ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು

Share

ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು

 

“ಡಾಕ್ಟ್ರೇ, ಈ ಜನ ಬಾಯಿ ಕಟ್ಟುವುದಿಲ್ಲ ಸಿಕ್ಕಸಿಕ್ಕಿದ್ದು ತಿಂದು, ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದೆ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ಪರಿಸ್ಥಿತಿ ತೀರಾ ಬಿಗಡಾಯಿಸಿದಾಗ ಮಾತ್ರ ಆಸ್ಪತ್ರೆಗೆ ಓಡಿ ಬರುತ್ತಾರೆ. ಇಂತಹವರಿಗೆ ಎಂತಹ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ” ಎಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾಕ್ಟರ್ ಶಿವಶಂಕರ ಮೋಟೆಬೆನ್ನೂರ ಅವರ ಟೇಬಲ್ ಎದುರಿಗಿದ್ದ ಮರದ ಕುರ್ಚಿಯೊಂದರಲ್ಲಿ ಪೂರ್ತಿ ಹಿಂದಕ್ಕೆ ಒರಗಿದಂತೆ ಕುಳಿತು ಕಾಲುಗಳನ್ನು ನೀಳವಾಗಿ ಚಾಚಿ, ಮೂಗಿನ ತುದಿಗೆ ಬಂದು ಯಾವ ಕ್ಷಣದಲ್ಲಾದರೂ ಜಾರಿಬೀಳುವಂತೆ ತೋರುತ್ತಿದ್ದ ಸೋಡಾಗ್ಲಾಸಿನ ಕನ್ನಡಕದ ಮೇಲ್ಭಾಗದಿಂದ ಡಾಕ್ಟರನ್ನು ಉದ್ದೇಶಿಸಿ ನುಡಿಯತೊಡಗಿದ ತಿಪ್ಪೇರುದ್ರಪ್ಪ ಮೇಷ್ಟ್ರ ಮಾತುಗಳಿಗೆ ಬೆನ್ನುಬಿದ್ದು ಕಾಡುತ್ತಿರುವ ಮಧುಮೇಹ ರೋಗಕ್ಕೆ ಹೈರಾಣಾಗಿ, ಅತೀವ ನಿತ್ರಾಣದಿಂದ ಎದ್ದು ನಿಲ್ಲಲೂ ಆಗದಂತೆ ದೇಹವನ್ನು ಹಿಡಿಯಷ್ಟಾಗಿಸಿ ಕುಕ್ಕುರಗಾಲಿನಲ್ಲಿ ನೆಲದ ಮೇಲೆ ಕೂತಿದ್ದ ಬೈಲುಗಮ್ಮಾರ, ನನ್ನ ಸಹಪಾಠಿ ಗುರುಮೂರ್ತಿಯ ತಂದೆ, ಹೌಹಾರಿದವನಾಗಿ ತನ್ನನ್ನು ಆಸ್ಪತ್ರೆಗೆ ತಂದ ಹೆಂಡತಿ ರತ್ನಮ್ಮನತ್ತ ಹತ್ತಾರು ಬಗೆಯ ಭಾವನೆಗಳಿಂದ ಕೂಡಿದ ಒದ್ದೆಯ ಕಣ್ಣುಗಳಲ್ಲಿ ದೈನೇಸಿಯಂತೆ ನೋಡತೊಡಗಿದ್ದು ದವಾಖಾನೆಗೆ ಮೂರು ದಿನಗಳಿಂದ ಬಿಟ್ಟೂ ಬಿಡದೆ ಕಾಡುತ್ತಿದ್ದ ಮಲಬೇಧಿಯ ದೆಸೆಯಿಂದಾಗಿ ಅವ್ವನೊಟ್ಟಿಗೆ ಬಂದ ನನ್ನ ಎಳೆಯಕಣ್ಣುಗಳನ್ನು ತಪ್ಪಿಸಲಾಗಲಿಲ್ಲ.

“ಏನಪ್ಪಾ, ಹೋದಸಲ ಬಂದಾಗಲೇ ನಿನಗೆ ತಿಳಿಹೇಳಿದ್ದೆ, ಸಕ್ಕರೆಕಾಯಿಲೆ ಒಮ್ಮೆ ಬಂದರೆ ಹೋಗುವುದಿಲ್ಲ. ಜೀವನ ಪರ್ಯಂತ ಕಾಡುತ್ತದೆ. ನಮ್ಮ ಜೀವನ ಶೈಲಿಯ ಸುಧಾರಣೆಯಿಂದ ಮಾತ್ರವೇ ಈ ರೋಗವನ್ನು ಹದ್ದುಬಸ್ತಿನಲ್ಲಿ ಇಡಬಹುದು. ನೀನು ಪಥ್ಯವನ್ನು ಏಕೆ ಮಾಡುವುದಿಲ್ಲ? ಸಮಯಕ್ಕೆ ಸರಿಯಾಗಿ ಔಷಧಿಯನ್ನು ಏಕೆ ತೆಗೆದುಕೊಳ್ಳುವುದಿಲ್ಲ?” ಎಂದು ಡಾಕ್ಟರ್ ರೋಗಿಯ ಮೇಲೆ ಹರಿಹಾಯುವ ವೇಳೆಗೆ ಬೈಲುಗಮ್ಮಾರನ ಹೆಂಡತಿ ಗಂಡನ ಪರವಾಗಿ ನಿಂತಳು. “ಹಾಗೇನೂ ಇಲ್ಲ ಡಾಕ್ಟರ್, ನಮ್ಮ ಮನೆಯವರು ಕಟ್ಟುನಿಟ್ಟಾದ ಪಥ್ಯವನ್ನು ಮಾಡುತ್ತಾರೆ ಮತ್ತು ನಿಗದಿಯಾದ ಸಮಯಕ್ಕೆ ಬಿಡದೆ ಔಷಧ ತೆಗೆದುಕೊಳ್ಳುತ್ತಾರೆ” ಎಂದು ತನ್ನ ಮಾತನ್ನು ಮುಗಿಸುವ ಮುನ್ನವೇ “ಅಲ್ಲವ್ವಾ, ಹಾಗಾದರೆ ನಿನ್ನ ಗಂಡ ಸಕ್ಕರೆಕಾಯಿಲೆಯಿಂದ ಇಷ್ಟೊಂದು ಏಕೆ ಬಳಲುತ್ತಿದ್ದಾನೆ? ಪಥ್ಯ, ಔಷಧ ಎಲ್ಲಾ ಸರಿಯಾಗಿ ಮಾಡುತ್ತಿದ್ದಾನೆ ಎಂದರೆ ದೇಹದಲ್ಲಿ ಸಕ್ಕರೆ ಅಂಶ ಈ ಮಟ್ಟಕ್ಕೆ ಏಕೆ ಏರುತ್ತದೆ?” ಎನ್ನುವ ಮೇಷ್ಟ್ರ ಪಾಟೀಸವಾಲಿಗೆ ರತ್ನಮ್ಮ ಬಳಿ ಉತ್ತರವಿದ್ದಂತೆ ತೋರಲಿಲ್ಲ.

“ಆಯ್ತು, ನಿನ್ನ ಗಂಡನ ರಕ್ತವನ್ನು ಪರೀಕ್ಷೆಗಾಗಿ ಕಾಂಪೌಂಡರ್ ಗೆ ಕೊಟ್ಟು ಹೋಗು, ದುರ್ಗಕ್ಕೆ ಕಳುಹಿಸಿ, ಮುಂದಿನವಾರ, ರಕ್ತಪರೀಕ್ಷೆಯ ಫಲಿತಾಂಶ ಬಂದ ನಂತರ ಈಗ ನಿನ್ನ ಗಂಡ ತೆಗೆದುಕೊಳ್ಳುತ್ತಿರುವ ಔಷಧಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕೆ ನೋಡೋಣ, ಈಗ ಸದ್ಯ ಒಂದು ಚುಚ್ಚುಮದ್ದು ಕೊಡುತ್ತೇನೆ, ದೇಹದಲ್ಲಿನ ಸಕ್ಕರೆ ಅಂಶವನ್ನು ಇದು ಶೀಘ್ರ ಕಡಿಮೆಮಾಡಿ ಸುಸ್ತು ಕಡಿಮೆಗೊಳಿಸುತ್ತದೆ” ಎಂದು ನರ್ಸ್, ನನ್ನ ಮತ್ತೋರ್ವ ಸಹಪಾಠಿ ಮಹಾರುದ್ರನ ತಾಯಿ, ಶಿವಲಿಂಗಮ್ಮನನ್ನು ಕರೆದು ಯಾವ ಇಂಜೆಕ್ಷನ್ ಕೊಡಬೇಕು ಎನ್ನುವ ಮಾಹಿತಿಯನ್ನು ಡಾಕ್ಟರ್ ಶಿವಶಂಕರ್ ಕೊಡುವ ಮಧ್ಯದಲ್ಲಿಯೇ ಮತ್ತೊಮ್ಮೆ ಬಾಯಿ ಹಾಕಿದ ತಿಪ್ಪೇರುದ್ರಪ್ಪ ಮೇಷ್ಟ್ರು, “ಅಯ್ಯೋ ಡಾಕ್ಟರ್, ಇದಕ್ಯಾಕೆ ಸುಮ್ಮಸುಮ್ಮನೆ ಇಂಜೆಕ್ಷನ್ ಕೊಡುತ್ತೀರಿ? ಒಂದೆರೆಡು ಗುಳಿಗೆ ಬರೆದುಕೊಡಿ, ಶೆಟ್ಟರ ಸುಬ್ಬಣ್ಣನ ಅಂಗಡಿಯಲ್ಲಿ ತೆಗೆದುಕೊಂಡು ತಿನ್ನಲಿ, ಎಲ್ಲಾ ಸರಿ ಹೋಗುತ್ತದೆ. ಊರಲ್ಲಿ ಸಕ್ಕರೆ ಕಾಯಿಲೆ ಇರುವ ರೋಗಿಗಳು ಹೆಚ್ಚಿದ್ದಾರೆ, ಅವರಲ್ಲಿ ಯಾರಿಗಾದರೂ ಆರೋಗ್ಯ ಬಿಗಡಾಯಿಸಿ ಮೆಡಿಕಲ್ ಎಮರ್ಜೆನ್ಸಿ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ನೀವು ದಾಸ್ತಾನು ಮಾಡಿಟ್ಟಿರುವ ಇಂಜೆಕ್ಷನ್ ಗಳು ಪ್ರಯೋಜನಕ್ಕೆ ಬಂದಾವು” ಎನ್ನುವ ತಜ್ಞ ಅಭಿಪ್ರಾಯವನ್ನು ಹೊರಹಾಕಲು ಇಕ್ಕಟ್ಟಿಗೆ ಸಿಕ್ಕಿದ ಡಾಕ್ಟರ್ “ಏನಮ್ಮಾ, ನಿನ್ನ ಗಂಡನಿಗೆ ಸದ್ಯ ಒಂದು ಗುಳಿಗೆಯನ್ನು ಬರೆದುಕೊಡುತ್ತೇನೆ. ಪ್ರತಿ ಊಟದ ಮೊದಲು ತಪ್ಪದೇ ಎರಡೆರಡು ಮಾತ್ರೆಗಳನ್ನ ತಿನ್ನಿಸು” ಎಂದು ಪ್ರಿಸ್ಕ್ರಿಪ್ಷನ್ ಬರೆಯಲು ಮೊದಲಾದರು. “ಡಾಕ್ಟ್ರೇ, ದಯವಿಟ್ಟು ನಿಮ್ಮ ಬಳಿ ಮಾತ್ರೆಗಳಿದ್ದರೆ ಕೊಡಿ, ಅಂಗಡಿಯಲ್ಲಿ ಗುಳಿಗೆಗಳ ರೇಟು ಬಹಳ” ಎಂದು ಅಂಗಲಾಚುವ ಧ್ವನಿಯಲ್ಲಿ ರತ್ನಮ್ಮ ಬೇಡಲು “ಇಲ್ಲವ್ವಾ, ಈ ಗುಳಿಗೆಗಳು ಅಂತಹ ದುಬಾರಿಯೇನಲ್ಲ, ಇವು ಆಸ್ಪತ್ರೆಯಲ್ಲಿ ದೊರೆಯುವುದಿಲ್ಲ, ಸುಬ್ಬಣ್ಣನ ಅಂಗಡಿಯಲ್ಲಿ ಉಚಿತ ದರದಲ್ಲಿ ಸಿಗುತ್ತವೆ. ಹೋಗಿಕೊಂಡುಕೋ” ಎಂದು ಮೇಷ್ಟ್ರು ಉಲಿಯಲು “ಸಾಹೇಬ್ರೆ, ಗುಳಿಗೆಗಳಿಗೆ ಎಷ್ಟಾದೀತು?” ಎನ್ನುವ ಪ್ರಶ್ನೆಯನ್ನು ಗುರುಮೂರ್ತಿಯ ತಾಯಿ ಮಾಡಿದರು.

 

“ಹೆಚ್ಚೆಂದರೆ ಹತ್ತುಹನ್ನೆರೆಡು ರೂಪಾಯಿ ಆದೀತು” ಎನ್ನುವ ಡಾಕ್ಟರ್ ಸಮಜಾಯಿಷಿಗೆ ರತ್ನಮ್ಮ ಹೌಹಾರಿದರು. ಹತ್ತುಹನ್ನೆರಡು ರೂಪಾಯಿಗಳನ್ನು ಸಂಪಾದಿಸಲಿಕ್ಕೆ ಮೂರು ದಿನಗಳ ಕಾಲ ಜಯವಾಣಿ ಟೂರಿಂಗ್ ಟಾಕೀಸ್ ಎದರುಗಡೆ ಮೆಣಸಿನಕಾಯಿ, ಅತಿಕಾಯಿ, ಆಲೂಗಡ್ಡೆ ಬಜ್ಜಿ ಮಾಡಿ ಮಾರಬೇಕು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ ಆ ಹೆಂಗಸಿನ ಚಿಂತೆಗೆ “ಚೀಟಿ ತಗೊಳ್ಳಮ್ಮ, ಗಂಡನನ್ನು ಸರಿಯಾಗಿ ಆರೈಕೆಮಾಡು, ತುಂಬಾ ನಿತ್ರಾಣನಾದಂತೆ ತೋರುತ್ತಾನೆ” ಎನ್ನುವ ಡಾಕ್ಟರ್ ಮಾತುಗಳು ಬ್ರೇಕ್ ಹಾಕಿದವು. ಡಾಕ್ಟರ್ ಬರೆದ ಚೀಟಿಯನ್ನು ಕೈಯಲ್ಲಿ ಹಿಡಿದು ನೆಲದಿಂದ ಗಂಡನನ್ನು ಎತ್ತಲು ಹರಸಾಹಸ ಮಾಡತೊಡಗಿದ ರತ್ನಮ್ಮನಿಗೆ ನನ್ನ ಅವ್ವ ಆತನನ್ನು ಎದ್ದೇಳಿಸಿ ನಿಲ್ಲಿಸುವಲ್ಲಿ ಆಸರೆಯಾದಳು. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಹೆಂಡತಿಯ ಭುಜದ ಆಸರೆಯಲ್ಲಿ ಕುಂಟುತ್ತಲೇ ಆಸ್ಪತ್ರೆಯ ತಲೆಬಾಗಿಲು ಸಮೀಪಿಸಿದ ರೋಗಿಯ ಹೆಂಡತಿಯ ಕೈಗೆ ಆಸ್ಪತ್ರೆಯ ಹಜಾರದಲ್ಲಿದ್ದ ಔಷಧ ಉಗ್ರಾಣದಿಂದ ಸಣ್ಣಕಾಗದದ ಕವರ್ ಒಂದರಲ್ಲಿ ಮಾತ್ರೆಗಳನ್ನು ಇಟ್ಟುಕೊಟ್ಟ ನರ್ಸ್ ಶಿವಲಿಂಗಮ್ಮ “ರತ್ನಮ್ಮ, ನಿನ್ನ ಗಂಡನಿಗೆ ನೀನೇನೂ ಮಾತ್ರೆ ಕೊಳ್ಳಬೇಡ, ಆತನಿಗೆ ಡಾಕ್ಟರ್ ಬರೆದುಕೊಟ್ಟಷ್ಟು ಮಾತ್ರೆಗಳನ್ನು ಕೊಟ್ಟಿದ್ದೇನೆ. ಇನ್ನೂ ಏನಾದರೂ ಔಷಧಗಳ ಅಗತ್ಯ ಬಿದ್ದಲ್ಲಿ ನಿನ್ನ ಮಗನನ್ನು ಕಳುಹಿಸು” ಎಂದು ನುಡಿದ ಮಾತುಗಳನ್ನು ಕೇಳಿ ರತ್ನಮ್ಮನಿಗೆ ಹೋದ ಪ್ರಾಣ ಮರಳಿ ಬಂದ ಹಾಗಾಯಿತು.

ತನ್ನ ಮೂರು ದಿನಗಳ ಪರಿಶ್ರಮಕ್ಕೆ ಬೆಲೆ ಕಟ್ಟಿದ ಶಿವಲಿಂಗಮ್ಮನಿಗೆ ಯಾವ ರೀತಿಯಲ್ಲಿ ಕೃತಜ್ಞತೆಗಳನ್ನ ಸಂದಾಯ ಮಾಡಬೇಕು ಎನ್ನುವುದನ್ನು ಅರಿಯದ ರತ್ನಮ್ಮ ಸಕಾಲದಲ್ಲಿ ನೆರವಿಗೆ ಬಂದ ಶಿವಲಿಂಗಮ್ಮನ ಕೈಯನ್ನು ಮೃದುವಾಗಿ ಸವರುವುದರ ಮೂಲಕ ಋಣಸಂದಾಯ ಮಾಡಿದಳು.

“ಈ ಹುಡುಗರು ಸಿಕ್ಕಾಪಟ್ಟೆ ತಿಂದುಬಿಡುತ್ತಾವೆ. ಮೊನ್ನೆ ಬೇರೆ ನಾಗರಪಂಚಮಿ ಹಬ್ಬವಾಗಿದೆ, ಮನೆಯಲ್ಲಿ ಮಾಡಿದ ಉಂಡೆಗಳನ್ನು ಅರಿವಿಲ್ಲದೆ ತಿಂದು ಹೊಟ್ಟೆನೋವು, ಬೇಧಿ ಅಂತ ಆಸ್ಪತ್ರೆಗೆ ಅಲೆದಾಡುತ್ತವೆ” ಎಂದು ಮೇಷ್ಟ್ರು ನನ್ನ ಅವ್ವ ಡಾಕ್ಟರ್ ಮುಂದೆ ನನ್ನ ತೊಂದರೆಗಳನ್ನು ಪಟ್ಟಿಮಾಡತೊಡಗಿದಾಗ ನುಡಿದರು. “ಹೌದೇನೋ, ಹಬ್ಬದ ಉಂಡೆಗಳನ್ನು ಅಷ್ಟೊಂದು ಪ್ರಮಾಣದಲ್ಲಿ ತಿಂದೆಯಾ?” ಎನ್ನುವ ಡಾಕ್ಟರ್ ಪ್ರಶ್ನೆಗೆ ಗಲಿಬಿಲಿಗೊಂಡ ನಾನು ಏನೂ ಉತ್ತರ ಕೊಡದೆ ತಲೆತಗ್ಗಿಸಿದೆ. “ಹಾಗೇನೂ ಇಲ್ಲ ಡಾಕ್ಟ್ರೇ, ಇವನಿಗೆ ಸಿಹಿ ಅಷ್ಟು ಇಷ್ಟ ಆಗುವುದಿಲ್ಲ, ಒಂದೋ ಎರಡೋ ಉಂಡೆ ತಿಂದಿರಬೇಕಷ್ಟೇ” ಎನ್ನುವ ನನ್ನ ಅವ್ವನ ಉತ್ತರಕ್ಕೆ “ಆಲ್ಲವ್ವಾ ಗೌರಕ್ಕ, ನೀನು ಇವನು ನಿಮ್ಮ ಮನೆಯಲ್ಲಿ ತಿಂದಿರುವ ಉಂಡೆಗಳ ಲೆಕ್ಕ ಮಾತ್ರ ಕೊಡುತ್ತಿದ್ದೀಯ, ಇವನ ತಾತ ವಿರುಪಣ್ಣಗೌಡ್ರ ಮನೆಯಲ್ಲಿ ತಿಂದ ಉಂಡೆಗಳ ಲೆಕ್ಕ ಕೊಡುವವರು ಯಾರು? ಚೆಡ್ಡಿ, ಅಂಗಿ ಜೇಬಿಗಳ ತುಂಬಾ ಉಂಡೆಗಳನ್ನು ತುರುಕಿಕೊಂಡು ಬಸವಲಿಂಗನ ಜೊತೆ ಆಡಲಿಕ್ಕೆ ನಮ್ಮ ಮನೆಗೆ ಬಂದಿದ್ದ ಇವನನ್ನು ನಾನೇ ಬೈದಿದ್ದೇನೆ, ಬೇಕಾದರೆ ಅವನನ್ನೇ ಕೇಳಿ ನೋಡು. ಅಲ್ಲವ್ವ, ಹೊಟ್ಟೆ ಕೆಟ್ಟದ್ದಕ್ಕಾಗಿ ಮೊಮ್ಮಗನನ್ನು ಯಾಕೆ ಡಾಕ್ಟ್ರ ಹತ್ರ ಕರೆದುಕೊಂಡು ಬಂದೆ? ಒಂದೆರೆಡು ಹೊತ್ತು ಅನ್ನಮಜ್ಜಿಗೆಯ ಊಟ ಹಾಕಿದ್ರೆ ಸರಿ ಹೋಗುತ್ತಿರಲಿಲ್ಲವಾ? ಊರಲ್ಲಿ ಆಸ್ಪತ್ರೆ ಇದೆ ಎಂದ ಮಾತ್ರಕ್ಕೆ ಇಂತಹ ಸಣ್ಣ ಪುಟ್ಟ ಕಾಯಿಲೆಗಳಿಗೂ ಡಾಕ್ಟ್ರ ಔಷಧವೇ ಆಗಬೇಕು ಎಂದರೆ ಹೇಗೆ?” ಎಂದು ಮೇಷ್ಟ್ರು ಮಾರುತ್ತರ ಕೊಟ್ಟರು. ನನ್ನ ಅವ್ವ ಮೊದಲೇ ಘಾಟಿ ಹೆಂಗಸು, ಸುಲಭದಲ್ಲಿ ಸಿಕ್ಕ ಇಂತಹ ಪಂಥಾಹ್ವಾನವನ್ನು ಸ್ವೀಕರಿಸದೆ ಬಿಟ್ಟಾಳೆಯೆ? “ಏನಪ್ಪಾ ಮೇಷ್ಟ್ರೇ, ನಿನಗೆ ಮಾಡಲಿಕ್ಕೆ ಬೇರೆ ಯಾವ ಘನಕಾರ್ಯವೂ ಇಲ್ಲವೇ? ಹೀಗೆ ಆಸ್ಪತ್ರೆಯಲ್ಲಿ ದಿನಪೂರ್ತಿ ಝಾಂಡ ಊರಿ ಹೋಗಿ ಬರುವ ರೋಗಿಗಳ ಬಗ್ಗೆ ಡಾಕ್ಟರ್ ಕಿವಿಗೆ ಊದಿ, ಊದಿ ಆತ ಅವರಿಗೆ ಸರಿಯಾದ ಚಿಕಿತ್ಸೆ ಕೊಡದಂತೆ ಏಕೆ ತಡೆಗೋಡೆಯಾಗಿದ್ದೀಯ? ನಿನಗೆ ಗ್ಯಾಸ್ ಸಮಸ್ಯೆ ಇರುವುದು ಊರಿಗೇ ಗೊತ್ತಿರುವ ವಿಷಯ. ದಿನಕ್ಕೆ ಒಂದು ಬೊಗಸೆ ಮಾತ್ರೆಗಳು ನಿನಗೆ ಬೇಕು. ಆಸ್ಪತ್ರೆಗೆ ಬಂದು ನಿನಗೆ ಬೇಕಾದ ಗುಳಿಗೆಗಳನ್ನು ತೆಗೆದುಕೊಂಡು ಹೋದ್ರೆ ಸಾಲದೇ? ನಿನಗ್ಯಾಕೆ ಊರವರ ಉಸಾಬರಿ? ಉಂಡ ಅನ್ನ ಕರುಗುವುದಿಲ್ಲವೆ? ವಯ್ಯಸ್ಸು ಅರವತ್ತರ ಮೇಲಾದರೂ ನಿನ್ನ ಶಕುನಿ ಬುದ್ದಿ ಬಿಡಲಿಲ್ಲ ನೋಡು” ಎಂದು ಎದುರಿಗೆ ಡಾಕ್ಟರ್ ಇರುವುದನ್ನೂ ಗಮನಿಸದ ಹಾಗೆ ತಿಪ್ಪೇರುದ್ರಪ್ಪ ಮೇಷ್ಟ್ರಿಗೆ ಜಾಡಿಸಲು ಶುರುವಿಟ್ಟುಕೊಂಡ ಹೊತ್ತಿನಲ್ಲಿ ದೂಸ್ರಾ ಮಾತನಾಡದೆ ನಿಧಾನವಾಗಿ ತಮ್ಮ ಕುರ್ಚಿಯಿಂದ ಎದ್ದ ಮೇಷ್ಟ್ರು ಪಕ್ಕದಲ್ಲಿ ಇಟ್ಟಿದ್ದ ಊರುಗೋಲನ್ನು ಎಡಗೈಯಲ್ಲಿ ಹಿಡಿದುಕೊಂಡವರು ಕನ್ನಡಕವನ್ನು ಮೂಗಿನಿಂದ ಮೇಲಿನ ಸ್ವಸ್ಥಾನಕ್ಕೆ ಏರಿಸಿದವರಾಗಿ ಬಲಗೈನಿಂದ ಉಟ್ಟಿದ್ದ ಪಂಚೆಯ ತುದಿಯನ್ನು ಎತ್ತಿ ಹಿಡಿದು ನಿಧಾನವಾಗಿ ಜಾಗ ಖಾಲಿ ಮಾಡತೊಡಗಿದರು. “ಬರುತ್ತೇನೆ ಡಾಕ್ಟ್ರೆ, ಬಳ್ಳಾರಿ ಬಸವರಾಜ ದುರ್ಗಕ್ಕೆ ಹೋಗುತ್ತಾನೆ, ಸೊಪ್ಪು, ಮೆಣಸಿನಕಾಯಿ ಮತ್ತಿತರ ತರಕಾರಿಗಳನ್ನು ತರಿಸುವುದಿದೆ” ಎನ್ನುತ್ತಾ ಡಾಕ್ಟರ್ ಕೋಣೆಯ ಬಾಗಿಲನ್ನು ಸಾವಕಾಶವಾಗಿ ದಾಟತೊಡಗಿದರು.

“ಯಾಕಜ್ಜಿ, ಅಷ್ಟು ಕೋಪ ಮಾಡುಕೊಳ್ಳುತ್ತೀರಿ? ಮೇಷ್ಟ್ರು ಏನು ಹೇಳಬಾರದ್ದನ್ನು ಹೇಳಿದ್ದಾರೆ? ಈಗಿನ ಮಕ್ಕಳೇ ಹಾಗೆ ಅಲ್ವಾ? ಮಿತಿಮೀರಿದ ಆಹಾರ ಸೇವನೆಯಿಂದ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ” ಎನ್ನುವ ಡಾಕ್ಟರ್ ಶಿವಶಂಕರ್ ಮಾತುಗಳಿಗೆ ಅವ್ವ ಮತ್ತಷ್ಟು ಕೆರಳಿ ಕೆಂಡವಾದರು. “ಹೌದು ಡಾಕ್ಟ್ರೇ, ಮಕ್ಕಳಿಗೆ ಹೊಟ್ಟೆಯ ಮಿತಿ ಅರಿವಾಗುವುದಿಲ್ಲ ಸರಿ, ಆದರೆ ಈ ದೊಡಘಟ್ಟದ ತಿಪ್ಪೇರುದ್ರಪ್ಪನಿಗೆ ತಾನು ಆಡುವ ಮಾತಿನ ಮಿತಿ ಅರಿವಾಗುವುದಿಲ್ಲ ಎಂದರೆ ಹೇಗೆ? ಆರೋಗ್ಯ ನೆಟ್ಟಗಿಲ್ಲ ಎಂದು ತಾನೇ ಜನಗಳು ಆಸ್ಪತ್ರೆಗೆ ಬರುವುದು? ಏನೋ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿರುತ್ತದೆ. ಅದನ್ನು ಕಟ್ಟಿಕೊಂಡು ಈ ಮೇಷ್ಟ್ರಿಗೆ ಏನಾಗಬೇಕು? ಏಕೆ ತನ್ನ ಪಾಡಿಗೆ ತಾನು ಇರುವುದಿಲ್ಲ? ನೀವಾದರೂ ಅಷ್ಟೇ,

 

ಯಾವ ಕಾರಣಕ್ಕೆ ಈತನನ್ನು ದಿನಪೂರ್ತಿ ನಿಮ್ಮ ಮಗ್ಗುಲಲ್ಲಿ ಇಟ್ಟುಕೊಂಡಿರುತ್ತೀರಿ? ಆತ ಬಂದ ಕೆಲಸ ತೀರಿದ ನಂತರ ಏಕೆ ಸಾಗು ಹಾಕುವುದಿಲ್ಲ?” ಎಂದು ನನ್ನ ಅವ್ವ ಡಾಕ್ಟರ್ ಮೇಲೆಯೇ ರೇಗಿ ಹೋದ ಹೊತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎಂದು ಅರಿತವರು “ಏನಯ್ಯಾ, ಬಾ ಇಲ್ಲಿ, ನಿನ್ನ ಹೊಟ್ಟೆ ನೋಡುತ್ತೇನೆ” ಎಂದು ನನ್ನನ್ನು ತಮ್ಮ ಬಳಿ ಕರೆದು, ಅಂಗಿಯನ್ನು ಮೇಲೆತ್ತಿ ಹೊಟ್ಟೆಯನ್ನು ನಿಧಾನವಾಗಿ ಅಮುಕತೊಡಗಿದರು. ನಿನ್ನೆ ಎಷ್ಟು ಸಲ ಬೇಧಿಯಾಗಿದೆ?” ಎಂದು ಪ್ರಶ್ನಿಸಿ ಗುಳಿಗೆ ಮತ್ತು ಟಾನಿಕ್ ಬರೆದುಕೊಡುತ್ತೇನೆ, ಮೂರು ದಿನಗಳ ಮಟ್ಟಿಗೆ ಸೇವಿಸು, ಹುಷಾರಾಗುತ್ತೀಯ” ಎನ್ನುವ ಭರವಸೆಯೊಂದಿಗೆ ಲಘುವಾಗಿ ಬೆನ್ನು ತಟ್ಟಿದರು.

“ಯಾಕೆ ಡಾಕ್ಟ್ರೇ, ನಿಮ್ಮ ಆಸ್ಪತ್ರೆಯಲ್ಲಿ ಔಷಧಗಳು ಇಲ್ಲವಾ? ಯಾಕೆ ಎಲ್ಲರಿಗೂ ಹೊರಗಡೆಯ ಔಷಧ ಬರೆದುಕೊಡುತ್ತಿದ್ದೀರ?” ಎನ್ನುವ ನನ್ನ ಅವ್ವನ ಪ್ರಶ್ನೆಯನ್ನ ನಿರೀಕ್ಷಿಸದ ಶಿವಶಂಕರ್ ತುಸು ಗಲಿಬಿಲಿಗೊಂಡವರು “ಹಾಗೇನೂ ಇಲ್ಲಜ್ಜಿ, ನಮ್ಮ ಆಸ್ಪತ್ರೆಯಲ್ಲಿ ಔಷಧ ಇದ್ದರೆ ನಾನ್ಯಾಕೆ ನಿಮ್ಮಗಳಿಗೆ ಹೊರಗಡೆ ಖರೀದಿಸಲಿಕ್ಕೆ ಹೇಳುತ್ತೇನೆ. ಸದ್ಯ ನಮ್ಮ ಬಳಿ ಈ ಔಷಧಗಳು ಇಲ್ಲ” ಎಂದರು. “ಅಲ್ಲಾ ಡಾಕ್ಟ್ರೇ, ತಿಪ್ಪೇರುದ್ರಪ್ಪ ಪ್ರತೀ ದಿನ ಪೊಟ್ಟಣಗಟ್ಟಲೆ ಔಷಧಗಳನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಬೇರೆ ರೋಗಿಗಳಿಗೆ ಇಲ್ಲದ ಔಷಧ ಆತನಿಗೆ ಹೇಗೆ ಸಿಗುತ್ತದೆ?” ಎಂದು ಪ್ರಶ್ನಿಸಿದ ಅವ್ವನಿಗೆ ತುಸು ಇರಸುಮುರಸಿನಿಂದಲೆ ಉತ್ತರಿಸಿದ ಡಾಕ್ಟರ್ “ಮೇಷ್ಟ್ರಿಗೆ ಕೊಡುವ ಔಷಧಿಗಳು ಗ್ಯಾಸ್ ಟ್ರಬಲ್ ಗೆ ಸಂಬಂಧಿಸಿದವು. ಅವು ನಮ್ಮ ಆಸ್ಪತ್ರೆಯಲ್ಲಿ ಯಾವಾಗಲೂ ಉಪಲಬ್ಧವಿರುತ್ತವೆ. ಹಾಗಾಗಿ ಮೇಷ್ಟ್ರು ಅವುಗಳನ್ನು ತೆಗೆದುಕೊಂಡು ಹೋಗುತ್ತಾರೆ” ಎಂದರು. “ಚೆನ್ನಾಗಿದೆ ಡಾಕ್ಟ್ರೇ, ಮೇಷ್ಟ್ರಿಗೆ ಬೇಕಾದ ಗುಳಿಗೆಗಳನ್ನ ನೀವು ಯಾವಾಗಲೂ ಇಟ್ಟುಕೊಂಡಿರುತ್ತೀರಿ ಅಂದರೆ ಅವುಗಳನ್ನು ದುರ್ಗದ ಜಿಲ್ಲಾಸ್ಪತ್ರೆಯಿಂದ ತರಿಸುತ್ತೀರಿ ಎಂದಾಯ್ತು. ಕೇವಲ ಗ್ಯಾಸ್ ಗೆ ಸಂಬಂಧಿಸಿದ ಮಾತ್ರೆಗಳನ್ನು ಸ್ಟಾಕ್ ಇಟ್ಟುಕೊಳ್ಳುತ್ತೀರಿ ಎಂದರೆ ನಿಮ್ಮ ಆಸ್ಪತ್ರೆ ಕೇವಲ ಮೇಷ್ಟ್ರಿಗಾಗಿ ಮಾತ್ರ ಇದೆಯಾ? ಬೇರೆ ಕಾಯಿಲೆ ಕಸಾಯಿಗಳಿಗೆ ನಿಮ್ಮ ಬಳಿ ಔಷಧ ಇಲ್ಲ ಎಂದಾದಲ್ಲಿ ನೀವು ಎಂತಹ ಆಸ್ಪತ್ರೆ ನಡೆಸುತ್ತಿದ್ದೀರಿ?” ಎಂದು ಕೆರಳಿದಳು. ಅವ್ವನ ಜೋರುಧ್ವನಿ ಆಲಿಸಿದ ನಾನು ಗಾಬರಿಯಾಗಿ ಅವಳ ಸೀರೆ ಸೆರಗು ಎಳೆದು ಡಾಕ್ಟರ್ ಗೆ ಹಾಗೆಲ್ಲಾ ಮಾತನಾಡಬಾರದು ಎನ್ನುವುದನ್ನು ಸೂಚ್ಯವಾಗಿ ಹೇಳಲಿಕ್ಕೆ ಪ್ರಯತ್ನಪಟ್ಟೆ. “ಡಾಕ್ಟ್ರೇ, ಅದೇನು ಮಾಡುತ್ತೀರೋ ಮಾಡಿ. ನನ್ನ ಮೊಮ್ಮಗನಿಗೆ ಒಂದು ಸೂಜಿಮದ್ದು ಮತ್ತು ಔಷಧಗಳು ಸಿಗದೇ ನಾನು ಆಸ್ಪತ್ರೆ ಬಿಟ್ಟು ಕದಲುವುದಿಲ್ಲ” ಎನ್ನುವ ಗಟ್ಟಿ ನಿರ್ಧಾರ ನನ್ನ ಅವ್ವನಿಂದ ಬಂದ ಹೊತ್ತು ಶಿವಶಂಕರ್ ಚಿಂತೆಗೆ ಈಡಾದಂತೆ ಕಂಡುಬಂದರು. “ಬೇಧಿಗೆ ಯಾವ ಇಂಜೆಕ್ಷನ್ ಇಲ್ಲಜ್ಜಿ” ಎನ್ನುವ ಡಾಕ್ಟರ್ ಮಾತಿಗೆ ಮತ್ತಷ್ಟು ಕನಲಿದ ಅವ್ವ “ನಿಮ್ಮ ಬಳಿ ಬೇಧಿಗೂ ಇಂಜೆಕ್ಷನ್ ಇಲ್ಲ, ಸಕ್ಕರೆಕಾಯಿಲೆಗೂ ಇಂಜೆಕ್ಷನ್ ಇಲ್ಲ. ಎಂತಹ ಆಸ್ಪತ್ರೆ ನಡೆಸುತ್ತಿದ್ದೀರಿ? ಬಡ ಜನ ಸತ್ತು ಹೋಗಬೇಕು ಅಂತಹ ಇಂತಹ ಆಸ್ಪತ್ರೆಗಳನ್ನು ಘನಸರ್ಕಾರದವರು ಮಾಡಿದ್ದಾರೋ ಹೇಗೆ?” ಎಂದು ಡಾಕ್ಟರ್ ಕೋಣೆಯ ಹೊರಗಿನ ಮರದ ಬೆಂಚಿನ ಮೇಲೆ ಸರತಿಯಲ್ಲಿ ಆಸೀನರಾಗಿ ಕಾಯುತ್ತಿದ್ದ ನಾಲ್ಕೈದು ಮಂದಿ ಡಾಕ್ಟರ್ ಎದುರಿಗಿದ್ದ ಕಿಟಕಿಯಲ್ಲಿ ಒಳಗೆ ಏನಾಗುತ್ತಿದೆ ಎಂದು ಇಣುಕಿ ನೋಡುವಂತೆ ಜೋರಾದ ಧ್ವನಿಯಲ್ಲಿ ಕಿರುಚತೊಡಗಿದರು. ಆ ರೋಗಿಗಳ ಸಾಲಿನಲ್ಲಿ ಇದ್ದ ರೆಡ್ಡಿಯವರ ಸಾದಾ ರಘುನಾಥ್ ಒಳಗೆ ಬಂದವನು “ಅಜ್ಜಿ, ನಿನಗೆ ಚುಚ್ಚುಮದ್ದು ಮತ್ತು ಗುಳಿಗೆ ತಾನೇ ನಾನು ಕೊಡಿಸುತ್ತೇನೆ, ಸುಮ್ಮನೆ ಕೂಗಾಡಬೇಡ” ಎಂದು ನುಡಿದು ಡಾಕ್ಟರ್ ಬಳಿ ಸಾರಿ “ಡಾಕ್ಟ್ರೇ, ಇವರಿಗೆ ಇಂಜೆಕ್ಷನ್ ಮತ್ತು ಮಾತ್ರೆಯನ್ನು ಹೇಗಾದರೂ ಮಾಡಿಕೊಡಿ. ಅಜ್ಜಿ ಬಹಳ ಘಾಟಿ. ನೀವು ತಡ ಮಾಡಿದರೆ ರಾದ್ದಾಂತವಾದೀತು” ಎನ್ನುವ ಕಳಕಳಿಯ ಸಲಹೆಯನ್ನು ಕೊಟ್ಟ. ಡಾಕ್ಟರ್ ಒಟ್ಟಿಗೆ ಸಲುಗೆಯಿಂದ ಇದ್ದ ಮತ್ತು ಡಾಕ್ಟರ್ ಕ್ವಾರ್ಟರ್ಸ್ ಪಕ್ಕದ ಮನೆಯ ವಾಸಿಯಾದ ರಘುವಿನ ಮಾತನ್ನು ತಳ್ಳಿಹಾಕದ ಡಾಕ್ಟರ್ ನರ್ಸ್ ಕರೆದು ನನಗೆ ಕೊಡಬೇಕಾದ ಇಂಜೆಕ್ಷನ್ ಮತ್ತು ಮಾತ್ರೆಯ ವಿವರಗಳನ್ನು ನೀಡಲಾಗಿ ಚುಚ್ಚುಮದ್ದು ಪಡೆಯಲು ನಾನು ನರ್ಸ್ ಕೋಣೆಗೆ ಹೋಗಲು ಅವ್ವ ನನ್ನನ್ನು ಹಿಂಬಾಲಿಸಿದಳು. “ಅಜ್ಜೀ, ಬಹಳ ಒಳ್ಳೆ ಕೆಲಸ ಮಾಡಿದಿರಿ, ಯಾವಾಗಲೂ ಮೇಷ್ಟ್ರ ಮಾತು ಕೇಳಿ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಗೆ ಸರಿಯಾಗಿ ಮಾತಿನ ಪೆಟ್ಟುಕೊಟ್ಟಿರಿ” ಎಂದು ನರ್ಸ್ ಶಿವಲಿಂಗಮ್ಮ ನನ್ನ ಅವ್ವನನ್ನು ತಾರೀಫು ಮಾಡುತ್ತಾ ನೀಡಿದ ಇಂಜೆಕ್ಷನ್ ನರ್ಸ್ ತಮ್ಮ ಕೆಲಸದ ಕಡೆ ಹೆಚ್ಚು ಗಮನ ನೀಡದೆ ಮಾತಿನ ಕಡೆ ಹೆಚ್ಚು ನಿಗಾ ವಹಿಸಿದ ಕಾರಣದಿಂದಲೋ ಏನೋ ಸ್ವಲ್ಪ ಹೆಚ್ಚೇ ಎನ್ನಬಹುದಾದ ಮಟ್ಟದ ನೋವನ್ನು ನನ್ನ ಬಲಕುಂಡೆಗೆ ಮಾಡಿತ್ತು. ನಿಕ್ಕರ್ ಏರಿಸಿ ಗುಂಡಿ ಹಾಕುತ್ತಾ ಇದ್ದವನಿಗೆ ಅವ್ವ ಕುಂಡಿಯ ಮೇಲೆ ತುಸು ಜೋರಾಗಿಯೇ ಉಜ್ಜುತ್ತಿದ್ದದ್ದು ನೋವನ್ನು ಇಮ್ಮಡಿಸಲಾಗಿ “ಅವ್ವಾ, ಉಜ್ಜಬೇಡ, ನೋವು ಕಡಿಮೆಯಾಗಿದೆ” ಎಂದು ಹೇಳುತ್ತಾ ನರ್ಸ್ ಕೊಟ್ಟ ಗುಳಿಗೆಗಳನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಯಿಂದ ಹೊರಬಂದೆ.

ತಿಪ್ಪೇರುದ್ರಪ್ಪ ಮೇಷ್ಟ್ರು ಮೂಲತಃ ತುರುವನೂರಿಗೆ ಎರಡು ಕಿಲೋ ಮೀಟರ್ ದೂರದ, ತುರುವನೂರು – ನಾಯಕನಹಟ್ಟಿ ಒಳಹಾದಿಯ ಮೇಲೆ ಬರುವ ಒಂದು ಸಣ್ಣ ಹಳ್ಳಿ ದೊಡಘಟ್ಟದವರು. ಆ ಊರಿನವಲ್ಲಿಯೇ ಹುಟ್ಟಿ, ಬೆಳೆದ ತಿಪ್ಪೇರುದ್ರಪ್ಪ ಮೇಷ್ಟ್ರ ಹೆಸರಿನ ಮುಂದೆ ದೊಡಘಟ್ಟ ಎನ್ನುವ ಅಂಕಿತನಾಮವನ್ನು ಸೇರಿಸಿಯೇ ಗುರುತಿಸುವುದು ನಮ್ಮೂರಿನಲ್ಲಿ ಚಾಲ್ತಿಯಲ್ಲಿದ್ದ ವಾಡಿಕೆ. ತುರುವನೂರಿನ ಮತ್ತು ಸುತ್ತಮುತ್ತಲ ಪ್ರೈಮರಿ ಮಿಡಲ್ ಸ್ಕೂಲ್ ಗಳಲ್ಲಿ ಶಿಕ್ಷಕರಾಗಿ ಮೂರು ದಶಕಗಳಿಗೂ ಮೀರಿ ಕೆಲಸ ಮಾಡುವ ಹೊತ್ತು ತುರುವನೂರಿನಲ್ಲಿಯೇ ನೆಲಸಿ ಊರಿನ ಅವಿಭಾಜ್ಯ ಅಂಗವೇ ಆಗಿ ಹೋದ ಮೇಷ್ಟ್ರು ಮೇಲಿನ ಘಟನೆ ನಡೆಯುವ ಹೊತ್ತಿಗೆ ನಿವೃತ್ತಿಹೊಂದಿಯೇ ಐದಾರು ವರ್ಷಗಳಾಗಿತ್ತು. ಮೊದಲಿನಿಂದಲೂ ಗ್ಯಾಸ್ ನ ತೊಂದರೆಯಿಂದ ಬಳಲುತ್ತಿದ್ದ ಮೇಷ್ಟ್ರಿಗೆ ‘ಗ್ಯಾಸ್ ಮೇಷ್ಟ್ರು’ ಎನ್ನುವ ಅನ್ವರ್ಥನಾಮವೂ ಇತ್ತು. ಮೇಷ್ಟ್ರ ವಿದ್ಯಾರ್ಥಿ ಬಳಗ ಮೇಷ್ಟ್ರನ್ನು ಗುರುತಿಸುತ್ತಿದ್ದದ್ದೇ ಈ ಹೆಸರಿನ ಮೂಲಕ. ತಮ್ಮ ಕಾಯಿಲೆಯ ಕಾರಣದಿಂದಾಗಿ ಊರಿಗೆ ಬರುವ ಡಾಕ್ಟರ್ಸ್ ಒಟ್ಟಿಗೆ ಒಳ್ಳೆಯ ಸ್ನೇಹವನ್ನು ಗಳಿಸಿ, ಉಳಿಸಿಕೊಂಡು ಬರುವುದು ಮೇಷ್ಟ್ರಿಗೆ ಅನಿವಾರ್ಯವಾಗಿತ್ತು. ಊರಲ್ಲಿ ಇಂಗ್ಲೀಷ್ ಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಮೇಷ್ಟ್ರು ಪ್ರಮುಖರಾದವರು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಎಳವೆಯಲ್ಲಿಯೇ ಸ್ವಲ್ಪ ಸಮಯದ ಮಟ್ಟಿಗೆ ಜೈಲು ಪಾಲಾಗಿದ್ದ ಮೇಷ್ಟ್ರು, ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲಾವಿದ್ಯಾರ್ಥಿಗಳು ನಡೆಸುವ ಪ್ರಭಾತ್ ಪೇರಿಗಳನ್ನ ಉದ್ದೇಶಿಸಿ ಗಾಂಧಿಕೋಟೆಯ ಮೇಲಿಂದ ಮಾಡಿದ ಹಲವಾರು ಭಾಷಣಗಳ ನೆನಪು ನನ್ನಲ್ಲಿ ಈ ಹೊತ್ತೂ ನಿಚ್ಚಳವಾಗಿ ಉಳಿದಿದೆ. ಊರಿನ ಏಕೋವೈದ್ಯ ಸರ್ಕಾರಿ ಆಸ್ಪತ್ರೆಗೆ ಬಂದ ರುದ್ರಾನಾಯ್ಕ್, ಮೀಟಾನಾಯ್ಕ್, ಶಿವಶಂಕರ್, ಜಯಾನಂದಯ್ಶ ಮತ್ತು ಅವರ ವೈದ್ಯಪತ್ನಿ ಸವಿತಾ ಜಯಾನಂದಯ್ಶ ಮತ್ತಿತರರ ಜೊತೆಗೆ ಆಪ್ತವಾದ ಸ್ನೇಹ, ಸಲುಗೆಯನ್ನ ಲಾಗಾಯ್ತಿನಿಂದಲೂ ಬೆಳೆಸಿಕೊಂಡಿದ್ದ ಮೇಷ್ಟ್ರಿಗೆ ಅವರ ಇಂಗ್ಲೀಷ್ ಪಾಂಡಿತ್ಯ ಈ ದಿಸೆಯಲ್ಲಿ ಹೆಚ್ಚು ಸಹಕಾರಿಯಾಗಿತ್ತು ಎಂದು ನನಗನ್ನಿಸುತ್ತದೆ. ಸುಮಾರು ಐದೂವರೆ ಅಡಿ ಎತ್ತರದ, ಕೆಂಪುಬಣ್ಣದ, ಬೋಡಾದ ತಲೆ ಮತ್ತು ತಲೆಯ ಹಿಂಭಾಗ ಇವೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿಸುತ್ತಾ ಗಾಳಿಗೆ ಹಾರುತ್ತಿದ್ದ ಕೆಲವೇ ಉದ್ದದ ಬಿಳಿಗೂದಲುಗಳ ಧಣಿಯಾದ ಮೇಷ್ಟ್ರ ವ್ಯಕ್ತಿತ್ವದ ದೊಡ್ಡಗುರುತು ಎಂದರೆ ದಿನದ ಇಪ್ಪತ್ನಾಲ್ಕು ಗಂಟೆ ಅವರ ಮೂಗಿನ ಮೇಲೆ ಇರುತ್ತಿದ್ದ ಸೋಡಾಬಾಟಲಿಯ ತಳದಷ್ಟು ದಪ್ಪವಿದ್ದ ಹಳೆಯ ಫ್ರೇಮಿನಲ್ಲಿ ಕಂಗೊಳಿಸುತ್ತಿದ್ದ ಕನ್ನಡಕ. ಶುಭ್ರ ಖಾದಿಯಜುಬ್ಬಾ ಮತ್ತು ಖಾದಿ ದೋತಿಯನ್ನ ಉಟ್ಟು, ಹೆಗಲ ಬಲಬದಿಗೆ ಖಾದಿಯ ಶಲ್ಯವೊಂದನ್ನು ಮಡಿಸಿ ಹಾಕಿಕೊಂಡು ತಮ್ಮ ಊರುಗೋಲಿನ ಸಹಾಯದಿಂದ ಬಸ್ ಸ್ಟ್ಯಾಂಡ್ ಬಳಿಯ ದಿನ್ನೆಯನ್ನು ತುಸು ಕುಂಟುತ್ತಲೆ ಹತ್ತುತ್ತಾ ಬೆಳಗಿನ ಸುಮಾರು ಹತ್ತರ ವೇಳೆಗೆ ಮೇಷ್ಟ್ರು ಹೊರಟರು ಎಂದರೆ ಅವರ ಗಮ್ಯಸ್ಥಳದ ಗುರುತುಪರಿಚಯ ರಸ್ತೆಯ ಬದಿಯಲ್ಲಿ ಚೆಡ್ಡಿಗಳೂ ಇಲ್ಲದೆ ಆಟವಾಡುತ್ತಿದ್ದ ಪೋರರಿಗೂ ಗೊತ್ತಿತ್ತು. ಮೇಷ್ಟ್ರ ಈ ದಿನಚರಿಯ ಪರಿಚಯ ಇದ್ದ ಲಿಂಗಾಯತ ಸಮುದಾಯದ ಜನರು ಆದಷ್ಟು ಹತ್ತು ಗಂಟೆಯ ಒಳಗೇ ಆಸ್ಪತ್ರೆಗೆ ಹೋಗಿಬರುವ ತಮ್ಮ ಕಾರ್ಯಕ್ರಮವನ್ನು ಮುಗಿಸಿಬಿಡುತ್ತಿದ್ದರೆ ಇದರ ಅರಿವು ಹೆಚ್ಚಾಗಿ ಇರದ ಬೇರೆ ಜಾತಿಯ ಜನ ಡಾಕ್ಟರ್ ಮುಂದೆ ದಿನಪೂರ್ತಿ ಕುಳಿತು ಪುಕ್ಕಟೆ ಸಲಹೆಸೂತ್ರಗಳನ್ನು ಮುಂದಿಡುತ್ತಿದ್ದ ಮೇಷ್ಟ್ರ ಮಾತುಗಳಿಗೆ ಸುಲಭದ ಆಹಾರವಾಗುತ್ತಿದ್ದರು. ಆಸ್ಪತ್ರೆಗೆ ಬರುತ್ತಿದ್ದ ಪ್ರತಿಯೊಬ್ಬ ರೋಗಿಯ ಬಗ್ಗೆಯೂ ತಮ್ಮದೇ ಆದ ಅಭಿಪ್ರಾಯಗಳ ಮಂಡನೆಯಿಂದ ರೋಗಿಗಳಿಗೆ ಉಪಕಾರಕ್ಕಿಂತ ಅಪಕಾರವೆ ಹೆಚ್ಚಾಗುತ್ತಿತ್ತು. ಹಾಗಂತú ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳೂ ಮೇಷ್ಟ್ರ ದಯೆಯಿಂದ ಅವಕೃಪೆಗೆ ಒಳಗಾದವರು ಅಂತಿಲ್ಲ. ತಮಗೆ ಬಹಳ ಬೇಕಾದವರು ಬಂದರೆ ಮುತುವರ್ಜಿ ವಹಿಸಿ ಡಾಕ್ಟರ್ ಕಡೆಯಿಂದ ಅವಶ್ಯಕತೆಗಿಂತಲೂ ಹೆಚ್ಚಿನ ಷೋಡೋಪಚಾರ ಚಿಕಿತ್ಸೆಯನ್ನ ಕೊಡುವುದರಲ್ಲಿ ಮೇಷ್ಟ್ರು ಸಿದ್ಧಹಸ್ತರು. ಒಟ್ಟಿನಲ್ಲಿ ಊರಿನ ಆಸ್ಪತ್ರೆಯ ದೇಗುಲದಲ್ಲಿ ದೊಡಘಟ್ಟದ ತಿಪ್ಪೇರುದ್ರಪ್ಪ ಮೇಷ್ಟ್ರು ಪೂಜಾರಿ. ಕೆಲವೊಂದು ಚಿಕಿತ್ಸೆಗಳಿಗೆ ಡಾಕ್ಟರ್ ದೇವರು ಸಮ್ಮತಿಸಿದರೂ ಪೂಜಾರಿ ಮೇಷ್ಟ್ರು ಒಪ್ಪಿಗೆ ಕೊಡುತ್ತಿರಲಿಲ್ಲ. ವೈದ್ಯಕೃಪೆ ಮೇಷ್ಟ್ರ ಗುರುಕೃಪಾಕಟಾಕ್ಷದಿಂದ ಮಾತ್ರ ನಿಲುಕುವ ಪರಿ ಅರಿತ ಊರ ಅನೇಕ ಮಂದಿ ಮೇಷ್ಟ್ರನ್ನ ಮೊದಲೇ ಬೆಟ್ಟಿಯಾಗಿ ಡಾಕ್ಟರ್ ಗೆ ತಮ್ಮ ಬಗ್ಗೆ ಶಿಫಾರಸ್ಸು ಮಾಡಲು ಕೇಳಿಕೊಳ್ಳುತ್ತಿದ್ದರು. ತಮ್ಮ ಬಳಿಗೆ ‘ದೇಹಿ’ ಎಂದು ಬಂದವರ ಹಿತವನ್ನು ಹೇಗಾದರೂ ಮಾಡಿ ಕಾಯುತ್ತಿದ್ದ ಮೇಷ್ಟ್ರು ತಮ್ಮ ಆಸಂವಿಧಾತ್ಮಕ ಅಧಿಕಾರ ಚಲಾವಣೆಯ ಮುಖೇನ ಊರ ಅನೇಕರ ಕಣ್ಣುಗಳಲ್ಲಿ ಆಪತ್ಭಾಂದವನಂತೆ ಗೋಚರಿಸುತ್ತಿದ್ದದ್ದು ಸುಳ್ಳೇನಲ್ಲ.

ಡಾಕ್ಟರ್ ಗಳೊಂದಿಗಿನ ಮೇಷ್ಟ್ರ ಸಲುಗೆಗೆ ಅವರಿಗೆ ಅನಾಯಾಸವಾಗಿ ದೊರಕುತ್ತಿದ್ದ ಮಾತ್ರೆ, ಔಷಧಿಗಳ ಹೊರತಾಗಿಯೂ ಹೆಚ್ಚಿನ ಆಯಾಮಗಳಿದ್ದವು. ಮೇಷ್ಟ್ರು ಊಟದ ವಿಷಯದಲ್ಲಿ ಬಹಳ ಅಚ್ಚುಕಟ್ಟು. ಮೂರೂ ಹೊತ್ತು, ಬಿಸಿಬಿಸಿಯಾದ, ಶುಚಿಶುಚಿಯಾದ, ರುಚಿರುಚಿಯಾದ ಸವಿಖಾದ್ಯಗಳ ಆಕಾಂಕ್ಷಿಯಾದ ಮೇಷ್ಟ್ರು ತಮ್ಮ ಮನದ ಇಚ್ಛೆಯನ್ನು ಪ್ರಾರಂಭದಿಂದಲೂ ಅವ್ಯಾಹತವಾಗಿ, ಬೇರೆಯವರ ಇಚ್ಛೆ, ಕಷ್ಟಗಳನ್ನು ಕಡೆಗಣಿಸಿ ನಡೆಸಿಕೊಂಡು ಬಂದವರೇ. ತಾವು, ಹೆಂಡತಿ ರುದ್ರಮ್ಮ, ತಮ್ಮ ಗಿಡ್ಡಶಿವಣ್ಣ ಮತ್ತು ಆತನ ಹೆಂಡತಿ ಪುಟ್ಟಮ್ಮನವರೊಂದಿಗೆ ನನ್ನ ಮನೆಯ ಹಿತ್ತಲಿನ ಗೋಡೆಗೆ ತಾಗಿಕೊಂಡು ಇದ್ದಂತಹ ಸ್ವಗೃಹದಲ್ಲಿ ವಾಸವಾಗಿದ್ದ ಮೇಷ್ಟ್ರು ಮತ್ತು ಆತನ ತಮ್ಮನಿಗೆ ಸಂತಾನವಿರಲಿಲ್ಲ. ಹಾಗಾಗಿ ಮೇಷ್ಟ್ರ ಮನೆಯಲ್ಲಿ ಎಲ್ಲಾ ಕಾಲಕ್ಕೂ ನಮ್ಮ ಊರ ಸಮೀಪವಿರುವ ಚಿಕ್ಕಗೊಂಡನಹಳ್ಳಿಯ ಅವರ ಸಂಬಂಧಿಕರ ಮನೆಯ ಒಬ್ಬ ಹುಡುಗ ಮನೆಕೆಲಸಗಳಲ್ಲಿ ಸಹಾಯ ಮಾಡುವುದಕ್ಕಾಗಿ ಇದ್ದೇ ಇರುತ್ತಿದ್ದ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅನನ್ಯ ಕಾಳಜಿ ವಹಿಸುತ್ತಿದ್ದ ಮೇಷ್ಟ್ರ ಮನೆಯ ಹುಡುಗರು ಊರಿನ ಮಿಡಲ್ ಸ್ಕೂಲ್ ಮತ್ತು ಹೈಸ್ಕೂಲ್ ಗಳಲ್ಲಿ ಓದುತ್ತಿದ್ದವರಾಗಿದ್ದರು. ನನ್ನ ತಲೆಮಾರಿನ ಮೇಷ್ಟ್ರ ಮನೆಯ ಈ ಸಂತತಿಯ ಸಾಲಿನ ಹುಡುಗನೆಂದರೆ ಬಸಲಿಂಗ. ಓದಿನಲ್ಲಿ ಹುಷಾರಾಗಿದ್ದ ಬಸಲಿಂಗನ ದಿನಚರಿಯ ಮುಖ್ಯಭಾಗ ಎಂದರೆ ಬೆಳಗ್ಗೆ ಮತ್ತು ಸಾಯಂಕಾಲಗಳಲ್ಲಿ ಸುಮಾರು ಒಂದೂವರೆ ಕಿಮೀ ದೂರದಲ್ಲಿ, ಹೊಸ ಬಸ್ ಸ್ಟ್ಯಾಂಡ್ ಆಚೆಯಿದ್ದ ಡಾಕ್ಟರ್ ಕ್ವಾರ್ಟರ್ಸ್ ಗೆ ಹೋಗಿ ಡಾಕ್ಟರ್ ಮನೆಯ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಮೇಷ್ಟ್ರ ಮನೆಗೆ ಸೇರಿದ ಟೊಮೆಟೊ, ಸೊಪ್ಪು ಮತ್ತಿತರ ಆ ಹೊತ್ತಿಗೆ ಬೇಕಾದ ತರಕಾರಿಗಳನ್ನು ತರುವುದು. ಊರಲ್ಲಿ ಆ ಹೊತ್ತು ಕೇವಲ ಡಾಕ್ಟರ್ ಮನೆಯಲ್ಲಿ ಮಾತ್ರ ಫ್ರಿಡ್ಜ್ ಇದ್ದುದರಿಂದ ಮತ್ತು ಫ್ರಿಡ್ಜ್ ಒಳಗೆ ಇಟ್ಟ ಪಡಿಪದಾರ್ಥಗಳು ಅತ್ಯಂತ ತಾಜಾಯುಕ್ತವಾಗಿ ಇದ್ದು ಅವುಗಳ ಸೇವನೆ ಆರೋಗ್ಯವನ್ನು ವೃದ್ಧಿಸುತ್ತದೆ ಎನ್ನುವ ಬಲವಾದ ನಂಬುಗೆ ಮೇಷ್ಟ್ರಲ್ಲಿ ಇದ್ದ ಕಾರಣದಿಂದ ವರ್ಷದ ಎಲ್ಲಾ ಕಾಲದಲ್ಲೂ ಈ ಸಂಗತಿ ತಪ್ಪದೇ ಜರುಗುತ್ತಿತ್ತು. ಮೇಷ್ಟ್ರ ಮನೆಯಲ್ಲಿ ಕೇವಲ ನಾಲ್ಕು ಜನರಿದ್ದರೂ ಸಹಾ ಪ್ರತಿಹೊತ್ತು ಎರಡು ನಮೂನೆಯ ಅಡುಗೆಗಳಾಗುತ್ತಿದ್ದವು. ಮೇಷ್ಟ್ರಿಗೆ ಮಾತ್ರವೇ ಗೋಧಿಚಪಾತಿ ಮತ್ತು ಕಾಳು, ಸೊಪ್ಪಿನ ಪಲ್ಯದ ಊಟ, ಅಕ್ಕಿ ಅನ್ನ, ಕಟ್ಟಿನಸಾರು ಸಿದ್ಧವಾದ ಹೊತ್ತು ಉಳಿದವರಿಗಾಗಿ ಜೋಳದ ರೊಟ್ಟಿ ಯಾ ಮುದ್ದೆ ಮತ್ತು ನವಣೆ ಅನ್ನ ಮತ್ತು ಬೇಳೆಸಾರಿನ ಭೋಜನವನ್ನು ಸಿದ್ಧಪಡಿಸಲಾಗುತ್ತಿತ್ತು. ಬೆಳಗಿನ ತಿಂಡಿಯ ಲಕ್ಷುರಿ ಮೇಷ್ಟ್ರ ಪಾಲಿನದಷ್ಟು ಮಾತ್ರವಾಗಿದ್ದಲ್ಲಿ ಉಳಿದವರು ಒಂದು ಲೋಟ ಬೆಳಗಿನ ಟೀ ಮಾತ್ರ ಸೇವಿಸಿ ಮಧ್ಯಾಹ್ನದ ಭೋಜನವನ್ನ ಎದುರು ನೋಡುತ್ತಿದ್ದರು. ಅಣ್ಣನ ನೆರಳನ್ನು ಕಂಡರೂ ಹೆದರುತ್ತಿದ್ದ ಶಿವಣ್ಣನಿಗೆ ಹೆಂಡ್ತಿ ಪುಟ್ಟಮ್ಮ ಬೇರೆ ಯಾರಿಗೂ ಕಾಣದ ಹಾಗೆ ಅಪರೂಪಕ್ಕೊಮ್ಮೆ ದಯಮಾಡುತ್ತಿದ್ದ ತಿಂಡಿಭಾಗ್ಯ ದೊರಕುತ್ತಿದ್ದ ದಿನಗಳ ಬೆಳಗಿನ ಹೊತ್ತು ಶಿವಣ್ಣ ಯಾವ ಮಟ್ಟಕ್ಕೆ ಉಬ್ಬಿಹೋಗುತ್ತಿದ್ದ ಎಂದರೆ ಆತನ ಮನೆಯ ಮುಂದಿನ ಮನೆಯಲ್ಲಿದ್ದ ನನ್ನ ಸೋದರಮಾವಂದಿರು ಗಿಡ್ಡಶಿವಣ್ಣನ ನಡಿಗೆಯ ಆ ದಿನಗಳ ಲಯವನ್ನು ನೋಡಿಯೇ “ಏನ್ ಕಕ್ಕಾ, ಇವತ್ತು ತಿಂಡಿ ಆದಹಾಗಿದೆ” ಎನ್ನುತ್ತಿದ್ದರು. ತನ್ನ ಮನೆಯ ಯಾರಾದರೂ ಈ ಮಾತುಗಳನ್ನು ಕೇಳಿಸಿಕೊಂಡಾರು ಎಂದು ಆಚೀಚೆ ನೋಡಿ ನಿಧಾನಗತಿಯಿಂದ ನನ್ನ ಮಾವಂದಿರ ಬಳಿ ಸಾರುತ್ತಿದ್ದ ಶಿವಣ್ಣ ಆ ದಿನದ ತಿಂಡಿ ಪ್ರಸಂಗವನ್ನು ಅರುಹುತ್ತಿದ್ದ ರೀತಿ ವಿಶಿಷ್ಟವಾದದ್ದು. ಕೆಲವು ದಿನಗಳು ಶಿವಣ್ಣನಿಗಾಗಿಯೆ ಎಂದು ಸ್ವಲ್ಪ ಮಿಗಿಲಾದ ತಿಂಡಿಯನ್ನು ಪುಟ್ಟಮ್ಮ ಮಾಡಿದ್ದರೆ ಮತ್ತೆ ಕೆಲವು ದಿನಗಳಲ್ಲಿ ಮೇಷ್ಟ್ರ ಗ್ಯಾಸ್ ಕಾರಣದಿಂದ ಅವರು ತಿಂಡಿ ತಿನ್ನಲಿಲ್ಲ ಎಂದೋ ಅಥವಾ ಮಾಡಿದ ಎರಡು ಇಡ್ಲಿ ಅಥವಾ ಪೂರಿಗಳಲ್ಲಿ ಒಂದು ಮಿಕ್ಕಿದೆ ಅನ್ನುವ ಕಾರಣಕ್ಕೋ ಅಚಾನಕ್ ಆಗಿ ಒದಗುತ್ತಿದ್ದ ತಿಂಡಿಭಾಗ್ಯದ ಫಲಾನುಭವಿಯಾಗುತ್ತಿದ್ದ ಶಿವಣ್ಣ ಆ ದಿನಗಳ ನಾಷ್ಟವನ್ನು ತಿರುಪತಿ ತಿಮ್ಮಪ್ಪನ ಪ್ರಸಾದದಷ್ಟೆ ಭಕ್ತಿಭಾವದಿಂದ ಸೇವಿಸುತ್ತಿದ್ದ ಎನ್ನುವುದೂ ಸತ್ಯಸಂಗತಿಯೆ.

ಅಂದಹಾಗೆ ಮೇಷ್ಟ್ರ ಮನೆಯಲ್ಲಿ ತಿಂಡಿತೀರ್ಥ ಸವಿದ ಹೆಚ್ಚು ಮಂದಿ ಊರಲ್ಲಿ ಇರಲಿಲ್ಲ. ಅವರ ಮನೆಯಲ್ಲಿ ಹೆಚ್ಚು ಊಟ ಮಾಡಿದ ಕೀರ್ತಿ ನನ್ನ ಚಿಕ್ಕಮ್ಮ ಏಕಾಂತಮ್ಮನಿಗೆ ಸಲ್ಲುತ್ತದೆ. ಮುಂದಿನ ಮನೆಯ ಹುಡುಗಿ ಅಂತಲೋ ಅಥವಾ ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡ ಅನಾಥೆ ಅನ್ನುವ ಅನುಕಂಪದ ಕಾರಣವೋ ನನ್ನ ಚಿಕ್ಕಮ್ಮ ಮೇಷ್ಟ್ರ ಮನೆಯಲ್ಲಿ ಸಾಕಷ್ಟು ಬಾರಿ ಊಟ ಮಾಡಿದ್ದಿದೆ. ಮನೆಗೆ ಯಾರು ಬರುವುದನ್ನೂ ಸಹಿಸದ ಮೇಷ್ಟ್ರು ನನ್ನ ಚಿಕ್ಕಮ್ಮನ ವಿಷಯದಲ್ಲಿ ಮಾತ್ರ ಆಶ್ಚರ್ಯ ಎನ್ನುವಂತೆ ಮೌನಧಾರಣೆ ಮಾಡುತ್ತಿದ್ದು ಮನೆಯ ಉಳಿದ ಸದಸ್ಯರಿಗೆ ಏಕಾಂತಮ್ಮನನ್ನು ತಮ್ಮ ಮನೆಗೆ ಕರೆಯಲು ಪರೋಕ್ಷವಾಗಿ ಇಂಬುಕೊಟ್ಟಿತ್ತು. ನನ್ನ ನೆನಪಿನಲ್ಲಿ ಇರುವಂತೆ ನಾನು ಒಮ್ಮೆ ಮಾತ್ರ ಗಣಪತಿ ಹಬ್ಬದ ಊಟವನ್ನು ಮೇಷ್ಟ್ರ ಮನೆಯಲ್ಲಿ ಸವಿದ ನೆನಪಿದೆ. ಅಸಲಿಗೆ ನನಗೆ ಮೇಷ್ಟ್ರ ಮನೆಗೆ ಊಟಕ್ಕೆ ಹೋಗಲು ಸುತರಾಂ ಇಷ್ಟವಿರಲಿಲ್ಲ. ತಾನೂ ತಿನ್ನದೆ ಬೇರೆಯವರನ್ನೂ ತಿನ್ನಲೂ ಬಿಡದೆ ಇರುತ್ತಿದ್ದ ಮೇಷ್ಟ್ರ ಸ್ವಭಾವದ ಕಾರಣ ಅವರೊಟ್ಟಿಗಿನ ಸಹ ಪಂಕ್ತಿ ಭೋಜನ ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ನನ್ನ ಬದಲಾಗಿ ನನ್ನ ತಮ್ಮ ಭೋಗೇಶನನ್ನು ಕಳುಹಿಸುವ ನನ್ನ ಯೋಜನೆಯನ್ನ ಮೇಷ್ಟ್ರು “ಅವನಿನ್ನೂ ಸಣ್ಣವನು, ಏನು ಊಟ ಮಾಡಬೇಕು, ಎಷ್ಟು ಊಟ ಮಾಡಬೇಕು ಎನ್ನುವುದು ಅವನಿಗೆ ತಿಳಿಯುವುದಿಲ್ಲ. ಚಂದ್ರಣ್ಣ, ನೀನು ಪ್ರಕಾಶನನ್ನು ಮಾತ್ರ ಕಳುಹಿಸು” ಎಂದು ನನ್ನ ತಂದೆಯ ಮುಖಾಂತರ ಹೇರಿದ ಒತ್ತಾಸೆ ಮಾತ್ರದಿಂದಲೇ ಮೇಷ್ಟ್ರ ಮನೆಯ ಅಪರೂಪದ ಅತಿಥಿಯಾದ ನಾನು ಮನೆಯವರು ಬಡಿಸುತ್ತಿದ್ದ ಪ್ರತಿಯೊಂದು ಪದಾರ್ಥದ ಮೇಲೂ ಮೇಷ್ಟ್ರು ಹೇರುತ್ತಿದ್ದ ನಿಯಂತ್ರಣದಿಂದ ಜನ್ಮದಲ್ಲಿಯೇ ಮೇಷ್ಟ್ರ ಮನೆಗೆ ಮತ್ತೆ ಊಟಕ್ಕೆ ಬರುವುದಿಲ್ಲ ಎನ್ನುವ ನನ್ನ ಭೀಷ್ಮ ಪ್ರತಿಜ್ಞೆಯ ಪಾಲನೆಯಲ್ಲಿ ಮತ್ತೆ ನನ್ನನ್ನು ಎಂದೂ ಊಟಕ್ಕೆ ಆಮಂತ್ರಿಸದ ಮೇಷ್ಟ್ರ ಪಾತ್ರವೂ ಬಹಳ ದೊಡ್ಡದಿದೆ ಎಂದೇ ನನಗನ್ನಿಸುತ್ತಿದೆ.
(ಮುಂದುವರೆಯುವುದು)

 

Girl in a jacket
error: Content is protected !!