ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ

Share

ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ

ಸಂಪ್ರದಾಯಿಕ ಚರಿತ್ರೆಯೆಂದರೆ ಏಕಮುಖಿಯಾದುದು. ಆಡಳಿತ ಮೂಲವಾದದು.ಪ್ರಭು ಪ್ರಧಾನವಾದುದು.ರಾಜಕೀಯವೇ ಮುಖ್ಯವಾದ ಇದರ ಆವರಣದೊಳಗೆ ಉತ್ಪಾದನಾ ಪ್ರಧಾನರ ಕಥನಗಳು ನಿರ್ಲಕ್ಷಕ್ಕೆ ಒಳಗಾಗಿವೆ.ತೆಳುವಾದ ಸರಳವಾದ ಚರಿತ್ರೆಯ ಈ ರೂಪಗಳ ಮಿತಿಯನ್ನ ಗ್ರಹಿಸಿಯೇ ಹೊಸ ಬಗೆಯ ಚರಿತ್ರೆಗಳನ್ನ ಕಟ್ಟುವ ರೂಪಿಸುವ ಪರಂಪರೆಗಳು ಈಗೀಗ ಗಟ್ಟಿಗೊಳ್ಳುತ್ತಿವೆ.ಜನ ಚರಿತ್ರೆ,ಮಹಿಳಾ ಚರಿತ್ರೆ,ಪ್ರಾದೇಶಿಕ ಚರಿತ್ರೆ,ಸಬಾಲ್ಟ್ರನ್ ಚರಿತ್ರೆ..ಹೀಗೆ ಹೊಸ ಹೊಸ ಅನ್ವೇಷಣಾ ಬರಹಗಳ ಕ್ರಮಗಳನ್ನ ಕಾಣಬಹುದಾಗಿದೆ. ಈ ನೆಲೆಯಲ್ಲಿ ಪರಂಪರೆಯ ಸಂಪ್ರದಾಯಿಕ ಚರಿತ್ರೆಯು ಗುರ್ತಿಸಲಾರದ ಚರಿತ್ರೆಯ ಬುನಾದಿಯಂತೆಯೇ ಆಗಿರುವ ಕಥನವೇ ರೈತರ ಚರಿತ್ರೆ.

ಆಡಳಿತ ಪರ ಒಲವಿನ ಸಂಪ್ರದಾಯಿಕ ಚರಿತ್ರೆಯ ಚೌಕಟ್ಟಿನ ದಿಕ್ಕನ್ನ ಬಿಟ್ಟು ಜನಪರವಾದ ಶ್ರಮಿಕರ ಚರಿತ್ರೆಯನ್ನ ಬರೆದವರು ಮಾರ್ಕ್ಸವಾದಿಗಳು.ಪರಂಪರಾ ಬರಹಗಳಲ್ಲಿ ಭಾರತವೆಂದರೆ ಹಳ್ಳಿಯೆಂದು ಭಾರತದ ಆತ್ಮವೆಂದರೆ ರೈತರೆಂದು ಕರೆಯಲ್ಪಡುವ ಆದರ್ಶ ಪ್ರಧಾನವಾದ ಕಾಲ್ಪನಿಕ ಬರಹಗಳ ಆವರಣಗಳಲ್ಲಿ ಹುದುಗಿದ ನೋವು ಸಂಕಟಗಳ ಎಳೆಗಳನ್ನ ವಾಸ್ತವದ ಅವರ ಹರಿದ ಅಂಗಿಗಳ ಬೆವರ ಕ್ಷಣಗಳನ್ನ ಜನಪರ ಬರಹಗಳು ಮೋಕ್ಷ ಪ್ರಧಾನ, ಧರ್ಮ ದೃಷ್ಟಿಯ ಸಂತಮಾದರಿಯ ನೋಟವನ್ನ ಛಿದ್ರಿಸಿ ತೋರಿಸಿವೆ.ರೈತರನ್ನ ಕರುಣೆಯ,ದಯನೀಯ ರೂಪಕಗಳಲ್ಲೇ ನಿಲ್ಲಿಸುವ ಅವರ ಏಕರೂಪಿ ಶಿಲ್ಪವನ್ನ ಇವರ ಬರಹಗಳು ತುಳಿದು ಹಾಕಿ ರೈತ ಶಕ್ತಿಯ ಬಹುರೂಪಗಳನ್ನ ನಿರ್ಬಿಡೆಯಿಂದ ಕಡೆದು ಕೊಟ್ಟಿವೆ. ಈ ಬಗೆಯ ನೋಟಕ್ಕೆ ಸಾಕ್ಷಿಯೆಂಬಂತೆ ಕಾಣುವ ಪುಸ್ತಕವೇ ಇರ್ಫಾನ್ ಹಬೀಬ್ ರ ಭಾರತ ಚರಿತ್ರೆಯಿಲ್ಲಿ ರೈತ.
ಅನುವಾದವೆಂಬುದು ಮತ್ತೊಂದು ಭಾಷೆಯಿಂದ ಹಾಲೀ ಭಾಷೆಗೆ ಪರಿಚಿತವಾಗುವಂತಹ ಹೊಸ ಬರಹ ಮಾತ್ರವಲ್ಲ.ಅನುವಾದವೆಂಬುದು ತನ್ನಲ್ಲಿಲ್ಲದ ಹೊಸ ಆಲೋಚನೆ, ಹೊಸ ಹೊಸ ತತ್ವಗಳ ಬೆಳಕು ಎಂದು ಭಾವಿಸಿದವರು ಡಾ.ಬಿ.ಸುಜ್ಞಾನಮೂರ್ತಿ ಇವರು ಕನ್ನಡಕ್ಕೆ ತೆಲುಗಿನಿಂದ ಇಂತಹ ಅನೇಕ ಬೆಳಕಿನ ಅಲೆಗಳನ್ನ ಮೊಗೆ ಮೊಗೆದು ತಂದು ಕನ್ನಡದ ವಿಚಾರಗಳ ಬೇರಿಗೆ ಸತ್ವದ ಗೊಬ್ಬರ ಹಾಗೂ ಜೀವಸೆಲೆಯ ನೀರೆರಿದ್ದಾರೆ. ಯಾರದೀ ಕಾಡು,ಜಾತಿವಿನಾಶ ವರ್ಗವಿನಾಶ,ಪೆರಿಯರ್ ಜೀವನ ಚಳುವಳಿ,ಕಂಚ ಐ ಯ್ಯ ಅವರ ಬರಹಗಳು,ತೆಲಂಗಾಣ ಹೋರಾಟದಂತಹ ಅಪೂರ್ವ ಜೀವಪರ ನೋಟದ ಪುಸ್ತಕಗಳ ಲೇಖಕರಿವರು.


ಇವರು ಅನುವಾದಿಸಿದ ಭಾರತ ಚರಿತ್ರೆಯಲ್ಲಿ ರೈತ ಪುಸ್ತಕವು ಚರಿತ್ರೆಯ ಹುಟ್ಟು ಬೆಳವಣಿಗೆಯ ಹೊಸ ರೂಪಗಳನ್ನ ರೈತರ ಕಥನಗಳ ಮೂಲಕ ಅನ್ವೇಷಿಸುತ್ತಾ ಹೋಗುತ್ತದೆ. ರೈತನೆಂದರೆ ಯಾರು?,ರೈತರ ವರ್ಗೀಕರಣಗಳು ಹೇಗೆ ಸೃಷ್ಟಿಯಾದವು?,ಪರಂಪರೆಯೊಳಗಿನ ರೈತರ ಸವಾಲು ಸಾಹಸಗಳು,ರೈತರ ಜೀವನ ಪಲ್ಲಟಗಳಿಂದಾದ ಸಾಮಾಜಿಕ ರೂಪಗಳು, ರೈತರು ಚರಿತ್ರೆಯ ಉದ್ದಕ್ಕೂ ತಣ್ಣಗೆ ಅನುಭವಿಸಿದ ಶೋಷಣೆಯ ಭಿನ್ನ ಭಿನ್ನ ಸ್ವರೂಪಗಳು,ಪಟ್ಟ ಭದ್ರರ ವಿರುದ್ಧ ನಡೆದ ರೈತರ ದಂಗೆಗಳನ್ನ ಈ ಪುಸ್ತಕವು ಕಟ್ಟಿಕೊಡುತ್ತಾ ಹೋಗಿದೆ.
ಚರಿತ್ರೆ ಪ್ರಧಾನವಾದ ಈ ಕಥನದ ವಿಶೇಷವೆಂದರೆ ಶೋಷಿತ ಮತ್ತು ಶೋಷಕ ಎಂಬ ಎರಡೂ ಎಳೆಗಳು ಹೇಗೆ ರೈತವರ್ಗಗಳನ್ನ ಆವರಿಸಿಕೊಂಡಿವೆ ಎಂಬುದನ್ನ ತೋರಿಸಿಕೊಟ್ಟಿರುವುದು.ಭೂಮಿ ಹೊಂದಿರುವ ರೈತ,ಗೇಣಿ ರಹಿತ ರೈತ,ದಿನಗೂಲಿ ರೈತ ಎಂದು ವಿಭಜಿಸುವ ಈ ನೋಟವು ಭೂಮಿ ಹೊಂದಿರುವ ರೈತ ಭೂಮಿ ಇಲ್ಲದ ರೈತರನ್ನ ಶೋಷಿಸುವ ಸೂಕ್ಷ್ಮ ರೀತಿಯನ್ನ ತೋರುತ್ತಾರೆ.ನದಿಯ ಮೂಲಕ ಕೃಷಿಯ ಇತಿಹಾಸ ಕಟ್ಟಿಕೊಡುವ ಈ ಪುಸ್ತಕವು ಸಿಂಧೂ ಕಣಿವೆಯ ರೈತರ ಹುಟ್ಟನ್ನ ಆ ನಂತರದಲ್ಲಿನ ಗಂಗಾನದಿಯ ಕಣಿವೆಯಲ್ಲಿನ ರೈತರ ಬೆಳವಣಿಗೆಯನ್ನ ವಿಶ್ಲೇಷಿಸಿದ್ದಾರೆ.ಸಿಂಧೂ ನದಿಯ ಪರಂಪರೆಯೊಳಗೇ ಕೃಷಿಯಿಂದ ದೂರವಾದವರು ವೈಶ್ಯ,ಶೂದ್ರರಾದವರು ಎಂಬ ನೋಟವು ಕುತೂಹಲಕಾರಿಯಾದುದು.ಭೂಮಿಯನ್ನ ಸೀತಾ ಎಂದು ಕರೆದ ಜಮೀನ್ದಾರರು ಅದನ್ನ ಗುಲಾಮರು ಮತ್ತು ಕೂಲಿಗಳ ಮೂಲಕ ನಡೆಸುತ್ತಿದ್ದ ರೀತಿಯು ಪ್ರಾಚೀನ ಮತ್ತು ಮಧ್ಯಕಾಲೀನ ಚರಿತ್ರೆಯಲ್ಲಿ ಧರ್ಮ ಪ್ರಧಾನ ರೈತ ಪರಂಪರೆಯು ಭೂರಹಿತ ಹಾಗೂ ಕೂಲಿ ಕೃಷಿಕರ ಮೇಲೆ ಹೇಗೆ ಶೋಷಣೆಯನ್ನ ಬಹು ಬಣ್ಣಗಳ ಹೂವು,ಮುಳ್ಳು,ಕಾಯಿಗಳ ಕಥನಗಳಾಗಿಸಿವೆ ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಡಿ.ಡಿ.ಕೊಸಾಂಬಿ,ಆರ್.ಎಸ.ಶರ್ಮ,ರೋಮಿಲಾ ಥಾಪರ್. ಮೊದಲಾದವರ ಜನಪರ ಹಾದಿಯಲ್ಲಿ ಹೊರಟ ಇಲ್ಲಿನ ಬರವಣಿಗೆಯ ಆಶಯವೇ ಜೀವಪರವಾದದು.ಚರಿತ್ರೆಯ ಕೇಂದ್ರಗಳಲ್ಲಿ ರೈತರ ಮೂಲವನ್ನನಿಟ್ಟು ನೋಡುವ,ದೇಶೀಯ ಮತ್ತು ಧಾರ್ಮಿಕ ವಸಾಹತು ನೆಲೆಗಳಲ್ಲಿ ರೈತರ ಪಲ್ಲಟಗಳ ಫಲಗಳನ್ನ ಅನ್ವೇಷಿಸುವ ಕ್ರಮವು ಹೊಸ ಬೆಳಕು ಬೀರುವಂತಿದೆ.


ರೈತನೆಂದರೆ ಯಾರು? ಎಂಬ ಪ್ರಶ್ನೆ ಹಾಕಿಕೊಂಡು ಭೂಮಿಯ ಮೇಲೆ ಮಾನವ ಆಹಾರ ಸಂಪಾದನೆಗಾಗಿ ರೈತನು ಹಲವು ಮಾರ್ಗಗಳನ್ನ ಅನುಸರಿಸಿದ್ದಾನೆ ಎಂಬ ಕಾಯಕ ನೆಲೆಗೆ ಒತ್ತು ನೀಡುತ್ತಲೇ ಪರಂಪರೆಂii ಲ್ಲಿ ದುಡಿವವರೆಲ್ಲಾ ಒಂದೇ ಅಲ್ಲ ಎಂಬ ಅರ್ಥ ವಿಸ್ತರಿಸುತ್ತಾ ಇಲ್ಲಿ ರೈತಾಪಿ ವರ್ಗಗಳನ್ನ ಮೂರು ಬಗೆಗಳಲ್ಲಿ ನಿರ್ವಚಿಸಿಕೊಂಡಿದ್ದಾರೆ.೧) ಶ್ರೀಮಂತ ರೈತರು ೨) ಮಧ್ಯಮ ವರ್ಗದ ರೈತರು ೩) ಬಡ ರೈತರು
ಮೊದಲ ಉನ್ನತವರ್ಗ ಉತ್ಪಾದನೆಯನ್ನ ಕೂಲಿಗಳ ಮೂಲಕವೇ ಮಾಡಿಸುವವರು.ಎರಡನೆಯ ಮಧ್ಯಮವರ್ಗ ತಮ್ಮ ಕುಟುಂಬದ ಶ್ರಮದ ಮೇಲೆಯೇ ಆಧಾರ ಪಡುವವರು.ಮೂರನೇ ವರ್ಗ ಬಡ ರೈತವರ್ಗವೆಂದರೆ ಭೂಮಿ ಇಲ್ಲದವರು ಕೃಷಿ ಕೂಲಿಕಾರ ವರ್ಗ.


ವ್ಯವಸಾಯಕ್ಕೂ ಮೊದಲು ರೈತ ಅಲೆಮಾರಿಯಾಗಿದ್ದ.ಬೇಟೆಯಾಡಿ ಕಾಯಿ ಕಸರನ್ನ ಆಯ್ದುಕೊಂಡು ತಿಂದು ಬದುಕುತಿದ್ದ.ಆನಂತರ ಈತ ಆಹಾರ ಸಂಗ್ರಹಿಸಿಕೊಳ್ಳುವ ಸ್ಥಿತಿಯಿಂದ ಸ್ವತಃ ಉತ್ಪಾದನಾ ಹಂತಕ್ಕೆ ಬಂದ.ನೇಗಿಲ ಶೋಧನೆಗೂ ಮೊದಲು ಸ್ತ್ರೀ ಪ್ರಧಾನವಾಗಿದ್ದ ಕೃಷಿಯು ಕುಟುಂಬದಲ್ಲೂ ಸ್ತ್ರೀ ಪ್ರಧಾನ್ಯತೆಯನ್ನೇ ಪಡೆದಿತ್ತು. ನೇಗಿಲು ಶೋಧನೆಯ ನಂತರದ ವ್ಯವಸಾಯ ಹಂತದಿಂದ ಸಮಾಜ ರಚನೆಯಲ್ಲಿ ಪಿತೃ ಪ್ರಧಾನತೆಯ ಕುಟುಂಬದ ಹುಟ್ಟಿಗೆ ಕಾರಣವಾಯಿತಲ್ಲದೆ ಏಕಪತ್ನಿ ವ್ರತಕ್ಕೂ ಕಾರಣವಾಯಿತು.
ಸಿಂಧೂ ಕಣಿವೆಯ ನಾಗರೀಕತೆಯಲ್ಲಿ ರಂಗ ಪ್ರವೇಶ ಮಾಡಿದ ಆರ್ಯರ ಆಗಮನದ ನಂತರ ಪುರೋಹಿತ ಸಮಾಜ ಪ್ರಧಾನ್ಯತೆಗೆ ಕಾರಣವಾಯಿತು.ಪ್ರಧಾನ ಹಂತದಲ್ಲಿದ್ದ ಕೃಷಿಕ ರೈತರು ಶೂದ್ರ ಸ್ಥಾನಕ್ಕಿಳಿದರು.ಭೂಮಿ ಇಲ್ಲದ ರೈತರು ದಸ್ಯುಗಳೆಂದು ಗುಲಾಮರೆಂದು ಕರೆಸಿಕೊಂಡರು.ವ್ಯವಸಾಯದಲ್ಲಿ ಶ್ರೀಮಂತವರ್ಗವು ಎತ್ತುಗಳಿಂದ ಹಾಗೂ ಗುಲಾಮರಿಂದ ಭೂಮಿಯಲ್ಲಿ ನೇಗಿಲನ್ನ ಎಳೆಸುತ್ತಿದ್ದರು.ಬುದ್ಧ ಜಾತಕ ಕತೆಗಳು ಕೂಡ ಒಬ್ಬೊಬ್ಬ ಯಜಮಾನನ ಹತ್ತಿರ ಮುವ್ವತ್ತು ಸಾವಿರದ ತನಕ ಪಶುಗಳು,ಹನ್ನೆರಡು ಸಾವಿರದ ಐವತ್ತರ ತನಕ ಗುಲಾಮರನ್ನ ಒಳಗೊಂಡಿದ್ದರು ಎಂಬ ಅಂಶವೇ ಈ ನಾಡಿನ ಶೋಷಕ ಪ್ರಧಾನ ಚರಿತ್ರೆಗೆ ಮುನ್ನುಡಿಯಂತಿದೆ.


ಪೂರ್ವದ ಸ್ತ್ರೀ ವ್ಯವಸಾಯ ಕಾಲದಲ್ಲಿ ಜಾತಿ ರಹಿತ ಸಮಾಜವಿತ್ತು. ಪುರುಷ ರೈತರ ಆವಿರ್ಭಾವದ ನಂತರ ಶ್ರಮವಿಭಜನೆ ಹಂತ ಶುರುವಾಗಿ ಕಮ್ಮಾರ,ಅಕ್ಕಸಾಲಿ,ರಥಚೋದಕ ,ವೈದ್ಯ ಎಂಬ ವೃತ್ತಿಗಳು ಜಾತಿಗಳಾದವು.ಭೂರಹಿತರು ಕೀಳು ಕುಲಗಳೆಂದು ಕರೆಸಿಕೊಂಡವು.ಕಾಡು ಮತ್ತು ನಾಡಿನ ಜನರ ನಡುವೆ ಸಂಘರ್ಷಗಳು ಏರ್ಪಟ್ಟವು.ಕಾಡ ಆಹಾರ ಸಂಗ್ರಹಿಸುವ ಬೇಟೆಯಾಡುವ ,ಮೀನು ಹಿಡಿಯುವ ಜನರನ್ನ ಬಹಿಷ್ಕೃತರೆಂದು, ಚಾಂಡಾಳರೆಂದು,ಶ್ವಪಚರೆಂದು ಇವರನ್ನ ಊರ ಹೊರಗೇ ಇರಿಸಬೇಕೆಂಬ ನಿಂಬಂಧನೆಗಳೂ ಹುಟ್ಟಿಕೊಂಡವು.
ಗೌತಮ ಬುದ್ಧ ಜಾತಿವ್ಯವಸ್ಥೆಯನ್ನ ಸ್ವಲ್ಪವೂ ಸಮರ್ಥಿಸಲಿಲ್ಲ.ಅಶೋಕನ ಧರ್ಮದಲ್ಲಿ ವರ್ಣ ಜಾತಿಯ ಪ್ರಸ್ಥಾಪವಿರಲಿಲ್ಲ. ಕೃಷ್ಣನ ಆಗಮನದ ನಂತರವೇ ನೇಗಿಲು ಆಧಾರಿತ ಕೃಷಿಯೂ ಹಾಗೂ ಜಾತಿವ್ಯವಸ್ಥೆಗಳೂ ಭಾರತದಲ್ಲಿ ಗಟ್ಟಿಗೊಂಡವು ಎಂಬ ಶೋಧಕರ ಸಂಗತಿಯೇ ಗಮನಾರ್ಹ.


ರಾಜ ಪ್ರಭುತ್ವದ ಕಾಲಗಳಲ್ಲಿ ನಿಧಾನವಾಗಿ ಕೃಷಿಯ ಅಭ್ಯುದಯವನ್ನ ಕಾಣಬಹುದು.ಚೋಳರ ಕಾಲದಿಂದ ಕೆರೆ ನಿರ್ಮಿಸುವ ಕಟ್ಟೆ ಕಟ್ಟಿಸುವ ಪದ್ಧತಿಗಳು ಶುರುವಾದವು. ಭೂರಹಿತ ರೈತರ ಶೋಷಣೆಗಳೂ ಹೆಚ್ಚಾದವು. ಬಿಟ್ಟಿ ಚಾಕರಿ ಮಾಡುವ ಕೆಲಸ ಭೂರಹಿತ ರೈತರಂತೆಯೇ ಅವರ ಮಹಿಳೆಯರಿಗೂ ಮೀಸಲಾದವು.
ಮಧ್ಯಮವರ್ಗದ ಕುಟುಂಬದ ಶ್ರಮದ ಮೂಲಕ ವ್ಯವಸಾಯ ಮಾಡುತಿದ್ದ ರೈತರನ್ನ ಜಮೀನ್ದಾರರೆನಿಸಿಕೊಂಡ ಬ್ರಾಹ್ಮಣ ಅಗ್ರಹಾರಗಳು ಹಾಗೂ ಪ್ರಭುಗಳು ತೆರಿಗೆಗಳ ಮೂಲಕ ಉದ್ದಕ್ಕೂ ಶೋಷಿಸುತ್ತಲೇ ಇದ್ದರು.ಸುವರ್ಣಯುಗವೆಂದು ಕರೆಸಿಕೊಂಡ ಗುಪ್ತರ ಕಾಲದಲ್ಲೂ ಹಲವು ಬಗೆಯ ಇಂತಹ ತೆರಿಗೆಗಳ ಜೊತೆಯಲ್ಲಿ ಸದ್ಬಾಗ (ಧರ್ಮಭಾಗ) ಎಂಬ ತೆರಿಗೆಯೂ ಇತ್ತು.ಜಮೀನ್ದಾರಿಕೆಯ ವ್ಯವಸ್ಥೆ ಯು ಬೆಳೆದಂತೆಲ್ಲಾ ರೈತರನ್ನ ಶೋಷಿಸುವ ಹಲವು ವರ್ಗಗಳೇ ಹುಟ್ಟಿಕೊಂಡವು.ಸಾಮಂತ,ಠಾಕೂರರು ,ರಣಕರು, ರೌತರು ಜೊತೆಗೆ ರಾಜರುಗಳ ಯೋಧ ವರ್ಗಗಳು ರೈತಾಪಿವರ್ಗಗಳನ್ನ ದಂಡಿಸುತ್ತಲೇ ಬಂದಿವೆ.
ದೇಶೀಯ ವಸಾಹತುಗಳು ರೈತರನ್ನ ಶೋಷಿತರನ್ನಾಗಿ ನಡೆಸಿಕೊಂಡರೆ ಪರದೇಶೀಯ ಪ್ರಭುವರ್ಗಗಳು ಇವರನ್ನ ಶೋಷಿತರನ್ನಾಗಿ ನೋಡುವುದರ ಜೊತೆಗೆ ಇವರ ಕೃಷಿಯ ಅಭಿವೃದ್ದಿಯ ಕಡೆಗೂ ಗಮನ ನೀಡಿದವು.ಮುಸ್ಲಿಂ ದೊರೆಗಳು ಅರಘಟ್ಟ ಅಥವಾ ಏತ ಎಂಬ ನೀರಾವರಿ ವ್ಯವಸ್ಥೆಯನ್ನ ಜಾರಿಗೆ ತಂದರು. ಜೊತೆಗೆ ಸಿಮೆಂಟ್ ,ಸುಣ್ಣ,ನೀಲಿ ಮದ್ದಿನ ತೊಟ್ಟಿಗಳು ಚಲಾವಣೆಗೆ ಬಂದವು. ರೇಶ್ಮೆ ಬೆಳೆ,ಮೆಕ್ಕೆಜೋಳ,ಹೊಗೆಸೊಪ್ಪು ಪರಿಚಿತವಾದವು.ಇಲ್ಲೂ ಕೂಡ ಭೂರಹಿತ ರೈತರ ಬದುಕು ಮಾತ್ರ ಬದಲಾಗಲಿಲ್ಲ. ಅರಬ್ ಪಾಲಕನೊಬ್ಬ ಇವರನ್ನೂ ,ನಾಯಿಗಳನ್ನೂ ಒಂದೇ ಕಡೆ ಸೇರಿಸಿ ಇಡಬೇಕೆನ್ನುವ ಮನುವಿನ ಮಾತನ್ನೇ ಒಪ್ಪಿದ್ದಾನೆ.ಮೊಘಲರ ಕಾಲಕ್ಕೆ ಕೆಳ ಜಾತಿಗಳ ರೈತರ ಸಂಖ್ಯೆಯೂ ಹೆಚ್ಚಾಯಿತು. ಜೊತೆಗೆ ಭೂಮಿ ರಾಜನ ಅಧೀನವಾಗಿ ಗ್ರಾಮಗಳನ್ನೇ ಕೊಳ್ಳುವ ಗೇಣಿ ಕೊಡುವ ಹಕ್ಕುಗಳು ಚಲಾವಣೆಗೆ ಬಂದವು.ಬೆಳೆಯ ಅರ್ಧಕ್ಕಿಂತಲೂ ಹೆಚ್ಚು ತೆರಿಗೆ ಹೆಸರಲ್ಲಿ ವಸೂಲಿ ಮಾಡುವ ಅವರ ಉಜರತ್ ಕಾನೂನಿನಿಂದ ಮಧ್ಯಮವರ್ಗದ ಜಮೀನ್ದಾರರೂ ಭೂ ಒಡೆತನಗಳನ್ನ ಕಳಕೊಳ್ಳತೊಡಗಿದರು.


ರೈತರು ತಮ್ಮ ಮೇಲಿನ ವಿಪರೀತ ತೆರಿಗೆಗಳ ವಿರುದ್ದ ದಂಗೆ ಎದ್ದ ಚಿತ್ರಗಳನ್ನ ದಾಖಲಿಸುವ ಈ ಪುಸ್ತಕವು ತುಘಲಕ್ಕನ ವಿರುದ್ದ ದ ರೈತರ ದಂಗೆಯನ್ನ ಚಿತ್ರಿಸುತ್ತ ಅದರ ಪರಿಣಾಮ ಶೂಲಕ್ಕೇರುವ ಕಣ್ಣು ಕೀಳಿಸಿಕೊಳ್ಳುವ ಶಿಕ್ಷೆಗೆ ಗುರಿಯಾದ ಸಂಗತಿಯನ್ನ ದಾಖಲಿಸಿದೆ.ಇಂತಹ ಶಿಕ್ಷೆಯಿಂದ ತಪ್ಪಿಸಿಕೊಂಡು ಕಾಡು ಪಾಲಾದ ರೈತರನ್ನ ಸುಲ್ತಾನರ ಸೈನ್ಯಗಳು ಸಿಕ್ಕಿದವರನ್ನ ಸಿಕ್ಕಿದಂತೆ ಕೊಂದ ಕ್ರೌರ್ಯದ ಕರಾಳ ಚಿತ್ರಗಳೂ ಇಲ್ಲಿ ದಾಖಲಿಸಲಾಗಿವೆ.
ತೆರಿಗೆಯ ಕ್ರೌರ್ಯ ಸಹಿಸದ ರೈತರು ಮರಾಠ ಸೈನ್ಯವನ್ನ ಸೇರಿ ಮುಸ್ಲಿಂ ಸೈನ್ಯದ ವಿರುದ್ದ ಜಯಗಳಿಸಿದ ಬಗೆಯೂ ಕುತೂಹಲಕಾರಿಯಾದುದು. ತೆರಿಗೆ ಭರಿಸದೆ ಶೋಷಣೆ ಸಹಿಸದ ರೈತರು, ಕುರಿಕಾಯುವವರು, ಬಡಗಿಗಳು, ಚಮ್ಮಾರರು ಉಳುಮೆ ಮಾಡದೇ ಜಮೀನ್ದಾರಿಕೆ ನಡೆಸುತಿದ್ದ ಮುಸ್ಲಿಂ ಪರವಾದ ರೈತರ ವಿರುದ್ದ ಜಯಗಳಿಸಿದರು. ಆದರೆ ಗೆದ್ದ ಮರಾಠ ಪಡೆಯೂ ತಮಗೆ ಸಹಾಯ ಮಾಡಿದ ರೈತರ ಜೀವನ ಬದಲಿಸಲಿಲ್ಲ ಎಂಬ ವಿಪರ್ಯಾಸವನ್ನೂ ಈ ಕಥನವು ಗಮನಿಸಿದೆ.
ಹೊಗಳಿಕೆಯ ಸಾಲಿನೊಂದಿಗಿನ ರೈತರ ಚಿತ್ರವನ್ನೂ ಚರಿತ್ರೆಯ ವಾಸ್ತವದ ರೈತರ ಚಿತ್ರಗಳನ್ನೂ ಎದುರಾಗಿಸಿ ಕವಿ ಬರಹಗಳ ಟೊಳ್ಳುತನವನ್ನ ಬಯಲಿಗೆಳೆಯುವ ಈ ಪುಸ್ತಕವು ಪ್ರಭುತ್ವಗಳಿಗೆ ಬುನಾದಿಯಾದ ರೈತವರ್ಗ ಹೇಗೆ ಶಿಲಾಯುಗ, ಕಬ್ಬಿಣ ಯುಗಗಳಿಂದ, ಮಾನವ ಲೋಕಕ್ಕೆ ಅನ್ನ ನೀಡುತ್ತಲೇ ಶೋಷಣೆಯನ್ನೂ ತನ್ನ ಹೆಗಲ ಮೇಲೆ ಹೊತ್ತುಕೊಂಡೇ ಬಂದಿದೆ ಎಂಬ ಅಂಶಗಳತ್ತ ಬೆರಳು ಮಾಡುವ ಸೂಕ್ಷ್ಮ ವಿವರಗಳನ್ನ ದಾಖಲಿಸಲಾಗಿದೆ.


ಏಕಮುಖಿಯಾದ ಲಾಭ ಪ್ರಧಾನ ರಾಜಕೀಯ ಚರಿತ್ರೆಗಿಂತಲೂ ಬಹುಮುಖಿಯಾದ ಉತ್ಪಾದನಾ ಪ್ರಧಾನ ರೈತ ಚರಿತ್ರೆಯು ಹಲವು ಅನ್ವೇಷಣೆಗಳ ಕರಾಳ ಮತ್ತು ಬೆಳಕುಗಳ ಸಂಕೀರ್ಣ ಲೋಕವಾಗಿದೆ ಹಾಗಾಗಿ ರೂಢಿಗತ ಮಾದರಿಯ ಬೆನ್ನು ಬೀಳದೆ ಇಂತಹ ಹೊಸ ಅನ್ವೇಷಣಾ ಪರ ಶೋಧನಾ ಮೂಲದ ಚರಿತ್ರೆಗಳು ಓದುಗರನ್ನೂ ಆಲೋಚಿಸುವಂತೆ ಮಾಡಬಲ್ಲವು.
ಧರ್ಮವನ್ನ ರೈತರ ಮೂಲಕ ಕಾಣುವ ಕವಿ ಬರಹಗಳ ಮುಂದೆ ಚರಿತ್ರೆಯನ್ನ ರೈತರ ಮೂಲಕ ಕಾಣುವ ಬರಹಗಳು ಹೇಗೆ ಭಿನ್ನ ಕೇಂದ್ರಗಳನ್ನ ಸೃಷ್ಟಿಸಬಲ್ಲವು ವರ್ತಮಾನಕ್ಕೂ ಬೆಳಕು ನೀಡಬಲ್ಲವು ಎಂಬಂತಹ ಉಪಯುಕ್ತ ಕೃತಿ ನೀಡಿದ ಲೇಖಕರ ಆಸ್ತೆ ಮತ್ತು ಅನುವಾದಕರ ಜೀವಪರ ಅಕ್ಕರೆಯನ್ನ ಅಭಿನಂದಿಸಲೇಬೇಕಲ್ಲವೇ?

 

Girl in a jacket
error: Content is protected !!