ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ

Share

 

ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ

ನನ್ನ ಒಂಬತ್ತನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ನಂತರದಲ್ಲಿ ತಿಪ್ಪೇರುದ್ರಪ್ಪ ಮೇಷ್ಟ್ರು ನಮ್ಮ ಮನೆಗೆ ಬಂದು ಹೋಗುವ ಪರಿಪಾಠ ಶುರುವಾಯಿತು. ಆಸ್ಪತ್ರೆಯ ತನ್ನ ದಿನನಿತ್ಯದ ಭೇಟಿಯ ಹೊರತಾಗಿಯೂ ಊರ ಹಲವು ಉಳ್ಳವರ ಮನೆಗಳಿಗೆ ಬೆಳಗುಬೈಗುಗಳಲ್ಲಿ ನಿಯಮಿತವಾಗಿ ಭೇಟಿಕೊಡುವ ಸಂಪ್ರದಾಯವನ್ನು ಮೇಷ್ಟ್ರು ನಿವೃತ್ತಿಯ ತದನಂತರದಲ್ಲಿ ತಪ್ಪದೇ ಪಾಲಿಸಿಕೊಂಡು ಬಂದವರೇ. ಮೇಷ್ಟ್ರಿಗೆ ನಾಲಗೆ ಇದ್ದ ಕಾರಣಮಾತ್ರದಿಂದಾಗಿ ಈ ಭೇಟಿಗಳು ಅನೂಚಾನವಾಗಿ ನಡೆಯುತ್ತಿದ್ದವು ಎಂದು ಈಗ ನನಗನ್ನಿಸುತ್ತದೆ. ಮೇಷ್ಟ್ರ ನಾಲಗೆಗೆ ಇದ್ದ ಎರಡು ತೆವಳುಗಳಿಂದ ಉಂಟಾದ ಕಾರಣಗಳಲ್ಲಿ ಮೊದಲನೆಯದು ರುಚಿಗೆ ಸಂಬಂಧಿಸಿದ್ದಾಗಿದ್ದರೆ ಎರಡನೆಯದು ಅವರ ನಾಲಗೆಗೆ ಬೇರೆಯವರ ಬಗ್ಗೆ ಮಾತನಾಡಲು ಇದ್ದ ಸಹಜ ತೀಟೆಗೆ ಸಂಬಂಧಿಸಿದ್ದು. ಉಳ್ಳವರ ಮನೆಗಳ ತಿಂಡಿ ಅಡುಗೆಗಳು ಬಗೆಬಗೆಯಾಗಿ, ರುಚಿಕಟ್ಟಾಗಿ, ಬಿಸಿಬಿಸಿಯಾಗಿರುವ ಹೊತ್ತು ಆ ಮನೆಗಳಲ್ಲಿ ವಾಸಿಸುವ ಮನುಷ್ಯರ ಮಧ್ಯದ ಸಂಬಂಧಗಳು ಅಷ್ಟೇ ಘನವಾಗಿ ಹಳಸಿರುವ ಸಾಧ್ಯತೆಗಳು ಬಹಳವಿರುತ್ತವೆ. ಅದರಲ್ಲೂ ಮುಖ್ಯವಾಗಿ ಸಾಹುಕಾರ ಮನೆಯ ಹೆಂಗಸರ ಮಧ್ಯದ ಸಿಟ್ಟುಸಿಡುಕುಗಳು ತಾರಕಕ್ಕೇರಿ ಮದ್ದಳೆ ಬಾರಿಸುವ ಅನೇಕ ಪ್ರಸಂಗಗಳು ಆಗಾಗ ಗ್ರಾಮೀಣ ಪರಿಸರದಲ್ಲಿ ಉದ್ಭವಿಸುತ್ತಲೇ ಇರುತ್ತವೆ. ಇದರ ಸೂಕ್ಷ್ಮವನ್ನು ಅರಿತ ಮೇಷ್ಟ್ರು ಕಲ್ಲಪ್ಪದೇವರ ಗುಡಿಯ ಹಿಂಭಾಗದ ಬಳ್ಳಾರಿಯವರ ಮನೆಗೆ ಮತ್ತು ದಿನ್ನೆ ಮೇಲಿನ ಜಕ್ಕಪ್ಪನವರ ಮನೆಗಳಿಗೆ ದಿನನಿತ್ಯವೂ ಖಾಯಂ ಗಿರಾಕಿಯಂತೆ ಊಟ, ತಿಂಡಿಯ ಹೊತ್ತು ಬಂದು ಹೋಗುತ್ತಿದ್ದದ್ದು ಊರು ತನ್ನ ಒಡಲಾಳದಲ್ಲಿ ಹುದುಗಿಸಿಟ್ಟುಕೊಂಡಿರುವ ಪರಮಸತ್ಯವೇ ಹೌದು. ಸಿರಿವಂತರ ಮನೆಗಳಲ್ಲಿ ಮಾಡುವ ಸವಿಸವಿಯಾದ ತಿಂಡಿಗಳನ್ನು ಮೆಲ್ಲುತ್ತಾ, ಮನೆಯ ಹೆಂಗಸರನ್ನು ಅವರ ಕೈರುಚಿಗಾಗಿ ಹೊಗಳುತ್ತಾ ಸಮಯ ದೊರೆತಾಗೊಮ್ಮೆ ಅಲ್ಲಿನ ಅತ್ತೆ – ಸೊಸೆ, ತಾಯಿ – ಮಗಳು, ಅಜ್ಜಿ – ಮೊಮ್ಮಗಳು ನಾದಿನಿ – ನಿಗಿಣ್ಣಿ ಹೀಗೆಯೇ ಮುಂತಾದ ಸಂಬಂಧಗಳ ಮಧ್ಯೆ ಹುಳಿಹಿಂಡಲು ಮೇಷ್ಟ್ರು ಹಿಂಜರಿಯುತ್ತಿರಲಿಲ್ಲ. ಮನೆತನದ ಯಾವ ಸಂಬಂಧದಲ್ಲೂ ಜಗಳ, ವೈಮನಸ್ಯ ತರಲಿಕ್ಕೆ ಸಾಧ್ಯವಾಗದ ಪಕ್ಷದಲ್ಲಿ ಮೇಷ್ಟ್ರು ಮನೆಯ ಯಜಮಾನಿ ಮತ್ತು ಆಳುಕಾಳುಗಳ ಮಧ್ಯೆ ವಿರಸದ ಬೀಜ ಬಿತ್ತಿ ಹುಲುಸಾಗಿ ಬೆಳೆಯುತ್ತಿದ್ದ ಪೈರಿನ ಆನಂದವನ್ನು ಅಸ್ವಾದಿಸುತ್ತಿದ್ದರು. ಮೇಷ್ಟ್ರ ಈ ಚಟದ ಭರಪೂರ ಅರಿವಿದ್ದ ಹೆಂಗಸರೂ ಒಮ್ಮೆಮ್ಮೆ ಈ ಮಾತುಗಳಿಗೆ ಶರಣುಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುತ್ತಿದ್ದದ್ದೂ ಉಂಟು. ಮನೆಗಳಲ್ಲಿ ಗಂಡಸರು ಇಲ್ಲದ ವೇಳೆಯಲ್ಲಿಯೇ ಭೇಟಿಕೊಟ್ಟು ತಮ್ಮ ಮೇಲಿನ ದ್ವಿಮುಖವಾದ ತೀಟೆಗಳನ್ನು ತೀರಿಸಿಕೊಳ್ಳುತ್ತಿದ್ದ ಮೇಷ್ಟ್ರು ಯಾವುದಾದರೂ ಮನೆಗೆ ಹೊಸದಾಗಿ ಭೇಟಿಯಬೇಟೆ ಪ್ರಾರಂಭಿಸಿದರು ಎಂದರೆ ಕೆಲವೇ ದಿನಗಳಲ್ಲಿ ಆ ಮನೆಯ ಗುಟ್ಟುಗಳು ಬೀದಿರಟ್ಟುಗಳಾಗಿ, ಆ ಮನೆ ಒಡೆಯುವ ಹಂತವನ್ನು ಬಹಳ ಶೀಘ್ರದಲ್ಲಿ ತಲುಪುತ್ತಿದ್ದದ್ದು ಕೇವಲ ಕಾಕತಾಳೀಯ ಎಂದು ಹೇಗೆ ಹೇಳುವುದಕ್ಕಾದೀತು? ಹೀಗಿರಲಾಗಿ ನಮ್ಮ ಮನೆಗೆ ನಿತ್ಯವೂ ರಾತ್ರಿ ಊಟದ ನಂತರ ಸುಮಾರು ಒಂಬತ್ತರ ವೇಳೆಗೆ ಭೇಟಿ ನೀಡುವ ರೂಢಿಯನ್ನು ಮೇಷ್ಟ್ರು ಶುರುಮಾಡಿದ ಹೊತ್ತು ಮೇಷ್ಟ್ರ ನೆರಳು ಕಂಡರೂ ಆಗದ ನನ್ನ ಅವ್ವನ ಎದೆ ಡವಡವ ಎಂದು ಹೊಡೆದುಕೊಳ್ಳುವುದಕ್ಕೆ ಮೊದಲಿಟ್ಟಿತ್ತು. ಈ ನಾಲ್ಕು ಕಣ್ಣಿನವನು ತನ್ನ ಮತ್ತು ಸೊಸೆಯ ಮಧ್ಯೆ ಏನು ತಂದಿಡುತ್ತಾನೋ, ಈಗಾಗಲೇ ಹದಗೆಟ್ಟ ಸಂಬಂಧವನ್ನು ಮತ್ತೆಲ್ಲಿ ಎಕ್ಕುಟ್ಟಿಸುತ್ತಾನೋ ಎಂದು ಮುದಿಜೀವ ಪತರಗುಟ್ಟಿದ್ದು ನನ್ನ ನೆನಪಿನಂಗಳದಲ್ಲಿ ಇನ್ನೂ ಸಜೀವವಾಗಿದೆ.

ಮೇಷ್ಟ್ರು ನಮ್ಮ ಮನೆಗೆ ಭೇಟಿಕೊಡುತ್ತಿದ್ದ ಹಿಂದಿನ ಉದ್ದೇಶದ ಬಗ್ಗೆ ಇಂದಿಗೂ ನನ್ನಲ್ಲಿ ಅಂತಹ ಸ್ಪಷ್ಟತೆಗಳಿಲ್ಲ. ಊಟವಾದ ತರುವಾಯದಲ್ಲಿ ತಮ್ಮ ದರ್ಶನಭಾಗ್ಯವನ್ನು ಕರುಣಿಸುತ್ತಿದ್ದ ಮೇಷ್ಟ್ರು ನಮ್ಮ ಮನೆಯಲ್ಲಿ ಯಾವತ್ತೂ ಏನನ್ನೂ ತಿಂದ ನೆನಪು ನನಗಿಲ್ಲ. ನಮ್ಮ ಮನೆಯ ಪ್ರವೇಶದ್ವಾರದ ಎಡಗಡೆಯ ಭಾಗದಲ್ಲಿ ಸ್ಟೀಲಿನ ಮಡುಚುಕುರ್ಚಿಯೊಂದರಲ್ಲಿ ಆಚಾರಿ ತುಂಗಮ್ಮ ಕಡೆದ ಕಲ್ಲಿನ ಶಿಲ್ಪದಂತೆ, ಪೂರ್ಣಚಲನಾರಹಿತ ಸ್ಥಿತಿಯಲ್ಲಿ ಆಸೀನರಾಗಿ ಸುಮಾರು ಗಂಟೆಯ ಕಾಲ ನನ್ನ ಅಪ್ಪನೊಂದಿಗೆ ಹರಟುತ್ತಿದ್ದ ಮೇಷ್ಟ್ರ ಹಿಂದಿನ ಈ ಭೇಟಿಯ ಒಂದು ಪ್ರಮುಖ ಉದ್ದೇಶ ಎಂದರೆ ಇಂಗ್ಲೀಷ್ ನಲ್ಲಿ ಮಾತನಾಡುವ ಅವರ ಬಾಯಿತೀಟೆಯನ್ನ ಹೋಗಲಾಡಿಸಿಕೊಳ್ಳುವುದೇ ಆಗಿದ್ದಿರಬಹುದು. ಇಂಗ್ಲೀಷ್ ಬಲ್ಲ ಮತ್ತು ಇಂಗ್ಲೀಷ್ ನಲ್ಲಿ ಸರಾಗವಾಗಿ ಸಂಭಾಷಿಸಬಲ್ಲ ನನ್ನ ಅಪ್ಪನಲ್ಲಿ ಇಂಗ್ಲೀಷ್ ನ ತಮ್ಮ ಬಾಯಿಬಡುಕತನಕ್ಕೆ ಒಬ್ಬ ಸಂಗಾತಿಯನ್ನು ಮೇಷ್ಟ್ರು ಹುಡುಕಿಕೊಂಡಿರಲೂ ಸಾಕು. ಈ ದಿನಚರಿಯ ಮಗದೊಂದು ಮುಖ್ಯಭಾಗ ಎಂದರೆ ನಾನು ಮೇಷ್ಟ್ರಿಗೋಸುಗ ವಾಚಿಸಬೇಕಾಗಿದ್ದ ಪ್ರಜಾವಾಣಿ ದಿನಪತ್ರಿಕೆಯ ಮೊದಲಪುಟದಿಂದ ಹಿಡಿದು ಕೊನೆಯ ಪುಟದವರೆಗಿನ ಸುದ್ದಿ ಸಮಾಚಾರಗಳ ಹೂರಣ. ಮೇಷ್ಟ್ರ ಕಣ್ಣುಗಳು ಬಹಳ ಸುಮಾರಾಗಿದ್ದರಿಂದ ಪತ್ರಿಕೆಗಳನ್ನು ಮುಖಕ್ಕೆ ರಾಚುವಂತೆ ಹಿಡಿದರೂ ಓದಲಾಗುತ್ತಿರಲಿಲ್ಲ. ಆದರೆ ಮೇಷ್ಟ್ರಿಗಿದ್ದ ಹಲವು ಚಟಗಳಲ್ಲಿ ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಆದಮ್ಯ ಆಸಕ್ತಿಯೂ ಒಂದಾದ ಕಾರಣ ಪ್ರತಿನಿತ್ಯ ಪತ್ರಿಕೆಯ ವಾಚನದ ಜವಾಬ್ದಾರಿ ನನ್ನ ಹೆಗಲೇರಿತ್ತು. ಒಮ್ಮೊಮ್ಮೆ ನಾನು ಪೇಪರ್ ಓದಲು ಇಷ್ಟವಿಲ್ಲದೆ ನನ್ನ ತಮ್ಮನಿಗೆ ಈ ಕೆಲಸ ವಹಿಸಲು ಮುಂದಾದಾಗ ಅದಕ್ಕೆ ಮೇಷ್ಟ್ರು ಸುತಾರಾಂ ಒಪ್ಪುತ್ತಿರಲಿಲ್ಲ. “ಚಂದ್ರಣ್ಣ, ಪ್ರಕಾಶನಿಗೇ ಓದಲು ಹೇಳು, ಭೋಗೇಶ ಬಹಳ ವೇಗವಾಗಿ ಓದುತ್ತಾನೆ, ಓದುವುದು ಸ್ಪಷ್ಟವಾಗಿ ತಿಳಿಯುವುದಿಲ್ಲ” ಎಂದು ತಾಕೀತು ಮಾಡಿ ನನ್ನನ್ನೇ ಪೇಪರ್ ಓದಿಸಲು ಹಚ್ಚುತ್ತಿದ್ದ ದಿನಗಳಲ್ಲಿ ನಾನು ಪತ್ರಿಕೆಯ ಸುದ್ದಿಗಳನ್ನು ಸರಿಯಾಗಿ ಓದದೇ ಸುಮಾರು ಸುದ್ದಿಗಳನ್ನು ಹಾರಿಸಿ ಹಾರಿಸಿ ಓದುತ್ತಿದ್ದೆ. ಇದರ ಪರಿಣಾಮವಾಗಿ ಮುಂದೆ ನನ್ನ ವೃತ್ತಿಯಲ್ಲಿ ಬಹಳ ಹೆಚ್ಚಿನ ಮಟ್ಟದ ಸಹಾಯವಾಯಿತು. ವಿಷಯ ಸಂಪಾದನೆಯಲ್ಲಿ ಸಿದ್ಧಹಸ್ತ ಎಂದು ಅನ್ನಿಸಿಕೊಳ್ಳಲಿಕ್ಕೆ ಈ ಅನುಭವ ಭದ್ರ ಅಡಿಪಾಯವನ್ನು ಹಾಕಿಕೊಟ್ಟಿತು.

ನನ್ನ ಅವ್ವ ಮತ್ತು ಅಮ್ಮನ ಮಧ್ಯೆ ಅಂತಹಾ ಸಾಮರಸ್ಯವಿರಲಿಲ್ಲ. ಊರಿನ ಬಹುತೇಕ ಅತ್ತೆಸೊಸೆಯರಂತೆ ನನ್ನ ಅವ್ವ ಮತ್ತು ಅಮ್ಮನ ಮಧ್ಯೆ ಹಾವುಮುಂಗಸಿಯ ಕಿತ್ತಾಟ ನಡೆದೇ ಇರುತ್ತಿತ್ತು. ವಿರುಪಣ್ಣಗೌಡ್ರ ಮಗಳಾದ ನನ್ನ ಅಮ್ಮನ ಪರವಹಿಸಿ ಮೇಷ್ಟ್ರು ಮಾತನಾಡುತ್ತಾರೆ ಎನ್ನುವ ಒಂದು ಸಣ್ಣ ಗುಮಾನಿನನ್ನ ಅವ್ವನ ಮನದ ಮೂಲೆಯಲ್ಲಿ ಮನೆ ಮಾಡಿತ್ತು. ಹಾಗಾಗಿ ಮೇಷ್ಟ್ರು ನಮ್ಮ ಮನೆಗೆ ಬರಲು ಪ್ರಾರಂಭಿಸಿದ ಹೊಸತರಲ್ಲಿಯೇ “ನೋಡಪ್ಪಾ ಮೇಷ್ಟ್ರೇ, ಊರ ಉಳಿದ ಮನೆಗಳಲ್ಲಿಯ ನಿನ್ನ ಕಾರುಬಾರು ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ನಮ್ಮ ಮನೆಯಲ್ಲಿ ಮಾತ್ರ ನೀನು ಯಾವ ಉಸಾಬರಿಗೂ ಹೋಗಬೇಡ. ಅತ್ತೆ ಸೊಸೆಯ ಮಧ್ಯೆ ನೂರೆಂಟು ವಿಷಯಗಳು ಬರುತ್ತವೆ, ಹೋಗುತ್ತವೆ. ಅವುಗಳನ್ನೇ ದೊಡ್ಡದು ಮಾಡಿ ಇಬ್ಬರ ಮಧ್ಯೆ ಮುಚ್ಚಲಾಗದ ಕಂದಕ ಸೃಷ್ಟಿ ಮಾಡಬೇಡ. ನೀನು ಯಾವ ಇಂತಹ ವಿಷಯಗಳಲ್ಲಿಯೂ ತಲೆ ಹಾಕಬೇಡ. ನಿನ್ನ ಪಾಡಿಗೆ ನೀನು ಇರಬೇಕು. ನಿನ್ನ ಬಾಯಿಚಟವನ್ನ ಬಿಡುವುದಿಲ್ಲ ಎಂದರೆ ನಮ್ಮ ಮನೆ ಹೊಸ್ತಿಲನ್ನು ತುಳಿಯಬೇಡ” ಎನ್ನುವ ಖಡಕ್ಕಾದ ಎಚ್ಚರಿಕೆಯನ್ನು ರವಾನಿಸಿದ ಕಾರಣ ತನ್ನ ಕಣ್ಣ ಎದುರಿಗೇ ಬೆಳೆದು ದೊಡ್ಡವಳಾದ ನನ್ನ ಅಮ್ಮನನ್ನು ಕಂಡಾಗೊಮ್ಮೆ “ಏನವ್ವ ಇಂದ್ರಕ್ಕ ಚೆನ್ನಾಗಿದ್ದೀಯ?” ಎಂದು ಮೇಷ್ಟ್ರು ಪ್ರಶ್ನಿಸಿ ಸುಮ್ಮನಾಗುತ್ತಿದ್ದರೇ ಹೊರತು ದೂಸರಾ ಮಾತನಾಡುತ್ತಿರಲಿಲ್ಲ. “ಗೌರಕ್ಕಾ, ಆ ದೊಡಘಟ್ಟದ ತಿಪ್ಪೇರುದ್ರಪ್ಪನನ್ನು ನಿನ್ನ ಮನೆಗೆ ಯಾಕೆ ಬಿಟ್ಟುಕೊಳ್ಳುತ್ತೀಯ? ಈಗಲೇ ನೀವು ಅತ್ತೆಸೊಸೆಯರು ಈ ಪಾಟಿ, ಮನೆಯಲ್ಲಿ ಎರಡು ಒಲೆಗಳು ಉರಿಯಬೇಕೆಂದಿದ್ದೀಯ ಹೇಗೆ?” ಎಂದು ಅವ್ವನನ್ನು ಆಗಾಗ್ಗೆ ಎಚ್ಚರಿಸುತ್ತಿದ್ದ ನನ್ನ ಅವ್ವನ ಸಣ್ಣಮ್ಮ ಬಳ್ಳಾರಿ ಸಕ್ರಜ್ಜಿ ಮೇಷ್ಟ್ರ ಹುಚ್ಚಾಟದ ನೇರವಾದ ಫಲಾನುಭವಿಗಳಲ್ಲಿ ಒಬ್ಬಳು. ಸೊಸೆಯಾದ ಐಯ್ಯಕ್ಕನಿಗೆ ಕಿವಿ ಹಿಂಡಿಹಿಂಡಿ ಅತ್ತೆ ಸಕ್ರಜ್ಜಿಯನ್ನು ಕಂಡರೆ ಸಿಡಿದುಬೀಳುವಂತೆ ರೂಪಪರಿವರ್ತಿಸಿದ ಮೇಷ್ಟ್ರು ಈ ವಿಷಯದಲ್ಲಿ ಅಭೂತಪೂರ್ವ ಯಶ ಕಂಡಿದ್ದರ ಪ್ರತಿಫಲವಾಗಿ ಸಕ್ರಜ್ಜಿಯ ಬಾಯಿಂದ ಇಂತಹ ಸ್ವಾನುಭವದ ಮುತ್ತುಗಳು ಉದುರಿದ್ದವು. ಈ ಮಾತುಗಳನ್ನು ಕೇಳಿಸಿಕೊಂಡೂ ಕೇಳಿಸಿಕೊಳ್ಳದ ಹಾಗಿರುತ್ತಿದ್ದ ಅವ್ವನಿಗೆ ಈ ಹೊತ್ತಿಗಾಗಲೇ ಮೇಷ್ಟ್ರು ಹಲ್ಲು ಕಿತ್ತ ಹಾವಾಗಿರುವುದು ಮನವರಿಕೆಯಾಗಿತ್ತು. “ಸಣ್ಣಮ್ಮ, ನನ್ನನ್ನೇನು ನೀನು ಅಂತಾ ಮಾಡಿದ್ದೀಯ? ತಿಪ್ಪೇರುದ್ರಪ್ಪ ನನ್ನ ಬಳಿ ಬಾಲ ಬಿಚ್ಚಲಿ ನೋಡು, ಅವನ ನಾಲ್ಕೂ ಕಣ್ಣುಗಳನ್ನೂ ಕಿತ್ತು ನಮ್ಮ ಮನೆಯ ನಾಯಿಗೆ ಹಾಕದಿದ್ದರೆ ನನ್ನನ್ನು ಗೇಟಿನ ಗೌರಮ್ಮ ಅನ್ನಬೇಡ” ಎಂದು ಹೊರಡಿಸುತ್ತಿದ್ದ ಅವ್ವನ ಫರ್ಮಾನಿಗೆ ಸಕ್ರಜ್ಜಿ ಅವಡು ಕಚ್ಚಿಕೊಂಡು ಸುಮ್ಮನಾಗುತ್ತಿದ್ದಳು.

ಬೇಸಗೆಯ ದಿನಗಳಲ್ಲಿ ಸೆಕೆಯ ಕಾರಣ ಮನೆಯ ಕಾಂಪೌಂಡ್ ಹೊರಗೆ ಕುರ್ಚಿಗಳನ್ನು ಹಾಕಿಕೊಂಡು ಮೇಷ್ಟ್ರ ಒಟ್ಟಿಗೆ ನಡೆಸುತ್ತಿದ್ದ ನಮ್ಮ ಹರಟೆ ಮಾತುಗಳಿಗೆ ಮನೆಯ ಅಂತರಂಗದ ವ್ಯಾಪ್ತಿಯನ್ನು ಮೀರಿದ, ಸೀಮಿತ ಅರ್ಥದ, ಆದರೆ ಖಚಿತ ಎನ್ನಬಹುದಾದ ಬಹಿರಂಗ ವ್ಯಾಪ್ತಿಯೊಂದು ಪ್ರಾಪ್ತವಾಗುತ್ತಿತ್ತು. ಇಂತಹ ಬೇಸಗೆಯ ದಿನಗಳಲ್ಲಿ ನಮ್ಮ ಕಾಡುಹರಟೆಗೆ ನನ್ನ ಮಾವ ಗೌಡ್ರ ರೇವಜ್ಜನವರ ಶ್ರೀಧರ, ನಮ್ಮ ಎದುರು ಮನೆಯ ಕುಂಬಾರ ಏಕಾಂತಪ್ಪನ ಮನೆಯ ಹೊರಜಗುಲಿಯ ಒಂದು ಕೋಣೆಯ ರೂಮಿನಲ್ಲಿ ಬಾಡಿಗೆಗೆ ವಾಸವಾಗಿದ್ದ ಹೈಸ್ಕೂಲು ಗುಮಾಸ್ತ ದಾವಣಗೆರೆ ಬಸವರಾಜು, ನಮ್ಮ ಎದುರು ಮನೆಯ ಹೋಟೆಲ್ ಬಸಣ್ಣ, ಅವರ ಪಕ್ಕದಮನೆಯ ಹಿಟ್ಟಿನ ಗಿರಣಿಯ ತಾತಾರೆಡ್ಡಿ ಮತ್ತು ಆತನ ಹೆಂಡತಿ ಸಾವಿತ್ರಮ್ಮ ಮುಂತಾದವರು ಜೊತೆಗೂಡಿ ಹರಟೆಯ ವಸ್ತುವೈವಿಧ್ಯವನ್ನು, ವ್ಯಾಪ್ತಿಯನ್ನು, ರಸವಂತಿಕೆಯನ್ನು ಅಗಾಧ ಎನ್ನುವ ರೀತಿಯಲ್ಲಿ ಹಿಗ್ಗಿಸುತ್ತಿದ್ದರು. ಈ ಮಾತುಕತೆಯ ಬಹ್ವಂಶ ಮೇಷ್ಟ್ರ ಕಾಲನ್ನು ಎಳೆಯುವುದರ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿತ್ತು. ಮಾತುಕತೆಯ ವೇಳೆ ಕಣ್ಣು ಮುಚ್ಚಿಕೊಂಡೆ ಎಲ್ಲವನ್ನೂ ಏಕಾಗ್ರಚಿತ್ತರಂತೆ ಕೇಳಿಸಿಕೊಳ್ಳುತ್ತಿದ್ದ ಮೇಷ್ಟ್ರು ಬಹಳ ಕಡಿಮೆ ಎನ್ನುವ ಮಟ್ಟದ ಪ್ರತಿಕ್ರಿಯೆಯನ್ನ ಮಾತ್ರ ಅತಿ ಅವಶ್ಯ ಸಂದರ್ಭಗಳಲ್ಲಿ ನೀಡುತ್ತಿದ್ದರು. ಮೇಷ್ಟ್ರನ್ನು ಎಷ್ಟೇ ಹೀಯಾಳಿಸಿ ಗೋಳುಹುಯ್ದುಕೊಂಡರೂ ಸಿಟ್ಟಾಗದೆ ಅಥವಾ ಸಿಟ್ಟನ್ನು ಮುಖದ ಮೇಲೆ ಯಾ ಮಾತುಗಳಲ್ಲಿ ತೋರುಗೊಡದೆ ತಮ್ಮನ್ನು ಕುರಿತಾದ ಅತ್ಯಂತ ಕಟುಟೀಕೆಗಳಿಗೂ ಮೇಷ್ಟ್ರು ನೆಮ್ಮದಿಯ ಕಿವಿಯಾಗತೊಡಗಿದ್ದು ನನಗೆ ಈಗಲೂ ಆಶ್ಚರ್ಯ ಎನಿಸುತ್ತಿದೆ. ತಮ್ಮನ್ನು ಸಮರ್ಥಿಸಿಕೊಂಡು ಅಥವಾ ಟೀಕಾಕಾರರ ಮೇಲೆ ಹಾರಾಡಿ ಏನೂ ಪ್ರಯೋಜನವಿಲ್ಲ ಎಂದು ಅರಿತ ಮೇಷ್ಟ್ರು ಮೌನಕ್ಕೆ ಶರಣಾಗುತ್ತಿದ್ದರು ಎಂದು ಅನ್ನಿಸಿದ್ದುಂಟು. ತನ್ನ ಟೀಕೆಗಳಿಗೆ ನಿರೀಕ್ಷೆಯ ಮಟ್ಟದಲ್ಲಿ ಪ್ರತಿಕ್ರಿಯೆ ಬಾರದೇ ಇರುವುದರಿಂದ ಅಸಮಾಧಾನಗೊಂಡತ್ತಿರುತ್ತಿದ್ದ ಶ್ರೀಧರ ನಮ್ಮ ಮನೆ ಹೊರಗಿನ ಚರಂಡಿಯ ಕಲ್ಲುಹಾಸಿನ ಮೇಲೆ ಬರುವಂತೆ ಕುರ್ಚಿ ಹಾಕಿ ಮೇಷ್ಟ್ರನ್ನು ಸೊಳ್ಳೆಗಳಿಗೆ ಆಹಾರ ಮಾಡಿದಾಗಲೂ ಕೋಪಿಸಿಕೊಳ್ಳದ ಅವರು “ಚಂದ್ರಣ್ಣ, ಪ್ರಕಾಶನಿಗೆ ಹೇಳು, ನನ್ನ ಕುರ್ಚಿಯನ್ನು ಸ್ವಲ್ಪ ಮುಂದಕ್ಕೆ ಹಾಕಲಿ” ಎನ್ನುವ ಮುಖಾಂತರ ಈ ವಿಷಯಕ್ಕಾದರೂ ಸಿಟ್ಟಾಗಬಹುದೆಂದು ಕಾಯುತ್ತಿದ್ದ ಶ್ರೀಧರನ ನಿರಾಶೆಯನ್ನು ಇನ್ನೂ ಸಜೀವವಾಗಿ ಇಡುತ್ತಿದ್ದರು. ಇದರಿಂದ ಮತ್ತಷ್ಟು ಉತ್ತೇಜಿತನಾದಂತೆ ತೋರುತ್ತಿದ್ದ ಶಿಷ್ಯೋತ್ತಮ ಶ್ರೀಧರ ಮೇಷ್ಟ್ರನ್ನು ಟೀಕಿಸುವ ತನ್ನ ಭರಾಟೆಯನ್ನು ಯಾವ ಪರಿ ಲಂಗುಲಗಾಮುಗಳು ಇಲ್ಲದೆ ಮುಂದುವರಿಸುತ್ತಿದ್ದ ಎಂದರೆ ಮೇಷ್ಟ್ರು ನಿಧಾನವಾಗಿ ಯಾದವ ಕಲಹರಂಗದಿಂದ ದೂರಾದ ಶ್ರೀಕೃಷ್ಣನ ರಣಚೋಡ್ ದಾಸ್ ಅವತಾರವನ್ನು ನಕಲು ಮಾಡುತ್ತಿದ್ದರು. “ಯಾಕೆ ಸರ್ ಎದ್ದಿರಿ? ಇನ್ನೂ ಹತ್ತು ಘಂಟೆಯಾಗಿಲ್ಲ” ಎನ್ನುವ ಶ್ರೀಧರನ ಕುಹಕ ಮಿಶ್ರಿತ ಮಾತುಗಳಿಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಸಾವಕಾಶವಾಗಿ ಕೆಳಗೆ ನೋಡುತ್ತಾ ಹೆಜ್ಜೆಗಳ ಮೇಲೆ ಹೆಜ್ಜೆಗಳನ್ನು ಊರುತ್ತಾ ಮೇಷ್ಟ್ರು ತಮ್ಮ ಮನೆಯಂಬ ದ್ವಾರಕಾಪುರಿಗೆ ತೆರಳುತ್ತಿದ್ದರು.

ಮೇಷ್ಟ್ರಲ್ಲಿ ನಾನು ಒಂದು ಅವರಿಗೇ ವಿಶಿಷ್ಟ ಅನ್ನಬಹುದಾದ ಗುಣವೊಂದನ್ನು ಗುರುತಿಸಿದ್ದೆ. ವಯಸ್ಸಾದವರನ್ನು ಕಂಡರೆ ಅವರನ್ನು ಅವರ ಗತಕಾಲಕ್ಕೆ ಕರೆದೊಯ್ಯುವ ಪ್ರಕ್ರಿಯೆ ಇಂದಿನಂತೆ ನನಗೆ ಅಂದೂ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. “ನಿಮ್ಮ ಕಾಲ ಹೇಗಿತ್ತು?” ಎನ್ನುವ ಮುನ್ನುಡಿಯ ಮಾತುಗಳಿಗೆ ಕರಗಿಹೋಗಿ ಕಳೆದುಹೋದ ತಮ್ಮ ಗತವೈಭವವನ್ನು ವೈಭವೀಕರಿಸುವ ಮಂದಿಯೇ ಹೆಚ್ಚು. ತಮ್ಮ ಕಾಲ ಬಹಳ ಅಗ್ಗದ ಕಾಲ, ಮೋಸ, ವಂಚನೆಗಳಿಂದ ಹೊರತಾದ ಕಾಲ, ಕಾಲಕಾಲಕ್ಕೆ ಮಳೆಬೆಳೆಯಾಗಿ ಸುಭಿಕ್ಷವಾಗಿದ್ದ ಕಾಲ, ಸತ್ಯಹರಿಶ್ಚಂದ್ರನ ವಂಶಸ್ಥರು ಬಾಳಿದ ಕಾಲ ಹೀಗೆಯೇ ತಮ್ಮ ಆಳಿದ ಕಾಲದ ವರ್ಣರಂಜಿತ ವರ್ಣನೆಯಲ್ಲಿ ಬಹಳ ಮಂದಿ ಮುದುಕ ಮುದುಕಿಯರು ಮೈ ಮರೆಯುವ ಹೊತ್ತು ತಿಪ್ಪೇರುದ್ರಪ್ಪ ಮೇಷ್ಟ್ರು ಮಾತ್ರ ಕಳೆದುಹೋದ ದಿನಗಳ ಕುರಿತು ಒಮ್ಮೆಯೂ ಭಾವುಕರಾದದ್ದನ್ನು ನಾನು ಕಂಡಿಲ್ಲ. ತಾವು ಹುಡುಗರಾಗಿದ್ದಾಗ, ಯುವಕರಾಗಿದ್ದಾಗ ಈಗಿರುವಷ್ಟು ಸುಖ ಸೌಲಭ್ಯಗಳು ಇರಲಿಲ್ಲ, ಜನಗಳಲ್ಲಿ ನೈರ್ಮಲ್ಯಪ್ರಜ್ಞೆ ಬಹಳ ಕಡಿಮೆ ಮಟ್ಟದ್ದಾಗಿತ್ತು, ಉಡುಉಣ್ಣುವುದರಲ್ಲಿ ಅಂತಹಾ ಹೆಚ್ಚಿನ ಸುಖವಿರಲಿಲ್ಲ, ವಿದ್ಯೆಗೆ ಇದ್ದಂತಹ ಅವಕಾಶಗಳೂ ತೀರಾ ಕಡಿಮೆಯೇ ಎಂದು ತಮ್ಮ ಸಮಯದ ಹೋಲಿಕೆಯಲ್ಲಿ ಪ್ರಸ್ತುತ ಸಮಯ ಹೆಚ್ಚು ಚೆನ್ನಾಗಿದೆ ಎಂದು ವಾದಿಸುತ್ತಿದ್ದರು. ಸಾಮಾನ್ಯಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿರುವ ಗತಕಾಲದ ಹೊಗಳಿಕೆಗೆ ತೀರಾ ವಿರುದ್ಧ ಹಾಗೂ ವಿರಳ ಎಸಿಸಬಹುದಾದ ಅಭಿಪ್ರಾಯಗಳು ಮೇಷ್ಟ್ರಿಂದ ಸದಾ ಬರುತ್ತಿದ್ದದ್ದು ಅವರು ಭಾವುಕತೆಯನ್ನು ಗೆದ್ದ ಸಂಕೇತವೊಂದರಂತೆ ನನಗೆ ತೋರುತ್ತಿತ್ತು. ಹಳೆಯ ಕಾಲವನ್ನು ವಸ್ತುನಿಷ್ಠವಾಗಿ ವಿಮರ್ಶೆಯ ಒರೆಗಲ್ಲಿಗೆ ಹಚ್ಚಲಿಕ್ಕೆ, ಹೊಸ ಕಾಲದೊಟ್ಟಿನ ತೌಲನಿಕ ಅಧ್ಯಯನದ ತೊಡಗುವಿಕೆಗೆ ಭಾವುಕತೆಯ ಪರಧಿಯನ್ನ ದಾಟಿದ ವ್ಯಕ್ತಿವಿಶೇಷಗಳಿಂದಷ್ಟೆ ಸಾಧ್ಯ ಎಂದು ನಂಬಿರುವ ನನಗೆ ಈ ದಿಶೆಯಲ್ಲಿ ಮೇಷ್ಟ್ರು ಒಂದು ಆದರ್ಶವಾಗಿ ತೋರಿದ್ದು ಸುಳ್ಳಲ್ಲ.

ಹೀಗೆ ತಮ್ಮ ಸಮಕಾಲೀನ ತುರುವನೂರಿನ ಬದುಕಿಗೆ ಬಣ್ಣಹಚ್ಚಿದ, ಊರ ಕ್ಯಾನ್ವಾಸ್ ನಲ್ಲಿ ತಮಗೆ ಸಾಧ್ಯವಾದ ಮಟ್ಟಿಗಿನ ರಂಗನ್ನು ತುಂಬಿದ ಮೇಷ್ಟ್ರು ೧೯೯೧ ರ ಮೇ ತಿಂಗಳ ಒಂದು ದಿನ ತಮ್ಮ ಮಿತಿಮೀರಿದ, ಹದ್ದುಬಸ್ತಿನಲ್ಲಿಡಲು ಅಸಾಧ್ಯವೆನಿಸಿದ ಬಾಯಿ ಚಪಲದ ಕಾರಣದಿಂದಲೇ ಕೈಲಾಸವಾಸಿಗಳಾದ ಸುದ್ದಿ ನಾನು ಅಹಮದಾಬಾದ್ ನಲ್ಲಿರುವಾಗ ನನ್ನ ಅಪ್ಪ ಪ್ರತಿವಾರ ಬರೆಯುತ್ತಿದ್ದ ಒಂದು ಪೋಸ್ಟ್ ಕಾರ್ಡ್ ನ ಪ್ರಮುಖ ವಿಷಯವಾಗಿತ್ತು. ಗೌಡ್ರ ಮನೆಯಲ್ಲಿ ಮಾಡಿದ ಕಲ್ಲಪ್ಪಜಾತ್ರೆ ಹಬ್ಬದ ಪೂರ್ತಿ ಹೋಳಿಗೆಯೊಂದನ್ನು ಸೇವಿಸಿದ ಪರಿಣಾಮವಾಗಿ ಉಂಟಾದ ಅತಿಯಾದ ಗ್ಯಾಸ್ ಸಮಸ್ಯೆಯಿಂದ ಹೊಟ್ಟೆಯುಬ್ಬರ ಬಂದು ಮೇಷ್ಟ್ರು ವಿಧಿವಶರಾದರು ಎಂದು ತಿಳಿದ ಇಡೀ ದಿನ ನಾನು ಒಂದು ತೆರನಾದ ವಿಚಿತ್ರ ಭಾವನೆಯಲ್ಲಿ ತೇಲುತ್ತಾ ದಿನ ಕಳೆದೆ. ಎಂದೂ ಜನಸಾಮಾನ್ಯರೊಡನೆ ಹೆಚ್ಚು ಬೆರೆಯದೆ, ಊರಿಗೆ ಬರುವ ಸರ್ಕಾರಿ ನೌಕರರ ಒಟ್ಟಿಗೇ ತಾದ್ಯಾತ್ಮಕತೆ ಹೊಂದುತ್ತಾ, ಕಳೆದ ತಮ್ಮ ಕಾಲವನ್ನು ದೂಷಿಸುತ್ತಾ, ಸದಾ ಪ್ರಸ್ತುತಕಾಲದ ಪರವಾದ ಗಟ್ಟಿಧ್ವನಿಯನ್ನು ಎತ್ತುತ್ತಲೇ ಊರ ಅನೇಕ ಜನರಿಗೆ ವಿನಾಕಾರಣ ಕಷ್ಟಸಂಕಷ್ಟಗಳನ್ನ ತಂದೊಡ್ಡುತ್ತಿದ್ದ ತಿಪ್ಪೇರುದ್ರಪ್ಪ ಮೇಷ್ಟ್ರೂ ಮತ್ತು ಅವರಂತಹ ನಮ್ಮ ಮಧ್ಯೆ ಇರಬಹುದಾದ ಕೆಲವು ಪ್ರಭುತಿಗಳೂ ನಮ್ಮ ನೆಲದಲ್ಲಿಯೇ ಹುಟ್ಟಿದವರು ಎನ್ನುವುದನ್ನು ನಾವು ಮರೆಯಬಾರದು. ಫಲವತ್ತಾದ ನೆಲ ಯಾವಾಗಲೂ ಜನೋಪಕಾರಿಯಾದ ಹಣ್ಣು, ಹಂಪಲು, ದವಸ, ಧಾನ್ಯಗಳನ್ನ ಮಾತ್ರ ನೀಡದೆ ಕಳೆಮೆಳೆಗಳನ್ನೂ ಬೆಳೆಸಬಲ್ಲದು ಎನ್ನುವ ಅರಿವು ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ಇಂತಹ ಕಳೆಮೆಳೆಗಳೇ ನಾವು ತಿನ್ನುವ ಹಣ್ಣು, ಹಂಪಲು, ದವಸ ಧಾನ್ಯಗಳ ರುಚಿಯನ್ನು, ಸಾರ್ಥಕತೆಯನ್ನು ತೌಲನಿಕ ಅರ್ಥದಲ್ಲಿ ನೂರ್ಮಡಿಗೊಳಿಸಬಲ್ಲವು ಎನ್ನುವುದೂ ನಮ್ಮ ಕಲ್ಪನೆಯ ತ್ರಿಜಿಜದ ಒಳಗಿರಬೇಕಾಗುತ್ತದೆ

Girl in a jacket
error: Content is protected !!