ಕಾಣುವ ಬೆಳಕು ಮತ್ತು ಕಾಣದ ಇರುಳು…
ಇಳೆ ಮತ್ತು ಮಳೆಗಳ ಕಥನ ಭೂಮಿಯ ಫಲಗಳ ಕಥನ ಮಾತ್ರವಲ್ಲ, ಬಹು ಜೀವಿಗಳ ಬದುಕಿನ ವಿರುದ್ದ ವಿನ್ಯಾಸಗಳ ನೋವಿನ ತಾರ್ಕಿಕ ಕಥನವೂ ಹೌದು.” ರೈತ ಬಡವನಾದರೂ ಭೂಮಿ ಬಡವಲ್ಲ” ಎಂಬ ಗಾದೆ ಉದಾರ ನೆಲೆಯಿಂದ ಕೂಡಿದೆ.ಹಳ್ಳಿಗಳ ಒಡಲಾಳದ ಜಮೀನ್ದಾರಿ ವ್ಯವಸ್ಥೆ ಭೂಮಿ ನಂಬಿದ ಕೂಲಿ ರೈತರನ್ನ ಬಡವರನ್ನಾಗಿಸಿದ ರೀತಿಗಳನ್ನ ಬಗೆಯ ಬೇಕಿದೆ.
ಅಶ್ವಿನಿ ಮಳೆ ಆರಂಭದಂದು ಕೂರಿಗೆ,ರಂಟೆ,ಕುಂಟೆಗಳ ಪೂಜೆಯನ್ನ ಪ್ರಾರಂಭಿಸುವಂತೆಯೇ ದನಕರುಗಳಿಗೆ ನೇಗಿಲು,ನೊಗಗಳಿಗೆ,ಕೃಷಿಯ ಎಲ್ಲಾ ಪರಿಕರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೆಲ ಉಳಲಿರುವ ಬಸವಣ್ಣಗಳಿಗೆ ಪ್ರಸಾದ ನೀಡಿ ಭೂಮಿಯಲ್ಲಿ ಬೆನಕನ ಪೂಜೆ ಮಾಡಿ( ಗೊಬ್ಬರ ಪೂಜೆ) ರೈತ ಬೇಸಾಯದ ಆರಂಭ ಮಾಡುತ್ತಾನೆ.
” ಹೂಡೋದು ಹೊಸ ಎತ್ತು
ಊಳೋನು ಹೊಸ ಮಗ
ಕೂಗು ಕೇಳವ್ವ ಭೂತಾಯಿ
ವಲ್ಲಿ ಕಟ್ಯಾನೆ ದುಡಿಯೋಕೆ”

Traditional ploughing – Karnataka
ಎಂದು ಹಾಡುವ ರೈತನು ಹೊಸದಾಗಿ ಮದುವೆ ಆದವ.ಬೇಸಾಯದ ಆರಂಭದಲ್ಲಿ ಪತ್ನಿಯೊಂದಿಗೆ ಜೋಡಿ ಇದ್ದವ ಆಷಾಡಕ್ಕೆ ಆಕೆಯಿಂದ ದೂರ ಇರಬೇಕಾಗುತ್ತದೆ.ಆಷಾಡ ಮಾಸ ದುಡಿವ ರೈತರಿಗೆ ಬಹು ಮುಖ್ಯ . ಅದು ಮುಂಗಾರಿನ ಅಬ್ಬರದ ಕಾಲ. ಬಿತ್ತಿದ ಬೀಜ ಉಳಿಸಿಕೊಳ್ಳುವ ಜವಾಬ್ದಾರಿಗಳು ಆತನ ಹೆಗಲ ಮೇಲಿರುತ್ತದೆ.ಹೊಲವೇ ನೆಲೆಯಾದ ರೈತನಿಗೆ ಬಿಡುವೆಂಬುದು ಆ ಕಾಲದಲ್ಲಿ ಇರಲಾರದು.ಆಗೆಲ್ಲಾ ರೈತ..
” ಕರಿಯೆತ್ತ ಕಾಳಿಂಗ ಬಿಳಿಯೆತ್ತ ಮಾಲಿಂಗ
ಸರದಾರನೆತ್ತ ಸಾರಂಗ”
ಎನ್ನುತ್ತ ಹೊಲದ ಕೆಲಸಗಳಲ್ಲೇ ಮುಳುಗಿರುತ್ತಾನೆ.ಗಾಳಿ,ಮಳೆ, ಬಿಸಿಲು ಎನ್ನದ ಆತನಿಗೆ ಆಷಾಢ ಪತ್ನಿಯ ನೆನಪು ತಂದರೂ ಆತ ಶ್ರಾವಣ ಪಂಚಮಿಗಾಗಿ( ಹಾಲು ತೆನೆಗಳ ವರೆಗೂ) ಕಾಯಬೇಕಾಗುತ್ತದೆ.ದುಡಿವ ಕೆಲವರಿಗಂತೂ ಗಾಳಿ,ಮಳೆ,ಬಿಸಿಲಿನ,ದಿನಗಳಿಗಿಂತಹ ಮನೆಯೊಳಗೇ ಬೆಚ್ಚಗೆ ಕಳೆವ ಮಹಿಳೆಯ ಜೀವನವೇ ಸೊಗಸು ಎನಿಸುತ್ತದೆ.
ಶ್ರಾವಣ ಪಂಚಮಿಯ ತನಕ ಒಕ್ಕಲಿಗರ ಮನೆಯಲ್ಲಿ ಕೂಡಿಟ್ಟ ಹಳೆಯ ಕಾಳುಗಳು ತೀರಿ ಹೋಗುತ್ತ ಬರುವುದರಿಂದಲೇ ಹೊಲ ನಂಬಿಕೊಂಡವರಿಗೆ ಈ ಕಾಲ ಕಷ್ಟದ ಕಾಲವೇ.ಒಕ್ಕಲಿಗರ ನಂಬಿದ ಕೂಲಿಕಾರರಿಗಂತೂ ಇನ್ನೂ ದುರ್ಧಿನಗಳ ಕಾಲ.ಒಕ್ಕಲಿಗನ ನಂಬಿದ ಹೊಲೆಯನ ” ಯಾಕೆ ಅಳತಿ ಹೊಲೆಯಾ ಅಂದ್ರೆ ಮುಂದ ಬರುವ ಆಷಾಢಕ್ಕಾಗಿ ಎಂದ” ಎಂಬ ಗಾದೆಯು ತಳ ಸಮುದಾಯಗಳ ಬಾಳಿನ ಸಾಹಿತ್ಯಿಕ ಮತ್ತು ಆತ್ಮಕಥೆಗಳ ನೆನಪು ಮೂಡಿಸುತ್ತವೆ.ಆಚರಣೆಗಳೆಂಬ ಜನಪದ ಲೇಖನಗಳ ವಿವರಣೆಗಳಲ್ಲಿ ಕಾಣಿಸುವ ಬೆಳಕಿದೆ ಆದರೆ ಕಾಣದ ಇರುಳು ಮರೆಯಾಗಿದೆ.
ಆಯಗಾರರು ವರ್ಷದ ಚಾಕರಿ ಸೇವೆಗೆ ಪಡೆವ ಮುಷ್ಟಿ ಕಾಳನ್ನ ಬ್ರಹ್ಮದೇವ ಹದಳಿಗಿ ಅವರ ಚಾಕ್ರಿ ನಿಂಬಜ್ಜ ತೋರುತ್ತದೆ.” ಆಯ ಕೇಳಾಕ ಹೋದ್ರ ಬಿಕ್ಷೆ ಹಾಕ್ದಂಗ ನಾಕು ಮುಷ್ಟಿ ಭತ್ತ ಕೊಡ್ತಾರು,ನಾವೇನು ಬಿಕ್ಷೆ ಬೇಡಾಕ ಹೋಗೇವೇನು?, ” ಏನವ್ವ ತಾಯಿ,ಗಿರಿಜವ್ವ ನಾಕು ಬೊಗಸೆ ಹೆಚ್ಚು ಹಾಕು. ಮುಂದಿನ ವರ್ಷಕ್ಕೆ ರಾಶಿ ಇನ್ನೂ ಹಲಸತೈತಿ.ನಮ್ಮಪ್ಪ ಮಳಿ ಮಲ್ಲಪ್ಪ ಪ್ರತಿ ವರ್ಷನೂ ಕಣ್ಣು ಮುಚ್ಚಿ ಕುಂದ್ರಲ್ಲ” ಎಂದು ದೈನೇಸಿ ಬಿಟ್ಟು ಬೇಡಿಕೊಂಡ್ರೆ . ” ನೀವು ಮಾಡ ಕೆಲಸಕ್ಕೆ ಇನ್ನೆಷ್ಟು ಕೊಡ್ತಾರು,ನಡೆದು ಬಂದ ನಡಿ ಐತಿ,ಎಲ್ಡು ಬೊಗಸೆ ಕೊಡ್ತಾರಪ್ಪ ಅನ್ಬೇಕಾ!”ಇದು
ಪಟಗಾಣೀ,ಬಾರಿಕೋಲು,ಮೂಗುದಾಣ,ಕೋಡು ಬಾರು,ಚಪ್ಪಲಿ ಕಾಯಕದ ಮಾದಿಗರ ಕೊರಗು.
ನೀಡಲಾರದ ಗೌಡರ ಮನೆಯ ಹಗೇವು ಖಾಲಿಯೂ ಅಲ್ಲ, ಎಂಬುದನ್ನ ಈ ಚಾಕರಿ ನಿಂಬಜ್ಜ ಕಾದಂಬರಿಯೇ ನಿರೂಪಿಸುತ್ತದೆ.ದೇಶ ಬಹುರಾಷ್ಟ್ರೀಯ ಕಂಪನಿಗಳು,ಎಸ್.ಈ.ಜೆಡ್,ಲ್ಯಾಂಡ್ ಕನ್ವರ್ಟಗಳೆಂದು ಹಣದ ಜೊತೆಗೆ ಕಾರ್ಡ ಲೆಸ್ ವ್ಯವಹಾರ ನೆಡೆಸಿ ಅಭಿವೃದ್ಧಿ ಎಂಬ ಹೆಸರು ಸೂಚಿಸಿದರೂ ಹಳ್ಳಿಯ ಗೌಡರ ಮನೆಗಳು ಈಗಲೂ ಜಮೀನ್ದಾರಿ ಜಾಗಗಳಲ್ಲಿ ನಿಂತು ವಸ್ತು ವಿನಿಮಯ ಪದ್ದತಿಯನ್ನೇ ಸೂಚಿಸುತ್ತವೆ.ಕ್ಷೌರಿಕರಿಗೆ,ಚಮ್ಮಾರರಿಗೆ,ಬಡಿಗಿ,ಕಮ್ಮಾರ,ಮೇದಾರ,ನೇವಾರ,ಕುಂಬಾರ ಮೊದಲಾದ ಆಯಗಾರರಿಗೆ ಗೌಡರು ಕಣದ ರಾಶಿಯನ್ನೇ ತೋರಿಸುತ್ತಾರೆ.ಕಣದ ರಾಶಿಯ ಕಾಮದ ಕಥನ ಇನ್ನೂ ಘೋರವಾದದ್ದು.
ಆಷಾಡ ಕಾಲ ಗೌಡರ ಮನೆಗಳ ನಗೆ ಹಬ್ಬಗಳ ಆಚರಣೆಯ ಕಾಲವೂ ಹೌದು.ಇವು ಆಯಾ ಓಣಿಯ ಪ್ರಧಾನ ಆಯಗಾರಿಕಯ ಸಮುದಾಯಕ್ಕೇ ಸೀಮಿತವಾದವು.
ಗುಳ್ಳವ್ವನ ಪೂಜೆ:
ಇದು ಗೌಡರ ಓಣಿಯ ಒಕ್ಕಲು ಹೆಣ್ಣು ಮಕ್ಕಳು ಕೆರೆದಂಡೆಯ ಮಣ್ಣು ತಂದು ಇಲ್ಲವೇ ಕುಂಬಾರರ ಮನೆಯ ತಿಗರಿಯ ಮಣ್ಣು ತಂದು ದೊಡ್ಡ ಜಗಲಿಯ ಮೇಲಿಟ್ಟು ಗುಳ್ಳವ್ವನನ್ನ ಮಾಡಿ ಗರುಕೆ,ಹೂವುಗಳು ಹಸಿರು ಸೀರೆ ಕುಬುಸಗಳಿಂದ ಪೂಜಿಸಿ ಹಬ್ಬದ ಅಡುಗೆಗಳನ್ನ ಮಾಡಿ ರಾತ್ರಿಯಿಡೀ ಜಾಗರಣೆಯಲ್ಲಿ ಹಾಡುತ್ತಾ,ಕಥೆಗಳನ್ನ ಹೇಳುತ್ತಾ,ನಗುತ್ತಾ, ಆಡುತ್ತಾ ಕಾಲ ಕಳೆಯುತ್ತಾರೆ,ಹೆಣ್ಣುಮಕ್ಕಳೇ ಸೇರಿಕೊಂಡು ನಡೆಸುವ ಈ ಹಬ್ಬದಲ್ಲಿ ಪುರುಷರು ಊಟಕ್ಕೆ ಮಾತ್ರ ಸೀಮಿತ.ಮರುದಿನ ಗುಳ್ಳವ್ವನನ್ನ ಗಂಗಮ್ಮನಿಗೆ ಕಳಿಸಿ ಬನದೂಟವನ್ನೂ ಆಚರಿಸುತ್ತಾರೆ.
ಚೆಂಗಳಿಕೆಪ್ಪ:
ನಾಗರ ಪಂಚಮಿ ಆದ ವಾರದೊಳಗೇ ನಡೆವ ಈ ಹಬ್ಬ ಊರ ಗೌಡಪ್ಪನ ನೇತೃತ್ವದಲ್ಲಿ ನಡೆಯುತ್ತದೆ.ನಗಿಸಲಿಕ್ಕೆಂದೇ ನಡೆವ ಈ ಹಬ್ಬ ಊರ ಮದ್ಯದ ಬೆನಕನ ಗುಡಿ ಮುಂದೆ ಇಲ್ಲವೇ ಈರಣ್ಣನ ಗುಡಿ ಮುಂದೆ ನಡೆಯುತ್ತದೆ.ಬಡಿಗೇರ ಮನೆಯಲ್ಲಿನ ಈ ಹಿಂದೆಯೇ ಮಾಡಿಟ್ಟ ಎರಡು ಗಂಡು ಮತ್ತು ಹೆಣ್ಣು ಗೊಂಬೆಗಳನ್ನ ತಂದು ಊರ ಪ್ರಧಾನ ಆಯಗಾರರಾದ ಬಡಿಗೇರು,ಕುಂಬಾರರು,
ಕಮ್ಮಾರರು,ಅಕ್ಕಸಾಲಿಗಳು,ಜೇಡರು, ಅಪ್ರಧಾನ ಆಯಗಾರರೆನಿಸಿದ ಕುರುಬರು,ಬಾರಿಕೇರು,ತಳವಾರು,ಕೊನೆಯ ಆಯಗಾರರಾದ ಹೊಲೆಮಾದಿಗರಾದಿಯಾಗಿ ಒಂದೆಡೆ ಸೇರಿಕೊಂಡು ಎರಡು ಗುಂಪುಗಳಾಗಿ ಮಾರ್ಪಡುತ್ತಾರೆ.ಇಲ್ಲಿ ಹೊಲೆಯರು ಸನಾಯಿ ಕಾಯಕ ಮಾಡಿದರೆ ,ಮಾದಿಗರು ಹಲಗೆ ಬಾರಿಸುವ ಕಾಯಕ ಮಾಡುತ್ತಾರೆ, ಹೆಣ್ಣು ಕೇಳಲು ಬರುವ ಗಂಡಿನ ಕಡೆಯ ಗುಂಪಿಗೆ ಹೆಣ್ಣಿನ ಕಡೆಯ ಗುಂಪಿನವರು ನಾನಾ ಬಗೆಯಲ್ಲಿ ಹಂಗಿಸುತ್ತಾ,ರೇಗಿಸುತ್ತಾ ,ಛೇಡಿಸುತ್ತಾ ಹಾಸ್ಯ ಸನ್ನಿವೇಶ ನಿರ್ಮಾಣ ಮಾಡುತ್ತಾರೆ.ಪುರವಂತರ ಆಚರಣೆ ಎಂದು ಕರೆವ ಈ ಗುಂಪಿನ ನಡುವೆಯೇ ಗೋಣೀಚೀಲ,ಹಳೆಯ ಬಟ್ಟೆ,ಬರಿಗಳನ್ನ ಸುತ್ತಿಕೊಂಡ ವಿದೂಷಕ,ಬಯಲಾಟ ಆಡುವ ರಕ್ಕಸರ ತಂಡಗಳೂ ನೆರೆದು ರಂಜಿಸುತ್ತವೆ.ಹಾಗೇ ಜನ ರಂಜಿಸಲು ಹುಸಿ ಕುಸ್ತಿ ಪಂದ್ಯಗಳೂ ನಡೆಯುತ್ತವೆ.ಆನಂತರ ನೆರೆದ ಊರ ಮಹಿಳೆಯರು ಪುರುಷರೆನ್ನದೆ ಎಲ್ಲರ ಕಡೆಗೂ ಸಗಣಿಯನ್ನು ಎರಚಲಾಗುತ್ತದೆ.
ಹಾಸ್ಯವೇ ಪ್ರಧಾನ ಉದ್ದೇಶವಾದ ಈ ಆಚರಣೆಯು ಹಿಂದೆ ಯಾರನ್ನೂ ಬೇಸರಕ್ಕೆ ಈಡುಮಾಡುತ್ತಿರಲಿಲ್ಲ.ಅದರೆ ಇದನ್ನೇ ಸದುಪಯೋಗ ಪಡಿಸಿಕೊಂಡ ಆಧುನಿಕ ಉಡಾಳರು ಹೆಣ್ಣುಮಕ್ಕಳ ಮೇಲೆ ಕೆಸರು ಸಗಣಿ ಎರಚುವ ಆಟ ಶುರು ಮಾಡಿದ್ದರಿಂದ ಈ ಆಟ ಈಗ ಊರುಗಳಲ್ಲಿ ನಿಂತೋಗಿದೆ ಎಂದು ಬಾಗಳಿಯ ಹಿರಿಯ ಲಿಂಗಾಯ್ತರ ಕೊಟ್ರಬಸಪ್ಪನ ತಮ್ಮ ಕನ್ನೀರಪ್ಪ’ ನ ಮಾತು.
ನಗೆಯ ಹಬ್ಬ ಮುಗಿದ ಮೇಲೆ ಹೊಲೆ ಮಾದಿಗರ ಮೇಳಗಳೊಂದಿಗೆ ಗೊಂಬೆಗಳ ನರ್ತನ ನಡೆಯುತ್ತದೆ.ಕೊನೆಗೆ ಗಂಗೆ ಪೂಜೆಯ ಮೂಲಕ ಹಬ್ಬ ಮುಗಿಯುತ್ತದೆ.ಇಲ್ಲೂ ಮರುದಿನ ಊರ ಪ್ರಧಾನರ ಮನೆಗಳಲ್ಲಿ ಹೋಳಿಗೆಯ ಹಬ್ಬ ಮಾಡುತ್ತಾರೆ.
ಇದು ಬೆಳೆ ಕೈಗೆ ಬರುವ ಹಂತವಾದ್ದರಿಂದ ಇಲ್ಲಿ ರೈತರೂ ನೆಮ್ಮದಿಯಾಗಿದ್ದಾರೆ,ದೂರ ದೂರವಿದ್ದ ನವಜೋಡಿಗಳೂ ಒಂದೆಡೆ ಸೇರಿವೆ.ದುಡಿಮೆಯ ಒತ್ತಡಗಳು ಕರಗಿ ನಿರಾಳವಾದ ಕಾಲವಿದು.ಗೌಡರ ಕೇಂದ್ರಿತವಾದ ಈ ಹಬ್ಬವು ಒಂದು ರೀತಿಯಲ್ಲಿ ವಡ್ಡಾರಾಧನೆಯ ಕಾರ್ತಿಕ ಋಷಿಯ ಕಥೆಯ ರಾಜ ಹೆಂಡತಿಯನ್ನ ನಗಿಸಲು ನೆರೆಸಿದ ಕಥನವನ್ನ ನೆನಪಿಸುತ್ತದೆ. ಆಷಾಢದ ಗುಳ್ಳವ್ವ ಪ್ರಧಾನ ಒಕ್ಕಲಿಗ ಮಹಿಳೆಯರ ಹಬ್ಬವಾದರೆ,ಪಂಚಮಿಯ ಚಂಗಳಿಕೆಪ್ಪ ಪ್ರಧಾನ ಒಕ್ಕಲಿನ ಗಂಡು ಮಕ್ಕಳ ಹಬ್ಬವಾಗಿದೆ.
ಈ ನಡುವೆ ಸುಳಿಯಲಾರದ,ಕಾಣಲಾರದ ಸದ್ದೇ ಇರದ ಕೂಲಿಕಾರರ ಹಸಿವಿನ ಗೆರೆಗಳು ಅನೇಕ.ಹಸಿವಿಗಾಗಿ ಎತ್ತಿನ ಜೊತೆಗೆ ನೊಗಕ್ಕೆ ಹೆಗಲು ಕೊಟ್ಟವರು,ಬಾಡಿನ ಆಸೆಗೆ ಮೈಮೇಲೆ ದೇವರು ಬರಿಸಿಕೊಳ್ಳುವರು,ಕದ್ದು ತೆನೆಗಳನ್ನ ತಂದು ಬೆಂಕಿಯಲ್ಲಿ ಕಾಯಿಸಿ ಮನೆಯವರನ್ನೆಲ್ಲಾ ಕಲೆಸಿ ರಾತ್ರಿಯಿಡೀ ತಿನ್ನುವವರು,ಹೊಲ ಹೊಲ ತಿರುಗಿ ಬೆರಣಿ ಆರಿಸಿಕೊಂಡು ತಂದು ಸೋಸಿ ಅದರೊಳಗಿನ ಜೋಳಗಳನ್ನ ಒಣಗಿಸಿ ಹಿಟ್ಟು ಮಾಡಿ ತಿನ್ನುವುದು,ಅನ್ನ ತಿನ್ನಲಿಕ್ಕೆ ಬಂದವನನ್ನ ಜಾತಿ ಕಾರಣಕ್ಕಾಗಿ ಹೊರಗೇ ಕೂಡಿಸಿ ಮಣ್ಣಿನ ಮುಚ್ಚಳದಲ್ಲಿ ನೀಡುವುದು . ತಿನ್ನುವಾಗಲೇ ಸುಳಿಗಾಳಿಗೆ ಅದರೊಳಗೆ ಮಣ್ಣು ಬಿದ್ದರೂ ಹಸಿದ ಹುಡುಗ ಅದನ್ನೇ ನೆಮಲುವುದು, ಊಟಕ್ಕೆ ಹೋದ ತಳವರ್ಗಗಳು ಊಟದ ಸರದಿಗಾಗಿ ಅರ್ಧ ರಾತ್ರಿಯವರೆಗೂ ಕಾಯುವುದು,ಏರುವ ದೊಡ್ಡ ಹೊಳೆಯ ಗಂಡಾಂತರವನ್ನು ಲೆಕ್ಕಿಸದೇ ಒಬ್ಬೊಬ್ಬರೂ ಸಾಲಾಗಿ ಕೈ ಕೈ ಹಿಡಿದು ಸಾಗುವುದು ಮೊದಲಾದ ಚಿತ್ರಗಳನ್ನ ಈ ನಾಡಿನ ದಲಿತ ಆತ್ಮ ಕಥೆಗಳು ಕಟ್ಟಿಕೊಡುತ್ತವೆ.
ಈ ಚಿತ್ರಗಳು ಭೂಮಿಯ ಒಡೆಯರ ನಿಲುವುಗಳನ್ನೂ ಮತ್ತು ಭೂಮಿ ಒಡೆಯರುಗಳು ಎಸಗುವ ತಾರತಮ್ಯಗಳನ್ನ ತಿಳಿಸುತ್ತವೆ. ತೆಲುಗಿನ ದಿಗಂಬರ ಕವಿ ಚರಬಂಡರಾಜು ಅವರ ಕವಿತೆ ಹೇಳುವಂತೆ ಬಯಲು ಸೀಮೆಯ ತಳವರ್ಗಗಳ ಸ್ಥಿತಿ
” ಊರ ಕಟ್ಟಿ ಊರು ಬೆಳಸಿ
ಕೇರಿಗೊಂದು ಬಾವಿ ತೋಡಿ
ದಿಕ್ಕಿಲ್ಲದ ಪಕ್ಷಿಯಾದೆಯಾ – ಓ ರಾಮಣ್ಣ
ಊರಾಚೆ ನಿನ್ನ ನಿಟ್ಟರೋ.
ಊರು ಗುಡಿಸಿ ಕೇರಿ ಗುಡಿಸಿ
ಸತ್ತ ಹೆಣವ ಮಸಣಕೊಯ್ದು
ಬಿಟ್ಟಿ ಚಾಕರಿ ನಿನ್ನ ದಾಯಿತೋ – ಓ ರಾಮಣ್ಣ
ಕೆರ ಹೊಲಿವ ಬದುಕಾಯಿತೋ.
ಹೊಲವನುತ್ತು ಹೊಲವನುತ್ತು
ಮೈಯೊಳಗಿನ ಬೆವರ ಬಸಿದು
ಬಂಗಾರದ ಬೆಳೆಯ ಬೆಳೆದೆಯೋ – ಓ ರಾಮಣ್ಣ
ಗುಟುಕ ಗಂಜಿ ನೀನು ಕಾಣೆಯೋ.
ಹಳ್ಳಿಯ ಹಬ್ಬಗಳೆಂಬ ಧಾರ್ಮಿಕ ಕಾನೂನುಗಳು,ಪುರಾಣಗಳೆಂಬ ನೈತಿಕ ಕಾನೂನುಗಳು ಇಲ್ಲಿನ ಕೂಲಿಕಾರರನ್ನ ಅಧೋಲೋಕಕ್ಕೇ ತಳ್ಳಿವೆ.ಪ್ರಭುಗಳು,ಪಾಳೆಗಾರರ ಕಾಲದಿಂದ ಬ್ರಿಟೀಷರ ಕಾಲದ ತನಕ ತಳವರ್ಗಗಳು ಕೂಲಿ ಕೇಳಲಾಗದ ಬಿಟ್ಟಿಯಾಳುಗಳಾಗಿಯೂ, ಒಡೆಯರ ಜಮೀನಿನಲ್ಲಿ,ಪ್ರಭುತ್ವಗಳ ಊಳಿಗದಲ್ಲಿ,ದೇವಾಲಯಗಳ ಸೇವೆಯಲ್ಲಿ ಸರಕಿನಂತೆ ಮಾರಾಟವಾಗುತ್ತಿದ್ದರು,ಒಬ್ಬರಿಂದ ಒಬ್ಬರಿಗೆ ಕೊಡುಗೆಯಂತೆ ನೀಡಲ್ಪಡುತ್ತಿದ್ದರು.
ನಗೆಯ ತಾಣಗಳಾದ ಹಬ್ಬಗಳಲ್ಲಿ ಒಗ್ಗಟ್ಟು ಮೇಲಸ್ತರಕ್ಕೆ ಒಂದೆಂಬಂತೆ ಕಾಣುತ್ತದೆ.ಒಡೆದು ನೋಡಿದಾಗ ಅಲ್ಲಿನ ತಾರತಮ್ಯಗಳು ಹಲವು. ಕಣದ ರಾಶಿಯಂತೆ ಇವು ಕಾಣುವ ಬೆಳಕು ಮತ್ತು ಕಾಣದ ಇರುಳು.