ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ

Share

ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ

ಪ್ರಭುನಿಷ್ಟ ಚರಿತ್ರೆ ಬರೆದವರು ಯಾರು? ಯಾಕೆ ಈ ಚರಿತ್ರೆಯೂ ಉತ್ಪಾದನಾ ಅಂಶವನ್ನ ಒಳಗೊಂಡರೂ ಉತ್ಪಾದನೆಯ ಹಂಚಿಕೆ ಮತ್ತು ಉತ್ಪಾದನೆಗಾಗಿ ನಿಗಧಿಯಾದ ಕೂಲಿಯ ವಿವರಗಳಲ್ಲಿ ಗಂಡು ಹೆಣ್ಣೆಂಬ ಲಿಂಗ ತಾರತಮ್ಯ ಮಾಡಲಾಯಿತು?
ನಾವು ಚರಿತ್ರೆಯನ್ನ ಭೂಮಿ ಸಂಬಂಧದ ಉತ್ಪನ್ನಗಳ ನೆಲೆಗಳಿಂದ ನೋಡಿದರೂ ಭೂಮಿಯ ಮೂಲವಾಗಿಯೇ ಗ್ರಹಿಸುವ ಮಹಿಳೆಗೆ ಭೂಮಿಯ ಹಕ್ಕು ಆಗ ಯಾಕಿರಲಿಲ್ಲ ಎಂಬುದೇ ಗಮನಾರ್ಹ.
ಪಾಲನೆ ಮತ್ತು ಪೋಷಣೆಯ ಸಮಯದಲ್ಲಿ ಅರೆ ಉದ್ಯೋಗಿಯಾಗಿರಬೇಕಾದ ಮಹಿಳೆ ಕೂಲಿ ವಿಚಾರದಲ್ಲೂ ತಾರತಮ್ಯ ಅನುಭವಿಸುತ್ತಿದ್ದಾಳೆ.ಬುಡಕಟ್ಟು ಕಾಲದ ಆಕೆಯ ಪ್ರಾಧನ್ಯತೆಯು ಕಾಲಾಂತರದಲ್ಲಿ ಕಳೆದು ಹೋಗಿ ಪುರುಷಾಧಿಕಾರದ ಅಡಿಯಲ್ಲಿ ಆಕೆ ಆಧೀನಳಾದಳು.
ರಾಜಕೀಯ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಕೆಳ ಮತ್ತು ಕೀಳು ನೆಲೆಗಳನ್ನ ಪಡೆವ ಮಹಿಳಾ ನೆಲೆಗಳೂ ಮೌಲ್ಯಗಳ ಹೆಸರಿನಲ್ಲಿ ಧರ್ಮದ ಪರದೆ ಹೊತ್ತು ನಿಂತಿವೆ.ಲಿಂಗರಾಜಕಾರಣದಂತೆಯೇ ಶಿಕ್ಷಣ ರಾಜಕಾರಣವೂ ತಾರತಮ್ಯದ ಪರಂಪರೆಯನ್ನ ಹೊತ್ತು ಬಂದಿದೆ.ಲಿಂಗರಾಜಕಾರಣದಲ್ಲಿ ತಾರತಮ್ಯಕ್ಕೆ ಒಳಗಾದ ಹೆಣ್ಣು ಶೋಷಣೆಯನ್ನ ಮೌಲ್ಯದ ಹೆಸರಲ್ಲಿ ಒಪ್ಪಿಕೊಂಡಿದ್ದಾಳೆ.ಶಿಕ್ಷಣ ವಂಚಿತಳಾದ ಈಕೆಗೆ ತನ್ನನ್ನ ಕ್ಷಮಯಾಧರಿತ್ರಿ ಎನ್ನುತ್ತಲೇ ತನಗೆ ಎಂದೂ ಭೂಮಿ ಹಕ್ಕು ನೀಡದ ಆಸ್ತಿ ಹಕ್ಕು ನೀಡದ ಆ ಪರಂಪರೆಯನ್ನ ಯಾಕೆ ಪ್ರಶ್ನಿಸಿಲ್ಲ ಎನ್ನುತ್ತದೆ ಆಧುನಿಕ ಸ್ತ್ರೀ ಪರವಾದ ಹೊಸ ನೋಟ.
ಪತಿವ್ರತೆ,ಸಾದ್ವಿ,ತಾಯಿ,ದೇವಿ ಎಂದೆಲ್ಲಾ ಹೊಗಳುತ್ತಾ ರಕ್ಕಸಿ,ಮೋಹಿನಿ,ಮಾಯಕಾರ್ತಿ,ಹೆಮ್ಮಾರಿ ಎಂದು ತೆಗಳುತ್ತಾ ಹೊರಟ ಎರಡು ಏಕ ರೂಪಗಳ ನಡುವೆಯೂ ಹೆಣ್ಣಿನ ಬಹುರೂಪಿ ಅಸ್ತಿತ್ವ ಅಂದಿಗೂ ಇತ್ತು.ಅಂತಹ ಅಸ್ತಿತ್ವ ಕಂಡ ಮತ್ತು ಕಾಣಿಸುವ ಧ್ವನಿಗಳೂ ಚರಿತ್ರೆಯಲ್ಲಿ ಆಂಶಿಕವಾಗಿಯೇ ಕಾಣುತ್ತವೆ.ಅಕ್ಕ,ಮೀರಾರಂತಹ ಆಯ್ದಕ್ಕಿ ಲಕ್ಕವ್ವರಂತಹ ಧ್ವನಿಗಳನ್ನ ಈ ನೆಲೆಯಲ್ಲಿ ಗುರ್ತಿಸಬಹುದು.

ಯಾವ ಒಪ್ಪಿತ ಪಾತ್ರಗಳು ಶ್ರೇಷ್ಟ ಎನಿಸಿಕೊಂಡಿದ್ದವೋ ಆ ಪಾತ್ರಗಳು ಹೊಸ ಲಿಂಗರಾಜಕಾರಣದ ಪ್ರಶ್ನೆ ಎತ್ತುತ್ತವೆ.ಪುರುಷ ನಿರ್ಮಿತ ಮೌಲ್ಯಗಳನ್ನ ಪುನರ್ ಮೌಲ್ಯಮಾಪನಕ್ಕೆ ಮಹಿಳಾ ಪರರು ಒಳಗುಮಾಡುತ್ತಿದ್ದಾರೆ.ಪುರುಷ ಪ್ರಧಾನ ಚರಿತ್ರೆ ಮಹಿಳಾ ಧ್ವನಿಗಳನ್ನ ಅಲಕ್ಷವಾಗಿ ಕಂಡದ್ದನ್ನ ಒರೆ ಹಚ್ಚಿ ತೋರುತ್ತಿದ್ದಾರೆ.ಚರಿತ್ರೆಯು ಹೆಣ್ಣನ್ನ ಪದಾರ್ಥಗೊಳಿಸಿದ್ದನ್ನ ಆದರ್ಶದ ಹೆಸರಲ್ಲಿ ನಡೆದ ಸತಿ,ಬಲಿ,ಜೋಹರ,ದಾಸಿಯಂತಹ ಪದ್ದತಿಗಳನ್ನ ಮಹಿಳಾ ಪರ ನೋಟಗಳು ಜೀವದ ನೆಲೆಗಳಲ್ಲಿ ಶೋಧಿಸುತ್ತಿವೆ.
ಚಂದ್ರಮತಿ,ಸೀತೆ,ಶಾಕುಂತಲೆ,ರೇಣುಕೆಯಂತಹ ಹಲವು ಧ್ವನಿಗಳಂತೆ ಅಲಕ್ಷ ಮಹಿಳಾ ಚರಿತ್ರೆ ಕಾಣುತ್ತಿದೆ.ಅರಮನೆಯೊಳಗೆ ಇದ್ದ ರಾಮನಿಗೆ ಚಂಚಲತೆಯ ಅವಕಾಶವಿದ್ದರೂ ಬಂಧನದಲ್ಲಿದ್ದ ಸೀತೆಯೇ ಅಗ್ನಿ ಹಾಯಬೇಕಾದ ಸ್ಥಿತಿಯನ್ನೇ ಮಹಿಳಾವಾದಿಗಳು ಸೆಕ್ಷುವಲ್ ಪಾಲಿಟಿಕ್ಸ ಎನ್ನುವುದು.
ಶಾಕುಂತಲೆಯ ರೂಪ ಮತ್ತು ನಡತೆಯನ್ನ ಮೆಚ್ಚಿದ್ದ ದುಷ್ಯಂತ ?ಉಂಗುರ? ಎಂಬ ಪದಾರ್ಥದ ಮೇಲೆ ತೋರಿದ ನಿಷ್ಟೆಯನ್ನ ಯಾಕೆ ಶಾಕುಂತಲೆಯೆಂಬ ಜೀವದ ಮೇಲೆ ಇಡಲಿಲ್ಲ.? ಕೊನೆಗೆ ಕಾಳಿದಾಸನ ಶಾಕುಂತಲೆಯೂ ಮತ್ತೊಮ್ಮೆ ತೊಡಿಸಲು ಬಂದ ಉಂಗುರವನ್ನ ತಿರಸ್ಕರಿಸಿ ” ಆರ್ಯ ಅದು ತಮ್ಮ ಬಳಿಯೇ ಇರಲಿ” ಎನ್ನುವ ಧ್ವನಿಪೂರ್ಣ ಮಾತು ಗಮನಾರ್ಹ.ಇಲ್ಲಿ ದುಷ್ಯಂತ ಮತ್ತು ಶಾಕುಂತಲೆಯರ ಒಲವಿನಷ್ಟೇ ಬೆಸ್ತನ ?ರಾಜನಿಷ್ಟೆಯೂ? ಅಪರೂಪವಾದದ್ದು ಒಂದು ವೇಳೆ ಆ ರಾಜನಿಷ್ಟೆಯೇ ಚಂಚಲವಾಗಿದ್ದರೆ!? ಶಾಕುಂತಲೆಯ ಬದುಕೇ ಮೂರಾಬಟ್ಟೆಯಾಗಿಬಿಡುತಿತ್ತಲ್ಲವೇ?


ಅಚಲವಾದ ಮನೋನಿಷ್ಟೆ ಎಲ್ಲರಲ್ಲಿಯೂ ಏಕರೂಪವಾಗಿರದು.ಸಂತ ಸನ್ಯಾಸಿಗಳನ್ನೂ ಅದು ಅಲ್ಲಾಡಿಸಿ ಜಾರಿಸಿಬಿಡಬಲ್ಲದು.ಮೇನಕೆಯನ್ನ ಕಂಡ ವಿಶ್ವಾಮಿತ್ರ,ವಯಸ್ಸಾದರೂ ಸತ್ಯವತಿಯ ಕಂಡೊಡನೆ ಜಾರುವ ಪರಾಶರ ಪುರುಷ ಮೌಲ್ಯದ ಜಗತ್ತಿನಲ್ಲಿ ಯಾವ ಅಪರಾಧಿಯೂ ಅನಿಸರು.ಆದರೆ ಅಪ್ಸರ ಪ್ರೇಮಿಗಳ ಜಲಕ್ರೀಡೆ ನೋಡಿ ಚಂಚಲಗೊಂಡ ರೇಣುಕೆ ಅಪರಾಧಿಯಾಗಿ ಶಿರಶ್ಛೇದನ ಗೊಳಗಾಗಬೇಕಾಗುತ್ತದೆ.ಚಂಚಲ ನಡೆಗೆ ಶಿಕ್ಷೆ ಪಡೆಯದ ವಡ್ಡಾರಾಧನೆಯ ಪುರುಷರ ನಡುವೆಯೇ ಶಿಕ್ಷೆಗೆ ಒಳಗಾಗುವ ಮಹಿಳೆಯರ ಚಿತ್ರಣಗಳಿವೆ.
ರಸಿಕನೆಂಬ ಉದಾರತೆಯಲ್ಲಿ ನಡೆದ ಪುರುಷಲೋಕದ ಎದರು ?ಸತಿ? ಮತ್ತು ?ಸಾದ್ವಿ?ಯಾಗಿಯೇ ಹೆಣ್ಣು ಬಂಧಿಸಲ್ಪಟ್ಟಿದ್ದಾಳೆ.ಈ ಚರಿತ್ರೆಯೊಳಗೆ ಸತಿಯಾಗುವವರು,ಬಲಿಯಾಗುವವರು ಕಿರಿಯ ಸೊಸೆಯರು ಎನ್ನೂವುದು ಇನ್ನೂ ಕಡು ಜೀವವಿರೋಧಿತನವಲ್ಲವೇ?
ಹೆಣ್ಣ ಯಾಚನೆಯನ್ನ ನಿಸರ್ಗವಿರೋಧಿಯಾದುದು ಎನ್ನುತ್ತ ರಾಜನಾಗಿದ್ದೂ ಹೊಲತಿಯರನ್ನ ಬೆನ್ನಟ್ಟಿ ಹಾದಿ ಬೀದಿಯಲ್ಲಿ ಹೊಡೆವ ರಾಘವಾಂಕನ ಹರಿಶ್ಚಂದ್ರ ಜನಪದರ ಮಾತಿನಂತೆ ” ಹೆಣ್ಣು ಮಕ್ಕಳ ಮೇಲೆ ಕೈ ಮಾಡುವವ ಯಾವ ಸೀಮೆಯ ಶೂರ” ಎನಿಸದಿರನು.
ಇಂತಹ ನಡೆಗಳನ್ನೇ ಆಧುನಿಕ ಮಹಿಳಾ ಪರ ನೋಟಗಳು ಪುನರ್ ಪರಿಶೀಲಿಸಬೇಕೆನ್ನುತ್ತವೆ.ಹೊಸ ನೋಟ ಮತ್ತು ಹೊಸ ವಿಚಾರಗಳಿಂದ ಅವನ್ನ ಪುನರ್ ರೂಪಿಸಬೇಕೆನ್ನುತ್ತವೆ. ಹಲವು ಅರ್ಥಗಳಿಂದ ಕಾಣುವ ಮತ್ತು ಹೊಸಬಗೆಯ ರೂಪದಲ್ಲಿ ಸ್ಫೋಟಗೊಳ್ಳುವ ಪಾತ್ರವೇ ಸುಕನ್ಯ ಮಾರುತಿ ಅವರ ಅಹಲ್ಯೆ.
ಮೂಲ ಅಹಲ್ಯೆಯು ಗೌತಮನನ್ನ ವರಿಸಿ ಸಿದ್ಧಾಶ್ರಮದಲ್ಲಿ ಇದ್ದಾಕೆ.ಊರ್ಮಿಳೆಯ ಚಲುವಿನ ಅಹಂಕಾರವನ್ನು ಇಳಿಸಲೆಂದೇ ಬ್ರಹ್ಮದೇವ ಈಕೆಯನ್ನ ಸೃಷ್ಟಿದ.ಈ ಅಹಲ್ಯೆ ಎಂಬ ಅಪೂರ್ವ ಸೌಂದರ್ಯ ರಾಶಿಯನ್ನ ನೋಡಿಕೊಳ್ಳಲು ಗೌತಮನಿಗೆ ನೀಡಿದ.ಆಕೆಯನ್ನ ನಿಷ್ಟೆಯಿಂದ ನೋಡಿಕೊಂಡು ದೊಡ್ಡವಳಾದಮೇಲೆ ವಾಪಾಸು ಒಪ್ಪಿಸಲು ಬಂದ ಗೌತಮನ ಅಚಲ ನಿಷ್ಟೆ ಕಂಡ ಬ್ರಹ್ಮದೇವ ಆಕೆಯನ್ನ ಆ ಒಳ್ಳೆಯ ತನಕ್ಕಾಗಿಯೇ ಆತನಿಗೇ ಒರಿಸಿ ಬೀಳ್ಕೊಟ್ಟ.ವಿರಾಗಿಯಾದ ಆತನನ್ನ ವರಿಸಿ ಅನುಸರಿಸುವ ಸಾದ್ವಿ ಅಹಲ್ಯೆಯ ಸೌಂದರ್ಯ ಕಂಡ ದೇವೇಂದ್ರ ಭೂಮಿ ಮೇಲಿನ ಸೌಂದರ್ಯ ರಾಜನ ಸೊತ್ತು ಎಂದೇ ಭಾವಿಸಿ ಆಕೆಯ ಬಳಿ ಪ್ರೇಮಾಯಾಚನೆ ಮಾಡುತ್ತಾನೆ.ಆಕೆಯ ನಿರಾಕರಣೆಯನ್ನ ಕಂಡು ಪೆಟ್ಟು ತಿಂದವನಂತೆ ಬಿಡದೇ ಮತ್ತೆ ಗೌತಮನ ವೇಷಧಾರಿಯಾಗಿ ಬಂದು ಆತನಿಲ್ಲದ ವೇಳೆಯಲ್ಲಿ ಕೂಡುತ್ತಾನೆ.ಪರಿಣಾಮ ಗೌತಮನ ಶಾಪಕ್ಕೂ ಗುರಿಯಾಗುತ್ತಾನೆ.


ಶಿಲೆಯಾದ ಅಹಲ್ಯೆಯನ್ನ ಕವಿ ಪು.ತಿ.ನ ಅವರು ತಮ್ಮ ನಾಟಕದಲ್ಲಿ ಶ್ರೀರಾಮನನ್ನ ಪುರುಷೋತ್ತಮನನ್ನಾಗಿ ಶ್ರೇಷ್ಟನನ್ನಾಗಿ ತೋರಲೆಂದೇ ಚಿತ್ರಿಸುತ್ತಾರೆ.ಅಹಲ್ಯೆ ವಿನೀತಳಾಗಿ ಬಾಗುವ ಪುನೀತಳಾಗಿ ಏಳುವ ಶಾಪ ವಿಮೋಚನೆಯನ್ನ ಅವರು ಪ್ರಧಾನವಾಗಿಸಿದ್ದಾರೆ.
ಕುವೆಂಪು ತಮ್ಮ ಶ್ರೀ ರಾಮಾಯಣ ದರ್ಶನಂ ನ ಬಾಲಕಾಂಡದೊಳಗೆ ಇದೇ ಕಥೆಯನ್ನ ಇಟ್ಟುಕೊಂಡು ನಗರ ಸಂಸ್ಕೃತಿಗಿಂತಲೂ ವನ್ಯ ಸಂಸ್ಕೃತಿ ಶ್ರೇಷ್ಟವೆನ್ನಲು ಅಹಲ್ಯೆಯನ್ನೇ ಉನ್ನತೀಕರಿಸುತ್ತಾರೆ.ಇಲ್ಲಿ ಶ್ರೀ ರಾಮನೇ ಅಹಲ್ಯೆ ಕಂಡು ವಿನೀತನಾಗಿ ಬಾಗುತ್ತಾನೆ.ಅವಳನ್ನ ಕಂಡು ಹೆತ್ತ ತಾಯಿಯನ್ನ ಮತ್ತೊಮ್ಮೆ ಪಡೆದವನಂತೆ,ಹೆಸರಿಡಿದು,ಕರವಿಡಿದು ಗೋಳಿಡುತ, ತಾಯಿ ಕೌಶಲ್ಯೆ ಕರೆವಂತೆ ಭಾವಿಸುತ್ತಾನೆ.ರಾಮನ ಈ ಧೀರ ನೋಟಕ್ಕೆ ( ಹೆಣ್ಣ ಸೌಂದರ್ಯವನ್ನ ಸಂಪತ್ತು ಎಂದು ನೋಡುವ ಪ್ರಭು ನಿಷ್ಟೆಗೆ ವಿರುದ್ಧವಾದ ತಾಯಿ ಕಾಣುವ ಕಣ್ಣಿಗೆ ) ಮೆಚ್ಚಿದ ಗೌತಮ ರಾಮನಿಗೆ ಶರಣಾಗುತ್ತಾನೆ.ತನಗೆ ಮಣಿದ ಸಹಧರ್ಮಿಣಿಯ ಹಿಡಿದೆತ್ತಿ ಕಣ್ಣೀರು ಒರೆಸಿ ತಾನೂ ಕಣ್ಣೀರು ಗರೆಯುತ್ತಾ ಮತ್ತೆ ಕುಟುಂಬದ ಬದುಕಿಗೆ ಮರಳುತ್ತಾನೆ.
ಕುಟುಂಬದ ಬದುಕಿಗೆ ಮರಳುವ ಈ ಘಟನೆಯನ್ನೇ ಮುಖ್ಯವಾಗಿಸಿಕೊಂಡ ಎಚ್.ಎಸ್.ವೆಂಕಟೇಶ್ ಮೂರ್ತಿಯವರು ?ಶುಕ್ಲಪಕ್ಷ? ಕವಿತೆ ಬರೆಯುತ್ತಾರೆ.ಇಬ್ಬರ ನಡುವೆ ಒಮ್ಮೆ ಇಣುಕಿದ ಸಂಶಯದ ಗಾಯ ಹೋದರೂ ಕಲೆ ಹೋದೀತೆ? ಎನ್ನುವ ನೆಲೆಯಲ್ಲಿ ಸಂಶಯವು ತಂದೊಡ್ಡ ಬಹುದಾದ ನೋವನ್ನ ಘನೀಭವಿಸುವಂತೆ ಚಿತ್ರಿಸಿದ್ದಾರೆ. ಹುಣ್ಣಿಮೆಯ ದಿನ ಗೌತಮನ ಆಗಮನಕ್ಕಾಗಿ ನಿರೀಕ್ಷಿಸುತ್ತಾ ಕುಳಿತ ಶಾಪವಿಮೋಚಿತ ಅಹಲ್ಯೆ ನಲ್ಲನ ರೂಪವನ್ನ ಹೂವ ದಳ ದಳಗಳಲ್ಲೂ ಬಹುರೂಪಿಯಾಗಿಯೇ ಕಾಣುತ್ತಾಳೆ. ಆತನ ಜೊತೆಯ ಆ ಬಹುರೂಪಗಳು ಪ್ರೀತಿ ಮೂಡಿಸುತ್ತಲೇ ಉಯ್ಯಾಲೆಯೊಳಗೆ ಕುಳಿತ ಆಕೆ ಜೀಕಿದಾಗ ಹುಣ್ಣಿಮೆಯ ತುಂಬು ಚಂದ್ರನ ಕಾಣುತ್ತಾಳೆ.ಅಲ್ಲಿ ರಾಮನ ಅಂದದ ಮುಖ ಕಂಡು ಕಿರು ನಗುತ್ತಾಳೆ. ಆ ನಗು ಮೂಡುವಾಗಲೇ ಬಂದ ಗೌತಮ ಸಹಜವಾಗಿಯೇ ನಗುವಿನ ಕಾರಣ ಕೇಳಲು ಗಂಟಲೊಳಗೆ ಶ್ರೀ ರಾಮನ ಹೆಸರು ನುಗ್ಗಿತು. ಆದರೆ “ಯಾಕೋ ಏನೋ ಅದು ಹೊರ ಬರದೇ ಗಂಟಲಲ್ಲೇ ನಿಂತಿತು.” ಎಂಬ ಸಾಲಿನ ಮೂಲಕವೇ ಎಲ್ಲಿ ಪರಪುರುಶ ರಾಮನ ಹೆಸರು ಹೇಳಿದರೆ ಮತ್ತೇನು ಘಟಿಸುವುದೋ ಎಂಬ ಸೂಕ್ಷ್ಮ ತಲ್ಲಣವನ್ನ ಈ ಕವಿತೆ ಕಟ್ಟಿಕೊಟ್ಟಿದೆ.

 


ರಾಮ ಮೊದಲ ರೂಪಗಳಲ್ಲಿ ಸಂಭ್ರಮದ ಹೊಳಹು ನೀಡಿದರೆ ಇಲ್ಲಿ ರಾಮ ತಲ್ಲಣದ ರೂಪವಾಗಿದ್ದಾನೆ.
ಪುತಿನ.ಕುವೆಂಪು ಅವರ ನೋಟವನ್ನ ಬಿಟ್ಟು ವೆಂಕಟೇಶ್ ಮೂರ್ತಿಯವರ ಹಿಂಡುವ ಅಹಲ್ಯೆಯ ಲೋಕ ಬದುಕನ್ನ ಬೆನ್ನಟ್ಟಿದಂತೆ ಕಾಣುವ ಸುಕನ್ಯ ಮಾರುತಿಯವರ ಅಹಲ್ಯೆ ವಿರಾಗಿಯೊಬ್ಬನ ಜೊತೆಗಿನ ಅನುರಾಗಿ ಹೆಣ್ಣೊಬ್ಬಳ ತುಮುಲಗಳನ್ನೇ ತಮ್ಮ ಕವಿತೆಯ ಕೇಂದ್ರವಾಗಿಸಿಕೊಂಡಿದ್ದಾರೆ.ಅನುರಾಗಕ್ಕೆ ತಿರುಗದ ವ್ಯಕ್ತಿಯೊಬ್ಬನ ಸಾಮಿಪ್ಯ ಇದ್ದೂ ಸತ್ತಂತೆ ಎಂದು ಭಾವಿಸುವ ಅಹಲ್ಯೆ ಇಲ್ಲಿ ಶಿಲೆಯಾಗುವುದೇ ಲೇಸೆನ್ನುತ್ತಾಳೆ.ಅವಳನ್ನ ಕೊಲ್ಲುವ ಬೃಂದಾವನದ ಮೋಹದ ಮಧುರತೆ,ಮನೋಹರತೆಗಳು ಅವಳ ಹೊಂದಾಣಿಕೆಯ ಕತ್ತು ಹಿಸುಕುವಂತಿವೆ.ಲೋಕಕ್ಕೆ ಬದ್ಧಳಾದ ಹೆಣ್ಣಾದ ಈ ಅಹಲ್ಯೆ ಧರ್ಮದ ಯಜಮಾನಿಕೆಯ ಅಧೀನತೆಯನ್ನ ಒಲ್ಲಳು.ವ್ರತದ ಆ ಬದುಕನ್ನ ಆಕೆ ಒಪ್ಪಲಾರಳು.ಸಂಗ ತಿರಸ್ಕರಿಸುವವನ ಜೊತೆಯಲ್ಲಿ ಸಂಗಮದ ಕನಸು ಕಾಣುವ ಆಕೆ ಸಮಾಜ ನಿಷ್ಟೆಯಾಗದೇ ಸಂದರ್ಭ ನಿಷ್ಟೆಯಾಗುತ್ತಾಳೆ.ಬೇಕೆಂದೇ ಇಂದ್ರನ ಸಂಗಮಕ್ಕೆ ತನ್ನನ್ನ ಒಡ್ಡಿಕೊಳ್ಳುತ್ತಾಳೆ.ವಿಲೋಮ ಸಂಗ ಪಾಪವೆಂದೂ ಶಿಕ್ಷೆಗೆ ಕಾರಣವಾಗುತ್ತದೆ.ಅದಕ್ಕೆ ಪರಿಹಾರವಾಗಿ ಮತ್ತೆ ಉದಾತ್ತ ವ್ರತ ತೊಟ್ಟ ರಾಮನ ಸ್ಪರ್ಶ ಆಕೆಯನ್ನ ಮಾನವಳನ್ನಾಗಿಸುತ್ತದೆ.

 

ಆದರೆ ಅಹಲ್ಯೆ ಈ ಪರಿವರ್ತನೆಯನ್ನೇ ಬಯಸಳು. ಕುಟುಂಬಿಗಳ ನೋವು ಬಾಲಕರಿಗೇನು ಗೊತ್ತು ಎನ್ನುವಂತೆ ” ಪಾಪ ಹುಡುಗ ರಾಮ ” ಎಂದು ರಾಮನ ಉದಾತ್ತ ತನವನ್ನ ತಳ್ಳುತ್ತಾಳೆ. ಆಕೆಗೆ ಬೇಕಿರುವುದು ಗೌತಮನ ಇಚ್ಚೆಯಂತೆ ಶಿಲೆ ಅಹಲ್ಯೆಯಾಗುವುದಲ್ಲ. ವಿರಾಗ ಹೊತ್ತವನ ಎದರು ಯಾಕಾದರೂ ಹೆಣ್ಣಾಗಬೇಕು ಎನ್ನುವುದು.ಲೋಕ ನಡೆಯ ಆಕೆಗೆ ” ನನ್ನೊಳಗೆ ಏನನ್ನೂ ಬಿತ್ತಲಾರದ” ಅವನಿಗಾಗಿ ಆಕೆ ಹೆಣ್ಣಾಗಬೇಕೆಂಬುದೇ ಮೂಲ ಪ್ರಶ್ನೆ.ಲೋಕ ಹೆಣ್ಣನ್ನ ಸಂತಾನ ಮುಖಿಯಾಗಿ ನೋಡುತ್ತದೆ.ಪುತ್ರ ಸಂತಾನವೇ ಆಕೆಗೆ ಮೋಕ್ಷವೆಂದು ಬಂಜೆತನ ಆಕೆಗೆ ಮತ್ತೊಂದು ಶಾಪವೆಂದೂ ಧರ್ಮದ ನಿರೀಕ್ಷೆಯಾಗಿದೆ.ಈ ನೆಲೆಯ ರಾಮಾಯಣದ ಪುತ್ರ ಕಾಮೇಷ್ಟಿಯಾಗವೂ ಗಮನೀಯ.ಶಾಪ ವಿಮೋಚನೆಯ ಪ್ರಸಂಗ ಪುತಿನ,ಕುವೆಂಪು ಅವರ ಬರಹಗಳಲ್ಲಿ ಸಂಭ್ರಮದ ಬದುಕಿಗೆ ದಾರಿಯಾದರೆ ಎಚ್.ಎಸ್.ವೆಂಕಟೇಶ್ ಮೂರ್ತಿಯರಿಗೆ ಸಣ್ಣ ತಲ್ಲಣದ ರೂಪವಾಗಿದೆ.ಸುಕನ್ಯ ಮಾರುತಿಯವರಿಗೆ ಶಾಪವಿಮೋಚನೆ ಎಂಬುದು ಮತ್ತೆ ಕಠಿಣ ಬದುಕಿಗೆ ದಾರಿಯಂತಿದೆ.ಆ ಜೀವನ ಮತ್ತಷ್ಟೂ ನೋವಿನದ್ದೇ ಎನ್ನುವಂತಿದೆ.ಹಿಂದೆ ಯಾವ ಪಾತ್ರ ವಿಕಾಸದ ಉದಾತ್ತತೆಯ ಕಡೆಗೆ ಚಲಿಸಿತ್ತೋ ಅದು ಸ್ಥಗಿತ ರೂಪ ಹೊತ್ತು ಜೀವ ಪ್ರೇರಿತ ಧಾರ್ಮಿಕ ಶೋಷಣೆಯ ಅಧೀನತೆಯನ್ನ ಹೊರಬೇಕಾದ ಹೆಣ್ಣೊಬ್ಬಳ ವಯೋಸಹಜ ಆಕಾಂಕ್ಷೆಗಳ ಸತ್ವ ಭರಿತ ರೂಪಾಂತರದಂತಿದೆ.

 

Girl in a jacket
error: Content is protected !!