ಆಡಿಳತ ವರ್ಗದ ಕಾರ್ಯಕ್ಷಮತೆ,ಖಾಸಗಿ ಕೆಲಸದ ಅದಕ್ಷತೆ
ಕೋಟ ಬಸ್ ನಿಲ್ದಾಣದಲ್ಲಿ ಸನ್ಯಾಲ್ ಕಾರನ್ನು ಹತ್ತಿ ರಾವತ್ ಭಾಟ ಅಣುಶಕ್ತಿ ಸ್ಥಾವರ (RAPP)ಕ್ಕೆ ಹೊರಟ ನನ್ನೊಟ್ಟಿಗಿದ್ದ ಕೋಟ ಆಫೀಸ್ ನ ಅಶೋಕ್ ಕುಮಾರ್ ಕುಲಶ್ರೇಷ್ಠ (AKK) ಬಹಳ ಅಸಮಾಧಾನಗೊಂಡಿದ್ದರು. ಸುಮಾರು 50 ಕಿ. ಮೀ.ಗಳ ದೂರದ ಹಾದಿಯ ಉದ್ದಕ್ಕೂ ನಾನು ಮತ್ತು ಸನ್ಯಾಲ್ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತಿದ್ದರೇ ಹೊರತು ತಾವಾಗಿಯೇ ಒಂದೇ ಒಂದು ಮಾತನ್ನೂ ಆಡಲಿಲ್ಲ. ನಾನು ಮಾಡಿದ ತಪ್ಪಿನ ಅರಿವು ನನಗಾಗಲೆ ಆಗತೊಡಗಿತ್ತು. AKK ಪ್ರತಿರೋಧದ ನಡುವೆಯೂ ಸನ್ಯಾಲ್ ಕಾರಿನಲ್ಲಿ ಕೂತು ರಾವತ್ ಭಾಟಕ್ಕೆ ಪ್ರಯಾಣ ಹೊರಟ ನನ್ನ ನಿರ್ಧಾರದ ಬಗ್ಗೆ ನನಗೇ ಅಸಹ್ಯ ಬಂದಿತ್ತು. ಸಾಲದೆಂಬಂತೆ, ಬೇರೆ ದಾರಿಯಿಲ್ಲದೆ ನನ್ನೊಡನೆ ಕಾರಿನಲ್ಲಿ ಕೂತು ಪ್ರಯಾಣಿಸಬೇಕಾದ AKK ಸಂಕೋಚದ ಮುದ್ದೆಯಾಗಿದ್ದನ್ನ ನೋಡಿ ವಿನಾಕಾರಣ ಹಿರಿಯಜೀವವೊಂದನ್ನು ಇಕ್ಕಟ್ಟಿಗೆ ಸಿಕ್ಕಿಸಿದ ಪಾಪಕ್ಕೆ ನಾನು ಭಾಜನನಾಗಿದ್ದ ಪಾಪಪ್ರಜ್ಞೆ ಕಾಡುತ್ತಿತ್ತು.
ಅಹ್ಮದಾಬಾದ್ ನಿಂದ ಹಿಂದಿನ ದಿನವಷ್ಟೇ ನಮ್ಮ ಕೋಟಾ ಆಫೀಸಿಗೆ ಬಂದ ನನಗೆ ಅಲ್ಲಿನ ಅಧಿಕಾರಿ ಹರಪ್ರಸಾದ್ ಶರ್ಮ (HPS), ರಾವತ್ ಭಾಟದ ಕೆಲಸಕ್ಕಾಗಿ ಆಫೀಸ್ ನ ಅತ್ಯಂತ ಹಿರಿಯ ತಂತ್ರಜ್ಞ AKK ಯನ್ನ ನನ್ನ ಜೋಡಿಯಾಗಿ RAPPಗೆ ಕಳುಹಿಸಿಕೊಟ್ಟಿದ್ದರು. RAPP ನಲ್ಲಿ ನಾನು ಒಂದು ಇನ್ನೂರು ಲೈನ್ಸ್ ಗಳ ಎಲೆಕ್ಟ್ರಾನಿಕ್ಸ್ ಟೆಲಿಫೋನ್ ವಿನಿಮಯ ಕೇಂದ್ರವನ್ನು ಸ್ಥಾಪಿಸಬೇಕಿತ್ತು. ಈ ಕೆಲಸವನ್ನು ನೆರವೇರಿಸುವ ಸಲುವಾಗಿ ನನ್ನ ಜೊತೆಗೆ ಸ್ಥಳೀಯ ಸಹಾಯಕರಾಗಿ AKK ನೇಮಕಗೊಂಡಿದ್ದರು. ನಿನ್ನೆ ನಾನು ಕೋಟ ಆಫೀಸ್ ನಲ್ಲಿ ಇರುವ ಹೊತ್ತು ಕೋಟಾದಲ್ಲಿ ಖಾಸಗಿಯಾಗಿ ವಿನಿಮಯ ಕೇಂದ್ರಗಳನ್ನು ದುರಸ್ತಿ ಮತ್ತು ನಿರ್ವಹಣೆ ಮಾಡುವ ಸನ್ಯಾಲ್ ಎನ್ನುವವರು HPSನ್ನು ಕಾಣಲು ಬಂದಿದ್ದರು. ಸನ್ಯಾಲ್ ಗೆ ನನ್ನ ಪರಿಚಯ ಮಾಡಿಕೊಟ್ಟ HPS, ಸನ್ಯಾಲ್ ತಮ್ಮ ಆಫೀಸ್ ನ ಕೆಲಸದ ಹೊರೆಯನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಅವರ ಕುರಿತಾಗಿ ಉಲ್ಲೇಖಿಸಿದ್ದರು. AKK ಈ ಮಾತಿಗೆ ಕೋಪಗೊಂಡವರಂತೆ ಕಂಡರೂ ಏನನ್ನೂ ಮಾತನಾಡಲಿಲ್ಲ. “ನಾಳೆ ತಾನು RAPP ಗೆ ಹೋಗುವುದಿದೆ, ಆಡಳಿತ ವಿಭಾಗದ ವಿನಿಮಯ ಕೇಂದ್ರದಲ್ಲಿ ಒಂದು ತುರ್ತು ದುರಸ್ತಿ ಮಾಡಬೇಕಾಗಿದೆ ಮತ್ತು ಅದಕ್ಕೋಸ್ಕರ ಸ್ವಲ್ಪ ಬಿಡಿಭಾಗಗಳು ಬೇಕಾಗಿವೆ, ಹಾಗಾಗಿ ನಾನು ನಿಮ್ಮನ್ನು ಕಾಣಲು ಬಂದಿದ್ದೇನೆ” ಎಂದು ಸನ್ಯಾಲ್ ತಾವು ಆಫೀಸ್ ಗೆ ಬಂದ ಕಾರಣವನ್ನು HPS ಗೆ ಹೇಳಲಾಗಿ AKK ಸಿಡಿದೆದ್ದರು. “ನಾವು ಯಾವ ಬಿಡಿ ಭಾಗಗಳನ್ನೂ ಮಾರಾಟ ಮಾಡುವುದಿಲ್ಲ” ಎಂದು ಖಡಾಖಂಡಿತವಾಗಿ ಕಡ್ಡಿ ತುಂಡು ಮಾಡಿದಂತೆ ನುಡಿದೇಬಿಟ್ಟರು. AKK ಮಾತು ಕೇಳಿ ಒಂದು ಕ್ಷಣ ದಂಗಾದ ಸನ್ಯಾಲ್ HPS ಮುಖ ನೋಡತೊಡಗಿದರು. ಇಕ್ಕಟ್ಟಿನ ಸ್ಥಿತಿಗೆ ಸಿಕ್ಕಿಹಾಕಿಕೊಂಡ HPS, “ಹೌದು, ಖಾಸಗಿಯಾಗಿ ವಿನಿಮಯ ಕೇಂದ್ರಗಳನ್ನು ನಿರ್ವಹಿಸುವ ಕಂಟ್ರಾಕ್ಟರ್ ಗಳಿಗೆ ಬಿಡಿಭಾಗಗಳನ್ನು ಸರಬರಾಜು ಮಾಡದಂತೆ ಬೆಂಗಳೂರು ಕೇಂದ್ರ ಕಚೇರಿಯಿಂದ ಆದೇಶ ಒಂದು ಬಂದಿದೆ, ತಾವೇನೂ ಮಾಡಲಾಗದು” ಎಂದು ಸನ್ಯಾಲ್ ರಿಗೆ ಸಮಜಾಯಿಷಿ ನೀಡಿದರು.
ಇಂತಹದ್ದೊಂದು ಬೆಳವಣಿಗೆಯನ್ನ ಈ ಮೊದಲೇ ನಿರೀಕ್ಷಿಸಿದಂತೆ ಕಂಡು ಬಂದ ಸನ್ಯಾಲ್ “ತಾವು ಹೋದ ತಿಂಗಳು ತಾನೇ ಜೆಕೆ ಸಿಂಥೆಟಿಕ್ಸ್ ಗಾಗಿ ಬಿಡಿಭಾಗಗಳನ್ನು ಕೊಟ್ಟಿದ್ದೀರಿ, ಈ ಸಲ ಏಕೆ ಕೊಡುತ್ತಿಲ್ಲ?” ಎಂದು HPS ನ್ನ ಪ್ರಶ್ನಿಸಿದರು. ಈಗಾಗಲೇ ಸ್ವಲ್ಪ ಸಾವರಿಸಿಕೊಂಡಿದ್ದ HPS, “ಇಲ್ಲ, ಅದೆಲ್ಲಾ ಹೋದ ತಿಂಗಳ ವಿಷಯ, ಹೋದ ವಾರವಷ್ಟೇ ಕೇಂದ್ರ ಕಚೇರಿಯವರು ಇಂತಹ ಮಾರಾಟಗಳನ್ನು ನಿಷೇಧಿಸಿದ್ದಾರೆ, ನಿಮಗೆ ನನ್ನ ಮಾತುಗಳಲ್ಲಿ ವಿಶ್ವಾಸ ಇಲ್ಲವೆಂದಾದರೆ, ಅಹಮದಾಬಾದ್ ಪ್ರಾಂತೀಯ ಕಚೇರಿಯಿಂದ ಶಿವಪ್ರಕಾಶ್ ಬಂದಿದ್ದಾರೆ, ಅವರನ್ನೇ ಕೇಳಿ” ಎಂದು ನನ್ನ ಕಡೆ ಬೊಟ್ಟು ಮಾಡಿದರು. ಅಲ್ಲಿಗಾಗಲೆ ಪರಿಸ್ಥಿತಿಯ ಗಂಭೀರತೆ ಅರಿತ ಸನ್ಯಾಲ್ ಗೆ ಬಿಡಿಭಾಗಗಳು ಇನ್ನು ದೊರೆಯಲಾರವು ಎನ್ನುವುದು ಖಾತ್ರಿಯಾಗಿ ಈ ವಿಷಯವನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ಒಂದಷ್ಟು ಹರಟೆ ಹೊಡೆದು ಆಫೀಸ್ ನಿಂದ ನಿರ್ಗಮಿಸಿದರು.
ಆಫೀಸ್ ಅವಧಿಯ ನಂತರ ನನ್ನನ್ನು ಆಫೀಸ್ ನ ಬಳಿಯೇ ‘ವಾಡಿ’ ಎನ್ನುವ ಸ್ಥಳದಲ್ಲಿದ್ದ ತಮ್ಮ ಮನೆಗೆ AKK ತಮ್ಮ ಸ್ಕೂಟರ್ ಮೇಲೆಯೇ ಕರೆದೊಯ್ದರು. ಸುಮಾರು ಎರಡು ವರ್ಷಗಳ ಹಿಂದೆ ಕೇರಳದ ಫಾಲ್ಗಾಟ್ ನಲ್ಲಿ ನಡೆದ ಒಂದು ತಿಂಗಳ ಕಾಲದ ತರಬೇತಿ ಕಾಲದಲ್ಲಿ ಒಟ್ಟಿಗೇ ಕಂಪನಿಯ ಅತಿಥಿಗೃಹದಲ್ಲಿ ರೂಮ್ ಮೇಟ್ಸ್ ಆಗಿದ್ದ ಕಾರಣದಿಂದಾಗಿ AKK ಪರಿಚಯ ನನಗೆ ಚೆನ್ನಾಗಿಯೇ ಇತ್ತು. ಉತ್ತರಪ್ರದೇಶದ ಮಥುರಾ ಮೂಲದವರಾದ AKK ಪತ್ನಿ ಕುಂಕುಮ್ ಆಲಿಘಢ ಮೂಲದವರು ಮತ್ತು ಗೃಹವಿಜ್ಞಾನ ಪದವೀಧರರು. ಉತ್ತರ ಭಾರತೀಯ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ನಿಷ್ಣಾತರು. ನಮ್ಮ ತರಬೇತಿಯ ವೇಳೆ ಇದನ್ನು ನನಗೆ AKK ಹಲವಾರು ಬಾರಿ ಹೇಳಿದ್ದರು. ಒಂದು ಗಂಡು ಮತ್ತು ಹೆಣ್ಣುಮಕ್ಕಳ ಚಿಕ್ಕ ಮತ್ತು ಚೊಕ್ಕ ಸಂಸಾರವನ್ನು ಹೊಂದಿದ್ದ AKK ಮನೆಯಲ್ಲಿ ಅಂದು ನನಗೆ ಭರ್ಜರಿ ಉತ್ತರಭಾರತ ಶೈಲಿಯ ಊಟದ ವ್ಯವಸ್ಥೆಯಾಗಿತ್ತು. ಊಟವಾದ ಬಳಿಕ ತಮ್ಮ ದಿನನಿತ್ಯದ ಅಭ್ಯಾಸದಂತೆ AKK ತಾಂಬೂಲ ಸವಿಯುತ್ತಾ ತಮ್ಮ ಆಫೀಸ್ ಬಗ್ಗೆ ಸವಿವರವಾಗಿ ಮಾತನಾಡತೊಡಗಿದರು.
ಸಹಜವಾಗಿಯೇ ಅಂದು ಮಧ್ಯಾಹ್ನ ಆಫೀಸ್ ನಲ್ಲಿ ನಡೆದ ಅಷ್ಟೇನೂ ಆಪ್ಯಾಯಮಾನವಲ್ಲದ ಸನ್ಯಾಲ್ ವಿಷಯ ನಮ್ಮ ಮಾತುಕತೆಯ ಪ್ರಮುಖ ವಿಷಯವಾಗಿ ಕಾಣಿಸಿಕೊಂಡಿತು. ಸನ್ಯಾಲ್ ಈಗೊಂದು ನಾಲ್ಕಾರು ವರ್ಷಗಳಿಂದ ವಿನಿಮಯ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿಯಾಗಿ ಮಾಡುವ ದಂಧೆಯನ್ನು ಕೋಟ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಶುರುಮಾಡಿದ್ದ. ಅಲ್ಲಿಯವರೆಗೆ ಕೇವಲ ನಮ್ಮ ಕಂಪನಿಯೇ ವಾರ್ಷಿಕ ಗುತ್ತಿಗೆ (AMC) ಅಡಿ ದಶಕಗಳ ಕಾಲ ಮಾಡುತ್ತಾ ಬರುತ್ತಿದ್ದ ಈ ನಿರ್ವಹಣೆ ಕಾರ್ಯವನ್ನು ಮೊಟ್ಟಮೊದಲ ಬಾರಿಗೆ ಸನ್ಯಾಲ್ ಕೋಟದಲ್ಲಿ ಆರಂಭಿಸಿದ್ದ. ಅತಿಯಾದ ನಿರ್ವಹಣಾವೆಚ್ಚವನ್ನ ಮತ್ತು ಬಿಡಿಭಾಗಗಳಿಗೆ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದ ನಮ್ಮ ಕಂಪನಿಯ ದರಕ್ಕೆ ಹೋಲಿಸಿದರೆ ಸನ್ಯಾಲ್ ಸಾಕಷ್ಟು ಕಡಿಮೆ ದರಕ್ಕೆ ವಿನಿಮಯ ಕೇಂದ್ರಗಳ ನಿರ್ವಹಣೆಯನ್ನ ಮಾಡುವ ಕಾರಣಕ್ಕಾಗಿಯೆ ಕೆಲವರ್ಷಗಳ ಅವಧಿಯಲ್ಲಿಯೇ ಸಾಕಷ್ಟು ಗ್ರಾಹಕರನ್ನು ನಮ್ಮ ಕಂಪನಿಯಿಂದ ಸೆಳೆದಿದ್ದ. ಜೆಕೆ ಸಿಂತೆಟಿಕ್ಸ್, ರಾಜಸ್ಥಾನ್ ಎಲೆಕ್ಟ್ರಾನಿಕ್ಸ್, ಕೋಟ ಯೂನಿವರ್ಸಿಟಿ, ಇನ್ಸ್ಟ್ರುಮೆಂಟೇಷನ್ ಲಿಮಿಟೆಡ್ ಗಳಂತಹ ದೊಡ್ಡದೊಡ್ಡ ಕಂಪನಿಗಳ ವಿನಿಮಯ ಕೇಂದ್ರಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಸನ್ಯಾಲ್ ಗೆ ಹೋದ ವರ್ಷ RAPPನ ಭಾಗಶಃ ಗುತ್ತಿಗೆಯೂ ದೊರೆತಿತ್ತು. RAPP ಹೇಳಿ ಕೇಳಿ ನಮ್ಮ ಕೋಟ ಆಫೀಸ್ ನ ಬಹುದೊಡ್ಡ ಗ್ರಾಹಕರು. ಆ ಹೊತ್ತಿನಲ್ಲಿಯೇ ಸುಮಾರು 4500 ಲೈನ್ಸ್ ಗಿಂತ ಹೆಚ್ಚಾದ ಸುಮಾರು
ಎಂಟು ವಿನಿಮಯ ಕೇಂದ್ರಗಳು RAPP ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳ ಪೈಕಿ ಎರಡು ವಿನಿಮಯ ಕೇಂದ್ರಗಳನ್ನು ಅಂದರೆ ಸುಮಾರು 2400 ಲೈನ್ಸ್ ಗಳನ್ನ ತನ್ನ ನಿರ್ವಹಣಾ ಗುತ್ತಿಗೆ ಅಡಿಯಲ್ಲಿ ತರುವುದರಲ್ಲಿ ಯಶಸ್ವಿಯಾದ ಸನ್ಯಾಲ್ ಬಗ್ಗೆ AKK ಗೆ ತುಂಬಾ ಕೋಪ ಇರುವ ಹಾಗೆ ಅವರ ಮಾತುಗಳಲ್ಲಿಯೇ ತಿಳಿದು ಬರುತ್ತಿತ್ತು.
ಕೋಟ ಆಫೀಸ್ ನಲ್ಲಿ HPS, AKK ಹೊರತಾಗಿ ಇನ್ನೂ ಎಂಟು ಜನ ತಾಂತ್ರಿಕ ವರ್ಗ ಕೆಲಸ ಮಾಡುತ್ತಿತ್ತು. ಸುಮಾರು 80 ವಿನಿಮಯ ಕೇಂದ್ರಗಳ 20,000 ರಷ್ಟು ಲೈನ್ಸ್ ನಿರ್ವಹಣೆ ಮಾಡುತ್ತಿದ್ದ ಕೋಟ ಆಫೀಸ್ ಗೆ ಮುಖ್ಯವಾಗಿ ಕೋಟ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ಶಿಕ್ಷಣ ಸಂಸ್ಥೆಗಳೇ ಮುಖ್ಯವಾದ ಗ್ರಾಹಕರು. ಇಷ್ಟೊಂದು ಲೈನ್ಸ್ ಗಳ ವಾರ್ಷಿಕ ನಿರ್ವಹಣಾ ಗುತ್ತಿಗೆಗಳ ಅಧಾರದಿಂದಾಗಿ ಕೋಟ ಆಫೀಸ್ ತಕ್ಕಷ್ಟು ಲಾಭವನ್ನೇ ಮಾಡುತ್ತಿದ್ದ ದಿನಗಳವು. ಆದರೆ ಇತ್ತೀಚೆಗೆ ಸನ್ಯಾಲ್ ಉಪಟಳದಿಂದಾಗಿ ಸುಮಾರು ಆರು ಸಾವಿರದಷ್ಟು ಲೈನ್ಸ್ ಗಳನ್ನ ಕಳೆದುಕೊಂಡ ಆಫೀಸ್ ಸಹಜವಾಗಿಯೇ ತನ್ನ ವರಮಾನದಲ್ಲಿ ದಕ್ಷಿಣ ದಿಕ್ಕಿನತ್ತ ಪ್ರಯಾಣ ಮಾಡತೊಡಗಿದ್ದರಿಂದ AKK ವಿಚಲಿತರಾದಂತಿತ್ತು. ವರ್ಷದಿಂದ ವರ್ಷಕ್ಕೆ ಆಫೀಸ್ ಆದಾಯ ಕುಸಿಯತೊಡಗಿದ್ದು ಪ್ರಾಂತೀಯ ಮತ್ತು ಕೇಂದ್ರ ಕಚೇರಿಗಳ ಗಮನಕ್ಕೂ ಬಂದಿತ್ತು. ಇದೇ ವಿಚಾರಕ್ಕೆ ಕೇಂದ್ರಕಚೇರಿಯಿಂದ ವಿಚಕ್ಷಣ ವಿಭಾಗದ ಶ್ರೀ ಮರಿಹಾಳ ಎನ್ನುವವರು ಕೋಟ ಆಫೀಸ್ ಗೆ ಭೇಟಿ ನೀಡಿ ವಿಸ್ತೃತ ವರದಿಯೊಂದನ್ನು ಆಡಳಿತವರ್ಗಕ್ಕೆ ಒಪ್ಪಿಸಿದ್ದರು. ಇಂತಹ ಖಾಸಗಿ ಕಂಟ್ರಾಕ್ಟರ್ ಗಳಿಗೆ ಬಿಡಿ ಭಾಗಳನ್ನು ಕಂಪನಿ ಒದಗಿಸಬಾರದೆಂಬ ನಿರ್ಣಯಕ್ಕೆ ಬಂದಿದ್ದೂ ಇದೇ ಹಿನ್ನೆಲೆಯಿಂದಾಗಿ. ನಮ್ಮ ಕಂಪನಿ ಹೊರತುಪಡಿಸಿದರೆ ಆ ಹೊತ್ತು ಭಾರತದಲ್ಲಿ ಬೇರೆಲ್ಲೂ ಈ ವಿನಿಮಯ ಕೇಂದ್ರಗಳ ಬಿಡಿಭಾಗಗಳು ಉತ್ಪಾದನೆ ಆಗುತ್ತಿಲ್ಲವಾದ ಕಾರಣದಿಂದಾಗಿ ಬಿಡಿಭಾಗಗಳ ಪೂರೈಕೆಯನ್ನು ಖಾಸಗಿಯವರಿಗೆ ಮಾಡದೇ ಹೋದ ಪಕ್ಷದಲ್ಲಿ ಸಹಜವಾಗಿಯೇ ಖಾಸಗಿ ಗುತ್ತಿಗೆದಾರರ ಅಟ್ಟಹಾಸವನ್ನು ಸಮರ್ಥವಾಗಿ ಅಡಗಿಸಬಹುದು ಎನ್ನುವುದು ಕೇಂದ್ರ ಆಡಳಿತ ಮಂಡಳಿಯ ಉದ್ದೇಶವಾಗಿತ್ತು.
ಇನ್ನೂ ಸುಮಾರು ಇಪ್ಪತ್ತು ವರ್ಷಗಳ ಸೇವಾ ಅವಧಿಯುಳ್ಳ AKK ಸಹಜವಾಗಿಯೇ ಇಂತಹ ಬೆಳವಣಿಗೆಯೊಂದರಿಂದ ವಿಚಲಿತರಾಗಿದ್ದರು. ಸನ್ಯಾಲ್ ಆಟ ಇದೇ ರೀತಿ ಅವ್ಯಾಹತವಾಗಿ ನಡೆದಲ್ಲಿ ತಮಗೆ ಆಗಬಹುದಾದ ಅನಾಹುತವನ್ನು AKK ಆಗಲೇ ಮನಗೊಂಡಿದ್ದರು. ಆಫೀಸ್ ನ ಉಳಿದ ಸಹೋದ್ಯೋಗಿಗಳಾದ ಮದನ್ ವರ್ಮ, ತರುಣ್ ಗುಪ್ತ, ಸತ್ಯ ನರೇನ್ ಮುಂತಾದವರಿಗೆ ಈ ಬಗ್ಗೆ ಎಚ್ಚರಿಸಿದ್ದರು ಕೂಡಾ. ಆದರೆ ಅವರ್ಯಾರೂ AKK ಮಾತಿಗೆ ಹೆಚ್ಚಿನ ಬೆಲೆ ಕೊಟ್ಟ ಹಾಗೆ ಕಾಣಿಸದೇ ಇದ್ದುದು AKK ಅವರ ಅಸಮಾಧಾನವನ್ನು ಹೆಚ್ಚು ಮಾಡಿತ್ತು. AKK ಮುಂದುವರೆದ ತಮ್ಮ ಮಾತುಗಳಲ್ಲಿ HPS ವಿರುದ್ಧ ಕೆಂಡವನ್ನೇ ಕಾರುತ್ತಾ ಹೋದರು. ಸನ್ಯಾಲ್ ನ ಬೆಳವಣಿಗೆಯ ಹಿಂದಿನ ಶಕ್ತಿ HPS ಎಂದೇ AKK ನಂಬಿಕೆಯಾಗಿತ್ತು. HPS ಕೇವಲ ಎಂಟು ವರ್ಷಗಳ ಹಿಂದೆಯಷ್ಟೇ ದೆಹಲಿ ಪ್ರಾಂತೀಯ ಆಫೀಸ್ ನಿಂದ ಕೋಟ ಕಚೇರಿಗೆ ವರ್ಗಾವಣೆಯಾಗಿ ಬಂದಿದ್ದರು. ಕೋಟ ಆಫೀಸ್ ಗೆ ಬಂದಾಗ HPS ಸೇವಾವಧಿ ಇನ್ನೂ ಹತ್ತು ವರ್ಷಗಳಷ್ಟು ಇತ್ತು. ಈ ಮೊದಲು ಕೋಟ ಆಫೀಸ್ ನ ಶಾಖಾಧಿಕಾರಿಯಾಗಿ ಪಶ್ಚಿಮಬಂಗಾಳ ಮೂಲದ ಕುಂಡು ಎನ್ನುವವರು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿಹೊಂದಿದ್ದರು. ಕುಂಡು ಕೈ ಕೆಳಗೆ AKK ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರು. ಕುಂಡು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದವರಂತೆ ಕಂಡ AKK, ಕುಂಡು ಅವರ ಕಾಲದಲ್ಲಿ ಖಾಸಗಿ ಗುತ್ತಿಗೆದಾರರ ಹಾವಳಿಯೇ ಇರಲಿಲ್ಲ ಎಂದು ಹೇಳಿದರು. ಆ ಹೊತ್ತಿಗೇ ಖಾಸಗಿ ಗುತ್ತಿಗೆಯ ಮೇಲೆ ಕಣ್ಣಿಟ್ಟು ಒಂದೆರಡು ಸಲ ಆಫೀಸ್ ಗೆ ಬಂದಿದ್ದ ಸನ್ಯಾಲ್ ಗೆ ಕುಂಡು ಸೊಪ್ಪು ಹಾಕಿರಲಿಲ್ಲವಾಗಿ ಸನ್ಯಾಲ್ ತನ್ನ ಎಂದಿನ ಸಿವಿಲ್ ಗುತ್ತಿಗೆಯನ್ನೇ
ಮುಂದುವರೆಸಿದ್ದನು. ಆದರೆ AKK ಪ್ರಕಾರ HPS ಕೋಟ ಆಫೀಸ್ ಗೆ ಬಂದ ನಂತರದಲ್ಲಿ ಸನ್ಯಾಲ್ ಹಾವಳಿ ಜಾಸ್ತಿಯಾಯಿತು. ಎಲ್ಲೋ ಒಂದು ಕಡೆ HPS ಅವರ ಕುಮ್ಮಕ್ಕು ಸನ್ಯಾಲ್ ಗೆ ಇರುವುದರಿಂದಲೇ ಸನ್ಯಾಲ್ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ ಎಂದ AKK ಈ ಬಗ್ಗೆ ತಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎನ್ನತೊಡಗಿದರು.
ಹೀಗೇ ಅದೂ ಇದೂ ಮಾತನಾಡುತ್ತಾ ಗಂಟೆ ಹನ್ನೊಂದು ದಾಟಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಕುಂಕುಮ್ ಅವರು ಕಾಫಿ ಲೋಟಗಳನ್ನು ಹಿಡಿದು ಹಾಲನ್ನು ಪ್ರವೇಶಿಸಿದಾಗಲೇ ನಾನು ನನ್ನ ಕೈಗಡಿಯಾರ ನೋಡಿಕೊಂಡಿದ್ದು. ತುಂಬಾ ತಡವಾಯಿತು, ನಾಳೆ ಬೆಳಗ್ಗೆ ಬೇರೆ ಬೇಗನೇ RAPP ಗೆ ಹೋಗಬೇಕು ಎಂದು ತಡಬಡಾಯಿಸಿ ಎದ್ದವನಿಗೆ ಕೈ ಹಿಡಿದು ಎಳೆದು ಸೋಫಾದ ಮೇಲೆ ಕುಳ್ಳರಿಸಿದ AKK ಗಾಬರಿಗೊಳ್ಳುವ ಅಗತ್ಯ ಏನಿಲ್ಲ, ಬೆಳಿಗ್ಗೆ ಸ್ವಲ್ಪ ನಿಧಾನವಾಗಿಯೇ ಹೊರಡೋಣ, ನಿಧಾನವಾಗಿ ಕಾಫಿ ಕುಡಿಯಿರಿ ಎಂದು ನನ್ನನ್ನು ಉದ್ದೇಶಿಸಿ ಹೇಳಿದರು. ಕಾಫಿ ಸೇವನೆಯ ನಂತರ ನಾನು ಉಳಿದುಕೊಂಡಿದ್ದ ಶ್ರೀನಾಥ್ ಹೋಟಲ್ ಗೆ ಬಿಡುವುದಾಗಿ ಹೇಳಿ ಸ್ಕೂಟರ್ ಗ್ಯಾರೇಜ್ ನಿಂದ ಹೊರಗೆ ತೆಗೆದೇಬಿಟ್ಟರು. ನಾನು ಆಟೋದಲ್ಲಿ ಹೊಟೇಲಿಗೆ ಹೋಗುತ್ತೇನೆ ಎಂದು ಎಷ್ಟೇ ಬಲವಂತ ಮಾಡಿದರೂ ಕೇಳದೇ ಇಷ್ಟು ಹೊತ್ತಿನಲ್ಲಿ ನಿಮಗೆ ಆಟೋಗಳು ಸಿಗುವುದು ಕಷ್ಟ ಎನ್ನುತ್ತಲೇ ನನ್ನನ್ನು ಸ್ಕೂಟರ್ ಹಿಂಭಾಗದಲ್ಲಿ ಕೂರಿಸಿಕೊಂಡು ನನ್ನ ಹೋಟಲಿನತ್ತ ಹೊರಟೇಬಿಟ್ಟರು.
AKK ಮನೆಯಿಂದ ನನ್ನ ಹೊಟೇಲಿಗೆ ಹೋಗುವ ದಾರಿಯಲ್ಲಿಯೇ ನಮ್ಮ ಕೋಟ ಆಫೀಸ್ ಬರುತ್ತದೆ. ಆಫೀಸ್ ಸಮೀಪಿಸಿದ ಹಾಗೆ ಸ್ಕೂಟರ್ ವೇಗವನ್ನು ಕಡಿಮೆ ಮಾಡಿದ AKK “ನಿಮಗೊಂದು ಗಮ್ಮತ್ತು ತೋರಿಸುತ್ತೇನೆ ಬನ್ನಿ” ಎಂದು ಸ್ಕೂಟರ್ ನ್ನ ಆಫೀಸ್ ನ ತುಸುದೂರದಲ್ಲಿಯೇ ನಿಲ್ಲಿಸಿ ಬೀದಿದೀಪಗಳಿಲ್ಲದ ಕತ್ತಲ ಹಾದಿಯಲ್ಲಿ ನನ್ನ ಕೈ ಹಿಡಿದು ಆಫೀಸ್ ಕಡೆ ಸಾವಕಾಶವಾಗಿ ಕರೆದೊಯ್ಯತೊಡಗಿದರು. ಆಫೀಸ್ ಸಮೀಪಿಸುತ್ತಿದ್ದ ಹಾಗೆಯೇ ಆಫೀಸ್ ಮುಂಬಾಗದಲ್ಲಿ ನಿಂತ ಕೆಂಪುಬಣ್ಣದ ಮಾರುತಿ-800 ಒಂದು ನನ್ನ ಗಮನ ಸೆಳೆಯಿತು. ಕೋಟ ಆಫೀಸ್ ಅಂದಿನ ನಮ್ಮ ಬಹುತೇಕ ಏರಿಯಾ ಆಫೀಸ್ ಗಳಂತೆ ಆಫೀಸ್ ಕಮ್ ರೆಸಿಡೆನ್ಸ್ ಆಫೀಸ್. HPS ತಮ್ಮ ಕುಟುಂಬದೊಂದಿಗೆ ಆಫೀಸ್ ಕಟ್ಟಡದಲ್ಲಿಯೇ ವಾಸವಾಗಿದ್ದರು. ಸಾಮಾನ್ಯವಾಗಿ, ಕಟ್ಟಡದ ಮುಂದಿನ ಭಾಗದ ಒಂದು ಕೋಣೆಯನ್ನು ಆಫೀಸ್ ಆಗಿ ಪರಿವರ್ತಿಸಿ, ಹಿಂಭಾಗದ ಭಾಗದಲ್ಲಿ ಶಾಖಾಧಿಕಾರಿಯ ಸಂಸಾರ ವಾಸಿಸುವುದು ವಾಡಿಕೆ. ಕುಂಡು ಹಾಗೆಯೇ ಮಾಡಿದ್ದರು ಕೂಡಾ. ಆದರೆ HPS ಬಂದಮೇಲೆ ಕಟ್ಟಡ ಪಕ್ಕದಲ್ಲಿದ್ದ ಕಾರ್ ಗ್ಯಾರೇಜ್ ನ್ನ ಆಫೀಸ್ ಆಗಿ ಮಾರ್ಪಾಡು ಮಾಡಿ ಪೂರ್ತಿ ಕಟ್ಟಡದಲ್ಲಿ ತಮ್ಮ ಸಂಸಾರ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇದೂ ಕೂಡ AKK ಗೆ HPS ಮೇಲೆ ಇದ್ದಂತಹ ಅತೀವ ಕೋಪಕ್ಕೆ ಒಂದು ಕಾರಣವಾಗಿದ್ದಿರಬೇಕು.
ಆಫೀಸ್ ನ ದೀಪಗಳು ಆ ಹೊತ್ತಿನಲ್ಲೂ ಉರಿಯುತ್ತಿದ್ದವು. ಇದು ಸನ್ಯಾಲ್ ಕಾರ್ ಎಂದು ಆಫೀಸ್ ಮುಂದೆ ನಿಂತಿದ್ದ ಕಾರನ್ನು ಉದ್ದೇಶಿಸಿ ಹೇಳಿದ AKK, “ಬನ್ನಿ, ಇಲ್ಲಿಯೇ ಇರುವ ಮರದ ಹಿಂದೆ ಸ್ವಲ್ಪ ಕಾಲ ಅವಿತಿರೋಣ, ನಾನು ಇಲ್ಲಿಯವರೆಗೆ ನಿಮಗೆ ಹೇಳಿದ ವಿಷಯಗಳನ್ನ ನೀವೇ ಕಣ್ಣಾರೆ ನೋಡುವಿರಂತೆ” ಎಂದು ನನ್ನ ಉತ್ತರಕ್ಕೂ ಕಾಯದೆ ನನ್ನ ಕೈಹಿಡಿದು ಮರದ ಹಿಂದೆ ಕರೆದೊಯ್ದರು. ಬಹಳ ದೊಡ್ಡದಾದ ಕಚೇರಿಯ ಕಾಂಪೌಂಡ್ ಗೇ ತಾಗಿಕೊಂಡಂತಿದ್ದ ವಿಶಾಲವಾದ ಮಾವಿನ ಮರದ ಬಡ್ಡೆಯ ಗಾತ್ರ ನಮ್ಮಿಬ್ಬರನ್ನೂ ಸಲೀಸಾಗಿ ಅಡಗಿಸಿಕೊಂಡಿತ್ತು. ನಮ್ಮ ಕಣ್ಣು, ಕಿವಿಗಳನ್ನ ಆಫೀಸ್ ನತ್ತವೇ ಕೇಂದ್ರೀಕೃತ ಮಾಡಿಕೊಂಡು ಎವೆಯಿಕ್ಕದೆ ಉಸಿರು ಹಿಡಿದು ನೋಡುತ್ತಿದ್ದೆವು. ಒಂದು ಹದಿನೈದು ನಿಮಿಷಗಳಾಗಿರಬಹುದು, HPS ಮತ್ತು ಸನ್ಯಾಲ್ ಆಫೀಸ್ ನಿಂದ ಹೊರಬಿದ್ದರು. ಸನ್ಯಾಲ್ ಜೊತೆಗೆ ಮೂರನೇ ವ್ಯಕ್ತಿಯೊಬ್ಬನಿದ್ದದ್ದೂ ಗೋಚರಿಸಿತು. ಮೊದಲು ಹೊರಬಿದ್ದ ಸನ್ಯಾಲ್ ಅವರನ್ನು ಹಿಂಬಾಲಿಸಿದ ಮೂರನೇ ವ್ಯಕ್ತಿಯ ಕೈಯಲ್ಲಿ ಒಂದು ದೊಡ್ಡದಾದ ಪೆಟ್ಟಿಗೆ ಇತ್ತು ಮತ್ತು ಪೆಟ್ಟಿಗೆ ಭಾರವಾಗಿದ್ದು ಆ ವ್ಯಕ್ತಿ ಪೆಟ್ಟಿಗೆ ಹಿಡಿದ ರೀತಿಯಲ್ಲಿಯೇ ವ್ಯಕ್ತವಾಗುತ್ತಿತ್ತು. ಆಫೀಸ್ ನ ದೀಪಗಳನ್ನು ಆರಿಸಿ ಕೊನೆಯವರಾಗಿ ಹೊರಬಿದ್ದ HPS ಸೇರಿದಂತೆ ಮೂವರೂ ಸನ್ಯಾಲ್ ಕಾರ್ ನ ಬಳಿ ಬಂದರು. ಆ ಮೂರನೇ ವ್ಯಕ್ತಿ ತನ್ನ ಕೈಲಿದ್ದ ಪೆಟ್ಟಿಗೆಯನ್ನು ಕಾರ್ ಡಿಕ್ಕಿಯ ಹಿಂದಿಟ್ಟು ಒಂದು ದೀರ್ಘ ನಿಟ್ಟುಸಿರುಬಿಟ್ಟ. ಕಾರನ್ನು ಏರಿ ಕುಳಿತ ಸನ್ಯಾಲ್ ಗೆ ವಿದಾಯ ಹೇಳಿದ HPS ತಮ್ಮ ಮನೆಯೊಳಗೆ ಸೇರಿಕೊಂಡರು. ಕಾರು ಮರೆಯಾದ ಸ್ವಲ್ಪ ಸಮಯದ ನಂತರ ಮರದ ಮರೆಯಿಂದ ಹೊರಬಂದ ನಾವು ದೂರದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಏರಿ ನನ್ನ ಹೋಟೆಲ್ ಕಡೆಗೆ ಪ್ರಯಾಣಿಸತೊಡಗಿದೆವು.
AKK ನನ್ನನ್ನು ಕುರಿತು “ಆ ಪೆಟ್ಟಿಗೆಯೊಳಗೆ ಏನಿರಬಹುದೆಂದು ನಿಮ್ಮ ಊಹೆ?” ಎಂದು ಪ್ರಶ್ನಿಸಿದರು. ಈ ಹೊತ್ತಿಗಾಗಲೇ ವಿಷಯದ ಸಾಕಷ್ಟು ಜ್ಞಾನವನ್ನು ಪಡೆದ “ನಾನು ಅವುಗಳು ವಿನಿಮಯ ಕೇಂದ್ರದ ಬಿಡಿಭಾಗಗಳಾಗಿರಬಹುದು” ಎಂದೆ. ನನ್ನ ಉತ್ತರದಿಂದ ಉತ್ತೇಜಿತರಾದಂತೆ ಕಂಡು ಬಂದ AKK, “ಹೌದು, ನಿಮ್ಮ ಊಹೆ ಸರಿಯಾಗಿದೆ, ಅವು ಬಿಡಿಭಾಗಗಳೇ” ಎಂದರು. “ನಾನು ಈ ಹೊತ್ತು ಮಧ್ಯಾಹ್ನ ಸನ್ಯಾಲ್ ಗೆ ಬಿಡಿಭಾಗಗಳನ್ನು ಪೂರೈಸಬಾರದೆಂದು ನಿಮ್ಮ ಎದುರಿನಲ್ಲಿಯೇ HPS ಗೆ ತಾಕೀತುಮಾಡಿದ್ದೆ. ಹಾಗಾಗಿ ಪೀಚಲಾಟಕ್ಕೆ ಸಿಕ್ಕಿಬಿದ್ದ HPS, ಈಗ ರಾತ್ರಿ ವೇಳೆಯಲ್ಲಿ, ಆಫೀಸ್ ನಲ್ಲಿ ಯಾರೂ ಇರದ ಸಮಯದಲ್ಲಿ ಸನ್ಯಾಲ್ ಗೆ ಬಿಡಿಭಾಗಗಳನ್ನು ಸಪ್ಲೈ ಮಾಡಿದ್ದಾರೆ” ಎಂದರು. “ಆದರೆ ಕೇಂದ್ರಕಚೇರಿಯಿಂದ ಖಾಸಗಿಯವರಿಗೆ ಬಿಡಿಭಾಗಗಳ ಸರಬರಾಜು ನಿಷಿದ್ದ ಎನ್ನುವ ನಿಯಮ ಜಾರಿಯಲ್ಲಿ ಇದೆಯಲ್ಲವೇ?” ಎನ್ನುವ ನನ್ನ ಬಾಲಿಶ ಪ್ರಶ್ನೆಗೆ AKK ಜೋರಾಗಿ ನಕ್ಕರು. ಅವರು ನಕ್ಕ ರಭಸಕ್ಕೆ ಸ್ಕೂಟರ್ ಒಂದು ಕ್ಷಣ ತನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಯ ಒಂದು ಬದಿಗೆ ಸೇರಿದಂತೆ ಅನಿಸಿತು. ತುಸು ಕಷ್ಟಪಟ್ಟೇ ಸ್ಕೂಟರ್ ಬ್ಯಾಲನ್ಸ್ ನ್ನ ಮತ್ತೆ ಪಡೆದ AKK ತಮ್ಮ ಮಾತುಗಳನ್ನ ಮುಂದುವರೆಸಿದರು. “ಇದೊಂದು ಭಯಾನಕ ದಂಧೆ, ನಮ್ಮ ಸಂಸ್ಥೆ ನಿರ್ವಹಣೆ ಮಾಡುತ್ತಿರುವ ವಿನಿಮಯ ಕೇಂದ್ರಗಳ ಸರಿಯಾಗಿಯೇ ಇರುವ ಬಿಡಿ ಭಾಗಗಳನ್ನು HPS ಆಫೀಸ್ ನ ಕೆಲ ಟೆಕ್ನಿಷಿಯನ್ಸ್ ಗಳ ಸಹಾಯದಿಂದ ತರಿಸಿಕೊಂಡು ಅವುಗಳ ಬದಲಿಗೆ ಹೊಸ ಬಿಡಿಭಾಗಗಳನ್ನು ಆ ವಿನಿಮಯ ಕೇಂದ್ರದವರಿಗೆ ಮಾರುತ್ತಾರೆ. ಹೀಗೆ ವಾಪಾಸು ತಂದ ಬಿಡಿ ಭಾಗಗಳನ್ನು ಮತ್ತದೇ ತಾಂತ್ರಿಕ ವರ್ಗದ ನೆರವಿನಿಂದ ಸ್ವಚ್ಚಗೊಳಿಸಿ ಸನ್ಯಾ ಲ್ ಗೆ ಮಾರುತ್ತಾರೆ. ಆಡಳಿತ ವರ್ಗದವರು ಚಾಪೆಯ ಕೆಳಗೆ ತೂರಿದರೆ HPS ಯಂತವರು ರಂಗೋಲಿ ಕೆಳಗೆ ತೂರುತ್ತಾರೆ” ಎಂದರು. AKK ಇನ್ನೂ ಮಾತನಾಡುವವರಿದ್ದರು, ಆದರೆ ನನ್ನ ಹೋಟೆಲ್ ಸಮೀಪಿಸಿದ ಕಾರಣ ಮತ್ತು ಹೊಸ ದಿನವಾಗಲೇ ಉದಯವಾಗಿದ್ದುದರಿಂದ ನನಗೆ ರಾತ್ರಿಯ ವಿದಾಯ ಹೇಳಿ ಮನೆಗೆ ತೆರಳಿದರು.
ರಾತ್ರಿಯಿಡೀ ಪೂರ್ತಿ ದಿನ ನಡೆದ ಸಂಗತಿಗಳನ್ನು ಯೋಚಿಸುತ್ತಲೇ ಹೊಸಜಾಗದಲ್ಲಿ ಮಗ್ಗಲು ಬದಲಾಯಿಸುತ್ತಾ ರಾತ್ರಿ ಕಳೆದವನಿಗೆ ಬೆಳಗಿನ ಜಾವ ಸ್ವಲ್ಪ ಕಣ್ಣುಹತ್ತಿದ ನೆನಪು. ಕಣ್ಣು ತೆರೆದು ನೋಡಿದಾಗ ಗಡಿಯಾರ ಏಳೂವರೆ ಗಂಟೆಯನ್ನು ತೋರಿಸುತ್ತಿತ್ತಾಗಿ ಗಡಬಡಿಸಿ ಎದ್ದವನು RAPP ಗೆ ಹೋಗಲು ಅಣಿಯಾಗತೊಡಗಿದೆ. ಒಂಬತ್ತು ಗಂಟೆಗೆ ಸರಿಯಾಗಿ ಹೋಟೆಲ್ ಗೆ ಬಂದ AKKಯೊಟ್ಟಿಗೆ ಆಟೋ ಹಿಡಿದು ರಾಜಸ್ಥಾನ್ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆವು.
ಬಸ್ ನಿಲ್ದಾಣದಲ್ಲಿ ಇಳಿದವರು ಶೀಘ್ರವಾಗಿ ರಾವತ್ ಭಾಟ ಬಸ್ ಗಳ ಕಡೆ ಹೆಜ್ಜೆ ಹಾಕತೊಡಗಿದೆವು. ಹಿಂದಿನಿಂದ “ಅಶೋಕ್, ಅಶೋಕ್” ಎನ್ನುವ ಕೂಗು ಕೇಳಿಬಂತು. ಹಿಂತಿರುಗಿ ನೋಡಿದವರಿಗೆ ಸನ್ಯಾಲ್ ಕಾಣಿಸಿದರು. ಅವರನ್ನು ನೋಡಿ ನಿಂತ ನಮ್ಮ ಕಡೆ ಅವಸರ ಅವಸರವಾಗಿ ಧಾವಿಸಿದ ಸನ್ಯಾಲ್ “ಎಲ್ಲಿ ಹೋಗುತ್ತಿದ್ದೀರಿ?” ಎಂದು AKK ಯನ್ನ ಪ್ರಶ್ನಿಸಿದರು. “RAPP ಗೆ ಹೊರಟಿದ್ದೇವೆ” ಎನ್ನುವ ಉತ್ತರವನ್ನು AKK ಕೊಟ್ಟರು. “ಹೋ ಹಾಗೋ, ಬನ್ನಿ ನಾನೂ ಕೂಡ RAPP ಗೆ ಹೊರಟಿದ್ದೇನೆ, ನಿಮ್ಮನ್ನು ನನ್ನ ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ” ಎಂದರು. AKKಗೆ ಸನ್ಯಾಲ್ ಅವರ ಆಹ್ವಾನ ಸ್ವಲ್ಪವೂ ಇಷ್ಟವಾದಂತೆ ತೋರಲಿಲ್ಲ. “ಇಲ್ಲ, ನೀವು ಹೋಗಿ, ನಾವು ಬಸ್ ನಲ್ಲಿ ಬರುತ್ತೇವೆ” ಎಂದು ಬಿಟ್ಟರು. ನಿನ್ನೆಯೇ ನನಗೆ ಸ್ವಲ್ಪ ಪರಿಚಯವಾಗಿದ್ದ ಸನ್ಯಾಲ್ ನನ್ನ ಕಡೆ ತಿರುಗಿ “ಸರ್, ನೀವಾದರೂ ಹೇಳಬಾರದೇ, ವಿನಾಕಾರಣ ಅಶೋಕ್ ನನ್ನ ಮೇಲೆ ಮುಗಿಬೀಳಲಿಕ್ಕೆ ಸದಾ ಸಿದ್ದವಾಗಿರುತ್ತಾರೆ, ಅಶೋಕ್ ಫಿರಂಗಿ ಸನ್ಯಾಲ್ ನನ್ನು ಸದಾ ಹುಡುಕುತ್ತಿರುತ್ತದೆ” ಎಂದು ನಗಾಡಿದರು. “ನನ್ನನ್ನು ನಿಮ್ಮ ಸ್ನೇಹಿತರು ಬಹಳ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ, ದಯವಿಟ್ಟು ಅವರಿಗೆ ತಿಳಿಸಿ ಹೇಳಿ” ಎಂದರು. “ಅಶೋಕ್, ದಯವಿಟ್ಟು ನನ್ನ ಕಾರಿನಲ್ಲಿ ಬನ್ನಿ, ಲೋಕವೇನೂ ಮುಳುಗಿ ಹೋಗುವುದಿಲ್ಲ, ನಾವೂ ನೀವೂ ಒಟ್ಟಾಗಿಯೇ ಇರಬೇಕಾದವರು” ಎಂದು ಒತ್ತಾಯಿಸತೊಡಗಿದರು. ಆದರೆ AKK ಅದಕ್ಕೆ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೇ ನಿಂತಿದ್ದುದರಿಂದ ನಾನು AKKಗೆ “ಕಾರ್ ನಲ್ಲಿ ಹೋಗೋಣವೆ? ಈಗಾಗಲೇ ಸಾಕಷ್ಟು ಸಮಯವಾಗಿದೆ, ಇನ್ನು ಬಸ್ ಕಾಯುತ್ತಾ ಕುಳಿತರೆ ತಡವಾದೀತು” ಎಂದೆ. ನನ್ನ ಮಾತಿಗೆ ಬೆಲೆಕೊಟ್ಟು ಒಲ್ಲದ ಮನಸ್ಸಿನಿಂದ ಕಾರ್ ಏರಿದ AKK ಸಹಜವಾಗಿಯೇ ದಾರಿಯುದ್ದಕ್ಕೂ ಅವರದಲ್ಲದ ಗಾಂಭೀರ್ಯ ಮುಖದ ಒಡೆಯರಾಗಿದ್ದರು.
RAPP ತಲುಪಿದ ನಂತರದಲ್ಲಿ ಸನ್ಯಾಲ್ ಗೆ ಧನ್ಯವಾದವನ್ನು ಅರ್ಪಿಸಿದೆ, AKK ಏನೂ ಹೇಳಲಿಲ್ಲ. ನಮಗಾಗಿಯೇ ಬುಕ್ ಆಗಿದ್ದ ಅತಿಥಿಗೃಹದತ್ತ ತ್ವರಿತವಾಗಿ ಹೆಜ್ಜೆ ಹಾಕತೊಡಗಿದೆವು. ನಾನು ಮತ್ತು AKK ಇಲ್ಲಿ ಕನಿಷ್ಠವೆಂದರೂ ಒಂದು ವಾರದ ಕಾಲ ಕೆಲಸ ಮಾಡಬೇಕಾಗಿದ್ದ ಕಾರಣ ಒಟ್ಟಿಗೇ ಒಂದೇ ಕೋಣೆಯಲ್ಲಿ ಉಳಿಯುವ ನಿರ್ಧಾರ ಮಾಡಿದ್ದೆವು.
ಅತಿಥಿಗೃಹದಲ್ಲಿ ನಮ್ಮ ಸಾಮಾನನ್ನು ಇಟ್ಟು, ಟೀ ಕುಡಿದು ವಿನಿಮಯ ಕೇಂದ್ರದ ನಿರ್ವಹಣಾಧಿಕಾರಿ ರೈ ಅವರ ಭೇಟಿಗೆ ಹೊರೆಟೆವು. ನಾವು ರೈ ಅವರ ಆಫೀಸ್ ಗೆ ಹೋಗುವ ದಾರಿಯಲ್ಲಿ ಬರುವ ಸನ್ಯಾಲ್ ನಿರ್ವಹಿಸುತ್ತಿರುವ ಆಡಳಿತ ವಿಭಾಗದ ವಿನಿಮಯ ಕೇಂದ್ರವನ್ನು ನನಗೆ ತೋರಿಸುವುದಾಗಿ AKK ಕರೆದೊಯ್ದರು. ಪ್ರಾಯಶಃ AKK ಗೆ ತಾವು ವರ್ಷಗಳಿಂದ ನಿರ್ವಹಿಸಿದ ವಿನಿಮಯ ಕೇಂದ್ರವನ್ನು ಸನ್ಯಾಲ್ ಕಡೆಯವರು ಈ ಒಂದು ವರ್ಷದಲ್ಲಿ ಹೇಗೆ ಹಾಳುಗೆಡವಿದ್ದಾರೆ ಎನ್ನುವುದನ್ನು ಪ್ರತ್ಯಕ್ಷ ತೋರಿಸ ಬೇಕೆಂದಿರಬೇಕು. ಕೇಂದ್ರದ ಒಳಗಡೆ ಯಾರೋ ಕೆಲಸ ಮಾಡುವ ಹಾಗೆ ತೋರಿಬರಲಾಗಿ, ಸಾವಕಾಶವಾಗಿ ಕೇಂದ್ರದ ಕಂಟ್ರೋಲರ್ ಇರುವ ಬಾಗಿಲನ್ನು ತೆರೆದ AKK ಸ್ತಬ್ದವಾಗಿ ನಿಂತು ಬಿಟ್ಟರು. AKK ಪರಿಸ್ಥಿತಿ ನೋಡಿ ಗಾಬರಿಗೊಂಡ ನಾನೂ ನಿಧಾನವಾಗಿ ಅವರ ಬಳಿಸಾರಿ, ಕೇಂದ್ರದ ಒಳಗೆ ಅವರ ಬೆನ್ನ ಹಿಂದಿನಿಂದ ಇಣುಕಿದೆ, ಅಲ್ಲಿ HPS ತಮ್ಮ ಆಫೀಸ್ ನ ನಾಲ್ಕೈದು ತಾಂತ್ರಿಕ ವರ್ಗದ ಜೊತೆಗೆ ತಲೆಗೆ ಟವೆಲ್ ಸುತ್ತಿಕೊಂಡು ವಿನಿಮಯ ಕೇಂದ್ರದ ದುರಸ್ತಿ ಕೆಲಸದಲ್ಲಿ ತಲ್ಲೀನರಾಗಿದ್ದರು. ತಲೆಸುತ್ತಿ ಬಂದಂತಾದ ನಾನು AKKಯವರ ಮೇಲೆ ತುಸು ಭಾರವಾಗಿಯೆ ಒರಗಿದೆ.