ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ
ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಈ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಿಂದಲೂ ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಪ್ರಸಿದ್ಧಿಯನ್ನು ಪಡೆದ ಸ್ಥಳ. ದಾಖಲೆಗಳನ್ವಯ ಇದೊಂದು ಪ್ರಾಚೀನ ಪಟ್ಟಣವೇ ಆಗಿದ್ದಿತು. ಕ್ರಿ.ಶ. ೧೧-೧೨ನೆಯ ಶತಮಾನದ ಹೊತ್ತಿಗೇ ನಲವತ್ತೆಂಟು ಕೇರಿಗಳನ್ನು ಒಳಗೊಂಡ ಪಟ್ಟಣವಾಗಿದ್ದಿತು. ಅಲ್ಲದೆ ಕುಕನೂರು ಒಂದು ಸಾವಿರ ಮಹಾಜನರನ್ನು ಒಳಗೊಂಡಿದ್ದ ಮಹಾಗ್ರಹಾರವೂ, ಪ್ರಾಚೀನ ಕಾಲದ ವಿದ್ಯಾಕೇಂದ್ರವೂ ಆಗಿದ್ದುದು ಶಾಸನಗಳಿಂದ ತಿಳಿಯುವುದು. ಇಲ್ಲಿರುವ ದೇವಾಲಯಗಳೋ ಅನೇಕ. ಈ ದೇವಾಲಯಗಳ ಪ್ರಾಚೀನತೆ ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಹೋಗುತ್ತದೆ. ಚಾರಿತ್ರಿಕವಲ್ಲದೆ ಇಲ್ಲಿ ಇತ್ತೀಚೆಗೆ ಮನೆಗಳ ಅಡಿಪಾಯ ತೋಡುವಾಗ ಕಂಡುಬಂದ ಇಟ್ಟಿಗೆ, ಮಡಕೆ ಮೊದಲಾದ ಅವಶೇಷಗಳು ಮೌರ್ಯ-ಶಾತವಾಹನರ ಕಾಲದಷ್ಟೇ ಹಿಂದಕ್ಕೆ ಹೋಗುತ್ತವೆ. ಮೌರ್ಯ-ಶಾತವಾಹನ ಕಾಲವೆಂದರೆ ಅದು ಹೆಚ್ಚಾಗಿ ವ್ಯಾಪಾರ-ವಹಿವಾಟಿನ ಕಾಲ. ಅಲ್ಲದೆ ನಾಣ್ಯಗಳ ಚಲಾವಣೆ, ವ್ಯಾಪಾರಿ ಮಾರ್ಗಗಳು ನಿರ್ಮಾಣಗೊಂಡ ಅವಧಿಯೆನ್ನಬಹುದು. ಉತ್ತರ-ದಕ್ಷಿಣ ಸಂಸ್ಕೃತಿಗಳು ಮೇಳೈಸಿಕೊಂಡ ಕಾಲವೂ ಆಗಿದೆ.
ಈ ಗ್ರಾಮದ ದೇವಾಲಯಗಳಲ್ಲಿ ಕಲ್ಲೇಶ್ವರ ಮತ್ತು ನವಲಿಂಗೇಶ್ವರ ದೇವಾಲಯಗಳು ಪ್ರಾಚೀನವಾಗಿವೆ. ಇವು ರಾಷ್ಟ್ರಕೂಟ ಕಾಲದ ನಿರ್ಮಿತಿಗಳು. ಇವುಗಳಿಗೆ ಬಳಸಿದ ಶಿಲೆ ಕೆಂಪು ಮರಳುಗಲ್ಲು. ಕಲ್ಲೇಶ್ವರ ದೇವಾಲಯದ ಬಗೆಗೆ ಹೇಳುವುದಾದರೆ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಒಳಗೊಂಡ ಸುಂದರ ದೇಗುಲ. ಶಾಸನದಲ್ಲಿ ಇದನ್ನು ಮೂಲಸ್ಥಾನದ ದೇವರು ಎಂದೇ ಕರೆದಿದೆ. ಇದರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಎರಡು ಸುಂದರ ಸೂಕ್ಷ್ಮ ಕೆತ್ತನೆಯ ಎರಡು ದ್ವಾರಪಾಲಕ ಶಿಲ್ಪಗಳಿದ್ದವು. ಆದರೆ ಇಂದು ಎಡಬದಿಯ ದ್ವಾರಪಾಲಕ ಶಿಲ್ಪ ನಿಧಿಗಳ್ಳರ ದುರಾಸೆಯಿಂದ ಭಗ್ನಗೊಂಡು ಪುಡಿಪುಡಿಯಾಗಿ ಬಿದ್ದಿದೆ. ಈ ದೇವಾಲಯಕ್ಕೆ ಕಲ್ಯಾಣ ಚಾಲುಕ್ಯರಲ್ಲದೆ ಕಲಚೂರಿಗಳು ಮತ್ತು ದೇವಗಿರಿ ಯಾದವ ಅರಸರು ದಾನದತ್ತಿಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಇಲ್ಲಿನ ಶಾಸನದಲ್ಲಿ ಕುಕನೂರು ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಆಡಳಿತ ಕೇಂದ್ರವೂ ಆಗಿತ್ತು. ಅದು ಕುಕನೂರು-೩೦ರ ಕೇಂದ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಕ್ರಿ.ಶ.೧೧೭೮ರ ಶಾಸನದಲ್ಲಿ ಕುಕನೂರಿನ ಖ್ಯಾತಿಯನ್ನು ಬಣ್ಣಿಸಿದೆ. ಅದರಲ್ಲಿ ಹೇಳುವಂತೆ ಭಾರತದಲ್ಲಿ ಕುಂತಳ ದೇಶವಿತ್ತು. ದೇಶಗಳಲ್ಲಿ ಕುಂತಳ ದೇಶವೇ ಮಿಗಿಲು. ಇದು ಕಾಂಚೀ ದೇಶಕ್ಕಿಂತ ಚೆಲುವಿನಿಂದ ಕೂಡಿದೆ. ಈ ಕುಂತಳ ದೇಶಕ್ಕೆ ತಿಲಕಪ್ರಾಯವಾಗಿ ಬೆಳ್ವೊಲವು ವಿರಾಜಿಸುತ್ತಿತ್ತು. ಈ ಬೆಳ್ವೊಲದಲ್ಲಿ ಕುಕ್ಕನೂರು ಶೋಭಿಸುತ್ತಿತ್ತು. ಇದು ಬ್ರಹ್ಮಲೋಕಕ್ಕೆ ದೊರೆಯಾಗಿತ್ತೆಂದೂ ವರ್ಣಿಸಲಾಗಿದೆ.
ಕುಕನೂರಿನ ಪ್ರಸಿದ್ಧ, ಪ್ರಾಚೀನ ಮತ್ತು ಅತ್ಯಂತ ಅಪರೂಪದ ದೇವಾಲಯವೆಂದರೆ ಅದು ನವಲಿಂಗೇಶ್ವರ ದೇಗುಲವಾಗಿದೆ. ಅದರ ಹೆಸರೇ ಹೇಳುವಂತೆ ಒಂಭತ್ತು ಗರ್ಭಗೃಹಗಳನ್ನು ಹೊಂದಿದ ಪ್ರಾಚೀನ ದೇವಾಲಯ. ಇದು ಗ್ರಾಮದ ಮಧ್ಯದಲ್ಲಿರುವ ದೇವಾಲಯ. ಆದರೆ ಈ ದೇವಾಲಯ ಇಂದು ಶಿಥಿಲಗೊಂಡು ಮೂಲೆಗುಂಪಾಗಿರುವುದು ಶೋಚನೀಯ ಸಂಗತಿ. ಒಂಭತ್ತು ಗರ್ಭಗೃಹಗಳು, ನಾಲ್ಕು ಸಭಾಮಂಟಪಗಳನ್ನು ಒಳಗೊಂಡ ವಿಸ್ತಾರವಾದ ದೇವಾಲಯವಿದು. ಎಲ್ಲ ಗರ್ಭಗೃಹಗಳಿಗೂ ಅಂತರಾಳಗಳಿವೆ. ಹಾಗೆಯೇ ಮುಖ್ಯವಾಗಿ ಮೂರು ನಂದಿಯ ಶಿಲ್ಪಗಳನ್ನೂ ಶಿವಲಿಂಗಗಳಿಗೆ ಎದುರಾಗಿ ಸ್ಥಾಪಿಸಿದ್ದಾರೆ. ಮುಖ್ಯ ಗರ್ಭಗೃಹದ ಎಡಬದಿಯಲ್ಲಿ ಸಾಲಾಗಿ ಮೂರು ಗರ್ಭಗೃಹಗಳು, ಬಲಬದಿಯ ಸಾಲಿನಲ್ಲಿ ಎರಡು, ಎದುರಿಗೆ ಒಂದು ಮತ್ತು ಬಲಭಾಗದಲ್ಲಿ ಎರಡು-ಹೀಗೆ ಒಟ್ಟು ಒಂಭತ್ತು ಗರ್ಭಗೃಹಗಳನ್ನು ಒಂದೇ ತಳವಿನ್ಯಾಸದಲ್ಲಿ ನಿರ್ಮಿಸಿದ ಅಂದಿನವರ ಪ್ರೌಢಿಮೆ ಅಸದಳವಾದದ್ದು. ಶಾಸನದಲ್ಲಿ ಈ ದೇವಾಲಯವನ್ನು ನವಲಿಂಗಾಧೀಶ್ವರ ಸೋಮೇಶ್ವರ, ನವಲಿಂಗ ಮಹಿಮಾಲಿಂಗಿತಮಪ್ಪ ಸೋಮೇಶ್ವರ ದೇವರೆಂದು ಕರೆಯಲಾಗಿದೆ.
ಒಂಭತ್ತು ಗರ್ಭಗೃಹಗಳಲ್ಲಿ ಕೆಲವು ಶಿಥಿಲಗೊಳ್ಳುತ್ತಿದ್ದು, ದೇವಾಲಯದ ಜೀಣೋದ್ಧಾರ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ದ್ರಾವಿಡ ಶೈಲಿಯ ಈ ಶಿಖರಗಳು ಸಾವಿರಾರು ವರ್ಷಗಳ ನಂತರವೂ ಉಳಿದಿರುವುದು, ಅದಕ್ಕೆ ಬಳಸಿರುವ ಕಲ್ಲಿನಿಂದ ಎಂಬುದಂತೂ ಸ್ಪಷ್ಟ. ಒಂಭತ್ತು ಗರ್ಭಗೃಹಗಳಿರುವ ಈ ದೇವಾಲಯವನ್ನು ಶಾಸನಗಳು ನವಲಿಂಗೇಶ್ವರನೆಂದು ಕರೆದರೆ, ಸ್ಥಳೀಯರ ಬಾಯಲ್ಲಿ ಇಂದು ಪ್ರಚಲಿತಗೊಂಡಿರುವುದು ಒಂಭತ್ತೇಶ್ವರ ದೇವಾಲಯವೆಂದೇ. ಒಂಭತ್ತು ಈಶ್ವರ ಲಿಂಗಗಳಿರುವುದನ್ನು ಇದು ನೆನಪಿಸುತ್ತದೆ. ಕಲ್ಯಾಣ ಚಾಲುಕ್ಯ ಮತ್ತು ಕಲ್ಯಾಣ ಕಲಚುರಿಗಳ ಕಾಲಕ್ಕೆ ದಾನದತ್ತಿಗಳನ್ನು ನೀಡಿದ ಅನೇಕ ಶಾಸನಗಳು ಇಲ್ಲಿವೆ. ಈ ದೇವಾಲಯ ರಾಷ್ಟ್ರಕೂಟರ ಕಾಲದ ನಿರ್ಮಿತಿಯಾದರೂ ನಂತರ ಕಾಲದಲ್ಲಿ ಅನೇಕ ಸೇರ್ಪಡೆಗಳಾಗಿವೆ. ಇದಕ್ಕೆ ಕ್ರಿ.ಶ. ೧೦೦೫ರಲ್ಲಿ ಇರಿವಬೆಡಂಗ ಸತ್ಯಾಶ್ರಯನ ಕಾಲದಲ್ಲಿ ಈಶ್ವರಸೆಟ್ಟಿಯು ಇಲ್ಲಿನ ಎರಡು ದೇಗುಲಗಳಿಗೆ ಕಳಸಗಳನ್ನು ಇಟ್ಟು ಮುಖಸಾಲೆಯನ್ನು ಮಾಡಿಸಿದ್ದನು. ಹಾಗೆಯೇ ಜಗದೇಕಮಲ್ಲನು ಸಭಾಮಂಟಪವೊಂದನ್ನು ನಿರ್ಮಿಸುತ್ತಾನೆ. ಅಂದರೆ ಕಾಲಕಾಲಕ್ಕೆ ನವಲಿಂಗೇಶ್ವರ ದೇವಾಲಯವು ವಿಸ್ತಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಈ ದೇಗುಲದ ಮಧ್ಯಭಾಗದಲ್ಲಿ ಉತ್ತರಾಭಿಮುಖವಾಗಿರುವ ಗರ್ಭಗೃಹದ ಮುಂಬದಿಯ ಅಂತರಾಳದಲ್ಲಿ ಮಕರತೋರಣವಿದೆ. ಇದು ರಾಷ್ಟ್ರಕೂಟರ ಕಾಲದ ಅತ್ಯಂತ ಸುಂದರ ಕೆತ್ತನೆಯಾಗಿದೆ. ಇದು ಇಂದು ಭಗ್ನಾವಸ್ಥೆಯಲ್ಲಿರುವುದು ದುರದೃಷ್ಟಕರ ಸಂಗತಿ. ಕ್ರಿ.ಶ. ೧೧೭೮ರ ಶಾಸನದಲ್ಲಿ ನವಲಿಂಗೇಶ್ವರ ದೇವಾಲಯದ ಜೊತೆಗೆ ಶಕ್ತಿದೇವತೆಗಳಾದ ಅಂಬಿಕೆ, ಪುರಾಣಿದೇವಿ, ಚಾಮುಂಡಿ, ಮಹಾಮಾಯೆ, ತಡಗಾದಂಬಿಕೆ, ವಸಂತ, ಕಾಲ್ಯಂಬೆ, ಶಾಂತಿ ಮತ್ತು ಗುಪ್ತ ಚಾಮುಂಡಿದೇವಿಯರು ಇಲ್ಲಿ ನೆಲೆಗೊಂಡಿದ್ದಾರೆಂದು ಬಣ್ಣಿಸಿದೆ. ಅವರಲ್ಲಿ ಹಿರಿಯಳು ಜೇಷ್ಠಾದೇವಿಯೆಂದೂ ಹೇಳಲಾಗಿದೆ.
ಈ ಜೇಷ್ಠಾದೇವಿಯೇ ಇಂದಿನ ಮಹಾಮಾಯೆ ದೇಗುಲ. ಕಲಚೂರಿ ಸಂಕಮದೇವನ ಮಹಾಪ್ರಧಾನ ಧಂನುಗಿ ದಂಡನಾಯಕ ಮೊದಲಾದವರು ಕಾಳಿಕಾಜೇಷ್ಠೆಗೆ, ಜಗದ್ವರಿಷ್ಠೆಗೆ ಮಹಾಪೂಜೆಯನ್ನು ಮಾಡಿ ದಾನದತ್ತಿಗಳನ್ನು ನೀಡಿದ್ದನು. ಈ ದೇವಾಲಯದ ಎಡಭಾಗದಲ್ಲಿ ಬಿಂಧುಮಾಧವ, ಮುಂಬದಿಯಲ್ಲಿ ಮುಂದಿನ ಮಲ್ಲಿಕಾರ್ಜುನ, ಹಿಂದಿನ ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎಲ್ಲ ದೇವಾಲಯಗಳನ್ನೂ ಒಳಗೊಂಡಂತೆ ಪ್ರಾಕಾರ ಗೋಡೆ ಮತ್ತು ಮಹಾದ್ವಾರಗಳನ್ನು ವಿಜಯನಗರ ಕಾಲದ ಹೊತ್ತಿಗೆ ನಿರ್ಮಿಸಿದ್ದುದು ಅಲ್ಲಿನ ವಾಸ್ತುಲಕ್ಷಣಗಳಿಂದ ಗುರುತಿಸಬಹುದು. ಕುಕನೂರಿನ ಮಹಾ ಅಗ್ರಹಾರದಲ್ಲಿ ತರ್ಕ, ವ್ಯಾಕರಣ, ಪುರಾಣ, ಕಾವ್ಯ, ನಾಟಕ, ಭರತ ವಾತ್ಸಾಯನಾದಿ ವಿದ್ಯಾಸಾರಾಸಾರ ವಿಚಾರ ಚತುರಾನನರ್ ಇದ್ದರು ಎಂದು ತಾಮ್ರಶಾಸನವೊಂದು ಹೇಳಿದೆ. ಇಂತಹ ಪ್ರಸಿದ್ಧ ಅಗ್ರಹಾರವು ಎರಡು ಬಾರಿ ನಷ್ಟವಾಗಿ ಹೋಗಿತ್ತೆಂದು ತಿಳಿಯುತ್ತದೆ. ಕ್ರಿ.ಶ. ೧೩೭೯ರಲ್ಲಿ ವಿಜಯನಗರ ಅರಸ ಎರಡನೇ ಹರಿಹರರಾಯನು ಕುಕನೂರನ್ನು ಜೀರ್ಣೋದ್ಧಾರ ಮಾಡಿದನೆಂದೂ, ಹಾಗೆಯೇ ಕ್ರಿ.ಶ. ೧೫೬೧ರಲ್ಲಿ ಮತ್ತೊಮ್ಮೆ ಕುಕನೂರಿನ ಮಹಾಮಾಯೆ ದೇವಾಲಯದ ಮಹಾದ್ವಾರದ ಬಾಗಿಲನ್ನು ಸುಟ್ಟುಹಾಕಲಾಗಿತ್ತೆಂದೂ, ಅದನ್ನು ದೇಸಾಯಿಗೌಡನು ಜೀರ್ಣೋದ್ಧಾರ ಮಾಡಿಸಿದನೆಂಬ ಸಂಗತಿಯೂ ಅಲ್ಲಿನ ಶಾಸನದಿಂದ ತಿಳಿದುಬರುತ್ತದೆ. ಇದರಿಂದ ಧಾರ್ಮಿಕವಾಗಿ ಕುಕನೂರು ಎಷ್ಟೊಂದು ಮಹತ್ವದ ಸ್ಥಳವಾಗಿತ್ತೆಂಬುದನ್ನು ಗಮನಿಸಬಹುದಾಗಿದೆ.