ಆಂಗ್ಲಭಾಷೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ!

Share

ಲೇಖಕರ ಪರಿಚಯ;

ಎನ್.ಸಿ.ಶಿವಪ್ರಕಾಶ್ ಮೂಲ ತುರುವನೂರು ನಿವಾಸಿ,ಅವರು ಆರಿಸಿಕೊಂಡ ವೃತ್ತಿಯಿಂದ ಒಮಾನ್ ದೇಶದ ಮಸ್ಕತ್‌ನಲ್ಲಿ ವಾಸವಾಗಿದ್ದಾರೆ.ಆದರೆ ತಾಯ್ನಾಡಿನ ಮಣ್ಣಿನ ವಾಸನೆಯನ್ನು ಎಂದೂ ಮರೆತವರಲ್ಲ ಅದರಲ್ಲೂ ಆಡಿ-ಬೆಳದ ಗ್ರಾಮದ ವೈಶಿಷ್ಟ್ಯಗಳ ಕುರಿತು ಮೆಲುಕು ಹಾಕುತ್ತಲೆ ಇರುತ್ತಾರೆ, ಯಾಕೆಂದರೆ ಅಲ್ಲಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಎಂದೂ ಕಳಚಲಾಗದ ನೆನಪುಗಳು.ಹಾಗಾಗಿಯೇ ಗ್ರಾಮದ ಪ್ರತಿ ನೆನಪು ಅವರಲ್ಲಿ ಮಾಸದೆ ಉಳಿದವೆ.ಆ ನೆನಪುಗಳ ಭುತ್ತಿಯ ಒಂದಿಷ್ಟು ಘಟನೆಳನ್ನು ಇಲ್ಲಿ ಹೇಳಿದ್ದಾರೆ.
ಶಿವಪ್ರಕಾಶ್ ಅವರು ಹತ್ತನೇ ತರಗತಿಯವರೆಗೂ ತುರುವನೂರಿನಲ್ಲೇ ಓದಿದ್ದು ನಂತರ ಪಿಯುಸಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ,ಇಂಜಿನಿಯರಿಂಗ್ ಅನ್ನು ದಾವಣಗೆರೆ ಬಿಡಿಟಿ ಕಾಲೇಜಿನಲ್ಲಿ ಮುಗಿಸಿ ನವದೆಹಲಿಯ ಇಂದಿರಾಗಾಂಧಿ ಮುಕ್ತ ವಿ.ವಿಯಲ್ಲಿ ಎಂಬಿಎ ಪದವಿ ಪಡೆದುಕೊಂಡವರು.ಇದಾದ ನಂತರ ಅವರು ಬೆಂಗಳೂರಿನ ಐಟಿಐನಲ್ಲಿ ಉದ್ಯೋಗಕ್ಕೆ ಸೇರಿಕೊಂಡು ಸುಮಾರು ಹತ್ತು ವರ್ಷಗಳ ಕಾಲದ ನಂತರ ಒಮಾನ್ ದೇಶದ ಮಸ್ಕತ್‌ನಲ್ಲಿ ಉದ್ಯೋಗಕ್ಕೆ ತೆರಳಿದರು.ಭೌತಿಕವಾಗಿ ಅಲ್ಲಿದ್ದರು ಅವರು ಮಾನಸಿಕವಾಗಿ ಈ ದೇಶದ ನೆಲದ ಸೊಗಡಿನಲ್ಲೇ ತಲ್ಲೀನರಾಗಿರುತ್ತಾರೆ .ಸಾಹಿತ್ಯಾಸಕ್ತರು, ಹಲವಾರು ಲೇಖನಗಳನ್ನು ಬರೆದಿದ್ದಾರೆ, ಕತೆ,ಕವನ ಹಾಗೂ ಹಲವಾರು ಪುಸ್ತಕಗಳ ವಿಮರ್ಶೆಯನ್ನು ಮಾಡಿದ್ದರೆ, ವಿಮರ್ಶೆಗಾಗಿ ಅವರಿಗೆ `ಮನ್ವಂತರ ‘ರಾಜ್ಯ ಮಟ್ಟದ ಪ್ರಶಸ್ತಿಯೂ ಸಂದಿದೆ. ಬರಹದ ಬಂಧದಲ್ಲಿಯೇ ಇರುವ ಇವರು ,ಇನ್ನು ಮುಂದೆ ಪ್ರತಿ ಭಾನುವಾರ ‘ ಅನುಭೂತಿ’ ಅಂಕಣದಲ್ಲಿ ಬರೆಯುತ್ತಾರೆ.

ಎನ್.ಸಿ.ಶಿವಪ್ರಕಾಶ್
ಮಸ್ಕತ್, ಒಮಾನ್

ಆಂಗ್ಲಭಾಷೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ!

ಈ ಹೊತ್ತು ನನ್ನ ಮನಸ್ಸು ನನ್ನ ಗ್ರಾಮೀಣ ಭಾಗದ ವಿದ್ಯಾರ್ಥಿ ಮಿತ್ರರ ಕಷ್ಟಗಳಿಗೆ ಧ್ವನಿಯಾಗಲಿಕ್ಕೆ ಇನ್ನಿಲ್ಲದಂತೆ ತುಡಿಯುತ್ತಿದೆ.
ನಾನೂ ಗ್ರಾಮೀಣ ಪ್ರದೇಶ ಒಂದರಿಂದ ಬಂದವನು. ಅಲ್ಲಿನ ವಿದ್ಯಾರ್ಥಿ ಮಿತ್ರರಲ್ಲಿನ ತುಡಿತ-ತುಮಲುಗಳನ್ನು ಚೆನ್ನಾಗಿ ಬಲ್ಲವನು. ನಾನು ಗ್ರಾಮೀಣ ಪ್ರದೇಶದಲ್ಲಿ ನನ್ನ ಹತ್ತನೇ ತರಗತಿ ಪೂರ್ಣಗೊಳಿಸಿದೆ ಎಂದರೆ ಬಹುಶಃ ನನ್ನ ಕಷ್ಟಕಾರ್ಪಣ್ಯಗಳ ಪಾರ್ಶ್ವಮುಖದ ಪರಿಚಯವನ್ನಷ್ಟೆ ಮಾಡಿಸಿದ ಹಾಗಾಗುತ್ತದೆ. ನಾನು ಹತ್ತನೇ ಇಯತ್ತೆಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತೆ ಎಂದರೆ ಪೂರ್ಣಸತ್ಯವನ್ನು ಉಸುರಿದ ಹಾಗಾಗುತ್ತದೇನೋ.
ಹತ್ತನೇ ತರಗತಿಯನ್ನು ಮುಗಿಸಿ ಮುಂದಿನ ಪಿಯುಸಿ ವ್ಯಾಸಂಗಕ್ಕಾಗಿ ವಿಜ್ಞಾನ ಐಚ್ಛಿಕ ವಿಷಯವನ್ನು ಆಯ್ದುಕೊಂಡು ಚಿತ್ರದುರ್ಗದ ವಿಜ್ಞಾನ ಪದವಿ ಕಾಲೇಜನ್ನು ಸೇರಿಕೊಂಡಾಗಲೆ ನನಗೆ ಗ್ರಾಮೀಣ ಪ್ರದೇಶವೊಂದರಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಓದಿದರ ಫಲಶೃತಿಯ ಅನುಭವವಾಗಿದ್ದು. ವಿಜ್ಞಾನ ಕಾಲೇಜಿನ ಅಧ್ಯಾಪಕರು ಕೇವಲ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುತ್ತಿದ್ದರು. ಇದರಲ್ಲಿ ಅವರದೇನೂ ತಪ್ಪಿರಲಿಲ್ಲ ಬಿಡಿ. ಪದವಿ ತರಗತಿಗಳಲ್ಲಿಯೂ ಬೋಧಿಸುತ್ತಿದ್ದ ಈ ಅಧ್ಯಾಪಕವೃಂದ ಸಹಜವಾಗಿಯೇ ಪಿಯುಸಿ ತರಗತಿಗಳಲ್ಲಿಯೂ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಬೋಧಿಸುತ್ತಿದ್ದುದು ವಾಡಿಕೆ.
ನನ್ನ ಊರಿನಲ್ಲಿ ಯಾವಾಗಲೂ ಶಾಲೆಯಲ್ಲಿ ಪ್ರಥಮಸ್ಥಾನವನ್ನು ಕಾಯ್ದುಕೊಂಡು ಬರುತ್ತಿದ್ದ ನನಗೆ ತರಗತಿಗಳಲ್ಲಿ ಅಧ್ಯಾಪಕರು ಬೋಧಿಸುತ್ತಿದ್ದ ವಿಷಯಗಳು ಭಾಷೆಯ ಕಾರಣದಿಂದಾಗಿ ಕಬ್ಬಿಣದ ಕಡಲೆ ಎನ್ನಿಸತೊಡಗಿದವು. ಅಧ್ಯಾಪಕರು ಕಪ್ಪುಹಲಗೆಯ ಮೇಲೆ ಬರೆಯುತ್ತಿದ್ದ ಗಣಿತ ಲೆಕ್ಕಗಳು ಪರಿಚಿತವೆ ಅನ್ನಿಸಿದರೂ ಅವರು ಕೊಡುತ್ತಿದ್ದ ವಿವರಣೆ ನನಗೆ ಅರ್ಥವಾಗುತ್ತಿರಲಿಲ್ಲ. ನನ್ನ ಬಹಳಷ್ಟು ಸಹಪಾಠಿಗಳು ಆಂಗ್ಲಭಾಷಾ ಮಾಧ್ಯಮದಿಂದ ಬಂದವರಾಗಿದ್ದು ಅಧ್ಯಾಪಕರು ಕೇಳುವ ಪ್ರಶ್ನೆಗಳಿಗೆ ಪಟಪಟ ಉತ್ತರ ಕೊಡುತ್ತಿದ್ದರೆ ಒಂದು ತೆರನಾದ ಕೀಳರಿಮೆಯನ್ನು ಅನುಭವಿಸುವ ಸರದಿ ನನ್ನದಾಗಿತ್ತು. ಅಧ್ಯಾಪಕರ ಪ್ರಶ್ನೆಗಳಿಗೆ ನನಗೆ ಉತ್ತರ ಗೊತ್ತಿರಲಿಲ್ಲವೆಂದಲ್ಲ ಆದರೆ ಆಂಗ್ಲಭಾಷೆಯಲ್ಲಿ ಉತ್ತರವನ್ನು ಹೇಳಲಿಕ್ಕೆ ಬರುತ್ತಿರಲಿಲ್ಲ.

 

ನನ್ನೂರಿನ ಹೈಸ್ಕೂಲಲ್ಲಿ ನಾನು ಯಾವಾಗಲೂ ಮೊದಲನೆಯ ಬೆಂಚಿನಲ್ಲಿಯೇ ಮೊದಲಿಗನಾಗಿ ಕೂತು ರೂಢಿ. ಹಾಗಾಗಿ ಪ್ರಥಮ ಪಿಯುಸಿಯ ಮೊದಲ ಕೆಲದಿನಗಳು ತರಗತಿಯ ಮೊದಲನೇ ಡೆಸ್ಕ್ ನಲ್ಲಿಯೇ ಅಸೀನನಾಗತೊಡಗಿದೆ. ಬಹುಶಃ ಅದು ತರಗತಿಯ ಮೂರನೇ ದಿನ ಇರಬೇಕು, ನಮ್ಮ ಭೌತವಿಜ್ಞಾನದ ಅಧ್ಯಾಪಕರಾಗಿದ್ದ ಶಂಕರನಾಯ್ಕ್ ನನ್ನನ್ನು ಉದ್ದೇಶಿಸಿ ಒಂದು ಪ್ರಶ್ನೆಯನ್ನು ಕೇಳಿದರು. ಭಾರತೀಯ ಉಪಗ್ರಹಗಳಿಗೆ ಸಂಬಂಧಿಸಿದ ಪ್ರಶ್ನೆ ಅದಾಗಿತ್ತೆಂದು ನೆನಪು. ಪ್ರಶ್ನೆಗೆ ಉತ್ತರವೂ ನನಗೆ ಗೊತ್ತಿತ್ತು. ಆದರೆ ಇಂಗ್ಲೀಷ್ ನಲ್ಲಿ ಉತ್ತರವನ್ನು ಕೊಡಬೇಕಾಗಿದ್ದರಿಂದ ಉತ್ತರ ಕೊಡಲು ನಿಂತವನು ತಡವರಿಸತೊಡಗಿದೆ. ನನ್ನಿಂದ ವಾಕ್ಯದ ರೂಪದ ಉತ್ತರ ನೀಡಲಾಗಲಿಲ್ಲ. ಗುರುಗಳು ನನ್ನ ಪರಿಸ್ಥಿತಿಯನ್ನು ಅರಿತರೋ ಏನೋ. ನನ್ನ ಪಕ್ಕದಲ್ಲಿ ಕುಳಿತ ನರಹರಿಯನ್ನು ಉತ್ತರ ಹೇಳಲಿಕ್ಕೆ ಕೇಳಿದರು. ನರಹರಿ ಚಿನ್ಮೂಲಾದ್ರಿ ಹೈಸ್ಕೂಲಿನ ವಿದ್ಯಾರ್ಥಿ, ಬದಲಾಗಿ ಓದಿನಲ್ಲಿ ತುಂಬಾ ಚುರುಕಾಗಿದ್ದವನು. ಅವಕಾಶಕ್ಕಾಗಿಯೆ ಕಾಯುತ್ತಿದ್ದವನ ಹಾಗೆ ತಟ್ಟನೆ ನಿಂತವನು ಪಟ್ಟನೆ ಸರಿಯಾದ ಉತ್ತರವನ್ನು ಹೇಳಿಯೇ ಬಿಟ್ಟ. ದೇಹವನ್ನು ಹಿಡಿಯಾಗಿಸಿ ಕುಳಿತುಕೊಳ್ಳುವ ಸರತಿ ಈಗ ನನ್ನದಾಗಿತ್ತು. ತರಗತಿಯ ನಂತರ ಕನ್ನಡದಲ್ಲಿಯೇ ಉತ್ತರಕೊಟ್ಟರೂ ಆಗಿತ್ತು ಎಂದುಕೊಂಡೆ. ಶಂಕರನಾಯ್ಕ್ ಚಿತ್ರದುರ್ಗದ ಸಮೀಪದ ಹಳ್ಳಿಯೊಂದರಿಂದ ಬಂದವರು ಎಂದು ಗೆಳೆಯ ಸಣ್ಣಓಬಯ್ಯ ಹಿಂದಿನದಿನ ಹೇಳಿದ್ದು ಉತ್ತರಕೊಡುವ ವೇಳೆ ನೆನಪಾಗಿರಲಿಲ್ಲ.

ಅಂದಿನಿಂದ ತರಗತಿಯ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವ ಧೈರ್ಯ ನನಗೆ ಬರಲಿಲ್ಲ. ಹಿಂದಿನ ಬೆಂಚುಗಳಲ್ಲಿ ನನ್ನಂತೆಯೇ ಗ್ರಾಮೀಣ ಪ್ರದೇಶಗಳಿಂದ ಬಂದ ಮಹಾವೀರ, ಪಾಲಾಕ್ಷ, ತಿಪ್ಪೇಸ್ವಾಮಿ, ರಂಗನಾಥ ಗುಪ್ತ ಮುಂತಾದವರ ಸಾನ್ನಿಧ್ಯದಲ್ಲಿ ನಾನು ಒಂದು ತೆರನಾದ ಸಮಾಧಾನವನ್ನು ಅರಸತೊಡಗಿದೆ.
ಸಮಸ್ಯೆ ಇಷ್ಟಕ್ಕೇ ಮುಗಿಯಲಿಲ್ಲ. ನನಗೆ ಸಮೀಪ ದೃಷ್ಟಿಯಿರುವುದು ಹಿಂದಿನ ಬೆಂಚುಗಳಲ್ಲಿ ಕುಳಿತಾಗಲೇ ನನ್ನ ಗಮನಕ್ಕೆ ಬಂದಿದ್ದು. ಅಧ್ಯಾಪಕರು ಕಪ್ಪುಹಲಗೆಯ ಮೇಲೆ ಬರೆದಿದ್ದು ಸರಿಯಾಗಿ ಕಾಣಿಸುತ್ತಿರಲಿಲ್ಲವಾಗಿ ವಾರವೊಂದರಲ್ಲಿ ಆರ್ಟ್ಸ್ ಕಾಲೇಜ್ ವೃತ್ತದಲ್ಲಿದ್ದ ಶಿವಶಕ್ತಿ ಆಪ್ಟಿಕಲ್ಸ್ ನಿಂದ ತಂದ ಕನ್ನಡಕ ನನ್ನ ಮುಖದ ಶೋಭೆಯನ್ನು ಹೆಚ್ಚಿಸಿತು. ಮುಂದೆ ನನ್ನ ಮುಖದ ಭಾಗವೇ ಆಗಿಹೋಯ್ತು.
ಈ ಹೊತ್ತಿನಲ್ಲಿ ಹೈಸ್ಕೂಲ್ ಟೀಚರ್ ಆಗಿದ್ದ ನನ್ನ ತಂದೆಯವರು ಕಷ್ಟಪಟ್ಟು ಕಲಿಸುತ್ತಿದ್ದ ಇಂಗ್ಲೀಷ್ ವ್ಯಾಕರಣ ಕೆಲಸಕ್ಕೆ ಬಂತು ಅನ್ನಿಸುತ್ತದೆ. ಹೇಗಾದರೂ ಮಾಡಿ ಇಂಗ್ಲೀಷ್ ಭಾಷೆಯನ್ನು ತರಗತಿಯಲ್ಲಿ ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಏರಬೇಕೆಂದುಕೊಂಡವನು ಮುಂದಿನ ಮೂರ್ನಾಲ್ಕು ತಿಂಗಳುಗಳ ಸತತ ಪ್ರಯತ್ನದಿಂದಾಗಿ ಅರ್ಧವಾರ್ಷಿಕ ಪರೀಕ್ಷೆಯ ನಂತರದಲ್ಲಿ ಮೊದಲನೇ ಡೆಸ್ಕ್ ನಲ್ಲಿ ಮತ್ತೆ ವಿರಾಜಮಾನನಾಗುವ ಆತ್ಮಸ್ಥೈರ್ಯವನ್ನು ತುಂಬಿಕೊಂಡೆ. ಅಲ್ಲಿಂದ ಮುಂದೆ ಆಂಗ್ಲಭಾಷೆಯ ಭೂತ ನನ್ನ ತಲೆಯಿಂದ ಸಂಪೂರ್ಣ ಹೊರಟುಹೋಯಿತು ಎಂದೇ ಹೇಳಬೇಕು.
ಎಂಬತ್ತರ ದಶಕದ ಪ್ರಾರಂಭದ ಆ ದಿನಗಳನ್ನು ನೆನಸಿಕೊಂಡರೆ ಈಗಲೂ ನಾನು ಬೆವರುವುದಿದೆ. ವಿಷಯಜ್ಞಾನವಿದ್ದೂ ಭಾಷಾಜ್ಞಾನವಿಲ್ಲದ ಕಾರಣಕ್ಕಾಗಿ ವಿಲವಿಲ ಒದ್ದಾಡಿದ ನನ್ನ ಪರಿಸ್ಥಿತಿ ಆ ಹೊತ್ತಿನ ಎಲ್ಲಾ ಗ್ರಾಮೀಣ ವಿಧ್ಯಾರ್ಥಿಗಳದ್ದೂ ಆಗಿರಬಹುದು ಎಂದುಕೊಳ್ಳುತ್ತೇನೆ. ಪರಿಸ್ಥಿತಿ ಈಗ ಬದಲಾಗಿದೆಯೋ ಏನೋ ತಿಳಿಯೆ. ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಆಂಗ್ಲಭಾಷಾ ಮಾಧ್ಯಮಗಳಿರಬಹುದು, ಪಿಯುಸಿಯಲ್ಲಿ ಯಾವುದೇ ಭಾಷಾಜನಿತ ಬಾಧಕಗಳ ಹೊರತಾಗಿ ನನ್ನ ಹಳ್ಳಿಗಾಡಿನ ವಿದ್ಯಾರ್ಥಿಮಿತ್ರರು ಪಟ್ಟಣದಲ್ಲಿ ಕಲಿತ ಸಹಪಾಠಿಗಳ ಹೆಗಲುಗಳಿಗೆ ಹೆಗಲಾಗಿ ನಿಂತು ಅಭ್ಯಸಿಸುತ್ತಿದ್ದಾರೆ ಎಂದು ಭಾವಿಸುತ್ತಿದ್ದೇನೆ.


ಲೇಖನವನ್ನು ಮುಗಿಸುವ ಈ ಕ್ಷಣ ಪ್ರತಿಭಾವಂತರಾಗಿದ್ದೂ ಪಿಯುಸಿಯಲ್ಲಿ ಅನುತ್ತೀರ್ಣರಾದ ನನ್ನ ಊರಿನ ನನಗೆ ತಿಳಿದ ವಿದ್ಯಾರ್ಥಿವೃಂದವೇ ಕಣ್ಮುಂದೆ ಬರುತ್ತಿದೆ. ಹನುಮಂತ, ಗೋವಿಂದ, ಚಂದ್ರಮೌಳಿ, ಶಿವಕುಮಾರ್, ಬಸವಲಿಂಗ, ಸತ್ಯಾನಂದ, ವಸಂತಕುಮಾರ್ ಮತ್ತು ಈ ಹೊತ್ತು ಹೆಸರು ಜ್ಞಾಪಕಕ್ಕೆ ಬರಲಾಗದ ಮತ್ತೆ ಹಲವರ ಸಾಲೇಸಾಲಿನ ಮೆರವಣಿಗೆ ನನ್ನ ಮಸ್ತಕದಲ್ಲಿ ಮೂಡುತ್ತಿದೆ. ಆ ಹೊತ್ತು ಹಳ್ಳಿಗಾಡುಗಳಲ್ಲಿ ಆಂಗ್ಲಭಾಷಾ ಮಾಧ್ಯಮದ ತರಗತಿಗಳ ಸೌಲಭ್ಯ ದೊರೆತಿದ್ದರೆ ನಾನು ಮೇಲೆ ಉಲ್ಲೇಖಿಸಿದ ಮಿತ್ರರಲ್ಲಿ ಬಹಳಷ್ಟು ಜನ ಇಂದು ಡಾಕ್ಟರ್ ಗಳೊ, ಇಂಜಿನಿಯರ್ ಗಳೋ ಅಥವಾ ಸಾರ್ವಜನಿಕ ಯಾ ಸರ್ಕಾರದ ಯಾವುದಾದರೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ಇಂಗ್ಲೀಷ್ ಇವರೆಲ್ಲರ ಕನಸುಗಳನ್ನು ಯೌವನ ಮೂಡುವ ಮೊದಲೇ ಚಿಗುಟಿದೆ. ಪ್ರತಿಭಾವಂತರಾಗಿಯೂ ಭಾಷೆಯ ಸಮರ್ಪಕಜ್ಞಾನವಿಲ್ಲದ ಕಾರಣಕ್ಕೆ ಸಾಧಿಸಬೇಕಾದ ಎತ್ತರವನ್ನು ಇವರು ಮುಟ್ಟಲಾಗದ ಬಗ್ಗೆ ನನಗೆ ಖೇದವಿದೆ.
ಭಾಷೆಯೊಂದು ಜನರ ಜೀವನದಲ್ಲಿ ಈ ತೆರನಾದ ಆಟವನ್ನೂ ಆಡಬಹುದೇ? ಆಂಗ್ಲರಿಗೆ ನನ್ನ ಊರಿನ ಜನತೆ ಏನು ಮಾಡಬಾರದ್ದನ್ನು ಮಾಡಿದ್ದರು? ಊರಿನ ಕೆಲ ಹಿರಿಯರು ಮಾಡಿದ ಈಚಲ ಸತ್ಯಾಗ್ರಹಕ್ಕೆ ಪ್ರತಿಯೋ ಎನ್ನುವಂತೆ ಆಂಗ್ಲಭಾಷೆ ಊರಿನ ಮುಗ್ದಮಕ್ಕಳ ಮೇಲೆ ತೀರಿಸಿಕೊಂಡ ಸಿಟ್ಟು ಸ್ವಲ್ಪ ಅತಿಯಾದಂತೆ ತೋರುತ್ತಿದೆ ಅಲ್ಲವೇ?

Girl in a jacket
error: Content is protected !!