ಅಹಂಕಾರ-ದುರಹಂಕಾರಗಳ ನಡುವಿನ ತರ್ಕ

Share
ಬಾಲ ಸಿದ್ಧನೊಮ್ಮೆ ತನ್ನ ಮನೆಯ ಎಮ್ಮೆಯ ಮೇಲೆ ಕುಳಿತನು. ಹುಡುಗರನ್ನು ಕೂಗಿ ಕರೆದು “ನಾನು ಆನೆಯ ಮೇಲೆ ಕುಳಿತಿರುವೆನು. ನೀವೆಲ್ಲಾ ಮೆರವಣಿಗೆ ಮಾಡಿರಿ” ಎಂದನು. ಎಮ್ಮೆ ಹೆಜ್ಜೆಯೇ ಇಡಲಿಲ್ಲ. ಸಿದ್ಧ  ಶಪಿಸಿದ. ಎಮ್ಮೆ ಸತ್ತಿತ್ತು! ಎಮ್ಮೆ ಸಾಕಿದ್ದ ತನ್ನ ತಾಯಿ ದೇವಮಲ್ಲಮ್ಮ ಅಳಲಾರಂಭಿಸಿದಳು. ಸಿದ್ಧ‘ಓಂ ನಮಃ ಶಿವಾಯ’ ಎನ್ನುತಾ ಎಮ್ಮೆ ಮುಟ್ಟಿದ. ಎಮ್ಮೆಬದುಕಿತು! ಈ ಘಟನೆಯನ್ನು ಸಿದ್ಧ ಹೀಗೆ ವಿವರಿಸಿದ:
 ಅಹಂಕಾರವೇ ಎಮ್ಮೆ. ನಾನು ನಾನು ಎನ್ನುವುದೇ ಅಹಂಕಾರ. ಇದು ಎಲ್ಲರಲ್ಲೂ ಇರುತ್ತದೆ. ಹಡುಗರಿರಲಿ,ವೃದ್ಧರಿರಲಿ ,ಜ್ಞಾನಿಗಳಿರಲಿ, ಅಜ್ಞಾನಿಗಳಿರಲಿ,ಪ್ರತಿಯೊಬ್ಬರಲ್ಲೂ ‘ನಾನು’ ಇದ್ದೇ ಇರುತ್ತದೆ. ನಾನಿಲ್ಲದಿದ್ದರೆ ಏನೂ ನಡೆಯಲಾರದು. ಎಲ್ಲವೂ ನನ್ನಿಂದಿಲೇ ನಡೆಯುವುದು.ನಾನಿರುವ ನಾವೆಲ್ಲಾ ಎಮ್ಮೆಯಂತೆ.ಆದರೂ ಎಲ್ಲಾ  ನಾನು ಒಂದಲ್ಲ.ಅಸಂಸ್ಕೃತರ ಅಹಂಕಾರ ನಾನು ಬೇರೆ , ಸುಸಂಸ್ಕೃತರ ಅಹಂಕಾರ ನಾನು ಬೇರೆ. ಅಸಂಸ್ಕೃತರ ಅಹಂಕಾರ  ತಮೋಗುಣದಿಂದ ಕೂಡಿರುತ್ತದೆ. ತರಬೇತಿ ಇಲ್ಲದ ಒಲ್ಲದ ಅಸಂಸ್ಕೃತ ರು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳಿಂದ ತುಂಬಿ ತುಳುಕುತ್ತಾರೆ. ಅಂಥವರು ಹಿರಿಯರ,ಬಲ್ಲವರ, ಸಜ್ಜನರ ಮಾತುಗಳನ್ನು ಕೇಳುವುದಿಲ್ಲ. ಕೇಳಿದರೆ,ತಮ್ಮ ಡಂಭವನ್ನೇ ಬಿಡಬೇಕಾಗುವುದು! ಡಂಭವನ್ನೇ ಪ್ರೀತಿಸುವವರು ಉಳಿದೆಲ್ಲವನ್ನು ಧಿಕ್ಕರಿಸಿ,ಡಂಭವನ್ನು ಬಹಳಷ್ಟು ಕಾಳಜಿವಹಿಸಿ,ಪರಿಶ್ರಮಪಟ್ಟು ಕಾಪಾಡಿಕೊಳ್ಳುವರು.ಅದಕ್ಕಾಗಿ ಅವರು ತಮ್ಮ ನೆರವಿಗಾಗಿ ಡಂಭವಂತರ ಸಂಗಮಾಡುವರು! ಏಕೆಂದರೆ ಹಾಗಲಕಾಯಿಗೆ ಬೇವಿನಕಾಯಿಯೇ ಸಾಕ್ಷಿಯಾಗಬೇಕಲ್ಲ! ಆದ್ದರಿಂದ ಇವರು ತರಬೇತಿಯನ್ನು ಇಷ್ಟಪಡುವುದಿಲ್ಲ.
ಇಂಥ ಅಸಂಸ್ಕೃತ ಅಹಂಕಾರಿಗಳನ್ನು ದುರಹಂಕಾರಿಗಳನ್ನೆಲಾಗಿದೆ.ಇಂಥವರ ವರ್ತನೆಯನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಹೀಗೆ ವಿವರಿಸಿದ್ದಾನೆ:
ದಂಭೋ ದರ್ಪೋಭಿಮಾನಶ್ಚ ಕ್ರೋಧಃ ಪಾರುಷ್ಯಮೇವಚ|
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್||(16-4)
ಹುಟ್ಟಿನಿಂದಲೂ ತೋರಿಬರುವ ದಂಭ,ದರ್ಪ ಅಭಿಮಾನ ಕ್ರೋಧ,ಕಲ್ಲಿನಂಥ ಒರಟುತನ,ಮತ್ತು ಅಜ್ಞಾನ- ಇವು ರಾಕ್ಷಸೀ ಗುಣಗಳಾಗಿವೆ. ಈ  ರಾಕ್ಷಸೀ ಗುಣಗಳು ಏಳಿಗೆಗೆ ಅಡ್ಡಿ. ಯಾವುದೇ ಉತ್ತಮ ಕಾರ್ಯವಾಗದಂತೆ ಕಟ್ಟಿಹಾಕುತ್ತವೆ. ಇವುಗಳಿಂದ ನರಕ- ಜೈಲು ಜೀವನ!
ಪ್ರವತ್ತಿಂ ಚ ನಿವೃತ್ತಿಂಚ ಜನಾ ನ ವಿದುರಾಸುರಾಃ|
ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ|| (16-7)
ಯಾವುದನ್ನು ಮಾಡಬೇಕೋ ಅದನ್ನು ಮಾಡಲೇಬೇಕು.ಯಾವುದನ್ನು ಮಾಡಬಾರದೋ ಅದನ್ನು ಮಾಡಲೇಬಾರದು ಎಂಬುದು ಅವರಿಗೆ ತಿಳಿಯದು. ಸ್ವಚ್ಛತೆ, ಆಚಾರ, ಸತ್ಯ ಅವರಲ್ಲಿ ಕಾಣಿಸದು.
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್|
ಅಪರಸ್ಪರಸಂಭೂತಂ ಕಿಮನ್ಯತ್ಕಾ ಮಹೈತುಕಮ್|| (16-8)
ಅಸತ್ಯವೇ ಅವರ ಬಂಡವಾಳ. ಅವರ ದೃಷ್ಟಿಯಲ್ಲಿ ದೇವರೇ ಇಲ್ಲ. ಸ್ತ್ರೀ ಪುರುಷರ ಪರಸ್ಪರ ಕೂಡುವಿಕೆಯೇ ಹುಟ್ಟಿಗೆ ಕಾರಣ. ಬೇರೆ ಇನ್ನೇನೂ ಇಲ್ಲವೆಂಬುದು ಅವರ ಸಿದ್ಧಾಂತ.
ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಲ್ಪಬುದ್ಧಯಃ|
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಹಿತಾಃ|| (16-9)
ಆತ್ಮಸ್ವರೂಪದ ಅರಿವಿಲ್ಲದ ಕೀಳು ದೃಷ್ಟಿಯ ಈ ಅಲ್ಪಬುದ್ಧಿಯ ಜನರು ಜಗದ ಕಿಡಗೇಡಿಗಳು, ಉಗ್ರಭಯೋತ್ಪಾದಕರು.
ಇದಮದ್ಯ ಮಯಾ ಲಬ್ಧಂ, ಇಮಂ ಪ್ರಾಪ್ಸೇ ಮನೋರಥಂ|
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್|| (16-13)
ಇವತ್ತು ನಾನು ಇಷ್ಟು ಗಳಿಸಿದೆನು.ನಾಳೆ ಅಷ್ಟು ಗಳಿಸುವೆನು. ಅದನ್ನು ಪಡೆಯುವೆನು. ಈಗ ಇಷ್ಟಿದೆ. ಮತ್ತಷ್ಟು ಸಿಗುತ್ತದೆ ಎಂದು ಬಡಾಯಿ ಕೊಚ್ಚುವರು ಈ ದುರಹಂಕಾರಿಗಳು.
ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ|
ಈಶ್ವರೋಹಮಹಂ ಭೋಗೀ ಸಿದ್ಧೋಹಂ ಬಲವಾನ್ ಸುಖೀ|| (16-14)
ಇವತ್ತು ಇವನನ್ನು ಕೊಂದೆನು. ಅವರನ್ನೂ ಬಿಡುವುದಿಲ್ಲ, ಕೊಲ್ಲುತ್ತೇನೆ. ನಾನೇ ರಾಜಾ, ನಾನೇ ದೇವರು.ನಾನೇ ಎಲ್ಲಾ. ನನ್ನಷ್ಟು ಶ್ರೀಮಂತರು, ಬಲಿಷ್ಠರು, ಬಲ್ಲವರು,ಸುಖಿಗಳು ಇನ್ಯಾರೂ ಇಲ್ಲ ಎಂದು ಬೀಗುವರು!
ಆಢ್ಯೋಭಿಜನವಾನಸ್ಮಿ ಕೋನ್ಯೋಸ್ತಿ ಸದೃಶೋ ಮಯಾ|
ಯಕ್ಷೇ ದಾಸ್ಯಾಮಿ ಮೋದಿಷ್ಯೇ ಇತ್ಯಜ್ಞಾನವಿಮೋಹಿತಾಃ|| (16-15)
ನಾನೇ ಹಣವಂತ,ನನ್ನ ಸಮಾನ ಇನ್ಯಾರಿದ್ದಾರೆ? ನಾನು ಯಜ್ಞ,ಪೂಜೆ, ಪುನಸ್ಕಾರ, ವ್ರತ ಮಾಡುವವನು. ಬೇಕಾದವರಿಗೆ ಬೇಕಾದಷ್ಟು ಕೈ ಎತ್ತಿ ಕೊಡುವ ಕೊಡುಗೈದಾನಿ ನಾನು. ಇವರೆಲ್ಲ ನನ್ನಿಂದಲೇ ಸುಖವಾಗಿದ್ದಾರೆ.ನನ್ನನ್ನು ಬಿಟ್ಟರೆ ಈ ಜನರಿಗೆ ಗತಿಯೇ ಇಲ್ಲ ಎಂಬ ಉಬ್ಬು ಕೊಬ್ಬು ಈ ಅಜ್ಞಾನಿಗಳದ್ದು!
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ|
ಮಾಮಾತ್ಮಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ|| (16-18)
ಅಹಂಕಾರ ದೇಹಬಲ ಕಾಮ ಕ್ರೋಧಗಳಲ್ಲಿ ಮುಳುಗಿಹೋದ ಈ ದುರುಳರು ಎಲ್ಲರೊಳಗೂ ಹಾಸುಹೊಕ್ಕಾಗಿರುವ ಪರಮಾತ್ಮನನ್ನು ಸದಾ ಟೀಕಿಸುವರು. ಅಹಂಕಾರದ ವಶದಲ್ಲಿ ಇರುವವರು, ಬುದ್ಧಿ ಚೈತನ್ಯದ ಮಾತನ್ನು, ಆದೇಶವನ್ನು ಕೇಳುವುದಿಲ್ಲ, ಪಾಲಿಸುವುದಿಲ್ಲ! ಒಂದು ವೇಳೆ ಬುದ್ಧಿ-ಚೈತನ್ಯ ಅಹಂಕಾರದ ಮೇಲೆ ಬಲಾತ್ಕಾರವಾಗಿ ಸವಾರಿ ಮಾಡಿದರೆ, ಅಸಂಸ್ಕೃತದ ತರಬೇತಿ ಇಲ್ಲದ ದುರಹಂಕಾರವು ಅಡ್ಡದಾರಿ ಹಿಡಿಯುವುದು, ತಿರುಗಿ ಬೀಳುವುದು! ಜ್ಞಾನೋದಯ ಪಡೆದ,ಸಾಧನೆಯ ಮಾರ್ಗದತ್ತ ಮುಖಮಾಡಿದ ಸಾಧಕನು ದಟ್ಟವಾಗಿ ಸೆಟೆದು ನಿಲ್ಲುವನು! ದುರಹಂಕಾರವು ತನ್ನ ಪ್ರಗತಿ – ಜ್ಞಾನಮಾರ್ಗದ ಮುಳ್ಳಿನ ಹಾಸಿಗೆ ಎಂದು ಪರಿಗಣಿಸಿ ಅದನ್ನು ಶಪಿಸುವನು! ಕಠಿಣ ಸಾಧನೆಗಳಿಂದ ಅದನ್ನು ಬುಡಸಮೇತವಾಗಿ ಕಿತ್ತೆಸೆಯುವನು! ಆಗ ಅಹಂಕಾರ ಸತ್ತಿತೆಂದೇ ಅರ್ಥ! ಅತ್ಯಂತ ಹುಳಿಯಾದ ಕಾಯಿ ಪಕ್ವವಾಗಿ ಹಣ್ಣಾದರೆ ಅದು ಅತ್ಯಂತ ರುಚಿಕರ-ಸಿಹಿಯಾಗಬಲ್ಲುದು! ಅಂತೆಯೇ ದುರಹಂಕಾರಿಯೂ ಜ್ಞಾನೋದಯವಾಗುತ್ತಲೇ ಸಂಪೂರ್ಣ ಬದಲಾಗುವನು. ಉಪ್ಪು ಸಮುದ್ರದಲ್ಲಿ ಕರಗಿ ತನ್ನತನವನ್ನೇ ಕಳೆದುಕೊಳ್ಳುವಂತೆ ಅಹಂಕಾರಿಯು ಜ್ಞಾನಾನಂತರ ನಾನೆಂಬುದನ್ನೇ ಮರೆತುಹೋಗಬಹುದು! ಹಿಗಾದಲ್ಲಿಎಲ್ಲ ವ್ಯವಹಾರವೂ ನಿಂತು ಹೋಗುವುದು! ನಾನೆಂಬ ಭಾವನೆ ಇಲ್ಲದಿದ್ದಲ್ಲಿ ಸ್ನಾನ,ಪೂಜೆ,ಊಟ ಮೊದಲಾದ ಯಾವ ವ್ಯವಹಾರವೂ ನಡೆಯದು! ಆಗ ದೇಹರಕ್ಷಣೆ-ಪೋಷಣೆಗಳು ದುಷ್ಕರವಾಗುತ್ತವೆ!ದೇಹಪೋಷಿಸುವ ಜವಾಬ್ದಾರಿಯ ಹೊತ್ತ ಪ್ರಾಕೃತಿಕ ಶಕ್ತಿ- ವಾಸನೆ  ಚಡಪಡಿಸುತ್ತದೆ. ಶರೀರವನ್ನಾಶ್ರಯಿಸಿ, ವ್ಯವಹಾರ ಪ್ರಪಂಚದಲ್ಲಿರುವವರೆಗೂ
 ನಾನೆಂಬುದು ಇರಲೇಬೇಕಾಗುತ್ತದೆ! ಅದರ  ಅಸ್ತಿತ್ವತ್ವಕ್ಕಾಗಿ,ಸುಮ್ಮನಿರಲಾರದ,ಬಲವಾದ ಪ್ರಕೃತಿಶಕ್ತಿ ಆತ್ಮನಲ್ಲಿ ಮೊರೆಯಿಡುತ್ತದೆ. ವ್ಯಾವಹಾರಿಕ ಪ್ರಪಂಚದಲ್ಲಿ ಬದುಕಬೇಕಾದರೆ, ಮೊದಲಿನಂತೆ ಯಥಾಪ್ರಕಾರ ನಾನೆಂಬ ಭಾವನೆಯಿಂದ ಕರ್ತವ್ಯ ಕರ್ಮಗಳಲ್ಲಿ ತೊಡಗಬೇಕೆಂದು ದುಂಬಾಲು ಬೀಳುವುದು. ಪ್ರಕೃತಿಯ ಅತಿ ಸಹಜವಾದ,ಬಲವಾದ ಈ ಕೋರಿಕೆಯನ್ನು ಬುದ್ಧಿ-ಆತ್ಮಚೈತನ್ಯ ತಳ್ಳಿಹಾಕಲಾಗದು! ದೇಹ ಬದುಕಬೇಕಲ್ಲವೇ? ಬುದ್ಧಿ ಚೈತನ್ಯಗಳ ಪ್ರೇರಣೆಯಿಂದಾಗಿ ಈಗ ಮತ್ತೆ ಅಹಂಕಾರ ಜಾಗೃತಗೊಳ್ಳುವುದು! ನಾನು, ನನ್ನದೆಂಬ ವ್ಯವಹಾರ ಮತ್ತೆ ಪ್ರಾರಂಭ! ಇದರಿಂದಾಗಿಯೇ ಜ್ಞಾನಿಯೂ ವ್ಯವಹಾರ ಮಾಡಲು ಸಾಧ್ಯ! ಆದರೆ ಈಗಿನ ಜ್ಞಾನಕಾಲದ ಈ ಅಹಂಕಾರಕ್ಕೂ, ಅಜ್ಞಾನಕಾಲದ ಆಗಿನ ಆ ಅಹಂಕಾರಕ್ಕೂ  ಅಜಗಜಾಂತರ ವ್ಯತ್ಯಾಸವಿದೆ! ಅಜ್ಞಾನ ಕಾಲದ ಅಹಂಕಾರ,ಸಜ್ಜನರ ಮಾತಿಗೆ, ಬುದ್ಧಿ-ಚೈತನ್ಯಕ್ಕೆ ಮಣಿಹಾಕದು, ಕೇಳದು, ಪಾಲಿಸದು! ಬದಲಾಗಿ ಬುದ್ಧಿಯನ್ನೇ ನುಂಗುವುದು! ದುರಾಚಾರ ದುರ್ವರ್ತನೆಗೆ ಇಂಬು ನೀಡುವುದು! ತನ್ನ ಹಾಗೂ ಸಮಾಜದ ಪ್ರತಿ-ಹಿತಕ್ಕೆ ಮಾರಕ- ಕಂಟಕ! ಆದರೆ ಜ್ಞಾನಕಾಲದ ಅಹಂಕಾರ ಹಾಗಲ್ಲ. ಇದು ಬುದ್ಧಿಯ ಅಧೀನ. ಸದಾಚಾರ ಸದ್ವರ್ತನೆಗಳಿಗೆ ಪ್ರೇರಕ-ಪೂರಕ! ತನ್ನ ಹಾಗೂ ಸಮಾಜದ ಪ್ರಗತಿಹಿತ  ಸಾಧಕ-ಕಾರಕ!-ಎಂದು.
ಸದ್ಗುರು ಶ್ರೀ ಸಿದ್ಧಾರೂಢರ ಸಂದೇಶದಂತೆ ನಾವೆಲ್ಲ ದುರಹಂಕಾರವನ್ನು ತೊರೆದು ಸದಹಂಕಾರವನ್ನು ಮಾತ್ರ ರೂಢಿಸಿಕೊಳ್ಳೋಣ.ಸುಜ್ಞಾನಿಗಳೆನಿಸಿ ಆದರ್ಶದ ಬದುಕನು ಬಾಳೋಣ!!
Girl in a jacket
error: Content is protected !!