ಕಳೆದುಕೊಳ್ಳುವ ದುಃಖ

Share

ಕಳೆದುಕೊಳ್ಳುವ ದುಃಖ

ನನ್ನ ಹಿಂದಿನ ಅಂಕಣದಲ್ಲಿ ಕ್ರಮವಾಗಿ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಡುತ್ತಿದ್ದೆ. ಆದರೆ ಈ ಕೊರೋನ ಎಂಬ ಕಾಣದ ಜೀವವು ನಾವು ಬಯಸದ, ನೆನೆಸದ, ಊಹೆ ಮಾಡದ ಘಟನೆಗಳನ್ನು ನಮ್ಮ ಬದುಕಿನ ಹಾದಿಯಲ್ಲಿ ತಂದೊಡ್ಡಿದ ಪರಿಣಾಮ ಇಂದು ನಾನು ಅದರಿಂದಾದ ಕೆಲವು ಮಾನಸಿಕ ಗೊಂದಲಗಳು, ಯೋಚನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.


ನಾನು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರನ್ನು ಭೇಟಿಯಾಗಬೇಕೆಂದು ಒಬ್ಬ ಮಹಿಳೆ ಶಾಲೆಯ ಹತ್ತಿರ ಬಂದಿದ್ದರು. ನಾನು ಅವರನ್ನು ಮುಖ್ಯ ಕಛೇರಿಯಲ್ಲಿ ಕೂರಿಸಿದ್ದೆ. ನಂತರ ಊಟದ ವೇಳೆಗೆ ಮುಖ್ಯೋಪಾಧ್ಯಾಯಿನಿ ನಮಗೆ ಹೇಳಿದರು “ಇವರು ಸಂದರ್ಶನ ಮುಗಿಸಿ ಬಂದ ಹೊಸ ಶಿಕ್ಷಕರು” ಎಂದು ಎಲ್ಲರಿಗೂ ಪರಿಚಯ ಮಾಡಿಸಿದ್ದರು. ಸಂಗೀತಾರ ಪರಿಚಯದ ನಂತರ ಅವರು ನಿಗಧಿತ ಒಂದು ದಿನದಿಂದ ಶಾಲಾ ಕರ್ತವ್ಯಕ್ಕೆ ಹಾಜರಾದರು. ಅವರ ಮನೆ ನಮ್ಮ ಮನೆಯ ಏರಿಯಾದಲ್ಲಿ ಇದ್ದ ಕಾರಣ ನಾವಿಬ್ಬರೂ ಶಾಲಾವಾಹನಕ್ಕೆ ಒಂದೇ ಸಾರಿ ಬರುತ್ತಿದ್ದೆವು. ಶಾಲೆಗೆ ಹೋಗುತ್ತಾ ಬರುತ್ತಾ ನಾವು ತುಂಬಾ ಆತ್ಮೀಯರಾಗಿ ಹೋದೆವು. ನಂತರ ಕೆಲವು ವರ್ಷಗಳ ಬಳಿಗೆ ಮೊದಲಿದ್ದ ಮುಖ್ಯ ಶಿಕ್ಷಕಿ ಬದಲಾದ ಕಾರಣ ಇರುವವರಲ್ಲೇ ಯಾರನ್ನಾದರೂ ಮುಖ್ಯ ಹುದ್ದೆಗೆ ಕೇಳಿದಾಗ ಯಾರೂ ಆ ಜವಾಬ್ಧಾರಿ ತೆಗೆದುಕೊಳ್ಳಲು ತಯಾರಾಗದ ಕಾರಣ ಸಂಗೀತಾರವರಿಗೆ ಅದರ ಪ್ರಭಾರ ಕೊಡಲಾಯಿತು. ಭಯಪಡುತ್ತಲೇ ಆಹುದ್ದೆಯನ್ನು ಸ್ವೀಕರಿಸಿದರು.


ಶಾಲೆಯಲ್ಲಿ ತುಂಬಾ ಸೌಮ್ಯವಾಗಿದ್ದ ಸಂಗೀತ ಅವರು ಎಲ್ಲಾ ಶಿಕ್ಷಕರನ್ನು ಸಮಾನವಾಗಿ ಕಾಣುತ್ತಾ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಶಾಲೆಯಲ್ಲೇ ಅಲ್ಲದೆ ನಾವು ಹೊರಗಡೆ ಬದುಕಿನಲ್ಲಿ ಆತ್ಮೀಯರಾಗಿದ್ದೆವು. ಹದಿನೈದು ವರ್ಷದ ಗೆಳೆತನ ತಪ್ಪು ಸರಿಗಳನ್ನು ಒಪ್ಪಿಕೊಂಡು ನಡೆದಿತ್ತು. ಇತ್ತಿಚೆಗೆ ನನ್ನೊಡನೆ ಕಸಾಪ ಗೆ, ಕೇಂದ ಗ್ರಂಥಾಲಯಕ್ಕೆ, ನಮ್ಮ ತಾಲೂಕಿನ ಸಾಹಿತ್ಯ ಸಮ್ಮೇಳನಕ್ಕೆ ನನ್ನೊಡನೆ ಕಾರ್ಯಕ್ರಮಗಳಲ್ಲಿ ಬಂದು ತುಂಬಾ ಖುಷಿಪಟ್ಟಿದ್ದರು. ಆದರೆ ಅವರ ಮನೆಯವರಿಗೆ ಸಹಜವಾಗಿ ಜ್ವರಬಂದು ಪರೀಕ್ಷೆ ಮಾಡಿಸಿದಾಗ ಕೊರೋನ ಪಾಸಿಟಿವ್ ಬಂದಿತ್ತು. ಅವರು ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. (ಗುಣಮುಖರಾದರು) ಮನೆಯಲ್ಲಿ ಇರುವ ಎಲ್ಲರೂ ಅಂದರೆ ಮಗಳು ಮತ್ತು ಸಂಗೀತ ಪರೀಕ್ಷೆ ಮಾಡಿಸಿದಾಗ ಸಹಜವಾಗಿ ಪಾಸಿಟಿವ್ ಬಂದಿದೆ. ಅಷ್ಟಕ್ಕೇ ಹೆದರಿಕೊಂಡು ಬದುಕುವ ಆಸೆಯನ್ನೇ ಕಳೆದುಕೊಂಡು ಭಯದಿಂದ ಪ್ರಾಣಕಳೆದುಕೊಂಡ ಆತ್ಮೀಯ ಗೆಳತಿಯ ಸಾವು ಮನಸ್ಸಿಗೆ ತುಂಬಾ ಘಾಸಿಪಡಿಸಿತು.


ಎಷ್ಟು ಮರೆಯಲು ಪ್ರಯತ್ನಿಸಿದರೂ ಅದೇ ನೆನಪಾಗಿ ಕಾಡುವ ಸಂಗೀತ ಅವರ ಸಾವು ನಿಜಕ್ಕೂ ನನಗೇ ಅಲ್ಲದೆ ನನ್ನೆಲ್ಲಾ ಸಹೋಪಾಧ್ಯಾಯರಿಗೆ ಪರಿಚಿತರಿಗೆ ನೋವುಂಟು ಮಾಡಿದೆ. ಶಾಲೆಯಲ್ಲಿ ಮಕ್ಕಳನ್ನು ಹೆಚ್ಚಾಗಿ ಗದರಿಸುತ್ತಲೇ ಇರಲಿಲ್ಲ. ಹೆಚ್ಚು ಹಠ ಮತ್ತು ತರಲೆ ಮಾಡಿದ ಹುಗುಗರಿಗೆ “ವಿಶಾಲಾ ಮಿಸ್ ಗೆ ಹೇಳಲೇನು? ನಿಮಗೆ ಅವರೇ ಸರಿ” ಎಂದು ಹೇಳಿ ಹೆದರಿಸುತ್ತಿದ್ದರು. ಅವರ ಮಾತು, ಹಾಸ್ಯ, ಒಡನಾಡ, ಹೇಗೆ ಮರೆಯುವುದು? ನಿಜವಾಗಿಯೂ ಇಂದು ಅವರನ್ನು ಕಳೆದುಕೊಂಡು ತುಂಬಾ ನೋವು ಮತ್ತು ಬೇಜಾರಾಗಿದೆ.
ಜೀವನವೆಂದರೆ ಒಂದು ಜೈವಿಕ ವ್ಯವಹಾರ. ಜನನ ಮತ್ತು ಮರಣಗಳ ನಡುವೆ ಬದುಕುವ, ಬದುಕಿನ ಮುಂದುವರಿಕೆ ಮತ್ತು ಹೋರಾಟದ ಪ್ರಕ್ರಿಯೆ. ಸುಂದರ ಬದುಕಿಗೆ ಕಷ್ಟ-ದುಃಖ, ಸುಖ-ನಲಿವುಗಳು ಇದರ ಭಾಗಗಳು. ಇವು ಒಂದರ ನಂತರ ಒಂದು ಬಂದು ಹೋಗುವ ಸತ್ಯಗಳು.


ಈ ಬದುಕು ಕ್ಷಣಿಕವಾದದ್ದು. ಆದರೆ ಬದುಕಿರುವ ಮನುಷ್ಯನಿಗೆ ಅದು ಅರಿವಾಗುವುದೇ ಇಲ್ಲ. ನಾವೆಂದೂ ಈ ಉಸಿರಿನ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಹತ್ತಾರು ವರ್ಷ ಬದುಕುವೆನೆಂಬ ಭ್ರಮೆಯಲ್ಲೇ ಎಲ್ಲರೂ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಓಟದಲ್ಲಿರುತ್ತೇವೆ. ಭೂಮಿ, ಧ್ರವ್ಯ, ಮನೆ ಎಲ್ಲವೂ ನನ್ನದೇ ॒ನನ್ನ ಹಿಂದೆಯೇ ಇರುತ್ತವೆ ॒ಅಥವ ನಾನು ಅವುಗಳ ಜೊತೆಗೇ ಇರುವೆನೆಂಬ ಭ್ರಮೆಯಲ್ಲಿರುತ್ತೇವೆ. ಆದರೆ ಉಸಿರಿನ ಬಗ್ಗೆ ಒಮ್ಮೆ ಯೋಚಿಸಿದರೆ “ಅದರ ಬಗ್ಗೆ ನಮಗೆ ಅರಿವೇ ಇರಲಿಲ್ಲವಲ್ಲಾ ಎಂಬ ಪ್ರಜ್ಙೆ ಮೂಡಿ ಬರುತ್ತದೆ. ನಿಜಕ್ಕೂ ಈ ಬದುಕಿನ ಅರ್ಥ ನಾವು ಸರಿಯಾಗಿ ಆರ್ಥೈಸಿಕೊಂಡರೆ ಸಮಾಜದಲ್ಲಿನ ಬಹುಪಾಲು ಧ್ವೇಷ, ಅಸೂಯೆ, ಧರ್ಮಾಂಧತೆ, ಕೊಲೆ, ಸುಲಿಗೆಗಳು ಎಲ್ಲವೂ ಕಡಿಮೆಯಾಗಿಬಿಡುತ್ತವೆ. ಆದರೆ ಮನುಷ್ಯ ಇವೆಲ್ಲ ವಾಸ್ತವದ ಬದುಕು ಅರಿವಾಗಿ ಬದುಕಿನಲ್ಲಿ ಸಮರ್ಪಕವಾದದ್ದನ್ನು ಅಳವಡಿಸಿಕೊಳ್ಳುವನೇ?. ಅದನ್ನೇ ಬಯಸೋಣ. ಅದಕ್ಕಾಗಿ ಪ್ರಯತ್ನಿಸೋಣ. ಅಂತಹ ಸಮಾಜಕ್ಕಾಗಿ ಕಾಯೋಣ.

Girl in a jacket
error: Content is protected !!