ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ…
ಬಾಲ್ಯಕ್ಕೆ ಸಂಭ್ರಮದ ನೂರು ನೆನಪುಗಳಿರುವಂತೆಯೇ ಭಯದ ಹಲವು ಕರಿನೆರಳುಗಳೂ ಇರುತ್ತವೆ.ಮನೆ ಸುತ್ತಲ ದೆವ್ವದ ಮರ.ಓಣಿ ಆಚೆಗಿನ ಹಾಳು ಮನೆ,ಊರ ತುದಿಯ ಸ್ಮಶಾನದ ಗೋರಿಗಳು ಮಕ್ಕಳಿಗೆ ಭಯದ ತಾಣಗಳೂ ಹೌದು.ಇದಕ್ಕೆ ಕಾರಣ ಅಜ್ಜನೋ ಅಜ್ಜಿಯೋ ರಾತ್ರಿಗಳಲ್ಲಿ ಹೇಳುತಿದ್ದ ದೆವ್ವ ಬ್ರಹ್ಮ ರಾಕ್ಷಸರ ಹಲವು ಕಥೆಗಳೇ! ಕಟ್ಟೆಮೇಲೆ ಕುಳಿತ ರಾಟಿ ಮಾವ ಹೇಳುತಿದ್ದ ” ಅಮವಾಸೆ ದಿನ ಚಳ್ಳಿ ಮರದ ದುರ್ಗಮ್ಮನ ಬೇವಿನ ಮರದ ದೆವ್ವ ಜೋಕಾಲಿ ಆಡೋದನ್ನ ನೋಡಿ ಓಡುತ್ತಲೇ ಕಲ್ಲೆಸೆದಾಗ ಅದು ಥಪ್ ಎಂದು ಸೆಗಣಿಯ ಮೇಲೆ ಬಿದ್ದಂತಾಯಿತು” ಎನ್ನುವ ಶಬ್ದ ನಮ್ಮನ್ನ ರಾತ್ರಿ ಅಂಗಡಿಗೆ ಹೋಗುತಿದ್ದಾಗ ಎಲ್ಲಿಂದಲೋ ಬಂದು ದುತ್ ಎಂದು ಹೆಗ ಮೇಲೆ ಕುಳಿತು ಬಿಡುತಿತ್ತು.ಒಂದೇ ಓಟಕ್ಕೆ ಅಂಗಡಿ ತನಕ ಓಡುತಿದ್ದ ನಾವು ವಾಪಾಸು ಬರುವಾಗಲೂ ಅಷ್ಟೇ ವೇಗವಾಗಿ ಮನೆ ಅಂಗಳ ಸೇರಿ ಅಬ್ಬಾ! ದೆವ್ವವನ್ನ ದಾಟಿದೆವು ಎನಿಸಿಬಿಡುತಿತ್ತು.
ಸದಾ ಹೆಗಲ ಮೇಲೆ ದೊಡ್ಡದಾದ ಸಿಲವರ್ ಪರಾತ ಇಟ್ಟುಕೊಂಡು ” ಬರ್ರೋ ಹುಡ್ರಾ ಕೊಬರಿ ಚಿನ್ನಿ..” ಎಂದು ಮಾರುತಿದ್ದ ಅಂಗಡಿ ಚಂಡ್ರೆಪ್ಪಾ ಹಳ್ಳಿಯಲ್ಲಿ ಬದುಕ ಸವೆಸಲಾಗದೇ ಹೆಂಡತಿ ಇನ್ನಾರೊಂದಿಗೋ ಸಂಬಂಧವಿಟ್ಟುಕೊಂಡಿದ್ದಾಳೆಂದು ಅಂದೊಂದು ದಿನ ಪುಟ್ಟ ಮನೆಯಲ್ಲಿ ನೇಣು ಹಾಕಿಕೊಂಡು ಬಿಟ್ಟಿದ್ದ! ಊರವರ ಬೈಗುಳಕ್ಕೆ ಉರಿಯಲಾಗದೇ ಆತನ ಹೆಂಡತಿ ಪಾರೇತಕ್ಕ ಊರೇ ತೊರೆದು ಹೊರಟು ಬಿಟ್ಟಳು! ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಆ ಮನೆ ನೋಡ ನೋಡುತ್ತಲೇ ಪಾಳು ಬಿತ್ತು! ಜೊತೆಗೆ ಯಾರೋ ಅಷ್ಟೊತ್ತಿನಾಗ ಚೆಂಡ್ರೆಪ್ಪ ಮುಲುಕುತಾನಂತೆ ಎಂಬ ಗಾಳಿ ಮಾತುಗಳು ಬೆಳೆದೂ ಬೆಳೆದೂ ಓಡಾಡುವ ಮಕ್ಕಳ ಕಿವಿಯೊಳಗೂ ಜಾಗಮಾಡಿಕೊಂಡು ಬಿಟ್ಟವು. ಹಗಲೊತ್ತಿನ ಈ ದಾರಿಯೂ ಮಕ್ಕಳಿಗೆ ಬಾರಾವಲಿ ಅಂಗಡಿಗೆ ಹೋಗಬೇಕೆಂದರೆ ಸಾಕು ಪುಕು ಪುಕು..!
ಅಜ್ಜ ಬೀಡಿ ತರಲು..ಅಜ್ಜಿ ಎಲೆ ಅಡಿಕೆ ತರಲು ಸಣ್ಣವ್ವ ನಸೆಪುಡಿ ತರಲು ಹೇಳಿದರೆ ಸಾಕು…” ಯಾಕಾದರೂ ಇವರಿಗೆ ಈ ತಲುಬು ಅಂಟಿಕೊಂಡಿದೆಯೋ ಅನಿಸಿ ಬಿಡುತಿತ್ತು.” ತಲುಬಿನ ಮುಂದೆ ದೆವ್ವದ ಭಯ ಗೆದ್ದೀತೆ? ಹೋಗಲೇ ಬೇಕಿತ್ತು ಆಗೆಲ್ಲಾ ನಮಗೆ ಜೊತೆಯಾಗಿದ್ದು ಸಿನಿಮಾ ಹಾಡುಗಳು… ನಾಟಕದ ಡೈಲಾಗುಗಳು.. ನಮಗೆ ನಾವೇ ಕೂಗುತ್ತ ಓಡಿ ಬಿಟ್ಟರೆ ಮುಗಿಯಿತು ಅತ್ತಕಡೆಗೆ… ಬರಾವಲಿ ಅಂಗಡಿ.ಇತ್ತ ಕಡೆಗೆ …ಮನೆ ಅಂಗಳ.
ಅಷ್ಟೊತ್ತಲ್ಲೇ ಬಹಿರ್ದೆಸೆಗೆ ಹೋದರೆ ಗೋಮಾಳದ ಎದೆ ಮೇಲೇ ಬಿದ್ದಿದ್ದ ಹೆಣದ ಸಿದಿಗಿಗಳು,ಗೋಣಿಚೀಲಗಳ ಮೇಲೆ ಸತ್ತವರು ಮಶಾಣಕ್ಕೆ ಹೊರಟಂತೆಯೇ ದೆವ್ವಗಳು ಆ ಹಾದಿಯಲ್ಲಿ ಬರುತ್ತವಂತೆ! ಪೋಸ್ಟ ಮಾವ ’ಹಿಂಗಾತಲೇ…ನಾನ್ ಹೆದರಲಿಲ್ಲ!!!…ಮಾತಾಡಿಸಿ ಬಂದ್ನೆಪಾ..’ಅಂದದ್ದು ಕೇಳಿ ” ದೇವರೇ ಹನುಮಪ್ಪ..ಹೊತ್ತಿಲ್ಲದ ಹೊತ್ತಿನಾಗ ಹೊರಗೋಗದಂಗ ಮಾಡಪ್ಪಾ ನನ ತಂದೀ..” ಎಂದು ಅವತ್ತಿನಿಂದಲೇ ಗುಡಿ ಕಡಿಗೆ ಕೈ ಮುಗಿದೇ ಮಲಗತೊಡಗಿದೆವು.
ದೆವ್ವ ಮೆಳ್ಳ ಗಣ್ಣನಿವರಿಗೆ ಕಾಣತಾವಂತೆ ! ಜೊತಿಗೇ ಮಾತಾಡತಾವಂತ? ಅನ್ನುವ ಸುದ್ದಿಗಳು ಅಪ್ಪಿ ತಪ್ಪಿ ಅಂತವರ ಕೂಡ ಕಟ್ಟಿಗೆ,ಕುಳ್ಳು,ಕೌಲಿ,ಹುಲ್ಲು ಅಂತೆಲ್ಲಾ ಹೋಗುತ್ತಲೇ ಇರಲಿಲ್ಲ.ಹಾದಿಯಲ್ಲೇ ಸಾವಳಿಸಿಕೊಂಡು ಕುಳಿತ ದೆವ್ವ ಮಳಿ ಮಲ್ಲಪ್ಪನ ಗುಡ್ಡದ ಹಾದಿಯಲ್ಲಿ ಕುರಬರ ನಾಗರಾಜನ ಹೆಗಲ ಮೇಲೆ ದೆವ್ವ ಕುರಿ ಮರಿಯಾಗಿ ಬಂದು ಕುಂಡಿತ್ತಂತ.ಆತ ಅದನ್ನ ಹೊತ್ತು ಸ್ವಲ್ಪ ದೂರ ಹೋಗುವುದರಲ್ಲೇ ಅದು ಯಮಭಾರವಾಗಿ ಅದುಮಲು ಆತ ಅದನ್ನ ಎತ್ತಿ ಹಾಳು ಬಾವಿಯೊಳಗೆ ಬಿಸಾಕಲು ಅದು ಗುಡುಕ್ ಗುಡುಕ್ ಅಂತ ಕೊಡ ತುಂಬಿದಂತೆ ಮುಳುಗಿತಂತ! ” ಲೋ ನಿನ್ ಗಾಚಾರ ಚನ್ನಾಗೈತಿ, ನಿನ್ನ ತಾಯಿ ಹೊಟ್ಟಿ ತಣ್ಣಗೈತಿ ಉಳಕೊಂಡಿ ಹೋಗಲೇ… ” ಅಂದಿತ್ತಂತ.ಆತ ಹಿಂದಕ್ಕೆ ನೋಡದೇ ಓಡಿದನಂತೆ.” ಲೋ ಇನ್ನೊಂದು ಸರ್ತಿ ಸಿಗತೀ ಹೋಗಲೋ ನೋಡ್ತಿನಿ” ಅಂತಂತೆ! ರಾವುಗಣ್ಣು ತಿಪ್ಪೇಶಿಯ ಈ ಮಾತುಗಳು ಆತನ ಸಹವಾಸವನ್ನೇ ಬಿಡಿಸಿದ್ದವು.
ಬೇಸ್ತವಾರ ಗೋರಿ ಅಜ್ಜನ ಮುಂದಂತೂ ಚೆಂಜಿಯಾದರೆ ಸಾಕು ದೆವ್ವಗಳದ್ದೇ ದೊಡ್ಡ ಮ್ಯಾಳ! ಸುತ್ತಲ ಪೌಳಿಯ ಗೋಡೆಗೆ ಆತುಕೊಂಡ ಅವುಗಳ ಕೇಕೆ! ಗೋರಿ ಮೇಲಿಂದಲೇ ಹಿಂದಕ್ಕೆ ಮುಂದಕ್ಕೆ ಲಾಗ ಹಾಕಿ ಬಾರಾವಲಿ ಧೂಪಕ್ಕೆ ಇಟ್ಟ ಕೆಂಡವನ್ನೇ ಎತ್ತಿ ನಿಂತವರ ಸುತ್ತ ಉಗ್ಗಿ ಗಹಗಹಿಸಿಬಿಡುತಿದ್ದ ಅವುಗಳ ಕೋಪ!” ಯಾ ಬಿಸ್ಮಿಲ್ಲಾ..ರಹೀಮ್..” ಅಂತಾ ಆಗ ಎನನ್ನೋ ಗೊಣಗುತ್ತಾ ಬರುತಿದ್ದ ಬಾರಾವಲಿ ಯಾವುದಕ್ಕೂ ಹೆದರದೆ ಅವನ್ನೇ ಗದರಿಸಿ ಬಿಡುತಿದ್ದ.ಆತ ಕೆಂಡಕ್ಕೆ ಲೋಬಾನ ಹಾಕಿ ಎತ್ತಿದೊಡನೇ ಒಬ್ಬಾಕಿ ” ಯಜ್ಜಾ..! ಬಿಡೋ ಕೂದ ಎಳಿಬೇಡೋ.. ನಾ … ಹೊಕ್ಕಿನ್ ಬಿಡೋ… ಕಾಲಿಗೆ ಬಿಳ್ತೀನಿ ಬಿಡೋ..ಅಂತ ಮೂಗಿನಲ್ಲೇ ಮೂರು ನಾಮ ಹಾಕಿ ಮಾಯವಾಗುತಿದ್ದಳು.
ಸಣ್ಣ ಸೊಸೆ ಬಸವ್ವನ ಮೇಲೆ ಬಂದ ಅತ್ತೆ ತನ್ನ ಸರೀಕರ ಕೂಡ ತಾವೆಲ್ಲಾ ಕಲೆತು ಓಡಾಡಿದ ಮಾಡಿದ ಬಾನಗಡಿಗಳನ್ನೆಲ್ಲಾ ಹೇಳುತ್ತಾ ಅವರನ್ನೆಲ್ಲಾ ಹೌಹಾರಿಸುತ್ತಿದ್ದಳು.ಕದ್ದು ಸವಕಾರನ ತೆಕ್ಕೆಗೆ ಬಿದ್ದವರು,ಎದುರು ಮನೆ,ಕಡೆ ಮನೆ, ಮೂಲಿ ಮನೆ ಪರಸಂಗಗಳನ್ನೆಲ್ಲಾ ಬಿಚ್ಚುತ್ತ ನಗಲು ಆಕೆಯ ಸರೀಕರು ನನ್ನದೆಲ್ಲಿ ಬಯಲಾಗುತ್ತದೋ ಅಂದು ದೆವ್ವದಷ್ಟೇ ವೇಗವಾಗಿ ಗುಂಪಿನಿಂದ ಮರೆಯಾಗುತ್ತಿದ್ದರು.ಬಸವ್ವನ ಥೇಟ್ ಜನ್ಮ ಜನ್ಮದ ಅನುಬಂಧದ ಜಯಂತಿಯಂತಹ ಮಾತುಗಳು ನಿಂತವರ ಕಿವಿಗಳನ್ನೂ ಬಾಯಿಗಳನ್ನೂ ರಂಜಿಸುತ್ತಿರಲು ಆಕೆ ತಿರುಗಿ ಮತ್ತ್ಯಾರನ್ನ ನೋಡುತ್ತಾಳೋ ನಕ್ಕು ಅವರ ಪಂಚಾಂಗವನ್ನ ಬಿಚ್ಚುತ್ತಾಳೋ… ಎಂಬ ಕುತೂಹಲದೊಳಗಿರುವುವಾಗಲೇ ಬಸವ್ವ ಇದ್ದಕಿದ್ದ ಹಾಗೇ ಎದ್ದು ಓಡತೊಡಗಿ ಬಿಟ್ಟಳು! “ಅಯ್ಯೋ ಬಸವ್ವ!” ಅಂತ ನೆರೆದವರೆಲ್ಲಾ ಅನ್ನಲು, ಬಿಡ್ರೋ ಆಕಿ ಹೋದ ಸರೀಕರ ಕರಿಯಾಕ ಹೊಂಟಾಳ ಅಂತ ಕೆಲವರು ನಕ್ಕರು.ಕೆಲವರು “ಓಡ್ರೀ..ಓಡ್ರೀ ಮತ್ತೇನಾರಾ ಅನಾಹುತ ಮಾಡ್ಯಾಳು!!! ” ಎನ್ನಲು ಬಸವ್ವ ನೂರು ಮೀಟರ್ ಓಟಕ್ಕೆ ಬಿಟ್ಟವರಂತೆ ಓಣಿ ಓಣಿ ದಾಟುತ್ತಿರಲು ಮಕ್ಕಳೆಲ್ಲಾ ಜಂಗಳಿ ದನಗಳ ಬೆನ್ನಟ್ಟಿದಂತೆ ಓಡತೊಡಗಿದವು.ಓಡಲಾಗದವರು ಆಕೆಯ ಅತ್ತೆಗೇ ಹೇಳುವಂತೆ ” ಬೇ..ಯಕ್ಕಾ ಸಂಗಕ್ಕಾ.. ನಿಂದ್ರಬೇ..” ಎನ್ನುತಿದ್ದರು.ಕೆಲವರು ” ಅಯ್ಯೋ ಅಯ್ಯಯ್ಯೋ ಹರೇದ ಹುಡುಗಿ ಬಸವನ್ನ ತಂಗದೇ ಹೊಂಟಳ್ರೋ..” ” ಬಸಕ್ಕನ್ನ ಬಿಡಸರೆಪ್ಪಾ, ಗಣಮಕ್ಕಳೇ..ಓಡಿ ಉಳಿಸ್ರೋ ನನ ತಂದೆಗಳೇ…” ಎನ್ನಲು.
ಹುಡುಗರಾದಿಯಾಗಿ ಓಡಲು ತಾಕತ್ತಿರುವವರೆಲ್ಲರಿಗೂ ಬಸಕ್ಕನ ಉಳಿಸುವ ಹಂಬಲ ಜೋರಾಯಿತು. ಬಸಕ್ಕನ್ನೂ ಗಾಳಿಗೆ ಕೂದಲುಗಳನ್ನ ಚಲ್ಲಹೊಡೆದು ಹಿಂತಿರುಗಿ ದೊಡ್ಡ ಕಣ್ಣು ಬಿಟ್ಟು “ಹ್ಯಾ” ಎಂದು ಕಿರುಚಲು ಅರ್ಧಕರ್ಧ ಮಂದಿ ಮೈ ಮೇಲೆ ಬೆಂಕಿ ಬಿದ್ದವರಂತೆ ನಿಂತೆ ಬಿಟ್ಟರು! ಕೆಲವರು ” ನಮಗ್ಯಾಕ್ ಬೇಕ್ ಬಿಡು ಯಲ್ಲಾ ಗೋರಿ ಅಜ್ಜ ನೋಡಕ್ಯಾಂತನೆ ” ಅಂತ ಹಿಮ್ಮುಖವಾಗಿ ಬಿಟ್ಟರು.ಕೆಲವು ಉಡಾಳರು ಮಾತ್ರ ದೆವ್ವವನ್ನ ಹಿಡಿದೇ ತೀರುತ್ತೇವೆಂದು ಬೆನ್ನಟ್ಟಿ ಬಿಟ್ಟರು.ದೆವ್ವ ಬಿಡಿಸೋ ಚಂದ್ರಯ್ಯನೋರು ” ಮನುಷ್ಯರಿಗೆ ಬಡಿದ ದೆವ್ವಗಳು ಅಪಾಯಕಾರಿಗಳಲ್ಲ ಹಿಡಿರಲೇ” ಎನ್ನಲು ಎಲ್ಲರೂ ಬೇಟೆಗಾರರಂತೆ ಬಸವ್ವನ ಹಿಂದೆ ಬೆನ್ನಟ್ಟಿದರು.ಬಸಕ್ಕ ಕೇರಿ ಸುತ್ತಿದಳು.ಕೆರೆ ಅಂಗಳ ಸುತ್ತಿದಳು.ಕಣದ ಹಿಂದಕ್ಕೆ ಎಗರಿದಳು.ಉಹೂ… ಜನ ಆಕೆ ಎಲ್ಲಿ ಹೊಕ್ಕರೂ ಬಿಡಲಿಲ್ಲ.ಕಡೆಗೆ ಆಕೆಯ ಮನೆಯ ಹಿತ್ತಲಿಗೇ ಬಂದಳು.ಸೀರೆ ಎತ್ತಿ ಕವುಚಿ ಕುಂತಿದ್ದೇ..ಢರ್ ರ್ ರ್ರ..ಎಂದು ಸದ್ದು ಮಾಡಲು ಸುತ್ತಲೂ ಕೆಟ್ಟ ನಾತವೆದ್ದು ಜನ ಹೋ… ಎಂದು ಮೂಗು ಮುಚ್ಚಿಕೊಂಡರು… ದೆವ್ವಗಳೂ… ಬಹಿರ್ದೆಶೆಗೆ ಹೋಗುತ್ತವಾ..!!! ?
ಬಸಕ್ಕನ ಅತ್ತೆ ಇಷ್ಟು ಜೋರಾಗಿ ಓಡುತ್ತಿದ್ದಳಾ ?
ಬಾರಿಕೇರ ನಿಂಗವ್ವನ ದೆವ್ವ ಬಿಡುಸುತ್ತೇನೆಂದು ಗೋರಿ ಅಜ್ಜನಿಗೇ ಸವಾಲಾಕಿ ಚೌಡಮ್ಮನ ಗುಡಿ ಮುಂದೆ ರಂಗ ಹೊಡೆದ ಗಡ್ಡದ ಚಂದ್ರಯ್ಯನೋರು ದೆವ್ವವನ್ನ ನೆಲಕ್ಕೆ ಕೆಡವಿಸಿ “ಬಿಡ್ತಿಯಾ ಇಲ್ಲೇ…” ಎಂದು ಬೆತ್ತದಿಂದ ಎತ್ತಿ ಬಾರಿಸಲು ದೆವ್ವ ” ಬಿಡಲ್ಲಲೋ ಬಾಡ್ಕಾವೌ… ಎಂದು ಕೇಕೆ ಹಾಕಿ.. ಏನ್ ಕಿಸಿತಿಯಾ ಕಿಸಗಾ ಎಂದು ಎರಡೂ ಕಾಲುಗಳನ್ನ ಸ್ವಾಮಿಯ ಹೊಟ್ಟಿಗೆ ಹಾಕಿ ಅದುಮಿದ್ದೇ ಗಡ್ಡ ಹಿಡಿದು “ಏನಲೋ ಸ್ವಾಮಿ ಎಂದು ಶಕ್ತಿ ಮೀರಿ ಎಳೆಯಲು … ಏನೋ ಪವಾಡ ನಡೆಯುತ್ತೆ ಎಂದು ಕವಿದವರ ಎದುರು ಚಂಡ್ರಯ್ಯನೋರು ಪ್ರಾಣವನ್ನೇ ಕಳಕೊಂಡವರಂತೆ ಕಿರುಚಾಡುತ್ತಾ… ಯಪ್ಪಾ..ಬಿಡುಸು ಬರ್ರ್ಯೋ..”ಅಂತ ಗೋಗರೆಯಲು ನೆರೆದ ಮಕ್ಕಳೆಲ್ಲಾ ಗಹ ಗಹಿಸಿ ನಗತೊಡಗಿದವು.ರಂಗದೊಳಗೆ ಕಟ್ಟಿ ಹಾಕುತ್ತೇನೆಂದು ಕಣ್ಣೀರು ಹಾಕತೊಡಗಿದ ಸ್ವಾಮಿಯ ಪಜೀತಿ ನೋಡಲಾಗದೇ ಜನರೇ ರಂಗಕ್ಕೆ ನುಗ್ಗಿ ದೆವ್ವದಿಂದ ಬಿಡಿಸಿದರು. ಸ್ವಾಮಿ ದಮ್ಮಾರಿಸಿಕೊಂಡು ನೀರು ಕುಡುದು ಏನೋ ಪಾಲ್ಟಾಗೇತಿ! ಅಂದು ಮನೆ ಸೇರಿದವರು ಇನ್ನೊಂದು ಸರ್ತಿ ದೆವ್ವದ ತಂಟೆಗೇ ಬರಲಿಲ್ಲ.ಅಂತ್ರ ಬರೆವ ಕತ್ಲಜ್ಜ,ಎಳೆಗಾಯಿಯ ಮೇಲೆ ಕೊರೆವ ಮಾಸ್ತಿ ಅಜ್ಜ ಯಾರೆಂದರೆ ಯಾರೂ ಊರಲ್ಲಿ ದೆವ್ವಗಳ ತಂಟೆಗೇ ಬರಲಿಲ್ಲ.ಅಂದಿನಿಂದ ನಮ್ಮೂರ ದೆವ್ವಗಳೆಲ್ಲಾ ಉಕ್ಕಡಗಾತ್ರಿ ಕಡೆಗೆ ಮುಖಮಾಡತೊಡಗಿದವು.
ದೆವ್ವಗಳು ಯಾಕೆ ಗೌಡರ ಸವುಕಾರರ ಮನೆಗಳಲ್ಲಿ ಬರುವುದಿಲ್ಲ ? ದೆವ್ವಗಳು ಯಾಕೆ ಪಡಿ ಪಾಟಲು ಬೀಳುವ ಕೂಲಿ ಕಾರರ ಶೂದ್ರ, ಕೆಳವರ್ಗಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ? ಸಿನಿಮಾಗಳಲ್ಲೂ ದೆವ್ವಗಳಿಗೆ ಯಾಕೆ ಬಿಳಿಯ ಡ್ರೆಸ್ ಕೋಡ್ ಗಳಿವೆ ? ದೆವ್ವಗಳಿಗೆ ಅಷ್ಟು ಚಂದವಾಗಿ ಹಾಡಲು ಬರುತ್ತವೆಯೇ? ಎಂಬ ಪ್ರಶ್ನೆಗಳ ಜೊತೆಗೇ.. ಚದುರಂಗರ ದೆವ್ವದ ಮನೆ,ಟಾಲ್ ಸ್ಟಾಯ್ ಅವರ ರೈತನ ಕಥೆ.. ಕುವೆಂಪು ಅವರ ಮಲೆಗಳಲ್ಲಿ ಮದುಮಗಳ ಸೀತಮ್ಮನ ದೈಯ್ಯದ ಕಥೆಯ ವಿವರಗಳು ಹಲವು ಕವಲುಗಳನ್ನ ಮೀಟುವಂತಿವೆ.