ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ?
ಒಂದೆರಡು ವರ್ಷದ ಹಿಂದೆ ರಾಜ್ಯದ ಅತ್ಯಂತ ವರ್ಣರಂಜಿತ ರಾಜಕಾರಣಿಗಳ ಪಟ್ಟಿಯಲ್ಲಿದ್ದ, ನಿತ್ಯ ಸುದ್ದಿಯ ಸರಕಾಗಿದ್ದ ಶೋಭಾ ಕರಂದ್ಲಾಜೆ ಈಗ ಎಲ್ಲೂ ಕಾಣಿಸುತ್ತಿಲ್ಲ. ಹೋದಲ್ಲಿ ಬಂದಲ್ಲಿ, ಶಾಸನ ಸಭೆ ಅಧಿಕಾರಿಗಳ ಗ್ಯಾಲರಿಯಲ್ಲಿ, ವಿಧಾನ ಮಂಡಲದ ಮೊಗಸಾಲೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ, ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧ, ವಿಕಾಸ ಸೌಧದ ಕಾರಿಡಾರುಗಳಲ್ಲಿ ಮುಗುಳ್ನಗೆ ಚೆಲ್ಲುತ್ತ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದ, ಎದುರಿಗೆ ಬಂದವರಿಂದ ನಮಸ್ಕಾರ ಸ್ವೀಕರಿಸುತ್ತ, ಪರಿಚಯದ ಮುಖ ಎದುರಾದರೆ ಹೆಲೋ ಹೇಳಿ ಸಾಗುತ್ತಿದ್ದ ಶೋಭಾ, ಹೇಳದೆ ಕೇಳದೆ ಏಕಾಏಕಿ ವನವಾಸಕ್ಕೆ ಹೋದವರಂತೆ ನಾಪತ್ತೆ ಆಗಿಬಿಟ್ಟಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಆಗಿರುವ ಅವರು ಇತ್ತೀಚಿನ ವರ್ಷ-ತಿಂಗಳುಗಳಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಮೌನದಲ್ಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನೆರಳಿನಂತಿದ್ದ ಶೋಭಾರನ್ನು ಹತ್ತಿರದಿಂದ ಕಂಡವರ ಪ್ರಕಾರ ಶೋಭಾ ಜಾಯಮಾನಕ್ಕೆ ತದ್ವಿರುದ್ಧವಾದ ನಡವಳಿಕೆ ಇವತ್ತಿನ ಅವರ ನಡವಳಿಕೆ. ಹೀಗೇಕಾಯಿತು ಎಂದು ಕೇಳಿದರೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಉತ್ತರ ಸಿಗಲಿಲ್ಲ ಎಂದ ಮಾತ್ರಕ್ಕೆ ಕುತೂಹಲ ತಣಿಯುವುದೂ ಇಲ್ಲ.
೫೫ ವರ್ಷದ ಶೋಭಾ (ಜನನ ೧೯೬೬) ಒಂದೇ ಏಟಿಗೆ ಮೇಲೇರಿ ಕುಳಿತವರಲ್ಲ. ಸಂಘಟನೆಯಲ್ಲಿ ಹಂತಹಂತವಾಗಿ ಬೆಳೆದು ಬಂದ ಅಪರೂಪದ ಕಾರ್ಯಕರ್ತೆ. ಬಿಜೆಪಿಯಲ್ಲಿ ಮಹಿಳೆಯರಿಗೆ ಅಂಥ ಮಹತ್ವದ ಸ್ಥಾನ ಸಿಗದ ಕಾಲ, ಸಮಯ, ವಾತಾವರಣದಲ್ಲಿ ಹಟ ಛಲದೊಂದಿಗೆ ಬೆಳೆದ ಖ್ಯಾತಿ ರಾಜ್ಯ ಬಿಜೆಪಿಯಲ್ಲಿ ಇವತ್ತಿಗೂ ಅವರ ಹೆಸರಿನಲ್ಲೇ ಇದೆ. ಶಾಲಾ ದಿನಗಳಲ್ಲಿ ಆರ್‌ಎಸ್‌ಎಸ್‌ನ ಮಹಿಳಾ ವಿಭಾಗ ರಾಷ್ಟ್ರೀಯ ಸ್ವಯಂ ಸೇವಿಕಾ ಸಂಘದ ಸಂಪರ್ಕಕ್ಕೆ ಬಂದ ಬಳಿಕದಲ್ಲಿ ಶೋಭಾ ಹಿಂತಿರುಗಿ ನೋಡಬೇಕಾದ ಪ್ರಮೇಯ ಎದುರಾಗಿದ್ದು ಈ ಒಂದೆರಡು ವರ್ಷಗಳಲ್ಲಿ. ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೊತೆಗೂಡಿದ ಅವರು ಅಲ್ಲಿಂದ ನೇರ ಪ್ರವೇಶ ಪಡೆದುದು ಬಿಜೆಪಿಗೆ. ಉಡುಪಿ, ಮಂಗಳೂರಿಗೆ ಸೀಮಿತವಾಗಿದ್ದ ಅವರ ಚಟುವಟಿಕೆ ಗರಿಗೆದರಿದ್ದು ಇಲ್ಲಿ ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ಸ್ಟಾರ್ ನಾಯಕರಾಗಿ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ.
ಕಷ್ಟಪಟ್ಟು ದುಡಿಯುವ ಛಾತಿ, ಛಲ ಉಳ್ಳವರನ್ನು ಯಡಿಯೂರಪ್ಪ ಬೆಂಬಲಿಸುತ್ತಾರೆಂಬ ಮಾತು ಪಕ್ಷದೊಳಗೆ ಕೆಲವರ ಬಾಯಲ್ಲಿ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ರಾಜಕೀಯದ ಮುಂಚೂಣಿಗೆ ಬಂದ ಶೋಭಾ, ನಿಧಾನವಾಗಿ ಯಡಿಯೂರಪ್ಪನವರ ಆಪ್ತ ವಲಯದ ಭಾಗವಾದರು. ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಶೋಭಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಆದರು
. ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಪಕ್ಷ ಸಂಘಟನೆಗೆ ಜನಮನ ಗಮನ ಸೆಳೆಯುವಂಥ ಕೆಲಸ ಮಾಡಿದರು. ಅದನ್ನು ಗಮನಿಸಿದ ಯಡಿಯೂರಪ್ಪ, ಶೋಭಾರಿಗೆ ಪದೋನ್ನತಿ ನೀಡಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಯಿತು. “ಯಡಿಯೂರಪ್ಪನವರಿಗೆ ನಿಕಟವಾಗಿರುವುದೇ ಶೋಭಾರ ರಾಜಕೀಯ ಅದೃಷ್ಟದ ಮೂಲ ಕಾರಣ” ಎಂಬ ಟೀಕೆ, ಆರೋಪವೂ ಬಂತು. ಯಡಿಯೂರಪ್ಪ ಅಥವಾ ಶೋಭಾ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಈ ನಡುವೆ ವಿಧಾನ ಪರಿಷತ್‌ಗೆ ಶೋಭಾ ಆಯ್ಕೆಯಾದರು. ಅದೂ ಕೂಡಾ ಯಡಿಯೂರಪ್ಪ ಆಶೀರ್ವಾದದ ಫಲ. ಈ ಎಲ್ಲ ಕಾರಣಗಳಿಗಾಗಿ ಪಕ್ಷದ ಆಗುಹೋಗುಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಶೋಭಾ ಬೆಳೆದಾಗ ಹೌಹಾರಿದ ಮುಖಂಡರನೇಕರು ಈ ದಿನಕ್ಕೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ೨೦೧೪ರಲ್ಲಿ ಅದೇ ಮೊದಲಬಾರಿಗೆ ಶೋಭಾ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗ ಹುಬ್ಬೇರಿಸಿದವರು ಅನೇಕ. ಗೆದ್ದಾರೆಯೇ ಎಂಬ ಪ್ರಶ್ನೆಯ ಬೆನ್ನನ್ನೇರಿ ಬಂದ ಉತ್ತರ ನರೇಂದ್ರ ಮೋದಿ ಅಲೆ ಇದೆ ಗೆಲ್ಲುತ್ತಾರೆಂಬ ಉತ್ತರ. ೨೦೧೯ರ ಚುನಾವಣೆಯಲ್ಲೂ ಇದು ನಿಜವಾಯಿತು. ನಿಜವಾಗದ ಸಂಗತಿ ಎಂದರೆ ಕೇಂದ್ರ ಸಂಪುಟದಲ್ಲಿ ಶೋಭಾಗೆ ಸಚಿವ ಸ್ಥಾನ ಸಿಗದೇ ಹೋದುದು.
ಈಡೇರದ ಯಡ್ಡಿ ನಿರೀಕ್ಷೆ
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಶೋಭಾ ಜಯಭೇರಿ ಬಾರಿಸಿದಾಗ ಅವರಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಅದರಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ” ಶೋಭಾರಿಗೆ ಮೋದಿ ಸಂಪುಟದಲ್ಲಿ ಯೋಗ್ಯ ಸ್ಥಾನ ದೊರೆಯಲಿದೆ; ಅಲ್ಲಿ ದೆಹಲಿಯಲ್ಲಿ ಇವರು ತಮ್ಮ ಸಾಮರ್ಥ್ಯ ತೋರಲಿದ್ದಾರೆ” ಎಂದು ಬಹು ನಿರೀಕ್ಷೆಯ ಮಾತನ್ನಾಡಿದ್ದರು. ಆದರೆ ಆ ನಿರೀಕ್ಷೆ ಎರಡನೇ ಬಾರಿ ಗೆದ್ದಾಗಲೂ ನಿಜವಾಗಲಿಲ್ಲ. ಯಡಿಯೂರಪ್ಪನವರ ನಿರೀಕ್ಷೆ ಕರಗಿ ನಿರಾಶೆ ಮೂಡಿದ್ದಕ್ಕೆ ಕಾರಣವಿತ್ತು. ತಮ್ಮ ನಂತರದ ರಾಜಕಾರಣಿ ಶೋಭಾ ಎಂಬಂತೆ ಅವರನ್ನು ಬಿಂಬಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿಕೊಂಡು ಬಂದವರು. ಅದನ್ನು ಅರ್ಥ ಮಾಡಿಕೊಳ್ಳಲು ೨೦೦೮ರ ವಿಧಾನ ಸಭೆ ಚುನಾವಣೆ ಮತ್ತು ರಾಜ್ಯದಲ್ಲಿ ಬಿಜೆಪಿಯ ಪ್ರಥಮ ಸರ್ಕಾರ ರಚನೆಯ ದಿನಗಳಿಗೆ ಹೋಗಬೇಕು. ಆ ಚುನಾವಣೆಯಲ್ಲಿ ಆಗಿನ ಸಿಟ್ಟಿಂಗ್ ಎಂಎಲ್‌ಸಿ ಶೋಭಾರಿಗೆ ಬೆಂಗಳೂರು ಯಶವಂತಪುರ ವಿಧಾನ ಸಭಾ ಟಿಕೆಟ್ ಘೋಷಣೆಯಾದಾಗ ಸಿಡಿದೆದ್ದ ಬಿಜೆಪಿ ನಾಯಕರಲ್ಲಿ ಡಿ.ಎಚ್.ಶಂಕರಮೂರ್ತಿ, ಕೆ.ಎಸ್.ಈಶ್ವರಪ್ಪ ಕೂಡಾ ಇದ್ದರು. ಯಡಿಯೂರಪ್ಪ ಮಾತ್ರವೇ ಬಿಜೆಪಿಗೆ ಬಲ ತುಂಬ ಬಲ್ಲರೆಂದು ಆಗ ಬಿಜೆಪಿ ಕೇಂದ್ರ ನಾಯಕತ್ವ ಭಾವಿಸಿತ್ತು. ಆ ಚುನಾವಣೆಯಲ್ಲಿ “ಗೆಲ್ಲುವುದೊಂದೇ ಮಾನದಂಡ” ಎಂಬ ಮಂತ್ರ ಪಠಿಸುತ್ತಿದ್ದ ಯಡಿಯೂರಪ್ಪನವರ ಮಾತು ನಿರ್ಧಾರಕ್ಕೆ ಎದುರೇ ಇರಲಿಲ್ಲ.
ಯಶವಂತಪುರ ಕ್ಷೇತ್ರ ಶೋಭಾರ ಪಾಲಿಗೆ ದುರ್ಗಮವಾಗಿತ್ತು. ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸು ತೋರಲಿಲ್ಲ. ಶೋಭಾ ಸ್ಥಳೀಯರಲ್ಲ; ಹೊರಗಿನವರು ಎಂಬ ವಿರೋಧ ಪಕ್ಷದ ದಾಳಿಯೂ ಜೊತೆಗೂಡಿ ಅವರ ಗೆಲುವು ತೂಗುಯ್ಯಾಲೆಯಲ್ಲಿತ್ತು. ಫಲಿತಾಂಶ ಬಂದಾಗ ಮಾತ್ರ ಶೋಭಾ, ಜಯದ ನಗೆಯನ್ನು ಚೆಲ್ಲಿದರು. ಯಡಿಯೂರಪ್ಪ ಸಂಪುಟ ರಚನೆ ಮಾಡಿದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಹೊಣೆಯನ್ನು ಶೋಭಾರಿಗೆ ವಹಿಸಿದರು. ಅದರ ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿಯೂ ಅವರ ಕೈಗೆ ಬಂತು. ಶೋಭಾರಿಗೆ ದೊರೆತ ಈ ಬಗೆಯ ಗೌರವ ಸ್ಥಾನಮಾನಕ್ಕೆ ವಿರೋಧ ಪಕ್ಷದವರು ವಿರೋಧ ಸೂಚಿಸಲಿಲ್ಲ; ರಾಜ್ಯದ ಜನತೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿತು. ಅದನ್ನು ನಿಯಂತ್ರಿಸುವುದು ಯಡಿಯೂರಪ್ಪನವರಿಗೆ ದೊಡ್ಡ ಸವಾಲೇ ಆಯಿತು. ಆಗ ಸಚಿವ ಸಹೋದ್ಯೋಗಿಗಳಾಗಿದ್ದ ಗಣಿಕುಳ ಗಾಲಿ ಜನಾರ್ದನ ರೆಡ್ಡಿ, ಕೆ. ಎಸ್. ಈಶ್ವರಪ್ಪ ಜೊತೆಗೆ ಎಂ.ಪಿ. ರೇಣುಕಾಚಾರ್ಯ ಯುದ್ಧವನ್ನೇ ಸಾರಿದರು. ಸಮಸ್ಯೆ ಎಲ್ಲೀವರೆಗೆ ಬಂತೆಂದರೆ ಶೋಭಾರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವುದು ಮುಖ್ಯಮಂತ್ರಿಗೆ ಅನಿವಾರ್ಯವಾಯಿತು. ಇದಕ್ಕಾಗಿ ಯಡಿಯೂರಪ್ಪ ಕಣ್ಣೀರನ್ನೂ ಹಾಕಿದರು.
ಮುಳುವಾದ ಹಸ್ತಕ್ಷೇಪ
ಎಲ್ಲ ಸಚಿವರ ಕಾರ್ಯದಲ್ಲಿ ಶೋಭಾ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಾವೇ ಸಿಎಂ ಎಂಬ ದರ್ಪದಲ್ಲಿ ಬೀಗುತ್ತಿದ್ದಾರೆ ಎಂಬ ಆರೋಪಕ್ಕೆ ಶೋಭಾ ಮಾರುತ್ತರ ನೀಡಿದರಾದರೂ ಪ್ರಯೋಜನಕ್ಕೆ ಬರಲಿಲ್ಲ. ಕಾಲ ಹಾಗೇ ಉರುಳುತ್ತಿರುವ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರ ವರದಿ ಬಂದು ಯಡಿಯೂರಪ್ಪ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವ ಪ್ರಸಂಗ ಬಂತು. ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದ್ದಾಗ ಯಡಿಯೂರಪ್ಪ ಮೊದಲಿಗೆ ಸೂಚಿಸಿದ್ದು ಶೋಭಾರ ಹೆಸರನ್ನು. ಆದರೆ ಪಕ್ಷ ಮತ್ತು ಶಾಸಕಾಂಗ ಪಕ್ಷವೆರಡೂ ಆ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲ. ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಕ್ಕೆ ಬಂದರು. ತಾವೇ ಮುಖ್ಯಮಂತ್ರಿಯನ್ನಾಗಿಸಿದ ಡಿ.ವಿ.ಸದಾನಂದ ಗೌಡ ತಿರುಗಿ ಬಿದ್ದಿದ್ದಾರೆಂಬ ಭಾವನೆ ಅವರನ್ನು ಕಾಡಿತು. ಅದರ ಫಲ ಜಗದೀಶ ಶೆಟ್ಟರ್‌ಗೆ ಒಲಿದ ಸಿಎಂ ಪಟ್ಟ.
ಕೇಂದ್ರದಲ್ಲಿ ಸಚಿವರಾಗಿದ್ದ ಅನಂತಕುಮಾರ್ ನೇತೃತ್ವದಲ್ಲಿ ತಮ್ಮ ವಿರುದ್ಧ ಮಸಲತ್ತು ನಡೆದಿದೆ ಎಂಬ ತೀರ್ಮಾನಕ್ಕೆ ಬಂದ ಯಡಿಯೂರಪ್ಪನವರಿಗೆ ಬಿಜೆಪಿ ಸಹವಾಸ ಸಾಕು ಸಾಕೆನಿಸಿತ್ತು. “ಬಿಜೆಪಿ ಮುಕ್ತ ಕರ್ನಾಟಕ” ಎಂಬ ಘೋಷಣೆಯೊಂದಿಗೆ ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿದ ಶೋಭಾ, ಕಾರ್ಯಾಧ್ಯಕ್ಷರಾದರು. ಯಡಿಯೂರಪ್ಪ ಅಧ್ಯಕ್ಷ, ಶೋಭಾ ಕಾರ್ಯಾಧ್ಯಕ್ಷೆ ಜುಗಲ್ ಬಂದಿ, ೨೦೧೩ರ ಚುನಾವಣೆಯಲ್ಲಿ ಕೆಲಸಕ್ಕೆ ಬರಲಿಲ್ಲ. ಸ್ವತಃ ಶೋಭಾ ರಾಜಾಜಿನಗರದಲ್ಲಿ ಸುರೇಶ್ ಕುಮಾರ್ ವಿರುದ್ಧ ಕಣಕ್ಕಿಳಿದು ಮೂರನೇ ಸ್ಥಾನಕ್ಕೆ ಹೋದರು. ಆದರೆ ಬಿಜೆಪಿಯನ್ನು ಸೋಲಿಸುವ ಯಡಿಯೂರಪ್ಪ ಛಲ ಮಾತ್ರ ಕೆಲಸ ಮಾಡಿತು. ತಾವು ನಂಬಿದ ಲಿಂಗಾಯತ ವೀರಶೈವ ಸಮಾಜವೂ ಜೊತೆಗೆ ನಿಲ್ಲಲಿಲ್ಲ ಎಂಬ ಸತ್ಯ ಯಡಿಯೂರಪ್ಪನವರಿಗೆ ಮನವರಿಕೆಯಾಗುವ ಹೊತ್ತಿಗೆ ಸಾಕಷ್ಟು ಡ್ಯಾಮೇಜು ಆಗಿಹೋಗಿತ್ತು.
ನೀನನಗಿದ್ದರೆ ನಾನಿನಗೆ
ಹಾಗಂತ ಬಿಜೆಪಿಗೆ ಯಡಿಯೂರಪ್ಪನವರನ್ನು ಬಿಟ್ಟರೆ ಗತಿ ಇಲ್ಲವಾಗಿತ್ತು. ಪರಸ್ಪರ ಹೊಂದಾಣಿಕೆ ಆಯಿತು. ಯಡಿಯೂರಪ್ಪನವರನ್ನು ಬಿಜೆಪಿ ಅಪ್ಪಿಕೊಂಡಿತೋ ಅಥವಾ ಯಡಿಯೂರಪ್ಪನವರೇ ಬಿಜೆಪಿಗೆ ಆತು ಬಿದ್ದರೋ ಹೇಳಲಾಗದು. ಹಾಗೆ ಮರಳಿದ ಯಡಿಯೂರಪ್ಪನವರಿಗೆ ಪಕ್ಷದ ಉನ್ನತ ಸ್ಥಾನಮಾನ ಲಭ್ಯವಾಯಿತು. ೨೦೧೮ರ ಚುನಾವಣೆ ಬಂದಾಗ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಸಾರಲಾಯಿತು. ಆದರೆ ಶೋಭಾರಿಗೆ ತಾವು ಬಯಸಿದ ಸ್ಥಾನಮಾನವನ್ನು ಕೊಡುವುದು ಯಡಿಯೂರಪ್ಪನವರಿಗೆ ಸಾಧ್ಯವಾಗಲಿಲ್ಲ. ಶೋಭಾರನ್ನು ಓಲೈಸುವುದಕ್ಕೆ ಮುಖ್ಯಮಂತ್ರಿ ಕುಟುಂಬದಲ್ಲೇ ತೀವ್ರ ವಿರೋಧವೆಂಬ ಮಾತೂ ತೇಲುತ್ತಿದೆ. ಈಗ ಶೋಭಾ ದೂರದಲ್ಲಿದ್ದಾರೆ. ಆದರೆ ಇತರ ಸಚಿವರ ಖಾತೆಯಲ್ಲಿ ಹಸ್ತಕ್ಷೇಪ ನಿಂತಿಲ್ಲ. ಸಚಿವರ ಕಾರ್ಯದಲ್ಲಿ ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ದೂರು ವ್ಯಾಪಕವಾಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲೂ ಅವರ ಮಾತೇ ಅಂತಿಮ ಎಂಬ ಆಕ್ಷೇಪವೂ ಇದೆ. ಅಂದು ಇದೇ ಕಾರಣಕ್ಕಾಗಿ ಶೋಭಾರನ್ನು ಸಂಪುಟದಿಂದ ಕೈಬಿಡುವಂತೆ ಹಾದಿರಂಪ ಬೀದಿರಂಪ ಮಾಡಿದ್ದ ಎಂ.ಪಿ. ರೇಣುಕಾಚಾರ್ಯ ಈಗ ಅದೇ ಯಡಿಯೂರಪ್ಪನವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದಾರೆ. ವಿಜಯೇಂದ್ರ ವಿರುದ್ಧದ ದೂರುಗಳು ಕಪೋಲಕಲ್ಪಿತ ಎನ್ನುವುದು ರೇಣುಕಾಚಾರ್ಯ ವಾದ. ಈ ಎಲ್ಲ ಬೆಳವಣಿಗೆ ಬೆಳಕಿನಲ್ಲಿ ನೋಡಿದರೆ ಶೋಭಾರ ನೆರಳು ಎಲ್ಲೂ ಕಾಣಿಸುತ್ತಿಲ್ಲ.
ಲೋಕಸಭಾ ಸದಸ್ಯರಾದವರು ಅಭಿವೃದ್ಧಿ ಕೆಲಸ ಕಾರಣವಾಗಿ ಮುಖ್ಯಮಂತ್ರಿಗಳನ್ನು ಆಗಾಗ ಭೇಟಿ ಮಾಡಿ ಚರ್ಚಿಸುವುದು ಇದ್ದೇ ಇರುತ್ತದೆ. ಇತ್ತೀಚಿನ ವರ್ಷ,ತಿಂಗಳುಗಳಲ್ಲಿ ಶೋಭಾ ಅಂಥ ಒಂದು ಭೇಟಿಯನ್ನೂ ಮಾಡಿಲ್ಲ. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ತಪ್ಪದೇ ಕಾಣಿಸುವ ಮುಖಗಳಲ್ಲಿ ಶೋಭಾರದು ಬಹಳ ಮುಖ್ಯವಾದುದಾಗಿತ್ತು. ಈಗ ಅವರ ವಿಳಾಸವನ್ನು ಕೇಳುವಂತಾಗಿದೆ. ಯಡಿಯೂರಪ್ಪ ತಮ್ಮ ರಾಜಕೀಯ ಜೀವನದ ಸಂಕಷ್ಟದ ಸಮಯದಲ್ಲಿ ಮತ್ತೆ ಸಿಲುಕಿದ್ದಾರೆ. ಅವರಿಗೆ ನೋವು ತರುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಶೋಭಾ, ಅರ್ಥಗರ್ಭಿತ ಮೌನಕ್ಕೆ ಶರಣಾಗಿದ್ದಾರೆ.