ಸರಳ, ಸಜ್ಜನಿಕೆಯ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲರು ಒಬ್ಬರು. ಅವರನ್ನು ವಿಧಾನ ಪರಿಷತ್ನಿಂದ ಹೊರಗಿಡುವ ತಂತ್ರದಲ್ಲಿ ಪಕ್ಷ ಯಶಸ್ಸು ಕಂಡಿದೆ. ಯಾವುದನ್ನೂ ಬಯಸದ ಕಾಡಿಬೇಡದ ರಾಜಕಾರಣ ಪಾಟೀಲರದು. ಯಾರ್ಯಾರದೋ ಮಹತ್ವಾಕಾಂಕ್ಷೆಯ, ಡಿಕೆಶಿ-ಸಿದ್ದರಾಮಯ್ಯ ಜಂಗೀ ಕುಸ್ತಿಯ ರಾಜಕಾರಣದಲ್ಲಿ ಪಾಟೀಲರು ಹರಕೆಯ ಕುರಿ ಆದರೇ…?
ಎಸ್ಸಾರ್.ಪಾಟೀಲರ ಮೂಗಿಗೆ ಮತ್ತಷ್ಟು ತುಪ್ಪ
ಹೀಗೊಂದು ಕಥೆ. ಕೋತಿಯ ಮನಃಸ್ಥಿತಿಯನ್ನು ಹೇಳುವ ಕಥೆ. ಆಳೆತ್ತರದ ಡಬ್ಬದಲ್ಲಿ ಕೋತಿಯನ್ನು ಅದರ ಮರಿಯೊಂದಿಗೆ ಹಾಕಿ. ಡಬ್ಬದೊಳಕ್ಕೆ ನೀರನ್ನು ಹಾಯಿಸುತ್ತ ಬನ್ನಿ. ಕಾಲಬುಡದಲ್ಲಿ ನೀರಿರುವಾಗ ಮರಿಯೊಂದಿಗೆ ಕೋತಿ ಅದರಲ್ಲಿ ಆಡುತ್ತದೆ. ಸೊಂಟದ ಮಟ್ಟಕ್ಕೆ ನೀರು ಬರುತ್ತಿದ್ದಂತೆ ತಾಯಿ ಕೋತಿ ಜಾಗೃತವಾಗುತ್ತದೆ. ಮರಿಯನ್ನು ಎತ್ತಿ ಸೊಂಟದಲ್ಲಿ ಕೂರಿಸಿಕೊಳ್ಳುತ್ತದೆ. ನೀರು ಸೊಂಟದ ಹಂತಕ್ಕೆ ಬಂದಾಗ ಭುಜದ ಮೇಲೆ ಮರಿಯನ್ನು ಕೂರಿಸಿಕೊಳ್ಳುತ್ತದೆ. ಭುಜದೆತ್ತರಕ್ಕೆ ನೀರು ಬಂದಾಗ ತಲೆಯ ಮೇಲೆ ಮರಿಯನ್ನು ಕೂರಿಸಿಕೊಳ್ಳುವ ತಾಯಿ, ತನ್ನ ಮೂಗಿನ ಮಟ್ಟಕ್ಕೆ ನೀರು ಬಂದಾಗ ಅದೇ ಮರಿಯನ್ನು ತನ್ನ ಮಗು ಎಂದು ನೋಡದೆ ಕಾಲಬುಡಕ್ಕೆ ಹಾಕಿ ಅದರ ಮೇಲೆ ನಿಂತು ತನ್ನ ಜೀವ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗುತ್ತದೆ. ಡಾರ್ವಿನ್ ಸಿದ್ಧಾಂತದ ರೀತ್ಯ ಕೋತಿಯಂಥ ಪ್ರಾಣಿಯೆ ಮನುಷ್ಯಕುಲದ ಪೂರ್ವಜ. ನಾವು ಇಂದು ಏನನ್ನೇ ಮಾಡಿದರೂ ಅದು ಡಾರ್ವಿನ್ ಸಿದ್ಧಾಂತಕ್ಕೆ ಅನುಗುಣವಾಗಿಯೆ ಇರುತ್ತದೆ.
ರಾಜ್ಯ ಕಾಂಗ್ರೆಸ್ನ ಹಿರಿಯ ಮತ್ತು ಸಜ್ಜನಿಕೆಗೆ ಹೆಸರಾದ ಮುಖಂಡ ಎಸ್.ಆರ್.ಪಾಟೀಲರಿಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿಸಿದ ರಾಷ್ಟ್ರ, ರಾಜ್ಯ ಕಾಂಗ್ರೆಸ್ ನಾಯಕತ್ವದ ಕಾರ್ಯ ವೈಖರಿಯನ್ನು ಗಮನಿಸಿದರೆ ಅಲ್ಲಿ ಮಂಗನಿಂದ ಮಾನವ ಎಂಬ ಡಾರ್ವಿನ್ ಸಿದ್ಧಾಂತದ ವಾಸನೆ ಅಡರುತ್ತದೆ. ಸಜ್ಜನರಿಗಿದು ಕಾಲವಲ್ಲ ಎನ್ನುವುದು ರೂಢಿಯಲ್ಲಿರುವ ಮಾತು. ಇದು ನಿಜವಾಗುವುದು ಇಂಥ ಬೆಳವಣಿಗೆಗಳಿಂದ. ತಮಗೆ ಟಿಕೆಟ್ ಸಿಗುವುದೆಂದು ನಂಬಿದ್ದ ಪಾಟೀಲರಿಗೆ ನಿರಾಕರಿಸಿರುವ ಹೈಕಮಾಂಡ್ ನಿರ್ಧಾರ ನಿಜಕ್ಕೂ ಅವರ ಪಾಲಿಗೆ ಸಿಡಿಲಾಘಾತ. ಆದರೆ ಅವರು ತಾಳ್ಮೆ ಕಳೆದುಕೊಂಡಿಲ್ಲ. ಯಾರನ್ನೆ ಆದರೂ ಟೀಕಿಸುವ ಚಾಳಿಗೆ ಹೋಗಲಿಲ್ಲ, ಬಂಡಾಯದ ಬಾವುಟ ಹಾರಿಸಲಿಲ್ಲ, ಸ್ವತಂತ್ರವಾಗಿ ಕಣಕ್ಕಿಳಿಯುವ ಮೂಲಕ ಪಕ್ಷದ ನಾಯಕತ್ವಕ್ಕೆ ಬುದ್ಧಿ ಕಲಿಸುವ ಮಾತಾಡಿಲ್ಲ. ಅವರು ಹೇಳಿದ್ದಿಷ್ಟೆ: “ಯಾಕಾಗಿ ನನಗೆ ಟಿಕೆಟ್ ನಿರಾಕರಿಸಲಾಗಿದೆಯೊ ಗೊತ್ತಿಲ್ಲ”.
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಯಾವುದೇ ಪಕ್ಷ, ಅಭ್ಯರ್ಥಿಯಾಗುವ ಸಾಧ್ಯತೆಯುಳ್ಳವರಿಗೆ ಟಿಕೆಟ್ ನಿರಾಕರಿಸುವುದಕ್ಕೆ ಒಂದಿಷ್ಟು ಕಾರಣಗಳಿರುತ್ತವೆ. ಒಂದು: ಟಿಕೆಟ್ ಕೊಟ್ಟರೂ ಗೆಲ್ಲುವ ಸಂಭವ ಕಡಿಮೆ ಇರುವುದು: ಎರಡು: ಹಣಬಲ, ಜಾತಿ ಬಲ ಇಲ್ಲವಾಗಿರುವುದು; ಮೂರು: ಹಿಂದಿನ ಸದಸ್ಯತ್ವದ ಅವಧಿಯಲ್ಲಿ ಪಕ್ಷಕ್ಕೆ ಒಳ್ಳೆ ಹೆಸರನ್ನು ತರುವ ಕೆಲಸ ಮಾಡದಿರುವುದು ಮತ್ತು ಮಾಡಿದ ಕೆಲಸದಿಂದ ಪಕ್ಷದ ವರ್ಚಸ್ಸಿಗೆ ಹಾನಿ ಆಗಿರುವುದು; ನಾಲ್ಕು: ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸದೆ ಇರುವ ಮೂಲಕ ಜನರಲ್ಲಿ ಅತೃಪ್ತಿ ಮೂಡಲು ಕಾರಣವಾಗಿರುವುದು; ಐದು: ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು; ಆರು: ಸಂಘಟನೆಯ ಬಲವೃದ್ಧಿಗೆ ಯಾವುದೆ ರೀತಿಯ ಕ್ರಿಯಾಶೀಲ ಯೋಜನೆ ರೂಪಿಸದಿರುವುದು; ಏಳು: ನಿಂತರೆ ಕೂರಲಾಗದ ಕೂತರೆ ಏಳಲಾಗದ ಅವಸ್ಥೆಯಲ್ಲಿರುವುದು… ಇವು ಕೆಲವು ಕಾರಣ ಮಾತ್ರ. ಇಂಥ ಇನ್ನೂ ಹತ್ತೆಂಟು ಕಾರಣಗಳೂ ಉಂಟು. ಈ ಮತ್ತಿನ್ನಿತರ ಯಾವ ಕಾರಣದಲ್ಲಿ ಪಾಟೀಲರು ಟಿಕೆಟ್ ನಿರಾಕರಣೆಗೆ ಕಾರಣವಾಗುವಷ್ಟು ಹಿಂದೆ ಬಿದ್ದರು…? ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಅವರ ಬೆಂಬಲಿಗರ ಪ್ರಶ್ನೆಗಳಿಗೆ ಉತ್ತರ ಪಕ್ಷದ ನಾಯಕತ್ವದಲ್ಲಂತೂ ಇರಲಿಕ್ಕಿಲ್ಲ. ಈಗ ಹೊರಕ್ಕೆ ಬಿದ್ದಿರುವ ಕಾರಣವೆಂದರೆ ಮಾಜಿ ಸಚಿವ ಹಾಲಿ ಶಾಸಕ ಎಂ.ಬಿ. ಪಾಟೀಲರ ಕಿರಿಯ ಸಹೋದರ ಸುನೀಲ ಪಾಟೀಲರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಎಸ್.ಆರ್.ಪಾಟೀಲರನ್ನು ಹರಕೆಯ ಕುರಿ ಮಾಡಲಾಗಿದೆ.
ಇದರ ಅರಿವು ಪಾಟೀಲರಿಗೆ ಇರಲಿಲ್ಲ. ಹಲವು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಅವರಿಗೆ ಹುದ್ದೆಯ ವ್ಯಾಮೋಹ ಇರಲಿಲ್ಲವೆಂದೇನೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂಪುಟದಲ್ಲಿ ಅವರು ಐಟಿಬಿಟಿ ಸಚಿವರಾಗಿದ್ದರು. ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲೂ ಪಾಟೀಲರದು ಅದೇ ಪಾತ್ರ. ಪಕ್ಷದ ಘನತೆ ಗೌರವಕ್ಕೆ ಕಿಂಚಿತ್ ಲೋಪವೂ ಬಾರದಂತೆ ತಾವು ನಿರ್ವಹಿಸಿದ ಹುದ್ದೆಯ ಘನತೆ ಗೌರವವನ್ನು ಕಾಪಾಡಿಕೊಂಡ ವ್ಯಕ್ತಿತ್ವ ಪಾಟೀಲರದು. ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳದ ತಟವಟವಿಲ್ಲದ ಅವರ ವ್ಯಕ್ತಿತ್ವವೆ ಅವರಿಗೆ ಮುಳುವಾಯಿತೆ…? ಇರಬಹುದೋ ಏನೋ, ಖಚಿತವಾಗಿ ಗೊತ್ತಿಲ್ಲ. ಮೂಲತಃ ಪಾಟೀಲರು ರಾಜಕಾರಣಿಯೆ ಹೊರತು ಒಂದಾನೊಂದು ಕಾಲದಲ್ಲಿರುತ್ತಿದ್ದರು ಎನ್ನಲಾದ ಸನ್ಯಾಸಿಗಳಂತಲ್ಲ. ತಮಗೆ ಕೈ ಕೊಡಲಾರರು ಎನ್ನುವುದು ಕೈ ಪಕ್ಷದ ಮೇಲೆ ಅವರಿಗಿದ್ದ ವಿಶ್ವಾಸ,ಭರವಸೆ. ಅದೀಗ ನುಚ್ಚು ನೂರಾಗಿದ್ದು ವಾಸ್ತವ. ಈ ಬಾರಿ ನಿಮಗೆ ಟಿಕೆಟ್ ಕೊಡೋಲ್ಲ ಸಹಕರಿಸಿ ಎಂದಿದ್ದರೆ ಪಾಟೀಲರು ವಿರೋಧ ಮಾಡುತ್ತಿರಲಿಲ್ಲ ಎನ್ನುವುದು ಎಲ್ಲ ಬಲ್ಲ ಸಂಗತಿ. ಹೀಗಿದ್ದೂ ಅವರ ಮೂಗಿಗೆ ತುಪ್ಪ ಸವರುವ ಯತ್ನ ನಡೆಯಿತೇಕೆ…? .
ಯಾಕಾಗಿ ಪಾಟೀಲರಿಗೆ ಟಿಕೆಟ್ ತಪ್ಪಿರಬಹುದು…? ಚರ್ಚೆ ಮಾಡುವುದು ತಪ್ಪಲ್ಲ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಇರುವಾಗ ಕೆಲವೆ ಕೆಲವರು ಅಧಿಕಾರದ ಸ್ಥಾನಗಳಲ್ಲಿ ಗೂಟ ಹೊಡೆದುಕೊಂಡವರಂತೆ ಮುಂದುವರಿಯುವುದು ಸರಿಯಲ್ಲ ಎಂಬ ವಾದ ಒಪ್ಪುವಂತಹುದೇನೊ ಹೌದು. ಆದರೆ ಪಾಟೀಲರಿಗೆ ಟಿಕೆಟ್ ತಪ್ಪಿಸಿದ ವರಿಷ್ಟರು ಕೊಟ್ಟಿದ್ದಾದರೂ ಯಾರಿಗೆ…? ಅನಾಮಧೇಯ ಕಾರ್ಯಕರ್ತರಿಗೆ ಕೊಟ್ಟರೆ…? ಹಾಗೇನೂ ಇಲ್ಲವಲ್ಲ. ಕಾಂಗ್ರೆಸ್ನ ಸರ್ವಶಕ್ತ ರಾಜಕಾರಣಿಗಳಲ್ಲಿ ಎಂ.ಬಿ. ಪಾಟೀಲರು ಒಬ್ಬರು. ಮೂರೂವರೆ ವರ್ಷದ ಹಿಂದೆ ರಾಜ್ಯ ವಿಧಾನ ಸಭೆ ಚುನಾವಣೆ ನಡೆದಾಗ ಏಐಸಿಸಿ (ಹಂಗಾಮಿ) ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣಾ ಪ್ರಚಾರ ಭಾಷಣ ಮಾಡಿದ್ದು ಪಾಟೀಲರು ಕಣದಲ್ಲಿದ್ದ ಬಬಲೇಶ್ವರ ಕ್ಷೇತ್ರದಲ್ಲಿ ಮಾತ್ರ. ೨೨೪ ಸ್ಥಾನಗಳ ಪೈಕಿ ಅವರು ಪ್ರಚಾರಕ್ಕೆ ಬಂದುದು ಸಾರ್ವಕನಿಕ ಸಭೆಯಲ್ಲಿ ಪ್ರಚಾರ ಭಾಷಣ ಮಾಡಿದ್ದು ಎಂ.ಬಿ.ಪಾಟೀಲರಿಗಾಗಿ ಮಾತ್ರ.
ಎಂಬಿ ಪಾಟೀಲರು ಅಷ್ಟು ಪ್ರಭಾವಿ ರಾಜಕಾರಣಿ ಆಗಿರುವಾಗ ಅವರ ಸಹೋದರನಿಗೆ ಟಿಕೆಟ್ ಸಿಕ್ಕಿದ್ದು ಅರ್ಥವಾಗುವ ಬೆಳವಣಿಗೆ. ಈ ಬೆಳವಣಿಗೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ “ಪಕ್ಷಕ್ಕೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ತೆಗೆದುಕೊಂಡ ನಿರ್ಣಯ ಇದು” ಎಂದು ಸಮರ್ಥಿಸಿಕೊಳ್ಳುತ್ತಾರೆ. ಡಿಕೆಶಿ ಅಸಹಾಯಕತೆ ಅರ್ಥವಾಗುತ್ತದೆ. ಹೈಕಮಾಂಡ್ ತೀರ್ಮಾನದ ವಿರುದ್ಧ ಅವರು ಹೋಗುವುದಾದರೂ ಹೇಗೆ…? ಡಿಕೆಶಿ ಆಡಿರುವ ಮಾತನ್ನು ನಂಬಬಹುದಾದರೆ ಎಂ.ಬಿ. ಪಾಟೀಲರ ಕಡೆಯಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಎಸ್.ಆರ್.ಪಾಟೀಲರ ಕಡೆಯಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ ಎಂಬ ಅರ್ಥ ಬರುವುದಿಲ್ಲವೆ…? ಮುಂದೆ ಮುಖ್ಯಮಂತ್ರಿ ಆಗಬೇಕೆಂಬ ಏಕೈಕ ಛಲದೊಂದಿಗೆ ಮುನ್ನುಗ್ಗುತ್ತಿರುವ ಡಿಕೆಶಿಯವರೆ ಈ ಒಗಟನ್ನು ಒಡೆಯಬೇಕು.
ಪಕ್ಷದ ಉನ್ನತ ಮಟ್ಟದಿಂದ ಎಸಾರ್.ಪಾಟೀಲರಿಗೆ ಅಸಮಾಧಾನ ತರುವ ಬೆಳವಣಿಗೆ ಆಗಿರುವುದು ಇದೇ ಮೊದಲೇನೂ ಅಲ್ಲ. ಹಿಂದೆ ಅವರು ಐಟಿಬಿಟಿ ಸಚಿವರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ವಿವರಣೆ ಇಲ್ಲದೆ ಪಾಟೀಲರ ರಾಜೀನಾಮೆ ಪಡೆದರು. ಮುಖ್ಯಮಂತ್ರಿ ಕೇಳಿದಾಗ ಒಂದರೆಕ್ಷಣವೂ ವಿಚಲಿತರಾಗದ ಪಾಟೀಲರು ರಾಜೀನಾಮೆ ಕೊಟ್ಟು ಕೈತೊಳೆದುಕೊಂಡರು. ಆಗ ಸಿದ್ದರಾಮಯ್ಯ ಆಡಿದ ಮಾತು: “ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಪಾಟೀಲರನ್ನು ನೇಮಕ ಮಾಡಲಾಗುವುದು”. ಆ ನೇಮಕಾತಿ ಬರಲೇ ಇಲ್ಲ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಇದ್ದ ಡಾ.ಜಿ.ಪರಮೇಶ್ವರರ ಬಳಿಕ ಆ ಗಾದಿಗೆ ಬಂದಿದ್ದು ದಿನೇಶ ಗುಂಡೂರಾವ್. ಎಸ್.ಆರ್.ಪಾಟೀಲರ ಮೂಗಿಗೆ ಸಿದ್ದರಾಮಯ್ಯ ಸವರಿದ್ದ ತುಪ್ಪ ಅಲ್ಲೇ ಇಂಗಿ ಹೋಯಿತು. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸರ್ಕಾರ ಬಂದಾಗ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಕಾಂಗ್ರೆಸ್ ಕೋಟಾ ಭಾಗವಾಗಿ ಎಸ್ಸಾರ್ ಪಾಟೀಲರ ಹೆಸರು ತೇಲಿತ್ತು. ಆದರೆ ತೇಲಿದ ಹೆಸರು ಹಾಗೇ ಗಾಳಿಯಲ್ಲಿ ಹೋಯಿತು.
ಇದೀಗ ಮತ್ತೊಂದು ಅವಧಿಗೆ ಎಂಎಲ್ಸಿಯಾಗುವ ಮಾತೂ ಚಲಾವಣೆ ಕಳೆದುಕೊಂಡಿದೆ. ಇದಕ್ಕೆ ಇನ್ನೂ ಒಂದು ಕಾರಣವಿದೆ ಎಂದು ಆ ಪಕ್ಷದವರೆ ಕೆಲವರು ಪಿಸುಮಾತಿನಲ್ಲಿ ಹೇಳುತ್ತಾರೆ. ದಶಕಕ್ಕೂ ಹೆಚ್ಚು ಕಾಲ ರಾಜ್ಯಸಭೆಯ ಸದಸ್ಯರಾಗಿದ್ದು ಹೈಕಮಾಂಡಿಗೆ ಬಹಳ ಹತ್ತಿರದಲ್ಲಿರುವ ಮತ್ತು ದೆಹಲಿ ರಾಜಕೀಯದ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುವ ಬಿ.ಕೆ. ಹರಿಪ್ರಸಾದ್ ಈಗ ಮೇಲ್ಮನೆಯ ಸದಸ್ಯ. ಹರಿಪ್ರಸಾದ್ರಿಗೆ ವಿರೋಧ ಪಕ್ಷದ ನಾಯಕನಾಗುವ ತುಡಿತವಿದೆ. ಆದರೆ ಪಾಟೀಲರಂಥ ಹಿರಿಯ ಸದಸ್ಯರು ಇರುವಾಗ ಯಾವುದೆ ಬಲವತ್ತರವಾದ ಕಾರಣ ಇಲ್ಲದೆ ಅವರಿಗೆ ಸ್ಥಾನವಂಚಿಸಿ ಕಿರಿಯ ಸದಸ್ಯರನ್ನು ಅಲ್ಲಿ ಕುಳ್ಳಿರಿಸುವುದು ಸಂಘಟನೆಯೊಳಗೆ ಕಿರಿಕಿರಿಯ ಬೆಳವಣಿಗೆ. ಸ್ಪರ್ಧೆಗೆ ಅವಕಾಶವೆ ಇಲ್ಲದಂತೆ ಮಾಡಿದರೆ ಹೇಗೆ ಎಂಬ ತರ್ಕದಲ್ಲಿ ಪಾಟೀಲರಿಗೆ ಕೈಕೊಡಲಾಗಿದೆ ಎಂದು ಅವರ ಆಪ್ತರು ವಿಶ್ಲೇಷಿಸುತ್ತಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಗಮನಿಸಿದರೆ ಯಾಕಿರಬಾರದು ಎನಿಸುತ್ತದೆ.
ಈ ತರ್ಕ ಇಲ್ಲಿಗೇ ನಿಲ್ಲುವುದಿಲ್ಲ. ೨೦೨೩ರರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ಸು ಬಂದಿದೆ. ಕಾಂಗ್ರೆಸ್ಗೆ ಬಹುಮತ ಒಲಿದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಹುದ್ದೆಗೆ ಪೈಪೋಟಿ ಬೆಳೆಯಲಿದೆ. ಆ ಪೈಪೋಟಿಯ ರಾಗಾಲಾಪ ಈಗಾಗಲೇ ಶುರುವಾಗಿದೆ. ಚುನಾವಣೆ ಹೊತ್ತಿಗೆ ಷಡ್ಜದಿಂದ ಅದು ತಾರಕಕ್ಕೆ ಏರುತ್ತದೆ. ಸರ್ಕಾರವನ್ನು ಸಿದ್ದರಾಮಯ್ಯ, ಡಿಕೆಶಿ ಅಥವಾ ಬೇರೆ ಯಾರೇ ರಚಿಸಿದರೂ ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಹುದ್ದೆ ಗ್ಯಾರಂಟಿ. ಆ ಸಮಯದಲ್ಲಿ ಎಸ್ಸಾರ್ ಪಾಟೀಲರಿದ್ದರೆ ಅವರು ಮಂತ್ರಿಯಾಗುತ್ತಾರೆ. ಅವರಲ್ಲದೆ ಇನ್ಯಾರೇ ವಿರೋಧ ಪಕ್ಷದ ನಾಯಕರಾಗಿದ್ದರೂ ಅವರೇ ಸಚಿವರಾಗುತ್ತಾರೆ. “ಇನ್ಯಾರೇ ಇದ್ದರೂ” ಎನ್ನುವುದು ಕೇವಲ ಎರಡು ಶಬ್ದ ಮಾತ್ರವೇ ಆಗಿ ಉಳಿದಿಲ್ಲ. ಅದೊಂದು ಸ್ಟೇಕು. ಡಿವಿಡೆಂಡ್ ನಿರೀಕ್ಷೆಯಲ್ಲಿ ಈಗಿನಿಂದಲೆ ಹೂಡಿಕೆ.
ಪಾಟೀಲರನ್ನು ಹಾಗೇ (ಕೈ) ಬಿಡುವುದಿಲ್ಲ, ಅವರನ್ನು ಪಕ್ಷ ಘನ ಹುದ್ದೆಯಲ್ಲಿ ಬಳಸಿಕೊಳ್ಳುತ್ತದೆಂಬ ಮತ್ತೆ ಎಸ್ಸಾರ್.ಪಾಟೀಲರ ಮೂಗಿಗೆ ತುಪ್ಪ ಸವರುವ ಮತ್ತೊಂದು ಮಾತನ್ನು ಡಿ.ಕೆ. ಶಿವಕುಮಾರ್ ಆಡಿದ್ದಾರೆ. ಪಾಟೀಲರಿಗೆ ಆ ಮಾತಿನಲ್ಲಿ ಎಷ್ಟರಮಟ್ಟಿಗಿನ ನಂಬಿಕೆ ಇದೆಯೊ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ತೀರಾ ಹತ್ತಿರದಲ್ಲಿರುವ ಪಾಟೀಲರು ತಮ್ಮ ನಾಯಕನಿಂದ ಒಂದಿಷ್ಟು ಬೆಂಬಲ ನಿರೀಕ್ಷಿಸಿದ್ದರು. ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಗಪ್ಚುಪ್ ಆಗಿದ್ದರು. ಇದನ್ನು “ಅವರಿಗೆ (ಸಿದ್ದರಾಮಯ್ಯನವರಿಗೆ) ಏನು ಕೆಲಸವಿತ್ತೋ ಏನೊ” ಎಂದು ಎಸ್ಸಾರ್ ಪಾಟೀಲರು ಅನುಮಾನಿಸಿದ್ದಾರೆ. ಈ ಮಾತಿನಲ್ಲಿರುವ ವ್ಯಂಗ್ಯವನ್ನು ಗಮನಿಸಬೇಕು. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ೩೬ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಾದಾಮಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಅಲ್ಲಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದರು. ಆಗ ಅವರಿಗೆ ಬಹುದೊಡ್ಡ ಬೆಂಬಲವಿತ್ತು ಗೆಲುವಿಗೆ ಕಾರಣರಾದವರಲ್ಲಿ ಎಸ್ಸಾರ್ ಪಾಟೀಲರು ಪ್ರಮುಖರು. ಅದು ಸಿದ್ದರಾಮಯ್ಯನವರಿಗೆ ಮರೆತು ಹೋಗಿರಬಹುದೇ ಎಂಬ ಸಂದೇಹ ಪಾಟೀಲರಲ್ಲಿದ್ದರೆ ಅದಕ್ಕೆ ಹೊಣೆ ಯಾರು…?
ಪಾಟೀಲರಿಗೆ ಆಗಿರುವ ರಾಜಕೀಯ ಅನ್ಯಾಯಕ್ಕೆ ಇನ್ನೊಂದು ಕಾರಣವೂ ಇದೆ. ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯನವರ ಜೊತೆಗೆ ಗುರುತಿಸಿಕೊಂಡಿರುವ ರಾಜಕಾರಣಿಗಳಲ್ಲಿ ಎಸ್ಸಾರ್. ಪಾಟೀಲರೂ ಒಬ್ಬರು. ಅವರನ್ನು ವಿಧಾನ ಪರಿಷತ್ನಿಂದ ದೂರ ಇಡುವ ಮೂಲಕ ಸಿದ್ದರಾಮಯ್ಯನವರ ಬಲವನ್ನು ಒಂದಿಷ್ಟಾದರೂ ಕುಗ್ಗಿಸುವುದು ಸಾಧ್ಯವೇ ಎಂಬ ಪ್ರಯೋಗವೂ ಇಲ್ಲಿ ನಡೆದಿರುವಂತಿದೆ. ಸತ್ಯ ಹೊರಕ್ಕೆ ಬರುವುದು ತಡವಾಗಬಹುದು. ಆದರೆ ಅದನ್ನು ತಡೆಯಲಾಗದು. ನೋಡೋಣ.