ಎದೆಯ ಕದಗಳು ಮುಚ್ಚಿದಾಗ…
ಕಾವ್ಯವು ಆನಂದದ ಅಭಿವ್ಯಕ್ತಿಯಾಗಿರುವಂತೆಯೇ ನೋವಿನ ನಿರೂಪಣೆಯೂ ಆಗಿದೆ.ಕಾವ್ಯದ ಅಭಿವ್ಯಕ್ತಿಯಲ್ಲಿ ?ತ್ಪ್ರೇಕ್ಷೆಯ ಗುಣವಿರುವಂತೆಯೇ ವರ್ತಮಾನದ ವಾಸ್ತವವೂ ಅಡಗಿದೆ.ಕನ್ನಡಿಗರನ್ನ ಕವಿರಾಜಮಾರ್ಗಕಾರ ರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದ ಮಾತು ಅರ್ಥಪೂರ್ಣವಾದುದು.ವೈಭವೀಕರಣ ಮತ್ತು ಹೊಗಳಿಕೆಗಳಲ್ಲಿ ಹೆಚ್ಚು ಮುಳುಗದ ಜನಪದ ಕಾವ್ಯ ತನ್ನ ಸಾಮಾಜಿಕ ಅನುಭವಗಳನ್ನೇ ಹಾಡು ಮಾಡಿದೆ.ಹೆಣ್ಣು ಮತ್ತು ಹೆಣ್ಣಿನ ಶ್ರಮ ಇಲ್ಲಿ ಹಾಡಾಗಿ ಮೂಡಿದೆ.ಜನಪದರಂತೆ ಕಾವ್ಯಗಳಲ್ಲಿ ಈ ಬಗೆಯ ಶ್ರಮಿಕರ ನುಡಿಯನ್ನ ದಾಖಲಿಸಲು ಕನ್ನಡ ಕಾವ್ಯ ಬಂಡಾಯ ಮತ್ತು ದಲಿತ ಕಾವ್ಯದ ತನಕ ಕಾಯಬೇಕಾದ್ದು ವಿಪರ್ಯಾಸವೇ ಎನ್ನಬಹುದು.
ದೇಹದ ಹಸಿವು ಮಾನವನಿಗೂ ಪ್ರಾಣಿಗೂ ಒಂದೇ ಆದರೂ ಹಸಿವನ್ನ ಪೂರೈಸಿಕೊಳ್ಳುವ ವಿಧಾನ ಇಬ್ಬರನ್ನೂ ಭಿನ್ನವಾಗಿಸಿದೆ. ಹಸಿವಿನ ಪೂರೈಕೆಯ ವೈವಿಧ್ಯತೆಗಳೇ ಮಾನವನನ್ನ ಶ್ರಮಿಕನನ್ನಾಗಿ ಪರಿವರ್ತಿಸಿವೆ,ಮಾನವೀಕರಣಗೊಳಿಸಿವೆ.
ಶ್ರಮಎಂದರೇನು? ಶ್ರಮದ ಮಹತ್ವ ಮತ್ತು ಶ್ರಮದ ಬಹುವಿಧಾನಗಳನ್ನ ಕುರಿತು ಕನ್ನಡ ಕಾವ್ಯ ಆದಿಯಿಂದಲೂ ಪ್ರತಿಕ್ರಿಯಿಸಿದೆ.ಜನಪದರು ದೇಹ ಶ್ರಮಕ್ಕೆ ಒತ್ತು ನೀಡಿದವರು.ಅವರ ಕಾವ್ಯದಲ್ಲಿ ನೀರು ಮತ್ತು ಮಣ್ಣುಗಳು ದೇವತೆಗಳಾಗಿವೆ.
ಒಕ್ಕಲುತನವೇ ಪ್ರಧಾನವಾದ ಇವರೊಳಗೆ ಒಕ್ಕಲು ಮೂಲದ ಹಸು ಮತ್ತು ಎತ್ತುಗಳು ದೇವರಾಗಿವೆ.ಪರಿಕರಗಳು ದೇವರ ಸಂಕೇತಗಳಾಗಿವೆ. ಮಣ್ಣನ್ನೇ ಆಶ್ರಯಿಸಿದ ರೈತ ತನ್ನನ್ನ ಮಣ್ಣಿನ ಮಗನೆಂದೇ ಕರೆದು ಕೊಂಡಿದ್ದಾನೆ.ಪುರಾಣವೂ ಧಾನ್ಯ ಲಕ್ಷ್ಮಿ ಎಂಬ ಸ್ತ್ರೀ ದೇವತೆಯನ್ನೇ ಬೆಳೆಯ ದೇವತೆಯನ್ನಾಗಿಸಿದೆ. ಕೃಷಿ ಕುರಿತಂತೆ ರಾಮಾಯಣ ಕಾಲದಿಂದಲೂ ಉಲ್ಲೇಖಗಳಿರುವುದನ್ನ ನೋಡಬಹುದು.”ಬುಡಕಟ್ಟು ಜನರು ಕಾಡುಗಳಲ್ಲಿ ವಾಸಮಾಡುತ್ತಾ ಬೇಟೆಯಾಡುತ್ತಾ ಆಹಾರ ಸಂಗ್ರಹಿಸುತ್ತಾ ಹೊಟ್ಟೆ ಹೊರೆಯುವುವಾಗ ಕುಮುರಿ ಕೃಷಿಯನ್ನ ಅವಲಂಬಿಸಿದರು.ಕಾಡುಗಳನ್ನ ಸುಟ್ಟು ಕೃಷಿ ಭೂಮಿಯನ್ನಾಗಿ ತತ್ಕಾಲಿಕವಾಗಿ ಮಾಡುತ್ತಾ ಸಾಗುವುದು.ಮುಂದುವರೆದು ನದೀ ಬಯಲುಗಳಲ್ಲಿ ಮತ್ತು ಗುಡ್ಡ ಬೆಟ್ಟಗಳ ತಪ್ಪಲುಗಳಲ್ಲಿ ಆತ ತಳ ಊರಿದಂತೆಲ್ಲಾ ನೀರು ಯಾವಾಗಲೂ ಹರಿಯುವಲ್ಲಿ ಸ್ಥಿರ ಕೃಷಿ ಪದ್ದತಿ ಆರಂಭವಾಯಿತು.ಸಿಂಧೂ ಸಂಸ್ಕೃತಿಯು ದ್ರಾವಿಡ ವ್ಯವಸಾಯದ ಮೂಲ ಎನ್ನಬಹುದು.ಅಲ್ಲಿನ ಕಾಡು ಸುಟ್ಟ ಕೃಷಿಯೋಗ್ಯ ಭೂಮಿಯನ್ನ ಸೀತಾ ಭೂಮಿಯೆಂದೂ,ಅಂತಹ ಭೂಮಿಯ ಒಡೆಯನನ್ನ ಸೀತಾಧ್ಯಕ್ಷ ಎಂದೂ ಕರೆಯಲಾಗುತಿತ್ತು. ತಾತ್ಕಾಲಿಕ ವಲಸೆಗಳು ಬದಲಾಗಿ ಮನೆಗಳು ಮತ್ತು ಗ್ರಾಮಗಳು ರೂಪುಗೊಂಡವು.ಸಾಮೂಹಿಕ ಆಸ್ತಿಯಾಗಿದ್ದ ಭೂಮಿ ಗಣನೀಯವಾಗಿ ರಾಜನ ಅಥವಾ ಕುಟುಂಬಗಳ ಖಾಸಗಿ ಆಸ್ತಿಯಾಗಿ ಬದಲಾಯಿತು.
ಕಬ್ಬಿಣ ಯುಗದ ನಂತರ ಕೃಷಿಯ ನೇಗಿಲ ಕುಳ,ಕಾಡು ಸವರುವ ಕುಡುಗೋಲು,ಕೊಡಲಿ,ಮಚ್ಚು,ಆವಿಷ್ಕಾರಗೊಂಡು ಸ್ಥಿರ ಕೃಷಿ ಹುಟ್ಟಿ ಅದು ಖಾಸಗೀ ಆಸ್ತಿಯಂತೆ ವಿಸ್ತರಿಸಿಕೊಂಡಿತು.”
ಕರ್ನಾಟಕದಲ್ಲಿ ಒಕ್ಕಲುತನವನ್ನ ಆರಂಭ,ವ್ಯವಸಾಯ,ಬೇಸಾಯ,ಉಳುಮೆ,ಸಾಗುವಳಿ,ಕಮತ,ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.
ಮಣ್ಣನ್ನ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನುಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು.
ಎಂದು ರೈತ ಮಣ್ಣಿಗೆ ಮಹತ್ವ ನೀಡಿದ್ದಾನೆ. ಮಣ್ಣು ಅಕ್ಷರಕಾವ್ಯಕ್ಕೂ ಜನಪದ ಕಾವ್ಯಕ್ಕೂ ತಾಯಿಯಾಗಿಯೇಕಂಡಿದೆ. ಮಣ್ಣಿನ ಮೂಲ ಪ್ರಾಣವಾಗಿದೆ,ಅನ್ನವಾಗಿದೆ,ಬದುಕಾಗಿದೆ. ಮಣ್ಣಿನ ಮೂಲ ಸಂಪತ್ತಾಗಿದೆ,ಅಧಿಕಾರ ಮೂಲವಾಗಿದೆ. ಸಂಗ್ರಾಮ ಮತ್ತು ಪೌರುಷ ಪ್ರದರ್ಶನದ ತಾಣವಾಗಿದೆ.ಜನಪದರಲ್ಲಿ ಮಣ್ಣಿನ ಮೂಲಕ ಸಾಮಾಜಿಕ ಸಂಬಂಧಗಳು ಹಾಡಾಗಿ ಅರಳಿದರೆ ಅಕ್ಷರಕಾವ್ಯದಲ್ಲಿ ಮಣ್ಣಿನ ಮೂಲಕ ರಾಜ ಮಹರಾಜರ ನಿಲುವುಗಳು ಕಾವ್ಯಗಳಾಗಿವೆ.
ಎತ್ತು ಎನಬಹುದೆ ಎಡಚೋರಿ ಬಸವನ
ಸುತ್ತೇಳು ಲೋಕ ಸಲಹೋನು ಬಸವನ
ಸತ್ವ ಮೆರೆಯುವುದೆ ಧರೆಯಲ್ಲಿ.
ಎಂದು ಶ್ರಮ ಮೂಲವನ್ನ ಹೊಗಳುವ ಜನಪದಕಾವ್ಯ ದೇಸೀ ನೆಲೆಯನ್ನ ದೇಸೀ ಶ್ರಮಗಳನ್ನ ಕೊಂಡಾಡುತ್ತದೆ.ಮನೆಯೇ ಇಲ್ಲಿ ಪ್ರಧಾನ.ಮನೆಯೊಳಗಿನ ಜೀವಗಳು, ಜೀವದ ಭಾವಗಳೇ ಇಲ್ಲಿ ಪ್ರಧಾನ. ಹಾಲುಂಡ ತವರನ್ನ ಜನಪದಹೆಣ್ಣು ಕರಕೀಯ ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ ಎಂದು ಹರಸುತ್ತಾಳೆ.ಆಕೆಯ ಹಾಡೊಳಗೆ ಮಣ್ಣು ಮೂಲದ ಹಂತಿಹಾಡು,ಒಕ್ಕುವ,ಬೀಸುವ ಹಾಡುಗಳು,ಮಳೆ ಹಾಡುಗಳು,ಗುರ್ಚಿಹಾಡುಗಳು,ಜೋಕುಮಾರನ ಹಾಡುಗಳು ಹರಿದಾಡಿವೆ.ಭೂಮಿ ಹುಣ್ಣಿಮೆ,ಕಾರು ಹುಣ್ಣಿಮೆ,ಸಂಕ್ರಾಂತಿ,ದಸರ,ಯುಗಾದಿಯ ಹಲವು ಹಬ್ಬಗಳು ಮೈತಳದಿವೆ.
’ರಾಜಾ ಪ್ರತ್ಯಕ್ಷದೇವತಾಎಂದು ಕೊಂಡಾಡುವ ಅಕ್ಷರಕಾವ್ಯದ ಅರಮನೆಯ ಅಸ್ತಿತ್ವ ನಿಂತಿರುವುದೂ ಭೂಮಿಯ ಸಂಪಾದನೆಯ ಹೋರಾಟಗಳ ಮೇಲೆಯೇ. ಇಲ್ಲಿ ಅಧಿಕಾರ ದಾಹಗಳು ಸರ್ವೇಸಾಮಾನ್ಯ.ಪ್ರೀತಿಗಿಂತಲೂ ಬಲಪ್ರದರ್ಶನ ಇಲ್ಲಿ ಕಾಣುತ್ತವೆ.ರಾಜರ ನಜರನ್ನೇ ಹೊತ್ತು ನಿಂತ ಈ ಕನ್ನಡ ಕಾವ್ಯಗಳಲ್ಲಿ ಸಾಮಾನ್ಯ ರಾಜರಿಗಾಗಿ ಪ್ರಾಣ ನೀಡುವ ರಕ್ತ ಹರಿಸುವ ಸದಾ ಯುದ್ಧ ಮುಖಿಯಾದ ಲೆಂಕವಾಳಿ,ಜೋಳವಾಳಿ,ವೇಳವಾಳಿ,ಗರುಡ ಮೊದಲಾದ ಸಾವಿರ ಸಾವಿರ ಸಾವಿನ ಸರದಿಯಾಗಿದ್ದಾನೆ. ಅಕ್ಷರ ಕಾವ್ಯದಲ್ಲಿ ಉಳುಮೆಯೆಂಬ ಶ್ರಮಕ್ಕೆ ಮಹತ್ವ ಬಂದದ್ದು ವಚನಕಾರರ ಕಾಲಕ್ಕೇ.
“ನಾ ಆರಂಭವ ಮಾಡುವೆನಯ್ಯಾ ಗುರು ಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚೆನೆಗೆಂದು”
ವಚನಕಾರರು ಶರೀರ ಶ್ರಮದ ಜೊತೆಗೇ ಬೌದ್ಧಿಕ ಶ್ರಮವನ್ನ ಪ್ರಧಾನವಾಗಿಸಿದರು.ರಾಜರು ಹಿಂದೆ ಗಳಿಸುವ ಭೂಮಿಯ ಶ್ರಮದ ಸಂಪತ್ತಿನ ಸಂಗ್ರಹಕ್ಕಿಂತಲೂ ಭೂಮಿಯಿಂದ ಬಂದದ್ದನ್ನ ವ್ಯಯಿಸುವ ಶ್ರಮದ ದಾಸೋಹವನ್ನ ಶ್ರೇಷ್ಟವೆಂದು ಅವರು ಸಾರಿದರು. ಯಾವ ಕಾವ್ಯ ಬೌದ್ಧಿಕ ಶ್ರಮ ಶ್ರೇಷ್ಟವೆಂದು ಹಾಡಿತ್ತೋ ಅದರ ಸರಿಸಮಕ್ಕೆ ಶರೀರ ಶ್ರಮವನ್ನತಂದವರೇ ವಚನಕಾರರು.ಯಾವ ಕಾವ್ಯ ದುಡಿವವರ ಶ್ರಮವನ್ನ ಕಡೆಗಣಿಸಿ ವರ್ಗತಾರತಮ್ಯವನ್ನ ಸೃಷ್ಟಿಸಿತ್ತೋ ಅಲ್ಲಿ ವ್ಯಕ್ತಿಗೌರವವನ್ನ ಕುಲ ಮೂಲವಾಗಿ ಅಳೆಯದೆ ಶ್ರಮಮೂಲವಾಗಿ ನೋಡದೆ, ನಡೆಯ ಮೂಲಕ ಅಳೆಯಬೇಕೆಂಬ ಹೊಸ ಮೌಲ್ಯ ಸೃಷ್ಟಿಸಿತು.
ಹೊತ್ತಾರೆಎದ್ದುಕಣ್ಣ ಹೊಸೆಯುತ್ತ
ಎನ್ನ ಒಡಲಿಂಗೆ ಎನ್ನ ಒಡವೆಗೆಂದು ಎನ್ನ
ಮಡದಿ ಮಕ್ಕಳಿಗೆಂದು ಕುದಿದೆನಾದೊಡೆ
ಎನ್ನ ಮನಕ್ಕೆ ಮನವೇ ಸಾಕ್ಷಿ
ಎಂದ ದಾಸಿಮಯ್ಯನ ವಚನ ಅಕ್ಷರ ಕಾವ್ಯದ ಮೌಲ್ಯವನ್ನೇ ಪ್ರಶ್ನಿಸುವಂತಿದೆ. ಮೌಖಿಕವು ಕೃಷಿಕರ ಕಾಲವಾದರೆ ಆಧುನಿಕವು ಕೈಗಾರಿಕೆಗಳ ಕಾಲ.ಅಲ್ಲಿ ಮಾನವ ಮಣ್ಣನ್ನ ಅವಲಂಬಿಸಿದರೆ ಇಲ್ಲಿ ಯಂತ್ರವನ್ನ ಬೆನ್ನಟ್ಟಿದ.ಉತ್ಪಾದನೆ ಅಲ್ಲಿ ಬದುಕಿಗೆ ಪೂರಕವಾಗಿದ್ದರೆ ಇಲ್ಲಿ ಉತ್ಪಾದನೆ ಲಾಭದ ಹೆಗಲೇರಿದೆ.ಯಂತ್ರದೊಂದಿಗೆ ಇಲ್ಲಿ ಮಾನವರೂ ಯಂತ್ರಗಳಾಗಿ ಮಾರುಕಟ್ಟೆಯನ್ನೇ ಆಶ್ರಯಿಸುವಂತಾದರು. ಇದರ ಫಲವನ್ನ ಶರೀಫರು ಬಜಾರುಬಂದೀತು ವ್ಯಾಜ್ಯ ಉಂಟಾದಾವು ಸೂಜಿಗೆ ಒಂದು ಹೊನ್ನಿನ ಬೆಲೆ ಬಂದೀತು ಎಂದು ಸಾರಿದ್ದಾರೆ .ದುಡಿವ ಸಂಸ್ಕೃತಿಯ ಮಾನವೀಯತೆಯನ್ನ ತಿರಸ್ಕರಿಸಿದ ಮಾರುಕಟ್ಟೆಯ ಅಮಾನವೀಯತೆಯನ್ನ ಬೇಂದ್ರೆಯವರು
ಕೂಸುಗಳಿಗೆ ಹಾಲು ಇಲ್ಲ ಪಶು ಬಲಿಯೇ ನಡೆದಿದೆ
ಕಾಳು ಇದೆ ಕೂಳು ಇಲ್ಲ ಹಣದ ಹುಚ್ಚು ಹಿಡಿದಿದೆ
ಕತ್ತಲಲ್ಲಿ ಬೆಳಕೆ ಇಲ್ಲಿ ಜಗಕೆ ಬೆಂಕಿ ಹತ್ತಿದೆ
ಎಲ್ಲ ಇದೆ ಎಲ್ಲ ಇಲ್ಲ ಇಲ್ಲೆ ಸುತ್ತು ಮುತ್ತಿದೆ
ಎಂಬ ಚಿತ್ರಣಗಳಿಂದ ಮರೆಯಾದ ದಯೆ ತ್ಯಾಗ ಮತ್ತು ಕರುಣೆಯ ಕೇಂದ್ರಗಳನ್ನ ಕಂಡು ಕನಲಿದ ಕವಿಯು ದೇವರ ದೊಂದುಗೋರಿಯ ಕಟ್ಟಿ ಧರ್ಮದ ಧೂಪಕೆ ಬೆಂಕಿಯನಿಕ್ಕಿಎನ್ನುತ್ತಾರೆ.ಮನುಷ್ಯತ್ವವೇ ಇಲ್ಲದ ಧರ್ಮ ದೇವರು ನಮ್ಮ ಸಮಾಜಕ್ಕೆ ಬೇಕಿಲ್ಲವೆಂದು ಕುವೆಂಪು ಅವರೂ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಕರೆನೀಡುತ್ತಾರೆ.
ಮಾರುಕಟ್ಟೆಯು ಮಣ್ಣು ನಂಬಿದ ಮನುಷ್ಯನನ್ನ ನಿರ್ಲಕ್ಷಿಸಿತು. ವಿದೇಶಿ ಯಂತ್ರಕ್ಕೆ ಆಧ್ಯತೆ ನೀಡಿತು. ಮಿತ ಶಕ್ತಿಯ ಮಾನವನ ಕೈಗೆ ಕೆಲಸವಿಲ್ಲದ ಸ್ಥಿತಿಯೇ ನಿರ್ಮಾಣವಾದ್ದರಿಂದ ಪ್ರೇಮದ ಕವಿ ಕೆ.ಎಸ್.ನರಸಿಂಹ ಸ್ವಾಮಿಯಂತವರೂ ಕೂಡಾ
ದಿನವೆಲ್ಲ ದುಡಿದರೂ ಕೈತುಂಬ ಕಾಸಿಲ್ಲ
ಒಣ ರೊಟ್ಟಿ ಹೆಣ ಬಟ್ಟೆ ನೆರಳಿಲ್ಲ ಹಾಸಿಲ್ಲ
ಮುಗಿಲೆಡೆಗೆ ಮುಗಿದ ಕೈ
ಬೆವರಿನಲಿ ಮಿಂದ ಮೈ
ತೇಲುಗಣ್ ತೆರೆದ ಬಾಯ್
ಇದು ಬದುಕೆ?ತೊಲಗಾಚೆ ಕತ್ತಲನು ಒದ್ದು
ಎಂದು ಸಿಡುಕುತ್ತಾರೆ.
ಸಿದ್ದಲಿಂಗಯ್ಯನವರು .”ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ,ನಮ್ಮ ಜನಗಳ ಕಾಲು ಕೈಯಿ ಕಂಬ ಅವರ ಹಟ್ಟಿಗೆ ”
ಶ್ರಮಕ್ಕೆ ನೆಲೆ ಸಿಗದ ಹಸಿದವರ ಪಡೆ ಬೆಳೆದಂತೆಲ್ಲಾ ಕಲಿತವರ ಸಾಮಾಜಿಕ ಪ್ರಜ್ಞೆಯೂ ಚಳುವಳಿಗಳ ರೂಪ ತಳೆಯಿತು. ಈ ಪ್ರತಿಕ್ರಿಯೆಯು ಗಾಂಧೀ,ಮಾರ್ಕ್ಸ,ಲೋಹಿಯಾ,ಅಂಬೇಡ್ಕರರ ಚಿಂತನೆಗಳಡಿಯಲ್ಲಿ ಅಭಿವ್ಯಕ್ತಗೊಂಡಿತು.ಕವಿ ಸು.ರಂ.ಎಕ್ಕುಂಡಿ ರೊಟ್ಟಿ ಮತ್ತು ಕೋವಿ ಎಂಬ ಕವಿತೆಯ ಮೂಲಕ ಶ್ರಮಿಕರ ತೀವ್ರ ಸ್ಫೋಟವನ್ನ
ಕಸದ ತೊಟ್ಟಿಗೆ ಇನ್ನು ಹಸಿದ ಕೈ ಇಳಿಯವು
ಅಂದುಕೊಂಡೆನು ಅಂಜಿ ನೊಂದುಕೊಂಡು
ನೇಣುಗಂಬವ ಕೂಡ ದಿಕ್ಕರಿಸಿ ನುಗ್ಗುವರು
ಎತ್ತಿಕೊಳ್ಳಲು ಸಿಕ್ಕ ಕೋವಿ, ಗುಂಡು.
ಹಸಿದವರು ಕೂಡ ಬದುಕಬೇಕಲ್ಲವೇ? ಮತ್ತೆ.
ಪ್ರೀತಿಯೂ ಬೇಕಲ್ಲ ದುಡಿವ ಜನಕೆ
ಎದೆಯ ಕದಗಳು ಮುಚ್ಚಿದಾಗ,ಮತ್ತಿನ್ನೇನು
ಮುಖ್ಯವಲ್ಲದೆ ಸಾವಿಗಿಂತ ಬದುಕೆ?
ಶ್ರಮಿಕರ ಹಸಿವು ಮತ್ತು ಬಡತನವನ್ನೇ ಮೌಲ್ಯವಾಗಿಸಿಕೊಂಡು ವರ್ಗತಾರತಮ್ಯ ಮತ್ತು ವರ್ಣತಾರತಮ್ಯದ ವಿರುದ್ಧ ಬಂಡೆದ್ದ ಕವಿತೆಗಳು ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಬದಲಾವಣೆಯ ಸಮುದಾಯಗಳ ವಿಮೋಚನೆಯನ್ನ ಸಾರುತ್ತಲೇ ಅನ್ನ,ಅರ್ಥ ಮತ್ತು ಅಧಿಕಾರದ ಹಕ್ಕನ್ನ ಪ್ರತಿಪಾದಿಸತೊಡಗಿದವು.ಪ್ರತಿಭಟನೆಯ ಕಾವ್ಯಗಳು ಸಮ ಸಮಾಜಕ್ಕಾಗಿ ಪ್ರಜಾಸತ್ತಾತ್ಮಕ ಅಧಿಕಾರವನ್ನೂ ಮತ್ತು ಕ್ರಾಂತಿಕಾರಿ ಹೋರಾಟದ ಕಮ್ಯುನಿಸ್ಟ ಮಾರ್ಗವನ್ನು ಕಂಡಿವೆ.ಇಂತಹ ತೆಲುಗಿನ ದಿಗಂಬರ ಕವಿ ಚರಬಂಡರಾಜು ಅವರ ಪ್ರಸಿದ್ಧ ಹಾಡು ಕೂಲಿ ಕಾರ್ಮಿಕರ,ರೈತ ಕೂಲಿಗಳ ವರ್ತಮಾನವನ್ನ ಹೀಗೆ ತೆರೆದಿಡುತ್ತದೆ.
“ಹೊಲವನುತ್ತು ಹೊಲವನುತ್ತು
ಮೈಯಾಗಿನ ಬೆವರು ಬಸಿದು
ಬಂಗಾರದ ಬೆಳೆ ಬೆಳೆದೆಯೋ-ಓ ರಾಮಣ್ಣ
ಗುಟುಕು ಗಂಜಿ ನೀನು ಕಾಣೆಯೋ!”
“ಕೃಷಿ ಭೂಮಿಯಲ್ಲಿ ಕೆಲಸ ಮಾಡುವವರ ಕನಿಷ್ಟ ಘನತೆಯನ್ನ ಒಡೆಯರು ಪರಿಗಣಿಸುವುದಿಲ್ಲ.ದಲಿತರ ಶೋಷಿತರ ಸಾಮಾನ್ಯ ವ್ಯಕ್ತಿತ್ವ ಹಾಗೂ ಕನಿಷ್ಟ ಘನತೆಯನ್ನ ಕೊಂದು ಅದರ ಸಮಾಧಿಯಮೇಲೆ ನರ್ತಿಸುವುದೇ ಊಳಿಗಮಾನ್ಯ ಸಮಾಜದ ಲಕ್ಷಣ.
ಬುಡಕಟ್ಟು ಕಾಲೀನ ವಲಸೆ ಕೃಷಿಯು ಖಾಸಗೀ ಹಕ್ಕಾಗಿರದೆ ಭೂಮಿ ಎಲ್ಲರ ಸ್ವತ್ತಾಗಿತ್ತು.ಅಸಲಿಗೆ ಪುರುಷನಿಗೆ ಭೂಮಿಯ ಪ್ರಜ್ಞೆಯೇ ಇರಲಿಲ್ಲ.ಈ ಕಾಲದಲ್ಲಿ ಮಹಿಳೆ ಮೆಲ್ಲಗೆ ಸಸ್ಯ ಪಾಲನೆ ಕಡೆಗೆ ವಾಲಿದ್ದು ನಂತರ ಕಾಡು ಮತ್ತು ನದೀ ತೀರಗಳಲ್ಲಿ ಮಾನವ ಸ್ಥಿರ ಕೃಷಿಯ ಕಡೆ ಹೊರಳಿದ್ದು ಶಿಲಾ ಯುಗದ ಆತನ ಬೇಟೆ ಮತ್ತು ಪಶು ಪಾಲನೆಗೆ ಅಂತ್ಯ ಹಾಡಿ ಲೋಹಯುಗದ ಸ್ಥಿರ ಕೃಷಿಯ ಕಡೆ ಮುಖಮಾಡಿಸುವಂತಾದವು.ಅಂದಿನಿಂದ ಭೂಮಿ ಆತನ ಖಾಸಗಿ ಆಸ್ತಿಯಾಗಲು ಪ್ರಾರಂಭವಾಯಿತು.ಸ್ತ್ರೀ ಹಿನ್ನೆಲೆಗೆ ಸರಿದು ರಾಜ ಮತ್ತು ವರ್ಗಗಳು ಏರ್ಪಟ್ಟವು ಕೃಷಿ ಮೂಲದ ಜನರು ಕೃಷಿ ಕೂಲಿಕಾರರಾಗಿ ಮಾರ್ಪಟ್ಟರು.ಇಂದಿಗೂ ದ್ರಾವಿಡ ಮೂಲದ ಜನ ಬಹುತೇಕರು ಕೃಷಿ ಕೂಲಿ ಕಾರ್ಮಿಕರೇ ಎಂಬುದನ್ನ ಎಸ್. ಎಸ್.ಹಿರೇಮಠರು ತಮ್ಮ ದಲಿತ ಸಂಸ್ಕೃತಿ ಯಲ್ಲಿ “ವೃತ್ತಿಯಾಧಾರದಲ್ಲಿ ದ್ರಾವಿಡ ಪಶುಪಾಲಕರು,ಆರ‍್ಯ ವೈದಿಕ ಪಶುಪಾಲಕರಂತೆ ಉನ್ನತಮಟ್ಟಕ್ಕೇರದಿರುವುದು.ಆರ‍್ಯ ವೈದಿಕ ಪಶುಪಾಲಕರಲ್ಲಿ ’ಬ್ರಾಹ್ಮಣರು’ ಪ್ರತ್ಯೇಕಗೊಂಡು ಭಾರತೀಯ ಸಾಮಾಜಿಕ ಜಾತಿ ಶ್ರೇಣೀಕರಣದಲ್ಲಿ ಅತ್ಯುನ್ನತ ಸ್ಥಾನದಲ್ಲಿ ವಿರಾಜಮಾನರಾದ ಘಟನೆಗೂ ಈ ನಾಡಿನ ಮೂಲ ಬೇಸಾಯಗಾರರಾಗಿದ್ದ ದಲಿತರು ಭೂಮಿ ಕಳದುಕೊಂಡು ಅಸ್ಪೃಶ್ಯರಾದುದಕ್ಕೂ ನಿಕಟ ಸಂಬಂಧವಿವೆ.ಒಂದು ಜಾತಿ ಅತ್ಯುನ್ನತ ಸ್ಥಾನದಲ್ಲೂ ಇನ್ನೊಂದು ಅತ್ಯಂತ ಕೆಳಗೂ ಸ್ಥಾಪಿತವಾಗಬೇಕಾದರೆ ಅದರಲ್ಲೇನೋ ತರ್ಕವಿರಬೇಕಷ್ಟೇ.ಯಾವುದೂ ವಿನಾಕಾರಣ ಘಟಿಸಲಾರದು.ಇದು ಬರಿ ಊಹೆಯೂ ಅಲ್ಲ.”ಎನ್ನುತ್ತಾರೆ.
ಜನಪದ ಮತ್ತು ವಚನ ಕಾವ್ಯದ ಪ್ರಭಾವ ಕನ್ನಡ ಬಂಡಾಯ ಮತ್ತು ದಲಿತ ಕಾವ್ಯಗಳ ಮೇಲಿದ್ದರೂ ಅವುಗಳ ತಾತ್ವಿಕ ನೆಲೆಯಲ್ಲಿ ಭಿನ್ನತೆಗಳಿವೆ.ಹೋರಾಟದ ಹಾಡುಗಳಂತೆ ಅವು ಅಸಮಾನತೆ ವ್ಯವಸ್ಥೆಯ ವಿರುದ್ಧ ಪಾಲುದಾರರಾಗಿಲ್ಲ.ಜನಪದರು ಯಥಾಸ್ಥಿತಿಯ ನೋವಿಗೆ ಒಗ್ಗಿಕೊಂಡರೆ ಶರಣರು ಧರ್ಮದ ಚೌಕಟ್ಟಿಗೆ ಸೀಮಿತವಾದರು.ಕನ್ನಡ ಪ್ರತಿಭಟನೆಯನ್ನ ಮುಖ್ಯವಾಗಿ ಅನ್ನ ಮೂಲ ಮತ್ತು ಭೂಮಿ ಮೂಲವಾಗಿಯೇ ಕಾಣಬೇಕಿದೆ.