಒಂದು ಸಂಭಾಷಣೆಯನ್ನು ಸ್ಪಷ್ಟವಾಗಿ ಹೇಳುವುದರಲ್ಲಿ ಮಾತ್ರ ಕಾಂತರಾಜು ಪದೇಪದೇ ತಪ್ಪನ್ನು ಎಸಗುತ್ತಿದ್ದ. ನಾನು ನಾಟಕದಲ್ಲಿ ಮೊದಲ ಬಾರಿಗೆ ಅವನನ್ನು ಭೇಟಿಯಾಗುವ ಸಂದರ್ಭದಲ್ಲಿ ನನ್ನನ್ನು ಉದ್ದೇಶಿಸಿ “ಏನೋ ಕೈಕುಲುಕೋ ಸಮಾಚಾರ” ಎಂದು ಅವನು ಹೇಳಬೇಕಾದ ಡೈಲಾಗ್ ನ್ನು ಮೇಷ್ಟ್ರು ನೂರು ಸಾರಿ ಹೇಳಿಕೊಟ್ಟರೂ
ಅದರ ಸರಿಯಾದ ಉಚ್ಚಾರಣೆಯ ಭಾಗ್ಯ ಕಾಂತರಾಜುಗೆ ಒಲಿದು ಬರಲೇ ಇಲ್ಲ. ಹೀಗಾಗಿ, ಗತ್ಯಂತರವಿಲ್ಲದೆ ಅವನ ಪಾತ್ರವನ್ನು ನಾಟಕಕ್ಕೆ ಕೇವಲ ಎರಡು ವಾರ ಬಾಕಿ ಇರುವಾಗ ಸತ್ಯಾನಂದನಿಗೆ ಕೊಟ್ಟು ನಾಟಕದ ಅಭ್ಯಾಸವನ್ನು ಮುಂದುವರಿಸಲಾಯಿತು.
ಹೆಚ್ಚಾದ ಪರಿಶ್ರಮದ ಮೂಲಕ ಅಭ್ಯಾಸ ನಡೆಸಿದ ಫಲಶ್ರುತಿಯಾಗಿ ಮತ್ತು ಮಾಸ್ತರ ಅವಿರತಶ್ರಮದ ಮುಖೇನ ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂತು. ಈ ನಾಟಕದಿಂದ ನಮ್ಮ ಹುಡುಗರ ತಂಡಕ್ಕೆ ಸುತ್ತಮುತ್ತಲ ಹಳ್ಳಿಗಳ ಶಾಲೆಗಳ ಕಡೆಯಿಂದ ಯಾವ ಮಟ್ಟದ ಬೇಡಿಕೆ ಬಂತು ಅಂದರೆ ಗಣೇಶ ಹಬ್ಬದ ತರುವಾಯದ ಒಂದು ತಿಂಗಳುಗಳ ಕಾಲ ಹುಣಸೇಕಟ್ಟೆ, ಕಡಬನಕಟ್ಟೆ ಕೂನಬೇವು, ಬಂಗಾರಕ್ಕನ ಹಳ್ಳಿ ಮುಂತಾದ ಗ್ರಾಮಗಳ ಮಾಧ್ಯಮಿಕ ಶಾಲೆಗಳಲ್ಲಿ ನಾವು ನಾಟಕವನ್ನು ಆಯಾ ಶಾಲಾಮುಖ್ಯಸ್ಥರ ಕೋರಿಕೆಯ ಮೇರೆಗೆ ಪ್ರದರ್ಶಿಸಬೇಕಾಯಿತು.
ಉತ್ಸವದ ಸಮಿತಿಯವರಿಂದ ಈ ಬಾರಿ ಒಂದು ಅನಾಹುತ ನಡೆದುಹೋಯಿತು. ಹೋದವರ್ಷ ಅದ್ಭುತ ಗಣಪತಿ ಪ್ರತಿಮೆ ಮಾಡಿಕೊಟ್ಟಿದ್ದ ಬೆನಚಣ್ಣ ಆಚಾರಿಯ ಧರ್ಮಪತ್ನಿ ತುಂಗಮ್ಮ ಈ ವರ್ಷ ಆಚರಣಾಸಂಘದ ವತಿಯಿಂದ ಕಡೆಗಣಿಸಲ್ಪಟ್ಟಳು. ಊರಿನ ಕುಶಲಕರ್ಮಿ ತುಂಗಮ್ಮನಿಗೆ ಗಣೇಶನ ಮೂರ್ತಿ ಮಾಡಲಿಕ್ಕೆ ಅವಕಾಶ ಕೊಡುವ ಬದಲಾಗಿ ಚಿತ್ರದುರ್ಗದಿಂದ ಗಣೇಶ ಮೂರ್ತಿಯನ್ನು ತರುವ ವ್ಯವಸ್ಥೆಯನ್ನು ಮಾಡಲಾಯಿತು. ಇದರ ಹಿಂದಿನ ಉದ್ದೇಶಗಳು, ಹುನ್ನಾರಗಳು ನನಗೆ ಈಗಲೂ ಅಸ್ಪಷ್ಟವಾಗಿಯೇ ಉಳಿದಿವೆ. ಬಹುಶಃ ದುರ್ಗದ ರಂಗಯ್ಯನ ಬಾಗಿಲು ಮತ್ತು ಆನೆ ಬಾಗಿಲುಗಳಲ್ಲಿ ಕೂರಿಸುತ್ತಿದ್ದ ವೈಭವೋಪೇತ ಗಣಪತಿಮೂರ್ತಿಗಳ ತಯಾರಿಕೆಯನ್ನು ತಲಾಂತರದಿಂದ ಮಾಡುತ್ತಾ ಬರುತ್ತಿದ್ದ ಕುಶಲಕರ್ಮಿಗಳ ಬಳಿಯಿಂದ ಮೂರ್ತಿ ತಂದರೆ ಉತ್ಸವಕ್ಕೆ ಹೆಚ್ಚು ಕಳೆಕಟ್ಟಬಹುದು ಎಂದು ಸಮಿತಿಯ ಕೆಲವು ಉತ್ಸಾಹಿ ತರುಣರು ನಿರ್ಧಾರವನ್ನು ಮಾಡಿ ಹಿರಿಯರನ್ನು ಒಪ್ಪಿಸಿದ ಫಲಶೃತಿ ಇದಾಗಿತ್ತೋ ತಿಳಿಯೆ. ತನ್ನ ಕುಶಲ ಕೈಗಳ ಚಳಕಕ್ಕೆ ಮತ್ತು ಹೋದವರ್ಷದ ಸುಂದರ ಮೂರ್ತಿಯ ಆಕರ್ಷಣೆಗೆ ಮರುಳಾದ ಸಮಿತಿವತಿಯಿಂದ ಈ ವರ್ಷವೂ ಗಣೇಶಮೂರ್ತಿಯನ್ನು ತಯಾರು ಮಾಡುವ ಅವಕಾಶ ತನಗೇ ಸಿಕ್ಕೀತು ಎಂದು ತುದಿಗಾಲಿನಲ್ಲಿ ನಿಂತು ನಿರೀಕ್ಷಣೆ ಮಾಡುತ್ತಿದ್ದ ತುಂಗಮ್ಮನಿಗೆ ಈ ಬೆಳವಣಿಗೆ ತೀವ್ರ ನಿರಾಶೆ ತಂದಿತ್ತು. ಈ ಸಲದ ಗಣಪತಿ ಪ್ರತಿಮೆಯನ್ನು ಹೋದವರ್ಷ ಭದ್ರಾವತಿ ನಗರದ ನ್ಯೂಟೌನ್ ನ ಗಣೇಶೋತ್ಸವ ಸಮಿತಿಯವರು ಮಾಡಿದ ಪಂಚಮುಖಗಳ, ಕಮಲಾಸೀನ ವಿಗ್ರಹದ ಮಾದರಿಯಲ್ಲಿ ಮಾಡಬೇಕು ಎಂದು ತಮ್ಮನಿಂದ ಅದಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನೂ ತರಿಸಿಕೊಂಡಿದ್ದ ತುಂಗಮ್ಮ ಬಹಳ ದೊಡ್ಡಮಟ್ಟದ ಮಾನಸಿಕ ಕ್ಲೇಷಕ್ಕೆ ಒಳಗಾದಳು. ಮೂಲತಃ ಕಲಾವಿದನಲ್ಲದ ಆಚಾರಿಗೆ ಆ ಮಟ್ಟದ ನಿರಾಸೆ ತಟ್ಟಲಿಲ್ಲವಾದರೂ ವರ್ಷದ ವರಮಾನದ ಬಹುಪಾಲು ಕೈ ಬಿಟ್ಟುಹೋದ ದುಃಖ ಎದೆಯ ಮೂಲೆಯಲ್ಲಿ ಮಡುಗಟ್ಟಿತ್ತು.
ಬ್ಬದ ಹಿಂದಿನ ದಿನ ಊರಿಗೆ ಆಗಮಿಸಿದ ವಿಗ್ರಹವನ್ನು ಭಾರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದ ಗ್ರಾಮಸ್ಥರ ನೆರೆದ ದಟ್ಟಗುಂಪನ್ನು ಸೀಳಿ ವಿಗ್ರಹದ ಅತೀ ಸಮೀಪಕ್ಕೆ ಹೋಗಿ ಮೂರ್ತಿಯ ಇಂಚಿಂಚನ್ನೂ ತನ್ನ ಕಣ್ಣಾಲಿಗಳಲ್ಲಿ ಸೆರೆ ಹಿಡಿದು, ದೊಡ್ಡಮ್ಮನ ಅಣತಿಯಂತೆ ಒಂದೇ ಉಸಿರಿನಲ್ಲಿ ಮನೆಗೆ ದೌಡಾಯಿಸಿದ ಜಕಣಾಚಾರಿ, ಮುಂಬಾಗಿಲಿನಲ್ಲಿಯೇ ನಿಂತು ತನ್ನ ಬರುವನ್ನು ಎದುರು ನೋಡುತ್ತಿದ್ದ ತುಂಗಮ್ಮನಿಗೆ “ದೊಡ್ಡಮ್ಮ, ಗಣಪತಿ ಅಷ್ಟಕಷ್ಟೆ, ಹೋದವರ್ಷದ ನಮ್ಮ ಮೂರ್ತಿಯಷ್ಟು ಸುಂದರವಾಗಿಲ್ಲ” ಎನ್ನುವ ಸಂದೇಶವನ್ನ ರವಾನಿಸಿದ್ದ. ಮೂರ್ತಿಯ ಬಗ್ಗೆ ಸವಿವರವಾಗಿ ಅವನ ಬಳಿ ಕೇಳಿ ತಿಳಿದ ತುಂಗಮ್ಮನ ದುಗುಡ ಮತ್ತಷ್ಟು ಹೆಚ್ಚಾಯಿತು. ಹೋದವರ್ಷ ಕೊಟ್ಟ ಹಣ ಜಾಸ್ತಿಯಾಯ್ತು ಅಂತ ಅನ್ನಿಸಿದರೆ ಈ ವರ್ಷ ಬಂದು ಅದರ ಬಗ್ಗೆ ಮಾತನಾಡಬೇಕಾಗಿತ್ತು, ಒಂದು ಮಾತೂ ಹೇಳದೆ ದುರ್ಗದಿಂದ ಮೂರ್ತಿ ತಂದದ್ದು ಎಷ್ಟರ ಮಟ್ಟಿಗೆ ಸಾಧು? ಎನ್ನುವ ಪ್ರಶ್ನೆ ತುಂಗಮ್ಮ ಯೋಚಿಸಿದಷ್ಟೂ ಜಟಿಲವಾಗತೊಡಗಿತು. ತನ್ನನ್ನು ಮೀರಿಸಿದ ಕಲಾವಿದರು ದುರ್ಗದ ಸೀಮೆಯಲ್ಲಿ ಇರುವರೇ? ಎನ್ನುವ ಸಂಶಯ ಸುಳಿದ ಹೊತ್ತೂ ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಎಂದು ತುಂಗಮ್ಮ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವ ಸರ್ವಪ್ರಯತ್ನ ನಡೆಸಿದರು.
ಆಚಾರಿಗೆ ರಾತ್ರಿ ಊಟವನ್ನ ಕೊಟ್ಟು ತಾವು ಮಾತ್ರ ಬರೀ ನೀರನ್ನು ಕುಡಿದ ತುಂಗಮ್ಮ ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು. ಸರಿರಾತ್ರಿಯ ಈ ಹೊತ್ತಿನಲ್ಲಿ ಯಾರು ಬಂದಿದ್ದಾರು? ಎಂದುಕೊಂಡ ತುಂಗಮ್ಮ ಗಡದ್ದಾಗಿ ಊಟ ಮಾಡಿ ಈಗಾಗಲೇ ಗೊರಕೆಯ ಲೋಕಕ್ಕೆ ಅಧಿಕೃತ ಪ್ರವೇಶ ಪಡೆದಿದ್ದ ಗಂಡನನ್ನು ಹೆದರುತ್ತಲೇ ತಟ್ಟಿ ಎಬ್ಬಿಸಿದಳು. ಕಣ್ಣುಜ್ಜುತ್ತಲೇ ಮುಂಬಾಗಿಲು ತೆರದ ಬೆನಚಣ್ಣ ಆಚಾರಿ ಬಾಗಿಲ ಮುಂದೆ ವಿಧೇಯತೆಯನ್ನು ಹೊದ್ದು, ಕೈಗಳನ್ನು ಕಟ್ಟಿ ನಿಂತ ಊರ ಉತ್ಸವ ಸಮಿತಿಯ ಯುವಕರನ್ನು ಕಂಡು ಒಂದು ಕ್ಷಣ ದಂಗಾದ. ಮರುಕ್ಷಣ ಸಾವರಿಸಿಕೊಂಡವನು ಅವರನ್ನು ಒಳಗೆ ಕರೆದು ಜಗಲಿಯ ಮೇಲೆ ಕೂರಿಸಿ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದ ಕಾರಣವನ್ನು ಕೇಳಿದ. ಚಿತ್ರದುರ್ಗದಿಂದ ತಂದ ಮೂರ್ತಿಯನ್ನ ವೇದಿಕೆಯ ಮೇಲೆ ತರುವಲ್ಲಿ ಒಂದು ಅತಾಚುರ್ಯ ನಡೆದು ಹೋಗಿತ್ತು. ಮೂರ್ತಿಯ ಎಡಭಾಗಕ್ಕೆ ಭಾಗಶಃ ಹಾನಿಯಾಗಿ ಭುಜದ ಬಳಿ ವಿಗ್ರಹ ಮುರಿದು ಇಡೀ ಕೈ ಜೋಲಾಡುವ ಸ್ಥಿತಿಯಲ್ಲಿತ್ತು. ಭಗ್ನಮೂರ್ತಿಯ ಪೂಜೆ ನಿಷಿದ್ಧವಾದ ಕಾರಣದಿಂದ ಮುರಿದಿರುವ ಭುಜದ ಭಾಗವನ್ನು ವಸ್ತ್ರಗಳಿಂದ ಮುಚ್ಚಿ ಅಲಂಕಾರ ಮಾತ್ರಕ್ಕೆ ದುರ್ಗದ ಗಣಪತಿಯನ್ನು ಪ್ರತಿಷ್ಠಾಪಿಸಿ, ಆಚಾರಿಯ ಮನೆಯಿಂದ ಪೂಜೆಗಾಗಿ ಒಂದು ಗಣಪತಿಯನ್ನು ಮಾರನೇ ಬೆಳಿಗ್ಗೆಯೇ ಕೊಂಡೊಯ್ಯಬೇಕು ಎಂದು ಆತುರಾತುರವಾಗಿ ನಿರ್ಧರಿಸಿದ ಯುವಕರ ತಂಡ ಇದೇ ಮಾತನ್ನು ಆಚಾರಿಗೆ ಮುಟ್ಟಿಸುವ ತವಕದಿಂದ ರಾತ್ರಿ ಹನ್ನೆರೆಡು ಮೀರಿದ ಸಮಯದಲ್ಲಿ ಆತನ ಮನೆಬಾಗಿಲು ತಟ್ಟಿತ್ತು.
ಮಾರನೇ ದಿನ ಗಣಪನ ಚೌತಿ. ಹಿಂದಿನ ರಾತ್ರಿ ಬಂದು ಮೂರ್ತಿ ಕೊಡಿ ಎಂದರೆ ಹೇಗೆ? ಎಂದ ಆಚಾರಿ ಸಮಿತಿಯ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ. ಬಹಳ ಪೇಚಿಗೆ ಸಿಕ್ಕಂತೆ ಕಂಡ ಸಮಿತಿಯ ಮಂದಿ ಪರಿಪರಿಯಾಗಿ ವಿನಂತಿಸಿಕೊಂಡರೂ, ಎಷ್ಟೇ ಹಣವಾಗಲೀ ಪರವಾಗಿಲ್ಲ ಕೊಡುತ್ತೇವೆ, ಪೂಜೆಗಾಗಿ ಒಂದು ಮೂರ್ತಿ ಖಂಡಿತಾ ಕೂಡಲೇಬೇಕು, ಇಲ್ಲವಾದಲ್ಲಿ ಉತ್ಸವಕ್ಕೆ ಸಂಚು ಬರುತ್ತದೆ ಎನ್ನುವ ಸಮಿತಿಯ ಯಾವ ಮಾತಿಗೂ, ಹಠಕ್ಕೂ ಆಚಾರಿ ಬಗ್ಗಲೂ ಇಲ್ಲ, ಜಗ್ಗಲೂ ಇಲ್ಲ. ಸುಮಾರು ಒಂದು ಗಂಟೆಯ ಕಾಲ ನಡೆದ ಮಾತುಕತೆಗಳನ್ನು, ಆಗಾಗ ಏರಿದ ದನಿಯಲ್ಲಿ ನಡೆದ ಸಂಭಾಷಣೆಗಳನ್ನ ಪಡಸಾಲೆಯ ಕಂಬದ ಹಿಂದಿನ ತನ್ನ ಎಂದಿನ ಸ್ವಸ್ಥಾನದಲ್ಲಿ ನಿಂತೇ ಆಲಿಸಿದ ತುಂಗಮ್ಮನಿಗೆ ಏನೆನಿಸಿತೋ ಏನೋ, ಕಂಬದ ಮರೆಯಿಂದ ಮುಂಭಾಗಕ್ಕೆ ಬಂದವಳು, ಸಮಿತಿಯ ತುಂಗಮ್ಮನಿಗೆ ಪರಿಚಯವಿದ್ದ ಸಮಿತಿಯ ಒಬ್ಬ ಯುವಕನನ್ನು ಉದ್ದೇಶಿಸಿ “ನಾಗರಾಜ ಅಣ್ಣ, ನೀವು ನಾಳೆ ಒಂಬತ್ತು ಗಂಟೆಗೆ ಬಂದು ಮೂರ್ತಿಯನ್ನು ಕೊಂಡೊಯ್ಯಿರಿ. ಆದರೆ ಒಂದು ವಿಷಯ, ಮೂರ್ತಿ ಹಸಿಯಾಗಿರುತ್ತದೆ ಮತ್ತು ಸಮಯಾಭಾವದ ಕಾರಣದಿಂದ ಯಾವುದೇ ಬಣ್ಣಗಳನ್ನ ಹಾಕಲಾಗುವುದಿಲ್ಲ. ನೀವು ಈ ಗಣಪತಿಗೆ ಯಾವುದೇ ಹಣ ಕೂಡ ಸಂದಾಯ ಮಾಡಬೇಕಾಗಿಲ್ಲ, ದಯವಿಟ್ಟು ನಮ್ಮ ಕಡೆಯಿಂದ ನಿಮ್ಮ ಉತ್ಸವಕ್ಕೆ ಕೊಡುಗೆಯಾಗಿ ಮಾತ್ರ ಇದನ್ನು ಸ್ವೀಕರಿಸಬೇಕು” ಎಂದು ತನ್ನ ಎಂದಿನ ಕ್ಷೀಣ ಆದರೆ ಅತ್ಯಂತ ನಿರ್ಧಾರಿಕವೆನ್ನಬಹುದಾದ ಸ್ವರದಲ್ಲಿ ನುಡಿದಳು. ತುಂಗಮ್ಮನ ಮಾತುಗಳನ್ನು ಆಲಿಸಿದ ಸಮಿತಿಯವರಿಗೆ ಹೆಚ್ಚೇನು ಹೇಳಲು ಉಳಿದಿರಲಿಲ್ಲವಾದ್ದರಿಂದ ನಾಳೆ ಬೆಳಿಗ್ಗೆ ಬರುತ್ತೇವೆ ಎಂದು ತುಂಗಮ್ಮನಿಗೆ ಧನ್ಯವಾದಗಳನ್ನ ಅರ್ಪಿಸಿ ನಡುರಾತ್ರಿಯ ಕತ್ತಲಲ್ಲಿ ಕರಗಿ ಹೋದರು. ಬಿಟ್ಟ ಬಾಯಿಯನ್ನು ಬಿಟ್ಟ ಹಾಗೆಯೇ ತುಂಗಮ್ಮ ಕಡೆಗೆ ನೋಡುತ್ತಿದ್ದ ಆಚಾರಿಗೆ ಜೀವನದಲ್ಲಿ ಮೊದಲ ಬಾರಿಗೆ ತುಂಗಮ್ಮನಲ್ಲಿ ಅಡಗಿ ಕುಳಿತಿದ್ದ ಸೂಕ್ತ ಸಮಯದಲ್ಲಿ ದೃಢ ನಿರ್ಧಾರಗಳನ್ನು ಕೈಗೊಳ್ಳುವ ಅಗಾಧ ಸ್ತ್ರೀಶಕ್ತಿಯ ಪರಿಚಯವಾಗಿತ್ತು. ರಾತ್ರಿ ಅಣ್ಣನವರ ‘ಗಂಧದಗುಡಿ’ ಚಲನಚಿತ್ರವನ್ನು ಜಯವಾಣಿ ಟೂರಿಂಗ್ ಟಾಕೀಸ್ ನಲ್ಲಿ ನೋಡಿ ಮನೆಗೆ ಬಂದು ಕಡ್ಡಿಯ ಚಾಪೆಯ ಮೇಲೆ ಆಗಷ್ಟೇ ಮೈಚೆಲ್ಲಿದ್ದ ಜಕಣಾಚಾರಿ ಮತ್ತು ಬಸಪ್ಪಾಚಾರಿಯನ್ನು ರಾತ್ರೋರಾತ್ರಿ ಬಂದ ದೊಡ್ಡಪ್ಪ ಉತ್ಸವದ ಮೂರ್ತಿಯ ತಯಾರಿಕೆಗಾಗಿ ಎಬ್ಬಿಸಿ ಕೊಂಡೊಯ್ದಿದ್ದ. ಜೊತೆಗೆ ಇನ್ನೊಬ್ಬ ತಮ್ಮನ ಮಕ್ಕಳಾದ ನಾಗಲಾಚಾರಿ ಮತ್ತು ಶೇಖರಾಚಾರಿಯರನ್ನೂ ಬೆನಚಣ್ಣ ಆಚಾರಿ ತನ್ನ ಮನೆಗೆ ಕರೆದೊಯ್ದಿದ್ದ. ರಾತ್ರಿಯಿಡೀ ನಿದ್ದೆಯಿಲ್ಲದೆ ಮೂರ್ತಿ ರಚನೆಯನ್ನು ಮಾಡಿ ಸುಮಾರು ಮೂರು ಅಡಿಗಳಷ್ಟು ದೊಡ್ಡದಾದ ವಿಗ್ರಹವನ್ನು ನಿರ್ಮಿಸಿದ ತುಂಗಮ್ಮ ಮತ್ತು ತಂಡ ಬೆಳಗಿನ ಎಂಟರ ವೇಳೆಗೆ ಹಸಿದಾದ ಮಣ್ಣಿನಲ್ಲಿ ಒಂದು ಜೀವಂತಕಳೆಯ ಗಣಪತಿಮೂರ್ತಿಯನ್ನು ನಿರ್ಮಿಸಿದ್ದರು. ಒಂಬತ್ತು ಗಂಟೆಗೆ ಸರಿಯಾಗಿ ಬಂದ ಸಮಿತಿಯವರು ಹೆಚ್ಚು ಸದ್ದು ಗದ್ದಲವಿಲ್ಲದೆ ಮೂರ್ತಿಯನ್ನು ಎತ್ತಿನ ಗಾಡಿಯ ಮೇಲೆ, ಮೆರವಣಿಗೆರಹಿತವಾಗಿ ವೇದಿಕೆಗೆ ಸಾಗಿಸಿದರು. ಕ್ಲುಪ್ತ ಸಮಯಕ್ಕೆ ಮೂರ್ತಿ ಒದಗಿಸಿದ ತುಂಗಮ್ಮನ ಕೈನಲ್ಲಿಯೇ ಗಣೇಶನ ಮಹಾಪೂಜೆಯನ್ನ ನೆರವೇರಿಸಬೇಕೆನ್ನುವ ಇಚ್ಛೆಯನ್ನು ಸಮಿತಿಯವರು ಪ್ರದರ್ಶಿಸಲಾಗಿ ಬೆನಕಣ್ಣ ದಂಪತಿಗಳು ಮತ್ತು ಅವರ ತಂಡದವರಿಂದ ಅಗ್ರಪೂಜೆಯೊಂದಿಗೆ ಎರಡನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಶಾಸ್ತ್ರೋಕ್ತ ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿತು. ಎರಡೆರಡು ಗಣಪತಿಗಳ ಪ್ರತಿಸ್ಥಾಪನೆ ಯಾವ ಕಾರಣಕ್ಕಾಗಿ ಎನ್ನುವುದನ್ನು ಅರಿಯದ ಊರಜನ ವರ್ಣಾರಹಿತ ಮಣ್ಣಿನ ಬಣ್ಣದ ತುಂಗಮ್ಮನ ಗಣಪತಿಯ ಆಕಾರವನ್ನು ಕೊಂಡಾಡಿದರಾಗಲಿ ದುರ್ಗದ ಗಣಪತಿಗೆ ಪೂಜೆ ಮಾಡುವ ಗೋಜಿಗೇ ಹೋಗಲಿಲ್ಲ. ಉತ್ಸವದ ಉದ್ದಕ್ಕೂ ಕೇವಲ ಅಲಂಕಾರಿಕ ಮೂರ್ತಿಯಾಗಿ ಉಳಿದ ದುರ್ಗದ ಗಣೇಶ ತನ್ನ ಮಗ್ಗುಲಲ್ಲೇ ವಿರಾಜಮಾನನಾಗಿ ಭಕ್ತಗಣದ ಅಗ್ರಪೂಜಾ ಕೈಂಕರ್ಯಗಳನ್ನು ಸೂರೆಗೊಳ್ಳುತ್ತಿದ್ದ ತುಂಗಮ್ಮನ ಗಣಪತಿಯನ್ನು ನೋಡಿ ಅಸೂಯೆಯಿಂದ ಹೊಟ್ಟೆಯನ್ನು ಮತ್ತಷ್ಟು ಗುಡಾಣ ಮಾಡಿಕೊಂಡಿರಲೂ ಸಾಕು. ಸ್ಥಳೀಯ ಕರಕೌಶಲ್ಯದ ಎದುರು ಆಮದಾದ ಕರಕೌಶಲ್ಯವೊಂದು ಹೀನಾಯವಾಗಿ ನೆಲಕಚ್ಚಿದ್ದು ನನ್ನ ಮಟ್ಟಿಗೆ ಜೀವನವಿಡೀ ನೆನಪಿಟ್ಟುಕೊಳ್ಳಬೇಕಾದ ಪಾಠವನ್ನು ಬಿಟ್ಟುಹೋಗಿದೆ. ತಾಂತ್ರಿಕತೆ, ಸಭ್ಯತೆ, ಉಪದೇಶ ಮತ್ತಿತರ ಹತ್ತುಹಲವು ಕ್ಷೇತ್ರಗಳ ಮಟ್ಟಿಗೂ ನಾನು ಮೇಲೆ ಕಲಿತ ಪಾಠ ಅಷ್ಟೇ ದಿವಿನಾಗಿ ಅನ್ವಯಗೊಳ್ಳುತ್ತದೆ. ಸ್ಥಳೀಯ ಮಟ್ಟದಲ್ಲಿ ಸೇವೆಯ ಸೌಲಭ್ಯವಿಲ್ಲದ ಎಲ್ಲಾ ಸರಕುಸೇವೆಗಳೂ ಈ ಕೊರತೆಯಿಂದ ಇನ್ನಿಲ್ಲದಂತೆ ಬಳಲುತ್ತವೆ.
ಇಲ್ಲಿಂದ ಮುಂದೆ ಸುಮಾರು ಒಂದೂವರೆ ದಶಕಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಅದ್ದೂರಿಯಾಗಿ ನಡೆದುಕೊಂಡು ಹೋಯಿತಾದರೂ ಊರ ಒಗ್ಗಟ್ಟಿನ ದೃಷ್ಟಿಕೋನದಿಂದ ಅಷ್ಟೇನೂ ಅಪ್ಯಾಯಮಾನವಲ್ಲದ ಕೆಲ ಘಟನೆಗಳಿಗೂ ಮೂಕಸಾಕ್ಷಿಯಾಯಿತು. ಮೂರು ವರ್ಷಗಳ ಕಾಲ ಊರ ಜನರು ಒಟ್ಟಾಗಿ ನಡೆಸಿದ ಉತ್ಸವದ ಮೇಲೆ ಯಾರ ಕಾಕದೃಷ್ಟಿ ಬಿದ್ದಿತೋ ಏನೋ ನಾಲ್ಕನೇ ವರ್ಷ ಊರಿನ ರೆಡ್ಡಿಜನಾಂಗದ ಯುವಕರು ಸೇರಿ ರೆಡ್ಡಿಜನರ ಬಾಹುಳ್ಯವಿದ್ದ ಪ್ರದೇಶದ ಊರ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವದ ಮತ್ತೊಂದು ಆವೃತ್ತಿಯನ್ನು ಪ್ರಾರಂಭಿಸಿದರು. ಆ ವರ್ಷದ ತರುವಾಯ ಅಂದರೆ ಮೂಲ ಗಣೇಶೋತ್ಸವದ ಐದನೇ ವಾರ್ಷಿಕೋತ್ಸವದಲ್ಲಿ ಊರಿನ ಕುರುಬರ ಯುವಕರು ಕುರುಬಗೇರಿಯಲ್ಲಿರುವ ಬೀರಪ್ಪ ಮಂದಿರದ ಆವರಣದಲ್ಲಿ ತಮ್ಮದೇ ಆದ ಗಣೇಶೋತ್ಸವದ ಮತ್ತೊಂದು ಆವೃತ್ತಿಗೆ ನಾಂದಿಹಾಡಿದರು. ಇದು ಒಳ್ಳೆಯ ಬೆಳವಣಿಗೆಯೋ ಅಥವಾ ಕೆಟ್ಟ ಸಂಪ್ರದಾಯವೋ ಅನ್ನುವ ಜಿಜ್ಞಾಸೆಗಿಂತ ಹೆಚ್ಚಾಗಿ ಬಾಲಕನಾದ ನನ್ನ ಮನಸನ್ನು ಘಾಸಿಗೊಳಿಸಿದ್ದು ಈ ಮೂರೂ ಉತ್ಸವಗಳು ಪಡೆದುಕೊಂಡ ಜಾತಿ ಹಣೆಪಟ್ಟಿಗಳಿಂದಾಗಿ. ಮೂಲ ಗಣಪತಿ ಉತ್ಸವ ಲಿಂಗಾಯಿತರ ಗಣಪತಿ ಎನಿಸಿಕೊಂಡರೆ, ಎರಡನೆಯದಾಗಿ ಪ್ರಾರಂಭವಾದ ಉತ್ಸವದ ಮೂರ್ತಿ ರೆಡ್ಡಿ ಜನಾಂಗದ ಗಣಪತಿ ಎನಿಸಿದ. ಕೊನೆಯದಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ಗಣಪ ಸಹಜವಾಗಿಯೇ ಕುರುಬರ ಜಾತಿಯ ಹೆಸರಿನಲ್ಲಿ ಜನಪ್ರಿಯನಾದ. ವಿನಾಯಕನ ಅನೇಕ ರೂಪಗಳನ್ನು ಕಂಡು ಕೇಳಿದ್ದ ನನಗೆ ಮೇಲಿನ ರೂಪಾಂತರಗಳು ಹೊಸ ರೀತಿಯದ್ದಾಗಿಯೇ ಕಂಡು ಬಂದವು. ಉತ್ಸವದಲ್ಲಿ ತಮ್ಮ ಜಾತಿಯ ಯುವಕರಿಗೆ ಹೆಚ್ಚಿನ ಮಟ್ಟದ ಪ್ರಾಶ್ಯಸ್ತ ಸಿಗದೇ ಹೋದ ಕಾರಣದಿಂದಾಗಿ ನಿರ್ಲಕ್ಷ್ಯಕ್ಕೊಳಗಾದ ಬೇರೆ ಬೇರೆ ಜಾತಿಯವರು ತಮ್ಮ ಜಾತಿ ಬಾಂಧವರಿಗಾಗಿ ಸಾರ್ವಜನಿಕ ರೂಪದಲ್ಲಿ ಗಣೇಶನ ಆರಾಧನೆಯನ್ನು ಮಾಡಿರಬಹುದು. ಆದರೆ ಸಮಾಜಕ್ಕೆ ಕರೋನವನ್ನೂ ಮೀರಿಸಿದ ಜಾಡ್ಯವಾಗಿ ಅಂಟಿಕೊಂಡು ಇನ್ನಿಲ್ಲದೆ ಕಾಡುತ್ತಿರುವ ಜಾತಿ ಹೆಮ್ಮಾರಿಯಿಂದ ನಾವು ಪೂಜಿಸುವ ದೇವರುಗಳನ್ನಾದರೂ ದೂರ ಇಡುವ ಧಾರ್ಷ್ಯ ತೋರಿಸಬಹುದಿತ್ತಲ್ಲವೇ? ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ರೂಪದ ಗಣಪತಿ ಪ್ರತಿಷ್ಠಾಪನೆ ಉಚಿತವಲ್ಲ ಎಂದು ಯಾರೂ ಹೇಳುವ ಹಾಗಿಲ್ಲ. ಆದರೆ, ಮೂಲ ಗಣಪತಿಯನ್ನು ಕೋಟೆಯ ಗಣಪತಿ, ಎರಡನೆಯ ಗಣಪತಿಯನ್ನು ಆಂಜನೇಯ ದೇವಸ್ಥಾನದ ಗಣಪತಿ ಮತ್ತು ಮೂರನೆಯ ಗಣಪತಿಯನ್ನು ಬೀರಪ್ಪ ದೇವರ ಗಣಪತಿ ಎಂದು ಕರೆದು ಊರ ಜನರೆಲ್ಲರೂ ಜಾತಿಬೇಧವಿಲ್ಲದೆ ಎಲ್ಲಾ ಸಾರ್ವಜನಿಕ ಗಣೇಶ ಮೂರ್ತಿಗಳ ಪೂಜೆಯನ್ನೂ ಸಾಮೂಹಿಕವಾಗಿ ಜರುಗಿಸಬಹುದಿತ್ತಲ್ಲವೆ? ಜಾತಿಯ ಸಂಕೀರ್ಣ ಸೀಮಿತತೆಯಲ್ಲಿ ಗಣಪತಿಯನ್ನು ಬಂಧಿಸಿ, ಕೇವಲ ಆಯಾಯ ಜಾತಿಬಾಂಧವರ ಪೂಜೆಗಷ್ಟೆ ಅನುವು ಮಾಡಿಕೊಳ್ಳುವ ಸಂಪ್ರದಾಯದಿಂದ ಜಾತ್ಯಾತೀತ ಮನೋಭಾವದಿಂದ ಕಂಗೊಳಿಸುತ್ತಿರುವ ಗಣೇಶನಿಗೆ ಯಾವ ಮಟ್ಟದಲ್ಲಿ ಮುಜುಗರ ಉಂಟಾಗಿರಬೇಕು? ಜಾತಿ, ಮತಗಳ ಹಂಗನ್ನು ಮೀರಿ ನಡೆಯುವ ಅಗ್ರಪೂಜೆಯಷ್ಟೇ ವಿಘ್ನ ವಿನಾಯಕನ ನಿಜದಿಚ್ಚೆ ಅಲ್ಲವೇ? ತಿಲಕರಿಂದ ಆದ ಗಣೇಶನ ಸಾರ್ವಜನಿಕ ರೂಪದ ಅನಾವರಣದ ಹಿಂದಿನ ನಿಜವಾದ ಉದ್ದೇಶ ಇದೇ ಆಗಿತ್ತಲ್ಲವೆ?
ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭಗೊಂಡು, ಸುಮಾರು ವರ್ಷಗಳ ಯಶಸ್ವಿ ಪಯಣದ ನಂತರದಲ್ಲಿ ನಿಂತು ಹೋದ ಮೂಲ ಸಾರ್ವಜನಿಕ ಗಣೇಶೋತ್ಸವ ಅಲ್ಲಿಂದ ಮುಂದಿನ ವರ್ಷಗಳಲ್ಲಿ ಊರಿನ ರಾಮಲಿಂಗ ದೇವರ ಕಲ್ಯಾಣ ಮಂಟಪದ ಕಲ್ಪನೆಯ ಸಾಕಾರದಲ್ಲಿ ಪರ್ಯಾವಸಾನ ಹೊಂದಿತು. ಇಂದೂ ಊರ ಮದುವೆ, ಮುಂಜಿ, ನಾಮಕರಣ, ಸೀಮಂತ ಕಾರ್ಯ ಮತ್ತು ಇಂತಹುದೇ ಹತ್ತು ಹಲವಾರು ಆಚರಣೆಗಳ ಕೇಂದ್ರತಾಣವಾಗಿ ಊರ ಜನರ ಜೀವನದ ಅವಿಭಾಜ್ಯ ಅಂಗದ ರೂಪದಲ್ಲಿ ಸೇವೆ ಸಲ್ಲಿಸುತ್ತಿರುವ ಕಲ್ಯಾಣಮಂಟಪ ಸಾರ್ವಜನಿಕ ಗಣೇಶೋತ್ಸವದ ರೋಚಕ ಅಧ್ಯಾಯಗಳನ್ನು ತನ್ನ ಮಡಿಲಲ್ಲಿ ಅವಿತಿಟ್ಟುಕೊಂಡಿದೆ.