
ಗಣೇಶ ಮೂರ್ತಿ ತಯಾರಿಕೆ ಮತ್ತು ಆರ್ಥಿಕ ಸಬಲತೆ
ಗಣೇಶನ ಉತ್ಸವಕ್ಕೆ ಒಂದು ತಿಂಗಳ ಮುಂಚೆಯೇ ಗುರುತ್ರ್ಯಯರ ಸಾರ್ವಜನಿಕ ಗಣೇಶೋತ್ಸವದ ತಯಾರಿಗಳು ಮೊದಲುಗೊಂಡವು. ಊರಿನ ರೈತರ ಕೈತುಂಬಾ ಕಾಸು ಓಡಿಯಾಡುತ್ತಿದ್ದ ಕಾರಣವರ್ಷದಿಂದ ಹಬ್ಬದ ಹಣಸಂಗ್ರಹಣೆಯ ಗುರಿ ಅಂದುಕೊಂಡಿದ್ದಕ್ಕಿಂತಲೂ ಸುಲಭವಾಗಿ ಕೈಗೆಟುಕಿತ್ತು. ಊರಮಟ್ಟದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಾಗ ಎಲ್ಲೆಡೆಯಿಂದ ಉತ್ತೇಜನಕಾರಿ ಮತ್ತು ಪ್ರೋತ್ಸಾಹದಾಯಕ ಸಂಗತಿಗಳು ಬಹಿರಂಗಗೊಂಡವು. ಇದು ಅಳುಕುತ್ತಲೆ ಸಾರ್ವಜನಿಕ ಗಣೇಶೋತ್ಸವದ ಕಲ್ಪನೆ ಮಾಡಿದ ತ್ರಿಮೂರ್ತಿಗಳ ಮುಖಗಳಲ್ಲಿನ ಮಾಸದ ಮಂದಹಾಸಕ್ಕೆ ಕಾರಣವಾಗಿತ್ತು.
ಗಣೇಶನ ಮೂರ್ತಿಯನ್ನು ಎಲ್ಲಿಂದ ತರುವುದು? ಎನ್ನುವ ಪ್ರಶ್ನೆಗೆ ಸುಲಭದಲ್ಲಿ ಉತ್ತರ ದೊರೆತಿತ್ತು. ಆ ಹೊತ್ತಿಗೆ ನಮ್ಮ ಊರಿನಲ್ಲಿ ಅನೇಕ ಮನೆಗಳಲ್ಲಿ ಪ್ರತಿವರ್ಷವೂ ಶ್ರೀ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಆಗುತ್ತಿತ್ತು. ಏನಿಲ್ಲವೆಂದರೂ ಮುನ್ನೂರಕ್ಕೂ ಮೀರಿದಂತೆ ಗಣೇಶನ ಮೂರ್ತಿಗಳನ್ನು ಜಾತಿಬೇಧವಿಲ್ಲದೆ ಮನೆಮನೆಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸುವ ದೈವಿಕ ಪರಂಪರೆಯನ್ನು ಕೆಲವು ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. ನಮ್ಮ ಮನೆಯಲ್ಲಿಯೂ ಗಣೇಶನನ್ನು ಕೂರಿಸುತ್ತಿದ್ದೆವು, ನನ್ನ ತಂದೆಯವರು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಶುರುವಾದ ಈ ಪರಂಪರೆ ಅನೂಚಾನವಾಗಿ ಇಂದಿಗೂ ನಡೆದುಕೊಂಡು ಬಂದಿದೆ. ನಮ್ಮ ಊರಿನ ಎಲ್ಲಾ ಗಣಪತಿಮೂರ್ತಿಗಳ ಏಕೈಕ ತಯಾರಕರು ಮತ್ತು ವಿತರಕರೆಂದರೆ ಬೆನಚಣ್ಣ ಆಚಾರಿಯವರು.

ಹಬ್ಬಕ್ಕೆ ಸುಮಾರು ಮೂರು ತಿಂಗಳ ಮೊದಲೇ ಬೆನಚಣ್ಣನವರ ಮನೆ ಚಟುವಟಿಕೆಯ ಗೂಡಾಗುತ್ತಿತ್ತು. ನನ್ನ ಸಹಪಾಠಿ ಜಕಣಾಚಾರಿಯ ದೊಡ್ಡಪ್ಪನವರಾದ ಬೆನಚಣ್ಣನವರ ಮನೆಯಲ್ಲಿ ವರ್ಷದ ಗಣೇಶಮೂರ್ತಿಗಳ ತಯಾರಿಯ ಸುಳಿವು ಜಕಣಾಚಾರಿ ಮುಂಚಿತವಾಗಿಯೇ ಗೆಳೆಯರ ಬಳಗಕ್ಕೆ ಕೊಡುತ್ತಿದ್ದ. ಹಾಗಾಗಿ ನಮ್ಮ ಗೆಳೆಯರ ಅಡ್ಡೆ ಮಹಂತಾಚಾರಿಯ ಸಾಮೀಲಿನ ಮರದ ದಿಮ್ಮಿಗಳ ಪ್ರದೇಶದಿಂದ ಬೆನಚಣ್ಣ ಆಚಾರಿಗಳ ಮನೆಯ ಆವರಣಕ್ಕೆ ತ್ವರಿತಗತಿಯಲ್ಲಿ ಸ್ಥಳಾಂತರಗೊಳ್ಳುತ್ತಿತ್ತು. ಜಕಣಾಚಾರಿ, ತನ್ನ ಅಣ್ಣ ಬಸಪ್ಪಾಚಾರಿಯ ಜೊತೆಗೂಡಿ ದೊಡ್ಡಪ್ಪನ ವರ್ಷದ ಅತೀ ಮುಖ್ಯ ಮತ್ತು ಏಕೈಕ ಆದಾಯದ ಮೂಲವಾದ ಮಣ್ಣಿನ ಗಣೇಶಮೂರ್ತಿಗಳ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸುತ್ತಿದ್ದರೆ ಗೆಳೆಯರಾದ ನಾವೂ ಕೈಲಾದ ಮಟ್ಟಿಗಿನ ಸಹಾಯಹಸ್ತವನ್ನು ಚಾಚುತ್ತಿದ್ದೆವು.ನಮ್ಮೂರಿಗೆ ಎರಡು ಕಿಮೀ ದೂರದ ದೊಡ್ಡಗಟ್ಟದ ಕಡೆಯಿಂದ ತರುತ್ತಿದ್ದ ಜೇಡಿಮಣ್ಣನ್ನು ಕಾಲಿನಿಂದ ತುಳಿದು ಹದಗೊಳಿಸಿ ತರುವಾಯ ಗಣೇಶಮೂರ್ತಿಗಳನ್ನು ಸುಂದರವಾಗಿ ಕೈಯಿಂದಲೇ ಮಾಡಿ, ಒಪ್ಪವಾಗಿಸಿ, ಓರಣವಾಗಿಸಿ, ತಿದ್ದಿ, ತೀಡಿ, ಮಣ್ಣಿನಿಂದ ಮಾಡಿದ ಪ್ರತ್ಯೇಕ ಆಭರಣಗಳನ್ನು, ಉಡುಗೆತೊಡುಗೆಗಳನ್ನು ತೊಡಿಸಿ, ನೆರಳಿನಲ್ಲಿ ಒಣಗಿಸಿ, ಅವುಗಳಿಗೆ ವಿವಿಧ ರೀತಿಯ ಬಣ್ಣಗಳನ್ನು ಲೇಪಿಸಿ ಮಾರಾಟ ಮಾಡುತ್ತಿದ್ದ ಆಚಾರಿಯವರದು ಮೊದಲಿಂದ ಕೊನೆಯವರೆಗೂ ಏಕಸ್ವಾಮ್ಯ ಎನ್ನಬಹುದಾದ ಉದ್ಯಮ. ಮೂರ್ತಿ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುಗಳನ್ನು ತಾವೇ ಹುಡುಕಿ ತಂದು, ನಿರ್ಮಾಣಕಾರ್ಯವನ್ನು ಕೈಗೊಂಡು, ಸಿದ್ದಗೊಂಡ ಮೂರ್ತಿಗಳ ಸಂಗ್ರಹಣೆ ಮತ್ತು ಮಾರಾಟ ಮಾಡುತ್ತಿದ್ದ ಬೆನಚಣ್ಣ ಆಚಾರಿಯವರು ಹಲವಾರು ದಶಕಗಳ ಹಿಂದೆಯೇ ಇಂದಿನ ಆಧುನಿಕ ಕಂಪನಿಗಳ ಕನಸಿನ ‘ಬ್ಯಾಕ್ವರ್ಡ್ ‘ ಮತ್ತು ‘ಫಾರ್ವರ್ಡ್ ‘ ಇಂಟೆಗ್ರೇಷನ್ ತಂತ್ರಗಳನ್ನು ಸುಲಲಿತವಾಗಿ ತಮ್ಮ ಉದ್ದಿಮೆಯಲ್ಲಿ ಅಳವಡಿಸಿಕೊಂಡ ರೀತಿ ನನ್ನ ಮೆಚ್ಚುಗೆಗೆ ಕಾರಣವಾಗಿದ್ದು ನಾನು ಭವಿಷ್ಯದಲ್ಲಿ ಎಂಬಿಎ ಓದುವ ಹೊತ್ತು. ಈ ತಂತ್ರಗಳನ್ನು ಕುರಿತಾಗಿ ನನ್ನ ಪ್ರಾಧ್ಯಾಪಕರು ಗಂಟೆಗಟ್ಟಲೆ ಉಪನ್ಯಾಸಗಳ ಮಳೆಗರೆಯುತ್ತಿದ್ದರೆ, ನನ್ನ ಮನಸ್ಸು ಮಾತ್ರ ಬೆನಚಣ್ಣ ಆಚಾರಿಯ ಮನೆಯ ಹಜಾರದಲ್ಲಿಟ್ಟ ಸಿದ್ಧಗೊಂಡ ಗಣಪತಿಮೂರ್ತಿಗಳ ಇರ್ದುಗಿರ್ದೇ ಗಿರಕಿ ಹೊಡೆಯುತ್ತಿತ್ತು. ನನ್ನ ಊರಿನ ಇನ್ನೂ ಹತ್ತು ಹಲವು ವಿವಿಧ ಕಸುಬಿನ ಕುಶಲಕರ್ಮಿಗಳೂ ಇದೇ ತಂತ್ರವನ್ನು ಅನುಸರಿಸುತ್ತಿದ್ದರು. ಶಾಲೆಗಳ ಮುಖವನ್ನೇ ನೋಡದ ಇಂತಹವರು ಅಂದಿನ ಕಾಲಕ್ಕೇ ಇಂದಿನ ಪ್ರಖ್ಯಾತ ಮ್ಯಾನೇಜ್ಮೆಂಟ್ ಕಾಲೇಜುಗಳು ವಿದ್ಯಾರ್ಥಿಗಳ ತಲೆಗೆ ಇಳಿಸಲು ಹೆಣಗುತ್ತಿರುವ ನಿರ್ಮಾಣತಂತ್ರಗಳನ್ನು ಮೈಗೂಡಿಸಿಕೊಂಡಿದ್ದು ಹೇಗೆ? ಜಿಗಿಯುವ ನಮ್ಮ ಊರಕಪ್ಪೆಗಳು ಹೇಗೆ ನ್ಯೂಟನ್ ನ ಚಲನೆಯ ನಿಯಮಗಳನ್ನು ಕಲಿತು ಕುಪ್ಪಳಿಸುವುದಕ್ಕೆ ಮೊದಲಿಡಲಿಲ್ಲವೋ ಹಾಗೆಯೇ ನನ್ನೂರಿನ ಬೆನಚಣ್ಣಪ್ಪಾದಿ ಕುಶಲಕರ್ಮಿಗಳು ಆಧುನಿಕ ನಿರ್ಮಾಣದ ತಂತ್ರಗಳನ್ನು ಸಹಜ ರೀತಿಯಲ್ಲಿಯೇ ಸಿದ್ದಿಸಿಕೊಂಡಿದ್ದರು, ರಕ್ತಗತ ಮಾಡಿಕೊಂಡಿದ್ದರು. ನಮ್ಮಲ್ಲಿ ಅನಾದಿಕಾಲದಿಂದಲೂ ರೂಢಿಗತಮೌಲ್ಯಗಳಾಗಿ, ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಅನೇಕ ದೇಶೀಯ ತಂತ್ರಗಳನ್ನು ಒಂದು ಸೂತ್ರದ ಅಡಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಬಂಧಿಸಿ ಮಕ್ಕಳಿಗೆ ಬೋಧಿಸುವ ಕೆಲಸವನ್ನಷ್ಟೇ ಇಂದಿನ ಘನವೆತ್ತ ವಿಶ್ವವಿದ್ಯಾನಿಲಯಗಳು ಮಾಡುತ್ತಾ ಬಂದಿರುವುದು, ಅಲ್ಲವೇ? ಬಯಲಲ್ಲಿ, ಪ್ರಕೃತಿತಾಯಿ ಮಡಿಲಲ್ಲಿ, ಪಂಚಭೂತಗಳ ಸಾನ್ನಿಧ್ಯದಲ್ಲಿ ಕಲಿತ ಜೀವನ ಪಾಠಗಳ ಪುನರಾವರ್ತನೆಯಷ್ಟೇ ಶಾಲಾ ಕಾಲೇಜುಗಳ ಗೋಡೆಗಳಿಂದ ಆವೃತ್ತವಾದ ಐಶಾರಾಮದ ಕೊಠಡಿಗಳಲ್ಲಿ ಪುನರುಕ್ತಗೊಳ್ಳುತ್ತಿದೆ, ಹೌದಲ್ಲವೇ?

ಗ್ರಾಮೀಣ ಜೀವನದ ಮತ್ತೊಂದು ವಾಸ್ತವಮುಖವನ್ನು ಇಲ್ಲಿ ಅನಾವರಣಗೊಳಿಸಲೇಬೇಕು. ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತವಳು ಹೆಣ್ಣು. ಈ ಮಾತು ಅಂದಿನ ದಿನಮಾನಕ್ಕೆ ಒಪ್ಪುವ ರೀತಿಯಲ್ಲಿಯೇ ಇಂದಿನ ಕಾಲಕ್ಕೂ ಅನ್ವಯಿಸುತ್ತದೆ. ಬೆನಚಣ್ಣ ಆಚಾರಿಯ ಹೆಂಡತಿ ತುಂಗಮ್ಮ ಅಪ್ರತಿಮ ಕಲಾವಿದೆ. ಒಮ್ಮೆ ನೋಡಿದ ಪಟದಲ್ಲಿನ ಚಿತ್ರಗಳನ್ನು ಮಣ್ಣಿನಲ್ಲಿ ಯಥಾವತ್ತಾಗಿ ಮೂಡಿಸುವ ಅಭಿಜಾತ ಪ್ರತಿಭಾವಂತೆ. ಮಣ್ಣಿನ ಹೊರತಾಗಿಯೂ, ಮರ, ಕಲ್ಲು, ಸಿಮೆಂಟ್ ಮುಂತಾದ ಮಾಧ್ಯಮಗಳ ಮೂಲಕ ಪ್ರತಿಮೆಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತೆ. ತುರುವನೂರಿನಂತಹ ಕುಗ್ರಾಮದ ವಧುವಾಗಿ ಬಾರದೇ ನಗರಪ್ರದೇಶದ ಚಿನ್ನಬೆಳ್ಳಿ ಮಾಡುವ ಯಾವುದಾದರೂ ಅಕ್ಕಸಾಲಿಗ ಮನೆತನದ ಸೊಸೆಯಾಗಿ ಹೋಗಿದ್ದರೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನ ಕಲೆಯ ಬಲದಿಂದ ಸೆರಗಿನಲ್ಲಿ ಬಾಚಿ ಕಟ್ಟಿಕೊಳ್ಳುತ್ತಿದ್ದಳೇನೋ. ಈಕೆ ನಮ್ಮ ಊರಿನ ನೂರು ಕಿಮೀ ಫಾಸಲೆಯಲ್ಲೂ ಕಾಣಸಿಗದ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಅಚ್ಚ ದೇಶೀಯ ಕೌಶಲ್ಯರಾಣಿ. ನಾಲ್ಕು ಅಡಿಗಿಂತ ತುಸುವೇ ಎತ್ತರ ಎನ್ನಬಹುದಾದ ಸಪೂರ ದೇಹಕ್ಕೆ ಹಳೆಯ ಸೀರೆಯೊಂದನ್ನು ಸುತ್ತಿಕೊಂಡು ಪಕ್ಕದಲ್ಲಿ ನಿಂತವರಿಗೂ ಕೇಳಿಸದಷ್ಟು ಮೆತ್ತಗೆ, ಮೃದುವಾದ ಧ್ವನಿಯಲ್ಲಿ ಮಾತನಾಡುತ್ತಿದ್ದ ತುಂಗಮ್ಮನೇ ಆಚಾರಿಯ ಉದ್ಯಮದ ಹಿಂದಿನ ನಿಜವಾದ ಶಕ್ತಿ ಮತ್ತು ಸ್ಪೂರ್ತಿ. ಸಜ್ಜನಿಕೆಯ ಎರಕದಲ್ಲಿ ಹೊಯ್ದು ತುಂಗಮ್ಮನನ್ನು ವಿಶ್ವಕರ್ಮ ಸೃಷ್ಟಿಸಿದ ಎನ್ನಿಸುತ್ತದೆ. ಎಂದೂ ಪತಿಗೆ ಎದುರಾಡದ, ತನ್ನ ಕೆಲಸಕಾರ್ಯಗಳ ವ್ಯಾಪ್ತಿಗಷ್ಟೇ ಸೀಮಿತವಾಗಿ ಉಳಿದ ತುಂಗಮ್ಮ ಅಪ್ಪಟ ಭಾರತೀಯ ಸಂಸ್ಕೃತ ನಾರಿಯ ಅವತಾರ ಎಂದೇ ನಾನು ಬಣ್ಣಿಸುತ್ತೇನೆ. ಆಚಾರಿಯ ತಮ್ಮನ ಮಕ್ಕಳನ್ನು ತಮ್ಮ ಮಕ್ಕಳಿಗಿಂತಲೂ ಒಂದು ಕೈ ಹೆಚ್ಚಾಗಿಯೇ ಸಾಕುತ್ತಿದ್ದ ತುಂಗಮ್ಮ ಎಂದರೆ ಜಕಣಾಚಾರಿಗೆ ಎಲ್ಲಿಲ್ಲದ ಆದರ, ಪ್ರೀತಿ, ಗೌರವ. ದೊಡ್ಡಮ್ಮ ಊರಲ್ಲಿ ಇರುವಷ್ಟು ದಿನ ದೊಡ್ಡಮ್ಮನ ನೆರಳಾಗಿಯೆ ಇರುತ್ತಿದ್ದ ಜಕ್ಕಣ್ಣ ಆಕೆ ತವರಿಗೆ ಹೋದ ಕೆಲದಿನಗಳ ಕಾಲ ಮಂಕಾಗಿ ಇರುತ್ತಿದ್ದದ್ದನ್ನು ನಾನು ಗಮನಿಸಿದ್ದೆ. ಇದೇ ವ್ಯಥೆಯಲ್ಲಿ ಹದಿನೈದು ದಿನಗಳ ಕಾಲ ತನ್ನ ಮನೆಯಲ್ಲಿ ಸರಿಯಾಗಿ ಊಟವನ್ನು ಮಾಡದ ಜಕ್ಕಣ್ಣನನ್ನು ಆತನ ತಾಯಿಯ ಸಲಹೆಯ ಮೇರೆಗೆ ಚಿದಾನಂದನ ಮನೆಗೆ ಕರೆದೊಯ್ದು ಊಟ ಮಾಡಿಸಿದ ಘಟನೆಗಳೂ ಇವೆ. ತನ್ನ ರಕ್ತವನ್ನು ಹಂಚಿಕೊಂಡು ಹುಟ್ಟದ ತಾಯಿ ಮಕ್ಕಳ ಮಧ್ಯೆ ಇಂತಹ ಪ್ರೀತಿ, ಪ್ರೇಮ, ಸಂವಹನ, ತಾದ್ಯಾತ್ಮಕತೆ ಸಾಧ್ಯವೇ? ಎಂದು ನಾನು ಸೋಜಿಗಪಟ್ಟ ದಿನಗಳೂ ಇವೆ.
ಊರಿನ ಸಕಲ ಗಣೇಶಮೂರ್ತಿಗಳ ನಿರ್ಮಾತೃ, ಸೃಷ್ಟಿಕರ್ತೆ ತುಂಗಮ್ಮನೆ. ಆಚಾರಿಯದೇನಿದ್ದರೂ ತನ್ನ ತಮ್ಮನ ಮಕ್ಕಳ ಸಹಾಯದಿಂದ ಮೂರ್ತಿಗಳನ್ನು ಒಣಗಿಸಿ, ಬಣ್ಣ ಬಳಿದು, ಮಾರಾಟ ಮಾಡುವ ಕೆಲಸ. ಮಕ್ಕಳಿಲ್ಲದ ಕಾರಣದಿಂದಾಗಿ ತನ್ನ ತಮ್ಮ ಸಿದ್ದಣ್ಣಾಚಾರಿಯ ಮಕ್ಕಳನ್ನೇ ತನ್ನ ಕಾಯಕಕ್ಕಾಗಿ ಹೆಚ್ಚಿನ ರೀತಿಯಲ್ಲಿ ಅವಲಂಬಿಸಿದ್ದ ಬೆನಚಣ್ಣ ಅಂತಹ ಹೇಳಿಕೊಳ್ಳುವ ಕುಶಲಕರ್ಮಿಯೇನಲ್ಲ. ತನ್ನ ಇಬ್ಬರು ತಮ್ಮಂದಿರು ವಂಶಪಾರಂಪರ್ಯವಾಗಿ ಬಂದಂತಹ ಮರಗೆಲಸದ ವೃತ್ತಿಯನ್ನು ಕೈಗೊಂಡ ಹೊತ್ತು, ಪತ್ನಿ ತುಂಗಮ್ಮನ ನೆರವಿನಿಂದ ಗಣೇಶಮೂರ್ತಿಗಳನ್ನು ಮಾಡುವ ಕಾಯಕಕ್ಕೇ ಶರಣಾಗಿದ್ದ ಆಚಾರಿ ಇಡೀ ವರ್ಷದ ಆದಾಯವನ್ನು ಹಬ್ಬದ ಮೊದಲು ಬರುವ ತ್ರೈಮಾಸಿಕ ಅವಧಿಯಲ್ಲಿಯೇ ಗಿಂಜಬೇಕಾಗಿತ್ತು. ಉಳಿದಂತೆ ವರ್ಷದ ಒಂಬತ್ತು ತಿಂಗಳುಗಳು ಖಾಲಿಯಾಗಿಯೇ ಕೂರಬೇಕಾಗಿದ್ದರಿಂದ ಗಣೇಶಹಬ್ಬದ ಪರ್ವ ಮೂರುತಿಂಗಳ ಮುಂಚಿತವಾಗಿಯೇ ಬೆನಚಣ್ಣ ಆಚಾರಿಯ ಮನೆಯನ್ನು ಅಮರುತ್ತಿತ್ತು.

ಬೆನಚಣ್ಣ ಆಚಾರಿಯ ಆರ್ಥಿಕತೆಯ ಬೆನ್ನೆಲುಬು ತುಂಗಮ್ಮ ಎನ್ನುವ ಹೊತ್ತು ಇದೇ ರೀತಿಯಲ್ಲಿ ತಮ್ಮ ಗಂಡಂದಿರಿಗೆ ಕಸುಬುಗಳಲ್ಲಿ, ಕೃಷಿಯಲ್ಲಿ ಬೆನ್ನೆಲುಬಾಗಿ ನಿಂತ ಹಲವು ನನ್ನೂರಿನ ಗಟ್ಟಿಗಿತ್ತಿಯರ ನೆನಪು ನನ್ನಲ್ಲಿ ಉಕ್ಕಿಬರುತ್ತಿದೆ. ದಿನ್ನೆ ಮೇಲಿನ ಬೈಲುಗಮ್ಮಾರರ, ನನ್ನ ಸಹಪಾಠಿಯೂ ಆದ ಗುರುಮೂರ್ತಿಯ ಅಮ್ಮ, ರತ್ನಮ್ಮ ಈ ಸಾಲಿಗೆ ಸೇರಿದವರು. ಕಬ್ಬಿಣದ ತುಂಡುಗಳನ್ನು ಕುಲುಮೆ ಒಳಗಿಟ್ಟು, ದಿನವಿಡೀ ತಿದಿ ಊದುತ್ತಾ ಕುಳಿತು, ಕಬ್ಬಿಣ ಒಂದು ಹದಕ್ಕೆ ಕಾದ ನಂತರ ಗಂಡ ಹೊಡೆಯುವ ಸುತ್ತಿಗೆಯ ಭಾರೀ ಹೊಡೆತಗಳಿಗೆ ಕಬ್ಬಿಣದ ತುಂಡನ್ನು ಅಲುಗಾಡದಂತೆ ಇಕ್ಕಲದಲ್ಲಿ ಭದ್ರವಾಗಿ ಹಿಡಿದು ಸಹಾಯ ಮಾಡುತ್ತಿದ್ದ ರತ್ನಮ್ಮನ ನೆನಪು ನನ್ನಲ್ಲಿ ದಶಕಗಳು ಕಳೆದರೂ ಭದ್ರವಾಗಿದೆ.

ಗಂಡನಿಗೆ ಸರಿ ಹೆಗಲಾಗಿ, ಬಹಳಷ್ಟು ವೇಳೆ ಗಂಡಸರಿಗೆ ಮಿಗಿಲಾಗಿ ಸಂಸಾರರಥವನ್ನು ಎಳೆದ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ಪರಿತಕ್ತರಾದದ್ದು ಏಕೆ? ಯಾವ ಕಾರಣಕ್ಕಾಗಿ? ದುಡಿಯುವಾಗ ಇದ್ದ ಇವರ ಅವಶ್ಯಕತೆ ಮನೆಯ ಖರ್ಚಿನ ಬಾಬತ್ತುಗಳ ನಿರ್ಧಾರ ಕೈಗೊಳ್ಳುವ ವೇಳೆ ಮಾಯವಾದದ್ದು ಏಕೆ? ದುಡಿದ ಹಣದ ವ್ಯಯದ ವಿಚಾರದಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳುವ ಹಕ್ಕಿಲ್ಲದ ಹೆಂಗಸರ ಪಾಡು ನಮ್ಮ ಹಳ್ಳಿಗಾಡಿನಲ್ಲಿ ತಲೆತಲಾಂತರದಿಂದ ನಡೆದು ಬರುತ್ತಿರುವ ಸ್ತ್ರೀ ಶೋಷಣೆಯ ಬಹುಮುಖ್ಯ ಮತ್ತು ದೊಡ್ಡ ಭಾಗವಾಗಿರುವದನ್ನು ನಾನು ಬಹಳ ಹತ್ತಿರದಿಂದ ಕಂಡವನು. ಸಾವಿರಾರು ರೂಪಾಯಿಗಳ ವರಮಾನಕ್ಕೆ ನೇರಾನೇರವಾಗಿ ಕಾರಣಕರ್ತಳಾದ ಮಹಿಳೆಗೆ ತಾನು ದುಡಿದ ಹತ್ತರ ಒಂದು ನೋಟಿನ ಮೇಲಿನ ಅಧಿಕಾರವೂ ಇಲ್ಲ ಎಂದಾದರೆ ಹೇಗೆ? ಯಾವ ಸೀಮೆಯ ನ್ಯಾಯ ಇದು? ಬೆನಚಣ್ಣನ ಗಣೇಶಹಬ್ಬದ ಅಷ್ಟೂ ವರಮಾನಕ್ಕೆ ಮೂಲಕಾರಣಳಾದ ತುಂಗಮ್ಮ ‘ತೀರಾ ಆಪ್ತರು’ ಎನ್ನುವ ಊರಮಂದಿ ಮೂರ್ತಿಯನ್ನು ಕೊಳ್ಳಲು ಬಂದ ಹೊತ್ತು ಪತಿಯ ಸಹಮತವಿಲ್ಲದೆ ಒಂದು ಕಪ್ಪು ಕಾಫಿಯನ್ನೂ ಕೊಡುವ ಆರ್ಥಿಕ ನಿರ್ಧಾರವನ್ನ ಕೈಗೊಳ್ಳದ ಸ್ಥಿತಿಯಲ್ಲಿ ಇರಲಿಲ್ಲ ಎಂದಾದರೆ ಹೆಂಗಸರ ಮೈಗಳ ಬೆವರಿಗೆ ಬೆಲೆ ಏನಿದೆ? ಇದು ಕೇವಲ ಗ್ರಾಮೀಣ ಪ್ರದೇಶದ ಕಥೆಯಾಗಿದೆ ನಗರವಾಸಿಗಳಲ್ಲಿಯೂ ಈ ಶೋಷಣೆಯ ಖಾಯಿಲೆ ಯಥೇಚ್ಚವಾಗಿ ಕಾಣಿಸಿಕೊಳ್ಳುವುದು ನನಗೆ ವಿದಿತವಾಗಿದೆ. ಹೆಣ್ಣಿನ ಶ್ರಮವನ್ನು ಗಣಿಸದ ಸಭ್ಯತೆಗಳು ಮಣ್ಣು ಮುಕ್ಕಿಹೋದ ಅನೇಕ ಉದಾಹರಣೆಗಳ ನಡುವೆಯೂ ಸ್ತ್ರೀಗೆ ಸಲ್ಲಬೇಕಾದ ಆರ್ಥಿಕ ಸ್ವಾಯತ್ತತೆಯನ್ನ ನೀಡದ ನಮ್ಮ ನಾಗರೀಕ ವ್ಯವಸ್ಥೆಯ ಬಗ್ಗೆ ನನ್ನಲ್ಲಿ ರೋಷ ಮಡುಗಟ್ಟಿದೆ. ಮಣ್ಣಿನ ಆಳದಲ್ಲೆಲ್ಲೋ ಹೂತು ಹಾಕಬೇಕಾದ ಈ ನಡಾವಳಿಕೆ ನಮ್ಮ ಗಂಡಸರ ತಲೆ ಏರಿ ಮೆರೆಯುತ್ತಿರುವುದು ಆಧುನಿಕ ಕಾಲದ ನನ್ನಂತಹವರಿಗೆ ಅರಗಿಸಿಕೊಳ್ಳಲು ಅಸಾಧ್ಯವಾದದ್ದು. ಊಹೆಯ ಪರಧಿಯನ್ನು ಮೀರಿ ನಿಂತಿರುವಂತಹುದು.
ಸಾರ್ವಜನಿಕ ಗಣೇಶಮೂರ್ತಿಯ ಆಯ್ಕೆಗಾಗಿ ಊರ ಯುವಕರ ತಂಡ ಬೆನಚಣ್ಣ ಆಚಾರಿಯ ಮನೆಗೆ ಹಬ್ಬಕ್ಕೆ ಮೂರು ವಾರಗಳ ಮೊದಲೆ ಎಡತಾಕಿದ್ದೂ ಆಯಿತು. ಅಲ್ಲಿಯವರೆಗೂ ಊರಿನ ಮತ್ತು ಸುತ್ತಮುತ್ತಲ ಹಳ್ಳಿಗಳ ಮನೆಗಳ ಮೂರ್ತಿಗಳ ಅವಶ್ಯಕತೆಯನ್ನಷ್ಟೆ ಪೂರೈಸುತ್ತಿದ್ದ ಆಚಾರಿ ಎರಡು ಮೂರು ಅಡಿಗಳನ್ನು ಮೀರಿದ ಮೂರ್ತಿಯ ನಿರ್ಮಾಣ ಕಾರ್ಯವನ್ನು ಎಂದೂ ಕೈಗೊಂಡಿರಲಿಲ್ಲ. ಹೋದ ವರ್ಷ ಹೈಸ್ಕೂಲಿನಲ್ಲಿ ಕೂರಿಸಿದ ಮೂರೂವರೆ ಅಡಿ ಎತ್ತರದ ಗಣಪನ ಮೂರ್ತಿಯ ಹೊರತಾಗಿ ಬೇರೆ ಯಾವ ದೊಡ್ಡಮೂರ್ತಿಯ ನಿರ್ಮಾಣದ ಅನುಭವವೂ ಆಚಾರಿಗೆ ಇರಲಿಲ್ಲ. ಇದನ್ನು ಆಚಾರಿಯ ಅನುಭವ ಎನ್ನದೆ ತುಂಗಮ್ಮನ ಅನುಭವ ಎನ್ನಬೇಕು, ಹೆಂಡತಿಯ ಸಲಹೆಯ ಮೇರೆಗೆ ಮೂರ್ತಿಗಳಿಗೆ ಬಣ್ಣವನ್ನು ಮಾತ್ರ ಹಾಕುತ್ತಿದ್ದ ಬೆನಚಣ್ಣ ಹೊಸದಾಗಿ ಪ್ರಾರಂಭವಾಗಿದ್ದ ಸಾರ್ವಜನಿಕ ಗಣಪತಿಯ ಆರು ಅಡಿಗೂ ಮೀರಿದ ಮೂರ್ತಿಯ ನಿರ್ಮಾಣದ ಕಾರ್ಯವನ್ನು ಹೆಂಡತಿಯನ್ನು ಕೇಳದೆ ಹೇಗೆ ಒಪ್ಪಿಯಾನು? ಆದರೆ ಬಂದ ಊರ ಯುವಕರ ಎದುರು ತುಂಗಮ್ಮನನ್ನು ಈ ಬಗ್ಗೆ ವಿಚಾರಿಸಲು ಆಚಾರಿಗೆ ಎಂತಾಹುದೋ ಮುಜುಗರ ಬೇರೆ. ನೋಡಿ, ಸಾರ್ವಜನಿಕವಾಗಿ ಜಾಹೀರಾತಾದ ವಿಷಯಗಳನ್ನೂ ಹೇಗೆ ಗಂಡಿನ ಅಹಂ ಮುಚ್ಚಿಡಲು ಬಯಸುತ್ತದೆ? ನಾಳೆ ಮೂರ್ತಿ ಮಾಡುವ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿ ಯುವಕರ ತಂಡವನ್ನು ಬೀಳ್ಕೊಟ್ಟ ಬೆನಚಣ್ಣ ವಿಷಯದ ಸಮಾಲೋಚನೆಗಾಗಿ ತ್ವರಿತಗತಿಯಲ್ಲಿ ಅಡುಗೆಮನೆಗೆ ಧಾವಿಸಿದ್ದು ಅಲ್ಲಿಯೇ ಗೆಳೆಯರ ಒಟ್ಟಿಗೆ ಆಡಿಕೊಂಡಿದ್ದ ನನ್ನ ನಯನ ದ್ವಯಗಳನ್ನ ತಪ್ಪಿಸಲಾಗಲಿಲ್ಲ.

ಮಾರನೇ ದಿನ ಆಚಾರಿಯ ತೀರ್ಮಾನ ಏನಾಗಿರಬಹುದೆಂಬ ಕುತೂಹಲ ನಮ್ಮ ಚಿಣ್ಣರಲ್ಲಿ ಮನೆಮಾಡಿತ್ತು. ಈ ಯೋಚನೆಯಲ್ಲಿಯೇ ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗಲಿಲ್ಲ. ಮಾರನೇ ದಿನ ರವಿವಾರವಾದ್ದರಿಂದ ಬೆಳ್ಳಂಬೆಳಗ್ಗೆ ಬೆನಚಣ್ಣನ ಮನೆಗೆ ನಾನು, ನಾಗರಾಜ, ಚಿದಾನಂದ, ರುದ್ರಮುನಿ ಧಾವಿಸಿದೆವು. ಆ ಹೊತ್ತಿಗಾಗಲೇ ಜಕಣಾಚಾರಿ ಸಹಾ ದೊಡ್ಡಪ್ಪನ ಮನೆಯನ್ನು ಸೇರಿದ್ದ. ಸುಮಾರು ಹನ್ನೊಂದು ಗಂಟೆಯ ವೇಳೆಗೆ ಗಣೇಶ ಉತ್ಸವಸಮಿತಿಯ ಯುವಕರ ಆಗಮನವಾಯಿತು. ಟೀ ಸಮಾರಾಧನೆಯ ನಂತರ ಈ ವರ್ಷದ ಉತ್ಸವಕ್ಕೆ ಆರು ಆಡಿ ಎತ್ತರದ ಗಣೇಶಮೂರ್ತಿಯ ನಿರ್ಮಾಣ ಮಾಡುವುದಾಗಿ ಆಚಾರಿ ಭರವಸೆ ನೀಡಿದ. ಈ ಭರವಸೆ ಕೊಡುವ ವೇಳೆ ಪಡಸಾಲೆಯ ಕಂಬದ ಹಿಂದೆ ನಿಂತು ಕಟ್ಟೆಯ ಮೇಲೆ ನಡೆಯುತ್ತಿದ್ದ ಮಾತುಕತೆಯನ್ನು ಆಲಿಸುತ್ತಿದ್ದ ತುಂಗಮ್ಮನ ಕಡೆಗೆ ಒಮ್ಮೆ ಬೆನಚಣ್ಣ ಕಣ್ಣಾಯಿಸಿದ್ದ. ಆಚಾರಿ ಕೊಡುತ್ತಿರುವ ವಾಗ್ದಾನದ ಹಿಂದಿನ ಶಕ್ತಿ, ಯುಕ್ತಿ ಎಲ್ಲಾ ತುಂಗಮ್ಮನೆ ಎಂದು ಗೊತ್ತಿದ್ದ ಊರ ಯುವಕರೂ ಆಚಾರಿಯ ಈ ನಡೆಯಿಂದ ತೃಪ್ತಿಯ ನಿಟ್ಟುಸಿರುಬಿಟ್ಟರು. ಇನ್ನು ಹಣಕಾಸಿನ ಮುಖ್ಯವಾದ ಮಾತುಕತೆಯ ಸಂದರ್ಭ. ದುಡ್ಡಿನ ವಿಷಯವನ್ನು ಗಂಡಸರು ಮಾತಾಡಿಕೊಳ್ಳಲಿ, ನನಗೇನು ಕೆಲಸ ಎಂದು ತುಂಗಮ್ಮ ಅಡುಗೆ ಮನೆ ಸೇರಿದಳು. ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ಅವುಗಳ ಆಕಾರ ಮತ್ತು ಎತ್ತರದ ಆಧಾರದ ಮೇಲೆ ಹದಿನೈದು ರೂಪಾಯಿಯಿಂದ ಮೂವತ್ತು ರೂಪಾಯಿಯವರೆಗೆ ಬೆಲೆ ಕಟ್ಟಿ ಮಾರುತ್ತಿದ್ದ ಆಚಾರಿಗೆ ಆರು ಆಡಿಗೂ ಮೀರಿದ, ಮೂಷಿಕದ ಮೇಲೆ ಮಲಗಿದ ರೂಪದಲ್ಲಿ ಆಸೀನನಾದ ಸಾರ್ವಜನಿಕ ಗಣಪತಿಮೂರ್ತಿಯ ಬೆಲೆಯನ್ನು ನಿಖರವಾಗಿ ಕಟ್ಟಲು ಆಗಿರಲಿಲ್ಲ. ಹಿಂದಿನ ರಾತ್ರಿ ತುಂಗಮ್ಮ ಇದರ ಬಗ್ಗೆ ಎಲ್ಲಾ ವಿವರಗಳನ್ನೂ ಹೇಳಿದ್ದರೂ ಅದು ಅಷ್ಟಾಗಿ ಬೆನಚಣ್ಣನ ತಲೆಗೆ ಇಳಿದಿರಲಿಲ್ಲ. ತುಂಗಮ್ಮನನ್ನು ಮತ್ತೆ ಹಜಾರಕ್ಕೆ ಕರೆಯಲು ಇಚ್ಛಿಸದ ಆಚಾರಿ ಒಂದು ನಿಮಿಷ ಬರುವುದಾಗಿ ಹೇಳಿ ಅಡುಗೆಮನೆಗೆ ನಡೆದ. ಐದು ನಿಮಿಷಗಳಲ್ಲಿ ಮತ್ತೆ ಪ್ರತ್ಯಕ್ಷನಾದವನು ಬರೋಬ್ಬರಿ ಇನ್ನೂರು ರೂಪಾಯಿಗಳ ಬೇಡಿಕೆಯನ್ನು ಯುವತಂಡದ ಮುಂದಿಟ್ಟ. ಈಗಾಗಲೇ ದುರ್ಗದ ಮಾರುಕಟ್ಟೆಯಲ್ಲಿ ಇದೇ ಅಳತೆಯ ಮೂರ್ತಿಯ ಬೆಲೆಯನ್ನು ಪೇಟೆಗಳ ವಿಶ್ವಣ್ಣ ವಿಚಾರಿಸಿ ಬಂದಿದ್ದನಾಗಿ, ಯುವಕರ ತಂಡ ದೂಸರಾ ಮಾತಿಲ್ಲದೆ ಬೆನಚಣ್ಣನ ಸಮ್ಮತಿಸಿ ಮುಂಗಡವಾಗಿ ಐವತ್ತು ರೂಪಾಯಿಗಳನ್ನು ಕೊಟ್ಟು ಹೊರಟುಹೋದರು. ತಾನು ಕಡಿಮೆ ಬೆಲೆಯನ್ನು ಹೇಳಿ ಬಿಟ್ಟೆನೇ? ಎನ್ನುವ ಅಸಮಾಧಾನದ ಸಣ್ಣ ಗೆರೆಯೊಂದು ಆಚಾರಿಯ ಹಲವು ದಿನಗಳಿಂದ ಕ್ಷೌರ ಕಾಣದ ಮುಖದ ಮೇಲೆ ಸುಳಿಯಿತಾದರೂ ಐವತ್ತು ರೂಪಾಯಿಗಳ ನೋಟು ಎದೆಯಲ್ಲಿ ಆನಂದದ ಬಗ್ಗೆಯನ್ನು ಉಕ್ಕಿಸಿತ್ತು.
ಅಲ್ಲಿಂದ ಮುಂದೆ ಒಂದು ವಾರ ಮೀರಿದ ಅವಧಿಯಲ್ಲಿ ದೊಡ್ಡ ಗಣಪತಿಮೂರ್ತಿಯ ತಯಾರಿಕೆಯಲ್ಲಿ ತುಂಗಮ್ಮ ತೊಡಗಿಕೊಂಡಿದ್ದರಿಂದ ಉಳಿದ ವಾಡಿಕೆಯ ಮೂರ್ತಿಗಳ ತಯಾರಿಕೆ ಹಿಂದುಳಿಯಿತು. ತಕ್ಕಮಟ್ಟಿಗೆ ಗಣೇಶಮೂರ್ತಿಯ ನಿರ್ಮಾಣದ ಕಲೆ ಅರಿತಿದ್ದ ತುಂಗಮ್ಮನ ತಮ್ಮನನ್ನು ತವರಿನಿಂದ ಆತುರಾತುರವಾಗಿ ಊರಿಗೆ ಕರೆತರಲಾಯ್ತು. ಆದರೂ ಅಷ್ಟೊಂದು ಪಳಗದ ಕೈಗಳ ಸಿದ್ದಲಿಂಗಾಚಾರಿ ಅಕ್ಕನ ಹಾಗೆ ಮೂರ್ತಿಗಳಿಗೆ ಜೀವ ತುಂಬುವಲ್ಲಿ ವಿಫಲವಾದ ಕಾರಣ ಸಾರ್ವಜನಿಕ ಗಣಪತಿ ಸರ್ವಸುಂದರನಾಗಿ ಅಲಂಕೃತಗೊಂಡು ಮೂಷಿಕಾಸನದಲ್ಲಿ ಮಂದಹಾಸನಾಗಿ ಮಲಗಿದ ಹೊತ್ತು ಊರಿನ ನೂರರ ಸಂಖ್ಯೆಗೂ ಮೀರಿದ ಕುಳಿತ ಭಂಗಿಯಲ್ಲಿನ ಗಣಪತಿ ವಿಗ್ರಹಗಳು ಪ್ರತೀ ವರ್ಷದ ತಮ್ಮ ಮನೋಹರ ರೂಪವನ್ನು ಸ್ವಲ್ಪ ಕಡಿತಗೊಳಿಸಿದಂತೆ ಕಂಡುಬಂದವು. ಇದು ತುಂಗಮ್ಮನ ಗಮನಕ್ಕೂ ಬರಲಾಗಿ, ಸಾರ್ವಜನಿಕ ಗಣಪತಿಯನ್ನು ಉಳಿದ ಗಣಪತಿಮೂರ್ತಿಗಳಿಂದ ಬೇರ್ಪಡಿಸಿ ಹಿತ್ತಲಿಗೆ ಸಾಗಿಸುವ ಮೂಲಕ ಮೂರ್ತಿ ತೆಗೆದುಕೊಂಡು ಹೋಗಲು ಬರುವ ಭಕ್ತಾದಿಗಳಲ್ಲಿ ಉಂಟಾಗಬಹುದಾದ ಕೀಳರಿಮೆಯನ್ನ ಹೋಗಲಾಡಿಸುವ ಪ್ರಯತ್ನ ಮಾಡಲಾಯಿತು.
ಹಬ್ಬಕ್ಕೆ ಒಂದು ವಾರ ಇರುವಾಗಲೇ ಪಾಠದ ಮನೆಯ ಹುಡುಗರಿಗೆ ರಜಾವನ್ನ ಘೋಷಿಸುವ ಮೂಲಕ ಸುಮಾರು ಮೂವತ್ತಕ್ಕೂ ಮೀರಿದ ಸಂಖ್ಯೆಯ ಹುಡುಗರನ್ನು ಸಂಜೆಯ ವೇಳೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮಗಳ ತಯಾರಿಗೆ ನಿಯೋಜಿಸಲಾಯಿತು. ಊರ ಯುವಕರ ಪಡೆಯ ಮಾರ್ಗದರ್ಶನದಲ್ಲಿ ಬಯಲನ್ನು ಸ್ವಚ್ಚ ಮಾಡುವ ಕಾರ್ಯದಿಂದ ಹಿಡಿದು ಮಂಟಪದ ಚಪ್ಪರ ತಯಾರಿಗೆ ಅವಶ್ಯವಾದ ಗಳಗಳನ್ನು ಹೂಣಲು ಬೇಕಾದ ಗುಂಡಿಗಳನ್ನು ಆಗೆಯುವುದರಲ್ಲಿಯೂ ಪಾಠದ ಮನೆಯ ಹುಡುಗರು ಭಾಗಿಗಳಾದೆವು. ಹಬ್ಬದ ಹಿಂದಿನ ದಿನವಷ್ಟೆ ಸಾಮೂಹಿಕ ಪ್ರಯತ್ನದಿಂದ ನಳನಳಿಸುವ ಉತ್ಸವದ ವೇದಿಕೆ ನವವಧುವಿನಂತೆ ಶೃಂಗಾರಗೊಂಡು ಗಣಪನೆಂಬ ವರನ ನಿರೀಕ್ಷೆಯಲ್ಲಿ ರಾತ್ರಿ ಕಳೆಯಿತು.
ಹಬ್ಬದ ದಿನ ಮುಂಜಾವಿನಲ್ಲಿಯೇ ಎದ್ದು, ಜಳಕ ಮಾಡಿ, ಹೊಸ ಬಟ್ಟೆಗಳನ್ನು ಧರಿಸಿ ಉತ್ಸವದ ವೇದಿಕೆಗೆ ನಡೆದ ನಮ್ಮ ಪಾಠದ ಮನೆ ಹುಡುಗರ ಟೋಲಿ, ಉತ್ಸವ ಸಮಿತಿಯ ಸದಸ್ಯರೊಡಗೂಡಿ ಬೆನಚಣ್ಣ ಆಚಾರಿಯ ಮನೆಯ ಕಡೆಗೆ ಅರವತ್ತು ಇಪ್ಪತ್ತು ಸದಸ್ಯರಿದ್ದ ತಂಡದ ರೂಪದಲ್ಲಿ ಧಾವಿಸಿದೆವು. ಅಲ್ಲಿನ ವಿಧಿವಿಧಾನಗಳು ಮುಗಿದ ನಂತರ ಜಕ್ಕಪ್ಪನವರ ಸಿದ್ದಣ್ಣನ ಟ್ರಾಕ್ಟರ್ ನಲ್ಲಿ ಗಣಪತಿಯನ್ನು ಕುಳ್ಳಿರಿಸಿಕೊಂಡು ಗಂಟೆಗಳ ನಿನಾದದೊಂದಿಗೆ ಮತ್ತು ‘ಗಣೇಶ್ ಮಹಾರಾಜ್ ಕಿ ಜೈ’ ಎನ್ನುವ ಉದ್ಘೋಷಣೆಗಳ ಮಧ್ಯೆ ಮೆರವಣಿಗೆಯಲ್ಲಿ ಸಾಗಿ ಅತ್ಯಂತ ವೈಭವಯುಕ್ತವಾಗಿ ಮಂಟಪ ಮುಟ್ಟಿದ
ಪ್ರಥಮ ಸಾರ್ವಜನಿಕ ಗಣಪತಿಯ ಪ್ರತಿಷ್ಠಾಪನೆಯನ್ನ ಕಲ್ಲಪ್ಪ ದೇವರ ಪೂಜಾರಿ ಇಷ್ಟಲಿಂಗಯ್ಯ ಅವರ ನೇತೃತ್ವದಲ್ಲಿ ಜರುಗಿದ ಮಹಾಪೂಜೆಯೊಂದಿಗೆ ಸಾಂಗವಾಗಿ ನೆರವೇರಿಸಲಾಯಿತು. ಪೂಜೆಯ ನಂತರ ನೆರೆದ ಸಮಸ್ತರಿಗೂ ಮಹಾಪ್ರಸಾದದ ವಿತರಣೆಯೊಂದಿಗೆ ಬೆಳಗಿನ ಕಾರ್ಯಕ್ರಮ ಸುಸೂತ್ರವಾದ ಮುಕ್ತಾಯದ ಹಂತವನ್ನ ತಲುಪಿತು.
ಮೊದಲನೇ ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮ ಮೊದಲುಗೊಂಡಾಗ ಸಮಯ ರಾತ್ರಿ ಎಂಟನ್ನು ದಾಟಿಯಾಗಿತ್ತು. ಉತ್ಸಾಹದಿಂದ ನೆರೆದಿದ್ದ ಊರಸಮಸ್ತರ ಮುಂದೆ ಗದುಗಿನ ಕಡೆಯವರಾದರೂ ನಮ್ಮ ಊರನ್ನೇ ತಮ್ಮ ವಾಸ ಸ್ಥಳವನ್ನಾಗಿಸಿ ಊರೂರು ಸುತ್ತಿ ಹರಿಕಥೆಗಳನ್ನು ಮಾಡುತ್ತಿದ್ದ ಚಂದ್ರಶೇಖರಯ್ಯಮಠದ ಮತ್ತು ತಂಡದಿಂದ “ಮಲ್ಲಮ್ಮನ ಪವಾಡ” ಎನ್ನುವ ಹರಿಕಥೆಯನ್ನ ಆಯೋಜಿಸಲಾಗಿತ್ತು. ಒಂದೆಡೆ ಅತ್ಯಂತ ಯಶಸ್ವಿ ರೀತಿಯಲ್ಲಿ ಹರಿಕಥೆ ಸಾಂಗವಾಗಿ ನಡೆದ ಹೊತ್ತು ನನ್ನ ಮನಸ್ಸು ಬೇರೆಯದೇ ಆದ ನೆನಪನ್ನು ಮೆಲಕು ಹಾಕುತ್ತಿತ್ತು.
ನನ್ನ ಜೊತೆಗೇ ಮೊದಲನೇ ಇಯತ್ತೆಗೆ ದಾಖಲಾಗಿದ್ದ ಹರಿಕಥೆದಾಸರ ಮಗ ಪಂಚಾಕ್ಷರಿ ಒಂದು ವರ್ಷ ಮುಗಿಯುವ ಮೊದಲೇ ತಂದೆಯ ಒತ್ತಾಸೆಯ ಕಾರಣಕ್ಕಾಗಿ ಶಾಲೆಯನ್ನು ತೊರೆದು ಅವರ ಹರಿಕಥೆ ತಂಡವನ್ನು ಸೇರಿಕೊಂಡಿದ್ದ. ಸುಶ್ರಾವ್ಯವಾಗಿ ಹಾಡುತ್ತಾ ಹಳ್ಳಿಗರನ್ನು ಹರಿಕಥೆಯ ಪಾರಾಯಣಗಳಲ್ಲಿ ಮಂತ್ರಮುಗ್ಧನಾಗಿಸುತ್ತಿದ್ದ ಪಂಚಾಕ್ಷರಿ “ಬಾಲಗಾರುಡಿಗ” ನೆಂದೇ ಖ್ಯಾತಿ ಗಳಿಸಿದ್ದ. ಅಪಾರ ಹಣ, ಹೆಸರನ್ನು ಬಹಳ ಚಿಕ್ಕಂದಿನಿಂದಲೇ ಗಳಿಸಿದ್ದ ಬಾಲಕ ಮಾತ್ರ ಶಾಲೆಯ ವಿದ್ಯೆಯಿಂದ ಬಾಲಿಶ ವಯಸ್ಸಿನಲ್ಲಿಯೇ ದೂರವಾಗಿದ್ದ. ಊರ ಹೊರಗಿನ ಪರಮಶಿವಣ್ಣ ಗೌಡರ ಹಳೇ ಹಾಸ್ಟೆಲ್ ಕಟ್ಟಡದಲ್ಲಿ ತನ್ನ ಪರಿವಾರಜನರೊಂದಿಗೆ ವಾಸಿಸುತ್ತಿದ್ದ ಪಂಚಾಕ್ಷರಿ ಆಗೊಮ್ಮೆ ಈಗೊಮ್ಮೆ ಅಲ್ಲಿ ಆಟವಾಡಲು ಹೋಗುತ್ತಿದ್ದ ನಮ್ಮ ಗೆಳೆಯರ ಬಳಗಕ್ಕೆ ಸಿಕ್ಕು ಮಾತನಾಡುತ್ತಿದ್ದ.

ತಂದೆಯವರು ಮನೆಯಲ್ಲಿಯೇ ಶಾಲೆಯ ಪಾಠ ಪ್ರವಚನಗಳನ್ನು ಹೇಳಿಕೊಡುತ್ತಾರೆ ಎಂದು ಸಿಕ್ಕಾಗ ಪ್ರತೀ ಬಾರಿಯೂ ಸ್ವಇಚ್ಛೆಯಿಂದ ನುಡಿಯುತ್ತಿದ್ದ ಪಂಚಾಕ್ಷರಿಗೆ ತಾನು ಯಾವುದೋ ಒಂದು ಅತಿಮುಖ್ಯವಾದ ಅವಕಾಶದಿಂದ ವಂಚಿತನಾಗಿದ್ದೇನೆ ಎನ್ನುವ ಅರಿವು ಮತ್ತು ತನ್ಮೂಲಕ ಉಂಟಾದ ನೋವು ಅವನ ಸಹಪಾಠಿಗಳಾದ ನಮ್ಮನ್ನು ಕಂಡಾಗ ಕಾಡುತ್ತಿತ್ತು ಎನಿಸುತ್ತದೆ. ಮುಂದೆ ನನ್ನ ಕಾಲೇಜ್ ವಿಧ್ಯಾಭ್ಯಾಸದ ಸಮಯದಲ್ಲಿ ಸಿರಿಗೆರೆಯ ಮಠದಲ್ಲಿ ನಡೆದ ಕಾರ್ಯಕ್ರಮ ಒಂದರ ವೇಳೆ ಅಚಾನಕ್ ಆಗಿ ಭೇಟಿಯಾಗಿದ್ದ ಪಂಚಾಕ್ಷರಿ ತಮ್ಮ ಕುಟುಂಬ ತುರುವನೂರನ್ನು ತೊರೆದ ನಂತರ ಜರುಗಿದ ಎಲ್ಲಾ ಘಟನೆಗಳನ್ನೂ ಅರುಹಿದ್ದ. ನಮ್ಮ ಊರು ಬಿಟ್ಟ ಕೆಲವೇ ವರ್ಷಗಳಲ್ಲಿ ಚಂದ್ರಶೇಖರಯ್ಯ ಅವರು ಹೃದಯಾಘಾತದಿಂದ ಮೃತರಾದ ಬಗ್ಗೆ ಮತ್ತು ಇಬ್ಬರು ಹೆಣ್ಣುಮಕ್ಕಳು ಮತ್ತು ತಾಯಿಯನ್ನು ಸಾಕಲು ತಾನು ಪಡುತ್ತಿರುವ ಬವಣೆ ಕುರಿತು, ದಿನದಿಂದ ದಿನಕ್ಕೆ ಕುಗ್ಗುತ್ತಾ ಸಾಗಿದ ಹರಿಕಥೆಯ ಬೇಡಿಕೆಯ ಸಂಗತಿ ಮತ್ತು ತಾನು ಹೆಚ್ಚಿನ ಮಟ್ಟದ ಅಕ್ಷರಸ್ಥನಾಗದೆ ಉಳಿದ ಕಾರಣ ಸೂಕ್ತ ನೌಕರಿ ಸಿಗದ ವ್ಯಥೆ ಇವುಗಳನ್ನೆಲ್ಲಾ ನನ್ನ ಮುಂದೆ ಪುಂಖಾನುಪುಂಖವಾಗಿ ತೋಡಿಕೊಂಡಿದ್ದ. ಅವನು ಬಾಲ್ಯದಲ್ಲಿ ಮಾಡುತ್ತಿದ್ದ ಹರಿಕಥೆಗಳಷ್ಟೇ ಗಾಢವಾದ ಪರಿಣಾಮವನ್ನು ಅವನ ಜೀವನಕಥನ ನನ್ನ ಮೇಲೆ ಉಂಟುಮಾಡಿತು. “ಅರಿಶಿಣದ ಕೂಳಿಗೆ ಹೋಗಿ ವರುಷದ ಕೂಳು ಕಳೆದುಕೊಂಡರು” ಎನ್ನುವ ನಮ್ಮ ಕಡೆಯ ಗಾದೆಯೊಂದನ್ನು ನೆನಪು ಮಾಡಿಕೊಂಡ ನಾನು ಕೆಲ ಕ್ಷಣಗಳ ಮೌನದ ಬಳಿಕ ನನ್ನಿಂದಾದ ಸ್ವಾಂತನವನ್ನು ಹೇಳುವ ಪ್ರಯತ್ನಮಾಡಿದ್ದೆ. ಸ್ಫುರದ್ರೂಪಿ ಬಾಲಕನಾದ ಪಂಚಾಕ್ಷರಿಯ ಸರೋವರದಂತಹ ವಿಶಾಲ ಮುಗ್ದ ಕಣ್ಣಾಲಿಗಳಲ್ಲಿ ಶಾಲೆಯನ್ನು ತೊರೆಯುವ ಕೊನೇ ದಿನದ ಹೊತ್ತು ಮಡುಗಟ್ಟಿದ ವಿಷಾದದ ಛಾಯೆ ಮಾತ್ರ ನಾನು ಎಂದೂ ಮರೆಯಲಾಗದ್ದು. ಕಲೆಯ ನೆಪದಲ್ಲಿ ಚಿಣ್ಣನ ವಿದ್ಯೆಯ ಕೊಲೆ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ ಎಂದು ಚಂದ್ರಶೇಖರಯ್ಯನ ಆತ್ಮಕ್ಕೆ ಚೀರಿ ಚೀರಿ ಹೇಳಬೇಕು ಎಂದು ಅನಿಸಿತ್ತು. ಪೋಷಕರ ತೆವಲುತೀಟೆಗಳ ಈಡೇರಿಸುವಿಕೆಗಾಗಿ ಅಮಾಯಕ ಸಂತಾನಗಳ ಬಲಿ ಇನ್ನೂ ನನ್ನ ಭಾಗದ ಗ್ರಾಮಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ನಾನು ದೃಢವಾಗಿ ನಂಬಿರುತ್ತೇನೆ. ನಮ್ಮ ಹತ್ತು ಹಲವು ಸಾಮಾಜಿಕ ಪಿಡುಗುಗಳಲ್ಲಿ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ವಿದ್ಯೆಯಿಂದ ವಂಚನೆಗೊಳಿಸುವುದು ಒಂದು ಮಹಾಪಿಡುಗು ಎಂದೇ ನಾನು ಭಾವಿಸುತ್ತೇನೆ. “ಹೆಣ್ಣಿರಲಿ, ಗಂಡಿರಲಿ, ಅವರನ್ನು ಎಳವೆಯಲ್ಲಿ ಅಕ್ಷರಾಭ್ಯಾಸದಿಂದ ವಂಚಿತರನ್ನಾಗಿ ಮಾಡಬೇಡಿ. ಕೈಲಾಗದೆ ಇದ್ದ ಪಕ್ಷದಲ್ಲಿ ಒಂದು ತುತ್ತು ಅನ್ನವನ್ನು ಕಡಿಮೆ ನೀಡಿ, ಇದರಿಂದ ಬಾಲಜೀವಗಳಿಗೆ ಏನೂ ತೊಂದರೆಯಾಗದು. ಆದರೆ ಇಡೀ ಜೀವನದ ಅವರ ಅನ್ನದ ಮಾರ್ಗಕ್ಕೆ ಮಾತ್ರ ಸಂಚಕಾರ ತರಬೇಡಿ” ಎಂದು ಗ್ರಾಮೀಣ ಭಾಗದ ಪೋಷಕರಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಪ್ರಥಮ ಸಾರ್ವಜನಿಕ ಗಣೇಶೋತ್ಸವ ಕೇವಲ ಐದು ದಿನಗಳ ಕಾಲ ಮಾತ್ರ ಜರುಗಿದ ನೆನಪು. ಪ್ರತೀ ದಿನವೂ ದುರ್ಗ, ಶಿವಮೊಗ್ಗದ ಕಡೆಯಿಂದ ಬಂದ ಕಲಾವಿದರು ಜಾನಪದ ಹಾಡುಗಳನ್ನು, ಭಾವಗೀತೆಗಳನ್ನು ಹಾಡಿ ಊರ ಜನರನ್ನು ರಂಜಿಸಿದರು. ಹೊರಗಿನ ಕಲಾವಿದರ ಒಟ್ಟಿಗೆ ಊರ ಪ್ರತಿಭಾವಂತ ಕಲಾವಿದರೂ ತಮ್ಮ ಕಲೆಗಳ ಅಮೋಘ ಪ್ರದರ್ಶನಗಳ ಅನಾವರಣಗೊಳಿಸಲಿಕ್ಕೆ ವೇದಿಕೆ ಅನುವು ಮಾಡಿಕೊಟ್ಟಿತ್ತು. ಭಕ್ತಿ ಭಾವದ ಉತ್ಕಟ ಅಭಿವ್ಯಕ್ತಿಗೆ ದಾರಿ ಮಾಡಿಕೊಟ್ಟ ಗಣಪತಿಯ ಮಂಟಪ ಊರಿನ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಸ್ಥಾನವೂ ಆಗಿ ಮಾರ್ಪಾಡು ಹೊಂದಿದ್ದು ಕೆಲವೇ ದಿನಗಳ ಹಿಂದೆ ತರಗತಿಯಲ್ಲಿ ಬಾಲ ಗಂಗಾಧರ ತಿಲಕರ ಸಾರ್ವಜನಿಕ ಗಣಪತಿ ಉತ್ಸವ ಆಚರಣೆಯ ಉದ್ದೇಶಗಳ ಉದ್ದದಾದ ಪಟ್ಟಿಗೆ ಮತ್ತೊಂದು ಪ್ರಮುಖ ಕಾರಣವನ್ನು ಲಗತ್ತಿಸಿದ ಹಾಗಿತ್ತು.
(ಮುಂದುವರೆಯುವುದು)