
ಎನ್ಕ್ರಿಪ್ಟ್ ವ್ಯವಸ್ಥೆಯ ಅಭಿವೃದ್ಧಿಯ ನೋಟದ ಸುತ್ತಾ..?!
ಸಣ್ಣದಾಗಿ ನಿದ್ದೆ ಬಂದಂತಾಗಿ ವಾಚು ನೋಡಿಕೊಂಡವನು ಒಂದು ಕ್ಷಣ ಗಾಬರಿಯಾದೆ. ಆದಾಗಲೇ ರಾತ್ರಿ ಒಂದೂವರೆ ಗಂಟೆಯಾಗಿತ್ತು. ತಮ್ಮ ಮುಂದೆ ಇರುವ ಬಿಳಿಬೋರ್ಡ್ ಮೇಲೆ ಇನ್ನೂ ಬರೆಯುತ್ತಲೇ ಸಾಗಿದ AGM ಬಿ. ವಿ. ಆಚಾರ್ಯ (BVA) ಇನ್ನೂ ಒಂದೆರಡು ತಾಸುಗಳ ಮಟ್ಟಿಗೆ ಹೊತ್ತಲ್ಲದ ಹೊತ್ತಿನಲ್ಲಿ ಸಾಗುತ್ತಿದ್ದ ಮೀಟಿಂಗ್ ನಲ್ಲಿ ತಮ್ಮ ಮಾತುಗಳನ್ನು ಮುಗಿಸಿದಂತೆ ತೋರಿ ಬರಲಿಲ್ಲ. ನನ್ನ ಬಲಬದಿಗೆ ಕುಳಿತ ಸಹೋದ್ಯೋಗಿ ನಟರಾಜನ್ ಕಡೆಗೆ ತಿರುಗಿದೆ. BVA ಬರೆಯುತ್ತಿದ್ದ ಸಾಲುಗಳನ್ನು ತದೇಕಚಿತ್ತನಾಗಿ ತನ್ನ ನೋಟ್ ಬುಕ್ ನಲ್ಲಿ ನಕಲು ಮಾಡುವುದರಲ್ಲಿ ನಟರಾಜನ್ ನಿರತವಾಗಿದ್ದ. ಎಡಬದಿಗೆ ತಿರುಗಿದವನಿಗೆ ಬರುತ್ತಿದ್ದ ನಿದ್ದೆಯನ್ನು ತಡೆಯಲು ಹರಸಾಹಸ ಮಾಡುತ್ತಿದ್ದ ಚಿನ್ನದೊರೈ ಕಾಣಿಸಿದ. ಚಿನ್ನದೊರೈ ಆಚೆಗೆ ಕಣ್ಣು ಹಾಯಿಸಿದವನಿಗೆ ಅರುಣ್ ಕುಮಾರ್ ರಸ್ತೋಗಿ ಕಾಣಿಸಿದ. ತಲೆಬಗ್ಗಿಸಿ ತನ್ನ ಪಾಡಿಗೆ ತಾನು ನೋಟ್ ಬುಕ್ ನಲ್ಲಿ ಏನನ್ನೋ ಗೀಚುತ್ತಾ ಕುಳಿತಂತೆ ಕಂಡ ರಸ್ತೋಗಿ. ಇನ್ನು ನನ್ನ ಮುಂದಿನ ಸಾಲಿನಲ್ಲಿ ಕುಳಿತ ನಮ್ಮ ಬಾಸ್ ನಿಖಿಲ್ ಪರಾಟೆ ಎವೆಯಿಕ್ಕದೆ BVA ಬರೆಯುತ್ತಿದ್ದ ಬೋರ್ಡ್ ಕಡೆಗೇ ಕಣ್ಣು ನೆಟ್ಟಿದ್ದರು. ನಮ್ಮ ವಿಭಾಗದ ಜನರಲ್ ಮ್ಯಾನೇಜರ್ ಜಗದೀಶ್ ಕುಮಾರ್ ದೇವಗನ್ (JKD), ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗದ ಮುಖ್ಯಸ್ಥರಾದ ಡಾ. ಪಿ.ವಿ. ಆನಂದ್ ಮೋಹನ್ (PVM) ಅವರೊಟ್ಟಿಗೆ ಗಂಭೀರವಾದ ಚರ್ಚೆಯೊಂದರಲ್ಲಿ ನಿರತವಾಗಿದ್ದರು.

ಇಷ್ಟೆಲ್ಲಾ ನಡೆಯುತ್ತಿದ್ದದ್ದು ನಮ್ಮ ಕಂಪನಿಯ R&D ಕಟ್ಟಡದ “ಎ” ವಿಭಾಗದಲ್ಲಿ. ನಾನು ೨೦೦೨ರ ಆ ಹೊತ್ತು ಕೇಂದ್ರ ಕಚೇರಿಯ ರಕ್ಷಣಾವಲಯಕ್ಕೆ ಸಂಬಂಧ ಪಟ್ಟ ಮಾರ್ಕೆಟಿಂಗ್ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಮೂರೂ ರಕ್ಷಣಾವಲಯಗಳಿಂದ ಬರುವ ದೂರ ಸಂಪರ್ಕ ಕುರಿತಾದ ಎಲ್ಲಾ ಟೆಂಡರ್ ಗಳನ್ನೂ ನಮ್ಮ ವಿಭಾಗವೇ ಸಿದ್ದಪಡಿಸಿ ರಕ್ಷಣಾ ವಿಭಾಗಕ್ಕೆ ಸಾದರಪಡಿಸಬೇಕಿತ್ತು. ಒಮ್ಮೆಮ್ಮೆ ಹಗಲೂ ರಾತ್ರಿ ಕೆಲಸ ಮಾಡಿದರೂ ಸಮಯಕ್ಕೆ ಸರಿಯಾಗಿ ಟೆಂಡರ್ ಸಿದ್ದಪಡಿಸಲು ಆಗದೆ ಆಡಳಿತವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಆಗೆಲ್ಲಾ ನಾವು ಏನೋ ಕುಂಟುನೆಪಗಳನ್ನು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವಾದರೂ ಆಡಳಿತವರ್ಗ ಶಿಸ್ತುಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳೂ ಹೇರಳವಾಗಿದ್ದವು. ಹಾಗಾಗಿಯೇ ನಮ್ಮ ವಿಭಾಗಕ್ಕೆ ವರ್ಗಾವಣೆಯಾಗಿ ಬರಲಿಕ್ಕೆ ಕಂಪನಿಯ ಯಾವ ಅಧಿಕಾರಿಗಳೂ ತಯಾರಿರಲಿಲ್ಲ. ಬದುಕಿರುವಾಗಲೇ ನರಕದರ್ಶನವಾಗಬೇಕು ಎಂದರೆ ಮಾತ್ರ ನಮ್ಮ ವಿಭಾಗಕ್ಕೆ ಬರಬೇಕು ಎನ್ನುವುದು ಜನಜನಿತವಾದ ಮಾತಾಗಿತ್ತು. ಟೆಂಡರ್ ಗಳನ್ನು ಸಿದ್ದಪಡಿಸುವ ಹೊತ್ತು ನಾವು ನಮ್ಮ ಕಂಪನಿಯ R&D ಸೇರಿದಂತೆ ಅನ್ಯ ಸರಕಾರಿ ಮತ್ತು ಖಾಸಗಿ ವಲಯಗಳಿಂದಲೂ ಟೆಂಡರ್ ಗೆ ಬೇಕಾದ ಹಾರ್ಡವೇರ್ ಮತ್ತು ಸಾಫ್ಟ್ ವೇರ್ ಗಳ ಕ್ವೊಟೇಷನ್ ಗಳನ್ನ ತರಿಸಿ ತಾಂತ್ರಿಕವಾಗಿ ಸರಿಹೊಂದುವ ಮತ್ತು ಕಡಿಮೆ ಬೆಲೆ ಇರುವಂತ ಆದ ಉಪಕರಣಗಳನ್ನ ಆಯ್ದು ನಮ್ಮದೇ ಆದ “ಸಿಸ್ಟಂ ಇಂಜಿನಿಯರಿಂಗ್” ಬಳಸಿ ಒಂದು ಪರಿಪೂರ್ಣವಾದ ಸೊಲ್ಯೂಷನ್ ರಕ್ಷಣಾವಲಯಗಳಿಗೆ ಕೊಡಬೇಕಾಗಿತ್ತು. ಹಾಗಾಗಿ ಒಂದು ಟೆಂಡರ್ ಹಾಕಲು ಏನಿಲ್ಲವೆಂದರೂ ಎರಡರಿಂದ ಮೂರು ವಾರಗಳ ಕಾಲಾವಧಿ ಬೇಕಾಗಿತ್ತು.

ನಾವು ಹೀಗೆ ಸರಿರಾತ್ರಿಯಲ್ಲಿ ಕುಳಿತು ಸಿದ್ದಪಡಿಸುತ್ತಿರುವ ಪ್ರಸ್ತುತ ಟೆಂಡರ್ ಹೋದ ವಾರವಷ್ಟೇ ನಮ್ಮ ಕೈಸೇರಿತ್ತು. ಆದರೆ ಭೂಸೇನೆಯ ತುರ್ತು ಅಗತ್ಯತೆಯ ಸಲುವಾಗಿ ಟೆಂಡರ್ ಹಾಕಲಿಕ್ಕೆ ಕೇವಲ ಎರಡೇ ವಾರಗಳ ಗಡುವನ್ನು ವಿಧಿಸಲಾಗಿತ್ತು. ಸಾವಿರಾರು ಕೋಟಿಗಳ ಈ ವ್ಯವಹಾರವನ್ನು ಪಡೆದೇ ತೀರಬೇಕು ಎಂದು ಆಡಳಿತವರ್ಗ ನಿರ್ಧರಿಸಿದ್ದರಿಂದ ಕಳೆದ ಮೂರ್ನಾಲ್ಕು ದಿವಸಗಳಿಂದ ದಿನಕ್ಕೆ ಹದಿನೈದು ಹದಿನಾರು ಗಂಟೆಗಳು ಕೆಲಸ ಮಾಡಿದರೂ ಟೆಂಡರ್ ಇನ್ನೂ ಒಂದು ಹಂತಕ್ಕೆ ಬಂದಿರಲಿಲ್ಲ.
BVA ತಮ್ಮ ಬರವಣಿಗೆಯನ್ನ ಮುಂದುವರೆಸುತ್ತಲೇ ಹೋದರು. ಮಧ್ಯೆ ಮಧ್ಯೆ BVA ಅವರನ್ನು ತಡೆದು ಕೆಲ ತಾಂತ್ರಿಕ ವಿಷಯಗಳ ಕುರಿತಾದ ಸ್ಪಷ್ಟೀಕರಣವನ್ನ PVM ನಮಗೆ ಕೊಡುತ್ತಿದ್ದರು. PVM R&D ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದ ವ್ಯಕ್ತಿ. ಅವರ ವಯಸ್ಸು ಆ ವೇಳೆಗೆ 55ರ ಆಸುಪಾಸಿನಲ್ಲಿ ಇದ್ದಿರಬಹುದು. ಕನ್ನಡಕಧಾರಿಗಳಾಗಿ ಕೃಶಶರೀರ ಹೊಂದಿದ ಆಂಧ್ರ ಮೂಲದವರಾದ PVM ಸುಮಾರು ಇಪ್ಪತ್ತೈದು ವರ್ಷಗಳಿಗಿಂತಲೂ ಹೆಚ್ಚು ಕಾಲ ನಮ್ಮ ಕಂಪನಿಯ R&D ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತುಂಬಾ ಸರಳ ವ್ಯಕ್ತಿತ್ವದವರಾದ PVM ಬಹಳ ಸಹಾಯದ ಸ್ವಭಾವದಿಂದ ಕೂಡಿದವರು. ಹಿರಿಯರು ಕಿರಿಯರು ಎಂದು ಎಣಿಸದೆ ತಮ್ಮ ಸಂಪರ್ಕಕ್ಕೆ ಬಂದ ಯಾರಿಗೇ ಆದರೂ ತಾಂತ್ರಿಕ ವಿಷಯಗಳನ್ನು ತಿಳಿ ಹೇಳುವುದು ಎಂದರೆ PVM ಅವರು ಊಟ ತಿಂಡಿಯನ್ನೂ ಮರೆಯುತ್ತಿದ್ದರು. ದೂರಸಂಪರ್ಕ ವಿಷಯದಲ್ಲಿ ಹತ್ತಾರು ಪುಸ್ತಕಗಳನ್ನು ರಚಿಸಿದ್ದ PVM ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರದಲ್ಲಿ (IISc.,) ಸ್ನಾತಕೋತ್ತರ ಪದವಿ ಮತ್ತು ಅಮೆರಿಕೆಯ ಫಿಲಿಡೆಲ್ಫಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು.

ದೂರಸಂಪರ್ಕ ಕ್ಷೇತ್ರದಲ್ಲಿ “ಎನ್ಕ್ರಿಪ್ಶನ್” ಎನ್ನುವ ಒಂದು ವಿಶೇಷವಾದ ಶಾಖೆಯಿದೆ, ಜ್ಞಾನವಲಯವಿದೆ. ಇದು ವಾಸ್ತವವಾಗಿ ರಕ್ಷಣಾವಲಯವನ್ನೇ ಉದ್ದೇಶಿಸಿ ಅಭಿವೃದ್ದಿ ಪಡಿಸಿದ ದತ್ತಾಂಶ. ಇದು ಕೇವಲ ದತ್ತಾಂಶ ಮಾತ್ರವಾಗಿರದೆ ಸಾಕಷ್ಟು ಹಾರ್ಡ್ ವೇರ್ ಗಳನ್ನೂ ಹೊಂದಿ ಇಡೀ ದೂರ ಸಂಪರ್ಕಕ್ಷೇತ್ರದಲ್ಲಿಯೇ ಕ್ಲಿಷ್ಟಕರ ಮತ್ತು ಕಬ್ಬಿಣದ ಕಡಲೆ ಎಂದೇ ಹೆಸರಾಗಿದೆ. ಮೂಲತಃ ರಕ್ಷಣಾವಲಯದಲ್ಲಿ ನಡೆಯುವ ಅನೇಕ ಸಂಭಾಷಣೆಗಳು ಮತ್ತು ದತ್ತಾಂಶದ ವಿನಿಮಯ ಶತ್ರುಪಾಳೆಯಕ್ಕೆ ಸಿಕ್ಕರೂ ಅವುಗಳು ಎನ್ಕ್ರಿಪ್ಟ್ ಆಗಿರುವ ಕಾರಣದಿಂದಾಗಿ ಮಾಹಿತಿಯ ಸೋರಿಕೆ ಆಗುವುದಿಲ್ಲ. ನಿಮ್ಮಲ್ಲಿ “ಉಲ್ಟಾ ಫೋನ್” ನ ಬಗ್ಗೆ ಕೆಲವರಾದರೂ ಕೇಳಿರುತ್ತೀರಿ. ಸಂಭಾಷಣೆಗಾಗಿ ರಕ್ಷಣಾವಲಯದಲ್ಲಿ ಬಳಕೆಯಲ್ಲಿ ಇರುವ ಈ ಫೋನ್ ಗಳ ಸಂಭಾಷಣೆಯನ್ನು ಕದ್ದು ಆಲಿಸಿದರೂ ಸಂಭಾಷಣೆಗಳು ಅರ್ಥವಾಗುವುದಿಲ್ಲ. ಸಂಭಾಷಣೆಯನ್ನು ಮತ್ತೊಂದು ತುದಿಯಲ್ಲಿರುವ ರಕ್ಷಣಾವಲಯದ ಮತ್ತೊಬ್ಬ ಸೂಕ್ತ ಉಪಕರಣಗಳ ಸಹಾಯದಿಂದ ಮಾತ್ರ ಅರ್ಥಪೂರ್ಣವಾಗಿ ಗ್ರಹಿಸಬಲ್ಲನಲ್ಲದೆ ಮಧ್ಯೆ ಸಂಭಾಷಣೆಯನ್ನ ಕದ್ದು ಕೇಳಿಸಿಕೊಳ್ಳುವ ಪ್ರಯತ್ನ ಯಶ ನೀಡದು. ಇದು ಎನ್ಕ್ರಿಪ್ಶನ್ ನಲ್ಲಿ ಅತ್ಯಂತ ಸರಳತಂತ್ರ ಎಂದು ಗಣಿಸಬಹುದಾದರೆ ತಾಂತ್ರಿಕವಾಗಿ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಿದ ತಂತ್ರಾಂಶಗಳಲ್ಲಿ ಬಳಕೆಯಾಗುವ ಎನ್ಕ್ರಿಪ್ಶನ್ ತುಂಬಾ ಉನ್ನತ ಮಟ್ಟದ್ದಾಗಿರುತ್ತದೆ.
ಒಂದು ಎನ್ಕ್ರಿಪ್ಶನ್ ಎಷ್ಟು ಉತ್ತಮ ಮಟ್ಟದ್ದು ಎನ್ನುವುದನ್ನು ಅದನ್ನು ‘ಕ್ರಾಕ್’ ಮಾಡಲು ಬೇಕಾದ ಸಮಯದ ಆಧಾರದ ಮೇಲೆ ಲೆಕ್ಕ ಹಾಕಿ ಹೇಳುತ್ತಾರೆ. ಈ ಹೊತ್ತು ಚಾಲ್ತಿಯಲ್ಲಿರುವುವ “ಎನ್ಕ್ರಿಪ್ಶನ್ ಸಿಸ್ಟಂ” ಗಳು ತಾಂತ್ರಿಕವಾಗಿ ಸುಮಾರು ಮೂರು ವರ್ಷಗಳ ಕಾಲದ “ಕ್ರಾಕಿಂಗ್” ಸಮಯವನ್ನ ಹೊಂದಿರುತ್ತವೆ. ಇದರ ಅರ್ಥವೆಂದರೆ, ಸುಮಾರು ಮೂರು ವರ್ಷಗಳ ಕಾಲ, ದಿನವೊಂದಕ್ಕೆ ೩೪ ಗಂಟೆಗಳ ಕಾಲ ಈ ಎನ್ಕ್ರಿಪ್ಶನ್ ನ್ನು ಕ್ರಾಕ್ ಮಾಡಲು ಪ್ರಯತ್ನಪಟ್ಟರೂ ಅದು ಸಾಧ್ಯವಾಗದೇ ಹೋಗುತ್ತದೆ ಎನ್ನುವುದು. ಇದರಲ್ಲಿ ಬಹಳ ಮುಖ್ಯವಾದದ್ದು ಎಂದರೆ ಕ್ರಾಕ್ ಮಾಡುವುದು ಎನ್ಕ್ರಿಪ್ಶನ್ ರಂಗದ ನಿಷ್ಣಾತ ತಂತ್ರಜ್ಞರೇ ಎಂದರೆ ಈ ರಂಗದ ಕ್ಲಿಷ್ಟತೆಯ ಅರಿವಾಗುತ್ತದೆ.

PVM ಇಂತಹ ಎನ್ಕ್ರಿಪ್ಶನ್ ಕ್ಷೇತ್ರದ ಜಗತ್ತಿನ ಮೊದಲ ಹತ್ತು ತಜ್ಞರ ಸಾಲಿನಲ್ಲಿ ಒಬ್ಬರಾಗಿ ನಿಲ್ಲುತ್ತಿದ್ದರು ಎಂದರೆ ಅವರು ಇಂತಹ ಘಟಾನುಘಟಿಗಳು ಎನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು. ಅನೇಕ ಅಂತಾರಾಷ್ಟ್ರೀಯ ಸೆಮಿನಾರ್ ಗಳಲ್ಲಿ ಕಂಪನಿಯನ್ನು ಮತ್ತು ಭಾರತದ ದೂರಸಂಪರ್ಕವಲಯವನ್ನ ಪ್ರತಿನಿಧಿಸಿದವರು PVM. ಹಾಗಾಗಿ PVM ಎನ್ಕ್ರಿಪ್ಶನ್ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರ ಸಹೋದ್ಯೋಗಿಗಳೇ ಕೈಕಟ್ಟಿ ಅವರ ಮಾತುಗಳಿಗೆ ಕಿವಿಯಾಗುತ್ತಿದ್ದರು. ಎನ್ಕ್ರಿಪ್ಟ್ ವಿಷಯವನ್ನು ಹತ್ತಾರು ತಿಂಗಳುಗಳ ಕಾಲ ಲೈಬ್ರರಿಯಲ್ಲಿ ಕುಳಿತು ಸ್ವತಃ ಅಭ್ಯಸಿಸುವುದಕ್ಕಿಂತ PVR ಅವರ ಎನ್ಕ್ರಿಪ್ಟ್ ಕುರಿತಾದ ಮಾತುಗಳನ್ನು ಹಲವೇ ಗಂಟೆಗಳ ಕಾಲ ಕೇಳಿದರೂ ಸಾಕು ಎನ್ನುವುದು ನಮ್ಮ ಕಂಪನಿಯ R&D ವಿಭಾಗದ ಒಂದೊಂದು ಕಂಭಗಳಿಗೂ ತಿಳಿದಿದೆ ಎನ್ನುವ ಮಾತು ಕಂಭಗಳು ಸಾಲಿನಲ್ಲಿ ನಿಂತಿರುವ ಕಾರಿಡಾರ್ ನಲ್ಲಿ ಸುತ್ತುತ್ತಲೇ ಇದ್ದವು.
ಈ ಲೇಖನ ಬರೆಯುವ ಹೊತ್ತು PVM ಅಭಿವೃದ್ದಿಪಡಿಸಿ ದೇಶದ ರಕ್ಷಣಾವ್ಯವಸ್ಥೆಗೆ ಅರ್ಪಿಸಿರುವ ಎನ್ಕ್ರಿಪ್ಟ್ ವ್ಯವಸ್ಥೆಯುಳ್ಳ ಸಾವಿರಾರು ದೂರಸಂಪರ್ಕ ಕ್ಷೇತ್ರದ ಉತ್ಪನ್ನಗಳು, ಸಾಧನಗಳು ಹಗಲಿರುಳೂ ದೇಶದ ಗಡಿಯನ್ನು ಕಾಯುತ್ತಿರುವ ಮೂರೂ ಸೈನ್ಯ ಬಲಗಳ ನೆಚ್ಚಿನ ಮತ್ತು ನಂಬಿಕೆಯ ಸೀಕ್ರೆಸಿ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

ತಮ್ಮ ಅಮೋಘ ತಂತ್ರಜ್ಞಾನದ ಅರಿವಿನಿಂದ ಉಚ್ಚ ಉತ್ಪಾದನೆಗಳನ್ನು ತಯಾರಿಸಿ ದೇಶಸೇವೆಗೆ ಮುಡುಪಾಗಿಸಿರುವ PVM ಭಾರತ ದೇಶದ ಗಡಿಯೊಳಗಣ ಒಬ್ಬ ಶ್ರೇಷ್ಠ ಸೈನಿಕ ಅನ್ನುವುದನ್ನು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ತಿಳಿದಿರುವ ಸಂಗತಿ. ಕೇವಲ ಸೈನಿಕ ಸಮವಸ್ತ್ರ ಧರಿಸಿದವರು ಮಾತ್ರ ಸೈನಿಕರು ಎಂದರೆ ತಪ್ಪಾದೀತು; ನಾಗರೀಕ ವಸ್ತ್ರದಲ್ಲಿ ಇರುವ PVM ಅಂತಹ ಅನೇಕ ಸೈನಿಕರ ನೆರವಿನಿಂದ ಮಾತ್ರ ಇಂದು ಇಡೀ ವಿಶ್ವದಲ್ಲಿ ತಾಂತ್ರಿಕತೆಯ ದೃಷ್ಟಿಯಿಂದ ಭಾರತದ ರಕ್ಷಣಾವಲಯದಲ್ಲಿ ಶಕ್ತಿಶಾಲಿ ಎನಿಸಿದೆ. ಸೈನಿಕರು ನಮ್ಮ ಗಡಿಗಳನ್ನು ಎವೆಯಿಕ್ಕದೆ ಕಾಯುತ್ತಿರುವ ಹೊತ್ತೇ PVM ಅಂತಹ ಸಾಟಿಯಿಲ್ಲದ ತಂತ್ರಜ್ಞರು ತಮ್ಮ ಪ್ರಯೋಗಶಾಲೆಗಳಲ್ಲಿ ಪರಮೋಚ್ಛ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ನೆರವಿನಿಂದ ಸೈನಿಕಬಲದ ಬೆನ್ನೆಲುಬುಗಳಾಗುತ್ತಾರೆ, ಸೈನಿಕರು ನಿದ್ದೆಗೆಡುವ ಪ್ರತಿರಾತ್ರಿಗೆ ಸಂವೇದಿಯಾಗಿ PVM ಅಂತಹ ತಂತ್ರಜ್ಞರು ತಾವೂ ಕೂಡ ನಿದ್ದೆಗೆಟ್ಟು ತಂತ್ರಾಂಶವನ್ನು ಅಭಿವೃದ್ದಿ ಪಡಿಸುವ ಮುಖೇನ ತಾಯಿ ಭಾರತಿಯ ಪಾದಾರವಿಂದಗಳಲ್ಲಿ ದಣಿವರಿಯದ ಸೇವೆಗೆ ನಾಂದಿ ಹಾಡುತ್ತಾರೆ.
VA ಅವರು ತಾವು ಟೆಂಡರ್ ಬಗ್ಗೆ ಹೇಳಬೇಕಾದ ವಿಷಯಗಳನ್ನು ಮುಗಿಸಿದಾಗ ಸಮಯ ರಾತ್ರಿ ಎರಡೂವರೆಯನ್ನ ದಾಟಿತ್ತು

. ಇನ್ನು ಟೆಂಡರ್ ಗೆ ಬೇಕಾದ ಎನ್ಕ್ರಿಪ್ಶನ್ ಸಿಸ್ಟಂ ಬಗ್ಗೆ ವಿವರಿಸಲು PVM ಎದ್ದು ನಿಂತರು. ಅಲ್ಲಿಯವರೆಗೂ ಸ್ವಲ್ಪ ತೂಗುಡಿಸುತ್ತಿದ್ದ ನಾನೂ ಮತ್ತು ನನ್ನ ಇತರ ಸಹೋದ್ಯೋಗಿಗಳು ಮೈಮೇಲೆ ತಣ್ಣೀರುಬಿದ್ದವರಂತೆ ಎಚ್ಚರಗೊಂಡೆವು. ಕಣ್ಣುಗಳನ್ನು ಉಜ್ಜಿಕೊಂಡು PVM ಅವರ ವಿವರಣೆಯನ್ನ ಕೇಳಲು ಮೊದಲು ಮಾಡಿದೆವು. ರಾತ್ರಿಯ ಈ ಹೊತ್ತಿನಲ್ಲಿಯೂ PVR ಅವರ ಮಾತಿನ ಒಂದು ಶಬ್ದವನ್ನೂ ತಪ್ಪಿಸಿಕೊಳ್ಳಲು ನಾವ್ಯಾರೂ ತಯಾರಿರಲಿಲ್ಲ. ತಾವು ಹೇಳಬೇಕಾಗಿದ್ದುದನ್ನು ಬಹಳ ಅಚ್ಚುಕಟ್ಟಾಗಿ ಮತ್ತು ತಮ್ಮ ಎಂದಿನ ಶೈಲಿಗಿಂತ ತುಸುಭಿನ್ನವಾದ ಅವಸರದ ಗತಿಯಲ್ಲಿ ವಿವರಿಸಿ PVM ಮಾತನ್ನು ಮುಗಿಸಿದಾಗ ಬೆಳಗಿನ ಜಾವ ನಾಲ್ಕು ಗಂಟೆಗೆ ಇನ್ನು ಕೇವಲ ಹದಿನೈದು ನಿಮಿಷಗಳು ಬಾಕಿ ಉಳಿದಿದ್ದವು.
ಅಂದಿನ ಅಹೋರಾತ್ರಿಯ ಮೀಟಿಂಗ್ ಅಲ್ಲಿಗೇ ಕೊನೆಯಾಯಿತು. ಮಾರನೇ ದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದು ಮತ್ತೆ ಟೆಂಡರ್ ಕೆಲಸವನ್ನು ಮುಂದುವರೆಸಬೇಕಾಗಿತ್ತು. ಹಾಗಾಗಿ ಆ ಹೊತ್ತಿನಲ್ಲಿ ಅಲ್ಲಿದ್ದ ಪ್ರತಿಯೊಬ್ಬರನ್ನೂ ಕಾಡುತ್ತಿದ್ದದ್ದು ಒಂದೇ ಪ್ರಶ್ನೆ, ಎಷ್ಟು ಬೇಗ ಹೋಗಿ ಮನೆಯನ್ನು ಸೇರಿಕೊಳ್ಳಬಹುದು? ಎನ್ನುವುದು.
ನಟರಾಜನ್ ಮತ್ತು ರಸ್ತೋಗಿ ಕೆ.ಆರ್. ಪುರಂನಲ್ಲಿಯೇ ಇದ್ದ ಕೃಷ್ಣಪ್ಪ ಲೇಔಟ್ ನಲ್ಲಿ ವಾಸಿಸುತ್ತಿದ್ದರು ಮತ್ತು ಮೀಟಿಂಗ್ ಮುಗಿದ ಮರುಘಳಿಗೆ ನಟರಾಜನ್ ಅವರ ಸ್ಕೂಟರ್ ನಲ್ಲಿ ಮನೆ ಕಡೆ ಹೊರಟೇಬಿಟ್ಟರು. BVA ಬಸವೇಶ್ವರ ನಗರದಲ್ಲಿ ವಾಸಿಸುತ್ತಿದ್ದರು, ಅವರೂ ಕೂಡ ತಮ್ಮ ಕಾರಿನಲ್ಲಿ ಮನೆಯ ಕಡೆಗೆ ಹೊರಟರು. ಇನ್ನು JKD ಕಾರ್ಖಾನೆಯ ಪಕ್ಕದಲ್ಲೇ ಇರುವ ಕಾಲೋನಿಯಲ್ಲಿ ವಾಸಿಸುತ್ತಿದ್ದರು. JKD ಯವರಿಗಾಗಿ ಕಾಯುತ್ತಿದ್ದ ಡ್ರೈವರ್ ಸಂಪತ್ JKDಯವರ ಒಟ್ಟಿಗೆ ಮೀಟಿಂಗ್ ಮುಗಿದ ಮರುಕ್ಷಣದಲ್ಲಿಯೇ ಕಾಲುಕಿತ್ತಿದ್ದ. ಹೀಗೆ ನೋಡು ನೋಡುತ್ತಲೇ ಖಾಲಿಯಾದ PVM ಅವರ ಆಫೀಸ್ ಕಚೇರಿಯಲ್ಲಿ ನಾನು, PVM ಮತ್ತು ಅವರ ಡ್ರೈವರ್ ನಾಗರಾಜ್ ಅಷ್ಟೇ ಉಳಿದಿದ್ದು.
ನಾನೋ ದೂರದ ಕತ್ತರಗುಪ್ಪೆಯಿಂದ ಕಂಪನಿಯ ಬಸ್ ನಲ್ಲಿ ಕಾರ್ಖಾನೆಗೆ ಬಂದು ಹೋಗಿ ಮಾಡುತ್ತಿದ್ದೆ. ಮನೆಗೆ ಹೊರಡಲು ಆಫೀಸ್ ಬಾಗಿಲು ದಾಟಿ ಹೊರಟವನಿಗೆ “ಸರ್ ಸರ್” ಎನ್ನುವ ನಾಗರಾಜ್ ಕೂಗು ಕೇಳಿಸಿತು. ಬೆನ್ನ ಹಿಂದೆಯೇ ಒಳಗಿನಿಂದ ಓಡಿ ಬಂದ ನಾಗರಾಜ್ “ಸಾರ್, ಬಾಸ್ ನಿಮ್ಮನ್ನು ಕರೆಯುತ್ತಿದ್ದಾರೆ” ಎಂದು ಹೇಳಿದ. ಇದನ್ನು ಕೇಳಿ ನನಗೆ ಒಂದು ಕ್ಷಣ ತುಂಬಾ ಬೇಸರವಾಗಿತು. ಮುಂಜಾನೆ ನಾಲ್ಕನ್ನು ಸಮೀಪಿಸುತ್ತಿರುವ ಸಮಯ ಒಂದೆಡೆ, ಇನ್ನೂ ಪ್ರಯಾಣಿಸಬೇಕಾದ ಮನೆಯವರೆಗಿನ ಸುಮಾರು ಮೂವತ್ತು ಕಿ.ಮೀ. ದೂರದ ಫಾಸಲೆ ಇನ್ನೊಂದೆಡೆ, ಬೆಳಿಗ್ಗೆ ಎಂಟಕ್ಕೇ ಎದ್ದು ಒಂಬತ್ತಕ್ಕೆ ಹಿಡಿಯಬೇಕಾದ ಫ್ಯಾಕ್ಟರಿ ಬಸ್ ಇನ್ನೊಂದೆಡೆ, ಒಟ್ಟಿನಲ್ಲಿ ಆ ಹೊತ್ತು ನನಗೆ ತಲೆಕೆಟ್ಟಂತಾಗಿತ್ತು. ಇದೇ ಗುಂಗಿನಲ್ಲಿ ಆಫೀಸ್ ಒಳಗೆ ಕಾಲು ಹಾಕಿದವನು ಸೀದಾ PVM ಮುಂದೆ ಬಂದು ನಿಂತಿದ್ದೆ. “ನೀವೆಲ್ಲಿಗೆ ಹೋಗಬೇಕು?” ಎನ್ನುವ PVM ಮಾತಿಗೆ ಯಾಂತ್ರಿಕವಾಗಿ “ಕತ್ತರಗುಪ್ಪೆ” ಎಂದು ಉತ್ತರಕೊಟ್ಟೆ. ಒಂದು ಅರೆಘಳಿಗೆಯೂ ಯೋಚಿಸದ PVM “ನಾಗರಾಜ್, ಇವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅವರು ಹೇಳಿದಲ್ಲಿ ಬಿಟ್ಟು ಬನ್ನಿ” ಎಂದು ಹೇಳಿದರು. ನಾನು ತಟ್ಟನೇ “ಬೇಡ ಸಾರ್ , ಪರವಾಗಿಲ್ಲ, ನಾನು ಆಟೋ ಹಿಡಿದು ಹೋಗುತ್ತೇನೆ” ಎಂದೆ. “ಈ ಹೊತ್ತಿನಲ್ಲಿ ನಿಮಗೆ ಕತ್ತರಗುಪ್ಪೆಗೆ ಇಲ್ಲಿಂದ ಹೋಗಲಿಕ್ಕೆ ಆಟೋಗಳು ಸಿಗಬೇಕಲ್ಲ?” ಎಂದರು PVM. “ಇಲ್ಲ ಸಾರ್, ಇಲ್ಲಿಂದ ಮಾರ್ಕೆಟ್ ಗೆ ಹೋದರೆ ಅಲ್ಲಿಂದ ರಾಮಕೃಷ್ಣ ಆಶ್ರಮಕ್ಕೆ ಮತ್ತೆ ಅಲ್ಲಿಂದ ಕತ್ತರಗುಪ್ಪೆಗೆ ಹೋಗಲಿಕ್ಕೆ ಸಾಕಷ್ಟು ಆಟೋ ಸಿಗುತ್ತವೆ” ಎಂದೆ. ಜೋರಾಗಿ ನಗಾಡಿದ PVM “ನೀವು ಮನೆ ಮುಟ್ಟುವುದರಲ್ಲಿ ಆಫೀಸ್ ಗೆ ಬರುವ ಹೊತ್ತಾಗಿರುತ್ತದೆ, ನಾಳೆ ಏನು ಆಫೀಸಿಗೆ ಚೆಕ್ಕರ್ ಹಾಕುವ ವಿಚಾರವಿದೆಯೇ? ನೀವು ಮತ್ತು ನಟರಾಜನ್ ಈ ಟೆಂಡರ್ ಮುಗಿಯುವವರೆಗೆ ರಜಾದ ಬಗ್ಗೆ ಯೋಚಿಸಲೂ ಬೇಡಿ, JKD ನಿಮ್ಮನ್ನು ನೇಣಿಗೆ ಹಾಕಿಬಿಡುತ್ತಾರೆ, ಅಷ್ಟೇ” ಎಂದರು. “ಸಾರ್, ನಿಮ್ಮನ್ನು ಮನೆಗೆ ತಲುಪಿಸಿ ಇವರನ್ನು ಕತ್ತರಗುಪ್ಪೆಗೆ ಕರೆದೊಯ್ಯುತ್ತೇನೆ” ಎಂದು PVM ಆವರನ್ನು ಉದ್ದೇಶಿಸಿ ನುಡಿದ ನಾಗರಾಜ್ ಗೆ “ಬೇಡಪ್ಪಾ, ನನ್ನ ಮನೆ ಇಲ್ಲಿಯೇ ಕಾಲೋನಿಯಲ್ಲಿದೆ, ನಡೆದೇ ಹೋಗುತ್ತೇನೆ. ಇವರಿಗೆ ತಡವಾಗುತ್ತಿದೆ, ಅವರು ನಾಳೆ ಬೇರೆ ಬೇಗನೇ ಆಫೀಸ್ ಗೆ ಬರಬೇಕು, ಅವರನ್ನು ಆದಷ್ಟು ಶೀಘ್ರ ಮನೆ ತಲುಪಿಸು” ಎಂದು ಹೇಳಿ ಆಫೀಸ್ ನ ಬಾಗಿಲು ಹಾಕಲು ಜವಾನ್ ವಿಕ್ಟರ್ ಗೆ ಆಜ್ಞಾಪಿಸಿ ಸರಸರನೆ ತಮ್ಮ ಮನೆಯತ್ತ ನಡೆದೇಬಿಟ್ಟರು.

ದಾರಿಯುದ್ದಕ್ಕೂ ನಾಗರಾಜ್ PVM ಬಗ್ಗೆ ಅನೇಕ ಖಾಸಗಿ ವಿಷಯಗಳನ್ನು ಬಚ್ಚಿಟ್ಟ. ಕೇವಲ ಎರಡೇ ತಿಂಗಳುಗಳ ಹಿಂದೆ PVM ಪತ್ನಿ ಕ್ಯಾನ್ಸರ್ ನಿಂದ ತೀರಿಕೊಂಡಿದ್ದು, ತಿಂಗಳಲ್ಲಿ ಬಹಳಷ್ಟು ದಿನಗಳ ಕಾಲ PVM ತಡರಾತ್ರಿಯರೆಗೆ ಆಫೀಸ್ ನಲ್ಲಿಯೇ ಕೆಲಸ ಮಾಡುವುದು, ತಮ್ಮನ್ನು ಸಾಯಂಕಾಲದ ಆರರ ಸುಮಾರಿಗೇ ಮನೆಗೆ ಕಳುಹಿಸಿ ಆಫೀಸ್ ನಂತರ ತಮ್ಮ ಕ್ವಾರ್ಟರ್ಸ್ ಗೆ ನಡೆದೇ ಹೋಗುವುದು, ತಮ್ಮ ಇಬ್ಬರು ಮಕ್ಕಳ ಶಾಲಾ ಖರ್ಚನ್ನು ಹಲವಾರು ವರ್ಷಗಳಿಂದ PVM ಭರಿಸುತ್ತಿರುವುದು ಹೀಗೇ ಹಲವು ಹತ್ತು ವಿಚಾರಗಳನ್ನು ನಾಗರಾಜ್ ಹೇಳುತ್ತಲೇ ಹೋಗುತ್ತಿದ್ದ, ಆದರೆ ಅವುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನ ನನ್ನಲ್ಲಿ ಇರಲಿಲ್ಲ. ರಾತ್ರಿಯ ಊಟ ಕೂಡಾ ಸರಿಯಾಗಿ ಆಗಿರಲಿಲ್ಲ, ಎರಡನೇ ಶಿಫ್ಟ್ ನಲ್ಲಿ ಮಾಡಿದ ಉಂಡ ಮುಷ್ಟಿ ಅನ್ನ ಹೊಟ್ಟೆಯಲ್ಲಿ ಭಸ್ಮವಾಗಿ ವರ್ಷಗಳೇ ಕಳೆದಿವೆ ಎನ್ನಿಸುತ್ತಿತ್ತು. ಹಾಗೆಯೇ ಅರೆಗಣ್ಣಿನಲ್ಲಿ ಸಣ್ಣಗೆ ನಿದ್ದೆ ಮಾಡುತ್ತಿದ್ದೆ. “ಸಾರ್, ೪೩ಎ ಬಸ್ ಸ್ಟಾಪ್ ಬಂತು, ಯಾವ ಕಡೆ ತಿರುಗಬೇಕು” ಎನ್ನುವ ನಾಗರಾಜ್ ಮಾತಿನಿಂದ ಬೆಚ್ಚಿಬಿದ್ದವನಾಗಿ “ಬಲಗಡೆಗೆ” ಎಂದೆ. ೪೩ಎ ಬಸ್ ಸ್ಟಾಪ್ ನಿಂದ ಕೇವಲ ಮೂರು ನಿಮಿಷಗಳ ಪ್ರಯಾಣದ ನಂತರ ನನ್ನ ಮನೆ ಮುಂದೆ ಬಂದು ನಿಂತಿದ್ದೆ. ತಡಬಡಿಸಿ ಕಾರು ಇಳಿದವನು ಮೊದಲನೇ ಮಹಡಿಯಲ್ಲಿದ್ದ ಮನೆಯನ್ನು ಎತ್ತಲು ಅನುವಾದವನನ್ನು ತಡೆದ ನಾಗರಾಜ್ “ಸಾರ್, ನಾಳೆ ಬೆಳಿಗ್ಗೆ ಬಸ್ ಗೆ ಹೋಗಬೇಡಿ, ಒಂಬತ್ತರ ಸುಮಾರಿಗೆ ನಾನೇ ಕಾರ್ ತರುತ್ತೇನೆ. ನನ್ನ ಮನೆ ಇಲ್ಲಿಯೇ ಗಿರಿನಗರದ ನಾಗೇಂದ್ರ ಬ್ಲಾಕ್ ನಲ್ಲಿದೆ. PVM ಸಾಹೇಬರು ಬೆಳಿಗ್ಗೆ ನಿಮ್ಮನ್ನು ಕಾರ್ಖಾನೆಗೆ ನನ್ನ ಕಾರ್ ನಲ್ಲಿಯೇ ಕರೆತರಲು ತಾಕೀತು ಮಾಡಿದ್ದಾರೆ. ನಿಮಗೆ ಈ ವಿಷಯವನ್ನು ತಿಳಿಸಿ ಬೆಳಿಗ್ಗೆ ಒಂದು ಗಂಟೆ ಮಟ್ಟಿಗಾದರೂ ಹೆಚ್ಚು ನಿದ್ದೆ ಮಾಡಲು ತಿಳಿಸಿದ್ದಾರೆ” ಎಂದನು. ತೇಲಿ ಬರುತ್ತಿದ್ದ ಕಣ್ಣುಗಳು ಅನಾಯಾಸವಾಗಿ ತೆರೆದುಕೊಂಡಂತೆ ಅನಿಸಿತು, ಕಣ್ಣುಗಳು ಸ್ವಲ್ಪ ಒದ್ದೆಯಾದಂತೆ ಭಾಸವಾಗಿ ಕಣ್ಣಂಚಿನಲ್ಲಿ ಒಂದೆರೆಡು ಹನಿಗಳು ಅಪ್ರಯತ್ನಪೂರ್ವಕವಾಗಿ ನೆಲಕ್ಕುರಳಿದವು.
ಇದೇ ಕಣ್ಣುಗಳಲ್ಲಿ ಆನಂದ ಬಾಷ್ಪಗಳನ್ನ ಮತ್ತೊಮ್ಮೆ PVM ಕಾರಣಕ್ಕಾಗಿಯೇ ಸುರಿಸಬೇಕಾಗಿ ಬಂದಿದ್ದು PVM ಅವರಿಗೆ ೨೦೦೬ ರಲ್ಲಿ ದೊರೆತ ರಾಷ್ಟ್ರಪತಿಗಳ ವಿಶೇಷಪದಕಕ್ಕಾಗಿ ಮತ್ತು ೨೦೧೦ ರ ಸುಮಾರಿಗೆ ದೊರೆತ ಪದ್ಮಪ್ರಶಸ್ತಿಯಿಂದಾಗಿ.